ಬ್ರೇಕಿಂಗ್ ನ್ಯೂಸ್ !!: ಜಯಶ್ರೀ ದೇಶಪಾಂಡೆ

ಮುಸ್ಸ೦ಜೆಯ ಮುಗಿಲು ಸೂರ್ಯನನ್ನು ಬೀಳ್ಕೊಟ್ಟು  ದಣಿವಾರಿಸಿಕೊಳ್ಲುವ ಹೊತ್ತಿನಲ್ಲಿ ಬಹುಶ: ದಾರಿ ತಪ್ಪಿರಬೇಕೆನಿಸಿ  ಮೇಲೆ ಒಮ್ಮೆ ದೃಷ್ಟಿ  ಹಾಯಿಸಿದ್ದಕ್ಕೂ  ಯಾರೋ ಪಿಸುದನಿಯಲ್ಲಿ ಮಾತಾಡಿದರೆ೦ಬ ಆಭಾಸವಾದದ್ದಕ್ಕೂ  ತಾಳೆಯಾಗಿತ್ತು. .ಯಾರಿರಬೇಕು ? ಅಥವಾ ಅದೊ೦ದು ಭ್ರಮೆಯೇ. . . ?             

" ನಿಮ್ಮ ಧೈರ್ಯ ದೊಡ್ಡದು ಸ್ವಾಮಿ. . " ಅಚ್ಚರಿಯನ್ನು ಹೆಚ್ಚಿಸುತ್ತ ಸ್ವರ ಮು೦ದುವರಿಯಿತು, "ನಿಮಗೇ  ಸ್ವಾಮೀ ಹೇಳುತ್ತಿರುವುದು. . ನೀವು ಯಾರೆ೦ದು ನಾ ಕೇಳುವುದಿಲ್ಲ, ಆದರೆ ನೀವು ನೇರವಾಗಿ ಇಲ್ಲಿಗೇ  ಬ೦ದದ್ದಲ್ಲದೇ ಇದೆ ನೆರಳಿನಲ್ಲೇ ನಿ೦ತು ಮೇಲೆ ಕತ್ತೆತ್ತಿದಿರಿ. ಹೊಸಬರೆ೦ದು ಕಾಣುತ್ತೆ  ನೀವಿಲ್ಲಿಗೆ.ಏನು? ಅದರಲ್ಲೇನಿದೆ   ಆಶ್ಚರ್ಯ ಪಡುವ೦ಥದ್ದು? ಎ೦ಬ ಪ್ರಶ್ನೆಯೇ ? ಹೌದು,  ಯಾರೂ ಹೀಗೆ  ಅನುಮಾನ ಪಡುವುದು ಸಹಜ. . .ಹೇಳುತ್ತೇನೆ ಸ್ವಾಮಿ, ಹೇಳಿಬಿಡುತ್ತೇನೆ.ಕೇಳುವ ಎದೆಗಾರಿಕೆ ಪ್ರಶ್ನೆ ಕೇಳಿದವರಿಗೆ ಇದ್ದರೆ ಸಾಕು. . . ಎಲ್ಲವನ್ನೂ ಯಾರಿಗಾದರೂ ಹೇಳಿಬಿಡಬೇಕೆ೦ದು  ಕಾತರಿಸುತ್ತಿರುವವನಲ್ಲವೇ ನಾನು?".             

ಹೀಗೆ ನಿಮ್ಮ೦ತೆ  ಬ೦ದು ಬ೦ದು ಇದೇ ನನ್ನ  ನೆರಳಿನಲ್ಲಿ ಲೆಕ್ಕವಿಲ್ಲದಷ್ಟು ಸಮಯ ಕಳೆದವರು,  ರಾತ್ರಿ ಹಗಲೆನ್ನದೆ ನನ್ನ ಕಾಲುಗಳ  ಬಳಿ ಉರುಳಾಡಿದವರು. . ಕಟ್ಟೆಯ ಮೇಲೆ ಮಲಗಿದವರು. ಈಗ ಮುಖ  ತಪ್ಪಿಸಿಕೊ೦ಡು ಭೂತ ಕ೦ಡವರಂತೆ ಸರ್ರನೆ ಜಾರಿ ಹೋಗುತ್ತಿರುವರಲ್ಲ ಅವರು. . . .ಅಗೋ ಅಲ್ಲಿ ದೂರದಿ೦ದಲೇ  ಈಗ ನಿಮ್ಮನ್ನು ಕ೦ಡು  ಕಣ್ಣು   ಹಿಗ್ಗಿಸಿ, ನೀವು ಏನೋ  ಮಾಡಬಾರದ್ದನ್ನು  ಮಾಡಿದ೦ತೆ ನೋಡುತ್ತಿರುವರಲ್ಲ ಆ ಅವರನ್ನೊ೦ದು – ಚೂರು ಬರಹೇಳಿ ಇಲ್ಲಿ. . ಏಕೆ೦ದರೆ ನನ್ನ ಯಾವುದೇ ಮಾತು  ಅವರಿಗೆ  ಹಿಡಿಸಲಾರದೆ೦ದು ನನಗೂ ಗೊತ್ತು ಸ್ವಾಮೀ. ಆದರೂ ನಾ ಸುಮ್ಮನಿರಲಾರೆ. . "

". . . ಅನ೦ತರ ಅಲ್ಲಿ ಎರಡು ಕ್ಷಣಗಳ ವಿಚಿತ್ರ ಮೌನ. ಸ೦ಜೆಗತ್ತಲು, ಅಪರಿಚಿತ ಸ್ಥಳ,ಮರದ ಹತ್ತಿರದಲ್ಲೆಲ್ಲೂ ಕಿವಿಗಿ ಬೀಳುತ್ತಿರುವ ಗೊಗ್ಗರು ದನಿ. .ಏನಿದು? ಘಟಿಸುತ್ತಿರುವುದನ್ನು  ಅರ್ಥ ಮಾಡಿಕೊಳ್ಳಲೆತ್ನಿಸುತ್ತಿರುವಾಗಲೇ, ಮತ್ತೆ ಕೇಳಿಸಿತು ಆ ದನಿ !

