ಭಾಗಿರಥಿ:ಪಾರ್ಥಸಾರಥಿ ಎನ್


ಗಂಗೋತ್ರಿಯ ಹೋಟೆಲ್ 'ಮಂದಾಕಿನಿ'  ಕೊಠಡಿಯ ಕಿಟಿಕಿಯಿಂದ ಒಮ್ಮೆ ಹೊರಗಡೆ   ನೋಡಿದೆ,  ಹಸಿರು ಬೆಟ್ಟಗಳ ಸಾಲು.  ಕೊರೆಯುವ ಚಳಿ . ಬೆಂಗಳೂರಿನಂತಲ್ಲದೆ ಅಲ್ಲಿಯದೆ ಆದ ಸಂಸ್ಕೃತಿ , ಜನಗಳು,   ಮನೆಗಳು, ರಸ್ತೆ ಎಲ್ಲವು ಹೊಸ ಲೋಕವೊಂದನ್ನು ನನ್ನೊಳಗೆ ಸೃಷ್ಟಿಸಿತ್ತು.
"ದ ಗ್ರೇಟ್ ಹಿಮಾಲಯನ್ ಟ್ರಕ್ಕಿಂಗ್ ಅಸೋಸಿಯೇಷನ್" 
ನನ್ನ ಹಲವು ವರ್ಷಗಳ ಕನಸಿಗೆ ನಿಜ ರೂಪ ಕೊಡಲು ಸಿದ್ದವಾಗಿದ್ದ ಸಂಸ್ಥೆ. 
ಚಿಕ್ಕವಯಸಿನಿಂದಲು ಬೆಟ್ಟಗುಡ್ಡ ಏರುವದರಲ್ಲಿ ಎಂತದೊ ಆಸಕ್ತಿ. ಹೈಸ್ಕೂಲಿನ ಎನ್ ಸಿ ಸಿ ಸಹ ಅದಕ್ಕೆ ಪೂರಕವಾಗಿತ್ತು. ಕಾಲೇಜಿನ ಗೆಳೆಯರ ಜೊತೆ ಸಹ ಇಂತದೆ ಸುತ್ತಾಟಗಳಿದ್ದವು. ಶಿವಗಂಗೆ, ದೇವರಾಯನ ದುರ್ಗದಂತದ ಬೆಟ್ಟಗಳಲ್ಲಿ ಓಡಾಡಿದ ಅನುಭವ ಬಿಟ್ಟರೆ , ಹೊರಗೆ ಮಲೆನಾಡಿನ ಚಾರಣ, ಕುತೂಹಲಕ್ಕೆ ಎಂಬಂತೆ ಹೋದ ಶಬರಿಮಲೆಯಾತ್ರೆ ಇವೆಲ್ಲ ನನ್ನ ಬೆಟ್ಟ ಹತ್ತುವ ಕುತೂಹಲಕ್ಕೆ ಅಹಾರವಾಗಿದ್ದವು. ಆದರು ಮನದ ಮೂಲೆಯಲ್ಲಿ ಒಂದು ಆಸೆ ಸದಾ ಕೊರೆಯುತ್ತ ಇದ್ದದ್ದು, ವಿಶ್ವದಲ್ಲಿ ಹೆಸರು ಮಾಡಿರುವ ಹಿಮಾಲಯದ ಯಾವುದಾದರು ಭಾಗದಲ್ಲಿ ಪರ್ವತ ಚಾರಣ ಮಾಡಿ ಅನುಭವ ಗಳಿಸಬೇಕು ಎನ್ನುವುದು. ಅದಕ್ಕೆ ಅವಕಾಶ ಕೂಡಿ ಬಂದಿದ್ದು ನಾನು ಕೆಲಸಮಾಡುವ ಕಂಪನಿಯಲ್ಲಿ ನನ್ನ ಜೊತೆಯೆ ಇರುವ ಸುಬ್ರಮಣ್ಯ ಎನ್ನುವರಿಂದ. ಅವರಿಗು ನನ್ನಂತದೆ ಕನಸುಗಳು ಹೀಗಾಗಿ ಜೊತೆಯಾದೆವು. ಒಮ್ಮೆ ಪತ್ರಿಕೆಯಲ್ಲಿ ಕಂಡ ಜಾಹಿರಾತನ್ನು ಓದಿ , ವಿಷಯ ಸಂಗ್ರಹಿಸಿ, ಸಂಪರ್ಕಿಸಿ, ಕಡೆಗೊಮ್ಮೆ ನಮ್ಮ ಕನಸಿಗೆ ಸಾಥ್ ಆದ ಸಂಸ್ಥೆಯೆ "ದ ಗ್ರೇಟ್ ಹಿಮಾಲಯನ್ ಟ್ರಕ್ಕಿಂಗ್ ಅಸೋಸಿಯೇಶನ್" . 
 
 ಪ್ರತಿ ವರ್ಷವು  ಬ್ಯಾಚ್ ಗಳಲ್ಲಿ ಟ್ರಕ್ಕಿಂಗ್ ಏರ್ಪಡಿಸುತ್ತಿದ್ದರು.   ಅಗತ್ಯವಾದ ದಾಖಲೆಗಳು,  ಡಾಕ್ಟರ್ ಗಳ ಶಿಪಾರಸು ಎಲ್ಲವನ್ನು ಒಟ್ಟುಗೂಡಿಸಲು ಸಾಕಷ್ಟು ಕಾಲ ಹಿಡಿಯಿತು.   ಪ್ರೊಸಿಜರ್ಸ್ ಮುಗಿದು, ಈಗ ಟ್ರಕ್ಕಿಂಗ್ ಗೆ ಸಿದ್ದವಾಗಿ ಬೆಂಗಳೂರಿನಿಂದ ಹೊರಟು ನಾನು ಅಂದರೆ ಗಿರೀಶ್ ,   ನನ್ನ ಗೆಳೆಯ ಸುಬ್ರಮಣ್ಯರು ಗಂಗೋತ್ರಿಯ  ಹೊಟೆಲ್ 'ಮಂದಾಕಿನಿ'ಯಲ್ಲಿ ತಂಗಿರುವೆವು.  'ಭಾಗಿರಥಿ' ಪರ್ವತವನ್ನು ಏರಲು  ಒಪ್ಪಿಗೆ ಪತ್ರವು ಕೈಸೇರಿತು. 
 
ನಾವು ಪರ್ವತ ಏರಲು ಬೇಕಾದ ಮಾರ್ಗ ಸಿದ್ದವಾಗಿತ್ತು ಅಲ್ಲಿಯ ಹೆಸರುಗಳನ್ನು ಉಚ್ಚರಿಸುವುದೆ ಒಂದು ರೀತಿ, ಗಂಗೋತ್ರಿ, ಚೀರ್ಬಾಸ್, ಭೋಜ್ಬಾಸ್, ನಂದನವನ್, ಅಪ್ಪರ್ ನಂದನವನ್, ನಂತರ  ಕ್ಯಾಂಪ್-೧,ಕ್ಯಾಂಪ್-೨ ,  ಎಂದು ಹೆಸರಿಸಲಾಗಿತ್ತು. ಅಲ್ಲಿಗೆ ಬೇಕಾದ   ಸಾಮಾಗ್ರಿಗಳು ಸಿದ್ದವಿದ್ದವು, ಐದು ಸಾವಿರ ಆಡಿ ನಂತರ ಗ್ಯಾಸ್ ,ಸೀಮಎಣ್ಣೆ ಎಲ್ಲ ಕೆಲಸಮಾಡಲ್ಲ ಆಗ ಬಳಸಲು ಬ್ಯೂಟನ್ ಓಯ್ಯುತ್ತಾರೆ, ನಮ್ಮ ಜೊತೆ ಮೂವರು ಗೈಡ್ ಗಳಿದ್ದರು, ಹದಿನಾರು ಜನರ ಗುಂಪು. ಕಡೆಗೊಮ್ಮೆ ಹತ್ತಲು ಬೇಕಾದ ಅನುಮತಿ ಪತ್ರವು ಸಿಕ್ಕು ಆಗಿತ್ತು. ಗುಂಪಿನಲ್ಲಿದ್ದವರ ಪರಿಚಯವು ಆಗಿತ್ತು. ಲಗೇಜ್ ಗಳನ್ನು ಹೊರಲು  ಸ್ಥಳಿಯರಿರುತ್ತಾರೆ.  ಇಲ್ಲಿಯ ದಿನ ರಾತ್ರಿಗಳು ಸಹ ನಮ್ಮಲ್ಲಿಯಂತೆ ಇರದೆ, ಬೇರೆಯದ ನಿಯಮ , ಸೂರ್ಯ ಬೆಳಗ್ಗೆ ನಾಲಕ್ಕಕ್ಕೆ ಹುಟ್ಟಿದರು, ನಮಗೆ ಕಾಣಿಸುವಾಗ ಹತ್ತಾಗುತ್ತಿತ್ತು, ನಂತರ ಸಂಜೆ ನಾಲಕ್ಕಕ್ಕೆ  ಅವನ ಕೆಲಸ ಮುಗಿಯುತ್ತಿತ್ತು. 
 
  ಮರುದಿನ ಬೆಳಗಿನ ಐದಕ್ಕೆ ಹೊರಟು, ನಡೆಯುತ್ತ , ಬಾರವನ್ನು ಹೊರುತ್ತ ಎಲ್ಲರು ಚೀರ್ಬಾಸ್ ಮಾರ್ಗವಾಗಿ ಸಂಜೆಗೆ   ಭೋಜ್ಬಾಸ್ ತಲುಪಿದೆವು, ಎಂಟು ಡಿಗ್ರಿಗಿಂತ ಕೆಳಗಿನ ಉಷ್ಣಾಂಶ   ಚರ್ಮ, ಮಾಂಸಗಳನ್ನು ಕೊರೆಯುತ್ತಿತ್ತು, ಚಳಿ ಇನ್ನು ಜಾಸ್ತಿಯಾದರೆ ಇರುವ ಮೇಣದ ಬತ್ತಿ ಸಹ ಕೆಲಸ ಮಾಡುವದಿಲ್ಲ.  ರಾತ್ರಿ ರೋಟಿ ದಾಲ್ ನಂತ ಊಟ ಮುಗಿಸಿ ಮಲಗಿದಾಗ ಮರುದಿನಕ್ಕೆ ಎಂತದೋ ಉತ್ಸಾಹ. 
 
ಮರುದಿನ ಚಳಿ ಮತ್ತು ಜಾಸ್ತಿಯಾಗಿತ್ತು, ದಿನಕ್ಕೆರಡು ಸಾರಿ ಹೆಲ್ತ್ ಚೆಕ ಉಪ್, ರಕ್ತದ ಒತ್ತಡ ಎಲ್ಲದರ ಪರೀಕ್ಷೆಯಾಗಬೇಕು. ಉಸಿರಾಟ ಸಮರ್ಪಕವಾಗಿದೆಯೆ ಎಂದು   ಪರೀಕ್ಷಿಸಿಕೊಳ್ಳಬೇಕು. ಸಂಜೆ ನಂದನವನ್ ಸೇರಿ, ಆರೋಗ್ಯಪರೀಕ್ಷೆ ಊಟಗಳೆಲ್ಲ ಮುಗಿಸಿ ಟೆಂಟ್ ಗಳಲ್ಲಿ ಮಲಗಿದರೆ, ಮೇಲಿನ ಆಕಾಶದಲ್ಲಿನ ನಕ್ಷತ್ರಗಳು ಹುಚ್ಚು ಹಿಡಿಸುವಷ್ಟಿದ್ದವು, ಕವಿಯಲ್ಲದವನು ಕವಿಯಾಗುವನು ಅಲ್ಲಿ.  ಟೆಂಟ್ ಒಳಗೆ ಸೇರಿ ಮಲಗಿದರೆ ಆಗದು ಆಗಾಗ್ಯೆ ಹೊರಬರಬೇಕು ಅಲ್ಲಿನ ವಾತವರಣಕ್ಕೆ ಮೈಒಡ್ಡಬೇಕು. ಬೆಳಗ್ಗೆ ಇಬ್ಬರ ಆರೋಗ್ಯ ಕೈಕೊಟ್ಟಿತು. ಹೊಟ್ಟೆತೊಳಸು ವಾಂತಿಯಂತ ಲಕ್ಷಣಗಳು, ಅಲ್ಲಿಂದ  ಮೇಲೆ ಅವರು ಬರಲಾರೆವೆಂದರು. 
 
