ಹಾಸನಕ್ಕಿಂತ ೪ ಕಿ.ಮೀ ಮೊದಲು ಎಡಕ್ಕೆ ತಿರುಗಿ, ೧೪ ಕಿ.ಮೀ ಸಾಗಿ ನಂತರ ಬಲಕ್ಕೆ ಸಾಗಿ ಹಾಸನ ಗೊರೂರು/ಹಾಸನ ಪೆರಿಯಾಪಟ್ಟಣ ರಸ್ತೆಯಲ್ಲಿ ಸಾಗಿದ್ರೆ ಕೊಟ್ಟಾಯಕ್ಕಿಂತ ಮುಂದೆ ಸಾಗುವಾಗ ಶೆಟ್ಟಿಹಳ್ಳಿ ಸಿಗುತ್ತೆ. ಶೆಟ್ಟಿಹಳ್ಳಿಯ ಚರ್ಚಲ್ಲೊಂದು ಫೋಟೋ ಸೆಷನ್ನು ,ಬೆಳಬೆಳಗ್ಗೆಯೇ ಹೊಳೆದ ಒಂದಿಷ್ಟು ಯೋಗಾಸನಗಳ, ಜಂಪಿಂಗು, ಕ್ಲೈಂಬಿಂಗುಗಳ ಪೂರೈಸುವಾಗ ಹೊಟ್ಟೆ ಚುರುಗೊಟ್ಟಿದ, ಪ್ರಕೃತಿಯು ಕರೆದ ಅನುಭವ. ಬೇಗ ಹಾಸನಕ್ಕೆ ಹೋಗೋಣವೆಂದ್ರೆ ಹೊರಟ ಟಿ.ಟಿ ಎರಡನೇ ಬಾರಿ ಪಂಚರ್ರಾಗಿತ್ತು. ರಾತ್ರಿ ಟೋಲ್ ಗೇಟ್ ಬಳಿಯೇ ಪಂಚರ್ರಾದ ಹಿಂದಿನಿಂದ ಎಡಗಡೆಯ ಟೈರೇ ಈಗ ಮತ್ತೆ ಕೈಕೊಟ್ಟಿದ್ದು ಸಾಲದೆಂಬಂತೆ ಆ ಟೈರೇ ಹರಿದು ಹೋಗಿತ್ತು. ಹಿಂದಿನ ದಿನ ರಾತ್ರೆ ಟೋಲ್ ಗೇಟು ಬಳಿ ಅದೇ ಟಯರ್ರು ಪಂಚರ್ರಾಗಿ,ಸ್ಟೆಪ್ನಿ ಸರಿಯಿಲ್ಲದೇ ಒಂದೂವರೆ ಘಂಟೆ ಹಾಳಾದ ನೆನಪಾಗಿ ಏನಪ್ಪಾ ಇವತ್ತಿನ ಕತೆ ಅನಿಸಿಬಿಟ್ಟಿತು. ಅಲ್ಲೇ ಇದ್ದ ಕೊಟ್ಟಾಯ ಪಂಚಾಯಿತಿಯ ಪಂಪಿನಲ್ಲಿ ಮುಖಮಾರ್ಜನ ಮಾಡೋ ಐಡಿಯಾ ಕೆಲವರದ್ದಾದರೆ ಸುತ್ತಮುತ್ತಲ ಚದುರಂಗದ ಗಿಡಗಳ, ಅವುಗಳ ಮೇಲೆ ಕೂತ ಚಿಟ್ಟೆ, ಜೇಡಗಳ ಫೋಟೋ ತೆಗೆಯೋ ಪ್ರಯತ್ನ ಕೆಲವರದ್ದು. ಅಂತೂ ಗಾಡಿ ಸರಿಯಾಗಿ ಹೊರಡುವಷ್ಟರಲ್ಲಿ ಹಾಸನದಿಂದ ಹೊರಟ ಕೆ.ಎಸ್.ಆರ್ಟೀಸಿ ಬಸ್ಸು ಎದುರು ಸಿಕ್ಕು ಘಂಟೆ ಎಂಟು ಎಂದು ಸಾರುತ್ತಿತ್ತು. ಈ ಸಲ ಗಾಡಿಯಲ್ಲಿದ್ದ ಸ್ಟೆಪ್ನಿಯ ಟೈರೇ ಹರಿದು ಅದನ್ನು ಬಳಸೋ ಸ್ಥಿತಿಯಿಲ್ಲ.ಸದ್ಯ ಗಾಡಿಯಲ್ಲಿರೋ ಟೈರಿಗೆ ಹಿಂದಿನ ರಾತ್ರಿಯೇ ಪಂಚರ್ ಹಾಕಿಸಾಗಿದೆ. ಒಂದು ಸರಿಯಾದ ಸ್ಟೆಪ್ನಿಯೂ ಇಲ್ಲದ ಸ್ಥಿತಿಯಲ್ಲಿ ಇನ್ನೆಲ್ಲಾದ್ರೂ ಗಾಡಿ ಕೈಕೊಟ್ರೆ ಏನಪ್ಪಾ ಗತಿ ? ಅಂದುಕೊಂಡಿದ್ದ ಜಾಗಗಳಲ್ಲಿ ಮೊದಲನೆಯದ್ದನ್ನು ಮುಗಿಸೋಕೆ ಇಷ್ಟೆಲ್ಲಾ ಪರಿಪಾಟಲು ಪಟ್ರೆ ಇನ್ನು ಉಳಿದವುಗಳ ಕತೆಯೇನಪ್ಪಾ ಅಂದುಕೊಳ್ಳುತ್ತಿರುವಾಗಲೇ ನೆನಪಾಗಿದ್ದು ಬೆಳಗ್ಗೆ ಸಾಗುವಾಗ ಕಂಡ ಐದು ಮುಖದ ಆಂಜನೇಯ.ಮರಳುವಾಗ ಅಲ್ಲೇ ನಿಲ್ಲಿಸಿ ಆ ಭಜರಂಗಬಲಿಗೊಂದು ಶರಣೆಂದು ಇನ್ನಾದ್ರೂ ಪಯಣ ಶುಭವಾಗಲಿ ಅಂತ ಬೇಡಿಕೊಳ್ಳುತ್ತಾ ಮುಂದೆ ಸಾಗಿದೆವು. ಹಾಸನ ತಲುಪಿದೊಡನೇ ಕಂಡಿದ್ದೊಂದು ಉಡುಪಿ ಹೋಟೆಲ್ಲು. ಟ್ರಿಪ್ಪಿಗೆ ದಾರಿ ಹೇಳಬೇಕಾದ ಅನಿವಾರ್ಯತೆಯಲ್ಲಿ ರಾತ್ರಿಯಿಡೀ ನಿದ್ದೆಗೆಟ್ಟಿದ್ದ ನಾನು, ಕುಲುಕೋ ಗಾಡಿಯಲ್ಲಿ ಆಗಾಗ ನಿದ್ದೆಯೆಂದೇಳುತ್ತಿದ್ದ ಗೆಳೆಯರೆಲ್ಲರಿಗೂ ಅಲ್ಲಿ ಸಿಕ್ಕಿದ ರೊಟ್ಟಿ, ಇಡ್ಲಿ, ದೋಸೆ, ರೈಸ್ ಬಾತ್ಗಳಲ್ಲಿ ಅದಮ್ಯ ರುಚಿ ಕಂಡಿದ್ರೆ ಅಚ್ಚರಿಯಿಲ್ಲ. ಪ್ರಕೃತಿಯ ಕರೆಗಳಿಗೆ ಓಗೋಟ್ಟಿದ್ದಕ್ಕೆ, ಹೊಟ್ಟೆ ತುಂಬಿದ್ದಕ್ಕಿಂತಲೂ ಹೆಚ್ಚಾಗಿ ಡ್ರೈವರಿಗೆ ಇಲ್ಲಿಂದ ಮುಂದಿನ ಸ್ಥಳಕ್ಕೆ ದಾರಿ ಚೆನ್ನಾಗಿ ಗೊತ್ತಿದೆಯೆಂಬ ಖುಷಿಯಲ್ಲಿ ಟಿ.ಟಿ ಹತ್ತಿದ ನಮಗೆ ಭರಪೂರ ನಿದ್ರೆ.
ಸಕಲೇಶಪುರದಲ್ಲಿರೋ ಮಂಜರಾಬಾದಿನ ಕೋಟೆ ಬಂತು ಏಳ್ರೋ ಅಂತ ಎಬ್ಬಿಸೋವರೆಗೂ ಗಾಡಿಯಲ್ಲಿದ್ದ ಗೆಳೆಯರಿಗೆ ಗಾಡ ನಿದ್ರೆ. ಗಾಡಿ ನಿಲ್ಲಿಸಿದ ಸ್ಥಳದಿಂದ ಸುಮಾರು ಕಾಲು ಕಿ.ಮೀ ನಡೆದು , ಅಲ್ಲಿದ್ದ ಮೆಟ್ಟಿಲುಗಳ ಸಹಾಯದಿಂದ ಮೇಲೆ ಹತ್ತಿದ ನಮಗೆ ಸಿಕ್ಕಿದ್ದು ಮಂಜರಾಬಾದಿನ ಟಿಪ್ಪು ಕೋಟೆ. ಬೆಂಗಳೂರಿನ ಟಿಪ್ಪು ಅರಮನೆ, ಶ್ರೀರಂಗಪಟ್ಟಣದ ಪಾಳುಬಿದ್ದ ಅರಮನೆ, ಈಗ ಸಕಲೇಶಪುರದಲ್ಲಿ.. ಅದೆಷ್ಟು ಕಡೆ ಟಿಪ್ಪು ಅರಮನೆ, ಕೋಟೆಗಳನ್ನು ಕಟ್ಟಿಸಿದ್ದಾನೆ ಮಾರಾಯ ಅನ್ನೋ ಗೆಳೆಯನ ಸಂದೇಹಕ್ಕೆ ನನ್ನ ಬಳಿಯಂತೂ ಉತ್ತರವಿರಲಿಲ್ಲ. ನಕ್ಷತ್ರಾಕಾರದ ಆ ಕೋಟೆಯ ಮೇಲಿಂದ ಕಾಣೋ ಸುತ್ತಲ ಪ್ರಕೃತಿಯ ಸೊಬಗನ್ನು, ಆ ಕೋಟೆಯ ಹಲವು ಕೋನಗಳ ರಚನೆಗಳ ಸೌಂದರ್ಯವನ್ನು ಸವಿಯುತ್ತಿದ್ದ ನಮಗೆ ಮಧ್ಯಾಹ್ನವಾಗಿದ್ದೇ ತಿಳಿಯಲಿಲ್ಲ. ಘಂಟೆ ಹನ್ನೆರಡಾಗ್ತಾ ಬಂತು, ಮುಂದಿನ ಜಾಗಕ್ಕೆ ಹೋಗೋಣ ನಡೀರಿ ಅಂತ ಹೊರನಡೆದ ನಮಗೆ ಅಲ್ಲಿದ್ದ common crow, common yellow, blue swallow tail , five ring, bush brown ,evening brown ಮತ್ತು ಹೆಸರರಿಯದ ಅದೆಷ್ಟೋ ಚಿಟ್ಟೆಗಳು, ಜೇಡಗಳು ಬಿಡ್ಕೋಡಲು ತಯಾಗಾಗಿದ್ದವು. ಬಿಸ್ಲೆ ಎಂಬ ಹೆಸರಿನ ಅಲ್ಲಿನ ಪುನರ್ಪಳಿ(ಕೋಕಂ)ನ ಪ್ಯಾಕಾಗಿದ್ದ ಗ್ಲಾಸುಗಳು ನಮ್ಮೂರ ನೆನಪ ಹೊತ್ತು ತಂದಿದ್ದು ಸುಳ್ಳಲ್ಲ.
ಇನ್ನೂ ಹನ್ನೆರಡು ಘಂಟೆಯಾದ್ದರಿಂದ ಹಸಿವೇನಿಲ್ಲ. ನಮ್ಮ ಮುಂದಿನ ಪಯಣವಾದ ಬಿಸಿಲೇ ಘಾಟಿಗೆ ತೆರಳೋ ದಾರಿಯಲ್ಲಿ ಏನಾದ್ರೂ ತಿನ್ನೋಣವೆಂದು ಟಿ.ಟಿ ಹತ್ತಿದ ನಮಗೆ ಮಧ್ಯ ಏನೂ ಸಿಗೋಲ್ಲವೆಂದು ತಿಳಿದಿದ್ದು ಡ್ರೈವರನ ಮಾತಿನಿಂದ್ಲೇ ! ಸ್ಟಾರ್ ಹೋಟೇಲೇನೂ ಬೇಡಣ್ಣ ನಮಗೆ. ಸ್ಟಾರ್ ಕೋಟೆ ನೋಡೇ ಖುಷಿ ಪಟ್ಟಿದ್ದೇವೆ ನಾವು. ಯಾವ್ದಾದ್ರೂ ಸಣ್ಣ ಹಳ್ಳಿಯ ಕ್ಯಾಂಟೀನ್ ಕಂಡ್ರೂ ನಿಲ್ಲಿಸಿ. ಚಿತ್ರಾನ್ನ ಮೊಸರನ್ನ ಸಿಕ್ಕಿದ್ರೂ ಸಾಕು ನಮಗೆ ಅಂದೆ ಡ್ರೈವರಣ್ಣಂಗೆ. ಸರಿ, ಮುಂದೆ ಬ್ಯಾಕರವಳ್ಳಿ ಅಂತ ಅಲ್ಲಿ ಊಟ ಸಿಗುತ್ತೆ. ಅಲ್ಲಿ ನಿಲ್ಲಿಸ್ತೇನೆ ಅಂದ್ರು ನವೀನ್. ಹಿಂದೆ ಮಲ್ಲಳ್ಳಿ ಜಲಪಾತದಿಂದ ಕುಮಾರ ಪರ್ವತದವರೆಗೆ ನಡೆಯುತ್ತಾ ಹೊರಟ ನಾವು ದಾರಿಬದಿ ಸಿಕ್ಕ ಲೀಲಾ ಎಂಬುವವರ ಮನೆಯಲ್ಲಿ ಊಟ ಮಾಡಿಸಿಕೊಂಡು ತಿಂದಿದ್ದು ನೆನಪಾಯ್ತು. ಮುಂದೆ ಬರೋ ಬಿಸಿಲೆ ಘಾಟಿಯ ಕಾಡಿಗೆ ಶೋಲಾ ಅಥವಾ ಸೂಜಿಮೊನೆ ಕಾಡುಗಳು ಅಂತ ಕರೆಯುತ್ತಾರೆ ಅಂದ ನನ್ನ ಮಾತಿಗೆ ಯಾಕೆ ಅನ್ನೋ ಪ್ರಶ್ನೆ ರೆಡಿಯಾಗಿತ್ತು. ಸೂಜಿಯ ಮೊನೆಯಷ್ಟು ಚೂಪಾದ ಎಲೆಗಳಿರೋ ಮರಗಳು ಹೆಚ್ಚಿರುತ್ತೆ ಇಲ್ಲಿ ಅಂತ (ನಂತರ ತೋರಿಸಿದ) ವಿವರ ಕೊಡ್ತಾ ಸುತ್ತಲ ಪ್ರಕೃತಿಯನ್ನು ಸವಿಯೋ ಹೊತ್ತಿಗೆ ಬ್ಯಾಕರವಳ್ಳಿ ಬಂದಿತ್ತು.
