ಬೆಳಕ ಕನಸ ಬೆನ್ನೇರಿ: ಪ್ರಶಸ್ತಿ ಪಿ.

ಬೀದಿಗೆಲ್ಲಾ ಬೆಳಕೀಯುತ್ತಿದ್ದ ಪಾದರಸ ದೀಪದ ಅಂಚು ಕಪ್ಪುಗಟ್ಟಿತ್ತು. ಕಣ್ಣುರಿಸೋ ಪ್ರಖರ ಬೆಳಕ ಲೆಕ್ಕಿಸದೆ ಅತ್ತಲೇ ದಿಟ್ಟಿಸುವವರಿಗೆ ಆ ಕಪ್ಪೊಂದು ಸಾವರಾಶಿ ಅಂತ ಹೊಳೆಯುತ್ತಿತ್ತು. ಒಳಹೊಕ್ಕಲು ಜಾಗವೇ ಇಲ್ಲವೆಂಬಂತೆ ಭಾಸವಾಗುತ್ತಿದ್ದ ಮರ್ಕ್ಯುರಿ ದೀಪದ ಶಾಖವನ್ನೂ ಲೆಕ್ಕಿಸದೇ ಆ ಹುಳುಗಳು ಅದೇಗೆ ಒಳಹೊಕ್ಕವೋ, ಬೆಳಕ ಜೊತೆಗೇ ಇದ್ದ ಬಿಸಿಗೆ ಸುಟ್ಟು ಸತ್ತವೋ ಮೊದಮೊದಲ ನೋಡುಗನಿಗೆ ಸದಾ ಅಚ್ಚರಿಹುಟ್ಟಿಸುವಂತಿತ್ತು. ಬೆಳಕಿಗೆ ಕಾರಣವ ಹೊತ್ತು ನಿಂತ ಉದ್ದನೆ ಕಂಬಕ್ಕೆ ಕಾಡುತ್ತಿರೋ ಏಕತಾನತೆ, ಎಲ್ಲಾ ಮಲಗಿರುವಾಗ ಎದ್ದಿದ್ದು ಜಗಕೆ ಬೆಳಗ ತೋರೂ ನಿರ್ಲ್ಯಕ್ಷ್ಯಕ್ಕೊಳಗಾಗುತ್ತಿರೋ ಬೇಸರದ ದೀಪ,ಆ ದೀಪದ ಬೆಳಕಿನೆಡೆಗೆ ಆಕರ್ಷಿತವಾಗೋ ಹುಳ ತನ್ನ ರೆಕ್ಕೆಯನ್ನೇ ಸುಟ್ಟುಕೊಂಡು ಸಾಯೋ ಪರಿ ಸದಾ ಕುತೂಹಲಕಾರಿಯೇ !

ಎತ್ತರವಿದ್ದವರಿಗೆ ಬೆಲೆ ಜಗದಲ್ಲಿ ಎಂದ್ಯಾರೋ ಅಂದಿದ್ದರಿವನಿಗೆ ಬಾಲ್ಯದಲ್ಲಿ. ಹಾಗಾಗಿ ತಾನೆತ್ತರ ಬೆಳೆಯಬೇಕೆಂಬುದೇ ಜೀವನದ ಗುರಿಯಾಗಿಬಿಟ್ಟಿತ್ತಿವನಿಗೆ. ಎತ್ತರೆತ್ತರ ಬೆಳಯಬೇಕು ಅಂತ. ಎತ್ತರೆತ್ತರ ಬೆಳೆದು ಏನಾಗಬೇಕು ಅಂದಾಗ ಎದುರಿಗೆ ಗೋಚರಿಸಿದ್ದು ಕಣ್ಣು ಹಾಯಿಸಿದಷ್ಟೂ ಮುಗಿಯದಷ್ಟುದ್ದದ ಎರಕಗಳು. ಅದರಲ್ಲಿ ಉದ್ದುದ್ದದ ಕಂಬಗಳು ತಯಾರಾಗುತ್ತವೆ ಅಂತರಿತವನಿಗೆ ತಾನೊಂದು ಉದ್ದನೆ ಕಂಬವಾಗಬೇಕೆಂಬ ಜೀವನದ ಗುರಿ ಗೋಚರಿಸಿತ್ತು. ಸಿಮೆಂಟೆಂಬ ಪುಡಿಯ ಮೂಟೆ ಮರಳು, ಕಲ್ಲ ಜೊತೆ ಸೇರಿ ಕಂಬವಾಗೋ ಕನಸ ಬೆನ್ನೇರಿ ಎರಕದ ಒಳಹೊಕ್ಕೋ ಹೊತ್ತಿಗೆ ಕಳೆದ ಕಾಲವನ್ನು ಕ್ಷಣವೆನ್ನಬೇಕೋ, ದಿನವೆನ್ನಬೇಕೋ ಎನ್ನೋ ಅರಿವಿರಲಿಲ್ಲವವರಿಗೆ. ನೀನೊಂದು ಮನೆಯ ಗೋಡೆಯೇ ಆಗಬೇಕು, ಕಾರ್ಖಾನೆಯ ಹಾಸಾಗಬೇಕು, ಮಕ್ಕಳ ಜಾರುಬಂಡಿಯಾಗಬೇಕು ಅಂತ ತಮ್ಮ ಕನಸ ತನ್ನ ಮೇಲೆ ಹೇರದೇ ಏನಾದರೂ ಆಗಪ್ಪಾ ಮೂಟೆಯೇ, ನಿನ್ನಾಯ್ಕೆ ನಿನ್ನದು ಎಂದು ಬಿಟ್ಟ ನಿರ್ಮಾತೃಗಳಿಗೆ ತಾನೆಂದೂ ಕೃತಜ್ನನಾಗಿರಬೇಕೆಂಬ ಭಾವ ಬಲಿಯುವಷ್ಟರಲ್ಲೇ ಕಾಲವುರುಳಿ ಆತನೊಂದು ಕಂಬವಾಗಿದ್ದ. ಗಟ್ಟಿಯಾಗಲು ಎದುರಿಸಿದ ಬಿಸಿಲ ಏಟುಗಳಿಗೂ , ಯಾವ ಹೊದಿಕೆಯಿಲ್ಲದವನ ನಡುಗಿಸಿದ ರಾತ್ರಿಯಿಬ್ಬನಿಗಳಿಗೂ ಲೆಕ್ಕವಿಲ್ಲ. ಕಂಬವೇನೋ ಆಗಾಯ್ತು ಮುಂದೆ ? ಕಂಬವಾಗುವವರ ನೋಡಿದ್ದನೇ ಹೊರತು ಅವರೇನು ಮಾಡುತ್ತಾರೆಂಬುದರ ಅರಿವಿರಲಿಲ್ಲವಲ್ಲ ! ರಾಶಿ ರಾಶಿಯಾಗಿರಿಸಿದ್ದ ತನ್ನಂತವರ ಜೊತೆ ಸೇರಿ ಅವರ ಸುಖ ದುಃಖಗಳ ಕೇಳುತ್ತಿದ್ದವನಿಗೆ ಅವರಲ್ಲಿ ಕೆಲವನ್ನು ದಿನಾ ಬರೋ ಕೆಲವರು ಕರೆದೊಯ್ಯುತ್ತಿದ್ದ ದೃಶ್ಯ ಕಂಡು ತನ್ನ ಬಾರಿಯಾವಾಗಲೆಂಬ ಕುತೂಹಲ ಕಾಡುತ್ತಿತ್ತು.   ಅಂತೂ ಬಂತೊಂದು ದಿನ. ವಿದ್ಯುತ್ ಕಂಬವಾಗಿ ಬೆಳಕಿಗೆ ಆಸರೆ ಕೊಟ್ಟವನಾದ ಖುಷಿಯಲ್ಲಿ ಮೆರೆದಿದ್ದೋ ಮೆರೆದಿದ್ದು. ಆದ್ರೆ ಕೆಲ ದಿನಗಳಲ್ಲಿ ಜೊತೆಗ್ಯಾರೂ ಇಲ್ಲದ ಬೇಸರ ಕಾಡತೊಡಗಿತ್ತು.  