ಭೂತಯ್ಯನ ಮಗ ಅಯ್ಯು: ವಾಸುಕಿ ರಾಘವನ್ ಅಂಕಣ


“ಗ್ರಾಮೀಣ ಚಿತ್ರ”ಗಳಲ್ಲಿ ಬರುವ ಕ್ಲೀಷೆಗಳಿಗೆ ಲೆಕ್ಕವಿಲ್ಲ. ಹಸಿರು ಹಸಿರಾಗಿ ಉದ್ದಗಲಕ್ಕೂ ಹರಡಿಕೊಂಡಿರುವ ಗದ್ದೆಗಳು, ಲಂಗ ದಾವಣಿ ಹಾಕಿರೋ ನಾಯಕಿ, ಹೆಗಲ ಮೇಲೆ ಬಿಳೀ ಮೇಕೆಮರಿಯನ್ನು ಎತ್ತಿಕೊಂಡು “ಅಯ್” ಅನ್ನುವ ಮುಖಭಾವ, ಸದಾ ಎಲೆಯಡಿಕೆ ಜಗಿಯುವ ಹುಳುಕಲು ಹಲ್ಲಿನ ಅಜ್ಜಿ, ಆ ಅಜ್ಜಿ ಒಮ್ಮೆಯಾದರೂ “ಬೋ ಪಿರುತಿ” ಅನ್ನುವ ಕೃತಕ ವಾಕ್ಯಪ್ರಯೋಗ, ಹಳ್ಳಿಯವರೆಲ್ಲಾ ಒಳ್ಳೆಯವರು, ಹೊರಗಿಂದ ಬಂದ ಪಟ್ಟಣದವರು ಮಾತ್ರ ಕೆಟ್ಟವರು ಅನ್ನುವ ಧೋರಣೆ ಇತ್ಯಾದಿ ಇತ್ಯಾದಿ. ಈ ಪ್ರಕಾರದಲ್ಲಿ ಬಂದಿರುವ ಲೆಕ್ಕವಿಲ್ಲದಷ್ಟು ಕೆಟ್ಟ ಚಿತ್ರಗಳನ್ನು ನೋಡಿದ್ದ ನನಗೆ, ಒಳ್ಳೆಯ ಗ್ರಾಮೀಣ ಚಿತ್ರ ಮಾಡಲು ಸಾಧ್ಯವಿಲ್ಲವೇನೋ ಅಂತ ಅನುಮಾನ ಬಂದಿತ್ತು. ಆದರೆ ಮೊದಲ ಸಲ “ಭೂತಯ್ಯನ ಮಗ ಅಯ್ಯು” ಚಿತ್ರ ನೋಡಿದಾಗ, ಅದು ನನ್ನ ನಂಬಿಕೆಗಳನ್ನೆಲ್ಲಾ ಬುಡಮೇಲು ಮಾಡಿಬಿಟ್ಟಿತ್ತು!
 

1974ರಲ್ಲಿ ಬಿಡುಗಡೆಯಾದ, ಗೊರೂರು ರಾಮಸ್ವಾಮಿ ಐಯಂಗಾರ್ ಕಥೆ ಆಧಾರಿತ, ಸಿದ್ದಲಿಂಗಯ್ಯ ನಿರ್ದೇಶನದ “ಭೂತಯ್ಯನ ಮಗ ಅಯ್ಯು” ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಗ್ರಾಮೀಣ ಭಾಷೆಯ ಬಳಕೆ, ನಟನಾಶೈಲಿ, ಛಾಯಾಗ್ರಹಣ ಇವೆಲ್ಲದರಲ್ಲೂ ಸಹಜತೆಯನ್ನು ತಂದಂತಹ ಚಿತ್ರ ಇದು. ಸಂಪೂರ್ಣವಾಗಿ ಹೊರಾಂಗಣದಲ್ಲೇ ಚಿತ್ರಿತವಾದ ಮೊದಲ ಕನ್ನಡ ವರ್ಣಚಿತ್ರ ಕೂಡ ಹೌದಂತೆ. ಹಳ್ಳಿಯ ಜನ, ಅವರ ಬದುಕು, ಅವರ ಸಮಸ್ಯೆಗಳು, ಅವಕ್ಕೆ ಅವರೇ ಕಂಡುಕೊಳ್ಳುವ ಪರಿಹಾರಗಳು ಇವುಗಳ ಬಗ್ಗೆ ನಿರ್ದಾಕ್ಷಿಣ್ಯವಾದ, ಪ್ರಾಮಾಣಿಕ ನೋಟವನ್ನು ಹೊಂದಿದೆ. “ಬಂಗಾರದ ಮನುಷ್ಯ” ಚಿತ್ರದಷ್ಟು ಯಶಸ್ವಿಯಾಗದಿದ್ದರೂ ಅದಕ್ಕಿಂತ ಉತ್ತಮವಾದ, ಪ್ರಾಮಾಣಿಕವಾದ, ಮಹತ್ವಾಕಾಂಕ್ಷೆಯ ಚಿತ್ರ ಇದು!

