ಆಸೆಗಳು ನನ್ನವು ಸಾವಿರಾರು: ವಾಸುಕಿ ರಾಘವನ್

ಜವಹರಲಾಲ್ ನೆಹರು ಅವರ “ಟ್ರಿಸ್ಟ್ ವಿತ್ ಡೆಸ್ಟಿನಿ” ನಮ್ಮ ದೇಶದ ಅತ್ಯಂತ ಪ್ರಸಿದ್ಧ ಭಾಷಣ ಅನ್ಸುತ್ತೆ. ಸುಧೀರ್ ಮಿಶ್ರಾ ಅವರ “ಹಜಾರೋ ಖ್ವಾಹಿಷೇ ಏಸೀ” ಚಿತ್ರ ಶುರುವಾಗುವುದೇ ಈ ಭಾಷಣದ ಧ್ವನಿ ಮುದ್ರಿಕೆಯೊಂದಿಗೆ. “ವಿಧಿಯೊಂದಿಗೆ ನಮ್ಮ ಒಪ್ಪಂದ ಯಾವಾಗಲೋ ಆಗಿದೆ, ಅದರೆಡೆಗೆ ಮುನ್ನುಗ್ಗುವ ಪಣವನ್ನು ಇಂದು ತೊಡೋಣ. ಮಧ್ಯರಾತ್ರಿಯ ಈ ಹೊತ್ತಿನಲ್ಲಿ, ಇಡೀ ಪ್ರಪಂಚವೇ ಮಲಗಿರುವಾಗ, ಭಾರತ ಸ್ವಾತ್ರಂತ್ರ್ಯದೆಡೆಗೆ, ಬೆಳಕಿನೆಡೆಗೆ ಸಾಗುತ್ತದೆ”. ದಾಸ್ಯದಲ್ಲಿ ಸಿಕ್ಕಿ ನರಳುತ್ತಿದ್ದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ ಇಂಥ ಒಂದು ಭಾಷಣ ಕೇಳಿ ಎಂತಹ ರೋಮಾಂಚನ ಆಗಿರಬೇಡ! ಈ ಆಡಿಯೋ ಮುಗಿದ ತಕ್ಷಣ ತಣ್ಣಗೆ ಈ ಸಾಲುಗಳು ತೆರೆಯ ಮೇಲೆ ಮೂಡುತ್ತವೆ – “ನೆಹರು ಎಣಿಸಿದ್ದು ತಪ್ಪು. ಅವರ ಭಾಷಣ ಮಾಡುವಾಗ ನ್ಯೂಯಾರ್ಕ್ ಅಲ್ಲಿ ಮಧ್ಯಾಹ್ನ ಎರಡೂವರೆ ಗಂಟೆ!” ಅರೆ ಹೌದಲ್ವಾ, ಎಂತಹ ಇನ್ಸೈಟ್?

