ಆಪ್ತ ಬೆಳಗೆರೆ: ರವಿ ಶಿವರಾಯಗೊಳ

ರವಿ ಬೆಳಗೆರೆ ದೈತ್ಯ ಬರಹಗಾರ. ಅಕ್ಷರ ಮಾಂತ್ರಿಕ. ಸಹಸ್ರಾರು ಓದುಗರ ಹುಟ್ಟು ಹಾಕಿದ ಪ್ರತಿಭಾವಂತ ಲೇಖಕ. ಮುಂದೆಂದೂ ಮತ್ತೊಬ್ಬ ರವಿ ಬೆಳಗೆರೆಯನ್ನ ಕಾಣಲಾರೆವು. ಪತ್ರಿಕೋದ್ಯಮದಲ್ಲಿ ಬರವಣಿಗೆಯಲ್ಲಿ ಸ್ವಂತ ಪ್ರತಿಭೆ ಮುಂಖಾಂತರವೆ ಹೆಮ್ಮರವಾಗಿ ಬೆಳೆದು ನಿಂತ ಗಟ್ಟಿಗ ರವಿ ಬಾಸ್. ಕೂತು ಬರೆಯುವ; ಗಂಟೆ ಗಂಟೆಗಟ್ಟಲೆ ಓದುವ ಓದಿದ್ದನ್ನು ಇಷ್ಟವಾದದ್ದನ್ನು ತನ್ನದೇ ಓದುಗರೊಂದಿಗೆ ಆತ್ಮೀಯರೊಂದಿಗೆ ಹಂಚಿಕೊಳ್ಳುವ ಮನೋಭಾವದ ವ್ಯಕ್ತಿ. ಮಿತ್ರರನ್ನ ಓದುಗರನ್ನ ಹಿಂಬಾಲಕರ ಸಮ ಸಮಸಂಖ್ಯೆಯಲ್ಲಿ ಶತ್ರುಗಳನ್ನೂ ಹೊಂದಿದ್ದ ರವಿ ಬೆಳಗೆರೆ ಕಡೆಗೂ ಯಾರಿಗೂ ಜಗ್ಗದೆ ಬಗ್ಗದೆ ತನ್ನಿಷ್ಟದಂತೆ ಬದುಕಿದ ಅಕ್ಷರ ಮಾಂತ್ರಿಕ ಅವರು. ಮನುಷ್ಯ ಇನ್ನೊಬ್ಬರಿಗೆ ಡಿಪೆಂಡ್ ಆಗಿ, ಯಾರದೋ ಒತ್ತಾಯಕ್ಕೆ ಮಣಿದು ತನ್ನನ್ನು ತಾನು ಬಿಟ್ಟು ಕೊಡಬಾರದೆಂದು ಬಹುಶಃ ರವಿ ಬೆಳಗೆರೆ ಬದುಕನ್ನು ನೋಡಿದವರಿಗೆ ಅನ್ನಿಸುತ್ತದೆ. ಅದು ನಿಜವೂ ಕೂಡ. ‘‘ನೀವು ಎಲ್ಲರನ್ನೂ ಮೆಚ್ಚಿಸಲಾರಿರಿ ಹಾಗೆ ಮೆಚ್ಚಿಸಲು ನಿಂತರೆ ಮುಖವಾಡ ಧರಿಸಬೇಕು’’ ಹೀಗೆ ಹೇಳುವ ರವಿ ಬೆಳಗೆರೆ ಅವರ ಮಾತು ನೂರಕ್ಕೆ ನೂರರಷ್ಟು ಸತ್ಯ. ಬಹುಶಃ ಹಾಗಂತಲೇ ರವಿ ಬೆಳಗೆರೆಗೆ ಮಿತ್ರರೂ ಶತ್ರುಗಳೂ ಸಮವಾಗಿ ಬೆಳೆದರು. ಆದರೆ ಒಬ್ಬ ವ್ಯಕ್ತಿ ಸತ್ತ ನಂತರವೂ ತೇಜೋವಧೆ ಮಾಡುವ, ಟೀಕಿಸುವ,ಅಲ್ಲಗಳೆಯುವ, ಹೆಸರಾಂತ ವ್ಯಕ್ತಿಯ ನೂರು ಸರಿಗಳಲ್ಲಿ ಒಂದು ತಪ್ಪು ಹುಡುಕುವ, ಅಂತಹ ವ್ಯಕ್ತಿಗಳ ಕಾಲೇಳೆದು ಪ್ರಚಾರ ಗಿಟ್ಟಿಸಿಕೊಳ್ಳುವ ಮನೋಭಾವದ ಜನ ಹಿಂದಿನ ಕಾಲದಲ್ಲೂ ಇದ್ದರು, ರವಿ ಬೆಳಗೆರೆ ಕಾಲದಲ್ಲೂ ಇದ್ದರು, ಈಗ ಪ್ರಸ್ತುತ ವಾಗಿಯೂ ಇದ್ದಾರೆ. ಅವ್ರ ಬಗ್ಗೆ ಯೋಚನೆ ಬಿಡಿ ಅವ್ರು ಕಾಲು ಬಿಟ್ಟು ಸೊಂಟದ ಮೇಲೆಯೂ ಬರಲಾರರು. ಸ್ಟುಪಿಡಿಟಿ ಅನ್ನೋ ರಾಜನ ಆಳುಗಳು ಅವರೆಲ್ಲ. Just forget it.

ರವಿ ಬೆಳಗೆರೆ ಮುಖತಃ ಎಂದೂ ಬೇಟಿಯಾದವರಲ್ಲ. ಅವರ ಜೊತೆಗೆ ಕೂತು ಮಾತಾಡಲಿಕ್ಕೆ ಅವಕಾಶಗಳು ಇರಲಿಲ್ಲ ಅಂತಲ್ಲ. ಯಾವಾಗ ಬೇಕಾದರೂ ಹೋಗಿ ಕೂತು ಮಾತನಾಡಬಹುದಿತ್ತು. ಆದರೆ ನಾನು ರವಿ ಬೆಳಗೆರೆ ಅನ್ನುವ ವ್ಯಕ್ತಿಯನ್ನ ಇಷ್ಟ ಪಟ್ಟವನಲ್ಲ ಅವರ ಬರಹಗಳನ್ನ ಎದೆಗವಚಿಕೊಂಡವನು. U know ನಾನು ಬೆಳಗೆರೆ ಅಭಿಮಾನಿ ಅಲ್ಲ. ಬೆಳಗೆರೆ ಬರವಣಿಗೆಯ ಅಭಿಮಾನಿ. ಓದಿನ ವಿಚಾರದಲ್ಲಿ ಬರವಣಿಗೆ ವಿಚಾರದಲ್ಲಿ ನನಗೆ ರೋಲ್ ಮಾಡೆಲ್ ಅಂದ್ರೆ ರವಿ. He is such a wonderful writer. ಓದುಗರನ್ನು ಹುಟ್ಟಾಕುವುದೆಂದರೆ ಸಮಾನ್ಯ ಮಾತಲ್ಲ. ಅದಕ್ಕಿಂತ ಹೆಚ್ಚಾಗಿ ಅಣ್ಣ,ಅಪ್ಪ,ಚಿಕ್ಕಪ್ಪ, ಅಂತ ಕರೆಸಿಕೊಳ್ಳುವುದು