ಕರ್ನಾಟಕ ರಾಜ್ಯ ಹಲವು ವಿಶೇಷಗಳನ್ನು ಹುಟ್ಟುಹಾಕಿದೆ. ಇಡಿ ದೇಶ ಹಾಗೂ ಪ್ರಪಂಚದಲ್ಲಿ ಹಲವು ಪ್ರಥಮಗಳನ್ನು ಸೃಷ್ಠಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ. ಸಾಹಿತ್ಯ ಲೋಕದಲ್ಲಿ ಎಂಟು ಜ್ಞಾನಪೀಠ ಪಡೆದು, ಕನ್ನಡವನ್ನು ಶಾಸ್ತ್ರೀಯ ಭಾಷೆಯಾಗಿ ಮಾಡಿರುವ ಸಾಧನೆ ನಮ್ಮದು. ಇದೆಲ್ಲವೂ ಕನ್ನಡದ ಹೆಸರಾಂತ ಕವಿಗಳ ಸಾಹಿತ್ಯ ಮತ್ತು ಹೋರಾಟದಿಂದ ಸಾಧ್ಯವಾಗಿದೆ. ಕನ್ನಡ ಇಂದು ಬಹು ಶ್ರೀಮಂತವಾಗಿ ಬೆಳೆಯಲು ಹಲವರ ಕೊಡುಗೆ ಅಪಾರವಾಗಿದೆ.
ಪ್ರಸ್ತುತ ದಿನಗಳಲ್ಲಿ ಕಾವ್ಯ, ಕಥೆ, ಕಾದಂಬರಿ ಅರ್ಥ ಕಳೆದುಕೊಂಡು “ಕವಿತೆ ಯಾರು ಕೊಳ್ಳತ್ತಾರೆ” ಎಂಬ ಜಿಗ್ನಾಸೆ ಮೂಡಿದೆ. ಸಾಹಿತ್ಯ ಮತ್ತು ಪುಸ್ತಕಗಳು ಮೂಲೆ ಸೇರಿ ಧೂಳು ಹಿಡಿಯುತ್ತಿವೆ. ಒತ್ತಡ ಮತ್ತು ಬಿಡುವಿಲ್ಲದ ಓಡಾಟ ನಮ್ಮ ಬದುಕಾಗಿದೆ. ಮೂಬೈಲ್ ಖರಿದಿ ಮಾಡುವುದಕ್ಕಿಂತ ಕಾಲು ಭಾಗವು, ನಾವು ಪುಸ್ತಕ ಖರೀಸುತ್ತಿಲ್ಲವೆಂಬ ಆತಂಕ ಮನೆಮಾಡಿದೆ. ಬೆಳೆದು ನಿಂತ ತಾಂತ್ರಿಕತೆಯಿಂದಾಗಿ ಸಾಹಿತ್ಯ ಸೋಲು ಒಪ್ಪಿಕೊಳ್ಳುವಂತಹ ಸ್ಥಿತಿಗೆ ತಲುಪಿದೆ. ಈ ವಿಷಯಕ್ಕೆ ನನ್ನ ಅನುಭವ ಪುಷ್ಠಿ ನೀಡಬಹುದು.
