ಹಿಮಾಲಯವೆಂಬ ಸ್ವರ್ಗ (ಭಾಗ 8): ವೃಂದಾ ಸಂಗಮ್

vranda-sangam

ಇಲ್ಲಿಯವರೆಗೆ 

ರಾತ್ರಿ ಹರಿದ್ವಾರದಲ್ಲಿ ನಮ್ಮ ಕೊಚ ಕೊಚ ಕೊಯಾಂ ಕೊಯಾಂ ನೆಂಟರು, ಬಡೇ ಹನುಮಾನ ಮಂದಿರದಲ್ಲಿ, ನಮಗಿಂತ ಮೊದಲೇ. ಅವರೆಲ್ಲ ಬದರಿಯ ವಿಷಯ ಮಾತಾಡುತ್ತಿದ್ದರು. ನನ್ನ ಪಕ್ಕದಲ್ಲಿ ಊಟಕ್ಕೆ ಕುಳಿತವಳು, ಎದುರಿಗೆ ಇದ್ದವಳಿಗೆ ಆ ದಿನ ನಡೆದ ಘಟನೆಯ ಬಗ್ಗೆ ತನ್ನ ಗಂಡನ ಪ್ರಶಂಸೆ ಮಾಡುತ್ತಿದ್ದಳು. ನನಗೆ ಬದರಿ ದೇವಸ್ಥಾನದ ಮುಂದೆ ಫೋಟೋ ತೆಗೆಸಿಕೊಳ್ಳಬೇಕೆಂದಿತ್ತು. ಆದರೆ ಆತ ಬೇಡ ಎಂದು ಬಿಟ್ಟ. ನನಗೆ ತುಂಬಾ ಬೇಜಾರಾಯಿತು. ಆಮೇಲೆ ಎಲ್ಲರೂ ಫೋಟೋ ತೆಗೆಸಿಕೊಂಡಿದ್ದು ನೋಡಿ, ಬಾ ನಾವೂ ತೆಗೆಸಿಕೊಳ್ಳೋಣ ಎಂದ. ಮೊದಲು ಮುಖದ ಮೇಲೆ ಸೆಗಣಿ ಚೆಲ್ಲಿ, ನಂತರ ತೊಳೆಯೋದಕ್ಕೆ ಬಂದರೆ ನಾನ್ಯಾಕೆ ಹೋಗಲಿ. ಬೇಡ ಅಂದು ಬಿಟ್ಟೆ. ಅದಕ್ಕೆ ನನ್ನ ಮಗಳಿಗೂ ಅವನನ್ನು ಕಂಡರೆ ಆಗೋದೇ ಇಲ್ಲ. ಈ ಕಡೆಯವಳು ಏನು ಹೇಳುತ್ತಿದ್ದಳೋ ಗೊತ್ತಿಲ್ಲ. ನನಗಂತೂ ತುಂಬಾ ಸುಸ್ತಾಗಿತ್ತು. ಊಟದ ಶಾಸ್ತ್ರ ಮಾಡಿ ಮಲಗಿಬಿಟ್ಟೆ. ನಮ್ಮವರೆಲ್ಲ, ಬಟ್ಟೆ ಜೋಡಿಸಿಕೊಂಡು, ಹೆಚ್ಚಿನ ಬಟ್ಟೆ ಒಗೆದುಕೊಂಡು ಮಲಗಿದರಂತೆ. ಮರುದಿನ ನಾವು ಏಳುವಷ್ಡರಲ್ಲಿ, ನಮ್ಮ ಬಂಧುಗಳು ಹೊರಟು ಬಿಟ್ಟಿದ್ದರು. ನಾವೆಲ್ಲ ನಿಧಾನವಾಗಿ ಪಕ್ಕದಲ್ಲೇ ನದಿ ಸ್ವಾನದ ಸವಿ ಹಾಗೂ ಪುಣ್ಯ ಅನುಭವಿಸಿದೆವು. ಇಲ್ಲಿಯೇ ನಮ್ಮ ಯಾತ್ರೆಯ ಕೊನೆಯ ಗಂಗಾ ಸ್ನಾನದ ಪುಣ್ಯ.                 

ನಂತರ ಮಾನಸಾದೇವಿ ದೇವಾಲಯಕ್ಕೆ ಹೊರಟೆವು. ಮಾನಸಾದೇವಿ ದೇವಾಲಯ ಬಿಲ್ವ ಪರ್ವತವೆಂಬ ಬೆಟ್ಟದ ಮೇಲಿದೆ. ಅಲ್ಲಿಗೆ ಹೋಗಲು ಒಂದು ಹಗ್ಗ ದಾರಿ (ರೋಪ್ ವೇ) ಇದೆ. ನಾವು ಈ ಹಗ್ಗ ದಾರಿಗೆ ಟಿಕೇಟು ಕೊಂಡು ಸಾಲಿನಲ್ಲಿ ನಿಂತೆವು. ಹಗ್ಗ ದಾರಿಯಲ್ಲಿ ಹೋಗುವುದು ಹೆಚ್ಚು ಪುಳಕಿತವಾಗಿಲ್ಲದಿದ್ದರೂ, ಮೇಲಿನಿಂದ ಕಾಣಿಸುವ ದೃಶ್ಯವು ರೋಮಾಂಚಕವಾಗಿದೆ. ನಾನು ಬೆಟ್ಟದ ಮೇಲಿಂದ ಒಂದೆರಡು ಫೋಟೋಗಳನ್ನು ತೆಗೆದೆ. ಮಾನಸಾದೇವಿ ನಾಗರಾಜನಾದ ವಾಸುಕಿಯ ಪತ್ನಿಯೆಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ಮಾತೆ ಶಕ್ತಿಯ ರೂಪವೆಂದು ಹೇಳುತ್ತಾರೆ. ಮಾನಸಾದೇವಿಯು ಮನದಾಸೆಗಳನ್ನು ನೆರವೇರಿಸುವಳಂತೆ. ಹರಕೆ ಹೊತ್ತವರು ದೇವಾಲಯದಲ್ಲಿ ದಾರವೊಂದನ್ನು ಕಟ್ಟಿ, ಇಷ್ಟಾರ್ಥ ಈಡೇರಿದ ನಂತರ ಆ ದಾರವನ್ನು ಬಿಚ್ಚುತ್ತಾರಂತೆ. ಸಾಲಿನಲ್ಲಿ ನಿಂತು ದೇವಿಯ ದರ್ಶನ ಮಾಡಿಕೊಂಡೆವು. ಅಲ್ಲಿನ ಪದ್ಧತಿಯಂತೆ 'ಚುನರಿ' ಅರ್ಪಿಸಿ ಕೈ ಮುಗಿದು ಹಗ್ಗ ದಾರಿಯ ಮೂಲಕ ಕೆಳಗಿಳಿದೆವು. ಕೆಳಗೆ ಬಂದು ಪೇಟೆ ಬೀದಿಗೆ ಹೋದೆವು. ಅಲ್ಲಿ ಕೆಲವೇ ಅಂಗಡಿಗಳಲ್ಲಿ ಹಿಂದಿನ ಎರಡು ದಿನದ ವ್ಯಾಪಾರಕ್ಕಿಂತ ಹೆಚ್ಚು ವ್ಯಾಪಾರವನ್ನು ಕೇವಲ 1 ಗಂಟೆಯಲ್ಲಿ ಮಾಡಿದೆವು. ನಂತರ ಒಂದು ಹೋಟೆಲಿನಲ್ಲಿ ದೋಸೆ ತಿಂದೆವು. ಮುಂದೆ ನಮ್ಮ ಯಾತ್ರೆ ಅಕ್ಷರಧಾಮದತ್ತ. ದಾರಿಯಲ್ಲಿ ಬಾಬಾ ರಾಮದೇವರ ಆಶ್ರಮ ಮುಂತಾದವನ್ನು ನೋಡಿದೆವು.               