ಮುಂದಿನದು ಕಠಿಣ ಪಯಣ, ಅಪ್ಪರ್ ನಂದನವನ್ ಸೇರಿ, ಕ್ಯಾಂಪ್ – ೧ , ಕ್ಯಾಂಪ್ -೨ ಗೆ ಬೇಕಾದ ಸಾಮಾಗ್ರಿಯನ್ನೆಲ್ಲ ಸಾಗಿಸಬೇಕು. ೫೯೦೦ ಅಡಿಗಳ ಎತ್ತರದ ಸ್ಥಳದಲ್ಲಿ ಹೆಜ್ಜೆ ಇಡುವುದು ಒಂದು ಸವಾಲು.ಪ್ರತಿಯೊಬ್ಬರು ಹನ್ನೆರಡರಿಂದ ಹದಿನೈದು ಕೇಜಿಯಷ್ಟಾದರು ಸಾಮಗ್ರಿ ಹೊರುತ್ತ ನಡೆಯಬೇಕು ಮುಂದಿನ ಕ್ಯಾಂಪ್ ಗೆ, ಜೊತೆಗಿದ್ದ ಸಹಾಯಕರು ಸುಲುಭವಾಗಿಯೆ ೩೦ ಕೇಜಿ ಹೊತ್ತು ನಡೆಯುತ್ತಿದ್ದರು.   ಮದ್ಯಾನ್ಹ ಕಳೆದಿತ್ತು, ಭಾಗಿರಥಿ ಪರ್ವತದ ಸೊಭಗನು ಸವಿಯುತ್ತಲೆ ಹೆಜ್ಜೆ ಹಾಕುತ್ತಿದ್ದೆವು, ಎಲ್ಲರಿಗಿಂತ ಬಹುಷಃ ಹಿಂದೆ ನಾನಿದ್ದೆ, ಈ ಕ್ಯಾಂಪನ್ನು ತಲುಪಿದರೆ ನಾಳೆಯಿಂದ ನಿಜವಾದ ಸವಾಲು, ನನಗೆ ನಾಳಿನ ಕನಸು,  ಹತ್ತು ಜನರ ಗುಂಪಿನಲ್ಲಿ ಮುಂದಿನವರು ಇಟ್ಟ ಹೆಜ್ಜೆಯ ಮೇಲೆ ನಾವು ಸಾಗಬೇಕು, ಒಬ್ಬರಿಗೊಬ್ಬರಿಗೆ ಬೇರೆಯಾಗದಂತೆ ಹಗ್ಗ ಕಟ್ಟಿ ನಡೆಯುವುದು ಬ್ಲೇಡಿನಂತ ಉನ್ನತ ಮಾರ್ಗದಲ್ಲಿ. ಮುಂದಿನ ಕ್ಯಾಂಪ್ ಕಡೆಯದು, ನಾಳೆ ಬೆಳಗ್ಗೆ ಅಲ್ಲಿಂದ ಹೊರಟರೆ ಸಂಜೆಯ ಹೊತ್ತಿಗೆ ನಮ್ಮ ಗುರಿ ತಲುಪುವೆವು, ಭಾಗಿರಥಿಯ ಶೃಂಗವೇರಿ ನಿಂತರೆ ಅಲ್ಲಿಂದ ಏಳು ಸಾವಿರ ಅಡಿ ಎತ್ತರದ ಶಿವಲಿಂಗ್ ಪರ್ವತ ದರ್ಶನ ಎಲ್ಲ ನೆನೆಯುತ್ತ ಹೊತ್ತಿರುವ ಬಾರ ಹಗುರವಾದಂತೆ ಅನ್ನಿಸಿತು. 
 
 ವಾತವರಣದಲ್ಲಿ ಎಂತದೊ ಬದಲಾವಣೆ ಕಾಣಿಸುತ್ತಿತ್ತು, ಕುಳಿರ್ಗಾಳಿ ಪ್ರಾರಂಬವಾಯಿತು, ಹಿಮಾಲಯದ ಶೀತಲ ಮಾರುತ ಮುಖವನ್ನು ರಾಚುತ್ತಿತ್ತು. ಏಕೊ ಬರುಬರುತ್ತ ನಾವು ಕ್ಯಾಂಪ್ ತಲುಪುವುದು ಕಷ್ಟಸಾದ್ಯವೆನಿಸತೊಡಗಿತು, ನಾನು ಕಡೆಯಲ್ಲಿದ್ದೆ, ನನ್ನ ಮುಂದೆ ಸುಬ್ರಮಣ್ಯ, ನಂತರ ಒಬ್ಬ ಗೈಡ್ ಇದ್ದ, ಅವನಿಗಿಂತ ಮೇಲೆ ನಮ್ಮ ಬಾರಹೊರುವ ಸಹಾಯಕ. ಹಾಗೆ ಮೇಲೆ ಸುಮಾರು ಹತ್ತು ಪರ್ವತರೋಹಿ ಸದಸ್ಯರು, ಒಟ್ಟು ಹದಿನಾರು ಜನ ಒಬ್ಬರ ಹಿಂದೆ ಒಬ್ಬರು ಇರುವೆಯಂತೆ ನಡೆಯುತ್ತಿದ್ದೆವು. ಸ್ವಲ್ಪ ಮೇಲೆ ಮುಖ ಮಾಡಿ ನೋಡಿದೆ, ಭಾಗಿರಥಿಯ ಪರ್ವತ ತುದಿಯಿಂದ ಬೆಳ್ಳಿಯ ಅಲೆಯಂತೆ ನುಗ್ಗಿ ಬರುತ್ತಿರುವ ಹಿಮ ಕಾಣಿಸಿತು. ನನ್ನ ಮುಂದಿದ್ದ ಸುಬ್ರಮಣ್ಯ ಹಾಗು ಇತರರು ಗಾಭರಿಯಾಗಿರುವಂತೆ ಕಂಡರು. ನಮಗೆ ತಪ್ಪಿಸಿಕೊಳ್ಳುವ ಯಾವ ಮಾರ್ಗವು ಇಲ್ಲ. ನಾನು ಊಹೆ ಮಾಡಿದ ವೇಗಕ್ಕಿಂತ ಅದೆಷ್ಟೊಪಟ್ಟು ವೇಗದಲ್ಲಿ ಹಿಮಪಾತ ನಮ್ಮನ್ನು ಅಪ್ಪಳಿಸಿತು. ಯಾರು ಏನಾದರು ತಿಳಿಯುತ್ತಿಲ್ಲ, ನಾನು ಹಿಡಿತ ತಪ್ಪಿ ಹಿಮ್ಮುಖವಾಗಿ ಬಿದ್ದೆ, ನಂತರ ಏಳಲು ಹೋದವನು ಕೆಳಗೆ ಉರುಳಲು ಪ್ರಾರಂಬಿಸಿದೆ. ಎಲ್ಲರ ಚೀರಾಟ ಕೇಳಿಸುತ್ತಿತ್ತು. ಬೆನ್ನಿಗಿದ್ದ ಬ್ಯಾಗ್  ಬೇರ್ಪಟ್ಟಿತ್ತು, ಕೈ ಕಾಲುಗಳೆಲ್ಲ ಹಿಮದ ಕಲ್ಲುಗಳಿಗೆ ತಗಲುತ್ತಿರುವಂತೆ, ಉರುಳುತ್ತಿದ್ದ ನಾನು ಈಗ ಇದ್ದಕ್ಕಿದಂತೆ ಗಾಳಿಯಲ್ಲಿ ಹಾರುತ್ತಿರುವಂತೆ ಅನ್ನಿಸುತ್ತಿತ್ತು, ಕಣ್ಣಿಗೆ ಬಿಳಿ ಬಿಳಿ ಬಿಳಿ ಅನ್ನುವ ಬಿಳುಪಿನ ಹೊರತು ಮತ್ತೇನೊ ಕಾಣದು, ಬಹುಷಃ ನಾನು ಪಕ್ಕದ ಕಣಿವೆಗೆ ಜಾರಿದೆ ಅನ್ನಿಸುತ್ತೆ, ಗಾಳಿಯಲ್ಲಿ   ಚಲಿಸುತ್ತಿರುವೆ, ಯಾವ ಕ್ಷಣದಲ್ಲಿ ನೆಲಕ್ಕೆ ಅಪ್ಪಳಿಸುವೆ ಗೊತ್ತಿಲ್ಲ, ಇದು ನನ್ನ ಜೀವನದ ಕಡೆಯ ಕ್ಷಣ ಅಂದುಕೊಳ್ಳುತ್ತಿರುವಂತೆ,  ಯಾವುದೊ ವಸ್ತುವಿನ ಮೇಲೆ ಬಿದ್ದೆ ಮತ್ತೆ ಉರುಳುತ್ತ ಇರುವಂತೆ ನನ್ನ ಜ್ಞಾನ ತಪ್ಪಿತು. 
………..
 
ನಿದಾನವಾಗಿ ಕಣ್ತೆರೆದೆ. ಮೊದಲಿಗೆ ಎಲ್ಲಿರುವೆ ಎನ್ನುವ ಗುರುತು ಹತ್ತುತ್ತಿಲ್ಲ. ಕೈ ಊರುತ್ತ ಎದ್ದು ಕುಳಿತೆ. ಸುತ್ತಲು ಗಮನಿಸಿದೆ, ಎತ್ತ ನೋಡಿದರು ಯಾವ ದಿಕ್ಕಿಗು ಬಿಳಿ ಮಂಜಿನ ಹಾಸು.ಕಣ್ಣಿಗೆ ಬಿಳಿ ಬಣ್ಣದ ಹೊರತಾಗಿ ಯಾವುದೆ ಬಣ್ಣವಿಲ್ಲ. ಕಣ್ಣು ಮಂಜು ಮಂಜಾಯಿತು. ತಲೆ ಮೇಲೆತ್ತಿ ನೋಡಿದರೆ ಸ್ವಲ್ಪ ಕಪ್ಪು ಬಣ್ಣಕ್ಕೆ ಕಾಣುತ್ತಿದ್ದ ಆಕಾಶ, ಅಲ್ಲಲ್ಲಿ ಅಸ್ವಸ್ಟವಾಗಿದ್ದ ನಕ್ಷತ್ರಗಳು. ಸುತ್ತಲು ಬೆಳಕು ಹರಡಿದ್ದು, ಸೂರ್ಯ ಎಲ್ಲಿದ್ದಾನೆ ಎಂದು ಮಾತ್ರ ತಿಳಿಯುತ್ತಿಲ್ಲ. ಅದು ಬೆಳಗೊ ಸಂಜೆಯೊ ಮದ್ಯಾನ್ಹವೊ ಏನು ಅರ್ಥವಾಗುತ್ತಿಲ್ಲ. ಕೈ ಊರಿ ಎದ್ದು ಕುಳಿತಿದ್ದು ಎಡಕೈನ ಮುಂಗೈನಲ್ಲಿ ನೋವು ಕಾಣಿಸಿತು. ಸ್ವಲ್ಪ ಹೊತ್ತು ಹಾಗೆ ಕುಳಿತಿದ್ದು ಮನದಲ್ಲಿ ದೇಹದಲ್ಲಿ ಶಕ್ತಿಯನ್ನು ತುಂಬಿಕೊಂಡೆ. ನಿದಾನವಾಗಿ ಎದ್ದು ನಿಂತೆ. 
 
 ಒಮ್ಮೆ ಸುತ್ತಲು ನೋಡಿದೆ, ಹತ್ತಾರು ಮೈಲು ಸುತ್ತಳತೆ ಕಾಣಿಸುತ್ತಿದೆಯಾದರು ಬೆಟ್ಟ ಅಲ್ಲಲ್ಲಿ ಕಲ್ಲನು ಹೊರತು ಪಡಸಿ ಏನು ಕಾಣಿಸದು, ಮೇಲೆ ಆಕಾಶ. ನೀರವ ನಿಶ್ಯಬ್ದ ಮನಸನ್ನು ತುಂಬುತ್ತಿತ್ತು. ನಾನು ಮಲಗಿದ ಜಾಗದ ಕಡೆ ನೋಡಿದೆ. ವಿಚಿತ್ರ ಅನ್ನಿಸಿತು. ರಸ್ತೆಯಲ್ಲಿ ಅಪಘಾತವಾಗಿ ಯಾರಾದರು ಬಿದ್ದಲ್ಲಿ, ದೇಹ ನೆಲದಮೇಲೆ ಬಿದ್ದಿರುವ ಆಕಾರದಲ್ಲಿ  ಸೀಮೆಸುಣ್ಣದಲ್ಲಿ ಗೆರೆ ಹಾಕಿರುವದನ್ನು ಕಾಣಬಹುದು, ಆದರೆ ಇಲ್ಲಿ ನಾನು ಮಲಗಿದ್ದ ಜಾಗದಲ್ಲಿ ನನ್ನದೆ ಆಕಾರದ ಒಂದು ಹಳ್ಳ ಏರ್ಪಟ್ಟಿದ್ದು ನೋಡಲು ವಿಚಿತ್ರವೆನಿಸಿತು, ನಾನು ಮಲಗಿದ್ದಂತೆ ಕಾಲು ಕೈಗಳು, ದೇಹ ತಲೆ ಎಲ್ಲವು ಹಿಮದ ರಾಶಿಯಲ್ಲಿ ಕೊರೆದಂತೆ ಕಾಣಿಸಿತು. ನಾನು ಅಲ್ಲಿ ಎಷ್ಟು ಹೊತ್ತಿನಿಂದ ಮಲಗಿರುವೆ ಗೊತ್ತಾಗುತ್ತಿಲ್ಲ. ಆಗ ನೆನಪಿಸಿಕೊಂಡೆ ನಾನು ಗೆಳೆಯರೊಡನೆ ಭಾಗಿರಥಿ ಪರ್ವತ ಹತ್ತುತ್ತ ಇದ್ದದ್ದು, ಕಡೆಯ ಹಂತದಲ್ಲಿ ಹಿಮಪಾತಕ್ಕೆ ಸಿಕ್ಕಿ ನಾನು ಹಿಡಿತ ತಪ್ಪಿ ಕೆಳಗೆ ಉರುಳಿದ್ದೆ. ಈಗ ಇರುವ ಜಾಗ ಯಾವುದು ತಿಳಿಯುತ್ತಿಲ್ಲ, ನಾನಿನ್ನು ಭಾಗಿರಥಿಯ ಮೇಲೆಯೆ ಇರುವೆನೊ ಅಥವ ಕಂದರಕ್ಕೆ ಜಾರಿ ಮತ್ಯಾವುದೊ ಪರ್ವತದ ಮೇಲೆ ಬಿದ್ದಿರುವೆನೊ. ಕಡೆಗೆ ಯಾವ ದಿಕ್ಕಿನಿಂದ ಗಾಳಿಯಲ್ಲಿ ಹಾರಿಬಂದು ಅಥವ ಉರುಳಿ ಅಲ್ಲಿ ಬಿದ್ದೆ ಗೊತ್ತಾಗುತ್ತಿಲ್ಲ. 
 
