ಸರಣಿ ಬರಹ

ಫ್ಲಾಪಿ ಬಾಯ್ ಮತ್ತು ಲಗೋರಿಬಾಬಾ-1: ಫ್ಲಾಪಿ ಬಾಯ್

ಅರ್ಥವಾಗುವವರಿಗೆ ಮಾತ್ರ! ಎಲ್ಲರಿಗಲ್ಲ..

ಬ್ಯಾಂಕ್ ಅಕೌಂಟು

ಫ್ಲಾಪಿ ಬಾಯ್ ಕೆರೆಬದಿ ಕುಂತು ಆಕಾಶದಲ್ಲಿ ಹಾರೋ ಕಾಗೆ ನೋಡ್ತಾ ಇದ್ದ. ಅದೇ ಟೇಮಿಗೆ ನಮ್ ಲಗೋರಿಬಾಬಾ ಕೆರೆ ಕಡೆ ಕೆಲ್ಸ ಮುಗಿಸ್ಕಂಡ್ ಬಂದ. “ಏನ್ಲಾ ಮಾಡ್ತಿದ್ದಿ ಪ್ಲಾಪಿ? ತಂತ್ರಜ್ಞಾನಿ ಬ್ರಹ್ಮಚಾರಿ ಅಂತ ಊರಲ್ಲೆಲ್ಲಾ ಹೇಳ್ಕಂಡ್ ತಿರುಗ್ತಿ ಇತ್ತೀಚೆಗೆ ಏನೂ ಕಂಡು ಹಿಡಿದಿಲ್ವಾ?” ಅಂತ ಕೇಳ್ದ. ಪಾಪ ನಮ್ ಫ್ಲಾಪಿ ಬಾಯ್ ಗೆ ಲಗೋರಿಬಾಬಾನ ನೋಡ್ತಾ ಇದ್ದಂಗೆ ದುಃಖ ಕಿತ್ಗಂಡ್ ಕಿತ್ಗಂಡ್ ಬಂತು. ಅಳುಅಳುತ್ತಾ ಅಂದ, “ಲಗೋರಿಬಾಬಾ, ಲೈಫಲ್ಲಿ ತುಂಬಾ ಬೇಜಾರಾಗಿದೆ, ಸಾಯ್ಬೇಕು ಅನ್ಸತ್ತೆ! ಆದ್ರೆ ಸಾಯೋಕೂ ಬೇಜಾರು. ಏನ್ ಮಾಡ್ಲಿ ಅಂತಾ ತಿಳಿತಿಲ್ಲ. ಸತ್ರೆ ಕಾಗೆ ಆಗ್ತಾರೆ ಅಂತ ಯಾರಾದ್ರೂ ಪ್ರೂಫ್ ಕೊಟ್ರೆ ಈಗ್ಲೆ ಸತ್ತು ಕಾಗೆ ಆಗೋಗ್ತಿನಿ ಬಾಬಾ… ಪ್ಲೀಜ್ ಗೈಡ್ ಮಿ!”

“ಅಲೆಲೆ ಬಡ್ಡಿತದೆ.. ಊರವರ್ನೆಲ್ಲಾ ಸಾಯೊ ಹೊಡೆಯೊ ತರ ತಲೆಗೆ ಹುಳ ಬಿಡ್ತಾ ಇದ್ದ ನಿಂಗೇನಾತ್ಲಾ.. ಅಚ್ಛೇ ದಿನ್ ಏನಾರಾ ಬಂದ್ ಬಿಡ್ತಾ ನಮ್ ಊರಿಗೆ?” ಅಂದ ಲಗೋರಿಬಾಬಾ. “ಏನೂಂತ ಹೇಳಲಿ ಬಾಬಾ ಕೈಯಲ್ಲಿ ಕಾಸಿಲ್ಲ.. ಬೈಯೋಕೆ ಗರ್ಲ್‍ಫ್ರೆಂಡಿಲ್ಲ.. ಟೊಟಲ್ಲಾಗಿ ಹೇಳಣಾಂದ್ರೆ ಲೈಫಲ್ಲಿ ಮಜಾ ಇಲ್ಲ. ತುಂಬಾ ಆಸೆಪಟ್ಟು ನಮ್ಮೂರ ಬ್ಯಾಂಕಲ್ಲಿ ಅಕೌಂಟ್ ಮಾಡ್ಸಿದೀನಿ. ಆದ್ರೆ ಝೀರೋ ಬ್ಯಾಲೆನ್ಸ್ ಇದೆ. ಬೆಳಿಗ್ಗೆ ಆ ಲೇಡಿ ಮ್ಯಾನೇಜರ್ ಕರೆದು ಕಂಡಾಪಟ್ಟೆ ಬೈದ್ಲು, ಅಕೌಂಟ್ ಕ್ಲೋಜ್ ಮಾಡ್ತೀನಿ ಅಂದ್ಲು. ತುಂಬಾ ಬೇಜಾರಾತು. ಲೈಫಲ್ಲಿ ಫಸ್ಟ್ ಟೈಮ್ ಮಾಡ್ಸಿದ್ದು.. ಒಂಥರಾ ಫಸ್ಟ್ ಕ್ರಶ್ ತರ ನಂಗದು.. ಅಳು ಬರ್ತಾ ಇದೆ.” ಅಳೋಕೆ ಶುರುಮಾಡಿದ ಫ್ಲಾಪಿ.

