“ಬಿಫೋರ್” ಟ್ರೈಲಾಜಿ: ವಾಸುಕಿ ರಾಘವನ್ ಅಂಕಣ


“ಫ್ರಾನ್ಚೈಸೀ” ಚಿತ್ರಗಳಲ್ಲಿ, ಮೊದಲ ಚಿತ್ರದಷ್ಟೇ ಉತ್ತಮವಾಗಿ ನಂತರದ ಚಿತ್ರಗಳು ಬರುವುದು ಬಹಳ ಅಪರೂಪ. ಅದಕ್ಕೆ ಕಾರಣ ಸೀಕ್ವೆಲ್ಲುಗಳನ್ನು ಮಾಡುವ ಹಿಂದಿರುವ ಸಾಮಾನ್ಯ ಮನಸ್ಥಿತಿ – ಮೊದಲ ಚಿತ್ರ ಗೆದ್ದಿತ್ತು, ಆ ಗೆಲುವಿನ ಬೆನ್ನೇರಿ ಇನ್ನೊಂದಷ್ಟು ದುಡ್ಡು ಮಾಡಿಕೊಳ್ಳೋಣ ಅನ್ನುವುದು. ಅದಕ್ಕೆ ಅಪವಾದ ರಿಚರ್ಡ್ ಲಿಂಕ್ಲೇಟರ್ ನಿರ್ದೇಶನದ “ಬಿಫೋರ್” ಟ್ರೈಲಾಜಿ.

1995ರಲ್ಲಿ ಬಂದ “ಬಿಫೋರ್ ಸನ್ರೈಸ್” ಸಾರ್ವಕಾಲಿಕ ಅತ್ಯುತ್ತಮ ರೋಮ್ಯಾನ್ಸ್ ಚಿತ್ರಗಳಲ್ಲಿ ಒಂದು. ಯೂರೋಪಿನ ಟ್ರೈನಿನಲ್ಲಿ  ಪ್ರಯಾಣ ಮಾಡುವಾಗ ಅಮೆರಿಕಾದ ಯಾತ್ರಿಕ ಜೆಸ್ಸಿ ಮತ್ತು ಫ್ರೆಂಚ್ ಯುವತಿ ಸೆಲೀನ್ ಅವರ ಭೇಟಿಯಾಗುತ್ತದೆ. ಮಾತನಾಡುತ್ತಾ ಆಡುತ್ತಾ ಸಲುಗೆ ಬೆಳೆಯುತ್ತದೆ. ಜೆಸ್ಸಿ ತನ್ನ ಸ್ಟಾಪ್ ಬಂದಾಗ ಸೇಲೀನಿಗೆ, ನೀನೂ ಇಲ್ಲೇ ಇಳಿದುಕೊಂಡು ಬಿಡು, ಒಂದು ದಿನದ ಮಟ್ಟಿಗೆ ನಾವಿಬ್ಬರೂ ಸಮಯ ಕಳೆಯೋಣ ಅಂತ ಅವಳ ಮನವೊಲಿಸುತ್ತಾನೆ. ಒಂದಿಡೀ ದಿನ ಇಬ್ಬರೂ ವಿಯೆನ್ನಾ ತುಂಬಾ ಅಡ್ಡಾಡುತ್ತ, ಮಾತನಾಡುತ್ತಾ ಹೋಗುತ್ತಾರೆ. ಜೀವನ, ಪ್ರೀತಿ, ಸಂಬಂಧಗಳು, ನಂಬಿಕೆಗಳು ಹೀಗೆ ಎಷ್ಟೋ ವಿಷಯಗಳ ಬಗ್ಗೆ ಚರ್ಚಿಸುತ್ತಾ ಹೋಗುವ ಇವರಿಗೆ ಒಂದಿಡೀ ದಿನ ಎಷ್ಟು ಬೇಗ ಕಳೆಯಿತೆಂದೇ ಗೊತ್ತಾಗುವುದಿಲ್ಲ. ವಿದಾಯದ ಹೊತ್ತು ಬಂದಾಗ ಒಬ್ಬರನ್ನೊಬ್ಬರು ಬಿಟ್ಟಿರಲು ಇಬ್ಬರಿಗೂ ಮನಸ್ಸಿರುವುದಿಲ್ಲ. ಆದರೂ ತಮ್ಮ ತಮ್ಮ ಅಡ್ರೆಸ್ ಮತ್ತು ಫೋನ್ ನಂಬರ್ ಹಂಚಿಕೊಳ್ಳುವುದು ಬೇಡ, ಈ ಒಂದು ಮ್ಯಾಜಿಕಲ್ ದಿನ ನೆನಪಿನಲ್ಲಿ ಹಾಗೇ ಉಳಿಯಲಿ; ಇನ್ನಾರು ತಿಂಗಳಾದ ಮೇಲೆ ಇಬ್ಬರಿಗೂ ಇಷ್ಟೇ ಪ್ರೀತಿ ಆಕರ್ಷಣೆ ಉಳಿದಿದ್ದರೆ, ಇದೇ ಜಾಗದಲ್ಲಿ ಸಿಗೋಣ ಅಂತ ಹೇಳಿ ತಮ್ಮ ತಮ್ಮ ದಾರಿ ಹಿಡಿಯುತ್ತಾರೆ.