2

1

ಮಧ್ಯಾಹ್ನದ ಹೊತ್ತಿಗೆ ಅಕ್ಷರಧಾಮ ತಲುಪಿದೆವು. ಎ ಸಿ ವಾಹನದಲ್ಲಿ ಅರಾಮಾಗಿದೆ ಎನಿಸಿದರೂ, ಪ್ರವಾಸ ಸುಸ್ತಾಗಿತ್ತು. ಅಕ್ಷರಧಾಮದ ಒಳಗಡೆ ನಡೆಯುವಷ್ಟೂ ತಾಳ್ಮೆಯಿರಲಿಲ್ಲ. ನೇರವಾಗಿ ಅನ್ನಪೂರ್ಣಾ ಭೋಜನಾಲಯ ಎಂಬ ಬೋರ್ಡ ಇರುವ ಕಡೆ ಕಾಲು ತಿರುಗಿದವು. ನಾರ್ಥ ಇಂಡಿಯನ್ ಥಾಲಿ. ಬಿಸಲೇರಿ ಬಾಟಲ್ ಒಂದೊಂದನ್ನು ಹಿಡಕೊಂಡು. ಉಪ್ಪಿನ ಕಾಯಿ, ಉಪ್ಪು ಇದಕ್ಕೂ ದುಡ್ಡು. ಅವು ನಮ್ಮ ತಟ್ಟೆಯಲ್ಲಿ ಇಲ್ಲದಿದ್ದರೂ. ಉಪ್ಪು ಹುಳಿ ಖಾರ ಇಲ್ಲದಿರುವ ಸಾತ್ವಿಕ ಆಹಾರ ಉಂಡ ನಂತರ, ನಮ್ಮ ಕಾಲುಗಳು ಅಕ್ಷರಧಾಮ ಸುತ್ತಲು ಶಕ್ತಿ ಪಡೆದವು. ಅಜಂತಾದ ಸುಂದರ ಕಲಾವಿನ್ಯಾಸದ ಸುಂದರ ಪರಿಸರದಲ್ಲಿ ವಿಶಾಲವಾದ ಪ್ರೇಮಾವತಿ ಭೋಜನಶಾಲೆಯೂ ಅನ್ನಪೂರ್ಣದಂತೆಯೇ ಶುದ್ಧ ಮತ್ತು ಸಾತ್ವಿಕ ಆಹಾರವನ್ನು ಮಧುರ ಜಲಪಾನದ ವ್ಯವಸ್ಥೆಯನ್ನೂ ಹೆಚ್ಚು ದುಡ್ಡು ಪಡೆದು ಮಾಡುತ್ತದೆ.                

ಭಾರತದ ರಾಜಧಾನಿ ನವದೆಹಲಿಯಲ್ಲಿ ಸುಮಾರು 100 ಎಕರೆ ಅದ್ವಿತೀಯ ಪರಿಸರದಲ್ಲಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಈ ಸ್ವಾಮಿ ನಾರಾಯಣ ಅಕ್ಷರಧಾಮ ಪುಣ್ಯ ಧಾಮದಲ್ಲಿ, ಸುಮಾರು 30 ಎಕರೆ ಪ್ರದೇಶದಲ್ಲಿ ವಿಸ್ತರಿಸಿರುವ ಈ ಭವ್ಯ ಸ್ಮಾರಕವು ಶಾಂತಿ, ಮತ್ತು ಸಹಬಾಳ್ವೆಗಳನ್ನು ವಿಶ್ವಕ್ಕೆ ಸಾರುವ ಅನೇಕಾನೇಕ ಧಾಮಗಳಲ್ಲಿ ಪ್ರಮುಖವಾಗಿದೆ ದೆಹಲಿಯಲ್ಲಿರುವ ಅಕ್ಷರಧಾಮ ದೇವಸ್ಥಾನ. 2005 ರಲ್ಲಿ ಉದ್ಘಾಟನೆಗೊಂಡ ದೇವಸ್ಥಾನವನ್ನು ಗುಲಾಬಿ ಬಣ್ಣದ ಮರಳುಗಲ್ಗಳು, ಹಾಗೂ 'ಬಿಳಿ ಅಮೃತಶಿಲೆ' ಬಳಸಿ ನಿರ್ಮಿಸಲಾಗಿದೆ. ದೇವಸ್ಥಾನದ ಎತ್ತರ 43 ಮೀಟರ್. 96 ಮೀಟರ್‌ನಷ್ಟು ಅಗಲವಿದ್ದು, ವಿಶಾಲವಾಗಿದೆ. ಯಮುನಾ ನದಿಯ ದಂಡೆಯ ಮೇಲಿರುವುದರಿಂದ ಹಸಿರಿನ ಪರಿಸರದ ನಡುವೆ ಕಣ್ಣು ಕೋರೈಸುವಂತಿದೆ. ರಾತ್ರಿಯ ವೇಳೆ 'ಅಕ್ಷರಧಾಮ'ಕ್ಕೆ ಬೆಳಕಿನ ಮೆರುಗನ್ನು ಕೊಟ್ಟಾಗ ಅದರ ಸೌಂದರ್ಯ ನೂರ್ಮಡಿಯಾಗಿ ಹೊರಹೊಮ್ಮುತ್ತದೆ. 234 ಸ್ಥಂಭಗಳು ಗೋಪುರಗಳಿಂದ ಶೋಭಿಸುವ 9 ಮಂಟಪಗಳು, 20 ಚತುಷ್ಕೋಣಾಕಾರದ ಶಿಖರಗಳು, ಮತ್ತು 20 ಸಾವಿರಕ್ಕೂ ಮೇಲ್ಪಟ್ಟಶಿಲ್ಪ ಕಲಾಕೃತಿಗಳು, ಲೋಹಗಳ ಬಳಕೆಯಾಗದೆ ನಿರ್ಮಿಸಲ್ಪಟ್ಟಿದೆ.               

