ಬಾಳಿ ಬದುಕಿದವರು: ಎಸ್.ಗಣೇಶ್, ಮೈಸೂರು.

ಇತ್ತೀಚೆಗೆ ನನ್ನ ಸಂಬಂಧಿಯೊಬ್ಬರು ಮರಣ ಹೊಂದಿದರು, ಕುಟುಂಬದವರೆಲ್ಲಾ ಒಂದು ಕಡೆ ಸೇರಿ, ಮೃತರ ಆತ್ಮ ಶಾಂತಿಗಾಗಿ ಉತ್ತರಕ್ರಿಯೆಗಳನ್ನು ಹೇಗೆ ನೆರವೇರಿಸಬೇಕು? ದಾನಗಳನ್ನು ಏನು ಕೊಡಬೇಕು? ಪ್ರತ್ಯಕ್ಷ ದಾನಗಳನ್ನು ಕೊಡಬೇಕೋ? ಅದರ ವೆಚ್ಚವೆಷ್ಟು? ಎಲ್ಲಿ ಕರ್ಮಗಳನ್ನು ಮಾಡಬೇಕು? ಹೀಗೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಆಗುತ್ತಿತ್ತು.. ನಾನು ತದೇಕಚಿತ್ತದಿಂದ ಎಲ್ಲವನ್ನು ಗಮನಿಸುತ್ತಿದ್ದೆ, ಗುಂಪಿನಲ್ಲಿನ ಹಿರಿಯರೊಬ್ಬರು ಪ್ರತಿಯೊಂದು ಪ್ರಶ್ನೆಗಳಿಗೂ ಸಲಹೆಗಳನ್ನು ನೀಡುತ್ತಿದ್ದರು, ಅದನ್ನ ಉಳಿದವರು ಅನುಮೋದಿಸುತ್ತಿದ್ದರು.. ಒಟ್ಟಿನಲ್ಲಿ ಆ ಹಿರಿಯರ ಮಾತನ್ನು ಯಾರು ಮರು ಪ್ರಶ್ನಿಸುತ್ತಿರಲಿಲ್ಲ.. ಅವರ ಮಾತೇ ಅಂತಿಮವಾಗುತ್ತಿತ್ತು.. ಹೀಗೆ ಚರ್ಚೆಯಲ್ಲಿ ದಾನಗಳನ್ನು ನೀಡೋ ವಿಷಯಕ್ಕೆ ಬಂದಾಗ ಕೆಲವರು ಪ್ರತ್ಯಕ್ಷ ದಾನಕ್ಕೆ ಹೆಚ್ಚಿನ ಹಣಬೇಕಾಗಬಹುದು.. ಆದ್ದರಿಂದ ಪ್ರತ್ಯಕ್ಷ ದಾನಗಳ ಬದಲು ಎಲ್ಲಾ ದಾನಗಳ ಹೆಸರಲ್ಲಿ ನಾಮಕವಾಸ್ತೆ ಇಂತಿಷ್ಟು ಹಣ ನೀಡಿದರಾಯ್ತು ಎಂದರು.. ಅದಕ್ಕೆ ಆ ಹಿರಿಯರು ಇಲ್ಲಾ ಮೃತರು ಚೆನ್ನಾಗಿ “ಬಾಳಿ ಬದುಕಿದವರು”.. ಹಾಗಾಗಿ ಅವರ ಆತ್ಮಕ್ಕೆ ಶಾಂತಿ ಲಭಿಸಬೇಕಾದರೆ ಪ್ರತ್ಯಕ್ಷ ದಾನಗಳನ್ನು ನ್ಯಾಯಪಾತ್ರರಿಗೆ ನೀಡುವುದೇ ಸರಿ ಎಂದರು. ಮತ್ತೇನು ಮಾಡೊದು ಅಂತ ಅದನ್ನು ಸಹ ಒಪ್ಪಿ ಎಲ್ಲರೂ ಗೋಣಾಡಿಸಿದರು.