“ನನ್ನ ಶಾಲಾ ದಿನಗಳಿಂದ ಇಲ್ಲಿಯವರೆಗೆ ಸರಿಸುಮಾರು ಗೆಳೆಯರಿದ್ದಾರೆ. ಸಾಫ್ಟ್ ವೇರ್, ಹಾರ್ಡ್ ವೇರ್, ಟೀಚರ್, ಮೇಜರ್, ಡ್ರೈವರ್, ಬಡ್ಡಿ ಬ್ರೋಕರ್ ಇತ್ಯಾದಿ. ಇವರೆಲ್ಲರೊಳಗೆ ನಾನು ಚಿಕ್ಕ ಸಾಹಿತಿಯಂದರೆ ಉಳಿದವರೆಲ್ಲರೂ ಗೊಳ್ ಎಂದು ನಗುತ್ತಾರೆ. ಜೋಕ್ ಮಾಡುತ್ತಾರೆ. ಕಿಂಡಲ್ ಮಾಡಿ ನಗುತ್ತಾರೆ. ಏನ್ ಮಗಾ ಅದ್ಯಾವುದೊ ಕವಿಯಾಗಿದಂತಲ್ಲಾ, ಅದೇನೊ ಕವಿತೆ ಬರಿತಿಯಂತಲ್ಲಾ ಅದಕ್ಯಾರೊ ಕೇಳತಾರೆ, ಐಟಿ, ಬಿಟಿ, ಸ್ವೀಟಿ ಟೈಮ್ ಲ್ಲಿ ಕವಿ ಕವಿತೆ ಕೆಲಸ ಕೊಡಲಪ್ಪಾ ಎಂದು ಸಮಾಧಾನ ಮಾಡುತ್ತಾರೆ ಆದರೆ ನಾನು ಮಾತ್ರ ಈ ಕಾವ್ಯ ಮತ್ತು ಸಾಹಿತ್ಯದ ಬೆನ್ನು ಹತ್ತಿ ಸುತ್ತಲಾರದ ಊರಿಲ್ಲ, ಭೇಟಿ ಮಾಡದ ವ್ಯಕ್ತಿಯಿಲ್ಲ, ಸಾಹಿತ್ಯದ ಮೇಲಿನ ಒಲವು ನಮ್ಮನ್ನು ಬೆಸೆಯುತ್ತದೆ. ಇನ್ನು ನಮ್ಮ ಕಲಬುರ್ಗಿ ಬಿಸಿಲಿಗೆ, ಬಡತನದ ಬೇಗೆಗೆ ಮತ್ತು ಹೋರಾಟದ ಬದುಕಿಗೆ ಎಂತಹ ಕವಿತೆ ಹುಟ್ಟುತ್ತವೆ ಎಂದು ಬಿಡಿಸಿ ಹೆಳಬೇಕಿಲ್ಲವೆನಿಸುತ್ತದೆ. ಇಂತಹ ನಾಡಿನಲ್ಲಿ, ಶರಣರ ಅನುಗ್ರಹವೆಂಬಂತೆ ಒಬ್ಬ ಹುಡುಗ ಇನ್ನು ಮೀಸೆ ಚಿಗುರದವ ಸಾಹಿತ್ಯ ಆಸಕ್ತನಾಗಿದ್ದಾನೆ. ಕಾವ್ಯ ಓದುವುದರ ಜೊತೆಗೆ ತನ್ನ ಸುತ್ತಮುತ್ತಲಿನವರಿಗೆ ಓದಿಸುವ ಆಸೆ ಹೊಂದಿದ್ದಾನೆ. ಹದಿನೆಂಟು ತುಂಬಿರದ ಬಾಲಕ ಪುಸ್ತಕಗಳನ್ನು ತೊದಲು ನುಡಿಯಲ್ಲೆ ವಿಮರ್ಷೆ ಮಾಡಬಲ್ಲವನಾಗಿದ್ದಾನೆ. ಹಿರಿಯ ಸಾಹಿತಿಗಳಿಂದ ಹಿಡಿದು