ಬದುಕಿನಲ್ಲಿ ಭರವಸೆ ಎಂಬುದು ಪುನರ್ಜನ್ಮದ ಅವಕಾಶವಿದ್ದಂತೆ: ನರಸಿಂಹಮೂರ್ತಿ. ಎಂ.ಎಲ್.

narasimha-murthy
ನಿರೀಕ್ಷೆಗಳು ಹುಸಿಗೊಂಡಾಗ ಭರವಸೆಗಳೊಂದಿಗೆ ಬೆಸೆದುಕೊಂಡು ಮುನ್ನೆಡೆಯಬೇಕು.

ಅಂದುಕೊಂಡಿದ್ದೆಲ್ಲ  ನಡೆಯಲ್ಲ, ಅಪೇಕ್ಷಿಸಿದ್ದೆಲ್ಲ ದೊರೆಯುವುದಿಲ್ಲ. ಇದು ಹೀಗೆ ಒಂದಂತರಂಗದ ಅಲೆಯಾಗಿ ಮೌನವನ್ನು ಪರಿಚಯಿಸಿ ಹೋಗಿಬಿಡುತ್ತದೆ. 

ನಿರೀಕ್ಷೆಗಳಲ್ಲಿ ತೇಲಿಮುಳುಗುವಾಗ ಕುತೂಹಲಗಳು ಕನಸ್ಸಿನ ದೋಣಿಯನ್ನು ಅಲುಗಾಡದಂತೆ ಮುನ್ನೆಡಿಸಿದಂತೆ ಸೊಗಸಾದ ಅನುಭವದ ಹಿತವನ್ನು ಒಡ್ಡುತ್ತದೆ. ಅದೇ ನಿರೀಕ್ಷೆಗಳು ಹುಸಿಯಾಗುತ್ತಿದ್ದಂತೆ ಭರವಸೆಯ ಬೆಳಕು ಮೆಲ್ಲನೆ ಸರಿದು ಹೋಗಿ ಕತ್ತಲಾವರಿಸಲು ಆರಂಭಿಸಿ ಅತೀವ ಭಾವೋವೇದನೆಗೆ ಗುರಿ ಮಾಡುತ್ತಾ ಜಗತ್ತೆಲ್ಲ ಶೂನ್ಯವೆಂಬಂತಾಗಿ ಜಿಗುಪ್ಸೆ ಆವರಿಸಿಕೊಳ್ಳುತ್ತದೆ. ಏನೇನು ಹುಚ್ಚು ಮನಸ್ಸಿನ ಮಜಲುಗಳು ವಿವಿಧ ಆಯಾಮಗಳಲ್ಲಿ ಹಂಗಿಸಲು ಆರಂಭಿಸುತ್ತದೆ. ಈ ಪಯಣವೇ ಸಾಕೆನಿಸಿ ನಿಲ್ಲಿಸಿ ಬಿಡೋಣ ಎಂಬ ಯೋಚನೆ ದಿಢೀರನೆ ಮಸ್ತಿಕಪಟಲದಲ್ಲಿ ಹಾದು ಹೋಗುತ್ತದೆ. ಹೃದಯಬಡಿತ ಏರುಪೇರಾಗಿ ಮೈನಡುಗುತ್ತದೆ. ಬಾಯಿಂದ ಮಾತು ಹೊರಡಲು ಅಳುಕುತ್ತದೆ. ಭೀತಿ ಮನಸ್ಸನ್ನು ವಿಚಲಿತಗೊಳಿಸಿ ಮತಿಹೀನನನ್ನಾಗಿಸುತ್ತದೆ.

ಹಲವು  ಸ್ವಯಂ ನಿಂದನೆಗಳು ,ಅಸಹಾಯಕತೆಯ ಚಿಂತೆಗಳು ಬೆನ್ನು ಮುರಿದ ನಾಯಿಯಂತೆ ಹೊರ ಜಗತ್ತನ್ನು ನೋಡಿ ಬೊಗಳಬೇಕೆಂದು ಉದ್ರೇಕಿಸುತ್ತವೆ. ಆಗ ದಿಢೀರನೆ ಅಂತರಾಳದವನು ಸಮಾಧಾನ ಪಡಿಸಲು ಆರಂಭಿಸುತ್ತಾನೆ. ಹೊರ ಸಮಾಜದ ಡೊಂಕುಗಳನ್ನು ನೋಡುವಂತೆ ಪ್ರೇರೇಪಿಸಿ 

ನೀನೇಕೆ ಮರುಗುವೆಯಯ್ಯಾ ಡೊಂಕ ಬಾಲದ ನಾಯಿಗಳಿರುವಾಗ.
ಗೋಳೇತಕೆ ಅಸ್ಪಷ್ಟರು ತುಂಬಿರುವ ಜಗದಲ್ಲಿ ನೀನಿರುವಾಗ !
ಸ್ಪೂರ್ತಿಯಾಗಿ ಸ್ವೀಕರಿಸು ಸುಂದರ ಜಗವು ತೆರೆದುಕೊಳ್ಳುವುದು ನಿನ್ನೆದುರಿಗೆ ಹೊಸ ಚೇತನದಲ್ಲಿ !!