 ಮುಂದಿನ ನನ್ನ ನಡೆಯೇನು ನಿರ್ದರಿಸಲಾಗುತ್ತಿಲ್ಲ, ಅಲ್ಲಿಂದ ಹೊರಡಬೇಕು, ಮೊದಲ ಸಮಸ್ಯೆ ಇದ್ದದ್ದು, ದಿಕ್ಕಿನದು,ನನ್ನ ಬಳಿ ದಿಕ್ಕನ್ನು ಅರಿಯುವ ಯಾವುದೆ ದಿಕ್ಸೂಚಿಯಂತ ವಸ್ತುವಿಲ್ಲ, ಸೂರ್ಯನ ಬೆಳಕು ಏಕತ್ರವಾಗಿ ಹರಡಿದ್ದು, ಬಿಳಿಯ ಬೆಳಕಿತ್ತೆ  ವಿನಃ ಅದು ಯಾವ ದಿಕ್ಕಿನಿಂದ ಬೀಳುತ್ತಿದೆ ಎಂದು ತಿಳಿಯಲಾಗುತ್ತಿಲ್ಲ.  ಎಲ್ಲ ದಿಕ್ಕುಗಳು ಏಕತ್ರವಾಗಿ, ಒಂದೆ ದಿಕ್ಕಾಗಿದೆ .  ಒಮ್ಮೆ ದಿಕ್ಕು ತಿಳಿಯಿತು ಅಂದರು ಸಹ ಯಾವುದೆ ಉಪಯೋಗವಿಲ್ಲ, ಏಕೆಂದರೆ ನಾನು ಇಲ್ಲಿಗೆ ಯಾವ ದಿಕ್ಕಿನಿಂದ ಬಂದು ಬಿದ್ದೆ, ಅಥವ ಈಗ   ಯಾವ ದಿಕ್ಕಿಗೆ ಚಲಿಸಿದರೆ ಎಲ್ಲರನ್ನು ಸೇರುವೆ ಅನ್ನುವುದು ನನಗೆ ತಿಳಿಯುತ್ತಿಲ್ಲ. ಕೆಳಗೆ  ಹರಡಿ ನಿಂತ ಅನಂತ ವೆನಿಸುವ ಬಿಳಿಯ ಹಿಮದಿಂದ ತುಂಬಿದ ಭೂಮಿ, ಮೇಲೆ  ಕವಿಚಿದಂತೆ ಹರಡಿನಿಂತ ನೀಲ ಗಗನ, ಎಲ್ಲಡೆಯು ತುಂಬಿ ನಿಂತ, ಬೆಳದಿಂಳಿನಂತ ಸಣ್ಣ ಬೆಳಕು, ನೀರವ ನಿಶ್ಯಬ್ದದ ನಡುವೆ ಏಕಾಂಗಿಯಾಗಿ ನಿಂತ ನಾನು. 
 
ನಾನು ಇಲ್ಲಿ ಬಂದು ಬಿದ್ದು ಎಷ್ಟು ಕಾಲವಾಗಿರಬಹುದು ಗೊತ್ತಾಗಲಿಲ್ಲ, ಜ್ಞಾನತಪ್ಪಿದ ಕಾರಣದಿಂದ ಸಮಯದ ಪ್ರಜ್ಞೆ ಹೊರಟುಹೋಗಿದೆ, ನನ್ನಲ್ಲಿದ್ದ ಬ್ಯಾಗ್ ಕೈ ತಪ್ಪಿದ್ದರಿಂದ ಯಾವುದೊ ವಸ್ತುವಿಲ್ಲ, ಕೈ ಎಲ್ಲಿಯೊ ತಗಲಿತೇನೊ ಕೈ ಗಡಿಯಾರವು ಇಲ್ಲ ಬಿದ್ದು ಹೋಗಿದೆ. ನಾನು ಇಲ್ಲಿ ಬಂದಿದ್ದು, ಇಂದೊ ಅಥವ ನಿನ್ನೆಯೊ, ಆದರೆ ನಿಲ್ಲಲು ಆಗದಷ್ಟು ಅಪಾರ ಸುಸ್ತು ಕಾಡುತಿತ್ತು, ಹಾಗಾಗಿ ಈಗ ನಡೆಯುವುದು ದೂರ ಉಳಿಯಿತು, ಹೊಟ್ಟೆಯ ಒಳಗೆಲ್ಲೊ ಹಸಿವಿನ ಸಂಕಟ, ಅದನ್ನು ಮೀರಿ ಗಂಟಲಲ್ಲಿ ತುಂಬಿದ ನೀರಿನ ದಾಹ ಎಲ್ಲವು ಕಾಡುತ್ತಿತ್ತು. ನಿದಾನವಾಗಿ ಹೆಜ್ಜೆಗಳನ್ನು ಇರಿಸಿದೆ,  ಬಹುಷಃ ರಾತ್ರಿಯಾಗುತ್ತಿದೆ ಅನ್ನಿಸುತ್ತಿದೆ. ಅಲ್ಲಿಂದ ನಡೆಯುತ್ತ ಹೊರಟೆ. ಆದರೆ ಹೆಚ್ಚು ದೂರ ನಡೆಯುವ ಶಕ್ತಿ ಇರಲಿಲ್ಲ, ಕತ್ತಲಲ್ಲಿ ಇರಲು ಹಿಮ ಹಾಗು ಗಾಳಿಯಿಂದ ತಪ್ಪಿಸಿಕೊಳ್ಳಲು ಯಾವುದಾದರು ಜಾಗ ತಕ್ಷಣಕ್ಕೆ ಬೇಕಾಗಿತ್ತು.  ಸಾಮಾನ್ಯವಾಗಿ ಬೆಟ್ಟಗಳಲ್ಲಿ ಬಂಡೆಗಳ ಅಡಿಯಲ್ಲಿ ಇರಲು ಗವಿಯಂತ ಜಾಗವಿರುತ್ತದೆ   ಅನ್ನುವುದು ಸಾಮಾನ್ಯ ಅನುಭವ
 
ಸುಮಾರು ಅರ್ದ ಕಿ.ಮಿ ಅಷ್ಟೆ ನಡೆಯಲು ಸಾದ್ಯವಾಯಿತು.  ಎದುರಿನಲ್ಲಿ ದೊಡ್ಡದೊಂದು ಬಂಡೆ ಮೇಲೆದ್ದು ಚಾಚಿತ್ತು, ಅದರ ಹತ್ತಿರ ಹೋಗಿ ಪರಿಶೀಲಿಸಿದೆ, ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ,  ಬಂಡೆಯ ಒಂದು ಬಾಗದಲ್ಲಿ,ಕೆಳಗೆ ಗುಹೆಯಂತಹ ಜಾಗವಿದ್ದು, ಒಬ್ಬ ವ್ಯಕ್ತಿ ಆರಾಮವಾಗಿ ತಲೆಬಗ್ಗಿಸಿ ಹೋಗಬಹುದಿತ್ತು,  ನನಗೆ ಮತ್ತೊಂದು ಯೋಚನೆ ಕಾಡಿತು, ಕತ್ತಲಿನಲ್ಲಿ ಒಳಗಿ ಹೋದರೆ, ಅಲ್ಲಿ ಇದ್ದರೆ ಯಾವುದಾದರು ಪ್ರಾಣಿಗಳಿದ್ದರೆ ಎಂದು . ಆದರೆ ಹಿಮಾಲಯದಲ್ಲಿ ಬೆಟ್ಟಗಳಲ್ಲಿ ಗುಹೆಯಲ್ಲಿ ಇರಬಹುದಾದ ಪ್ರಾಣಿಗಳ ಬಗ್ಗೆ ನನಗೆ ಯಾವುದೆ ಮಾಹಿತಿ ಇಲ್ಲ, ಆದರೆ ಅಲ್ಲಿ ನಾನಿದ್ದ ಎರಡು ಗಂಟೆಗಳಷ್ಟು ಅವದಿಯಲ್ಲಿ ನನ್ನ ಹೊರತು ಯಾವುದೆ ಜೀವವನ್ನು ಗಮನಿಸಲಿಲ್ಲ, ಹಾಗಾಗಿ ಗುಹೆಯ ಮುಂಬಾಗದಲ್ಲಿ ರಾತ್ರಿ ಕಳೆಯುವದಾಗಿ ನಿರ್ಧರಿಸಿದೆ, ಚಳಿ ದೇಹವನ್ನೆಲ್ಲ ತುಂಬುತ್ತಿತ್ತು, ನನ್ನ ಬೆನ್ನಿಗಿದ್ದ ಹರಿದು ಹೋದ ಬ್ಯಾಗನ್ನು ಬಿಚ್ಚಿ ಮುಖವನ್ನಾದರು ಮುಚ್ಚುವಂತೆ ಮಾಡಿಕೊಂಡೆ, ರಾತ್ರಿ ಅಲ್ಲಿ ಇರಲೆ ಬೇಕಾದ ಅನಿವಾರ್ಯತೆ. 
 
 ಹಿಮಾಲಯದ ಉನ್ನತ ಶಿಖರಗಳ ನಡುವೆ ಎಲ್ಲಿ ಎಂದು ಗೊತ್ತಿಲ್ಲದ, ಬೆಟ್ಟದ ಶೃಂಗ, ಮುಂದೆ ಕಾಣುವಂತೆ ನೆಲವನ್ನೆಲ್ಲ ಆವರಿಸಿದ ಬಿಳಿಯ ಹಿಮದ ಪದರ, ಎಲ್ಲವನ್ನು ಮುಚ್ಚಿಬಿಟ್ಟು ಕತ್ತಲು ಆ ಕತ್ತಲನ್ನು ಓಡಿಸುತ್ತ ಇದ್ದದ್ದು   ಮೇಲೆ ಶುಬ್ರ ಆಕಾಶ, ಅಸಂಖ್ಯಾತ ನಕ್ಷತ್ರ. ವಿಶಾಲ ಪ್ರಪಂಚದಲ್ಲಿ ನಾನೊಬ್ಬನೆ, ನಾನೊಬ್ಬನೆ , ರಾತ್ರಿ ಯಾವಾಗ ಆಯಿತು, ಇಂದು ಯಾವ ದಿನವೊ ಏನು ತಿಳಿಯದು, ರಾತ್ರೆ ಎಷ್ಟೋ ಹೊತ್ತಾದ ಮೇಲೆ, ಚಂದ್ರ ನಿದಾನವಾಗಿ ಮೇಲೆ ಬಂದು ಅಕಾಶವನ್ನೆಲ್ಲ ತುಂಬಿಕೊಂಡ, ನಾನು ಎಂದು ಅನುಭವಿಸಿರದ, ಅನುಭವಿಸಲು ಸಿಗದ, ಕವಿ ಕಲ್ಪನೆಗೆ ಸಿಗದ, ದೃಷ್ಯ ಕಣ್ಣ ತುಂಬುತ್ತಿತ್ತು, ಚಂದ್ರನ ಬೆಳದಿಂಗಳು ಹರಡಿದ ಹಿಮದ ಮೇಲೆ ಬಿದ್ದು, ಎಲ್ಲಡೆ ಹಾಲು ಚೆಲ್ಲಾಡಿದಂತ ವಾತವರಣ. ಆಕಾಶವನ್ನೆಲ್ಲ ತು೦ಬಿದ ಚಂದ್ರನ ಬೆಳಕು,  ನನ್ನಲ್ಲಿ ಎಂತದೊ ಅಪೂರ್ವವಾದ ಅನುಭವ ನೀಡುತ್ತಿತ್ತು. ಯಾವುದೊ ಉನ್ನತ ಭಾವ ನನ್ನಲ್ಲಿ ತುಂಬುತ್ತ, ನನ್ನಲ್ಲಿ ತುಂಬಿ ತುಳುಕುತ್ತಿದ್ದ ಹಸಿವು ನೀರಡಿಕೆ ಎಲ್ಲವು ನನ್ನೊಳಗೆ ಬತ್ತಿ ಹೋಯಿತು, ಯಾವಾಗಲೊ ನಿದ್ರೆ ನನ್ನ ಕಣ್ಣನ್ನು ತುಂಬಿಕೊಂಡಿತು.  ದೇಹಭಾದೆಗಳನ್ನೆಲ್ಲ ಮೀರಿ ಸುಖದ ನಿದ್ರೆಗೆ ಒಳಗಾಯಿತು ದೇಹ. 
 
~
ಮುಖದ ಮೇಲೆ ಸೂರ್ಯನ ಬಿಸಿಲ ಎಳೆಗಳು ಬಿದ್ದು ಎಚ್ಚರವಾಯಿತು,    ಹೆಚ್ಚುಕಡಿಮೆ ಬೆಳಗಿನ ಹತ್ತು ಗಂಟೆಯಂತು ಆಗಿದೆ ಅನ್ನಿಸಿತು.   ನಿದಾನವಾಗಿ ಹೊರಬಂದೆ, ಚಳಿಯ ಕೊರೆತವನ್ನು ಸೂರ್ಯನ ಬಿಸಿಲು ತಗ್ಗಿಸಿತ್ತು, ಆದರು ರಾತ್ರಿಯೆಲ್ಲ ಚಳಿಯಲ್ಲಿ ಮಲಗಿದ್ದು, ಕೈಕಾಲು ಬೆನ್ನು ಎಲ್ಲ ಮರಗಟ್ಟಿದಂತೆ , ರಕ್ತಸಂಚಾರವೆ ಇಲ್ಲದಂತೆ ಅನುಭವ. ಸೂರ್ಯನಿಗೆ ಬೆನ್ನುಮಾಡಿ ನಾನು ಮಲಗಿದ್ದ ಗುಹೆಯನ್ನು ನೋಡುತ್ತ ಹತ್ತು ನಿಮಿಷ ನಿಂತೆ, ಬೆನ್ನ ಮೇಲೆ ಬಿಸಿಲು ಬಿದ್ದ ಪರಿಣಾಮ ದೇಹವೆಲ್ಲ ಬಿಸಿಯಾಗಿತ್ತು, ಕೈಕಾಲುಗಳಲ್ಲಿ ರಕ್ತಸಂಚಾರವಾಗಿತ್ತು, ಆದರೆ ಹಾಗೆ ಹೆಚ್ಚು ಹೊತ್ತು ನಿಲ್ಲುವಂತಿರಲಿಲ್ಲ. ಈಗ ನಾನು ರಾತ್ರಿ ಇದ್ದ ಗುಹೆಯನ್ನು ಹೊರಗಿನಿಂದ ಗಮನಿಸಿದೆ, ಹೊರಗಿನ ಬೆಳಕು ಒಳಗೆ ಬೀಳುತ್ತಿತ್ತು. ಒಳಗೆ ಏನಿರಬಹುದು ಹೋಗಿ ನೋಡಬಹುದು ಅನ್ನಿಸಿತು, ರಾತ್ರಿಯೆಲ್ಲ ಅಲ್ಲಿಯೆ ಮಲಗಿರುವದರಿಂದ, ಯಾವುದೆ ಪ್ರಾಣಿಯ ದರ್ಶನವಾಗದೆ ಇರುವುದು ಒಳಗೆ ಬಹುಷಃ ಯಾವ ಪ್ರಾಣಿಯು ಇಲ್ಲ ಅನ್ನಿಸುತ್ತೆ. ಅಲ್ಲದೆ ನಿನ್ನೆಯೊ, ಮೊನ್ನೆಯೊ ನಾನು ಇಲ್ಲಿ ಬಂದು ನನಗೆ ಎಚ್ಚರ ಬಂದ ಗಳಿಗೆಯಿಂದ ಯಾವುದೆ ಪ್ರಾಣಿಯನ್ನು ನೋಡಿಲ್ಲ ಅಂತ ನೆನಯುವಾಗ, ಬಹುಷಃ ಸುತ್ತ ಮುತ್ತ ಯಾವುದೆ ಪ್ರಾಣಿ ಇರಲಾರದು ಅನ್ನಿಸುತ್ತೆ, ಎನ್ನುವ ತರ್ಕದೊಂದಿಗೆ ಒಳಹೋಗಲು ನಿರ್ದರಿಸಿದೆ. 
 