2004ರಲ್ಲಿ ಬಂದ “ಬಿಫೋರ್ ಸನ್ಸೆಟ್”, ಜೆಸ್ಸಿ ಮತ್ತು ಸೆಲೀನ್ ಒಂಭತ್ತು ವರ್ಷಗಳಾದ ಮೇಲೆ ಭೇಟಿಯಾಗುವುದರ ಕಥೆಯನ್ನು ಹೊಂದಿದೆ. ಜೆಸ್ಸಿ ಈಗ ಒಬ್ಬ ಪ್ರಖ್ಯಾತ ಬರಹಗಾರ. ಸೆಲೀನ್ ಜೊತೆ ಕಳೆದ ಆ ಒಂದು ದಿನದ ಅನುಭವವನ್ನು ಆಧರಿಸಿ ಒಂದು ಪುಸ್ತಕ ಬರೆದಿದ್ದಾನೆ. ಬಹಳ ಖ್ಯಾತಿ ಪಡೆದಿರುವ ಆ ಪುಸ್ತಕದ ಪ್ರಮೋಷನ್ ಟೂರಿಗೆ ಜೆಸ್ಸಿ ಪ್ಯಾರಿಸ್ಸಿಗೆ ಹೋಗಿದ್ದಾಗ ಅಚಾನಕ್ಕಾಗಿ ಸೆಲೀನ್ ಸಿಗುತ್ತಾಳೆ. ಒಂಭತ್ತು ವರ್ಷಗಳ ನಂತರ! ಜೆಸ್ಸಿಯ ವಿಮಾನ ಇನ್ನೆರಡು ಗಂಟೆಗಳಲ್ಲಿ ಹೊರಡುವುದಿದೆ. ಅವನ ಬಳಿ ಇರುವ ಆ ಅಲ್ಪಾವಧಿಯನ್ನು ಸೆಲೀನ್ ಜೊತೆ ಕಳೆಯಲು ನಿರ್ಧರಿಸುತ್ತಾನೆ. ಪ್ಯಾರಿಸ್ಸಿನ ರಸ್ತೆಗಳನ್ನು ಸುತ್ತುತ್ತಾ, ಹರಟುತ್ತಾ ಹೋಗುತ್ತಾರೆ. ಜೆಸ್ಸಿಗೀಗ ಮದುವೆಯಾಗಿದೆ, ಮಗನ ಮೇಲೆ ತುಂಬಾ ಅಕ್ಕರೆ ಇದ್ದರೂ ಹೆಂಡತಿಯೊಂದಿಗೆ ಅನ್ಯೋನ್ಯತೆ ಇಲ್ಲ. ಸೆಲೀನ್ ಅಲ್ಲಿಯವರೆಗೂ ಯಾವುದೇ ಸಂಬಂಧಗಳಲ್ಲಿ ಪ್ರೀತಿಯನ್ನು ಕಂಡುಕೊಳ್ಳಲು ಆಗಿರುವುದಿಲ್ಲ. ತಾವಿಬ್ಬರೂ ಆರು ತಿಂಗಳಾದ ಮೇಲೆ ಯಾಕೆ ಸಿಗಲಿಲ್ಲ, ಸಿಕ್ಕಿದ್ದರೆ ತಮ್ಮ ಜೀವನ ಯಾವ ರೀತಿ ಬದಲಾಗಿರುತ್ತಿತ್ತು ಅಂತ ಯೋಚಿಸುತ್ತಾರೆ. ವಿಮಾನ ಹೊರಡುವ ವೇಳೆ ಹತ್ತಿರವಾದಂತೆ, ಜೆಸ್ಸಿ ತನ್ನ ಜೀವನದ ಅತಿಮುಖ್ಯ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.