ಇದೆಯಲ್ಲಾ ಅದು ಎಲ್ಲರಿಗೂ ಸಾಧ್ಯವಿಲ್ಲ. ಅಂತಹದೊಂದು ಆಪ್ತ ಒಲವು ‘ಸಮಾಧಾನ’ ಅಂಕಣದ ಮೂಲಕ ಸೃಷ್ಟಿಸಿಕೊಂಡಿದ್ದರು ಬೆಳಗೆರೆ. ನನ್ನ ಸಮಸ್ಯೆಗೆ ಉತ್ತರ ನೀಡಿ ಅಂತ ತಮ್ಮ ಎಷ್ಟೇ ಗೌಪ್ಯವಾದ ವಿಷಯವನ್ನು ಬೆಳಗೆರೆ ಮೇಲೆ ನಂಬಿಕೆ ಇಟ್ಟು ಬರೆಯುವ ಹೆಣ್ಣು ಗಂಡುಗಳಿಗೆ ಅದೆಷ್ಟು ಆಪ್ತ ಅನ್ನಿಸಿರಬೇಕು. ಅಂತಹ ಪತ್ರಗಳಿಗೆ ಲೆಕ್ಕ ಉಂಟೇನು? ಉಹುಂ ಲೆಕ್ಕವಿಲ್ಲದಷ್ಟು ಪ್ರೀತಿಯ ಪತ್ರಗಳು ಬೆಳಗೆರೆಯ ಟೇಬಲ್ ಗೆ ಬಂದು ಬೀಳುತಿದ್ದವು. ನಂಬಿಕೆ ಇಲ್ಲದೆ ಹಾಗೆ ಪತ್ರ ಬರೆಯಲಿಕ್ಕೆ ಸಾಧ್ಯವ? ಸಮಾಧಾನ ಮಾಡುತ್ತಾನೆ ಅನ್ನುವ ನಂಬಿಕೆ ಮಾತ್ರ ಅಂತಹ ಪತ್ರಗಳಿಗೆ ಸಾಕ್ಷಿ ಅಗುತ್ತದೆ. ಆ ಸಾಕ್ಷಿಗೆ ರವಿ ಬೆಳಗೆರೆ ಅನ್ನುವ ದೈತ್ಯಾಕಾರದ ಮನಸ್ಸೇ ಕಾರಣ.

ನಾನು ಸತ್ತವರ ಮುಂದೆ ಕೂತು ಎಂದೂ ಅತ್ತವನಲ್ಲ. ನೆಂಟರಿಷ್ಟರು ತೀರಿಕೊಂಡಾಗಲೂ ಅಷ್ಟೇ ಕಣ್ಣಿರು ಹಾಕಿಲ್ಲ. ಅವರವರ ಋಣ ತೀರಿದ ಮೇಲೆ ಇಲ್ಲಿಯ ಯಾತ್ರೆ ಮುಗಿಸುತ್ತಾರೆ ಅಂದುಕೊಳ್ತೇನೆ. ಸತ್ತವರ ಮುಂದೆ ಅತ್ತರೆ ಮರಳಿ ಬರುವುದಿಲ್ಲ ಎಂಬುದು ನನ್ನ ಸಿದ್ದಾಂತ.ಮರಳಿ ಬರುತ್ತಾರೆ ಅಂತ ಅಳುವವರಿಲ್ಲ. ಹಾಗಂತ ಅಳುವುದು ತಪ್ಪಲ್ಲ ಅವರವರ ಭಾವ, ಪ್ರೀತಿ, ಆತ್ಮೀಯತೆ ಮೇಲೆ ದುಃಖ ವಾಗುತ್ತದೆ. ಆದರೆ ಸತ್ತವರು ಜೀವಂತವಿರುವಾಗ ಅವರ ಅಳಿವಿಗೆ, ಕಷ್ಟಕ್ಕೆ,ದುಃಖಕ್ಕೆ, ಎಷ್ಟು ನೇರವಾಗಿದ್ದೇವೆ ಅನ್ನೋದೇ ಮುಖ್ಯ. ನನಗೆ ತೀರ ಧುಃಖವಾಗಿದ್ದು, ಒಂಟಿತನ ಕಾಡಿದ್ದು, ಹೀಗೆ ಆಗ್ಬಾರ್ದಿತ್ತು ಅನ್ನಿಸಿದ್ದು ಮಾತ್ರ ರವಿ ಬೆಳಗೆರೆ ಸಾವಿನ ಸುದ್ದಿ ಕೇಳಿದಾಗ. ಅದೊಂದು ರಾತ್ರಿ ಸರಿ ರಾತ್ರಿಯವರೆಗೆ ಓದಿ ಅದೆ ರಾತ್ರಿಯಲ್ಲಿ ಒಂದೊಳ್ಳೆಯ ಲೇಖನ ಗೀಚಿ ಮಲಗಿಕೊಂಡಿದ್ದೆ. ಮುಂಜಾನೆ ಏಳಲು ತುಸು ಹೆಚ್ಚೇ ಹೊತ್ತಾಗಿತ್ತು. ಲೇಖನವನ್ನು ಮೊಬೈಲ್ ನಲ್ಲಿ ಬರೆದು ಸ್ವಿಚ್ ಆಫ್ ಆದ ಮೊಬೈಲ್ ಕೂಡ ಮಗ್ಗುಲಲ್ಲಿ ಒಗೆದು ಮಲಗಿದ್ದವನಿಗೆ ಎಚ್ಚರವಾಗಿದ್ದು ಮುಂಜಾನೆ ಒಂಬತ್ತು ಗಂಟೆಗೆ. 13 ನವೆಂಬರ್ 2020ರ ಬೆಳ್ಳಂಬೆಳಗ್ಗೆ ಅಘಾತಕಾರಿ ಸುದ್ದಿ. ಎಲ್ಲಾ ಟಿವಿ ಚಾನೆಲ್ ಗಳಲ್ಲೂ ‘‘ರವಿ ಬೆಳಗೆರೆ ಇನ್ನಿಲ್ಲ ’’ ಎಂಬ ಶೀರ್ಷಿಕೆ ಅಡಿಯಲ್ಲಿ ಸಾಲು ಸಾಲು ಪ್ರೋಗ್ರಾಮ್ ಗಳು. ಏನಾಯ್ತು? ರವಿ ಅಣ್ಣನ ಜೊತೆಗೆ ಮಾತಾಡಿ ಎಷ್ಟು ದಿನವಾಯ್ತು? ಇಪ್ಪತೆ ಅಲ್ಲವಾ! ಕೆವಲ ಇಪ್ಪತ್ತು ದಿನಗಳ ಹಿಂದೆ. ಎಷ್ಟೊಂದು ಆಪ್ತರಂತೆ ಮಾತಾಡಿದ್ದರು ಬೆಳಗೆರೆ. ಬೆಂಗಳೂರು ಬಂದಾಗ ಬಾ ಅಂತ ಎರಡೆರಡು ಬಾರಿ ಹೇಳಿದ್ದರಲ್ಲ! ಈಗೇನಾಯ್ತು? ರವಿ ಸತ್ತರೆ? ನಿಜವಾಗಿಯೂ..! ಕನಸು ಇರಬಹುದಾ? ಮತ್ತೆ ಮತ್ತೆ ನನ್ನನ್ನೇ ನಾನು ಚಿವುಟಿ ನೋಡಿಕೊಂಡು; ಇಲ್ಲ ಇದು ನಿಜ ರವಿ ಇನ್ನಿಲ್ಲ.

