ಗುಲಾಮಿ: ಗಿರೀಶ ಜಕಾಪುರೆ


ಮೂಲ : ಖಲೀಲ ಜಿಬ್ರಾನ್
ಕನ್ನಡಕ್ಕೆ : ಗಿರೀಶ ಜಕಾಪುರೆ

ಮಾನವರು ಬದುಕಿನ ಗುಲಾಮರು. ಜೀವನದ ಜೀತದಾಳುಗಳು. ಈ ಬದುಕು ಅವರ ಹಗಲುಗಳಲ್ಲಿ ದುಃಖ ಮತ್ತು ಕ್ಲೇಶದ ಬಿರುಗಾಳಿಯಾಗಿ ಬೀಸುತ್ತದೆ, ರಾತ್ರಿಗಳಲ್ಲಿ ಕಣ್ಣೀರು ಮತ್ತು ಸಂತಾಪದ ಮಹಾಪೂರವಾಗಿ ನುಗ್ಗುತ್ತದೆ. ಏಳು ಸಾವಿರ ವರ್ಷಗಳಾದವು ನಾನು ಜನಿಸಿ. ಅಂದಿನಿಂದಲೂ ನಾನು ತಮ್ಮ ಕೈಕಾಲುಗಳಿಗೆ ಸುತ್ತಿದ ಭಾರದ ಬೇಡಿಗಳನ್ನು ಎಳೆಯುತ್ತ ಹೆಜ್ಜೆ ಹಾಕುತ್ತಿರುವ ಬದುಕಿನ ಗುಲಾಮರನ್ನು ಕಾಣುತ್ತಿದ್ದೇನೆ. ನಾನು ಭೂಮಿಯ ಪೂರ್ವಪಶ್ಚಿಮಗಳಲ್ಲಿ ಸುತ್ತಾಡಿದ್ದೇನೆ, ಜೀವನದ ನೆರಳು ಬೆಳಕುಗಳಲ್ಲಿ ದಿಕ್ಕೇಡಿಯಾಗಿ ಅಲೆದಿದ್ದೇನೆ. ಮಾನವೀಯತೆಯ ಚೈತ್ರಯಾತ್ರೆಯು ಬೆಳಕಿನಿಂದ ಕತ್ತಲೆಯ ಕಡೆಗೆ ಹೋಗುವುದನ್ನು ಕಂಡಿದ್ದೇನೆ. ಆ ಎಲ್ಲ ಯಾತ್ರೆಗಳ ಕಾಲಡಿಯಲ್ಲಿ ಹೊಸಕಲ್ಪಟ್ಟ ಅಹಂರಹಿತ, ಮುಗ್ಧ ಆತ್ಮಗಳು ಬೆನ್ನಿಗೆ ಹೊರಿಸಿದ ಗುಲಾಮಿಯ, ಜೀತದ ಶಿಲುಬೆಯನ್ನು ಹೊತ್ತು ನರಕಕ್ಕೆ ದೂಡಲ್ಪಡುತ್ತಿವೆ. ಅಲ್ಲಿ ಗುಲಾಮರಲ್ಲಿನ ಬಲಿಷ್ಠರನು ಬಂಧಿಸಿ ಅವರ ಗರ್ವಹರಣ ಮಾಡಲಾಗಿದೆ ಮತ್ತು ಉಳಿದವರು ಭಕ್ತರಾಗಿ ಮಂಡಿಯೂರಿ ಕುಳಿತು ಮೂರ್ತಿಪೂಜೆಗಳಲ್ಲಿ ಲೀನರಾಗಿದ್ದಾರೆ.