ಆ ಕ್ಷಣ ನನ್ನಲ್ಲಿ ಚೆನ್ನಾಗಿ “ಬಾಳಿ ಬದುಕಿದವರು” ಎಂದರೆ ಏನು? ಎಂಬ ಪ್ರಶ್ನೆ ಉದ್ಭವವಾಯಿತು.. ನನ್ನ ಬಹಳ ಕಾಡತೊಡಗಿತು.. ಉತ್ತರ ಹುಡುಕುವ ಪ್ರಯತ್ನ ಶುರುವಾಯಿತು. ನನ್ನ ಬಹುದೊಡ್ಡ ದೌರ್ಬಲ್ಯವೇನೆಂದರೆ, ನನಗೆ ಯಾವುದೇ ಸಂದೇಹ ಬಂದಾಗ ಕೂಡಲೇ ಅದಕ್ಕೆ ಉತ್ತರವನ್ನು ನೀಡುವಂತೆ ನನ್ನ ಮನಸ್ಸಿಗೆ ಕೇಳುತ್ತೇನೆ. ಸ್ವತ: ಉತ್ತರ ಹುಡುಕಲು ಪ್ರಾರಂಭಿಸುತ್ತೇನೆ. ಈ ಪ್ರಶ್ನೆಗೂ ನಾನು ಹೇಗೆ ಉತ್ತರವನ್ನು ಕಂಡುಕೊಳ್ಳಬಹುದು ಎಂಬ ದಾರಿಗಳನ್ನು ತಡಕಾಡಿಗೆ. ಆಗ ನನಗೆ ಹಲವು ವಿಷಯಗಳ ಬಗ್ಗೆ ಉಪ ಪ್ರಶ್ನೆಗಳು ಉದ್ಭವವಾದವು..

ಚೆನ್ನಾಗಿ “ಬಾಳಿ ಬದುಕಿದವರು” ಎಂದರೆ? ಎಷ್ಟು ವರ್ಷಗಳು ಬದುಕಿದರು ಎಂಬುದೇ ಪ್ರಮುಖ ಮಾನದಂಡವೇ ಎನ್ನುವುದು ನನ್ನ ಮನಸ್ಸಿಲ್ಲಿ ಗೋಚರಿಸಿದ ಮೊದಲನೇ ಸಂದೇಹ.. ಆಗ ನನ್ನಲ್ಲಿ ಮೂಡಿದ್ದೆ ಮಹಾನ್ ಸಾಧಕರ ಆಯಸ್ಸನ್ನು ಪರಿಗಣಿಸಿದರೆ ಬಹುಶ: ಇದಕ್ಕೆ ಉತ್ತರ ಸಿಗಬಹುದೇನು ಅನಿಸಿತು. ಸರ್ ಎಂ.ವಿಶ್ವೇಶ್ವರಯ್ಯ, ನಿಗಂಟು ತಜ್ಞ ವೆಂಕಟಸುಬ್ಬಯ್ಯ ಇವರು ಶತಾಯುಗಳಾಗಿದ್ದರು, ಇನ್ನು ಜಗದ್ಗುರು ಶಂಕರಾಚಾರ್ಯರು, ಸ್ವಾಮಿ ವಿವೇಕಾನಂದರು ಅಲ್ಪಾಯುಷಿಗಳಾಗಿದ್ದರು. ಇದನ್ನ ಗಮನಿಸಿದಾಗ ವಯಸ್ಸಿಗೂ ಬಾಳಿ ಬದುಕುವುದಕ್ಕೂ ಕಿಂಚಿತ್ ಸಂಬಂಧವಿಲ್ಲವೆಂದು. ಎಷ್ಟು ವರ್ಷ ಬದುಕಿದವರು ಎಂಬುವುದಕ್ಕಿಂತ ಬದುಕಿದಷ್ಟು ದಿನದಲ್ಲಿ ಏನು ಸಾಧಿಸಿದ್ದರು ಎಂಬುದು ಪ್ರಮುಖವಾಗುತ್ತದೆಂದು.