“ಥೂ ಬಡ್ಡಿ ಹೈದ. ಇಂಥ ಸಿಲ್ಲಿ ಮ್ಯಾಟೆರ್ ಎಲ್ಲಾ ನನ್ನತ್ರ ತರ್ಬೇಡ ಮಾರಾಯ. ನಾಗಾಲ್ಯಾಂಡಿಗೆ ಹೋಗಿ ಅಘೋರಿ ಆಗಿ ಲಗೋರಿಬಾಬಾ ಆದ ನನಗೆ ಇಂಥ ಚಿಲ್ಲರೆ ವಿಷ್ಯ ಕೇಳ್ತ್ಯಾ? ನಿನ್ ಮಕ್ಕೆ ಹಸಿ ಬೂದಿ ಮೆತ್ತಾ..! ಆದ್ರೂ ಹೇಳ್ತೀನಿ ಕೇಳು. ಇಮ್ಯಾಜಿನ್ ಮಾಡ್ಕ ದಿನಾ ಬೆಳಿಗ್ಗೆ ನಿನ್ ಅಕೌಂಟ್‍ಗೆ 86400ರೂಪಾಯಿ ಬೀಳತ್ತೆ ಅಂತ. ಆದ್ರೆ ಅದು ಸಾಯಂಕಾಲ ಆಗ್ತಾ ಇದ್ದಂಗೆ ಖರ್ಚಾಗಿ ಬಿಡತ್ತೆ. ನಾಳೆಗೆ ಆ ಹಣ ಉಳಿಯಲ್ಲ, ಬದಲಾಗಿ ಹೊಸ ಹಣ ಬರತ್ತೆ! ಆಗ ಏನ್ ಮಾಡ್ತೀಯಾ?” ಕ್ವಶ್ಚನ್ ಎಸೆದ ಲಗೋರಿಬಾಬಾ.

“ಬಾಬಾ, ಮಾಡೋದೇನು ಚಿಂದಿ ಉಡಾಯಿಸಿ ಬಿಡ್ತೀನಿ. ಅಯ್ಯೋ ಸಿಕ್ಕಾಪಟ್ಟೆ ಪ್ಲಾನ್ ಉಂಟು… ಮೊದಲು ನಾನು..” ಹೀಗೇ ಹೇಳ್ತಾ ಇದ್ದಾಗೆ ಲಗೋರಿಬಾಬಾ ಮಧ್ಯದಲ್ಲೇ ಬಾಯಿಹಾಕಿ ತಡೆ ಒಡ್ಡಿದ. “ಸಾಕು ಫ್ಲಾಪಿ, ಮುಂದೆ ಹೇಳೋದ್ ಬ್ಯಾಡ.. ಗೊತ್ತಾತು.. ಆದ್ರೆ ಇದು ಆಲ್ರೆಡಿ ನಿನ್ ಅಕೌಂಟ್‍ಗೆ ಜಮೆಯಾಗಿದೆ” ಅಂದ.

“ಏನೂ? ನೀವು ನನ್ನ ಮಂಗ ಮಾಡ್ತಾ ಇಲ್ಲ ಅಲ್ವಾ ಬಾಬಾ?” ಎನ್ನುತ್ತಿದ್ದಂತೆ; ಕೂಲಾಗಿ ಹೇಳಿದ ಲಗೋರಿ ಬಾಬಾ- “ಇದು ನಿನ್ನೊಬ್ಬನಿಗಲ್ಲ ಎಲ್ಲರ ಅಕೌಂಟಲ್ಲೂ ಜಮೆಯಾಗಿದೆ. ಇದರ ಹೆಸರೇ ‘ಟೈಮ್’! ಪ್ರತಿದಿನ ಬೆಳಿಗ್ಗೆ  ನಿಮ್ಮ ಅಕೌಂಟಿಗೆ 86400 ಸೆಕೆಂಡುಗಳು ಜಮಾ ಆಗ್ತವೆ. ಪ್ರತಿದಿನ ರಾತ್ರಿ ನೀನೇ ಲೆಕ್ಕ ಹಾಕು. ಎಷ್ಟು ಸಮಯ ಅನ್ನೋ ಹಣವನ್ನ ಹಾಳು ಮಾಡಿದೀಯ ಅಂತಾ! ಇದರಲ್ಲಿ ಪ್ರತಿ ವ್ಯರ್ಥ ಸಮಯದ ಬ್ಲಾಲೆನ್ಸ್ ಇರಲ್ಲ, ಓವರ್ ಡ್ರಾಫ್ಟ್ ಆಗೊಲ್ಲ. ಪ್ರತಿದಿನವೂ ಹೊಸತಾಗಿ ಸಮಯದ ಜಮೆಯಾಗ್ತದೆ. ನೀನೆಷ್ಟು ಡಿಪಾಸಿಟ್ ವೇಸ್ಟ್ ಮಾಡ್ತೀಯೋ, ಅಷ್ಟೂ ಲಾಸ್ ನಿಂಗೇನೇ! ಇದರಲ್ಲಿ ಮತ್ತೆ ಹಿಂದೊಗಕ್ಕಾಗಲ್ಲ. ನಾಳೆ ಗೊತ್ತಿಲ್ಲ. ನೀನು ಇವತ್ತಿನ ‘ಪ್ರೆಸೆಂಟ್’ ಅಲ್ಲಿಯೇ ಬದುಕಬೇಕು. ಇದನ್ನ ಇನ್‍ವೆಸ್ಟ್ ಮಾಡಿ ಆರೋಗ್ಯ, ಖುಷಿ ಮತ್ತು ಯಶಸ್ಸು ಪಡೆದುಕೋ ಮಗಾ.. ಟೈಮ್ ಓಡ್ತಾ ಇದೆ. ಇವತ್ತು ಎಷ್ಟಾಗತ್ತೋ ಅಷ್ಟೂ ಮಾಡು..!” ಎಂದು ಶೂನ್ಯದತ್ತ ನೋಟ ಬೀರಿದ ಅಘೋರಿ ಲಗೋರಿಬಾಬಾ.

ಆಗ ಫ್ಲಾಪಿಬಾಯ್- “ಬಾಬಾ ನಿಲ್ಲಿಸಬೇಡಿ ನಿಮ್ಮ ಪ್ರವಚನ.. ಇನ್ನೂ ಹೇಳಿ.. ನನಗೆ ಈಗ ತುಂಬಾ ತುದೀಲಿದೆ, ನಿಮ್ಮ ಮಾತು ಕೇಳೋ ಕಾತುರ. ನಿಲ್ಲಿಸದೇ ಹೇಳಿ” ಅಂತ ಬೇಡ್ಕಂಡ. ಆಗ ಬಾಬಾ-“ ಮೈ ಬಾಯ್ ನಿನಗೆ ಒಂದು ವರ್ಷದ ಸಮಯದ ವಾಲ್ಯೂ ತಿಳಿಬೇಕಂದ್ರೆ 1 ಅಂಕದಿಂದ ಪರೀಕ್ಷೆಲಿ ಡುಮ್ಕಿ ಹೊಡೆದ ವಿದ್ಯಾರ್ಥಿನ ಕೇಳು., 1 ತಿಂಗಳ ವಾಲ್ಯೂ ಬೇಕಿದ್ರೆ 9ತಿಂಗಳ ಮೊದಲೇ ಹಡೆದ ತಾಯಿನ ಕೇಳು. 1 ವಾರದ ಸಮಯದ ಬಗ್ಗೆ ವಾರಪತ್ರಿಕೆ ಸಂಪಾದಕನನ್ನ ಕೇಳು. 1 ತಾಸಿನ ಮಹತ್ವವನ್ನ ಲವ್ವರ್‍ಗಳು ಹೇಳ್ತಾರೆ. 1 ನಿಮಿಷದ ವಾಲ್ಯೂ, ಜಸ್ಟ್ ಮಿಸ್ ಆಗಿ ಟ್ರೈನ್ ತಪ್ಪಿಸಿಕೊಂಡ ಪ್ಯಾಸೆಂಜರ್ ಹೇಳ್ತಾನೆ. 1 ಸೆಕೆಂಡ್ ಬಗ್ಗೆ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾದವರು ಹೇಳ್ತಾರೆ, ಹಾಗೆ 1 ಮಿಲಿಸೆಕೆಂಡಿನ ಮಹತ್ವವನ್ನ 100ಮೀಟರ್ ರನ್ನಿಂಗ್ ರೇಸಲ್ಲಿ ಬೆಳ್ಳಿ ಗೆದ್ದವ ಹೇಳ್ತಾನೆ.  ನೆನ್ನೆದೆಲ್ಲ ಇತಿಹಾಸ, ನಾಳೆದೆಲ್ಲಾ ಅಯೋಮಯ. ಇವತ್ತಿಂದು ಇದ್ಯಲ್ಲ ಇದು ಗಿಫ್ಟು! ಅದ್ಕೆ ಕಣಲೇ ವರ್ತಮಾನವನ್ನ ‘ಪ್ರೆಸೆಂಟ್’ ಅನ್ನೋದು!”