ನಾನು ಬ್ಯಾಬಿಲೋನ್‍ನಿಂದ ಕಾಹಿರಾತನಕ ಮತು ಐಂದೋರ್‍ನಿಂದ ಬಗದಾದ್‍ನವರೆಗೆ ಮನುಷ್ಯರ ಬೆನ್ನಟ್ಟಿದ್ದೇನೆ ಮತ್ತು ಸುಡುಸುಡುವ ಮರಳಿನಲ್ಲಿ ಅವರ ಬೇಡಿಗಳು ಬಿಡಿಸಿದ ರುದನಗೀತೆಗಳನ್ನು ಧ್ಯಾನದಿಂದ ಕೇಳಿದ್ದೇನೆ. ಕ್ರೂರ ಕಾಲದ ವೇದನಾಮಯ ದ್ವನಿಗಳು ಅನಂತ ಬಯಲುಗಳಲ್ಲಿ ಮತ್ತು ಆಳದ ಕಣಿವೆಗಳಲ್ಲಿ ಪ್ರತಿದ್ವನಿಸುವುದನ್ನು ಆಲಿಸಿದ್ದೇನೆ. ನಾನು ಮಂದಿರಗಳೊಳಗೆ ಕುಳಿತು ವೇದಾಂತಿಗಳ ವಿಚಾರಗಳನ್ನೂ ಕೇಳಿದ್ದೇನೆ, ಅರಮನೆಗಳಲ್ಲೂ ಉಪಸ್ಥಿತನಿದ್ದು ರಾಜಸಿಂಹಾಸನಗಳ ಎದುರು ಕುಳಿತು ವ್ಯವಹಾರ ಗಮನಿಸಿದ್ದೇನೆ. ಶಿಷ್ಯದಿಂದಿರು ಗುರುವಿನ, ಗುರುವು ಸ್ವಾಮಿಯ, ಸ್ವಾಮಿಯು ಸೈನಿಕನ, ಸೈನಿಕನು ಸಂಚಾಲಕನ, ಸಂಚಾಲಕನು ಶಾಸಕನ, ಶಾಸಕನು ಪೂಜಾರಿಯ ಮತ್ತು ಪೂಜಾರಿಗಳು ಮೂರ್ತಿಯ ಜೀತ ಹೊತ್ತಿರುವುದು, ಗುಲಾಮರಾಗಿರುವುದು ಕಂಡಿದ್ದೇನೆ. ಆ ಮೂರ್ತಿಗಳು ಬೇರೆನೂ ಅಲ್ಲ, ನಿರ್ದಯಿಗಳಿಂದ ಶೃಂಗರಿಸಲ್ಪಟ್ಟ ಕಲ್ಲು, ಮಣ್ಣು ಅಷ್ಟೇ. ಆದರೆ ಅವು ಮೆದುಳುಗಳ ಪರ್ವತ ಶಿಖರಗಳಲ್ಲಿ ಪ್ರತಿಷ್ಠಾಪಿಸಲ್ಪಟ್ಟಿವೆ. ನಾನು ಧನಿಕರ ಮಹಲುಗಳಲೂ ಉಳಿದಿದ್ದೇನೆ, ನಿರ್ಧನರ ಗುಡಿಸಲುಗಳಲೂ ಇದ್ದೇನೆ. ನಾನು ನನ್ನ ತಾಯಿಯ ಮೊಲೆಗಳಿಂದ ಜೀತದ ಹಾಲು ಹೀರುವ ಕೂಸುಗಳನ್ನೂ ಮತ್ತು ಮೂಲಾಕ್ಷರ, ವರ್ಣಮಾಲೆಯನ್ನು ಮತ್ತೆ ಮತ್ತೆ ಬರೆಯುತ್ತ ಆಜ್ಞಾಧಾರಕತೆಯ ಪಾಠ ಒಪ್ಪಿಸುತ್ತಿರುವ ಮಕ್ಕಳನ್ನೂ ಕಂಡಿದ್ದೇನೆ. ಇಲ್ಲಿ ನವಯುವತಿಯರು ಮರ್ಯಾದೆ ಮತ್ತು ಶೀಲಧರ್ಮದ ವಸ್ತ್ರಗಳನ್ನು ತೊಡುತ್ತಾರೆ ಹಾಗೂ ಹೆಂಡತಿಯರು ಸೇವೆ, ಸೂಶ್ರೂಷೆ ಮತ್ತು ಸಮಾಜದ ಕಟ್ಟಳೆಗಳಿಂದ ಉದಿಸಿದ ಸಂಕೋಚದ ಮಂಚದಲಿ ಕಣ್ಣೀರು ತುಂಬಿಕೊಂಡು ನಗ್ನರಾಗಿ ಮಲಗುತ್ತಾರೆ.

