ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ


೧. ಎರಡು ಮೊಲಗಳ ಬೆನ್ನಟ್ಟಿ ಹೋಗುವುದು. 
ಕದನ ಕಲೆಗಳ ವಿದ್ಯಾರ್ಥಿಯೊಬ್ಬ ತನ್ನ ಅಧ್ಯಾಪಕನನ್ನು ಸಮೀಪಿಸಿ ಕೇಳಿದ: “ಕದನ ಕಲೆಗಳ ಕುರಿತಾದ ನನ್ನ ಜ್ಞಾನವನ್ನು ಇನ್ನೂ ಉತ್ತಮಗೊಳಿಸಿಕೊಳ್ಳು ಬಯಕೆ ನನ್ನದು. ನಿಮ್ಮಿಂದ ಕಲಿಯುವುದರ ಜೊತೆಯಲ್ಲಿ ಇನ್ನೊಂದು ಶೈಲಿಯನ್ನು ಇನ್ನೊಬ್ಬ ಅಧ್ಯಾಪಕರಿಂದ ಕಲಿಯಬೇಕೆಂದಿದ್ದೇನೆ. ಈ ನನ್ನ ಆಲೋಚನೆಯ ಕುರಿತು ನಿಮ್ಮ ಅನಿಸಿಕೆ ಏನು?”
ಗುರುಗಳು ಉತ್ತರಿಸಿದರು: “ ಎರಡು ಮೊಲಗಳ ಬೆನ್ನಟ್ಟಿ ಹೋಗುವ ಬೇಟೆಗಾರ ಯಾವುದೊಂದನ್ನೂ ಹಿಡಿಯುವುದಿಲ್ಲ.”