2013ರಲ್ಲಿ ಬಂದ “ಬಿಫೋರ್ ಮಿಡ್ನೈಟ್” ಚಿತ್ರದಲ್ಲಿ ಜೆಸ್ಸಿ ಮತ್ತು ಸೆಲೀನ್ ಮದುವೆಯಾಗಿ ಹಲವಾರು ವರ್ಷಗಳು ಕಳೆದಿವೆ. ಇದೀಗ ಗ್ರೀಸಿನ ಒಂದು ಚಿಕ್ಕ ಊರಿಗೆ ವೆಕೇಷನ್ ಮೇಲೆ ಬಂದಿರುತ್ತಾರೆ. ಇವರಿಬ್ಬರಿಗೆ ಮುದ್ದಾದ ಅವಳಿ ಹೆಣ್ಣು ಮಕ್ಕಳಿದ್ದಾರೆ. ಜೆಸ್ಸಿ ತನ್ನ ಮೊದಲನೇ ಹೆಂಡತಿಯಿಂದ ವಿಚ್ಛೇದಿತನಾದ ಮೇಲೆ ಅವನ ಮಗನಿಂದಲೂ ದೂರವಾಗಬೇಕಾದ ಪರಿಸ್ಥಿತಿ ಬಂದೊದಗಿರುತ್ತದೆ. ಸೆಲೀನ್ ತನ್ನ ಕೆರಿಯರ್ ಅನ್ನು ಬದಿಗಿಟ್ಟು ಕುಟುಂಬದ ಜವಾಬ್ದಾರಿಯನ್ನು ಹೊತ್ತಿರುತ್ತಾಳೆ. ಹೊರನೋಟಕ್ಕೆ ಆದರ್ಶ ದಂಪತಿಗಳಂತೆ ಕಂಡರೂ, ಇಬ್ಬರಿಗೂ ತಮ್ಮದೇ ಆದ ನೋವುಗಳು, ನಿರಾಶೆಗಳು ಇವೆ. ಹಾಗಂತ ಪ್ರೀತಿ ಕಮ್ಮಿಯಾಗಿಲ್ಲ, ಆದರೆ ಜೀವನದ ವಾಸ್ತವಗಳು ಅವರ ಸಂಬಂಧಕ್ಕೆ ಎಡೆಬಿಡದೆ ಸವಾಲೊಡ್ಡುತ್ತಿರುತ್ತವೆ. ಚಿತ್ರದ ಕಡೆಯ ಅರ್ಧ ಗಂಟೆ ಕೇವಲ ಒಂದು ಸೀನಷ್ಟೇ! ಒಂದು ಸಣ್ಣ ಮಾತಿನಿಂದ ಶುರುವಾಗುವ ಭಿನ್ನಾಭಿಪ್ರಾಯ, ದೊಡ್ಡ ಜಗಳದಲ್ಲಿ ಮುಗಿಯುತ್ತದೆ. ಅವರವರ ಫ್ರಸ್ಟ್ರೇಶನ್ನುಗಳು, ಆರದ ಹಳೆಯ ಗಾಯಗಳು, ಗಿಲ್ಟುಗಳೆಲ್ಲಾ ಹೊರಬರುತ್ತವೆ.

ಮೂರೂ ಚಿತ್ರಗಳಲ್ಲಿ “ಪ್ಲಾಟ್” ಬಹಳ ಸಣ್ಣದ್ದು. ಕೇವಲ ಎರಡೇ ಪಾತ್ರಗಳ ಮೇಲೆ ಮೂರು ಚಿತ್ರಗಳೂ ನಿಂತಿವೆ. ಸಿನಿಮಾ ದೃಶ್ಯ ಮಾಧ್ಯಮ, ಮಾತಿನ ಮೇಲೆ ಚಿತ್ರ ಅವಲಂಬಿತವಾಗಿರೋದು ಒಳ್ಳೆಯದಲ್ಲ ಅನ್ನುವುದು ಸಾಮಾನ್ಯವಾಗಿ ಒಪ್ಪುವ ವಿಚಾರ. ಆದರೆ ಇಲ್ಲಿ ಇಡೀ ಚಿತ್ರಗಳ ಜೀವಾಳ ಸಂಭಾಷಣೆಗಳು. ಅದೇ ಚಿತ್ರದ ಶಕ್ತಿ ಕೂಡ. ಇಲ್ಲಿ ಸಂಭಾಷಣೆ ಕೇವಲ ರಂಜಿಸುವುದಕ್ಕಷ್ಟೇ ಅಲ್ಲದೆ, ಪಾತ್ರಗಳ ಬಗ್ಗೆ ಆಳವಾದ ಪರಿಚಯ ಮಾಡಿಸಿಕೊಡುತ್ತದೆ. ಎಷ್ಟರ ಮಟ್ಟಿಗೆ ಅಂದರೆ, ಜೆಸ್ಸಿ ಮತ್ತು ಸೆಲೀನ್ ನಮ್ಮ ಬಹಳ ವರ್ಷಗಳ ಗೆಳೆಯರೆನೋ ಅನ್ನಿಸುತ್ತದೆ.

ಜೆಸ್ಸಿ ಪಾತ್ರದಲ್ಲಿ ಎಥನ್ ಹಾಕ್ ಮತ್ತು ಸೆಲೀನ್ ಪಾತ್ರದಲ್ಲಿ ಜೂಲಿ ಡೆಲ್ಪಿ ಇವರನ್ನು ಬಿಟ್ಟು ಇನ್ಯಾರನ್ನೂ ಈ ಪಾತ್ರಗಳಲ್ಲಿ ಕಲ್ಪಿಸಿಕೊಳ್ಳಲೂ ನನಗೆ ಸಾಧ್ಯವಿಲ್ಲ. ಮೊದಲ ಚಿತ್ರಕ್ಕೆ ಲಿಂಕ್ಲೇಟರ್ ಚಿತ್ರಕತೆ ಬರೆದಿದ್ದರೆ, ಮುಂದಿನ ಎರಡು ಚಿತ್ರಗಳ ಚಿತ್ರಕತೆ, ಸಂಭಾಷಣೆ, ಪಾತ್ರಗಳ ಬೆಳವಣಿಗೆ ಇದರಲ್ಲಿ ಎಥನ್ ಹಾಕ್ ಮತ್ತು ಜೂಲಿ ಡೆಲ್ಪಿ ಅವರ ಕೊಡುಗೆಯೂ ಇದೆ. ಮೊದಲ ಚಿತ್ರದ ವೇಳೆಯಲ್ಲಿ ಇಪ್ಪತ್ತರ ಆಸುಪಾಸಿನಲ್ಲಿದ್ದ ಇಬ್ಬರಿಗೂ ಮೂರನೆಯ ಚಿತ್ರದ ವೇಳೆಗೆ ನಲವತ್ತರ ವಯಸ್ಸು. ಅವರ ಪಾತ್ರಗಳಂತೆ!

