ಮಲಯಾಳ ಸಿನೆಮಾ ರಂಗವೂ ಮಲಬಾರಿನ ಸಂಸ್ಕೃತಿಯೂ: ಕೃಷ್ಣವೇಣಿ ಕಿದೂರ್

           
ಬಹಳಷ್ಟು  ಜನರಿಗೆ  ಮಲಯಾಳ   ಚಿತ್ರಗಳೆಂದರೆ  ಅದು ನೀಲಿ ಚಿತ್ರಗಳಿಗೆ  ಹತ್ತಿರದ್ದು ಎಂಬ  ತಪ್ಪು ಕಲ್ಪನೆಯಿದೆ.    ಜಾಹೀರಾತುಗಳು ತೋರಿಸುವ   ಚಿತ್ರಗಳು   ಹಾಗಿರುತ್ತದೆ ಎನ್ನಬಹುದು.   ಆದರೆ ಒಬ್ಬ ಕೇರಳೀಯಳಾಗಿ  ಮಲಯಾಳಂ  ಚಲನಚಿತ್ರಗಳೆಂದರೆ  ಅಲ್ಲಿ ಮಲಬಾರಿನ ( ಕೇರಳ) ಸಾಂಸ್ಕೃತಿಕ  ಹಿನ್ನಲೆಗೆ  ಹೆಚ್ಚಿನ ಒತ್ತು  ಸಿಗುತ್ತದೆ  ಎಂದು  ಕಂಡ  ಕಾರಣ ಆ ಮಿಥ್ಯೆಯನ್ನು  ಅಲ್ಲಗಳೆಯಬೇಕಾಗಿದೆ.

ಅರಬ್ಬಿ ಸಮುದ್ರದ  ಪಕ್ಕದ ಪುಟ್ಟ ರಾಜ್ಯ  ಕೇರಳ.  ಇದಕ್ಕೆ ಕೇರ  ನಾಡು  ಎನ್ನುವ ಹೆಸರಿದೆ.   ವಿಪುಲವಾಗಿ  ತೆಂಗು ಬೆಳೆಯುವ  ರಾಜ್ಯವಿದು.(ಕೇರ  ಅಂದರೆ  ತೆಂಗು).   ಕಲಾತ್ಮಕತೆ,  ಪ್ರಕೃತಿಯ ಸೊಬಗು,  ಹಿನ್ನೀರು,  ಮೀನುಗಾರಿಕೆ,  ಟೀ  ಶಾಪುಗಳು,  ಉದ್ದನೆಯ ಗಾಜಿನ ಲೋಟಗಳಲ್ಲಿ  ಸಿಗುವ ಚಹಾ,   ದೋಣಿ  ಪ್ರಯಾಣ,  ನೇಂದ್ರ ಬಾಳೆಯಹಣ್ಣು,   ತೆಂಗಿನ ಮಡಲು  ಉಪಯೋಗಿಸಿ  ಕಟ್ಟಿದ  ಮನೆಗಳು,  ಪಕ್ಕದಲ್ಲಿನ ಭೋರ್ಗೆರೆಯುವ  ಅರಬ್ಬಿ  ಸಮುದ್ರ,  ಸೈಕಲ್  ಸವಾರಿ  ಇದಿಷ್ಟು   ಚಿತ್ರಕಥೆಗಳಲ್ಲಿ   ಕಾಣುವ  ಕೇರಳದ  ಹಿನ್ನಲೆ ಆದರೆ   ಅನ್ಯ ಭಾಷಾ  ಚಿತ್ರಗಳಲ್ಲಿ  ನಾಯಕನ     ವೈವಿಧ್ಯಮಯ   ಡ್ರೆಸ್ ಗಳಿಗಾಗಿ  ಚೆಲ್ಲುವ ಮೊತ್ತದ  ನೂರಕ್ಕೆ ಒಂದು  ಮೊತ್ತ ಕೂಡಾ  ಇಲ್ಲಿ  ಖರ್ಚಿಲ್ಲ.  