– 3 –
ತಿಂಗಳ ಬಳಿಕ ಪ್ರೇಮಾ ಮರಳಿ ಬಂದ ಸುದ್ದಿ ಕತ್ತಲೆ ಕವಿದ ಚೇತನನ ಮನಸ್ಸಿಗೆ ಸುರ್ಯೋದಯವಾಗಿತ್ತು. ತಿಂಗಳಿಂದ ಶೇವ್ ಕಾಣದ ಮುಖದ ತುಂಬ ಗಡ್ಡ ಮೀಸೆ… ಬಾಚನಿಗೆ ಕಾಣದ ತಲೆ… ಕೆದರಿದ ಕೂದಲು… ಮೈಮೇಲೆ ಕೊಳೆಯಾದ ಬಟ್ಟೆಗಳು… ಹಳ್ಳಿ ಹುಂಬನಂತೆ ಹುಚ್ಚನಂತೆ ತೋರುತ್ತಿದ್ದ. ಹಾಗೇ ಸೀದಾ ಪ್ರೇಮಾಳ ಮನೆಯತ್ತ ಹೆಜ್ಜೆ ಹಾಕಿದ್ದ. ಡೋರ ಮುಂದೆ ನಿಂತು ಬೆಲ್ ಮಾಡಿದ ಕೆಲವೇ ಕ್ಷಣಗಳಲ್ಲಿ ಪ್ರೇಮಾಳ ತಂದೆ ಬಾಗಿಲು ತೆರೆದು ಚೇತನನ ಸ್ಥಿತಿ ನೋಡಿ ಸ್ವಲ್ಪ ಗಾಬರಿಯಾದರು. ಏಕೆಂದರೆ ಮೊದಲಿನಿಂದಲೂ ಚೇತನ ಪ್ರೇಮಾಳ ಮುಖಾಂತರ ಪರಿಚಯವಾಗಿದ್ದವ. ಹೀಗಾಗಿ ಸುಧಾರಿಸಿಕೊಂಡು ಚೇತನನ್ನುಮನೆಯೊಳಗೆ ಸ್ವಾಗತಿಸಿದರು. ಚೇತನ ಎಂದಿನಂತೆ ಹೋಗಿ ಸೋಪಾದ ಮೇಲೆ ಆಸೀನನಾದಾಗ
“ನೋಡು… ಯಾರು ಬಂದಿದ್ದಾರೆ…” ಎಂದು ಪ್ರೇಮಾಳ ತಂದೆ ಕೂಗಿ ಹೇಳಿದಾಗ ತಾಯಿ ಬಂದು ನೋಡಿ
“ಪ್ರೇಮಾ… ಚೇತನ ಬಂದಿದಾನಮ್ಮಾ… ಟೀ ತಂದು ಕೊಡು” ಎಂದು ನಡಗುವ ಧ್ವನಿಯಲ್ಲಿ ಹೇಳಿದ್ದರು. ಚೇತನ ಪ್ರೇಮಾಳ ಮುಖ ಕಾಣುವ ತವಕದಲ್ಲಿ ಮೌನಿಯಾಗಿಯೇ ಕುಳಿತಿದ್ದ. ಕ್ಷಣಕ್ಷಣಕ್ಕೂ ಅವನ ರಕ್ತದ ಒತ್ತಡ ಹೃದಯ ಬಡಿತವೆಲ್ಲ ಹೆಚ್ಚುತ್ತ ಸಾಗಿತು. ಅಡುಗೆ ಮನೆಯಲ್ಲಿ ಚುರ್ರ್… ಎನ್ನುವ ಚಹಾ ಉಕ್ಕಿದ ಶಬ್ಧ..! ಹಿಂದೆಯೇ ಗೆಜ್ಜೆ ಸಪ್ಪಳ ಪ್ರೇಮಾ ಹತ್ತಿರವಾಗುತ್ತಿರುವ ಸೂಚನೆ ನೀಡುತ್ತಿತ್ತು. ಪ್ರೇಮಾ ಎದುರು ನಿಂತಾಗ ಏನು ಹೇಳಬೇಕು.? ಏನು ಕೇಳಬೇಕು?? ಅನಿವಾರ್ಯವೆನಿದ್ದರೂ ಹೇಳಿ ಹೋಗಬೇಕಾಗಿತ್ತು. ಹೀಗೆ ಹೇಳದೆ ಕೇಳದೆ ಯಾಕೆ ಹೋದೆ..! ನೀನು ನನ್ನ ಹೀಗೆ ಸತಾಯಿಸಿದ್ದು ಸರಿನಾ…!! ಮನಸಿನಲ್ಲಿ ಪ್ರಶ್ನೆಗಳ ಮಹಾಮಂಥನ ಮುಖ ಕೆಳಗೆ ಮಾಡಿ ನೆಲವನ್ನೇ ದಿಟ್ಟಿಸುತ್ತ ಯೋಚನಾ ಮಗ್ನನಾಗಿದ್ದ ಚೇತನನಿಗೆ ತೀರ ಹತ್ತಿರವಾದ ಗೆಜ್ಜೆ ಸಪ್ಪಳಕ್ಕೆ ಸ್ವಲ್ಪ ತೆಲೆಯತ್ತಿ ನೋಡಿದ್ದ ಸುಂದರವಾದ ನಯವಾದ ಕಾಲುಗಳಲ್ಲಿ ಬೆಳ್ಳಿಗೆಜ್ಜೆ ನಲಿಯುತ್ತಿದ್ದವು. ಪಾದಗಳು ಮೇಲಿನ ಕೆಂಪು ವರ್ಣದ ನೈಟಿ.. ಘಮಘಮಿಸುತ್ತಿದ್ದ ಮೈಸೂರ ಮಲ್ಲಿಗೆ ವಾಸನೆ… ಮುಂದೆ ಟೀ ವಾಸನೆ… “ಟಿ… ತಗೋ ಚೇತು…!” ಏಂದು ಕೋಗಿಲೆಯಂಥ ಕಂಠ ಉಲಿದಾಗ ಸ್ವರ್ಗ ಮೂರೇ ಗೇಣು ಉಳಿದಂತೆ ಭಾಸವಾಗಿತ್ತು.
