ಸಸ್ಯಾಹಾರ ವರ್ಸಸ್ ಮಾಂಸಾಹಾರ: ಅಖಿಲೇಶ್ ಚಿಪ್ಪಳಿ ಅಂಕಣ

 

ಮೊನ್ನೆ ಪರಿಚಿತರೊಬ್ಬರು ಸಿಕ್ಕಿದ್ದರು. ಮಾತು ದೇಶ-ವಿದೇಶಗಳನ್ನು ಸುತ್ತಿ, ಕಡೆಗೆ ನಾವು ಸೇವಿಸುವ ಆಹಾರದ ಬಗ್ಗೆ ಹೊರಳಿತು. ತಟ್ಟನೆ ಆ ಪರಿಚಿತರು ಪ್ರತಿಕ್ರಯಿಸಿದರು. ಮಾರಾಯ ಈಗಿನ ಪೀಡೆನಾಶಕದ ಹಾವಳಿಯಲ್ಲಿ ತರಕಾರಿಗಿಂತ ಕೋಳಿ ತಿನ್ನೋದೆ ಸ್ವಲ್ಪ ಮಟ್ಟಿಗೆ ಒಳ್ಳೆದು ಅಂತ ಕಾಣ್ತದೆ ಎಂದರು. ಯಾಕೆ ಎಂದೆ. ನೋಡು ತರಕಾರಿಗಳಿಗೆ ಇಂತದೇ ವಿಷ ಹಾಕ್ತಾರೆ ಅಂತ ಹೇಳೊಕಾಗಲ್ಲ. ಪಾದರಸದಿಂದ ಹಿಡಿದು ಎಂಡೋಸಲ್ಪಾನ್‍ವರೆಗೂ ಎಲ್ಲಾ ತರಹದ ಔಷಧ ಹೊಡಿತಾರೆ. ಯಾವುದೇ ನಿಯಮಗಳನ್ನೂ ಪಾಲಿಸೋದಿಲ್ಲ. ಕೋಳಿಯಾದ್ರೆ ಜೀವಂತ ಪ್ರಾಣಿ ಹಾಗಾಗಿ ಅದಕ್ಕೆ ಯದ್ವಾತದ್ವಾ ವಿಷ ಹಾಕೋಕೆ ಬರೋಲ್ಲ. ಹಾಗಾಗಿ ಕೋಳಿ ತಿನ್ನದೇ ಸೇಫ್ ಎಂದರು. ಈ ವಾದವನ್ನು ತಳ್ಳಿ ಹಾಕುವುದು ಕಷ್ಟ ಎನಿಸಿತು. ಆದರೂ ಆಹಾರದಲ್ಲಿ ಯಾವುದು ಒಳ್ಳೆಯದು? ಸಸ್ಯಹಾರವೋ ಅಥವಾ ಮಾಂಸಹಾರವೋ? ಹೀಗೆ ವಿಚಾರ ಮಾಡುತ್ತಿರುವಾಗ ಹಿಂದೆಲ್ಲಾ ಓದಿದ್ದು, ಕಡೆದಿದ್ದು, ಕೇಳಿದ್ದು ನೆನಪಿಗೆ ಬಂದವು.