ಹಾಗೆಂದು  ಉಡುಗೆ  ಬೇಡವಾ? ಅಂದರೆ  ಇದೆ. ಅದು  ಅಚ್ಚ  ಕೇರಳೀಯ  ಬೆಳ್ಳಗಿನ  ಪಂಚೆ,  ಮತ್ತು ಬುಷ್ ಶರಟು.  ಕೇರಳೀಯ  ಫಿಲಂ ಫೀಲ್ಡ್ ನ ಸೂಪರ್    ಸ್ಟಾರ್ ಗಳಾದ   ಮೋಹನ್ ಲಾಲ್,  ಮಮ್ಮುಟ್ಟಿ,  ಸುರೇಶ್ ಗೋಪಿ,  ಜಯರಾಂ,  ಜಗದಿ(ಈಗ  ಅಸ್ವಸ್ಥತೆ)  ಪೃಥ್ವಿರಾಜ್, ಸಲೀಂಖಾನ್,  ಶ್ರೀನಿವಾಸ್,  ಉಂಡೆಪಕ್ರು,   ಇನ್ನೂ  ಬಹಳಷ್ಟು  ಮೇರು  ಕಲಾವಿದರು   ಪಂಚೆಯಲ್ಲಿಯೇ  ಪೂರಾ ಫಿಲಂ  ನಿಭಾಯಿಸುತ್ತಾರೆ(  ನಟಿಸುತ್ತಾರೆ)  ಹಾಗೆಂದು   ಅಲ್ಲಿ ಫೈಟಿಂಗ್  ಇದೆ,  ಓಡಿ ಬರುವ ಸೀನ್ ಗಳಿವೆ,  ಅಟ್ಟಿಸಿ  ಧಾವಿಸುತ್ತಾರೆ.   ತೆಂಗಿನ ಮರ ಹತ್ತಿ ಕಾಯಿ ಕೆಡವುತ್ತಾರೆ.  ಹೋಟೆಲ್ ನಲ್ಲಿ ಕಟ್ಟಂಚಾಯ(black tea)   ಕೈಪಾಟೆಯಲ್ಲಿ  ಅತ್ತಿತ್ತ ಎತ್ತರದಿಂದ  ಸುರಿದು   ಬಲು  ನ್ಯಾಕ್ ನಿಂದ  ಒಂದು ಹನಿ ಕೂಡಾ  ಹೊರಚೆಲ್ಲದ ಹಾಗೆ   ತಯಾರಿಸಿ  ಉದ್ದದ  ಗಾಜಿನ ಲೋಟಕ್ಕೆ ಹಾಕಿ  ಕೊಟ್ಟರೆ  ಆ ಚಾಯಂಡೆ  ಶಾಪ್  ಸಣ್ಣ ಮೀಟಿಂಗ್  ಕಟ್ಟೆಯೇ.  ಕಾವಿ ಬಣ್ಣದ  ಲುಂಗಿ   ಉಟ್ಟು  ಮೇರು ನಟರು   ಅಭಿನಯಿಸುತ್ತಾರೆ.   ಮೋಹನ್ ಲಾಲ್,  ಮಮ್ಮುಟ್ಟಿ, ಸುರೇಶ್ ಗೋಪಿ, ಜಯರಾಂ ಇವರೆಲ್ಲ  ದಶಕಗಳಿಂದ  ಮಲಯಾಳ  ಚಿತ್ರರಂಗದ ದಿಗ್ಗಜರು.   ಜನ ಅಭಿಮಾನದಿಂದ  ಅಂದು- ಇಂದು ಕೂಡಾ ಅದೇ  ಪ್ರೀತಿಯಿಂದ ನೋಡುತ್ತಾರೆ.ಹಾಸ್ಯ, ಅದರಲ್ಲೂ  ಲಘು ಹಾಸ್ಯಕ್ಕೆ ಈ  ಚಿತ್ರರಂಗ  ಹೆಸರಾಗಿದೆ.  