ಒಳಹೋಗುವ ನಿರ್ದಾರದೊಡನೆ, ಆ ಬಂಡೆಯ ಸುತ್ತ ಮುತ್ತ ಕಣ್ಣು ಆಡಿಸಿದೆ, ಬಂಡೆಯ ಎಡಬದಿಯಲ್ಲಿ, ಸ್ವಲ್ಪ ಹಸಿರುಬಣ್ಣದ ಪಾಚಿಯಂತೆ ಕಾಣಿಸಿತು, ಹತ್ತಿರ ಹೋಗಿ ನೋಡಿದೆ, ಅದು ಒಂದು ನೀರಿನ ಹರಿವು !. ಹೌದು ಸಣ್ಣ ನೀರಿನ ಝರಿಯೊಂದು, ಬಂಡೆಯ ಮೇಲ್ಬಾಗದಿಂದ ಜಿನುಗಿ ಕೆಳಗೆ ಸಣ್ಣ ದಾರದಂತೆ ಹರಿಯುತ್ತಿತ್ತು, ಆಶ್ಚರ್ಯವೆಂದರೆ, ನೆಲದ ಮೇಲೆ ಬಿದ್ದ ನೀರು ಮುಂದೆ ಹರಿಯದೆ, ಬಂಡೆಯ ಮುಂದೆ ಬಿದ್ದಿದ್ದ ಮತ್ತೊಂದು ಸಣ್ಣ ಬಂಡೆಯ ಅಡಿಯಲ್ಲಿದ್ದ ಜಾಗದಲ್ಲಿ ಒಳಗೆ ಹೋಗಿ ಕಣ್ಮರೆಯಾಗುತ್ತಿತ್ತು. 
 
ಈ ಬೆಟ್ಟದ ಮೇಲಿನ ನೀರಿನ ಝರಿಗಳನ್ನು ನೋಡುವಾಗ,   ಕಾಲೇಜಿನಲ್ಲಿ ಓದಿದ್ದ ಭೂಗರ್ಭಶಾಸ್ತ್ರದ ಪಾಠ ಒಂದು ನೆನಪಾಯಿತು, ನೀರು ನೆಲದ ಒಳಬಾಗದಲ್ಲಿ ಆಳದಲ್ಲಿ ಹರಡಿರುತ್ತದೆ, ಅದು ನೆಲದ ಒಳಗೆ ಅಂತರ್ಜಲದ    ರೂಪದಲ್ಲಿ ಇರುತ್ತದೆ, ಅದನ್ನು 'ವಾಟರ್ ಟೇಬಲ್ ' ಎನ್ನುವರು. ಸಾದರಣ ನೆಲದ ಮೇಲೆ ಆ ನೀರಿನ ಪದರ ಸಾಕಷ್ಟು ಆಳದಲ್ಲಿ ಇರುವುದು, ಆದರೆ ಕಲ್ಲಿನ ಬೆಟ್ಟಗಳ ಮೇಲೆ , ಅದೆ ನೀರಿನ ಪದರ ತೀರ ಮೇಲೆ,  ನೆಲದ ಮಟ್ಟಕ್ಕೆ ಇರುವುದು, ಕೆಲವೊಮ್ಮೆ ಅದು ನೆಲದಿಂದ ಚುಮ್ಮಿ ಹೊರಗೆ ಹರಿಯುವುದು, ಅದಕ್ಕೆ ನೆಲದ ಸವಕಳಿಯು ಕಾರಣವಾಗಿರುತ್ತದೆ, ಹಾಗಾಗಿ ಬೆಟ್ಟದ ತುದಿಗಳಲ್ಲಿ ನೀರಿನ ಮೂಲ ಜಾಸ್ತಿ. ದೇವರಾಯನ ದುರ್ಗದ ನಾಮದ ಚಿಲುಮೆಯಾಗಲಿ, ಶಿವಗಂಗೆಯ ಅಂತರ್ಗಂಗೆಯಾಗಲಿ ಹಾಗೆಯೆ. ಹಿಮಾಲಯದ ಪರ್ವತದ ತುದಿಗಳಲ್ಲು ಇಂತವೆ ಕೆಲವು ನದಿಗಳು ಹುಟ್ಟುವುವು, ಹಾಗೆ ಅಲ್ಲಿಯ ಹಿಮವು ಕರಗುವದರಿಂದ ನೀರಿನ ಹರಿವು ಹೆಚ್ಚು,  ಬಂಡೆಗಳ ಸಂದಿಗಳಲ್ಲಿ ನೀರಿನ ಒರೆತ ಹೆಚ್ಚು, ಆದರೆ ಅದು ಎಲ್ಲ ಕಾಲಕ್ಕು ಹಾಗೆ ಇರದೆ, ಕೆಲವೊಮ್ಮೆ ಕಾಲ ಕಾಲಕ್ಕೆ ಬದಲಾಗುತ್ತಲೆ ಇರುತ್ತದೆ.
 
ನಾನು ನಿದಾನವಾಗಿ ನೀರಿನ ಹತ್ತಿರಹೋಗಿ, ಕೈ ಮುಖ ತೊಳೆದು, ಬೊಗಸೆ ಒಡ್ಡಿದೆ, ಸಣ್ಣಗೆ ದಾರದಂತೆ ಬರುತ್ತಿದ್ದ ನೀರು ಬೊಗಸೆ ತುಂಬುತ್ತಲೆ, ಸ್ವಲ್ಪ ಕುಡಿದು ನೋಡಿದೆ, ಸಿಹಿಯಾದ ನೀರು, ಸಾಕಷ್ಟು ರುಚಿಯಾಗಿತ್ತು, ಹಾಗೆ ಒಂದೆರಡು ಬೊಗಸೆ ಕುಡಿದವನು, ಕಡೆಗೆ ಬಾಯನ್ನೆ ನೀರ ದಾರೆಗೆ ಹಿಡಿದೆ, ಸ್ವಲ್ಪ ಸ್ವಲ್ಪವಾಗಿ, ನಿದಾನವಾಗಿ ಕುಡಿಯುತ್ತಿದ್ದೆ. ಮನಸಿಗೆ ಎಂತದೊ ತೃಪ್ತಿ ಅನ್ನಿಸಿತು, ದೇಹವು ಸ್ವಲ್ಪ ಹಗುರವಾಯಿತು ಅನ್ನಿಸಿತು. ಹಾಗೆ ಬಿಸಿಲಿನಲ್ಲಿ ಸ್ವಲ್ಪ ಕಾಲ ಕುಳಿತೆ. 
 
ಈಗ ಗುಹೆಯ ಕಡೆಗೆ ನನ್ನ ಗಮನ ಹರಿಯಿತು, ಕೈಗೆ ಕೋಲಿನಂತದು ಏನಾದರು ಸಿಗಬಹುದೆ ಅಂತ ನೋಡಿದೆ, ಆದರೆ ಏನು ಸಿಗುವ ಹಾಗಿರಲಿಲ್ಲ. ನಿದಾನವಾಗಿ ಗುಹೆಯ ಒಳಗೆ ಹೋದೆ, ಅಲ್ಲಿಯ ಬೆಳಕಿಗೆ ಕಣ್ಣು ಹೊಂದಿಸಿಕೊಳ್ಳುತ್ತ ಸುತ್ತಲು ನೋಡಿದೆ, ಅಲ್ಲಿ ಚಿಕ್ಕ ರೂಮಿನಷ್ಟು ಜಾಗವಿರುವ ಹಾಗಿತ್ತು, ಹಿಂಬಾಗಕ್ಕೆ ಗೋಡೆಯ ಹತ್ತಿರ , ಎಂತದೊ ಮಂಚದಂತ ರಚನೆ, ಕಲ್ಲಿನಲ್ಲಿ ಆಗಿರುವುದೆ, ಆದರೆ ಅದರ ಮೇಲೆ ಏನದು ಮನುಷ್ಯ ಆಕಾರವೆ? ಸ್ವಲ್ಪ ಅಚ್ಚರಿ ಅನಿಸಿತು, ಹತ್ತಿರ ಹೋಗಿ ನೋಡಿದೆ, ಎದೆಯಲ್ಲಿ ಎಂತದೊ ನಡುಕ.
 
 ಹೌದು ಕಲ್ಲಿನ  ಮೇಲೆ ಇದ್ದದ್ದು, ಒಂದು ಮನುಷ್ಯ ದೇಹವೆ, ಆದರೆ , ಅದು ಜೀವಂತ ಇರುವಂತೆ ಇರಲಿಲ್ಲ. ಸತ್ತ ದೇಹವೆಲ್ಲ ಜೀರ್ಣವಾಗಿ ವಿಕಾರಗೊಂಡಿತ್ತು. ನೋಡಿದರೆ ನಗುತ್ತಿರುವಂತೆ ಬಿರಿದ ಹಲ್ಲು,  ಒಳಗೆ ಬರಿ ಮೂಳೆಗಳ ರಚನೆ ಉಳಿದು, ಮೇಲೆ ಚರ್ಮದ ಹೊದಿಕೆ, ಆದರೆ  ಆ ಚರ್ಮವು ಹಳೆಯ ಆಲೂಗೆಡ್ಡೆಯ ಸಿಪ್ಪೆಯಂತೆ  ಅಲ್ಲಲ್ಲಿ ದೇಹಕ್ಕೆ ಅಂಟಿಕೊಂಡಿತ್ತು. ದೇಹವನ್ನು ನೋಡುವಾಗ ಮಲಗಿರುವ ವ್ಯಕ್ತಿಯು ಮರಣ ಹೊಂದಿ ಬಹಳ ಕಾಲವಾಗಿರುವಂತಿದೆ, ಮೇಲಿನ ಬಟ್ಟೆಗಳು ಸಾಕಷ್ಟು ಶಿತಿಲಗೊಂಡಿದ್ದವು,  ಆಗೆ ಇನ್ನೊಂದು ಅಚ್ಚರಿ ಕಾಣಿಸಿತು, ಕಲ್ಲಿನ ಮೇಲೆ ಕುಳಿತಿರುವ ದೇಹಕ್ಕೆ ಎದುರಾಗಿ, ಕಲ್ಲಿನ ಕೆಳಬಾಗಕ್ಕೆ, ಮತ್ತೊಂದು ದೇಹ, ಅದು ತಲೆಯನ್ನು ಕಲ್ಲಿನ ಮೇಲೆ ಇಟ್ಟು ಮಲಗಿದ್ದಂತೆ ಇದ್ದು , ಅದು ಸಹ ಇದೆ ದೇಹದ ಪರಿಸ್ಥಿಥಿಯಲ್ಲಿಯೆ ಇದ್ದಿತು. ಇಬ್ಬರು ಗಂಡಸರ ಶವ.
 
  ಕಲ್ಲಿನ ಬಲಬಾಗದಲ್ಲಿ ಗಮನಿಸಿದರೆ, ಕಬ್ಬಿಣದ ಊರುಗೋಲಿನಂತ ಕೋಲು, ನೋಡುವಾಗಲೆ ಹೊಳೆಯಿತು, ಅದು ಪರ್ವತಾರೋಹಿಗಳು ಬಳಸಬಹುದಾದಂತ ಸ್ಟಿಕ್ . ಅಲ್ಲಿಗೆ ಇವರು ಯಾರೊ ಪರ್ವತಾರೋಹಿಗಳು, ಪರಿಸ್ಥಿಥಿಯ ಒತ್ತಡಕ್ಕೆ ಸಿಲುಕಿಯೊ ಎನೊ, ಇಲ್ಲಿ ಬಂದು ಸೇರಿದ್ದಾರೆ, ಅತೀವ ಹಿಮಪಾತವೊ, ಮತ್ತೇನೊ ಇವರು ಇಲ್ಲಿ ಹೊರಗೆ ಹೋಗದಂತೆ ಸಿಕ್ಕಿಬಿದ್ದು, ಮರಣಹೊಂದಿರಬಹುದು ಅನ್ನಿಸಿತು, ನಾನು ಸಹ ಈಗ ಅದೆ ಪರಿಸ್ಥಿಥಿ ಹೆಚ್ಚು ಕಡಿಮೆ ಎಂದು ನೆನದೊಡನೆ ಎದೆಯಲ್ಲಿ ಎಂತದೊ ಕಂಪನ ಹುಟ್ಟಿತು. ನನ್ನ ಪರಿಸ್ಥಿಥಿಯು ಇದೆ ಆಗಬಹುದೆ, ಇವರ ಪಕ್ಕದಲ್ಲಿ ನಾನು ಮೂರನೆ ದೇಹವಾಗಿ ಮಲಗುವನೆ ಅನ್ನಿಸಿದಾಗ ದೇಹವನ್ನೆಲ್ಲ ಭಯ ಆವರಿಸಿತು. 
 