ಇಲ್ಲಿ ನಿರ್ಮಿಸಿದ ಪುಷ್ಕರಣಿ ದೇಶದಲ್ಲಿಯೇ ಅತಿ ದೊಡ್ಡದು. ಸುಮಾರು 2670 ಮೆಟ್ಟಿಲುಗಳ ಮದ್ಯೆ 300 ಅಡಿ ಅಗಲ ಉದ್ದದ ಕಮಲ ಆಕಾರದಲ್ಲಿ ಯಜ್ಞ ಕುಂಡವಿದೆ. ರಾತ್ರಿ ವೇಳೆಯಲ್ಲಿ ಇದು 'ಮ್ಯೂಸಿಕಲ್ ಕಾರಂಜಿ ತರಹ' ಬದಲಾಗುತ್ತದೆ. ಇಲ್ಲಿಯ ಮಾನಸ ಸರೋವರಕ್ಕೆ 151 ಪುಣ್ಯ ನದಿಗಳ ಜಾಲವನ್ನು ತಂದು ಸೇರಿಸಿದ್ದಾರೆ. 108 ಗೋಮುಖ ಶಿಲ್ಪಗಳ ಬಾಯಿಯಿಂದ ಪವಿತ್ರ ಜಲ ಬೀಳುವಂತೆ ಮಾಡಿದ್ದು ನೋಡಲು ಸುಂದರವಾಗಿದೆ. ಆದರೆ ತುಂಬಾ ಬಿಸಿಲು. ರಾತ್ರಿ ಸಂಗೀತ ಕಾರಂಜಿಯ  ಟಿಕೇಟು ಪಡೆದಿದ್ದರೂ, ಆಯಾಸದಿಂದ ಯಾರೂ ನೋಡಲು ಬಯಸಲಿಲ್ಲ ಇದನ್ನು ಪ್ರತಿ ದಿನ 40 ಲಕ್ಷ ಮಂದಿ ಸಂದರ್ಶಿಸುತ್ತಾರಂತೆ. ಇಪ್ಪತ್ತು ಸಾವಿರಕ್ಕೂ ಹೆಚ್ಚು ವಿವಿಧ ಧಾರ್ಮಿಕ ಮೂರ್ತಿಗಳನ್ನು ದೇವಸ್ಥಾನದಲ್ಲಿ ಕೆತ್ತಲಾಗಿದೆ. ಅದ್ಭುತ ಶಿಲ್ಪಕಲಾ ಸೌಂದರ್ಯದಿಂದ ಕೂಡಿದ, ಕರಕುಶಲ ಕೆತ್ತನೆಗೆ ಹೆಸರಾಗಿರುವ ಎಂಟು ಮಂಟಪಗಳಿವೆ. ಬೃಹತ್ ಆನೆಗಳು, ಹಕ್ಕಿಗಳು ಹಾಗೂ ಕೆಲವು ಪ್ರಾಣಿಗಳ ವಿವಿಧ ಭಂಗಿಗಳ ಕೆತ್ತನೆ ಕಣ್ಮನಗಳನ್ನು ಸೆಳೆಯುತ್ತದೆ.               

ವಿವಿಧ ಮೂರ್ತಿಗಳನ್ನು ಒಂದೊಂದು ಸನ್ನಿವೇಶಕ್ಕೆ ರೂಪಿಸಿದ್ದಾರೆ. ಇದು ತುಂಬಾ ನ್ಯಾಚುರಲ್ ಆಗಿದೆ. ಒಂದು ಪ್ರವಚನಕ್ಕೆ ಕೂತ ಜನರ ಭಂಗಿಗಳಾಗಲೀ, ಆಡುವ ಮಕ್ಕಳಾಗಲೀ, ರೈತರಾಗಲೀ, ಎಷ್ಟು ನೈಜವಾಗಿವೆಯಂದರೆ, ಮಳೆಯ ದೃಶ್ಯಗಳನ್ನು ನೋಡಿದಾಗ, ನಿಜವಾಗಿಯೂ ಹೊರಗೆ ಮಳೆ ಸುರಿಯುತ್ತಿದೆಯೇನೂ ಎನಿಸುತ್ತಿತ್ತು. ಮತ್ತೆ ಮುಂದಿನದಕ್ಕೆ ಓಡುವ ರಭಸದಲ್ಲಿ, ಈಗಿನ ಸನ್ನಿವೇಶವನ್ನು ನಿಧಾನಕ್ಕೆ ಆಸ್ವಾದಿಸುವ ಪುರುಸೊತ್ತೆಲ್ಲಿ. ಜೀವನದ ಓಟವೂ ಹಾಗೇ ಅಲ್ಲವೇ? ಭೂತ ಭವಿಷ್ಯಗಳ ನೆನೆಕೆ ಹಾರೈಕೆಗಳಲ್ಲಿ ವರ್ತಮಾನದ ಸುಖವನ್ನೇ ಮರೆತು ಬಿಡುತ್ತೇವೆ.               

'ನವಿಲಿನಾಕಾರದ ದೋಣಿ'ಯ ಮೇಲೆ ನಡೆಯುವ ಈ ಪ್ರದರ್ಶನದ ರೋಚಕ ಕ್ಷಣಗಳನ್ನು ಆಸ್ವಾದಿಸಲು ನಿಂತೆವು. ಸಿಂಹಾಸನದ ದೋಣಿಯ ಮೇಲೆ ಚಲಿಸುವ ನಮ್ಮ ಫೋಟೋ ತೆಗೆಯುವ ಅವಕಾಶವಿಲ್ಲ. ನಸುಗತ್ತಲೆಯಲ್ಲಿ ಅಲ್ಲಿ ಕಾಣುವ ಅದ್ಭುತ ದೃಶ್ಯಗಳು, ಕೊಟ್ಟ ದುಡ್ಡಿಗೆ ಮೋಸವಿಲ್ಲ ಎನ್ನುತ್ತವೆ. 10 ಸಾವಿರ ವರ್ಷಗಳ ಪ್ರಾಚೀನ ಭಾರತದ ಭಿನ್ನ ಬಿನ್ನ ಸಂಸ್ಕೃತಿಗಳ ಒಂದು ಅದ್ಭುತ ನೋಟವನ್ನು ೧೪ ನಿಮಿಷಗಳಲ್ಲಿ ಸವಿಯಬಹುದಾಗಿದೆ. 'ಸ್ವಾಮಿನಾರಾಯಣನ ಜೀವನ'ವನ್ನು ಚಿತ್ರಿಸುವ 'ರೋಬೋಟಿಕ್ ಪ್ರದರ್ಶನ' ಇಲ್ಲಿನ ಪ್ರಮುಖ ಆಕರ್ಷಣೆ. 8೦೦ ಶಿಲ್ಪ, ಮತ್ತು ಸಂಶೋಧನೆಗಳಿಂದ ಸಿದ್ಧವಾದ ಸರಸ್ವತಿ ನದಿಯ ದಡದ ಭಾರತೀಯ ಸಂಸ್ಕೃತಿಯ ಪ್ರಾಚೀನ ಕಾಲದ ಸಹ ಜೀವನ ವಿಶ್ವ ಸರ್ವ ಪ್ರಥಮ ವಿಶ್ವವಿದ್ಯಾಲಯ ತಕ್ಷಶಿಲ, ಸುಶೃತದ ಪ್ರಾಚೀನ ಚಿಕಿತ್ಸಾಲಯ, ನಾಗಾರ್ಜುನ ಪ್ರಯೋಗಶಾಲೆ, ಮೊದಲಾದ ವಿಹಾರಗಳು ಭಾರತದ ದಿವ್ಯ ಇತಿಹಾಸವನ್ನು ಅನವರಣಗೊಳಿಸುತ್ತವೆ. ಯಜ್ಞಪುರುಷ ಕುಂಡದಲ್ಲಿ ರಾತ್ರಿ ಹೊತ್ತು ಎತ್ತರ ಚಿಮ್ಮುವ ಕಾರಂಜಿ, 151 ನದಿಗಳ ನೀರನ್ನು ಅಡಗಿಸಿಕೊಂಡ ನಾರಾಯಣ ಸರೋವರದ ಅಲೆಗಳು ಭಕ್ತಿರಸದ ಜೊತೆಗೆ ಸೌಂದರ್ಯ ಸೂಕ್ಷ್ಮವನ್ನೂ ಇಟ್ಟುಕೊಂಡಿವೆ. ಅಕ್ಷರಧಾಮದ ಸಮೀಪದಲ್ಲೇ 'ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಗ್ರಾಮ'ವನ್ನು ನಿರ್ಮಿಸಲಾಗಿದೆ.               