ಈಗಿನ ಯುವ ಸಾಹಿತಿಗಳವರೆಗೆ ಓದಿಕೊಳ್ಳಬಲ್ಲ ಶಕ್ತಿ ಸಮಯ ಎರಡು ಸಾಮರ್ಥ್ಯ ಬೆಳೆಸಿಕೊಂಡಿದ್ದಾನೆ. ತಾನೊಬ್ಬನೆ ಓದದೆ ತನ್ನ ಸುತ್ತಮುತ್ತಲಿನವರಿಗೆ ಓದಿನ ಸವಿಯನ್ನು ಬಡಿಸಬಲ್ಲ ಶಕ್ತಿ ಹೊಂದಿದ್ದಾನೆ. ಜನರನ್ನು ಸಾಹಿತ್ಯದ ದಾರಿಯಲ್ಲಿ ನಡೆಸಬಲ್ಲ ಯುಕ್ತಿ ಪಡೆದುಕೊಂಡಿದ್ದಾನೆ. ಯುವಕರೇಕೆ ಈ ರಾಜ್ಯದಲ್ಲಿ ಮಕ್ಕಳು ಕೂಡ ಪುಸ್ತಕ ಬರೆದು ಪ್ರಕಟಿಸಿರುವ ಉದಾಹರಣೆಗಳಿವೆ ಆದರೆ ತಾನು ಓದಿ ಮತ್ತೊಬ್ಬರನ್ನು ಜೊತೆಗೆ ಓದಿಸುವ ಗುಣ ಹೊಂದಿರುವ ಪೋರ ಇವನು. ಅದ್ಯಾವುದೆ ಮೇಲು-ಕೀಳು ಎಡಗೈ-ಬಲಗೈ ಎನ್ನದೇ ಎಲ್ಲರನ್ನು ಓದಿಕೊಂಡು ತನ್ನ ಒಳಿತಿಗಾಗಿ ಬೇಕಾದದ್ದನ್ನು ಆರಿಸಿಕೊಂಡು ಬದುಕುತ್ತಿರುವ ಈ ಬಿಸಿಲೆದೆಯ ಬಿಸಿಲನಾಡಿನ ಹುಡುಗ “ಕಪಿಲ್ ಹುಮನಾಬಾದೆ” ಕಾವ್ಯ-ಮನೆ ಕಟ್ಟಿದ ಶರಣನಾಡಿನ ಕುಮಾರ.
ದೂರದ ಕಲಬುರ್ಗಿ ಶರಣರ ನಾಡಿನಲ್ಲಿ ಇರುವ ಇವನು, ಇನ್ನು ಹದಿನೆಂಟು ದಾಟದ ಬಾಲಕ, ಈ ಸಾಮಾಜಿಕ ಜಾಲತಾಣವಾದ ವ್ಯಾಟ್ಸ್ ಆಪ್ ಅನ್ನು ಬಳಸಿ, ಕಾವ್ಯ ಆಸಕ್ತರ ಗುಂಪು ಕಟ್ಟಿ ಅದರೊಳಗೆ ಹಲವು ಅನುಭವಿ ಕವಿಗಳ ಸಮ್ಮಿಲನ ಮಾಡಿ, ಕಾವ್ಯ-ಮನೆ ಎಂಬ ಹೆಸರಿನಲ್ಲಿ ಯುವಕರೆಲ್ಲ ಒಂದೆಡೆ ಸೇರಿ ಕವಿತೆ ಬರೆದರೆ ಅದನ್ನು ಅನೇಕ ಹಿರಿಯ ಕವಿಗಳು ಅವುಗಳನ್ನು ತಿದ್ದುವ ಕೆಲಸ ಮಾಡುತ್ತಿರುವುದು ಅತ್ಯಂತ ಪ್ರಶಂಸನೀಯವಾದ ಕೆಲಸ ಸದ್ದಿಲ್ಲದೆ ಕಲಬುರ್ಗಿ ನಾಡಿನಲ್ಲಿ ನಡೆದಿದೆ.