ಕಣ್ಣೇದುರಿಗೆ ಬಂದ ಟ್ರೇಯಿಂದ ಟೀ ಕಪ್ ಇನ್ನೇನು ಎತ್ತಬೇಕು ಎಂದು ಮುಂದೆ ಕೈಚಾಚುವಷ್ಟರಲ್ಲಿ ಕೈ ಲಕ್ವಾ ಹೊಡೆದಂತೆ ನಿರ್ಜೀವಾಗಿ ಬಿದ್ದಿತ್ತು. ಟೀ ಕೊಡಲೆಂದು ಬಾಗಿದ ಪ್ರೇಮಾಳ ಎದೆ ಎದುರಿಗೆ ಅವಳ ಕೊರಳಿನ ತಾಳಿ ಜಾರಿ ಉಯ್ಯಾಲೆಯಾಡಲು ಪ್ರಾರಂಭಿಸಿದ್ದೆ ಚೇತನನಿಗೆ ತನ್ನ ಹೆಣವೇ ಅಲ್ಲಿ ನೇತಾಡುತ್ತಿರುವಂತೆ ಅನ್ನಿಸಿತು. ಪ್ರಜ್ಞಾಹೀನಂತಾಗಿದ್ದ ಚೇತನ ಮಿದುಳಿನಲ್ಲಿ ಅದ್ಯಾವ ಲಾವಾರಸ ಪ್ರವಹಿಸಿತ್ತೊ. ಅವಳ ಕೊರಳಲ್ಲಿ ನಾಗರಹಾವು ಕಂಡವನಂತೆ ಒಮ್ಮೆಲ್ಲೆ ತೆಲೆ ಕೆಡುವಿ ಮೇಲೆದಿದ್ದ. ಈಗ ತಾನೆ ತೆಲೆ ಸ್ನಾನ ಮಾಡಿಕೊಂಡು ಆರಲೆಂದು ಹರಡಿ ಬಿಟ್ಟು ಕೇಶ ರಾಶಿಯ ನಡವಿನಿಂದ ಕೆಳಗಿಳಿದು ನೇತಾಡುತ್ತಿದ್ದ ಕಪ್ಪು ತಾಳಿ ನಿಜವಾಗಿಯೂ ಅವನನ್ನು ಮುಗಿಸಲು ಬಂದ ಕಾಳಸರ್ಪದಂತೆ ಕಂಡು ಎಚ್ಚರಗೊಂಡ….
ಭಯಾನಕ…. ಸಿಟ್ಟು… ಮೈಯಲ್ಲ ಬೆಂಕಿ… ಪ್ರೇಮಾ ತೆಗೆದುಕೊಂಡು ನಿಂತಿದ್ದ ಟ್ರಯನ್ನೊಮ್ಮೆ ಬಲವಾಗಿ ನೂಕಿದ್ದ… ಟ್ರೇ ಹೋಗಿ ಮಾರುದ್ದ ದೂರು ಬಿದ್ದಿತು….ಕಪ್ಪ್ಗಳು ಒಡೆದು ಚೂರು ಚೂರಾಗಿದ್ದವು… ಚೇತನನ ಹೃದಯ ಚೂರು ಚೂರಾದಂತರ ಮನೆ ತುಂಬ ಹರಿದು ಹೋಗಿ ಹೊಗೆ ಕಾರುತ್ತಿದ್ದ ಬಿಸಿ ಚಹಾ.. ಚೇತನನಿಗೆ ತಾನು ಕಂಡ ತಾಜಾ ಕನಸುಗಳೆಲ್ಲ ಕೊಲೆಯಾಗಿ ಬಿಸಿ-ಬಿಸಿ ನೆತ್ತರು ಹರಿದಂತೆ ಭಾಸವಾಗಿತ್ತು. ಚೇತನನ ಅವತಾರಕ್ಕೆ ಪ್ರೇಮಾ ಹೆದರಿ ದೂರ ಗೋಡೆಗೊರಗಿ ನಡಗುತ್ತ ನಿಂತಿದ್ದಳು…. ಚೇತನ್ “ಮೋಸ…. ಮೋಸ” ಎನ್ನುತ್ತ ಪ್ರೇಮಾಳತ್ತ ಹೆಜ್ಜೆ ಹಾಕತೊಡಗಿದ. ಚೇತನ್ ಇನ್ನೂ ಪ್ರೇಮಾಳನ್ನು ಕೊಂದೇ ಹಾಕುತ್ತಾನೆ ಎಂದು ಅರಿತ ತಂದೆ ತಾಯಿ ಇಬ್ಬರೂ ಓಡಿ ಬಂದು ಚೇತನನ ಕಾಲು ಹಿಡಿದುಕೊಂಡರು.-
“ದಯವಿಟ್ಟು ನಿನ್ನ ತಂದೆ-ತಾಯಿ ಸಮಾ ಎಂದು ತಿಳಿದು ನಮ್ಮನ್ನು ಕ್ಷಮಿಸಿ ಬಿಡಪ್ಪ…. ಇದರಲ್ಲಿ ಪ್ರೇಮಾಳದೇನು ತಪ್ಪಿಲ್ಲ ಅವಳು ನಿನ್ನನ್ನೇ ಮದ್ವೆಯಾಗ್ತೀನಿ ಎಂದು ಹಠ ಹಿಡಿದು ಕುಳಿತಾಗ…ನಾವು ಸಾಯುತ್ತೇವೆ ಎಂದು ಹೆದರಿಸಿ ರಾತ್ರೋ ರಾತ್ರಿ ಅವಳನ್ನು ಕರೆದುಕೊಂಡು ನಮ್ಮ ಸಂಬಂಧಿಕರು ಇರುವ ಮುಂಬೈಗೆ ಹೋಗಿ ಎಂದು ಬಲವಂತವಾಗಿ ಒಪ್ಪಿಸಿ ಅದೇ ಮನೆಯ ಹುಡ್ಗನ ಜೋತೆ ಮದ್ವೆ ಶಾಸ್ತ್ರನೂ ಮುಗಿಸಿ ಬಿಟ್ಟೇವು…” ಎನ್ನುವ ಒಂದೊಂದೇ ಮಾತುಗಳು ಅವನ ಮೇಲೆ ಸಿಡಿಲಾಗಿ ಅಪ್ಪಳಿಸುತ್ತಿದ್ದವು.
ಅವನು ಒಳಗೊಳಗೆ ಸುಟ್ಟು ಬೂದಿಯಾಗುತ್ತಿದ್ದ- “ಏನಾದರೂ… ಮಾಡಿ… ನೀವೇಲ್ಲ ಹಾಳಾಗಿ ಹೋಗಿ…” ಎಂದು ಶಪಿಸಿದವನೆ ಕಾಲು ಹಿಡಿದು ಅಂಗಲಾಚುತ್ತಿದ್ದ ಪ್ರೇಮಾಳ ತಂದೆ-ತಾಯಿಯನ್ನು ಕಾಲಿನಿಂದಲೇ ಸರಿಸಿ ನಡಗುತ್ತ ತೊಯ್ದು ಬೆಕ್ಕಿನಂತೆ ನಿಂತಿದ್ದ ಪ್ರೇಮಾಳನ್ನು ಕೊನೆಸಾರೆ ಎನ್ನುವಂತೆ ಒಮ್ಮೆ ನೋಡಿ ಥೋ ಎಂದು ಉಗಳಿ ಮನೆಯಿಂದ ಹೊರನಡೆದಿದ್ದ… ಎಲ್ಲಿಗೆ ಹೋಗಬೇಕು ಎಂದು ದಾರಿ ತೋರದೆ ಮುಂದೆ ಸ್ವಲ್ಪ ದೂರ ನಡೆದಾಗ ಮುಖ್ಯರಸ್ತೆಗೆ ಹೊಂದಿಕೊಂಡಿದ್ದ “ಅಮೃತಬಾರ್” ಎಂಬ ಫಲಕ ಕೈಬಿಸಿ ಸ್ವಾಗತಿಸಿದಂತಾಗಿ ಸೀದಾ ಒಳಗೆ ನುಗಿದ್ದ. ಅಂದಿನಿಂದ ಚೇತನ ಕುಡಿತಕ್ಕೆ ದಾಸನಾಗಿ ಹೋಗಿದ್ದ. ಹೀಗೆ ಕುಡಿತದ ಚಟಕ್ಕೆ ಬಿದ್ದು ಪ್ರೇಮಾಳನ್ನು ತನ್ನ ಹೃದಯಾಂತರಳದಿಂದ ಕಿತ್ತು ಬಿಸಾಕಲು ಪ್ರಯತ್ನಿಸಿದ್ದ ಆದರೆ ಹೃದಯ ಕಣಕಣದಲ್ಲಿ, ಉಸಿರು ಉಸಿರಿನಲ್ಲಿ ಬೆರೆತು ಹೋಗಿದ್ದ ಪ್ರೇಮಾಳ ನೆನಪು ಮಾತ್ರ ಅವನಿಂದ ಸಂಪೂರ್ಣವಾಗಿ ತೆಗೆದು ಹಾಕಲು ಸಾಧ್ಯವೇ ಇರಲಿಲ್ಲ.