ಅದೂ  ಕದ್ದ ಜೋಕ್ಸ್  ಅಲ್ಲವೇ ಅಲ್ಲ. ಸುರೇಶ್ ಗೊಪಿಯ  ಪ್ರಾಮಾಣಿಕ  ಪೋಲಿಸ್ ಅಧಿಕಾರಿಯ( ಪೋಲಿಸ್  ಅಧಿಕಾರಿಯ  ಪಾತ್ರದಲ್ಲಿನಂಬರ್ ಒನ್)  ನಟನೆ   ಕಂಡವರು   ಪೋಲಿಸ್ ಅಂದರೆ ಹೀಗಿರಬೇಕು  ಅನ್ನುವ ಹಾಗೆ ಇರುತ್ತದೆ.   ಖಡಕ್ ಮತ್ತು  ದಕ್ಷತೆಗೆ  ಖ್ಯಾತರು.  ಬೇರೆ ಭಾಷೆಯಲ್ಲಿನ  ಪೋಲಿಸ್  ಪಾತ್ರಗಳನ್ನು  ವಿದೂಷಕರ  ಹಾಗೆ ತೋರಿಸಿ  ಆ ಹೆಸರಿಗೆ  ಮಸಿ ಬಳಿಯುವುದು ಕಾಣಬಹುದು.  ಬಫೂನ್ ಗಳ ಹಾಗೆ  ಅವರನ್ನು  ಎಗ್ಸಿಬಿಟ್  ಮಾಡಕೂಡದು.  ಉಟ್ಟಪಂಚೆಯ  ತುದಿ ನಸು ಎತ್ತಿ ಹಿಡಿದು  ಇವರು  ನಡೆಯುವ ಓಡುವ  ದೃಶ್ಯವೇ  ಚೆನ್ನ.    ನಾಯಕನಟನೆಂದರೆ   ಆತನಿಗೆ  ಸೂಟು,  ಬೂಟು ಎರಡರ   ಅವಶ್ಯಕತೆ ಇಲ್ಲ. ಫೈಟಿಂಗ್  ಮತ್ತು ಲವ್  ಎರಡನ್ನೂ  ಸೂಟು ಬೂಟು ಹಾಕಿಯೇ  ನಡೆಸುವುದರ  ಬದಲಿಗೆ ತಾಜಾ ಆಗಿ  ಪಂಚೆಯಲ್ಲಿ  ನಿಭಾಯಿಸುವುದೇ  ಚೆಂದ.    ಅತ್ತ್ಯುತ್ತಮ  ನಟರಾದ  ಮಮ್ಮುಟ್ಟಿ ಮಡಿಯುಟ್ಟು  ಸಂಧ್ಯಾವಂದನೆ  ಮಾಡುವುದು  ,  ಕುಂಕುಮ ಹಚ್ಚಿ  ನಟಿಸುವುದು  ಮನ ಸೂರೆಗೊಳ್ಳುತ್ತದೆ. "ಅದ್ಭುತ ದ್ವೀಪಂಗಳ್"  ಕುಳ್ಳರ  ರಾಜ್ಯದಲ್ಲಿ  ಹೋಗಿ ಸಿಕ್ಕಿಬೀಳುವ  ಕಥೆಯ  ಫಿಲಂ  ಸೂಪರ್ ಹಿಟ್  ಆಗಲು  ಜಗದಿ,  ಪೃಥ್ವಿರಾಜ್  ಅವರ  ಅದ್ಭುತ  ನಟನೆಯಷ್ಟೇ  ಮೂರು ಅಡಿ  ಉದ್ದದ  "ಉಂಡೆಪಕ್ರು"  ನಾಮದ  ನಟನ  ಅಸಾಮಾನ್ಯ  ಅಭಿನಯವೂ ಅಷ್ಟೆ ಕಾರಣ.
