ಪ್ರೀತಿಯ ಮೇಲ್ಮೆ!: ಕೆ ಟಿ ಸೋಮಶೇಖರ ಹೊಳಲ್ಕೆರೆ.

somashekar-k-t

ನಮ್ಮ ಭಾರತ ದೇಶದ ಪರಂಪರೆ, ಸಂಸ್ಕೃತಿ ಉದಾತ್ತವಾದುದು. ಸಂಬಂಧಗಳ ನಡುವಿನ ಅನ್ಯೋನ್ಯತೆ,  ಪ್ರೀತಿ, ತ್ಯಾಗ ಉನ್ನತವಾದುದು. ಅವು ಇತಿಹಾಸ, ಪುರಾಣ, ಕಾವ್ಯಗಳಲ್ಲಿ ಓತಪ್ರೋತವಾಗಿ ಹರಿದಿವೆ!

ಪ್ರೀತಿ ಎಂಬುದು ಅನನ್ಯವಾದುದು! ಉದಾತ್ತವಾದುದು! ಸಂಬಂಧಗಳನ್ನು ಬೆಸೆಯುವಂಥದ್ದು! ಎಲ್ಲರನ್ನೂ ಒಂದುಗೂಡಿಸುವಂತಹದ್ದು. ಪ್ರೀತಿಯಿಂದ ಜಗತ್ತು ಸೃಷ್ಟಿಯಾಗಿದೆ. ಪ್ರೀತಿಯೇ ಜಗದ ತುಂಬ ತುಂಬಿದೆ. ಗಾಳಿ ಸುಳಿದಾಡುವುದು, ಆದಿತ್ಯ ಬೆಳಕು ಕೊಡುವುದು, ಮಳೆ ಇಳೆಗೆ ಇಳಿದು ಬರುವುದು, ಸಸ್ಯಗಳು ಹೂ ಹಣ್ಣು ಕೊಡುತ್ತಿರುವುದು, ನದಿಗಳು ಹರಿಯುತ್ತಿರುವುದು, ಹಗಲು – ರಾತ್ರಿಗಳಾಗುತ್ತಿರುವುದು ಬ್ರಹ್ಮಾಂಡ ಸೃಷ್ಟಿಯಾಗಿರುವುದು  … ಪ್ರೀತಿಯಿಂದ!

      ಪ್ರೀತಿಯಿಲ್ಲದ ಮೇಲೆ
      ಹೂ ಅರಳಿತು ಹೇಗೆ? …

ಎಂಬ ಜಿ ಎಸ್ ಶಿವರುದ್ರಪ್ಪನವರ ಕವನ ಪ್ರೀತಿಯ ಮಹತ್ವವನ್ನು, ವೈಶಾಲ್ಯತೆಯನ್ನು ಸಾರುತ್ತದೆ.  

ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ, ಚಿಕ್ಕಪ್ಪ, ದೊಡ್ಡಪ್ಪ, ಮಾವ, ಅತ್ತಿಗೆ, ಗಂಡ, ಹೆಂಡತಿ … ಎಂಬ ಭಾವಗಳನ್ನು ಬೆಸೆಯುವಂತಹದ್ದು, ಆ ಸಂಬಂಧಗಳನ್ನು ಅನ್ಯೋನ್ಯವಾಗುವಂತೆ ಮಾಡುವುದು ಪ್ರೀತಿ! ಅದು ವೈವಿಧ್ಯಮಯ!

ಪ್ರೀತಿ ಎಂಬುದು ಪಡೆಯುವಂತದ್ದಲ್ಲ. ಕೊಡುವಂತಹದ್ದು! ಪ್ರೀತಿಯಲ್ಲಿ ತ್ಯಾಗವೇ ತುಂಬಿದೆ! ಅದಕ್ಕೆ ಅದು ಪವಿತ್ರ , ಶ್ರೇಷ್ಠ ಆಗೋದು! ಪ್ರೀತಿ ನಮ್ಮ ಒಡನಾಡಿಗಳ ರೂಪ, ನಡೆ, ನುಡಿ, ಮಾಳ್ಕೆ, ಮೌಲ್ಯ ಮುಂತಾದವು ಇಷ್ಟವಾಗಿ ಮೂಡಿಬರುವಂಥದ್ದು. ಅದು ಹೃದಯದಿಂದ ಸಹಜವಾಗಿ ಹುಟ್ಟಿ ಬರುವಂಥದ್ದು. ಸಸ್ಯಗಳಲ್ಲಿ ಹೂಗಳು ಅರಳುವಂತೆ ಅರಳುವಂತಹದು! ಇದು ಬಲವಂತಕ್ಕೆ ಬರುವಂಥದ್ದಲ್ಲ. ಬಲವಂತದಿಂದ ಬೇರೆಯವರ ಪ್ರೀತಿಯನ್ನು ಪಡೆಯಲಾಗದು! ಬೇರೆಯವರಿಗೆ ಕೊಡಲಾಗದು. ಇಂದು ಪ್ರೀತಿಸುವುದು ಫ್ಯಾಶನ್ ಆಗಿದೆ. ಪ್ರೀತಿಗೋಸ್ಕಾರ ಪ್ರೀತಿಸುವವರು ಹೆಚ್ಚುತ್ತಿದ್ದಾರೆ. ಅವರು ಪ್ರೀತಿಸುತ್ತಿದ್ದಾರೆ ನಾನು ಪ್ರೀತಿಸಬೇಕು ಎನ್ನುವವರು ಹೆಚ್ಚುತ್ತಿದ್ದಾರೆ. ನನ್ನ ಗೆಳೆಯನಿಗೆ ಗೆಳತಿಯಿದ್ದಾಳೆ. ನಾನೂ ಒಬ್ಬ ಗೆಳತಿಯನ್ನು ಮಾಡಿಕೊಳ್ಳಬೇಕು ನನ್ನ ಗೆಳತಿಗೆ ಒಬ್ಬ ಗೆಳೆಯನಿದ್ದಾನೆ ನಾನೂ ಒಬ್ಬ ಗೆಳೆಯನನ್ನು ಮಾಡಿಕೊಳ್ಳಬೇಕು ಅಂತ ಗೆಳೆತನ ಬೆಳೆಸುವವರು ಹೆಚ್ಚುತ್ತಿದ್ದಾರೆ! ಪ್ರೀತಿಸಬೇಕು ಅಂತ ಉದ್ಧೇಶ ಇಟ್ಟುಕೊಂಡು ಪ್ರೀತಿಸಲು ಹೋಗುವುದು ಪ್ರೀತಿ ಹುಡುಕುವುದು ಅಸಹಜ  ಅನ್ನಿಸಿದರೂ ಎರಡು ಮನಸ್ಸು ಒಂದಾಗದೆ ಪ್ರೀತಿಯಾಗದೆಂಬ ಸತ್ಯ ಎಲ್ಲರಿಗೂ ತಿಳಿದಿರುವಂತಹದ್ದೆ! ಹಾಗೆ ಪ್ರೀತಿ ಒಲಿದರೆ ಅದು ಸಹಜ ಆಗುತ್ತಾ ಹೋಗುವುದನ್ನು ಕಾಣುತ್ತೇವೆ! ಹಾಗೆ ಪ್ರೀತಿಯ ಹುಡುಕುತ್ತಾ ಹೋದರೂ ಮನಸ್ಸು ಮನಸ್ಸು ಕೂಡದೆ, ಒಲಿಯದೆ ಪ್ರೀತಿ ಮೂಡುವುದಿಲ್ಲ! ಮೂಡಿದಾಗ ಸಹಜ ಆಗುತ್ತದೆ. ಏಕೆಂದರೆ ಪ್ರೀತಿಸಬೇಕೆಂಬ ಮನಸ್ಸೇ ದೊಡ್ಡದು!  ಅದಕ್ಕೆ ಒಲಿಯುವ ಇತರರ ನೋಯಿಸದ,  ಇತರರಿಗೆ ಒಳಿತನ್ನು ಮಾಡುವ ಗುಣವಿರುತ್ತದೆ! ಇಂದು ಪ್ರೀತಿಸುವವರು ಹೆಚ್ಚುತ್ತಿದ್ದಾರೆ. ಬದಲಾದ ಸಮಾಜದ ಕಾಲಘಟ್ಟದಲ್ಲಿ ಪ್ರೀತಿಯ ಪ್ರಾಮುಖ್ಯತೆಯನ್ನು ಯುವ ಜನತೆ ಅರ್ಥಮಾಡಿಕೊಂಡಿದೆ. ಜತೆಗೆ ಪ್ರೀತಿಸುವ ಸಂದರ್ಭಗಳೂ ಬದಲಾಗುತ್ತಿವೆ! ಪ್ರೀತಿಸುವ ಜನರ ಬದಲಾದ ಸಂದರ್ಭಗಳಲ್ಲಿ ಪ್ರೀತಿ ಹುಡುಕುತ್ತಿದ್ದಾರೆ.