ಪಾರಂಪರಾಗತವಾಗಿ ನಡೆದು ಬಂದ ಭಾರತೀಯ ಶೈಲಿಯನ್ನು ಹೋಲುವ ಈ ಪ್ರವೇಶ ದ್ವಾರವು ಭಕ್ತಿಭಾವದಿಂದ ಕೂಡಿರುವ ಬೇರೊಂದು ಲೋಕಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಭಗವಂತನ ಬಗೆಗಿನ ಭಕ್ತಿಯೇ ಶುದ್ಧಪ್ರೇಮವೂ ಆಗಿದೆ.ಸನಾತನ ಧರ್ಮದಲ್ಲಿ ಉಲ್ಲೇಖಗೊಂಡಿರುವಂತೆ ಸಾಧಕ ಮತ್ತು ದೈವದ ಬಗೆಗಿನ ಶಾಶ್ವತ ಬೋಧೆ ದೊರೆಯುತ್ತದೆ. ಭಕ್ತಿ ಮತ್ತು ದೈವೋಪಾಸನೆಗಳ 208 ಜೋಡಿಗಳು ಭಕ್ತಿದ್ವಾರದಲ್ಲಿವೆ. ನವಿಲು ನಮ್ಮ ಭಾರತದ ರಾಷ್ಟ್ರಪಕ್ಷಿಯಾಗಿದೆ. ಅದರ ಸೌಂದರ್ಯ, ಸಂಯಮ ಮತ್ತು ಶುಚಿತ್ವದ ಪ್ರತೀಕವಾಗಿ ಭಾರತೀಯರ ಸರ್ವಕಾಲೀನ ಪ್ರಿಯ ಪಕ್ಷಿಯಾಗಿದೆ. ಅಕ್ಷರಧಾಮದ ಪ್ರಮುಖ ಸ್ವಾಗತ ದ್ವಾರದಲ್ಲೇ ಕೆತ್ತಲ್ಪಟ್ಟಿರುವ ಭವ್ಯ ಸುಂದರ ಮಯೂರ ತೋರಣವೂ ಕಲಾಮಂಡಿತ ಸ್ಥಂಭದ 869 ನವಿಲುಗಳ ನೃತ್ಯ ನಮಗೆ ನಯನ ಮನೋಹರವಾಗಿದೆ. ಭಾರತೀಯ ಶಿಲ್ಪ ಕಲೆಯ ಅತ್ಯಂತ ಸುಂದರ ಶೈಲಿಯ ದ್ವಾರವೆನ್ನಬಹುದು. ಹಚ್ಚಹಸುರಿನ ಹುಲ್ಲುಹಾಸಿಗೆಯ ಮೇಲೆ ಒಂದು ವಿಶಾಲ ಭವ್ಯ ಭಾವನೆಗಳ ಅಷ್ಟದಳ ಕಮಲವಿದೆ.ವಿಶ್ವದ ಮಹಾಪುರುಷರು ಹಾಗೂ ಧರ್ಮಶಾಸ್ತ್ರಗಳು ದೇವರು ಮತ್ತು ಮಾನವರಲ್ಲಿ ತೋರಿಸಿರುವ ಅಸೀಮ ವಿಶ್ವಾಸವನ್ನು ಇಲ್ಲಿನ ಶಿಲಾ ಲೇಖನಗಳು ತಿಳಿಸುತ್ತವೆ.               