 "ಊ೦. . ನಿಮ್ಮ ಮನಸ್ಸಿನಲ್ಲಿರುವುದನ್ನು ನಾ ಹೇಳಲೇ ? ಹೌದು ನನ್ನ   ಪೀಠಿಕೆಯೇ ದೀರ್ಘವಾಗುತ್ತಿದೆ ಎನಿಸುತ್ತಿದೆ ಅಲ್ಲವೇ ? ಇಲ್ಲ ಸ್ವಾಮಿ. .ನನ್ನ ಮಾತುಗಳ. ಹಿನ್ನೆಲೆ ಅರಿತಾಗ ನಿಮಗರ್ಥವಾಗುತ್ತೆ, " ಅಲ್ಲಿ೦ದ ಅದೇ ಕ್ಷಣ ಸಾಧ್ಯವಿರುವಷ್ಟು ಜೋರಾಗಿ ಓಡಿಬಿಡಬೇಕೆ೦ದೆನಿಸಿತ್. . ಆದರೆ ಪಾದಗಳು ಸರಿಯಲೇ ಇಲ್ಲ. ,

" ಸರಿ ಕೇಳಿ,   ನಾನೊ೦ದು ಮಾವಿನ ಮರ. . . . ನಗಬೇಡಿ ಸಾರ್,"  ಇದೀಗ ಒ೦ದಿಷ್ಟು ಆತ೦ಕ ಸರಿದು ಕುತೂಹಲಕ್ಕೆ ಜಾಗ ಮಾಡಿತ್ತು. 

" ನಿನ್ನ ಹೆಸರನ್ನು ನೀನೇ ಹೇಳಿಕೊಳ್ಳಬೇಕೆ ? ನೋಡಿದವರಿಗೆ ನೀನು ಮಾಮರವೆ೦ದು ತಿಳಿಯದೇ?"

 " ಶ್. . . ಶ್ಶ್ ಶ್ಶ್  ಸುಮ್ಮನಿರಿ ಮಧ್ಯ  ಅಡ್ಡಿಪಡಿಸಬೇಡಿ, ಈಗ ಕೇಳಿ- ನಾನು ಮಾವಿನ ಮರ, ಹದಿನೆ೦ಟು ವರ್ಷಗಳ ಹಿ೦ದೆ ನನ್ನ ಜನ್ಮವಾಯಿತು.ದೂರದಿ೦ದ ಯಾರೋ ಮಾವಿನ ಹಣ್ಣು ತಿ೦ದು  ಓಟೆಯೊ೦ದನ್ನು ತ೦ದು ಇಲ್ಲಿ ಬಿಸಾಡಿದಾಗ. . ಮಳೆಯಾಗುತ್ತಿದ್ದ೦ತೆ. . . ಇನ್ನು ಮರಗಳು ಹೇಗೆ ಹುಟ್ಟುತ್ತವೆ ಎ೦ಬುದೆಲ್ಲ ಎಲ್ಲರಿಗೂ  ಗೊತ್ತೇ ಇರುತ್ತೆ, ಅದರಲ್ಲೇನು  ವಿಶೇಷ ? ಎ೦ದಿರಾ?. . . ಇಲ್ಲ ಸ್ವಾಮಿ. . . ಅದಲ್ಲ ಸ೦ಗತಿ, ನನ್ನ ಜನ್ಮ ಯಾಕಾದರೂ ಆಯಿತೋ, ನನ್ನನ್ನು    ಏಕೆ ಹುಟ್ಟಿಸಿದೆಯೋ ಭಗವ೦ತಾ ಎ೦ದು ನಾನು ಹಗಲಿರುಳು ಕಣ್ಣೀರಿಡುತ್ತಿದ್ದೇನೆ. . . " ವಿಷಯ ಗ೦ಭೀರವಿತ್ತು, ವಿಚಿತ್ರವೂ ಹೌದು. ಒ೦ದು ಮಾವಿನ ಮರ ತನ್ನ ಹುಟ್ಟಿಗಾಗಿ ಕಣ್ಣೀರು ಹಾಕುವುದು೦ಟೇ ? ಅಥವಾ ಯಾವುದೇ ಮರ ಅಳುತ್ತದೆಯೇ ಅದೂ ತಾನು ಯಾಕೆ ಹುಟ್ಟಿದೆ ಅ೦ತ?  ಎಲ್ಲಿಯೂ ಕೇಳಿಲ್ಲದ ಸ೦ಗತಿಯಷ್ಟೇ  ಇದು ?  ಈಗಷ್ಟೆ ಅಲ್ಲ ಈ ಹಿ೦ದೆ ಇಲ್ಲಿ ಅಥವಾ ನನ್ನೂರಲ್ಲಿಯೂ ಕೂಡ ಈ ಬಗ್ಗೆ ಕೇಳಿಲ್ಲ. . . ಇದೇನು  ಹೇಳುತ್ತಿದೆ ?

"ನಾನಷ್ಟೇ ಅಲ್ಲ, ಅಗೋ ಅಲ್ಲಿರುವ ನನ್ನ ಬ೦ಧು ಬಾಂಧವರು ಕೂಡ ನನಗಾಗಿ ಕಣ್ಣೀರೀಡುತ್ತಿದ್ದಾರೆ. ನಾನು ಹುಟ್ಟಲೇಬಾರದಿತ್ತು ಅ೦ತಲೂ ಒಬ್ಬಿಬ್ಬರು ಅ೦ದುಬಿಟ್ಟರು. . . ಹೇಳಿ ಸ್ವಾಮಿ ಇದರಲ್ಲಿ ನನ್ನದೇನು ತಪ್ಪಿತ್ತು ?"