ಗೋಡೆಯೆತ್ತರ ಸಣ್ಣದಾದರೂ ಮಾತನಾಡಲು ಮತ್ತೊಂದು ಗೋಡೆ, ಬಿಸಿಲ ಝಳದಿಂದ, ಚಳಿಯ ಪ್ರಕೋಪದಿಂದ ರಕ್ಷಿಸೋ ಸೂರೊಂದು ಸಿಕ್ಕೀತದಕ್ಕೆ.  ನನಗೇನಿದೆಯಿಲ್ಲಿ ? ಮೈಯೆಲ್ಲಾ ಧೂಳಾಗಿಸಿಕೊಂಡು ಬರುವ ಬೀದಿ ದನಗಳಿಗೆ ಮೈಯುಜ್ಜೋ ಸಾಧನ ನಾನು ! ಕಂಡರೆ ಕಾಲೆತ್ತೋ ನಾಯಿಗಳಿಂದ, ರಸ್ತೆಯಿದ್ದರೂ ಕಣ್ಣಿಲ್ಲದಂತೆ ಬಂದು ಗುದ್ದಿ ನನ್ನ ಮೂಳೆಗಳ ಮುರಿವ ಗಾಡಿಗಳಿಂದ ರಕ್ಷಣೆಯೆಲ್ಲೆನಗೆ ? ! ಬೆಳೆಯಲೇ ಬಾರದಿತ್ತೇ ನಾನೆತ್ತರಕ್ಕೆ ? ತಣ್ಣನೆ ಸೂರುಗಳ ಕೆಳಗೆ, ಬೆಚ್ಚನೆ ರಾತ್ರಿಗಳ ಕಳೆವ ಉಳಿದವರಲ್ಲಿ ನಾನೂ ಒಬ್ಬನಾಗಿಬಿಡಬೇಕಿತ್ತೇ ಎಂಬ ಭಾವ ಕಾಡಿದ ದಿನಗಳಿಗೆ ಲೆಕ್ಕವಿಲ್ಲ.  

ದೀಪಗಳ ಶಾಲೆಯಲ್ಲಿ ಪ್ರಕಾಶಮಾನವಾದ ಪಾದರಸದ ದೀಪಕ್ಕೆ ಸದಾ ಮನ್ನಣೆ ದೊರಕುತ್ತಿದ್ದುದ ಕಂಡು ಜೊತೆಗಿದ್ದ ಟ್ಯೂಬುಲೈಟು, ಬೆಡ್ ರೂಂ ಲ್ಯಾಂಪು, ಜೀರೋ ಕ್ಯಾಂಡಲ್ ಲೈಟು, ಎಲ್.ಇ,ಡಿ ಬಲ್ಬುಗಳು ಕರುಬುತ್ತಿದ್ದವು ! ಓದೋ ದಿನಗಳು ಮುಗಿದು ಕೆಲಸ ಹುಡುಕಿದ ಸಮಯ ಎಲ್ಲರಿಗಿಂತ ಹೆಚ್ಚು ಉಪಯೋಗವಾಗೋ ಗುಣದ ತನಗೆ ರಾತ್ರಿ ಪಾಳಿ ಸಿಕ್ಕಿದ್ದರ ಬಗ್ಗೆ ಸಖತ್ ಖುಷಿಯಾಗಿತ್ತು ಮಿಸ್ಟರ್ ಮರ್ಕ್ಯುರಿ ಲ್ಯಾಂಪಿಗೆ. ಹೆಚ್ಚಿನ ಸಂಬಳ, ಕೆಲಸವೂ ಹೆಚ್ಚಿರುವುದಿಲ್ಲ, ಯಾರಿಗೂ ಇಲ್ಲದಂತಹ ವಿಶೇಷ ಕೆಲಸಗಳೆಂಬ ಮೇಲಿನಮನ ಆಮಿಷದ ಮಾತುಗಳು ಶುರುವಿನಲ್ಲಿ ಹೌದೆಂದೇ ಅನ್ನಿಸಿತ್ತು. ಆದ್ರೆ ಕೆಲ ಸಮಯದಲ್ಲೇ ಜಗವೆಲ್ಲಾ ಮಲಗಿರಲು ಎದ್ದಿರುವ ಕೆಲಸ ಬೇಸರ ತರಿಸಿತ್ತು. ಆ ಪಕ್ಕದ ಮನೆಯ ಬೆಡ್ ಲ್ಯಾಂಪಿನ ಅದೃಷ್ಟ ನೋಡು, ದಿನಕ್ಕೆ ಅರ್ಧ ಘಂಟೆ ಬೆಳಗಿದ್ರೆ ಹೆಚ್ಚು, ಆ ಬಚ್ಚಲ ಲೈಟು ನೋಡು, ಕೊನೇ ಪಕ್ಷ ಟ್ಯೂಬ್ ಲೈಟು.. ಘಂಟೆಗಟ್ಟಲೇ ಬೆಳಗಿದರೂ ಅವನಿಗೊಂದು ನಿದ್ರೆಯೆನ್ನುವುದಿದೆ ರಾತ್ರಿಯ ಹೊತ್ತಲ್ಲಿ. ಆದ್ರೆ ತನಗೆ ? ಸೂರ್ಯ ಕಣ್ಣು ಮುಚ್ಚುವ ಹೊತ್ತಿಗೆ ಹೊತ್ತಿಕೊಳ್ಳುವ ನನ್ನ ಬೆಳಗಾದರೂ ಆರಿಸುವರಿಲ್ಲ ಕೆಲ ಬಾರಿ, ದಿನಗಟ್ಟಲೇ ನಿದ್ರೆಯಿಲ್ಲದೇ ಉರಿಯುತ್ತಲೇ ಇರಬೇಕಾದ ಕರ್ಮವೇಕೆನಗೆ ? ಬೆಳಗಾದರೆ ಆರಿಸೋ ಪುಣ್ಯಾತ್ಮ ನನ್ನ ಮೇಲೆ ಕನಿಕರ ತೋರಿ ಇನ್ನಾದರೂ ಮಲಗೆನ್ನ ಕಂದ ಎಂದು ಹರಸಿದರೂ ಹಗಲ ಗಲಾಟೆಯ ಜಂಜಾಟದಲ್ಲಿ ನಿದ್ದೆಯೆಲ್ಲಿ ಬರಬೇಕು ? ಇನ್ನು ಎಲ್ಲಾ ಮಲಗಿದ ರಾತ್ರಿಯಲ್ಲೆದ್ದು ಕಾದಕ್ಕೆ ತನಗೆ ಸಿಗೋ ಮನ್ನಣೆಯಾದರೂ ಏನು ? ಏನಾದರೂ ಕೇಳಿದರೆ ಅದು ನಿನ್ನ ಕೆಲಸವಲ್ಲವೇ ? ಅದಕ್ಯಾಕೆ ಹೆಚ್ಚಿನ ಮನ್ನಣೆಯೆಂಬ ಉತ್ತರ. ಈ ಕಂಬ ಬಿಟ್ಟು ಬೇರೆಲ್ಲಾದರೂ ಹೋಗೋ ಬಯಕೆ ಮೂಡಿದರೂ ಅದರ ಪುರಸ್ಕರಿಸುವವರ್ಯಾರು ? ಬೆಳಗಲಾರೆ ಎಂದು ಮುಷ್ಕರ ಹೂಡಿ ಕೂತರೆ ಒಂದೇ ದಿನ. ಮಾರನೇ ದಿನ ನನ್ನ ಕಿತ್ತು ಇನ್ಯಾರನ್ನೋ ತಂದಿರುತ್ತಾರೆ ನನ್ನ ಜಾಗದಲ್ಲಿ. ಅವನ ತಪ್ಪೇನಿಲ್ಲವದರಲ್ಲಿ, ಅವನ ಹಸಿವ ಹೊಟ್ಟೆಯ ಹೊರೆಯಲವ ರಾತ್ರಿ ಪಾಳಿಗೊಪ್ಪಿರುತ್ತಾನೆ ಅಷ್ಟೆ.   ಇನ್ನು ಹುಟ್ಟಿದೂರ ಬಿಟ್ಟು ಎಲ್ಲೋ ಬಂದು ಬೆಳಕ ಹರಿಸೋ ಕೆಲಸವಹಿಸುತ್ತಿದ್ದರೂ ಅದ ಸಹಿಸದೇ ಕಲ್ಲೆಸೆಯುವ ಕಿಡಿಗೇಡಿಗಳು ಬೇರೆ. ಇವಲ್ಲೆದರ ನಡುವೆ ಬದುಕ ಕಟ್ಟಿಕೊಳ್ಳೋ ಅನಿವಾರ್ಯತೆ ಬರೀ ಬೆಳಕ ಕಂಡು ಕರುಬುವವರಿಗೆಲ್ಲಿ ತಿಳಿಯಬೇಕು  ? ! 

ಕಂಬ, ದೀಪಗಳ ಅಂತರಾಳಗಳೆಲ್ಲಿ ತಿಳಿಯಬೇಕು ಬೆಳಕಿಂದ ಸೆಳೆಯಲ್ಪಡೋ ಹುಳಕ್ಕೆ ? ರಾತ್ರೆಯಾದರೆ ಸಾಕು ಝಗಮಗ ಬೆಳಗೋ ಬೆಳಕೆಂದರೆ ಅದೇನೋ ಸೆಳೆತ. ತನ್ನ ಮನೆ, ತನ್ನವರ ಬಿಟ್ಟು ಆ ಝಗಮಗದತ್ತ ಸೆಳೆಯಲ್ಪಟ್ಟವಳಿಗೆ ತನ್ನ ಗಮ್ಯದ ಅರಿವಿಲ್ಲ. ಕತ್ತಲ ಕೂಪದಿಂದ ಬೇಸತ್ತಿರೋ ಅವಳಿಗೆ ಬೆಳಕೆಂದರೆ ಒಳ್ಳೆಯದೇ ಇರಬೇಕೆಂಬ ಭಾವ. ಕಾಲ ದೇಶಗಳಾಚೆ ಸೆಳೆವ ಬೆಳಕ ಮಾಯೆಯೇ ಹಾಗೆ.ಹುಟ್ಟಿ ಬೆಳೆದ ಕತ್ತಲ ಕೊನೆಗೂ ತೊರೆದು ಬೆಳಕಲ್ಲೊಂದು ಬದುಕ ಕಟ್ಟೋ ಕನಸೇ ಬದುಕ ರೆಕ್ಕೆಗಳ ಸುಟ್ಟುಬಿಡುವುದೆಂದು ಯಾರಾದರೂ ಅವಳಿಗೆ ಹೇಳಿದ್ದರೂ ನಂಬುವ ಸ್ಥಿತಿಯಲ್ಲಿರಲಿಲ್ಲ ಅವಳು. ಮೈ ನಡುಗಿಸೋ ಚಳಿಯಲ್ಲಿ ಬೆಚ್ಚನೆ ಭಾವ ಕೊಡುತ್ತಿದ್ದ ಬೆಳಕಿನಲ್ಲಿ ಸುಖಿಸುತ್ತಾ ಯಾವಾಗ ಆ ಬೆಚ್ಚಗಿನ ಭಾವ ಸುಡತೊಡಗಿತೋ, ತನ್ನ ರೆಕ್ಕೆಗಳಿಗೂ ಬೆಂಕಿ ಹಚ್ಚಿತೋ ಅವಳಿಗರಿವಾಗಲಿಲ್ಲ. ದೀಪದ ರಂಧ್ರಗಳ ಸಂದಿಯಲ್ಲಿ ಒಳಹೊಕ್ಕ ಅವಳಿಗೆ ಅರಿವಾಗೋ ಹೊತ್ತಲ್ಲಿ ತುಂಬಾ ಹೊತ್ತಾಗಿತ್ತು. ಕೆಳಗೆ ಕಂಡ ಕಪ್ಪನೇ ರಾಶಿ ತನ್ನಂತೇ ಬಂದು ಸತ್ತವರ ದೇಹವೆಂಬ ಕರಾಳತೆಯರಿವು ಕೊಂಚ ಮುಂಚೆಯೇ ಆಗಿದ್ದರೆ ಒಳ್ಳೆಯದಿತ್ತು. ರೆಕ್ಕೆ ಸುಟ್ಟ ಅವಳಲ್ಲಿ ಒಳಬಂದ ದೀಪದ ಸಂದಿಯೆಲ್ಲಿದೆ ಎಂದು ಹುಡುಕಿ ಅದರಿಂದ ಹೊರಬರುವಷ್ಟು ಸತ್ವವಾಗಲಿ, ಸಮಯವಾಗಲಿ ಉಳಿದಿರಲಿಲ್ಲ. ಇದ್ದಷ್ಟು ಸತ್ವವನ್ನು ಒಗ್ಗೂಡಿಸಿ ಎಷ್ಟೇ ಗುದ್ದಿದರೂ ಒಡೆಯದ ಗಾಜಿನ ಗೋಡೆ ಜೀವವನ್ನೇ ಕಸಿವ ಹುನ್ನಾರದಲ್ಲಿತ್ತು. ತನ್ನ ನಂತರ ಬಂದ ಹಲವು ಹುಳುಗಳೂ ಪ್ರಯತ್ನಿಸಿದ್ದರೆ ಆ ಗಾಜಿನ ಗೋಡೆಯೊಡೆಯಬಹುದಿತ್ತೇನೋ. ಇಲ್ಲವಾದರೆ ಹೊರಗಾದರೂ ಹೋಗಬಹುದಿತ್ತೇನೋ. ಆದ್ರೆ ಪ್ರಯತ್ನಿಸಬೇಕಲ್ಲ. ನಾನೇನೋ ಸಾಯಹತ್ತಿದ್ದೇನೆ ನೀವಾದರೂ ಹೊರಹೋಗಿ ಎಂಬ ಕೂಗು ಮೈಮರೆತಿದ್ದ ಅವರಿಗೆ ಕೇಳಿಸದೇ ಹೋಯಿತೇ ? ಬರಬೇಡಿರಿಲ್ಲಿಗೆ ಎಂದು ಒಳಬರಲು ಪ್ರಯತ್ನಿಸುತ್ತಿದ್ದವರಿಗೆ ಕೂಗಿ ಕೂಗಿ ಹೇಳುತ್ತಿದ್ದ ನನ್ನ ಮಾತುಗಳು ಗಾಜಿನ ಗೋಡೆಯ ಆಚೆಗಿದ್ದ ನನ್ನವರಿಗೆ ತಲುಪದೇ ಹೋಯಿತೇ ? ಕಪ್ಪನೇ ರಾಶಿಯಲ್ಲಿ ಮತ್ತೊಂದು ಚುಕ್ಕಿಯಾಗಹೊರಟಿರೋ ನನಗೆಲ್ಲಿ ತಿಳಿದೀತದು. ಬೆಳಕನರಸಿ ಎಲ್ಲರ ತೊರೆದು ಬಂದ ನನ್ನವಸಾನ ಕಪ್ಪಾಗುವುದರಲ್ಲೇ ಎಂಬ ಪ್ರಶ್ನೆಗಳಿಗೆ ಉತ್ತರ ದೊರೆಯಲು ಹೆಚ್ಚಿನ ಕ್ಷಣಗಳು ಬೇಕಾಗಿರಲಿಲ್ಲ..  

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x