ಪ್ರೀತಿ ಅಮೂಲ್ಯ ಎಂಬ ಭಾವನೆ ಬರತೊಡಗಿರುವುದರಿಂದ ಪ್ರೇಮಿಗಳ ದಿನ ಬರುತ್ತಿದೆ ಬರುವಷ್ಟು ಹೊತ್ತಿಗೆ ಒಬ್ಬ ಪ್ರೇಮಿಯನ್ನು ಹುಡುಕಿಕೊಳ್ಳೋಣ ಎನ್ನುವವರು ಬೆಳೆಯುತ್ತಿದ್ದಾರೆ. ಆ ನಿಗಧಿತ ಸಮಯದೊಳಗೆ ಪ್ರಿಯರ ಹುಡುಕಿಕೊಳ್ಳುವ ಒತ್ತಡದಲ್ಲಿ ಸಿಲುಕುತ್ತಾರೆ! ನಿನಗೆ ಬಾಯ್  ಫ್ರೆಂಡ್ ಇಲ್ಲವೆ? ನಿನಗೆ ಗರ್ಲ್ ಫ್ರೆಂಡ್ ಇಲ್ಲವೆ?  ಈ ಪ್ರಶ್ನೆಗಳಿಗೆ ಉತ್ತರ ' ಇಲ್ಲ ' ಎಂದಾದಲ್ಲಿ ಅವರು ಕಾಲೇಜು ವಿದ್ಯಾರ್ಥಿಗಳು ಆಗಿರಲು ಅನರ್ಹರು ಎಂದು ಅವಮಾನ ಮಾಡುವ ಪರಿಸ್ಥಿತಿ ಕಾಲೇಜುಗಳಲ್ಲಿ ಉಂಟಾಗಿದೆ. ಯಾವುದಾದರೂ ಕಾಲೇಜುಗಳ ಕಾರ್ಯಕ್ರಮ ನಡೆಯುವ ದಿನ ನಿಮ್ಮ ಗರ್ಲ್ ಫ್ರೆಂಡ್ ಬಂದಿದ್ದಾರೆಯೆ? ನಿಮ್ಮ ಬಾಯ್ ಫ್ರೆಂಡ್ ಬಂದಿದ್ದಾರೆಯೆ? ಎಂಬ ಪ್ರಶ್ನೆಗಳು ಕೇಳಿಬರುತ್ತವೆ! ಬಂದಿದ್ದರೆ ಅವರ ಪರಿಚಯ ಗತ್ತಿನಿಂದ ಗೆಳೆಯ, ಗೆಳತಿಯರಿಗೆ ಮಾಡಿಕೊಡುವುದು ಘನತೆಯ ವಿಷಯವಾಗಿದೆ! ಚಲನಚಿತ್ರಗಳಲ್ಲಿ ನಾಯಕ, ನಾಯಕಿಯರು ಉಡುಗೆ, ತೊಡುಗೆ, ಏರ್ ಸ್ಟೈಲ್ ಅನುಕರಿಸುವಂತೆ ಪ್ರೀತಿಸುವುದನ್ನು ಅನುಕರಿಸುತ್ತಿದ್ದಾರೆ! ಪ್ರೀತಿಯ ಭಾವನೆ ಮನಸ್ಸಿನಲ್ಲಿ ಉದಯಿಸುವುದು ಒಳ್ಳೆಯದೆ! ಪ್ರೀತಿಸಬೇಕೆಂದು  ಪ್ರೀತಿಸುವುದು ಒಳ್ಳೆಯದೆ. ಪ್ರೀತಿಗಾಗಿ ಹುಡುಕಾಡುವ ಮನಸ್ಸು ಒಳ್ಳೆಯದೆ! ಅದು ನಿಜವಾದ, ನಿಷ್ಕಲ್ಮಷ ಪ್ರೀತಿಯಾಗಬೇಕಷ್ಟೆ! ಒಮ್ಮೊಮ್ಮೆ ಇದು ಅಪಕ್ವವಾಗಿ, ವ್ಯಾಮೋಹದಿಂದ, ಆಸೆ ಆಮಿಷಗಳಿಂದ ಅನಾಹುತ ಮಾಡಿಕೊಳ್ಳುವುದನ್ನೋ ದುಃಖಾಂತವಾಗುವುದನ್ನೋ ಕಂಡಿರುತ್ತೇವೆ!ಹಾಗಾಗಬಾರದು! ಆದರೆ ಇತ್ತೀಚೆಗೆ ಪ್ರೀತಿಸುವಾಗ ಹೊಂದಾಣಿಕೆ ಕೊರತೆ ಉಂಟಾದರೆ ಪ್ರೀತಿಸುವವರು ತಮ್ಮ ಪ್ರೀತಿಯನ್ನು ಪರಿಷ್ಕರಿಸುವ ನಿರ್ದಾರ ತೆಗೆದುಕೊಳ್ಳತ್ತಾರೆ! ಅದು ಉತ್ತಮವಾದುದು! ವಿಫಲತೆಯನ್ನು ಗಂಭೀರವಾಗಿ ಪರಿಗಣಿಸದೆ  ಹೊಸ ಪ್ರೀತಿಗಾಗಿ ಹುಡುಕುವ ಮತ್ತೋರ್ವರ ಪ್ರೀತಿಸುವ ನಡೆಗಳು ಇಂದು ಸಾಮಾನ್ಯವಾಗುತ್ತಿವೆ. ಯಾರು ಹೆಚ್ಚು ತಮ್ಮ ಸ್ವಭಾವಕ್ಕೆ ಹೊಂದಿಕೆಯಾಗುವರೋ ಅಂತಹವರ ಜೀವನ ಸಂಗಾತಿಯಾಗಿ ಆಯ್ದುಕೊಳ್ಳುವುದು ನಡೆಯುತ್ತಿದೆ. ಇದು ಒಳ್ಳೆಯ ಬೆಳವಣಿಗೆ! ಆದರೆ ಇದರಲ್ಲಿ ದುರುದ್ದೇಶ ಇರಬಾರದು! ಇದ್ದರೆ ಅನಾಹುತಕ್ಕೆ ಹಾದಿಯಾಗುತ್ತದೆ.

