ಬದಲಾಗುವ ಬಣ್ಣಗಳು (ಕೊನೆಯ ಭಾಗ): ಅಶ್ಫಾಕ್ ಪೀರಜಾದೆ

ಇಲ್ಲಿಯವರೆಗೆ

-7 –
ಪ್ರತೀಕ ಮೊದಲು ಬಂದವನೇ ಚೇತನನ್ನು ಭೇಟಿಯಾದ. ಚೇತನ ತನ್ನ ಹೆಂಡ್ತಿ ಮಕ್ಕಳನ್ನು ತೋರಿಸಿ ತಾನೀಗ ಸಂಸಾರ ಸಮೇತ ಹಾಯಾಗಿರುವುದಾಗಿ ಹೇಳಿದ “ಅವಳ ಸಂಗ ಬಿಟ್ಟು ಬಿಟ್ಟಿದ್ದೇನೆ. ಆದರೂ ಒಮ್ಮೊಮ್ಮೆ ಅವಳು ನೆನಪಾಗಿ ಕಾಡುತ್ತಾಳೆ ಒಂದೆರಡು ಪೆಗ್ಗು ಹಾಕಿ ಮಲಗಿ ಬಿಡುತ್ತೇನೆ” ಎಂದು ಹೇಳಿದಾಗ ಪ್ರತೀಕನಿಗೆ ಆಶ್ಚರ್ಯವಾಗುತ್ತದೆ.

“ಗಂಡ ಹೆಂಡತಿಗಿಂತ ಹೆಚ್ಚಾಗಿ ಇದ್ದವರು ನೀವು… ಇಬ್ಬರೂ ಇಷ್ಟು ಸುಲಭವಾಗಿ ಹೇಗೆ ಅಗಲಿದಿರಿ..?” ಎಂದು ಪ್ರತೀಕ ಪ್ರಶ್ನೆಸಿದಾಗ ಏನು ಮಾಡಲಿ ಅನಿವಾರ್ಯವಾಯಿತು. ಈ ಮದುವೆ ಸಂಬಂಧ ಒಪ್ಪಿಕೊಳ್ಳಲೇಬೇಕಾಯಿತು. ಕಾವೇರಿಯ ತ್ಯಾಗ ತಾಳ್ಮೆ ಕೊನೆಗೂ ಗೆದ್ದೀತು. ಈ ನಡುವೆ ತಂದೆ-ತಾಯಿ ಕೂಡ ನನ್ನಿಂದಾಗಿ ಬೇಸತ್ತು ಸತ್ತು ಹೋದರು. ನಂತರ ಮನೆ ಜವಾಬ್ದಾರಿಯಲ್ಲ ನನ್ನ ಮೇಲೆ ಬಿತ್ತು.ಈ ನಡುವೆ ಮಗುವಾಯ್ತು. ಹೀಗಾಗಿ ನಾನು ಅವಳನ್ನು ಬಿಡುವುದು ಅನಿವಾರ್ಯವಾಯಿತು. ಈ ನಡುವೆ ನಿನಗೆ ಒಳ್ಳೆಯದಾಗುವುದಾದರೆ ನಾನು ಬಿಟ್ಟು ಇರಬಲ್ಲೆ ಎಂದು ಹೇಳುತ್ತಿದ್ದ ಪವಿತ್ರೆಯ ಇನ್ನೊಂದು ಮುಖ ಬಯಲಾಯಿತು. ಇಷ್ಟು ದಿನ ಜೊತೆಗಿದ್ದು ಈಗ ಬಿಡುವುದು ಸಾಧ್ಯವಿಲ್ಲವೆಂದು ಹಠ ಹಿಡಿದಳು. ಈ ಹೆಣ್ಣಿನ ದ್ವಿಮುಖ ನೀತಿ ಸ್ವಾರ್ಥವೆಲ್ಲ ತಿಳಿದು ಹೋಗಿತ್ತು. ಅವಳು ನನಗೆ ಬಿಡುವುದಿಲ್ಲವೆಂದು ಹೆದರಿಸಿದಳು…. ನನ್ನ ಸಂಬಂಧ ತೆರೆದ ಪುಸ್ತಕವಾಗಿದ್ದರಿಂದ ನಾನು ಅವಳ ಬ್ಲ್ಯಾಕ್‍ಮೇಲೆಗೆ ಹೆದರಬೇಕಾಗಿರಲಿಲ್ಲ. ಆದರೆ ಅವಳ ಒತ್ತಾಯದ ಹಿಂದೆ ಯಾವುದೋ ಸ್ವಾರ್ಥ ಅಡಗಿದೆ ಅಂತಾ ನನಗೆ ಗೊತ್ತಿತ್ತು. ಅವಳು ತನಗೆ ಬಿಡಬೇಕಾದರೆ ಹಣ ಕೊಡಬೇಕೆಂದಳು. ಕಾವೇರಿ ಕೂಡ ಅವಳೆಷ್ಟು ಬೇಡ್ತಾಳೊ ಕೊಟ್ಟು ಬಿಡಿ ಎಂದಳು. ಇವೆಲ್ಲಕ್ಕಿಂತ ಮುಖ್ಯ ನನಗೆ ಮಾನಸಿಕ ನೆಮ್ಮದಿ ಬೇಕಾಗಿತ್ತು. ಅವಳು ಇನ್ನೊಮ್ಮೆ ತನ್ನ ತಂಟೆಗೆ ಬರುವುದಿಲ್ಲ ಎಂದು ಕರಾರು ಮಾಡಿಕೊಂಡ ಸಾಕಷ್ಟು ದುಡ್ಡು ಕೊಟ್ಟು ಅವಳಿಂದ ಮುಕ್ತನಾದೆ ಎಂದು ಹೇಳುವಾಗ ಅವನು ಜೈಲಿನಿಂದ ಬಿಡುಗಡೆಯಾದ ಖೈದಿಯಂತೆ ಕಂಡ, ಈ ಬಣ್ಣ ಬದಲಿಸುವ ಸಂಬಂಧಗಳು ತೀರಾ ವಿಚಿತ್ರವೆನಿಸಿದವು ಪ್ರತೀಕನಿಗೆ.

ಒಂದು ದಿನ ಅಲ್ಲೆ ಚೇತನನ ಮನೆಯಲ್ಲಿ ಉಳಿದಕೊಂಡ ಅವನ ಮುಂದೆ ತನ್ನ ಕಥೆ ಹೇಳಿ ಕೊಂಡರೆ ಏನಾದರು ಪರಿಹಾರ ಸಿಗಬಹುದು ಎಂದು ಅವಕಾಶ ನೋಡಿ ಚೇತನನ್ನನ್ನು ಮಾತಿಗೆಳೆದ.
“ನಿನ್ನ ಹಾಗೇ ನಾನು ಒಂದು ಹೆಣ್ಣಿನ ಕಪಿಮುಷ್ಟಿಯಲ್ಲಿ ಸಿಕ್ಕ ಹಾಕೊಂಡು ಒದ್ದಾಡ್ತಾ ಇದ್ದೇನೆ. ಅವಳಿಂದ ಹೇಗೆ ಹೋರಬರಬೇಕೆಂದು ತಿಳಿತ್ತಿಲ್ಲ ” ಆರಂಭ ಇಟ್ಟುಕೊಂಡ. ಚೇತನನ ಮಾತು ಕೇಳಿ ಕರೇಂಟ್ ಶಾಕ್ ಹೊಡೆಸಿಕೊಂಡವನಂತೆ ತಕ್ಷಣಕ್ಕೆ ಪ್ರತಿಕ್ರಿಯಿಸಿದ್ದ ಪ್ರತೀಕ.

