”ಬೆಳಗೆರೆಯೂ, ಅಜ್ಞಾತ ಓದುಗದೊರೆಯೂ: ಒಂದು ಖಾಸ್ ಬಾತ್!”: ಪ್ರಸಾದ್‌ ಕೆ.

ರವಿಯವರ ಅಕ್ಷರಜಗತ್ತಿನ ಬಗ್ಗೆ ನನಗಾದ ಮೊದಲ ಪರಿಚಯವೆಂದರೆ ‘ಬಾಟಮ್ ಐಟಮ್’ ಸರಣಿ.

ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು. ರವಿ ಬೆಳಗೆರೆ ಆಗಲೇ ಖ್ಯಾತ ಲೇಖಕರಾಗಿದ್ದರು. ಅವರ ಕೃತಿಗಳು ಆವತ್ತಿಗೇನೇ ಬೆಸ್ಟ್ ಸೆಲ್ಲರ್ಸ್. ಅಂದಿನ ನನ್ನ ಸೀಮಿತ ಅರಿವಿನ ಪ್ರಕಾರ ರವಿ ಸಾರಥ್ಯದ ಪತ್ರಿಕೆ ‘ಹಾಯ್ ಬೆಂಗಳೂರು’ ಚೆನ್ನಾಗಿ ಓಡುತ್ತಿತ್ತು. ಇನ್ನು ‘ಕ್ರೈಂ ಡೈರಿ’ ಮತ್ತು ‘ಎಂದೂ ಮರೆಯದ ಹಾಡು’ ಟಿವಿ ಕಾರ್ಯಕ್ರಮಗಳಿಂದ ರವಿಯವರು ರಾಜ್ಯದಾದ್ಯಂತ ಮನೆಮಾತೂ ಆಗಿದ್ದರು.

ಹೀಗಿದ್ದರೂ ಇಂಗ್ಲಿಷ್ ನಲ್ಲಿ living under the rock ಅನ್ನುವಂತೆ ನನಗೆ ಇದ್ಯಾವುದರ ಸುಳಿವೂ ಇರಲಿಲ್ಲ. ನಮ್ಮ ಮನೆಯಲ್ಲಿ ಸಾಹಿತ್ಯವನ್ನು ಯಾರೂ ಗಂಭೀರವಾಗಿ ಓದಿಕೊಂಡವರಿಲ್ಲ. ಹೀಗಾಗಿ ಪಠ್ಯಪುಸ್ತಕದಾಚೆಗಿನ ಓದು ಏನಿದ್ದರೂ ಹತ್ತಾರು ಪುಸ್ತಕಗಳಿದ್ದ ಶಾಲಾ ಗ್ರಂಥಾಲಯಕ್ಕಷ್ಟೇ ಸೀಮಿತವಾಗಿತ್ತು. ಇನ್ನು ಕೇಬಲ್ ಕಾಲದಲ್ಲೂ ನಮ್ಮಲ್ಲಿದ್ದಿದ್ದು ದೂರದರ್ಶನ ವಾಹಿನಿ ಮಾತ್ರ. ಇದರಿಂದಾಗಿಯೂ ಟಿವಿಯೊಳಗೆ ಕ್ರೈಮು, ಕೆ.ಎಸ್.ನ, ಗಝಲ್ಲು ಎಂದೆಲ್ಲಾ ಮಾತನಾಡುತ್ತಿದ್ದ ರವಿ ಬೆಳಗೆರೆ ನನಗೆ ದಕ್ಕಲು ಸಾಧ್ಯವೇ ಇರಲಿಲ್ಲ. ಸಮಾಧಾನವೆಂದರೆ ತಡವಾಗಿಯಾದರೂ ಬೆಳಗೆರೆ ನನಗೆ ಒಂದಷ್ಟು ದಕ್ಕಿದರು. ದೇರ್ ಆಯೇ, ದುರುಸ್ತ್ ಆಯೇ ಅನ್ನೋಹಾಗೆ!

ಫ್ಲ್ಯಾಷ್ ಬ್ಯಾಕ್:

ಹೈಸ್ಕೂಲು ದಿನಗಳಲ್ಲಿ ಸಾಹಿತ್ಯದ ಓದು ಆರಂಭವಾಗಿದ್ದರೂ ಬೆಳಗೆರೆಯವರ ಇಂಟ್ರೋ ನನ್ನ ಪುಸ್ತಕದ ಕಪಾಟಿನಲ್ಲಿ ಆಗಿರಲೇ ಇಲ್ಲ. ನಾನು ಆ ದಿನಗಳಲ್ಲಿ ನನ್ನದೇ ಆದ ಐಡೆಂಟಿಟಿ ಕ್ರೈಸಿಸ್ ನಿಂದ ಬಳಲುತ್ತಿದ್ದೆ. ಎದುರಿಸಬೇಕಿದ್ದ ಸವಾಲುಗಳು ಬೆಟ್ಟದಷ್ಟಿದ್ದವು. ಈ ಅವಧಿಯಲ್ಲೇ ಕಾಕತಾಳೀಯವೆಂಬಂತೆ ಪುಸ್ತಕದಂಗಡಿಯೊಂದರ ಶೆಲ್ಫಿನಲ್ಲಿ ಬೆಳಗೆರೆಯವರ ಸಾಲುಸಾಲು ಪುಸ್ತಕಗಳು ಕಾಣಸಿಕ್ಕಿದ್ದವು ನೋಡಿ. ಹೀಗೆ ಅಚಾನಕ್ಕಾಗಿ ಅಂದು ‘ಬಾಟಮ್ ಐಟಮ್’ ನನ್ನ ಕೈಗೆ ಬಂತು. ಮುಂದೆ ಬಾಟಮ್ ಐಟಮ್ ಲೇಖನಗಳು ನನ್ನನ್ನು ಯಾವ ರೀತಿ ಪ್ರಭಾವಿಸತೊಡಗಿತೆಂದರೆ ಬಹುಬೇಗ ಅಷ್ಟೂ ಸರಣಿಯನ್ನು ಓದಿ ಮುಗಿಸಿಬಿಟ್ಟಿದ್ದೆ. ಮುಂದೆ ಈ ಬಿಡಿಲೇಖನಗಳು ಹಲವು ಬಾರಿ ನನ್ನ ಮರುಓದಿನಲ್ಲೂ ಬಂದುಹೋಗಿದ್ದುಂಟು.

ಈ ಕಾಲಘಟ್ಟದಲ್ಲಿ ಬಾಟಮ್ ಐಟಮ್ ನನಗೊಂದು ಶಾಕ್ ಕೊಟ್ಟಿದ್ದು ಕೂಡ ನಿಜ. ನಮ್ಮ ಮನೆಯಲ್ಲಿ ದಿನಪತ್ರಿಕೆಯೊಂದನ್ನು ನಿತ್ಯ ತರಿಸುತ್ತಿದ್ದರೂ ಅಲ್ಲಿ ಹಾಯ್ ಬೆಂಗಳೂರಿಗೆ ಜಾಗವಿರಲಿಲ್ಲ. ತನ್ನ ಸೆನ್ಸೇಷನಲ್ ಮುಖಪುಟ ಮತ್ತು ವಿಚಿತ್ರ ಕವರ್ ಸ್ಟೋರಿ ಶೀರ್ಷಿಕೆಗಳಿಂದ ಹಾಯ್ ಪತ್ರಿಕೆಯು ಸಾಂಪ್ರದಾಯಿಕ ಓದುಗರಿಂದ ದೂರವೇ ಇದ್ದಿತ್ತು. ಹೀಗಿರುವಾಗ ಮನೆಯ ಹಾಲಿನ ಟೀಪಾಯಿಯಲ್ಲಿ ಇಡುವ ಪತ್ರಿಕೆಯೇ ಅದಾಗಿರಲಿಲ್ಲ. ಅಸಲಿಗೆ ಒಂದು ಮುಖ್ಯವಾಹಿನಿಯ ಪತ್ರಿಕೆ ಮತ್ತು ಟ್ಯಾಬ್ಲಾಯ್ಡೊಂದರ ಮಧ್ಯೆ ಇರುವ ವ್ಯತ್ಯಾಸವೇ ನನಗಾಗ ಗೊತ್ತಿರಲಿಲ್ಲ. ಹೀಗಾಗಿ ಬಾಟಮ್ ಐಟಮ್ ನ ಮೂಲವಿರುವುದು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಎಂದು ತಿಳಿದಾಗ ನನಗೆ ಸಹಜವಾಗಿಯೇ ಅಚ್ಚರಿಯಾಗಿತ್ತು. ಅಲ್ಲಿಗೆ ಹಾಯ್ ಬೆಂಗಳೂರು ಮಸಾಲಾ ಸುದ್ದಿಗಳನ್ನು ಮಾತ್ರ ಅತಿರಂಜಿತವಾಗಿ ಪ್ರಕಟಿಸುವ ಅಸ್ಪೃಶ್ಯ ಪತ್ರಿಕೆಯೇನಲ್ಲ ಎಂಬ ಅರಿವೂ ಬಂದಂತಾಗಿತ್ತು. ಇನ್ನು ಖ್ಯಾತ ಲೇಖಕರಾದ ಜೋಗಿ, ಜಯಂತ ಕಾಯ್ಕಿಣಿ, ನಾಗತಿಹಳ್ಳಿ ಚಂದ್ರಶೇಖರ್ ರಂತಹ ಲೇಖಕರೂ ಕೂಡ ಹಾಯ್ ನಲ್ಲಿ ನಿರಂತರವಾಗಿ ಬರೆಯುತ್ತಿದ್ದರು ಎಂಬುದು ನಂತರ ಗೊತ್ತಾಗಿ ನನಗಾದ ಅಚ್ಚರಿಯು ಅಷ್ಟಿಷ್ಟಲ್ಲ. ಜೋಗಿಯವರು ಹಾಯ್ ಪತ್ರಿಕೆಯಲ್ಲಿ ಬರೆಯುತ್ತಿದ್ದ “ಜಾನಕಿ ಕಾಲಂ” ಇಂದಿಗೂ ಲವಲವಿಕೆಯೊಂದಿಗೆ ಓದಿಸಿಕೊಳ್ಳುವ ಅಂಕಣಬರಹಗಳು.