                               
ನಟಿಯರ  ಮಟ್ಟಿಗೆ  ಹೇಳುವುದಾದರೆ   ನವ್ಯಾ ನಾಯರ್(  ನಂದನಂ)  ತಾಜಾ  ತಾಜ  ನಟನೆ ಅದೂ  ಸೆಗಣಿ ಬಾಚುವ  ಕೆಲಸದ ಹುಡುಗಿ  ಆಕೆ ಅಲ್ಲಿ.   ಕಾವ್ಯಾ ಮಾಧವನ್  ಮೇರು ನಟಿ.     ಅರಬ್   ರಾಷ್ಟ್ರದಲ್ಲಿ  ಆಕೆ ಮನೆಗೆಲಸದಾಳಾಗಿ  ಸಹಿಸುವ ನೋವು, ಹಿಂಸೆ,  ಕಷ್ಟ  ಅದೆಷ್ಟು ನೈಜವೆಂದರೆ ಅದು ಅಭಿನಯವೆಂದು  ಕಾಣದೆ ನಿಜ  ಎನ್ನಿಸುತ್ತದೆ.  ವೆಳ್ಳಿನಕ್ಷತ್ರಂ ನ  ಬಾಲನಟಿಯ  ಅಪಾರ ಪ್ರತಿಭೆ  ಆ ಸಿನೆಮಾ ನೋಡಿಯೇ  ಅರಿಯಬೇಕು. ನಟಿ  ಶೋಭನಾರ  ಪಾತ್ರ ಮಲೆಯಾಳಂನ   ಅದ್ಭುತ   ಚಿತ್ರ "ಮಣಿಚಿತ್ರತ್ತಾಳ್'  ನಲ್ಲಿ ಕಂಡೇ   ಅರಿಯಬೇಕು.  ಆಕೆ   ನೂತನ ವಧುವಾಗಿ,  ದ್ವಿಮುಖ   ಪಾತ್ರದ ನಾಗವಲ್ಲಿಯಾಗಿ,   ನಟನೆಯ ಉತ್ತುಂಗಕ್ಕೆ   ಪ್ರೇಕ್ಷಕರನ್ನು   ಸೆಳೆದಿದ್ದಾಳೆ.   ಅಮೋಘ   ನೃತ್ಯದ ಮೂಲಕ,    ಉದ್ವಿಗ್ನ  ತರುಣಿಯಾಗಿ,   ಕೊನೆಗೆ ಕಂಡವರ ಎದೆ   ಛಿಲ್ಲೆನ್ನಿಸುವ   ''ಸಂಹಾರ"   ದಲ್ಲಿ   ಆಕೆಗೆ   ಆಕೆಯೇ  ಸಾಟಿ.  ಇಂದಿಗೆ ಕೂಡಾ  ವಾರಕ್ಕೊಮ್ಮೆ "ಮಣಿಚಿತ್ರತ್ತಾಳ್''  ಚಾನಲ್ ಗಳಲ್ಲಿ  ಬಂದಾಗ  ಮೊದಲೇ ಸಾಕಷ್ಟು  ಬಾರಿ ನೋಡಿದವರು ಕೂಡಾ  ಅದೇ ಪ್ರಥಮತ  ಅನ್ನುವ ರೀತಿ ಆರಂಭದಿಂದ  ಮುಕ್ತಾಯದ ತನಕ   ಆಸ್ವಾದಿಸುತ್ತಾರೆ.   ಮಲಯಾಳಂ  ಭಾಷೆಯಲ್ಲಿ ಧಾರಾಳವಾಗಿ  ಸಂಸ್ಕೃತ ಶಬ್ದಗಳಿರುವುದರಿಂದ  ಅನ್ಯ ಭಾಷಿಗರಿಗೆ ಅರ್ಥವಾಗುತ್ತದೆ.      ಅದು ಅಭಿನಯವಲ್ಲ;    ನೈಜತೆ,  ತಾದಾತ್ಮಕತೆ,   ಜೊತೆಗೆ      ಮಾತಿನ        ಶಬ್ದಕ್ಕೆ  ನಿಲುಕದ  ಪ್ರತಿಭೆ.   