ನಾನು ಕಾಂಗೋ ನದಿಯ ದಡದಿಂದ ಇಫರಾತ್‍ನ ದಂಡೆಯವರೆಗೂ, ನೀಲಗಿರಿಯ ತುತ್ತತುದಿಯಿಂದ ಸೀರಿಯಾದ ಮೈದಾನಗಳವರೆಗೂ, ಅಥೆನ್ಸ್‍ನ ರಂಗಭೂಮಿಯಿಂದ ರೋಮ್‍ನ ಚರ್ಚಗಳವರೆಗೂ, ಕಸ್ತನ್ತುನಿಯಾದ ಹೊಲಸುಕೇರಿಗಳಿಂದ ಸಿಕಂದರಿಯಾದ ಅಂತಃಪುರಗಳವರೆಗಿನ ಯುಗಪ್ರವಾಹದೊಡನೆ ಚಲಿಸಿದ್ದೇನೆ. ಆದರೆ ಈ ಎಲ್ಲ ಕಡೆಗಳಲ್ಲೂ ಗುಲಾಮಿಯನ್ನು ಕಂಡಿದ್ದೇನೆ ಹಾಗೂ ಅದು ಅಭಿಮಾನ, ಗರ್ವ, ಅಜ್ಞಾನದ ಮೆರವಣಿಗೆಗಳಲ್ಲಿ ತಲೆತಗ್ಗಿಸಿ ನಡೆಯುತ್ತಿರುವುದನ್ನು ನೋಡಿದ್ದೇನೆ.

ನೋಡಿದ್ದೇನೆ, ಗುಲಾಮಿಯನ್ನೇ ಭಗವಂತನೆಂದು ನಂಬಿ ಅದರ ಚರಣಗಳಲ್ಲಿ ಯುವಕ-ಯುವತಿಯರ ಬಲಿಕೊಡುವ ಜನರನ್ನು. ಈ ಜನ ಜೀತವನ್ನೇ ಮಹಾರಾಣಿ ಎಂದು ತಿಳಿದು ಅದರ ಪಾದದಲಿ ಮದಿರೆ ಮತ್ತು ಪರಿಮಳವನ್ನು ಹರಿಸುತ್ತಾರೆ. ಪೈಗಂಬರ್‍ನೆಂದು ಕರೆಯುತ್ತ ಅದರ ಎದುರು ಸುಗಂಧಿತ ಧೂಪ ಉರಿಸುತ್ತಾರೆ, ಧರ್ಮವೆಂದು ನಾಮಕರಣಮಾಡಿ ಅದರ ಮುಂದೆ ಮಂಡಿಯೂರಿ ಕುಳಿತು ಭಕ್ತಿಯಲ್ಲಿ ಮುಳುಗುತ್ತಾರೆ. ದೇಶಭಕ್ತಿ, ರಾಷ್ಟ್ರಪ್ರೇಮ ಎಂಬ ಹೆಸರುಕೊಟ್ಟು ಸೀಮೆಗಾಗಿ ಯುದ್ಧಮಾಡುತ್ತಾರೆ, ಜೀವ ಕೊಡುತ್ತಾರೆ. ಮಣ್ಣನ್ನು ಈಶ್ವರನ ರೂಪವೆಂದು ನಂಬಿ ತಮ್ಮ ಶ್ವಾಸ, ವಿಶ್ವಾಸಗಳನ್ನೆಲ್ಲ ಅದಕ್ಕೆ ಧಾರೆ ಎರೆಯುತ್ತಾರೆ, ಬಂಧುತ್ವ ಎಂದು ಹೇಳುತ್ತ ಅದೇ ಮಣ್ಣಿಗಾಗಿ ಮನೆಮಾರುಗಳನ್ನು ಧ್ವಂಸಗೊಳಿತ್ತಾರೆ. ಸುಖವೆಂಬ ಮರಿಚಿಕೆಯ ಬೆನ್ನಟ್ಟಿ ಸಂಘರ್ಷಕ್ಕಿಳಿಯುತ್ತಾರೆ. ಸುಖಕ್ಕಾಗಿ ಶ್ರಮಿಸುತ್ತಾರೆ, ಕಳ್ಳತನವೂ ಮಾಡುತ್ತಾರೆ. ಸಮಾನತೆ ಎಂದು ಹೇಳುತ್ತ ಹತ್ಯೆಗಳನ್ನೂ ಮಾಡುತ್ತಾರೆ.