ರವಿಯ ಫೀಲ್ಡಿಗಿಳಿದ ಓದುಗದೊರೆ:

ಹೀಗೆ ಬಾಟಮ್ ಐಟಮ್ ನೊಂದಿಗೆ ತೆರೆದುಕೊಂಡ ರವಿಯವರ ಜಗತ್ತು ಮುಂದೆ ಅವರ ಹಲವು ಕೃತಿಗಳ ಓದಿನಲ್ಲಿ ವಿಸ್ತಾರವಾಗುತ್ತಾ ಹೋಯಿತು. ಅಸಲಿಗೆ ನನಗೆ ಋಷ್ವಂತ್ ಸಿಂಗ್, ಚಲಂ, ಪ್ರೊತಿಮಾ ಬೇಡಿ, ಸತ್ಯಕಾಮ, ಓಶೋ… ಇತ್ಯಾದಿ ಘಟಾನುಘಟಿಗಳ ಪರಿಚಯವಾಗಿದ್ದು ಬೆಳಗೆರೆಯವರ ಬರಹಗಳನ್ನು ಓದಿದ ನಂತರವೇ. ಆದರೆ ಕನ್ನಡದ ಓದುಗರಿಗೆ ರವಿಯವರು ಪರಿಚಯಿಸಿದ್ದ ಖುಷ್ವಂತರ limited version ನನಗೆ ಅಷ್ಟಾಗಿ ಇಷ್ಟವಾಗಿರಲಿಲ್ಲ. ಏಕೆಂದರೆ ಖುಷ್ವಂತರ ವ್ಯಾಪ್ತಿ ಬಹಳ ದೊಡ್ಡದು. ಅವರು ಕೇವಲ ಸ್ಕಾಚ್ ವಿಸ್ಕಿ ಮತ್ತು ತಮ್ಮ ಚಪಲತನದ ಬಗ್ಗೆ ಮಾತ್ರ ಬರೆದವರಲ್ಲ. ಈ ಜಗತ್ತಿನ ಬಹುತೇಕ ಎಲ್ಲಾ ಸಂಗತಿಗಳ ಬಗ್ಗೆಯೂ ಖುಷ್ವಂತ್ ನಿರಂತರವಾಗಿ, ತಮ್ಮ ರಸವತ್ತಾದ ಶೈಲಿಯಲ್ಲಿ ಬರೆದರು. ಖುಷ್ವಂತ್ ಬರಹಗಳಿಂದಾಗಿಯೇ ನನಗೆ ಫೈಝ್ ಅಹ್ಮದ್ ಫೈಝ್, ಅಲ್ಲಮ ಇಕ್ಬಾಲ್, ಬಷೀರ್ ಬದ್ರ್, ಗುರು ದತ್, ಅಮೃತಾ ಶೆರ್ಗಿಲ್, ಜಾನ್ ಏಲಿಯಾ, ಬಲರಾಜ್ ಸಾಹ್ನೀ, ದೇವಾನಂದ್, ಇಸ್ಮತ್ ಚುಘ್ಲಾಯಿ, ಸಾದತ್ ಹಸನ್ ಮಂಟೋ, ಪ್ರಭಾ ದತ್… ಹೀಗೆ ಪ್ರತಿಭಾವಂತರ ದೊಡ್ಡದೊಂದು ಲೋಕವೇ ನನ್ನೆದುರು ತೆರೆದುಕೊಂಡಿತ್ತು. ಖುಷ್ವಂತರ ಬರಹಗಳನ್ನು ಇಂದಿಗೂ ಬಹಳ ಖುಷಿಪಟ್ಟು ಓದುವವನು ನಾನು. ಖುಷ್ವಂತರಿಗಿದ್ದ ಅಗಾಧ ಜೀವನಪ್ರೀತಿ, ಶಿಸ್ತು ಮತ್ತು ಜ್ಞಾನ ಇಂದಿಗೂ ನನಗೊಂದು ಮುಗಿಯದ ಅಚ್ಚರಿ.

ಇವೆಲ್ಲದರ ಜೊತೆಗೇ ಅಪರಾಧ ಲೋಕದ ಬಗ್ಗೆ ನನ್ನಲ್ಲಿ ಮೊಳೆಯುತ್ತಿದ್ದ ಕುತೂಹಲಕ್ಕೆ ಬೆಳಗೆರೆಯವರ “ಪಾಪಿಗಳ ಲೋಕದಲ್ಲಿ” ಇತ್ಯಾದಿ ಪುಸ್ತಕಗಳೂ ನೀರೆರೆದವು. ಇದರಿಂದಾಗಿ ಮುಂದೆ ಮಾರಿಯೋ ಪ್ಯೂಜೋ, ಹುಸೇನ್ ಝಾಯ್ದಿ, ಆನ್ ರೂಲ್ ರಂತಹ ನುರಿತ ಕ್ರೈಂ ಬರಹಗಾರರೂ ನನಗೆ ದಕ್ಕಿದರು. ಈ ಹಾದಿಯಿಂದಾಗಿ ಮನೋವಿಜ್ಞಾನದತ್ತ ಹೊಸದೊಂದು ಸೆಳೆತವು ಪ್ರಾರಂಭವಾಗಿ ಅದು ಶಾಶ್ವತವಾಗಿ ಉಳಿದುಕೊಂಡುಬಿಟ್ಟಿತು.

