ಕಥಾಲೋಕ

ಪ್ರೇಮ ಷರತ್ತು: ಸುಜಾತ ಕೋಣೂರು

ಕುಶಲ ಶಿಲ್ಪಿಯ ಕಲೆಯ ಸಾಕಾರವೆಂಬಂತೆ ಅಲಂಕಾರಿಕ ಕಂಬಗಳು. ಈಗ ತಾನೆ ಗರಿಗೆದರಿ ನರ್ತಿಸುವುದೇನೋ ಎಂಬಂತೆ ನವಿಲು, ಹಂಸಗಳು ತೇಲುವ ಸುಂದರ ಸರೋವರ ನಿಜವಾದುದೇ ಎನಿಸುವಂತೆ, ಕಾಳಿದಾಸ ಕಾವ್ಯದ ಶೃಂಗಾರ ಜೋಡಿ ದು:ಶ್ಯಂತ ಶಕುಂತಲಾರ ಏಕಾಂತದ ಹೂವಿನ ಉಯ್ಯಾಲೆ, ಸುತ್ತಲೂ ಹಸಿರು ವನದ ದೃಶ್ಯಾವಳಿಗಳನ್ನು ಚಿತ್ರಿಸಲಾಗಿರುವ ಸುಂದರ ಭಿತ್ತಿಗಳು. ಕಾಲಡಿಗೆ ಮಕಮಲ್ಲಿನ ಮೆತ್ತನೆ ಹಾಸು. ಬಣ್ಣ ಬಣ್ಣದ ಹೂವಿನ ಅಲಂಕಾರ ತುಂಬಿಕೊಂಡಿರುವ ಚಿನ್ನ ಲೇಪನದ ಕಿಟಕಿ ಮತ್ತು ಬಾಗಿಲಿನ ಚೌಕಟ್ಟುಗಳು. ಹೊಸ್ತಿಲಿಗೆ ಸುಂದರ ರಂಗೋಲಿ.ಕುಸುರಿಯ ರೇಶಿಮೆಯ ಮೇಲುಹೊದಿಕೆಯ ಪಲ್ಲಂಗಕ್ಕೆ ಬೆಳ್ಳಿಯ ಸುಂದರವಾದ ಕೆತ್ತನೆ. ಬಂಗಾರದ ಹರಿವಾಣದಲ್ಲಿ ಜೋಡಿಸಿಟ್ಟ ಬಗೆಬಗೆಯ ಕಳಿತ ಫಲಗಳು, ಬೆಳ್ಳಿಯ ತಂಬಿಗೆಯಲ್ಲಿ ತುಂಬಿಸಿಟ್ಟ ತಂಪು ಪಾನೀಯಗಳು. ಕೋಣೆಯ ತುಂಬ ಆಹ್ಲಾದತೆ ಹಬ್ಬಿಸಿರುವ ಸುಗಂಧ ದ್ರವ್ಯಗಳು. ಇದು ರಾಜಕುಮಾರಿ ಅಲಕಾಳ ಅಂತ:ಪುರ. ವೇಣುಪುರದ ದೇವದತ್ತ ಮಹಾರಾಜ ಮತ್ತು ರೇಣುವತಿಯರ ಏಕಮಾತ್ರ ಕುವರಿ.ಈಗಷ್ಟೇ ಪನ್ನೀರ ಸ್ನಾನ ಮುಗಿಸಿ ಬಂದು ಹಂಸತೂಲಿಕ ತಲ್ಪದ ಮೇಲೆ ಕೂದಲನ್ನು ಹರವಿ ಕುಳಿತಿರುವ ರಾಜಕುಮಾರಿ ಅಲಕಾಳ ಹೆರಳು ಬಾಚುತ್ತ ಸಖಿ ಇಂದ್ರೆ ಹೇಳಿದಳು. “ರಾಜಕುಮಾರಿ ನಿನ್ನ ಈ ಅಪ್ಸರೆ ರೂಪದ ಒಡೆಯನು ಅದೆಲ್ಲಿರುವನೋ ಏನೋ? ನಿನ್ನನ್ನು ನೋಡುತ್ತಿದ್ದರೆ ಸ್ತ್ರೀಯರಾದ ನಾವೇ ಪರವಶರಾಗಿ ಬಿಡುತ್ತೇವೆ. ಇನ್ನು ಬರುವವ ಇಂದ್ರನೋ ಚಂದ್ರನೋ?!! ನಿನ್ನ ಸೌಂದರ್ಯೋಪಾಸನೆಯಲ್ಲಿ ದಾಸನಾಗುವನು!” ಸಖಿಯರ ಕಿಲಕಿಲ ನಗೆಗೆ ರಾಜಕುಮಾರಿ ನಾಚಿ ಕೆಂಪಗಾದಳು.”ಏ ಸಖಿ ಅವನು ಯಾರೇ ಆದರೂ ನನ್ನ ವಿವಾಹದ ಷರತ್ತು ನಿಮಗೆ ತಿಳಿದಿದೆಯಲ್ಲವೇ?” ಒಮ್ಮೆಯೇ ಕಿಲಕಿಲ ನಗು ನಿಂತು ಗಂಭೀರ ಮೌನ ಆವರಿಸಿತು. ರಾಜಕುಮಾರಿಯ ಮೇಲುದದ ನೆರಿಗೆ ಸರಿಪಡಿಸುತ್ತ ಜೇನಿಕಾ ಹೇಳಿದಳು.