ಮೂಲಭೂತವಾಗಿ ನಮ್ಮ ಪಠ್ಯಗಳಲ್ಲಿ ಆದಿಮಾನವನ (ಪೂರ್ವಶಿಲಾಯುಗ) ಇತಿಹಾಸವನ್ನು ಹೇಳುವಾಗ, ಗುಹೆಯಲ್ಲಿ ವಾಸಿಸುತ್ತಿದ್ದ. ಪ್ರಾಣಿಗಳನ್ನು ಭೇಟೆಯಾಡಿ, ಹಸಿ ಮಾಂಸವನ್ನು ತಿನ್ನುತ್ತಿದ್ದ, ಆಮೇಲೆ ಬೆಂಕಿಯನ್ನು ಕಂಡುಹಿಡಿದ ಹೀಗೆ ಕತೆ ಸಾಗುತ್ತದೆ. ಆದರೆ ಇತ್ತೀಚಿನ ಒಂದು ಸಂಶೋಧನೆ ಇದನ್ನೆಲ್ಲಾ ಅಲ್ಲಗಳೆಯುವಂತಹ ಫಲಿತಾಂಶವನ್ನು ನೀಡಿದೆ. ಅಂದರೆ ನಮ್ಮ ಪೂರ್ವಿಕರು ಸಸ್ಯಹಾರಿಗಳಾಗಿದ್ದರು ಎಂದು. ಪೂರಕವಾಗಿ ಒಂದಿಷ್ಟು ಪುರಾವೆಗಳನ್ನು ನೀಡುತ್ತಾರೆ. ಉದಾಹರಣೆಗೆ ಮಾಂಸಹಾರಿ ಪ್ರಾಣಿಗಳ ದೈಹಿಕ ರಚನೆ ಮತ್ತು ಸಸ್ಯಹಾರಿ ಪ್ರಾಣಿಗಳ ದೈಹಿಕ ರಚನೆ. ಮಾಂಸಹಾರಿ ಪ್ರಾಣಿಗಳ ಉದರ ದೊಡ್ಡದಾಗಿದ್ದು, ಮೆದುವಾಗಿರುತ್ತದೆ ಆದರೆ ಸಸ್ಯಹಾರಿ ಪ್ರಾಣಿಗಳ ಉದರ ದೊಡ್ಡದಾಗಿದ್ದರೂ, ಗಟ್ಟಿತನದಿಂದ ಕೂಡಿರುತ್ತದೆ. ಮೆಲಕು ಹಾಕುವ ಪ್ರಾಣಿಗಳಾದ ದನ-ಎಮ್ಮೆ ಇತರೆ ಪ್ರಾಣಿಗಳ ಜಠರದಲ್ಲಿ ಸಸ್ಯಜನ್ಯ ಆಹಾರವನ್ನು ಕರಗಿಸಲು ಬೇಕಾದ ಹುಳಿ ಆಮ್ಲಗಳಿರುತ್ತವೆ. ಅದೇ ಮಾಂಸಾಹಾರಿ ಪ್ರಾಣಿಗಳ ಪಚನಕ್ರಿಯೆ ಜಠರದಲ್ಲೇ ಆಗಬೇಕು. ಮೂಲತ: ಮಾಂಸಾಹಾರಿಗಳಲ್ಲದ ಪ್ರಾಣಿ ಅಂದರೆ ಮನುಷ್ಯರಲ್ಲಿ ಈ ಕ್ರಿಯೆ ದೇಹಕ್ಕೆ ತೊಂದರೆಯನ್ನುಂಟು ಮಾಡುತ್ತದೆ.