ರವಿ ಬೆಳಗೆರೆಯವರಿಂದ ಕನ್ನಡ ಸಾಹಿತ್ಯಲೋಕಕ್ಕೆ ಏನು ಕೊಡುಗೆ ಸಿಕ್ಕಿತು ಎಂದು ಕೇಳಿದರೆ ಅಕಾಡೆಮಿಕ್ ಧಾಟಿಯಲ್ಲಿ ಉತ್ತರ ಕೊಡುವಷ್ಟು ನಾನು ಶಕ್ತನಲ್ಲ. ಆದರೆ ಒಂದು ಕಾಲಘಟ್ಟದಲ್ಲಿ, ದೊಡ್ಡಮಟ್ಟಿನ ಓದುಗವರ್ಗವನ್ನು ಅವರು ಹಿಡಿದಿಟ್ಟಿದ್ದಂತೂ ಸತ್ಯ. “ಪಾಪಿಗಳ ಲೋಕದಲ್ಲಿ” ಕೃತಿಯು ಆಗ ಕಮರ್ಷಿಯಲ್ ನೆಲೆಯಲ್ಲಿ ಅವರಿಗೆ ಮುಖ್ಯವಾಗಿತ್ತು ಎಂದು ಅವರೇ ಬರೆದ ನೆನಪು. ಹೀಗಾಗಿ ರೌಡಿಸಂ ಬಗ್ಗೆ, ರೌಡಿಗಳ ಬಗ್ಗೆ ರೋಚಕ ಕತೆಗಳನ್ನು ದಾಖಲಿಸುವುದರಿಂದ ಸಮಾಜಕ್ಕೇನು ಲಾಭ ಎಂಬ ಪ್ರಶ್ನೆಯೇ ಬಿದ್ದುಹೋಗುತ್ತದೆ. ಅವರ ಈ ಪ್ರಯತ್ನಕ್ಕೆ ಯಶಸ್ಸು ದೊರಕಿತು ಕೂಡ. ಬಹುಷಃ ಆ ಕಾಲದಲ್ಲಿ ಇವುಗಳೂ ಕೂಡ ಹೇಳಲು ಯೋಗ್ಯವಾದ ಕತೆಗಳು ಎಂದು ಯಾರೂ ಯೋಚಿಸಿರಲೇ ಇಲ್ಲ. ರವಿ ಟ್ರೆಂಡ್ ಸೆಟ್ಟರ್ ಆಗಿದ್ದು ಹೀಗೆ.
‘ಓ ಮನಸೇ’ ದಿನಗಳು:

ಲೇಖಕ, ಪತ್ರಕರ್ತ ರವಿ ಬೆಳಗೆರೆಯವರನ್ನು ನಾನು ವೈಯಕ್ತಿಕವಾಗಿ ಬಲ್ಲವನಲ್ಲ. ಬೆಂಗಳೂರಿನಲ್ಲಿ ಹೆಚ್ಚಿನ ಸಮಯವನ್ನು ಕಳೆಯುವ ಅವಕಾಶವು ಎಂದೂ ಬಂದೊದಗದ ಪರಿಣಾಮವಾಗಿ ಅವರ ಮನೆಯಲ್ಲಾಗಲೀ, ಪದ್ಮನಾಭನಗರದ ಆಫೀಸಿನಲ್ಲಾಗಲೀ ಅಥವಾ ಬೇರ್ಯಾವ ಸಾಹಿತ್ಯಿಕ ಸಭೆ-ಸಮಾರಂಭಗಳಲ್ಲೂ ಅವರನ್ನು ಭೇಟಿಯಾಗುವ ಅವಕಾಶಗಳು ಸಿಕ್ಕಿರಲಿಲ್ಲ. ಹಾಗೆ ನೋಡಿದರೆ ಸೆಲೆಬ್ರಿಟಿಗಳನ್ನು ನಾನು ಹುಡುಕಿಕೊಂಡು ಹೋಗಿ ಮಾತನಾಡಿಸಿದ್ದು ಕಮ್ಮಿಯೇ. ಅದರಲ್ಲೂ ಫೋಟೋ ಮತ್ತು ಸೆಲ್ಫಿಗಳೆಂದರೆ ಬಲುದೂರ. ಅವರ ಖಾಸಗಿತನವನ್ನು ನಮ್ಮ ತೆವಲಿಗಾಗಿ ನಾಶಪಡಿಸುತ್ತಿದ್ದೇವೋ ಎಂಬ ಸಂಕೋಚ.

