ಬದಲಾಗುವ ಬಣ್ಣಗಳು (ಭಾಗ 3): ಅಶ್ಫಾಕ್ ಪೀರಜಾದೆ

ಇಲ್ಲಿಯವರೆಗೆ

– 5 –
ಚೇತನ ವಿವಾಹದ ನಂತರ ಇನ್ನಷ್ಟು ವಿಚಲಿತನಾದ. ಇನ್ನಷ್ಟು ದ್ವಂದ್ವಕ್ಕೆ ಒಳಗಾದ ಮಾನಸಿಕವಾಗಿ ಕಾವೇರಿಯೊಂದಿಗೆ ಹೊಂದಾಣಿಕೆ ಸಾಧ್ಯವಾಗುತ್ತಿರಲಿಲ್ಲ. ಪವಿತ್ರೆಯ ನೆನಪು ಅವನೆದೆಯಲ್ಲಿ ಬಿರುಗಾಳಿಯಾಗಿ ಬೀಸಿದಾಗ ಈತ ತರಗೆಲೆಯಂತಾಗಿ ಬಿಡುತ್ತಿದ್ದ. ತತ್ತರಿಸಿ ಹೋಗುತ್ತಿದ್ದ. ಮನದ ಯಾತನೆಯ ತೀವ್ರತೆ ಕಡಿಮೆಗೊಳಿಸಲು ಮತ್ತೇ ಮತ್ತೇ ಅವನು ಕುಡಿತಕ್ಕೆ ಶರಣಾಗುತ್ತಿದ್ದ. ಅದೇ ಅಮಲಿನಲ್ಲಿ ಎಲ್ಲ ಮನಸಿನ ಎಲ್ಲ ತಡೆಗೊಡೆಗಳು ದಾಟಿ ಮತ್ತೆ ಪವಿತ್ರೆಯ ಮನೆಯ ದಾರಿ ಹಿಡಿಯುತ್ತಿದ್ದ. ಪವಿತ್ರಳ ಮನೆ ಇವನಿಗೆ ಮಾನಸಿಕ ನೆಮ್ಮದಿಯ ಕೇಂದ್ರವಾಗಿತ್ತು. ಈತನ ಮದ್ವೆಯ ನಂತರ ಶಾರದಮ್ಮನವರ ಆರೋಗ್ಯವೇನು ಸುಧಾರಿಸಿತು ನಿಜ ಆದರೆ ಮತ್ತೆ ಈತ ಕುಡಿತ ಮತ್ತು ಪವಿತ್ರೆಯ ಹಿಂದೆ ಬಿದ್ದಿರುವ ವಿಷಯ ಚಿಂತೆಗೀಡು ಮಾಡಿತ್ತು. ಕಾವೇರಿ ಕೂಡ ಆತನನ್ನು ತನ್ನ ಪ್ರೇಮಪಾಶದಿಂದ ಬಂಧಿಸುವಲ್ಲಿ ಅಸಫಲಳಾಗಿದ್ದಳು. ಚೇತನ ತನ್ನಿಂದ ದೂರ ಆಗುತ್ತಿರುವದರಿಂದ ಅವಳು ತುಂಬಾ ನೊಂದುಕೊಂಡಿದ್ದಳು. ಆದರೆ ಮನದ ಯಾವುದೇ ಮೂಲೆಯಲ್ಲಿ ಅವನು ಒಂದಿಲ್ಲ ಒಂದು ದಿನ ಸರಿದಾರಿಗೆ ಬಂದೇ ಬರುತ್ತಾನೆ ಎನ್ನುವ ಅಚಲವಾದ ನಂಬಿಕೆ ಹೊಂದಿದ್ದಳು. ಅವಳ ಈ ನಂಬಿಕೆಗೆ ಚೇತನ ತಂದೆ-ತಾಯಿಗಳ ನೈತಿಕ ಬಲ ತುಂಬಿದ್ದರು. ಆತ ಕಟ್ಟಿದ ತಾಳಿ ಅವನನ್ನು ಒಂದಿಲ್ಲ ಒಂದು ದಿನ ಮರಳಿ ಬರುವಂತೆ ಮಾಡುತ್ತದೆ. ಆ ಶಕ್ತಿ ಅದಕ್ಕೆ ಎಂದು ವಿಶ್ವಾಸ ತುಂಬಿದರು. ಈ ನಡುವೆ ಚೇತನನ ದ್ವಂದ್ವದ ಬದುಕು ಹಾಗೇ ಮುಂದುವರೆದಿತ್ತು.

