ಈ ಫ್ಲಾಪೀ ಬಾಯ್‍ಗೆ ಕೆಲಸ ಇಲ್ಲ. ಇದ್ದರೂ ಅವ ಮಾಡೊಲ್ಲ. ಅಂತಹ ಈ ನಿಮ್ಮ ಹುಡುಗ ಹೀಗೆ ಒಂದು ದಿನ ಎಲ್ಲಾ ಬಿಟ್ಟು ಅವನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ನಮ್ಮ ಬೆಂಗಳೂರಿನ ಲಾಲ್‍ಬಾಗ್ ಗೆ ಹೊಂಟ. ಅಲ್ಲಿ ಅವನು ಏನೇನು ನೋಡಿದ, ಏನೇನು ಮಾಡಿದ ಅನ್ನುವ ಕುತೂಹಲವಿದ್ದರೆ ಮುಂದೆ ಒದಿ.
ಬೆಳಿಗ್ಗೆ ಹತ್ತು ಮೂವತ್ತರ ಸಮಯ. ಒಳಗೆ ಹೋಗುವಾಗ ಒಬ್ಬನೇ ಏಕಾಂಗಿ ಫ್ಲಾಪೀಬಾಯ್, ಆದರೆ ಹೊರಬರುವಾಗ ಅವನ ತಲೆಯಲ್ಲಿತ್ತು ಏನೇನೋ ಆಲೋಚನೆಗಳು, ವಿಚಾರಗಳು ಅವೆಲ್ಲ ಏನು ಅಂತ ಆ ದೇವರಿಗೇ ಗೊತ್ತು. ಯಾಕೆಂದರೆ ಒಳಗೆ ಹೋಗಿದ್ದೇ ಹೊರಬರಬೇಕೆನ್ನುವ ನಿಯಮವೇನಿಲ್ಲವಲ್ಲ. ಲಾಲ್‍ಬಾಗ್‍ನ ನಾಲ್ಕೂ ದ್ವಾರಗಳನ್ನ ಅಳೆದೂ ತೂಗಿ ಅಲೆದು ಅಲೆದು ಅವನ ಕಣ್ಣಿನ ಕ್ಯಾಮರಾದಲ್ಲಿ ಅನೇಕ ಚಿತ್ರಗಳು ಸೆರೆಯಾಗಿದ್ದವು. 240 ಎಕರೆ ಪ್ರದೇಶವನ್ನೆಲ್ಲಾ ಸುತ್ತಿ ಸುತ್ತಿ ಅವನ ಕಾಲುಗಳು ಪದ ಹಾಡುತ್ತಿದ್ದವು. ಅಲ್ಲಿರುವ ಅಪರೂಪದ ವನಸಪ್ಪತಿಗಳೂ ಅವನಿಗೆ ಕುಶಿ ಕೊಟ್ಟಂತೆ ತೋರಲಿಲ್ಲ. ಗಾಜಿನ ಮನೆ, ಹಚ್ಚ ಹಸಿರಿನ ಹುಲ್ಲುಹಾಸು, ಹೂವಿನ ದಿಬ್ಬ, ಮತ್ಸ್ಯಾಗಾರ ಯಾವುದೂ ನಮ್ಮ ಮಲೆನಾಡಿನ ಹುಡುಗ ಫ್ಲಾಪೀಬಾಯ್ ಗೆ ನೆಮ್ಮದಿ ತರಲಿಲ್ಲ. ಕಾರಣ ಮತ್ತೆ ಆ ದೇವನೇ ಬಲ್ಲ.
