ಪಂಜು-ವಿಶೇಷ

ಬದಲಾದ ಹುಬ್ಬಳ್ಳಿಯಲ್ಲಿ ಮತ್ತ ನಾಕಹೆಜ್ಜಿ: ಉಮೇಶ್ ದೇಸಾಯಿ

ಹೌದು ಅಗದಿ ಏನು ಬಹಳ ದಿನಾ ಆಗಿರಲಿಲ್ಲ ಹುಬ್ಬಳ್ಳಿಗೆ ಹೋಗಿ. ಅಲ್ಲಿ ಇಲ್ಲಿ ಫೇಸಬುಕ್ಕಿನ ಹುಬ್ಬಳ್ಳಿ ಮಂದಿ ಯಲ್ಲಿ ಅಲ್ಲಿನ ಸುದ್ದಿ ಅಪಡೇಟ್ ಆಗುತ್ತಲೇ ಇತ್ತು. ಈ ಸಲ ಟೈಮಿತ್ತು. ಹಂಗ ಒಬ್ಬಾವನ ಹುಬ್ಬಳ್ಳಿಯೊಳಗ ಸುತ್ತಾಕಿದೆ.. ಅಗದಿ ಎದ್ದುಕಾಣುವ ಬದಲಾವಣಿ  ಆಗಿದ್ದು  ಗೋಕುಲ್ ರೋಡನ್ಯಾಗ ಅಂತ (ಈಗ ಮತ್ತೆ  ಹಳೇ ಹೆಸರಿಂದ ಅದನ್ನ ಕರೀಬೇಕೋ ಬ್ಯಾಡೋ ಗೊತ್ತಾಗವಲ್ತು..).. ಅಲ್ಲಿ  ಏರಪೋರ್ಟ  ಅದ.  ಹಂಗ ಒಂದೆರಡು ಮಾಲ್  ಬಂದಾವ  ಅಂತ,  ಹಂಗ  ಕೆ ಎಫ್ ಸಿ, ಮೆಕ್ ಡೊನಾಲ್ಡು ಬಂದಾವಂತ  ಬಿಗ್ ಬಜಾರು ಬಂದದಂತ.. ಆದ್ರೂ  ನಾ  ಅಲ್ಲಿ  ಹೋಗಲಿಲ್ಲ.  ಯಾಕೋ  ಮತ್ತ ಆ ದೊಡ್ಡ ದೊಡ್ಡ ಬ್ರಾಂಡಗಳ  ಸಹವಾಸ  ಬ್ಯಾಡ  ಅನಿಸ್ತು. ಹಿಂದಿನ  ಹುಬ್ಬಳ್ಳಿಗೆ  ಕೆಲವು  ವಿಶಿಷ್ಟ  ನೆನಪಿದ್ವು.  ಆ ಜಾಗಾದಾಗ ಅಲ್ಲಿ ಇದ್ದ ಹೊಟೆಲ್ ಗಾಗಲಿ,  ಥೇಟರ್ರಿಗಾಗಲಿ  ಅಂಗಡಿಗಾಗಲಿ  ಒಂದು  ಗುರುತಿತ್ತು. ಮತ್ತ ಅದು  ಸದಾ  ನೆನಪಿನ್ಯಾಗ ಕಾಯಂ ಕೂತಿತ್ತು. ಆದ್ರ ಕಾಲದ ಪ್ರವಾಹ ನೋಡರಿ ಎಲ್ಲಾ ಬದಲಾಕ್ಕೊತ ಹೊಂಟದ. 

ಇದ್ದಿದ್ರಾಗ ಬದಲಾವಣಿ ಕಂಡ್ರೂ ತನ್ನ ಹಳೇ ಸೌಂದರ್ಯ ಉಳಸಿಕೊಂಡಿದ್ದ ಸ್ಥಳ ಅಂದ್ರ ಉಣಕಲ್ ಕೆರಿ. ಈಗ ಅಲ್ಲಿ ವಾಕ್ ಮಾಡಾವ್ರಿಗೆ ಅನುಕೂಲ ಆಗಲಿ ಅಂತ ವಾಕ್ ಪಥ ಮಾಡ್ಯಾರ. ಹಂಗ ಸಂಜಿಮುಂದ ಛಂದನ್ನೋ ಸೂರ್ಯಾಸ್ತ ಸವಿಯಲು, ಕೂರಲು ಬೆಂಚು ಮಾಡ್ಯಾರ. ಈಗ ಈ ಕೆರಿ ನೋಡಿ ಖುಷಿ ಅನಸತದ. ಕೊಪ್ಪಿಕರ್ ರೋಡು ಅಲ್ಲಿ ಇದ್ದ ಹಳೇ ಅಂಗಡಿಗಳು ತಮ್ಮ ಅಸ್ತಿತ್ವ ಕಳಕೊಂಡಾವ.. ನಾಯಕ್ ವಾಚ್ ಅಂಗಡಿ, ಬಾಂಬುರೆ ಟೇಲರ್ ಅಂಗಡಿ ಮೋಹನ/ಮಲ್ಲಿಕಾರ್ಜುನ್ ಟಾಕೀಸು, ಬೆಂಡಿಗೇರಿ ಅವರ ಫಿಲಿಪ್ಸ್ ಅಂಗಡಿ, ಹೊಂಬಾಳಿ ಅವರ ಬುಕ್ ಸೆಂಟರ್ , ಅದರ ಎದುರಿಗಿದ್ದ ಸ್ವದೇಶಿ ಪೇಪರ್ ಮಾರ್ಟು .. ಈಗೆಲ್ಲ ಇತಿಹಾಸ.. 