ಹಾಗೆ ಎಚ್ಚರದಿಂದ ಗಮನಿಸಿದೆ, ಮೇಲೆ ಕುಳಿತ ವ್ಯಕ್ತಿಯ ಶವದ ಎದುರಿಗೆ, ನೆಲದ ಮೇಲೆ ಸಣ್ಣದೊಂದು ಕಂದುಬಣ್ಣದ ಕವರ್ ಇದ್ದ, ಡೈರಿಯಂತದ್ದು   ಕಾಣಿಸಿತು. ಅದನ್ನು ತೆಗೆಯುವೊದೊ ಬೇಡವೊ, ಅದು ಶವಕ್ಕೆ ಸೇರಿದ ವಸ್ತುವಲ್ಲವೆ ಹಾಗಾಗಿ ದ್ವಂದ್ವ,ಒಂದೆರಡು ಕ್ಷಣ ಯೋಚಿಸಿದೆ, ಅದನ್ನು ತೆಗೆದು ಓದುವುದೆ ಸರಿ, ಆಗ ಈ ಗುಹೆಯ ಪರಿಸ್ಥಿತಿ ನನಗೆ ಅರಿವಾಗುವುದು, ಸಹಾಯವು ಆಗಬಹುದು ಅನ್ನಿಸಿತು. ಮುಂದೆ ಬಗ್ಗಿ ಅದನ್ನು ತೆಗೆದುಕೊಳ್ಳುವಾಗ, ಮೈಯಲ್ಲಿ ಎಂತದೊ ನಡುಕ, ಕಣ್ಣುಗಳು ಆ ಮೂಳೆ ಚರ್ಮದ ದೇಹದ ಮೇಲೆ ನೆಟ್ಟಿತ್ತು. ಅಂಗ್ಲ ಸಿನಿಮ ಮಮ್ಮಿಯ ನೆನಪು ಬೇಡ ಬೇಡವೆಂದರು ಮನಸು ತುಂಬುತ್ತಿತ್ತು. ಶಬ್ದವಾಗದಂತೆ ನಿದಾನವಾಗಿ ಹೊರಬಂದೆ.
 
 ಗುಹೆಯಿಂದ ಸ್ವಲ್ಪ ದೂರದಲ್ಲಿದ್ದ ಸಣ್ಣ ಬಂಡೆಯತ್ತ ನಡೆದು ಅದರ ಮೇಲೆ ಕುಳಿತೆ, ವಾತವರಣ ಹಿತಕರವಾಗಿತ್ತು. ಮೊದಲು ಡೈರಿಯನ್ನು ತೆರೆದು ಓದುವುದೆ ಸರಿ ಅನ್ನಿಸಿತು. ಮೊದಲ ಪುಟ ತೆರೆದು ಹೆಸರು ವಿವರಗಳತ್ತ ಕಣ್ಣಾಡಿಸಿದೆ.  ಹೆಸರು ವಿಲಿಯಂ, ಟಾಕ್ಸಾಸ್ ನಗರದವ , ಅಂದರೆ ಅಮೇರಿಕಕ್ಕೆ ಸೇರಿದವನೆ ಇವನು! . ಡೈರಿ ಎಲ್ಲವು ಅಂಗ್ಲಬಾಷೆಯಲ್ಲಿತ್ತು. ಆದರೆ ತಾರೀಖು, ಅದು ಪ್ರಾರಂಬವಾಗಿದ್ದೆ, ಮೇ ತಿಂಗಳ, 1956 ರ ಇಸವಿಯಲ್ಲಿ, ಮೈಗಾಡ್ ಅಂದರೆ ಈ ಡೈರಿ ಬರೆದಿರುವುದು, ಇವರು ಸತ್ತಿರುವುದು ನಾನು ಹುಟ್ಟುವ ಕಾಲಕ್ಕಿಂತ ಮೊದಲು !! . ಒಂದೆರಡು ಪುಟ ಕಣ್ಣಾಡಿಸಿದೆ, ಏಪ್ರಿಲ್ ತಿಂಗಳ ಕಡೆಯಲ್ಲಿ ದೆಹಲಿಯಿಂದ ಗಂಗೋತ್ರಿಗೆ ಬಂದವನು ಇವನು. ದೂರದ ಟಾಕ್ಸಾಸ್  ನಿಂದ ಭಾರತ ಹಿಮಾಲಯ ಹತ್ತುವ ಹುಚ್ಚಿನೊಡನೆ ಗಂಗೋತ್ರಿಗೆ ಬಂದಿಳಿದ ಇವನ ಜೀವ ಹಿಮಾಲಯದ ಗುಹೆಯಲ್ಲಿ ಕೊನೆ ಆಯಿತೇಕೆ?. ಇವನ ಜೊತೆ ಇರುವ ಮತ್ತೊಬ್ಬ ಯಾರಿರಬಹುದು ಸಹ ಯಾತ್ರಿಯೆ , ಎಂದು ಯೋಚಿಸುತ್ತ ಅವನ ಡೈರೆಯ ಮೇಲೆ ಕಣ್ಣಾಡಿಸುತ್ತ ಹೋದೆ, ಅಲ್ಲಲ್ಲಿ ಒಂದೆರಡು ಸಾಲಿನಂತೆ ಬರೆದಿದ್ದ , ಒಂದೆ ಸಮ ಡೈರಿ ಬರೆಯುವ ಅಭ್ಯಾಸವಿಲ್ಲದವನು, ಮನಸು ಬಂದಾಗ ಒಂದೆರಡು ಸಾಲು ಗೀಚಿದ್ದಾನೆ, ಹಾಗೆ ಕಡೆಗೆ ಬರುತ್ತಿರುವಂತೆ, ಸತತವಾಗಿ ಹಲವಾರು ಪುಟ ತುಂಬಿಸಿರುವುದು ಕಂಡು ಕುತೂಹಲದಿಂದ ಓದಲು ಪ್ರಾರಂಬಿಸಿದೆ
 
 "ನಾವು ಭಾಗಿರಥಿ ಹತ್ತುಲು ಪ್ರಾರಂಬಿಸಿದ ಸಮಯದಿಂದ ಪ್ರಕೃತಿ ಏಕೊ ನಮಗೆ ವಿರುದ್ದವಾಗಿಯೆ ಇತ್ತು,  ನಂದನವನ್ ದಾಟಿದ ನಂತರ ಪ್ರಕೃತಿ ಸಂಪೂರ್ಣ ಮುನಿದಿತ್ತು, ನಾನು ನನ್ನ ಪರ್ವತ ಹತ್ತುವ ಕೆಲಸ ನಿಲ್ಲಿಸಿ ಹಿಂದಿರುಗಿದ್ದರೆ ಉತ್ತಮ ನಿರ್ಧಾರವಾಗುತ್ತಿತ್ತು, ಆದರೆ ಒಂದು ದಿನ ನೋಡಿ ನಂತರ ನಿರ್ಧಾರತೆಗೆದುಕೊಳ್ಳೋಣ ಅಂತ ಕ್ಯಾಂಪ್ ಹಾಕಿ ಉಳಿದೆ, ಅದೆ ತಪ್ಪಾದುದ್ದು, ರಾತ್ರಿ ಬೀಕರ ಬಿರುಗಾಳಿ, ಹಿಮದ ಪ್ರವಾಹ, ಕುಸಿದ ಕಣಿವೆ ಎಲ್ಲವು ಬೀಕರ ಅನುಭವವಾಗಿತ್ತು, ಕ್ಯಾಂಪಿನಲ್ಲಿದ್ದ ಐವರಲ್ಲಿ ಮೂವರು ಎಲ್ಲಿ ಹೋದರೊ ನನಗೆ ತಿಳಿಯುತ್ತಿಲ್ಲ, ನನ್ನ ಗೈಡ್ ಹಾಗು ಸಹವರ್ತಿಗಳು ಬಾಗಿರಥಿಯ ಕತ್ತಲಲ್ಲಿ ಕರಗಿಹೋದರು. 
 
ನಾನು ಇಲ್ಲಿ ದಾರಿ ತಪ್ಪಿ ಅಲೆಯುವಾಗ ಜೊತೆಗೆ ಉಳಿದವನು ನಮ್ಮ ಶೇರ್ಪಾ ಚಾಮ್ ಬಾ ಮಾತ್ರ ಅವನ ಜೊತೆ ಅನಾಥನಂತೆ ಹಿಮಾಲಯದ ಈ ಬಾಗದಲ್ಲಿ ಎರಡು ದಿನ ಅಲೆದೆ, ಆದರೆ ಇಲ್ಲಿಂದ ಹೊರಹೋಗುವ ಎಲ್ಲ ಮಾರ್ಗಗಳು ಮುಚ್ಚಿಹೋಗಿದ್ದವು. ಬೀಕರ ಹಿಮಪಾತ ಶುರುವಾಗಿತ್ತು, ಒಂದೆರಡು ದಿನದಲ್ಲಿ ನಿಲ್ಲಬಹುದು ಅಂದುಕೊಂಡದ್ದು, ಮುಂದುವರೆದೆ ಇತ್ತು, ನಾವು ಹೇಗೊ ಈ ಬಂಡೆಯ ಕೆಳಗಿನ ಗುಹೆಯಂತ ಜಾಗ ಹಿಡಿದೆವು, ರಾತ್ರಿ ಇರಲು ಜಾಗವೇನೊ ಸಿಕ್ಕಿತು,  ಇಬ್ಬರನ್ನು ಕಾಡುತ್ತಿದ್ದ,  ಬೀಕರ ಹಸಿವು ನಮ್ಮ ಹತ್ತಿರ ತಿನ್ನಲು ಎನು ಇರಲಿಲ್ಲ .  ಕಡೆಗೆ ಎದುರಿಗೆ ಸಿಗುವ ಯಾವುದೆ ಪ್ರಾಣಿಯನ್ನಾದರು ಹಿಡಿದು,   ತಿನ್ನುವ ಎಂದರೆ ಯಾವ ಪ್ರಾಣಿಯು ಕಾಣಿಸಲೆ ಇಲ್ಲ, ನಮ್ಮ ಶಕ್ತಿ ಪೂರ್ಣ ಕುಂದಿಹೋಗಿತ್ತು, ಈ ಗುಹೆ ಸೇರಿ ಎಷ್ಟು ದಿನವಾಯಿತು ಅನ್ನುವ ಲೆಕ್ಕವು ತಪ್ಪಿಹೋಯಿತು, ಹಗಲು ಯಾವುದೊ ರಾತ್ರಿ ಯಾವಾಗ ಬರುವುದೊ ಗಮನಿಸುವ ಶಕ್ತಿ ಇಲ್ಲ, ಹಿಮಪಾತ ನಿಂತ ನಂತರ ಇಲ್ಲಿಂದ ಹೊರಡೋಣ ಅನ್ನುವ ನಮ್ಮ ನಿರ್ಧಾರ ಕೈಗೂಡಲೆ ಇಲ್ಲ, ಅಲ್ಲದೆ ಜೊತೆಗಿದ್ದ ಚಾಮ್ ಬಾ ಗೆ ಕಾಲಿಗೆ ಏಟುಬಿದ್ದು ಅವನು ನಡೆಯದಂತಾದ, ಅವನಿಗೆ ಶುಗರ್ ಇತ್ತೊ ಏನೊ ಏನು ಗೊತ್ತಿಲ್ಲ, ಮೂರನೆಯ ದಿನ ಅವನು ನನ್ನ ಕಣ್ಣೆದುರೆ ಸತ್ತು ಹೋದ. ಸಾಯುವಾಗಲು ಅವನ ಬಾಯಲ್ಲಿ ಬರುತ್ತಿದ್ದ ಪದ ಒಂದೆ 
"ಹಸಿವು ಹಸಿವು, ಸುಸ್ತು… ಏನಾದರು ತಿನ್ನಲು ಕೊಡಿ" ಎಂದು. 
 
 ನನ್ನ ಬಳಿ ಅವನಿಗೆ ತಿನ್ನಲು ಕೊಡಲು ಏನು ಇರಲಿಲ್ಲ. ಇದೆ ಗುಹೆಯಲ್ಲಿಯೆ ಅವನು ಸತ್ತು ಹೋದ. ಹೊರಗೆ ಅದೆ ವಾತವರಣ ಮುಂದುವರೆದಿತ್ತು, ಬೀಕರ ಹಿಮಗಾಳಿ, ಹಿಮಪಾತ, ಎಂದಿಗೂ ಕಾಣದ ಸೂರ್ಯ. ನನಗೆ ಏನು ಮಾಡುವಂತಿರಲಿಲ್ಲ, ಬೆಳಕು ಪೂರ ನಂದುತ್ತ ಬಂದಿತು ಆಗ ಸಂಜೆ ಇರಬಹುದೇನೊ, ನಾನು ದಾರಿ ತಪ್ಪಿ ಇಲ್ಲಿ ಬಂದು ಐದು ದಿನವಾಗಿರಬಹುದು, ಯಾವ ದಿಕ್ಕಿನಲ್ಲು ಹಿಮದ ಹೊರತು ಮತ್ತೇನು ಇಲ್ಲ ಮನುಷ್ಯ ಸಂಪರ್ಕವೆ ಇಲ್ಲ, ಒಂಟಿ ಗುಹೆ, ಒಳಗೆ ನನ್ನ ಎದುರಿಗೆ ಶೇರ್ಪಾನ ಹೆಣ. 
 