ಹೊರಭಾಗದ ಗೋಡೆ. 611 ಅಡಿ ಉದ್ದ 25 ಅಡಿ ಎತ್ತರ 4287 ಶಿಲೆಗಳಿಂದ ನಿರ್ಮಿತವಾಗಿದೆ.ಪ್ರಾಚೀನ ಭಾರತೀಯ ನಾಗರ ಶೈಲಿಯಲ್ಲಿದೆ. ಇದರಲ್ಲಿ ಹಲವಾರು ಮಹಾಪುರುಷರ, ಋಷಿಗಳ ಆಚಾರ್ಯರ ದೇವಿ ದೇವತೆಗಳ ಮೂರ್ತಿಗಳಲ್ಲದೆ, ಐತಿಹಾಸಿಕ ದೃಷ್ಟಿಯಿಂದ ಸುಮಾರು 248 ಮಹತ್ವದ ಕಲಾತ್ಮಕ ಶಿಲ್ಪಗಳು ಕಾಣುತ್ತವೆ. ಭವ್ಯ ದೇವಾಲಯದ ಮತ್ತೊಂದು ವಿಶೇಷವೆಂದರೆ, ಅದು 1070 ಅಡಿ ಉದ್ದದ ಗಜೇಂದ್ರದ ಮೇಲೆ ನಿಂತಿದ್ದು, 3 ಸಾವಿರ ಟನ್ ತೂಕದ ಕಲ್ಲುಗಳಿಂದ ನಿರ್ಮಿಸಲ್ಪಟ್ತಿದೆ. ವಿಶ್ವದ ಮೌಲಿಕ ಹಾಗೂ ಅದ್ವಿತೀಯ ಶಿಲ್ಪಗಳ ಶ್ರೇಣಿಯಲ್ಲಿ ಶೋಭಿಸುತ್ತದೆ. 148 ಆನೆಗಳ ಸುಂದರ ಕಲಾತ್ಮ ಶಿಲ್ಪ ಪ್ರಾಣಿವರ್ಗದ ಭಾರತೀಯ ತತ್ವಗಳನ್ನು ಬೋಧಿಸುವ ಜಾನಪದ ಕಥೆಗಳು, ಪೌರಾಣಿಕ 80 ದೃಶ್ಯಗಳು ಇಲ್ಲಿ ಕೆತ್ತಲ್ಪಟ್ತಿವೆ.    ನೀಲಕಂಠ ದರ್ಶನ. ರೋಬೊಟೆಕ್ಶ್, ಎನಿಮೆಟ್ರೋನಿಕ್ಸ್ಧ್ವ ಧ್ವನಿ ಡಾಯೊರಾಮಾ, ಧ್ವನಿ ಪ್ರಕಾಶ ಇವೇ ಮೊದಲಾದ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿದ ಶ್ರದ್ಧೆ, ಸತ್ಯ, ಅಹಿಂಸೆ, ಕರುಣೆ, ಶಾಂತಿ ಸಂದೇಶಗಳನ್ನು ಹೊತ್ತ ಸನಾತನ ಮೌಲ್ಯಗಳ ಅದ್ಭುತ ಪ್ರಸ್ತುತಿಯನ್ನು ನೋಡಿದೆವು. ಸ್ವಾಮಿ ನಾರಾಯಣರ ಜೀವನ ಪ್ರಸಂಗಗಳ ಮೂಲಕ ಹೊಸತನ, ಹೊಸಾನುಭೂತಿಯನ್ನು, ಪ್ರೇರಣಾ ಸಂದೇಶವನ್ನು ನೀಡುತ್ತದೆ. ಮಹಾಕಾಯ ಚಲನಚಿತ್ರವು ಅತ್ಯಂತ ಸುಂದರ ದೃಶ್ಯಗಳನ್ನು ಒಳ್ಗೊಂಡಿದ್ದು ಬಾಲ ಯೋಗಿ ನೀಲಕಂಠ ಸ್ವಾಮಿಯವರ ಕಥೆಯ ಬಿತ್ತರಿಸುತ್ತದೆ. ತಮ್ಮ ಬಾಲ್ಯದಲ್ಲಿ ಕೇವಲ 7 ವರ್ಷದಲ್ಲೇ, ಬರಿಗಾಲಿನಲ್ಲಿ 12 ಸಾವಿರ ಕಿ.ಮೀ ದೂರ ಭಾರತದುದ್ದಕ್ಕೂ ಪ್ರಯಾಣಿಸಿದ ಮಾಹಿತಿ ತೋರಿಸಿದರು. 8565 ಅಡಿ ಚಲನಚಿತ್ರ, 19 ನೆಯ ಶತಮಾನದ ಭಾರತದ ದೃಶ್ಯ. 108 ಸ್ಥಾನಗಳಲ್ಲಿ ಚಿತ್ರೀಕರಣಗೊಂಡಿದ್ದು 45 ಸಾವಿರ ಪಾತ್ರಗಳು ಸೇರಿವೆ. ಘಟನೆಗಳೆಲ್ಲಾ ನೀಲಕಂಠ ಯೋಗಿಯವರ ಜೀವನ ಸಾಧನೆಯ ಬಗ್ಗೆ ಇವೆ. ದ್ವನಿಮುದ್ರಿಕೆಗಳು, ವೀಡಿಯೊ ಪ್ರಕಾಶನ,ಸ್ಮರಣಿಕೆಗಳು, ಸ್ಮೃತಿ ಚಿನ್ಹೆಗಳು, ಅಮೃತ ಹರ್ಬಲ್, ಕೇರ್ ಔಷಧಿಗಳು, ಮತ್ತು ಪೂಜಾ ಸಾಮಗ್ರಿಗಳು ಇತ್ಯಾದಿ ಹೆಚ್ಚಿನ ಹಣಕ್ಕೆ ಖರೀದಿಗೆ ಲಭ್ಯವಿವೆ. ಸಂಗೀತ ಕಾರಂಜಿ ನೋಡದಿದ್ದರೂ, ಉಳಿದೆಲ್ಲ ನೋಡುವಷ್ಡರಲ್ಲಿ ಸುಸ್ತಾಗಿ, ಹೊರಬರಲು ಒದ್ದಾಡಿದೆವು.  ರಾತ್ರಿ ನವದೆಹಲಿ ಹೊಸ ಬಡಾವಣೆಯಲ್ಲಿನ ಶ್ರೀ ಕೃಷ್ಣಧಾಮ, ಫ್ಲಾಟ್ ನಂ. 3. ಫೇಸ್ – 3. ವಸಂತ ಕುಂಜ ಇಲ್ಲಿ ನಮ್ಮ ವಸತಿ. ಅದೂ ಮೂರನೇ ಮಹಡಿಯಲ್ಲಿ. ರಾತ್ರಿ ತುಂಬಾ ಹೊತ್ತಾಗಿತ್ತು. ಅನ್ನ ಸಾರು ಉಂಡ ಶಾಸ್ತ್ರ ಮಾಡಿ ಮಲಗಿ ಬಿಟ್ಟೆವು.               

ಮರು ದಿನ ಬೆಳಿಗ್ಗೆ ಬೇಗ ಆಗರಾ, ಮಥುರಾ ದರ್ಶನ. ಬೇಗನೇ ತಿಂಡಿ ತಿಂದು ಹೊರಟೆವು. ಎಲ್ಲರೂ ತಯಾರಾಗುವುದರೊ ಳಗಾಗಿ ನಾನು ಪಕ್ಕದ ದೇವಸ್ಥಾನಕ್ಕೆ ಶಶಿಕಲ ಅವರ ಜೊತೆ ಹೋಗಿ ಬಂದೆ. ಕೃಷ್ಣ ಮಠದ ದೇವಸ್ಥಾನ, ಚನ್ನಾಗಿದೆ. ಕೃಷ್ಣನ ಮೂರ್ತಿ ದುರ್ಗೆ ರಾಮ ಗಣೇಶ ಮುಂತಾದ ಮೂರ್ತಿಗಳೂ ಇವೆ. ಸೀದಾ ಆಗರಾದ ದಾರಿ. ರಾಷ್ಟ್ರೀಯ ಹೆದ್ದಾರಿ. ದಾರಿಯಲ್ಲಿ, ಲೋಟಸ್ ಮಹಲ್, ಸ್ಟೇಡಿಯಂ ಮುಂತಾದವು ಕಂಡವು.