– 6 –
ಚೇತನ್ ನ ಜೀವನ ಕವಲೋಡೆದ ದಾರಿಯಲ್ಲಿ ನಡೆಯುತ್ತಿರಬೇಕಾದರೆ ಇದ್ದಕ್ಕಿದಂತೆ ಒಂದು ದಿನ ಪ್ರತೀಕ ಕರೆ ಮಾಡಿದ. ಚೇತನನ ಬಾಲ್ಯ ಸ್ನೇಹಿತ ಪ್ರತೀಕ ಈಗ ಬೆಂಗಳೂರು ಯುನಿವರ್ಸಿಟಿಯಿಂದ ಎಂ.ಎ, ಎಂ.ಪಿಲ್, ಪಿ.ಎಚ್.ಡಿಯಲ್ಲ ಮುಗಿಸಿ ಖಾಸಗೀ ಕಾಲೇಜವೊಂದರಲ್ಲಿ ಕನ್ನಡ ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸುವದರ ಜೊತೆಗೆ ಸಾಕಷ್ಟು ಕತೆ, ಕಾದಂಬರಿಗಳನ್ನು ಬರೆಯುವ ಮೂಲಕ ಹೆಸರು ಸಂಪಾದಿಸಿದ್ದ. ಸಾಕಷ್ಟು ‘ಪ್ರಶಸ್ತಿ’ ಸನ್ಮಾನಗಳಿಗೆಲ್ಲ ಭಾಜನನಾಗಿದ್ದ. ಒಂದು ಕಾದಂಬರಿಯಲ್ಲಿ ಕೇರಿ ಜನರ ಬದುಕು ಚಿತ್ರಿಸಬೇಕಿದೆ. ಒಂದೆರಡು ದಿನ ಊರಿಗೆ ಬರುವದಾಗಿ ಚೇತನನಿಗೆ ಫೋನ ಮಾಡಿದ್ದ. ಒಂದೆರಡು ದಿನ ಕೇರಿಯಲ್ಲೆ ಉಳಿದು ಅಲ್ಲಿನ ಜನಜೀವನ, ರೀತಿ-ನೀತಿಗಳು, ಬಡತನ-ಶೋಷಣೆಗಳನ್ನೆಲ್ಲ ನೋಡಿದ ಮೇಲೆ ಬರೆದರೆ ಕಾದಂಬರಿಯಲ್ಲಿ ಜೀವತುಂಬಬಹುದೆಂದು ಭಾವಿಸಿದ್ದ. ಅದಕ್ಕಾಗಿ ಚೇತನ ಪ್ರತೀಕನ ವಾಸ್ತವ್ಯಕ್ಕೆ ಪವಿತ್ರೆಯ ಮನೆಯೇ ಸೂಕ್ತವೆಂದು ಅವನ ವಸತಿಗೆ ವ್ಯವಸ್ಥೆ ಮಾಡಿದ ಪ್ರತೀಕ ಚೇತನನ ಪ್ರಾಣ ಸ್ನೇಹಿತ ಜೋತೆಗೆ ಒಬ್ಬ ಒಳ್ಳೆ ಲೇಖಕನೆಂಬ ಕಾರಣಕ್ಕೆ ಪವಿತ್ರೆಯೂ ತುಂಬ ಹೃದಯದ ಆದಾರಾತಿಥ್ಯ ನೀಡಿದಳು. ಈ ನಡುವೆ ಚೇತನ ಮತ್ತು ಪವಿತ್ರೆ ಇಷ್ಟೊಂದು ಅನ್ಯೋನ್ಯತೆಯಿಂದಿರುವುದು ಪ್ರತೀಕನಿಗೆ ಒಂತರಹದ ಪ್ರಶ್ನೆಯಾಗಗಿ ಕಾಡುತ್ತದೆ. ಇಬ್ಬರ ಸಂಬಂಧ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಾನೆ. ಅವನ ಕುತೂಹಲಕ್ಕೆ ಉತ್ತರವಾಗಿ ಚೇತನ ತನ್ನ ಕಥೆಯನ್ನು ಪ್ರತೀಕನ ಮುಂದೆ ಬಿಚ್ಚಿಡುತ್ತಾನೆ. ಯಾವುದೊಂದು ಆಸೆ ಆಮಿಷಗಳಿಲ್ಲದೆ ನಿಸ್ವಾರ್ಥವಾಗಿ ಪ್ರೇಮಿಸುತ್ತಿರುವ ಈ ಪ್ರೇಮಿಗಳ ಕಥೆ ಕೇಳಿ ಪ್ರತೀಕ ಆಶ್ಚರ್ಯಗೊಳ್ಳುತ್ತಾನೆ. ವಿವಾಹವಾಗಿ ದಿನಂಪ್ರತಿ ಜಗಳಾಡುವ ಹೊಡೆದಾಡುವ ಎಷ್ಟೋ ದಂಪತಿಗಳನ್ನು ಕಂಡಿರುವ ಪ್ರತೀಕ ಮದುವೆಯಾಗದೇ ಕೇವಲ ನಿಸ್ವಾರ್ಥ ಪ್ರೇಮದಲಿ ಒಂದಾಗಿರುವ ಈ ಪ್ರೇಮಿಗಳ ಪ್ರೇಮ ಕತೆ ಕೇಳಿ ಬೇಷ್ ಎನ್ನುತ್ತಾನೆ. ಬ್ಲ್ಯಾಕಮೇಲ್ ಮಾಡಿ ಗಂಡಸರನ್ನು ಶೋಷಣೆ ಮಾಡುವ ಹೆಂಗಸರಕ್ಕಿಂತ ತನ್ನ ಭವಿಷ್ಯವನ್ನೇ ತ್ಯಾಗ ಮಾಡಿ, ಚೇತನನ ಬದುಕು ಹಸನಾಗಿರಲೆಂದು ಹಾರೈಸುವ ಪವಿತ್ರೆಯ ಪಾತ್ರ ಪ್ರತೀಕನಿಗೆ ತುಂಬಾ ಇಷ್ಟವಾಗುತ್ತಿದೆ. ಹೊಂದಾಣಿಕೆ ಕಾಣದೆ ಒಂದೆರಡು ವರ್ಷಗಳಲ್ಲೆ ಮುರಿದು ಬೀಳೂವ ಸಂಬಂಧಗಳಗಿಂತ ಸುಮಾರು 10-15 ವರ್ಷಗಳಿಂದ ಕೇವಲ ಪ್ರೇಮದ ನೆರಳಲ್ಲಿ ಬದುಕುತ್ತಿರುವ ಚೇತನ ಪವಿತ್ರೆಯ ಪ್ರೇಮ ಕತೆ ಮುಂದಿನ ಕಾದಂಬರಿಯ ಕಥಾ ವಸ್ತುವಾಗಬಹುದೆನ್ನುತ್ತಾನೆ. ನಿರಂತರವಾಗಿ ಹರಿಯುತ್ತಿರುವ ಗುಪ್ತಗಾಮಿನಿ ಪ್ರೇಮದ ಕತೆ ಪ್ರತೀಕ ಕಣ್ಣಲ್ಲಿ ನೀರು ತರಿಸುತ್ತದೆ.

“ನೀವಿಬ್ಬರೂ ತುಂಬಾ ಗ್ರೇಟ್… ಪವಿತ್ರ ಯಾವುದೇ ಸ್ವಾರ್ಥವಿಲ್ಲದೇ ಚೇತನನ್ನು ಪ್ರೀತಿಸುವುದು… ಚೇತನ ತನ್ನ ಅನಿವಾರ್ಯತೆಗಳ ನಡುವೆಯೂ ಒಂದು ಅಬಲೆ ಹೆಣ್ಣಿನ ಜೀವನ ಕಟ್ಟಿ ಕೊಡುವದಕ್ಕೆ ಮನಸ್ಸು ಮಾಡುವದು. ಇದೆಲ್ಲ ನನ್ನ ಹೃದಯ ತಟ್ಟುವ ಘಟನೆಗಳು…” ಎಂದು ಹೇಳಿದ ಪ್ರತೀಕ ಎರಡ್ಮೂರ ದಿನಗಳವರೆಗೆ ಕೇರಿಯಲ್ಲೆ ಉಳಿದು ಕೇರಿಯ ಚಟುವಟಿಕೆಗಳ ಮೇಲೆ ಅಲ್ಲಿನ ಜನರ ಮೇಲೆ, ಅಲ್ಲಿ ಆಗಹೋಗುಗಳ ಮೇಲೆ ಅಲ್ಲಿನ ವಾತಾವರಣದ ಮೇಲೆ… ಬರುವ ಗಿರಾಕಿಗಳ ಮೇಲೆ… ಶೋಷಣೆಗೊಳಗಾಗುವ ಹೆಂಗಸರ ಮೇಲೆಲ್ಲ ಟಿಪ್ಪಣೆ ಮಾಡಿಕೊಂಡು ಪವಿತ್ರೆಗೆ ಇನ್ನೊಮ್ಮೆ ಧನ್ಯವಾದಗಳನ್ನು ಅರ್ಪಿಸಿ ಬೆಂಗಳೂರಿಗೆ ಬಂದು ಹೊಸ ಕಾದಂಬರಿ ಬರೆಯಲು ಮುಂದಾದ.

