ಲೇಖನ

ಪ್ರಸ್ತುತ ಮತ್ತು ಭವಿಷ್ಯ: ಶ್ರೀಮಂತ್ ರಾಜೇಶ್ವರಿ ಯನಗುಂಟಿ

ಮನುಷ್ಯನ ಪ್ರಜ್ಞೆಯೆನ್ನುವುದು ಪ್ರಸ್ತುತ ಮತ್ತು ಭವಿಷ್ಯದ ಬುನಾದಿಯೆನ್ನಬಹುದೆನೊ. ಪ್ರಸ್ತುತದಲ್ಲಿ ನಡೆಯುತ್ತಿರುವ ಎಲ್ಲಾ ಕಾರ್ಯಘಟನೆಗಳು ನಮ್ಮ ಈ ಪ್ರಜ್ಞೆಯ ಮೇಲೇ ಅವಲಂಬಿತವಾದದ್ದು. ಈ ಪ್ರಜ್ಞೆ ಸಹಜ ನೈಜತೆಯಿಂದ ಕೂಡಿದೆಯೋ ಅಥವ ಸೃಷ್ಟಿತ ನೈಜತೆಯಿಂದ ಕೂಡಿದೆಯೋ ಎನ್ನುವುದು ಭವಿಷ್ಯವನ್ನು ನಿರ್ಣಯಿಸುವ ಪ್ರಧಾನ ಅಂಶ. ಪ್ರಸ್ತುತದಲ್ಲಿ ಸಂಭವಿಸುತ್ತಿರುವ ಕಾರ್ಯಘಟನೆಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದಾಗ ಇದರ ಹಿಂದೆ ನನಗೇನೂ ಮನುಷ್ಯನ ಅಂಥಹ ಜಾಗೃತಿಯಿಂದ ಅಥವ ದೂರದೃಷ್ಟಿಯಿಂದ ಕೂಡಿದ ಪ್ರಜ್ಞೆ ಕೆಲಸ ಮಾಡುತ್ತಿಲ್ಲವೆನಿಸುತ್ತಿದೆ. ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ವೈಜ್ಞಾನಿಕ ರಂಗಗಳಲ್ಲಿ ತಲ್ಲಿನವಾಗಿರುವ ಮನುಷ್ಯನ ಪ್ರಜ್ಞೆ ಬಹುಶಃ ಯಾವುದೋ ಒಂದು ಪೂರ್ವಕಲ್ಪನೆ, ಸ್ವಾರ್ಥ ಹಾಗೂ ತಾತ್ಕಾಲಿಕ ಸಮಸ್ಯೆಗಳ ಪರಿಹಾರದ ಯೋಚನೆಗಳಿಂದ ಕೂಡಿರುವಂತೆ ಕಾಣಿಸುತ್ತಿದೆ. ಒಂದು ವೇಳೆ ಇದೇ ಪ್ರಜ್ಞೆಯನ್ನು ನೈಜ-ಪ್ರಜ್ಞೆಯೆಂದು ಬಲವಾಗಿ ನಂಬಿ ಇದೇ ರೀತಿಯ ಕಾರ್ಯಯೋಜನೆಗಳನ್ನು ಮುಂದುವರೆಸುತ್ತಾ ಹೋದರೆ, ಖಂಡಿತವಾಗಿಯೂ ಜಗತ್ತು ಸಾಧ್ಯವಾದಷ್ಟು ಬೇಗನೆ ವಿನಾಶಕ್ಕೆ ಹತ್ತಿರವಾಗುವುದೆನೊ.