ಊರಿನ ಸಾಹುಕಾರ ಭೂತಯ್ಯ, ಕಷ್ಟದಲ್ಲಿರುವ ಬಡವರಿಗೆ ಸಾಲ ಕೊಟ್ಟು, ಅವರ ಆಸ್ತಿಯನ್ನು ತನ್ನದಾಗಿಸಿಕೊಳ್ಳುವ ಪರಮ ದುರಾಸೆಯ ಮನುಷ್ಯ. ಇಷ್ಟಕ್ಕೇ ನಿಲ್ಲದೆ, ಸುಳ್ಳು ಲೆಕ್ಕಪತ್ರದಿಂದಾಗಲೀ, ಕಳ್ಳತನದಿಂದಾಗಲೀ, ಕೊಲೆಯಿಂದಾಗಲೀ ತನ್ನ ಕಣ್ಣಿಗೆ ಬಿದ್ದ ಆಸ್ತಿಯನ್ನು ಲಪಟಾಯಿಸುವವನು. ಅವನನ್ನು ಕಂಡರೆ ಊರಲ್ಲಿ ಯಾರಿಗೂ ಆಗದು. ಕಡೆಗೊಂದು ದಿನ ಭೂತಯ್ಯ ಸತ್ತುಹೋದಾಗ, ಅವನ ಹೆಣ ಎತ್ತುವುದಕ್ಕೆ ಊರಲ್ಲಿ ಯಾರೂ ಬರುವುದಿಲ್ಲ. ಅವನ ಮಗ ಅಯ್ಯು ಗಾಡಿಯಲ್ಲಿ ಹೆಣ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡುತ್ತಾನೆ.

ಮುಂದೆ ಭೂತಯ್ಯನ ಬಳಿ ಮನೆ ಅಡವಿಟ್ಟಿದ್ದ ಊರಿನ ಸಜ್ಜನ ದೇವಯ್ಯನ ಮಗ ಗುಳ್ಳನಿಗೂ, ಅಯ್ಯುವಿಗೂ ಮಾತಿಗೆ ಮಾತು ಬೆಳೆದು, ವಿಷಯ ನ್ಯಾಯಾಲದವರೆಗೂ ಹೋಗುತ್ತದೆ. ಕೋರ್ಟಿನ ಜಂಜಾಟದಲ್ಲಿ ಗುಳ್ಳ ತನ್ನೆಲ್ಲ ಹಣ, ಆಸ್ತಿ ಕಳೆದುಕೊಳ್ಳುತ್ತಾನೆ. ದೇವಯ್ಯ ಈ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದರಿಂದ ಗುಳ್ಳನಿಗೆ ಅಯ್ಯುವಿನ ಮೇಲಿನ ಹಗೆ ಇನ್ನೂ ಹೆಚ್ಚಾಗುತ್ತದೆ. ಆದರೆ ಆ ವೇಳೆಗೆ ಅಯ್ಯುವಿಗೆ ತನ್ನ ತಪ್ಪಿನ ಅರಿವಾಗಿ ಬದಲಾಗಲು ಪ್ರಯತ್ನಿಸುತ್ತಾನೆ.