ಆಗ್ರಾದ ಪ್ರದೇಶದ ಉಲ್ಲೇಖವು ಮಹಾಭಾರತ ಗ್ರಂಥದಲ್ಲಿದ್ದರೂ 1504 ರಲ್ಲಿ ದೆಹಲಿಯ ಸುಲ್ತಾನನಾದ ಸಿಕಂದರ್ ಲೋಧಿಯು ಸ್ಥಾಪಿಸಿದ ಎಂಬುದು ಈಗ ದೊರೆಯುವ ಸಾಕ್ಷ್ಯ. ಅವನ ಮಗ ಇಬ್ರಾಹಿಂ ಲೋಧಿಯು ಇದನ್ನು ಮೊದಲನೆಯ ಪಾಣಿಪತ್ ಯುದ್ಧ ದಲ್ಲಿ ಬಾಬರನಿಗೆ ಸೋಲುವವರೆಗೆ ಎಂದರೆ 1526 ರ ವರೆಗೆ ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ. 1530 ರಲ್ಲಿ ಬಾಬರ್ ನ ನಿಧನದ ನಂತರ ಅವನ ಮಗ ಹುಮಾಯೂನ್ ಶೇರ್ಶಹನಿಂದ ಭಾರತದ ಹೊರಗೆ ಓಡಿಸಲ್ಪಟ್ಟು ನಂತರ ವಿಜಯಿಯಾಗಿ ಪಟ್ಟವನ್ನೇರುವಾಗ ಅವನು ದೆಹಲಿಯನ್ನು ರಾಜಧಾನಿಯನ್ನಾಗಿಸಿಕೊಂಡ. ಹುಮಾಯೂನನ ಮಗ ಅಕ್ಬರ್ ಪುನಃ ರಾಜಧಾನಿಯನ್ನು ಆಗ್ರಾಕ್ಕೆ ಸ್ಥಳಾಂತರಿಸಿದ. ಈ ರೀತಿ ಸ್ಥಳಾಂತರಿಸುವಾಗ ಹಳೆಯ ಆಗ್ರಾವನ್ನು ಬಿಟ್ಟು ಯಮುನಾ ನದಿಯ ಬಲದಂಡೆಯಲ್ಲಿ ಹೊಸ ನಗರವನ್ನು ನಿರ್ಮಿಸಿದ. ಆದುದರಿಂದ ಈ ನಗರಕ್ಕೆ ಅಕ್ಬರಾಬಾದ್ ಎಂಬ ಹೆಸರೂ ಇದೆ.               

ಇದರ ನಂತರ ಆಗ್ರಾದ ಸುವರ್ಣ ಯುಗ. ಅಕ್ಬರ್, ಜಹಾಂಗೀರ್,  ಷಹ ಜಹಾನ್ ನಂತಹ ಚಕ್ರವರ್ತಿಗಳು ಈ ನಗರದಿಂದ ದೇಶವನ್ನು ಆಳಿದರು.  ಔರಂಗಜೇಬ 1653 ರಲ್ಲಿ ಔರಂಗಾಬಾದ್  ಗೆ ಸ್ಥಳಾಂತರಿಸುವವರೆಗೆ ಇದು ಭಾರತದ ರಾಜಧಾನಿಯಾಗಿತ್ತು. ಮೊಘಲರ ಅವನತಿಯ ನಂತರ ಈ ಪ್ರದೇಶ 1803 ರ ವರೆಗೆ ಮರಾಠರ ಸ್ವಾಧೀನವಿದ್ದು ಇದರ ಹೆಸರು ಪುನಃ ಆಗ್ರಾ ಎಂದು ಬದಲಾಯಿತು. ಮುಂದೆ ಇದು ಬ್ರಿಟಿಷರ ವಶವಾಯಿತು. ಇಲ್ಲಿರುವ ತಾಜ್ ಮಹಲ್, ಆಗ್ರಾ ಕೋಟೆ ಹಾಗೂ ಫತೇಪುರ್ ಸಿಕ್ರಿ ವಿಶ್ವ ಪರಂಪರೆಯ ತಾಣಗಳಾಗಿ ಘೋಷಿತವಾಗಿವೆ.  ನಾವು ಆಗ್ರಾದ ಕೋಟೆಗೆ ಹೋಗಲಿಲ್ಲ. ಇದೊಂದು ಬಹು ದೊಡ್ಡ ಕೋಟೆಯಂತೆ. ಮೂರನೆ ಒಂದು ಭಾಗ ಮಾತ್ರ ಜನ ಸಾಮಾನ್ಯರ ದರ್ಶನಕ್ಕೆ ಇರಿಸಲಾಗಿದೆ. ಇನ್ನುಳಿದ ಭಾಗ ಭಾರತದ ಸೇನೆಯ ನಿಗ್ರಹದಲ್ಲಿದೆ. ಒಳಗೆ ಹಲವಾರು ಅರಮನೆಗಳು, ಉದ್ಯಾನವನಗಳು, ಇತ್ಯಾದಿ ಇವೆ. ಮಾರ್ಗದರ್ಶಕರಿಂದ ಮುಘಲ್ ಸಾರ್ವಭೌಮರು ಹಾಗು ಅವರ ಕೃತ್ಯಗಳ ಬಗ್ಗೆ ಚಿತ್ರ-ವಿಚಿತ್ರ ಕಥೆಗಳನ್ನು ಕೇಳಿದೆವು. ಕೋಟೆಯಲ್ಲಿ ಬಂಧಿಯಾಗಿದ್ದ ಶಹಜಹಾನನು ಗೋಡೆಗೆ ಸಿಕ್ಕಿಸಿದ್ದ ವಜ್ರದೊಳಗೆ ತಾಜ್‌ಮಹಲಿನ ಬಿಂಬ ನೋಡುತ್ತಿದ್ದದ್ದು, ಇತ್ಯಾದಿ. ವಜ್ರ ಹೊಳೆಯುತ್ತದೆ, ಆದರೆ ಅದು ಕನ್ನಡಿಯಲ್ಲ – ಬಿಂಬ ಕಾಣಿಸುವುದೆ? ಕಾಣಿಸಿದರೂ ಅದು ಅಷ್ಟು ಚಿಕ್ಕದು! ಕೋಟೆಯಿಂದ (ಆ ಕೋಣೆಯಿಂದ) ಹಾಗೆ ನೋಡಿದರೆ ತಾಜ್‌ಮಹಲ್ ಸುಲಭವಾಗಿ, ಸುಂದರವಾಗಿ ಕಾಣಿಸುತ್ತದೆ. ಹಾಗಿದ್ದಲ್ಲಿ ವಜ್ರದೊಳಗಿನ ಬಿಂಬ ನೋಡುವ ಅಗತ್ಯವೇನು? ಹೀಗಾಗಿ ಈ ಸ್ಥಳವು ಬಹಳ ದೊಡ್ಡದಾಗಿದ್ದು, ಇನ್ನು ಹೆಚ್ಚು ವಿವರಣೆಗಳನ್ನು ಹೊರಗೇ ಕೇಳಿದೆವು.               