“ನಿನ್ನ ಜೀವನದಲ್ಲಿ ಇನ್ನೊಂದು ಹೆಣ್ಣೇ? ಶ್ರೀರಾಮಚಂದ್ರನ ಸೀತೆಯನ್ನು ಬಿಟ್ಟು ಇನ್ನೊಂದು ಹೆಣ್ಣಿನ ಹೋಗ್ತಾನೆ ಎಂದರೆ ನಂಬಲು ಸಾಧ್ಯವೇ ಇಲ್ಲ, ಇದೆಲ್ಲ ಕಟ್ಟು ಕತೆ ಕಥೆಗಾರರು ಕಲ್ಪನೆಯಲ್ಲಿ ಇನ್ನೊಂದು ಕತೆ ಕಟ್ಟುತ್ತಿರುವಂತಿದೆ” ಎಂದು ಚೇತನನ ಮಾತು ಸಾರಾಸಗಟಾಗಿ ತಿರಸ್ಕರಿಸಲು ಪ್ರಯತ್ನಿಸಿದ. ” ಇದು ಸತ್ಯ ನೀನು ನಂಬಲೇಬೇಕು, ನನ್ನ ಜೀವನದಲ್ಲಿ ಹೀಗೆ ಬಿರುಗಾಳಿ ಎಬ್ಬಿಸಿದವಳ ಹೆಸರು ಸ್ನೇಹ… ” ಎಂದು ನಡೆದ ಕತೆಯನ್ನೆಲ್ಲ ಹೇಳಿದ . ಚೇತನ್ ಹಣೆಗೆ ಕೈಹಚ್ಚಿಕೊಂಡು ಚಿಂತಾಕ್ರಾಂತನಾಗಿ ಕುಳಿತು ಬಿಟ್ಟ.

“ನಿನ್ನ ಹಾಗೇ ನಾನು ಈಗ ಎರಡು ದೋಣಿಗಳಲ್ಲಿ ಪಯಣಿಸುತ್ತಿದ್ದೇನೆ. ದಡ ತಲ್ಪುದು ಹೇಗೆ. ಪವಿತ್ರಳಂತೆ ದುಡ್ಡು ಕೊಟ್ಟು ಸರಿಸಬಹುದಾದ ಹೆಣ್ಣು ಅದಲ್ಲ. ಕೊಟ್ಯಾಂತರ ಆಸ್ತಿಯ ಏಕೈಕ ಒಡತಿ ಅವಳು. ಅವಳಿಗೆ ದುಡ್ಡಿನ ಅವಶ್ಯಕತೆಯಿಲ್ಲ. ಆದರೆ ನನ್ನನು ಬಿಟ್ಟು ಬದುಕುದಿಲ್ಲ ಎನ್ನುತ್ತಾಳೆ, ಆ ಕಡೆ ಹೆಂಡ್ತಿ ಮಕ್ಕಳು ಈ ಕಡೆ ಇವಳು ಏನು ಮಾಡಲಿ ತಿಳಿಯದಾಗಿದೆ” ಎಂದು ತನ್ನ ಅಸಹಾಯಕತೆಯನ್ನು ತೂಡಿಕೊಂಡ.

