ಸರಕ್ಕ ಸರಿತಲ್ಲ – ಪರಕ್ಕಂತ್ ಹರಿತಲ್ಲ……: ಸುಮನ್ ದೇಸಾಯಿ ಅಂಕಣ

                        ಮೊನ್ನೆ ಸಂಜಿಮುಂದ ನನ್ನ ಗೆಳತಿ ಕವ್ವಿ(ಕವಿತಾ) ಬಂದಿದ್ಲು. ಹಿಂಗ ಅದು ಇದು ಮಾತಾಡಕೋತ ತಮ್ಮ ತಮ್ಮಂದು ಮದವಿ ಘಟ್ಟಿ ಆದ ಸುದ್ದಿ ಹೇಳಿದ್ಲು.ಆಕಿ ತಮ್ಮಂದು ಕನ್ಯಾ ಆರಿಸೊದ್ರಾಗ ಭಾಳ ತಕರಾರ ಅವ ಅಂತ ಕೇಳಿದ್ದೆ. ಅಂತು ಇಂತು ನಿಶ್ಚೆ ಆತಲ್ಲಾ ಅಂತ " ಅಯ್ಯ ಛೋಲೊ ಆತಲ್ಲಾ ಪಾರ್ಟಿ ಯಾವಾಗಲೇ" ಅಂದೆ. ಅದಕ್ಕ ಆಕಿ "ಹೋಗ ನಮ್ಮವ್ವ ಎಲ್ಲಿ ಪಾರ್ಟಿ ಹಚ್ಚಿ,ಇಂವನ ಮದವಿ ಘಟ್ಟಿ ಮಾಡಬೇಕಾದ್ರ ಮನಿ ಮಂದಿವು ಕುರಿ ಕ್ವಾಣಾ ಬಿದ್ದಹೋಗ್ಯಾವ ಅಂತ ಹೇಳಲಿಕ್ಕೆ ಶೂರು ಮಾಡಿದ್ಲು.  ಕವ್ವಿ ತಮ್ಮ ಗೋವಿಂದ ಪೋಸ್ಟ ಆಫೀಸಿನ್ಯಾಗ ಕೆಲಸಾ ಮಾಡತಿದ್ದಾ. ತಕ್ಕಮಟ್ಟಗೆ ಚೆಲುವನು ಇದ್ದಾ.ಇಂವಗ ಸಂಗೀತದ್ದ ಹುಚ್ಚ ಭಾಳ ಇತ್ತು.ಇಂವನು ಖತರನಾಕ ಬಾಥರೂಮ ಸಿಂಗರ್ ಮತ್ತ. ಇಂವಾ ಬಚ್ಚಲಮನ್ಯಾಗ ಬಾಗಲಾ ಹಾಕ್ಕೊಂಡ ಹಾಡ ಹಾಡಕೋತ ಸ್ನಾನಾ ಮಾಡಲಿಕತ್ರ ಹೊರಗಿದ್ದವರಿಗೆ ಹೇಂಗನಿಸ್ತಿತ್ತಂದ್ರ, ಈ ನಳಾ ಬರೊಮುಂದ ಖರ್ರ್ ರ್ ರ್ ರ್-ಖೋಸ್ ಸ್ ಸ್….. ಅಂತ ಸಪ್ಪಳ ಆಗತದಲ್ಲಾ ಹಂಗ ಕೇಳಸ್ತಿತ್ತು. ಎಷ್ಟೊ ಸಲಾ ಇವರವ್ವ " ಎ ನಳಾ ಬಂದುವಂತ ಕಾಣಸ್ತದ ಲಗೂ ಸ್ನಾನಾ ಮುಗಿಸಿ ಹೊರಗ ಬಾ ನೀರ ತುಂಬಬೇಕ,ಹೋದುವಂದ್ರ ಮುನಶಿಪಾಲ್ಟಿಯಾಂವಾ ಮತ್ತ ನಾಕದಿನಾ ನೀರ ಬಿಡಂಗಿಲ್ಲಾ" ಅಂತನೊ ಅಥವಾ " ಅಯ್ಯ ಸುಟ್ಟಬರಲಿ ನಿನ್ನೆ ನಳಾ ಬಿಟ್ಟಿದ್ನಲ್ಲಾ ಮತ್ತ ಇವತ್ತೂ ಬಿಟ್ಟಾನಂತ ಕಾಣಸ್ತದ ಅಂತಿದ್ಲು.

