ಮಾನಸಿಕವಾಗಿ ಸಿದ್ದರಾಗಿ: ಸಿಂಧು ಭಾರ್ಗವ್ ಬೆಂಗಳೂರು

ಸನ್ನಿವೇಶ ೧: ಮಾಲತಿ ಮದುವೆಯಾಗಿ ಮೂರು ತಿಂಗಳೊಳಗೆ ಹೆತ್ತವರಿಗೆ ಸಿಹಿಸುದ್ದಿ ತಲುಪಿಸುವ ಬದಲು ತವರು ಮನೆಯವರು ಮದುವೆ ದಿನ ನೀಡಿದ ಬಳುವಳಿಯ ಸೂಟ್ ಕೇಸ್ ಅನ್ನು ಹಿಡಿದುಕೊಂಡು ತಾಯಿ ಎದುರು ನಿಂತಿದ್ದಳು‌. ದಿಗ್ಭ್ರಮೆಗೊಂಡ ತಾಯಿ, ಅವಳನ್ನು ಕೂರಿಸಿ ನಿಧಾನವಾಗಿ ವಿಚಾರಿಸಿ ಕೇಳಿದಾಗ, ಮಾಲತಿ ತನ್ನ ನೋವಿನ ಕಥೆಯನ್ನು ಒಂದೊಂದಾಗಿ ಬಿಡಿಸಿ ಹೇಳತೊಡಗಿದಳು‌ .ಮರುಗಟ್ಟಿದ್ದ ನೋವನ್ನೆಲ್ಲ ಜೋರಾಗಿ ಅತ್ತು ಕಣ್ಣೀರು ಸುರಿಸಿ ಮನಸ್ಸಿನ ಭಾರವನ್ನು ಕಡಿಮೆ ಮಾಡಿಕೊಂಡಳು. ಸಿಟ್ ಔಟ್ ನಲ್ಲಿ ಕೂತಿದ್ದ ತಂದೆಗೆ ತಲೆಯ ಮೇಲೆ ಬಂಡೆಕಲ್ಲು‌ ಬಿದ್ದ‌ ಹಾಗಾಯಿತು.

ಅಂತದ್ದೇನಾಯಿತು ಎಂದು‌ ಕೇಳಿದರೆ, ಮದುವೆ ಮಾಡಿಕೊಂಡು ಹೊಸ ಕನಸುಗಳ ಜೊತೆಗೆ ಹೋದ ಮಾಲತಿಗೆ ಅವಳ ಕೈಹಿಡಿದ ಗಂಡ “ನನಗೆ ಮಗು, ಸಂಸಾರವೆಂದು ಜವಾಬ್ದಾರಿ ತೆಗೆದುಕೊಳ್ಳಲು ಇಷ್ಟವಿಲ್ಲ, ನೀನು ದೂರವೇ ಇರು. ನಾನು ಇನ್ನೂ ಒಂದಷ್ಟು ದಿನಗಳ ಕಾಲ ಆರಾಮವಾಗಿ ಇರಬೇಕು. ‌ಅಪ್ಪ-ಅಮ್ಮ ಗಡಿಬಿಡಿಯಲ್ಲಿ‌ ಮದುವೆ ಮಾಡಿಸಿಬಿಟ್ಟರು, ನನಗೆ ಈ ಮದುವೆ ಇಷ್ಟವಿರಲಿಲ್ಲ ಎಂದು ಮೊದಲ ರಾತ್ರಿಯಂದೇ ಹೇಳಿಬಿಟ್ಟನಂತೆ. ಇದರಿಂದ ಅವಳಿಗೆ ಕಾರ್ಮೋಡ ಕವಿದ ಹಾಗಾಗಿ ಆ ದಿನ ಅಳಲು ಪ್ರಾರಂಭಿಸಿದಳವಳು ಮೂರು ತಿಂಗಳುಗಳ‌ ಕಾಲ ಸಹಿಸಿಕೊಂಡು ಈಗ ಹೊರ ಬಂದಿದ್ದಾಳೆ.ಎಷ್ಟು ಸಮಾಧಾನ ಮಾಡಿದರೂ ಅವನು ಬೇಡವೇ ಬೇಡ ಎಂದು ಹಟವಿಡಿದು ಕುಳಿತುಕೊಂಡಿದ್ದಾಳೆ.

