ನಮ್ಮ ಭಾರತೀಯ ಪರಂಪರೆಯಲ್ಲಿ ಹಬ್ಬಗಳು ವಿಶೇಷ ಸ್ಥಾನ ಪಡೆದಿವೆ. ಅದರಲ್ಲೂ ಹಿಂದೂ ಪಂಚಾಂಗದ ಹೊಸ ವರ್ಷದ ದಿನವೆಂದೇ ಸಂಭ್ರಮಪಡುವ ಚಾಂದ್ರಮಾನ ಯುಗಾದಿಯಿಂದ ಹಿಡಿದು ನಾಗರ ಪಂಚಮಿ, ರಕ್ಷಾ ಬಂಧನ, ವರಲಕ್ಷ್ಮೀ ವ್ರತ, ಗೌರೀ ಗಣೇಶ ಚತುರ್ಥಿ, ನಾಡ ಹಬ್ಬ ದಸರಾ, ನರಕ ಚತುರ್ದಶಿ, ಬಲಿಪಾಡ್ಯಮಿ, ಸಂಕ್ರಾಂತಿ ಮುಂತಾದ ಹಬ್ಬಗಳ ಜೊತೆಗೆ ವಿವಿಧ ಹರಿದಿನಗಳನ್ನೂ ಆಚರಿಸುವ ಮೂಲಕ ಸಂಭ್ರಪಡುತ್ತೇವೆ.
ಈ ಎಲ್ಲಾ ಹಬ್ಬಗಳು ಒಂದೊಂದು ಪೌರಾಣಿಕ ಹಿನ್ನೆಲೆಯಲ್ಲಿ, ಆಯಾ ಋತುಮಾನಗಳ ಹೊಂದಿಕೆಗೆ ಅನುಗುಣವಾಗಿ ಕೆಲವು ಉದ್ದೇಶಗಳ ಸಾಧನೆಗಾಗಿ ಆಚರಣೆಗೊಳ್ಳುತ್ತವೆ. ದೈನಂದಿನ ಬದುಕಿನ ಕೆಲಸ ಕಾರ್ಯಗಳ ಜಂಜಾಟದಲ್ಲಿ ಮುಳುಗೇಳುವ ನಮ್ಮ ಮನಸ್ಸಿಗೆ ಒಂದಿಷ್ಟು ಹರ್ಷೋಲ್ಲಾಸ, ದಣಿವಿನಿಂದ ಬಿಡುವು, ಕೂಡಿ ಬಾಳುವ ಅವಕಾಶ ಇತ್ಯಾದಿಗಳಿಗಾಗಿ ನಮ್ಮ ಪೂರ್ವಿಕರ ಬಳುವಳಿಯಾಗಿ ಬಂದಿರುವ ಈ ಸಡಗರದ ಆಚರಣೆಗಳು ಅವ್ಯಾಹತವಾಗಿ ನಡೆದುಕೊಂಡು ಬಂದಿವೆ. ಹಬ್ಬಗಳ ನೆಪದಲ್ಲಿ ಮನೆಗಳನ್ನು ಸ್ವಚ್ಛತೆ ಮಾಡಿಕೊಳ್ಳುವುದು, ಹೊಸ ವಸ್ತುಗಳು, ಹೊಸ ಬಟ್ಟೆಗಳನ್ನು ಖರೀದಿಸುವುದು, ತಳಿರು ತೋರಣಗಳಿಂದ ಮನೆಯನ್ನು ಶೃಂಗರಿಸುವುದು ದೇವರ ಅಲಂಕಾರ, ವಿಶೇಷ ಪೂಜೆ, ಬಂಧುಗಳು- ಮಿತ್ರರು ಪ್ರೀತಿಯಿಂದ ಸೇರುವುದು, ಬಗೆ ಬಗೆಯ ಭಕ್ಷ್ಯಭೋಜನಗಳನ್ನು ಸಿದ್ಧಪಡಿಸಿ ಮನೆ ಮಂದಿಯೆಲ್ಲಾ ನೆಂಟರಿಷ್ಟರೊಂದಿಗೆ ಒಟ್ಟಿಗೆ ಊಟ ಮಾಡುವುದು, ಇಂತಹ ಅನೇಕ ಅಂಶಗಳ ಅಳವಡಿಕೆಯಿಂದ ಆಚರಿಸುವ ಹಬ್ಬಗಳು ಕಾಲ ಕಾಲಕ್ಕೆ ತಕ್ಕಂತೆ ಆಗುವ ಜೀವನ ಶೈಲಿಯೊಂದಿಗೆ ಮೂಲ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಾ ಸಾಗಿವೆ. ಹೀಗೆ ಬದಲಾಗುತ್ತಿರುವ ಹಬ್ಬಗಳಲ್ಲಿ "ಗಣೇಶೋತ್ಸವ"ವೂ ಒಂದಾಗಿದ್ದು ಕಳೆದ ಎರಡು ಮೂರು ದಶಕಗಳಲ್ಲಿ ಹೇಗೆ ಬದಲಾಗಿದೆ ಎಂಬುದರ ಅವಲೋಕನವನ್ನು ಈ ಲೇಖನದಲ್ಲಿ ಮಾಡಲಾಗಿದೆ.