“ಅರಸುಕುವರಿ ನಿನಗೆ ನಿನ್ನ ರೂಪದ ಮೇಲಿನ ನಿನ್ನ ಕಲೆಯ ಮೇಲಿನ ಅಭಿಮಾನ ಸರಿಯೇ. ಆದರೆ ನಿನ್ನ ಷರತ್ತು ನಿನಗೆ ನೀನೇ ಹಾಕಿಕೊಂಡ ಸಂಕೋಲೆ ಎನಿಸುವುದಿಲ್ಲವೇ?”
“ಅಂದರೆ ನನಗೆ ಸರಿಸಮರಲ್ಲದ ವ್ಯಕ್ತಿಯೊಂದಿಗೆ ಮದುವೆ ಆಗಬೇಕೆನ್ನುವೆಯಾ? ಅಲಕಾ ಗಂಭೀರವಾಗಿ ಕೇಳಿದಳು.
“ಹಾಗಲ್ಲ ರಾಜಕುಮಾರಿ ನಿನ್ನ ಅಂತಸ್ತಿಗೆ ವಿದ್ಯೆಗೆ ರೂಪಕ್ಕೆ ಹೊಂದುವವನು ಸಿಗಬಹುದು.ಆದರೆ ನಿನ್ನ ಕಲೆ ನಿನಗೆ ಲಭಿಸಿದ ಅದ್ಬುತ ವರ. ಅಂತಹ ಕಲೆಗಾರ ಸಿಕ್ಕರೂ ಅವನು ಉಳಿದ ವಿಷಯಗಳಲ್ಲಿ ನಿನಗೆ ಸಮಾನವಾಗಿರುವನೇ ಯೋಚಿಸು. ಏನೇ ಆದರೂ ನೀನು ರಾಜಸಭೆಯಲ್ಲಿ ಈ ರೀತಿ ನಿರ್ಧಾರ ಪ್ರಸ್ತಾಪಿಸಬಾರದಿತ್ತು.”
“ಸಖೀ…… ಇದಕ್ಕಾಗಿ ತಂದೆಯವರು ಸ್ವಯಂವರ ಏರ್ಪಡಿಸುವರಲ್ಲ.ಅಲ್ಲಿ ನನ್ನನ್ನು ಚಿತ್ರಕಲೆಯಲ್ಲಿ ಸೋಲಿಸುವವ ಯಾರಾದರೂ‌ ನಾನು ಒಪ್ಪಿಕೊಳ್ಳುವೆನು.ಹೋಗಲಿ ಈಗೇಕೆ ಆ ಚಿಂತೆ ಸ್ವಯಂವರಕ್ಕೆ ಇನ್ನೂ ಎರಡು ಮಾಸಗಳಿವೆಯಲ್ಲ ಬಿಡು. ಸಖೀ… ನನಗೆ ಅಂತ:ಪುರವಾಸದಿಂದ ವಿಪರೀತ ಬೇಸರ ಕಾಡುತ್ತಿದೆ. ಒಮ್ಮೆ ವನವಿಹಾರಕ್ಕೆ ಹೋಗೋಣವೇ?”
“ಆಯಿತು ಹೋಗೋಣ ನಿನ್ನ ಅಲಂಕಾರ ಮುಗಿಯುತ್ತಾ ಬಂತು”ಎನ್ನುತ್ತಾ ಜೇನಿಕಾ ಬೈತಲೆ ಬೊಟ್ಟಿಟ್ಟಳು. ಇಂದ್ರೆ ನೀಳ ನಾಗರಜಡೆಗೆ ಮಲ್ಲಿಗೆ ಮುಡಿಸಿ ರಾಜಕುಮಾರಿಯನ್ನು ನಿಲುಗನ್ನಡಿ ಮುಂದೆ ನಿಲ್ಲಿಸಿದಳು.

ನೀಲಿ ಬಣ್ಣದ ಜರತಾರಿ ನೆರಿಗೆಯ ಲಂಗ ಕಟಿಯನ್ನು ಸುತ್ತಿ ಕಾಲಿನ ಪಾದದವರೆಗೆ ಇಳಿದಿತ್ತು. ಕಟಿಯ ಒನಪಿನ ಮೆರುಗಿಗೆ ಕುಸುರಿಯ ಬಂಗಾರದ ಡಾಬು.ಯೌವ್ವನದ ಸುಪ್ತ ಬಯಕೆಗಳನ್ನೆಲ್ಲ ಕಟ್ಟಿಕೊಂಡ ತುಂಬಿದೆದೆಗೆ ಬಿಗಿದ ಕಡು ಗುಲಾಬಿಬಣ್ಣದ ಕುಚಬಂಧಿ. ಮೇಲೆ ಹೊದೆದ ನೀಲಿ ಮೇಲುದದ ನೆರಿಗೆಯು ಎದೆಯ ಏರಿಳಿತಕ್ಕೆ ಅಲೆಯಂತೆ ತಲ್ಲಣಿಸುತ್ತಿತ್ತು. ತಾವರೆಯ ಮೊಗಕೆ ಸಂಪಿಗೆ ನಾಸಿಕ ಅದಕೆ ವಜ್ರದ ಮೂಗುತಿ, ಕರಿದುಂಬಿಯಂತಹ ಕಂಗಳಿಗೆ ತೀಡಿದ ಕಣ್ಗಪ್ಪು, ಬಾಗಿದ ಬಿಲ್ಲಿನಂತಹ ಹುಬ್ಬಿನ ನಡುವೆ ಕೇದಿಗೆಯ ಎಸಳಿನಂತಹ ಹಣೆಗೆ ಕೆಂಪು ದುಂಡನೆ ತಿಲಕ. ಗುಲಾಬಿ ದಳಗಳ ತುಟಿ,ಅರ್ಧಚಂದ್ರ ಗಲ್ಲಕ್ಕಿಟ್ಟ ದೃಷ್ಟಿ ಬೊಟ್ಟು. ಎಳೆ ಬಾಳೆ ದಿಂಡಿನ ನೀಳ ತೋಳುಗಳನು ಬಳಸಿರುವ ತೋಳ್ಬಂಧಿ. ಸೌಂದರ್ಯಕ್ಕೆ ಸವಾಲ್ ನಂತಿರುವ ರತಿರೂಪಸಿರಿ. ಒಮ್ಮೆ ತನ್ನ ಚಿಗುರು ಬೆರಳಿಂದ ಬೈತಲೆ ಬೊಟ್ಟನ್ನು ತೀಡಿದಳು. ತುಂಬಿದೆದೆಯ ಮೇಲಿನ ಹಾರಗಳನ್ನು ಸವರಿ ಮುಗುಳ್ನಕ್ಕು ತನ್ನ ಸೌಂದರ್ಯ ಸಿರಿಯನ್ನು ತಾನೆ ಮೆಚ್ಚಿ ಬೀಗಿದಳು.

*

“ರಾಜಕುಮಾರಿ ಬಾನಿನಲ್ಲಿ ಕಾರ್ಮುಗಿಲು ದಟ್ಟೈಸಿ ಮಳೆ ಬರುವ ಸೂಚನೆಯಿದೆ. ಬೇಗ ಅರಮನೆ ಸೇರಿಕೊಳ್ಳೋಣ. ಇಲ್ಲವಾದರೆ ಮಹಾರಾಣಿಯವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ”
“ಹೋಗೋಣ ಸಖಿ ಸ್ವಲ್ಪ ತಾಳು. ನನಗೆ ಈ ಹಸಿರ ಸಿರಿಯ ಲೋಕದಿಂದ ಹಿಮ್ಮರಳಲು ಮನಸ್ಸೇ ಬರುತ್ತಿಲ್ಲ.”
“ಆದರೂ… ರಾಜಕುಮಾರಿ ಮ..ಹಾ..ರಾಣಿ..ಯವರು….”
“ಸುಮ್ಮನಿರು ಸಖಿ ಏನಾಗದು. ನೋಡು ಈ ಕಡೆಯಿಂದ ಯಾವುದೋ ಅನುಪಮ ಸುಗಂಧ ತೇಲಿ ಬರುತ್ತಿದೆ ಆ…ಹಾ…! ಯಾವುದೋ ಅಪೂರ್ವ ಹೂವಿರಬಹುದು. ಕೈಗೆ ಸಿಕ್ಕಿದರೆ ಕಿತ್ತುಕೊಂಡು ಹಿಂತಿರುಗೋಣ ಬಾರೆ”
“ಬೇಡ ರಾಜಕುಮಾರಿ ಈ ಮಾರ್ಗವು ತುಂಬಾ ಅಪಾಯಕಾರಿಯಂತೆ ತೋರುತ್ತದೆ. ಏನಾದರೂ ತೊಂದರೆಯಾಗಬಹುದು. ಬೇಡ ಹಿಂತಿರುಗಿ ಹೋಗೋಣ”
“ಸಖೀ ಏನೂ…. ಆಗದು. ಸುಮ್ಮನೇಕೆ ಕೇಡು ನೆನೆಯುವೆ. ಈಗ ನೀವು ಬರುವಿರೋ ಇಲ್ಲವೋ??! ನಾನಂತು ಹೋಗುವುದು ನಿಶ್ಚಿತ” ರಾಜಕುಮಾರಿಯ ಆಗ್ರಹಕ್ಕೆ ಎದುರಾಡಲಾಗದೆ ಇಂದ್ರೆ ಮತ್ತು ಜೇನಿಕಾ ಅವಳೊಂದಿಗೆ ಹೆಜ್ಜೆ ಹಾಕಿದರು.