ಒಂದು ವ್ಯಾಟ್ಸ್ ಆಪ್ ಗುಂಪಿನಲ್ಲಿ ಕಾವ್ಯ ಸ್ಪರ್ಧೆ ಏರ್ಪಡಿಸಿ, ಪುಸ್ತಕಗಳನ್ನು ಬಹುಮಾನವಾಗಿ ನೀಡುವ ಹವ್ಯಾಸ ಬೆಳೆಸಿದ. ಪ್ರತಿವಾರ ಒಂದೊಂದು ಸ್ಪರ್ಧೆ ಏರ್ಪಡಿಸಿ, ಓದುಗರಲ್ಲಿ ಉತ್ಸಾಹ ತುಂಬುವ ಕೆಲಸ ಮಾಡಿದ. ಕರ್ನಾಟಕದ ಉದ್ದಗಲಕ್ಕೂ ಹರಡಿನಿಂತ ಅನೇಕ ಯುವ ಹಾಗೂ ಹಿರಿಯರ ಸಹಕಾರ ದೊರೆತು ಹಲವು ಜನರ ಬಹುಬೇಡಿಕೆಯ ತಾಣವಾಗಿ ಮಾರ್ಪಟ್ಟಿತು. ಕಾವ್ಯ-ಮನೆ ಎಂಬ ಗುಂಪು ಈ ಗುಂಪಿನಲ್ಲಿ ಅತ್ಯಂತ ಹೆಚ್ಚು ಓದಿಕೊಂಡಿರುವ ಕವಿಗಳಿಂದ ಹಿಡಿದು ಇದೀಗ ಸಾಹಿತ್ಯದ ವಾಸನೆ ಮೂಸುತ್ತಿರುವ ಯುವಕರು ಇಲ್ಲಿದ್ದಾರೆ. ತಪ್ಪಿದರೆ ಒಬ್ಬರಿಗೆ ಇನ್ನೊಬ್ಬರೂ ಮಾರ್ಗದರ್ಶಕರಾಗಿದ್ದಾರೆ. ಓದುಗ ಹೇಗೆ ಓದಬೇಕು, ಒಬ್ಬ ವಿಮರ್ಷಕ ಹೇಗೆ ವಿಮರ್ಷೆ ಮಾಡಬಲ್ಲನೆಂಬ ವಿಷಯವನ್ನು ಈ ಗುಂಪಿನಿಂದ ಕಲಿಯಲು ಅನೇಕರಿಗೆ ಸಿಕ್ಕಿದೆ ಎಂದರೆ ತಪ್ಪಾಗದು. ಕಾಲಹರಣ ಮಾಡುವ ತಾಣವನ್ನು ಕಾವ್ಯಮಯವಾಗಿಸಿದ ಶ್ರೇಯಸ್ಸು ಕಪಿಲ್ ಹುಮನಾಬಾದೆಗೆ ಸಲ್ಲುತ್ತದೆ. ಇಂತಹ ಕಾವ್ಯ-ಮನೆ ಎಂಬ ವ್ಯಾಟ್ಸ್ ಆಪ್ ಗುಂಪನ್ನು ಇದೀಗ ಪ್ರಕಾಶನ ಸಂಸ್ಥೆಯಾಗಿ ಮಾರ್ಪಡಿಸಿ, ತನ್ನ ಪ್ರಕಾಶನ ಸಂಸ್ಥೆಯ ಮೂಲಕ ಹೆಸರಾಂತ ಯುವ ಬರಹಗಾರನಾದ ಹಣಮಂತ ಹಾಲಗೇರಿಯವರ ಕೆಂಗುಲಾಬಿ ಕಾದಂಬರಿಯ ನಾಲ್ಕನೆ ಮುದ್ರಣ ಮಾಡುವ ಮೂಲಕ ಉದ್ಘಾಟನೆ ಮಾಡುತ್ತಿರುವುದು ಸಂತಸ ತಂದಿದೆ. ನಾವೆಲ್ಲ ಬಿಜಿನೆಸ್ ನಲ್ಲಿ ಸಾಧನೆ ಮಾಡಿದ್ದು, ಸರಕಾರಿ ನೌಕರಿ ಹಿಡಿದು ಸಾಧನೆ ಮಾಡಿದ್ದು, ಕೇಳಿದ್ದೇವೆ ಮತ್ತು ನೋಡಿದ್ದೇವೆ, ಇಲ್ಲಿ ಒಬ್ಬ ಹಾಲು ಹಲ್ಲಿನ ಚಿಕ್ಕ ಹುಡುಗ ಹಲವು ಸಾಹಿತ್ಯ ಓದುಗರನ್ನು ಒಂದೆಡೆ ಸೇರಿಸುವ, ಕಾವ್ಯ ಮತ್ತು ಸಾಹಿತ್ಯವನ್ನು ಶ್ರೀಮಂತಗೊಳಿಸುವ ಕೆಲಸ ಮಾಡುತ್ತಿರುವುದು ಅತ್ಯಂತ ಹರ್ಷದಾಯಕ ಮತ್ತು ಶ್ಲಾಘನೀಯವಾಗಿದೆ. ಈ ಹುಡುಗನ ಇನ್ನೊಂದು ಮೆಚ್ಚುವ ಗುಣವೆಂದರೆ ಅವನ ಓದಿನ ದಾಹ ಕಲಿಯಬೇಕು. ತಿಳಿದುಕೊಳ್ಳಬೇಕೆಂಬ ಮೋಹ ಎಲ್ಲಿಯೇ ಯಾವುದೇ ಪುಸ್ತಕ ಹೊರಬರಲಿ ಅದನ್ನು ತಂದು ಓದುವುದರ ಜೊತೆಗೆ ಪುಸ್ತಕ ವ್ಯಾಪಾರಿಯಾಗುವನು. ತನ್ನ ಜೊತೆಗಿರುವವರನ್ನು ಓದಿಸುವ ಗುಣ ಹೊಂದಿದ್ದಾನೆ. ಇವನ ಆಸಕ್ತಿ ಮೆಚ್ಚಲೇಬೇಕು.
ಈ ಕಾವ್ಯ-ಮನೆ ಎಂಬ ಗುಂಪಿನಲ್ಲಿ ಇಲ್ಲಿಯವರೆಗೆ ಕಾವ್ಯಸ್ಪರ್ಧೆ, ಕಥನ ಕಾವ್ಯ ಸ್ಪರ್ಧೆ, ಲೇಖನ ಸ್ಪರ್ಧೆ, ಕಲ್ಪನೆ ಕಾವ್ಯ ಸ್ಪರ್ಧೆ, ಚಿತ್ರಕವನ ಸ್ಪರ್ಧೆ, ಕಥಾ ಸ್ಪರ್ಧೆ, ವಿಮರ್ಷಾ ಸ್ಪರ್ಧೆ ಇತ್ಯಾದಿಗಳನ್ನು ಹಮ್ಮಿಕೊಂಡಿದ್ದು ಇದೀಗ ವ್ಯಾಟ್ಸ್ ಆಪ್ ಗುಂಪಿನಾಚೆಗೂ ತನ್ನ ಸಾಹಿತ್ಯದ ಆಸಕ್ತಿಯನ್ನು ಹೊರಚಾಚುವ ಬಯಕೆ ಹೊಂದಿದ್ದಾನೆ. ಸಾಮಾಜಿಕ ಜಾಲಾತಾಣದಾಚೆಗೆ ಎಲ್ಲರೊಡನೆ ಬೆರೆತು ಸಾಹಿತ್ಯ ಆಸಕ್ತರನ್ನು ಕಟ್ಟುವ ಕೆಲಸ ಮಾಡಬಯಸಿದ್ದಾನೆ. ಈ ಬಿಸಿ ಉಸಿರಿನ ಹುಡುಗನ ಸಾಹಿತ್ಯದ ಕೆಲಸಕ್ಕೆ ನಾಡಿನ ಹೆಸರಾಂತ ಸಾಹಿತಿಗಳು ಬೆನ್ನೆಲುಬಾಗಿ ನಿಂತು ಪ್ರೋತ್ಸಾಹ ನೀಡುತ್ತಿದ್ದಾರೆ. ಬೆನ್ನು ತಟ್ಟಿ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ. ನಿಮಗೂ ಸಹಕಾರ ನೀಡುವ ಆಸೆಯಾದರೆ ಆಗಷ್ಟ ಏಳಕ್ಕೆ ಕಲಬುರ್ಗಿಗೆ ಬನ್ನಿ, ಕೆಂಗುಲಾಬಿಯನ್ನು ಪಡೆದುಕೊಳ್ಳಿ ಸಾಹಿತ್ಯದ ರಸದೌಣ ಕೂಟದಲ್ಲಿ ಕೂಡಿಕೊಳ್ಳಿ ಸಾಹಿತ್ಯ ಆಸಕ್ತ ಯುವರಕರಿಗೆ ಹಸ್ತಲಾಘವ ಮಾಡಿರಿ, ನಿಮ್ಮ ಬೆಂಬಲ ನೀಡಿರಿ.
