ಅಮರ್ ದೀಪ್ ಅಂಕಣ

ಪ್ರೊಫೆಷನಲ್ ಅಲ್ಲದ ಫೋಟೋಗ್ರಾಫರ್ ನ ಒಂದು ಪ್ರಸಂಗ…: ಪಿ.ಎಸ್. ಅಮರದೀಪ್.

ಸಮಾರಂಭದ ಊಟಕ್ಕೆ ಮುಂಚೆ ಬಾಳೆ ಎಲೆಯಲ್ಲಿ ಉಪ್ಪು, ಕೋಸಂಬರಿ, ಉಪ್ಪಿನಕಾಯಿ ಮುಂಚೆಯೇ ನೀಡುವ ಅಭ್ಯಾಸ ಎಷ್ಟರಮಟ್ಟಿಗೆ ಇದೆಯೋ ಹಾಗೆಯೇ ಒಂದು ಕಾರ್ಯಕ್ರಮ, ಅದರಲ್ಲೂ ಕೌಟುಂಬಿಕ ಕಾರ್ಯಕ್ರಮ ಅಂದರೆ ನಿಶ್ಚಿತಾರ್ಥ, ಹರಿಶಿಣ ಶಾಸ್ತ್ರ, ಮದುವೆ, ರೆಸೆಪ್ಷನ್ನು, ಸೀಮಂತ‌ ಕಾರ್ಯ, ನಾಮಕರಣ ಶಾಸ್ತ್ರ, ಹೀಗೆ ಯಾವುದೇ ಇರಲಿ, ಫೋಟೋಗ್ರಾಫರ್, ವಿಡಿಯೋಗ್ರಾಫರ್ ಅವರಂತೂ ಊರ ಮುಂಚಿತವಾಗಿ ರೆಡಿಯಾಗಿರಬೇಕು..

ಈಗೀಗಂತೂ ಎಲ್ಲದಕ್ಕೂ ಪ್ರೀ ಮತ್ತು ಪೋಸ್ಟ್ ಫೋಟೋ ಶೂಟ್ ಟ್ರೆಂಡ್ ಶುರುವಾಗಿದೆ. ಮೊದಲು‌ ಹೇಳಿದ್ನಲ್ಲ? ಆ ಎಲ್ಲಾ ಕಾರ್ಯಕ್ರಮಗಳದ್ದೂ ಪ್ರೀ ಮತ್ತು ಪೋಸ್ಟ್ ವರ್ಷನ್ನು ಈಗಿನ ಜರೂರತ್ತು. ಅದು ಖುಷಿಗೂ ಇರಬಹುದು, ಅವರವರ ಅಂತಸ್ತಿಗೆ ಗ್ರ್ಯಾಂಡಾಗಿ, ರಿಚ್ಚಾಗಿ ಇರಬೇಕೆನ್ನುವ ಆಶಯ. ಮೊನ್ನೆ ಮೊನ್ನೆವರೆಗೆ ಸಖತ್ತಾಗಿ ಮಾಡ್ ಡ್ರೆಸ್ಸಲ್ಲಿ ಒಳ್ಳೊಳ್ಳೆ‌ ಲೋಕೆಷನ್ನು ಹುಡುಕಿ ಸನ್‌ರೈಸು, ಸನ್ ಸೆಟ್ಟು ಗಾಳಿಯಲ್ಲಿ ಮೈಲುದ್ದ ಸೆರಗು ಹಾರಿ ಬಿಡುವ ಫೋಟೋಗಳು, ಬೆಟ್ಟಗಳ ಮೇಲೆ, ದೋಣಿಯ ಮೇಲೆ ಬಗೆಬಗೆಯ ಭಂಗಿಗಳಲ್ಲಿ ಥೇಟು ಸಿನಿಮಾ ಶೈಲಿಯಲ್ಲಿ ಶೂಟಿಂಗ್ ಮಾಡುತ್ತಿದ್ದರು…. ಇತ್ತೀಚಿಗೆ ಹಳ್ಳಿ ಸ್ಟೈಲಲ್ಲಿ ಹೆಣ್ಣಿಗೆ ಇಲಕಲ್ಲು ಸೀರೆ, ತುರುಬು, ದೊಡ್ಡ ಬೊಟ್ಟಿನ ಕುಂಕುಮ, ಮೂಗುನತ್ತು, ಕಾಲ್ಗೆಜ್ಜೆ, ತಲೆ ಮೇಲೆ ಸೆರಗು, ಆಹಾ ನಾಚಿಕೆಯ ನಗು. ಗಂಡಿಗಾದರೆ ಪಂಚೆ, ಜುಬ್ಬಾ, ತಲೆಗೆ ಪೇಟಾ, ರುಮಾಲು, ಶಲ್ಯ ಕೈಗೆ ಕಡಗ, ನೋಡಬೇಕು.