ಮುಂದೆ ಹೆಜ್ಜೆ ಹಾಕಿದಂತೆ ಜೀಡು ಜೀಡಾಗಿ ಹಬ್ಬಿದ ಬಳ್ಳಿಗಳು ಮರದ ಟೊಂಗೆಗಳಿಂದ ದಾರಿ ದುರ್ಗಮವಾಗಿತ್ತು. ಅಲ್ಲಲ್ಲಿ ಸರಸರ ಸದ್ದು ಭಯ ಹುಟ್ಟಿಸುವಂತಿತ್ತು. ಮೋಡ ಕವಿದು ಸೂರ್ಯನ ಬೆಳಕೇ ಬೀಳದೇ ಕತ್ತಲಾವರಿಸಿತ್ತು. ಆದರೂ ರಾಜಕುಮಾರಿಯ ಹಟ ಕಡಿಮೆಯಾಗಲಿಲ್ಲ. ಸುಮಾರು ದೂರ ಹೋಗಿಬಿಟ್ಟಿದ್ದರು.ಹಿಂತಿರುಗಿ ನೋಡಿದರೆ ಬಂದಿರುವ ದಾರಿಯೇ ಯಾವುದೆಂದು ತಿಳಿಯುತ್ತಿರಲ್ಲಿಲ್ಲ. ರಾಜಕುಮಾರಿ ಇದಾವ ಪರಿವೇ ಇಲ್ಲದೇ ಸಮ್ಮೋಹನಕ್ಕೊಳಗಾದಂತೆ ಸುಗಂಧವನ್ನು ಆಸ್ವಾದಿಸುತ್ತ ನಡೆಯುತ್ತಲೇ ಇದ್ದಳು; ಹಿಂದೆಯೇ ಭಯಗೊಂಡ ಸಖಿಯರಿಬ್ಬರು. ಆಹ್ಲಾದ ತುಂಬಿದ ಕಂಪು ತೀರಾ ಸನಿಹದಲ್ಲೆಂಬಂತೆ ದಟ್ಟವಾಗಿ ಘಮಿಸುತ್ತಿತ್ತು. ಮೂವರೂ ಸುತ್ತಲೂ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದರು. ಜೇನಿಕಾಳ ಹೆಗಲ ಮೇಲೆ ಕೈಯನ್ನಿಟ್ಟು ಎಡಗಡೆಗೆ ತಿರುಗಿದ ರಾಜಕುಮಾರಿ ಜೋರಾಗಿ ಕಿರುಚಿದಳು. “ಏ ಸಖೀ ನೋಡಲ್ಲಿ, ಅದೇ ಹೂವಿನ ಪರಿಮಳ ನಮ್ಮನ್ನು ಇಲ್ಲಿವರೆಗೆ ಕರೆತಂದಿದ್ದು”

ಇಳಿಜಾರಿನ ಕಣಿವೆಯಿಂದ ಬೆಳೆದು ಬಂದ ಪೊದೆಯ ಒಂದು ಬಳ್ಳಿಯಲ್ಲಿ ಮೂರು ಹೂಗಳು ಒಂದೇ ಗೊಂಚಲಿನಲ್ಲಿ ಅರಳಿತ್ತು. ಕೇಸರಿ ಮಿಶ್ರಿತ ಹಳದಿ ಬಣ್ಣದ ದಳಗಳ ಹೂ ಸುಗಂಧ ಮಾತ್ರವಲ್ಲ ಆಕರ್ಷಕವಾಗಿತ್ತು. ರಾಜಕುಮಾರಿಯ ಮನಸ್ಸನ್ನು ಸಂಪೂರ್ಣ ಪರವಶಗೊಳಿಸಿತು. ಹೂವಿನ ಸೌಂದರ್ಯಕ್ಕೆ ಮನಸೋತು ಮೈಮರೆತು ನಿಂತ ಮೂವರ ಮೇಲೆ ಮಳೆ ಹನಿಗಳು ಬಿದ್ದಾಗ ವಾಸ್ತವಕ್ಕೆ ಬಂದರು. ” ರಾಜಕುಮಾರಿ ಮಳೆ ಬರುತ್ತಿದೆ. ಬಾ ಹೋಗೋಣ ನಾಳೆ ಬಂದು ಹೂ ಕಿತ್ತುಕೊಂಡು ಹೋಗೋಣ”

“ಇರೇ ಸಖೀ ಇಲ್ಲಿವರೆಗೆ ಬಂದು ಹಾಗೆ ಹೋಗೋದೇನು ಹೂ ಕಿತ್ತುಕೊಂಡೇ ಹೋಗೋಣ. ತಡ ಮಾಡುವುದು ಬೇಡ ನಾನು ಕೀಳುತ್ತೇನೆ” ಹೂವಿನೆಡೆಗೆ ರಾಜಕುಮಾರಿ ಕೈ ಚಾಚುವಳು. ಆದರೆ ಹೂವು ಕೈಗೆಟುಕಲು ಇನ್ನು ಚೂರು ಅಂತರ ಉಳಿಯಿತು.

“ರಾಜಕುಮಾರಿ ಬೇಡ. ದಯವಿಟ್ಟು ನನ್ನ ಮಾತು ಕೇಳು. ಕೆಳಗಡೆ ಇಳಿಜಾರಿದೆ ಕಾಲುಜಾರಬಹುದು. ಮುಂದೆ ಬಾಗಬೇಡ ಹಟ ಮಾಡಬೇಡ. ಬಾ ಹೋಗೋಣ” ಸಖಿಯರು ಗೋಗರೆಯುವಂತೆ ಹೇಳಿದರು.