*****

೨. ಏಕಾಗ್ರತೆ
ಬಿಲ್ಲುಗಾರಿಕೆಯ ಅನೇಕ ಸ್ಪರ್ಧೆಗಳಲ್ಲಿ ಗೆದ್ದು ಸರ್ವವಿಜೇತನಾಗಿದ್ದ ಯುವ ಬಿಲ್ಗಾರನೊಬ್ಬ ಬಡಾಯಿ ಕೊಚ್ಚಿಕೊಳ್ಳುವುದರಲ್ಲಿಯೂ ತುಸು ಮುಂದೆಯೇ ಇದ್ದ. ಒಮ್ಮೆ ಆತ ತನ್ನೊಂದಿಗೆ ಸ್ಪರ್ಧಿಸುವಂತೆ ಕುಶಲಿಯಾದ ಬಿಲ್ಲುಗಾರ ಎಂಬ ಖ್ಯಾತಿಪಾತ್ರನಾಗಿದ್ದ ಒಬ್ಬ ವೃದ್ಧ ಝೆನ್‌ ಗುರುವಿಗೆ ಸವಾಲು ಹಾಕಿದ. ಮೊದಲನೇ ಪ್ರಯತ್ನದಲ್ಲಿಯೇ ದೂರದಲ್ಲಿದ್ದ ಗುರಿಗಣ್ಣಿಗೆ (Bull’s eye) ಸರಿಯಾಗಿ ತಾಗುವಂತೆ ಒಂದು ಬಾಣ ಹೊಡೆದು ತದನಂತರ ಅದನ್ನು ಇನ್ನೊಂದು ಬಾಣದಿಂದ ಸೀಳುವುದರ ಮುಖೇನ ತನ್ನ ತಾಂತ್ರಿಕ ನಿಪುಣತೆಯನ್ನು ಪ್ರದರ್ಶಿಸಿದ. ಆ ನಂತರ ವೃದ್ಧನಿಗೆ ಹೇಳಿದ: “ನಾನು ಪ್ರದರ್ಶಿಸಿದ್ದಕ್ಕೆ ಸಮನಾದದ್ದನ್ನು ಪ್ರದರ್ಶಿಸಲು ಸಾಧ್ಯವೇ, ನೋಡಿ.” ಒಂದಿನಿತೂ ಕ್ಷುಬ್ದನಾಗದೆ ಆತ ತನ್ನನ್ನು ಹಿಂಬಾಲಿಸುವಂತೆ ಯುವಕನಿಗೆ ಸನ್ನೆ ಮಾಡಿ ಸೂಚಿಸಿ ಅಲ್ಲಿದ್ದ ಬೆಟ್ಟವನ್ನು ಹತ್ತಲಾರಂಭಿಸಿದ. 
ವೃದ್ಧ ಗುರುವಿನ ಉದ್ದೇಶ ತಿಳಿಯುವ ಕುತೂಹಲದಿಂದ ಯುವಕ ಅವನನ್ನು ಹಿಂಬಾಲಿಸಿದ. ಹೆಚ್ಚು ಕಮ್ಮಿ ಬೆಟ್ಟದ ತುದಿಯಲ್ಲಿ ಇದ್ದ ಆಳವಾದ ಕಂದರವನ್ನು ಅವರು ತಲುಪಿದರು. ಕಂದರದ ಎರಡು ಅಂಚುಗಳನ್ನು ಜೋಡಿಸಿತ್ತು ಒಂದು ಅಲುಗಾಡುತ್ತಿದ್ದ ಅರೆಂಬರೆ ಹಾಳಾಗಿದ್ದ ಮರದ ದಿಮ್ಮಿ. ಒಂದಿನಿತೂ ಅಳುಕಿಲ್ಲದೆ ಅಸ್ಥಿರವೂ ಅಪಾಯಕಾರಿಯೂ ಆಗಿದ್ದ ಆ ದಿಮ್ಮಿಯ ಮಧ್ಯ ಭಾಗಕ್ಕೆ ಹೋಗಿ ನಿಂತು ಬಲು ದೂರದಲ್ಲಿದ್ದ ಮರವೊಂದನ್ನು ಲಕ್ಷ್ಯವಾಗಿರಿಸಿಕೊಂಡು ಮೊದಲನೇ ಪ್ರಯತ್ನದಲ್ಲಿಯೇ ಬಾಣ ಬಿಡುವುದರಲ್ಲಿ ಯಶಸ್ವಿಯಾದನು. “ಈಗ ನಿನ್ನ ಸರದಿ” ಎಂಬುದಾಗಿ ಹೇಳುತ್ತಾ ಆ ವೃದ್ಧ ಗುರು ಸರಕ್ಷಿತ ತಾಣಕ್ಕೆ ಹಿಂದಿರುಗಿದ. ಭಯಗ್ರಸ್ಥನಾದ ಯುವಕ ಬಾಣ ಬಿಡುವುದು ಅಂತಿರಲಿ, ಪ್ರಾಣಭಯದಿಂದ ದಿಮ್ಮಿಯ ಮೇಲೆ ಹೆಜ್ಜೆ ಇಡಲೇ ಇಲ್ಲ.
ಅವನ ಇಕ್ಕಟ್ಟಿನ ಮನಃಸ್ಥಿತಿಯನ್ನು ಊಹಿಸಿದ ಗುರು ಇಂತೆಂದ: “ಬಿಲ್ಗಾರಿಕೆಯಲ್ಲಿ ನಿನಗೆ ಕುಶಲತೆ ಇದೆಯಾದರೂ ಬಾಣ ಬಿಡಲು ತೀರ್ಮಾನಿಸುವ ಮನಸ್ಸಿನ ಮೇಲೆ ನಿನಗೆ ಹಿಡಿತವಿಲ್ಲ.”