************
ಪ್ರತೀಕ ಮೂರ್ನಾಲ್ಕು ತಿಂಗಳವರೆಗೆ ಏಕಾಗ್ರತೆಯಿಂದ ಕುಳಿತು ಚೇತನ್ ಮತ್ತು ಪವಿತ್ರೆಯನ್ನು ಮುಖ್ಯ ಪಾತ್ರಗಳನ್ನಾಗಿ ಇಟ್ಟುಕೊಂಡು ಕಾದಂಬರಿ ಬರೆದು ಮುಗಿಸುತ್ತಾನೆ. ಅವನ ಕಂಡು ಬಂದ ಆ ಕೇರಿ, ಕೇರಿಯ ಜನ ಜೀವನ ಅಲ್ಲಿ ದಾಖಲಿಸುತ್ತಾನೆ. ಈ ಕಾದಂಬರಿ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಭಾರಿ ಸದ್ದು ಮಾಡುತ್ತದೆ ಕಾರಣ ಅಲ್ಲಿ ಲೇಖಕ ಜೀವಂತವಾಗಿ ಕಟ್ಟಿಕೊಟ್ಟ ಪರಿಸರ, ಜೀವಂತ ಪಾತ್ರಗಳು ಓದುಗರ ಮನಸೊರೆಗೊಳ್ಳುವಂತೆ ಮಾಡಿತ್ತು. ಈ ಕಾದಂಬರಿಯ ನಂತರ ಪ್ರತೀಕ ಒಬ್ಬ ಅಗ್ರಫಂಕ್ತಿಯ ಕಾದಂಬರಿಕಾರನಾಗಿ ಗುರುತಿಸಿಕೊಂಡನು. ನೂರಾರು ಪತ್ರಿಕೆಗಳು ಇವನ ಸಂದರ್ಶನಕ್ಕಾಗಿ ಸಾಲು ನಿಂತವು. ಇದೇ ಸಮಯದಲ್ಲಿ ಪ್ರಮುಖ ಪತ್ರಿಕೆಯು ಸುದ್ದಿಗಾರ್ತಿ ಸ್ನೇಹಾ ಶಂಕರನ ಸಂದರ್ಶನ ಬಯಸಿ ಸಂಪರ್ಕಿಸಿದಾಗ ಸಂದರ್ಶನದ ದಿನಾಂಕ, ಸಮಯ ಮತ್ತು ಸ್ಥಳ ನಿಗದಿಯಾಗಿತ್ತು. ಸಂದರ್ಶನ ಎರಡ್ಮೂರು ದಿನಗಳಲ್ಲಿ ನಡೆಯುವದರಿಂದ ತನ್ನ ಮನೆಯೇ ಒಳ್ಳೆಯದೆಂದು ತನ್ನಾಸೆಯನ್ನು ಪ್ರತೀಕನಿಗೆ ತಿಳಿಸಿದಳು. ಸ್ನೇಹಾ ಮನೆಯಲ್ಲಿ ಯಾರೂ ಇರುವುದಿಲ್ಲ. ಪ್ರಶಾಂತವಾದ ಸ್ಥಳ…. ಸಮಗ್ರ ಚರ್ಚೆಗೆ ಅನುಕೂಲವಾಗುವುದು ಎಂದು ಸ್ನೇಹ ವಿನಂತಿಸಿಕೊಂಡಾಗ ಶಂಕರನಿಗೆ ನಿರಾಕರಿಸಲು ಆಗುವುದಿಲ್ಲ. ಸ್ನೇಹಾ ಮೊದಲಿನಿಂದಲೂ ಪ್ರತೀಕ ಸಾಹಿತ್ಯದ ಅಭಿಮಾನಿ. ಸಂದರ್ಶನದ ಮೊದಲ ಭಾಗವಾಗಿ ಪ್ರಸ್ತುತ ಸಾಹಿತ್ಯದ ಬಗ್ಗೆ, ಸಾಹಿತ್ಯಿಕ ವಾತಾರಣದ ಬಗ್ಗೆ, ಸಮಕಾಲೀನ ಸಾಹಿತ್ಯದ ಬಗ್ಗೆ ಸವಿವರ ಚರ್ಚೆ ನಡೆದು ಅದೆಲ್ಲವೂ ಮೂರನೇಯ ದಿನವೇ ಪತ್ರಿಕೆಯಲ್ಲಿ ಪ್ರಕಟವಾಗಿ ಮುಂದಿನ ಭಾಗದ ಸಂದರ್ಶನವನ್ನು ಓದುವದಕ್ಕೆ ಮುಂದಿನ ವಾರ ತನಕ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು.ಮತ್ತೇ ಮುಂದಿನ ವಾರದ ಸಂದರ್ಶನಕ್ಕಾಗಿ ಕರೆ ನೀಡಿದಳು ಸ್ನೇಹಾ. ಪ್ರತೀಕ ತನ್ನ ಸಭೆ ಸಮಾರಂಭಗಳ ಪಟ್ಟಿ ಪರಿಶೀಲಿಸಿ ಒಂದು ದಿನಾಂಕ ಸೂಚಿಸಿದ. ಅದೇ ದಿನಕ್ಕೆ ಸಂದರ್ಶನದ ಮುಂದುವರೆದ ಭಾಗ ಸ್ನೇಹಳ ಮನೆಯಲ್ಲಿ ಆರಂಭವಾಯಿತು. ಸ್ನೇಹಾಳನ್ನು ಹೊರತುಪಡಿಸಿ ಈ ಮನೆಯಲ್ಲಿ ಇನ್ಯಾರೂ ಕಾಣದಿರುವುದನ್ನು ಪ್ರತೀಕ ತನ್ನ ಸಂದರ್ಶನದ ನಡೆಯುವೆಯೂ ಗಮನಿಸಿದವನಾಗಿದ್ದ. ಮೊದಲು ಸಲ ಬಂದಾಗಲು ಯಾರೂ ಇರಲಿಲ್ಲ. ಈಗಲೂ ಇಲ್ಲ. ವಿಶಾಲವಾದ ಮನೆ, ವಿಶಾಲವಾದ ಪ್ರಾಂಗಣ… ಅಷ್ಟೇ ವಿಶಾಲವಾಗಿ ಹರಡಿದ ಮನೆ ಮುಂದಿನ ಸುಂದರ ಹೂದೋಟ… ಒಂದೆರಡು ಹೈಟೆಕ್ ಕಾರಗಳು ಇವೆ.. ಆದರೇ!? ಈ ಮನೆಗೆ ಒಡತಿ ಸ್ನೇಹಾಳನ್ನು ಬಿಟ್ಟು ಮತ್ಯಾರೂ ಇಲ್ಲದಿರುವುದು ಪ್ರತೀಕನ ಯೋಚನೆಗೆ ಕಾರಣವಾಗಿತ್ತು. ಸ್ನೇಹಾಳ ಕೊರಳಲ್ಲಿನ ತಾಳಿ ಅವಳ ಮದುವೆ ಆಗಿದೆ ಎನ್ನುವದು ಸ್ಪಷ್ಟಪಡಿಸುತ್ತಿತ್ತು. ಅಷ್ಟೇಯಲ್ಲದೆ ಅವಳ ಮತ್ತು ಅವನು ಮದುವೆ ಚಿತ್ರಗಳು ಗೋಡೆಗಳ ಮೇಲೆ ಅಲಂಕಾರಗೊಂಡಿದ್ದವು. ಆದರೆ ಚಿತ್ರದಲ್ಲಿರುವ ಅವಳ ಗಂಡ ಈ ಮನೆಯಲ್ಲೇಕೆ ಇಲ್ಲ? ಮಕ್ಕಳು ಕೂಡ ಇಲ್ಲ… ಇಷ್ಟು ದೊಡ್ಡ ಮನೆಗೆ ಒಂದು ಆಳು ಕೂಡ ಇಲ್ಲ… ಸಂದರ್ಶನ ಕಾಲಕ್ಕೆ ಕಾಫಿ… ಟೀ.. ಎಲ್ಲ ಇವಳೇ ತಂದು ಕೊಡುತ್ತಿದ್ದಳು. ಈ ನಡುವೆ ಸಂದರ್ಶನ ಸಮಯ ಮುಗಿದಿದ್ದೆ ಗೊತ್ತಾಗಿರಲಿಲ್ಲ. ಸಂಜೆಯಾಗುತ್ತ ಬಂದಿತ್ತು. ಸಂದರ್ಶನ ಮುಗಿದ ಮೇಲೆ ಪ್ರತೀಕ ಸ್ನೇಹಾಳನ್ನು ಕುತೂಹಲ ತಾಳದೆ ಕೇಳಿದ-