“ಅಯ್ಯೊ ನಿಮ್ಮ ಪುಕ್ಕಲುತನವೇ ಇನ್ನು ಸ್ವಲ್ಪದರಲ್ಲೆ ಹೂವು ನಮ್ಮ ಕೈಯಲ್ಲಿರುತ್ತದೆ. ಇರಿ ಇನ್ನೊಮ್ಮೆ ಪ್ರಯತ್ನಿಸುವೆ” ಎನ್ನುತ್ತಾ ತಲೆಯಿಂದ ಹಣೆ ಮೇಲೆ ಇಳಿಯುತ್ತಿದ್ದ ಮಳೆ ನೀರನ್ನು ತೋರ್ಬೆರಳಿಂದ ತೀಡುತ್ತ ಹೂವಿನೆಡೆಗೆ ಪುನ: ಸ್ವಲ್ಪ ಹೆಚ್ಚೇ ಮುಂದಕ್ಕೆ ಬಾಗಿದಳು ಅಷ್ಟೆ. “ಅಯ್ಯೋ… ಸಖೀ…. ” ರಾಜಕುಮಾರಿ ಪೊದೆಗಳ ಇಳಿಜಾರು ಕಣಿವೆಗೆ ಜಾರಿ ಬಿದ್ದಿದ್ದಳು. ಸಖಿಯರಿಬ್ಬರೂ ಆಘಾತದಿಂದ ದಿಕ್ಕು ತೋಚದಾದರು. ಅಸಹಾಯತೆಯಿಂದ ಅತ್ತಿತ್ತ ನೋಡುತ್ತ ಮೇಲೆ ನೋಡಿದ ಮೂವರಿಗೂ ಹೃದಯವೇ ಬಾಯಿಗೆ ಬಂದಂತಾಯಿತು. ರಾಜಕುಮಾರಿ ಬಿದ್ದ ರಭಸಕ್ಕೆ ಪೊದೆ ಅಲುಗಾಡಿದ್ದರಿಂದ ಪೊದೆಯ ಮೇಲೆ ಮಲಗಿದ್ದ ಹೆಬ್ಬಾವು ಇವರೆಡೆಗೇ ಬರುತ್ತಿತ್ತು. ಭಯದಿಂದ ಸಖಿಯರು ಓಡುವ ಹವಣಿಕೆಯಲ್ಲಿರಲು ರಾಜಕುಮಾರಿ ಆರ್ತಳಾಗಿ ಬೇಡಿದಳು.”ಇಂದ್ರೇ ಜೇನಿಕಾ ನನ್ನನ್ನು ಬಿಟ್ಟು ಹೋಗಬೇಡಿ ದಮ್ಮಯ್ಯ” ಆದರೂ ಸಖಿಯರಿಬ್ಬರೂ ಕೆಲ ಹೆಜ್ಜೆ ದೂರ ಸರಿದು ಸಹಾಯಕ್ಕಾಗಿ ಕೂಗತೊಡಗಿದರು. ” ಕಾಪಾಡಿ…..
ಯಾರಾದ..ರೂ…..ಬನ್ನಿ…..ಕಾಪಾಡಿ…….ಕಾಪಾಡಿ” ಆರ್ತನಾದ ಇಡೀ ಅಡವಿಯ ತುಂಬ ಪ್ರಾಣಿ ಪಕ್ಷಿಗಳ ಕೂಗಾಟದ ನಡುವೆ ಪ್ರತಿಧ್ವನಿಸುತ್ತಿತ್ತು. ಕ್ಷಣಗಳು ಉರುಳುತ್ತಿವೆ ಅಪಾಯ ಹತ್ತಿರವಾಗುತ್ತಿದೆ. ರಾಜಕುಮಾರಿಯಂತೂ ಇದು ತನ್ನ ಕೊನೆಯ ಕ್ಷಣವೆಂದು ಕುಲದೇವತೆ ಭೃಮರಾಂಬೆಯನ್ನು ಕಣ್ಮುಚ್ಚಿ ಧ್ಯಾನಿಸುತ್ತಿದ್ದಾಳೆ. ಸಖಿಯರೂ ಒಂದೇ ಸಮನೆ ಸಹಾಯಕ್ಕಾಗಿ ಬೊಬ್ಬಿಟ್ಟು ಗಂಟಲು ಕಟ್ಟಿ ಧ್ವನಿ ನಡುಗುತ್ತಿದೆ.

ಜೇನಿಕಾ ಒಂದು ಕ್ಷಣ ಸುಮ್ಮನಿರುವಂತೆ ಇಂದ್ರೆಗೆ ಸನ್ನೆ ಮಾಡಿದಳು. ಅವರಿಂದ ಕೆಲವು ಗಜ ದೂರದಲ್ಲಿ ಹೆಜ್ಜೆ ಸಪ್ಪಳ ಕೇಳುತ್ತಿದೆ. ಇಂದ್ರೆಯೂ ಆಲಿಸಿ ಭಯದಿಂದ ಜೇನಿಕಾಳ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಳು. ಹೆಜ್ಜೆ ಸಪ್ಪಳ ಸ್ಪಷ್ಟವಾಗುತ್ತಿದೆ. “ದೇವಿ ಇನ್ನೇನು ಗಂಡಾಂತರ ಎದುರಾಗುವುದೋ ಕಾಪಾಡು ತಾಯಿ ಈಗ ನೀನೇ ಗತಿ ನಮಗೆ” ಇಬ್ಬರೂ ಕೈಮುಗಿದು ಪ್ರಾರ್ಥಿಸುತ್ತ ಸಪ್ಪಳ ಬಂದ ಪೊದೆಗಳ ಕಡೆ ಕಣ್ಣು ಕಿರಿದಾಗಿಸಿ ನೋಡುತ್ತ ಭಯಕ್ಕೂ ಚಳಿಗೂ ನಡುಗುತ್ತ ನಿಂತರು. ಎದುರಿನ ಪೊದೆಯೊಂದು ಜೋರಾಗಿ ಅಲುಗಿದಾಗಂತೂ ಬಾಯಿಯನ್ನು ಬಿಗಿಯಾಗಿ ಕೈಯಿಂದ ಮುಚ್ಚಿಕೊಂಡು ಕಣ್ಮುಚ್ಚಿ ಅಳುವನ್ನು ತಡೆಯಲು ಮೆಲುವಾಗಿ ಬಿಕ್ಕತೊಡಗಿದರು.
“ನೀವೆಯೇ ಸಹಾಯ ಯಾಚಿಸಿ ಬೊಬ್ಬಿಟ್ಟವರು” ಧ್ವನಿಗೆ ಬೆಚ್ಚಿ ಕಣ್ಬಿಟ್ಟರು. ಮಳೆಯಲ್ಲಿ ನೆನೆಯುತ್ತ ನಿಂತವನು ಸಾಕ್ಷಾತ್ ಧರೆಗಿಳಿದ ಶ್ರೀನಿವಾಸನಂತೆ ಕಂಡನು.

ರಾಜಗಾಂಭೀರ್ಯದ ಮುಖಕ್ಕೊಪ್ಪುವ ತಿರುವಿದ ಮೀಸೆ, ಭುಜದವರೆಗೆ ಇಳಿದ ದಟ್ಟ ಕಪ್ಪು ಕೇಶ,ಚತುರ ನೋಟ, ಚೆಲು ಮಂದಹಾಸ, ಎದೆಗಾರಿಕೆಯ ಪ್ರತೀಕವಾದ ಹರವಾದ ಎದೆ, ಕಟ್ಟುಮಸ್ತಾದ ತೋಳುಗಳು, ಎತ್ತರದ ನಿಲುವು, ಕೈಯಲ್ಲಿದ್ದ ಈಟಿ ಕತ್ತಿ ನೋಡಿದರೆ ಬೇಟೆಗೆ ಬಂದಿರುವವರೆಂದು ಹೇಳುವಂತಿದೆ.ನೆನೆದು ತೊಪ್ಪೆಯಾಗಿ ಬೆದರಿ ನಡುಗುತ್ತ ನಿಂತ ಹೆಣ್ಮಕ್ಕಳನ್ನು ನೋಡುವ ಕರುಣಾಪೂರಿತ ನೋಟ. ಜೇನಿಕಾ ಹೋಗಿ ಅವನ ಕಾಲು ಹಿಡಿದುಕೊಂಡು ಅಳುತ್ತಾ “ನಮ್ಮ ರಾಜಕುಮಾರಿ ಅಪಾಯದಲ್ಲಿರುವಳು ಕಾಪಾಡಿ..”ಎನ್ನುತ್ತಾ ರಾಜಕುಮಾರಿ ಬಿದ್ದಿದ್ದ ಕಣಿವೆಯೆಡೆ ಕೈ ತೋರಿದಳು. ಬೇರೇನೂ ಪ್ರಶ್ನಿಸದೆ ಅತ್ತ ದಾಪುಗಾಲು ಹಾಕಿದನು ಇಬ್ಬರೂ ಹಿಂಬಾಲಿಸಿದರು.