ಪ್ರೀತಿ ಕುರುಡು ಎಂದು ಹೇಳುತ್ತಾರೆ. ಹದಿನಾರರ ಹದಿ ವಯಸ್ಸಿನಲ್ಲಿ ಅಪಕ್ವತೆಯಿಂದ ಈಗಾಗಬಹುದು! ಇವರು ಅಪ್ರಬುದ್ದರಾಗಿರುವುದರಿಂದಾಗಿ ಪ್ರೀತಿ ಪರಿಪಕ್ವ ಆಗುವುದು ಅಪರೂಪ! ಹದಿನಾರರ ಆಸುಪಾಸಿನ ಪ್ರೀತಿಯನ್ನು ಮುಂದೂಡುವುದು ಒಳಿತು! ಕೆಲವೊಮ್ಮೆ ವ್ಯಾಮೋಹದಿಂದ ಹೀಗಾಗುತ್ತದೆ. ಯಶೋಧರ ಚರಿತೆ ಎಂಬ ಜನ್ನನ ಕಾವ್ಯದಲ್ಲಿ ಯಶೋಧರನ ರಾಣಿಯಾದ ಅಮೃತಮತಿಗೆ ಅಷ್ಟಾವಂಕ  ಒಬ್ಬ ಇನಿದನಿಯ ಗಾಯಕ ಎಂಬ ಒಂದೇ ಕಾರಣಕ್ಕೆ ಪ್ರೀತಿ ಹುಟ್ಟುತ್ತದೆ. ಅನಂತರ ಅವನ ಸಂಪರ್ಕ ಸಾಧಿಸಿ ಅವನಲ್ಲಿ ಒಂದಾಗುವುದು ನಡೆಯುತ್ತಿರುತ್ತದೆ. ಅವಳ ನಡೆ ಬಗ್ಗೆ ಅನುಮಾನ ಬಂದು ನಿದ್ದೆ ಬಂದವನಂತೆ ನಟಿಸುತ್ತಿದ್ದ ಯಶೋಧರನ ತೋಳಿನ ತೆಕ್ಕೆಯಿಂದ ನಾಜೂಕಾಗಿ ಬಿಡಿಸಿಕೊಂಡು ಪಟ್ಟದಾನೆಯ ಮಾವುತನಾದ ಅಷ್ಟಾವಂಕನ ಬಳಿ ಅಮೃತಮತಿ ಸಾರುವುದು. ಅಲ್ಲಿ ಅನೇಕ ರೀತಿಯಲ್ಲಿ ಕುರುಪಿಯಾಗಿದ್ದ ಅಷ್ಟಾವಂಕ ರಾಣಿ ತನ್ನಲ್ಲಿಗೆ ಬರುವುದು ತಡವಾಯಿತೆಂದು ಬಿಡದೆ ಒದೆಯುತ್ತಿದ್ದರೂ ತನ್ನ ಬರವು ಯಶೋಧರನಿಂದಾಗಿ ತಡವಾಯಿತು ' ಬಡಿ, ಮುಳಿಯದಿರ್ , ಎನಗೆ‌ ಮಿಕ್ಕ ಗಂಡರ್ ಸವಸೋದರರ್ ' ಎಂದು ಅಂಗಲಾಚಿ ಒದೆಯುತ್ತಿರುವವನನ್ನು ಬೇಡಿಕೊಳ್ಳುವ ದೃಶ್ಯ ಪ್ರೀತಿ ಇಷ್ಟು ಕುರುಡಾ ಅನ್ನಿಸದಿರದು! ಪ್ರೀತಿ ಇಷ್ಟು ಕುರುಡಾಗಬಾರದು! ಇದು ಪ್ರೀತಿ ಅನ್ನಿಸದು! ಇಲ್ಲಿ ವಿವೇಕ ಅವಶ್ಯಕ! ವಿವೇಕಯುತ ಪ್ರೀತಿ ಆಗಬಹುದು ಅಮರ! ಇಂದು ಪ್ರೀತಿ ಹುಟ್ಟುವ ಸಂದರ್ಭಗಳು, ಅವರ ನಡುವಿನ ಅನ್ಯೋನ್ಯತೆ ಅದನ್ನು ನಿರ್ಣಯಿಸುತ್ತವೆ!