ಮೂರು ಚಿತ್ರಗಳೂ “ಎರಡು ಪಾತ್ರಗಳ ಮಾತುಕತೆ” ಅನ್ನುವ ಕಾಮನ್ ಥೀಮ್ ಮೇಲೆ ಇದ್ದರೂ, ಚಿತ್ರದ ಟೋನಿನಲ್ಲಿ ಭಿನ್ನತೆ ಇದೆ. ಮೊದಲನೆಯ ಚಿತ್ರ ಪೂರ್ಣಪ್ರಮಾಣದ ರೋಮ್ಯಾನ್ಸ್. ಹದಿಹರೆಯದ ಹುಡುಗಾಟಿಕೆ, ಆದರ್ಶಗಳು, ಆಶಾವಾದ ಎದ್ದು ಕಾಣುತ್ತದೆ, ಇದರಲ್ಲಿ ಒಂದು ಮುಕ್ತ ನಿರ್ಭಿಡತೆಯನ್ನು ನೋಡಬಹುದು. ಎರಡನೆಯ ಚಿತ್ರದ ಹೊತ್ತಿಗೆ ಹಳೆಯ ಸಂಬಂಧಗಳಲ್ಲಿನ ನಿರಾಶೆ, ತಲುಪಲಾಗದ ಗುರಿಗಳು, ಅದರಿಂದ ಉಂಟಾಗುವ ಹತಾಶೆಗಳು ಚಿತ್ರಕ್ಕೆ ಸ್ವಲ್ಪಮಟ್ಟಿಗೆ ನಿರಾಶಾಭಾವ, ಪ್ರಾಕ್ಟಿಕಲ್ ಆಯಾಮ ಒದಗಿಸಿಕೊಟ್ಟಿವೆ. ಮೂರನೆಯ ಚಿತ್ರದಲ್ಲಿ, ಹೊರನೋಟಕ್ಕೆ ಎಲ್ಲಾ ಸರಿಯಿದೆ ಅನ್ನುವ “ಸೆಟ್ಟಲ್ಡ್” ಫೀಲಿಂಗ್  ಇದ್ದರೂ, ಅದರ ಒಳಪದರಗಳಲ್ಲಿ ಇರುವ ಭಾವನಾತ್ಮಕ ಹೊರೆಗಳು ಚಿತ್ರವನ್ನು ವಾಸ್ತವಿಕತೆಗೆ ತುಂಬಾ ಹತ್ತಿರವಾಗಿಸಿವೆ.

ಹೀಗೆ ಮುಂದೆಯೂ ಒಂಭತ್ತು ವರ್ಷಗಳಾದ ಮೇಲೆ ಇನ್ನೊಂದು, ಮತ್ತೊಂದು ಚಿತ್ರಗಳು ಬರುತ್ತಲಿರಲಿ. ನನಗೆ ಜೆಸ್ಸಿ ಮತ್ತು ಸೆಲೀನ್ ತಮ್ಮ ಐವತ್ತರ, ಅರವತ್ತರ ವಯಸ್ಸಿನಲ್ಲಿ ಏನಾಗಿರುತ್ತಾರೆ ಅನ್ನುವ ಕುತೂಹಲ ಇದೆ. ಇವರಿಬ್ಬರ “ಮ್ಯಾಜಿಕ್” ಮತ್ತು “ಮ್ಯಾಡ್ನೆಸ್ಸ್” ಎರಡರ ನಶೆಯಿಂದಲೂ ಹೊರಬರುವುದು ಅಸಾಧ್ಯ!

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x