ಪ್ರತಿಯೊಂದು ಕ್ಷಣವು ಅವಳ ರೂಪ…ಅವಳ ಮಾತು…ಅವಳ ನಗುವೆಲ್ಲ ಅವನ ಕಣ್ಮುಂದೆ ಮಿಂಚಿ ಮಾಯವಾಗುತ್ತಿತ್ತು. ಕೊನೆಸಲ ಅವಳು ಬೆವೆತು ನಡಗುತ್ತ ನಿಂತಿದ್ದ ದೃಶ್ಯವಂತೂ ಅವನ ದೇಹವೆಲ್ಲ ಪದೆ ಪದೇ ನಡಗುವಂತೆ ಮಾಡುತ್ತಿತ್ತು. ಆ ನೆನಪುಗಳೆಲ್ಲ ಮರೆಯಲೆಂದೇ ಮತ್ತೊಂದು, ಮತ್ತೊಂದು ಪೆಗ್ಗು ಇಳಿಸುತ್ತಿದ್ದ. ಅವನ ಹೃದಯದ ಜ್ವಾಲೆಯನ್ನು ಮದ್ಯಕೂ ನಂದಿಸುವ ಶಕ್ತಿಯಿರಲಿಲ್ಲ. ಅದಕ್ಕೆ ಒಂದು ಹನಿ ಪ್ರೀತಿಯ ಸಿಂಚನದ ಅಗತ್ಯವಿತ್ತು . ಆ ಪ್ರೀತಿ ಸಿಂಚನ ಎಷ್ಟೋ ದಿನ ಕಳೆದರು ಅವನ ಹೃದಯಕ್ಕೆ ಆಗಲೇ ಇಲ್ಲ.ಇದನ್ನು ಚನ್ನಾಗಿ ಅರಿತಿದ್ದ ಇವನ ಸಹಚರ ಜಾನ್ ಇದೇ ಪ್ರೇಮ ಸಿಂಚನಕ್ಕಾಗಿ ಪವಿತ್ರಳ ಮನೆಗೆ ಕರೆದುಕೊಂಡು ಹೋಗುವ ಉಪಾಯ ಹೂಡಿದ್ದ. ಇಂದು ಹಬ್ಬ ದಲಿತರ ಮನೆಗೆ ಬಂದು ಅವರ ಆತಿಥ್ಯ ಸ್ವೀಕರಿಸಲೇಬೇಕೆಂದು ಒತ್ತಾಯಿಸಿದ್ದ. ಜಾನನ ಮನಸ್ಸು ಮುರಿಯಲಿಚ್ಛಿಸಿದ್ದ ಚೇತನ ಕೇರಿಗೆ ಬರಲು ಸಮ್ಮತಿಸಿದ್ದ. ಅದರಂತೆ ಚೇತನಿಗೂ ಯೋಗ್ಯವಾಗಬಹುದಾದ ಸ್ವಲ್ಪ ಶಿಕ್ಷಿತಳು ಸಹಹೃದಯಳೂ ಆದ, ಅವನ ಹೃದಯ ಗಾಯಕ್ಕೂ ಮದ್ದಗಬಲ್ಲ ಪವಿತ್ರಳನ್ನು ಸಹ ಒಪ್ಪಿಸಿವ ಕೆಲಸ ಮಾಡಿದ್ದ.
– 4 –
ರಾತ್ರಿ ಹತ್ತರ ಸಮಯ!
ಅವನ ನಿರೀಕ್ಷೆಯಲ್ಲಿ ಮನೆ ಬಾಗಿಲಿಗೆ ನಿಂತಿದ್ದವಳ ಮುಂದೆ ಒಂದು ರೀಕ್ಷಾ ಬಂದು ನಿಂತಿತು. ಅದರಿಂದ ಕೆಳಗಿಳಿಯಲು ಹರಸಾಹಸ ಮಾಡುತ್ತಿದ್ದ ಚೇತನನಿಗೆ ಜಾನ್ ಮತ್ತು ಪವಿತ್ರ ಸಹಾಯ ಮಾಡಿ ಮನೆಯೊಳಗೆ ಕರೆತಂದರು. ಅವನಿಗೆ ವಿಪರೀತ ನಿಶೆಯಾಗಿತ್ತು. ಇಬ್ಬರೂ ಅವನನ್ನು ಮಂಚದ ಮೇಲೆ ಮಲಗಿಸಿದರು. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಅವನ ನಾಲಿಗೆ ಪ್ರೇಮಾ… ಪ್ರೇಮಾ… ಎಂದು ಜಪಿಸುತ್ತಿತ್ತು. ಪವಿತ್ರ ಜಾನನತ್ತ ಹೊರಳಿ ಪ್ರಶ್ನಾರ್ಥಕ ದೃಷ್ಠಿ ಬೀರಿದಳು.