ಲಾಗಾಯ್ತಿನಿಂದ ಮನುಷ್ಯ ಸಸ್ಯಾಹಾರವನ್ನೇ ಮಾಡುತ್ತಿದ್ದ ಎಂಬುದಕ್ಕೆ ಸಾಪೇಕ್ಷದಡಿಯಲ್ಲಿ ನೋಡುವ ಪ್ರಯತ್ನವನ್ನು ಸಸ್ಯಾಹಾರ ಪ್ರತಿಪಾಧಕರು ಮಾಡುತ್ತಾರೆ. ದನ-ಎಮ್ಮೆ-ಕುದುರೆ ಇತ್ಯಾದಿಗಳು ಸಂಪೂರ್ಣ ಸಸ್ಯಾಹಾರವನ್ನೇ ಸೇವಿಸುತ್ತವೆ ಹಾಗೂ ಇವುಗಳಲ್ಲಿ ಪ್ರಕೃತಿಯೊಂದು ಹೋಲಿಕೆಯನ್ನು ಇಟ್ಟಿದೆ. ಅದೇನೆಂದರೆ, ಈ ಪ್ರಾಣಿಗಳು ನೀರು ಕುಡಿಯುವಾಗ ನೀರನ್ನು ಹೀರುತ್ತವೆ. ಅದೇ ತರಹ ಮಾಂಸಾಹಾರಿ ಪ್ರಾಣಿಗಳು ಅಂದರೆ ಹುಲಿ-ಸಿಂಹ-ಚಿರತೆಗಳು ನೀರನ್ನು ನಾಲಿಗೆಯಿಂದ ನೆಕ್ಕಿ ಕುಡಿಯುತ್ತವೆ. ಮನುಷ್ಯನೂ ಕೂಡ ನೀರನ್ನು ಹೀರಿಯೇ ಕುಡಿಯುವುದರಿಂದ ಈತ ಮೂಲಭೂತವಾಗಿ ಸಸ್ಯಾಹಾರಿಯೇ ಆಗಿರಬೇಕು ಎಂಬುದು ಇವರ ವಾದ. ಜೊತೆಗೆ ಸಸ್ಯಾಹಾರಿ ಪ್ರಾಣಿಗಳ ಕರುಳು ಮಾಂಸಾಹಾರಿ ಪ್ರಾಣಿಗಳ ಕರುಳಿಗಿಂತ ದೊಡ್ಡದಾಗಿರುತ್ತದೆ. ಇದಲ್ಲದೆ ವಿಕಾಸವಾದದ ಸಿದ್ಧಾಂತದಂತೆ, ನಮ್ಮ ಪೂರ್ವಿಕರೆಂದರೆ, ಮಂಗ-ಚಿಂಪಾಂಜಿ-ಗೋರಿಲ್ಲಾಗಳು. ವಿಶೇಷವನ್ನು ಹೊರತುಪಡಿಸಿದರೆ, ಇವೆಲ್ಲಾ ಪ್ರಾಣಿಗಳು ಹೆಚ್ಚಿನದಾಗಿ ಸಸ್ಯಹಾರಿಗಳೇ ಆಗಿವೆ. ಅಪರೂಪಕ್ಕೊಮ್ಮೆ ಈ ಪ್ರಭೇಧಗಳಲ್ಲಿ ಮಾಂಸಾಹಾರಿಗಳು ಸಿಗಬಹುದಾದರೂ, ಅದೊಂದು ವಿರಳ ಪ್ರಕ್ರಿಯೇ ಆಗಿದೆ ಎಂಬುದು ಸಸ್ಯಾಹಾರ ಪ್ರತಿಪಾಧಕರ ಮುಂದುವರೆದ ವಾದವಾಗಿದೆ.