ಬ್ಯಾಕರವಳ್ಳಿ ಅನ್ನೋದು ಸಕಲೇಶಪುರದಿಂದ ಬಿಸಿಲೆ ಘಾಟಿಗೆ ಬರೋ ದಾರಿಯಲ್ಲಿ ಸಿಗೋ ಒಂದು ಜಂಕ್ಷನ್ನು. ಅಲ್ಲಿಂದ ಸೀದಾ ಮುಂದಕ್ಕೆ ಹೋದರೆ ಕೂಡ್ಲಿಪೇಟೆ(೧೬ ಕಿ.ಮೀ) ಮತ್ತು ನಂತರದಲ್ಲಿ ಕೊಡಗಿನ ವಿರಾಜಪೇಟೆ(೧೨೦.ಕಿ.ಮೀ). ವಾಪಾಸ್ ಬಂದರೆ ಸಕಲೇಶಪುರ(೧೬ ಕಿ.ಮೀ) ಮತ್ತು ಹಾಸನ(೫೬ ಕಿ,ಮೀ). ಅಲ್ಲಿಂದ ಕೆಳಗೆ ಹೋಗೋ ರಸ್ತೆಯಲ್ಲಿ ಹೋದರೆ ಸಿಗೋದೇ ಹೆತ್ತೂರು(೧೦ ಕಿ.ಮೀ), ಬಿಸ್ಲೆ(೨೮ಕಿ.ಮೀ) ಮತ್ತು ಸುಬ್ರಹ್ಮಣ್ಯ(೬೧ ಕಿ.ಮೀ).ಹಾಗಾಗಿ ನಿಜಾರ್ಥದಲ್ಲಿ ಇದೊಂದು ಜಂಕ್ಷನ್ನೇ ಸರಿ. ಬೇರೆ ಬೇರೆ ಅಂಗಡಿಗಳಿದ್ದರೂ ಆ ಹಳ್ಳಿಯಲ್ಲಿ ಎದುರಿಗೆ ಕಂಡಿದ್ದೊಂದೇ ಹೋಟೆಲ್ಲು. ಅದೇ ನಮ್ಮ ಶ್ರೀ ಬಸವೇಶ್ವರ ಸಸ್ಯಾಹಾರಿ ಹೋಟೆಲ್ಲು. ಸಸ್ಯಾಹಾರಿಗಳೇ ಹೆಚ್ಚಿದ್ದ ನಮ್ಮ ಗುಂಪು ಖುಷಿಯಿಂದ್ಲೇ ಹೋಟೆಲಿಗೆ ನುಗ್ಗಿ ಏನಿದೆ ಅಂತ ಕೇಳೋ ಮೊದ್ಲೇ ಅನ್ನದ ಪಾತ್ರೆ ಹಿಡಿದ ಹೋಟೇಲ್ ಓನರ್ರು ಅಲ್ಲಾಗಲೇ ಇದ್ದ ಜನರಿಗೆ ಬಳಿಸೋದ್ರಲ್ಲಿ ನಿರತರಾಗಿದ್ರು. ಅನ್ನ ಸಾಂಬಾರು, ಮಜ್ಜಿಗೆ ಮತ್ತು ರೊಟ್ಟಿಯೂಟ ಸಿಗತ್ತೆ ಅಂದ್ರು ಅವರು ಏನೇನು ಸಿಗುತ್ತೆ ಅನ್ನೋ ಗೆಳೆಯರ ಪ್ರಶ್ನೆಗೆ. ಸಡನ್ನಾಗಿ ನುಗ್ಗಿದ ಹನ್ನೆರಡು ಜನಕ್ಕೆ ಹೋಟೇಲೊಳಗಿನ ಮತ್ತು ಹೊರಗಿನ ಚೇರುಗಳ್ಯಾವೂ ಸಾಕಾಗದೇ ಅಡ್ಜೆಸ್ಟ್ ಮಾಡ್ಕೊಂಡು ಕೂರಬೇಕಾಯ್ತು ಅನ್ನೋದಕಿಂತ್ಲೂ ಅಚಾನಕ್ಕಾಗಿ ನುಗ್ಗಿದ ನಮ್ಮೆಲ್ಲರ ಹೊಟ್ಟೆ, ಮನಸ್ಸುಗಳೆಲ್ಲಾ ತುಂಬಿತುಳುಕುವಷ್ಟು ಚೆನ್ನಾಗಿ ಅವರು ಬಡಿಸಿದರೆನ್ನುವುದೇ ಮುಖ್ಯವಾಗುತ್ತದೆ ಇಲ್ಲಿ. ಕೆಸವಿನ ಸೊಪ್ಪಿನ ಸಾಂಬಾರು, ಬಿಸಿ ಬಿಸಿ ರಸಂ, ಚಟ್ನಿಗಳನ್ನ ಆಹಾ ಸಖತ್ತಾಗಿದೆ ಅಂತ ನಾವು ಸವೀತಿದ್ರೆ ಅನ್ನ ಬೇಡ ಅಂದ ಗೆಳೆಯರಿಗೂ ಆಸೆ ಚಿಗುರಿ ಅನ್ನವನ್ನೂ ಹಾಕಿಸಿಕೊಳ್ಳುವ ಮನಸ್ಸಾಗಿತ್ತು. ಆಗಷ್ಟೇ ಮಾಡಿದ ಬಿಸಿ ಬಿಸಿ ರೊಟ್ಟಿಯ ಜೊತೆಗಿನ ಪಲ್ಯದ ಸವಿಯನ್ನ ಬಣ್ಣಿಸುತ್ತಿದ್ರೆ ಎದುರಿಗೆ ಕೂತವರಿಗೆ ಒಂದಾದ್ರೂ ರೊಟ್ಟಿಯ ಸವಿ ನೋಡೋ ಬಯಕೆ. ಮೂರ್ಮೂರು ಬಾರಿ ಅನ್ನ ಹಾಕಿಸಿಕೊಂಡು ಮೊಸರು, ಮಜ್ಜಿಗೆ ಎಲ್ಲಾ ಹಾಕಿಸಿಕೊಂಡು ತಿಂದ ಯಾರಿಗಾದ್ರೂ ಇಂಥಾ ಹೋಟೆಲ್ಲು ನಾವಿದ್ದಲ್ಲೂ ಇರಬಾರದಿತ್ತೇ ಅಂತ ಅನಿಸಿದ್ರೆ ಅದರಲ್ಲಿ ಅತಿಶಯೋಕ್ತಿಯೇನಿಲ್ಲ. ಆದ್ರೆ ಬೆಂದಕಾಳೂರ ದುಬಾರಿ ದುನಿಯಾದಲ್ಲಿ ಏನನ್ನು ಕೇಳಿದರೂ ನಗುನಗುತ್ತಲೇ ತಂದು ಬಡಿಸಿದ ಆ ಹೋಟೆಲ್ಲಿನ ತಾಯಿಯ ನಗುಮೊಗ , ಒಂದು ಗ್ಲಾಸು ನೀರಿಗೆ ಐದು ರೂಪಾಯಿಯಾಗುತ್ತೆ ಅಂತ ತಮಾಷೆ ಮಾಡುತ್ತಲೇ ನಮ್ಮ ನೆನಪಲ್ಲೊಂದು ಭದ್ರ ಸ್ಥಾನ ಪಡೆದ ಆ ಹೋಟೇಲೊಡೆಯನ ಸಂತಸ ಉಳಿಯುತ್ತಿತ್ತು ಇಲ್ಲವೋ ಗೊತ್ತಿಲ್ಲ.
ಬ್ಯಾಕರವಳ್ಳಿಯಲ್ಲಿ ಕಂಡ ಮತ್ತೊಂದು ಮುದುಗೊಳಿಸೋ ಸಂಗತಿಯೆಂದ್ರೆ ಅಲ್ಲಿ ಸಿಕ್ಕ ಕೋಳಿಮರಿ ಮಾರುವವ. ಒಂದಿಷ್ಟು ಬಾತುಕೋಳಿ ಮರಿಗಳನ್ನೂ ಇಟ್ಟುಕೊಂಡಿದ್ದ ಅವನ ಕೋಳಿಮರಿಗಳ ರೇಟಿನಂತೆ ಅವನ ಬಳಿಯಿದ್ದ ಕೋಳಿಗಳೂ ನೋಡುವವರ ಖುಷಿಗೊಳಿಸ್ತಿದ್ವು. ಯಾವ್ದಾದ್ರೂ ತಗೋಳ್ಳಿ, ಜೊತೆಗೆ ನೂರೈವತ್ತು ರೂಪಾಯಿ ಅಂತಿದ್ದ ಅವನ ಬಳಿ ಚೌಕಾಸಿ ಮಾಡಿ ಆ ಪೇಟೆಗಿಂತ ಅದೆಷ್ಟೋ ಕಮ್ಮಿ ದರಕ್ಕೆ ಮರಿಗಳಲ್ಲೊಂದೆರಡು ತರಬಹುದಿತ್ತೇನೋ. ಆದ್ರೆ ರಾತ್ರೆಯವರೆಗಿನ ನಮ್ಮ ಪಯಣದಲ್ಲಿ ಕೋಳಿಮರಿಗಳನ್ನ ಇಟ್ಟುಕೊಳ್ಳೋದಾದ್ರೂ ಎಲ್ಲಿ ಅನ್ನೋ ಸಂದೇಹದ ಜೊತೆಗೆ ಆಫೀಸಿಂದ ಬರೋವರೆಗೆ ಕೋಳಿಮರಿಗಳನ್ನ ನೋಡಿಕೊಳ್ಳೋದ್ಯಾರು ಅನ್ನೋ ಪ್ರಶ್ನೆಯೂ ಕಾಡಿತು. ಮನೆಗೆ ಬೀಗ ಹಾಕಿ ಎಲ್ಲರೂ ಹೊರಹೋಕ್ತಿದ್ದಾರೆ ಅಂದ್ರೆ ನನ್ನೂ ಕರೆದುಕೊಂಡು ಹೋಗಿ ಅನ್ನುವಂತೆ ಬೇಜಾರಾಗಿ ಅಳುತ್ತಿದ್ದ ನಮ್ಮನೆ ನಾಯಿಯ ನೆನಪಾಗಿ, ಗೂಡೊಂದರಲ್ಲಿ ಗೋಳಿಡಬಹುದಾದ ಕೋಳಿಮರಿಯ ದೃಶ್ಯ ಕಣ್ಮುಂದೆ ಬಂತು. ಯಾವತ್ತೋ ಒಂದಿನ ನಾ ಬರೋದ್ರೊಳಗೆ ಇದು ಸತ್ತೇ ಹೋಗಿ ನನ್ನ ಮಾಂಸಾಹಾರಿ ಗೆಳೆಯರ ಒಂದು ಹೊತ್ತಿನ ಊಟವಾಗ್ಬೋದು ಕಣೋ. ಹಾಗಾಗಿ ಇದ್ನ ಹಿಂಸೆಕೊಟ್ಟು ಸಾಯಿಸೋಕೆ ನಾ ತಗೊಂಡು ಹೋಗೋಲ್ಲ ಅಂದೆ ಇದ್ನ ತಗೊಂಡು ಹೋಗಿ ಸಾಕ್ಬೋದಲ್ಲೋ ಎಂದ ಗೆಳೆಯನಿಗೆ. ಯಾರಾದ್ರೂ ಸಾಕುವವರ ಅಥವಾ ಇದೇ ಕೋಳಿಯಂಗಡಿಯವನ ಕಾಳುಗಳ ತಿಂದುಕೊಂಡು ಆರಾಮವಾಗಿರ್ಲಿ ಇವು , ಇರುವಷ್ಟು ದಿನ ಅಂತ ತೀರ್ಮಾನಿಸಿ ಆ ಮುದ್ದು ಮೊಗದ ಮರಿಗಳೊಂದಿಗೆ ಒಂದಿಷ್ಟು ಫೋಟೋ ತೆಗೆಸಿಕೊಂಡ್ವಿ. ಏ ಕುಕ್ಕತ್ತೆ ಕಣೋ, ಹಾರತ್ತೆ ಕಣೋ ಅಂತಿದ್ದ ಹುಡುಗರೆಲ್ಲಾ ನಮಗೂ ಫೋಟೋ ಇರಲಿ ಅಂತ ಮುಂದೆ ಬಂದ್ರು. ಒಂದು ನಯಾಪೈಸೆ ವ್ಯಾಪಾರವಾಗದಿದ್ರೂ ಆ ಕೋಳಿಯಣ್ಣನ ಮೊಗದಲ್ಲೊಂದಿಷ್ಟು ನಗು. ಅಣ್ಣಾ ನಾನೊಂದು ಫೋಟೋ ತೆಗೆಸಿಕೊಳ್ಲಾ ಈ ಕೋಳಿಮರಿಗಳ ಜೊತೆಗೆ ? ನಂಗೆ ಆ ಬಾತುಕೋಳಿ ಮರಿ ಎತ್ತಿ ಕೊಡ್ತೀರಾ ಅಂತ ಕೇಳ್ತಿದ್ರೆ ಅವ್ರು ನಗು ನಗುತ್ತಲೇ ತಗೋಳ್ಳಿ , ನೀವೇ ಎತ್ಕೊಳ್ಳಿ ಪರವಾಗಿಲ್ಲ ಅಂತ ಅವರ ಕೋಳಿಮರಿಗಳನ್ನ ನಮ್ಮ ವಶಕ್ಕೆ ಬಿಟ್ಟು ಬಿಟ್ಟಿದ್ರು. ನೂರಾರು ಕೊಳಿ ಮರಿಗಳು ವಿವಿಧ ಹಂತದಲ್ಲಿರುವ ಕೋಳಿ ಫಾರಂಗಳಲ್ಲೇ ಓಡಾಡಿದರೂ ಹೊರಗಡೆಯಿಂದ ಯಾರು ಬಂದ್ರೂ ಒಳಗೆ ಬಿಡೋಲ್ಲ, ಇನ್ ಫೆಕ್ಷನ್ನಾಗುತ್ತೆ ಅನ್ನೋ ಅವರ ಭಯದ ಮಧ್ಯೆ ಹಾದಿಯಲ್ಲಿ ಬಂದ ಯಾರೋ ಆನಾಮಿಕ ತನ್ನ ಕೋಳಿಮರಿಗಳನ್ನ ಎತ್ತಿ ಆಟವಾಡ್ತಿರೋದನ್ನ ನೋಡೂ ನಗುತ್ತಿರೋ ಕೋಳಿಯಜ್ಜ ಭಿನ್ನವೆನಿಸಿದ. ಹೇ, ನಿಧಾನವಾಗಿ ಎತ್ಕೊಳ್ರೋ, ಅದ್ರ ರೆಕ್ಕೆ ಮುರಿದುಹೋಗುತ್ತೆ, ಕತ್ತು ಮುರಿದುಬಿಟ್ಟೀರ ಅಂತ ನಾವು ನಮ್ಮಲ್ಲೇ ಕೂಗ್ತಾ ಇದ್ರೂ ಅಜ್ಜ ಮಾತ್ರ ನಸುನಗುತ್ತಲೇ ಇದ್ದ. ನಾವು ಗಡದ್ದಾಗಿ ಊಟ ಹೊಡೆದು ಬಂದ್ರೂ ಅಜ್ಜ ಒಂದು ಬೀಡಿಯೆಳೆದಿದ್ದು ಬಿಟ್ರೆ ಬೇರ್ಯಾವ ವ್ಯಾಪಾರವನ್ನೂ ಕುದುರಿಸಿರಲಿಲ್ಲ. ಅಜ್ಜನಿಗೆ ತೋಟ, ಮನೆಗಳೆಲ್ಲಾ ಇದ್ರೂ ಈ ತರಹ ಬೆಳಗ್ಗಿನಿಂದ ಸಂಜೆಯವರೆಗೆ ಸರ್ಕಲ್ಲೊಂದರಲ್ಲಿ ಬಂದು ಮರಿಗಳನ್ನಿಟ್ಟುಕೊಂಡು ಕೂರೋದು ಒಂದು ಹವ್ಯಾಸವಾಗಿರಬಹುದು. ಅಥವಾ ಅದೇ ಅವನ ಹೊಟ್ಟೆಪಾಡಿರಬಹುದು. ಅದ್ಯಾವ ನೋವು, ನಲಿವುಗಳನ್ನೂ ತೋರಗೊಡದ ಅವನ ಮೊಗದ ಗೆರೆಗಳ ಹಿಂದೆ ಅದೆಷ್ಟೋ ದೂರದಿಂದ ಬಂದ ಜನರ ಮನ ಸೆಳೆಯುವಷ್ಟು ಚೆನ್ನಾಗಿರೋ ಕೋಳಿ ಮರಿಗಳನ್ನ ಹೊಂದಿರುವ ತನ್ನ ಶ್ರೀಮಂತಿಕೆಯ ಬಗೆಗಿನ ಖುಷಿ ಅಡಗಿರಬಹದೇನೋ. ಅವನಲ್ಲಿ ನಾಳೆಯ "ಅವನು" ಅಥವಾ ನಿನ್ನೆಯ "ನಾನು"ವಿನ ಬಗ್ಗೆ ತಲೆಕೆಡಿಸಿಕೊಳ್ಳದೇ ಇವತ್ತಿನ ಬಗ್ಗೆಯೊಂದೇ ಆಲೋಚಿಸುತ್ತಾ ಆರಾಮಾಗಿರು ಎನ್ನೋ ಉಪ್ಪಿಟ್ಟಿನ(uppi -2) "ನೀನು" ವಿನ ಲಕ್ಷಣಗಳೂ ಕಂಡಂತಾಗಿ ತುಂಬಾ ಧನ್ಯವಾದಗಳು ಅಣ್ಣಾ ಎಂದ್ರೆ ಅವ ನಗುನಗುತ್ತಾ ಕೈ ಎತ್ತಿದ. ಅವ ಟಾಟಾ ಕಣ್ರಪ್ಪಾ ಅಂದ್ನಾ ಅಥವಾ ಮುಂದಿನ ಪಯಣಕ್ಕೆ ಶುಭವಾಗಲಿ ಅಂದ್ನಾ ಅಂತ ಮುಂದಿನ ಸಾರಿ ಸಿಕ್ಕಿದ್ರೆ ಮತ್ತೆ ಅವನನ್ನೇ ಕೇಳಬೇಕು.