ಭಿನ್ನ ಭಿನ್ನ ನಾಮ, ರೂಪಗಳಿವೆ ಅದಕ್ಕೆ. ಭಿನ್ನವಾಗಿದ್ದರೂ ವಾಸ್ತವದಲ್ಲಿ ಅದು ಒಂದೇ ಆಗಿದೆ. ವಿಭಿನ್ನ ಆಕಾರಗಳಿವೆ ಅದಕ್ಕೆ, ಆದರೆ ಅದರ ನಿರ್ಮಾಣದ ಮೂಲದಲ್ಲಿರುವ ತತ್ವ ಒಂದೇ ಇದೆ. ನಿಜವೆಂದರೆ ಅದೊಂದು ಅಮರ ವ್ಯಥೆ. ಈ ವ್ಯಥೆಯನ್ನು ಪ್ರತಿಯೊಂದು ಪೀಳಿಗೆ ತಮ್ಮ ಉತ್ತರಾಧಿಕಾರಿಗಳಿಗೆ ಬಳುವಳಿಯಾಗಿ ನೀಡುತ್ತದೆ. ನಾನು ಕುರುಡು ಗುಲಾಮಿಯನ್ನು ಕಂಡಿದ್ದೇನೆ. ಈ ಅಂಧ ಜೀತ ಮನುಷ್ಯನ ವರ್ತಮಾನವನ್ನು ಅವನ ಪೂರ್ವಜರ ಭೂತಕಾಲದೊಂದಿಗೆ ಜೋಡಿಸುತ್ತದೆ. ಇಂದಿನ ಹೊಸ ಶರೀರಗಳಲ್ಲಿ ಪುರಾತನ ಆತ್ಮಗಳನ್ನು ಇರಿಸುತ್ತದೆ ಹಾಗೂ ಅವರನ್ನು ಪೂರ್ವಜರ ಪರಂಪರಾಗತ ಯಾತನೆಗಳನ್ನು, ಪ್ರಾರ್ಥನೆಗಳನ್ನು ಸ್ವೀಕರಿಸಲು ಬಾಧ್ಯರಾಗುವಂತೆ ಮಾಡುತ್ತದೆ.

ನಾನು ಮೂಗ ಗುಲಾಮಿಯನ್ನು ಕಂಡಿದ್ದೇನೆ. ಈ ಮೌನ ಜೀತ ಮನುಷ್ಯನನ್ನು ಅವನ ಆ ಪತ್ನಿಯೊಂದಿಗೆ ಬಂಧಿಸಿ ಇರಿಸುತ್ತದೆ, ಯಾವಳನ್ನು ಆತ ದ್ವೇಷಿಸುತ್ತಾನೆ ಹಾಗೂ ಚೂರೂ ಇಷ್ಟಪಡುವುದಿಲ್ಲ. ಈ ಜೀತ ಒಬ್ಬ ಸ್ತ್ರೀಯ ಶರೀರವನ್ನು ಆಕೆ ದ್ವೇಷಿಸುವ ಗಂಡಸಿನ ಹಾಸಿಗೆಯ ಮೇಲೆ ಮಿಸುಕಾಡದೇ ಬೀಳುವಂತೆ ಮಾಡುತ್ತದೆ. ಫಲಸ್ವರೂಪದಲ್ಲಿ ಈ ಎಲ್ಲರ ಆತ್ಮ, ಅಧ್ಯಾತ್ಮ ಮತ್ತು ಜೀವನ ನಷ್ಟವಾಗಿದೆ. ನಾನು ಕಿವುಡ ಗುಲಾಮಿಯನ್ನು ಕಂಡಿದ್ದೇನೆ. ಈ ಸಂವೇದನಾಹೀನ ಜೀತ ಮನುಷ್ಯನ ಆತ್ಮ ಮತ್ತು ಹೃದಯದ ಗೋಣು ಮುರಿಯುತ್ತದೆ ಹಾಗೂ ದ್ವನಿಯೆಂಬ ಅರಿವನ್ನು ಕೇವಲ ಒಂದು ಪೊಳ್ಳು ಪ್ರತಿದ್ವನಿಯಾಗಿಸುತ್ತದೆ, ಶರೀರವನ್ನು ಒಂದು ದೀನ, ಹೀನ ನೆರಳಾಗಿ ಪರಿವರ್ತಿಸುತ್ತದೆ.