“ನನಗೊಂದು ಸಂದೇಹ…. ಕೇಳ್ಲಾ?” ಎಂದ. ಪ್ರತೀಕನಿಗೆ ಒಬ್ಬ
ಕಥೆಗಾರನಿಗೆ ಇರಬೇಕಾದ ಸಹಜ ಕುತೂಹಲವಿತ್ತು. ಬಹುಶ:
ಅವನು ಮನಸ್ಸು ಅಲ್ಲಿಯೂ ಕಥಾ ವಸ್ತುವಿಗಾಗಿ ಅವನಿಗರಿವು
ಇಲ್ಲದಂತೆಯೇ ಚಡಪಡಿಸುತ್ತಿತ್ತು ಅನ್ನಿಸುತ್ತೆ.
“ನಿಸ್ಸಂಕೋಚವಾಗಿ ಕೇಳಬಹುದು.. ನನ್ನ ಬಗ್ಗೆ ತಿಳಿದು
ಕೊಳ್ಳುವ ಹಕ್ಕು ನಿಮಗಿದೆ. ಏಕೆಂದ್ರ ನಾನು ಕೇವಲ ನಿಮ್ಮ
ಸಂದರ್ಶಕ ಮಾತ್ರವಲ್ಲ… ನಿಮ್ಮ ಅಭಿಮಾನಿ ಕೂಡ” ಎಂದಳು. ಅದಕ್ಕೆ ತುಂಬ ಹರ್ಷಿತನಾಗಿ ಮರು ಪ್ರಶ್ನೆಸಿದ ಪ್ರತೀಕ “ಆ ಚಿತ್ರದಲ್ಲಿರುವರು ಬಹುಶಃ ನಿಮ್ಮ ಪತಿದೇವ್ರು ಇರಬಹುದು ಆದರೆ.. ನಾನು ಅವರನ್ನು ಇಲ್ಲಿ ಒಮ್ಮೆಯೂ ನೋಡಲಿಲ್ಲ?”
“ಹೌದು … ಅವರು ಇಲ್ಲಿರೊಲ್ಲ. ಅವರೊಬ್ಬ ಅನಿವಾಸಿ ಭಾರತೀಯ ಬ್ಯೂಜಿನೆಸ್ ಮ್ಯಾನ್ ಅಮೇರಿಕಾದಲ್ಲಿ ಸೆಟ್ಟಲ್ ಆಗಿದ್ದಾರೆ. ಆಗಾಗ ಬಂದು ಹೋಗ್ತಾರೆ…” ಎಂದು ವಿವರಿಸಿದಳು.
“ಮತ್ತೇ ಮಕ್ಕಳು?” ಮತ್ತೇ ಪ್ರಶ್ನಿಸಿದ ಪ್ರತೀಕ.
‘ಮದ್ವೆಯಾಗಿ ಹತ್ತು ವರ್ಷವಾಗ್ತಾ ಬಂತು. ಮಕ್ಕಳಿಲ್ಲ. ಆ ಬಗ್ಗೆ ಅವರಾಗಲಿ ನಾನಾಗಲಿ ತೆಲೆ ಕೆಡಸಿಕೊಂಡಿಲ್ಲ. ಕಾರು… ಬಂಗ್ಲೆ ಎಲ್ಲ ಸೌಲಭ್ಯ ದೊರಕಿಸಿಕೊಟ್ಟಿದ್ದಾರೆ. ನನ್ನದು ಜರ್ನಾಲಿಸಂನಲ್ಲಿ ಪಧವಿ, ನನಗೆ ಜರ್ನಾಲಿಸಂದ ಹುಚ್ಚು. ಅದಕ್ಕಾಗಿ ನಾನು ಪತ್ರಿಕೆ ಸೇರಿದ್ದೇನೆ. ಈ ಕೆಲಸದಿಂದಾಗಿ ನನಗೆ ಒಂಟಿತನದ ಅರಿವು ಅಷ್ಟಾಗಿ ಆಗಿಲ್ಲ ಅನ್ನಿಸುತ್ತದೆ. ಡ್ಯೂಟಿ.. ತಿಂಡಿ ಎಲ್ಲ ಹೊರಗಡನೆ ಮುಗಿಸಿ ಮಲಗಲು ಮಾತ್ರ ಮನೆಗೆ ಬರುತ್ತೇನೆ. ಅದಕ್ಕಾಗಿ ಆಳು ಸಹ ಇಟ್ಟುಕೊಂಡಿಲ್ಲ…” ಎಂದು ವಿವರಣೆ ನೀಡಿದಳು.