ಹಳೇ ತೃಪ್ತಿ ಹೋಟೆಲ್ ಇದ್ದ ಜಗಾದಾಗ ಸಮಾಜಪುಸ್ತಕಾಲಯ ಅದ. ಹಾಂ ಒಂದು ವಿಚಿತ್ರ ಚೋದ್ಯ ಅಂದ್ರ ನಮ್ಮ ಕಡೆಯ ಸಾಹಿತ್ಯಲೋಕದ ಪ್ರಮುಖ ಕೇಂದ್ರ "ಸಾಹಿತ್ಯ ಭಂಡಾರ" ದ ಪಕ್ಕ "ಗೋಲಿ" ಬಂದದ ಅದರೀ ವಡಾಪಾವ್ ಅಂಗಡಿ…!! ಭಿಲ್ಲೆ ಅಂಗಡಿ ಮುಂದ ಮೊದಲಿನ ಗರದೀನ ಇತ್ತು. ಅವ್ರ ಲಕಡಿ ಘಾಟೆ, ಮಿಕ್ಸರ್ ರುಚಿ ಅಪ್ರತಿಮ. ಬ್ರಾಡ್ ವೇ, ಮುಂದ ದುರ್ಗದ ಬೈಲು ಆ ಗಿರಮಿಟ್ಟು ,ಕಚೋರಿ ರುಚಿ ಬದಲಾಗಿಲ್ಲ ಬಿಡ್ರಿ ಅದು ಅಮರ. ಬರೂದಿನ ನಾಲಿಗೆ ಹಾತೊರೆದಿತ್ತು ಸಾವಜಿ ಊಟ ಅಂದ್ರೆ ಖಾರ ಅಂಥಾ ಖಾರ ಈಗ ರೂಢಿ ಇಲ್ಲ ಆದ್ರ ಆ ರುಚಿಮುಂದ ಖಾರ ಗೌಣ..!! ಕೊಯಿನ್ ರಸ್ತೆ ದಾಗ ಗರದಿ ಇತ್ತು ಅಲ್ಲಿ ಹೊಸಾ ಮಾಲ್ ಬಂದದ(ಎರಡು-ಮೂರು ಫ್ಲೋರಿಂದು) ಹಂಗ ಹುಬ್ಬಳ್ಳಿಯ ಮೊದಲ ಮಲ್ಟಿಪ್ಲೆಕ್ಸ ಬಂದದ, ಈ ಮಲ್ಟಿಪ್ಲೆಕ್ಸ ದ ಕೆಳಅಂತಸ್ತಿನ್ಯಾಗ ಸಪ್ನದವ್ರು ದೊಡ್ಡ ಅಂಗಡಿ ಹಾಕಾವ್ರಿದ್ದಾರ. ಅಲ್ಲೆ ಒಂದು ಸಣ್ಣ ಹೊಟೆಲ್ಲು ಅಲ್ಲಿ ಪಾಪಡಿ ಚಟ್ನಿ ಭಾಳ ಫೇಮಸ್ಸು. ಆ ಹೊಟೆಲೇನೋ ಇತ್ತು ಆದ್ರ ಪಾಪಡಿ ಚಟ್ನಿ ಇರಲಿಲ್ಲ. ಈಗ ಯಾರೂ ಅಂಥಾ ತಿನ್ಸು ಕೇಳುದಿಲ್ರಿ ಅಲ್ಲಿಯ ಮಾಲೀಕ ಉತ್ತರಿಸಿದ. ಗೋಡೆ ಮೇಲೆ ಫೋಟೋ ಇತ್ತು ಹಳೆಮಾಲಿಕಂದು..!! 