ಇಂದು ಪ್ರೀತಿ ಹುಟ್ಟುವ ಸಂದರ್ಭಗಳು ಆಶ್ಚರ್ಯಕರವೂ, ಸರಳವೂ ಆದಂತೆ ಹೊರಗಿನವರಿಗೆ ಅನಿಸುತ್ತದೆ. ಪ್ರೀತಿಸುತ್ತಿರುವವರಿಗೆ ಮಾತ್ರ ಅಮೂಲ್ಯವೆನ್ನಿಸುತ್ತವೆ ಅವರಿಗೆ ಮಾತ್ರ ಅವು ಘನವಾದವುಗಳೂ, ಅಮೂಲ್ಯವಾದವುಗಳೂ ಅನಿಸುತ್ತವೆ. ಒಂದು ಸ್ಮೈಲ್ ಮಾಡಿದ್ದಕ್ಕೆ, ಒಂದು ಪುಸ್ತಕ ಕೊಟ್ಟುದ್ದಕ್ಕೆ, ಜತೆಯಾಗಿ ಶಾಲಾ ಅಥವಾ ಕಾಲೇಜು ಕಾರ್ಯಕ್ರಮದಲ್ಲಿ ಒಂದು ಕಾರ್ಯಕ್ರಮ ನಡೆಸಿಕೊಟ್ಟುದ್ದಕ್ಕೆ, ಜತೆಗೂಡಿ ಒಂದು ನೃತ್ಯ ಮಾಡಿದ್ದಕ್ಕೆ, ಒಂದು ಝಲಕ್ ತೋರಿಸಿದ್ದಕ್ಕೆ, ಜತೆಗೂಡಿ ಒಂದು ಸ್ಕಿಟ್ ಪ್ರದರ್ಶಿಸಿದ್ದಕ್ಕೆ, ಬರ್ತ  ಡೇ ಗೆ ಆಗಮಿಸಿ ವಿಶ್ ಮಾಡಿದ್ದಕ್ಕೆ, ಒಂದು ಗಿಪ್ಟ್ ಕೊಟ್ಟಿದ್ದಕ್ಕೆ ಒಮ್ಮೆ ಶೈಕ್ಷಣಿಕ ಪ್ರವಾಸ ಹೋಗಿ ಬಂದುದಕ್ಕೆ ಜತೆಗೂಡಿ ಒಂದು ಪ್ರಾಜೆಕ್ಟ್ ವರ್ಕ್ ಮಾಡಿದ್ದಕ್ಕೆ, ….. ಹೀಗೆ ನಾನಾ ಸಂದರ್ಭಗಳಲ್ಲಿ  ಪ್ರೀತಿ ಹುಟ್ಟುತ್ತಿದೆ. ಇಷ್ಟು ಸರಳ ಕಾರಣಗಳಿಗೆ, ಇಷ್ಟು ಕಡಿಮೆ ಅವಧಿಯಲ್ಲಿ ಪ್ರೀತಿ ಹುಟ್ಟಿದರೆ ಅವರು ಒಬ್ಬರಿಗೊಬ್ಬರು ಸರಿಯಾಗಿ ಈ ಅಲ್ಪ ಸಮಯದಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು ಅಂದುಕೊಳ್ಳಬಹುದೇ?  ಅದು ನಿಜವಾದ ಪ್ರೀತಿ ಅಂದುಕೊಳ್ಳಬಹುದೇ? ಎಂಬ ಇತ್ಯಾದಿ ಪ್ರಶ್ನೆಗಳಿಗೆ ಎಡೆಮಾಡಿಕೊಡುತ್ತದೆ. ಆ ಪ್ರಶ್ನೆಗಳು ಉದ್ಬವಿಸಲು ಆ ನಡೆಗಳು ಕಾರಣವಾದರೂ ಅಲ್ಲಿ ಯಾವುದಾದರೊಂದು ಆಕರ್ಷಣೆ ಇದ್ದದ್ದು ಸುಳ್ಳ ಎನ್ನಲಾಗದು! ಇವು ವಿವಾಹದ ಹಂತ ತಲುಪಿದರೆ ಸಾಂಪ್ರದಾಯಿಕ ಮದುವೆಗಳಿಗಿಂತ ಇವು ಉತ್ತಮ ಅನ್ನಿಸುತ್ತವೆ. ಸಂಪ್ರದಾಯಿಕ ಮದುವೆಗಳಲ್ಲಿ ಹಿರಿಯರ ನಿರ್ಣಯಗಳು ಜವಾಬ್ದಾರಿಗಳು ಹೆಚ್ಚಿರುತ್ತವೆ.  ಇಲ್ಲಿ ಮದುವೆಯಾಗುವವರು ಪರಸ್ಪರರು ಅರ್ಥ ಮಾಡಿಕೊಳ್ಳಲು ಇಷ್ಟಾದರೂ ಅವಕಾಶ ಸ್ವತಂತ್ರ ಇರುವುದಿಲ್ಲ! ಯಂಗೇಜ್ ಮೆಂಟೋ, ಮದುವೆ ಮಾಡುವ ನಿರ್ಣಯಗಳೋ ಕೈಗೊಂಡ ನಂತರ ಇವರೆ ನನ್ನ ಬಾಳ ಸಂಗಾತಿ ಎಂದು ನಿರ್ದರಿಸಿದ ನಂತರ ಪ್ರೀತಿಸಲು ಮುಂದಾಗುವುದು ಕಾಣುತ್ತೇವೆ. ಹೀಗೆ ಅರೇಂಜ್ ಮ್ಯಾರೇಜುಗಳಲ್ಲಿ ನಿರ್ಣಯ ಮೊದಲು ನಂತರ ಲವ್!  ಇಲ್ಲಿ ಲವ್ ಆದರೆ ಆಗಬಹುದು ಆಗದೆ ಇರಬಹುದು. ಆದರೆ ಲವ್ ಮ್ಯಾರೇಜುಗಳಲ್ಲಿ ಲವ್ ಮೊದಲು, ನಿರ್ಣಯಗಳು ನಂತರ!  ಹೊಂದಾಣಿಕೆ ಆಧಾರದ ಮೇಲೆ ನಿರ್ಣಯಗಳು ನಿಂತಿರುತ್ತವೆ. ಇಲ್ಲಿ ಎಷ್ಟು ಕಾಲ ಪ್ರೀತಿಸುತ್ತಿದ್ದರೋ ಅಷ್ಟಾದರೂ ಅರ್ಥ ಮಾಡಿಕೊಳ್ಳಲು ಲವ್ ಮ್ಯಾರೇಜುಗಳಿಗೆ ಕಾಲಾವಕಾಶ ಇರುತ್ತದಲ್ಲವೆ? ಆದ್ದರಿಂದ ಇವು ಆ ದೃಷ್ಟಿಯಿಂದ ಸಾಂಪ್ರದಾಯಿಕ ಮದುವೆಗಳಿಗಿಂತ ಉತ್ತಮ ಎನ್ನಬಹುದು!