ನೋವು ಹೊಸದಲ್ಲ  ಹೊಸೆದು ಹಾಕಿದರೂ ಮತ್ತೆ ಹುಟ್ಟುವ ಭರವಸೆ ಇರುವಾಗ!
ಸಲ್ಲದ ನಿಂದನೆ ದೂರವಿಟ್ಟು ಸಾಗುವಾ ಮೌನ ಕಳಚಿ,
ಮಂದಹಾಸದಿ ನಡೆಯುವ ನೋವನಳಿಸುವ ದಾರಿಯಿದೆ!

ಹುಟ್ಟು ಧೀರನಲ್ಲ  ಬಿಟ್ಟು ಹೋಗಲು ಬಂದವನು.
ಸೋಲನಪ್ಪಿದವನಿಗೆ ಸಹಸ್ರಾ ಸವಾಲುಗಳು ಸುಡುವ ಬಿಸಲಲ್ಲಿ ನಿಂತ ಕೂಸುವಿನಂತೆ, ತನಗರಿವಿಲ್ಲದೆಯೇ ಸಹಿಸಿ ನಡೆಯಿತು ಹೆಜ್ಜೆಗಳನ್ನಿಡುತಾ !
ನಿನ್ನ ಕಾಯುವ ನೆರಳು ಬಂದು ಸೇರುವ ತವಕವಿರುವ ತನಕ!

ಕೊನೆಗೊಳ್ಳಬಾರದು ಪಯಣ ಸಣ್ಣ ಕಾರಣಕ್ಕೆ ಕೊಂಚ ಯೋಚಿಸಿ ನಡೆದರೆ ನಾವೇ ಧನ್ಯರು!
ನೋವಿಲ್ಲದೆ ಭಾವವಿಲ್ಲ ಬದುಕಿನ ದಾರಿಯಲಿ.
ಬಯಸಿದ್ದೆಲ್ಲ ಸಿಗದು ಸಾಮಾನ್ಯರ ಬಾಳಿನಲಿ!!

ಮೊಂಡು ಮನಸ್ಸಿಗೆ ಹಿತ ಹಠವ ಜೊತೆಗೂಡಿಸಿ
ನಡೆಯುವಾ ಗೆಲವಿನ ದಾರಿಗೆ ಶ್ರಮದ ಚಕ್ರವ ಕಟ್ಟಿಕೊಂಡು!
ಸೋತ ಬಂಡಿ ಪಯಣ ಸುಗಮವಾಗಿ ಸಾಗಲಿ
ಭರವಸೆಯ ಬೆಳಕಿನಡಿಗೆ ಹೆಜ್ಜೆ ಹಾಕುತಾ…!!

ಭರವಸೆ ಮನುಷ್ಯನಿಗೆ ಮರುಜನ್ಮ ನೀಡುವ ಅವಕಾಶವಿದ್ದಂತೆ. ಕೆಲವೊಮ್ಮೆ ಭರವಸೆಗಳು ಈಡೇರದಿದ್ದರೂ  ಒಂದಿಷ್ಟು ಪಾಸಿಟೀವ್ ಸ್ಪಾರ್ಕನ್ನು ಹೊತ್ತಿಸುತ್ತದೆ. ಮೃದುತ್ವವನ್ನು ಗಟ್ಟಿಗೊಳಿಸಿ ಗೋಳಿನ ತೀವ್ರತೆಯಲ್ಲಿ ಬದಲಾವಣೆ ತರುತ್ತದೆ. 

ಬದುಕನ್ನು ಒಂದಿಷ್ಟು ಭರವಸೆಗೆ ಬಿಟ್ಟುಕೊಡೋಣ ಎಲ್ಲದರಲ್ಲೂ ಗೆಲ್ಲದಿದ್ದರೂ ಕೆಲವುದರಲ್ಲಾದರೂ ಸೋಲದಂತೆ ನಡೆಯಬಹುದು. 

ಡಿವಿಜಿಯವರ ಮಾತು  ನನ್ನಂತವರಿಗಾಗಿಯೇ ಬಸ್ಸುಗಳಲ್ಲಿ ಹಾಕಿರ್ತಾರೆ ಅನಿಸುತ್ತಿದೆ. 

"ಇರುವ ಭಾಗ್ಯವ ನೆನೆದು ಬಾರನೆಂಬುದು ಬಿಡು ಹರುಷಕ್ಕಿದೆ ದಾರಿ"

ನರಸಿಂಹಮೂರ್ತಿ. ಎಂ.ಎಲ್.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x