ಅದು ಎಪ್ಪತ್ತರ ದಶಕ. ಸಿದ್ಧಾಂತ್, ಗೀತಾ, ವಿಕ್ರಮ್ ಡೆಲ್ಲಿಯ ಕಾಲೇಜ್ ಒಂದರಲ್ಲಿ ಸಹಪಾಟಿಗಳು. ಮೂವರ ಕೌಟುಂಬಿಕ ಹಿನ್ನಲೆ ಹಾಗೂ ಆಶೋತ್ತರಗಳು ಬೇರೆಬೇರೆ. ಸಿದ್ಧಾಂತ್ ಸಿರಿವಂತ ಜಡ್ಜ್ ಒಬ್ಬರ ಮಗ. ಆಗ ತಾನೇ ದೇಶದಲ್ಲಿ ಕುಡಿಯೊಡೆಯುತ್ತಿರುವ ನಕ್ಸಲೈಟ್ ಚಳುವಳಿಯಿಂದ ಪ್ರೇರಿತನಾಗಿ, ಕ್ರಾಂತಿಯಿಂದ ದೇಶದಲ್ಲಿ ಏನಾದರೂ ಬದಲಾವಣೆ ತರಬೇಕೆಂಬ ಅದಮ್ಯ ಹಂಬಲ ಹೊಂದಿದ್ದಾನೆ. ಲಂಡನ್ ಅಲ್ಲಿ ಓದಿ, ಭಾರತಕ್ಕೆ ಹಿಂದಿರುಗಿರುವ ಗೀತಾ ತುಂಬುಕುಟುಂಬದ ಆಂಧ್ರಾ ಹುಡುಗಿ. ವಿಕ್ರಮ್ ತನ್ನ ಗಾಂಧೀವಾದಿ ರಾಜಕಾರಿಣಿಯ ಆದರ್ಶಗಳಿಂದ ಬೇಸತ್ತಿರುವ ಮಧ್ಯಮ ವರ್ಗದ ಹುಡುಗ. ಹೇಗಾದರೂ ಹಣ ಮತ್ತು ಯಶಸ್ಸು ಸಾಧಿಸುವ ಛಲವಿರುವ ಇವನಿಗೆ ಗೀತಾಳ ಮೇಲೆ ಪ್ರೀತಿ. ಆದರೆ ಗೀತಾಳಿಗೆ ಸಿದ್ಧಾಂತ್ ಮೇಲೆ ಒಲವು, ಆದರೆ ಅವನ ಆದರ್ಶ ಮತ್ತು ಹೋರಾಟದ ಬಗ್ಗೆ ಅವಳದೇ ಸ್ಪಷ್ಟ ನಿಲುವು ಇಲ್ಲ. ಸಿದ್ಧಾಂತ್ ಗೂ ಅವಳ ಮೇಲೆ ತುಂಬಾ ಪ್ರೀತಿ, ಆದರೆ ಅವನ ಆದರ್ಶಗಳು ಅವರ ಪ್ರೀತಿಗೆ ತೊಡಕಾಗುತ್ತವೆ.

ಮುಂದೈದು ವರ್ಷಗಳಲ್ಲಿ ಅವರ ಜೀವನದಲ್ಲಿ ನಡೆಯುವ ಬದಲಾವಣೆ, ದೇಶದ ಸ್ಥಿತಿಗತಿಗಳಲ್ಲಿ ಆಗುವ ಬದಲಾವಣೆಗಳೇ ಕಥೆಯ ವಸ್ತು. ಸಿದ್ಧಾಂತ್ ಬಿಹಾರಕ್ಕೆ ಹೋಗಿ ಶೋಷಿತರ ಪರವಾಗಿ ಸಂಘರ್ಷಕ್ಕೆ ನಿಲ್ಲುತ್ತಾನೆ. ಸೈದ್ಧಾಂತಿಕ ಕಾರಣಗಳಿಂದ ಅವನ ಗುಂಪು ಒಡೆದರೂ, ಏನೆಲ್ಲಾ ಕಷ್ಟಗಳು ಎದುರಾದರೂ ಹೋರಾಟ ಮುಂದುವರಿಸುತ್ತಾನೆ. ಗೀತಾ ಒಬ್ಬ ಐ.ಎ.ಎಸ್. ಅಧಿಕಾರಿಯನ್ನು ಮದುವೆಯಾದರೂ, ಕದ್ದುಮುಚ್ಚಿ ಸಿದ್ಧಾಂತ್ ಜೊತೆ ಸಂಬಂಧವನ್ನು ಇಟ್ಟುಕೊಂಡಿರುತ್ತಾಳೆ. ವಿಕ್ರಮ್ ಈಗ ದೊಡ್ಡ ಪೊಲಿಟಿಕಲ್ ಲಾಬಿಯಿಸ್ಟ್, ದೊಡ್ಡ ದೊಡ್ಡ ಬಿಸಿನೆಸ್ ಮೆನ್, ಪ್ರಭಾವೀ ರಾಜಕಾರಿಣಿಗಳ ಜೊತೆ ಒಡನಾಟ. ಎಷ್ಟೇ ಗಳಿಸಿದರೂ ಇನ್ನೂ ಗೀತಾಳ ಪ್ರೀತಿಗಾಗಿ ಹಂಬಲಿಸುತ್ತಿರುತ್ತಾನೆ. ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾದ ಸಮಯದಲ್ಲಿ ಇವರ ಸಂಬಂಧಗಳು ಅನೇಕ ರೀತಿಯಲ್ಲಿ ತಿರುವುಗಳನ್ನು ಪಡೆದುಕೊಳ್ಳುತ್ತವೆ.