ಸಮಯ ಕಳೆಯುತ್ತಿದ್ದಂತೆ ಮೊಘಲ್ ಶೈಲಿಯ ಆ ಕೆಂಪು ಉದ್ಯಾನದಲ್ಲಿ ಕೊನೆಕೊನೆಗೆ ಕಂಡದ್ದು ಫಾರಿನ್ ಕಲ್ಚರ್. ಹುಡುಗ ಹುಡುಗಿಯರ ಜೋಡಿ ಓಡಾಟ, ಮಕ್ಕಳ ಆಟ-ಕಿತ್ತಾಟ, ಕೆಲವರಿಗೆ ಜನರಿಂದ ಹಣ ಸುಲಿಯುವ ಪಾಠ ಮತ್ತು ಹಲವರಿಗೆ ಸಮಯ ಕಳೆಯಲು ಒಂದು ನೆಮ್ಮದಿಯ ಕೂಟ. ಸೂಕ್ಷ್ಮವಾಗಿ ಗಮನಿಸಿದಾಗ ಅವನಿಗೆ ಕಂಡಿದ್ದು ಇಷ್ಟು. ಮಂಗಗಳು ಜನರಿಗಿಂತ ಹೆಚ್ಚು ನೆಮ್ಮದಿಯಿಂದ ಇವೆ ಈ ಕೆಂಪುತೋಟದಲ್ಲಿ. ಯಾಕೆಂದರೆ ಅವಕ್ಕೆ ಮಾತು ಬರಲ್ಲ ಮತ್ತು ಕಟ್ಟುಪಾಡುಗಳಿಲ್ಲ. ನಮ್ಮ ಹಳೇ ಸಿ.ಎಂ ಹೇಳಿದ್ದು ನಿಜಾ. ಬೆಂಗಳೂರು ಸಿಂಗಾಪುರ ಆಗಿದೆ. ಯಾಕೆಂದರೆ. ಅತ್ಯಾಧುನಿಕ ತಂತ್ರಜ್ಞಾನದ ಬಗ್ಗೆ ಹೊರತುಪಡಿಸಿ ನಮ್ಮ ಜೀವನಶೈಲಿಯಲ್ಲಿ ನಾವೂ ಸಿಂಗಾಪುರವನ್ನು ಹಿಂದಿಕ್ಕಿದ್ದೇವೆ. ಇದರ ಏಲ್ಲಾ ಶ್ರೇಯಸ್ಸು ನಮ್ಮ ಯುವ ಯೂಥ್ಸ್ ಗೆ ಸಲ್ಲಲೇಬೇಕು. ಅಲ್ಲಿ ಪಬ್ಲಿಕ್‍ನಲ್ಲಿಯೇ ನಡಿತಿತ್ತು ಅವರ ರೋಮಾನ್ಸು, ತಲೆಕೆಡಿಸ್ಕೋಬೇಡಿ ಎಚ್ಚರ ತಪ್ಪಿದರೆ ಅವರೇ ಸೇರ್ಕೋತಾರೆ ಬಿಡಿ ನಿಮಾನ್ಸು. ಯಾವ್ದಕ್ಕೂ ಒಬ್ರೋ, ಇಬ್ರೋ ಅಂತಾ ಲೆಕ್ಕಹಾಕೋಣ ಅಂತಂದ್ರೆ ಅಲ್ಲಿ ನಮ್ಮ ಫ್ಲಾಪೀಬಾಯ್‍ಗೆ ಕಂಡೋರೆಲ್ಲ ಅಂತವರೇ. ಕೆಲ ಹುಡುಗಿಯರು ಚಡ್ಡಿ ಹಾಕ್ಕಂಡು ಅವರವರ ಬಾಯ್ ಪ್ರೆಂಡ್ ಅಂತಾ ಹೇಳ್ಕೋತಾ ಅಂಟಿಕೊಂಡು ನಿಂತಿದ್ರೆ, ಹಲವರು ಕೆಳಗಡೆ ಜೀನ್ಸ್ ಪ್ಯಾಂಟು, ಮೇಲ್ಗಡೆ ಡೀಪ್ ನೆಕ್, ಸ್ಲೀವ್ ಲೆಸ್ ಅಂಗೀ ತರ ಇದ್ದ ಎಂಥದೋ ಒಂದು ಸಿಕ್ಕಿಸಿಕೊಂಡು ಎಕ್ಸಪೋಸ್ ಮಾಡಿಕೊಂಡು ಕುಂತಿದ್ರು. ಇವರ ಸಾವಾಸಲ್ಲ ಅಂತಾ ಹುಡುಗ್ರನ್ನ ನೋಡಿದ್ರೆ ಅವರದ್ದು ಇನ್ನೊಂತರ. ಒಬ್ಬ ನರಪೇತಲ ಆಸಾಮಿ ಕಿವಿಗೆ ಹುಬ್ಬಿನ ಮೇಲೇ ಎಲ್ಲಾ ರಿಂಗ್ ಸಿಕ್ಕಿಸಿಕೊಂಡು ಒಳ್ಳೇ ಪೆಕರನ ತರಾ ಒಬ್ಬಳಿಗೆ ಅಂಟಿಕೊಂಡು ನಡೀತಾ ಇದ್ರೆ, ಅಲ್ಯಾರೋ ಮತ್ತೊಬ್ಬ ಇಲ್ದೇ ಇರೋ ಬಾಡಿಮೇಲೆ ಊರಗಲ ಮಚ್ಚೇ ತರ ಹಚ್ಚೇ ಹಾಕಿಸ್ಕೊಂಡು, ಅದೇನೋ ಟ್ರೆಂಡ್ ಅಂತೇ ಅದಿಕ್ಕೆ ನೆಲನೋಡ್ತಾ ಇದ್ದ ಅರ್ದಂಬರ್ದ ಪ್ಯಾಂಟ್ ನ ಸಿಕ್ಕಿಸಿಕೊಂಡು ಹೀರೋ ತರ ಹೋಗ್ತಾ ಇದ್ದ ಕಾಲ್ ಕಿಸ್ಕೊಂಡು. ಅಲ್ಲಿನ ಕಲ್ಲು ಬೆಂಚುಗಳೆಲ್ಲಾ ಇಂತಹ ಹೆಂಚುಗಳಿಂದಲೇ ತುಂಬಿ ತುಳುಕಾಡುತ್ತಿತ್ತು. ಕೆಲವರಿಗೆ ಪ್ರಪಂಚದ ಪರಿಜ್ಞಾನವಿಲ್ಲದೇ ಅಲ್ಲೇ ಚುಂಬನಗಳಿಂದಲೇ ಗಗನಚುಂಬಿ ಪರ್ವತಗಳನ್ನು ನಿರ್ಮಿಸುವುದರಲ್ಲಿ ತಲ್ಲೀನರಾಗಿದ್ದರು. ಸಮಯ ಸರಿಯುತ್ತಿದ್ದಂತೇ ಈ ತರಹ ಕಿಸಮುಸ ಮಾಡುವವರ ಸಂಖ್ಯೇ ಹೆಚ್ಚಾಗುತ್ತಿರುವಂತೇ ಅನ್ನಿಸಹತ್ತಿತು ಫ್ಲಾಪೀ ಬಾಯ್‍ಗೆ. ಪಕ್ಕದ ಹುತ್ತದ ಬಳಿಯಿಂದ ಹಿಡಿದು ದೂರದ ಪೊಟರೆಯ ಒಳಗೂ ಜೋಡಿಗಳದ್ದೇ ಝೆಂಕಾರ. ಆಗ ಫ್ಲಾಪಿಗೆ ಮನದಟ್ಟಾಯಿತು, ನಮ್ಮ ದೇಶ ‘ಭಾರÀ’ತ ದ ಭಾರೀ ಜನಸಂಖ್ಯೆಯ ಮಹತ್ವ. ಆದರೆ ಇದಕ್ಕೆ ಪರೋಕ್ಷ ಕಾರಣ ಯಾರ್ಯಾರು ಅಂತಾ ಇನ್ನೊಮ್ಮೆ ಯಾವಾಗಾದರೂ ತನಿಖೆ ನಡೆಸಿದರಾಯ್ತೆಂದು ಸುಮ್ಮನಾದ.
ದಶಕಗಳ ಕಾಲದಿಂದಲೂ ಇರುವ ದೈತ್ಯ ಆಲದ ಮರಗಳನ್ನು ಎಂದು ಫ್ಲಾಪೀಬಾಯ್ ಬೋನ್ಸಾಯ್ ಹೆಸರಿನಲ್ಲಿ ಪಾಟಿನಲ್ಲಿ ನೋಡಿದನೋ ಅಂದೇ ಅವನಿಗೆ ಕಾಲ ಬದಲಾಗುತ್ತಿದೆ ಎಂದು ಅರಿವಾಗತೊಡಗಿತು. ಇದೇ ರೀತಿ ಮುಂದುವರೆದರೆ ಸಧ್ಯದಲ್ಲೇ ಪಾತ್ರೆಯಲ್ಲಿ ಕೋಳಿಮೊಟ್ಟೆಯನ್ನಿಟ್ಟು ಹೆಗ್ಗಣದ ಮರಿ ಮಾಡುವ ಕಾಲ ದೂರವಿಲ್ಲವೆಂದು ಯೋಚಿಸಹತ್ತಿದನು. ಇಷ್ಡಲ್ಲದೇ ಆ ಕೆಂಪುತೋಟದಲ್ಲಿ ದುಡಿಮೆ ಮಾಡುತ್ತಿರುವ ಚಿಕ್ಕ ಮಕ್ಕಳನ್ನು ಕಂಡನು, ದುಡಿಮೆಗೆ ನೂಕುತ್ತಿದ್ದ ಅವರ ಪಾಲಕರನ್ನು ನೋಡಿದನು. ಹಗಲು ದರೋಡೆಕಂಡನು. ಮೋಸದ ತೀವ್ರತೆಯೆ ಮುಖ ನೋಡಿದನು. ಛೀ…!! ಈ ಫ್ಲಾಪೀಬಾಯ್ ಸರಿ ಇಲ್ಲ, ಅವನ ಕಣ್ಣುಗಳೂ ಕೂಡಾ ಬರೀ ಬ್ಯಾಡದ್ದನ್ನೇ ನೋಡ್ತಾವೆ ಅಂದ್ರೆ ಬಹುಶಃ ತಪ್ಪಾಗ್ತದೆ. ಯಾಕೆಂದರೆ ಅವನು ನೋಡಿದ ಕಡೆಯೂ ಒಲವಿತ್ತು, ಪ್ರೀತಿಯ ಸೆಲೆಯಿತ್ತು, ಅಲ್ಲಿಯೂ ಭಾರತೀಯತೆಯನ್ನು ಪ್ರತಿಬಿಂಬಿಸಿದ ಪಾಶ್ಚಾತ್ಯರ ಕುಲವಿತ್ತು. ಆಹಾರಕ್ಕಾಗಿ ಭೇಟೆಯಾಡುವ ಛಲವಿತ್ತು. ದೀನರಿಗೆ ಸಹಾಯಮಾಡುವ ಮಾನವೀಯತೆಯ ಗುಣವಿತ್ತು. ಮುಖ್ಯವಾಗಿ ಜನರ ಬಳಿ ಸಮಯವಿತ್ತು, ಜೇಬಿನಲ್ಲಿ ಕೊಂಚ ಹಣವೂ ಇತ್ತು. ಇತ್ತು ಇಲ್ಲಗಳ ನಡುವೆ ಜೀವನದ ಹಳಿಯಿತ್ತು. ಕಾಲ ಎನ್ನುವ ಬೆಳೆಯುತ್ತಿರುವ ಬೆಳೆ ಇತ್ತು.