ಈಗ ನನಗೆ ಉದ್ಭವಾದ ಎರಡನೇ ಸಂದೇಹ ಬಹುಶ: ಯಾರಲ್ಲಾದರೂ ಉದ್ಭವಾಗಿರಬಹುದು? ಅದೇನಂದರೆ, ಪ್ರತಿ ಮನುಜನ ಜನ್ಮ ಹಿಂದೆ ಏನಾದರೂ ಮಹತ್ ಕಾರ್ಯದ ಉದ್ದೇಶವಿರುತ್ತದೆಯೇ? ಈ ಪ್ರಪಂಚದಲ್ಲಿ ಮನುಜ ಇತರೆ ಜೀವ ಸಂಕುಲದಂತೆ ಒಂದು ಪ್ರಾಣಿಯಂತೆ ಹಾಗೆ ಜನ್ಮ ತಳೆದು ಉಂಡು ದೇಹ ಬೆಳೆಸಿ ಒಂದು ದಿನ ಅಂತ್ಯವಾಗುವುದೇ? ಬಹುಶ: ಇದಕ್ಕೆ ಉತ್ತರ ಕಂಡುಕೊಳ್ಳುವುದು ಬಹಳ ಕಷ್ಟ, ಆದರೂ ನನ್ನಲ್ಲಿರುವ ಅಲ್ಪ ವಿವೇಚನಾ ಮತ್ತು ತಾರ್ಕಿಕ ಶಕ್ತಿಯನ್ನು ಬಳಸಿ ಕಂಡುಕೊಂಡ ಉತ್ತರ ಮಾತ್ರ “ಬೆಟ್ಟ ಕೊರೆದು ಇಲಿ ಹಿಡಿದಂತಾಯಿತು”.. ಆದರೂ ನನಗೆ ಕಂಡಂತೆ ಪ್ರತಿ ಮನುಷ್ಯ ಹುಟ್ಟಿದ್ದಾಗ ತನಗೆ ಸ್ವಂತ ವಿವೇಚನೆ ಬರುವವರೆಗೆ ಬಾಲ್ಯ ಕಳೆದಿರುತ್ತದೆ, ತದನಂತರ ಪ್ರಮುಖ ಘಟ್ಟವಾದ ಯವ್ವನಾವಸ್ಥೆಯಲ್ಲಿ ಕಾಲು ಭೂಮಿಯಲ್ಲಿ ನಿಲ್ಲದೆ ಭ್ರಮಣಾಲೋಕದಲ್ಲಿ ಕಳೆದುಹೊಗುತ್ತದೆ, ಸಾಂಸಾರಿಕ ಜೀವನ ಮಧ್ಯವಯಸ್ಸಿನಲ್ಲಿ ಕಳೆದು ಆ ನಂತರ ನಮ್ಮ ಅರಿವಿಗೆ ಜೀವನದ ಅರ್ಥ ತಿಳಿಯುವಷ್ಟರಲ್ಲಿ ಕಾಲಮಿಂಚಿ ಅಂತ್ಯವಾಗೊಗಿರತ್ತೇ.. ಜೀವನದ ಪ್ರಾರಂಭ ಮತ್ತು ಅಂತ್ಯದ ನಡುವೆ ಎಲ್ಲಿ ಮನುಷ್ಯ ಎಡವಿರುತ್ತಾನೆ. ಇದಕ್ಕೆ ಸರಳ ಉತ್ತರವೆಂದರೆ, ಯಾರು ಸ್ವಂತ ವಿವೇಚನೆ ಮೂಡಿದ ವಯಸ್ಸಿನಲ್ಲಿ ಅರಿಷಡ್ವರ್ಗಗಳ ದಾಸನಾಗುತ್ತಾನೋ ಅಂದಿನಿಂದ ಅವನ ಅವನತಿ ಪ್ರಾರಂಭವಾಗುತ್ತಾ ಸಾಗುತ್ತದೆ. ಸರಿ, ನಿಮ್ಮಲ್ಲಿ ಈಗ ಒಂದು ಪ್ರಶ್ನೆ ಮೂಡವುದು ಸಹಜ, ಅದೇನೆಂದರೆ, “ಅರಿಷಡ್ವರ್ಗಗಳು ಪ್ರಕೃತಿಯ ಒಂದು ಭಾಗವಲ್ಲವೇ”? ಕಾಮ, ಕ್ರೋಧ, ಮೋಹ, ಲೋಭ, ಮದ, ಮಾತ್ಸರ್ಯ ಇಲ್ಲದೇ ಮನುಜ ಬದುಕಲು ಸಾದ್ಯವೇ? ದೇವಾನ್ ದೇವತೆಗಳಿಗೆ ಕ್ರೋಧ, ಮೋಹ ವಿರಲಿಲ್ಲವೇ? ಎಂದು..