” ಕತೆ ಬರೆಯೋ ಕತೆಗಾರನಿಗೇ ತನ್ನ ಕತೆಯ ಅಂತ್ಯಗೊತ್ತಿಲ್ಲ ” ಎಂದು ವಿಚಿತ್ರವಾಗಿ ನಕ್ಕ. ಅವನ ನಗುವಿನಲ್ಲಿ ವಿಷಾಧ ವಿನೋದ ತನ್ನ ಅನುಭದ ಯಾತನೆ ನೆನಪು ಪ್ರೇಮ ವಿರಹ ಎಲ್ಲ ಸೇರಿತ್ತು. ಕೊನೆಗೆ ಎನೋ ಹೊಳೆದಂತೆ ಆಗಿ –
“ನಿನ್ನ ಜೊತೆ ನಾನು ಬೆಂಗಳೂರಿಗೆ ಬರುತ್ತೇನೆ. ಒಂದಿಷ್ಟ ದಿನ ಅಲ್ಲಿದ್ದು, ಸ್ನೇಹಾಳಿಗೆ ತಿಳಿಹೇಳಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದಾಗ ಚೇತನ ನಿಟ್ಟುಸಿರು ಬಿಟ್ಟಿದ್ದ. ತನ್ನ ಎದೆಯ ಮೇಲಿನ ದೊಡ್ಡ ಭಾರ ಇಳಿದಂತೆ ಹಗುರಾಗಿದ್ದ. ಮಾರನೆ ದಿನ ಮುಂಜಾನೆ ಪವಿತ್ರೆಯನ್ನು ಕಾಣುವಾಸೆಯಿಂದ ಅವಳ ಮನೆಯತ್ತ ನಡೆದ. ಪವಿತ್ರ ಪ್ರತೀಕನನ್ನು ಸ್ವಾಗತಿಸಿದಳು. ಪ್ರತೀಕ ಅದೇ ತಾನು ಮಲಗುತ್ತಿದ್ದ ಮಂಚದ ಮೇಲೆ ಆಸೀನನಾದ. ಗೋಡೆಯ ಮೇಲಿದ್ದ ಯೇಸು ಚಿತ್ರ ಮಾಯವಾಗಿತ್ತು. ಅದು ಎಲ್ಲಿ ಎಂದು ಕೇಳಿದಾಗ ಪವಿತ್ರ ಭಾವದ್ವೇಗಕ್ಕೆ ಒಳಗಾದವರಂತೆ ಹೇಳಿದಳು.

“ಇಲ್ಲ ನನ್ನ ಜೀವನದಲ್ಲಿ ಯೇಸು ಮಸಿಹಾ ಬರಲೇ ಇಲ್ಲ. ಬಂದು ನನ್ನ ಜೀವನ ಉದ್ಧರಿಸಲು ಅವನಿಂದ ಸಾಧ್ಯವಾಗಲೇ ಇಲ್ಲ, ಅಂದಾಗ ಅವನ ಚಿತ್ರ ಇಟ್ಟುಕೊಂಡು ಏನು ಮಾಡಲಿ ಅದಕ್ಕಾಗಿ ನಾನನದನ್ನು ತೆಗೆದು ಹಾಕಿದೆ. ನಾನಿಷ್ಟು ದಿನ ಮಾಡಿದ ಸೇವೆ ತ್ಯಾಗ ತಪಸ್ಸು ಆರಾಧಾನೆಯಲ್ಲ ವ್ಯರ್ಥವಾಯ್ತು… ಯೇಸು ಮೇಲಿನ ನಂಬಿಕೇ ಹೊರಟು ಹೋಗಿದೆ,”
ಚೇತನನ್ನು ಬಿಡಬೇಕಾದರೆ ದುಡ್ಡು ತೆಗೆದುಕೊಂಡೆಯಂತೆ?,”
ಎಂದು ಪ್ರಶ್ನಿಸಿದಾಗ