ಕಣ್ಮುಚ್ಚಿ ಕೈ ಮುಗಿದು ವರ್ಷಧಾರೆಯಲಿ ತೋಯುತ್ತಿರುವ ದಂತದ ಪುತ್ಥಳಿಯ ಶಿರದ ಕಡೆಗೆ ಬಾಯಿ ತೆರೆದುಕೊಂಡು ಇಳಿಯುತ್ತಿರುವ ಹಾವು. ಕ್ಷಣವು ವ್ಯಯಿಸದೇ ಕಣ್ಮಿಟುಕಿಸುವಷ್ಟರಲ್ಲಿ ಪೊದೆಯೇರಿ ಹೆಬ್ಬಾವಿನ ಬಾಯಿಗೆ ಈಟಿಯನ್ನು ಅಡ್ಡಗೊಟ್ಟು ಕತ್ತಿಯಿಂದ ಸೀಳಿ ಸಾಯಿಸಿದನು. ಸತ್ತ ಹಾವು ದೊಪ್ಪನೆ ರಾಜಕುಮಾರಿ ಕಾಲ್ಬುಡದಲ್ಲಿ ಬೀಳಲು ಬೆಚ್ಚಿ ಕಣ್ತೆರೆದ ರಾಜಕುಮಾರಿ ಕಿಟಾರನೆ ಕಿರುಚಿದಳು.” ಹೆದರಬೇಡಿರಿ ನಾನು ನಿಮ್ಮನ್ನು ರಕ್ಷಿಸುವೆನು ಧೈರ್ಯವಾಗಿರಿ” ಎನ್ನುತ್ತಾ ಬೀಳಲಿನ ಸಹಾಯದಿಂದ ಕಣಿವೆಗಿಳಿದನು. ಅವನ ಮೈ ಮೇಲೆ ಅಲ್ಲಲ್ಲಿ ಮುಳ್ಳು ತರಚಿದ ಗಾಯಗಳಿಂದ ರಕ್ತ ಜಿನುಗಿ ಮಳೆ ನೀರಿನೊಂದಿಗೆ ಮಿಶ್ರವಾಗಿ ತೊಟ್ಟಿಕ್ಕುತ್ತಿತ್ತು. ಎದುರಿಗೆ ಸ್ವರ್ಣ ಪುತ್ಥಳಿಯ ಮೇಲೆ ಅಮೃಧಾರೆ ಹರಿದಂತೆ ರಾಜಕುಮಾರಿಯ ಶಿರದ ಮೇಲಿಂದ ಮಳೆನೀರು ಇಳಿಯುದನ್ನೇ ಕೆಲ ಕ್ಷಣ ನೋಡುತ್ತಲೇ ಇದ್ದನು. ಪಕ್ಕನೆ ರಾಜಕುಮಾರಿ ತನ್ನ ಎದೆಯ ಮೇಲೆ ಕೈಯಿಟ್ಟು ನೋಡಿದಳು. ಮೇಲುದವಿರಲ್ಲಿಲ್ಲ ಅದು ಒಂದು ಮರದ ರೆಂಬೆಗೆ ಸಿಕ್ಕಿಕೊಂಡು ತೂಗುತ್ತಿತ್ತು. ನಾಚಿ ನೀರಲ್ಲಿ ನೀರಾದ ರಾಜಕುಮಾರಿ ತನ್ನ ತೋಳುಗಳನ್ನು ಮಡಚಿ ಎದೆಗೆ ಮರೆಮಾಡುತ್ತ ಅವನ ಕಡೆಗೆ ಬೆನ್ನಾಗಿ ತಲೆತಗ್ಗಿಸಿ ನಿಂತಳು. ಕೊಂಚ ವಿಚಲಿತನಾದ ಅವನು ತನ್ನ ಉತ್ತರೀಯವನ್ನು ತೆಗೆದು ನಾಜೂಕಾಗಿ ಅವಳ ಭುಜವನ್ನು ಬಳಸಿ ಹೊದೆಸಿದನು. ಅವನೆಡೆ ಕೃತಜ್ಞತಾಪೂರ್ವಕ ನೋಟ ಬೀರಿದವಳನ್ನುದ್ದೇಶಿಸಿ ಕೇಳಿದನು “ನಿಮ್ಮ ಅಭ್ಯಂತರವಿಲ್ಲದಿದ್ದರೆ ನಾನು ನಿಮ್ಮನ್ನು ಎತ್ತಿಕೊಂಡು ಈ ಬೀಳಲುಗಳ ಸಹಾಯದಿಂದ ಮೇಲೇರುವೆನು. ನಿಮಗೆ ಮರವೇರಲು ಬರುವುದೇ?”

“ಇಲ್ಲ ನನಗೆ ಬರುವುದಿಲ್ಲ” ದುಂಬಿಯ ಝೇಂಕಾರದಷ್ಟೇ ಮಧುರ ನುಡಿಗಳು. ಮಳೆ ನಿಂತಿದ್ದರೂ ಮರದ ಟೊಂಗೆಗಳ ಮೇಲಿನ ನೀರು ಅವರನ್ನು ತೋಯಿಸುತ್ತಲೇ ಇತ್ತು. ಜಲದಲಿ ನೆನೆದ ತಾವರೆಯ ದೇಟನ್ನು ಬಳಸಿ ಹಿಡಿದಂತೆ ರಾಜಕುಮಾರಿಯ ಸೊಂಟವನ್ನು ಬಳಸಿ ಬಲು ನಾಜೂಕಿನಿಂದ ಎತ್ತಿಕೊಂಡು ಅವನು ಮೇಲೇರಿದನು. ಇಂದ್ರೆ ಜೇನಿಕಾ ರಾಜಕುಮಾರಿಯ ಕೈಯನ್ನು ಹಿಡಿದುಕೊಂಡು ಮೇಲೆ ಕರೆದುಕೊಂಡರು.

*

“ರಾಜಕುಮಾರಿ, ಬಿರಿದ ತಾವರೆಯ ಸೊಬಗಿಗೆ ಕಾತರಿಸಿ ಬಂದ ದುಂಬಿಗೆ ಅತೀವ ಬೇಸರವಾಗುತ್ತಿದೆ. ದೇವಿಯವರು ಕೃಪೆದೋರಬೇಕು” ಮುನಿದು ಕುಳಿತ ರಾಜಕುಮಾರಿಯೆದುರು ಕೈ ಮುಗಿದು ಅಭಿನಯಿಸುತ್ತ ಛೇಡಿಸಿದನು.