ನಾನು ಕುಂಟ ಗುಲಾಮಿಯನ್ನು ಕಂಡಿದ್ದೇನೆ. ಈ ಖೂಳ ಜೀತ ಮನುಷ್ಯನ ತಲೆಯನ್ನು ನಿರ್ದಯ ಶಾಸಕನ ಅನ್ಯಾಯಕರ ಶಾಸನದ ಕಾಲಡಿಯಲ್ಲಿ ತಗ್ಗುವಂತೆ ಮಾಡುತ್ತದೆ, ದೇಹವನ್ನು ದುರ್ಬಲ ಹಾಗೂ ಮೆದುಳನ್ನು ಮೋಹವೆಂಬ ಹುಚ್ಚು ಸಂತಾನಗಳ ಕೈಗೊಪ್ಪಿಸುತ್ತದೆ, ಈ ಮಕ್ಕಳು ಮುಂದೆ ತನ್ನ ಶಕ್ತಿಗಳಾಗಿ, ಶಸ್ತ್ರಗಳಾಗಿ ಉಪಯೋಗಕ್ಕೆ ಬರಲಿ ಎಂಬ ಆಶಯ ಹೊತ್ತು. ನಾನು ಕುರೂಪ ಗುಲಾಮಿಯನ್ನು ಕಂಡಿದ್ದೇನೆ. ಈ ವಿಕೃತ ಜೀತ ವಿಶಾಲ ಆಕಾಶದಿಂದ ಆ ದುರ್ಭಾಗ್ಯಪೀಡಿತ ಮನೆಯ ಅಂಗಳಕ್ಕೆ ಆತ್ಮಶಿಸುಗಳ ರೂಪದಲ್ಲಿ ಇಳಿಯುತ್ತವೆ, ಯಾವಲ್ಲಿ ಅವಶ್ಯಕತೆಗಳು ಅಜ್ಞಾನದ ಸಮೀಪದಲ್ಲಿಯೇ ಇರುತ್ತವೆ, ದೀನತೆಯು ನಿರಾಶೆ, ಹತಾಶಗಳ ಮಗ್ಗುಲಿಗೇ ವಾಸಿಸುತ್ತದೆ ಮತ್ತು ಆ ಅಂಗಳದಲ್ಲಿ ಮಕ್ಕಳು ದುಃಖಿಗಳಂತೆ, ಪೀಡಿತರಂತೆ ನಲುಗುತ್ತ ಬೆಳೆಯುತ್ತವೆ, ಅಪರಾಧಿಗಳಂತೆ ಬದುಕುತ್ತವೆ ಮತ್ತು ತಿರಸ್ಕøತರಂತೆ ಸಾಯುತ್ತವೆ.