“ನಾನು ಅವನನ್ನ ನಂಬಿದ್ದೆ, ಹೇಗಾದ್ರು ಸರಿ ಅವನು ನನ್ನ ಜೀವನದಲ್ಲಿ ಇರತಾನೆ ಅಂದುಕೊಂಡಿದ್ದೆ. ಆದರೆ ಹೀಗೆ ಬಿಟ್ಟು ಹೋಗ್ತಾನೆ ಅನ್ಕೋಂಡಿರಲಿಲ್ಲ. ಇಂಥದರಲ್ಲಿ ನನ್ನ ಭವಿಷ್ಯದ ದೃಷ್ಟಿಯಿಂದ, ಜೀವನದ ಭದ್ರತೆಗೆ ಒಂದಿಷ್ಟು ದುಡ್ಡು ತಗೆದುಕೊಂಡರೆ ತಪ್ಪೇನು? !” ಎಂದು ಹೇಳುವಾಗ ಅವಳ ಮುಖದಲ್ಲಿ ಗಾಢವಾದ ವಿಷಾಧ ಕಣ್ಣಲ್ಲಿ ನೀರು ಮಂಜು ಗಟ್ಟಿತ್ತು. ಚೇತನ ಮತ್ತು ಪವಿತ್ರಳ ಕಥೆ ಕೇಳಿದಾಗ ಕ್ಷಣ ಕ್ಷಣಕ್ಕೂ ಬಣ್ಣ ಬದಲಿಸೊ ಈ ಸಂಬಂಧಗಳೇ ತೀರ ವಿಚಿತ್ರ ಅನಿಸಿದವು ಪ್ರತೀಕನಿಗೆ. ಚೇತನ ಮತ್ತು ಪವಿತ್ರ ಈ ಇಬ್ಬರಲ್ಲಿ ಯಾರದು ತಪ್ಪು ಎಂದು ತೀರ್ಮಾನಿಸದವನಾದ. ಕೊನೆಗೆ ಬಂದೊದಗಿದ ಪರಿಸ್ಥಿತಿಗಳದೇ ತಪ್ಪು ಎನ್ನುವ ನಿರ್ಧಾರಕ್ಕೆ ಬಂದು ಬಿಟ್ಟಿದ್ದ. ಹೀಗೆ ಯೋಚಿಸುತ್ತಲೇ ಭಾರವಾದ ಮನಸ್ಸಿನಿಂದ ಚೇತನ್ನಿಗೆ ಕರೆದುಕೊಂಡು ಕಾರ್ ಬೆಂಗಳೂರಿನತ್ತ ಓಡಿಸಿದ.
ಕಾರಿನಲ್ಲಿ ತಪ್ಪು ಒಪ್ಪುಗಳ ಲೆಕ್ಕಾಚಾರ ನಡೆಯುತ್ತಲೇ ಇತ್ತು. ಮೊದಮೊದಲು ನಿಮ್ಮ ವೈವಾಹಿಕ ಜೀವನಕ್ಕೆ ಅಡ್ಡಿ ಮಾಡುವದಿಲ್ಲ ಎಂದು ಆಟ ಆರಂಭಿಸುವ ಹೆಣ್ಣು ಮುಂದೆ ಬ್ಲಾಕ್ ಮೇಲೆ ಮಾಡಲು ಏಕೇ ಆರಂಭಿಸುತ್ತಾಳೆ ಎಂದು ಚೇತನ ಕೇಳಿದಾಗ ಪ್ರತೀಕ ನಸು ನಕ್ಕು ಉತ್ತರಿಸುತ್ತಾನೆ. ” ಬಹುಶಃ ಇವರಿಗಾಗಿ ತನ್ನ ತನು ಮನ ಧನ ಸರ್ವಸ್ವವನ್ನೂ ಅರ್ಪಿಸಿದರು ಪ್ರಯೋಜನವಿಲ್ಲ ಕೊನೆಗವರಿಗೆ ಹೆಂಡ್ತಿ ಮಕ್ಕಳೇ ಆಗಬೇಕು ಎನ್ನುವ ಸತ್ಯ ಅರಿವಿಗೆ ಬಂದ ನಂತರವೇ ಅವರು ಬ್ಲಾಕ್ ಮೇಲ್ ಮಾಡಲು ಆರಂಭಿಸುತ್ತಾರೆ”