44

ಎಷ್ಟೇ ಶಕ್ತಿಶಾಲಿಯಾಗಿದ್ದರೇನು. ದೊಡ್ಡ ಸಾಮ್ರಾಜ್ಯಾಧಿಪತಿಯಾಗಿದ್ದರೇನು, ಹಣೆಯಲ್ಲಿ ಬರೆದಿದ್ದನ್ನು ಅನುಭವಿಸಲೇ ಬೇಕಲ್ಲವೇ. ಒಂದು ದಿನ ಭೂಮಿಯ ಮೇಲೆ ತನ್ನ ಕಿರೀಟವನ್ನು ಕೆಳಗಿಟ್ಟು, ಶರಣಾಗಲೇ ಬೇಕಲ್ಲವೇ. ಅಷ್ಟಲ್ಲದೇ ನಮ್ಮ ರಾಜ್ ಕುಮಾರ್ ಹಾಡಿದ್ದಾರಲ್ಲವೇ, ಕೋಟೆ ಕಟ್ಟಿ ಮರೆದೋರೆಲ್ಲ ಏನಾದರು. ಮೀಸೆ ತಿರುವಿ ಕುಣಿದೋರೆಲ್ಲ ಏನಾದರು. ಎಂದು. ಹೌದು ಇದನ್ನೆಲ್ಲ ತಿಳಿಸಲು ಹೋದರೆ ನೀವೇ ಹೇಳುತ್ತೀರಿ, ಇನ್ನು ನೀನ್ಯಾವ ಲೆಕ್ಕ ಹೇಳೋ ಸುಕುಮಾರಿ, ಅಂತ. ಅದಕ್ಕೇ, ನಾನು ಇದರ ಮೇಲೆ ಹೆಚ್ಚು ಗಮನ ಕೊಡಲಿಲ್ಲವಾದ್ದರಿಂದ ಹೆಚ್ಚು ವಿವರಣೆ ನೀಡಿಲ್ಲ. ಹೌದು, ಇದು ಇಲ್ಲಿಗೇ ನಿಲ್ಲುವುದಿಲ್ಲ. ಇತಿಹಾಸವನ್ನು ಹೆಕ್ಕಿದರೆ ಎಲ್ಲಿ ಅಧಿಕಾರವಿದೆಯೋ ಅಲ್ಲೆಲ್ಲ ಇದು ಅದರ ಜೊತೆ ಜೊತೆಗೇ ಸಂಭವಿಸುತ್ತಲೇ ಬಂದಿದೆ.                 

ಔರಂಗಜೇಬನ ಕಥೆಯೂ ಇದನ್ನೇ ಹೇಳುತ್ತದಲ್ಲವೇ, ತಂದೆ ಶಹಾಜಹಾನ್ ತಮ್ಮ ಹಿರಿಯ ಪುತ್ತ ದಾರಾ ಶಿಖೋಗೆ ಪಟ್ಟವನ್ನು ನಿಗದಿ ಮಾಡಿಯಾಗಿತ್ತು. ಇದನ್ನು ಮನಗಂಡ ಔರಂಗಜೇಬ, ತನ್ನ ಸಹೋದರರನ್ನೇ ಕೊಲ್ಲಿಸಿ, ಉಳಿದಿಬ್ಬರನ್ನು ಸೆರೆಗೆ ತಳ್ಳಿ, ಮುಪ್ಪಿನ ತಂದೆ ಶಹಾಜಹಾನ್ನನ್ನು ಕಾರಾಗ್ರಹಕ್ಕಟ್ಟಿದ್ದು, ಅಧಿಕಾರದ ದುರಾಸೆ ನೋಡಿ,….. ಏನೆಲ್ಲ ಮಾಡಿಸುತ್ತದೆ. ತಮ್ಮ ಅಧಿಕಾರ ಸ್ಥಾಪಿಸುವ ಹುನ್ನಾರದ, ಮೂಲಭೂತ ದಬ್ಬಾಳಿಕೆಯ ಮಂತ್ರವಲ್ಲವೇ. ಯಾಕೆ ಮನುಷ್ಯನಲ್ಲಿ ಈ ತಾಮಸ ಗುಣ ಎಷ್ಟೊಂದು ಆಳವಾಗಿ ಬೇರುಬಿಟ್ಟಿದೆ…..ನಿಲ್ಲದ ಯೋಚನೆಗಳು. ‘ನೀನೇ ಸಾಕಿದಾ ಗಿಣಿ, ನಿನ್ನಾ ಮುದ್ದಿನಾ ಗಿಣಿ, ಹದ್ದಾಗಿ ಕುಕ್ಕಿತಲ್ಲೋ’  ಪುಟ್ಟಣ್ಣನವರ ಹಾಡು, ಇಂತಹ ಕಾರಣಗಳಿಗಾಗಿಯೇ ಅಮರತ್ವ ಪಡೆಯುತ್ತದೆ.

ಯಾವ ಆಯಾಮದಿಂದ ನೋಡಿದರೂ ಅದರಲ್ಲಿರುವ ಸಂದೇಶ, ಎಲ್ಲದಕ್ಕೂ ಅಪ್ಲೈ ಆಗುತ್ತದೆ.. .ಈ ಸಂದರ್ಭದಲ್ಲಿ ಗುಲಾಮ್ ಅಲಿಯ ಗಜಲ್ವೊಂದರ ಸಾಲುಗಳು, ಎಷ್ಟು ಸುಂದರವಾಗಿವೆ ನೋಡಿ, ‘ನಫ್ರತೋಂ ಕೆ ತೀರ್ ಖಾ ಕರ್ ದೋಸ್ತೋಂ ಕೆ ಶಹರ್ ಮೇಂ, ಹಮ್ನೆ ಕಿಸ್ ಕಿಸ್ ಕೋ ಪುಕಾರಾ, ಏ ಕಹಾನೀ ಫಿರ್ ಸಹೀ’ ‘ಸ್ನೇಹಿತರೇ ತುಂಬಿದ ಊರತುಂಬೆಲ್ಲಾ, ತಿರಸ್ಕಾರಗಳ ಬಾಣಗಳಿಂದಲೇ ಹಿಂಸೆ ಅನುಭವಿಸಿದೆ, ಯಾಚಿಸಿದ ಎಲ್ಲಾ ದಿಶೆಗಳಿಂದಲೂ ಅದೇ ಬಾಣಗಳು ಮತ್ತೆ ಮತ್ತೆ ಎರಗಿ ಬಂದು, ಮತ್ತೆ ಮತೆ ಪೆಟ್ಟುತಿಂದೆ’ ಇತಿಹಾಸದುದ್ದಕ್ಕೂ ನಮಗೆ ಈ ಮೀರಸಾಧಕರು, ಬ್ರುಟಸ್ಗಳು, ಮಲ್ಲಪ್ಪ ಶೆಟ್ಟಿಯಂಥ ಬೆನ್ನಿಗೆ ಚೂರಿ ಹಾಕುವಂಥ ವ್ಯಕ್ತಿಗಳು ಹೇರಳವಾಗಿ ಸಿಕ್ಕೇ ಸಿಗುತ್ತಾರೆ. ಹಾಗೆ ನೋಡಿದರೆ ನಮ್ಮ ಸುತ್ತಮುತ್ತ ದಿನನಿತ್ಯವೂ ಸಿಗುತ್ತಾರೆ. ನಮ್ಮ ಟೀವಿಗಳಲ್ಲಿ ದಿನನಿತ್ಯ ಇಪ್ಪತ್ನಾಲ್ಕು ತಾಸು ಬರುವ ಧಾರಾವಾಹಿಗಳಿಗೆ ಇದೇ ಷಡ್ಯಂತ್ರಗಳೇ ನಿತ್ಯ ಹೂರಣಗಳಲ್ಲವೇ.               