ಡಿ.ವಿ.ರಾಜಾರಾಂ ಛಾಯಾಗ್ರಹಣದಲ್ಲಿ, ಚಿಕ್ಕಮಗಳೂರಿನ ಬಳಿಯ ಕಳಸಾಪುರ, ಈ ಚಿತ್ರದ ಹಳ್ಳಿಯಾಗಿ ಆಪ್ತವಾಗಿ ಮೂಡಿಬಂದಿದೆ. ಈ ಊರಿನ ರಸ್ತೆಗಳು, ಮನೆಗಳು, ಗಲ್ಲಿಗಲ್ಲಿಗಳೂ ನನಗೆ ಚಿರಪರಿಚಿತ ಅನ್ನುವಂತೆ ಆಗಿದೆ. ಆ ಏರಿಯಲ್ ಶಾಟುಗಳಂತೂ ಅದ್ಭುತ! ಭೂತಯ್ಯ ಸತ್ತಾಗಿನ ನಿರ್ಜನ ಹಳ್ಳಿ ಎದೆಯನ್ನು ಎಷ್ಟು ಝಲ್ಲೆನಿಸುತ್ತದೋ, ದೇವಯ್ಯನ ಶವಯಾತ್ರೆಯ ಜನಸಂದಣಿ ಅಷ್ಟೇ ಮನಕಲಕುತ್ತದೆ. ಕಥೆಯ ಸಣ್ಣಸಣ್ಣ ಭಾಗಗಳೂ ತುಂಬಾ ಖುಷಿ ಕೊಡುತ್ತವೆ. ಮದುವೆಯ ಶಾಸ್ತ್ರ, ಊರ ಜಾತ್ರೆ, ಕೋಣದ ಓಟದ ಸ್ಪರ್ಧೆ ಇವೆಲ್ಲಾ ಕಥೆಯ ಅವಿಭಾಜ್ಯ ಅಂಗವಾಗಿ, ಚಿತ್ರವನ್ನು ಮತ್ತಷ್ಟು ಶ್ರೀಮಂತವಾಗಿಸಿವೆ. ಸಿದ್ಧಿ ಬುಡಕಟ್ಟಿನ (ಇವರು ಬಹಳ ವರ್ಷಗಳ ಹಿಂದೆ ಆಫ್ರಿಕಾದಿಂದ ವಲಸೆ ಬಂದು, ಕರ್ನಾಟಕದಲ್ಲಿ ನೆಲೆಸಿರುವ ಬುಡಕಟ್ಟಂತೆ!) ಒಂದು ಪಾತ್ರವೂ ಬಂದು ಹೋಗುತ್ತದೆ!