“ಲವ್ ಫೇಲ್ಯೂವರು… ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಹುಡುಗಿ ಅಣ್ಣನ್ನ ಮೋಸ ಮಾಡಿ ಬೇರೆಯವನ ಜೊತೆ ಮದ್ವೆಯಾದಳು. ಪಾಪ ಭಗ್ನಪ್ರೇಮಿ… ನೀನೇ ಸ್ವಲ್ಪ ಅಡಜಸ್ಟ್ ಮಾಡಕೋ….ಅವನ ನೋವು ಮರೆಸಲೆಂದೆ ನಿನ್ನ ಬಳಿ ತಂದಿರುವೆ ” ಎಂದು ಹೇಳಿದ ಜಾನ್ ಕೇರಿಯಲ್ಲಿದ್ದ ತನ್ನ ಮನೆಯತ್ತ ನಡೆದ. ರಾತ್ರಿ ಬಹಳ ಹೊತ್ತು ಆಗಿದ್ದರಿಂದ ಅವಳು ದೀಪವಾರಿಸಿ ಬಂದು ಚೇತನ ಮಲಗಿದ್ದ ಮಂಚದ ಮೇಲೆ ಮಲಗಿದಳು. ಚೇತನ ನಿದ್ರೆಯಲ್ಲಿ ಪ್ರೇಮಾ… ಪ್ರೇಮಾ… ಎಂದು ಬಡಬಡಿಸುತ್ತಲೇ ಇದ್ದ. ಅವನಿಗೆ ಸ್ವಲ್ಪ ಎಚ್ಚರವಾದಾಗ ಬೆಳಗಾಗುತ್ತ ಬಂದಿತ್ತು.. ನಿದ್ರೆ ಬಾರದೆ ಹೊರಡಾಳುತ್ತಿದ್ದ ಹೆಣ್ಣು ಶರೀರವೊಂದು ಪಕ್ಕದಲ್ಲಿ ಅಲುಗಾಡಿದಂತಾಯ್ತು, ನಿನ್ನೆ ರಾತ್ರಿ ಬಾರಿನಲ್ಲಿ ಜಾನ್ ಹೇಳಿದ ಮಾತು ನೆನಪಾಯ್ತು….
‘ನಮ್ಮ ಅಕ್ಕ… ಪವಿತ್ರಾ ತುಂಬಾ ಒಳ್ಳೆಯವಳು… ತುಂಬ ಸುಂದರಿ… ಅಪ್ಸರೆಯಂತೆ…” ಪಕ್ಕದಲ್ಲಿ ಅರಳಿದ್ದ ಆ ಸುಂದರ ಹೂವುನೊಮ್ಮೆ ನೋಡಿದ… ಹೌದು ಸಾಕ್ಷಾತ್ ಅಪ್ಸರೆಯೇ!
ಅವಳನ್ನು ಕೇಳಿದ_
“ಪವಿತ್ರ?”
“ಹುಂ” ಎಂದಷ್ಟೆ ಚುಟುಕಾಗಿ ಉತ್ತರಿಸಿದಳು.
ಚೇತನ ಅವಳನ್ನು ಬರಸೆಳೆದುಕೊಂಡು ಪ್ರೇಮಸಾಗರದಲ್ಲಿ ಮುಳಗಿಹೋದ.ಅಂದಿನಿಂದ ಆರಂಭವಾಯ್ತು ಅವರ ಮಿಲನೋತ್ಸವ ! ಚೇತನನಿಗೆ ಪವಿತ್ರಳ ಸ್ನೇಹದಲ್ಲಿ ಅದೇನೋ ಹಿತ! ಅವಳ ಸಾಂಗತ್ಯದಲ್ಲಿ ಭಾರವಾಗಿದ್ದ ಮನಸ್ಸು ಹಗುರಾದಂತೆ ಭಾಸವಾಗುತ್ತಿತ್ತು. ಅವಳ ಸ್ನೇಹ ಅವನಲ್ಲಿ ಏನೋ ಜಾದು ಮಾಡುತ್ತಿತ್ತು. ಅವ್ನಲ್ಲಿ ಬತ್ತಿ ಹೋಗುತಿದ್ದ ಚೈತನ್ಯ ಮರು ಸ್ಥಾಪಿತವಾಗುತಿತ್ತು. ಪ್ರತಿ ರಾತ್ರಿ ಚೇತನ್ ಬಾರಿಗೆ ಬಂದು ಒಂದು ಪೆಗ್ಗು ಹಾಕಿ ಒಂದು ಕ್ವಾಟರ್ ಪಾರ್ಸಲ್ ತೆಗೆದುಕೊಂಡು ಪವಿತ್ರಳ ಮನೆಯತ್ತ ನಡೆದು ಬಿಡುತ್ತಿದ್ದ. ಒಮ್ಮೊಮ್ಮೆ ಒಂದೊಂದು ವಾರ, ಒಂದೊಂದು ತಿಂಗಳು ಪವಿತ್ರಳ ಪ್ರೇಮ ಪಂಜರದ ಪಕ್ಷಿಯಾಗಿ ಬಿಡುತ್ತಿದ್ದ. ಹೊರ ಪ್ರಪಂಚದ ಸಂಪರ್ಕವನ್ನೆ ಮರೆತು