ಪಂಜು-ವಿಶೇಷ

ಬಸ್ ಸ್ಟ್ಯಾಂಡ್ ಬದುಕು:ಗವಿಸ್ವಾಮಿ


ಸಂಜೆ ಏಳಾಗಿತ್ತು. ಮಳೆ ಬೀಳುವ ಎಲ್ಲಾ ಮುನ್ಸೂಚನೆಗಳೂ ಕಾಣುತ್ತಿದ್ದವು. ಆದರೂ, ಒಂದು chance ತೆಗೆದುಕೊಂಡು ಊರಿನತ್ತ ಬೈಕ್ ಸ್ಟಾರ್ಟ್ ಮಾಡಿದೆ. ಎರಡು ಮೂರು ಕಿಮೀ ಮುಂದೆ ಹೋಗುವಷ್ಟರಲ್ಲಿ ಟಪ್ ಟಪ್ ಟಪ್ ಟಪ್ ಅಂತ ಚುಚ್ಚತೊಡಗಿದವು ದಪ್ಪ ದಪ್ಪ ಹನಿಗಳು. ಮುಂದೆ ಹೋದಂತೆ ಮಳೆಯ ರಭಸ ಇನ್ನೂ ಹೆಚ್ಚಾಯಿತು. ಹೇಗೋ ಸಹಿಸಿಕೊಂಡು ಒಂದು ಮೈಲಿಯಷ್ಟು ಮುಂದೆ ಹೋಗಿ ಹಳ್ಳಿಯೊಂದರ  ಬಸ್ ಸ್ಟ್ಯಾಂಡ್ ತಲುಪಿಕೊಂಡೆ. ಅಲ್ಲಾಗಲೇ ಐದಾರು ಬೈಕುಗಳು ನೆನೆಯುತ್ತ ನಿಂತಿದ್ದವು. 

ಬಸ್ ಸ್ಟ್ಯಾಂಡ್ ಅಕ್ಷರಷಃ ಹೌಸ್ಫುಲ್ಲಾಗಿತ್ತು. ಆಗ ತಾನೆ ಒಳ ನುಗ್ಗಿದ ಕೆಲವರು ತಲೆ ಒರೆಸಿಕೊಳ್ಳುತ್ತಿದ್ದರು. ನಾಲ್ಕೈದು ಹೆಂಗಸರು ಅದ್ಯಾವುದೋ ಸಾವಿನ ಸುದ್ದಿ ಆಡುತ್ತಿದ್ದರು.

'ಗುಂಡ್ಕಲ್ನಾಗ್  ಇದ್ಲಲ್ಲಾ ಮಾರಗಿತ್ತಿ ಅದ್ಯಾನ್ಬಂತು ಮಾಯ್ಶಾಪ'

'ವೊಲ್ದಿಂದ ಹಸು ವಡ್ಕಬಂದು ಕಟ್ಟಾಕ್ಬುಟ್ಟು ಗ್ವಾಡ ಒರಿಕಂಡು ಕೂತ್ಗಂಡ್ಳಂತ,  ಒಂದ್ ಗಳಾಸ್ ನೀರ್ ಕೊಡು ಕೂಸು ಅಂತ ಸನ್ನೆ ಮಾಡದ್ಲಂತ ಮಗಳ್ಗ, ಆ ಹೆಣ್ಣು ತತ್ತರ್ಬಿತ್ತರ್ನ ಕ್ವಾಣ್ಗೋಗಿ ನೀರ್ತಂದ್ಕೊಡ್ತಂತ, ಏಡು ಗುಟುಕೂ ಗಂಟ್ಲಿಗಿಳಿನಿಲ್ವಂತ ಕಾ ತಾಯ್,  ಗ್ವಾಡ ಒರಿಕಂಡು ಯಾಗ್ ಕೂತಿದ್ದ ಆಗೆ ಸೂಲೊಂಟಯ್ತಂತ'

'ಒಳ್ಳಿ ಸಾವು ಕಣ್ ತಕವ್ವ.. ಒಳ್ಳಿ ಸಾವ್ ಪಡೆಯಕು ಪುಣ್ಯ ಮಾಡಿರ್ಬೇಕಂತ '