            ಈ ಗೋವಿಂದಗ ಒಂದ ಆಸೆ ಇತ್ತು ಅದೇನಂದ್ರ" ತಾ ಮದವಿ ಮಾಡಕೊಳ್ಳೊ ಹುಡಗಿ ಛಂದ ಇಲ್ಲಂದ್ರು ನಡಿತದ ಆದ್ರ ಹಾಡು ಮಾತ್ರ ಛಂದ ಹಾಡಬೇಕು. ಅದಕ್ಕ ಇಂವಾ ಕನ್ಯಾ ನೋಡಲಿಕ್ಕೆ ಹೊದಲ್ಲೆಲ್ಲಾ ಹುಡಗಿ ಕಡೆ ಹಾಡು ಹಾಡಿಸಿ ನೋಡತಿದ್ದಾ. ಮದಲನೆ ಸಲಾ ಕನ್ಯಾ ನೋಡಲಿಕ್ಕೆ ಹೋದಾಗ ಆ ಹುಡುಗಿ ನೀನ್ಯಾಕೊ ನಿನ್ನ ಹಂಗ್ಯಾಕೊ ರಂಗಾ, ನಾಮದ ಬಲವೊಂದಿದ್ದರೆ ಸಾಕೊ………. " ಅಂತ ಹಾಡಿದ್ಲಂತ ಅದು ಇಂವಗ " ನೀನ್ಯಾಕೊ ನಿನ್ನ ಹಂಗ್ಯಾಕೊ ಗೋವ್ಯಾ, ನಿನ್ನ ಪಗಾರಾ,ಪೆನಶ್ಯನ್ ಎರಡಿದ್ದರೆ ಸಾಕೊ…………. " ಅಂತ ಹಾಡಿಧಂಗ ಅನ್ನಿಸಿತಂತ ಅದಕ್ಕ ಫಸ್ಟ್ ಇಂಪ್ರೇಶನ್ ಇಸ್ ಬ್ಯಾಡ್ ಇಂಪ್ರೇಶನ್ ಆದಂಗಾತು ಈ ಕನ್ಯಾ ಬ್ಯಾಡ ಅಂದ್ನಂತ. ಮತ್ತ ಒಂದೆರಡ ಕಡೆ ಧ್ವನಿ ಛಂದಿಲ್ಲಾ ಒಲ್ಲೆ ಅಂದ್ನಂತ. ಒಂದ ಸಲಾ ಸಂಗೀತನ್ಯಾಗ ಜೂನಿಯರ್ ಆಗಿ ಸೀನಿಯರ್ ಮಾಡಲಿಕತ್ತ ಕನ್ಯಾ ನೋಡಲಿಕ್ಕೆಂತ ಮನಿಮಂದೆಲ್ಲಾ ಹೊಂಟ್ರು. ಈ ಸಲಾ ಹೋದ ಕೆಲಸ ಆಗೇಬಿಡತದ ಅಂತ ಖುಷಿಲೆ ಹೊದ್ರು. ಕನ್ಯಾಗ ಹಾಡ ಹಾಡವ್ವಾ ಅಂದ್ರ ಆಕಿ ಕಣ್ಣ ಮುಚ್ಚಕೊಂಡ " ನಾ ನೀನ್ನ ಧ್ಯಾನದೊಳಿರಲು ಸದಾ, ಹೀನ ಮಾನವರೇನು ಮಾಡಬಲ್ಲರೋ ರಂಗಾ………….. " ಅಂತ ಹಾಡಿದ್ದು ಈ ಗೋವಿಂದಗ " ಆ ಹುಡುಗಿ ಮನಸಿನ್ಯಾಗ ಬ್ಯಾರೆ ಯಾರನೊ ನೆನಿಸಿಕೊಂಡು, ತನಗನ ಹೀನ ಮಾನವ ಅಂತ ಹಂಗಸಲಿಕತ್ತಾಳೇನೊ ಅನ್ನಿಸಿ ಆ ಕನ್ಯಾನು ಒಲ್ಲೆ ಅಂದಾ. ಮತ್ತೊಂದ ಕಡೆ ಹುಡುಗಿ ಹಾಡೊದ ದೂರ ಉಳಿತು ಎದರಿಗೆ ಬಂದು ಇಂವನ ಮುಂದ ಸುಧ್ಧಾ ಕೂಡಲಿಲ್ಲ,