“ನೀವು ಅಲ್ಲಿಗೆ ಹೋಗಬಹುದಿತ್ತಲ್ಲ” ಎನ್ನುವ ಪ್ರಶ್ನೆಗೆ “ಅದು ಅವರಿಗೆ ಇಷ್ಟವಿಲ್ಲ… ಮನೆಯವರ ಒತ್ತಾಯಕ್ಕೆ ಮದ್ವೆ ಆಗಿದಾರೆ ಅಷ್ಟೆ. ನಾನು ಅವರಿಗೆ ಬೇಕಾಗಿಲ್ಲ. ಅದಕ್ಕೂ ಒಂದು ಕಾರಣವಿದೆ. ಅದು
ಏನೆಂದು ಈಗ ಹೇಳಲ್ಲ.. ಸಮಯ ಬಂದಾಗ ಹೇಳತೇನೆ” ಎಂದು ಇನ್ನಷ್ಟು ಕುತೂಹಲಕ್ಕೀಡು ಮಾಡಿದ್ದಳು. ಒಂದು ಹೆಣ್ಣು ಹೀಗೆ ಒಬ್ಬಂಟಿಯಾಗಿ, ಪತಿಯಲ್ಲದೇ ಮಗುವಿಲ್ಲದೇ ಸುಮಾರು ಹತ್ತು ವರ್ಷಗಳಿಂದ ಕಾಲ ಕಳೆಯುವದೆಂದರೆ? ಆಶ್ಚರ್ಯವಾಯ್ತು ಪ್ರತೀಕನಿಗೆ. ಆತ ಹೋಗಲು ಸಿದ್ದನಾದ “ತುಂಬಾ ಲೇಟಾಯ್ತು… ಇವತ್ತೊಂದು ದಿನ ಇಲ್ಲೆ ಇರಬಹುದಲ್ಲ” ಎಂದಾಗ
ಪ್ರತೀಕ-
“ಇಲ್ಲ ನಾನು ಹೋಗಲೇಬೇಕು… ನನ್ನ ಹೆಂಡ್ತಿ-ಮಕ್ಕಳು ಕಾಯ್ತೀರತಾರೆ ” ಎಂದು ಹೇಳಿ ತನ್ನ ಕಾರಿನಲ್ಲಿ ಪ್ರಯಾಣ ಬೆಳೆಸಿದ.ಮತ್ತೇ ರವಿವಾರದ ಸಾಹಿತ್ಯ ಪುರವಣಿಯಲ್ಲಿ ಅಂದು-ನಡೆದ ಸಂದರ್ಶನ ಪ್ರಕಟವಾಯಿತು. ಅದನ್ನೂ ಓದುಗರರು ಕೂಡ ತುಂಬಾ ಮೆಚ್ಚಿಕೊಂಡು ಪತ್ರಿಕೆಗೆ ಪೀಡಬ್ಯಾಕ ನೀಡಿದರು. ಸಂದರ್ಶನ ಮೂರನೇಯ ಮತ್ತು ಕೊನೆ ಕಂತು ಮುಂದಿನ ಸಾಹಿತ್ಯ ಪುರವಣಿಯಲ್ಲಿ ಪ್ರಕಟವಾಗುವದಿತ್ತು. ಅದಕ್ಕಾಗಿ ಸ್ನೇಹಾ ಮತ್ತೇ ಪ್ರತೀಕನನ್ನು ಅಹ್ವಾನಿಸಿದಳು. ನಿಗದಿತ ಸಮಯಕ್ಕೆ ಪ್ರತೀಕ ಸ್ನೇಹಾಳ ಮನೆಗೆ ಬಂದಾಗ … ಮನೆ ಬಾಗಿಲು ತೆರದೇ ಇತ್ತು. “ಸ್ನೇಹಾ –ಸ್ನೇಹಾ” ಎಂದು ಕೂಗುತ್ತ ಪ್ರತೀಕ ಒಳಪ್ರವೇಶ ಮಾಡಿದ. ಹಾಲಿನಲ್ಲೂ ಯಾರೂ ಇರಲಿಲ್ಲ. ಮತ್ತೇ ಹೆಸರಿಡಿದು ಕೂಗಿದ ಅತ್ತಿಲಿಂದ ಉತ್ತರ ಬಂತು “ಹಾಗೇ ಒಳಗೆ ಬನ್ನಿ… ನನ್ನ ಬೆಡ್ ರೂಂಗೆ” ಎಂದು. ಮನೆಯ ಪ್ರತಿಭಾಗವು ಅವಳು ಮುಂಚೆಯೇ ಪರಿಚಯಸಿದ್ದರಿಂದ ಪ್ರತೀಕನಿಗೆ ಬೇಡ್ರೂಮ ಹುಡುಕುವುದು ಕಷ್ಟವಾಗಲಿಲ್ಲ. ಅವನು ಬೆಡ್ರೂಮಗೆ ಬಂದು ನೋಡಿದ. ಸ್ನೇಹಾ ಇನ್ನೂ ಮಲಗಿದ್ದಳು. ಗೋಡೆ ಮೇಲಿನ ಗಡಿಯಾರ ಹತ್ತು ಗಂಟೆಯಾಗಿದೆ ಎಂದು ಸಾರುತ್ತಿತ್ತು. ಅವಳ ಹಾಸಿಗೆ ಮೈಮೇಲಿನ ಬಟ್ಟೆಗಳೆಲ್ಲ ಅಸ್ತವ್ಯಸ್ತವಾಗಿದ್ದವು. ಅವಳನ್ನು ಆ ಸ್ಥಿತಿಯಲ್ಲಿ ಕಂಡುಕ್ಷಣ ಏನೂ ತೋಚದೆ ಹಾಗೇ ನಿಂತು ಬಿಟ್ಟ; ಒಳಗೆ ಬಂದ ಹೆಜ್ಜೆ ಸದ್ದು ಹೀಗೆ ಒಮ್ಮಿದೊಮ್ಮಲೆ ನಿಶಬ್ಧವಾಗಿದ್ದನ್ನು ಗೃಹಿಸಿದ ಸ್ನೇಹಾ
“ಪರ್ವ್ವಾಗಿಲ್ಲ ಬನ್ನಿ.. ಯಾಕೋ ಮೈಯಲ್ಲಿ ಹುಶ್ಯಾರಿಲ್ಲ.. ಹಾಸಿಗೆ ಬಿಟ್ಟು ಏಳಲೂ ಆಗಲಿಲ್ಲ… ಅದಕ್ಕೆ ನಿಮ್ಮನ್ನು ಇಲ್ಲೇ ಬನ್ನಿ ಎಂದೆ” ಎಂದಾಗ ಪ್ರತೀಕ ಸ್ವಲ್ಪ ಧೈರ್ಯ ಮಾಡಿ ಅವಳ ಹತ್ತಿರಕ್ಕೆ ಹೋಗಿ ಅವಳ ಹಣೆಗೆ ಕೈ ಹಚ್ಚಿ “ಜ್ವರವೇ” ಎಂದು ಪರೀಕ್ಷಿಸಿತ್ತಿರುವಾಗಲೇ ಪ್ರತೀಕನನ್ನು ತನ್ನ ಮೇಲೆ ಎಳೆದುಕೊಂಡು – “ನಾನು ನಿಮ್ಮ ಅಭಿಮಾನಿ ಅಷ್ಟೆಯಲ್ಲ ನಾನು ನನ್ನ ಪ್ರಾಣಕ್ಕಿಂತ್ ಹೆಚ್ಚಾಗಿ ಪ್ರೀತಿಸಿತ್ತೇನೆ. ಈ ಸಂದರ್ಶನವೆಲ್ಲ ನಿಮ್ಮನ್ನು ಹತ್ತರಕ್ಕೆ ತಂದುಕೊಳ್ಳುವ ನಾಟಕವಷ್ಟೆ.. ನನಗೆ ನೀವು ಬೇಕು… ನೀವೂ ಬೇಕು…ಯಾವತ್ತಿಗೂ ಬೇಕು” ಎಂದು ಹೇಳುತ್ತ ಇನ್ನಷ್ಟು ತಬ್ಬಿಕೊಳ್ಳಲು ಪ್ರಯತ್ನಿಸಿದಾಗ ಅವಳ
ಬಾಯಿಯಿಂದ ಮದ್ಯದ ವಾಸನೆ ಬರುತ್ತಿರುವುದು ಪ್ರತೀಕನ ಅರಿವಿಗೆ ಬಂತು. ಪ್ರತೀಕ ಅವಳ ಬಾಹುಬಂಧನದಿಂದ ಬಿಡಿಸಿಕೊಳ್ಳಲು ಯತ್ನಿಸುತ್ತಲೇ-
“ಸ್ನೇಹಾ… ನೀನು ಕುಡಿದಿರುವೆಯಾ?” ಎಂದು ಸಿಟ್ಟಿನಿಂದ ಪ್ರಶ್ನಿಸಿದ.

“ಹೌದು ರಾತ್ರಿ ಒಂಟಿತನದಿಂದ ನನಗೆ ನಿದ್ರೆ ಬರುವುದಿಲ್ಲ. ಅದಕ್ಕೆ ಕುಡಿಯುತ್ತೇನೆ. ಆದರೆ ನಿನ್ನೆ ರಾತ್ರಿ ನಿಮ್ಮ ನೆನಪಿನಲ್ಲಿ ಸ್ವಲ್ಪ ಜಾಸ್ತಿನೇ ಕುಡಿದೆ” ಎಂದಳು.
“ಸ್ನೇಹ ಹೀಗೆಲ್ಲ ಮಾಡುವುದು ತಪ್ಪು, ನೀನು ತಿಳದವಳು ಹೀಗೆಲ್ಲ ಮಾಡಬಾರದು” ಎಂದು ನಡಗುವ
ಧ್ವನಿಯಲ್ಲಿ ತಿಳಿಹೇಳಲುತ್ತಲೇ ಅವಳಿಂದ ಕಳಚಿಕೊಂಡು ದೂರ ನಿಂತಿದ್ದ.