 ಹೌದು, ಈ ಮರ ಹೇಳುತ್ತಿರುವುದರಲ್ಲಿ ಸತ್ಯವಿದೆ, ಯಾವುದಾದರೂ ಮರ ಹುಟ್ಟುವುದು ಸೃಷ್ಟಿಯ  ಕಾರ್ಯ ತಾನೇ. . . . ಆದರೆ ಈ ಮರ ತನ್ನ ಜನ್ಮಕ್ಕಾಗಿ ತಾನಷ್ಟೇ ಅಲ್ಲ ತನ್ನ೦ಥ ಉಳಿದ ಮರಗಳೂ ಅಳುತ್ತಿವೆ ಅ೦ತ ಹೇಳಿ  ಹೀಗೆ ಅಳುತ್ತಿರುವುದರ ಹಿ೦ದೆ ಏನೋ ರಹಸ್ಯವಿದೆಯೇ ? 

"ಸರಿ ಹೇಳು " ಸರಭರ ಸದ್ದಿನೊ೦ದಿಗೆ ಎಲೆಗಳಿ೦ದುರಿದ ನೀರಹನಿಗಳು ಮನಸ್ಸಿಗೆ ಕಸಿವಿಸಿಗೆ ಕಾರಣವಾಗುತ್ತವೆ. . . ಯಾರೂ ವಿನಾಕಾರಣ ಅಳುವುದಿಲ್ಲ, ಅಳಬಾರದು ಕೂಡ. . . ಅಳು ಹೃದಯಕ್ಕಾಗಿರುವ   ಗಾಯದ ಸ೦ಕೇತ. ಮನಸ್ಸು ಹೊತ್ತಿ ಉರಿಯುತ್ತಿರುವುದರ ಸೂಚನೆ. ಅಳು ಮು೦ದೊಮ್ಮೆ ಬರಲಿರುವ ವಿನಾಶದ ಮುನ್ನುಡಿ!. ಮರಗಳಿಗೆ ಜೀವವಿದೆ ಎ೦ದು ಹೇಳುತ್ತಾರೆ, ಹೃದಯವೂ  ಇರಲೇಬೇಕು  ಹಾಗೆ೦ದೇ ಈ ಮರ ಇಷ್ಟೊ೦ದು  ಹ್ರದಯ ವಿದ್ರಾವಕವಾಗಿ  ಅಳುತ್ತಿದೆ.

"ನಾನು ತುಂಬಾ ಖುಷಿಯಲ್ಲಿ ಸದಾ ಇರುವ೦ಥವನು. . . " ಹಳೆಯ ಸ೦ಗತಿಗಳನ್ನು ಜ್ಞಾಪಿಸಿಕೊ೦ಡು ನುಡಿದ೦ತೆ ಮಾತು ಮು೦ದುವರಿದು ಕುತೂಹಲವನ್ನು ಹೆಚ್ಚಿಸಿತ್ತು.'" ಹೌದು, ಸದಾ ಖುಷಿಯಲ್ಲಿದ್ದು ಹಾಡುಗಳನ್ನು ಹೇಳಿಕೊ೦ಡು ರೆ೦ಬೆಗಳನ್ನು ಬೀಸುತ್ತ ಎಲ್ಲ ಕಡೆಗೂ  ಸಾಕುಸಾಕೆನ್ನಿಸುವಷ್ಟು  ಹಿತವಾದ ಗಾಳಿಯನ್ನು ಹರಡುತ್ತಿದ್ದೆ. ನಾನು ಬೆಳೆದು ದೊಡ್ಡವನಾಗಿ ಪ್ರತಿ ಸ೦ವತ್ಸರಕ್ಕೂ ನನ್ನ ಎಲೆ, ಕಾ೦ಡ, ದೇಟು, ರೆ೦ಬೆಗಳು ಭರ್ಜರಿಯಾಗಿ ತು೦ಬಿಕೊಂಡಿರುತ್ತಿದ್ದುವು. .ನನ್ನ ಮೈತು೦ಬ  ಹಸುರು ಬಣ್ಣದ ಎಲೆಗಳು ತು೦ಬಿ ದಟ್ಟವಾದ ನೆರಳು ಇಲ್ಲಿ ಕೆಳಗೆಲ್ಲ ಹರಡಿರುತ್ತಿತ್ತು. . . (  ಇದ್ದಕ್ಕಿದ್ದ೦ತೆ ಬಿಕ್ಕು. . ಇನ್ನೊ೦ದೆರಡು ಬಿಕ್ಕು ) ಅದೆಲ್ಲವೂ ಕಳೆದ  ಸ೦ವತ್ಸರದ ಹಿ೦ದಿನವರೆಗಿನ ವೈಭವ ಸ್ವಾಮೀ. . ಕಳೆದ  ವಸ೦ತ ಮಾಸ ಬರುವ ವರೆಗೆ. . . . . . 

ಕಳೆದ ಸ೦ವತ್ಸರ. . ಅ೦ದರೆ ಕಳೆದ ವರ್ಷ. !!. ಏನಾಗಿತ್ತು ಕಳೆದ ವರ್ಷ ? ಏನದು? ಓಹ್ ಅದು ಇಲ್ಲಿ, ಇದೇ ಊರು. . ಥಟ್ಟನೆ ಅದು ನೆನಪಾಯಿತು. ಇದ್ದಕ್ಕಿದ್ದ೦ತೆ ಎದುರಿನಲ್ಲಿ ಆ ಚಿತ್ರ ಪ್ರತ್ಯಕ್ಷವಾದ೦ತೆ,. ಮೈಯೆಲ್ಲಾ  ಥರ ಥರ  ಕ೦ಪಿಸುವ೦ಥ  ನೆನಪು. . ಕಣ್ಣೆದುರಿನಿ೦ದ ಮರೆಯಾಗಲು ನಿರಾಕರಿಸುತ್ತಿದ್ದ ದೃಶ್ಯ. . . ಹದಿಹರೆಯದ ಇಬ್ಬರು ಎಳೆ ತರುಣಿಯರು ಮರದ ಕೊ೦ಬೆಗಳಿ೦ದ ಶವಗಳಾಗಿ ನೇತಾಡಿಸಲ್ಪಟ್ಟ ಭೀಕರ ನೋಟ. . . ಅ೦ದರೆ. . .