ಇನ್ನೂ ನೋಡಬೇಕೆಂದರೆ, ಕುರಿ ಮಂದೆಯಲ್ಲಿ ಕುರಿಮರಿ ಎತ್ತಿಕೊಂಡು, ಗುಡಿಸಲಲ್ಲಿ ಬೀಸೋ ಕಲ್ಲು ತಿರುವುತ್ತಲೋ, ದನದ ಕೊಟ್ಟಿಗೆಯಲ್ಲಿ ಹುಲ್ಲು ಮೇಯಿಸುತ್ತಿರುವಂತೆಯೂ ಹಾಗೂ ಹೊಲದಲ್ಲಿ ಗಂಡ ಕಾಯುವಂತೆ, ಹೆಂಡತಿ ಅಷ್ಟು ದೂರದಿಂದ ಬುತ್ತಿ‌ಹೊತ್ತು‌ ತರುತ್ತಿರುವಂತೆ ಫೋಟೋ ಶೂಟ್ ಗಳನ್ನು ನೋಡಬೇಕು ಭಲೇ ಚೆಂದಿರುತ್ತವೆ.. ನಿಜವಾಗಲೂ ಹಾಗೆ ಫೋಟೋ ತೆಗೆಸಿಕೊಳ್ಳುವವರು ನಿಜವಾಗಿಯೂ ಸಗಣಿ ಹೊರುತ್ತಾರೋ ಇಲ್ಲವೋ ಆ ಮಾತು ಬೇರೆ. ಆದರೆ, ಹಳ್ಳಿ ಜೀವನವನ್ನು ಆದರಿಸುವುದು, ಗೌರವಿಸುವುದು ತಪ್ಪೇನಲ್ಲ.

ಅಂಥವರ ಆಶಯ ಖುಷಿ, ರಿಚ್ಚು ಏನೇ ಇರಲಿ. ಆದರೆ ಅವೆಲ್ಲಕ್ಕೂ ಫೋಟೋ ತೆಗೆಯೋಕೆ ಫೋಟೋಗ್ರಾಫರ್, ವಿಡಿಯೋಗ್ರಾಫರ್ ಅಂತೂ ಬೇಕೇ ಬೇಕು.. ಅದರಲ್ಲೂ ಮದುವೆ ಅಂದಮೇಲೆ ಮುಗೀತು… ಅಲ್ಲೆಲ್ಲಾ ಫೋಟೋಗ್ರಾಫರ್ ಗಳು ಪೋಟೋ ತೆಗೆಯಲು ಮಾತ್ರ ಕಣ್ಣೆದುರೇ ಇರಬೇಕು‌… ಕೊನೆಗೆ ಎಲ್ಲರೂ ಊಟ ಮಾಡಿ ಹೊರಟರೂ ಮದುವೆ ಗಂಡು ಹೆಣ್ಣು ಕೊನೆಗೆ ಊಟ ಮಾಡುವಾಗ ತುತ್ತು ಬಾಯಿಗೆ ಇಡೋ ಫೋಟೋ ತೆಗೆದಾದ ಮೇಲೇಯೆ ಫೋಟೋಗ್ರಾಫರ್ ಗಳಿಗೆ ಊಟ.