“ನಟನೆಯನ್ನು ಚೆನ್ನಾಗಿ ಬಲ್ಲಿರಲ್ಲವೇ? ನನ್ನನ್ನು ಮೋಸಗೊಳಿಸಿ ಸಂಕಷ್ಟದಲ್ಲಿ ಸಿಲುಕಿಸಿರುವಿರಿ. ನಾನು ನಿಮ್ಮ ಮಾತನ್ನು ನಂಬಬಾರದಿತ್ತು.”ಕೋಪ ಹತಾಶೆಗಳಿಂದ ಅಳತೊಡಗಿದಳು.

ಗಾಬರಿಗೊಂಡ ಅವನು “ಅಲಕಾ ಈಗ ನೀನಿಷ್ಟು ನಿರಾಶಳಾಗುವುದೇಕೆ?ಶೃವಂತಕುಮಾರನೆಂದರೆ”ವಿಜಯಮಲ್ಲಕೇಸರಿ” ಎಂದೇ ಬಿರುದಾಂಕಿತನು ಗೊತ್ತಾ? ನನ್ನ ಬುದ್ಧಿಮತ್ತೆಯ ಬಗ್ಗೆ ಸಂಶಯವೇ?”

ಕಣ್ಣಿಂದ ತೊಟ್ಟಿಕ್ಕುತ್ತಿದ್ದ ಕಂಬನಿಯನ್ನು ಹಸ್ತಗಳಿಂದ ಒರೆಸಿಕೊಳ್ಳುತ್ತ ರಾಜಕುಮಾರಿ “ಮಲ್ಲ ಕೇಸರಿ ಎನಿಸಿಕೊಳ್ಳಲು ತೋಳಲಿ ಬಲ ಚಾಣಾಕ್ಷತೆ ಇದ್ದರೆ ಸಾಕು ಆದರೆ ಕಲೆ ಒಲಿಯಲು ಏಕಾಗೃತೆ ಶೃದ್ದೆಯಿರಬೇಕು ಗೊತ್ತಾ”

ಅವಳ ಆತಂಕ ಶಮನಗೊಳಿಸುವ ಲಘು ಹಾಸ್ಯದಿಂದ” ನಿಜ ದೇವಿಯವರೆ, ಆದರೆ ನಾನೇನು ಮಾಡಲಿ ಈ ಬಿಂಬ ಮೋಹಕ ಪುತ್ಥಳಿಯ ಎದುರು ಸೋಲುತಿರುವೆನು.”
ಆತಂಕದಿಂದ ವಿಚಲಿತಳಾಗಿ ” ಅಂದರೆ ನೀವು ಸ್ವಯಂವರದ ಸ್ಪರ್ಧೆಯಲ್ಲಿ ಸೋಲುವಿರೇನು?! ಅಂತಿದ್ದರೆ ನನಗಿತ್ತ ವಚನ ಸುಳ್ಳಾಗಿಸುವಿರೇನು?! ನೀವು ನನ್ನನ್ನು ಮೋಸಗೊಳಿಸಿದಿರಿ ಅಲ್ಲವೇ?ಛೆ” ಮುಖ ಮುಚ್ಚಿಕೊಂಡು ಬಿಕ್ಕಳಿಸಿ ಬಿಕ್ಕಳಿಸಿ ಅಳತೊಡಗಿದಳು. “ತಪ್ಪು ನಿಮ್ಮದಲ್ಲ ನನ್ನದೇ….. ನನ್ನ ತಂದೆಯವರ ತುಂಬಿದ ರಾಜಸಭೆಯಲ್ಲಿ ನನ್ನನ್ನು ಚಿತ್ರಕಲೆಯಲ್ಲಿ ಸೋಲಿಸುವ ಅಪ್ರತಿಮ ಕಲೆಗಾರನನ್ನೇ ವರಿಸುವೆನೆಂದು ಶಪಥಗೈದಿದ್ದು ತಪ್ಪು. ಹಾಗಿದ್ದೂ ಚಂಚಲೆಯಂತೆ ನಿಮ್ಮನ್ನು ಪ್ರೇಮಿಸಿದ್ದು ದೊಡ್ಡ ತಪ್ಪೂ….. ತಪ್ಪು……ತಪ್ಪು……. ತಪ್ಪೂ….. ನನ್ನದೇ ತಪ್ಪು” ತಲೆ ಚಚ್ಚಿಕೊಂಡು ಜೋರಾಗಿ ವಿಲಪಿಸುವಳು.
ಅವಳ ಎರಡೂ ಕೈಗಳನ್ನು ಹಿಡಿದುಕೊಂಡು ಅವಳ ಕೆದರಿದ ಮುಂಗುರುಳನ್ನು ಹಿಂದೆ ಸರಿಸುತ್ತ ಅನುನಯದಿಂದ “ಅಲಕಾ….ಅಲಕಾ…ಇಲ್ಲಿ ಕೇಳು. ನೀನೂ ಅತ್ತು ನನ್ನನ್ನೂ ಕಂಗೆಡಿಸಬೇಡ. ನಿಮ್ಮ ತಂದೆಯವರಲ್ಲಿ ನಾನು ಮಾತನಾಡುತ್ತೇನೆ; ಎಲ್ಲವೂ ಸರಿಹೋಗುತ್ತದೆ. ಈಗ ಸಮಾಧಾನ ಮಾಡಿಕೋ” ಸಂತೈಸುವನು.

ಬಸವಳಿದವಳಂತೆ ಅವನ ಭುಜಕ್ಕೊರಗಿ “ರಾಜಕುಮಾರ ಈಗಾಗಲೇ ರಾಜ್ಯ ರಾಜ್ಯಗಳಿಗೂ ಸ್ವಯಂವರದ ಆಹ್ವಾನ ಕಳುಹಿಸಿಯಾಗಿದೆ. ರಾಜ್ಯದಲ್ಲಿ ಡಂಗುರ ಸಾರಿ ಸ್ವಯಂವರದ ವಿಷಯ ಮನೆಮನೆಗೂ ಮುಟ್ಟಿಸಿಯಾಗಿದೆ. ಇಂತಹ ಸಮಯದಲ್ಲಿ ಏನು ಮಾಡಲು ಸಾಧ್ಯವಿದೆ. ನನ್ನ ಷರತ್ತನ್ನು ನಾನೇ ಮುರಿಯುವುದು ರಾಜಕುಮಾರಿಯಾದ ನನಗೆ ಶೋಭೆಯೇ? ನನಗೆ ಪ್ರಜೆಗಳಿಂದ ಗೌರವ ದೊರೆಯುವುದೇ?” ಚಿಂತೆಯಿಂದ ನುಡಿವಳು. “ಅಲಕಾ, ನಮ್ಮ ಮೊದಲ ಭೇಟಿಯಲ್ಲೇ ನಿನ್ನ ಷರತ್ತಿನ ವಿಷಯ ತಿಳಿಸಿದಾಗ ನಿನ್ನನ್ನು ಬಿಡಲಾರೆನೆಂಬ ಹುಚ್ಚು ಹಟದಿಂದ ಚಿತ್ರಕಲೆ ಕಲಿಯುವ ಮನ ಮಾಡಿದೆ. ಆದರೇನು ದುರಾದೃಷ್ಟವೋ ನನಗದು ಒಲಿಯದು. ನೀನೇ ನೋಡಿರುವೆಯಲ್ಲ ಇದಕ್ಕಾಗಿ ನಾನೆಷ್ಟು ದಿನಗಳಿಂದ ಶ್ರಮಿಸುತ್ತಿರುವೆ” ಹತಾಶನಾಗಿ ನುಡಿದನು. “ನಾನೀಗ ಬೇರೊಬ್ಬನನ್ನು ಪತಿಯೆಂದು ಕನಸಿನಲ್ಲೂ ಊಹಿಸಲಾರೆ ರಾಜಕುಮಾರ. ನಾನಂದು ವನವಿಹಾರಕ್ಕೆ ಬರಲೇಬಾರದಿತ್ತು. ಎಲ್ಲವೂ ನನ್ನ ಗೃಹಚಾರ….”
ಬಾಡಿ ಬಸವಳಿದ ಅವಳ ಮೊಗವನ್ನು ಬೊಗಸೆಯಲಿ ಹಿಡಿದು ಅವಳನ್ನು ಬಳಸಿ ಎದೆಗೊರಗಿಸಿಕೊಂಡು ಮೌನವಾಗಿ ತಲೆನೇವರಿಸಿದನು..