ಮದುವೆ ಎಂದರೆ ಭಾರತೀಯ ಸಂದರ್ಭಗಳಲ್ಲಿ ಇಬ್ಬರ ಮಿಲನ ಅಷ್ಟೇ ಆಗಿರದೆ ಎರಡು ಕುಟುಂಬಗಳ, ಸಂಬಂಧಿಗಳ ಮಿಲನವಾಗಿರುತ್ತದೆ. ಪ್ರಯುಕ್ತ ಇದಕ್ಕೆ ಪ್ರತಿರೋಧ ಸಹಜವಾಗಿ ಉಂಟಾಗಬಹುದು! ಹಾಗೇ ಜಾತಿ ಧರ್ಮ, ನಡೆ, ನುಡಿ , ಆಚಾರ, ವಿಚಾರ, ಸಂಪ್ರದಾಯ, ಆಹಾರ …. ಮುಂತಾದವು ಅಡ್ಡಿ ಆಗಬಹುದು. ಇವು ವ್ಯವಹಾರ, ಆಟ, ಪಾಟ … ಯಾವುದಕ್ಕೂ ಅಡ್ಡಿಯಾಗುವುದಿಲ್ಲ! ಪ್ರೀತಿಗೂ ಅಡ್ಡಿಯಾಗುವುದಿಲ್ಲ! ಮದುವೆಗೆ ಮಾತ್ರ ಅಡ್ಡಿಯಾಗುತ್ತವೆ! ಮಾನವರಾಗಿ ಇವೆಲ್ಲವುಗಳ ಮೆಟ್ಟಿ ನಿಲ್ಲುವುದು ಅವಶ್ಯ! ಎರಡೂ ಕುಟುಂಬಗಳು ಇದನ್ನು ಅರ್ಥ ಮಾಡಿಕೊಂಡು ಪ್ರೇಮಿಗಳ ಮದುವೆ ವಿರೋಧಿಸದೆ ಜತೆಗೂಡಿ ಏರ್ಪಡಿಸುವುದು ಸೂಕ್ತ! ಆಗ ವಸುದೈವ ಕುಟುಂಬಕಂ ಎಂಬುದಕ್ಕೆ ಅರ್ಥ ಬಂದು ವಿಶ್ವವೇ ಒಂದು ಕುಟುಂಬವಾಗುತ್ತದೆ. ಇದು ಸರಳ ಅಲ್ಲ! ಅನಿವಾರ್ಯ! ಬದಲಾವಣೆ ಜಗದ ನಿಯಮ! ಬದಲಾವಣೆಗೆ ನಾವು ಮನಸ್ಸನ್ನು ಸದಾ ತೆರೆದಿಡಬೇಕು!  ಇಲ್ಲವಾದಲ್ಲಿ ನಿಂತ ನೀರಾಗಿ ಕೊಳೆತು ನಾರುತ್ತೇವೆ! ನಮಗಷ್ಟೇ ಅಲ್ಲದೆ ಇಡೀ ಪರಿಸರದ ಮಾಲಿನ್ಯಕ್ಕೆ ಕಾರಣರಾಗುತ್ತೇವೆ!