ನಾನು ಧೂರ್ತ ಗುಲಾಮಿಯನ್ನು ಕಂಡಿದ್ದೇನೆ. ಈ ಕಪಟ ಜೀತ ವಸ್ತು, ವಿಷಯಗಳನ್ನು ಅವಾಸ್ತವಿಕ ಹೆಸರುಗಳಿಂದ ಪ್ರಚುರ ಮತ್ತು ಪ್ರಸಿದ್ಧಗೊಳಿಸುತ್ತದೆ. ಉದಾಹರಣೆಗೆ ಚಾಲಾಕಿತನವನ್ನು ಪ್ರತಿಭೆಯೆಂದು, ಮಾತುಗಾರಿಕೆಯನ್ನು ಜ್ಞಾನವೆಂದು, ದುರ್ಬಲತೆಯನ್ನು ನಮ್ರತೆ ಎಂದು ಮತ್ತು ಅಂಜುಬುರುಕುತನವನ್ನು ಅಸ್ವೀಕೃತಿ ಎಂದು. ನಾನು ಕೈದಾಗಿರುವ ಗುಲಾಮಿಯನ್ನು ಕಂಡಿದ್ದೇನೆ. ಈ ಬಂಧಿತ ಜೀತದ ಕಾರಣದಿಂದಾಗಿಯೇ ದುರ್ಬಲರ ನಾಲಿಗೆಗಳು ಕಂಪಿಸುತ್ತವೆ ಹಾಗೂ ತಮ್ಮ ವಿಚಾರಗಳ ತದ್ವಿರುದ್ಧವಾಗಿ ನುಡಿಯುತ್ತವೆ. ಅವರು ತಮ್ಮ ಮೇಲಾಗುತ್ತಿರುವ ಶೋಷಣೆಯ ಬಗೆಗೂ ಚಕಾರವೆತ್ತುವುದಿಲ್ಲ, ಅವರು ಕೇವಲ ಸೆಣಬಿನ ಖಾಲಿ ಚೀಲಗಳಿಂತಿರುತ್ತಾರೆ, ಅವುಗಳನ್ನು ಒಬ್ಬ ಸಾಮಾನ್ಯ ಹುಡುಗನೂ ಎತ್ತಿ ತೂಗುಹಾಕಬಹುದು.

ನಾನು ಬಾಗಿದ ಗುಲಾಮಿಯನ್ನು ಕಂಡಿದ್ದೇನೆ. ಈ ತಲೆಹಿಡುಕ ಜೀತದ ಪರಿಣಾಮವಾಗಿಯೇ ಒಬ್ಬ ವ್ಯಕ್ತಿ ಅಥವಾ ಒಂದು ರಾಷ್ಟ್ರ ಇನ್ನೊಬ್ಬ ವ್ಯಕ್ತಿಯನ್ನು ಅಥವಾ ಇನ್ನೊಂದು ರಾಷ್ಟ್ರವನ್ನು ತನ್ನ ಇಚ್ಛೆಯಂತೆ ನಡೆದುಕೊಳ್ಳುವಂತೆ, ತಾನು ಹೇರಿದ ಕಾಯಿದೆ, ಕಾನೂನುಗಳನ್ನು ಒಪ್ಪಿಕೊಳ್ಳುವಂತೆ ವಿವಶರನ್ನಾಗಿಸುತ್ತದೆ, ತನ್ನ ಪದತಲಗಳಲ್ಲಿ ಬಾಗಿಸುತ್ತದೆ. ಮತ್ತೆ ಈ ಬಾಗುವಿಕೆ ದಿನದಿನಕ್ಕೆ ಹೆಚ್ಚುತ್ತಲೇ ಹೋಗುತ್ತದೆ. ನಾನು ಅನಂತ ಗುಲಾಮಿಯನ್ನು ಕಂಡಿದ್ದೇನೆ. ಈ ಅಂತ್ಯರಹಿತ ಗುಲಾಮಿಯೇ ತಾನು ಮುಂದಾಗಿ ರಾಜತಂತ್ರದ ಚುಕ್ಕಾಣಿ ಹಿಡಿಯುತ್ತದೆ. ರಾಜನ ಮಗನಿಗೇ ಮುಂದಿನ ಸಾಮ್ರಾಟನೆಂದು ಘೋಷಿಸುತ್ತದೆ, ಮುಕುಟ ತೊಡಿಸುತ್ತದೆ ಮತ್ತು ಜಯಕಾರ ಹಾಕುತ್ತದೆ. ಇದು ತಪ್ಪಿಯೂ ವ್ಯಕ್ತಿಯ ಯೋಗ್ಯತೆ ಮತ್ತು ಅರ್ಹತೆ ಕಡೆಗೆ ನೋಡುವುದಿಲ್ಲ. ಪ್ರತಿಭೆಯತ್ತ ಗಮನಹರಿಸುವುದಿಲ್ಲ.