ಬಿಡುತ್ತಿದ್ದ. ಅವರಿಬ್ಬರೂ ಪರಸ್ಪರ ಗಾಢವಾಗಿ ಒಂದಾಗುತ್ತ ಹೋದಂತೆ ಇವರ ಸಂಬಂಧ ಭಾವನಾತ್ಮಕ ಸ್ವರೂಪ ಪಡೆಯಲಾರಂಭಿಸಿತು. ಅದು ಕೇವಲ ದೈಹಿಕ ಆಕರ್ಷಣೆಯಾಗದೆ ಮಾನಸಿಕವಾಗಿ ತುಂಬಾ ಗಟ್ಟಿಯಾಗುತ್ತ ಸಾಗಿತು. ಅವರ ಪ್ರಕಾರ ಅದು ನಿಜವಾದ ನಿಸ್ವಾರ್ಥ ಪವಿತ್ರ ಪ್ರೇಮ ಸಂಬಂಧವಾಗಿತ್ತು. ನಿಜವಾಗಿಯೂ ಚೇತನ ತನ್ನನ್ನ ಉದ್ಧರಿಸಲೆಂದೇ ಬಂದವನೆಂದು ನಂಬಿದಳು ಪವಿತ್ರ. ಅವನಲ್ಲಿ ಯೇಸುಕ್ರಿಸ್ತನನ್ನು ಕಾಣತೊಡಗಿದಳು.ಅವನು ಅವಳನ್ನೂ ಹೇಗೆ ಉದ್ಧರಿಸಬೇಕು? ಈ ಪಾಪದ ನರಕದಿಂದ ಹೇಗೆ ಮೇಲೆತ್ತಬೇಕು…? ಅವಳನ್ನು ಮದ್ವೆಯಾಗಿ ಬಿಟ್ರೆ ಹೇಗೆ ಎಂದೆಲ್ಲ ಯೋಚಿಸತೊಡಗಿದ.
ಪವಿತ್ರಳ ಜೀವನದಲ್ಲಿ ಚೇತನಾಗಮನವಾದ ಮೇಲೆ ಅವಳು ಇನ್ಯಾರನನ್ನು ಬಯಸಿರಲಿಲ್ಲ. ಮಾನ, ಪ್ರಾಣ, ದೇಹವೆಲ್ಲಾ ಚೇತನನದೆ ಸ್ವತ್ತು ಎಂದು ಮನಸ್ಸಿನಲ್ಲಿ ನಿರ್ಧರಿಸಿಬಿಟ್ಟಿದ್ದಳು. ಪವಿತ್ರ ಚೇತನನಿಂದ ಒಂದು ಪೈಸೆ ಕೂಡ ಪಡೆದಿರಲಿಲ್ಲ. ಕುಡಿತ ಚಟದಿಂದ ಮನೆಯವರಿಗೂ ಬೇಡವಾಗಿದ್ದವ ಹತ್ತಿರ ಅವಳಿಗೆ ಕೂಡಲು ಅವನ ಬಳಿಯೂ ಏನು ಇರಲಿಲ್ಲ.. ಏಕೆಂದರೆ ಚೇತನ ಈಗ ಊರಿಗೂ ಮನೆಗೂ ಮಾರಿಯಂತಾಗಿದ್ದ. ಚೇತನ ಅಲ್ಪಸ್ವಲ್ಪ ಕಲಿತಿದ್ದ ಪವಿತ್ರಳಿಗೆ ಕೆಲಸಕ್ಕೆ ಸೇರಿಸುವುದು ಕಷ್ಟವಾಗಲಿಲ್ಲ. ಬಸವರಾಜನೆಂಬ ಸ್ನೇಹಿತನೊಬ್ಬನ ಶಿಕ್ಷಣ ಸಂಸ್ಥೆ ಕೆಲಸ ಕೊಡಿಸಿವಲ್ಲಿ ಸಫಲನಾಗುವ ಮೂಲಕ ಪವಿತ್ರಳ ಬಾಳಿನಲ್ಲಿ ಹೊಸ ಆಶಾಕಿರಣ ಮೂಡಿಸಿದ್ದ. ಇತ್ತ ಚೇತನನ ತಂದೆ ತಾಯಿಗಳು ಆತನ ಸ್ಥತಿ ಕಂಡು ಚಿಂತಿತರಾಗಿದ್ರು. ಕುಡಿದು ಕೆಟ್ಟು ಹೀಗೆ ಕೇರಿ ದಾರಿ ಹಿಡಿದ ಮಗನಸ್ಥಿತಿ ಕಂಡು ವ್ಯಥಿತರಾದರು “ಚೇತನನಿಗೆ ಏನಾದರೂ ಹೇಳಿ ಸರಿದಾರಿಗೆ ತನ್ನಿ ಇಲ್ಲವಾದರೆ ಒಂದಿನ ಸಂಪೂರ್ಣವಾಗಿ ಆತನನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಪರಿಚಯದ ಜನ ಬಂದು ಎಚ್ಚರಿಕೆ ಕೊಟ್ಟು ಹೋಗುತ್ತಿದ್ದರು. ಆ ಹಿರಿಯ ಜೀವಗಳು ಈ ಎಚ್ಚರಿಕೆಯ ಮಾತುಗಳಿಂದ ಆತಂಕಗೊಂಡಿದ್ದರು.