ಸನ್ನಿವೇಶ ೨ : ಸುಮನ ಮದುವೆಯಾಗಿ ಎರಡು ಮೂರು ತಿಂಗಳಾಗಿರಬೇಕು‌ ಅವಳ ಗಂಡನ ಪ್ರೀತಿ ತವರುಮನೆಯನ್ನೇ ಮರೆಸುವಷ್ಟಿದ್ದರೂ ಅವಳಿಗೆ ತನ್ನ ಗೆಳೆಯರ ಜೊತೆ ಹರಟೆ ಹೊಡೆಯುವುದು, ರಾತ್ರಿ ತಡವಾಗಿ ಆಫೀಸಿನಿಂದ ಬರುವುದು, ಅವರ ಜೊತೆಗೆ ಡಿನ್ನರ್ ಮುಗಿಸಿ ಮನೆಗೆ ಬಂದು ಮಲಗುವುದು ಹೀಗೇ ಹಳೆಯ ಅಭ್ಯಾಸ ಬಿಟ್ಟಿರಲೇ ಇಲ್ಲ. ಇದನ್ನು ಕಂಡು ರೋಸಿ ಹೋದ ರಾಹುಲ್ ಅತ್ತೆಗೆ ಫೋನಾಯಿಸಿ ಚೆನ್ನಾಗಿ ಬೈದುಬಿಟ್ಟ. ” ಕರೆದುಕೊಂಡು ಹೋಗಿ ನಿಮ್ಮ ಮಗಳನ್ನು. ಗಂಡ ಎನ್ನುವ ಗೌರವವಿಲ್ಲ, ಮದುವೆಯಾದ ಹೆಣ್ಣಮಗಳಂತೆ ವರ್ತಿಸುತ್ತಲೂ ಇಲ್ಲ, ಹುಡುಗಾಟ, ಸ್ನೇಹಿತರ ಜೊತೆ ಸುತ್ತಾಟ… ಛೇ..ಛೇ..ಏನಿದೆಲ್ಲ?? ನನಗೆ ಇಷ್ಟವಾಗದು. ಅವಳ ಜೊತೆ ಜೀವನ ಮಾಡುವುದು ಕಷ್ಟವೆನಿಸುತ್ತಿದೆ… ಎಂದು ಕೋಪಿಸಿಕೊಂಡಿದ್ದ.

ಮದುವೆ ಎರಡು ಮನೆತನವನ್ನು ಎರಡು ಮನಸ್ಸುಗಳನ್ನು ಒಂದು ಮಾಡಿಸುವ ವೇದಿಕೆ. ಆದರೆ ಈಗಿನ ಇಂಟರ್ನೆಟ್ ಯುಗದಲ್ಲಿ ಮದುವೆಗೆ ಇರುವ ಘನತೆ ಗೌರವ ಕಡಿಮೆಯಾಗುತ್ತಿದೆಯಾ? ಎಂಬ ಅನುಮಾನ ಕಾಡುತ್ತಿದೆ. ವಯಸ್ಸು ಹೆಣ್ಣು ಮಕ್ಕಳು ದುಡಿಯುವುದು, ಉದ್ಯೋಗದಲ್ಲಿ ಬಡ್ತಿ ಪಡೆಯುವುದು, ಲಕ್ಷಗಟ್ಟಲೆ ಹಣ ಸಂಪಾದಿಸುವುದು ಇದರಲ್ಲೇ ಆಸಕ್ತಿ ತೋರಿಸುತ್ತಿದ್ದಾರೆ ವಿನಃ, ಮದುವೆ, ಸಂಸಾರ,ಗಂಡ, ಮಗು ಹೊಸ ಜೀವನ ಇದ್ಯಾವುದು ಬೇಡವಾಗಿದೆ. ಕಿರಿಕಿರಿ ಎನಿಸುತ್ತಿದೆ. ಹಾಗೆಯೇ ಮೂವತ್ತರ ಗಡಿ ದಾಟಿದರೂ ಹುಡುಗರು ಸಹ, ಆಫೀಸಿನ ಕೆಲಸ ಬಿಡುವಾದಾಗ ಗೆಳೆಯರೊಂದಿಗೆ ಮೋಜು ಮಸ್ತಿ ಮಾಡುವುದರಲ್ಲೇ ಕಾಲ ಕಳೆದು ಈ ಹೊಸದಾದ ಜವಾಬ್ದಾರಿ ಹೊರಲು ಮನಸ್ಸು ಇಷ್ಟಪಡುತ್ತಿಲ್ಲ. ಅಲ್ಲದೇ ತಮ್ಮ ಮೊಂಡುತನದಿಂದ ಸಂಗಾತಿಯ ಮನಸ್ಸು ನೋಯಿಸಿ ತಮ್ಮ ಜೀವನವನ್ನೇ ನರಕ ಮಾಡಿಕೊಳ್ಳಲು ಅವಕಾಶ ಕೊಡುತ್ತಿದ್ದಾರೆ. ಒಂದು ವರುಷ ಬಿಡಿ ಸರಿಯಾಗಿ ಅರ್ಧ ವರುಷವೂ ಇಬ್ಬರೂ ಜೊತೆಯಲ್ಲಿ ಬದುಕು ನಡೆಸುವುದು ಕಷ್ಟದ ವಿಷಯವಾಗಿರುತ್ತದೆ.