ಯಾಕಂದ್ರ ಆಕಿಗೆ "ಚಿಕೂನ್ ಗುನ್ನ್ಯಾ" ಅಗಿತ್ತಂತ. ಇಂವನ ಹುಡಗಿ ಖೋಲಿ ಮುಂದ ಹೊಚ್ಚಲಹೊರಗ ನಿಂತು ಒಳಗ ಹಣಿಕಿ ಹಾಕಿ ನೋಡಿ ದೂರಿಂದನ " ಆರಾಮ ತಗೋರಿ " ಅಂತ ಹೇಳಿ ಬಂದಾ. ಕಡಿಕೆ ಇಂವಾ ಈ ಪರಿ ಸಂಗೀತದ್ದ ಹುಚ್ಚ ಹಿಡಿಸಿಕೊಂಡದ್ದ ನೋಡಿ ಗೋವಿಂದನ್ನ ಅಜ್ಜಿ ಮದಲ ಹಳ್ಳಿಯಾಕಿ " ಎ ತಮ್ಮಾ ಇಷ್ಟ ಆರಸಲಿಕತ್ತಿ ಅಂದಮ್ಯಾಲೆ ಮದುವ್ಯಾದಿಂದ ನೌಕರಿ ಪಾಕರಿ ಬಿಟ್ಟ ಹೆಂಡ್ತಿ ಕೈಯ್ಯಾಗ ಪೀಂಯಾಂ ಪೆಟ್ಟಗಿ ಕೊಟ್ಟ ಮಠದ ಮುಂದ ಕೂಡಸೊ ವಿಚಾರ ಎನರೆ ಮಾಡಿ ಎನ ಮತ್ತ. ಈ ಸಲಾ ಹಾಡಾ ಪಾಡಾ ಅನಕೋತ ಕುತ್ಯಂದ್ರ ನಿಮ್ಮಪ್ಪಗ ಇನ್ನ ಕನ್ಯಾ ನೊಡಬ್ಯಾಡಂತ ಹೇಳ್ತೇನಿ ಅಂತ ಧಮ್ ಕೊಟ್ಟಳು. ಲಾಸ್ಟ ಒಂದ ನೋಡಿ ಹೇಂಗಿದ್ರು ಅದನ್ನ ಮಾಡ್ಕೊಂಡ್ರಾತ ಅಂದು ಕನ್ಯಾ ನೋಡಲಿಕ್ಕೆ ಹೋದಾ. ಪುಣ್ಯಾಕ್ಕ ಆ ಹುಡುಗಿ " ಮನೆಯೊಳಗಾಡೊ ಗೋವಿಂದಾ………" ಅಂತ ಹಾಡಿದ್ಲು. ಅದನ್ನ ಕೇಳಿ ಗೋವಿಂದಾ ಹಿಗ್ಗಿಹೀರಿಕಾಯಿ ಆಗಿ ಲಗೇಚ್ ಕನ್ಯಾ ಹೂಂ ಅಂದ್ನಂತ.ಆಕಿ ಹಾಡಿದ್ದ ಒಂದ ರೀತಿಯಿಂದ ಖರೇನ ಆಗೇದ. ಯಾಕಂದ್ರ ಗೋವಿಂದಗ ಮದವಿ ಆದ ಸ್ವಲ್ಪ ದಿನದಾಗ ಪೋಸ್ಟ್ ಮಾಸ್ಟರ್ ಅಂತ ಪ್ರಮೋಶನ್ ಸಿಕ್ಕತು. ಈ ಪೋಸ್ಟ ಮಾಸ್ಟರ್ಗೋಳ ಕ್ವಾರ್ಟರ್ಸಗೋಳು ಅಲ್ಲೆ ಪೋಸ್ಟ್ ಆಫೀಸಿನ್ ಹಿಂದನ ಇರತಾವ.ಅಂದ್ರ ಆಫೀಸಿನ್ಯಾಗಿಂದನ ಮನಿಗೆ ಹೋಗಬಹುದು. ಆಫೀಸಿಗೆ ಮನಿಗೆ ನಡುವನ ಬಾಗಲ ಇರತದ. ಗೋವಿಂದನ ಹೆಂಡ್ತಿ ಮಡಿಲೇ ಅಡಗಿ ಮಾಡಲಿಕ್ಕೆ ಕೂತಾಗ ಏನರೆ ಅಡಗಿ ಸಾಮಾನ ಇಟಗೊಳ್ಳೊದ  ಮರತಿದ್ಲಂದ್ರ, ಖೊಲ್ಯಾಗ ಬಂದ ಆಫೀಸನ್ಯಾಗ ಹಣಿಕಿ ಹಾಕಿ ಮೆತ್ತಗ ಕೆಮ್ಮತಿದ್ಲು ಇಲ್ಲಾ ಬಳಿ ಸಪ್ಪಳಾ ಮಾಡತಿದ್ಲು ಆಗ ಇಂವಾ ಬಂದ ಆಕಿ ಕೇಳಿದ್ದ ಕೊಟ್ಟ ಹೋಗತಿದ್ದಾ. ಹಿಂಗ ಆಫೀಸಿನ ಟೈಮನ್ಯಾಗ ದಿನಕ್ಕ ಒಂದ ಹತ್ತ ಸಲಾ ಒಳಗಿಂದೊಳಗ ಅಡ್ಯಾಡಕೋತ ಒಂಥರಾ ಡ್ಯೂಯೆಲ್ ಡ್ಯೂಟಿ ಮಾಡಕೋತ             