ಭೇಟಿ ಕೊಟ್ಟಿದ್ದ ಬಸವೇಶ್ವರ ಹೋಟೇಲಲ್ಲಿ ಅತ್ರಸ, ಉಂಡೆಗಳನ್ನು ನಮ್ಮ ಹನ್ನೆರಡರ ಗುಂಪು ಮತ್ತೆ ಮತ್ತೆ ತಿಂದರೂ , ನಮ್ಮೊಂದಿಗಿದ್ದ ಡ್ರೈವರಿಗೆ ಊಟವಾದರೂ ಎಲ್ಲಾ ಸೇರಿದ ಬಿಲ್ಲು ಐನೂರ ತೊಂಭತ್ತು ದಾಟಿರಲಿಲ್ಲ ! ಆ ಹೋಟೇಲಿಗೆ ಹೋದದ್ದರಿಂದ ಆದ ಇನ್ನೊಂದು ಉಪಕಾರವೆಂದ್ರೆ ಅಲ್ಲೇ ಇರೋ ಮಕ್ಕನಮನೆ ಫಾಲ್ಸಿನ ಬಗ್ಗೆ ತಿಳಿದಿದ್ದು. ಬೆಳಗ್ಗಿನಿಂದ ಬಿಸಿಲಲ್ಲಿ ಬಸವಳಿದ್ದಿದ್ದ ಗೆಳೆಯರು ಯಾವುದಾದ್ರೂ ಫಾಲ್ಸಿಗೆ ಹೋಗೋಣ ಇವತ್ತು ಅಂತಿದ್ರು. ಮಂಜರಾಬಾದಿನಿಂದ ಸಕಲೇಶಪುರಕ್ಕೆ ಹೋಗೋ ರಸ್ತೆಯಲ್ಲಿ ಎರಡು ಕಿ.ಮೀ ಹೋದ್ರೆ ಎಡಕ್ಕೆ ಸಿಗೋ ತಿರುವಿನಲ್ಲಿ ಹದಿನಾಲ್ಕು ಕಿ.ಮೀ ಹೋದ್ರೆ ಅಗ್ನಿ ಫಾಲ್ಸ್ ಅಂತ ಸಿಗುತ್ತೆ ಅಂತ ಮಂಜರಾಬಾದಿನ ಅಂಗಡಿಯೊಂದರಲ್ಲಿ ಕೇಳಿದ ಗೆಳೆಯರು ಅಲ್ಲಿಗೇ ಹೋಗೋಣ ಅಂತ ಕೂತಿದ್ರು. ಆದ್ರೆ ಅಲ್ಲಿಗೆ ಹೋದ್ರೆ ನಾವು ಹೋಗ್ಬೇಕು ಅಂತಿರೋ ಬಿಸ್ಲಿಗೆ ಹೋಗೋಕಾಗಲ್ಲ , ಬೇಗ ಬಿಸ್ಲೆ ನೋಡ್ಕೊಂಡು ಬರ್ತಾ ಈ ಫಾಲ್ಸಿಗೆ ಬಂದ್ರಾಯ್ತು.ಇಲ್ಲಾ ಅಲ್ಲೇ ಸಿಗುತ್ತೆ ಅಂತ ಹಿಂದೆ ಹೋದ ಗೆಳೆಯರು ಹೇಳಿರೋ ಯಾವುದಾದ್ರೂ ಫಾಲ್ಸಿಗೆ ಹೋದ್ರಾಯ್ತು ಅಂತ ತೀರ್ಮಾನ ಮಾಡಿದ್ವಿ. ಬಿಸ್ಲೆಗೆ ಹೋಗೋಕೆ ೨ ತಾಸು ಬೇಕು. ಈಗ್ಲೇ ಹನ್ನೆರಡಾಗಿದೆ ಅಂತಿದ್ದ ಡ್ರೈವರನ ಮಾತುಗಳೂ ಆ ನಿರ್ಧಾರದ ಹಿಂದೆ ಕೆಲಸ ಮಾಡಿದ್ವು.ಈಗ ನೋಡಿದ್ರೆ ಇಲ್ಲೇ ಹತ್ತಿರದಲ್ಲೊಂದು ಫಾಲ್ಸು,ಅದೂ ಬಿಸಿಲೆಗೆ ಹೋಗೋ ದಾರಿಯಲ್ಲೇ ಸ್ವಲ್ಪ ಆಚೆಗೆ ಇದೆ ಅಂತಿದ್ದಾರೆ ಇಲ್ಲಿ. ರೊಟ್ಟೆಯೇ ಜಾರಿ ತುಪ್ಪಕ್ಕೆ ಬಿದ್ದಂತಾಗಿತ್ತು ಗೆಳೆಯರಿಗೆ . ಇಲ್ಲೇ ಹತ್ತು ಕಿ.ಮೀ ಹೋದ್ರೆ ಹೆತ್ತೂರು ಅಂತ ಸಿಗುತ್ತೆ. ಅಲ್ಲಿಂದ ಐದು ಕಿ.ಮೀಗೆ ಬಾಚಳ್ಳಿ ಅಂತ ಸಿಗುತ್ತೆ. ಅಲ್ಲಿ ಬಲಕ್ಕೆ ತಿರುಗಿ ಮುಂದೆ ಹೋದ್ರೆ ಐದು ಕಿ.ಮೀ ಒಳಗೆ ಮಂಚನಮನೆ ಅಥವಾ ಮಂಕ್ಳಳ್ಳಿ ಫಾಲ್ಸ್ ಅಂತ ಹೇಳಿದ್ರು. ಹಿರಿಯೂರಿನಲ್ಲಿ ಬಲಕ್ಕೆ ತಿರುಗಿದ ನಾವು , ಹೆತ್ತೂರು ಬಾಚಳ್ಳಿಗಳ ನಂತರ ಅತ್ತಿಹಳ್ಳಿಯಲ್ಲಿ ಬಲಕ್ಕೆ ತಿರುಗಿ ಸಾಗಿದಾದ ಕಂಡಿದ್ದು ಕೂಡ್ಲು ರಸ್ತೆ. ಅಲ್ಲಿಂದ ಮುಂದಕ್ಕೆ ಎರಹಳ್ಳಿಗಳ್ಳಿಯಲ್ಲಿ ಮತ್ತೆ ಬಲಕ್ಕೆ ಸಾಗೋ ರಸ್ತೆಯಲ್ಲಿ ೩.ಕಿ.ಮೀ ಸಾಗೋ ಹೊತ್ತಿಗೆ ಸಿಕ್ಕಿದ್ದು ಮಂಕ್ಳಲ್ಲಿ ಫಾಲ್ಸು. ಫಾಲ್ಸು ನೋಡಿ ಮತ್ತೆ ಕೂಡ್ಲು ರಸ್ತೆಯವರೆಗೆ ವಾಪಾಸ್ ಬಂದರೆ ಅಲ್ಲಿಂದ ಮುಂದೆ ಸಾಗೋ ರಸ್ತೆಯಲ್ಲಿ ಬಿಸ್ಲೆ ಘಾಟಿ ಮತ್ತು ಮುಂದಕ್ಕೆ ಸುಬ್ರಹ್ಮಣ್ಯ. ಬಿಸ್ಲೆ ಘಾಟಿಯಿಂದ ಸುಬ್ರಹಣ್ಯಕ್ಕೆ ೨೩ ಕಿ.ಮೀಗಳ ದಾರಿಯಷ್ಟೆ. ನೋಡೋಕೆ ಇಷ್ಟು ಹತ್ತಿರ ಅನಿಸೋ ಈ ದಾರಿಗಳಲ್ಲಿ ಹೋಗೋದು ಅಷ್ಟು ಸುಲಭವಲ್ಲ ! ಬ್ಯಾಕರವಳ್ಳಿಯಿಂದ ಹೊರಟ ನಮಗೆ ಹದಿನೈದು ಕಿ.ಮೀಗಳ ದಾರಿ ಕ್ರಮಿಸುವಷ್ಟರಲ್ಲೇ ಒಂದು ತಾಸು ಕಳೆದಿತ್ತು !
ಅಲ್ಲಲ್ಲಿ ಹಾದಿ ಕೇಳುತ್ತಲೇ ಸಾಗಿದ್ದ ನಮಗೆ ಯರಹಳ್ಳಿಯಲ್ಲೊಬ್ಬ ಅಜ್ಜಿ ಬಲಕ್ಕಿನ ದಾರಿ ತೋರ್ಸಿದ್ರೆ ಅಲ್ಲೇ ಇದ್ದ ಅಜ್ಜ ಎಡಕ್ಕೆ ದಾರಿ ತೋರಿಸಿದ್ದಾ ಅನ್ನೋ ಸಂದಿಗ್ದದಲ್ಲಿದ್ರು ಗೆಳೆಯರು. ಒಂದೆರಡು ಕಿ.ಮೀ ಸಾಗಿದ್ರೂ ಎಲ್ಲೂ ನೀರು ಬೀಳುತ್ತಿರೋ ಶಬ್ದವಿಲ್ಲ. ಫಾಲ್ಸಿನ ಬಗ್ಗೆ ಬೋರ್ಡಿದೆ ಅಂತ ಅಂಗಡಿಯವ ಹೇಳಿದ್ರೂ, ದಾರಿಯಲ್ಲಿ ಸಿಕ್ಕವರೆಲ್ಲಾ ಹೇಳಿದ್ರೂ ಎಡಬಲಗಳೆರಡರಲ್ಲೂ ಕಾಣಿಸುತ್ತಿದ್ದ ಬೋರ್ಡುಗಳನ್ನು ದಿಟ್ಟಿಸುತ್ತಿದ್ದೆ ಮುಂದೆ ಕೂತಿದ್ದ ನಾನು. ಸ್ವಲ್ಪ ದೂರ ಸಾಗೋ ಹೊತ್ತಿಗೆ ಬಲಕ್ಕಿದ್ದ ಬಸ್ಟಾಂಡೊದರಲ್ಲಿ ಮಕ್ಕನಮನೆ ಫಾಲ್ಸ್ ಅಂತ ಇಟ್ಟಿಗೆ ತುಂಡೊಂದರಲ್ಲಿ ಬರೆದ ಹಾಗೆ ಕಾಣಿಸಿತು. ಏ, ಫಾಲ್ಸ್ ಅಂತ ಬರೆದ ಹಾಗಿದೆ ಅಲ್ಲಿ ತಡೀರಿ ತಡೀರಿ ಅಂತ ಹೇಳೋ ಹೊತ್ತಿಗೆ ಡ್ರೈವರು ಮುಂದೆ ಹೋಗಾಗಿತ್ತು. ಎರಹಳ್ಳಿಯಿಂದ ಚೆನ್ನಾಗಿರೋ ರಸ್ತೆ ಸಿಕ್ಕ ಖುಷಿಯಲ್ಲಿ ಮುಂಚಿಗಿಂತ ಸ್ವಲ್ಪ ಸ್ಪೀಡಾಗಿ ಓಡಿಸುತ್ತಿದ್ದ ಅವರ ಜೊತೆಗೆ ಬಸ್ಸಲ್ಲಿದ್ದ ಉಳಿದ ಗೆಳೆಯರೂ ಅಲ್ಲೊಂದು ಫಾಲ್ಸಂತ ಬೋರ್ಡಿದ್ದಿದ್ದು ಹೌದಾ ಅನ್ನೋ ಸಂದೇಹದಲ್ಲಿದ್ರು. ಫಾಲ್ಸು ಅಂದೆ ಒಂದು ಕಮಾನೋ, ದೊಡ್ಡ ಬೋರ್ಡೋ ಹಾಕಿರುತ್ತಾರೆಂಬ ಸಾಮಾನ್ಯ ಕಲ್ಪನೆಯಲ್ಲಿದ್ದ ಅವರಿಗೆ ಅಲ್ಲಿನ ಬಸ್ಟಾಂಡಿನ ಕೆಳಮೂಲೆಯೊಂದರ ಕೆಳಬದಿಯಲ್ಲಿದ್ದ ಬರಹ ಸಹಜವಾಗೇ ಕಣ್ಣಿಗೆ ಬಿದ್ದಿರಲಿಲ್ಲ. ನಾನೇ ಬೇಕಾದ್ರೆ ಹಿಂದೆ ಹೋಗಿ ನೋಡ್ಕೊಂಡು ಬರ್ತೀನಿ ಎಂದದ್ದಕ್ಕೆ ಬೇಡವೆಂದ ಡ್ರೈವರು ಗಾಡಿಯನ್ನು ಹಿಂದಕ್ಕೆ ತಗೊಂಡು ಬಂದ್ರೆ ಅಲ್ಲಿ ನಿಜವಾಗ್ಲೂ ಫಾಲ್ಸಿನ ಬಗ್ಗೆಯೇ ಬರೆದಿದ್ರು ! ಡ್ರೈವರು ಬರೋದ್ರಲ್ಲಿ ಮಾಡಿದ ಒಂದು ಘಂಟೆ ಲೇಟು, ಎರಡೆರಡು ಪಂಕ್ಚರ್ರುಗಳಿಂದಾದ ಎರಡು ತಾಸು ಲೇಟುಗಳ ಮಧ್ಯೆಯೂ ನಮ್ಮ ಪಯಣ ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗೇ ಸಾಗ್ತಿರೋ ಬಗ್ಗೆ ಖುಷಿಯೂ, ಮಿಸ್ಸಾಗೇ ಹೋಗಬಹುದಾಗಿದ್ದ ಜಲಪಾತವೊಂದಕ್ಕೆ ಅನಿರೀಕ್ಷಿತವಾಗಿ ಭೇಟಿ ಕೊಡಲಿರೋ ಸಂತಸವೂ ಮೂಡತೊಡಗಿತು.
