ಬದುಕೆಂದರೆ ಪೂರ್ಣತ್ವದ ಕಡೆಗೆ ಸಾಗುವುದ?: ಕೆ ಟಿ ಸೋಮಶೇಖರ ಹೊಳಲ್ಕೆರೆ

 ‌ somashekar-k-t

" ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ " ಎಂದು ಗೋಪಾಲಕೃಷ್ಣ ಅಡಿಗರು ಹೇಳಿದ್ದಾರೆ. ಜೀವನ ಎಂದರೇನು ಎಂದು ಒಂದು ವ್ಯಾಖ್ಯೆಯಲ್ಲಿ ಹಿಡಿದಿಡುವುದು ಕಷ್ಟ. ಆದರೂ ಕೆಲವರು ಪ್ರಯತ್ನಿಸಿದ್ದಾರೆ ಅದು ಜೀವನವನ್ನೆಲ್ಲಾ ಒಂದೇ ವ್ಯಾಖ್ಯೆಯಲ್ಲಿ ಹಿಡಿದಿಟ್ಟಿದ್ದರೂ ಅವು ಪರಿಪೂರ್ಣ ಅನ್ನಿಸವು. ಏಕೆಂದರೆ ಜೀವನ ಹೇಗೆ ಬೇಕಾದರೂ ಇರಬಹುದು! ವಿಶಾಲವೂ ಆಗಬಹುದು, ಅತಿ ಕಿರಿದೂ ಆಗಬಹುದು! ಹಿಗ್ಗಿನ ಸುಗ್ಗಿಯಾಗಬಹುದು, ಬಿರು ಬಿಸಿಲ ಬೇಸಿಗೆಯಾಗಬಹುದು. ಕಷ್ಟಗಳ ಮಳೆಯಾಗಬಹುದು! ಸಾಧನೆಯ ಶಿಖರವೇ ಆಗಬಹುದು.

ಭೂಮಿಯ ಮೇಲಿರುವವರಾರೂ ಪರಿಪೂರ್ಣರಲ್ಲ. ಹುಟ್ಟಿದ ಪ್ರಯುಕ್ತ ಮಾನವರು ಬದುಕಬೇಕಾಗಿರುತ್ತದೆ. ಬದುಕಲು ಅವಶ್ಯವಾದುದನ್ನು ಎಷ್ಟು ಬೇಕೋ ಅಷ್ಟು ಗಳಿಸಬೇಕಾಗಿರುತ್ತದೆ. ಅಷ್ಟು ಗಳಿಸಿದರೆ ಸಾಕು. ಆದರೆ ಮಾನವ ಹಾಗೆ ಮಾಡುವುದಿಲ್ಲ. ಸಾಧ್ಯವಾದರೆ ಅಗತ್ಯಕ್ಕಿಂತ ಹೆಚ್ಚು ಗಳಿಸಲು ಪ್ರಯತ್ನಿಸುತ್ತಾನೆ. ತಾವು ಪೂರ್ಣರಾಗಬೇಕು ಅಂತನೋ ಅಥವಾ ತನ್ನ ಹತ್ತಿರ ಏನಿಲ್ಲವೋ ಅದನ್ನು ಪಡೆಯಬೇಕೆಂದೋ ನಿತ್ಯ ಪ್ರಯತ್ನಿಸುತ್ತನೇ ಇರುತ್ತಾನೆ. ಹಾಗೆ ಪ್ರಯತ್ನಿಸಿದಾಗ ತಾವು ಬಯಸಿದ್ದು ದೊರೆತ ತಕ್ಷಣ ಅವರು ಪರಿಪೂರ್ಣರಾಗಿಬಿಡುತ್ತಾರೆ ಎಂದು ಅರ್ಥವಲ್ಲ. ಹಾಗೆ ಅದನ್ನು ಪಡೆಯುವ ಪ್ರಯತ್ನ ನಿಲ್ಲಿಸಿಬಿಡುತ್ತಾರೆ ಎಂದೂ ಅರ್ಥವಲ್ಲ! ಅದನ್ನು ಶೇಕರಿಸಲು ಪ್ರಯತ್ನಿಸಬಹುದು. ಅಥವಾ ಅದು ಒಂದು ಕೊರತೆಯನ್ನು ನೀಗಿಸಿದಂತಾಗಬಹುದು. ಒಂದು ಕೊರತೆ ನೀಗುತ್ತಿದ್ದಂತೆ ಮತ್ತೊಂದು ಕೊರತೆ ಕಾಡತೊಡಗುತ್ತದೆ. ಹೀಗೆ ಒಂದಾದ ಮೇಲೆ ಒಂದೋ ಒಂದಕ್ಕಿಂತ ಹೆಚ್ಚೋ ಬಂದು ಕಾಡುವ ಕೊರತೆಗಳ ತುಂಬುವುದೇ ಬದುಕಾಗುತ್ತದೆ! ಹಾಗೆ ಎಷ್ಟು ತುಂಬಿದರೂ ಪೂರ್ಣ ಆಗುವುದೇ ಇಲ್ಲ. ಆದರೂ ..