ಪ್ರೇಮ ವಿವಾಹಗಳು ಪುರಾತನ ಕಾಲದಿಂದನು ಇದ್ದವು! ದೇವಾನು ದೇವತೆಗಳಲ್ಲೂ ಇದಕ್ಕೆ ಪ್ರಾಮುಖ್ಯತೆ ಇದೆ! ಒಂದು ಗುಂಪಿನ ದೇವತೆಗಳನ್ನು ಗಂಧರ್ವರು ಎಂದು ಕರೆಯುವರು. ಅವರಲ್ಲಿ ಪರಸ್ಪರು ಮೆಚ್ಚಿ ಮದುವೆಯಾಗುವರು. ಅದಕ್ಕಾಗಿ ಈ ರೀತಿ ವಿವಾಹವನ್ನು ಗಾಂಧರ್ವ ವಿವಾಹ ಎನ್ನುವರು. ಈಗ ಅದನ್ನು  ಲವ್ ಮ್ಯಾರೇಜ್ ಎಂದು ಹೇಳಬಹುದು! ಕಾಳಿದಾಸನ ಮೂರು ನಾಟಕಗಳಲ್ಲಿ ಮೂರು ವೈವಿಧ್ಯಮಯ ಪ್ರೇಮ ಕಥೆಗಳಿವೆ.  ' ಮಾಳವಿಕಾಗ್ನಿ ಮಿತ್ರ ' ನಾಟಕದಲ್ಲಿ ಅಗ್ನಿಮಿತ್ರನೆಂಬ ದೊರೆ ತನ್ನ ಅಂತಃಪುರದಲ್ಲಿದ್ದ ' ಮಾಲವಿಕೆ ' ಎಂಬ ರಾಜ ಪುತ್ರಿಯನ್ನು ಮೋಹಿಸಿ ವಿವಾಹವಾಗುವ ಕಥೆಯಿದೆ. ' ವಿಕ್ರಮೋರ್ವಶೀಯ ' ದಲ್ಲಿ ಊರ್ವಶಿ ಪುರೂರವರ ಪ್ರಣಯ ಕಥೆ ಇದೆ. ' ಶಾಕುಂತಲೆ ' ನಾಟಕದಲ್ಲಿ ದುಶ್ಯಂತ ಶಾಕುಂತಲೆಯರ ವಿವಾಹ ಉನ್ನತ ಪ್ರೇಮವಾಗಿದೆ! ' ಕಾದಂಬರಿ ' ಕಥಾಕಾವ್ಯ ಭಾರತೀಯ ಸಾಹಿತ್ಯ ಲೋಕದಲ್ಲಿ ಅಪರೂಪದ್ದಾಗಿದೆ. ಮಹಾಶ್ವೇತೆ ಪುಂಡಲೀಕರ ಪ್ರೇಮ ಮಡುಗಟ್ಟಿರುವುದು,  ಕಾದಂಬರಿ ಚಂದ್ರಪೀಡರ ಅಮರ ಪ್ರೇಮದೊಂದಿಗೆ ಸಮ್ಮಿಳಿತವಾಗಿ ಎಣೆದುಕೊಂಡು ಈ ಎರಡು ಸಮ್ಮಿಳನಗೊಂಡ ಪ್ರೇಮ ವರ್ಣಿತವಾಗಿದೆ! ಕಾದಂಬರಿ ಗಂಧರ್ವ ಕನ್ಯೆಯಾದರೂ ಚಂದ್ರಾಪೀಡ ದೇವಾಂಶ ಸಂಭೂತನಾದರೂ ಮಾನವ ವರ್ಗಕ್ಕೆ ಸೇರಿದವನು. ಹಾಗೇ ಮಹಾಶ್ವೇತೆ ಅಪ್ಸರೆ, ಪುಂಡಲೀಕ ದೇವಾಂಶ ಸಂಭೂತನಾದರೂ ಮಾನವ ವರ್ಗಕ್ಕೆ ಸೇರಿದವನಾಗಿರುತ್ತಾನೆ! ಇವರ ಮಧ್ಯೆ ಪ್ರೇಮಾಂಕುರವಾಗುವುದು ಅಂತರ್ವರ್ಗ ಮದುವೆಯಾಗಿದೆ! ಭಾರತದ ಪ್ರಸಿದ್ಧ ಕಾವ್ಯವಾದ ಮಹಾಭಾರತದಲ್ಲಿ ಶಂತ ಮಹಾರಾಜ ಗಂಗಾದೇವಿಯನ್ನು ಇಷ್ಟಪಟ್ಟು ಅವಳ ಎಲ್ಲಾ ಷರತ್ತುಗಳಿಗೆ ಒಪ್ಪಿ ವರಿಸುವುದು, ಅದೇ ಶಂತ ರಾಜ ಮತ್ಸಗಂದಿಯ ಇಷ್ಟಪಟ್ಟು ಅವರ ಎಲ್ಲಾ ಷರತ್ತುಗಳಿಗೆ ಸಮ್ಮತಿಸಿ ಮದುವೆ ಮಾಡಿಕೊಳ್ಳುವುದು, ರಾಧಾ ಕೃಷ್ಣರ ಮಧುರ ಪ್ರೇಮ ಹೀಗೆ ಭಾರತದ ಪುರಾಣ, ಸಾಹಿತ್ಯದಲ್ಲಿ ಮಧುರ ಪ್ರೇಮ ಕಥೆ ವರ್ಣಿತವಾಗಿವೆ. ಪ್ರೀತಿಯ ಮೇಲ್ಮೆಯನ್ನು ಸಾರಿವೆ!