ನಾನು ಭಿಭತ್ಸ ಗುಲಾಮಿಯನ್ನು ಕಂಡಿದ್ದೇನೆ. ಈ ಪೂರ್ವಗ್ರಹ ಪೀಡಿತ ಜೀತವು ಅಪರಾಧಿಯ ಮಕ್ಕಳಿಗೆ ಸದಾಕಾಲವೂ ಲಜ್ಜೆ ಮತ್ತು ಕಲಂಕದ ಕೂಪದೊಳಗೆ ಕೆಡುವುತ್ತದೆ ಹಾಗೂ ಅಟ್ಟಹಾಸ ಮೆರೆಯುತ್ತ ಅವರ ಕಣ್ಣೀರು ನೋಡಿ ಕೇಕೆ ಹಾಕುತ್ತದೆ. ನಾನು ಭಾವದ ಗುಲಾಮಿಯನ್ನೂ ಕಂಡಿದ್ದೇನೆ. ಈ ಅಶಕ್ತ ಜೀತವು ದುಷ್ಟಶಕ್ತಿಗಳ ಪರಂಪರಾಗತ ಕ್ರಮವನ್ನು ಯಥಾವತ್ತಾಗಿ ಇರಿಸುತ್ತದೆ ಮತ್ತು ಸ್ಪøಶ್ಯ-ಅಸ್ಪøಶ್ಯಗಳ ರೋಗರುಜಿನಗಳನ್ನೂ ನಿರಂತರವಾಗಿ ಸಂಭಾಳಿಸಿಕೊಂಡು ಬರುತ್ತದೆ.

ನಾನು ದುರಾಚಾರ ಹಾಗೂ ದುಷ್ಟ ಯುಗಗಳ ಬೆನ್ನಟ್ಟಿದೆ, ಓಡಿದೆ, ಓಡಿದೆ, ದಣಿದೆ. ಕೊನೆಗೂ ಶಿಲಾಮೂರ್ತಿಯಂತಿರುವ ಗುಲಾಮರ ಮೆರವಣಿಗೆಗಳನ್ನು ಬಿಚ್ಚುಗಣ್ಣಿನಿಂದ ನೋಡುತ್ತ ಶಿಥಿಲನಾದೆ ಹಾಗೂ ಕಾಲದ ಬಿರುಬಿಸಿಲಿನಲ್ಲಿ ಜೀವನದ ಕಣಿವೆಯೊಂದರ ಏಕಾಂತ ಗುಹೆಯಲ್ಲಿ ಬಿದ್ದುಕೊಂಡು ಯೋಚಿಸಿದೆ. ಭೂತಕಾಲ ಸದಾ ತನ್ನ ಪಾಪಗಳನ್ನು ಪಾತಳದಲ್ಲಿ ಅಡಗಿಸಲು ಯತ್ನಿಸುತ್ತದೆ ಹಾಗೂ ಭವಿಷ್ಯಕಾಲದ ಆತ್ಮವು ತನ್ನ ತಾನು ಮರೆತು ಅತ್ಯಂತ ದೂರದ ಇನ್ನೊಂದು ಗುಹೆಯಲ್ಲಿ ಆರಾಮಾಗಿ ಬಿದ್ದುಕೊಂಡಿರುತ್ತದೆ. ಅಲ್ಲಿ; ರಕ್ತದ ಧಾರೆಯಲ್ಲಿ ಮತ್ತು ಕಣ್ಣೀರ ನದಿಯಲ್ಲಿ ವಿಷಕಾರಿ ಸರ್ಪದಂತೆ ಹುರಿಗಟ್ಟುತ್ತ ಹರಿದಾಡುತ್ತಿರುವ ಮತ್ತು ಅಪರಾಧಿಯ ಸ್ವಪ್ನದಂತೆ ಪ್ರತಿಕ್ಷಣ ಬೆಚ್ಚಿಬೀಳಿಸುವ ಗುಲಾಮಿಯ ಹೆಣಗಳ ಭಯವನ್ನೂ, ಅವುಗಳ ದೀನ ಪಿಸುಗುಡುವಿಕೆಯನ್ನೂ ಕೇಳಿದ್ದೇನೆ ಹಾಗೂ ದಿಕ್ಕೇಡಿಯಾಗಿ ಏನನ್ನೋ ಶೋಧಿಸುತ್ತ ಕಣ್ಣು ಬಡಿಯದೆ ಶೂನ್ಯವನ್ನು ದಿಟ್ಟಿಸಿದ್ದೇನೆ.