ಒಂದಂತೂ ಖರೆ ಈ ಎಲ್ಲಾ ಬದಲಾವಣೆ ಈಗಿನ ಜಮಾನಾಕ್ಕ ಬೇಕು. ಆದ್ರ ಇವು ನನ್ನಂಥವ್ರ ನೆನಪು ಕೊಲ್ಲತಾವ ಇದು ವಾಸ್ತವ. ಪ್ರತೀ ಬದಲಾವಣಿಗೂ ಹಿಂಗ ನೋವಿನ ಎಳಿ ಇರತದ.. ಹುಬ್ಬಳ್ಳಿಗೆ ಮೊನ್ನೆ ಮೊನ್ನೆ ರತನ್ ಟಾಟಾ ಬಂದು ಹೋದರಂತೆ. ಅನೇಕ ಕನಸುಗಳು ಅಲ್ಲಿಯ ಮಂದಿಯಲ್ಲಿ ಟಿಸಿಲೊಡೆದಿರಲು ಸಾಕು. ಮೂಲತಃ ಹುಬ್ಬಳ್ಳಿಯವ್ರ ಕೈಯ್ಯಲ್ಲಂತೂ ಅದು ಉದ್ಧಾರ ಆಗಲಿಲ್ಲ. ಹೊರಗಿನವರಿಂದಲೆ ಭಾಗ್ಯದ ಬಾಗಿಲು ತೆರೆಯಲಿ ಇದು ನನ್ನ ಹಲುಬೋಣ. ಹುಬ್ಬಳ್ಳಿ-ಧಾರವಾಡ್ ನಡುವೆ ನಾಲ್ಕು ಲೈನಿನ ರಸ್ತೆ ಮಾಡಲು ಸಾಲು ಸಾಲು ಮರಕಡಿದ್ರು ..ಅಲ್ಲಿಯವ್ರಿಂದ ಪ್ರತಿಭಟನೆಯ ಸೊಲ್ಲೂ ಇಲ್ಲ. ಕಾರಖಾನಿ ಹೆಸರಿಗೆ ನಾಕು ಅವ..ಎಲ್ಲಾಮಂದಿ ಕಲತಮ್ಯಾಲ ಬೆಂಗಳೂರು ಗಾಡಿ ಹತ್ತತಾರ.. ಶುಕ್ರವಾರ ಬೆಂಗಳೂರಿಂದ , ರವಿವಾರ ಹುಬ್ಬಳ್ಳಿಯಿಂದ ಬಸ್ಸು, ಟ್ರೇನು ಫುಲ್ ಆಗಿರತಾವ. ಹಳೇಯ ಹುಬ್ಬಳ್ಳಿ ಮತ್ತ ಸಿಗೂದಿಲ್ಲ ಖರೆ ಆದ್ರ ನೆನಪೆಂಬುದು ಅಜರಾಮರ. ಆ ದಿನಮಾನದ ನೆನಪುಗಳನ್ನು ಭದ್ರವಾಗಿ ಎದೆಗೂಡಲ್ಲಿ ಠೇವಣಿಯಾಗಿ ಇಟ್ಟಿರುವೆ.

  

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಬದಲಾದ ಹುಬ್ಬಳ್ಳಿಯಲ್ಲಿ ಮತ್ತ ನಾಕಹೆಜ್ಜಿ: ಉಮೇಶ್ ದೇಸಾಯಿ

  1. ಛೋಲೊ ಬರೇದಿರಿ.. ಎಷ್ಟ ಬದಲಾದ್ರು ನಮ್ಮ ಹುಬ್ಬಳ್ಳಿ ನಮ್ಮ ಹುಬ್ಬಳ್ಳಿನ ಅಲ್ಲೇನ್ರಿ……

  2. ನಾ ಹುಟ್ಟಿ ಬೆಳಾದುದ್ದು ಹುಬ್ಬಳ್ಯಗ, ಹಯಸ್ಕೋಲು ಲ್ಯಾಮಿಂಗ್ಟನ್ನ ನಂತ್ರ ಕಲಾ ಮಂದಿರಾದಾಗ ಕಲತದ್ದು …
    ನಾಯಕ್ ವಾಚ್ ಅಂಗಡಿ, ಬಾಂಬುರೆ ಟೇಲರ್ ಅಂಗಡಿ ಮೋಹನ/ಮಲ್ಲಿಕಾರ್ಜುನ್ ಟಾಕೀಸು, ಬೆಂಡಿಗೇರಿ ಅವರ ಫಿಲಿಪ್ಸ್ ಅಂಗಡಿ, ಹೊಂಬಾಳಿ ಅವರ ಬುಕ್ ಸೆಂಟರ್ , ಅದರ ಎದುರಿಗಿದ್ದ ಸ್ವದೇಶಿ ಪೇಪರ್ ಮಾರ್ಟು .. ಈಗೆಲ್ಲ ಇತಿಹಾಸ.. 
    ಆ ಕೊಪ್ಪಿಕರ್ ರೋಡುನ್ಯಾಗ ಅಡ್ಯಾಡೋದು ನಮ್ಮ ದಿನದ ರೂಢಿಆಗಿತ್ತು… ನೀವು ಹೇಳಿದ್ಹಾಂಗ್ ಭಾಳ ಬದಲಿ ಆಗ್ಯಾದ

    1. I returned to my native place after staying in Pune & madras. I felt the same way as ladies feel when they go to their    Tawarmane when parents are no more.
      Every body trying to speak Bangalore Kannada 
      On Phone when We say the answer is  Ayetu
      People say Vitthal  sikkidnapa, Modalu kalakondawar sigaatiddaru
      Papers also use language we are unable to follow
      I do not know What is Jatha, Hunnar, Emarisuvadu
      As you say Gand Kannada also lost it originality

Leave a Reply

Your email address will not be published. Required fields are marked *