ಇನ್ನು ನಿಮಗೆ ಕೆಂಗುಲಾಬಿ ಬಗ್ಗೆ ಹೇಳಬೇಕೆಂದರೆ, ನನ್ನ ಓದಿನ ಮಿತಿಯೊಳಗೆ ಇದು ಒಂದು ಅದ್ಭುತ ಜಗತ್ತನ್ನು ತೋರಿಸುವ ಕಾದಂಬರಿ. ಇಲ್ಲಿ ಬರಿ ಕಥೆಯಲ್ಲ ಕೆಲವರ ಬದುಕನ್ನು ಲೀಲಾಜಾಲವಾಗಿ ದು:ಖದ ಮೊಡುವನ್ನು ತೋರುತ್ತದೆ. ಅಂದು ಮುಸ್ಸಂಜೆ ಹೊತ್ತಲಿ, ಅಣ್ಣನ ಮನೆಗೆ ಹೋಗಿದ್ದೆ, ಅತ್ತಿಗೆ ಮಾಡಿದ್ದು ಬಿರಿಯಾನಿ ಉಂಡು ಸಂತೋಷವಾಗಿತ್ತು. ಟಿವಿ ನೋಡುತ್ತಾ ಕುಳಿತಿದ್ದೆ, ಅಣ್ಣನ ಮನೆಯ ಟಿವಿ ಮುಂದಿನ ಕಪಾಟಿನಲ್ಲಿ ಕೆಂಗುಲಾಬಿ ಕಂಡಿತು ಅದನ್ನು ಎತ್ತಿಕೊಂಡು ಮುಖಪುಟ ನೋಡಿ ಛೇ ಎಂತಹ ಪುಸ್ತಕ ಇಟ್ಟಾರಲ್ಲವೆಂದು ಅಂದುಕೊಂಡೆ, ಇದಕ್ಕೆ ಕಾರಣ ಕೆಂಗುಲಾಬಿಯ ಮುಖಪುಟ ನನ್ನನ್ನು ಪೂರ್ವಗೃಹವನ್ನಾಗಿಸಿತು. ಮುಖಪುಟದಲ್ಲಿ ಅಚ್ಚಾಗಿರುವ ಅಶ್ಲೀಲತೆ ನನಗೆ ಕಾಡಿತು. ಆಗ ನನ್ನಣ್ಣ ನನಗೆ ಈ ಕಾದಂಬರಿ ಒಮ್ಮೆ ಓದಿ ನೋಡು ಆಗ ಮಾತ್ರ ನಿನಗೆ ಅದರ ಮುಖ್ಯ ವಿಚಾರ ಮತ್ತು ವಿಷಯ ಅರ್ಥವಾಗುತ್ತದೆ ಎಂದನು.