'ಯಾವ್ ಒಳ್ಳಿ ಸಾವ ತಕಾ, ಆ ಎಣ್ಣ ತಬ್ಲಿ ಮಾಡ್ಬುಟ್ಟ್ ಒಂಟೋದ, ಒಳ್ಳೆದಾ ಕೆಟ್ಟದಾ ಅದ್ಕೂ ಒಂದ್ ಕೈ ಇಡಿಸ್ಬುಟ್ಟಿದ್ರಾ ಗಂಡ ಮಕ್ಕಳ್ನೋಡ್ಕಂಡು ಯಾಗ್ಯಾ ಕಾಲಹತ್ತದು ಮುದೇವಿ'

'ಹೂಂಕಣ್ತಕವ್ವ ಕಳ್ಳು ಚುರ್ರಂತದ ಆ ತಬ್ಬಲ್ಮೂದೇವಿ ಮೊಕ ನೋಡದ್ರ.. ಮೂರೊತ್ತೂ ಕುಡ್ಕಂಡ್ ನಿಂತನ ಅಪ್ ಮುರ್ಮಗ..ಆ ಎಣ್ಗ ಮದ್ವಾ ಮಾಡಾ ಮುಸ್ನ್ಯಾ ಅದೂ.. ಥೂ ಅನ್ನು ಮಾನ್ಗೆಟ್ ಮುರ್ಮಗ್ನಾ'

'ಅವಳ್ ಬದಲ್ಗ ಅವನ್ಯಾರು ಕರ್ಕಬಾರ್ದ ಆ ಜವ್ರಾಯ.. ಯಾತಿಕ್ಯಾ ಅಂಥವರೆಲ್ಲವಾ..'

'ಯಾರ್ಯಾರೂ  ಒಳ್ಳಿ ಪುಣ್ಯಾತ್ಮ್ರು ಬಂದು ತಕ್ಕಂಡ್ವಾಬೇಕು ಆ ಎಣ್ಣ'

'ಪಾಯ್ ಚಿಂದಂತ ಎಣ್ಣು, ಮ್ಯಾಲಿರಂವ್ ನ್ವಾಡಲ್ವಾ, ದಾರಿ  ತೋರುಸ್ತನ ತಕ್ಕಾ'

ಅವರ ಮಾತುಗಳನ್ನು ಕೇಳುತ್ತಿದ್ದಂತೆ, ಮರೆತೇ ಹೋಗಿದ್ದ ಒಂದು  appointment  ದಿಡೀರನೆ ಜ್ಞಾಪಕವಾಗಿತು! ಬರೀ ಸಿಹಿಮಾತುಗಳು, ಶುಭವಾರ್ತೆಗಳನ್ನೇ ಕೇಳಬಯಸುವ ಮನಸ್ಸು ಸಾವಿನ ಸುದ್ದಿಯನ್ನು ಕೇಳಿದರೆ ಖಿನ್ನತೆಗೆ ಜಾರುತ್ತದೆ. ದಾರಿಯಲ್ಲಿ ಧುತ್ತನೆ ಶವಯಾತ್ರೆ ಎದುರಾದಾಗ, ಮಬ್ಬುಗತ್ತಲಿನಲ್ಲಿ ತುಂತುರು ಮಳೆಯನ್ನು ಧಿಕ್ಕರಿಸಿ ಧಗಧಗಿಸಿ ಉರಿಯುತ್ತಿರುವ ಒಂಟಿ ಚಿತೆಯನ್ನು ನೋಡಿದಾಗ ಸಾವಿನ ಜತೆಗಿನ appointment ನೆನಪಾಗುತ್ತದೆ. ಅಮರತ್ವದ ಪ್ಯಾರಾಚೂಟಿಗೆ ಪಿನ್ನು ಚುಚ್ಚಿದಂತಾಗಿ ರಪ್ಪನೆ ನೆಲದ ಮೇಲೆ ಬೀಳುತ್ತೇನೆ!