ಹೌದು, ಮಧ್ಯರಾತ್ರಿಯ ಹೊತ್ತಾಗಿತ್ತು. ತಮ್ಮ ಗುಪ್ತಸ್ಥಳಗಳಿಂದ ಗುಲಾಮ ಪ್ರೇತಾತ್ಮಗಳು ಒಂದೊಂದಾಗಿ ಹೊರಬೀಳಲಾರಂಭಿಸಿದವು. ನಾನು ಅವುಗಳಲ್ಲಿ ಮಧ್ಯವಯದ ಒಬ್ಬ ನಿಷ್ಕಪಟ ಮತ್ತು ನಿರಾಳ ನಾರಿಯ ಆತ್ಮವೊಂದನ್ನು ಕಂಡೆ. ಅದು ಮಂಡಿಯೂರಿ ಕುಳಿತು ಓಡುವ ಚಂದ್ರನನ್ನು ಒಂದೇಸಮನೆ ಬಂಧುವೆಂಬಂತೆ, ಧ್ಯಾನವೆಂಬಂತೆ ದಿಟ್ಟಿಸುತ್ತಿತ್ತು. ನಾನು ಅವಳ ಬಳಿ ಹೋದೆ ಹಾಗೂ ಕೇಳಿದೆ :
‘ನಿನ್ನ ಹೆಸರೇನು?’
‘ಆಜಾದಿ’
‘ಆಜಾದಿ.. ಅಂದರೆ ಸ್ವಾತಂತ್ರ್ಯ..! ಅಲ್ಲವೆ?’
ಅವಳು ಎದ್ದು ಎರಡು ಹೆಜ್ಜೆ ಮುಂದೆ ಹೋದಳು
ಅತ್ತಿತ್ತ ನೋಡಿ ‘ಹೌದು, ಅದೇ.. ಆದರೆ ನಿಧಾನಕ್ಕೆ ಮಾತಾಡು, ಯಾರಾದರೂ ಕೇಳಿಸಿಕೊಂಡಾರು’
‘ಓಹ್.. ಕ್ಷಮಿಸು. ನಿನ್ನ ಮಕ್ಕಳು?’

ಮತ್ತೆ ಎರಡು ಹೆಜ್ಜೆ ದೂರಾಗುತ್ತ ಅವಳು ಕಣ್ತುಂಬ ನೀರು ಮಿಡಿದು ಕ್ಷೀಣದನಿಯಲ್ಲಿ ಮತ್ತು ನಿಟ್ಟುಸಿರು ಬಿಡುತ್ತ ‘.. ಒಬ್ಬನನ್ನು ನೇಣಿಗೇರಿಸಿ ಕೊಲ್ಲಲಾಗಿದೆ. ಇನ್ನೊಬ್ಬಳು ಹುಚ್ಚಿಯಾಗಿ ಸತ್ತುಹೋದಳು.. ಹ್ಞಾಂ ಇನ್ನೊಂದು ಇನ್ನೂ ಹುಟ್ಟಿಯೇ ಇಲ್ಲ..’ ಎಂದಳು.

ನನ್ನಿಂದ ತಪ್ಪಿಸಿಕೊಂಡು ಮುಂದೆ ಹೋಗುತ್ತಿರುವ ಅವಳು ಇನ್ನೂ ಏನೋ ಹೇಳಿದಳು. ಆದರೆ ನನ್ನ ಕಣ್ಮುಂದೆ ಕವಿದ ಅಂಧಕಾರ ಮತ್ತು ಹೃದಯ ತುಂಬಿದ ಚಿತ್ಕಾರಗಳು ಏನನ್ನೂ ನೋಡಲು, ಏನನ್ನೂ ಕೇಳಲು ಬಿಡಲಿಲ್ಲ.

-ಗಿರೀಶ ಜಕಾಪುರೆ

* * *

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x