ಒಂದು ಚಿತ್ರದ ಕಥೆ ಏನೇ ಇರಲಿ, ಅದನ್ನು ನಿರೂಪಿಸುವ ರೀತಿ, ಅದು ತೆಗೆದುಕೊಳ್ಳೋ ನಿಲುವು ಕೇವಲ ನಿರ್ದೇಶಕರ ಮೇಲೆ ಅವಲಂಬಿಸಿರುತ್ತೆ. ಹಾಗಾಗಿ ನಿರ್ದೇಶಕ ಸುಧೀರ್ ಮಿಶ್ರಾ ಅವರನ್ನು ವಿಶೇಷವಾಗಿ ಅಭಿನಂದಿಸಬೇಕಾಗುತ್ತೆ. ಎಪ್ಪತ್ತರ ದಶಕ ಬಹುಷಃ ಅವರ ಯೌವನಾವಸ್ಥೆಯ ಸಮಯ. ಭಾರತ ದೇಶಕ್ಕೂ ಇಪ್ಪತ್ತು-ಮೂವತ್ತು ವರ್ಷ ವಯಸ್ಸು ಆಗ. ಚಿತ್ರದ ಮುಖ್ಯ ಪಾತ್ರಧಾರಿಗಳೂ 1947ರ ಆಸುಪಾಸು ಹುಟ್ಟಿದವರೇ. ಈ ಪಾತ್ರಗಳಿಗೆ ಬಯಕೆಗಳ, ಹುಮ್ಮಸ್ಸಿನ, ಆದರ್ಶಗಳ, ಹತಾಶೆಗಳ, ಕನ್ಫ್ಯೂಷನ್ ಗಳ ಕಾಲ ಅದು. ಭಾರತಕ್ಕೆ ಕೂಡ! ಇಡೀ ಚಿತ್ರ ತೆರೆದುಕೊಳ್ಳುವುದು ಬಿಡಿಬಿಡಿ ಘಟನೆಗಳನ್ನು ಸಿದ್ಧಾಂತ್ ಮತ್ತು ವಿಕ್ರಮ್ ಗೀತಾಳಿಗೆ ಬರೆಯುವ “ಡಿಯರ್ ಗೀತಾ” ಪತ್ರಗಳ ಮೂಲಕ. ಇಷ್ಟು ಗಂಭೀರ ವಿಷಯದ ಮೇಲೆ ಆಧರಿಸಿದ್ದರೂ ನಿರೂಪಣೆಯಲ್ಲಿ ಒಂದು ಬಗೆಯ ಲೈಟ್ ಹ್ಯೂಮರ್ ಅನ್ನು ಕಾಯ್ದುಕೊಂಡು ಬಂದಿದ್ದಾರೆ, ಎಲ್ಲೂ ಗಂಭೀರತೆಯನ್ನು ಬಿಟ್ಟುಕೊಡದೆ.