" ಮನೆಯೋಳಗಾಡೊ ಗೋವಿಂದಾ…….." ಅಂತ ಹಾಡಿ ಹಾಡಿ ಬುಟ್ಟಿಗೆ ಹಾಕ್ಕೊಂಡ, ಕಡೀಕು ಅಸರಂತಾ ಮನ್ಯಾಗನೊ ಓಡ್ಯಾಡೊಹಂಗಾ ಮಾಡಿದಿ ನೋಡ ಅಂತ ಹೆಂಡ್ತಿನ್ನ ಕಾಡತಿರತಾನ.      

  

            ಈ ಕನ್ಯಾ ನೋಡೊ ಪ್ರಸಂಗ ಅಂದಕೂಡಲೆ ನಮ್ಮ ತಮ್ಮನ ಗೇಳೆಯಾ ರಮ್ಯಾಂದ ನೆನಪಾಗತದ. ಅದರಕಿಂತ ಮದ್ಲ ಈ ರಮ್ಯಾನ ಬಗ್ಗೆ ಹೇಳಬೇಕಂದ್ರ ಇಂವಗ ಫಡ್ಡ(ಗುಂಡ ಪಂಗಳಾ) ಅಂದ್ರ ಭಾಳ ಹೆದ್ರಿಕಿ.ಆಂವಾ ಹಿಂಗ ಹೆದ್ರೊದಕ್ಕನು ನಮ್ಮ ತಮ್ಮನ ಕಾರಣ. ಒಂದಿನಾ ಆಂವಾ ನಮ್ಮನಿಗೆ ಬಂದಾಗ ಹಿಂದಿನ ದಿನಾ ಮಾಲಕರ ಮನಿಯವರು ಕೊಟ್ಟಿದ್ದ ಪಥ್ಥರದಿಲವಾಲೆ ಅಂದ್ರ ತಂಗಳದ್ದ ಕಲ್ಲಹೆಂಟಿ ಆಗಿದ್ದ ಫಡ್ಡ ಬಿಸಿ ಮಾಡಿ ತಿನ್ನಿಸಿ ಹೊಟ್ಟಿ ಕೆಟ್ಟ ಪಾವಕೇಜಿ ಇನೋ..ಕುಡಿಯೋಹಂಗ ಮಾಡಿದ್ದಾ. ಆವತ್ತಿಂದ ಯಾವಾಗ ಫಡ್ಡ ತಿಂದ್ರು ಒತ್ತಿ ಒತ್ತಿ ಮೂಸಿ ನೋಡಿನ ತಿಂತಿದ್ದಾ. ಅಂಥಾದ್ರಾಗ ಇಂವಾ ಒಂದಸಲಾ ಕನ್ಯಾ ನೋಡಲಿಕ್ಕೆ ಹೋದಾಗ ದೂರಿಂದ ಬಂದಾರು ಹೊಟ್ಟಿತುಂಬ ನಾಷ್ಟಾ ಆಗತದ ಅಂತ ಫಡ್ಡು ಚಟ್ನಿನ ಮಾಡಿರಬೇಕಾ,ತಗೋರಿ ರಮ್ಯಾಗ ಚಿಂತಿ ಶೂರು ಆತುಎಲ್ಲಾರ ಮುಂದ ಫಡ್ಡ ಹಿಡದ ಒತ್ತಿನೋಡೊಹಂಗಿಲ್ಲಾ, ಒತ್ತಿನೋಡಲಾರದ ತಿನ್ನಲಿಕ್ಕೆ ಧೈರ್ಯಾ ಇಲ್ಲಾ, ಕಡಿಕೂ ಹೆಂಗೊಮಾಡಿ ಒತ್ತಿಕಿ ನೋಡಬೇಕಾದ್ರ ಹುಡಗಿ ಅವ್ವ ನೋಡೆ ಬಿಟ್ಲು. ಆಕಿ ರಮ್ಯಾಗ" ತಮ್ಮಾರ ಸರಿ ಸರಿ ಉದ್ದಿನಬ್ಯಾಳಿ, ಚುಮ್ಮರಿ ಎಲ್ಲಾ ಹಾಕಿ ರುಬ್ಬೆವರಿ. ಹಗರ ಆಗ್ಯಾವ ತಿನ್ರಿ ಅಂದ್ಲಂತ. ಇಂವನ ಜೋಡಿ ಹೋಗಿದ್ದ ನಮ್ಮ ತಮ್ಮ ಈಗಾದ್ರು ಈ ಸುದ್ದಿ ನೆನೆಪಾದ್ರ ಹೇಳಿ ಹೇಳಿ ನಗತಿರತಾನ. ಮನ್ಯಾಗ ಇಂವಾ ಹಿಂಗ ಮಾಡೊದಕ್ಕ ರಮ್ಯಾ ನ ಅವ್ವ " ಮುಲ್ಲಾ ಅವನ್ನೆನ ಹತ್ತಿಕಿ ಹತ್ತಿಕಿ ನೋಡ್ತಿ, ನೀನ್ನ ಹೆಂಡ್ತಿ ಜೀವ ಮಾಡಿ ಹಿರಿಯಾ ತಿನ್ನಲಿ ಅಂತ ಮಾಡಿಕೊಟ್ರ ನಾಯಿ ಹಂಗ ಮೂಸಿ ನೋಡತಿಯೇನ ಪಿಸರ್ಯಾ , ಸುಮ್ನ ತಿನ್ನ" ಅಂತ ಬಯ್ತಿರತಾಳ.ಹೊರಗ ಗೆಳ್ಯಾರ ಗುಂಪಿನ್ಯಾಗು ಎಲ್ಲಾರು ರಮ್ಯಾಗ ಫಡ್ಡಿನ ಹೆಸರ ತಗೊಂಡ ಕಾಡಸವರ. ನಮ್ಮ ತಮ್ಮ ಅಂತೂ " ರಮ್ಯಾ ನೀ ಎನರ ಸತ್ರ ನಿನ್ನ ಮೂಗಿನ್ಯಾಗ ಅಳ್ಳಿ ಬದಲಿ ಎರಡ ಫಡ್ಡ ಇಟ್ಟ. ನೀನ್ನ ಗೋಟಿ ಕೂಡಿಸಿ ಊರಾಗೆಲ್ಲಾ ಮೇರವಣಿಗಿ ಮಾಡಸ್ತೇವಿ" ಅಂತ ಕಾಡತಿದ್ದಾ. 

         ಈ ಕನ್ಯಾ ನೋಡೊದು ಹಾಡು ಅಂದ್ರ ಇನ್ನೊಂದ ಮಜಾಶಿರ ಪ್ರಸಂಗ ನೆನಪಿಗೆ ಬರತದ. ಏನಂದ್ರ " ನಮ್ಮ ಮನಿ ಬಾಜುಕ್ಕ ವೀಣಾ ಅಂತ ಒಂದ ಹುಡುಗಿತ್ತು. ಆಕಿನ್ನ ನೋಡಲಿಕ್ಕೆ ಬರೊವರಿದ್ದರು. ಹುಡಗನ ಕಡೆಯವರು ಖಡಕ ವೈದಿಕರಿದ್ದಾರ ಭಾಳ ಮಡಿ ಮಾಡತಾರ. ಉಳ್ಳಾಗಡ್ಡಿ ಬಳ್ಳೋಳ್ಳಿ ವಾಸನಿ ಬಾಜುಕಿನ ಮನಿಯಿಂದ ಬಂದ್ರನು ಇವರು ತಮ್ಮ ಮನ್ಯಾಗ ಪಂಚಗವ್ಯಾ ತಗೋತಾರ ಅಂತ ಅನ್ನೊ ಸುದ್ದಿ ಬಂತು. ವೀಣಾ ಇಗಿನ ಕಾಲದ ಹುಡುಗಿ. ಹೇಂಗರೆಮಾಡಿ ಈ ಸಂಬಂಧ ತಪ್ಪಿಸಿಕೊಬೇಕಂತ, ಇಕಿಗೆ ಹಾಡವ್ವಾ ಅಂದಾಗ ಮುದ್ದಾಮ " ಒಲ್ಲೆ ನಾ ವೈದಿಕ ಗಂಡನ್ನ, ಎಲ್ಲಿಯಾದರು ನೀರ ಧುಮುಕುವೆನಮ್ಮಾ, ಒಲ್ಲೆ ನಾ ವೈದಿಕ ಗಂಡನ್ನ………… " ಅಂತ ಹಾಡಿದ್ಲು. ಇಕಿ ಒಲ್ಲೆ ಅಂತಾಳಂದ್ರ ಮಾಡಿಕೊಂಡಾತಿರಬೇಕಂತ ಹ್ಯಾಂವಕ್ಕ ಬಿದ್ದವರಂಘ ವರನ್ನ ಕಡೆಯವರು ಮದವಿಗೆ ಹೂಂ ಅಂದಬಿಟ್ಟರು. ಇನ್ನೆನ ಮಾಡಲಿಕ್ಕಾಗತದ ನಿಶ್ಚೆ ಆತು, ಮದವಿ ದಿನಾನು ಹತ್ರ ಬಂದ ಬಿಡತು. ಬೀಗರನ್ನ ಇದುರಗೊಂಬೊ ದಿನಾ ಗಂಡ ಬೀಗರ ಕಡೆ ಹುಡುಗನ ಸ್ವಾದರಮಾವಾ ಆವತ್ತ ವೀಣಾ ಹಾಡಿದ್ದ ಹಾಡಿಗೆ ಸೇಡ ತಿರಿಸಿಕೊಳ್ಳಿಕತ್ತಾನೇನೊ ಅನ್ನೊವರ ಹಂಗ ಒಂದೊಂದ ತಕರಾರ ತಗಿಲಿಕತ್ತಿದ್ದಾ. ಬಂದ ಕೂಡಲೆ ಕಾಲಿಗೆ ಬಿಸಿನೀರ ಕೊಡಲಿಲ್ಲಂತ, ಛಂದಾಗಿ ಸ್ವಾಗತಾ ಮಾಡಲಿಲ್ಲಂತ ರಾಗಾ ಶೂರು ಮಾಡಿದ್ದಾ. ಕಡಿಕೆ ಚಹಾ ಪ್ಲ್ಯಾಸ್ಟಿಕ್ ಕಪ್ಪಿನ್ಯಾಗ ಕೊಟ್ಟರ ನಮಗ ನಡಿಯುದಿಲ್ಲಂತ ಹಿತ್ತಾಳಿ ವಾಟಗದಾಗ ಹಾಕಿಸಿಕೊಂಡ ಕುಡದಾ.ಎಲ್ಲಾರು ನಾಳೆ ಅಕ್ಷತಾನರ ಮುಗಿಲಿ ಆವಾಗ ಈ ಮಾಮಾನ್ನ ಒಂದ ಕೈ ನೋಡಕೊಂಡ್ರಾತ ಅಂತ ಸುಮ್ನ ತಡಕೊಂಡಿದ್ರು. ಬಿಗರಿಗೆ ಫಳಾರಕ್ಕ ಅವಲಕ್ಕಿ ಸೂಸಲಾ ಮಾಡಿಸಿದ್ರು. 