“ಬಾಬಾ, ಬಾಬಾ- ನೀವು ನಂದು ತೆರೆಸಿಬಿಟ್ರಿ.. ಕಣ್ಣನ್ನ! ನನಗೆ ಯಾರೂ ಸ್ನೇಹಿತರಿರಲಿಲ್ಲ. ನೀವೇ ನನ್ನ ಫ್ರೆಂಡಾಗ್ತೀರಾ?” ಅಂದ ಫ್ಲಾಪೀಬಾಯ್.

“ಹೊಗಲೇ- ಒಳ್ಳೆ ಸ್ನೇಹಿತ್ರು ಅಂದ್ರೆ ಅವರೊಂದು ಅದ್ಭುತ ರತ್ನದ ತರ. ನಿನ್ನ ಖುಷೀಲಿ, ಯಶಸ್ಸಲ್ಲಿ ಅವರದೂ ಒಂದು ಭಾಗ ಇರತ್ತೆ. ಆಗಾಗ ನಿನ್ನ ಕಾಲೆಳಿತಾರೆ. ನೀ ಬಿದ್ದಾಗ ಫೋಟೋ ಹೊಡೆದು ಫೇಸ್‍ಬುಕ್‍ಗೂ ಹಾಕ್ತಾರೆ. ನಿನ್ ಹಗ್ ಮಾಡ್ತಾರೆ. ಅವರ ಮೊಬೈಲಿನಲ್ಲಿದ್ದ ಕಿಸಮುಸಗಳನ್ನೂ ನಿನಗೆ ವಾಟ್ಸಾಪ್ ಮಾಡ್ತಾರೆ! ಬಿಡೋ ಅವರ ಬಗ್ಗೆ ಈಗೆಲ್ಲಾ ಕೇಳಬೇಡ. ನೀನು ನನ್ನ ಹೇಗೆ ನೋಡ್ತೀಯೋ ನಾನು ಹಾಗೇ ಕಾಣ್ತೀನಿ. ಅನಿಸಿದ್ದನ್ನ ಹೇಳ್ತೀನಿ. ಟೈಮ್ ವೇಸ್ಟ್ ಮಾಡ್ಬೇಡ. ಈಗಷ್ಟೇ ಎಷ್ಟೋ ಟೈಮ್ ಜಮಾ ಆಗಿದೆ.” ಅಂತ ಹೇಳಿ ಮತ್ತೆತ್ತಲೋ ಹೊರಟ.

ಫ್ಲಾಪಿಬಾಯ್‍ಗೆ ಕಾಗೆ ನೋಡೋದ, ಬಾಬಾನ ಕರೆಯೋದ ಅಂತ ಗೊತ್ತಾಗದೆ ಯೋಚಿಸಲು ಕುಳಿತ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

10 thoughts on “ಫ್ಲಾಪಿ ಬಾಯ್ ಮತ್ತು ಲಗೋರಿಬಾಬಾ-1: ಫ್ಲಾಪಿ ಬಾಯ್

  1. Time and tides wait for none..samaya bahala amulyavadhadhu..idhannu onedhu olleya nidarshanadhondhige prasthutha padisidhiri..baraha chennagidhe..

    1. ಧನ್ಯವಾದ ಮಗಳೇ… ನೀನೂ ಟೈಮ್ ಮ್ಯಾನೇಜ್ ಮೆಂಟ್ ಕಲಿತು ಬುದ್ಧಿವಂತಳಾಗು

  2. ಜೀವನದಲ್ಲಿ ಕಾಗೆ ನೋಡ ಬಯಸುವವರಿಗೆ ಉತ್ತಮ ಸಂದೇಶ. ತುಂಬಾ ಚೆನ್ನಾಗಿದೆ.

Leave a Reply

Your email address will not be published. Required fields are marked *