ಅಷ್ಟಕ್ಕೂ  ಅವರ ಉಡುಗೆ ತೊಡುಗೆ      ಉದ್ದನೆಯ  ನೆರಿಗೆಯ  ಲಂಗ ಮತ್ತು ಬ್ಲೌಸ್.   ಹಳ್ಳಿ ಹುಡುಗಿಯಾಗಿ  ಅವರು ಮಿಂಚುತ್ತಾರೆ.   ಅವರ ಹಾಗೆ ಖ್ಯಾತಿವೆತ್ತ  ಇತರ ನಟಿಯರಿದ್ದಾರೆ.  ಕೇರಳದ  ಸಂಪ್ರದಾಯಕ್ಕೆ  ಒತ್ತು ಕೊಡುವ  ಉಡುಪುಗಳೇ   ಹೊರತು ಮೈಕೈ  ತೋರಿಸುವ  ಅವಶ್ಯಕತೆಯೇ  ಅಲ್ಲಿ ಇಲ್ಲ.  ಹತ್ತಿ ಸೀರೆ,  ಉದ್ದದ  ಕೂದಲು,  ಕೇರಳೀಯ  ಸಂಪ್ರದಾಯದ ಹಾಗೆ  ಬೆಳಗ್ಗೆ ತಣ್ಣೀರಿನಲ್ಲಿ  ತಲೆಗೆ ಸ್ನಾನ. (  ಕೆರೆಯಲ್ಲಿ)  ಮೀಯುವ ದೃಶ್ಯಗಳು   ಅಸಭ್ಯವಾಗಿ ಕಾಣದು.  ಹಿರಿ ಮಹಿಳೆಯರ ಪಾತ್ರ  ಅದು ನಟನೆ ಎನಿಸದಷ್ಟು  ಸೊಗಸು.  ಕೃತಕತೆ  ಎಲ್ಲೂ ಕಾಣದು.   ಮಾತು,  ನಡೆ,  ದೈನಂದಿನ  ಕೆಲಸಗಳು ಎಲ್ಲಿಯೂ  ಕೃತಕತೆ ಕಾಣದು.  ಹಳ್ಳಿಯ ಚಿತ್ರಣ,  ಹಸುಕರುಗಳು,  ಆಡಂಬರ  ರಹಿತ ಮನೆಗಳು,  ಸಾಂಸಾರಿಕ ಬದುಕು,  ಭಾಷೆ, ಧೈರ್ಯ ಸ್ಥೈರ್ಯ  ಎಲ್ಲ ಸೂಪರ್.   ಅತಿಯಾದ ಆಡಂಬರ,  ಖರ್ಚು,  ಐಷಾರಾಮಿತನ ಇಲ್ಲಿ ಇಲ್ಲ. ಎಲ್ಲವೂ ಸಹಜ.    ಬಹು ಹಳೆಯ  ಹಿಟ್ ಫಿಲಂ (  ಪ್ರಶಸ್ತಿ ವಿಜೇತ)  ಚೆಮ್ಮೀನ್  ನೂರಾರು ಬಾರಿ  ನೋಡಿದ್ದರೂ  ಇಂದಿಗೆ  ಆರಂಭದಿಂದ ಮುಕ್ತಾಯದ ತನಕ ಪುನಹ  ನೋ್ಡುವವರಿದ್ದಾರೆ.  ಅದರ  ಜನಪ್ರಿಯ  ಹಾಡು " ಕಡಲಿನ  ಕರೆ  ಪೊಣೋರೆ"  ಗುನುಗುನಿಸದ  ಮನೆಗಳಿಲ್ಲ.  ಮಡಲಿನ ಮನೆ, ದೋಣಿ,  ಸಮುದ್ರ,  ಮೀನುಬಲೆ ಇವಿಷ್ಟೇ  ಇಲ್ಲಿ. ಸುಂದರ  ಪ್ರೇಮಕಥೆಯ  ದುರಂತ ಅಂತ್ಯಕ್ಕೆ ಕಣ್ಣೀರು ಮಿಡಿಯದ ಜನರಿಲ್ಲ.  ಅಷ್ಟರ ಮಟ್ಟಿಗೆ  ಜನಮನ ಗೆದ್ದ ಚೆಮ್ಮೀನ್  ಭಾಷೆ ಬರದವರಿಗೂ  ಬಲುಪ್ರಿಯ. ಇಲ್ಲ   ನಿರ್ದೇಶಕರಾಗಿ   ದಿಗ್ಗಜಗಳಿದ್ದಾರೆ.  