*

ಇಂದ್ರಲೋಕದ ಕಲ್ಯಾಣಮಂಟಪದ ಮೇರು ಸೊಬಗಿನಲಿ ಸ್ವಯಂವರ ಮಂಟಪವನ್ನು ಶೃಂಗರಿಸಲಾಗಿತ್ತು. ಸ್ವಯಂವರ ಮಂಟಪದ ಸಾಲಂಕೃತ ವೇದಿಕೆಯಲ್ಲಿ ರಾಜ ದೇವದತ್ತ ಮಹಾರಾಣಿ ರೇಣುವತಿ ಜೊತೆಗೆ ಅಪ್ಸರೆಯರನ್ನೇ ಮೂಲೆಗೆ ಸರಿಸುವ ಅಲಂಕಾರ ಶೋಭಿತೆ ಅಲಕಾ. ಇವರಲ್ಲದೆ ಸಾಮಂತರು ಹಾಗೂ ರಾಜಗುರು ಆದಿತ್ಯನಾಥರು ಉಪಸ್ಥಿತರಿದ್ದರು. ಮುಂಭಾಗದ ಅರ್ಧ ಅಂಗಣದಲ್ಲಿ ಸ್ಪರ್ಧಾಕಾಂಕ್ಷಿ ಯುವರಾಜರುಗಳು ಮತ್ತು ಚಿತ್ರಕಲಾವಿದರು ನೆರೆದಿದ್ದರು. ಉಳಿದಂತೆ ರಾಜ್ಯ ಮತ್ತು ನೆರೆ ರಾಜ್ಯಗಳ ಪ್ರಜಾವರ್ಗದ ಅದ್ದೂರಿ ಸಭಾಂಗಣವಾಗಿತ್ತು.ಇದಾವುದರ ಕಡೆಯೂ ಗಮನವಿರದ ರಾಜಕುಮಾರಿಯ ಎದೆಯ ತಳಮಳ ವೇದನೆಯನ್ನು ಮರೆಮಾಚುವಲ್ಲಿ ಅಲಂಕಾರ ಸಾಧನಳು ಕಿಂಚಿತ್ ಸೋತರೂ ಯಾರೂ ಗಮನಿಸಲಿಲ್ಲವೆಂಬುದು ಸತ್ಯ. ಆದರೆ ಅವಳ ಸುತ್ತಲೂ ಶೃವಂತಕುಮಾರನ ಪ್ರೇಮಚೇಷ್ಟೆಗಳೇ ಕಾಡುತ್ತಿದ್ದವು. ಕನ್ಯಾಪಿತೃನಾದ ದೇವದತ್ತನು ಎಲ್ಲರನ್ನೂ ಸ್ವಾಗತಿಸುತ್ತ ಸ್ಪರ್ಧಾನಿಯಮಗಳನ್ನು ತಿಳಿಸುವಂತೆ ಆಸ್ಥಾನ ಗುರುಗಳಾದ ಆದಿತ್ಯನಾಥರಿಗೆ ತಿಳಿಸಿದರು. “ಪ್ರಥಮವಾಗಿ ಮಹಾರಾಜರಿಗೆ ವಂದನೆ ಸಲ್ಲಿಸುವೆನು” ಸಾಂಕೇತಿಕವಾಗಿ ನಮಸ್ಕರಿಸಿ ಮುಂದುವರಿಸಿದರು. “ಇಂದು ನಿಮಗೆಲ್ಲ ತಿಳಿದಿರುವಂತೆ ನಮ್ಮ ರಾಜಕುಮಾರಿಯವರ ಸ್ವಯಂವರ ನಡೆಸಲಾಗುತ್ತದೆ. ರಾಜಕುಮಾರಿಯವರು ಅಪ್ರತಿಮ ಚಿತ್ರಕಲಾವಿದೆಯಾದ್ದರಿಂದ ಅವರ ಮನೋಭಿಲಾಷೆಯಂತೆ ಚಿತ್ರಕಲೆಯಲ್ಲಿ ಅವರನ್ನು ಮೀರಿಸುವ ಕಲಾವಿದನಿಗೆ ರಾಜಕುಮಾರಿಯವರನ್ನು ವಿಧಿಪೂರ್ವಕವಾಗಿ ಧಾರೆಯೆರೆದುಕೊಡಲು ನಿಶ್ಚಯಿಸಿರುತ್ತೇವೆ. ಅಪ್ರತಿಮ ಕಲಾವಿದರಾದ ನಿಮ್ಮಲ್ಲಿ ಯಾರು ಚಿತ್ರಸಿದ ಚಿತ್ರವನ್ನು ಲೋಪರಹಿತವಾಗಿ ಚಿತ್ರಿಸಲು ರಾಜಕುಮಾರಿ ಅಸಮರ್ಥಳಾಗುವಳೋ!! ಅವರು ವಿಜೇತರಾದಂತೆ. ನಿಮ್ಮ ಚಿತ್ರಗಳ ಜೊತೆ ನಿಮ್ಮ ನಾಮಧೇಯಗಳನ್ನು ಬರೆದಿರಿಸಿ.