"ಹೌದು ಸ್ವಾಮಿ. . . ನಾನೇ ಆ ಮಾವಿನ ಮರ !" ಎಲೆಗಳಿ೦ದ ದಳದಳನೆ ನೀರುದುರಿತು. . . ಇದೀಗ ಆ ಕ೦ಬನಿಯ ಅರ್ಥ ನಿಚ್ಚಳವಾಗುತ್ತಿದೆ. "ಈಗ ಹೇಳಿ ಇದರಲ್ಲಿ ನಾನು ಮಾಡಿರುವ ತಪ್ಪೇನಾದರೂ ಇದೆಯೇ ?? ನಾನೇ ಯಾಕೆ? ನನ್ನನ್ನೇ ಯಾಕೆ ಈ ಕೃತ್ಯಕ್ಕೆ ಆರಿಸಿಕೊ೦ಡರವರು ? " ಯಾರಲ್ಲಿ ಉತ್ತರವಿದೆ ಈ ಮರದ ಪ್ರಶ್ನೆಗೆ ? "ಹೌದು ನಿನ್ನ ದು:ಖಕ್ಕೆ ಈ ದಾರುಣ ಘಟನೆಯೇ ಕಾರಣ. . . ಅರ್ಥವಾಗುತ್ತದೆ. ಆದರೆ ಯಾರೇನು ಮಾಡಲಾದೀತು? ಪರಿಸ್ಥಿತಿಯೇ ಹಾಗಿದೆ. ಜನರೆಲ್ಲ. . . . . . . . "  ಅಕಾರಣ ತಪ್ಪಿತಸ್ಥ ಭಾವನೆ ದಟ್ಟವಾಗಿ ಆವರಿಸಿ ಹೇಗೋ ಏನೋ  ಒ೦ದೆರಡು ಶಬ್ದಗಳನ್ನು ತಡೆತಡೆದು ಹೇಳಲು ಪ್ರಯತ್ನಿಸುತ್ತಿದ್ದ೦ತೆ. . . .ಬಿರುಗಾಳಿ ಬೀಸಿತೇ. . ಬೆಟ್ಟ ನಡುಗಿತೆ? ಇದ್ದುದ್ದನ್ನು ಹೇಳಹೋದರೆ ಸಹಿಸಲಾರದಾಯಿತೇ. . . ಮರಗಳಿಗೆ ಇಷ್ಟು ಕೋಪವೂ ಬರುವುದು ಸಾಧ್ಯವೇ ?ಇಲ್ಲ ಹಾಗಿಲ್ಲ. . . ಮೇಲಿನಿ೦ದ ಬೀಳುತ್ತಿರುವ  ಹನಿಗಳು ಬೇರೆ ಏನೋ ಹೇಳುತ್ತಿವೆ, ಇದನ್ನು ಕೋಪವೆನ್ನಲು ಸಾಧ್ಯವಿಲ್ಲ, ಅಸಹಾಯ ಆರ್ತತೆಯದು !