“ಆದರೆ ಅವರು ಮೊದಲು ಕೊಟ್ಟ ಮಾತು ಮರೆಯುತ್ತಾರಲ್ಲ!” ಎನ್ನುವ ಮಾತಿಗೆ ಹೌದು ಒಂದು ದಿನ ಇಂಥ ಸಂದಿಗ್ದ ಪರಿಸ್ಥಿತಿ ಬರಬಹುದೆಂದು ಅವರು ಭಾವಿಸಿರುವದಿಲ್ಲ. ಏನಾದರು ನಾವು ಅವರನ್ನು ಬಿಡುವದಿಲ್ಲ ಎಂದು ನಂಬಿರ್ತಾರೆ , ಆದರೆ ಕೊನೆಗೆ ತನ್ನ ಕುಟುಂಬವೇ ಮುಖ್ಯವಾಗುವ ಪುರಷನ ಮೇಲೆ ಸೇಡು ತೀರಿಸಿಕ್ಕೊಳ್ಳಲೆಂದು ಬೇರೆಬೇರೆ ಉಪಾಯ ಹುಡುಕ್ಕಾತ್ತಾರೆ…”

ಹೀಗೆ ಹಲವಾರು ಯೋಚ್ನೆಗಳು, ನೂರಾರು ಪ್ರಶ್ನೆಗಳು, ಸಾವಿರಾರು ತುಮುಲುಗಳು… ಗಾಡಿ ಓಡುತ್ತಲೇ ಇತ್ತು. ಬೆಂಗಳೂರು ಮಾತುಕತೆಯಲ್ಲಿ ಬೆಂಗಳೂರ ಬಂದಿದ್ದೆ ಗೊತ್ತಾಗಲಿಲ್ಲ. ಚುಮಚುಮ ಬೆಳಗು. ಸ್ನೇಹಾಳ ಜೊತೆ ಜಗಳಾಡಿ ಬಂದಿದ್ದೇನೆ ಮೊದಲು ಅಲ್ಲಿಗೆ ಹೋಗಿ ಮಾತಡಬೇಕು ಎಂದು ಪ್ರತೀಕ ಹೇಳಿದಾಗ ಸರಿ ಎನ್ನುತ್ತಾನೆ ಚೇತನ್. ಕೇಲವೇ ಸಮಯದಲ್ಲಿ ಅವಳ ಮನೆ ಮುಂದೆ ಕಾರು ನಿಲ್ಲಿಸಿದಾಗ ಅಲ್ಲಿ ಜನ ಜಾತ್ರೆ ಜಮಾಯಿಸಿದ್ದು ಕಂಡು ಪ್ರತೀಕ ಭಯಭೀತನದ. ಪೊಲೀಸರು ಕೂಡ ಅಲ್ಲಿ ನಿಂತಿದ್ದು ಅನಾಹುತ ಸಂಬಂಧವಿಸಿದಕ್ಕೆಸೂಚನೆಯಾಗಿತ್ತು. ಪ್ರತೀಕ ಚೇತನನೊಟ್ಟಿಗೆ ಒಳನಡೆದಾಗ ಎದುರಾದ ಇನಸ್ಪೆಕ್ಟರ್ ಅವನನ್ನು ಪರಿಚಯ ಹಿಡಿದು “ಬನ್ನಿ ಪ್ರತೀಕ ಸ್ನೇಹಾ ಮಾಡಿದ್ದ ನಿಮ್ಮ ಸಂದರ್ಶನ ನಾನು ಓದಿದ್ದೆ… ತುಂಬಾ ಆಳವಾದ ಚಿಂತನೆಯ ಸಂದರ್ಶನವದು.. ಆಕೆ ಒಬ್ಬ ದಿಟ್ಟ ಪರ್ತಕರ್ತೆ, ಆದರೆ ಹೀಗೆ ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು… ಗಂಡನ ಸಾವಿನ ನೋವು ಅರಗಿಸಿಕೊಳ್ಳಾರದೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ …” ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಸೂಸಾಯಿಡ್ ನೋಟ್ ಬೇರೆ ಬರೆದಿಟ್ಟು ವಿಷ ಸೇವಿಸಿದ್ದಾರೆ, ಸಾಯೋ ಮುಂಚೆ ಅವರು ಮಾಡಿಟ್ಟ ವಿಲ್ಲ ಪ್ರಕಾರ ಕೊಟ್ಯಾಂತರ ಮೌಲ್ಯದ ಆಸ್ತಿ ಆನಾಥ ಆಶ್ರಮಗಳಿಗೆ, ಶಾಲೆಕಾಲೇಜುಗಳಿಗೆ ಸೇರಬೇಕು” ಎಂದು ಇನ್ಸಪೆಕಟರ್ ಸ್ನೇಹಾ ಸಾವಿನ ವಿವರ ತಿಳಿಸಿದಾಗ ಪ್ರತೀಕನಿಗೆ ಕಾಲು ಕೆಳಗಿನ ಭೂಮಿ ಕುಸಿದಂತಾಗಿತ್ತು, ಹೃದಯ ವೇದನೆಯ ಕಡಲಾಗಿತ್ತು. ತಾನು ಆ ದಿನ ಆ ರೀತಿ ಹೊರಟು ಹೊಗಿರದಿದ್ದರೆ ಹೀಗಾಗುತ್ತಿರಲಿಲ್ಲವೇನು ಎಂದು ಅವನಿಗೆ ಅಪರಾಧ ಭಾವನೆ ಕಾಡದೇ ಇರಲಿಲ್ಲ.