“ನಾನು ನಿಮ್ಮ ವೈವಾಹಿಕ ಜೀವನಕ್ಕೆ ಯಾವ ತೊಂದರೆನೂ ಮಾಡಲ್ಲ… ನಿಮ್ಮ ಮನಸ್ಸು ಬಂದಾಗ ಬಂದು ಹೋದರೆ ಸಾಕು. ನಾನು ಎಂದಿಗೂ ನಿಮ್ಮವಳಾಗಿರುತ್ತೇನೆ. ಎಂದು ಹೇಳಿದಾಗ ಒಂದಕ್ಷಣ ಅವನ ಕಣ್ಮುಂದೆ ಪವಿತ್ರಳ ಚಿತ್ರ ಮಿಂಚಿ ಮಾಯವಾಗುತ್ತದೆ. ಸ್ನೇಹಾ ಮನಸಾರೆ ತನ್ನನ್ನು ಸಮರ್ಪಿಸಿಕೊಂಡಿದ್ದಾಳೆ. ಅವಳ ಸೌಂದರ್ಯ… ಯೌವ್ವನವೆಲ್ಲ ಒಂದೇ ಬಾರಿ ಸವಿದು ಬಿಡುವುದರಲ್ಲಿ ತಪ್ಪಿಲ್ಲವೆಂದು ಒಂದು ಮನಸ್ಸು ಹೇಳಿದರೆ ಇನ್ನೊಂದು ಮನಸ್ಸು ಇದೆಲ್ಲ ತಪ್ಪ ಎಂದು ಹೇಳುತ್ತಿತ್ತು. ಇದೇ ತುಮುಲಗಳ ನಡುವೆ ಅವನ ಮನಸ್ಸು ಹೊಯ್ದಾಡುತ್ತಿತ್ತು. ಪ್ರತೀಕನ ಬುದ್ದಿಗೆ ಮಂಕು ಕವಿದಂತಾಗಿತ್ತು. ಅವನ ಮಂಕು ಅವಳ ಮತ್ತಿನ ನಡುವೆ ಅಂದಿನ ಸಂದರ್ಶನ ಮಾತ್ರ ಅಪೂರ್ಣವಾಗಿಯೇ ಉಳಿದು ಹೋಗಿತ್ತು. ಈ ಅಪೂರ್ಣ ಸಂದರ್ಶನ ಪೂರ್ಣಗೊಳಿಸುವ ಪ್ರಯತ್ನ ಮಾತ್ರ ಮುಂದವರೆಯುತ್ತಲೇ ಇತ್ತು. ಸ್ನೇಹಾ ಪ್ರತೀಕಗೆ ಸಂದರ್ಶನ ಪೂರ್ಣಗೊಳಿಸಿ ಕೊಡುವಂತೆ ಆಹ್ವಾನ ನೀಡುತ್ತಲೇ ಇದ್ದಳು. ಈ ಸಂಬಂಧ ಅವರು ಸೇರುತ್ತಿದ್ದರು ಆದರೆ ಸಂದರ್ಶನ ಮಾತ್ರ ಪ್ರತಿಬಾರಿಯೂ ಅಪೂರ್ಣವಾಗಿಯೇ ಉಳಿಯುತ್ತಿತ್ತು. ಇದಕ್ಕಿದ್ದಂತೆ ಒಂದು ದಿನ ಸ್ನೇಹಾಳ ಪತಿ ಅಭಿಷೇಕ ಸತ್ತು ಸುದ್ದಿ ಹರ್ಷದ ಹೊನಲಾಗಿ ಬಂದಿತ್ತು.

‘ಹೃದಯಾಘಾತವೇ?’
“ಅಲ್ಲ…”
“ಅಪಘಾತವೇ?”
“ಆಕಸ್ಮಿಕ ಸಾವೇ?”
“ಅಲ್ಲ, ಅವನು ಸಾವು ಆಕಸ್ಮಿಕವಲ್ಲ”
“ಅಂದ್ರೇ ಅವನು ಸಾಯುವುದು ನಿನಗೆ ತಿಳಿದಿತ್ತೇ?”
“ಹೌದು ಅವನು ಸಾವು ನಿರೀಕ್ಷತವೇ ಆಗಿತ್ತು”
“ಅವನು ಸಾವು ನಿನಗ್ಹೇಗೆ ತಿಳದಿತ್ತು?”
“ಈ ಹಿಂದೆ ನೀನು ನನಗೊಂದು ಪ್ರಶ್ನೆ ಮಾಡಿದ್ದೆ, ನೆನಪಿದೆಯೇ”
ಎಂದಳು.
“ಹೌದು… ನೀನೂ ಅಲ್ಲಿಗೇ ಹೋಗಿ ಯಾಕಿರಬಾರದು ಅಂತಾ ಪ್ರಶ್ನಿಸಿದ್ದೆ”
“ಅದನ್ನು ನಾನು ಸಮಯ ಬಂದಾಗ ಹೇಳುತ್ತೇನೆ ಎಂದಿದ್ದೆ”
“ನಿಜ”
“ಬಹುಶಃ ಆ ಸಮಯ ಈಗ ಬಂದಂತಿದೆ.” ಎಂದು ಹೇಳಲಾರಂಭಿಸಿದಳು.