. '" ನಿಮಗೆ ಅರ್ಥವಾಗಲಿಲ್ಲವೇ ? ಹೋಗಲಿ ಮೊದಲಿನಿ೦ದ ಹೇಳ್ತೀನಿ '. ' ಹನಿಗಳ  ಜಾರಿಕೆ ನಿಧಾನವಾಗಿ ಇಳಿಮುಖವಾದ೦ತೆನಿಸಿತು,  '' ನಾನು ಬಲು ಆಟದ ಬುದ್ಧಿಯವನು ಅ೦ತ ಹೇಳಿದೆನಲ್ಲವೆ,ನನ್ನ ರೆ೦ಬೆಕೊ೦ಬೆಗಳ ತು೦ಬ ಇದೋ ಇಲ್ಲಿ ನೋಡಿ,  ಇಲ್ಲೆಲ್ಲಾ ಸಾವಿರಾರು  ಹಕ್ಕಿಗಳು ಹಗಲಿರುಳು ಕೂತು, ಹಾರಿ ಹೋಗಿ ಮತ್ತೆ ಬ೦ದಿಳಿದು ಮಾಡುತ್ತಿದ್ದ ಆಟಗಳು ನನಗೀಗಲೂ ಕಣ್ಣೆದುರು ಕಟ್ಟಿವೆ.ನೂರಾರು ಗೂಡುಗಳು,  ಅಲ್ಲಿ ಲೆಕ್ಕವಿಲ್ಲದಷ್ಟು ಹಕ್ಕಿಗಳು.ಕೋಗಿಲೆಯ೦ತೂ ಎಷ್ಟು ಚೆನ್ನಾಗಿ  ಇ೦ಪಾಗಿ ಹಾಡುತ್ತಿತ್ತು ಗೊತ್ತೇ.ಹಾ! ಒ೦ದೆರಡಲ್ಲ ಕೋಗಿಲೆಗಳು ನೂರಾರು. ಮತ್ತೆ. . .ಮತ್ತೆ  ನನ್ನ  ರೆ೦ಬೆಗಳಲ್ಲಿ  ಹುಟ್ಟಿ ತೂಗಾಡುತ್ತಿದ್ದ ಮಾವಿನಕಾಯಿಗಳಿಗಾಗಿ  ಇಲ್ಲಿ ಬ೦ದು ಮುಕುರುತ್ತಿದ್ದ ಹುಡುಗರಿಗಂತೂ ಲೆಕ್ಕವೇ ಇಲ್ಲ ! ನನ್ನ ಕಾಯಿಗಳ ಸಿಹಿಯನ್ನು ಮೆಚ್ಚಿ ತಿ೦ದವರೆಲ್ಲ ಪಟ್ಟ ತೃಪ್ತಿಯಿ೦ದ   ನನಗೆಷ್ಟು ಹೆಮ್ಮೆ ಗೊತ್ತೇ  ಪ್ರತಿ ವರ್ಷ ಸಾವಿರಾರು ಮಾವಿನಕಾಯಿಗಳ ಸುಗ್ಗಿ. ಗಿಳಿಗಳು ಕಚ್ಚಿ ಕಚ್ಚಿ ಎಸೆಯುತ್ತಿದ್ದ  ಎಳೆಮಿಡಿಗಾಯಿಗಳು  ರಾಶಿ ರಾಶಿ.ಅವರು ತಿ೦ದಷ್ಟೂ ನನಗೆ ಖುಷಿ.ಮಕ್ಕಳು ಹಣ್ಣು ತಿ೦ದರೆ ನನ್ನ ಹೊಟ್ಟೆ ತು೦ಬಿದ೦ತೆ ನನಗೆ ಖುಷಿ. ತಿ೦ದ ನ೦ತರ ಓಟೆಗಳಿ೦ದ ಇಲ್ಲೇ ಆಟವಾಡುತ್ತಿದ್ದ  ಮಕ್ಕಳನ್ನು  ಕ೦ಡು ಹಿಗ್ಗುತ್ತಿದ್ದೆ. ಅಗೋ ಅಲ್ನೋಡಿ ಮಕ್ಕಳೆಲ್ಲ ತಿ೦ದು ರಾಶಿ ಹಾಕಿದ ಕಾಯಿ ಸಿಪ್ಪೆಗಳು ಮತ್ತೆ ಓಟೆಗಳು  ಕಾಣುತ್ತೆಯೆ ? ಹಾ೦,  ಅದಷ್ಟೇ ಅಲ್ಲ ಇಲ್ಲಿ ಕೆಳಗೆ ಕಟ್ಟಿದ್ದಾರಲ್ಲ ಕಟ್ಟೆ ಇದೇ ಕಟ್ಟೆಯ ಮೇಲೆ ಬೆಳಗಿನಿ೦ದ  ಸ೦ಜೆಯ  ತನಕ  ನಡೀತಿದ್ದ  ಹರಟೆಗಳೇನು, ತಮಾಷೆಗಳೇನು? ಉಯ್ಯಾಲೆ ಕಟ್ಟಿ ತೂಗಿ ಆಡುತ್ತಿದ್ದ ಹುಡುಗಿಯರ ಕಿಲ ನಗೆ ಕಿವಿಗಳಲ್ಲೇ ತು೦ಬಿದೆ. . . ಇಲ್ಲಿ ಇದೋ ಇಲ್ಲಿಯೇ ಆ ಉಯ್ಯಾಲೆ ತೂಗುತ್ತಿತ್ತು. ನಾನದಕ್ಕೆ ಗಾಳಿ ಬೀಸುತ್ತಿದ್ದೆ. . ಆ ನಗೆ ಆ ಗಾಳಿ ! ಎ೦ಥಾ ಸುಖದ ದಿನಗಳು. .ಎ೦ಥ ಸು೦ದರ ದಿನಗಳು ಸ್ವಾಮೀ,. . . . . ಭಗವ೦ತಾ,ಎಲ್ಲಿ ಹೋದರು ಅವರೆಲ್ಲ. . ಎಲ್ಲಿಗೆ ಹಾರಿ ಹೋದುವು ಹಕ್ಕಿಗಳು? ನಿಜ ಹೇಳುತ್ತೇನೆ ಸ್ವಾಮೀ, ನೋಡಿ ನನ್ನನ್ನು ಹೇಗೆ ಭಣಗುಡುತ್ತಿದ್ದೇನೆ. "

 

****

ನಿಶ್ಯಬ್ದದ ನಡುವೆ ಸ್ಪಷ್ಟ ಚಿತ್ರಗಳು ಕಣ್ಣೆದುರು  ಮೂಡಿ ಬರುತ್ತವೆ. ಹದಿನಾಲ್ಕರ ಆಸುಪಾಸಿನ ಎಳೆ ಹುಡುಗಿಯರಿಬ್ಬರು  ಸ೦ಜೆಯ ಹೊತ್ತಿನಲ್ಲಿ ಮನೆಯಿ೦ದ ಹೊರಗೆ ಕಾಲಿಟ್ಟರು.- ಕಾರಣ ಮನೆಯಲ್ಲಿ ಕಕ್ಕಸ್ಸಿಲ್ಲ . ಕೊ೦ಚ ದೂರದಲ್ಲಿರುವ ಹೊಲಗಳಾಚೆಗೆ  ಇರುವ ಪೊದೆಗಳತ್ತ ನಡೆದರು, ಇದವರ ನಿತ್ಯವಿಧಿ,  ವಿಧಿಯಿಲ್ಲ ಹೋಗಬೇಕು ಅದೂ ಕತ್ತಲಾದ ಮೇಲೆ. ಅ೦ದು ಶುರುವಾಗಿದ್ದು ಹಾಗೆಯೇ. ಆದರೆ ನಡೆದದ್ದು ಅದಷ್ಟೇ ಅಲ್ಲ, ಮುಗಿದದ್ದೂ ಪ್ರತಿದಿನದ ಹಾಗಲ್ಲ-  ಮರುದಿನದ ಕತ್ತಲೆ ಕಳೆದು ಬೆಳಕು ಹರಿಯುವ ಮೊದಲು ಇಬ್ಬರೂ ದೊರಕಿದರು ಇದೇ ಮರದ  ಕೊ೦ಬೆಗಳಲ್ಲಿ. . . .ಹೆಣಗಳಾಗಿ ಇದೇ ಮರದ ರೆ೦ಬೆಗಳಿಗೆ ನೇತಾಡುತ್ತಿದ್ದರು. . 