ಹಾಗೆ ನೋಡಿದರೆ ಇಂದಿನ ಡಿಜಿಟಲ್ ಯುಗದಲ್ಲಿ ಓರ್ವ ವ್ಯಕ್ತಿಯನ್ನು ಹುಡುಕಿ, ಅವರ ಸಂಪರ್ಕಮೂಲಗಳನ್ನು ಕೆದಕುವುದು ಮಹಾಸಾಹಸವೇನಲ್ಲ. ಆದರೆ ಅಂಥದ್ದೊಂದು ಆಸಕ್ತಿಯು ಬೆಳಗೆರೆಯವರ ವಿಚಾರದಲ್ಲಿ ಯಾವತ್ತೂ ಹುಟ್ಟಲೇ ಇಲ್ಲ. ಹೀಗಾಗಿ ನಾನು ರವಿ ಬೆಳಗೆರೆಯವರ ಬರವಣಿಗೆಯನ್ನು ಅಷ್ಟು ಇಷ್ಟಪಟ್ಟರೂ ಅವರನ್ನೆಂದೂ ಭೇಟಿಯಾಗಲಿಲ್ಲ. ಅಂತೆಯೇ ದಿಲ್ಲಿಯಲ್ಲಿ ಇಷ್ಟು ವರ್ಷಗಳ ವಾಸದ ಹೊರತಾಗಿಯೂ ಬೆಳಗೆರೆಯವರ ಪರಮಗುರುವಾದ ಖುಷ್ವಂತ್ ಸಿಂಗ್ ರವರನ್ನೂ ಕೂಡ ಮುಖತಃ ಭೇಟಿಯಾಗಲು ಸಾಧ್ಯವಾಗಲಿಲ್ಲ. ಅಂತೂ ಇಂದು ನಮ್ಮ ಪಾಲಿಗೆ ಉಳಿದಿರುವುದು ಗುರುಶಿಷ್ಯರ ನೆನಪು ಮಾತ್ರ.

ಇದು 2018 ರ ಮಾತು. ಆಗ ನಾನು ಆಫ್ರಿಕಾದ ಅಂಗೋಲಾದಲ್ಲಿದ್ದೆ. ಆಗಿನ್ನೂ ನನ್ನ ಯಾವ ಪುಸ್ತಕಗಳೂ ಪ್ರಕಟವಾಗಿರಲಿಲ್ಲ. ಆದರೆ ನನ್ನ ಮೊದಲ ಅನುವಾದಿತ ಕೃತಿಯಾದ ‘ಸಫಾ’ ಹಸ್ತಪ್ರತಿಯು ಸಿದ್ಧವಾಗಿತ್ತು. ಕೆಲ ವೆಬ್ ಜಾಲತಾಣಗಳಲ್ಲಿ ಆಗಲೇ ನಾನು ನಿರಂತರವಾಗಿ ಬರೆಯುತ್ತಿದ್ದ ಪರಿಣಾಮವಾಗಿ, ಸಫಾಳ ಕತೆಯು ಮುದ್ರಣರೂಪದಲ್ಲೇ ಓದುಗರನ್ನು ತಲುಪಬೇಕೆಂಬುದು ನಾನು ಹಂಬಲಿಸಿದ್ದೆ. ಈ ಬಗ್ಗೆ ಸಾಕಷ್ಟು ಯೋಚಿಸಿದ ನಂತರ ನಾನು ಪ್ರಯತ್ನಿಸಬಹುದೇನೋ ಎಂಬ ವಿಚಾರ ಮೂಡಿದ್ದು ಮಾತ್ರ ರವಿ ಬೆಳಗೆರೆಯವರ ‘ಓ ಮನಸೇ’ ಪತ್ರಿಕೆಯಲ್ಲಿ.

ಕೂಡಲೇ ಓ ಮನಸೇ ಪತ್ರಿಕೆಗೊಂದು ಮೈಲ್ ಕಳುಹಿಸಿ ಸಫಾಳ ಕತೆಯನ್ನು ಧಾರಾವಾಹಿಯ ರೂಪದಲ್ಲಿ ಪ್ರಕಟಿಸಲು ಸಾಧ್ಯವೇ ಎಂದು ಕೇಳಿದ್ದೆ. ಕೆಲ ದಿನಗಳ ನಂತರ ಸಂಪಾದಕರಿಂದಲೇ ಅಸ್ತು ಎಂಬ ಉತ್ತರ ಬಂದಿತು. ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿದ್ದ ಪತ್ರಿಕೆಯು ಹೊಸ ಬರಹಗಾರನೊಬ್ಬನೊಂದಿಗೆ ಇಂಥದ್ದೊಂದು ರಿಸ್ಕ್ ತೆಗೆದುಕೊಳ್ಳಬಹುದು ಎಂಬ ನನ್ನ ನಿರೀಕ್ಷೆಯು ನಿಜವಾಗಿತ್ತು. ಮುಂದಿನ ಸಂಚಿಕೆಯಲ್ಲೇ ‘ಕತ್ತಲ ಜಗತ್ತಿನ ಕರ್ಮಕಾಂಡ’ ಎಂಬ ಶೀರ್ಷಿಕೆಯನ್ನು ಹೊತ್ತು ಓ ಮನಸೇ ತಂಡವು ಇದನ್ನು ಕವರ್ ಸ್ಟೋರಿ ಮಾಡಿತ್ತು. ಸಾಲದ್ದೆಂಬಂತೆ ನನ್ನ ಪತ್ರವನ್ನು ಯಥಾವತ್ತಾಗಿ, ಭಾವಚಿತ್ರದ ಸಮೇತ ಒಳಪುಟದಲ್ಲಿ ಪ್ರಕಟಿಸಲಾಗಿತ್ತು.