ಸ್ಪರ್ಧೆಯು ಅಂತಿಮ ಕ್ಷಣಗಣನೆಯಲ್ಲಿದೆ. ಪ್ರತಿಯೊಬ್ಬರೂ ಕಾತುರರಾಗಿದ್ದಾರೆ. ಅಲಕಾಳ ಎದೆಯ ಬಡಿತ ಅವಳ ಆತಂಕಕ್ಕೆ ಹಿನ್ನೆಲೆ ನಾದದಂತೆ ಅವಳಿಗೆ ಕೇಳುತ್ತಿದೆ. ಆದರೂ ಮಂದಹಾಸದ ಹೊದಿಕೆ ತೆಗೆಯಲಾಗದು. ನೋಡುಗರಿಗೆ ಒಂದಕ್ಕಿಂತ ಒಂದು ಅದ್ಭುತ ಚಿತ್ರರಚನೆಯಂತೆ ಕಾಣುತ್ತಿದೆ. ಅಲಕಾ ಉಳಿದೆಲ್ಲ ಚಿತ್ರಗಳನ್ನು ಕೆಲಗಳಿಗೆಯಲ್ಲಿ ಪೂರ್ಣಗೊಳಿಸಿದಳು. ಆದರೆ ಆ ಚಿತ್ರ ಮಾತ್ರ ಅವಳ ಕುಂಚದಲಿ ಅರಳದೇ ಹೋಯಿತು. ಕೊಳದ ದಂಡೆ ಮೇಲೆ ರೂಪಸಿ ಹೆಣ್ಣೊಬ್ಬಳು ಸೊಂಟದಲ್ಲಿ ತುಂಬಿದ ಬಿಂದಿಗೆ ಇರಿಸಿಕೊಂಡು ನೀರನ್ನು ತುಳುಕಿಸುತ್ತ ನಡೆವ ವೈಯಾರದ ನಡಿಗೆ ಕೊಳದಲ್ಲಿ ತಾವರೆಗಳ ಮಧ್ಯೆ ಪ್ರತಿಫಲನಗೊಂಡಿರುವ ದೃಶ್ಯವನ್ನು ಚಿತ್ರಿಸಿದ್ದರು. ಹೃದಯವನ್ನು ಸೂರೆಗೊಳ್ಳುವ ಈ ಚಿತ್ರ ಅತೀ ನೈಜವೆಂಬಂತೆ ಕಾಣುತ್ತಿತ್ತು. ರಾಜಕುಮಾರಿ ತದೇಕಳಾಗಿ ಆ ಚಿತ್ರವನ್ನು ನೋಡಿ ನಾಮಧೇಯದೆಡೆ ಕಣ್ಣಾಡಿಸಿದಳು. ರಾಜ ‘ಚಿತ್ರವರ್ಧನ’ ಎಂದಿತ್ತು.

ಆದಿತ್ಯನಾಥರು ವೇದಿಕೆಯ ಮುಂಭಾಗಕ್ಕೆ ಬಂದರು. ಒಬ್ಬರ ಉಸಿರು ಒಬ್ಬರಿಗೆ ಕೇಳುವಂಥ ಕಾತುರತೆಯ ಮೌನ. “ಕೌಂಭವೀಕ ಪುರದ ರಾಜ ಚಿತ್ರವರ್ಧನರು ಸ್ಪರ್ಧೆಯ ವಿಜಯಶಾಲಿಗಳಾಗಿದ್ದಾರೆ. ಅವರ ನಾಮಧೇಯ ಅವರಿಗೆ ಅನ್ವರ್ಥವೋ ಎಂಬಂತೆ ಕಲಾನಿಪುಣರಾಗಿರುವರು…… ” ಆದಿತ್ಯನಾಥರ ನಿರ್ಣಯಕ್ಕೆ ಸಮ್ಮತಿಯಾಗಿ ಇಡೀ ಸಭಾಂಗಣದ ಕರತಾಡನ ಮಾರ್ದನಿಸುತ್ತದೆ. ರಾಜಕುಮಾರಿಯ ಕಂಗಳು ಮಂಜಾಗುತ್ತಿದೆ. ಸಖಿಯರು ಕೈಗೆ ಹೂಮಾಲೆಯನ್ನಿತ್ತು ಛೇಡಿಸುತ್ತಿರುವರು.

ಹೂ ಮಾಲೆ ಹಿಡಿದು ಮಾತಪಿತರಿಗೆ ನಮಸ್ಕರಿಸಲು ಬಾಗಿದವಳಿಗೆ ಬವಳಿ ಬಂದಂತಾಯಿತು. ಸಾವರಿಸಿಕೊಂಡು ಗುರುಗಳಿಂದ ಆಶೀರ್ವಾದ ಪಡೆದು ವಧುವರರ ಮಂಟಪದೆಡೆಗೆ ಬರುವಾಗ ಕಣ್ಣು ಕತ್ತಲಿಡುತ್ತಿತ್ತು. ತೇಲು ನಡಿಗೆಯಲಿ ಬರುತ್ತಿದ್ದ ರಾಜಕುಮಾರಿಯನ್ನು ಮಂಟಪಕ್ಕೆ ಬಿಟ್ಟು ಸಖಿಯರು ಹಿಂದೆ ತೆರಳಿದರು.ಇನ್ನು ನಡೆಯಲಾರೆನೆಂಬಂತೆ ಅಲಕಾ ಮುಗ್ಗರಿಸಿದಳು. ರಾಜ ಚಿತ್ರವರ್ಧನ ಪಕ್ಕನೆ ಆಧರಿಸಿ ಹಿಡಿದುಕೊಂಡನು. ಅರೆಪ್ರಜ್ಞಳಂತೆ ಒರಗಿದವಳ ಕೈಯಿಂದ ಹಾರ ಅಪ್ರಯತ್ನವಾಗಿ ಚಿತ್ರವರ್ಧನನ ಕೊರಳಿಗೆ ಬಿತ್ತು. ಮಹಾರಾಜ ರಾಣಿ ಇಬ್ಬರೂ ಆತಂಕದಿಂದ “ಅಲಕಾ… ಅಲಕಾ….ಏನಾಯ್ತು……ಯಾರಲ್ಲಿ…..ರಾಜವೈದ್ಯರಿಗೆ ಬರಹೇಳಿ “ಎಂದು ಕೂಗಿಕೊಂಡರು. ಚಿತ್ರವರ್ಧನನೂ ಆಘಾತಗೊಂಡವನಂತೆ ಹಾಗೇ ನಿಂತಿದ್ದನು. ಅಷ್ಟರಲ್ಲಿ ಸಖಿಯೊಬ್ಬಳು ಪನ್ನೀರು ತಂದು ಚಿಮುಕಿಸಿದಳು. ನಿಧಾನಕ್ಕೆ ಕಣ್ಣು ತೆರೆದ ಅಲಕಾ ತನ್ನನ್ನು ಹೂವಂತೆ ಬಳಸಿ ಹಿಡಿದು ನಿಂತವನ ಮುಖವನ್ನು ಮಂಜಾದ ಕಣ್ಣಿಂದ ನೋಡಿ ಪುನ: ಕಣ್ಣೊರೆಸಿಕೊಂಡು ನೋಡಿದಳು. ನಂಬಲಾಗದವಳಂತೆ ದಿಗ್ಗನೆದ್ದವಳ ಮುಖ ಗೆಲುವಿಂದ ಅರಳಿತು. ಯಾರಿಗೂ ಏನಾಗುತ್ತಿದೆಯೆಂದು ತಿಳಿಯುತ್ತಿಲ್ಲ ಅವನಿಗೆ ಹಾರ ಹಾಕುವಂತೆ ತಲೆಬಾಗಿ ನಿಂತಳು. ಹಾರ ಹಾಕುತ್ತ ಮೆಲುವಾಗಿ ಉಸುರಿದನು “ಪ್ರೇಮ ಷರತ್ತಿನಲ್ಲಿ ಯಾರು ಗೆದ್ದರು? ಚಿತ್ರವರ್ಧನ ನನ್ನ ನಿಜವಾದ ಹೆಸರು ನಿನಗೆ ಮಾತ್ರ ಶೃವಂತ”

ಸುಜಾತ ಕೋಣೂರು


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published.