ಪ್ರತಿಯೊಂದು ಕಾರ್ಯಯೋಜನೆಯನ್ನೂ ಪ್ರಸ್ತುತ ಅನುಕೂಲತೆ ಮತ್ತು ದೂರದೃಷ್ಟಿಯ ಅನುಕೂಲತೆಗಳ ಆಧಾರದ ಮೇಲೆ ಜಾರಿಮಾಡಬೇಕಾಗುತ್ತದೆ. ಪ್ರಸ್ತುತ ಅನುಕೂಲತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾರಿಗೊಳಿಸಲಾಗುವ ಕಾರ್ಯಯೋಜನೆ ಭವಿಷ್ಯದಲ್ಲಿ ಯಾವುದೇ ರೀತಿಯ ಅನಾನುಕೂಲತೆಗಳನ್ನ ತಂದೊಡ್ಡಬಾರದು. ಇದೇ ರೀತಿ ದೂರದೃಷ್ಟಿಯ ಅನುಕೂಲತೆಗಳನ್ನಿಟ್ಟುಕೊಂಡು ಜಾರಿಗೊಳಿಸಲಾಗುವ ಯೋಜನೆಯು ಪ್ರಸ್ತುತದಲ್ಲಿ ಯಾವುದೇ ರೀತಿಯ ಅನಾನುಕೂಲತೆಗಳನ್ನ ಅನುಭವಿಸುವಂತೆ ಮಾಡಬಾರದು. ಒಂದು ವೇಳೆ ಹೀಗೆ ಅನಾನುಕೂಲತೆಗಳನ್ನ ಅನುಭವಿಸುವ ಸನ್ನಿವೇಶ ಸೃಷ್ಟಿಯಾದದ್ದೇ ಆದರೆ, ಭವಿಷ್ಯದಲ್ಲಿಯೇ ಇರಬಹುದು ಅಥವ ಪ್ರಸ್ತುತದಲ್ಲಿಯೇ ಇರಬಹುದು, ಖಂಡಿತವಾಗಿಯೂ ಇಡೀ ಕಾರ್ಯಯೋಜನೆಯ ಹಿಂದೆ ಮನುಷ್ಯನ ಪ್ರಜ್ಞೆ ತೀವ್ರ ಆಸಕ್ತಿಯಿಂದ, ಅಜಾಗೃತಿಯಿಂದ ಮತ್ತು ಅಪ್ರಬುದ್ಧತೆಯಿಂದಲೇ ಕೆಲಸ ಮಾಡಿದೆ ಎನ್ನಬಹುದು.