ಹೊರಗಡೆಯ ಲಾಲ್‍ಬಾಗ್‍ಗೂ ಒಳಗಡೆಯ ಲಾಲ್‍ಬಾಗ್‍ಗೂ ಇರುವ ಎಷ್ಟೊಂದು ಅಂತರವನ್ನು ಮನಗಂಡಿದ್ದನು ನಮ್ಮ ಫ್ಲಾಪೀಬಾಯ್. ಪ್ರಪಂಚದ ಸಾಮ್ಯತೆಯನ್ನು ಕೂಡಾ ಅಲ್ಲಿಯೆ ತಿಳಿದುಕೊಂಡನು. ಆದರೂ ಅಲ್ಲಿಯ ಪರಿಸರ ಮನುಷ್ಯನಿಗೆ ವ್ಯಂಗ್ಯಮಾಡುತ್ತಿರುವಂತೆ ಭಾಸವಾಗತೊಡಗಿತು. ಏನೋದೂ ಅರಿಯದೇ ಕ್ಷಣಕಾಲ ತಬ್ಬಿಬ್ಬಾದನು ಕೂಡಾ. ಎಲ್ಲವೂ ಅಯೋಮಯ, ಅಸ್ಪಷ್ಟ ಈ ಲೇಖನದಂತೆ. ಅರ್ಥವಾದಂತಿರುತ್ತೆ ಒಮ್ಮೊಮ್ಮೆ. ಆದರೆ ನಿಜವಾಗಿಯೂ ಅರ್ಥವೆ ಇರುವುದಿಲ್ಲ. ಈ ಲೇಖನದಲ್ಲಿ ತಿರುಳಿಲ್ಲ. ಆದರೂ ಏನೋ ಇದೆ ಎನ್ನುವ ಭಾವ ಕಾಡದೇ ಇರುವುದಿಲ್ಲ. ಏನೋ ಹೇಳಬೇಕೆನಿಸುತ್ತದೆ. ಆದರೆ ಏನೂ ಉಳಿದಿರುವುದಿಲ್ಲ. ಕಾರಣ ಫ್ಲಾಪ್ ಆಗುವುದು ಫ್ಲಾಪೀಬಾಯ್‍ಗೆ ಹೊಸತಲ್ಲ. ಆದರೂ ಕೆಂಪುತೋಟದಲ್ಲಿ ಏನೋ ಒಂದು ಅವ್ಯಕ್ತ ಭಾವನೆಯು ಉಳಿದು ಏಕಾಗಿ ತಾನು ಅಲ್ಲಿ ಹೋಗಿದ್ದೆನೆಂಬುದನ್ನೇ ಅವÀನು ಮರೆತಿರುವುದು ಮಾತ್ರ ನಿಜವಾಗಿಯೂ ಒಂದು ದುರಂತವೇ ಸರಿ…!!
-ಫ್ಲಾಪೀಬಾಯ್
ಪ್ಲಾಪಿ ಬಾಯ್ ಲೇಖನ ಹಿಡಿಸಿತು. ಬರೆಯುವ ಶೈಲಿ ಇಷ್ಟವಾಯಿತು. ಕೀಪ್ ರೈಟಿಂಗ್ ಕಣಾ… (Y)
ಥ್ಯಾಂಕ್ಸ್ ರುಕ್ಕು
tumba chennaagide lekhana.!!super! keep writing..
ಥ್ಯಾಂಕ್ಸ್ ಅಕ್ಕಾ
ಕೆಂಪು ತೋಟದೊಳಗೆ ಬದುಕಿನ ಹಲವು ಮುಖಗಳ ದರ್ಶನ .
nice article.
🙂
nice one friend.
thnx 🙂