ಜಗತ್ತಿಗೇ ಶಾಂತಿ ಮಂತ್ರದ ಸಂದೇಶವನ್ನು ನೀಡಿದ ದೇಶವಿದು. ವೇದ ಉಪನಿಷತ್ತುಗಳನ್ನು ನೀಡಿದ ಪುಣ್ಯಭೂಮಿಯಲ್ಲಿಯೇ ಏಕೆ ಇಷ್ಟೊಂದು ವೈರುಧ್ಯ. ಹಾಗಾದರೆ ಅಂದಿನಿಂದ ಸಮಾಜವನ್ನು ಸಚ್ಛಾರಿತ್ರಕ್ಕೆ ಹಚ್ಚಬೇಕಾದ, ನಮ್ಮ ಗುರುಗಳು, ಪೂಜ್ಯರುಗಳು, ಗುರುಮಠಗಳು, ಸ್ವಾಮಿಗಳು, ರಾಜರ್ಷಿಗಳು ಏನು ಮಾಡಿದರು. ಅವರಿಗೂ ಕೂಡ ಇಂತಹ ಕುತಂತ್ರಗಳನ್ನು ತಡೆಯದು ಸಾಧ್ಯವಾಗಲಿಲ್ಲವೋ, ಅಥವಾ ರಾಜನಿಗೆ ಈ ಧರ್ಮಪತಿಗಳು ತಮ್ಮದೇ ಕಾರಣಗಳಿಗಾಗಿ, ಪ್ರಭಾವವನ್ನು ಬೀರಲಾರದಾದರೋ. ಯಾವುದು ಎಷ್ಟು, ಹೆಚ್ಚು ಸರಿ, ನಮಗಲ್ಲಿ ಫಣಿಕ್ಕರ್ ಟ್ರಾವೆಲ್ಸ್ ನವರ ಪರವಾಗಿ ಒಬ್ಬ ಗೈಡ್ ಬಂದಿದ್ದು. ಅವರೊಂದಿಗೆ ಮುಂದೆ ತಾಜ್ ಮಹಲ್‌ಗೆ ಹೋದೆವು. ಗೈಡ್ ನಮ್ಮ ಟಿಕೇಟ್ ಗಳನ್ನ ಆಗಲೇ ಪಡೆದಿದ್ದರಿಂದ, ಆ ಚಿಂತೆ ಇರಲಿಲ್ಲ.                 

ವಾಹನದ ನಿಲುಗಡೆಯಿಂದ ಸ್ವಲ್ಪ ದೂರ ನಡೆಯಬೇಕು. ನಾವು ಒಂಟೆಯ ಗಾಡಿಯಲ್ಲಿ ಕುಳಿತು ಹೋಗಿ ಗೇಟ್ ದಾಟಿ ಸಾಗಿದೆವು. ಬಿಸಿಲೋ ಬಿಸಿಲು. ಒಂದು ತರಹದ ಆಶಾಭಂಗ, ಒಂದು ತರಹ ರೋಮಾಂಚನ. ತಾಜ್‌ಮಹಲನ್ನು ನಾನು ವರ್ಣಿಸುವ ಅಗತ್ಯವಿಲ್ಲ, ಹಾಗಾಗಿ ನಮ್ಮ ಕಥೆ ಹೇಳುವೆ. ಅಮೃತ ಶಿಲೆಯ ಮೆಟ್ಟಲುಗಳನ್ನು ಹತ್ತಿ ಹೋದೆವು. ನಾನು ಮುಂಚೆಯೇ ಇದು ಮುಸಲ್ಮಾನರ ಕಟ್ಟಡವಲ್ಲ, ಹಿಂದೂಗಳು ಅಗ್ರೇಶ್ವರ ಮಹಾದೇವನನ್ನು (ಹೀಗಾಗಿ ಆಗ್ರಾ!) ಪೂಜಿಸುತ್ತಿದ್ದ ದೇವಾಲಯವೆಂದು ಕೇಳಿದ್ದೆ. ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ (?) ಪುರುಷೋತ್ತಮ್ ನಾರಾಯಣ್ ಓಕ್ ಎಂಬಾತ ಹಿಂದೆಯೇ ಇದರ ಬಗ್ಗೆ ಬರೆದಿದ್ದಾರೆ. ನನಗಂತೂ ಇದರ ಬಗ್ಗೆ ನಂಬಿಕೆಯಿರಲಿಲ್ಲ. ಅವರು ಹೇಳಿರುವ ಎಲ್ಲ ವಿಚಾರಗಳು ನನಗೆ ನೆನಪಿರಲಿಲ್ಲವಾದರೂ ಕೆಲವನ್ನಾದರೂ ಪರೀಕ್ಷಿಸಿ ನೋಡೋಣವೆಂದು ನೋಡಿದೆ. ಎಲ್ಲೆಡೆ ಅಂಚಿನ ಕೆತ್ತನೆಗಳು ಹಿಂದೂ ಧರ್ಮದ ಸಂಕೇತಗಳಾಗಿವೆ, ಕಟ್ಟಡದ ಮೇಲಿನ ಗೋಳ ಮುಸಲ್ಮಾನ ಶೈಲಿಯಲಿಲ್ಲದೆ ತಾವರೆ ಹೂವು ಸಹಿತವಾಗಿ ಹಿಂದೂ ಶೈಲಿಯಲ್ಲಿದೆ. ಗೋಳದ ಶಿಖರ ಹಾಗು ಒಳಗಿನ ಅಂಗಳದಲ್ಲಿ ಮಾವು-ತೆಂಗಿನಕಾಯಿಯ ಕಲಶದಾಕಾರಗಳಿವೆ. ಹಿಂದೂ ದೇವಾಲಯಗಳ ಹಾಗೆ ನಗಾರಿ ಖಾನೆಯೂ ನಿಜವಾಗಿ ಇದೆ. ಇವೆಲ್ಲವೂ ಮುಸಲ್ಮಾನ ಗೋರಿಯಲ್ಲೆ ಏಕಿರಬೇಕು ಎಂದುಕೊಂಡೆ. ಪಿ. ಎನ್. ಓಕ್ ಹೇಳಿರುವುದು ನಿಜವಿರಬಹುದೇ ಎಂಬ ಯೋಚನೆಯಲ್ಲಿ ತೊಡಗಿದೆ. ಬರುವಾಗ ರಥದ ಆಕಾರ ಗಾಡಿಯಲ್ಲಿ ಬಂದೆವು. ದಾರಿಯಲ್ಲಿ ಒಂದು ತಾಜ ಮಹಲ್ ಹಾಗೂ ಕೆಲವು ಕೀ ಬಂಚ್ ಗಳನ್ನು ಕೊಂಡೆ. ಮತ್ತೆ ಹೊರಟು ಒಂದು ಅಂಗಡಿಗೆ ಕರೆದೊಯ್ದರು – ಎಲ್ಲ ಸುಟ್ಟು ಮಾರುವ ಅಂಗಡಿ! ನನಗೆ ತಿಳಿದಿದ್ದರೂ ಲೆದರ್ ಚಪ್ಪಲಿ ಕೊಂಡೆ. ಮತ್ತೇನೂ ಕೊಳ್ಳಲಿಲ್ಲ. ಬಸ್ ಹತ್ತಿ, ಮಥುರಾಗೆ.


               ಮುಂದುವರೆಯುವುದು….

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x