ಮಾನವನ ಆಸೆಗೆ ಕೊನೆನೇ ಇಲ್ಲ. ಯಾವುದು ತನ್ನ ಬಳಿಯಿಲ್ಲವೋ ಅದನ್ನು ಪಡೆಯಲು ಪ್ರಯತ್ನಿಸುತ್ತಾನೆ. ಹೀಗೆ ಪ್ರಯತ್ನಿಸುತ್ತನೇ ಇರುತ್ತಾನೆ. ಇದು ನನ್ನ ಕೊರತೆ ಇದನ್ನು ತುಂಬಿದರೆ ನಾನು ಪರಿಪೂರ್ಣನಾಗಬಹುದೆಂದು ಅದನ್ನು ಪಡೆಯಲು ಪ್ರಯತ್ನಿಸುತ್ತಾನೆ. ಹಾಗೆ ಪ್ರಯತ್ನಿಸುವುದನ್ನು ಕೊರತೆ ತುಂಬುವ ಪ್ರಯತ್ನ ಎನ್ನಬಹುದು. ಪರಿಪೂರ್ಣನಾಗುವ ಪ್ರಯತ್ನ ಅಂತ ಸಹ ಹೇಳಬಹುದು! ಪ್ರಯತ್ನದಲ್ಲಿ ಸಫಲತೆಗಳು ವಿಫಲತೆಗಳು ಅಂತ ಪರಿಣಾಮಗಳು ಇರುತ್ತವೆ. ವಿಫಲನಾದರೆ ಕೊರತೆ ತುಂಬುವ ಪ್ರಯತ್ನ ಜಾರಿಯಲ್ಲಿಡುತ್ತಾನೆ. ವಿಫಲತೆ ಎಂಬುದು ಸಫಲನಾಗಲು ಪಾಠ. ಒಂದಲ್ಲ ಒಂದು ದಿನ ಒಂದು ಕೊರತೆಯನ್ನಾದರೂ ತುಂಬಬಹುದು. ಕೊನೆವರೆಗೂ ಒಂದೂ ಕೊರತೆಯನ್ನೂ ತುಂಬದೇನೆ ಇರಬಹುದು! ಆ ಎರಡೂ ಸಂದರ್ಭಗಳು ಪ್ರಯತ್ನವನ್ನಂತೂ ನಿರಂತರ ಜಾರಿಯಲ್ಲಿರುವಂತೆ ಮಾಡುತ್ತವೆ.