ಇದಕ್ಕೆ ಸರಳ ಉತ್ತರವೇನೆಂದರೆ, ಅರಿಷಡ್ವರ್ಗಗಳು ಮಾನವನ ನೈತಿಕ ಉನ್ನತಿಗೆ ಬಳಸುವಂತ ಸಾಧನಗಳಾಗ ಬೇಕೆ ಹೊರತು, ಅವುಗಳ ಅಡಿಯಾಗಬಾರದು.. ಕ್ಷಮಾ ಗುಣವನ್ನು ಬೆಳಸಿಕೊಳ್ಳಬೇಕು. ಅಲ್ಲಿಗೆ ಮಾನವ ಜನ್ಮಕ್ಕೆ ನೈಜ ಅರ್ಥ ಲಭಿಸಿ, ಉತ್ತಮ ಸಾಧನೆಗೆ ದಾರಿ ನಿರ್ಮಾಣವಾಗುತ್ತದೆ. ಇದರಿಂದ ಮಾನವ ಕಲ್ಯಾಣವಾಗುತ್ತದೆ, ಜನ್ಮದ ಉದ್ದೇಶ ಈಡೇರುತ್ತದೆ. ಕೇವಲ ಕಾಮಕ್ಕಾಗಿ ಸಂಸಾರಿಯಾಗಿ, ಮನಸ್ಸಿನಲ್ಲಿ ಭರಪೂರ ಕ್ರೋಧ, ಮೋಹ, ಲೋಭ, ಮದ, ಮಾತ್ಸರ್ಯ ತುಂಬಿಕೊಂಡು, ಹಣ ಗಳಿಸುವುದೇ ಜೀವನದ ಪರಮ ಗುರಿಯಾಗಿಸಿಕೊಂಡು, ಕಂಟ ಭರ್ತಿ ತಿಂದು, ಇನ್ನೊಬ್ಬರ ಏಳಿಗೆಯನ್ನು ಸಹಿಸದೆ, ಅಸಹನೆಯ ಪರಕಾಷ್ಟೆ ತಲುಪಿ, ದೊಡ್ಡ ದೊಡ್ಡ ಬಂಗಲೆಯಲ್ಲಿ ಐಷಾರಾಮಿ ಜೀವನ ನಡೆಸುವುದೇ, ವಿಲಾಸಿ ಕಾರುಗಳಲ್ಲಿ ಪ್ರಯಾಣಿಸುವುದೇ ಜೀವನದ ಸಾಧನೆಯಾಗುವುದಿಲ್ಲ. ಎಲ್ಲರೂ ಅಂಬಾನಿಯಾದರೆ, ಹಣಕ್ಕೆ ಬೆಲೆಯಿರುವುದಿಲ್ಲ, ಆದರೆ ಅಂಬಾನಿಯ ಬದ್ಧತೆ ಅಳವಡಿಸಿಕೊಳ್ಳಬೇಕು, ಪ್ರಾಮಾಣಿಕತೆಗೆ ಹೆಸರುವಾಸಿಯಾದ ನಮ್ಮ ನೆಚ್ಚಿನ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನವನ್ನು ಅಳವಡಿಸಿಕೊಂಡರೆ ಬಹಳಷ್ಟು ಸಾಧನೆಗಳನ್ನು ಮಾಡಬಹುದು. ನಮ್ಮಲ್ಲಿ ಏನಾದರೂ ವಿಶೇಷತೆ/ವಿಭಿನ್ನ ವೈಚಾರಿಕ ಆಲೋಚನೆ ಇದ್ದರೆ ಮಾತ್ರ ಗುಂಪಿನಲ್ಲಿ ನಮ್ಮನ್ನು ಗುರುತಿಸುತ್ತಾರೆ.