ಕೆಲವು ಸನ್ನಿವೇಶಗಳ ಬಗ್ಗೆ ಹೇಳಲೇಬೇಕು. ಆದರ್ಶವಾದಿ ಯುವಕರು ಹಳ್ಳಿಹಳ್ಳಿಗೆ ಹೋಗಿ ಬಡವರನ್ನು ಸಂಘಟಿಸಿ ಭಾಷಣ ನೀಡುತ್ತಿರುತ್ತಾರೆ. ಹಾಗೊಮ್ಮೆ ಒಂದು ಸಭೆಯಲ್ಲಿ ಯುವಕನೊಬ್ಬ “ಒಂದು ರಾಜಕೀಯ ಪಕ್ಷದ ಹೆಸರಿನಲ್ಲಿ ‘ಸಮಾಜವಾದಿ’ ಇದೆ ಅಂದಾಕ್ಷಣ ಅದು ಜನರ ಅಭಿವೃದ್ಧಿ ಬಯಸುವ ಪಕ್ಷ ಆಗಿರೋಲ್ಲ. ಹಿಟ್ಲರ್ ಪಕ್ಷದ ಹೆಸರಿನಲ್ಲೂ ‘ಸಮಾಜವಾದಿ’ ಅಂತ ಇತ್ತು” ಅಂತ ಹೇಳುತ್ತಾನೆ. ಸಭಿಕರಲ್ಲಿ ಒಬ್ಬ ಹಳ್ಳಿಯವ “ಯಾರೋ ಇವನು ಹಿಟ್ಲರ್ ಅಂದ್ರೆ?” ಅಂತ ತನ್ನ ಪಕ್ಕದವನಿಗೆ ಕೇಳಿದಾಗ, ಆ ಇನ್ನೊಬ್ಬ “ಗೊತ್ತಿಲ್ಲಪ್ಪ, ನಮ್ಮ ಹಳ್ಳಿಯವನಂತೂ ಅಲ್ಲ” ಅನ್ನುತ್ತಾನೆ. ಆದರ್ಶಕ್ಕೂ ವಾಸ್ತವಿಕತೆಗೂ ಇರುವ ಅಂತರವನ್ನು ಎಷ್ಟು ಸಿಂಪಲ್ಲಾಗಿ ಹೇಳಿದಂತೆ!

ಇನ್ನೊಂದು ಸೀನಲ್ಲಿ, ಸಿದ್ಧಾಂತ್ ಬಿಹಾರದ ಒಂದು ಕುಗ್ರಾಮದಲ್ಲಿ ಶೋಷಿತ ಜನರನ್ನೆಲ್ಲಾ ಸಂಘಟಿಸುವ ಕೆಲಸದಲ್ಲಿ ತೊಡಗಿದ್ದಾನೆ. ಅವನೇ ಹೇಳುವಂತೆ ಡೆಲ್ಲಿಯಿಂದ ಕೇವಲ ಐನೂರು ಮೈಲಿ ದೂರದಲ್ಲಿದ್ದರೂ ನಾಗರೀಕತೆಯಲ್ಲಿ ಈ ಹಳ್ಳಿ ಐದು ಸಾವಿರ ವರ್ಷ ಹಿಂದಿದೆ. ಕೆಳಜಾತಿಯ ಒಬ್ಬ ಹುಡುಗಿಯನ್ನು ಅತ್ಯಾಚಾರ ಮಾಡಿದ್ದಾನೆ ಆ ಹಳ್ಳಿಯ ಮುಖಂಡನ ಮಗ. ಅವನನ್ನು ಕೊಲ್ಲಲು ಅಲ್ಲಿನ ಎಲ್ಲಾ ಆಳುಗಳೂ ಒಟ್ಟಾಗಿ ದೊಣ್ಣೆಗಳನ್ನು ಹಿಡಿದುಕೊಂಡು ಆ ಮುಖಂಡನ ಮನೆಗೆ ಬಂದಿದ್ದಾರೆ. ಕ್ರಾಂತಿ ಶುರುವಾಗಿದೆ ಎಂಬ ತೃಪ್ತಿ ಸಿದ್ಧಾಂತ್ ಗೆ. ಆದರೆ ಆ ಮುಖಂಡನಿಗೆ ಎದೆನೋವು ಬಂದ ಮರುಕ್ಷಣವೇ ಆಳುಗಳೆಲ್ಲರೋ ದೊಣ್ಣೆಗಳನ್ನು ಬಿಸಾಡಿ, ತಮ್ಮ ಧಣಿಯ ಆರೈಕೆಗೆ ಮುಂದಾಗುತ್ತಾರೆ. ಆದರೆ ತನ್ನ ತಂದೆ ಸಾಯ್ತಾ ಇದ್ರೂ ಒಬ್ಬ ಕೆಳಜಾತಿಯ ಡಾಕ್ಟರ್ ಉಪಚರಿಸುವುದು ಬೇಡ ಅಂತ ಆ ಮುಖಂಡನ ಮಗ ಹಠ ಮಾಡುತ್ತಾನೆ. ಎಂತಹ ಅನ್ಯಾಯ ಆದಾಗಲೂ ವಿಧೇಯತೆ ತೋರಿಸುವ ಆಳುಗಳು, ಅಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ತನ್ನ ಸಣ್ಣತನ ತೋರಿಸುವ ಆ ಅತ್ಯಾಚಾರಿಯ ವೈರುಧ್ಯಗಳನ್ನು ನೋಡಿ ಸಿದ್ಧಾಂತ್ ದಿಗ್ಮೂಢನಾಗುತ್ತಾನೆ.