ನಾಗರೀಕತೆ ಅಭಿವೃದ್ಧಿಗೊಂಡು, ಮನುಷ್ಯ ತಾರ್ಕಿಕವಾಗಿ ಚಿಂತನೆ ಮಾಡುತ್ತಾ, ಎಲ್ಲವನ್ನೂ ವೈಜ್ಞಾನಿಕ ದೃಷ್ಟಿಯಿಂದ ನೋಡಲು ಕಲಿತ ನಂತರದಲ್ಲಿ ಆಹಾರವನ್ನೂ ವಿಶ್ಲೇಷಿಸಿ ನೋಡುವ ಪರಿಪಾಠ ಶುರುವಾಯಿತು. ವೈದ್ಯಕೀಯ ಲೋಕದ ತಜ್ಞರು ಕೂಡ ಮಾಂಸಾಹಾರದಲ್ಲಿ ವಿಫುಲವಾದ ಪ್ರೋಟಿನ್ ಅಂಶವಿದೆಯಾದ್ದರಿಂದ, ಬಲಿಷ್ಟವಾದ ಆರೋಗ್ಯದ ದೃಷ್ಟಿಯಿಂದ ಮಾಂಸಾಹಾರ ಮಾನವನಿಗೆ ಯೋಗ್ಯ ಎಂಬ ಮಾತನಾಡುತ್ತಾರೆ. ಜೊತೆಗೆ ಪೂರ್ಣಪ್ರಮಾಣದಲ್ಲಿ ಮಾಂಸಾಹಾರ ಸೇವಿಸುವುದು ಒಳ್ಳೆಯದಲ್ಲ ಎಂಬ ಮಾತನ್ನೂ ಸೇರಿಸುತ್ತಾರೆ. ಇವರ ಪ್ರಕಾರ ನಾವು ತಿನ್ನುವ ಆಹಾರದಲ್ಲಿ 10% ಮಾಂಸವಿದ್ದಲ್ಲಿ ಅದು ಅರೋಗ್ಯಕ್ಕೆ ಒಳ್ಳೆಯದು ಎಂಬ ಅಭಿಪ್ರಾಯವಿದೆ. ಈ ವಿಷಯದ ಮೇಲೇ ಬೇಕಾದಷ್ಟು ಸಂಶೋಧನೆಗಳು ನಡೆದಿವೆಯಾದರೂ ಯಾರೂ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿದ್ದಾರೆ. ಬ್ರಿಟನ್‍ನಲ್ಲಿ ಮಾನವರ ಮೇಲೇ ನಡೆಸಿದ ಪ್ರಯೋಗದಲ್ಲಿ ಕಂಡುಬಂದ ಅಂಶಗಳೆಂದರೆ, ಮಾಂಸಾಹಾರ ಮಾಡುವ ವ್ಯಕ್ತಿಯ ಸರಾಸರಿ ಆಯುಷ್ಯ ಕಡಿಮೆಯಾಗುತ್ತದೆ. ಇವರಿಗೆ ಹೃದಯ ಸಂಬಂಧಿ ರೋಗಗಲು ಹೆಚ್ಚು ಭಾದಿಸುತ್ತವೆ. ಈ ವಿಚಾರದಲ್ಲಿ ಸಸ್ಯಾಹಾರಿಗಳಿಗೆ ಹೃದಯ ತೊಂದರೆಗಳು ಹೋಲಿಸಿದಲ್ಲಿ ಮಾಂಸಾಹಾರಿಗಳಿಗಿಂತ ಕಡಿಮೆ. ಇದೇ ಪ್ರಯೋಗದಲ್ಲಿ  6000 ಜನರಿಗೆ ಸಸ್ಯಹಾರವನ್ನು ಮತ್ತು 6000 ಜನರಿಗೆ ಮಾಂಸಾಹಾರವನ್ನು ಸತತವಾಗಿ 12 ವರ್ಷಗಳವರೆಗೆ ನೀಡಲಾಯಿತು. ನಂತರದ ಫಲಿತಾಂಶ 40% ಸಸ್ಯಾಹಾರಿಗಳು ಕ್ಯಾನ್ಸರ್ ರೋಗ ಬರುವ ಸಾಧ್ಯತೆಯಿಂದ ದೂರವುಳಿದಿದ್ದರು ಮತ್ತು 20%ನಷ್ಟು ಇತರೆ ರೋಗಗಳಿಂದ ಮುಕ್ತರಾಗಿದ್ದರು.

ಹಾಗಾದರೆ ಸಸ್ಯಾಹಾರಿಗಳೆಂದು ಯಾರನ್ನು ಕರೆಯಬಹುದು ಎಂಬ ಪ್ರಶ್ನೆ ಸಹಜವಾಗಿ ಏಳುತ್ತದೆ. ಬರೀ ಮೊಟ್ಟೆಯನ್ನು ಸೇವಿಸುವವರನ್ನೂ ಪಾಶ್ರ್ವ ಸಸ್ಯಾಹಾರಿಗಳು ಎನ್ನುವರು. ಇವರಲ್ಲಿ ಕೆಲವರು ಹಾಲು ಮತ್ತು ಮೊಟ್ಟೆಯನ್ನೂ ಉಪಯೋಗಿಸುತ್ತಾರೆ ಇವರನ್ನೂ ಮೇಲಿನ ಪಾಶ್ರ್ವ ಸಸ್ಯಾಹಾರಿಗಳು ಎಂದೇ ಕರೆಯುತ್ತಾರೆ. ಬರೀ ಹೈನೋತ್ಪನ್ನಗಳನ್ನು ಮಾತ್ರ ಸೇವಿಸುವವರನ್ನು ಇದೇ ಕೆಟಗರಿಗೆ ಸೇರಿಸಬಹುದು. ಪಕ್ಕಾ ಸಸ್ಯಾಹಾರಿಯೆಂದರೆ, ಬರೀ ಸಸ್ಯಗಳ ಉತ್ಪನ್ನಗಳನ್ನು ಮಾತ್ರ ಸೇವಿಸುವವರು. ಬರೀ ಮೀನು ಮತ್ತು ಪೌಲ್ಟ್ರೀ ಆಹಾರ (ಚಿಕನ್) ಸೇವಿಸುವವರನ್ನು ಸೆಮಿ-ಮಾಂಸಾಹಾರಿಗಳೆನ್ನುತ್ತಾರೆ.