ರಾತ್ರಿ ಹಾಗೆ ಕಳೆಯುವುದು ಹೇಗೆ, ಕಷ್ಟ ಪಟ್ಟು ಅವನನ್ನು ಎಳೆಯುತ್ತ ಈಚೆ ತಂದು, ಗುಹೆಯಿಂದ ಹತ್ತು ಅಡಿ ದೂರದಲ್ಲಿ ನನ್ನ ಕೈಲಿ ಇದ್ದ ಸ್ಟಿಕ್ ನಿಂದಲೆ ಸ್ವಲ್ಪ ಹಳ್ಳ ಮಾಡಿ ಅವನನ್ನು ಮಲಗಿಸಿ ಮೇಲೆ ಹಿಮ ಮುಚ್ಚಿದೆ, ದುಃಖದಿಂದ ಒಳಬಂದೆ, ನನ್ನನ್ನು ಕಾಡುತ್ತಿದ್ದ ಹಸಿವು, ನೀರಡಿಕೆ, ಎಂದಿಗೂ ಮುಗಿಯದ ಬೀಕರ ಹಿಮಗಾಳಿ. ಕಣ್ಣುಮುಚ್ಚಿ ಮಲಗಿದೆ, ಅರ್ದ ಎಚ್ಚರ ಅರ್ದ ನಿದ್ರೆ ಅದು ನಿದ್ರೆಯೊ ಜ್ಞಾನತಪ್ಪುತ್ತಿರುವ ಚಿನ್ಹೆಯೊ ಅರ್ಥವಾಗುತ್ತಿಲ್ಲ,  ಮರುದಿನ ಎಚ್ಚರವಾಯಿತು, ಎಷ್ಟು ಹೊತ್ತಾಗಿತ್ತೊ ಗೊತ್ತಿಲ್ಲ, ಹೊರಗಿನ ಗುಹೆಯ ದ್ವಾರದಿಂದ ಸ್ವಲ್ಪ ಬೆಳಕು ಬೀಳುತ್ತಿತ್ತು, ಏತಕ್ಕೊ ಪಕ್ಕಕ್ಕೆ ತಿರುಗಿದೆ, ಹೆದರಿ ಹೋದೆ, ನಿನ್ನೆ ಸಂಜೆ ನಾನೆ ಹಿಮದಲ್ಲಿ ಸಮಾದಿಮಾಡಿಬಂದಿದ್ದ ಶೇರ್ಪಾನ ಶವ ನನ್ನ ಎದುರಿಗೆ ಅವನು ಸತ್ತಾಗ ಹೇಗೆ ಇತ್ತೊ ಹಾಗೆ ಮಲಗಿತ್ತು, 
 
 ನನ್ನ ಹೃದಯದಲ್ಲಿ ಅರ್ಥವಾಗದ ಭಯ ಇಲ್ಲಿ ಏನಾಗುತ್ತಿದೆ, ಅವನು ಸತ್ತಿದ್ದೆ ಸುಳ್ಳೆ ನಾನು ಹೊರಗೆ ಅವನನ್ನು ಎಳೆದೋಯ್ದು ಹಿಮದಲ್ಲಿ ಸಮಾದಿ ಮಾಡಿ ಬಂದಿದ್ದು ಸುಳ್ಲೆ, ಅಥವ ಹಸಿವು, ಒಂಟಿತನ , ಕೊನೆಯಿಲ್ಲದ ಹಿಮದ ಬಿಳುಪು ನನ್ನನ್ನು ಮಾನಸಿಕ ಅಸ್ವಸ್ಥ ನನ್ನಾಗಿಸಿದೆಯ, ನಿನ್ನೆ ಆಗಿದೆ ಅಂತ ನಾನು ಅಂದುಕೊಳ್ಳುತ್ತಿರುವುದು ಬರಿ ಕಲ್ಪನೆಯ. ಏನು ನಡೆದೆ ಇಲ್ಲವ .  ಮತ್ತೊಮ್ಮೆ ಕಷ್ಟದಿಂದ ಎದ್ದು ಪರೀಕ್ಷಿಸಿದೆ , ಅವನು ಸತ್ತು ಹೋಗಿರುವುದು ನಿಜ. ನನಗೆ ಯೋಚನೆಗೆ ಇಟ್ಟುಕೊಂಡಿತು, ಹೀಗೇಕೆ ಆಯಿತು, ಈ ಬಾರಿ ನನ್ನ ಮನಸಿಗೆ ನಾನೆ ಮೋಸ ಮಾಡಿಕೊಳ್ಳಬಾರದು. 
 
ಹೊರಗೆ ಬಂದು ನೋಡಿದೆ, ಬಿರುಗಾಳಿ ನಿಂತಿತ್ತು, ಆದರೆ ಹಿಮಪಾತ ಮುಂದುವರೆದಿತ್ತು, ಬಹುಷಃ ಇಂದು ಸಂಜೆ ಪೂರ್ಣ ನಿಲ್ಲ ಬಹುದು, ಹಾಗೆ ಆದಲ್ಲಿ ನಾಳೆ ಏನೆ ಆಗಲಿ ನಡುವೆ ಬಿದ್ದು ಸತ್ತರು ಪರವಾಗಿಲ್ಲ, ಇಲ್ಲಿಂದ ಹೊರಟುಬಿಡುವೆ ಎಂದು ನಿರ್ದರಿಸಿದೆ, ಮತ್ತೆ ಹೆಣವನ್ನು ಹೊರಗೆ ತಂದು, ಹತ್ತು ಅಡಿ ದೂರದಲ್ಲಿ, ಶವವನ್ನು ಮಲಗಿಸಿ, ಹಿಮದಿಂದ ಮುಚ್ಚಿ ಒಳಗೆ ಹೋದೆ, ಜೇಬಿನಲ್ಲಿ ಡೈರಿ ಮತ್ತು ಪೆನ್ನು ಹೇಗೊ ಉಳಿದಿತ್ತು, ಬರೆಯುವುದು ಕಷ್ಟ ಆದರೆ ನನ್ನ ಮನಸನ್ನು ನಂಬಿಸಲು, ನಡೆದಿರುವ ಪೂರ್ಣ ಘಟನೆಯನ್ನು ಹಾಗೆಯೆ ಬರೆದಿಟ್ಟೆ. ಸಂಜೆಯವರೆಗು ಹೇಗೆ ಕಳೆಯಿತು ಗೊತ್ತಿಲ್ಲ ಹಿಮಪಾತವು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿತ್ತು,   ಬೆಳಗ್ಗೆ ಎಲ್ಲವು ಸ್ವಷ್ಟವಾಗುತ್ತದೆ  . ಪುನಃ ಅದೆ ಉಪವಾಸ. ದೇಹದ ಶಕ್ತಿ ಎಲ್ಲ ಮುಗಿದು  ಹೋಗಿದೆ…. ಇನ್ನು ಮಲಗುವುದು ಅಷ್ಟೆ"
 ಅವನ  ಡೈರಿ ಅಲ್ಲಿ ನಿಂತು ಹೋಗಿತ್ತು. 
~
 
ನಾನು ತಲೆ ಎತ್ತಿ ಸುತ್ತಲು ದಿಟ್ಟಿಸಿದೆ, ಎಂತಹ ದೃಷ್ಯ.  ಕಣ್ಣು ಹರಿಸುವವರೆಗು ಸುತ್ತಲು ಬಿಳಿಯ ಹಿಮದ ನೃತ್ಯ, ಆಗಿನ್ನು ಹುಟ್ಟಿ ಬೆಳಗುತ್ತಿರುವ ಸೂರ್ಯನ ಆಶಾಕಿರಣ. ಎದುರಿಗೆ ಗುಹೆ, ನಡುಮದ್ಯದಲ್ಲಿ ಅಪರಿಚಿತನ ಡೈರಿ ಹಿಡಿದು ಓದುತ್ತ ಕುಳಿತ ನಾನು. ಏನು ತೋಚಲಿಲ್ಲ. ಪುನಃ ಎದ್ದು ಗುಹೆಯ ಒಳಗೆ ಹೋದೆ. ಅವರಿಬ್ಬರ ದೇಹ ಅದೇ ಬಂಗಿಯಲ್ಲಿ ಇದ್ದಿತು. ನಾನು ಶಬ್ದವಾಗದಂತೆ ಡೈರಿಯನ್ನು ಅದೇ ಜಾಗದಲ್ಲಿಟ್ಟೆ. ಇವರನ್ನು ಹೊರಗೆ ತಂದು ಶವಸಂಸ್ಕಾರ ಮಾಡುವುದೆ ಅನ್ನುವ ಯೋಚನೆ ತಲೆಯಲ್ಲಿ ಬಂದಿತು, ಆದರೆ ತಕ್ಷಣ ಅದು ತಪ್ಪೆನಿಸಿತು, ಪ್ರಕೃತಿಯ ನಡುವೆ ಗುಹೆಯೆ ಅವರಿಬ್ಬರ ಸಮಾದಿ ಮಾಡಿದೆ, ನಾನು ಪುನಃ ಅವರನ್ನು ಸಮಾದಿಯಿಂದ ಹೊರಗೆ ತರುವುದು ಬೀಕರ ತಪ್ಪು ಅನ್ನಿಸಿತು. ಹಾಗೆ ನೋಡಿದರೆ ನಾನು ಅವರ ಸಮಾದಿಯಲ್ಲಿ ಹೋಗಿ ರಾತ್ರಿಯೆಲ್ಲ ಮಲಗಿರುವೆ, ಹೊರತಾಗಿ ಅವರು ಹೊರಬರುವುದು ತಪ್ಪು. 
 
  ನನ್ನಿಂದ ಇನ್ನೇನು ಮಾಡಲು ಸಾದ್ಯವಿರಲಿಲ್ಲ. ಒಂದು ಕ್ಷಣ ಅವರಿಬ್ಬರ ಶವಗಳ ಎದುರು ಕೈಮುಗಿದು ನಿಂತೆ.  ಅವರಿಬ್ಬರ ಆತ್ಮಕ್ಕು ಶಾಂತಿ ಸಿಗಲಿ, ಸ್ವರ್ಗದಲ್ಲಿ ಅವರಿಬ್ಬರಿಗು ಹಸಿವು ನೀರಡಿಕೆ ನೀಗುವ ಅನುಕೂಲ ಸಿಗಲಿ ಎಂದು, ಅವರಿಬ್ಬರಿಬ್ಬರಿಗಾಗಿ ಒಂದು ಕ್ಷಣ ಮೌನ ಆಚರಿಸಿದೆ. ನನ್ನ ಕೈಲಿ ಆಗುವುದೆ ಇಷ್ಟೆ ಎನ್ನುತ್ತ, ಅವನ ಪಕ್ಕದಲ್ಲಿದ್ದ ಸ್ಟಿಕ್ ಅನ್ನು ಕೈಲಿ ಹಿಡಿದು, ಗುಹೆಯಿಂದ ಹೊರಬಿದ್ದೆ. ಇನ್ನು ಅಲ್ಲಿರುವದರಲ್ಲಿ ಯಾವುದೆ ಅರ್ಥವಿರಲಿಲ್ಲ. ಅಲ್ಲಿ ಇದ್ದವರ ಸ್ಥಿಥಿ ಏನಾಗಿದೆ ಅಂತ ಕಣ್ಣೆದುರು ಇದೆ, ಮಾರ್ಗ ಮದ್ಯದಲ್ಲಿ ಜೀವ ಹೋದರು ಸರಿ,ಅಲ್ಲಿ ಹೊರಡುವುದು ಉತ್ತಮ ನಿರ್ಧಾರ ಎಂದು ಮನಸಿಗೆ ಅನ್ನಿಸಿತು. 
 
ಸೂರ್ಯನ ಎದುರು ನಿಂತೆ, ಈಗ ದಿಕ್ಕನ್ನು ನೆನೆದೆ ಸೂರ್ಯ ಹುಟ್ಟುವಾಗ ಎದುರು ನಿಂತರೆ ಅದೆ ಪೂರ್ವ, ಎಡಬಾಗ ಉತ್ತರ, ಬಲಬಾಗ ದಕ್ಷಿಣ, ಹಿಂಬಾಗ ಪಶ್ಚಿಮ. ನನ್ನ ಮನವು ಏಕೊ  ನಾನು ಉತ್ತರಕ್ಕೆ ನಡೆಯಬೇಕೆಂದು ನಿರ್ದರಿಸಿತು. ಮನಸಿಗೆ ತೋಚಿದಂತೆ ನಡೆಯುವುದು ಮುಂದಿನದು ಅದೃಷ್ಟ ಎನ್ನುತ್ತ  , ಉತ್ತರಕ್ಕೆ, ಮೇಲ್ಬಾಗಕ್ಕೆ ನಡೆಯುತ್ತ ಹೊರಟೆ. 
 