ಅವಾರ್ಡ್ ಗಳು   ಸತತವಾಗಿ   ಬಂದು ಬೀಳುತ್ತದೆ.   ಅರ್ಹತೆಗೆ ಮನ್ನಣೆಯಿದೆ.   ಈಗಲೀಗ  ನವ ನಟ ನಟಿಯರು   ತುಂಬುತ್ತಿದ್ದಾರೆ;  ಆದರೂ  ಮೋಹನ್ ಲಾಲ್,  ಮಮ್ಮುಟ್ಟಿ,  ಸುರೇಶ್ ಗೋಪಿ, ಜಯರಾಂ, ಪೃಥ್ವಿರಾಜ   ತಮ್ಮ ಸ್ಥಾನವನ್ನು  ಹಾಗೆ ಉಳಿಸಿಕೊಂಡು  ಕೇರಳದ ಚಲನಚಿತ್ರರಂಗಕ್ಕೆ   ಅಭೂತಪೂರ್ವ  ಕೊಡುಗೆ  ನೀಡುತ್ತ  ಅಂದಿಂದ  ಇಂದಿನ ತನಕ  ಅನಭಿಷಕ್ತ  ದೊರೆಗಳಾಗಿ  ಗುಣಮಟ್ಟ,  ಸಂಸ್ಕೃತಿ,  ನೆಲದ  ಸೊಬಗು ಎಲ್ಲವನ್ನು  ಬೆಳೆಸಿಕೊಂಡು ಬಂದಿದ್ದಾರೆ. 

ಕೃತಕತೆಯ ಸೋಂಕಿಲ್ಲದೆ,   ಸುಂದರ  ಪ್ರಾಕೃತಿಕತೆಯ   ಸಂಪೂರ್ಣ  ಉಪಯೋಗ  ಮಾಡಿ,  ಸಂಪ್ರದಾಯದ  ಉಡುಗೆಗಳೇ ಪ್ರಧಾನವಾಗಿ,  ಮಡಲ ಮನೆ(  ಮಡಲು  ಅಂದರೆ ತೆಂಗಿನ  ಗರಿ)  ಮುಂಡುಧಾರಿ ಮಹಿಳೆ(  ಕೇರಳೀಯ ಮಹಿಳೆಯ  ತೊಡುಗೆ ಅಡ್ಡ ಮುಂಡು ಮತ್ತು   ಕೆನೆ ಬಣ್ಣದ  ಖಾಲಿ ಸೀರೆಗೆ  ಹಳದಿ  ಅಂಚು)   ಮಲಯಾಳಿಗರ  ನಿತ್ಯದ ಬದುಕಿನ  ಪ್ರತಿಬಿಂಬವಾದ  ಸಿನಿಮಾಗಳಲ್ಲಿ  ದೋಣಿ,  ಕಡಲು,  ಕೆರೆಯ ಸ್ನಾನ,  ಹಳ್ಳಿಯ ಬದುಕು  ಎಲ್ಲವೂ ಇದೆ.   ಅಸಭ್ಯತೆ, ಅಶ್ಲೀಲತೆಗೆ ಇಲ್ಲಿ ಜಾಗವಿಲ್ಲ.  ಲಘು ಹಾಸ್ಯಕ್ಕೆ ಪ್ರಾಧಾನ್ಯತೆ.  ನಟನಟಿಯರ ಸರಳತೆ ಗಮನಿಸತಕ್ಕದ್ದು.  ಕಡಿಮೆ  ವೆಚ್ಚದಲ್ಲಿ,  ಗುಣಮಟ್ಟಕ್ಕೆ  ಒತ್ತುಕೊಟ್ಟು  ತಯಾರಿಸುವ  ಫಿಲಂ ಗಳಿಗೆ    ಹೆಸರಾದವರು.   ಅತಿ  ಇಲ್ಲದೆ  ಅಲ್ಪವೂ ಅಲ್ಲದೆ   ಸಾಮಾನ್ಯರ  ಬದುಕನ್ನು ಬಿಂಬಿಸುವ  ಮಲಯಾಳಂ ಸಿನೆಮಾಗಳು  ಗಡಿನಾಡಿನ  ಕನ್ನಡಿಗರಿಗೆ  ಅಚ್ಚುಮೆಚ್ಚಿನದು.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x