ನಮ್ಮ ಬಾಯಿ, ಹಲ್ಲು ಹಾಗೂ ಪಚನಾಂಗಗಳು ಮಾಂಸಾಹಾರಕ್ಕೆ ಹೇಳಿ ಮಾಡಿಸಿದ್ದಲ್ಲ. ಮಾಂಸಾಹಾರವು ಬೇಗ ಪಚನಗೊಳ್ಳುವುದಿಲ್ಲವಾದ್ದರಿಂದ ಉದರ ಸಂಬಂಧಿ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ ಅಂದರೆ ಗ್ಯಾಸ್ಟ್ರಿಕ್ ಸಮಸ್ಯೆಗಳು. ಆಹಾರ ಪದ್ದತಿಯಲ್ಲಿ ಯಾವ ಆಹಾರ ಶ್ರೇಷ್ಟ ಎಂಬುದಿನ್ನೂ ಒಮ್ಮತದ ತೀರ್ಮಾನಕ್ಕೆ ಬರುವಲ್ಲಿ ವಿಫಲವಾಗಿದ್ದರಿಂದ, ಕಡಿಮೆ ಅಪಾಯವುಳ್ಳ ಸಸ್ಯಾಹಾರವೇ ಶ್ರೇಷ್ಟವಾದದು ಹಾಗೂ ಸಸ್ಯಾಹಾರದಲ್ಲೂ ಮಾಂಸಗಳಲ್ಲಿರುವಷ್ಟೇ ಪ್ರೋಟಿನ್ ಅಂಶಗಳು ವಿಫುಲವಾಗಿ ಲಭ್ಯ ಎಂಬ ವಾದವೂ ಇದೆ. ಗೋಧಿ, ದ್ವಿದಳ ಧಾನ್ಯಗಳು, ಹಸಿರುಸೊಪ್ಪುಗಳು, ನೆಲ್ಲಿ, ಬಾಳೆಹಣ್ಣು, ಡ್ರೈ ಫ್ರೂಟ್ಸ್ ಇತ್ಯಾದಿಗಳನ್ನು ಸಮತೋಲನದಲ್ಲಿ ಸೇವಿಸಿದಾಗ ಮಾಂಸದಲ್ಲಿರುವಷ್ಟೆ ಪ್ರಮಾಣದ ಜೀವಸತ್ವಗಳು ಲಭ್ಯವಿರುತ್ತದೆ ಎಂದು ನಿಸ್ಸಂಶಯವಾಗಿ ದೃಡಪಟ್ಟಿದೆ.

