ಬುದ್ಧನ ಬೋಧಿವೃಕ್ಷ ಬಾಡುತಿದೆಯಂತೆ..
ಮರ ಮರುಗದು ಇರದುದಕೆ
ಪ್ರತಿ ಕೇಳದು ತಾನಿತ್ತುದಕೆ.
ನರಗರ್ಥವಾಗದು ನಿಸ್ವಾರ್ಥತೆ,
ನಿರ್ಲಿಪ್ತತೆ, ನಿರಾಕಾರತೆ ಮತ್ತು ನಿರ್ಮಮತೆ…
ಅವ ಬಯಸುತಾನೆ, ಕೀಳಿ, ಕಿತ್ತು, ಕೆತ್ತಿ,
ಕೊನೆಗೆ ಕಡಿದೇ ಬಿಡುತಾನೆ ಖಾಲಿಯಾಗಿಸಿ.
ಇಲ್ಲ ಅತಿ ನಂಬುತಾನೆ,
ಮೆಚ್ಚಿ, ಮೆಚ್ಚಿಸಿ, ಅಪ್ಪಿಒರಗಿ, ಒಳಗಿಳಿದು, ಆವರಿಸಲ್ಪಟ್ಟು
ಕೊನೆಗೆ ತಾನಿಲ್ಲವಾಗುತಾನೆ ಖಾಲಿಯಾಗಿ.
ತನ್ನಂತೆ ಪರರ ಬಗೆದ ನರಮನಸು
ಮರಕೂ ಈವೆನೆಂದು ಹೊರಟಿದೆ.
ಸಿದ್ಧಾರ್ಥ ಬುದ್ಧನಾದೆಡೆಯ ಮಣ್ಣಿಗೆ
ತಾನೆರೆಯತೊಡಗಿದೆ,
ನೆಲೆಯ ಬೆಳಗತೊಡಗಿದೆ,
ಉದ್ಧಾರಕತೃವ ಉಪಕೃತವಾಗಿಸಿ
ತಾನೆತ್ತರಕೇರಬಯಸಿದೆ.
ಅಲ್ಲ……
ತಂಪಿತ್ತುದಕೆ ಕಂಪೀವುದಕೆ,
ಬೆಳಕಿತ್ತ ನೆಲೆಯ ಬೆಳಗಲಿಕೆ,
ಮಳೆಹೊತ್ತ ಬಸಿರ ತಣಿಸಲಿಕೆ,
ಉಸಿರಿತ್ತ ಹಸಿರಿಗೆ ನಮಿಸಲಿಕೆ
ಧಾವಿಸಿ ಬಹ ನರಜಾತ್ರೆಯಬ್ಬರಕಲ್ಲ….
ಬುದ್ಧನ ಹಿಂಬಾಲಿಸಿ,
ನುಡಿಗಳನುಚ್ಛರಿಸಿ,
ಮಂತ್ರ ಬದಲಾಯಿಸಿ,
ತಂತ್ರಗಳ ಅರಗಿಸಿ,
ಏನೇನು ಮಾಡಿದರೂ
ಮುಂದೊಬ್ಬ ಬುದ್ಧ ಹುಟ್ಟದುಳಿದುದಕೆ…
ನಾಳೆಯ ರೂಪಿಸುತಾ, ಕೂಡಿಕಳೆದು,
ವೇಳಾಪಟ್ಟಿ ಬರೆದು, ಅಕಾಶಕೇಣಿ ಹಾಕುತಾ
ಇಂದುಗಳ ಬದಿಸರಿಸುವ,
ಆಸೆಯ ಕೊನೆಯ ಸಾರುವಲ್ಲಿ,
ಆಸೆಯನೇ ದಿಕ್ಸೂಚಿ ಮಾಡಿ ಸಾಗುವ,
ಆಸೆಗಾಸೆಯದೇ ಛದ್ಮವೇಷ ತೊಡಿಸುವ,
ಮೌಢ್ಯದ ಬಿರುಸ ನಾಲ್ಕು ತಲೆಮಾರಲೂ
ತಂಗಾಳಿ-ನೆರಳಿತ್ತು ಶಾಂತವಾಗಿಸಲಾಗದ ಕೊರಗಿಗೆ…
ಬುದ್ಧನ ಬೋಧಿವೃಕ್ಷ ಬಾಡುತಿದೆಯಂತೆ..
ಕವನದ ಕಲ್ಪನೆಯಲ್ಲಿ ಮಾತ್ರ ಬುದ್ಧನ ಬೋಧಿವೃಕ್ಷ ಬಾಡುತಿದೆ….ಸುಪ್ತಸ್ಥಿತಿಯಲ್ಲಿಯ ಅಂತರ್ಯಾಮಿಗಳಂತೆ ಸೃಷ್ಟಿಯಾಗುವ ಬೀಜ-ಸಸಿ-ಮರಗಳು ಹೀಗೆ ಪುನರಾವರ್ತನೆಗೊಳ್ಳುವ ಈ ಪ್ರಕೃತಿಯಲ್ಲಿ ಎಲ್ಲವೂ ನಿರಂತರ…ನಿಯಮಿತ….
ಅನುರಾಧ ಮೇಡಮ್ ಶುಭಾಶಯಗಳು !
ಧನ್ಯವಾದ ಸಿದ್ದರಾಮ್ ಅವರೇ.. ಈ ಕವನ ಬರೆದ ದಿನ ಪ್ರಜಾವಾಣಿಯಲ್ಲಿ ಬುದ್ಧನ ಭೋಧಿವೃಕ್ಷದ ಅಕಾಲ ಬಾಡುವಿಕೆಯ ಬಗ್ಗೆ, ಮತ್ತು ಜನದಟ್ಟಣೆಯ ಹಾಗೂ ರಾಸಾಯನಿಕಗಳಿಂದ ಕೂಡಿದ ಊದಿನಕಡ್ಡಿ, ಅರಸಿನ ,ಕುಂಕುಮಗಳೇ ಮುಂತಾದವುಗಳ ಅರ್ಪಿಸುವಿಕೆಯಿಂದ ಅದಾಗುತ್ತಿದೆ ಅನ್ನುವ ವರದಿ ಓದಿ ಇದನ್ನು ಬರೆದೆ. ಅಲ್ಲಿನ ಅಮೂರ್ತ ಉತ್ಥಾನಕಾರಕ ಧನಾತ್ಮಕತೆ ನೀವು ಹೇಳಿದ ಹಾಗೆ ನಿರಂತರ..