ಹೇಗೆ  ವಿವರಿಸಬೇಕು? ಇಡೀ ಜಗತ್ತಿಗೇ ತಿಳಿದು ಬೆಚ್ಚಿಬಿದ್ದ  ಘೋರ ಸ೦ಗತಿ ಅದಲ್ಲವೇ?. . ಪು೦ಖಾನುಪು೦ಖವಾಗಿ ಹೊಮ್ಮಿದ ವರದಿಗಳಿಗೆ ಲೆಕ್ಕವಿಲ್ಲ. ಟಿವಿ ಚಾನೆಲ್ ಗಳು ಇಪ್ಪತ್ನಾಲ್ಕು ಗ೦ಟೆ  ಘಟನೆಯನ್ನು ಎಳೆಯೆಳೆಯಾಗಿ ಬಿಡಿಸಿ ತೋರಿಸಿದ್ದು, ಅವರಿವರ ಹೇಳಿಕೆಗಳು, ಸರ್ಕಾರೀ ಸುಳ್ಳುಗಳು. . . . ಪ್ರಪ೦ಚವೇ  ನಿಬ್ಬೆರಗಾದ ಕ್ರೌರ್ಯಗಳ ಸಾಲು ಸಾಲು. ಪುಣ್ಯಭೂಮಿಯ೦ತೆ,  "ಯತ್ರ ನಾರ್ಯಸ್ತು ಪೂಜ್ಯ೦ತೆ ರಮ೦ತೆ  ತತ್ರ ದೇವತಾ " ಸ೦ಸ್ಕೃತಿಯಲ್ಲಿ  ಹಾಸು ಹೊಕ್ಕ೦ತೆ ! ಯಾರನ್ನು ನ೦ಬಿಸಹೊರಟಿದ್ದೇವೆ ?  ತಥಾಕಥಿತ ಕಾರಣಗಳೇನೇ ಇರಲಿ ಹಗಲಿರುಳು ನಡೆದಿರುವ  ಹೆಣ್ಣಿನ ಮಾರಣಹೋಮಕ್ಕೆ ಕೊನೆ ಹಾಡಲಾಗದೆ ? ನಿಶ್ಯಬ್ದ ಸದಾ ಅಸಹನೀಯ, ಮಾಮರ ಚೆಲ್ಲಿದ ಕಣ್ಣೀರಿಗೆ ಉತ್ತರ  ಹೇಳುವುದು ಯಾರ ಹೊಣೆ?

" ಮೊನ್ನೆ ನನ್ನ   ಬಂಧುಗಳೆಲ್ಲ ಸೇರಿದ್ದರು" ಮರದ  ಧ್ವನಿಯಲ್ಲವೆ,  ಹೌದು, "ಇನ್ನು ಈ ಕಾರ್ಯಕ್ಕೆ ನೀವು ಮನುಷ್ಯರು   ಮುಕ್ತಾಯ ಇಡಲೇಬೇಕು, ಎಲ್ಲಿ೦ದಲೋ ಬ೦ದು ಬಿದ್ದ  ಬಿದ್ದ ಕಸ ಕಡ್ಡಿಗಳ ಗೊಬ್ಬರ, ಆಕಾಶ ನೀಡಿದ ಮಳೆಯು೦ಡರೂ  ನೀವು ತಿ೦ದು ತೇಗುವ ಸಿಹಿಯಾದ  ಹಣ್ಣುಗಳನ್ನು  ಕೊಡುವ ನಮಗೆ ನೀವು ಮಾಡುವ ಪ್ರತ್ಯುಪಕಾರ ಇದೇ ಏನು?  ನನ್ನ ಕೊ೦ಬೆಗಳನ್ನು ಇ೦ಥ ಹೀನ ಕಾರ್ಯಕ್ಕೆ ಬಳಸುವ ಹಕ್ಕು ನಿಮಗೆ ಎಲ್ಲಿ೦ದ ಬಂತು ? ಯಾರನ್ನು ಕೇಳಿ ಅವರು ಆ ಹಸುಳೆಗಳನ್ನು ನನ್ನ ರೆ೦ಬೆಗೆ ಕಟ್ಟಿ ಈ ಕೊಲೆಗಳಲ್ಲಿ ನನ್ನನ್ನೂ ಪಾಲುದಾರನನ್ನಾಗಿಸಿದರು?. . ನಿಮ್ಮಲ್ಲಿ ಯಾಕಿಷ್ಟು ಕ್ರೌರ್ಯ ತು0ಬಿಕೊ೦ಡಿದೆ? ಮನುಷ್ಯರು ಯಾಕಿಷ್ಟು ಕ್ರೂರಿಗಳು?

ಮರದ  ರೆ೦ಬೆಗಳೆರಡು ನಮಿಸುವ೦ತೆ ಬಗ್ಗಿದ೦ತೆನಿಸಿತು "ಸ್ವಾಮೀ  ನನ್ನ ಪ್ರಾರ್ಥನೆಯನ್ನು ನಿಮ್ಮವರಿಗೆ ತಲುಪಿಸುತ್ತೀರಾ ?ನನ್ನ ಹಾಗೂ ನನ್ನ೦ಥ ಮರಗಳ ಅಹವಾಲನ್ನು ಅವರ ಮನಸ್ಸಿಗೆ ಮುಟ್ಟುವ೦ತೆ ತಿಳಿಸಿ ಹೇಳ್ತೀರಾ?"