ಸದ್ಯ ನಡೆಯುತ್ತಿರುವುದೂ ಇದೇ. ಜಗತ್ತು ಕೈಗಾರಿಕರಣ ಹಾಗೂ ಜಾಗತೀಕರಣಗಳಿಂದಾಗಿ ಮಾತ್ರ ಬೆಳವಣಿಗೆ ಕಾಣಬಹುದು ಎನ್ನುವುದು ನಮ್ಮ ನಂಬಿಕೆ. ಈ ನಂಬಿಕೆಯನ್ನನುಸರಿಸುತ್ತಲೇ ಜಗತ್ತಿನ ಅನೇಕ ದೇಶಗಳು ಪ್ರಸ್ತುತ ಕೈಗಾರಿಕರಣಕ್ಕೆ ಮುಂದಾಗುತ್ತಿವೆ. ಭಾರತ, ಅಮೇರಿಕ, ಚೀನಾ, ಜಪಾನ್ ಸೇರಿದಂತೆ, ಪ್ರಜ್ಞಾರಹಿತವಾಗಿ ಸಿದ್ದಪಡಿಸಿದ "ಇನ್ನೂ ಬೆಳೆದಿರದ ದೇಶಗಳ ಸಾಲು"ನಲ್ಲಿ ಇರದ ದೇಶಗಳೂ ಸಹ ಇದೇ ಕೈಗಾರಿಕರಣಕ್ಕಾಗಿ ಹಂಬಲಿಸುತ್ತಿವೆ. ಈ ಹಂಬಲದ ಹಿಂದೆ ಒಂದು ರೀತಿಯ ಮುಗ್ಧತೆ ಹಾಗೂ ಅಪ್ರಬುದ್ಧತೆ ಅಡಗಿರುವುದರಲ್ಲಿ ಮಾತ್ರ ಸಂದೇಹವಿಲ್ಲ. ಒಂದೇ ಒಂದು ಕ್ಷಣ ನಾವು ನಮ್ಮ ಮನಸ್ಸಿನ ಸುತ್ತಲೂ ಆವರಿಸಿದ ಆ ಮೂಢಸಮಾಜ ನಿರ್ಮಿತ ಭ್ರಮಾಪರದೆಯಿಂದ ಹೊರಬಂದು ಈಗ "ಬೆಳವಣಿಗೆಹೊಂದಿದ" ಎಂದು ಕರೆಸಿಕೊಳ್ಳುತ್ತಿರುವ ದೇಶಗಳಲ್ಲಿನ ವಾತಾವರಣದ ಕಡೆಗೆ ನೈಜ ಪ್ರಜ್ಞೆಯಿಂದ ಕಣ್ಣು ಹಾಯಿಸಿದರೆ ನಮಗೆ ಅರ್ಥವಾಗುತ್ತದೆ ಯಾವ ಕಲ್ಪನೆ ಮತ್ತು ಪ್ರಕ್ರಿಯೆಗಳೊಂದಿಗೆ ಅವು ಬೆಳೆಯುತ್ತಿರುವುದೆಂದು. 1820ರ ದಶಕದಲ್ಲಿ ಪರ್ಯಾಯ ಯೋಚನಾ ಪ್ರಕ್ರಿಯೆಯಲ್ಲಿ ಹುಟ್ಟಿಕೊಂಡ ಕೈಗಾರಿಕರಣ ಒಂದು ರೀತಿಯಲ್ಲಿ ಪ್ರಸ್ತುತ ಮತ್ತು ದೂರದೃಷ್ಟಿಯ ಅನುಕೂಲತೆಗಳನ್ನ ದೃಷ್ಟಿಯಲ್ಲಿಟ್ಟುಕೊಂಡಿತ್ತು ಹಾಗೂ ಆಗ ಸ್ಥಾಪಿಸಲ್ಪಟ್ಟ ಕೈಗಾರಿಕೆಗಳಲ್ಲಿ ಮತ್ತು ಕೈಗಾರಿಕೆ ಸ್ಥಾಪಿಸಿದವರಲ್ಲಿ ಒಂದು ರೀತಿಯ ನಿಸರ್ಗ-ರಕ್ಷಣೆಯ ಪ್ರಜ್ಞೆಯಿತ್ತು. ಅದೇ ಕಾರಣಕ್ಕಾಗಿ ಕೈಗಾರಿಕರಣದ ಆರಂಭದ ದಶಕದಲ್ಲಿ ಆಯಾ ದೇಶಗಳ ನಿರುದ್ಯೋಗಿಗಳಿಗೆ ಉದ್ಯೋಗವೂ ದೊರಕಿತಲ್ಲದೇ (ಪ್ರಸ್ತುತನುಕೂಲತೆ), ಅಲ್ಲಿಂದ ಸುಮಾರು ಎಂಟು ದಶಕಗಳವರೆಗೂ ನಿಸರ್ಗದ ಮೇಲೆ ಯಾವ ಕೆಟ್ಟ ಪರಿಣಾಮವೂ ಬೀರಲಿಲ್ಲ (ದೂರದೃಷ್ಟಿಯನುಕೂಲತೆ). ಆ ಕೈಗಾರಿಕರಣ ಜನರ ಬದುಕಿನ ಮೇಲೆ ಬದಲಾವಣೆಯ ಗಾಳಿ ಬೀಸಿತೆನೋ, ಆದರೆ ಅಪ್ಪಿತಪ್ಪಿಯೂ ನಿಸರ್ಗದ ಬದುಕಿನ ಮೇಲೆ ಯಾವುದೇ ರೀತಿಯ ಕೆಟ್ಟ ಪರಿಣಾಮ ಬೀರಲಿಲ್ಲ. ಈ ಪ್ರಕ್ರಿಯೆಯಲ್ಲಿ ಅದು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ನೈಸರ್ಗಿಕವಾಗಿಯೂ ಉತ್ತಮ ಪ್ರಜ್ಞೆ ತೋರ್ಪಡಿಸಿತು.