ಆದ್ದರಿಂದ, ಮಾನವನ ಆಯಸ್ಸು ಎಷ್ಟಿದೆಯೋ ಗೊತ್ತಿಲ್ಲ, ಇರವಷ್ಟು ದಿವಸ ಪ್ರತಿ ಮಾನವ ತನ್ನ “ಸೂಕ್ಷ್ಮ ಮದ”ವನ್ನು ಸದಾ ಜಾಗೃತಾವಸ್ಥೆಯಲ್ಲಿಸಿಕೊಳ್ಳಬೇಕು. ಅರೆ, ಏನು ಇದು “ಸೂಕ್ಷ್ಮ ಮದ”? ವೆಂದು ಕೇಳುತ್ತೀರಲ್ವಾ.. ಅದೇ ಯಾವುದೇ ಕೆಲಸವನ್ನು ಪ್ರಾರಂಭಿಸುವಾಗ ಮಾಡುವ ದೃಢ ಸಂಕಲ್ಪವೇ “ಸೂಕ್ಷ್ಮ ಮದ”. ನಿಮ್ಮ ಕಾರ್ಯ ಸಫಲವೋ/ಅಸಫಲವೋ ಅಂತಿಮವಾಗಿ ತಿಳಿಯುವುದು. ಋಣಾತ್ಮಕ ಭಾವನೆಯಿಂದ ಕಾರ್ಯ ಪ್ರಾರಂಭಿಸಿದರೆ, ಸಫಲತೆ ಪರಿಮಾಣ ಬಹಳ ಕಡಿಮೆ ಹಾಗೂ ಬಹಳ ಕ್ಲಿಷ್ಟವಾಗಿರುತ್ತದೆ. ಧನಾತ್ಮಕವಾಗಿ ಯೋಚಿಸಿದಾಗ ಯಶಸ್ಸು ದೊರೆಯುವ ಪರಿಮಾಣ ಅಧಿಕವಾಗಿರುತ್ತದೆ, ಒಂದು ವೇಳೆ ಅಸಫಲವಾದರೂ, ಮಾನಸಿಕವಾಗಿ ಕುಗ್ಗುವ ಪ್ರಮೇಯವಿರುವುದಿಲ್ಲ.