ಅವರ ಮಾತು ಇನ್ನ್ಯಾವುದೋ ವಿಷಯಕ್ಕೆ ಹೊರಳಿತು. ಮನಸ್ಸಿಗೆ  ಸ್ವಲ್ಪ ನಿರಾಳವಾಯಿತು!

ನನ್ನ ಕಿವಿಗಳು  ಅಲ್ಲೇ ಗೋಡೆ ಒರಗಿ ಕುಳಿತಿದ್ದ ಇಬ್ಬರು ಅಜ್ಜಂದಿರ ಮಾತಿನ ಕಡೆಗೆ ಜಾಗೃತವಾದವು.

'ತೆಂಕ್ಲು ಗಟ್ಟಿಕಯ್ಯೋ'

'ಉಯ್ಲಿ ಸುಮ್ಮಿರು, ಎಷ್ಟ್ ಜಿನ ಆಗಿತ್ತಾ ಇಂತ ಮಳ ಕಂಡು'

'ಇದೇ ಸಮ್ಕ ಇನ್ನೊಂದ್ಗಂಟ  ತಟ್ಟದ್ರಿಗಪ್ಪಾ ಬೂಮಿ ಒಂದ್ಸಟ್ಗ  ತಂಪಾಯ್ತದ, ಕೆರಕಟ್ಟಲೊಸಿ ನೀರ್ನಿಂತ್ಗತ್ತ''

'ಯಾಗ್ಯಾ ಬದಿಕಬುಟ್ಟಂವ್… ಬೂಮ್ಸಮಕ್ಬಂದು ಜೀಂವ ಹಿಡ್ಕಂಡಿದ್ ಪೈರ್ನವು ಈಗ ತಲ ಎತ್ಗತವ.''

'ನಾಳ ಚೆಂದಾಗ್ ಬಿಸ್ಲೊಡದ್ರ ನಾಳಿದ್ ಆರಂಬಕ್ಕಟ್ಬೇದು'

'ನೀ ಎಲ್ಲಿದ್ದೈ , ನಾಳಿದ್ ಸ್ವಾಮಾರ್ ಬಿದ್ಕತ್ತಾ''

'ಹೂಂಕಪ್ಪಾ ನನ್ ಗ್ಯಾನ ನೋಡು, ಯಾನೇ ಇದ್ರು ಮಂಗ್ಳೋರ್ವಿಯ ಆಗಾದ್ರ'

'ತಡ ಇಲ್ಲಿ ಬಿತ್ನ ಕರ್ಚ್ಗ ಸಾವರ್ರೂಪಾಯ್ ಬಡ್ಡಿಗ್ಯಾರು ಕ್ಯಾಳ್ಬೇಕು '

'ಈಗ್ಯಾರ ಕೊಡವ್ರು ನಿನಗಾ'

'ಪರಮೇಸ್ರಿನ್ಯಾರು ಕ್ಯಾಳಂವಂತ'

'ಅಯ್ಯ ಅವನ್ ತಂವು ಸಾಲ ಮಾಡದ್ರಿಗಪಾ ಮನ ಉದ್ದಾರ ಆದಾಗಿಯಾ, ಅತ್ರುಪಾಯ್ನ್ ಬಡ್ಡೆಂತ'

'ಯಾನ್ಮಾಡದೂ, ನಮ್ ಕಷ್ಟಕ್ಕ ಕೊಡ್ಲೇಬೇಕಪ್ಪಾ'

ಮಳೆ ಜೊತೆಗೆ ಗಾಳಿಯೂ ಜೋರಾಗಿ ಬೀಸತೊಡಗಿತು. ಮಳೆ ನೀರು ಬಸ್ಟಾಂಡಿನೊಳಕ್ಕೇ  ಎರಚತೊಡಗಿತು. ಹೆಂಗಸರು ಮಕ್ಕಳಿಗೆ ಒಳಗೆ ಜಾಗ  ಬಿಟ್ಟುಕೊಟ್ಟು ಅರ್ಧಂಪರ್ಧ ನೆನೆಯುತ್ತಾ  ನಿಂತುಕೊಂಡೆವು. ತಮಗೂ ಇದಕ್ಕೂ ಯಾವ ಸಂಬಂಧವಿಲ್ಲವೆಂಬಂತೆ, ಮೂಲೆಯಲ್ಲಿ ಇಬ್ಬರು ಹುಡುಗರು ಮೊಬೈಲಿನಲಲ್ಲಿ ಐಪಿಎಲ್ ಸ್ಕೋರು ನೋಡುತ್ತಾ ಹರಟೆ ಹೊಡೆಯುತ್ತಿದ್ದರು.