ಓ ಮನಸೇ ಪತ್ರಿಕೆಯು ‘ಸಫಾ’ ಸರಣಿಯನ್ನು ಕೆಲ ಕಾಲ ಪ್ರಕಟಿಸಿತು. ಆದರೆ ಕಾರಣಾಂತರಗಳಿಂದಾಗಿ ಇದು ಹೆಚ್ಚು ಕಾಲ ಮುಂದುವರಿಯಲಿಲ್ಲ. ಆದರೆ ಪ್ರಕಟವಾಗುತ್ತಿದ್ದಷ್ಟು ಕಾಲ ಒಳ್ಳೊಳ್ಳೆಯ ಚಿತ್ರಗಳ ಸಹಿತವಾಗಿ ಧಾರಾವಾಹಿಯು ಆಕರ್ಷಕವಾಗಿ ಮೂಡಿಬಂದಿದ್ದಂತೂ ಸತ್ಯ. ಸಫಾ 2020 ರ ಅಂತ್ಯದಲ್ಲಿ ಸೃಷ್ಟಿ ಪ್ರಕಾಶನದಿಂದ ಪುಸ್ತಕ ರೂಪದಲ್ಲಿ ಓದುಗರಿಗೆ ಅರ್ಪಣೆಯಾಗಿದೆ.

ರವಿ ಎಂಬ ಕೌತುಕ:

ಅಂದಹಾಗೆ ನಮ್ಮ ರವಿ ಬೆಳಗೆರೆ ಮತ್ತು ರಾಮ್ ಗೋಪಾಲ್ ವರ್ಮಾ ಬಗ್ಗೆ ನನ್ನ ವೈಯಕ್ತಿಕ ದೃಷ್ಟಿಕೋನವೆಂದಿದೆ. ನಿಮಗಿದು ಬಾಲಿಶವೆನಿಸಿದರೂ ಒಮ್ಮೆ ಓದಿಕೊಳ್ಳಿ. ಇಬ್ಬರೂ ದೈತ್ಯಪ್ರತಿಭೆಗಳು. ಹೊರಜಗತ್ತಿಗೆ ವಿಕ್ಷಿಪ್ತರು. ಇಬ್ಬರೂ ಅದ್ಭುತ ಅನಿಸಿದಷ್ಟೇ ಕಳಪೆಯಾದ ಕೃತಿ-ಸಿನೆಮಾಗಳನ್ನು ತಮ್ಮ ಅಭಿಮಾನಿ ಬಳಗಕ್ಕೆ ನೀಡಿದವರು. ವಿನಾಕಾರಣ ಬೇಡದ ವಿವಾದಗಳಿಂದಾಗಿ ಸುದ್ದಿಯಲ್ಲಿರುವವರು. ಒಂದು ಕಾಲದಲ್ಲಿ ಸತ್ಯ, ನಿಶ್ಶಬ್ದ್, ಕಂಪೆನಿಯಂತಹ ಚಿತ್ರಗಳನ್ನು ನೀಡಿದ ಖ್ಯಾತ ಚಿತ್ರನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೆಂದೂ ಅಂತಹ ಅದ್ಭುತ ಸಿನೆಮಾಗಳನ್ನು ಮಾಡಲಿಲ್ಲ. ಅಂತೆಯೇ ಬೆಳಗೆರೆಯವರ ಹೇಳಿ ಹೋಗು ಕಾರಣ, ಮಾಂಡೋವಿ ಇಷ್ಟವಾದಷ್ಟು ಅವರ ಇತ್ತೀಚಿನ ಕೃತಿಗಳು ನನ್ನನ್ನು ಕಾಡಲೇ ಇಲ್ಲ. ತನ್ನ ಕೊನೆಯ ದಿನಗಳಲ್ಲಿ ವಯಸ್ಸು ಮತ್ತು ಇತರ ಕಾರಣಗಳಿಂದಾಗಿ ರವಿ ಹಿಂದಿನ ಫೈರ್ ಬ್ರಾಂಡ್ ಆಗಿ ಉಳಿದಿರಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯವೇ. ಆದರೆ ಕೊನೆಯವರೆಗೂ ಅವರಲ್ಲಿ ಜೀವಂತವಾಗಿದ್ದ ಕ್ರಿಯಾಶೀಲತೆಯು ನನ್ನನ್ನು ಸದಾ ತಟ್ಟಿದೆ.