ಅಂತಹದೊಂದು ಆಪ್ತ ವ್ಯಕ್ತಿಯನ್ನ ಕಳೆದುಕೊಂಡು ಕಾಡಿದ ನೋವು ಇದೆ ಮೊದಲ ಬಾರಿಯ? ಹೌದು. ವಾರಗಟ್ಟಲೇ ಅದೆ ನೋವು. ಬೆಳಗೆರೆ ಸಾವನ್ನು ಅರಗಿಸಿಕೊಳ್ಳಲು ಆಗುತ್ತಲೇ ಇಲ್ಲ. ಅವರಿನ್ನೂ ಬದುಕಿದ್ದಾರೆ ವಾರಕ್ಕೊಮ್ಮೆ ಹಾಯ್ ಬೆಂಗಳೂರ್ ಪತ್ರಿಕೆಯ ಮೊದಲ ಪುಟದಲ್ಲಿ ಅವರ ಚಂದನೆಯ ಲೇಖನ ಬರುತ್ತದೆ. ಓ ಮನಸ್ಸೆ ಎಂದಿನಂತೆ ರವಿ ಬೆಳಗೆರೆ ಸಾರಥ್ಯದಲ್ಲಿ ಬರುತ್ತಲೇ ಇರುತ್ತದೆ ಅಂತ ಅನ್ನಿಸುತಿತ್ತಾದರೂ. ಬೆಳಗೆರೆ ಇಲ್ಲದೆ ಪತ್ರಿಕೆ ಯಾರಿಗೆ ಬೇಕು ಅನ್ನಿಸಿದ್ದು ಹೌದು.‘ಅವರು ಇನ್ನಿಲ್ಲ ಕಣೋʼ ಅನ್ನೋ ಮಾತನ್ನು ಪದೆ ಪದೆ ಮಾಧ್ಯಮಗಳು ಮನದಟ್ಟು ಮಾಡುತ್ತಲೇ ಇದ್ದವು. ಸತ್ಯ ಎಷ್ಟೇ ಕಹಿಯಾಗಿದ್ದರೂ ಅದನ್ನು ಸ್ವೀಕರಿಸಲೇಬೇಕು ಅಲ್ವಾ ನಾನು ಸ್ವೀಕರಿಸಿದೆ. ಆದರೆ ಸ್ವೀಕರಿಸಿದ ಪರಿ ಮಾತ್ರ ಡಿಪರೆಂಟ್. ರವಿ ಬೆಳಗೆರೆ ಬದುಕಿದ್ದಾರೆ ಅವರ ಬರೆದಿಟ್ಟ ಪುಸ್ತಕಗಳ ರೂಪದಲ್ಲಿ. ದೇಹ ಬಿಟ್ಟು ಆತ್ಮ ಹೋಗಿರಬಹುದು. ಆದರೆ ಅವರು ಬರೆದ ಕಾದಂಬರಿಗಳು ಆತ್ಮ ಕಥನ, ಕಥಾಸಂಕಲನ ಇವೆಲ್ಲದರಲ್ಲಿ ರವಿ ಬೆಳಗೆರೆ ಇದ್ದಾರೆ ಅಂತ ನನಗೆ ನಾನೇ ಹೇಳಿಕೊಂಡೆ . ಬಹುಶಃ ನನ್ನ ಓದನ್ನು ಮತ್ತಷ್ಟು ಪಾಸಿಟಿವ್ ಆಗಿ ತೆಗೆದುಕೊಂಡದ್ದು ಅವರು ಹೋದಮೇಲೆ. ದಿನಕ್ಕೆ ಅರವತ್ತು ಪುಟ ಓದುತಿದ್ದವನು ನೂರು ಪುಟ ಓದಲು ಶುರುಮಾಡಿದೆ. ಕೆಲವೊಮ್ಮೆ ನೂರಇಪ್ಪತ್ತು,ನೂರಾ ಐವತ್ತು ಓದಿದ್ದೇನೆ ಈಗಲೂ ಓದುತ್ತೇನೆ. ನಾನು ರವಿ ಬೆಳಗೆರೆ ಅವರ ಆದರ್ಶ ಪಾಲಿಸಿದ್ದು ಓದಿನ ವಿಚಾರದಲ್ಲಿ. ಬರವಣಿಗೆ ವಿಷಯದಲ್ಲಿ ರವಿ ಬೆಳಗೆರೆ ಇಷ್ಟವಾದಷ್ಟು ಮತ್ಯಾರೂ ಇಷ್ಟವಾಗಿಲ್ಲ. ನನ್ನಲೊಬ್ಬ ಓದುಗನನ್ನ ಬರಹಗಾರನನ್ನ ಹುಟ್ಟು ಹಾಕಿದ್ದೆ ಸದಾ ಚೈತನ್ಯ ತುಂಬುವ ಬೆಳಗೆರೆ.

ಐ ಲವ್ ಬೆಳಗೆರೆ ಬರಹ! ಮಿಸ್ ಯೂ ರವಿ ಅಣ್ಣಾ.

-ರವಿ ಶಿವರಾಯಗೊಳ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x