ಮಂಕನಮನೆಯ ರಸ್ತೆಯನ್ನು ಇಳಿಯತೊಡಗಿದ್ವಿ. ಸುಮಾರು ಮುಕ್ಕಾಲು ಕಿ.ಮೀ ಇಳಿಯೋ ಹೊತ್ತಿಗೆ ಅಲ್ಲೊಂದು ಮನೆ ಕಾಣಿಸ್ತು. ಅಣ್ಣಾ, ಇಲ್ಲಿಂದ ಮುಂದೆ ಗಾಡಿ ಇಳಿಸೋದು ಬೇಡ. ಮತ್ತೆ ಅದು ಹತ್ತತ್ತೋ ಇಲ್ವೋ ಗೊತ್ತಿಲ್ಲ. ಮುಂದೆ ಫಾಲ್ಸಿರೋದು ಹೌದಾ ಇಲ್ವೋ, ಇದ್ರೆ ಎಷ್ಟು ದೂರ ಅಂತ ನಾವೇ ಕೇಳ್ಕೊಂಡು ಬರ್ತೀವಿ ಅಂತ ಇಬ್ಬರು ಗೆಳೆಯರು ಕೆಳಗಿಳಿದು ನಡೆದ್ವಿ ಕಂಡ ಮನೆಯತ್ತ. ಯಾರೂ ಕಾಣ್ತಿಲ್ವಲ್ಲಪ್ಪ ಮನೇಲಿ, ಮನೇಲಿ ಯಾರಾದ್ರೂ ಇದ್ದಾರೋ ಇಲ್ವೋ ಅನ್ನೋ ಗೊಂದಲದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಯತ್ತ ಇಳಿಯುತ್ತಿದ್ದ ನಮಗೆ ಆ ಮನೆಯ ಹೆಂಗಸರಿಬ್ರು ಕಂಡ್ರು. ಇಲ್ಲೇ ಮುಕ್ಕಾಲು ಕಿ.ಮೀ ನಡೆದ್ರೆ ಮಂಕನಮನೆ ಫಾಲ್ಸು ಸಿಗುತ್ತೆ. ಆದ್ರೆ ಮಳೆ ಬರೋ ಮೊದ್ಲು ಅಲ್ಲಿಂದ ವಾಪಾಸ್ ಹತ್ತಿ ಬರ್ಬೇಕು ಸರೀನಾ ಅಂದ್ರು ಅಲ್ಲಿ ಎದುರಾದ ಅಜ್ಜಿ. ಗಾಡಿ ಇನ್ನೂ ಸ್ವಲ್ಪ ಮುಂದೆ ಹೋಗುತ್ತೆ. ಸ್ವಲ್ಪ ದೂರದಲ್ಲಿ ಹೊಸ ಮನೆ ಆಗ್ತಾ ಇದೆ. ಅಲ್ಲೀವರೆಗೂ ಗಾಡಿ ಹೋಗುತ್ತೆ ಅಂತ ಅವರಂದ್ರೂ ಗಾಡಿ ಇಲ್ಲಿನ ಮಣ್ಣಲ್ಲಿ ಹುಗಿದುಕೊಳ್ಳಬಹುದಾದ ಅಪಾಯವನ್ನು ಲೆಕ್ಕ ಹಾಕಿ ಮಳೆ ಬರೋ ಮೊದ್ಲು ಹತ್ತಿಬರೋಣ ಅನ್ನೋ ಭರವಸೆಯಲ್ಲಿ ಜಲಪಾತದತ್ತ ಹೆಜ್ಜೆ ಹಾಕಿದ್ವಿ.
ಮಕ್ಕನಮನೆ ಜಲಪಾತ ಅಂತ ಕೆಳಗಿಳಿಯುತ್ತಿದ್ದ ನಮಗೆ ಅಲ್ಲೇ ಕಂಡ ಮೂರು ಹೋಂ ಸ್ಟೇನಂತಹ ರಚನೆಗಳನ್ನು ಕಂಡು ಆಶ್ಚರ್ಯವಾಯ್ತು. ಹೊರಪ್ರಪಂಚದ ಸುಳಿವೇ ಇಲ್ಲದಂತಿರೋ ಊರಲ್ಲೂ ಹೋಂ ಸ್ಟೇಗಳೇ..ಈ ಸಂಪ್ರದಾಯ ಮುಂದುವರಿದು ಕಾಡುಗಳನ್ನೆಲ್ಲಾ ಕಡಿದು ರೆಸಾರ್ಟ್ ಮಾಡೋ ಕೊಡಗು, ಚಿಕ್ಕಮಂಗಳೂರಿನ ಪರಿಸರ ಹಾಳು ಮಾಡೋ ಸಂಸ್ಕೃತಿ ಇಲ್ಲಿ ಕಾಲಿಡದಿರಲಪ್ಪಾ ಅಂತ ಬೇಡಿಕೊಳ್ಳುತ್ತಾ ಮುಂದೆ ಸಾಗಿದೆವು. ಫಾಲ್ಸು ಅಂತ ನಡೆದು ಅದ್ರ ಯಾವುದೋ ಮೂಲೆಯಿಂದ ಇಳಿದು ಫಾಲ್ಸಿಗೆ ಎದುರಾಗ್ತೀವಿ ಅನ್ನೋ ನಿರೀಕ್ಷೆಯಲ್ಲಿದ್ದ ನಮಗೆ ಅಚ್ಚರಿ. ಎದುರಿಗೇ ನದಿ ಹರಿಯುತ್ತಿದೆ. ಫಾಲ್ಸಿಗೆ ಹೋಗೋ ಹಾದಿ ನದಿಯ ಪಕ್ಕ ಸಾಗ್ತಾ ಇದೆ. ಹಾದಿ ಅಂದ್ರೇನು ? ನದಿಯ ಪಕ್ಕದ ಬಂಡೆಗಳ ಮಧ್ಯೆ ದಾರಿ ಮಾಡ್ಕೊಂಡು ನಡೀಬೇಕು ! ಅಲ್ಲಲ್ಲಿ ಬಿದಿರುಮಳೆಗಳ ಮಧ್ಯೆ ಕಂಡ ಜಾಗ, ಸವೆದ ಹಾದಿಯನ್ನು ನೋಡಿದಾಗ ನಾವು ಸರಿಯಾದ ದಿಸೆಯಲ್ಲೇ ಬರ್ತಿದೀವಿ ಅನ್ನೋ ಭರವಸೆ. ಫಾಲ್ಸ್ ಬೀಳೋದೂ ಕಾಣ್ತಾ ಇದೆ ಸಾಗ್ತಿರೋ ಹಾದಿಯಿಂದ. ಅದರ ಪಕ್ಕದಲ್ಲೇ ಇರೋ ಮರದ ಬೀಳಲುಗಳು, ಕಲ್ಲುಗಳ ಮಧ್ಯದ ಜಾಗದಲ್ಲಿ ಕೆಳಗಿಳೀಬೇಕು ! ಹೋದ ಕಾಡ ಮಧ್ಯದ ಎಲ್ಲಾ ಫಾಲ್ಸುಗಳಲ್ಲೂ ಸರಿ ಸುಮಾರು ಇಂತದ್ದೇ ಸವಾಲಿನ ದಾರಿಯಿದ್ದರೂ ಫಾಲ್ಸಿನ ಪಕ್ಕದಲ್ಲೇ ಅದರ ಬುಡಕ್ಕಿಳಿದಿದ್ದು ಇದೇ ಮೊದಲು ! ಏಳು ಧಾರೆಗಳಾಗಿ ಒಟ್ಟಿಗೆ ಧುಮುಕೋ ಜಲಪಾತ ಹಲವು ಉಪಧಾರೆಗಳಿಂದ ಕೂಡಿ ನೋಡುಗರ ಕಣ್ಮನ ತುಂಬುವಂತಿದೆ. ಬೆಳ್ಳನೆ ನೊರೆಯಿಂದ ಜಲಪಾತವ ಕಂಡೊಡನೆ ಗೆಳೆಯರಿಗೆಲ್ಲಾ ನೀರಿಗೆ ಧುಮುಕೋ ಉತ್ಸಾಹ ಬುಗಿಲೆದ್ದಿತು. ಈಜು ಬಾರದ ಗೆಳೆಯರು ಹೆಚ್ಚು ಆಳವಿಲ್ಲದೆಡೆ ಆಟವಾಡ್ತಾ ಇದ್ರೆ ಈಜು ಬರುವವರದ್ದು ಜಲಪಾತದ ಬುಡದತ್ತ ಸಾಗೋ ಜೋಷ್. ಮುಂದೆ ಬಿಸ್ಲೆಗೆ ಹೋಗ್ಬೇಕು ಕಣ್ರೋ, ಬರ್ರೋ ಅಂದ್ರೂ ನೀರಿಗಿಳಿದ ಗೆಳೆಯರಿಗೆ ಮೇಲೆ ಬರಲೇ ಮನಸ್ಸಿಲ್ಲ. ಅಂತೂ ಒಲ್ಲದ ಮನಸ್ಸಿಂದ ಮೇಲೆ ಹತ್ತಿದವರು ಎದುರಿಗಿದ್ದ ದಟ್ಟ ಹಸಿರು ಬೆಟ್ಟಗಳಲ್ಲಿ ಮಂಜು ಕವಿಯುತ್ತಿದ್ದ ಸುಂದರ ದೃಶ್ಯಗಳನ್ನು ಸವಿಯುತ್ತಾ ಟಿ.