ಅಷ್ಟಕ್ಕೂ ಓದುಗರಿಗೆ ಯಾವುದು ಇಷ್ಟವಾಗುತ್ತದೆ ಎಂಬುದನ್ನು ಇದಮಿತ್ಥಂ ಧಾಟಿಯಲ್ಲಿ ಊಹಿಸುವುದು ಸಾಧ್ಯವಿಲ್ಲ. ಒಂದೊಳ್ಳೆಯ ಸಿನಿಮಾ ಅಥವಾ ಪುಸ್ತಕವನ್ನು ಓರ್ವ ನಿರ್ದೇಶಕ/ಲೇಖಕ ಸೃಷ್ಟಿಸಲು ಪ್ರಯತ್ನಿಸುತ್ತಾನಷ್ಟೇ. ಯಾರೂ ಬೇಕೆಂದೇ ಕಳಪೆ ಸಿನೆಮಾ ಅಥವಾ ಪುಸ್ತಕವನ್ನು ಮಾಡಲು ಹೊರಡುವುದಿಲ್ಲ. ಆದರೆ ಸೂಪರ್ ಹಿಟ್ ಗಳು ಮಾತ್ರ ಅಪರೂಪಕ್ಕೆಂಬಂತೆ ಘಟಿಸುತ್ತವೆ. ಸಿನೆಮಾಲೋಕದಲ್ಲಿ ಭಟ್ಟರ ‘ಮುಂಗಾರುಮಳೆ’ ಬಂದಂತೆ. ಬೆಳಗೆರೆಯವರ “ಹೇಳಿ ಹೋಗು ಕಾರಣ” ಇಂದಿಗೂ ಕನ್ನಡದ ಕಾದಂಬರಿಗಳಲ್ಲಿ one of the best novels ಎಂಬ ರೀತಿ ಜನಮಾನಸದಲ್ಲಿ ಉಳಿದುಹೋದಂತೆ. ಅಷ್ಟಿದ್ದರೂ ತಮ್ಮ ಕ್ಷೇತ್ರದಲ್ಲಿ ರವಿ ಬೆಳಗೆರೆಯವರಷ್ಟು ದೀರ್ಘಕಾಲ relevance ಅನ್ನು ಉಳಿಸಿಕೊಂಡ ಲೇಖಕರು ಕನ್ನಡದಲ್ಲಿ ಇಲ್ಲವೇ ಇಲ್ಲವೆನ್ನುವಷ್ಟು ಕಮ್ಮಿ. ಆ ಹೆಗ್ಗಳಿಕೆಯನ್ನು ಮಾತ್ರ ಅವರಿಂದ ಯಾರೂ ಕಿತ್ತುಕೊಳ್ಳಲಾರರು.

ಬಳ್ಳಾರಿ ಮೂಲದ ನನ್ನ ಗೆಳೆಯನೊಬ್ಬನೊಂದಿಗೆ ಕೂತು ಮಾತಾಡಿದಾಗಲೆಲ್ಲಾ ಬೆಳಗೆರೆಯವರ ವಿಚಾರಗಳು ಸುಮ್ಮನೆ ಬಂದುಹೋಗುತ್ತಿದ್ದವು. ಬೆಳಗೆರೆಯವರ ಹುಟ್ಟೂರೂ ಬಳ್ಳಾರಿಯಲ್ಲವೇ? ಅದಕ್ಕಿಂತಲೂ ಹೆಚ್ಚಾಗಿ ಬೆಳಗೆರೆಯವರು ಹುಟ್ಟುಹಾಕಿದ್ದ ಕೆಲ ವಿಚಿತ್ರ ಕನ್ನಡ ಪದಗಳ ಬಗ್ಗೆಯೂ ನಾವು ಹರಟುತ್ತಾ ನಗೆಯಾಡಿದ್ದುಂಟು.

ಇನ್ನು ರವಿ ಬೆಳಗೆರೆಯವರ ಖಾಸಗಿ ಬದುಕಿನ ಬಗ್ಗೆ ಆಗಾಗ ಕೆಲ ಸುದ್ದಿಗಳು ಬರುವುದೂ ಇರುತ್ತಿತ್ತು. ಬಲು ರೋಚಕವಾಗಿರುತ್ತಿದ್ದ ಈ ಬ್ಲಾಗ್ ಬರಹಗಳಲ್ಲಿ ಸತ್ಯವೆಷ್ಟು, ಕಪೋಲಕಲ್ಪಿತ ಕತೆಗಳೆಷ್ಟು ಎಂಬುದು ಕೊನೆಗೂ ಗೊತ್ತಾಗಲಿಲ್ಲ. ಈ ಕತೆಗಳನ್ನೋ, ವರದಿಗಳನ್ನೋ ಬರೆದವರಿಗೆ ಅದ್ಯಾವ ಬಗೆಯ ಲಾಭವಾಯಿತೋ ಗೊತ್ತಿಲ್ಲ. ಆದರೆ ಇವುಗಳು ಬೆಳಗೆರೆಯವರ ಪಬ್ಲಿಕ್ ಇಮೇಜಿಗೆ ಮತ್ತಷ್ಟು ನಿಗೂಢ ಆಯಾಮವನ್ನು ತಂದಿದ್ದಂತೂ ಹೌದು. ರವಿ ಬೆಳಗೆರೆ ಇಂದಲ್ಲಾ ನಾಳೆ ತನ್ನ ಆತ್ಮವೃತ್ತಾಂತಗಳನ್ನು ಬರೆಯಬಹುದು ಎಂಬ ಕ್ಷೀಣ ನಿರೀಕ್ಷೆಯೊಂದನ್ನು ನನ್ನಲ್ಲಿ ಇತ್ತೀಚಿನವರೆಗೂ ಜೀವಂತವಾಗಿಟ್ಟುಕೊಂಡಿದ್ದೆ. ಅದು ಕೊನೆಗೂ ಆಗಲಿಲ್ಲ. ಒಟ್ಟಿನಲ್ಲಿ ಬೆಳಗೆರೆಯವರನ್ನು ವೈಯಕ್ತಿಕವಾಗಿ ಬಲ್ಲದ, ನನ್ನಂತಹ ಲಕ್ಷಾಂತರ ಅಜ್ಞಾತ ಓದುಗರಿಗೆ ಅವರು mysterious figure ಆಗಿಯೇ ಉಳಿದುಬಿಟ್ಟರು.