'ಸಿಕ್ಸು'!

'ಯಾರುಡಾ'

'ಗೈಲುಕಾ ಬಡ್ಡೈದ್ನೇ'

'ರಾಕ್ಸ ಕಣ್ ಬುಡ್ಡಾ ಅಂವ'

ಬೀದಿ ದೀಪ ಆರಿಹೋಗಿ ಕತ್ತಲು ಆವರಿಸಿತು. ಒಬ್ಬ ಹುಡುಗ ಗೊಣಗಿದ, 'ಈ ಬಡ್ಡೈದ್ನ ಮಳ  ಕರೆಂಟ್ನೂ ಕಿತ್ಗತು, ಇಲ್ಲಾಂದ್ರ ಅಟ್ಟಿಗ್ಯಾರು ಹೋಗಿ ಮ್ಯಾಚ್ ನ್ವಾಡ್ಬೇದಾಗಿತ್ತು'

ಆ ಕಡೆಯಿಂದ ಅಜ್ಜನ ಧ್ವನಿ ಬಂತು, 'ಯಾರುಡಾ ಅಂವ ಅಗಂದಂವ…ಮಳುಯ್ಲಿ ಸಿವನೇ ಅಂತ ನಾವ್ ಬೇಡ್ತಿದ್ರ ನಿಂದ್ಯಾನುಡ ಮದ್ಯದಲ್ಲಿ..ನಿಮ್ಮಂತವ್ರು ಉಟ್ಟದ್ಮ್ಯಾಲಿಯ ಇಂಗಾದ್ದು ದೇಸ'

'ಸುಮ್ ಕೂತ್ಗ ತಾತೈ.. ನಿಂಗ್ಯಾನ್ಗೊತ್ತಾದ್ದು..ಮ್ಯಾಚು ಪುಲ್ ಟೈಟಾಯ್ತ ಕೂತದ.. ಗೈಲು ಆಕಂಡ್ ಚಚ್ಚ್ತ್ ಕೂತನ'

'ಡೇ ಮಾದೇವ್ನ ಮಗನಾ'

'ಹೂಂಕಣ್ಸುಮ್ಮಿರು ತಾತೈ ನಾನಿಯಾ '

'ಗೈಲಂತ ಗೈಲು..ಯಾರುಡ ಅಂವ ಗೈಲು ..ನಿಮ್ ಅಪ್ನೊಂದ್ಗುಟ್ಟಿದ್ನಾ ನಿಮ್ಮವ್ವವೊಂದ್ಗುಟ್ಟಿದ್ನ, ಇಟ್ಟು ಬಟ್ಟ ಇಕ್ಕಿನುಡಾ ಅಂವ'

'ಓಲ್ಡ್ ಮ್ಯಾನ್ ಪ್ಲೀಸ್ ಸೈಲೆಂಟ್'

'ಡೇ ಗಂಡೇ,ನಿಮ್ಮಪ್ಪನ್ ನೋಡದ್ರ ಬೆಳಿಗಿಂದ್ ಸಂದ್ಗಂಟ ಏಡಸುನವಿಡ್ಕಂಡು ಬ್ಯಾನಾಡ್ತನ … ನೀನೋಡದ್ರ ಎಷ್ಟೊತ್ಲುವ ಮೊಬೈಲಿಡ್ಕಂಡು ಅಂವ್ಕತ್  ಕೂತಿರ್ತಿದ್ದೈ..'