ಇಂದು ಸಮಾಜ ಬಹಳಷ್ಟು ಬದಲಾಗಿದೆ. ಬದಲಾವಣೆಯೇ ಜಗದ ನಿಯಮ. ಬದಲಾಗಬೇಕು. ಹಿಂದೆ ಸಂಬಂಧಗಳಲ್ಲೇ ವಿವಾಹಗಳು ನಡೆಯುತ್ತಿದ್ದ ಕಾರಣ ಸಂಬಂಧಗಳು ಅನ್ಯೋನ್ಯವಾಗಿದ್ದವು! ಇಂದು ವಿದ್ಯಾಭ್ಯಾಸಕ್ಕೆ ಪ್ರಾಮುಖ್ಯತೆ ಬಂದ ಕಾರಣ ಮಕ್ಕಳು ಹಬ್ಬ ಹರಿದಿನ, ನಾಮಕರಣ, ಸೀಮಂತ ಮುಂತಾದ ಸಂತೋಷ ಸಮಾರಂಭಗಳಲ್ಲಿ ಪಾಲ್ಗೊಳ್ಳದಿರುವುದರಿಂದ ಆಧುನಿಕ ಬದುಕು ಸಂಬಂಧಗಳನ್ನು ಬೆಸೆಯದೆ, ಸಡಿಲಗೊಳಿಸುತ್ತಿದೆ! ಸಂಬಂಧದಲ್ಲಿ ಅನ್ಯೋನ್ಯತೆ ಕಡಿಮೆಯಾಗುತ್ತಿದೆ. ಎಲ್ಲಿ ಎಲ್ಲಿ ವಿದ್ಯಭ್ಯಾಸ, ಉದ್ಯೋಗ ಮಾಡುತ್ತಿದ್ದಾರೋ ಅಲ್ಲಿನ ಜನರೊಂದಿಗೆ ಅನ್ಯೋನ್ಯತೆ ಬೆಳೆಯುವುದು ಸಹಜ! ಏಕೆಂದರೆ ಅಲ್ಲಲ್ಲಿನ ಜನರ ನಿತ್ಯ ಬೇಟಿಯಾಗುವುದು ಕಷ್ಟ, ಸುಖ ಹಂಚಿಕೊಳ್ಳುವುದು ಸಂತೋಷಕೂಟಗಳಲ್ಲಿ, ಜನ್ಮದಿನ ಆಚರಣೆಯಲ್ಲಿ ಭಾಗಿಯಾಗುವುದು ಸಹಜವೂ ಅನಿವಾರ್ಯವೂ ಆಗಿದೆ! ಇದರಿಂದ ಸಂಬಂಧಗಳು ಅಲ್ಲಲ್ಲೆ ಬೆಸೆಯುತ್ತಿವೆ. ಅನ್ಯೋನ್ಯತೆ ಉಂಟಾಗಿ ಪ್ರೀತಿ  ವಿವಾಹಗಳು, ಅಂತರ್ಜಾತಿ ವಿವಾಹಗಳು, ಅಂತರ್ ಧರ್ಮ  ಅಂತರ್ ಭಾಷಿಗರ ನಡುವಿನ ವಿವಾಹ, ಅಂತರ್ ದೇಶಿಯರ ನಡುವಿನ ವಿವಾಹಗಳು  ಹೆಚ್ಚುತ್ತಿವೆ. ಹೀಗೆ ಪ್ರೀತಿ ತನ್ನ ಒಲವಿನ ಬಾಹುಗಳಿಂದ ವಿಶ್ವವನ್ನೇ ತಬ್ಬುತ್ತ ವಸುದೈವ ಕುಟುಂಬಕಂ ಮಾಡುತ್ತಾ ಭಾರತೀಯರ ಈ ವಿಶಾಲ ಮನೋಭಾವ ಸಾಕಾರಗೊಳಿಸುತ್ತಿದ್ದಾರೆ!  ಸಮಾಜ ಬದಲಾಗುತ್ತಿರುವುದರಿಂದ ಇಂದು ಇದು ಅನಿವಾರ್ಯ ! ಎಲ್ಲರೂ ಇದನ್ನು ಅರ್ಥ ಮಾಡಿಕೊಂಡು ಬದಲಾಗಬೇಕು! ವಿಶ್ವವೇ ಒಂದು ಕುಟುಂಬವಾಗುವತ್ತ ಸಾಗುತ್ತಿದೆ. ವಸುದೈವ ಕುಟುಂಬಕಂ ಎಂಬುದು ಭಾರತೀಯರ ಉದಾರ ನಿಲುವಲ್ಲವೆ? ಆ ನಿಲುವಿಗೆ ಬೆಂಬಲಿಸಿ ವಿಶ್ವಮಾನವರಾಗಬೇಕಿದೆ! ವಿಶ್ವದ ತುಂಬ ಪ್ರೀತಿ ತುಂಬಬೇಕಿದೆ! ಪ್ರೀತಿಯ ಸಾಮ್ರಾಜ್ಯ ಜಗವನಾಳಬೇಕಿದೆ!

 –ಕೆ ಟಿ ಸೋಮಶೇಖರ ಹೊಳಲ್ಕೆರೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x