ಟಿ ಸೇರೋ ಹೊತ್ತಿಗೆ ನಾಲ್ಕೂ ಮುಕ್ಕಾಲು.
ಅಲ್ಲಿಂದ ಮತ್ತೆ ಎರೆಹಳ್ಳಿಗೆ ಬಂದು, ಕೂಡ್ಲು ರಸ್ತೆ ಸೇರಿ ಅಲ್ಲಿಂದ ಬಿಸ್ಲೆಯತ್ತ ಹೊರಟೆವು. ದಾರಿಯಲ್ಲಿ ಸಿಗೋ ಚೆಕ್ ಪೋಸ್ಟು ತಲುಪೋ ಹೊತ್ತಿಗೆ ಐದೂಮುಕ್ಕಾಲು. ಆರು ಘಂಟೆಗೆ ಚೆಕ್ ಪೋಸ್ಟ್ ಕ್ಲೋಸಾಗುತ್ತೆ ಅಂದ ಡ್ರೈವರ್ರು. ಮುಂದೆ ಹೋದ್ರೆ ಬಿಸ್ಲೆ ಘಾಟಿ ನೋಡ್ಬೋದು. ಆದ್ರೆ ವಾಪಾಸ್ ಬರೋಕ್ಕಾಗಲ್ಲ. ಸುಬ್ರಹ್ಮಣ್ಯಕ್ಕೆ ಹೋಗಿ, ಅಲ್ಲಿಂದ ಸಕಲೇಶಪುರಕ್ಕೆ ಹೋಗಿ ವಾಪಾಸ್ಸಾಗಬೇಕು ಅಂದ. ಬಂದದ್ದು ಬಂದಾಗಿದೆ. ಇನ್ನು ಬಿಸಿಲೆಯನ್ನೂ ನೋಡೋಣ ಅಂತ ಹೋಗಪ್ಪ ಪರ್ವಾಗಿಲ್ಲ ಅಂತ ಧೈರ್ಯ ಮಾಡಿ ಮುಂದೆ ಹೋದ್ವಿ. ಮುಂದೆ ದಟ್ಟ ಕಾಡಿನಲ್ಲಿ ನಿಧಾನವಾಗಿ ಕ್ರಮಿಸುತ್ತಿದ್ದ ರಸ್ತೆಯಲ್ಲಿ ಸಾಗೋ ಹೊತ್ತಿಗೆ ಮೊದಲ ವೀಕ್ಷಣಾ ಸ್ಥಳ ಸಿಕ್ಕಿತು. ಆಗುಂಬೆಯಂತೆ ಇಲ್ಲಿ ಸಿಮೆಂಟಿನ ಕಟ್ಟೆಗಳನ್ನು ಕಟ್ಟಿಯೋ, ಗೋಪುರಗಳನ್ನು ನಿರ್ಮಿಸಿಯೋ ವೀಕ್ಷಣಾ ಸ್ಥಳ ಅನ್ನೋ ಗುರುತು ಮಾಡಿಲ್ಲ. ಮರಗಳಿಲ್ಲದ ತಿರುವಿನ ರಸ್ತೆಯಲ್ಲಿ ಸುತ್ತಣ ಪ್ರಕೃತಿಯನ್ನು ವೀಕ್ಷಿಸೋ ಸನ್ನಿವೇಶ ಸಿಕ್ಕರೆ ಅದೇ ವೀಕ್ಷಣಾ ಸ್ಥಳವೆಂದು ಭಾವಿಸೋ ನಾವು ಗಾಡಿ ನಿಲ್ಲಿಸಬೇಕು ! ಬಿಸ್ಲೆ ಅಂದ ತಕ್ಷಣ ಗೂಗಲ್ಲಿನಲ್ಲಿ ಸಿಗೋ ದೃಶ್ಯಗಳನ್ನು, ವೀಕ್ಷಣಾ ಗೋಪುರಗಳನ್ನು ಮನಸ್ಸಲ್ಲಿಟ್ಟುಕೊಂಡು ಇಲ್ಲಿ ಬಂದರೆ ನಿಮ್ಮ ಆ ಭ್ರಮೆ ಹರಿಯೋಕೆ ಹೆಚ್ಚು ಹೊತ್ತು ಬೇಡ ! ಅಷ್ಟರಲ್ಲೇ ಕತ್ತಲು ಕವಿಯೋಕೆ ಶುರುವಾದ್ದರಿಂದ ಛೇ, ಇನ್ನೊಂದು ಘಂಟೆ ಬೇಗ ಬರ್ಬೇಕಿತ್ತು ಇಲ್ಲಿಗೆ ಅಂದುಕೊಳ್ಳೋಕೆ ಶುರು ಮಾಡಿದ್ವಿ. ಇನ್ನೊಂದು ವೀವ್ ಪಾಯಿಂಟ್ ಇದೆ ಅಲ್ಲಿಗೆ ಹೋಗೋಣ ಬೇಗ ಬನ್ನಿ ಅಂತ ಗಾಡಿ ಹತ್ತಿಸಿಕೊಂಡನಾದರೂ ಆ ಡ್ರೈವರಿಗೆ ಮುಂದೆ ಅಂತದ್ದೊಂದು ಇದೆಯಾ ಅನ್ನೋ ಭರವಸೆ ಇತ್ತೋ ಇಲ್ಲವೋ ಖಂಡಿತಾ ಗೊತ್ತಿಲ್ಲ ! ಸಾಗುತ್ತಿದ್ದ ರಸ್ತೆಯ ಆಚೀಚೆ ಹರಿಯುತ್ತಿದ್ದ ಎಂಟತ್ತು ಫಾಲ್ಸುಗಳು ಇದೇ ತರಹದ ಪಯಣದ ಅನುಭವ ಕೊಟ್ಟ ಮಳೆಗಾಲದಲ್ಲಿನ ಕೊಲ್ಲೂರ ಘಾಟಿಯ ಪಯಣವನ್ನು ನೆನಪಿಸಿದವು. ಈ ರಸ್ತೆಗಿಂತ ಆ ರಸ್ತೆ ಎಷ್ಟೋ ಚೆನ್ನಾಗಿತ್ತು ಎಂದುಕೊಂಡರೂ ಕತ್ತಲ ಈ ಕಾಡುಹಾದಿಯ ಅದ್ಭುತ ಅನುಭವ ಮರೆಯುವಂತದ್ದಲ್ಲ. ಈ ಕಾಡು ಅನೇಕ ಗೆಳೆಯರಿಗೆ ರಂಗಿತರಂಗದ ಕಮರೊಟ್ಟುವನ್ನು ನೆನಪಿಸುತ್ತಿತ್ತು ! ಅಂತೂ ಮನಸ್ಸು ತಡೆಯಲಾಗದೇ ಅಲ್ಲಿ ಸಿಕ್ಕ ನದಿಯೊಂದರ ಬಳಿ ನಿಲ್ಲಿಸಿ ಫೋಟೋ ತೆಗೆದದ್ದಾಯ್ತು. ಮತ್ತೊಂದು ವೀವ್ ಪಾಯಿಂಟೆಂತೂ ಸಿಗೋಲ್ಲ ಇನ್ನು. ಸಿಕ್ಕರೂ ಅಲ್ಲಿ ಯಾವ ಫೋಟೋ ತೆಗೆಯೋಕೂ ಆಗೋಲ್ಲ ಅನ್ನೋ ಭದ್ರ ಭರವಸೆಯಲ್ಲಿ. ಎಷ್ಟೋ ಕಡೆ ಮರಗಳು ಬಿದ್ದು ಅವನ್ನು ಕತ್ತರಿಸಿ ರಸ್ತೆ ತೆರವುಗಳಿಸಿದ ಲಕ್ಷಣಗಳು ಕಾಣಿಸ್ತಿದ್ವು. ಪುಣ್ಯಕ್ಕೆ ನಮ್ಮ ಬಸ್ಸಿನ ಮೇಲೆ ಯಾವ ಮರವೂ ಬೀಳಲಿಲ್ಲ. ದಾರಿಗೆ ಅಡ್ಡವೂ ಬೀಳಲಿಲ್ಲ. ಬಿದ್ದಿದ್ದರೆ ಮಾರನೆ ದಿನ ಬೆಳಗ್ಗೆ ಇನ್ಯಾರೋ ಬಂದು ಕತ್ತಿ, ಕೊಡಲಿಗಳಿಂದ ಅದನ್ನು ತೆರವುಗೊಳಿಸೋ ತನಕ ಏನು ಮಾಡೋಕೂ ಆಗ್ತಿರಲಿಲ್ಲ ! ದೇವರು ದೊಡ್ಡೋನು ಅಂತ ಅವನಿಗೊಂದು ಧನ್ಯವಾದ ಹೇಳ್ತಾ ಬಂದ ನಮಗೆ ರಸ್ತೆ ಪಕ್ಕದ ಭಯಾನಕ ಬಂಡೆಗಳು ಭಯ ಹುಟ್ಟಿಸಲಿಲ್ಲ. ಜೋಗದಿಂದ ಮುಂದಿರೋ ಅಜ್ಜಿಮನೆಗೆ ಇಂತಹದ್ದೇ ಕಾಡುಗಳಲ್ಲಿ ಓಡಾಡಿದ ಅನುಭವವೋ, ಗೆಳೆಯರೆಲ್ಲಾ ಜತೆಗಿದ್ದ ಭರವಸೆಯೋ ಏನೋ ಗೊತ್ತಿಲ್ಲ. ಈಗಾಗಲೇ ಎರಡು ಸಲ ಕೈಕೊಟ್ಟಿರೋ ಗಾಡಿಯ ಯೋಚನೆ ಬಂದು ಮೈಬೆವರಲಿಲ್ಲ. ಆದ್ರೆ ಹಾಗೇ ಸಾಗೋ ಹೊತ್ತಿಗೆ ಮತ್ತೊಂದು ಹಾಕಿರೋ ಗೇಟ್ !.
ಗೇಟನ್ನ ದಾಟಿಯೇ ಮುಂದೆ ಸಾಗಬೇಕು ನಾವು. ಸುಬ್ರಹ್ಮಣ್ಯದ ದಾರಿ ಬಿಟ್ಟು ಬೇರೆ ಎಲ್ಲಾದ್ರೂ ಬಂದ್ವಾ ಅನ್ನೋಕೆ ಯಾವ ತಿರುವೂ ಸಿಕ್ಕಿರಲಿಲ್ಲ ನಮಗೆ. ಏನಪ್ಪಾ ಮಾಡೋದು ಈ ಗೇಟಿಂದ ಮುಂದೆ ಹೋಗೋಕೆ ಅಂತ ನೋಡಿದ್ರೆ ಗೇಟು ತೆಗಿಯೋಕೆ ಯಾರೂ ಕಾಣ್ತಿಲ್ಲ ಮುಂದೆ !! ಎದುರಿಗೆ ಕಾಣ್ತಿರೋದು ಗಡಿಮಾರಮ್ಮನ ಗುಡಿಯೊಂದೆ. ಕೊನೆಗೆ ನಾನೇ ಇಳಿದು ಗೇಟು ತೆಗೆದು ಗಾಡಿ ಮುಂದೆ ಬಂದ ಮೇಲೆ ಮತ್ತೆ ಗೇಟು ಹಾಕಿ ಹತ್ತಿಕೊಂಡೆ. ಎಲ್ಲಾ ಬೇಗ ಮುಂದೆ ಹೊರಡೋ ಗಡಿಬಿಡಿಯಲ್ಲಿದ್ರೂ ನನಗೆ ಕಾಪಾಡಮ್ಮಾ ತಾಯಿ ಅಂತ ಆ ತಾಯಿಗೆ ನಮಸ್ಕರಿಸದಿರಲು ಮನಸ್ಸಾಗಲಿಲ್ಲ. ಕಾಡಮಧ್ಯದ ಕಗ್ಗತ್ತಲಿನಲ್ಲಿ ಬೆಳಕಿನಾಕರದಂತೆ ಕಂಡ ಆ ತಾಯಿ ಭಯ ಹುಟ್ಟಿಸೋ ಬದಲು ಅಭಯವಿತ್ತಂತೆನಿಸಿತು. ಮುಂದಿನ ಹಾದಿ ಸಿಮೆಂಟಿನ ಹಾದಿ. ರಸ್ತೆಯ ಎರಡೂ ಪಕ್ಕಗಳಲ್ಲೂ ಗೂಟ ಹುಗಿದು, ಬಟ್ಟೆ ಕಟ್ಟಿ ಕೆಳಗೆ ಇಳಿಯದಂತೆ ಎಚ್ಚರಿಕೆ ಕೊಟ್ಟ ಆ ದಾರಿಯಲ್ಲಿ ಎಚ್ಚರಿಕೆಯಿಂದ ಮುಂದೆ ಸಾಗಿದ ನಾವು ಕುಕ್ಕೆ ಸುಬ್ರಹ್ಮಣ್ಯಕ್ಕೆ ತಲುಪಿದೆವು ಏಳುಕಾಲಿನ ಹೊತ್ತಿಗೆ. ಲೇಟಾಗೋದು ಆಗೇ ಹೋಗಿದೆ. ದೇವರ ದರ್ಶನವನ್ನು ಪಡೆದೇ ಮುಂದೆ ಹೋಗೋದೆಂದು ನಿರ್ಧರಿಸಿದ ನಾವು ಕುಕ್ಕೆ ತಲುಪಿ ಗಾಡಿ ಪಾರ್ಕ್ ಮಾಡಿ ಗಾಡಿ ಇಳಿದು ನೋಡ್ತೇವೆ ಗಾಡಿ ಪಂಕ್ಚರ್ !! ಹಿಂದಿನಿಂದ ಎಡಗಡೆಯ ಮತ್ತದೇ ಟೈರು. ಬೇರೆ ಸ್ಟೆಪ್ನಿಯಿಲ್ಲ. ಇದ್ದ ಟಯರ್ರು ಹರಿದುಹೋಗಿದೆ. ಇಲ್ಲೇ ಬೇಗ ಯಾವುದಾದ್ರೂ ಪಂಕ್ಚರ್ ಶಾಪಲ್ಲಿ ಪಂಕ್ಛರ್ ಹಾಕ್ಸಪ್ಪ ಅಂತ ಹೇಳಿ ಗಡಿಬಿಡಿಯಿಂದ ದೇಗುಲದತ್ತ ಸಾಗಿದ್ವಿ. ಮುಂದಾದ ಕತೆ ಇನ್ನೂ ದೊಡ್ಡದು. ಅದರ ಬಗ್ಗೆ ಮತ್ತೆಂದಾದರೂ ಮಾತಾಡೋಣ.. ಅಲ್ಲಿಯವರೆಗೆ.. ಶುಭದಿನ.
*****
ಸೂಪರ್
ಮಲೆನಾಡಿನ ಸೊಬಗು…. ಎಂದೆದಿಗೂ ನೆನಪಿಡುವಂತದ್ದು !! super
Prayaanada sanniveshagala onderadaadaru photos publish maadbekitthu. Lekhana tumba chenda ide. photos iddidre innu chenda anistittu…