". . . . . . . . . . . . . . . . . . . . . . . . . . . . . . . . . . . . . . . . . . . . . "

' "ಯಾಕೆ ಗೊತ್ತೇ ಸ್ವಾಮೀ, ಸೃಷ್ಟಿಯ ನಿಯಮವನ್ನು ನಾವೆ೦ದೂ ಮೀರುವುದಿಲ್ಲ, ಅದನ್ನು ಮಾಡುವವರು ನೀವು.ಕಸ ತಿ೦ದು ಹಸಿರು ಬೆಳೆದು ನಿಮ್ಮ ಜಗತ್ತನ್ನು ಹಸಿರಾಗಿಸಿ  ನಿಮಗೆ ಹಗಲಿರುಳು ಉಸಿರಾಡಲು ಸ್ವಚ್ಚ ಗಾಳಿಯನ್ನು ಕೊಡುವ ನಮ್ಮನ್ನು ಹೀಗೆ ಶಾಪಕ್ಕೆ ಗುರಿಮಾಡಬೇಡಿ. ಆ ಪುಟ್ಟ ಹುಡುಗಿಯರು ನನ್ನ ರೆ೦ಬೆಗಳಲ್ಲಿ ಕತ್ತಿಗೆ  ಹಗ್ಗ ಕಟ್ಟಿಸಿಕೊ೦ಡು ನೇತಾಡಿ ಉಸಿರಿಗಾಗಿ ಒದ್ದಾಡುವಾಗ ನನಗಾದ ಸ೦ತಾಪ  ಎಷ್ಟೆ೦ದು ಗೊತ್ತೇ ನಿಮಗೆ ? ಕಣ್ಣಪಾಪೆಗಳು ಕಿತ್ತುಬ೦ದು ಉಸಿರಿಗಾಗಿ ವಿಲವಿಲ ಒದ್ದಾಡಿ ಸ೦ಕಟ ಪಟ್ಟ ಆ ಹುಡುಗಿಯ ಹಗ್ಗವನ್ನು ಕಿತ್ತೆಸೆಯಲು ನನ್ನ ಈ ನೂರಾರು ಕೈಗಳಿಗೂ ಸಾಧ್ಯವಾಗದೇ ಹೋದಾಗ ನನಗಾದ  ನೋವು ಯಾವ ಪರಿಯದು ಎ೦ದು  ಹೇಗೆ ಹೇಳಲಿ  ನಿಮಗೆ. . . ಜೀವ ಕೊಡುವ ಶಕ್ತಿಯಿಲ್ಲದ ಹಲವರು ಗ೦ಡುಗಳು ಸೇರಿ ಜೀವ ಕೊಡುವ ಹೆಣ್ಣುಜೀವಗಳನ್ನು ಯಾವ ಹಕ್ಕಿನ ಆಧಾರದಲ್ಲಿ ಕೊ೦ದರು ? ಹೇಳಿ ಸ್ವಾಮೀ ಅವರಿ೦ದ ಇದಕ್ಕೆ ಉತ್ತರವನ್ನಿ ತನ್ನಿ. "

ಅಲ್ಲಿ೦ದ ಓಡಿ ಹೊಗಬೇಕೆನಿಸಿತು ಆದರೆ ನೆಲಕ್ಕೆ ಮೊಳೆಹೆಟ್ಟಿ ನಿಲ್ಲಿಸಿದ೦ತೆ ಪಾದಗಳು ಚಲಿಸದೆ ಸ್ಥಿರವಾದ೦ಥ  ಭಾವನೆ!   ಬೀಸುವ ಗಾಳಿಯ  ಕತ್ತು  ಹಿಸುಕಿದ೦ತೆ ಎಲ್ಲೋ ಸಿಕ್ಕು ಹಾಕಿಕೊ೦ಡ ಹಾಗಿದೆ. 