ನಮ್ಮ ಭಾರತ ದೇಶದ "ಸ್ವಾತಂತ್ರ್ಯ ಚಳುವಳಿ"ಯಲ್ಲಿ ಎಲ್ಲಾ ಜನ ಸಾಮಾನ್ಯರನ್ನು ಒಟ್ಟುಗೂಡಿಸಲು, ಹೋರಾಟಗಾರರಲ್ಲಿ ದೇಶಪ್ರೇಮವನ್ನು ಬಡಿದೆಬ್ಬಿಸಲು ಬಾಲಗಂಗಾಧರ ತಿಲಕರು ಈ ಗಣೇಶೋತ್ಸವವನ್ನು ಒಂದು ರಾಷ್ಟ್ರೀಯ ಉತ್ಸವವಾಗಿ ಆಚರಿಸಲು ಕರೆ ನೀಡಿದರು. ಆಗಿನಿಂದ ಈ ಎರಡು ದಿನದ ಹಬ್ಬವು ವಾರಾನುಗಟ್ಟಳೆ ಕೆಲವು ಕಡೆ ತಿಂಗಳಾನುಗಟ್ಟಲೆಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ, ಬಗೆ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸುವ ಮುಖಾಂತರ ಆಚರಿಸಲಾಗುತ್ತಾ ಬರಲಾಗಿದೆ.
ಈಗಿನ ಹಿರಿಯ ತಲೆಮಾರಿನವರ ಬಾಲ್ಯದ ದಿನಗಳ ಗಣೇಶೋತ್ಸವವನ್ನು ಮೆಲುಕು ಹಾಕಿದರೆ ಇಂದಿನ ಆಚರಣೆಯ ಬದಲಾದ ಸ್ವರೂಪದ ಅನಾವರಣವಾಗುತ್ತದೆ. ಉದಾಹರಣೆಯಾಗಿ ನನ್ನ ಹುಟ್ಟೂರಾದ ಹೊಡೇನೂರಿನಲ್ಲಿ ಆಚರಿಸುತ್ತಿದ್ದ ಗಣೇಶೋತ್ಸವದ ಕುರಿತು ಹೇಳಲೇಬೇಕು. ಆಗಿನ್ನೂ 50-60 ಕುಟುಂಬಗಳಿದ್ದ ಕೃಷಿ ಪ್ರಧಾನವಾದ ಗ್ರಾಮ ನಮ್ಮದು. ಬಹಳಷ್ಟು ಕುಟುಂಬಗಳು ಕೂಲಿ ಕಾರ್ಯ ಮಾಡಿಕೊಂಡೇ ಬದುಕುತ್ತಿದ್ದವು. ಆದರೂ ಗಣೇಶನ ಹಬ್ಬ ಬಂದರೆ ಎಲ್ಲರೂ ಒಂದಾಗಿ ಪರಸ್ಪರ ಹಣ ಸಂಗ್ರಹ ಮಾಡಿ ಉತ್ಸವ ಸಂಘಟಿಸುತ್ತಿದ್ದರು. ವಿದ್ಯಾವಂತರ ಸಂಖ್ಯೆ ಕಡಿಮೆ ಇದ್ದರೂ, ಅವರಲ್ಲೇ ಕೆಲವರು ಮುಂದಾಳತ್ವ ವಹಿಸಿಕೊಂಡು ಕಾರ್ಯಕ್ರಮವನ್ನು ವೈಭವದಿಂದ ಆಚರಿಸುತ್ತಿದ್ದರು.