'ತಾತೈ ಅವೆಲ್ಲ ಬ್ಯಾಡ, ಒಂದೈನೂರ್ರುಪಾಯ್ ತಳ್ಳು ಇತ್ತಗ ಬೆಟ್ಟಿಂಗ್ ಕಟ್ಬೇಕು'

'ತತ್ತುಡ ಇದ್ರ ನಂಗಿಯಾ , ಪ್ಯಾಟ್ಗೋಗಿ ಏಡ್ ಬ್ಯಾಗ್ ಸುರಿಕಾಂತಿ ತತ್ತಿನಿ.. ಊರ್ಗ ಊರ್ ಚಿಂತ್ಯಾದ್ರ ಕೋರಿಗಾ ಇನ್ನ್ಯಾತ್ರದಾ ಚಿಂತ್ಯಂತಾ… ನಿಮ್ಮಪ್ಪಿಂದ್ರು ನಿಮ್ನೆಲ್ಲಾ ಉಟ್ಸ ಬದ್ಲು ಅತ್ತಾಗ್ ತಿರಿಕಂಡ್ ಮನಿಕಂಡಿದ್ರಾಯ್ತಿರ್ನಿಲ್ವ'

'ಯು ಮೀನ್ ನಾವು ವೇಸ್ಟ್ ಫೆಲೊಗಳು ಅಂತ್ಯಾ..ಕಾಲೇಜ್ಗೆ ಹೈಯ್ಯೆಸ್ಟು ತಿಳ್ಕ'

'ಯಾನುಡ ಐಎಸ್ಟು'

'ಜಾಸ್ತಿ ನಂಬರ್ ತಗ್ದಿನಿ ಕಾ ತಾತೈ'

'ಎಷ್ಟೊತ್ಲು ನೋಡುದ್ರು ಎಣ್ಣೈಕ್ಳಿಂದೇ ತಿರ್ಗಿಯಂತ, ಬರೀ ಪಿಚ್ಚೇರ್ನ್  ಮನ, ಹೋಟ್ಲು ಮೊಬೈಲ್ನಂಗಡಿ ಅಂದ್ಕಂಡು ಅಲ್ಲೇ ಕಾಲ ಆಕಿಯಂತ, ಅದ್ಯಾವತ್ತುಡ ನೀ ತಗದ್ದು ನಂಬರ್ರಾ..ಅದ್ಯಾವನುಡಾ ಕೊಟ್ಟಂವ ನಿಂಗ ನಂಬರಾ, ಕರ್ಕಬಾ ನನ್ ತಂವ್ಕ ಇಲ್ಲಿ '

'ಅದೆಲ್ಲಾ ನಿಂಗೊತ್ತಾಗಲ್ಲ ಸುಮ್ ಕೂತ್ಗ ತಾತೈ'

'ಇಟ್ಟುಟ್ಟಸ್ಗಳದ್ ಕಲ್ತಗ ಮುದೇವೀ … ಆ ಶಿವಲಿಂಗ್ನ ಮಗನ್ಕಾಲ್ನಡಿಲ್ ನುಗ್ಗು ಓಗುಡಾ.. ಬುದ್ದಿ ಬತ್ತದಾ.. ನೆನ್ನಜಿನ ಅತ್ಸಾವ್ರ ತಂದ್ಕೊಟ್ನಂತ ಅವ್ವ ಕೈಗ'

'ತಾತೈ ನಿಂಗ್ಯಾನ್ಗೊಂತ್ತು ಅವ್ನ ಕತಾ ಸುಮ್ ಕೂತ್ಗ… ಬೆಂಗ್ಳೂರ್ಲಿ ಅಂವ ಯಾನ್ಯಾನ್ ನಡಸ್ತನ ನಿಂಗೊತ್ತಾ ? ಎಲ್ಲಾ ಉಂಟಂತಾ ಏಟುಜೆಡ್ಡು'

'ಯಾನುಡಾ ಏಟುಜೆಡ್ಡು? ಯಾನುಡಾ ನಿನ್ ಮಾತ್ನರ್ತ ? ಕಳ್ತನ ಮಾಡಿ ಸಂಪಾದ್ನ ಮಾಡ್ತನ ಅಂತುಡಾ.. '