ಕೊರತೆ ತುಂಬಲು ಅವನೇನಾದರೂ ಸಫಲನಾದರೆ ಅನೇಕ ಕೊರತೆಗಳಲ್ಲಿ ಒಂದು ಕೊರತೆ ತುಂಬಿದಂತಾಗುತ್ತದೆ. ಬಹಳ ಕಷ್ಟಪಟ್ಟು ಅನೇಕ ವರುಷಗಳಿಂದ ಪ್ರಯತ್ನಿಸಿ ಒಂದೇ ಒಂದು ಕೊರತೆ ತುಂಬುವುದರಿಂದ ಅದು ಅವನ ಸಾಧನೆನೂ ಆಗಬಹುದು! ಹೀಗೇ ಕೊರತೆಗಳ ತುಂಬುತ್ತಾ ನಿರಂತರವಾಗಿ ಸಾಗುವುದು ಪೂರ್ಣತ್ವ ಸಾಧಿಸುವ ಕಡೆಗಿನ ಓಟ ಆಗುತ್ತದೆ. ಬೇಗ ಬೇಗ ತುಂಬುವ ಕ್ರೀಯೆ ಪೂರ್ಣತ್ವ ಸಾಧಿಸುವ ಕಡೆಗೆ ಯಶಸ್ವಿ ಓಟ ಆಗುತ್ತದೆ! ಹೀಗೆ ಕೊರತೆಯನ್ನು ತುಂಬುತ್ತಾ ಯಶಸ್ವಿಯಾಗಿ ಮುನ್ನುಗ್ಗುವುದು ಪೂರ್ಣತ್ವವನ್ನು ಹೊಂದುವ ಪ್ರಯತ್ನವಾಗುತ್ತದೆ. ಹೆಚ್ಚು ಹೆಚ್ಚು ಕೊರತೆಗಳ ತುಂಬಿದಂತೆಲ್ಲಾ ಪೂರ್ಣತ್ವದ ಕಡೆಗೆ ಹತ್ತಿರವಾಗುತ್ತಾನೆ ಅನ್ನಿಸುತ್ತದೆ! ಕೊರತೆಗಳ ತುಂಬುತ್ತಿದ್ದಂತೆ ರಹಸ್ಯವಾಗಿ ಭವಿಷ್ಯದ ಒಡಲಲ್ಲಿ ಅಡಗಿದ್ದ ಅಸಂಖ್ಯಾತ ಕೊರತೆಗಳು ದುತ್ತನೆ ಪ್ರತ್ಯಕ್ಷವಾಗುತ್ತವೆ. ಹೀಗೇ ಕೊರತೆಗಳ ಅನಾವರಣ ಆಗುತ್ತನೇ ಇರುತ್ತದೆ. ಪೂರ್ಣತ್ವದ ಗುರಿ ಬಹಳ ಹತ್ತಿರವಾದಂತೆ ಭಾಸವಾದರೂ ಬಹಳ ದೂರನೇ ಉಳಿದಿರುತ್ತದೆ! ಏಕೆಂದರೆ ಮಾನವನ ಬದುಕೇ ಹಾಗೆ, ಆಸೆಗಳಿಗೆ ಕೊನೆನೇ ಇರುವುದಿಲ್ಲ! ಬೇಕು ಎಂಬ ಭಾವ ತಣಿಯುವುದೇ ಇಲ್ಲ! ಸಾಕು ಎಂಬ ಭಾವ ಹುಟ್ಟುವುದೇ ಇಲ್ಲ! ಅದುಕ್ಕೇ ಬೇಕು ಎಂಬವ ಬಡವ, ಸಾಕು ಎಂಬವ ಸಾಹುಕಾರ ಎಂದು ಹೇಳುವುದು!

ಜೀವನದಲ್ಲಿ ಭಗವಂತ ಈ ಒಂದನ್ನು ಈಡೇರಿಸಿದರೆ ನನಗೆ ಇನ್ನೇನೂ ಬೇಡ. ಆ ದೇವ ಎಲ್ಲಾ ಕೊಟ್ಟಂತೆ ಆಗುತ್ತದೆ ಅಂದುಕೊಳ್ಳುತ್ತಾನೆ. ಹಾಗೆ ಅಂದುಕೊಳ್ಳುವಂತೆ ಬದುಕು ಮಾಡುತ್ತದೆ. ಆ ಒಂದು ಬಯಸಿದುದ ಈಡೇರಿದಾಗ ಸಾಕು ಇನ್ನೇನು ಬೇಡ ಭಗವಂತ ನನ್ನ ಎಲ್ಲಾ ಬಯಕೆ ಈಡೇರಿಸಿಬಿಟ್ಟ ಅಂದುಕೊಳ್ಳುತ್ತಾನೆ. ಆದರೆ ಆ ಕೊರತೆಗಳು ತುಂಬುವುದರೊಂದಿಗೆ ಹೊಸ ಕೊರತೆಗಳಿಗೆ ನಾಂದಿ ಹಾಡುತ್ತವೆ. ಇನ್ನೇನು ಬೇಡಾ ಅಂದುಕೊಂಡಿದ್ದೆನಲ್ಲಾ ಈಗ ನೋಡಿದರೆ ಇದು ಬೇಕು ಅದು ಬೇಕು, ಇದು ಅವಶ್ಯಕ ಅದು ಅವಶ್ಯಕ ಅನಿಸುತ್ತಿದೆಯಲ್ಲಾ! ಆಗ ಇವು ಬೇಕೆನಿಸುತ್ತಿರಲಿಲ್ಲ ಈಗ ಅವು ಬೇಕೆನಿಸುತ್ತಿವೆಯಲ್ಲಾ. ಆ ಕೊರತೆ ತುಂಬಿದ್ದರಿಂದನೆ ಈ ಬಯಕೆ ಬಾಯಿ ತೆರೆದದ್ದು! ಆ ಬಯಕೆ ದಿನದಿಂದ ದಿನಕ್ಕೆ ಮರವಾಗುತ್ತಾ ಹೋಗುವಂತೆ ಮಾಡುತ್ತದೆ ಬದುಕು. ಹಾಗೆ ಸಮಯ ಸಂದರ್ಭಗಳನ್ನು ಸೃಷ್ಟಿಸುತ್ತಾ ಹೋಗುತ್ತದೆ. ಇದೆಲ್ಲಾ ಬೇಕಿಲ್ಲ ಅಂದುಕೊಂಡಿದ್ದೆ ಅಷ್ಟು ಸಿಕ್ಕರೆ ಸಾಕೆಂದಿದ್ದೆ ಈಗ ನೋಡಿದರೆ ಈ ಜೀವ ಏನೇನೋ ಬಯಸುತ್ತದೆ. ಆಚಾರವಿಲ್ಲ ಈ ಜೀವಕ್ಕೆ!  ಆಗ ಹಾಗೆ ಅನಿಸಿತ್ತು ಬದುಕು ಹೀಗೆ ಬದಲಾಗುತ್ತದೆ ಅನಿಸಿರಲಿಲ್ಲ. ಈಗ ನೋಡಿದರೆ ಹೇಗೆ ಬದಲಾಗಿದೆ. ಅವುಗಳನ್ನು ಪಡದೇ ತೀರಬೇಕು ಅನ್ನಿಸುವಂತೆ ಬದುಕು ತಿರುವು ಪಡೆಯುತ್ತಾ ಹೋಗುತ್ತದೆ. ಹೀಗೆ ಕೊನೆವರೆಗೂ ಬೇಕೆಂಬ ಕೊರಗು ತಣಿಯುವುದೇ ಇಲ್ಲ!  ಎಲ್ಲಾ ಕೊರಗುಗಳು ತುಂಬುವರೆಗೆ ಪೂರ್ಣತ್ವ ಲಭಿಸುವುದಿಲ್ಲ!