ಆದರೆ ಪ್ರಸ್ತುತ ಮನುಷ್ಯ ಪ್ರಜ್ಞೆಯೆನ್ನುವುದು ಐತಿಹಾಸಿಕ ಪ್ರಜ್ಞೆಯೊಂದಿಗೆ ಕಾರ್ಯನಿರ್ವಹಿಸುತ್ತಿಲ್ಲವೆನಿಸುತ್ತಿದೆ. ಐತಿಹಾಸಿಕ ಮತ್ತು ಪ್ರಸ್ತುತ ಪ್ರಜ್ಞೆಗಳೆರಡನ್ನು ಹೋಲಿಸಿ ಗಮನಿಸಿದರೆ ಬಹುಶಃ ಪ್ರಸ್ತುತ ಪ್ರಜ್ಞೆಯೆನ್ನುವುದು ಸಾಧ್ಯವಾದಷ್ಟೂ ಸಮಯದಿಂದ ಸಮಯಕ್ಕೆ ತನ್ನ ವೈಚಾರಿಕ ವ್ಯಾಪ್ತಿಯನ್ನ ಕಡಿಮೆಗೊಳಿಸುತ್ತಿದೆ. ಹುಟ್ಟಿಕೊಳ್ಳುತಿರುವ ಸಮಸ್ಯೆಗೆ ಪರಿಹಾರ ಹುಡುಕುವ ಭರದಲ್ಲಿ ಶಾಶ್ವತವಾದಂಥ ಇನ್ನೊಂದು ಸಮಸ್ಯೆಯನ್ನ ಸೃಷ್ಟಿ ಮಾಡುತ್ತಿದೆ. ಎಲ್ಲವನ್ನೂ ಎದುರಿಗಿಟ್ಟುಕೊಂಡು ನಿಷ್ಪಕ್ಷಪಾತವಾಗಿ ಪ್ರಬುದ್ಧ-ಪ್ರಜ್ಞೆಯೊಂದಿಗೆ ಮುಕ್ತವಾಗಿ ಚಿಂತನೆ ಮಾಡುವ ಬದಲು ತನ್ನ ಸುತ್ತಲೂ ಯಾವುದೋ ಒಂದು ಮೂಢ ನಂಬಿಕೆಯ ಪರಿಧಿಯನ್ನು ರಚಿಸಿಕೊಂಡು ತೀವ್ರ ಅಪ್ರಬುದ್ಧ-ಪ್ರಜ್ಞೆಯೊಂದಿಗೆ ಚಿಂತನೆ ಮಾಡುತ್ತಾ ಇಡೀ ಜಗತ್ತನ್ನೇ ಸಾಧ್ಯವಾದಷ್ಟು ಬೇಗನೆ ವಿನಾಶದತ್ತ ದೂಡುತ್ತಿದೆ. ತನಗೆನಿಸುವುದನ್ನೇ ಸರಿಯೆಂದು ನಂಬಿ ಅದೇ ನಂಬಿಕೆ ಸರಿಯೆಂದು ಇತರರಿಗೂ ನಂಬಿಸಿ, ಕೊನೆಗೆ ಇಡೀ ಬದುಕಿನ ನೈಜ ಪ್ರಜ್ಞೆಯನ್ನೇ ಹಾಳುಗೆಡವುತ್ತಿದೆ. ಇದೆಲ್ಲದರ ಪರಿಣಾಮ, ಅಂತ್ಯ. ಕೇವಲ ಮನುಷ್ಯನ ಅಂತ್ಯವಲ್ಲ. ಬದಲಿಗೆ, ಒಂದು ತೀವ್ರ ಪ್ರಬುದ್ಧ-ಪ್ರಜ್ಞೆಯ ಅಂತ್ಯ, ಒಂದು ಸ್ವತಂತ್ರ ಜೀವಿ-ಜನಾಂಗದ ಅಂತ್ಯ, ಒಂದು ಸಾಂಸ್ಕøತಿಕ ಜಗತ್ತಿನ ಅಂತ್ಯ ಹಾಗೂ ಒಂದು ಮೌನ-ನಿಸರ್ಗದ ಅಂತ್ಯ.  

ಒಂದು ವೇಳೆ ಇಂತಹ ಮಾರಕ ಅಂತ್ಯವನ್ನ ನಿರಿಕ್ಷಿಸಲೇಬಾರದೆನ್ನುವುದಾದರೆ ಮೊದಲು ಈ ಮನುಷ್ಯನ ಪ್ರಜ್ಞೆಯಲ್ಲಿ ಕೆಲವು ಬದಲಾವಣೆಗಳಾಗಬೇಕಾಗಿದೆ. ಮೊದಲನೆಯದಾಗಿ ಈಗ ಸಂಪೂರ್ಣ ಕಲ್ಮಶ ವಿಚಾರಗಳಿಂದ ಕೂಡಿದ ಆ ಪ್ರಜ್ಞೆಯಿಂದ ಹೊರಬರಬೇಕು. ಹುಟ್ಟುತ್ತಿರುವ ಸಮಸ್ಯೆಗೆ ಪರಿಹಾರ ಹುಡುಕುತ್ತ ಶಾಶ್ವತವಾದ ಮನುಷ್ಯ ಹಾಗೂ ಜಗತ್ತಿನ ಬದುಕಿಗೆ ಅದ್ಭುತ ಅನುಕೂಲತೆಯನ್ನು ಸೃಷ್ಟಿಸುವಲ್ಲಿ ಪ್ರಯತ್ನಿಸಬೇಕಿದೆ. 