'ಯಾವನಗ್ಗೊತ್ತು'

'ನಿನ್ಕೈಲಿ ಕಿಸಿಯಕಾಗಲ್ಲ ನೋಡು, ಅದ್ಕ ಈ  ಮಾತ್ನೆಲ್ಲ ಆಡ್ತಿದ್ದೈ, ಅವರಪ್ನೆದರ್ಗ ಅಂದ್ಗಿಂದ್ಬುಟ್ಟೈ ನಿನ್ನ ಸಿಗ್ದು ತ್ವಾರ್ಣ ಕಟ್ಬುಡ್ತನ..'

ಹೀಗೆ ಮುಂದುವರೆದಿತ್ತು ಅವರ ಸಂಭಾಷಣೆ. ಮಳೆಯ ಆರ್ಭಟವೂ ಕಡಿಮೆಯಾಗತೊಡಗಿತು. ಒಬ್ಬ್ಬೊಬ್ಬರಾಗಿ ಖಾಲಿಯಾಗತೊಡಗಿದರು. ಕೊನೆಯಲ್ಲಿ ಉಳಿದವನು ನಾನೊಬ್ಬನೇ. ಇನ್ನೂ ಚೂರು ಚೂರು ಹನಿಯುತ್ತಿತ್ತು. ತಡ ಮಾಡಿದರೆ ಮತ್ತೆ ಮಳೆ ಜಾಸ್ತಿಯಾಗಬಹುದೆಂದುಕೊಂಡು ಬೈಕ್ ಸ್ಟಾರ್ಟ್ ಮಾಡಿದೆ.

ಹೆಡ್ ಲೈಟಿನ ಬೆಳಕು ಮೂಲೆ ಮೇಲೆ ಬಿತ್ತು . ಒಂದು ಆಕೃತಿ ಕದಲದೇ ಕುಳಿತಿದೆ! ಕಪ್ಪು ರಗ್ಗಿನ ಮುಸುಕಿನೊಳಗೆ ಎರಡು ಕಣ್ಣುಗಳು ಮತ್ತು ಇಷ್ಟಗಲ ಮೂಗು ಮಾತ್ರ ಕಾಣಿಸುತ್ತಿವೆ. ಅರೆ ಇವನನ್ನು ನೋಡಿಯೇ ಇರಲಿಲ್ಲವಲ್ಲ, ಅಷ್ಟೊತ್ತಿನಿಂದ ಇದ್ದೂ ಇಲ್ಲದಂತೆ ಕುಳಿತಿದ್ದನಾ?

ನಮ್ಮ ಕಡೆಯ ಬಸ್ಟಾಂಡುಗಳು ಕೆಲವರ ಪರಮನೆಂಟು  ವಾಸಸ್ಥಳಗಳಾಗಿವೆ.

ಪಾಪ ಇವನೂ  ಅಂಥವರಲ್ಲೊಬ್ಬನಿರಬೇಕೆಂದುಕೊಂಡು ಅಲ್ಲಿಂದ ಹೊರಟೆ.

ಕನ್ನಡದ ಬರಹಗಳನ್ನು ಹಂಚಿ ಹರಡಿ

10 thoughts on “ಬಸ್ ಸ್ಟ್ಯಾಂಡ್ ಬದುಕು:ಗವಿಸ್ವಾಮಿ

  1. ಡಾ.ಗವಿಸ್ವಾಮಿಯವರೇ, ವಿಶಿಷ್ಟ ಭಾಷಾ ಶೈಲಿಯೊಂದಿಗೆ ವಿಷಯದ ವಿವರಣೆ ಹಾಗೂ ಅನುಭವಗಳು ಅಕ್ಷರರೂಪಕ್ಕಿಳಿಸುವ ನಿಮ್ಮ ತನ್ಮಯತೆ ಮನಕ್ಕೆ ಮುದ ನೀಡಿತು !  ಶುಭದಿನ !