ನನ್ನ ಒಲ್ಲದ ಮನಸ್ಸಿನಿಂದಲೆ ಕೆಂಗುಲಾಬಿ ಮನೆಗೆ ತಂದೆ. ಯಥಾಪ್ರಕಾರ ಕೆಂಗುಲಾಬಿ ನನ್ನ ಪುಸ್ತಕದ ಕಪಾಟಿನಲ್ಲಿ ಸೇರಿತು. ಕೆಲಸದ ಒತ್ತಡದೊಳಗೆ ಮೂರು ದಿನ ಕಳೆಯಿತು. ಅದೊಂದು ದಿನ ಎರಡನೇಯ ಶನಿವಾರ ರಜೆಮೇಲೆ ಮನೆಯಲ್ಲಿದ್ದೆ, ನನ್ನ ಅರ್ಧಾಂಗಿ ಹೇಳಿದಳು, ರೀ ನೀವು ಕಥೆ ಅಂತಾ ಬರೆದರೆ ಈ ಕೆಂಗುಲಾಬಿಯಂತಹ ರೋಚಕ ಮೈನವಿರೇಳಿಸುವ ಕಥೆ ಕಾದಂಬರಿ ಬರಿಬೇಕ್ ನೋಡ್ರೀ ಎಂದಳು ಲೇ,, ನಿನ್ಯಾವಗ ಓದಿದೆ ಎಂದಾಗ ನಾನು ಓದಿ ಮುಗಿಸಿದೆ ಅತ್ಯಂತ ಓದಿಸಿಕೊಳ್ಳುವ ಕಾದಂಬರಿಯಾಗಿದೆ ಇದನ್ನು ಸಿನಿಮಾ ಯಾರು ಮಾಡಿಲ್ಲವಾ ಎಂದು ಕೇಳಿಯೇಬಿಟ್ಟಳು. ಈ ಕಾದಂಬರಿ ಅದಾಗಲೇ ಸಿನಿಮಾವಾಗಿ ಕೆಲಸ ಪ್ರಾರಂಭದಲ್ಲಿದೆ ಎಂಬ ಸುದ್ದಿ ನನ್ನವಳಿಗೆ ತಿಳಿದಿರಲಿಲ್ಲ.
ಇನ್ನು ಮನೆಯೊಡತಿ ಇಷ್ಟು ಕೇಳಿದ ಮೇಲೆ ಕೆಂಗುಲಾಬಿ ಓದದೆ ಇರಲಾಗಲಿಲ್ಲ. ಮೂರು ನಾಲ್ಕು ದಿನ ಎಲ್ಲವು ಬದಿಗೊತ್ತಿ ಕೆಂಗುಲಾಬಿ ಎದೆಗೊತ್ತಿಕೊಂಡೆ ಅತ್ಯಂತ ನೈಜತೆಯ ಕಥೆ ನನ್ನ ಕಣ್ಣ ಮುಂದೆ ಕಟ್ಟಿದ್ದಂತಾಯಿತು. ವ್ಯಶ್ಯ ಜಗತ್ತನ್ನು ಮತ್ತು ಅದರ ಆಳವನ್ನು ಅರೆಯುವಲ್ಲಿ ಕಾದಂಬರಿ ತನ್ನ ಯಶಸ್ವಿತನ ಮೆರೆಯಿತು. ಬಾಗಲಕೋಟೆ ಸುತ್ತಮುತ್ತಲು ಈ ಕಥೆಗಳು ತುಂಬಾಯಿವೆ ಎಂಬ ಸುದ್ದಿ ನಾನು ಅಭಿವೃದ್ಧಿ ಕ್ಷೇತ್ರದ ಕೆಲಸದಲ್ಲಿ ಕೇಳಿದ್ದೆ ಕೆ.ಎಚ್.ಪಿ.ಟಿ ಎಂಬ ಸಂಸ್ಥೆ ಇಲ್ಲಿ ಈ ವಿಷಯವನ್ನು ಕುರಿತು ತುಂಬಾ ಕೆಲಸ ಮಾಡಿದೆ ಎಂದು ಕೇಳಿದ್ದೆ ಆದರೆ ಈ ಕಾದಂಬರಿ ಓದಿದ ನಂತರ ಅದು ದೃಢವಾಗಿಬಿಟ್ಟಿತು. ಕಾದಂಬರಿ ಕೆಂಗುಲಾಬಿ ನನ್ನೊಳಗೆ ಆವರಿಸಿಕೊಂಡಿತು. ನಾನು ಕೆಂಗುಲಾಬಿಯ ಫ್ಯಾನ್ ಆಗಿಬಿಟ್ಟೆ, ಕಾದಂಬರಿಕಾರನಿಗೆ ಗೂಗಲ್ ಸರ್ಚ ಮಾಡಿಯೇಬಿಟ್ಟೆ, ಫೇಸ್ ಬುಕ್ ರೀಕ್ವೆಸ್ಟ್ ಕಳಿಸಿಯೇ ತೀರಿದೆ ನಿಮ್ಮ ಕಾದಂಬರಿ ಕೆಂಗುಲಾಬಿ ನನಗೆ ತುಂಬಾ ಹಿಡಿಸಿದ್ದಾಳೆ ಎಂದು ಮನದ ಮಾತೊಂದು ಬರೆದೆ ಅವರಿಂದ ಸ್ಪಂದನೆ ಸಿಕ್ಕತು ನನಗೆ ಸಂತೋಷವು ನೀಡಿತು. ಇದೀಗ ನಾಲ್ಕನೆ ಮುದ್ರಣ ಕಾಣುತ್ತಿರುವ ಕೆಂಗುಲಾಬಿಗೆ ಅದನ್ನು ಪ್ರಕಟಿಸಿ ಪ್ರಕಾಶನ ಸಂಸ್ಥೆಯಾಗಿ ಹೊರಬರುತ್ತಿರುವ ಕಾವ್ಯ-ಮನೆ ಪ್ರಕಾಶನಕ್ಕೆ ಶುಭವಾಗಲಿ ಎಂದು ಆಶಿಸುತ್ತೇನೆ.