*****

೩. ಕುತೂಹಲ
ಒಂದಾನೊಂದು ಕಾಲದಲ್ಲಿ ಬಲು ಎತ್ತರವೂ ಅಪಾಯಕಾರಿಯೂ ಆಗಿದ್ದ ಪ್ರಪಾತದ ಸಮೀಪದಲ್ಲಿ ವೃದ್ಧನೊಬ್ಬ ವಾಸಿಸುತ್ತಿದ್ದ. ಪ್ರತೀ ದಿನ ಬೆಳಗ್ಗೆ ಆತ ಪ್ರಪಾತದ ಅಂಚಿನಲ್ಲಿ ಕುಳಿತು ಸುತ್ತಲಿದ್ದ ಪರ್ವತಗಳನ್ನೂ ಕಾಡನ್ನೂ ವೀಕ್ಷಿಸುತ್ತಿದ್ದ, ತದನಂತರ ಧ್ಯಾನ ಮಾಡುತ್ತಿದ್ದ. ಒಂದು ದಿನ ಅವನು ಎಂದಿನಂತೆ ಧ್ಯಾನ ಮಾಡಲೋಸುಗ ಕುಳಿತಾಗ ಪ್ರಪಾತದ ಬುಡದಲ್ಲಿ ಹೊಳೆಯುತ್ತಿರುವ ಏನೋ ಒಂದು ವಸ್ತುವನ್ನು ಗಮನಿಸಿದ. ಅದು ಬಲು ಆಳದಲ್ಲಿದ್ದರೂ ವೃದ್ಧನ ತೀಕ್ಷಣವಾದ ಕಣ್ಣುಗಳು ಅದೇನೆಂಬುದನ್ನು ಬಲು ಕಷ್ಟದಿಂದ ಗುರುತಿಸಿದವು. ಚಿನ್ನದ ರೇಕುಗಳಿಂದ ಅಲಂಕರಿಸಿದ್ದ ಕಪ್ಪು ಬಣ್ಣದ ದೊಡ್ಡ ಪೆಟಾರಿಯಂತೆ ಗೋಚರಿಸುತ್ತಿದ್ದ ಅದು ಒಂದು ಬಂಡೆಕಲ್ಲಿನ ಮೇಲೆ ಇತ್ತು. ವೃದ್ಧ ಅವನಷ್ಟಕ್ಕೆ ಅವನೇ ಆಲೋಚಿಸತೊಡಗಿದ, “ಅದು ಅಲ್ಲಿಗೆ ಎಲ್ಲಿಂದ ಬಂದಿತು? ಅದರೊಳಗೆ ಏನಿರಬಹುದು?”