ಗೌರೀ ಹಬ್ಬದ ದಿನವೇ ಸಮೀಪದ ಕೊಣನೂರಿಗೆ ಹೋಗಿ, ಅಲ್ಲಿನ ಕುಂಬಾರ ಸಮುದಾಯದವರು ನಿರ್ಮಿಸುತ್ತಿದ್ದ ಸುಂದರವಾದ ಗೌರೀ ಗಣೇಶ ಮೂರ್ತಿಗಳನ್ನು ಖರೀದಿಸಿ ಶ್ರದ್ಧೆ ಭಕ್ತಿಯಿಂದ ಎತ್ತಿನ ಗಾಡಿಯ ಮೂಲಕವೇ ತರುತ್ತಿದ್ದರು. ಇವರು ತರುವಷ್ಟರಲ್ಲಿ ನನ್ನೂರಿನ ಮತ್ತೊಂದು ಗುಂಪಿನವರು ದೇವಾಲಯದೊಳಗಿನ ಪ್ರಾಂಗಣದಲ್ಲಿ ಮಂಟಪವನ್ನು ಶೃಂಗರಿಸಿ ಸಿದ್ಧಗೊಳಿಸುತ್ತಿದ್ದರು.
ಮೊದಲೇ ಬುಕ್ ಮಾಡಿರುತ್ತಿದ್ದ ಕೊಣನೂರಿನ ಮೈಕ್ ಸೆಟ್ (ಗ್ರಾಮಾಫೋನ್) ಗೋವಿಂದಣ್ಣನವರು ರೆಡಿ ಮಾಡಿಕೊಂಡು ವಿವಿಧ ಭಕ್ತಿ ಗೀತೆಗಳನ್ನು ಹಾಕುತ್ತಿದ್ದರು. ಮೊಟ್ಟ ಮೊದಲಿಗೆ ಹಾಕುತ್ತಿದ್ದ "ಗಜಮುಖನೇ…ಗಣಪತಿಯೇ… ನಿನಗೆ ವಂದನೇ…" ಗೀತೆಯ ಮಾಧುರ್ಯವನ್ನು ನೆನೆದರೆ ಇಂದಿಗೂ ಕಳೆದು ಹೋದ ಆ ಕಾಲದ ನೆನಪು ಹಚ್ಚ ಹಸಿರಾಗಿ ಕಾಡುತ್ತದೆ.
ಒಳ್ಳೆಯ ಘಳಿಗೆ ನೋಡಿ ಶುಭ ಮುಹೂರ್ತದಲ್ಲಿ ಗಣಪನನ್ನು ಪ್ರತಿಷ್ಠಾಪಿಸಿ ಮೊದಲ ಪೂಜೆಯನ್ನು ಊರಿನ ಗೌಡರ ಮೂಲಕ ಮಾಡಿಸುತ್ತಿದ್ದರು. ಆಗ ಊರಿನ ಹೆಂಗಸರು, ಮಕ್ಕಳು, ಯುವಕರು ಸೇರಿದಂತೆ ಎಲ್ಲರೂ ಭಕ್ತಿಯಿಂದ ಪೂಜೆ ಮಾಡಿ, ಕಡ್ಲೆಹಿಟ್ಟು, ಸೌತೆಕಾಯಿ ಕೋಸುಂಬರಿಯಂತಹ ಪ್ರಸಾದವನ್ನು ಸೇವಿಸಿ ಪುನೀತರಾಗುತ್ತಿದ್ದರು. ರಾತ್ರಿ ಸಮಯದಲ್ಲಿ ಒಂದೊಂದು ದಿನ ಒಂದೊಂದು ಕಾರ್ಯಕ್ರಮ ಇರುತ್ತಿತ್ತು. ಖ್ಯಾತ ಹರಿಕಥಾ ವಿದ್ವಾಂಸರಿಂದ ಕಥಾ ಕಾಲಕ್ಷೇಪ ನಡೆಯುತ್ತಿತ್ತು.
ಆ ಕಾಲದಲ್ಲಿ ಜನಪ್ರಿಯರಾಗಿದ್ದ ಅಕ್ಕಲವಾಡಿಯ ಅಚ್ಯುತದಾಸರು ಸೇರಿದಂತೆ ವಿವಿಧ ಕಲಾವಿದರಿಂದ ಏರ್ಪಡುತ್ತಿದ್ದ ಹರಿಕಥಾ ಕೀರ್ತನೆಯನ್ನು ಊರ ಜನರೆಲ್ಲಾ ದೇವಾಲಯದ ಮುಂಭಾಗದಲ್ಲಿ ಕಿಕ್ಕಿರಿದು ಸೇರಿ ಆಲಿಸುತ್ತಿದ್ದರು. ಜೊತೆಗೆ ಅಕ್ಕ ಪಕ್ಕದ ಬನ್ನೂರು, ಅಬ್ಬೂರು, ಮರಿಯಾನಗರ, ಕಾರ್ಗಲ್ಲು, ತರಗಳಲೆ ಕಾಡನೂರುಗಳಿಂದಲೂ ಗ್ರಾಮಸ್ಥರು ಬಂದು ಕೀರ್ತನೆಯನ್ನು ಕೇಳುತ್ತಿದ್ದರು. ನಾನು ನನ್ನ ಬಾಲ್ಯದ ಗೆಳೆಯರೊಡನೆ ಕುಳಿತು, ಕೆಲವೊಮ್ಮೆ ತೂಕಡಿಸಿಕೊಂಡು, ಇಲ್ಲವೇ ನಿದ್ರಿಸುತ್ತಲೇ ಹರಿಕಥೆಯಲ್ಲಿ ಪಾಲ್ಗೊಳ್ಳುತ್ತಿದ್ದ ದಿನಗಳು ಈಗಲೂ ನಗೆ ತರಿಸುತ್ತವೆ. ಇಂಥ ಸಂದರ್ಭಗಳಲ್ಲಿ ಆಲಿಸಿದ ಗಜಗೌರೀ ವ್ರತ, ಭೂಕೈಲಾಸ, ಸತ್ಯ ಹರಿಶ್ಚಂದ್ರ, ಚಂದ್ರ ಹಾಸ, ಸತಿ ಅನುಸೂಯ, ಸತಿ ಸಾವಿತ್ರಿ, ಭಕ್ತ ಮಾರ್ಕಂಡೇಯ, ಭಕ್ತ ಸಿರಿಯಾಳ ಮುಂತಾದ ಅನೇಕ ಪೌರಾಣಿಕ ಕಥೆಗಳನ್ನು ಆಗ ಕೇಳಿದ್ದು ಈಗಲೂ ಮೆಲುಕು ಹಾಕುತ್ತಿರುವಂತಿವೆ.
ಮುಂದೆ ಟಿವಿ, ವಿಸಿಡಿ ಯಂತಹ ಸಾಧನಗಳು ಬಂದ ನಂತರ ಹರಿಕಥಾ ಕೀರ್ತನೆಗಳು ಕಡಿಮೆಯಾಗಿ, ಆ ಸ್ಥಾನದಲ್ಲಿ ವಿಡಿಯೋ ಪ್ರದರ್ಶನಗಳು ಲಗ್ಗೆ ಇಟ್ಟವು. ಮೊದ ಮೊದಲಿಗೆ ಗಣೇಶನ ಮಹಿಮೆ, ಭಕ್ತ ಕುಂಬಾರ, ಬಬ್ರುವಾಹನದಂತಹ ಭಕ್ತಿ ಪ್ರಧಾನ ಚಲನ ಚಿತ್ರಗಳ ಶೋ ಆಗುತ್ತಿತ್ತು. ಬರಬರುತ್ತಾ ಜನರ ಅಭಿರುಚಿ ಬದಲಾದಂತೆ ಸಾಮಾಜಿಕ ಚಿತ್ರಗಳನ್ನು ನೋಡುವಂತಾದರು. ಅಂತವುಗಳಲ್ಲಿ ನೋಡಿದ ಚಿತ್ರಗಳೆಂದರೆ, ಶಂಕರ್ ಗುರು, ಕರುಣಾಮಯಿ, ಸಾಂಗ್ಲಿಯಾನ, ಮನ ಮೆಚ್ಚಿದ ಹುಡುಗಿ, ಪ್ರೇಮ ಲೋಕ, ಮುಂತಾದವುಗಳನ್ನು ಸ್ಮರಿಸಬಹುದು. ಈ ಸಂದರ್ಭದಲ್ಲಿ ಜನರಿಗೆ ಚಲನ ಚಿತ್ರ ವೀಕ್ಷಣೆ ಎಂಬುದು ಬಹಳ ರಂಜನೆ ನೀಡುವ ವಿಷಯವಾಗಿತ್ತು. ಆದ್ದರಿಂದಲೇ ಹತ್ತಾರು ಕಿಲೋಮೀಟರ್ ದೂರದ ಕೊಣನೂರಿನಲ್ಲಿದ್ದ 'ನಟರಾಜ' ಚಿತ್ರ ಮಂದಿರಕ್ಕೆ (ಈಗ ಆ ಚಿತ್ರ ಮಂದಿರ ಇಲ್ಲ) ಕಾಲು ನಡಿಗೆ ಅಥವಾ ಎತ್ತಿನ ಗಾಡಿ ಮೂಲಕ ಹೋಗಿ ಸಿನಿಮಾ ನೋಡಿಕೊಂಡು ಮಧ್ಯ ರಾತ್ರಿ ಮನೆಗೆ ವಾಪಾಸಾಗುತ್ತಿದ್ದರು. ಇಂಥ ಕಲಾ ರಸಿಕರಿಗೆ ಗಣೇಶ ಹಬ್ಬದ ವಿಡಿಯೋ ಪ್ರದರ್ಶನ ಹೆಚ್ಚು ಉಪಯುಕ್ತ ಎನ್ನುವಂತಾಗಿ ನೂರಾರು ಜನರು ತಮ್ಮೂರಿನಲ್ಲಿ ಮಾತ್ರವಲ್ಲದೆ ಅಕ್ಕ ಪಕ್ಕದ ಊರುಗಳಿಗೂ ಹೋಗಿ ನಿದ್ದೆಗೆಟ್ಪು ವಿಡಿಯೋ ನೋಡಿಕೊಂಡು ಬರುವ ಮೂಲಕ ಮನರಂಜನೆ ಪಡೆಯುವ ಕಲಾಸಕ್ತಿ ಹೊಂದಿದ್ದರು.
ಗಣೇಶ ವಿಸರ್ಜನೆಯಂದು ಹೂವು, ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತವಾದ ಎತ್ತಿನ ಗಾಡಿಯಲ್ಲಿ ರಾತ್ರಿಯಿಡೀ ಮೆರವಣಿಗೆ ಮಾಡಿ, ತಮಟೆ ವಾದನಗಳ ತಾಳಕ್ಕೆ ಕುಣಿದು ಕುಪ್ಪಳಿಸಿ (ಈಗ ಕುಡಿದು ತೂರಾಡುತ್ತಾರೆ) ಸಂತೋಷಪಡುತ್ತಿದ್ದರು. ಬೆಳಿಗ್ಗೆ ವೇಳೆಗೆ ಊರ ಕೆರೆಯ ಸಮೀಪ ಸೇರಿ ಅಪಾರ ಜನಸ್ತೋಮದ ನಡುವೆ ವಿಘ್ನೇಶ್ವರನನ್ನು ಗಾಡಿಯಿಂದ ಇಳಿಸಿ ಬಹಳ ಶ್ರಧ್ದೆಯಿಂದ ನಾಲ್ಕಾರು ಯುವಕರು ಎತ್ತಿಕೊಂಡು ನೀರಿನಲ್ಲಿ ವಿಸರ್ಜಿಸಿ ಹರ್ಷಪಡುತ್ತ ಗಣೇಶೋತ್ಸವಕ್ಕೆ ಮಂಗಳ ಹಾಡಿ, ಬಂದ ಭಕ್ತ ಸಮೂಹಕ್ಕೆಲ್ಲಾ ಕಡ್ಲೆಕಾಯಿ ಗುಗ್ಗರಿ, ಬೂಂದಿ, ಸೌತೆಕಾಯಿ ಕೋಸಂಬರಿ, ಇಲ್ಲವೇ ಕಡ್ಲೆಹಿಟ್ಟಿನ ರೂಪದ ಪ್ರಸಾದವನ್ನು ಎಲ್ಲರಿಗೂ ಹಂಚುತ್ತಿದ್ದರು. ಆ ದಿನ ಪೂರ್ತಿ ಹಿರಿಯರ, ಯಜಮಾನರಾದವರ ಸಮ್ಮುಖದಲ್ಲಿ ಪೂರ್ಣ ಗಣೇಶೋತ್ಸವಕ್ಕೆ ತಗುಲಿದ ಖರ್ಚು ವೆಚ್ಚ, ಸಂಗ್ರಹಿಸಿದ ಹಣಕಾಸಿನ ವಿವರಗಳನ್ನು ಕುರಿತು ಲೆಕ್ಕಾಚಾರ ಮಾಡಿಕೊಳ್ಳುತ್ತಾ ಪರಸ್ಪರ ಸಹಕಾರಕ್ಕೆ ಧನ್ಯವಾದಗಳನ್ನು ಹೇಳಿಕೊಳ್ಳುತ್ತಿದ್ದರು. ಈ ರೀತಿಯ ಆಚರಣೆಯ ಪ್ರಕ್ರಿಯೆಗಳು ಅಕ್ಕ ಪಕ್ಕದ ಊರುಗಳಲ್ಲಿ ಪ್ರತಿಷ್ಠೆಯಾಗಿ ನಡೆಯುತ್ತಿದ್ದವು. ಆ ಕಾಲದಲ್ಲಿ ಬನ್ನೂರಿನ ಗಣೇಶೋತ್ಸವವು ಸುತ್ತಲಿನ ಗ್ರಾಮಗಳಿಗಿಂತ ವೈಭವಪೂರ್ಣವಾಗಿರುತ್ತಿತ್ತು. ಬನ್ನೂರಿನ ಕಲಾವಿದರಾದ ಗೋವಿಂದ ಶೆಟ್ಟರು ತಾವೇ ಪ್ರತಿ ವರ್ಷವೂ ಗಣಪತಿ ಮೂರ್ತಿಯನ್ನು ನಿರ್ಮಿಸುತ್ತಿದ್ದುದನ್ನು ಅಲ್ಲಿನ ಮಾಧ್ಯಮಿಕ ಶಾಲೆಗೆ ಹೋಗುತ್ತಿದ್ದ ನಮಗೆ ನೋಡುವುದೇ ಬೆರಗಿನ ವಿಷಯವಾಗಿತ್ತು. ಕೊಣನೂರಿನಲ್ಲಿಯಂತೂ ಹೋಬಳಿಯಲ್ಲೇ ಅತ್ಯಂತ ಭರ್ಜರಿಯಾಗಿ ಗಣೇಶೋತ್ಸವ ವಿಸರ್ಜನೆಯ ಮೆರವಣಿಗೆ ಆಯೋಜಿಸಲ್ಪಡುತ್ತಿತ್ತು. ಅರಕಲಗೂಡು, ಹಾಸನಗಳಲ್ಲಿಯೂ ಅತ್ಯಂತ ವೈಭವಪೂರ್ಣವಾದ ಗಣೇಶೋತ್ಸವವವು ಬಹಳ ದಿನಗಳ ದಿನನಿತ್ಯದ ಕಾರ್ಯಕ್ರಮಗಳೊಂದಿಗೆ ನಡೆಯುವ ಬಗ್ಗೆ ಹಳ್ಳಿ ಜನರು ಮಾತನಾಡಿಕೊಳ್ಳುತ್ತಿದ್ದರು. ಅರಸೀಕೆರೆಯ ಗಣಪತಿಯ ತಿಂಗಳ ವೈಭವದ ಬಗ್ಗೆ ರಾಜ್ಯ ಮಟ್ಟದ ಜನಪ್ರಿಯತೆ ಬಗ್ಗೆಯೂ ಮನೆಮಾತಾಗಿತ್ತು. ಕೊಣನೂರಿನ ಗಣೇಶ ವಿಸರ್ಜನೆಯ ದಿನದಂದು, ಸಾವಿರಾರು ಜನರು ಸೇರುತ್ತಿದ್ದರು. ರಾತ್ರಿಯಿಡೀ ಚಲನ ಚಿತ್ರ ಪ್ರದರ್ಶನ ಏರ್ಪಾಡಾಗುತ್ತಿತ್ತು. ಸಿಡಿ ಮದ್ದುಗಳ ವಿಶೇಷ ಪ್ರದರ್ಶನ, ಕೀಲು ಕುದುರೆ, ಜನಪದ ಕುಣಿತದಂತಹ ಕಲೆಗಳನ್ನು ಅಪ್ಪನ ಹೆಗಲ ಮೇಲೆ ಕುಳಿತು ಭಯದಿಂದಲೇ ವೀಕ್ಷಿಸಿದ್ದ ಬಾಲ್ಯದ ಸವಿ ನೆನಪು ಈಗಲೂ ಮನದಲ್ಲಿ ಅಚ್ಚಳಿಯದೆ ಉಳಿದಿದೆ.