ಎಲ್ಲೋ ಉಂಡು ಎಲ್ಲೋ ಮಲಗಿ ಮನೆದಾರಿಯನ್ನೆ ಮರೆತಿದ್ದ ಮಗನನ್ನು ಹೇಗೆ ದಾರಿಗೆ ತರುವದೆಂದು ಚಿಂತೆಯಾಗಿತ್ತು. ದಿನಗಳೆದಂತೆ ಮಗನ ಚಿಂತೆಯಲ್ಲಿ ತಾಯಿ ಶಾರದಮ್ಮ ಹಾಸಿಗೆ ಹಿಡಿದರು ತಂದೆ ಇನ್ನಷ್ಟು ವಿಚಲಿತರಾದರು. ಒಂದು ದಿನ ಚೇತನನ್ನು ಅವನ ಸ್ನೇಹಿತರ ಮುಖಾಂತರ ಮನೆಗೆ ಕರೆಕಳಿಸಿ ತಾಯಿ ಆರೋಗ್ಯದ ಕುರಿತು ವಿವರಿಸಿ ತನ್ನ ತಾಯಿ ಯೋಗಕ್ಷೇಮಕ್ಕಾಗಿಯಾದರು ಮದುವೆಯಾಗಬೇಕೆಂದು ಒತ್ತಾಯಿಸಿದರು. ಚೇತನನ ಸಮಸ್ಯೆಗೆ ಅವನ ಮದುವೆಮಾಡುವದೊಂದೆ ಪರಿಹಾರವೆಂದು ಆ ವೃದ್ಧ ಜೀವಿಗಳಿಗೆ ಅರಿವಾಗಿತ್ತು. ಹಾಸಿಗೆಯಲ್ಲಿದ ಅಮ್ಮಾ ಕೂಡ ತನ್ನ ತಮ್ಮನ ಮಗಳು ಕಾವೇರಿಯನ್ನು ಮದ್ವೆಯಾಗಬೇಕು. ಇಲ್ಲವಾದರೆ ಇದೇ ಹಾಸಿಗೆಯ ಮೇಲೆ ತನ್ನ ಪ್ರಾಣ ಬಿಡುವದಾಗಿ ಬೆದರಿಕೆ ಹಾಕಿದಳು. ಆಗ ನೆನಪಾದವಳು ಪ್ರೇಮಾ, ಪ್ರೇಮಾಳ ಪಾಲಕರು ಸಹ ಇದೇ ರೀತಿ ಹಟ ಹಿಡಿದು ಅವಳ ಮದ್ವೆ ಮಾಡಿಸಿದ್ದು ನೆನಪಾಗಿ ಅವಳ ಬಗ್ಗೆ ಒಂದು ಕ್ಷಣ ಕನಿಕರ ಉಂಟಾಯಿತು.
“ನಾನು ದಾರಿ ಬಿಟ್ಟವ… ನನ್ನ ಜತೆ ಅವಳ ಮದುವೆ ಮಾಡಿಸಿದರೆ ಖಂಡಿತ ಅವಳು ಸುಖವಾಗಿರೊಲ್ಲ. ನನ್ನಿಂದಾಗಿ ಅವಳ ಜೀವನ ಹಾಳಾಗಬಾರದು” ಎಂದು ಚೇತನ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ.
“ನಿನ್ನ ಕತೆ ನನ್ನ ತಮ್ಮನಿಗೂ ಕಾವೇರಿಯೂ ಎಲ್ಲಾ ಗೊತ್ತು…. ಅವರಾಗಿಯೇ ಒಪ್ಪಿದ್ದಾರೆ… ನೀನು ಸುಮ್ನೆ ಹುಂ ಅನ್ನು” ಎಂದು ಇಬ್ಬರೂ ಪದೇ ಪದೇ ಒತ್ತಾಯಿಸಿದಾಗ
“ಇಲ್ಲ… ಇದು ಸಾಧ್ಯವೇ ಇಲ್ಲ. ನಾನು ಪವಿತ್ರಳನ್ನು ಪ್ರೀತಿಸುತ್ತೇನೆ ಮದ್ವೆಯಾದರೆ ಅವ್ಳನ್ನೆ ” ಎಂದಾಗ-
“ಯಾರು ಆ ಸೂಳೆಯನ್ನಾ?” ಎಂದು ಕೇಳಿದಳು ಅಮ್ಮ
“ಹೌದು” ಎಂದು ಮರುತ್ತರಿಸಿದ ಚೇತನ.
“ಅಯ್ಯೋ ಆ ಸೂಳೆಯನ್ನು ಸೊಸೆಯನ್ನಾಗಿ ಮಾಡಕೋಬೇಕಾದರೆ ಹೋದ ಜನ್ಮದಲ್ಲಿ ನಾವೆಂಥ ಪಾಪ ಮಾಡಿದ್ದೇವೂ?” ಎಂದು ಚೇತನ ತಂದೆ ರಾಗ ತೆಗೆದರು.