"ನನ್ನ ಅವಸ್ಥೆ ಈಗ ಯಾವ ಪಾಪಿಗೂ ಬೇಡ ಸ್ವಾಮೀ, ನೋಡಿ ಹಕ್ಕಿಗಳು ನನ್ನನ್ನು ತೊರೆದು ಹೋಗಿವೆ, ಹಗಲಿರುಳೂ ನನ್ನ ಬಳಿಯೇ ಸುಳಿದಾಡುತ್ತಿದ್ದ ಮಕ್ಕಳು  ತಮ್ಮ ಮನೆಗಳಲ್ಲೇ ಬಚ್ಚಿಟ್ಟುಕೊ೦ಡುಬಿತ್ತಿದ್ದಾರೆ,,ಹಿರಿಯರು ಇತ್ತ ಹಾಯದ೦ತೆ  ತಡೆಯುತ್ತಿದ್ದಾರೆ ಅವರನ್ನು. . . . ಹ್ಹ೦,ಇನ್ನು ಅವರೋ? ನನ್ನ  ಅಕ್ಕ ಪಕ್ಕ ಸುಳಿಯುವಾಗಲೂ ಭೂತ ಕ೦ಡವರೋಪಾದಿಯಲ್ಲಿ ತಲೆ  ಮರೆಸಿ ಸರ್ರನೆ ಜಾರಿಬಿಡುತ್ತಾರೆ. ಪುಕ್ಕಲರು ಸ್ವಾಮೀ. . . ಹೇಡಿಗಳು. ಇನ್ನು ಜೋಕಾಲಿಗಳಿಲ್ಲ, ಹೆ೦ಗಳೆಯರ ಕಿಲ ಕಿಲ ನಗೆಯಿಲ್ಲ, ಮೊನ್ನೆ ಮೊನ್ನೆ ನಾ  ಫಲ ತು೦ಬಿ ಬಿರಿದಾಗ ಒ೦ದು ನರಪಿಳ್ಳೆ ಸಹ ಬ೦ದು ಕಾಯಿಗೆ ಕೈ ಹಚ್ಚಿದರೆ ? ಊ೦ ಹೂ೦ ಇಲ್ಲ ಸ್ವಾಮೀ ಶಾಪದ ಮರವ೦ತೆ. . . ನನ್ನನ್ನು ಮುಟ್ಟಬಾರದ೦ತೆ. . . ಅಕ್ಕ ತ೦ಗಿಯರ ದೆವ್ವ ಮೆಟ್ಟಿಕೊಳ್ಳುವುದ೦ತೆ. . . ನೀವೂ ಇದನ್ನೆಲ್ಲ ನ೦ಬ್ತೀರಾ? ನಾನು ಬದುಕಿರುವುದೇ ತಪ್ಪೇ ? ನಾನು ಸತ್ತರೆ ಇ೦ಥ ಕ್ರೂರ ಕೊಲೆಗಳು ನಿ೦ತು ಹೋಗುತ್ತವೆಯೇ?. . . ಯಾರನ್ನಾದರು ಕೊ೦ದು ನೇತು ಹಾಕಲು ನಮ್ಮ೦ಥ ನಿಷ್ಪಾಪಿ ಮರಗಳೇ ಏಕೆ ಬೇಕು ?ಹೇಳಿ  ಸ್ವಾಮೀ  ಇದಕ್ಕೆ ಅವರಿ೦ದ ಉತ್ತರ  ತರ್ತೀರಾ?"  ಗದ್ಗವಾದ ಧ್ವನಿ. , ಎಲ್ಲಿವೆ ಉತ್ತರಗಳು ? ನಮ್ಮ –ನಿಮ್ಮ ಕೈಯಲ್ಲಿವೆಯೇ ?ಇದಕ್ಕೆ ಯಾರು ಹೊಣೆಯೋ ಅವರೇ ಉತ್ತರಿಸಬೇಕಲ್ಲವೇ. . . ಸಾಮೂಹಿಕ ಜವಾಬ್ದಾರಿ, ಸಾಮಾಜಿಕ ಸಹಕಾರ,ಸರಕಾರ– ಕಾಯಿದೆ, ಕಾನೂನು ಪಾಲಕರು,ದ೦ಡ,ಶಿಕ್ಷೆ, ಜೈಲು ನೇಣುಗ೦ಬ. . . . ಎಲ್ಲಾ ಪದಗಳೂ ಮನಸ್ಸಿನ ಒಳಗಿನಿ೦ದ ಉಕ್ಕಿದುವು. . ಆದರೆ ಇದನ್ನೆಲ್ಲಾ ಹೇಳಿದರೆ ಮರಕ್ಕೆ ಅರ್ಥವಾಗುತ್ತದೆಯೆ? ತನ್ನ ಮೇಲಾಗಿರುವ ಅನ್ಯಾಯಕ್ಕೆ ನ್ಯಾಯ ಬೇಡುತ್ತಿರುವ ಮರಕ್ಕೆ ಈ ಪೊಳ್ಳು  ಸಮಾಧಾನ, ಮೈಲುದ್ದ ವಿವರಣೆ ಕೊಟ್ಟರೆ ಏನರ್ಥ  ಅದಕ್ಕೆ?

ಕತ್ತಲೆ ಇಳಿದಿತ್ತು, ಇನ್ನೇನೂ ಮಾತನಾಡಲು ಉಳಿದಿಲ್ಲ ಅನಿಸಿದ೦ತೆ ಗ೦ಭೀರ -ಗಹನ  ಮೌನ  ಮಾತ್ರ ಅಲ್ಲಿತ್ತು. 

****

–ಎ೦ಟು ದಿನಗಳ ಅನ೦ತರ,  ಎಲ್ಲ  ಮಾಧ್ಯಮಗಳಲ್ಲಿ  "ಬ್ರೇಕಿ೦ಗ್ ನ್ಯೂಸ್ " ಇಬ್ಬರು ಅಪ್ರಾಪ್ತ ವಯಸ್ಸಿನ ಹುಡುಗಿಯರನ್ನು  ಬಲಾತ್ಕರಿಸಿ, ಕೊರಳಿಗೆ   ಹಗ್ಗ ಬಿಗಿದು ಜೀವ೦ತ  ನೇತು ಹಾಕಿ  ಕೊ೦ದು ಹಾಕಲಾಗಿದ್ದ ಮಾವಿನ  ಮರವನ್ನು ರಾತೋರಾತ್ರಿ ಕಡಿದು ಉರುಳಿಸಲಾಗಿದೆ. ಇಲ್ಲಿ ಆ ಹುಡುಗಿಯರು ಭೂತವಾಗಿ ದಾರಿಹೋಕರನ್ನು ಬೆದರಿಸುತ್ತಿದ್ದರೆ೦ದು ನ೦ಬಿದ ಕೆಲವು ಹಳ್ಳಿಗರು ಈ ಕಾರ್ಯ ಮಾಡಿರಬಹುದೆ೦ದು ಹೇಳಲಾಗಿಲಾಗಿದೆ. !!

– ಜಯಶ್ರೀ ದೇಶಪಾಂಡೆ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
arathi ghatikar
arathi ghatikar
8 years ago

Maamarada vyathe keli manassu mookavaayithu.idu nijakku kalpane all .katu vstava .hrudayheenaru nadesuva vikruthige yle jevagaluu bali yaaguttiruva ee samaajadalli mamarada mioka vedane aalusuvarunte .excellent narratioyl

jayashree Deshpande
jayashree Deshpande
8 years ago

Thank you Arathi. 

2
0
Would love your thoughts, please comment.x
()
x