ಹೀಗೆ ಗಣೇಶೋತ್ಸವದ ಪ್ರಯುಕ್ತ ಏರ್ಪಾಡಾಗುತ್ತಿದ್ದ ಹರಿಕಥೆ, ಚಲನಚಿತ್ರ ವಿಸಿಡಿ ಪ್ರದರ್ಶನಗಳ ಕಾಲಾನಂತರ ಆರ್ಕೆಸ್ಟ್ರಾಗಳು ದಾಳಿ ಇಟ್ಟವು. ಆಚರಣೆಯಲ್ಲಿನ ಶ್ರದ್ಧೆ, ಭಕ್ತಾಧಿಗಳ ಮನೋಧೋರಣೆ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಈಗೆಲ್ಲವೂ ಯಾಂತ್ರಿಕವಾಗಿ ಕಾಟಾಚಾರಕ್ಕೆ ಎಂಬಂತೆ ನಡೆಯುತ್ತಿವೆ. ಹಿಂದೆ ಇದ್ದಂತಹ ಭಕ್ತಿ, ನಂಬಿಕೆ, ಒಗ್ಗಟ್ಟು ಕಡಿಮೆಯಾಗಿವೆ. ಫ್ಯಾಶನ್ ಹೆಸರಿನಲ್ಲಿ, ರಾಜಕೀಯದ ಸೋಂಕಿನಲ್ಲಿ, ಅಪನಂಬಿಕೆಯ ಸುಳಿಯಲ್ಲಿ ಯುವ ಜನಾಂಗವು ದಾರಿ ತಪ್ಪು ತ್ತಿವೆ, ಹಬ್ಬ ಹರಿ ದಿನಗಳು ಕೇವಲ ತೋರಿಕೆಗಾಗಿ ನಡೆಯುತ್ತಿವೆ ಎಂಬುದು ಹಿರಿಯರ ಅಭಿಪ್ರಾಯವಾಗಿದ್ದು, ಬಹುತೇಕ ನಿಜವೇ ಆಗಿದೆ. ಆಗ ನಿದ್ರೆಗೆಟ್ಟು ನೋಡುತ್ತಿದ್ದ ಸಿನಿಮಾಗಳು , ಆಸೆಪಟ್ಟು ಕೇಳುತ್ತಿದ್ದ ಹಾಡುಗಳು ಈಗ ಮೊಬೈಲ್ ಗಳಲ್ಲೇ ಹರಿದಾಡುತ್ತಿವೆ. ಆಗ ಗಣಪನ ಮುಂದೆ ನಡೆಯುತ್ತಿದ್ದ ಭಕ್ತಿಭಾವದ ಪುರಾಣ ಸಂಕೀರ್ತನೆಗಳ ಕಾರ್ಯಕ್ರಮಗಳು ಮಾಯವಾಗಿ, ಮಾಯಾಂಗನೆಯರು ಮೈಮಾಟಗಳಿಂದ ರೆಕಾರ್ಡ್ ಡ್ಯಾನ್ಸ್ ಮಾಡುವ ಮೂಲಕ ಯುವ ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿವೆ. ಆಗ ಸಾಂಪ್ರದಾಯಿಕ ತಮಟೆ ಓಲಗಗಳ ಸದ್ದಿಗೆ ಸಂತಸದಿಂದ ಹೆಜ್ಜೆ ಹಾಕುತ್ತಿದ್ದ ತರುಣರು ಈಗ ಡಿಜೆ ಸೌಂಡ್ ನ ಅರಚುವ ದನಿಗೆ ಮದ್ಯದ ಮತ್ತಿನಲಿ ತೂರಾಡುತ್ತಿದ್ದಾರೆ. ಆಗ ಸ್ವಯಂ ಪ್ರೇರಿತರಾಗಿ ಸ್ಥಿತಿವಂತ ಭಕ್ತರು ಧನ ಸಹಾಯ ಮಾಡಿ ಊರಿಗೊಂದೇ ಗಣೇಶನನ್ನು ಪ್ರತಿಷ್ಠಾಪಿಸಿ ಸೇವಾರ್ಚನೆ ಗೈಯ್ಯುತ್ತಿದ್ದರು. ಈಗ ಬಲವಂತವಾಗಿ ಚಂದಾ ವಸೂಲಿ ಮಾಡಿ ಗಲ್ಲಿಗಲ್ಲಿಗೂ ಗಣೇಶನನ್ನು ಕೂಡಿಸಿ ಮನಸೋ ಇಚ್ಛೆ ಆಚರಣೆ ಮಾಡುತ್ತಾರೆ. ಆಗ ರಾಜಕೀಯದ ಸೋಂಕಿಲ್ಲದೆ, ಹಮ್ಮು ಬಿಮ್ಮುಗಳ ಭಾವವಿಲ್ಲದೆ ನಡೆಯುತ್ತಿದ್ದ ಗಣೇಶೋತ್ಸವವು, ಈಗ ಜನಪ್ರತಿನಿಧಿಗಳ ಕುಮ್ಮಕ್ಕಿನಿಂದ, ಪ್ರತಿಷ್ಠೆ ಪ್ರಚಾರದ ಗಿಮಿಕ್ಕುಗಳಿಂದ ನಿರ್ವಹಣೆಯಾಗುತ್ತಿದೆ. ಕಾಕತಾಳೀಯವೆಂಬಂತೆ, ಬದಲಾದ ಮಾನವನ ಮನೋಧೋರಣೆಯಂತೆ ಪ್ರಕೃತಿಯ ವಿದ್ಯಮಾನಗಳೂ ಬದಲಾಗಿವೆ. ಆಗ ಸಮೃದ್ಧವಾದ ಮಳೆಗಾಲದಿಂದ ತುಂಬಿದ ಕೆರೆ ಕಟ್ಟೆ ಕಾಲುವೆಗಳಲ್ಲಿ ಗಣೇಶ ವಿಸರ್ಜನೆ ನಡೆಯುತ್ತಿತ್ತು. ಈಗ ಮಳೆಯಿಲ್ಲದೆ ಉಂಟಾದ ಬರಗಾಲದ ಪರಿಣಾಮವಾಗಿ ಎಲ್ಲಾ ಕೆರೆ ಕಟ್ಟೆಗಳು ಬರಿದಾಗಿ ಬಣಗುಡುತ್ತಿದ್ದು ಗಣೇಶ ವಿಸರ್ಜನೆಗೆ ತೊಡಕಾಗಿದೆ. ಈ ರೀತಿಯ ಸ್ಥಿತ್ಯಂತರಗಳು ಮಾನವ ನಿರ್ಮಿತವೋ ದೈವ ಪ್ರೇರಿತವೋ ಎಂಬುದು ತಿಳಿಯಲಾಗದೆ ಹಿರಿಯ ತಲೆಮಾರಿನ ಜನರು "ತಮ್ಮ ಕಾಲವೇ ಸುಭಿಕ್ಷ ಕಾಲ" ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಹೌದು, ಕಾಲದ ಪ್ರವಾಹದಲ್ಲಿ ಎಲ್ಲವೂ ಅಯೋಮಯವಾದಂತಾಗಿದ್ದು ಹಿಂದಿನ ಮೌಲ್ಯಗಳು ಮಾಯವಾಗಿವೆ, ಜೀವನ ಪದ್ಧತಿ ಗೋಜಲುಮಯವಾಗಿದೆ. ಆಧುನೀಕತೆಯ ಭರಾಟೆಯಲ್ಲಿ ಸಂಸ್ಕೃತಿ ವಿಕೃತವಾಗುತ್ತಿರುವುದರಿಂದ ಹಬ್ಬ ಹರಿದಿನ, ಉತ್ಸವ ಆಚರಣೆಗಳು ಮೂಲ ಅರ್ಥ ಮತ್ತು ಉದ್ಧೇಶವನ್ನು ಕಳೆದುಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ.
~ಹೊರಾ.ಪರಮೇಶ್ ಹೊಡೇನೂರು