*****

೪. ಹತಾಶ
ನಿಪುಣ ಕಳ್ಳನೊಬ್ಬನ ಮಗ ತನಗೂ ವೃತ್ತಿಯ ನಿಗೂಢ ರಹಸ್ಯಗಳನ್ನು ತನಗೆ ಕಲಿಸುವಂತೆ ತಂದೆಯನ್ನು ಕೇಳಿದ. ಇದಕ್ಕೊಪ್ಪಿದ ಹಿರಿಯ ಕಳ್ಳ ಅಂದು ರಾತ್ರಿ ದೊಡ್ಡ ಮನೆಯೊಂದಕ್ಕೆ ಕನ್ನ ಹಾಕಲು ಮಗನನ್ನೂ ಜೊತೆಯಲ್ಲಿ ಕರೆದೊಯ್ದ. ಕುಟುಂಬದ ಸದಸ್ಯರೆಲ್ಲರೂ ನಿದ್ರಿಸುತ್ತಿದ್ದಾಗ ಉಡುಗೆತೊಡುಗೆಗಳನ್ನಿಡುವ ದೊಡ್ಡ ಕಪಾಟು ಇರುವ ಕೋಣೆಗೆ ಹೊಸಗಸುಬಿಯನ್ನು ಸದ್ದುಮಾಡದೇ ಕರೆದೊಯ್ದ. ಕಪಾಟಿನೊಳಕ್ಕೆ ಹೋಗಿ ಕೆಲವು ಉಡುಪುಗಳನ್ನು ಆಯ್ದು ತರುವಂತೆ ಹೇಳಿದ. ಅವನು ಕಪಾಟಿನೊಳಕ್ಕೆ ಹೋದ ತಕ್ಷಣ ಬಾಗಿಲು ಹಾಕಿ ಹೊರಗಿನಿಂದ ಚಿಲಕ ಹಾಕಿದ. ತದನಂತರ ಮನೆಯಿಂದ ಹೊರಹೋಗಿ ಮುಂಬಾಗಿಲನ್ನು ಹೊರಗಿನಿಂದ ಜೋರಾಗಿ ತಟ್ಟಿ ಮಲಗಿದ್ದವರನ್ನು ಎಬ್ಬಿಸಿದ,ಬೇರೆಯವರು ನೋಡುವ ಮುನ್ನವೇ ಅಲ್ಲಿಂದ ಸದ್ದು ಮಾಡದೆ ಹೊರಟುಹೋದ. ಎಷ್ಟೋ ಗಂಟೆಗಳು ಕಳೆದ ಬಳಿಕ ಕೊಳಕಾಗಿದ್ದ ಬಳಲಿದ ಮಗ ಮನೆಗೆ ಹಿಂದಿರುಗಿದ. ಬಂದವನೇ ಕೋಪದಿಂದ ಕಿರುಚಿದ: “ಅಪ್ಪಾ, ನನ್ನನ್ನೇಕೆ ಕಪಾಟಿನಲ್ಲಿ ಕೂಡಿಹಾಕಿದೆ? ಸಿಕ್ಕಿಹಾಕಿಕೊಳ್ಳುವ ಭಯದಿಂದ ನಾನು ಹತಾಶನಾಗದೇ ಇದ್ದಿದ್ದರೆ ತಪ್ಪಿಸಿಕೊಂಡು ಬರಲು ಸಾಧ್ಯವೇ ಆಗುತ್ತಿರಲಿಲ್ಲ. ಹೊರಬರಲು ನನ್ನ ಎಲ್ಲ ಕಲ್ಪನಾ ಚಾತುರ್ಯವನ್ನು ಉಪಯೋಗಿಸಬೇಕಾಯಿತು!”. ಅಪ್ಪ ಕಳ್ಳ ಮುಗುಳ್ನಗೆ ಬೀರಿದ. “ಮಗನೇ, ಕನ್ನ ಹಾಕುವ ಕಲೆಯ ಮೊದಲನೆಯ ಪಾಠ ಇಂದು ನಿನಗಾಗಿದೆ.” 

*****

೫. ಕನಸು ಕಾಣುವಿಕೆ
ಅಲ್ಲಿ ಇಲ್ಲಿ ಹಾರಾಡುತ್ತಿದ್ದ ಚಿಟ್ಟೆ ತಾನಾಗಿದ್ದಂತೆ ಒಮ್ಮೆ ಕನಸು ಕಂಡನಂತೆ ಪುರಾತನ ಕಾಲದ ಚೀನೀ ಟಾವೋಪಂಥೀಯ ಚುಯಾಂಗ್‌ ಝು. ಕನಸ್ಸಿನಲ್ಲಿ ತಾನೊಂದು ಚಿಟ್ಟೆ ಎಂಬ ಅರಿವು ಮಾತ್ರ ಅವನಿಗಿತ್ತೇ ವಿನಾ ತಾನೊಬ್ಬ ಮನುಷ್ಯ ಎಂಬ ಅರಿವೇ ಇರಲಿಲ್ಲ. ಇದ್ದಕ್ಕಿದ್ದಂತೆ ಅವನಿಗೆ ಎಚ್ಚರವಾಯಿತು ಮತ್ತು ಹಾಸಿಗೆಯ ಮೇಲೆ ಮಲಗಿರುವ ಮನುಷ್ಯ ತಾನು ಎಂಬ ಅರಿವು ಪುನಃ ಉಂಟಾಯಿತು. ಆಗ ಅವನು ತನ್ನಷ್ಟಕ್ಕೆ ತಾನೇ ಆಲೋಚಿಸಿದ: “ಚಿಟ್ಟೆ ತಾನೆಂದು ಕನಸು ಕಂಡ ಮನುಷ್ಯ ತಾನೋ ಅಥವ ಮನುಷ್ಯ ತಾನೆಂದು ಕನಸು ಕಾಣುತ್ತಿರುವ ಚಿಟ್ಟೆ ತಾನೋ?” 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x