ಅಷ್ಟೊತ್ತಿಗೆ ತಣ್ಣಗಾದ ಊಟ. ಹಾಗೂ ಸ್ವೀಟು ಸಿಕ್ರೆ ಪುಣ್ಯ. ಅದಿಲ್ಲದಿದ್ರೆ ಕೊನೆಗೊಂದಿಷ್ಟು ಇದ್ದೇ ಇದೆಯಲ್ಲ? ಅನ್ನ ಸಾರಾದ್ರೂ ತಿಂದು ಹೊರಡುತ್ತಾರೆ. ಇಂಥ ಸಾಕಷ್ಟು ಉದಾಹರಣೆಗಳನ್ನು ನೋಡಿಯೇ ಇರುತ್ತೇವೆ… ಆದ್ರೆ ಕೆಲವೇ‌ ಕೆಲವರು ಮಾತ್ರ ಫೋಟೋಗ್ರಾಫರ್ ಗಳಿಗೆ “ಮೊದಲೇ ಚೂರು‌ ತಿಂದ್ ಬಿಡ್ರಪ್ಪ… ಆಮೇಲೆ ನಿಮುಗ್ ಟೈಂ‌ ಸಿಗಲ್ಲ ಆಥವಾ ಕೊನೆಗೆ ಊಟಾನೇ ಸಿಗ್ದೇ‌ ಇರಬೌದು” ಅನ್ನೋರು.

ನಾನು ಫೋಟೋಗ್ರಾಫರ್ ಗಳನ್ನು ತುಂಬಾ ಗಮನಿಸುತ್ತೇನೆ. ಗಂಟೆಗಳ ಕಾಲ ಅವರು ನಿಂತುಕೊಂಡೇ ಇರಬೇಕಾಗುತ್ತೆ. ಚೂರು ರೆಸ್ಟು ಮಾಡೋದಿಕ್ಕೂ ಪುರುಸೊತ್ತಿರೋದಿಲ್ಲ. ಇಂಥದೇ ಸಂಧರ್ಭದಲ್ಲಿ ಫೋಟೋಗ್ರಾಫರ್ ಒಬ್ಬೊಬ್ಬರನ್ನು ಮಾತಾಡಿಸಿರುತ್ತೇನೆ. ಆಗೆಲ್ಲಾ ಅವರು “ನೋಡಿ ಸರ್, ಪ್ಯಾಕೇಜ್ ಲೆಕ್ಕದಲ್ಲಿ ಮಾತಾಡಿರ್ತೀವಿ, ಇಪ್ಪತ್ತಾರು ಕಂಡೀಷನ್‌ ಇರ್ತವೆ.. ಇಲ್ಲ ಅನ್ನೋಕಾಗಲ್ಲ, ಅವರು ಹೆಂಗೆ ಹೇಳ್ತರೋ ಹಂಗೆ ಶೂಟ್ ಮಾಡಬೇಕು… ಇನ್ನು ಕೆಲವು ಸಲ ನಾವೇ ಅವರನ್ನು ‘ಈ ಥರಾ…. ನಿಲ್ಲಿ, ಹಾಗೆ ಹೀಗೆ’ ನಿಲ್ಲಿಸಿ ಶೂಟ್ ಮಾಡಬೇಕು”. ಅನ್ನುತ್ತಾರೆ.

ಒಮ್ಮೆ ಯಾವುದೋ ನಾಮಕರಣ ಶಾಸ್ತ್ರಾನೋ ಬೇರೇನೋ ನೆನಪಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ‌‌. ಮೊದಲೇ ಅದು ಬ್ರಾಹ್ಮಣರ ಕಾರ್ಯಕ್ರಮ. ಅಲ್ಲಿ ಬಂದಿದ್ದ ಕೆಲವು ಸ್ನೇಹಿತರನ್ನು‌ ಮಾತಾಡಿಸಿ ಮುಯ್ಯ ಕೈಗಿಟ್ಟು ಶುಭ ಹಾರೈಸಿದೆ. ನಂತರ‌ ಬಫೆ ಸಿಸ್ಟಮ್ ನಲ್ಲಿ ತಟ್ಟೆ ಹಿಡ್ಕೊಂಡು ಕ್ಯೂನಲ್ಲಿ ನಿಂತೆ.. ಟೇಬಲ್ ಊಟ ಆಗಿದ್ರೆ ಜನಿವಾರ ನೀವಿಕೊಳ್ಳುತ್ತಾ ಬಾಳೆ ಎಲೆ ಹಾಕಿ ಊಟ ಬಡಿಸುವ ಮುಂಚೆ , ಮಧ್ಯೆ ಮತ್ತು ಕೊನೆ ಕೊನೆಗೆ ಅದಕ್ಕೇ ಅಂತಾನೆ ” ಸಾವ್ಕಾಶ ತಗೊಳ್ಳಿ, ಸಾವ್ಕಾಶ ತಗೊಳ್ಳಿ” ಅನ್ನುತ್ತಾ ಉತ್ತೇಜಿಸುವವರು ಬೇರೆ..