ಆಗಿದ್ದಾಯಿತೆಂದು ಅಂತಿಮ ದರ್ಶನ ಪಡೆದುಕೊಂಡು ಬರೋಣ ಅಂನ್ಕೊಂಡು ಚೇತನ್ ಪ್ರತೀಕ ಇಬ್ಬರೂ ಒಳನಡೆದರು. ಅವಳ ಮನೆಯಲ್ಲೆ ಅವರ ಆಫೀಸನವರೊ ಯಾರೋ ಅಂತಿಮ ದರ್ಶನಕ್ಕೆ ಏರ್ಪಾಡು ಮಾಡಿದ್ದರು. ಈಗಾಲೇ ಜನ ಅಲ್ಲಿ ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದರು. ಕೊನೆ ಸಾರಿ ಮುಖ ದರ್ಶನ ಅಂದುಕೊಂಡ ಪ್ರತೀಕ ಧೈರ್ಯ ಮಾಡಿ ಮುಂದೆ ಹೋಗಿ ನೋಡಿದ, ದಃಖ ತಡೆದುಕೊಳ್ಳಲು ಆಗಲಿಲ್ಲ. ಕಣ್ಣೀರೊರೆಸುತ್ತ ಹಾಗೆ ಹಿಂದಕ್ಕೆ ಸರಿದ. ಅವನ ಹಿಂದೆ ನಿಂತಿದ್ದ ಚೇತನ್ ಅಂತಿಮ ದರ್ಶನಕ್ಕೆಂದು ಮುಂದಾದ. ಅವಳ ಮುಖ ನೋಡುತ್ತಿದ್ದಂತಯೇ ಧಿಡೀರಂತಾ ಎಲ್ಲಿಂದಲೋ ಬಂದ ಬರಸಿಡಿಲೊಂದು ಅವನ ಮೇಲೆ ಎರಗಿದಂತಶಯಿತು. ಅವನಿಗೇ ಅರಿವಿಲ್ಲದಂತೆ ಪ್ರಮಾ ಎಂಬ ಆರತನಾದ ಅವನ ಕಂಠದಿಂದ ಹೊರಹೊಮ್ಮಿತು. ಅದೇ ಕ್ಷಣ ಅವನು ಅಲ್ಲೇ ಕುಸಿದು ಕುಳಿತ.

– ಅಶ್ಫಾಕ್ ಪೀರಜಾದೆ


ಮುಗಿಯಿತು

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x