  2. ಚೆನ್ನಾಗಿದೆ ಬಸ್ ಸ್ಟಾಂಡ್ ಮಾತು …
     
    ಈ ವಿಷಯದ ಮೇಲೂ ಬರೆಯಬಹುದು ಅನ್ನೋದನ್ನೇ ಊಹಿಸಿರಲಿಲ್ಲ ನಾ 🙂
     
    ಇಷ್ಟ ಆಯ್ತು

  3. ಚನ್ನಾಗಿದೆ ಬಸ್ ಸ್ಟಾಂಡಿನ ಸಂಭಾಷಣೆ…:)

  4. ಓದಲು ಖುಶಿ ಆಯಿತು. ಆದರೆ, ಹೆಚ್ಚಿನ ಸಂಭಾಷಣೆ ಅರ್ಥವಾಗಲಿಲ್ಲ. ಒಂದು ಸಂಶಯಃ "ಸೂಲೊಂಟಯ್ತಂತ" ಅಂದರೆ ಪ್ರಾಣ ಹೋಯಿತು ಅಂತ ಅರ್ಥ ಮಾಡಿಕೊಂಡೆ. ಈ ಶಬ್ದ ಇಂಗ್ಲೀಶ್ ನ "ಸೋಲ್"(Soul ) ಅನ್ನುವ ಶಬ್ದದಿಂದ ಬಂದಿರಬಹುದೆ?

  5. ಓದಿದ ಮತ್ತು ಅಭಿಪ್ರಾಯಗಳನ್ನು ದಾಖಲಿಸಿದ ಎಲ್ಲರಿಗೂ ಧನ್ಯವಾದಗಳು .

    ರಾಜೇಂದ್ರ  ಶೆಟ್ಟಿ  ಸರ್ soul ಎಂಬ ಪದ ಕನ್ನಡದ 'ಸೂಲು' ಪದದ ಮೂಲವಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದರು.
    ನಾನು ಕಂಡುಕೊಂಡ ಪ್ರಕಾರ , ಸೂಲು ಪದದ ಮೂಲ 'ಉಸಿರು'
    ಇಲ್ಲಿ 'ರ'ಕಾರವು 'ಳ'ಕಾರವಾಗಿದೆ.

    ಉದಾ: ಎರಡು-ಎಲ್ಡು.

    ಹಾಗೇ,
    ಉಸಿರು=ಉಸುರು=ಉಸಲು=ಸೂಲು ಆಗಿದೆ.

    ಸೂಲು ಪದಕ್ಕೆ ನಮ್ಮ ಕಡೆ ಇನ್ನೊಂದು ಅರ್ಥವಿದೆ.
    ಸೂಲು=ಹೆರಿಗೆ.

    ವಿಶೇಷವಾಗಿ ಪ್ರಾಣಿಗಳ ವಿಷಯದಲ್ಲಿ ಹೆಚ್ಚು ಬಳಕೆಯಲ್ಲಿದೆ.

    ಇದು ಎಷ್ಟನೇ ಸೂಲು?
    ಅಂದರೆ ಹಸು ಎಷ್ಟನೇ ಬಾರಿ ಕರು ಹಾಕಿದೆ ಎಂದು ಕೇಳುವುದಕ್ಕೆ,
    ಇದು ಎಷ್ಟನೇ ಸೂಲು ಎಂದು ಕೇಳುತ್ತೇವೆ.

    ರಾಜೇಂದ್ರ ಶೆಟ್ಟಿ ಸರ್ ಊಹಿಸಿದ ಹಾಗೆ  ಪ್ರಾಣಹೋಯಿತು ಎಂಬುದಕ್ಕೆ ನಮ್ಮ ಕಡೆ ಸೂಲೊಂಟೊಯ್ತು ಅನ್ನುತ್ತಾರೆ .

    ಪ್ರಾಣ ಹೋಯಿತು ಎಂಬುದಕ್ಕೆ 'ವಸ್ತು ಹೊಂಟೊಯ್ತು' ಎಂತಲೂ ಹೇಳುತ್ತಾರೆ 

     

Leave a Reply

Your email address will not be published. Required fields are marked *