ಬಿಡಿ, ನಾನು ಇನ್ನೇನು ನೀಡಿಸಿಕೊಳ್ಳಬೇಕು, ಅಷ್ಟರಲ್ಲಿ ಹಿಂದಿನಿಂದ ಬೆನ್ನಿಗೆ ಯಾರೋ ತಟ್ಟಿದಂತಾಯ್ತು. ನೋಡುತ್ತೇನೆ. “ಏನ್ಸಾರ್ ಚೆನ್ನಾಗಿದಿರಾ? ಎಷ್ಟು ದಿನ ಆಯ್ತು ನಿಮ್ಮುನ್ನ ನೋಡಿ, ಇಲ್ಲೇ‌ ಇದೀರೋ ಟ್ರಾನ್ಸಫರ್ ಆಗಿದೆಯೋ?” ಕೇಳಿದರು. ಹೇ, ಹಾಗೇನಿಲ್ಲ ಸರ್, ಇಲ್ಲೇ‌ ಇದೀನಿ.. ಎಲ್ಲಾ ಆರಾಮ್.. ಮತ್ತೆ ನೀವು ಹೇಗಿದಿರಾ? ಕೇಳುತ್ತೇನೆ. ತಮಾಷೆಯೆಂದರೆ ಅವರು ಯಾರೆಂದೇ ನೆನಪಾಗುವುದಿಲ್ಲ….

“ಏನೇ ಹೇಳಿ ನೀವು ಫೋಟೋ ಚೆನ್ನಾಗಿ ತೆಗಿತೀರಾ ಬಿಡಿ. ಯಾಕೆ ಇತ್ತೀಚಿಗೆ ಕಾಣ್ತಿಲ್ಲ ನೀವು.” ಕೇಳಿದರು.. ಹೌದು ಸರ್, ಕ್ಯಾಮೆರಾ ಕೊಟ್ಟು ಬಿಟ್ಟೆ. ಹೊಸ ಕ್ಯಾಮೆರಾ ತಗೋಬೇಕು. ಇಷ್ಟರಲ್ಲೇ ತಗೋತೀನಿ ಅಂದೆ. “ಹೆಚ್ಚು ಕಡಿಮೆ ಒಂದೂವರೆ ವರ್ಷಾತು ನೋಡ್ರಿ ನಿಮ್ಮನ್ನ ನೋಡಿ, ಅವತ್ತು ನಮ್ಮನೆ ಹತ್ರ ಯಾವ್ದೋ ಸೀಮಂತ ಕಾರ್ಯಕ್ಕೆ ಫೋಟೋ ತೆಗೆಯೋಕೆ ಬಂದಿದ್ರಿ ಅನ್ಸುತ್ತೆ. ಅದೇ ಕೊನೆ” ಅಂದರು ನೋಡಿ.