“ಹೋಗು ನಿನಗೆ ತಿಳಿದಿದ್ದು ಮಾಡು…. ನಾನು ಸತ್ತು ಹೋಗುತ್ತೇನೆ” ಅರಚಿದರು ಶಾರದಮ್ಮ. ಮನೆ ಮಾತಿನ ಸಮರ ಭೂಮಿಯೇ ಆಗಿ ಹೋಗಿತ್ತು… ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋದಾಗ ತಾಯಿ “ಅಯ್ಯೋ……..ನೋವು….” ಎಂದು ಎದೆ ಹಿಡಿದುಕೊಂಡು ವಿಲವಿಲನೆ ಒದ್ದಾಡಲಾರಂಭಿಸಿದರು. ಆಗಲೇ ತಂದೆ ವೈದ್ಯರನ್ನು ಕರೆಕಳಿಸಿ ಚಿಕಿತ್ಸೆ ಕೊಡಸಿದರು. ಚೇತನನಿಗೆ ಇದೆಲ್ಲ ತನ್ನಿಂದಲೇ ಎನ್ನುವ ಅಪರಾಧ ಭಾವ!
ಮಾರನೇಯ ದಿನ ಪವಿತ್ರಳ ಮನೆಗೆ ಹೋದಾಗ ಚೇತನ ತನ್ನ ಧರ್ಮಸಂಕಟವನ್ನು ಅವಳ ಮುಂದೆ ಹೇಳಿದ-
“ನಿನ್ನ ಕೈ ಹಿಡಿದು ನಿನಗೆ ಸಮಾಜದ ಮುಖ್ಯ ವಾಹಿನಿ ತರಬೇಕೆಂದಿದ್ದೆ… ಆದರೇನು ಮಾಡಲಿ ತಾಯಿ ಸ್ಥಿತಿ ನೋಡಿ ಏನು ಮಾಡುವುದು ತಿಳಿಯದಾಗಿದೆ”
ಅವನ ಪರಿಸ್ಥಿತಿ ಅರ್ಥೈಸಿಕೊಂಡ ಪವಿತ್ರ- “ನೀವು ನನ್ನ ಮದುವೆಯಾಗಬೇಕೆಂದು ನಾನೆಂದೂ ಬಯಸೆ ಇಲ್ಲ” ಎಂದಾಗ ಚೇತನ ಮನಸ್ಸು ಸ್ವಲ್ಪ ನಿರಾಳವಾಗಿತ್ತು.
“ನನ್ನಂಥ ಪಾಪಿಷ್ಟಳವನ್ನು ಮದ್ವೆಯಾಗಬೇಕೆಂತ ನಿನಗೆ ಅನಿಸಿದೆಯಲ್ಲ ಅಷ್ಟು ಸಾಕು ನನಗೆ…. ನಾಲ್ಕು ಜನರೆದುರಲ್ಲಿ ತಾಳಿ ಕಟ್ಟಿಸಿಕೊಂಡರನೇ ಮದುವೆಯಲ್ಲ… ಮನಸ್ಸು ಮನಸು ಒಂದಾದರೆ ಸಾಕು ಅದೇ ಮದುವೆ?” ನೀವು ನಿಮ್ಮ ಕುಟುಂಬ ದೃಷ್ಠಿಯಿಂದ ಯಾರನ್ನಾದರೂ ಮದುವೆಯಾಗಿ ನನ್ನದೇನು ತಕರಾರವಿಲ್ಲ. ನಿಮ್ಮ ಸುಖಜೀವನಕ್ಕೆ ನಾನೆಂದು ಅಡ್ಡಿ ಬರುವುದಿಲ್ಲ.
ನೀವು ನನ್ನ ಜೀವನದಲ್ಲಿ ಬಂದು ಹೋದಿರಿ ಎನ್ನು ಸವಿ ನೆನಪೊಂದೇ ಸಾಕು ನನಗೆ.. ನಾನು ಹೇಗೋ ಬದುಕಿಕೊಳ್ಳುತ್ತೇನೆ” ಎನ್ನುವ ಮೂಲಕ ಚೇತನನ ದಾರಿ ಸುಗುಮಗೊಳಿಸಿದ್ದಳು. ಪವಿತ್ರಳ ಹೃದಯ ವೈಶಾಲ್ಯತೆ ಕಂಡು ಚೇತನ ಕಣ್ಣಲ್ಲಿ ನೀರಾಡಿತು. ಮಾತು ಬಾರದೆ ಮೂಕನಂತಾಗಿ ಮನೆಯಿಂದ ಹೊರನಡೆದ ಇನ್ನೊಂದು ಬಂಧನದೆಡೆಗೆ.
-ಅಶ್ಫಾಕ್ ಪೀರಜಾದೆ
ಮುಂದುವರೆಯುವುದು…
[…] ಇಲ್ಲಿಯವರೆಗೆ […]