ಏಕೆ ಹೀಗೆ?! ಕಾರಣ ಮೊದಲೇ ಹೇಳಿದಂತೆ ಉದ್ಯೋಗ, ಹಣ ಗಳಿಸುವುದು, ಗಂಡಿನ ಸಹಾಯವಿಲ್ಲದೇ ತಾನು ಬದುಕಬಲ್ಲೆ ಎನ್ನುವ ಅಭಿಮಾನ ಇತ್ತೀಚೆಗಿನ ವರ್ಷಗಳಲ್ಲಿ ಹೆಣ್ಮಕ್ಕಳಲ್ಲಿ ಹೆಚ್ಚಾಗಿದೆ. ಅಲ್ಲದೇ ಓದು ಮುಗಿಯುವ ತನಕ ಹೆತ್ತವರ ಜೊತೆಗೆ ಬೆಳೆಯುವ ಮಕ್ಕಳು ಉದ್ಯೋಗ ಅರಸಿ ಬೇರೆ ಊರಿಗೆ ಹೋಗಿ ಬದುಕು ನಡೆಸುವಾಗ ಆಗಾಗ್ಗೆ ತಿಳಿ ಹೇಳಲು ಹೆತ್ತವರು ಜೊತೆಗಿಲ್ಲದಿರುವುದೂ ಒಂದು ಕಾರಣವಾಗಿದೆ. ಕುಳಿತು ಮಾತನಾಡಿ ಹೊಂದಾಣಿಕೆ ಮೂಡಿಸಲು ನಡೆಸುವ ಪ್ರಯತ್ನವೆಲ್ಲ ವಿಪೊಲವಾಗುತ್ತದೆ. ಹಣದ ಹಿಂದೆ ಹೋದರೆ ಪ್ರೀತಿ ದೊರಕುವುದಿಲ್ಲ. ಒಂಟಿಯಾಗಿ‌ ಬದುಕಬಹುದು ಎಂಬ ವಾದವೂ ಹೆಚ್ಚು ದಿನಗಳ‌ ಕಾಲ‌ ನಡೆಯುವುದಿಲ್ಲ. ಸೃಷ್ಟಿಯ ನಿಯಮವೇ ಹಾಗಿದೆ ಅರಿತು ಬಾಳಬೇಕಿದೆ. ಸಹನೆ, ಪರಸ್ಪರ ಗೌರವಿಸುವುದು, ಅರ್ಥಮಾಡಿಕೊಂಡು ಬಾಳಬೇಕಿದೆ. ಯಾವಾಗ ಬೇಕಾದರು ಜೀವನದಲ್ಲಿ ತಿರುವು ಬರಬಹುದು. ಎಲ್ಲವನ್ನೂ ಎದುರಿಸಬೇಕಾಗುತ್ತದೆ. ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು ಅವಲಂಬಿಸಿ ಬದುಕಬೇಕು. ಹೊಸ ಜವಾಬ್ದಾರಿ ತನ್ನ ಬದುಕಿನ ಬೇರೊಂದು ಹಂತವನ್ನು ತಲುಪುವುದು ಖುಷಿಪಡಬೇಕಾದ ವಿಷಯ. ಎಲ್ಲವನ್ನೂ ಕಿರಿಕಿರಿ ಎಂದು ಭಾವಿಸಿದರೆ ದಿಕ್ಕುತಪ್ಪಿ‌ ನಡೆಯಬೇಕಾಗುತ್ತದೆ.

ಸಿಂಧು ಭಾರ್ಗವ್ ಬೆಂಗಳೂರು


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
umesh desai
umesh desai
4 years ago

ಬಹಳ ವಾಸ್ತವಿಕ ಅಂಶ ಇದೆ…ಆದ್ರೆ ಡಿಬೇಟೇಬಲ್…ಕೂಡ.

1
0
Would love your thoughts, please comment.x
()
x