ಕೊನೆಯ ‘ಖಾಸ್ ಬಾತ್’:
ಈಗಲೂ ರವಿ ಬೆಳಗೆರೆಯವರ ಬಗ್ಗೆ ನನಗೆ ಥಟ್ಟನೆ ನೆನಪಾಗುವ ಸಂಗತಿಯೆಂದರೆ ಅವರ ಹಾಸ್ಯಪ್ರಜ್ಞೆ. ಈ ಗುಂಗಿನಲ್ಲೇ ಒಂದು ಘಟನೆ ನೆನಪಾಗುತ್ತದೆ. ಕೆಲ ವರ್ಷಗಳ ಹಿಂದೆ ಟಿವಿ-9 ಚಾನೆಲ್ಲಿನ ಲಕ್ಷ್ಮಣ್ ಹೂಗಾರ್ ‘ಚಕ್ರವ್ಯೂಹ’ ಎಂಬ ಎಕ್ಸ್ ಕ್ಲೂಸಿವ್ ಕಾರ್ಯಕ್ರಮವೊಂದನ್ನು ನಡೆಸಿಕೊಡುತ್ತಿದ್ದರು. ಆ ಎಪಿಸೋಡ್ ಬಹುಷಃ ರವಿ ಬೆಳಗೆರೆ ಮತ್ತು ಭೀಮಾತೀರ ಚಿತ್ರತಂಡದ ನಡುವೆ ಹುಟ್ಟಿಕೊಂಡ ವಿವಾದದ ಹಿನ್ನೆಲೆಯಲ್ಲಿ ಬಹುನಿರೀಕ್ಷಿತವಾಗಿತ್ತು ಎಂದು ಮಬ್ಬಾದ ನೆನಪು. ಅಂದು ಹೂಗಾರರ ಚಕ್ರವ್ಯೂಹ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದವರು ರವಿ ಬೆಳಗೆರೆ.
ಸಂದರ್ಶನವು ಕಾರ್ಯಕ್ರಮದ ಎಂದಿನ ಫಾರ್ಮಾಟಿನಂತೆಯೇ ಬಲು ಗರಂ ಆಗಿತ್ತು. ಹೂಗಾರರದ್ದು ಖಡಕ್ ಧಾಟಿಯಾದರೆ, ಬೆಳಗೆರೆಯವರದ್ದು ಖತರ್ನಾಕ್ ಎಂಬಂತಿನ ಶೈಲಿ. ಕರಾವಳಿಯವರು ಹೇಳುವಂತೆ ‘ಒರಿಯರ್ದೊರಿ ಅಸಲ್’! ಆ ಸಂದರ್ಶನದಲ್ಲಿ ಬಂದುಹೋದ ಸನ್ನಿವೇಶವೊಂದು ಹೀಗಿದೆ ನೋಡಿ:
ಲಕ್ಷ್ಮಣ ಹೂಗಾರ್ (ಗಂಭೀರವಾಗಿ ಆರೋಪ ಮಾಡುವ ಶೈಲಿಯಲ್ಲಿ): ರವಿ ಬೆಳಗೆರೆ ಆಗರ್ಭ ಶ್ರೀಮಂತರು ಎಂಬ ಮಾತಿದೆ. ಇದಕ್ಕೇನ್ ಹೇಳ್ತೀರಾ ನೀವು?
ರವಿ ಬೆಳಗೆರೆ (ಸಮರ್ಥಿಸಿಕೊಳ್ಳುವಂತೆ ಕೈಯಾಡಿಸುತ್ತಾ): ಏಯ್… ಆ ಗರ್ಭ, ಈ ಗರ್ಭ ಅಲ್ಲಾರೀ… ಎಲ್ಲಾ ಸ್ವಯಂ ಗರ್ಭ!!!

-ಪ್ರಸಾದ್‌ ಕೆ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x