ಕೊನೆಯ ತುತ್ತು: “ಕಾವ್ಯ-ಮನೆ” ಯಿಂದ ಕೆಂಗುಲಾಬಿ ಹೊರಬೀಳುತ್ತಿದೆ. ಓದುಗರ ಎದೆಯೊಳಗೆ ಮುಳ್ಳುಸಮೇತ ನಯವಾಗಿ ಇಳಿಯಲಿದೆ. ಹೊಸದೊಂದು ಜಗತ್ತಿಗೆ ಕರೆದೊಯ್ಯಲಿದೆ. ಬಿಸಿಲೆದೆಯ ಹುಡುಗರ ಹೃದಯ ಬಡಿತ ಹೆಚ್ಚಿಸಿರುವ ಕಾದಂಬರಿ ಇದೀಗ ಮತ್ತಷ್ಟು ಜನರಿಗೆ ಹತ್ತಿರವಾಗಲಿದೆ. ಪ್ರೀತಿಯ ಕೆಂಗುಲಾಬಿಯೆ ನೀ ಯುವಕರ ಕೈಸೇರಿ ಯುವಕರನ್ನು ಕೈಸೆರೆಯಾಗಿಸುವ ಮೂಲಕ ಸಾಹಿತ್ಯ ಲೋಕದಲ್ಲೊಂದು ಮರೆಯದ ಮೈಲಿಗಲ್ಲಾಗು ವ್ಯಶ್ಯೆಯರ ಬಾಳಿನಲ್ಲಿ ಬೆಳಗುವ ದೀಪವಾಗಲಿ, ಕಾವ್ಯ-ಮನೆ ಕಟ್ಟಿರುವ ಕನಸು ನೆನಸಾಗಲಿ, ಕಲಬುರ್ಗಿ ಮಣ್ಣಿನಲ್ಲಿ ಸಾಹಿತ್ಯ ಇನ್ನು ಹೆಚ್ಚೆಚ್ಚು ಪ್ರಕಾಶಿಸಲಿ ಎಂಬುವುದು ನನ್ನ ಆಶೆಯ.
-ಕೆ.ಎಂ.ವಿಶ್ವನಾಥ ಮರತೂರ.
ದೀರ್ಘ ರಜೆಮುಗಿಸಿ ಪಂಜು ಮತ್ತೆ ಬೆಳಗಿದೆ. ಬೆಳಗಿಸುವ ಮಂದಿಗೆ ಅಭಿನಂದನೆ ಮತ್ತು ಧನ್ಯವಾದಗಳು.
ಕಾವ್ಯ ಮನೆಯ ಬಗೆಗೆ ಒಳ್ಳೆಯ ಪರಿಚಯ ಮಾಡಿಸಿದ್ದಾರೆ. ಲೇಖಕರಿಗೆ ಅಭಿನಂದನೆ.