ಕಲಾವಿದರೆಲ್ಲಾ ಒಬ್ಬರ ಮೇಲೊಬ್ಬರು ಪೈಪೋಟಿಗೆ ಬಿದ್ದಂತೆ ನಟಿಸಿದ್ದಾರೆ. ಕೆ.ಕೆ.ಮೆನನ್ ಸಿದ್ಧಾಂತ್ ಪಾತ್ರಕ್ಕೆ ಬೇಕಿರೋ ಹತಾಶೆ, ಕೋಪ, ನಿಸ್ಸಹಾಯಕತೆ ಇದನ್ನೆಲ್ಲಾ ಮನೋಜ್ಞವಾಗಿ ಹೊರತಂದಿದ್ದಾರೆ. ಆದರೆ ಚಿತ್ರದ ಅತ್ಯುನ್ನತ ನಟನೆ ಚಿತ್ರಾಂಗದಾ ಸಿಂಗ್ ಮತ್ತು ಶೈನಿ ಅಹುಜ ಅವರದ್ದು, ಇವರಿಬ್ಬರಿಗೂ ಇದು ಮೊದಲ ಸಿನಿಮಾ ಅಂದರೆ ನಂಬಕ್ಕೆ ಆಗಲ್ಲ. ಚಿತ್ರಾಂಗದಾ ಎಷ್ಟು ಮೋಹಕವಾಗಿ ಕಾಣುತ್ತಾಳೋ ಅಷ್ಟೇ ಪ್ರಬುದ್ಧವಾದ ಅಭಿನಯ ನೀಡಿದ್ದಾಳೆ. “ಸ್ಮಿತಾ ಪಾಟೀಲ್ ಅವರನ್ನೇ ಮೀರಿಸಿಬಿಟ್ಟಿದೀಯ” ಅಂದರಂತೆ ಶೇಖರ್ ಕಪೂರ್ ಅವಳ ನಟನೆ ಕಂಡು!

ಚಿತ್ರದ ಆತ್ಮ ಅಂದರೆ ಶಂತನು ಮೊಇತ್ರ ಅವರ ಸಂಗೀತ. ಈಗಲೂ ಕಣ್ಣು ಮುಚ್ಚಿಕೊಂಡು “ಡಿಯರ್ ಗೀತಾ” ಅಂತ ನೆನಸಿಕೊಂಡರೆ ಶುಭಾ ಮುದ್ಗಲ್ ಹಾಡುಗಳು ನನ್ನನ್ನು ಭಾವಪರವಶನನ್ನಾಗಿ ಮಾಡುತ್ತವೆ. ಜೊತೆಗೆ ಮಿರ್ಜಾ ಘಾಲಿಬ್ ಅವರ ಆಳವಾದ ಅರ್ಥವುಳ್ಳ ಪದ್ಯಗಳಿವೆ.

ಆಸೆಗಳು ನನ್ನವು ಸಾವಿರಾರು

ಒಂದೊಂದಕೂ ತನ್ನದೇ ತಕರಾರು

ಕೈಗೂಡಿವೆ ಬರಿ ಕೆಲವಾರು

ಹಾಗೇ ಉಳಿದಿವೆ ಹಲವಾರು

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಪ್ರಮೋದ್
10 years ago

ಈ ಚಿತ್ರ ಡೌನ್ ಲೋಡ್ ಮಾಡಿ ತಿ೦ಗಳುಗಳಾಯಿತು. ನೋಡೋದಿಕ್ಕೆ ಮುಹೂರ್ತವಿನ್ನೂ ಬ೦ದಿಲ್ಲ. ಖ೦ಡಿತಾ ನೋಡಬೇಕಿನ್ನು. 
ಸುಧೀರ್ ಮಿಶ್ರಾ ಒಳ್ಳೆಯ ನಿರ್ದೇಶಕ

1
0
Would love your thoughts, please comment.x
()
x