ನನಗೆ ಅಷ್ಟು ಸ್ಪಷ್ಟವಾಗಿ ಅರ್ಥವಾಗಿಲ್ಲದ ವಿಚಾರವೆಂದರೆ, ಭೂತಯ್ಯನ ಪಾತ್ರಕ್ಕೆ ಕೊಟ್ಟಿರುವ ಪ್ರಾಮುಖ್ಯತೆ ಮತ್ತು ಅಯ್ಯುವಿನ ಪಾತ್ರದಲ್ಲಿನ ಗೊಂದಲ. ಇಡೀ ಚಿತ್ರವಿರುವುದು ಅಯ್ಯು ಮತ್ತು ಗುಳ್ಳನ ಮುಖಾಮುಖಿಯ ಬಗ್ಗೆ. ಅಯ್ಯುವಿನ ಪಾತ್ರ ಭೂತಯ್ಯನ ಪಾಪದ ‘ಹೊರೆ’ ಹೊತ್ತುಕೊಂಡಿರಬೇಕಾದ ಅನಿವಾರ್ಯತೆಯನ್ನು ಪಡೆದಿದೆ. ಮೊದಲ ಮುಕ್ಕಾಲು ಗಂಟೆ ಚಿತ್ರವನ್ನು ಆವರಿಸುವುದು ಭೂತಯ್ಯ, ಮತ್ತು ಅವನ ದುಷ್ಕೃತ್ಯಗಳು. ಅಯ್ಯು ಒಂದೆರಡು ದೃಶ್ಯದಲ್ಲಿ ಬಂದುಹೋಗುತ್ತಾನಾದರೂ ಆಗ ಅವನ ಪರಿಚಯವೇ ಸರಿಯಾಗಿ ಆಗುವುದಿಲ್ಲ. ಅಯ್ಯು ಕೂಡ ಮೊದಲಿನಿಂದಲೇ ತನ್ನ ತಂದೆಯ ಸ್ವಭಾವ ಹೊಂದಿದ್ದ ಅನ್ನುವ ಪುರಾವೆ ಎಲ್ಲೂ ಸಿಗುವುದಿಲ್ಲ. ಭೂತಯ್ಯ ಸಾಯುವ ಮುನ್ನ, ಅಯ್ಯುವನ್ನು ಹತ್ತಿರ ಕರೆದು ತನ್ನ “ನಂಬಿಕೆಗಳನ್ನು” ಅವನಿಗೆ ವರ್ಗಾಯಿಸುತ್ತಾನೆ. ಮೂಲತಃ ದುಷ್ಟನಲ್ಲದ ಅಯ್ಯು, ಇಷ್ಟರಿಂದಲೇ ತನ್ನ ತಂದೆಯ ದಾರಿಯನ್ನು ಹಿಡಿದ ಅನ್ನುವುದು ಸ್ವಲ್ಪ ನಂಬಲು ಕಷ್ಟವಾಗುತ್ತದೆ. ಹಾಗೆಯೇ ಮುಂದೆ ತನ್ನ ಹೆಂಡತಿಯ ಮಾತು ಕೇಳಿ ಮತ್ತೆ ಒಳ್ಳೆಯವನಾಗುವುದೂ ತುಂಬಾ ದಿಢೀರ್ ಅನಿಸುತ್ತದೆ. ಅವನ ಒಳ್ಳೆಯತನವನ್ನು ನೋಡುಗರಿಗೆ ನಿರೂಪಿಸಲು ಊರ ಹಬ್ಬದ ಸಮಯದಲ್ಲಿ “ಪ್ರಾಣಿ ಬಲಿ ಬೇಡ, ದೇವರು ಇದನ್ನು ಬಯಸುವುದಿಲ್ಲ” ಅನ್ನುವ ಮಾತನ್ನೂ ಹೇಳಿಸಲಾಗಿದೆ. ಅವನು ತಂದೆಯಿಂದ ಬಂದ ದುರಾಸೆಯ, ಹಣದಾಹದ ಬುದ್ಧಿಯನ್ನು ಬಿಡುವುದಕ್ಕೂ, ಪ್ರಾಣಿಗಳ ಬಗೆಗಿನ ಭಾವನೆ ಬದಲಾಗುವುದಕ್ಕೂ ಸಂಬಂಧವಿದೆಯಾ ಅನ್ನುವ ಪ್ರಶ್ನೆ ನನ್ನದು!

ಇದೊಂದು ವಿಷಯ ಬಿಟ್ಟರೆ, ಇದು ನಿಜಕ್ಕೂ ಪರ್ಫೆಕ್ಟ್ ಫಿಲಂ! ಒಂದು ಚಿತ್ರದ ಗೆಲುವಿರುವುದು, ಎಷ್ಟೋ ವರ್ಷಗಳಾದ ಮೇಲೂ ಅದರಲ್ಲಿನ ಎಷ್ಟು ವಿಷಯಗಳು ನಿಮ್ಮ ನೆನಪಿನಲ್ಲಿ ಉಳಿದುಕೊಂಡಿರುತ್ತದೆ ಅನ್ನುವುದರ ಮೇಲೆ. ಈಗಲೂ ಪ್ರತೀ ಸಲ ಉಪ್ಪಿನಕಾಯಿ ತಿನ್ನಬೇಕಾದರೆ ನನಗೆ ಲೋಕನಾಥ್ ಮಾಡಿರುವ ಪಾತ್ರ ಬಿಟ್ಟೂಬಿಡದೆ ಜ್ಞಾಪಕ ಬರುತ್ತದೆ!

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
umesh desai
10 years ago

sir the change in Ayyu is not at all :DHIDEER
" as you describe there were few indications if you observe the film again..any way thanks for your write-up on a landmark film in Kannada Siddalingayya made this film after coming out of Raj kumar camp..

1
0
Would love your thoughts, please comment.x
()
x