ಎಷ್ಟು ಕಾಲ ನಡೆಯುತ್ತಿದ್ದೆ ಅರ್ಥವಾಗುತ್ತಿಲ್ಲ, ಆಗಲೆ ನಡು ಮದ್ಯಾನ್ಹ ದಾಟಿರಬಹುದೇನೊ, ಸೂರ್ಯನ ಬಿಸಿಲಿನ ಝಳವನ್ನು ತಡೆಯಲು ಆಗುತ್ತಿಲ್ಲ, ಕಣ್ಣಿಗೆ ಕಪ್ಪು ಕನ್ನಡಕವಿಲ್ಲ ಹಾಗಾಗಿ ಹಿಮದ ಮೇಲೆ ಬಿದ್ದ ಬಿಸಿಲಿನಿಂದಾಗಿ ಕಣ್ಣು ಕೋರೈಸುತ್ತಿದೆ. ಎಷ್ಟು ಕಾಲ ನಡೆಯಬಲ್ಲೆ ದೇವರೆ, ಇನ್ನು ನನ್ನ ಕೈಲಿ ಆಗುವದಿಲ್ಲ. ಆಗ ಯೋಚನೆ ಬಂತು, ನಾನು ಸಹ ಅವರಿಬ್ಬರಂತೆ ಇಲ್ಲೆ ಬಿದ್ದು ಸಾಯುವೆನ., 
 
 ಅವರಿಬ್ಬರಿಗೆ ನಾನು ಅರ್ಪಿಸಿದ ಒಂದು ನಿಮಿಷ ಮೌನದ ನೆನಪು ಬಂದಿತ್ತು. ಇದ್ದಕ್ಕಿದಂತೆ ಅನ್ನಿಸಿತು ಅಲ್ಲ ಎಂತ ಪೆದ್ದ ನಾನು, ಸುಮಾರು ಅರವತ್ತು ವರ್ಷಗಳಿಂದ ಅವರೆದುರು ಮೌನ ಅನ್ನುವುದು ಅಗಾದವಾಗಿ ಬಿದ್ದುಕೊಂಡಿದೆ, ಪ್ರಕೃತಿಯೆ ಅವರಿಗೆ ಅದನ್ನು ಅರ್ಪಿಸಿದೆ, ಹಾಗಿರಲು ನಾನು ಪುನಃ ಅವರಿಬ್ಬರಿಗೆ ಒಂದು ನಿಮಿಷ ಮೌನವನ್ನೆ ಕಾಣಿಕೆಯನ್ನಾಗಿ ಅರ್ಪಿಸಿದ್ದೆ. ಎಂತ ಮೂರ್ಖ ನಾನು. ಅನ್ನಿಸಿ ನಗು ಉಕ್ಕಿ ಬಂತು,ನನ್ನನ್ನು ನೋಡಲು ಯಾರು ಇರಲಿಲ್ಲ,     ಜೋರಾಗಿ ನಕ್ಕೆ, ಹಾಗೆ ನಕ್ಕ ಕಾರಣಕ್ಕೆನೊ ದೇಹವೆಲ್ಲ ಸಡಿಲವಾಯಿತು. ಹಿಡಿದಿದ್ದ ಬೆನ್ನು ಸ್ವಲ್ಪ ಬಿಟ್ಟಿತು. 
 
ಮತ್ತೆ ನಡೆಯುತ್ತ ಇದ್ದೆ,ದೇಹದಲ್ಲಿದ್ದ ಶಕ್ತಿ ಎಲ್ಲ ತೀರಿ ಹೋಯಿತು, ಇನ್ನು ನಡೆಯುವ ಶಕ್ತಿ ಇರಲಿಲ್ಲ, ಎತ್ತಲು ಮನುಷ್ಯನ ಸುಳಿವೆ ಇರಲಿಲ್ಲ. ನಾನು ಎಷ್ಟು ನಡೆದೆನೊ ನನಗೆ ತಿಳಿಯುತ್ತಲು ಇಲ್ಲ. ಇನ್ನು ಆಗದು ಅನ್ನಿಸಿತು, ಕಣ್ಣು ಮುಚ್ಚಿ ಒಂದು ಕ್ಷಣ ನಿಂತೆ. ಕಿವಿಯಲ್ಲಿ ಎಂತದೊ 'ಗೂಯ್'  ಎನ್ನುವ ಶಬ್ದ, ನಿಶ್ಯಕ್ತಿಗೆ ಇರಬಹುದು. ಮತ್ತೆ ಅದೆ ಶಬ್ದ, ಈಗ ಅನ್ನಿಸಿತು ಅದು ಹೊರಗಿನಿಂದ ಕೇಳುತ್ತಿರುವ ಶಬ್ದ. ಬಹುಷಃ ವಿಮಾನದ ಶಬ್ದವೆ? ತೋಚಲಿಲ್ಲ
 
ಒಂದೆರಡು ಕ್ಷಣ ಅಗಸದಲ್ಲಿ ಚುಕ್ಕೆಯೊಂದು ಗೋಚರಿಸಿದಂತೆ ಶಬ್ದ ಹತ್ತಿರವಾಯಿತು. ಗುರುತಿಸಿದೆ ಅದು ವಿಮಾನವಲ್ಲ ಯಾವುದೊ ಹೆಲಿಕಾಫ್ಟರ್ !!.  ನನ್ನಲ್ಲಿದ್ದ ಎಲ್ಲ ಶಕ್ತಿ ಯನ್ನು ಕ್ರೂಡಿಕರಿಸಿದೆ, ಕೈ ಮೇಲಿತ್ತಿ ಬೀಸಿದೆ, ಕೂಗಲು ಯಾವ ಶಕ್ತಿಯು ಇರಲಿಲ್ಲ, ಕೆಳಮಟ್ಟದಲ್ಲಿದ್ದ ಆ ಹೆಲಿಕಾಫ್ಟರ್ ನನ್ನನ್ನು ಗಮನಿಸಿತೊ ಇಲ್ಲವೊ ತಿಳಿಯಲಿಲ್ಲ. ಮುಂದೆ ಹೋಯಿತು. ಅಲ್ಲಿಗೆ ಮುಗಿಯಿತು ಅಂದುಕೊಂಡು ನಿರಾಸನಾದೆ, ಒಂದು ಕ್ಷಣ. ಹೆಲಿಕಾಫ್ಟಾರ್  ತಿರುವು ಪಡೆದು ಹಿಂದೆ ಬಂದು ಮತ್ತೆ ನನ್ನ ಮೇಲ್ಬಾಕ್ಕೆ ಬಂದಿತು, ಮತ್ತೆ ಕೈ ಆಡಿಸಿದೆ, ನನ್ನನ್ನು ಅವರು ಗಮನಿಸಿದಂತೆ ಅನ್ನಿಸಿತು, ಹೆಲಿಕಾಫ್ಟರ್ ಕೆಳಮಟ್ಟಕ್ಕೆ ಬಂದು ಅದರಿಂದ ಒಂದು ಹಗ್ಗದ ಏಣಿ ಹಾಗು ವ್ಯಕ್ತಿಯೊಬ್ಬ ಕೆಳಗೆ ಬರುತ್ತಿರುವುದು ಕಾಣಿಸಿತು. ನನ್ನಲ್ಲಿ ಎಂತದೊ ನಿಶ್ಯಕ್ತಿ ಆವರಿಸಿ ಕುಸಿದೆ.
~
 
ಗಂಗೋತ್ರಿಯಿಂದ ದೆಹಲಿಗೆ ಹೊರಟಿದ್ದೆವೆ. ಹಿಮಾಲಯದಲ್ಲಿ ದಾರಿ ತಪ್ಪಿ ಎರಡು ದಿನ ಕಳೆದ ನಾನು ಪುನಃ ನನ್ನ ಗುಂಪನ್ನು ಕೂಡಿಕೊಂಡಿದ್ದೆ. ಹಿಮಪಾತದಿಂದ ಚದುರಿಹೋದ ಗುಂಪನ್ನು ಹುಡುಕಲು, 'ದ ಗ್ರೇಟ್ ಹಿಮಾಲಯನ್ ಟ್ರಕ್ಕಿಂಗ್ ಅಶೋಸಿಯೆಷನ್ ನನವರು ಹೆಲಿಕಾಫ್ಟರ್ ನ ಸೇವೆ ಬಳಸಿದ್ದರು, ನಾನು ಜೀವನದಲ್ಲಿ ಮೊದಲಸಾರಿ ಹೆಲಿಕಾಫ್ಟರ್ ಹತ್ತಿದ್ದರು, ನನಗೆ ಆಗ ಅರಿವಿಲ್ಲದ ಕಾರಣ ಅದರ ಅನುಭವವಾಗಲೆ ಇಲ್ಲ. ಗಂಗೋತ್ರಿಯ  ಆಸ್ಪೆಟಲ್ ನಲ್ಲಿ ನಾನು ವಾರ ಕಳೆದಿದ್ದೆ.  ಗಂಗೋತ್ರಿಯ ನಮ್ಮ ಕ್ಯಾಂಪ್ ನಿಂದ ನಾನು ಅಷ್ಟು ದೂರದಲ್ಲಿ ಸಿಕ್ಕಿದ್ದು ಅವರಿಗೆ ಅಚ್ಚರಿಯಾಗಿತ್ತು, ನಾನು ಹೇಗೆ ಅಲ್ಲಿ ಸೇರಿದೆ ಎಂದು. 
 
 ಹಿಮಪಾತದಲ್ಲಿ ಬೀಳುವಾಗ ತಲೆಯ ಹಿಂಬದಿಗೆ ಏಟು ಬಿದ್ದ ಕಾರಣ , ಪರೀಕ್ಷಿಸಲು ಅಲ್ಲಿ ಇಟ್ಟು ಕೊಂಡಿದ್ದರು. ಎಡಗೈನ ಮುಂಗೈ ಬಳಿ ಮೂಳೆಗೆ ಏಟು ಬಿದ್ದ ಕಾರಣ ಬ್ಯಾಂಡೇಜ್ ಹಾಕಿದ್ದರು. ಆದರೆ ಡಾಕ್ಟರ್ ತಿಳಿಸಿದಂತೆ ಹದಿನೈದು ದಿನದಲ್ಲಿ ಎಲ್ಲವು ನಾರ್ಮಲ್ ಆಗುವದೆಂದು ಯಾವುದೆ ಅಪಾಯವಿಲ್ಲೆಂದು ತಿಳಿಸಿದ್ದರು. ದುಃಖದ ಸಮಾಚಾರವೆಂದರೆ ನಮ್ಮ ಹದಿನಾರು ಜನರ ಗುಂಪಿನಲ್ಲಿ ಇಬ್ಬರು ಶಾಶ್ವತ ಕಣ್ಮರೆಯಾಗಿದ್ದರು, ಅವರು ಸಿಗುವ ಸಾದ್ಯತೆ ಕಡಿಮೆ ಎಂದರು ನಮ್ಮ ಗೈಡ್ ಹಾಗು ಇತರರು. 
ನಮ್ಮ ಗೈಡ್ ಆಗಿದ್ದ ರಾಜಾಸಿಂಗ್ ಹೇಳಿದ,
"ಬಾಗಿರಥಿಯಲ್ಲಿ ಇಂತದು ನಡೆಯುವುದು ತುಂಬಾನೆ ಅಪರೂಪ, ನಮ್ಮ ಅದೃಷ್ಟ ಕೆಟ್ಟದಾಗಿತ್ತು ಅಷ್ಟೆ, ಗಿರೀಶ್ ನೀವು ಚಿಂತಿಸಬೇಡಿ, ಮುಂದಿನ ವರ್ಷ ಬನ್ನಿ ನಿಮ್ಮನ್ನು ,ಸುಭ್ರಮಣ್ಯರನ್ನು ಬಾಗಿರಥಿಯ ಶಿಖಿರ ತಲುಪಿಸುವುದು ನನ್ನ ಜವಾಬ್ದಾರಿ. ಈಗ ಆಗಿರುವದಕ್ಕೆ ಬೇಸರಪಡಬೇಡಿ" 
 
ನಾನು ಹೇಳಿದೆ,
"ಹೌದು ರಾಜ ಸಿಂಗ್, ಇದು ಕೆಟ್ಟ ಅನುಭವವಾಗಿರಬಹುದು, ಆದರೆ ಇದು  ಹಿಮಾಲಯದ ಒಂದು ಮುಖ, ನನಗೆ ಯಾವ ಬೇಸರವು ಇಲ್ಲ, ಏನಾದರು ಸರಿ ಬಾಗಿರಥಿಯನ್ನು ಹತ್ತಲೆ ಬೇಕೆಂಬ ಛಲ ಇದೆ, ಮುಂದಿನ ವರ್ಷ ಖಂಡೀತ ಬರುವೆ, ನಿಮ್ಮ ಜೊತೆ ಬಾಗಿರಥಿಯನ್ನು ಹತ್ತುವೆ" 
 
ದೆಹಲಿ ಸೇರಿ , ಬೆಂಗಳೂರಿಗೆ ಟ್ರೈನ್ ಹತ್ತಿ ಪಯಣಿಸುವಾಗ, ನನಗೆ ಹಿಮಾಲಯದ ಆ ಬಂಡೆಯ ಗುಹೆಯಲ್ಲಿದ್ದ ಇಬ್ಬರದೆ ನೆನಪು, ನನಗೆ ಅರ್ಥವಾಗದಿದ್ದ ವಿಷಯವೆಂದರೆ, ಮೊದಲ ದಿನ ವಿಲಿಯಂ , ಚಾಮ್ ಬಾ ಶೇರ್ಪಾನ ಶವವನ್ನು ಹೊರಗೆ ತಂದು ಸಮಾದಿ ಮಾಡಿದ್ದನ್ನು ಭ್ರಮೆ ಎಂದು ಭಾವಿಸಿದರು  ಸಹ ,  ಎರಡನೆ ದಿನ ಬರವಣೆಗೆಯಲ್ಲಿ ನಮೂದಿಸಿ, ಶವ ಸಂಸ್ಕಾರ ಮಾಡಿದ್ದ, ಅದು ಭ್ರಮೆಯಾಗಿರಲು ಸಾದ್ಯವಿಲ್ಲ, ಆದರೆ ಆ ಶವ ಪುನಃ ಒಳಗೆ ಹೇಗೆ ಬಂದಿತು. ನಾನು ನೋಡುವಾಗಲು ಎರಡನೆ ಶವ ಅವನು ಹೇಳಿದ ಬಂಗಿಯಲ್ಲೆ, ಅವನ ಮುಂದೆ ಇತ್ತು, ಅದನ್ನು ಕಂಡು ಬಹುಷಃ  ಹೆದರಿ , ಹೃದಯಘಾತವಾಗಿ ಅವನು ಸತ್ತನ, ಅಥವ, ಹಸಿವು ಚಳಿ ಗಾಳಿಗೆ ಅವನು ಬಲಿಯಾದನ ಅನ್ನುವ ಯೋಚನೆ ನನ್ನ ಮನಸನ್ನು ತಿನ್ನುತ್ತಿತ್ತು. 
——————
– ಮುಗಿಯಿತು