ನಾಗರೀಕತನ, ಅಭಿವೃದ್ಧಿ, ಒತ್ತಡ, ಆಹಾರಕ್ರಮ ಇವುಗಳಿಂದಾಗಿ ಮುಂದುವರೆದ ಈ ಶತಮಾನದಲ್ಲಿ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಪ್ರತಿಯೊಬ್ಬರಿಗೂ ಸವಾಲು ಎಂಬಂತಾಗಿದೆ. ಮೂರು ಹೊತ್ತು ದನದ ಮಾಂಸ ತಿನ್ನುವ ಅಮೇರಿಕನ್ನರು ನಿಧಾನವಾಗಿ ಸಸ್ಯಾಹಾರದತ್ತ ಒಲವು ತೋರುತ್ತಿದ್ದಾರೆ. ವಾರಕ್ಕೊಂದು ಬಾರಿ ಬರೀ ಸಸ್ಯಾಹಾರವನ್ನು ಉಪಯೋಗಿಸುವವರ ಸಂಖ್ಯೆ ಪಾಶ್ಚಾತ್ಯರಲ್ಲಿ ಹೆಚ್ಚುತ್ತಿದೆ. ಅಲ್ಲದೆ ಉತ್ಪಾದನೆ ದೃಷ್ಟಿಯಿಂದಲೂ ಸಸ್ಯಾಹಾರವನ್ನು ಸುಲಭವಾಗಿ ಉತ್ಪಾದಿಸಬಹುದು. ಒಂದು ಕಿ.ಲೊ. ಮಾಂಸ ತಯಾರಾಗಲು ನೂರು ಕೆ.ಜಿ. ಧಾನ್ಯದ ಅಗತ್ಯವಿದೆ. ಪರಿಸರದ ಹಿತದೃಷ್ಟಿಯಿಂದಲೂ ಮಾಂಸಾಹಾರ ಒಳ್ಳೆಯದಲ್ಲ. ಸಸ್ಯಾಹಾರವನ್ನು ಉತ್ಪಾದಿಸಲು ಬೇಕಾಗುವುದಕ್ಕಿಂತ ಹೆಚ್ಚಿನ ನೀರು ಮಾಂಸಾಹಾರ ಉತ್ಪಾದಿಸುವಲ್ಲಿ ಬೇಕಾಗುತ್ತದೆ.

ಇದಲ್ಲದೆ ಇನ್ನೊಂದು ಜಟಿಲವಾದ ಪ್ರಶ್ನೆಯೆಂದರೆ? ನೈತಿಕವಾದದು. ಮಾಂಸಾಹಾರದಲ್ಲಿ ಹಿಂಸೆ ಇದೆ. ಸಸ್ಯಾಹಾರದಲ್ಲಿ ಹಿಂಸೆಯಿಲ್ಲ. ಮಾಂಸಾಹಾರಿಗಳು ಸಸ್ಯಕ್ಕೂ ಜೀವವಿದೆ, ಅವಕ್ಕೂ ನೋವಾಗುತ್ತದೆ ಎಂಬ ವಾದವನ್ನು ಮಂಡಿಸುತ್ತಾರೆ. ಹೌದು ಸಸ್ಯಗಳಿಗೂ ಜೀವವಿದೆ. ಅವಕ್ಕೂ ನೋವಾಗುತ್ತದೆ ಎಂಬ ಮಾತನ್ನು ಒಪ್ಪಲೇಬೇಕು. ಹಾಗಾದರೆ ಈ ತಾರತಮ್ಯವೇಕೆ ಎಂಬ ಮತ್ತೊಂದು ಪ್ರಶ್ನೆ ಏಳುತ್ತದೆ. ಇಂತದೊಂದು ಸಾಧ್ಯತೆ ಸಾಧ್ಯವೇ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಈ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ. ನಿಸರ್ಗ ಸಹಜವಾಗಿ ಮರದಲ್ಲಿ ಹಣ್ಣು ಬಿಡುತ್ತದೆ. ತನ್ನ ವಂಶಾಭಿವೃದ್ಧಿಗಾಗಿ ಯಾವುದೇ ಹಣ್ಣಿನ ಮರ ಹಣ್ಣುದುರಿಸಿ ಆ ಮೂಲಕ ಪ್ರಾಣಿ-ಪಕ್ಷಿಗಳಿಗೆ ಆಹಾರವಾಗಿ ತನ್ನ ಸಂತತಿಯನ್ನು ಬೆಳೆಸಿಕೊಳ್ಳುತ್ತದೆ. ನೆಲಕ್ಕೆ ಬಿದ್ದ ಹಣ್ಣನ್ನು ತಿನ್ನುವುದರಿಂದ ಮರಕ್ಕಂತೂ ನೋವಾಗುವುದಿಲ್ಲವಲ್ಲ. ಹಾಗೇಯೇ ಯಾವುದೇ ಪ್ರಾಣಿ ನೀನು ತಿನ್ನು ಎಂದು ತನ್ನ ದೇಹದಿಂದ ಮಾಂಸವನ್ನುದುರಿಸುವುದಿಲ್ಲ. ಮಾಂಸ ಬೇಕೆಂದರೆ ಆ ಪ್ರಾಣಿಯನ್ನು ಸಾಯಿಸಲೇ ಬೇಕು. ಆಗ ಮಾತ್ರ ಮಾಂಸ ಲಭ್ಯ. ಇಲ್ಲಿ ಹಿಂಸೆಯಿದೆ. ಅಲ್ಲದೆ ಸಸ್ಯಗಳಲ್ಲಿರುವ ಇನ್ನೊಂದು ಗುಣವೆಂದರೆ ಚಿಗುರುವಿಕೆ. ಸಸ್ಯಗಳನ್ನು ಕತ್ತರಿಸದರೆ ಅವು ತಕ್ಷಣ ಸಾಯುವುದಿಲ್ಲ. ದ್ಯುತಿಸಂಶ್ಲೇಷಣೆ ಕ್ರಿಯೆಯಿಂದ ತಮ್ಮ ಆಹಾರವನ್ನು ತಾವೇ ಉತ್ಪಾದಿಸಿಕೊಂಡು ಮತ್ತೆ ಚಿಗುರುತ್ತವೆ. ಪ್ರಾಣಿಗಳಲ್ಲಿ ಈ ಸಾಧ್ಯತೆಯಿಲ್ಲ.