                                                       

                                                         

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಪ್ರಸ್ತುತ ಮತ್ತು ಭವಿಷ್ಯ: ಶ್ರೀಮಂತ್ ರಾಜೇಶ್ವರಿ ಯನಗುಂಟಿ

  1. ಪ್ರಜ್ಞೆ ಮತ್ತು ಅನುಕೂಲತೆಯ ಅನೂನ್ಯ ಸಂಬಂದವನ್ನು ಹುಡುಕುತ್ತ ಹೊರಟಾಗ ಅವು ಬೆಳೆದ ರೀತಿ ಮತ್ತು ಅವುಗಳನ್ನು ಮೂಲಭೂತ ಸ್ವತ್ತಾಗಿ ಪರಿವರ್ತಿಸಿದ ವರ್ಗಗಳು ಕೇವಲ ಪಾಶ್ಚಾತ್ಯ ಚಿಂತನೆಗಳಲ್ಲದೆ ಭಾರತೀಯ ಚಿಂತನೆಗಳಲ್ಲು ಕಾಣಬಹುದು ಕಾರಣವಿಸ್ಟೆ ಈ ಪ್ರಾಚೀನವಾದ ಜಾಗತೀಕರಣದ ಪ್ರಕ್ರಿಯೆ ಮೂಲತಃ ಮಾನವನ ಚಲನೆಯಿಂದಲೆ ಪ್ರಾರಂಬವಾಗೊಂಡು ಹಲವು ರಾಜಕೀಯ ಆರ್ಥಿಕ ಸಾಂಸ್ಕೃತಿಕ ಪಲ್ಲಟಗಳಿಗೆ ಸಾಕ್ಷಿಯಾಗಿದೆ.ಈ ಮನುಷ್ಯನ ಪ್ರಜ್ಞೆ ಮತ್ತು ಅದರ ಅನುಕೂಲ ಸಾಮಗ್ರಿಗಳು ಭೌತಿಕ ಬೆಳವಣಿಗೆಯಲ್ಲಷ್ಟೆ ಅಲ್ಲದೇ ಧರ್ಮಗಳಲ್ಲಿ ಕೂಡ ಸಮ್ಮಿಳಿತವಾಗಿವೆ.ಭಾರತೀಯ ಚಿಂತನೆಯಲ್ಲಿ ಪ್ರಜ್ಞೆಯನ್ನುವದು ಬ್ರಾಹ್ಮಣ್ಯತ್ವದ ಅನುಕೂಲೆತೆಗೆ ಪೂರಕವಾಗಿದೆ ಹಾಗೆಯೇ ಐರೋಪ್ಯರಲ್ಲಿ ಇದು ಕ್ಯಾಥೊಲಿಕ್ ಸಂಪ್ರದಾಯಕ್ಕೆ ಸಹಾಯಕವಾಗಿದೆ. ಈ ಪ್ರಜ್ಞೆ ಕಾಲಾಂತರದಲ್ಲಿ ಯುರೋಪನಲ್ಲಾದ ರೆನೈಸನ್ಸನ ಸುಧಾರಣೆಗಳು ಮತ್ತು ವಿಜ್ನ್ಯಾನದ ಅವಿಷ್ಕಾರಗಳಿಂದ ಧರ್ಮ ಶ್ರೇಷ್ಠತೆಯ ಪರಂಪರೆಯಿಂದ ಬಂಡವಾಳಶಾಹಿತ್ವದ ಕಡೆ ಸ್ಥಾನಪಲ್ಲಟಗೊಳ್ಳುವ ಈ ಬೆಳವಣಿಗೆ,ಹೇಗೆ ಪ್ರಜ್ಞೆಯನ್ನು ಅವಕಾಶ ಮಾಡಿಕೊಳ್ಳುವ ಶಕ್ತಿಗಳು ಪ್ರಪಂಚದಲ್ಲಿ ನಿಸರ್ಗತವಾದ ಸುಸ್ಥಿರ ಅಭಿವೃದ್ದಿಯನ್ನು ಬಯಸದೆ ಸಧಾ ಒಪ್ಪಿತ ಸಂಪ್ರದಾಯ ಮತ್ತು ಬಂಡವಾಳಶಾಹಿತ್ವದ ಬುರ್ಶ್ವಾ ಪರಂಪರೆಯನ್ನು ಪೋಷಿಸುತ್ತಲೇ ಸಾಗುತ್ತಿವೆ.ಇಲ್ಲಿ ಧರ್ಮ ಮತ್ತು ಕೈಗಾರೀಕರಣ ಕೆಲವು ಸ್ಥಾಪಿತ ಹಿತಾಸಕ್ತಿಗಳ ಪ್ರಜ್ಞೆಯ ಫಲವಾಗಿ ಬೆಳೆದು ಬಂದ ಮತ್ತು ಬೆಳೆಯುತ್ತಿರುವ ಸಾಧನಗಳು.

Leave a Reply

Your email address will not be published. Required fields are marked *