ಗಪ್ಪಾಗಿ ನಿಂತುಬಿಟ್ಟೆ. ಊಟ ನೀಡುವವರು “ಸರ್, ಬೇಗ ಮುಂದೆ ನಡೀರಿ” ಅಂದಾಗಲೇ ಎಚ್ಚರಾಗಿದ್ದು… ತಟ್ಟಗೆ ನೀಡಿಸಿಕೊಂಡು ಒಬ್ಬನೇ ನಿಂತೆ. ನನ್ನ ಹಿಂದೆಯೇ ಆ ಅಪರಿಚಿತ ವ್ಯಕ್ತಿ ಮತ್ತು ನನಗೆ ಕಾಮನ್ ಎನ್ನುವಂಥ ಫ್ರೆಂಡ್ ಇದ್ದರು. ಆ ಅಪರಿಚಿತನಿಗೆ ನನ್ನ ಸ್ನೇಹಿತ “ಹೊಗ್ಗೋ ಇವ್ನೌನ, ಲೇ ಅವರನ್ನು ಸ್ಟುಡಿಯೋ ಇಟ್ಗಂಡಿರೋ ಪ್ರೊಫೆಷನಲ್ ಫೋಟೋಗ್ರಾಫರ್ ಅಂದ್ಕಂಡಿದಿಯಾ? ಅವರು ಹಾಬಿ ಫೋಟೋಗ್ರಾಫರ್ ಕಣಲೇ. ಅವರಿಗೆ ಗೌರ್ಮೆಂಟ್ ನೌಕ್ರಿ ಅದ” ಅಂತೇಳಿದಾಗಲೇ ಆ ಅಪರಿಚಿತ ವ್ಯಕ್ತಿ “ಹಿ ಹಿ ಹಿ… ಹೌದೇನ್ರಿ, ನಾನು ಸೀಮಂತ ಕಾರ್ಯಕ್ಕ ಫೋಟೋ ತೆಗೆಯೋಕೆ ಬಂದಿದ್ರಲ್ಲ? ಅವ್ರಾ ಅಂದ್ಕಂಡಿದ್ದೆ…” ಅಂದು ಜಾಗ ಖಾಲಿ ಮಾಡಿದ.

ಕೈಯಲ್ಲಿ ಕ್ಯಾಮೆರಾ ಹಿಡಿದು ಮೊದಮೊದಲು ಬೆಳ್ ಬೆಳಿಗ್ಗೆ ಗಾಡಿ ಹಾಕ್ಕೊಂಡು ಓಣಿಯಲ್ಲಿ ಹೊರಟರೆ “ಇವ್ನೇನ್ ಹಿಂಗಾದ” ಅಂದುಕೊಂಡರನ್ನು ನೋಡಿದ್ದೆ. ಆ ದಿನ ಅಪರಿಚಿತ ವ್ಯಕ್ತಿ ಹೇಳಿದ್ದು ಕೇಳಿ ಇನ್ನು ಅದೇನು ಆಗೋನಿದಿನೋ ಏನೋ ಅನ್ನಿಸಿದ್ದಂತೂ ಸುಳ್ಳಲ್ಲ…

ಪಿ.ಎಸ್. ಅಮರದೀಪ್.


ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಪ್ರೊಫೆಷನಲ್ ಅಲ್ಲದ ಫೋಟೋಗ್ರಾಫರ್ ನ ಒಂದು ಪ್ರಸಂಗ…: ಪಿ.ಎಸ್. ಅಮರದೀಪ್.

  1. ತುಂಬಾನೇ ಚೆನ್ನಾಗಿದೆ ಸರ್.
    ಅಂದಿನ ಮದುವೆಗಳ ಸಡಗರ ಸಂಭ್ರಮ. ಆ ಆತಿಥ್ಯ ಅದರಲ್ಲೂ ಫೋಟೋಗ್ರಾಫರ್ ಗಳ ಇರುವಿಕೆ ಓದುವಾಗ ಖುಷಿ ಆಯ್ತು. ಇಂದಿನ pre wedding and post wedding photo shoot ಬಗ್ಗೆ ತುಲನಾತ್ಮಕವಾಗಿ ಬರೆದಿದ್ದು ಸೊಗಸಾಗಿದೆ. ನಿಮ್ಮ ಫಜೀತಿ ನೆನೆದು ನಗು ಬಂತು.

    ಧನ್ಯವಾದಗಳು ಸರ್

Leave a Reply

Your email address will not be published. Required fields are marked *