ಆರೋಗ್ಯ, ಪರಿಸರ, ನೈತಿಕ, ಹವಾಮಾನ ಬದಲವಾಣೆ, ಹಿಂಸೆ ಹೀಗೆ ಯಾವ ದೃಷ್ಟಿಕೋನದಿಂದ ನೋಡಿದರೂ ಮಾಂಸಾಹಾರಕ್ಕಿಂತ ಸಸ್ಯಾಹಾರ ಶ್ರೇಷ್ಠವಾದದು. ಮತ್ತೆ ಮೊದಲಿನ ಪ್ಯಾರಕ್ಕೆ ಬರೋಣ. ಪ್ರಪಂಚವನ್ನಾಳುವ ದೈತ್ಯ ಅಂತಾರಾಷ್ಟ್ರೀಯ ಬೀಜ ಮತ್ತು ಪೀಡೆನಾಶಕ ಕಂಪನಿಗಳು ಯಾವತ್ತೂ ತಮ್ಮ ಲಾಭಕ್ಕಾಗಿಯೇ ಇರುವಂತವು. ಇವರಿಗೆ ಹಣ ಮುಖ್ಯವೇ ಹೊರತು, ಜನ-ಪರಿಸರ ಮುಖ್ಯವಲ್ಲ. ಹಾಗಾಗಿಯೇ ಬಡರೈತರ ದಿಕ್ಕು ತಪ್ಪಿಸಿ ಪೀಡೆನಾಶಕಗಳನ್ನು, ಕುಲಾಂತರಿ ಬೀಜಗಳನ್ನು ಬಲವಂತವಾಗಿ ರೈತರ ಮೇಲೆ ಹೇರಿ ತಮ್ಮ ಮಾಂಸ (ಬೇಳೆಯಲ್ಲ) ಬೇಯಿಸಿಕೊಳ್ಳುತ್ತವೆ. ಇವತ್ತಿನ ದಿನಮಾನದಲ್ಲಿ ಸರಿಯಾದ ಮಾಹಿತಿಯಿಲ್ಲದೆ ರೈತ ಬೇಕಾಬಿಟ್ಟಿ ಪೀಡೆನಾಶಕಗಳನ್ನು ಸುರುವಿ ತರಕಾರಿಗಳನ್ನು ವಿಷಮಯ ಮಾಡಿದ್ದಾನೆ. ಇದಕ್ಕೂ ಪರಿಹಾರವಿದೆ. ಅಮೇರಿಕಾದ ದಿಗ್ಬಂಧನದ ನಂತರ ಭೂಪಟದಲ್ಲಿ ಚಿಕ್ಕ ಚುಕ್ಕೆಯಾಷ್ಟು ದೊಡ್ಡದಾದ ಕ್ಯೂಬಾ ದೇಶದ ಅಧ್ಯಕ್ಷ ಫೀಡೆಲ್ ಕ್ಯಾಸ್ಟ್ರೋ ತಂದಂತಹ ಬದಲಾವಣೆಯ ಕ್ರಾಂತಿಯನ್ನು ಇತರ ದೇಶಗಳು ಅನುಕರಿಸಬಹುದು. ತಮಗೆ ಬೇಕಾಗುವ ಆಹಾರ ಧಾನ್ಯಗಳನ್ನು, ತರಕಾರಿಗಳನ್ನು ಸಾವಯವ ಮೂಲದಿಂದಲೇ ಬೆಳೆದು ಸಮೃದ್ಧಿಯಾದ ದೇಶ ಕ್ಯೂಬಾ. ಅಮೇರಿಕದಂತಹ ವಿಶ್ವದ ದೊಡ್ಡಣ್ಣನಿಗೆ ಸಡ್ಡು ಹೊಡೆದು ಸ್ವಾವಲಂಬನೆ ಸಾಧಿಸಿ ಸ್ವಾಭಿಮಾನದಿಂದ ತಲೆಯತ್ತಿ ನಿಂತಿರುವÀ ಕ್ಯೂಬಾದ ಮಾದರಿಯಿಂದ, ಮೊದಲನೇ ಪ್ಯಾರಾದ ಪರಿಚಿತರ ಮಾತನ್ನು ಸುಳ್ಳು ಮಾಡುವ ಸಾಧ್ಯತೆಯಿದೆ. 