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

18 Comments
Oldest
Newest Most Voted
Inline Feedbacks
View all comments
parthasarathyn
10 years ago

 
ಹಿನ್ನುಡಿ : ಸುಮಾರು ೧೯೮೨-೮೭ ರ ಕಾಲದಲ್ಲಿ ಕನಕಪುರದಲ್ಲಿ ಇದ್ದೆ, ಆಗೆಲ್ಲ ಸ್ನೇಹಿತರೊಡನೆ ಸುತ್ತಮುತ್ತ ಸುತ್ತುವುದು ಒಂದು ಚಟ. ಒಮ್ಮೆ ಹೀಗೆ ನಡೆಯುತ್ತ ದೊಡ್ಡಗುಡ್ಡ (ಬೆಟ್ಟ) ಹತ್ತಿದೆವು, ಆಗಲೆ ಸೂರ್ಯಮುಳುಗುವ ಹೊತ್ತಾಗುತ್ತಿತ್ತು, ಮೇಲ್ಬಾಗದಲ್ಲಿ ಕಲ್ಲಿನ ಬುಡದಲ್ಲಿ ಗುಹೆಯಂತ ರಚನೆ ಇತ್ತು, ಒಳಗೆ ಹೋದಾಗ ಕಲ್ಲಿನ ಮೇಲೆ, ಮನುಷ್ಯದೇಹವೊಂದನ್ನು ಕೂಡಿಸಿದ್ದರು, ಅದು ಬೀಳದಂತೆ, ಕವೆಗೋಲೊಂದು ಆದಾರವಾಗಿತ್ತು, ಮತ್ತು ಅದು ಅಲ್ಲಿ ಕುಳಿತು ಎಷ್ಟೋ ವರ್ಷಗಳಾಗಿರಬಹುದು, ಮೊದಲು ಕವಿದ ಭಾವ ಭಯ. ಹೊರಗೆ ಬಂದುಬಿಟ್ಟೆವು, ನಂತರ ರಾತ್ರಿ ನಾನು ಬಾಡಿಗೆಗಿದ್ದ ರೂಮಿನ ಯಜಮಾನ , ಅದೆ ಊರಿನವರು, ಅವರ ಬಳಿ ವಿಷ್ಯ ತಿಳಿಸಿದೆ, ಅವರು, ಹೇಳಿದ ಪ್ರಕಾರ, ಕೆಲವು ಪಂಗಡಗಳಲ್ಲಿ ಒಂದು ಪದ್ದತಿ ಇತ್ತಂತೆ, ಗರ್ಭಿಣಿ ಹೆಣ್ಣು ಆಕಸ್ಮಿಕವಾಗಿ ಸತ್ತರೆ, ಅವಳನ್ನು ಮಣ್ಣು ಮಾಡದೆ, ಹಾಗೆ ಕಲ್ಲಿನ ಪೊಟರೆಯಲ್ಲಿ ಕೂಡಿಸಿ ಬರುತ್ತಿದ್ದರಂತೆ , ನನಗು ನಿಜವಿರಬಹುದು ಅನ್ನಿಸಿತು,
 ಆ ನೆನಪಿನ ಆದಾರದಲ್ಲಿ ಈ ಕತೆ ಬರೆದಿರುವೆ. ಈಗ ಆ ಬೆಟ್ಟ ಇದೆಯೊ ಅಥವ ಕಲ್ಲಿನ ಆಸೆಗೆ ಬೆಟ್ಟವನ್ನೆ ಕರಗಿಸಿದ್ದಾರೊ ತಿಳಿಯದು, 
 
 

parthasarathy
parthasarathy
10 years ago
Reply to  parthasarathyn

ಹಾಗೆಯೆ ನನ್ನ ಕತೆಗೆ ಪೂರಕವಾಗಿ ರೇಖಾಚಿತ್ರ ರಚಿಸಿ ಕೊಟ್ಟಿರುವ ಅರುಣ್ ನಂದಗಿರಿಯವರಿಗೆ ನನ್ನ ವಂದನೆಗಳು
– ಪಾರ್ಥಸಾರಥಿ

Hipparagi Siddaram
Hipparagi Siddaram
10 years ago

ಸರ್, ತುಂಬಾ ದೀರ್ಘವಾದ ಮತ್ತು ಉಸಿರು ಬಿಗಿ ಹಿಡಿದು ಕುತೂಹಲದಿಂದ ಓದಿಸಿಕೊಳ್ಳುವಂತಹ ಅನುಭವ ಕಥಾನಕ…ನಿಮ್ಮ ಅನುಭವ ಮೂಟೆಯಲ್ಲಿಯ ಒಂದೊಂದು ಅನರ್ಘ್ಯಸಂಪತ್ತಿನ ಅನುಭವಗಳನ್ನು ಅಕ್ಷರ ರೂಪಕ್ಕಿಳಿಸಿದ ನಿಮಗೆ ಅಭಿನಂಧನೆಗಳು….ಶುಭದಿನ !

parthasarathyn
10 years ago

ಮೆಚ್ಚುಗೆಗೆ ವಂದನೆಗಳು ಸಿದ್ದರಾಮ್ ಸಾರ್ 

Utham Danihalli
10 years ago

Adbhuthavada lekana romanchakari lekana odhi romanchithanadhe shubhavagali

parthasarathyn
10 years ago

ಉತ್ತಮ್ ದನಿಹಳ್ಳಿಯವರೆ ತಮ್ಮ ಮೆಚ್ಚುಗೆಗೆ ನನ್ನ ಧನ್ಯವಾದಗಳು

ಸಪ್ತಗಿರಿವಾಸಿ -ವೆಂಕಟೇಶ
ಸಪ್ತಗಿರಿವಾಸಿ -ವೆಂಕಟೇಶ
10 years ago

ಗುರುಗಳೇ  ಪಂಜು ನಲ್ಲಿ ಪ್ರಕಟಿಸಲು ಹೊಸ ಕಥೆಯೇ ಆಗಿರಬೇಕು -ಹೀಗಾಗಿ ನೀವ್ ಇಲ್ಲಿ ಹೊಸ ಕಥೆ ಹೊಸೆದಿರುವಿರಿ -ಇನ್ತ್ರೆಸ್ತಿಂಗ್  ಆಗಿದೆ ಎಲ್ಲ ಸರಿ , ಆದ್ರೆ ಈ ತರಹದ ನಿಮ್ಮ ಹೊಸ ಬರಹಗಳನ್ನು ನಾವ್ ಸಂಪದದಲ್ಲಿ  ಮಿಸ್ ಮಾಡಿಕೊಳ್ತೀವಲ್ಲ -ಅದ್ಕೇನು ಪರಿಹಾರ ? ನೀವ್ ಇಲ್ಲಿಯ ಬರಹಗಳನ್ನು ಅಲ್ಲೂ ಸೇರ್ಸ್ತೀರ (ಇಲ್ಲಿ ಪ್ರಕಟ ಆದ )ಮೇಲೆ  ….. ಆಮೇಲೆ ನಿಮ್ಮ  ಆ ಬೆಟ್ಟದ  ಗುಹೆಯ  ದೇಹದ ಬಗ್ಗೆ ಈ ಹಿಂದೆಯೇ  ಸಂಪದದಲ್ಲಿ ಮತ್ತು ನಿಮ್ಮ ಬ್ಲಾಗ್ನಲ್ಲಿ  ಬರೆದ ಹಾಗೆ ನೆನಪು ….

ಶುಭವಾಗಲಿ…

\।/

gaviswamy
10 years ago

ಓದುತ್ತಾ ಹೋದಂತೆ ದೃಶ್ಯಗಳು ತಂತಾನೇ  ಕಣ್ಣ ಮುಂದೆ ಹಾದು ಹೋದವು.
ಮೈನವಿರೇಳಿಸುವ ಕಥೆ.
Awesome story!
thank u sir.

 

parthasarathyn
10 years ago
Reply to  gaviswamy

ಮೆಚ್ಚುಗೆಗೆ ಧನ್ಯವಾದಗಳು, ಆದರು ನಿಮ್ಮ ಲಲಿತ ನಿರೂಪಣೆಯಂತೆ ನನ್ನ ಬರಹಗಳು ಬರಲಾರವು

mamatha keelar
mamatha keelar
10 years ago

ತುಂಬಾ ರೋಮಾಂಚಕಾರಿಯಾಗಿದೆ….

parthasarathyn
10 years ago
Reply to  mamatha keelar

ವಂದನೆಗಳು ಮಮತಾರವರಿಗೆ 

Rajendra B. Shetty
10 years ago

ಒಳ್ಳೆಯ ನಿರೂಪಣೆ. ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಾಗುತ್ತಾ ಇತ್ತು. ಕಥೆಯ ಕೊನೆಯೂ ಚೆನ್ನಾಗಿತ್ತು. ಜೆಫ್ರಿ ಆರ್ಚರ್ ನ ಒಂದು ಕಾದಂಬರಿ(ಹೆಸರು ನೆನಪಾಗುತ್ತಿಲ್ಲ) ನೆನಪಾಯಿತು. ಹಿಮಾಲಯದ ಹಿಮ ಕಣ್ಣಮುಂದೆ ಕಾಣುತಿತ್ತು ಅನ್ನುವುದು ಸುಳ್ಳಲ್ಲ. ಅಭಿನಂದನೆಗಳು ಪಾರ್ಥ ಸಾರಥಿಯವರೆ.

parthasarathyn
10 years ago

ವಂದನೆ ರಾಜೇಂದ್ರ ಬಿ ಶೆಟ್ಟಿರವರಿಗೆ ಮತ್ತೊಬ್ಬರು ಅದೆ ತಿಳಿಸಿದರು  book-paths of glory ಎಂದು. ಆದರೆ ನನಗಂತು ಅಂಗ್ಲ ಪುಸ್ತಕ ಓದುವ ಹವ್ಯಾಸ ಕಾಲೇಜಿನದ ದಿನಗಳ ನಂತರ ಬಿಟ್ಟೆ ಹೋಯಿತು. ಮತ್ತೆ ಪ್ರಾರಂಬಿಸುವ ಮನಸಿದೆ.   ಈಚೆಗೆ ಕನ್ನಡ ಕಾದಂಬರಿ ಓದುವುದು ಕಡಿಮೆ ಆಗಿಹೋಗಿದೆ 🙂  ಆದರು ಪುಸ್ತಕದ ಹೋಲಿಕೆ ಯಾವ ರೀತಿ ಎಂದು ಮತ್ತೊಬ್ಬರು ತಿಳಿಸಲಿಲ್ಲ,  ಪರ್ವತಾರೋಹಣವೊ ಅಥವ ಗುಹೆಗೆ ಸಂಬಂದಿಸಿದ ನಿಗೂಡತೆಯ ಬಗೆಯೊ, ಎರಡರಲ್ಲಿ ಯಾವ ವಿಷ್ಯ ಪುಸ್ತಕಕ್ಕೆ ಹೋಲುತ್ತಿದೆ ತಿಳಿಸಿದರೆ ಚೆನ್ನಾಗಿತ್ತು
ವಂದನೆಗಳೊಡನೆ 
ಪಾರ್ಥಸಾರಥಿ

Venkatesh
Venkatesh
10 years ago

Very nice story and informative too..
Enjoyed it !

parthasarathy
parthasarathy
10 years ago
Reply to  Venkatesh

thank you…
 

Rajendra B. Shetty
10 years ago

Path of glory by Jefrey Archer
ನಿಮ್ಮ ಲೇಖನ ಓದುವಾಗ ಈ ಪುಸ್ತಕದ ನೆನಪಾಯಿತು, ಹಾಗೆಯೇ ಒಂದು ಇಂಗ್ಲೀಶ್ ಚಿತ್ರ ಸಹ(ವರ್ಟಿಕಲ್ ಸ್ಪ್ಲಿಟ್ ಅಥವಾ ಬೇರೇನೋ) – ಎರಡೂ ಹಿಮಾಲಯದ ಬಗೆಗೆ.
ಪುಸ್ತಕ ಪರ್ವತಾರೋಹಣದ ಬಗೆಗೆ – ತುಂಬಾ ಆಳವಾಗಿ ಅಭ್ಯಾಸ ಮಾಡಿ ಬರೆದ ಕಾದಂಬರಿ – ನಿಜ ಕಥೆಯ ಅಧಾರಿತ. ತೇನ್ಸಿಂಗ್ ಮತ್ತು ಹಿಲೇರಿಗಿಂತಲೂ ಮೊದಲು ಶಿಖರ ಏರಿ ಹಿಂದೆ ಬಾರದವನ ಕಥೆ. ಅದರಲ್ಲಿ ಗುಹೆಯ ಬಗೆಗೆ ಏನೂ ಇದ್ದ ಹಾಗಿಲ್ಲ. ಪುಸ್ತಕ ಓದಿದ ನಂತರ ಕಣ್ಣ ಅಂಚಲ್ಲಿ ನೀರು ಕಾಣುವುದು ಖಚಿತ.
ನಿಮ್ಮ ಕಥೆಗೂ ಕಾದಂಬರಿಗೂ ಹೋಲಿಕೆ ಅಂದರೆ, ಎರಡೂ ನಮ್ಮ ಕಣ್ಣ ಮುಂದೆ ನಡೆದಂತೆ ಕಾಣುವುದು ಮತ್ತು ನೈಜತೆ. ತಪ್ಪು ಅರ್ಥದಲ್ಲಿ ಅಲ್ಲ. 

parthasarathyn
10 years ago

🙂

ವಂದನೆಗಳು  ಅಂಗ್ಲ ಚಿತ್ರ ವರ್ಟಿಕಲ್ ಲಿಮಿಟ್  ಕ್೨,  ಇನ್ನೊಂದು ಕ್ಲಿಫ್ಟ್ ಆಂಗಲ್ ಇರಬಹುದು

18
0
Would love your thoughts, please comment.x
()
x