ಇದರಿಂದ ಒಂದಂತೂ ನನಗೆ ಅರ್ಥವಾಯಿತು, ನನಗೆ ಇನ್ನು ಎಷ್ಟು ಆಯಸ್ಸು ಇದೆಯೋ ಗೊತ್ತಿಲ್ಲ, ಹಿಂದಿನ ಜನ್ಮದಲ್ಲಿ ಏನಾಗಿದ್ದೆನೋ ಗೊತ್ತಿಲ್ಲ, ಮುಂದಿನ ಜನ್ಮದಲ್ಲಿ ಏನಾಗುತ್ತೇನೋ ಗೊತ್ತಿಲ್ಲ. ನನ್ನ ಮರಣಾನಂತರ ಈ ದೇಹಕ್ಕೆ ಕಿಲುಬು ಕಾಸಿನ ಕಿಮ್ಮತ್ತಿಲ್ಲ. ನಾನು ಇದುವರೆಗೂ ಏನು ಸಾಧಿಸಿದ್ದೇನೋ ಅಳತೆ ಮಾಡಿ ಪ್ರಮಾಣ ಪತ್ರ ನೀಡುವ ಯಾವುದೇ ಸಂಸ್ಥೆಯಿಲ್ಲ.. ಆದರೆ, ನಾನು ಮಾಡುವ ಪ್ರತಿಯೊಂದು ಕೆಲಸದಲ್ಲೂ ಸ್ವಂತ ತತ್ವ ಹಾಗೂ ಸಾಧಕರ ತತ್ವಗಳನ್ನು ಅಳವಡಿಸಿಕೊಂಡು, ಕಾಪಾಡಿಕೊಂಡಿದ್ದೇ ಆದಲ್ಲಿ ನನ್ನ ಜನ್ಮಕ್ಕೆ ಅರ್ಥ ಆತ್ಮಕ್ಕೆ ಮೋಕ್ಷ ದೊರೆಯುತ್ತದೆ. ಇಲ್ಲಿ ಯಾರನ್ನಾದರೂ ಮೆಚ್ಚಿಸುವುದೇ ಸಾಧನೆಯಾಗಬಾರದು, ನಿಮ್ಮ ಪ್ರತಿ ಉತ್ತಮವಾದ ನಡವಳಿಕೆಯೇ ನಿಮ್ಮನ್ನು ಸಾಧನೆಯ ಶಿಖರಕ್ಕೆ ತಲುಪಿಸುತ್ತದೆ. ಇಲ್ಲವಾದರೆ, ನಾನು ಒಬ್ಬ ನಾಮಕಾವಸ್ತೆ “ಬಾಳಿ ಬದುಕಿದವನು” ಎಂದು ಎನಿಸಿಕೊಂಡು ಮರಣಾನಂತರ ಯಾವುದೇ ದಾನ ನೀಡಿದರೂ ನನ್ನ ಆತ್ಮಕ್ಕೆ ಶಾಂತಿ ಮೋಕ್ಷ ಲಭಿಸದೇ, ಪ್ರಪಂಚದಲ್ಲಿ ಇತರೆ ಜೀವಿಯಂತೆ ಒಂದು ಅರ್ಥ ರಹಿತ ಜೀವನ ನಡೆಸಿ ಸಾಧಾರಣ ಕ್ರಿಮಿಯಂತೆ ಜನಸಿ ನಶಿಸಿಹೋಗುತ್ತೇನೆ.
ಇನ್ನು ನೈಜವಾಗಿ “ಬಾಳಿ ಬದುಕಿದವ”É ಎಂದೆನಿಸಿಕೊಳ್ಳುವ ಆಯ್ಕೆ ನಮ್ಮ ಕೈಯಲ್ಲಿದೆ. ಒಮ್ಮೆ ಕೈಚೆಲ್ಲಿದರೆ, ಮತ್ತೊಮ್ಮೆ ಅವಕಾಶ ಲಭಿಸದು. “ಎ ಜಿಂದಗಿ ನ ಮಿಲೇಗಿ ದುಬಾರ”….

-ಎಸ್.ಗಣೇಶ್, ಮೈಸೂರು.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಅಮರದೀಪ್ ಪಿ.ಎಸ್.
ಅಮರದೀಪ್ ಪಿ.ಎಸ್.
3 years ago

ದೋಸ್ತಾ ವೈಚಾರಿಕತೆ ಮತ್ತು ಆಧ್ಯಾತ್ಮಿಕ ತಳಹದಿ ನಿನ್ನ ಯೋಚನೆ ಮತ್ತು ಅಳವಡಿಸಿಕೊಳ್ಳುವ ಪ್ರಕ್ರಿಯೆ ಇದಾಗಿದೆ‌‌‌‌‌‌….. Good start….. Plz do write…. N it must go on. .. Its my wish…

1
0
Would love your thoughts, please comment.x
()
x