ಮುಗಿಸುವ ಮುನ್ನ. ವೇದಕಾಲದಲ್ಲಿ ಬ್ರಾಹ್ಮಣರು ಗೋಮಾಂಸ ತಿನ್ನುತ್ತಿದ್ದರು ಎಂಬ ವಾಕ್ಯವೊಂದು ಕರ್ನಾಟಕದಲ್ಲಿ ಏನೆಲ್ಲಾ ಅವಾಂತರಗಳನ್ನು ಸೃಷ್ಟಿಸಿತು. ನನ್ನ ಪ್ರಕಾರ ಕುರಿ ತಿಂದರೆ ತಪ್ಪಲ್ಲ, ದನ ತಿಂದರೆ ತಪ್ಪು ಎನ್ನುವ ಮನೋಭಾವವೇ ತಪ್ಪು. ಗಾಂಧಿ-ಬುದ್ಧ ಜನಿಸಿದ ಈ ನಾಡಿನಲ್ಲಿ ಹಿಂಸಾಪ್ರವೃತ್ತಿ ಕ್ರಮೇಣ ನಾಶವಾಗಬೇಕು. ಅಷ್ಟಕ್ಕೂ ಸಸ್ಯಾಹಾರ ಪದ್ಧತಿಯು ದೇಹ, ದೇಶ ಮತ್ತು ಪರಿಸರಕ್ಕೂ ಆರೋಗ್ಯಕರವಾಗಿದೆ. ಹಾಗಾಗಿ ಇದನ್ನು ಒಪ್ಪಿ ಅಪ್ಪಿಕೊಳ್ಳಲು ಯಾವುದೇ ವ್ಯಕ್ತಿಗೆ ಮುಕ್ತವಾದ ಸ್ವಾತಂತ್ರ್ಯವಿದೆ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
prashasti
10 years ago

ಸಸ್ಯಾಹಾರ ಮಾಂಸಾಹಾರಗಳ ವಾದ ಸುಮಾರಷ್ಟು ಸಮಯದಿಂದ ನಡೆಯುತ್ತಲೇ ಇದೆ..
ಆದರೆ ಇಂದಿನ ಲೇಖನದಲ್ಲಿ ಸುಮಾರಷ್ಟು ಹೊಸ ಹೊಳವುಗಳು ಕಂಡವು.. ಚೆನ್ನಾಗಿದೆ 🙂
 

Akhilesh Chipli
Akhilesh Chipli
10 years ago

ಧನ್ಯವಾದಗಳು ಪ್ರಶಸ್ತಿ

sharada.m
sharada.m
10 years ago

ಲೇಖನ  ಚೆನ್ನಾಗಿದೆ

3
0
Would love your thoughts, please comment.x
()
x