ಅಲ್ಲೂ ಮಾಮಾ ಕಿಡ್ಡಿ ತಗದಾ ಎನಂದ್ರ " ಸೂಸಲಕ್ಕ ಒಗ್ಗರಣ್ಯಾಗ ಸಾಸಿವಿ ಹಾಕ್ಯಾರ ಮುಸರಿ ನಮಗ ಮಡಿಗೆ ನಡಿಯಂಗಿಲ್ಲಾ. ಅಷ್ಟಕ್ಕೂ ಅವಲಕ್ಕಿನ ಹೆಣ್ಣಮಕ್ಕಳ ತೊಯಿಸಿ ಒಗ್ಗರಣಿ ಹಾಕ್ಯಾರ ನಾನು ಮನ್ಯಾಗ ಹೆಂಡ್ತಿ, ತಪ್ಪಿದರ ತಾಯಿ ಇಬ್ಬರ ಕೈಯ್ಯಾಗಿನ ಅಡಗಿ ನಾಷ್ಟಾ ತಿನ್ನೊದು.ಇಲ್ಲಂದ್ರ ಶುಚಿರ್ಭುತ ಗಂಡಸರು ಅಡಗಿ ಮಾಡಿರಬೇಕು .ಬ್ಯಾರೆ ಯಾವ ಹೆಣ್ಣಮಕ್ಕಳು ಮಾಡಿದ್ದ ನಡಿಯಂಗಿಲ್ಲಾ" ಅಂದಾ ಅದಕ್ಕ ವೀಣಾನ ತಂದಿ "ಹೋಗ್ಲಿ ಬರ್ರಿ ಬೀಗರ ನಿಮಗ ಅವಲಕ್ಕಿ ಮಸರು ಕಲಸಿಕೊಡೊ ವ್ಯವಸ್ಥಾ  ಮಾಡಸತೇವಿ " ಅಂತ ಕೈ ಹಿಡಕೊಂಡ ಹೊಂಟ್ರ " ಹೇ ಹೇ ಬ್ಯಾಡ ಬ್ಯಾಡ ತಗಿರಿ, ಅಡಗಿ ಮನ್ಯಾಗ ಮೊಸರು ಹಾಲು ಅಡಗಿ ಮುಸರಿ ಎಲ್ಲಾ ಎಕಾಕಾರ ಆಗಿರತದ" ಒಂದ ಆಚಾರ ಇಲ್ಲಾ ವಿಚಾರ ಇಲ್ಲಾ ಅನಕೋತ ಹೋರಗ ಎದ್ದ ಹೋದಾ. ಇತ್ಲಾಕಡೆ ಎಲ್ಲಾರದು ನಾಷ್ಟಾ ನಡದಿತ್ತು. ಮದವಿಗಂತ ಬಂದ ವೀಣಾನ ಮಾವಶಿಮಕ್ಕಳು ಸುಬ್ಬು, ಕಿಟ್ಟ್ಯಾ,ಮತ್ತ ಇನ್ನೊಂದಿಷ್ಟ ಹುಡುಗುರು ಚೀಟ್ ತಿನ್ಲಿಕ್ಕಂತ ಕಲ್ಯಾಣಮಂಟಪದಿಂದ ಸ್ವಲ್ಪ ದೂರಿದ್ದ ಡುಮ್ಮಿ ಅಂಗಡಿಗೆ (ಅಂದ್ರ ಆಕಿ ಹೆಸರು ಪಾರವ್ವಾ ಅಂತ ಆದ್ರ ಆಕಿ ಆಕಾರ ನೋಡಿ ಎಲ್ಲಾರು ಡುಮ್ಮಿ ಅಂತಾರ) ಹೋದ್ರು. ಹೊರಗ ಹೀಂಗ ಮಾತಾಡಕೋತ ನಿಂತಾಗ ಚಹಾದಂಗಡ್ಯಾಗ ಒಳಗ ಕಂವಗತ್ತಲ್ಯಾಗ ಮೂಲ್ಯಾಗ ಕೂತ ಮಿರ್ಚಿ ತಿನಲಿಕತ್ತಾಂವನ್ನ ಎಲ್ಲೊ ನೋಡಿಧಂಗನಿಸಿ ದಿಟ್ಟಿಸಿ ನೋಡಿದ್ರ ವರನ್ನ ಮಾಮಾ ಆಗಿದ್ದಾ. ಹುಡುಗುರ ಧ್ವನಿ ಕೇಳಿ ಎಲ್ಲೆ ನೋಡಿಬಿಡತಾರೊ ಅನ್ನೊ ಎದಿಗುದಿಯೊಳಗ ಅಡರಾಶಿ ಎಳೊಮುಂದ ಕಟ್ಟಗಿ ಬಾಕಿನ್ಯಾಗ ಎದ್ದಿದ್ದ ಮಳಿಗೆ ಧೋತ್ರ ಸಿಕ್ಕು ಪರ್ರಂತ ಹರಿತು. ಹಂಗೂಹಿಂಗು ರೊಕ್ಕಾ ಕೊಟ್ಟು ಹಿತ್ತಲಬಾಗಲಿಲೆ ಪೋಟ್ ಆದಾ ಮಾಮಾ. 