ಹುಡುಗನಾಗಿದ್ದಾಗ ಇದ್ದ ಅವಸರ, ಶೀಘ್ರ ಕೋಪ,  ಸಿಡುಕು, ದುಡುಕುತನ, ಮುಂಗೋಪ, ಎಡವುವಿಕೆ, ಅಪರಿಪಕ್ವತೆ, ನಿಂತು ಮಲಗುವ ಪ್ರಯತ್ನಗಳು ಕಡಿಮೆಯಾಗಿ ವಯಸ್ಸು ಆದಾಗ ಸಮಾಧಾನ, ಶಾಂತಿ, ಮೃದುತ್ವ, ಮಾಗಿದ ಪರಿಪಕ್ವ ಹಣ್ಣಿನಂತೆ ಫಕ್ವತೆ ಲಬಿಸುತ್ತಾ ಹೋಗುತ್ತದೆ. ಇವು ಎಷ್ಟೆಷ್ಟು ಲಭಿಸಿದೆಯೋ ಜೀವಿ ಅಷ್ಟಷ್ಟು ಪೂರ್ಣತ್ವದ ಕಡೆಗೆ ಹತ್ತಿರ ಬಂದಿದ್ದಾನೆ ಎನ್ನುವುದನ್ನು ಸೂಚಿಸುತ್ತದೆ. ಎಷ್ಟು ಹತ್ತಿರ ಬಂದಿದ್ದರೂ ಪೂರ್ಣತ್ವ ಹೊಂದಲಾಗುವುದಿಲ್ಲ! ಏಕೆಂದರಿ ಉಂಟಾದ ಕೊರತೆಗಳನ್ನೆಲ್ಲಾ ತುಂಬಲಾಗಿರುವುದಿಲ್ಲ. ಸಾವು ಸಮೀಪ ಬಂದಾಗಲೂ ಇನ್ನೂ ಏನೇನೇ ಮಾಡಬೇಕಿತ್ತೆಂಬ ಬಡಬಡಿಕೆಗಳು ನಿಂತಿರುವುದಿಲ್ಲ! ಪೂರ್ಣತ್ವ ಎಂಬುದು ತಲುಪಲಾಗದ ಆದರ್ಶ, ಕಲ್ಪನೆ! ಆದ್ದರಿಂದ ಬದುಕು ಎಂದರೆ ಪೂರ್ಣತ್ವದ ಕಡೆಗೆ ಸಾಗುವ ಪ್ರಯತ್ನ!

ಕೆ ಟಿ ಸೋಮಶೇಖರ ಹೊಳಲ್ಕೆರೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x