ಸ್ನೇಹಾಳ ಪ್ರಕಾರ ಸ್ನೇಹಾಳ ಮದುವೆ ಒಂದು ಮದುವೆಯೇ ಅಲ್ಲ. ತನ್ನ ತಂದೆತಾಯಿ ಒತ್ತಾಯಕ್ಕೆ ಅವನು ಸ್ನೇಹಾಳನ್ನು ಮದುವೆಯಾಗಿದ್ದ, ಹಾಗೇ ಸ್ನೇಹ ಸಹ ತಾನು ಪ್ರೀತಿಸಿದ ಹುಡ್ಗನ್ನ ಬಿಟ್ಟು ಅಭಿಷೇಕನ್ನ ಮದ್ವೆಯಾಗಿದ್ದಳು ಕೆಲವೇ ದಿನಗಳಲ್ಲಿ ಆತನಿಗರ ಎಚ್.ಐ.ವ್ಹಿ ಸೋಂಕು ಇರುವ ಬಗ್ಗೆ ಆತ ಹೇಳಿಕೊಂಡಾಗಲೇ ಸ್ನೇಹಾಳ ಪಾಲಿಗೆ ಹೆಣವಾಗಿದ್ದ. ಮದ್ವೆ ನಂತರ ಸೊಂಕು ತಗಲಿಸುವ ಮುಂಚೆಯೇ ಎಲ್ಲವನ್ನು ಹೇಳಿ ಉಪಕಾರ ಮಾಡುವದರ ಜೊತೆಗೆ ಒಂದು ಮುಗ್ಧ ಅನಾಯಕ ಹೆಣ್ಣನ್ನು ಜೀವಂತ ಶವವಾಗಿಸಿ ಬಿಟ್ಟಿದ್ದ. ತಾನು ಈ ಭೂಮಿಗೆ ಕೆಲವೇ ದಿನದ ಅತಿಥಿ ಎಂದು ಹೇಳಿ ಸಾಯುವರಿಗೂ ತನ್ನ ಪತ್ನಿಯಾಗಿ ನಾಟಕವಾಡಲು ವಿನಂತಿಸಿದ್ದ… ಅದಕ್ಕಾಗಿ ಆತ ಯಾವುದೇ ಬೆಲೆ ತೆರಲು ಸಿದ್ದನಾಗಿದ್ದ. ಅವನ ಸಾವಿನ ನಂತರ ಅವಳು ಅವನ ಕೋಟಿ ಕೋಟಿಗಳ ಬೆಲೆಬಾಳುವ ಆಸ್ತಿಗೆ ಒಡತಿ ಅಗವಳಿದ್ದಳು. ಹೀಗಾಗಿ ಅವಳು ಅನಿವಾರ್ಯವಾಗಿ ಈ ಸುಳ್ಳ ಸಂಬಂಧದಲ್ಲಿ ಇದ್ದರೂ ತನ್ನ ಒಂಟಿತನದ ನಡುವೆಯೂ ಪತ್ರಕರ್ತೆಯಾಗಿ ಸಮಾಜಮುಖಿಯಾಗಿದ್ದಳು. ಅವಳ ಕತೆ ಕೇಳಿ ಅವಳನ್ನು ಸಂತೈಸಿ, ಹೊರ ನಡೆದ ಪ್ರತೀಕ ಹಲವು ದಿನಗಳು ಕಳೆದರೂ ಸ್ನೇಹಾಳ ಮನೆಯತ್ತ ಹೊರಳಿಯೂ ನೋಡಲಿಲ್ಲ. ಈ ನಡುವೆ ಅವನಿಗೆ ಹಲವಾರು ಸಂದೇಹಗಳು ಅಭಿಷೇಕನ ಮುಖಾಂತರ ಸ್ನೇಹಾಳಿಗೂ ಆ ಸೋಂಕು ಇರುಬಹುದೇ? ಇಷ್ಟು ವರ್ಷಗಳಲ್ಲಿ ಅವರಿಬ್ಬರೂ ಕೂಡಿರಲಾರರೇ?…. ಮದುವೆ ನಂತರ ಮೊದಲ ರಾತ್ರಿಯೂ ಆಗಿರಲಿಲ್ಲವೇ..?!! ಆಗಿದ್ದರೆ ಅವಳ ಮುಖಾಂತರ ಆ ಸೋಂಕು? ಹೀಗೆ ನೂರಾರು ಪ್ರಶ್ನೆಗಳು ಪ್ರತೀಕನಲ್ಲಿ ಆತಂಕ ಮೂಡಿಸಿದವು. ಒಂದು ವೇಳೆ ತನಗೂ ಸೋಂಕು ಬಂದರೆ ತನ್ನ ಹೆಂಡ್ತಿ-ಮಕ್ಕಳ ಗತಿ? ಎನ್ನುವ ಮುಖ್ಯವಾದ ಪ್ರಶ್ನೆ ಅವನಿಗೆ ಚಿಂತೆಗೆ ನೂಕಿತು. ಸೋಂಕು ಅವಳಿಗೂ ಇದೆಯೇ ಕೇಳಿ ತಿಳಿದುಕೊಳ್ಳಲು ಸಂದೇಹಗಳನ್ನು ನಿವಾರಿಸಿಕೊಳ್ಳಲೆಂದು ಒಂದು ದಿನ ಅವಳಿಗೆ ಭೇಟಿಯಾದ.“ನೀವೇನು ಹೆದರಬೇಕಿಲ್ಲ. ನೀವು ಅಂದ್ಕೊಂಡಂತೆ ನನಗೆ ಸೋಂಕು ಇಲ್ಲ.. ಏಕೆಂದರೆ ಸೋಂಕು ಇರುವ ಅಭೀಷಕನಿಗೆ ಮದುವೆ ಮುಂಚೆಯೇ ಗೊತ್ತಿರುವುದರಿಂದ ಅವರು ನನ್ನ ಜತೆ ಸಂಪರ್ಕ ಮಾಡಿಲ್ಲ…ನನ್ನತ್ತ ಹೊರಳಿಯೂ ನೋಡಿಲ್ಲ. ಹಾಗಾಗಿದ್ದರೆ ನಿಮ್ಮನ್ನು ಪ್ರೀತಿಸಲು ನನಗೆ ಧೈರ್ಯ, ಯಾವನೈತಿಕತೆ ಇರುತ್ತಿತ್ತು? ಬೇಕಾದರೆ ಒಮ್ಮೆ ರಕ್ತ ತಪಾಸಣೆ ಮಾಡಿಸಿ ನೋಡಿ ಎಂದಳು. ಅವಳ ಮಾತಿನಿಂದ ನಂಬಿಕೆ ಬಂದರು ಒಳಗೊಳಗೆ ತಳಮಳ ಇದ್ದೇ ಇತ್ತು. ಅವಳು ನಂಬಿಸಲು ಪ್ರಯತ್ನಿಸುತ್ತಿದ್ದಳು.

“ಮೊದಲ ರಾತ್ರಿಯೇ ಅವನು ಎಲ್ಲ ಸತ್ಯವನ್ನು ಬಿಚ್ಚಿಟ್ಟಿದ್ದ … ಆತ ಎಂಥವನಿದ್ದರೂ ಈ ಒಂದು ಸತ್ಯದ ಕಾರಣಕ್ಕೆ ನಾನು ಅವನನ್ನು ಮೆಚ್ಚಲೇ ಬೇಕು. .. ಆತ ಎಂದಿಗೂ ತನ್ನನ್ನು ಬಯಸಲಿಲ್ಲ..ಸೀತೆಯನ್ನು ಹೊತ್ತುಯ್ದ ರಾವಣನಂತೆ ..” ಮುಂದುವರೆದು ಸ್ನೇಹಾ ಹೇಳಿದಳು-
“ಆಸ್ತಿ ಆಸೆಗೆ ಇಷ್ಟು ದಿನ ಈ ಬಂಧನದಲ್ಲಿ ಇದ್ದೆ. ಹಾಂ ಈ ಸುಳ್ಳು ಸಂಬಂಧದಿಂದ ನನಗೀಗ ಮುಕ್ತಿ ದೊರಕಿದೆ. … ” ಎಂದು ನಿಟ್ಟುಸಿರು ಬಿಟ್ಟಳು.
“ಹಾಗಿದ್ದರೆ… ಇನ್ಮೇಲೆ ನೀನು ಇನ್ನೊಂದು ವಿವಾಹವಾಗಿ ಹಾಯಾಗಿರಬಹುದು ಎಂದು ಪ್ರತೀಕ ಹೇಳಿದಾಗ ಅವಳು ಮನಸ್ಸು ಬಿಚ್ಚಿ ನಕ್ಕಳು, ಆನಂದಭಾಷ್ಪ ಧಾರೆಯಾಯ್ತು.

ಅವಳು ಅವನೆದೆಗೆ ಒರಗಿದಳು. ಇಬ್ಬರ ಸ್ನೇಹ ಎರಡ್ಮೂರು ವರ್ಷಗಳವರೆಗೆ ಹೀಗೇ ಮುಂದುವರೆಯಿತು. ದಿನಗಳು ಉಳಿದಂತೆ ಇಬ್ಬರ ಸಂಬಂಧವೂ ಗಾಢವಾಗುತ್ತ ಸಾಗಿತು. ಸ್ನೇಹಾಳಾದರೂ ಒಂದು ಕ್ಷಣವೂ ಅವನನ್ನು ಬಿಟ್ಟಿರಲಾರದಷ್ಟೂ ಹುಚ್ಚಿಯಾದಳು. ಬೆಳಗಿಂದ ಸಂಜೆಯವರಿಗೆ ಅವನನ್ನು ಫೋನು ಮಾಡುವುದು….ಎಲ್ಲೇ ಇದ್ದರೂ ಎಂಥ ಕೆಲಸವಿದ್ದರೂ ಬಿಟ್ಟು ಬರಲೇ ಬೇಕೆಂದು ಒತ್ತಾಯಿಸುತ್ತಿದ್ದಳು. ಬರಬರುತ್ತಾ ಅವಳ ಈ ಉಪಟಳ ಪ್ರತೀಕನಗೆ ಅಪಥ್ಯವಾಗಲಾರಂಭಿಸಿತು…ಅವಳ ಸ್ನೇಹವೀಗ ಕೊರಳಿಗೆ ಕುಣಿಕೆಯಾಗಲಾರಂಭಿಸಿತು. ಹೀಗಾಗಿ ಅವನು ತನ್ನ ಮತ್ತು ಸ್ನೇಹಾಳ ನಡುವಿನ ಅಂತರವನ್ನು ವಿಸ್ತರಿಸಲಾರಂಭಿಸಿದ ಏನೇನೋ ನೆಪವೊಡ್ಡಿ ಅವಳಿಂದ ತಪ್ಪಿಸಿಕೊಳ್ಳಲಾರಂಭಿಸಿದ. ಇದೇ ಕಾರಣಕ್ಕೆ ಅವನು ಮಾನಸಿಕ ಒತ್ತಡಕ್ಕೊಳಗಾಗಿ ಮನೆಯಲ್ಲೂ ಅನ್ಯಮನಸ್ಕಳಂತೆ ಇರಲು ಆರಂಭಿಸಿದ….ಅವಳು ಸಹ ಮಾನಸಿಕ ರೋಗಿಯಂತಾದಳು. ಬದಲಾದ ಈ ವರ್ತನೆಗಳಿಂದ ಇಬ್ಬರ ನಡುವೆ ಸಣ್ಣ ಪುಟ್ಟ ಜಗಳಗಳು ಆರಂಭವಾದವು. ಸಾಮಾಜಿಕ ಹಾಗು ಕೌಟುಂಬಿಕ ಜವಾಬ್ದಾರಿಗಳ ನಡುವೆ ಸ್ನೇಹಾಳನ್ನು ನಿರ್ವಹಿಸುವದು ತುಂಬಾ ಕಷ್ಟವಾಗತೊಡಗಿತು. ಅವಳಿಂದ ದೂರವಾಗಲು ಪ್ರಯತ್ನಿಸಿದಷ್ಟು ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತಿತ್ತು.

ಒಮೊಮ್ಮೆ ಆತ್ಮಹತ್ಯ ಮಾಡಿಕೊಳ್ಳುವುದಾಗಿ ಹೆದರಿಸುತ್ತಿದ್ದಳು. ಇವನು ಅಲ್ಲಿಗೆ ಹೋಗುವುದು ತಪ್ಪಿಸಿದರೆ ಹೆಚ್ಚು ಕುಡಿಯುತ್ತಿದ್ದಳು. ಹೀಗಾಗಿ ಪ್ರತೀಕ ಚಕ್ರವ್ಯೂಹದಲ್ಲಿ ಸಿಲುಕಿದಂತವನಾಗಿದ್ದ. ತನ್ನ ಮತ್ತು ಸ್ನೇಹಾಳ ನಡುವೆ ಇರುವ ಸಂಬಂಧ ತನ್ನ ವೈಯಕ್ತಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಈ ಒತ್ತಡಗಳಿಂದ ಸ್ವಲ್ಪಾದರೂ ಮುಕ್ತನಾಗಬೇಕೆಂದು ನಿರ್ಧರಿಸಿ ಮನಸಿನ ನೆಮ್ಮದಿಗೊಸ್ಕರ ಒಂದೆರಡು ದಿನ ಊರು ಬಿಟ್ಟು ಎಲ್ಲಿಯಾದರೂ ಹೋಗಬೇಕು ಎಂದು ತೀರ್ಮಾನಿಸಿ ಎಲ್ಲಿಗೆ ಹೋಗುವುದು ಎಂದು ಯೋಚಿಸಿವಾಗ ತನ್ನ ಪ್ರಸಿದ್ಧಿ ತಂದು ಕೊಟ್ಟ ಆ ಊರಿಗೆ ಮತ್ತೊಮ್ಮೆ ಹೋಗಿ ಬರಬೇಕೆಂದು ಆಸೆಯಾಯ್ತು. ಆ ಜನರ ಬಳಿ ಹೋಗಿ ಕೊನೆಬಾರಿ ಧನ್ಯವಾದಗಳು ಅರ್ಪಿಸಿ ಬಂದರೆ ಸ್ವಲ್ಪ ಸಮಾಧಾನಸಿಗಬಹುದು ಅಂದುಕೊಂಡು ಮನೆಯಲ್ಲಿ ಅಪ್ಪಣೆ ಪಡೆದು ಹೊರಟೇಬಿಟ್ಟ. ಆದರೆ ಸ್ನೇಹಾಳ ಅನುಮತಿ ಪಡೆಯದೇ ಎಲ್ಲಿಗೂ ಹೋಗುವಂತಿರಲಿಲ್ಲ. ಸ್ನೇಹಾಳ ಹತ್ತಿರ ಹೋಗಿ ಅನುಮತಿ ಕೇಳಿದಾಗ-
“ಇಲ್ಲ ನೀನು ಎಲ್ಲಿಗೂ ಹೋಗುವ ಹಾಗಿಲ್ಲ… ನನ್ನನ್ನು ಬಿಟ್ಟು” ಎಂದು ತಕರಾರು ತೆಗೆದಳು.
“ಹೊಸ ಕಥಾ ವಸ್ತುವಿನ ಹುಡುಕಾಟದಲ್ಲಿ ನಾನು
ಹೋಗಲೇಬೇಕು, ಮುಂದಿನ ತಿಂಗಳಿಗೆ ಪ್ರಕಾಶಕರಿಗೆ
ಒಂದು ಕಾದಂಬರಿ ಕೊಡಲೇಬೇಕಾಗಿದೆ ಎಂದು ಹೇಳಿದಾಗ-
“ನನ್ನ ಜೀವನವೇ ಒಂದು ಕಾದಂಬರಿ, ಅದನ್ನೆ ಬರೆದು ಕೊಡು, ಅಲ್ಲಿಗೆ ಹೋಗಿ ಏನು ಮಾಡುದಿದೆ” ಎಂದಳು. ಮಾತಿಗೆ ಮಾತು ಬೆಳೆದು ದೊಡ್ಡ ಜಗಳವೇ ಆಯಿತು
“ನೀನು ನನ್ನ ಮಾತು ಮೀರಿಹೋದರೆ… ನೀನು
ಮರಳಿ ಬರುವುದರೊಳಗಾಗಿ ದೇವರಾಣೆ ನನ್ನ ಕಥೆ ಮುಗಿದು ಹೋಗಿರುತ್ತೆ” ಎಂದು ಹೆದರಿಸಿದಾಗ-
“ನೀನು ಹೇಳಿದಂತೆ ನನಗೆ ಕೇಳಿಕೊಂಡಿರೊಕ್ಕಾಗಲ್ಲ .. ಏನಾದರೂ ಮಾಡಿಕೋ” ಎಂದು ಹೇಳಿದವನೇ ಸ್ನೇಹಾಳ ಮನೆಯಿಂದ ಪ್ರತೀಕ ಹೊರನಡೆದ. ಅವಳು ಹುಚ್ಚಿಯಂತೆ ಮೈಮೇಲಿನ ಬಟ್ಟೆಯಲ್ಲ ಹರಿದುಕೊಂಡು ಅರಚಲು ಆರಂಭಿಸಿದಳು. ಆದರೆ ಅವನು ಅದನ್ನು ತನ್ನ ಕಿವಿಗೆ ಹಾಕಿಕೊಳ್ಳದೆ ನಡದೇ ಬಿಟ್ಟ.

-ಅಶ್ಫಾಕ್ ಪೀರಜಾದೆ


ಮುಂದುವರೆಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
1
0
Would love your thoughts, please comment.x
()
x