ಈ ಹುಡುಗುರೆಲ್ಲಾ ಮಾಮಾನ್ನ ಫಜೀತಿ ಮಾಡಬೇಕಂತ ವಾಪಸ ಬಂದ ಎಲ್ಲಾ ಹುಡುಗುರಗೂ ಸುದ್ದಿ ಹೇಳಿ ಮಾಮಾ ಬರೊದನ್ನ ಕಾಯ್ಕೋತ ಕುತಿದ್ರು. ಅಗದಿ ಎದಿ ಶಟಿಸಿ ಥಾಟಿಲೇ ಬಂದ ಮಾಮಾನ್ನ ನೋಡಿ ಯಾರೊ ಒಬ್ರು " ಆಚಾರ ಮತ್ತ ಫಳಾರ ಮಾಡಿದ್ರಿಲ್ಲೊ? ಹಾಲು ಬಾಳೆಹಣ್ಣು ತರಿಸಿಕೋಡಲೇನು ಅಂದ್ರು. ಆ ಮಾತಿಗೆ ಮಾಮಾ ಇನ್ನೆನ ಕೊಂಕ ತಗಿಬೇಕನ್ನೊದ್ರಾಗ ಅಲ್ಲೆ ಇದ್ದ ಹುಡುಗು ಗುಂಪು ಒಮ್ಮೇಲೆ ಜೋರಾಗಿ ಕೋರಸ್ ನ್ಯಾಗ " ಸರಕ್ಕ ಸರಿತಲ್ಲ, ಬೀಗರ ಸ್ವರೂಪ ತೀಳಿತಲ್ಲ,….. ಡುಮ್ಮಿ ಅಂಗಡಿ ಮಿರ್ಚಿ-ಗಿರಮಿಟ್ಟ್ ಖಡಕ್ಕ ಇತ್ತಲ್ಲ………. ಕಳ್ಳ ಕಾಮಿ ಹಂಗ ಓಡಿ ಬರುವಾಗಾ, ಉಟ್ಟಿದ್ದ ಧೋತ್ರಾ ಪರಕ್ಕಂತ ಹರಿತಲ್ಲಾ…… ಸರಕ್ಕ ಸರಿತಲ್ಲ, ಬೀಗರ ಸ್ವರೂಪ ತೀಳಿತಲ್ಲ" ಅಂತ ಚಪ್ಪಾಳಿ ಬಡಕೋತ ಹಾಡಲಿಕತ್ರು. ಇದನ್ನ ಕೇಳಿ ಮಾಮಾನ್ನ ಮಾರಿ ಉದಕಾಮಣಿ ಆದವರಂಘ ಬೆಳ್ಳಗ ಬಿಳಚಿಕೊಂಡ, ಸೂತ್ತು ಕಡೆ ಎಪರಾ-ತಪರಾ ನೋಡಲಿಕತ್ತಾ. ಆಮ್ಯಾಲೆ ಮದವಿ ಮುಗಿಯೊತನಕಾ ಮಾಮಾ ಕೂತಲ್ಲೆ ನಿಂತಲ್ಲೆ  ಈ ಹುಡುಗರೆಲ್ಲಾ ಹೋಗಿ " ಸರಕ್ಕ ಸರಿತಲ್ಲ-ಪರಕ್ಕಂತ ಹರಿತಲ್ಲ." ಅಂತ ಕಾಡಸಲಿಕತ್ತುವು. ಮದವಿ ಮುಗದ್ರ ಸಾಕಂತ ಕಾಯಲಿಕತ್ತಿದ್ದ ಮಾಮಾ, ಮದಲನೇ ಪಂಕ್ತಿಗೆ ಕೂತು  ಊಟಾ ಮಾಡಿ ಬೀಡಾ ಇಸ್ಕೊಂಡ ಸತ್ನ್ಯೊ-ಕೆಟ್ನ್ಯೊ ಅಂತ ಜಾಗಾ ಖಾಲಿ ಮಾಡಿದಾ. ಪ್ರತಿಸಲಾ ವೀಣಾ ತವರಮನಿಗೆ ಬಂದಾಗ ಆಕಿನ್ನ ನೋಡಿದಾಗ " ಸರಕ್ಕ ಸರಿತಲ್ಲ-ಪರಕ್ಕಂತ ಹರಿತಲ್ಲ" ನೆನಪಾಗಿ ಮನಃಸ್ಪೂರ್ತಿ ನಗತೇವಿ….


ಚಿತ್ರ:ಆಡುವಳ್ಳಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
srujan
srujan
10 years ago

sogasaagide.uttara karnataka bhashe sakath aagi balasiddare.abhinandanegalu .

sharada.m
sharada.m
10 years ago

nice

Jayaprakash Abbigeri
Jayaprakash Abbigeri
10 years ago

ಉತ್ರಮ ಹಾಸ್ಯ ರಸದೌತಣವನ್ನು ಉಣಬಡಿಸಿದ್ದೀರಿ…ಶುಭಾಶಯಗಳು….

GAVISWAMY
10 years ago

nice.. hilarious.. 

4
0
Would love your thoughts, please comment.x
()
x