ಸಣ್ಣವನಿದ್ದಾಗ ದೂರದರ್ಶನದಲ್ಲಿ ಬೆಳಗ್ಗೆ ಹತ್ತರಿಂದ ಹನ್ನೊಂದರವರೆಗೆ ಬರುತ್ತಿದ್ದ "ಗ್ಯಾನ್ ದರ್ಶನ್" ರಜಾವೇಳೆಯ ಅಚ್ಚುಮೆಚ್ಚಿನ ಕಾರ್ಯಕ್ರಮ ಆಗಿತ್ತು. ಅದರಲ್ಲಿ ಒಮ್ಮೆ ನೋಡಿದ್ದ ರದ್ದಿ ಪೇಪರ್ ಅಂತ ಎಸೆಯೋ ಬದಲು ನಾವು ಮನೆಯಲ್ಲೇ ಅದ್ನ ಹೇಗೆ ಪುನರ್ಬಳಕೆ ಮಾಡ್ಬೋದು, ರದ್ದಿ ಪೇಪರ್ಗಳನ್ನ ಹೇಗೆ ರೀಸೈಕಲ್ ಮಾಡ್ತಾರೆ ಅಂತ ತೋರ್ಸಿದ್ದರು. ವಿಜ್ಞಾನ, ಮುಂದುವರಿದ ಜನ ನಾವು ಅಂತ ರೀಚಾರ್ಚ್ ಕಾರ್ಡಿಂದ ಹಿಡ್ದು ಎಟಿಎಮ್ನಲ್ಲಿ ತೆಗ್ದ ಪ್ರತೀ ನೂರಕ್ಕೂ ಪಡ್ದ ಹರ್ದೆಸೆದ ಪೇಪರ್ನಿಂದ ಎಟಿಎಮ್ನಲ್ಲಿ ದಿನಾ ಬೀಳೋ ಕಸದ ರಾಶಿ, ಫ್ಯಾಷನ್ನಾಗಿರೋ ಪೇಪರ್ ವ್ಯರ್ಥ ಮಾಡೋ ಶೈಲಿಗಳು..! ನೆನಸ್ಕೊಳ್ಳೋಕೂ ಭಯ! ಹಾಗಾಗಿ ಇದ್ರ ಬಗ್ಗೇನೆ ಸ್ವಲ್ಪ ಭಿನ್ನವಾಗಿ ಯೋಚಿಸಬಾರ್ದೇಕೆ ಅಂತ ಅನುಸ್ತಿತ್ತು. ಕೆಲೋ ಸಲ ಸ್ವಲ್ಪ ಜಾಸ್ತಿ ಆಯ್ತಲ್ವಾ ಅನ್ಸಿದ್ರೂ ಯಾಕಾಗ್ಬಾದ್ರೂ ಅಂತ ಆಮೇಲೆ ಅನಿಸಿದ್ದೂ ಇದೆ. ಅಂತ ಕೆಲವನ್ನೇ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಕ್ರಿ.ಶ ೧೦೫ ರಲ್ಲಿ ಚೀನಿ ತ್ಸಾಯ್ ಲುನ್ ರಾಜರ ಕಾಲದಲ್ಲಿ ಪೇಪರನ್ನು ಕಂಡುಹಿಡಿದಿದ್ದಂತೆ. ಹತ್ತನೇ ಶತಮಾನದ ಹೊತ್ತಿಗೆ ಏಷ್ಯಾ ದಾಟಿ ಆಚೆಗೆ ಕಾಲಿಟ್ಟ ಪೇಪರ್ ಈಗ ಎಲ್ಲರ ಮನೆ ಮನಗಳಲ್ಲಿ ಕಾಲಿಟ್ಟಿದೆ. ಚೀನಿಯರು ಮೊದಲು ಬಿದಿರಿನಿಂದ ಪೇಪರ್ ತಯಾರಿಸುತ್ತಿದ್ದರಂತೆ. ಈಗ ಬೇರೆ ಬೇರೆ ಮರಗಳ, ರಾಸಾಯನಿಕಗಳ ಉಪಯೋಗವಾಗುತ್ತಿದೆ. ಪೇಪರುತ್ಪಾದನೆ ಮತ್ತು ಮತ್ತದರ ರಿಸೈಕ್ಲಿಂಗನ್ನೋದೆ ಈಗೊಂದು ದೊಡ್ಡ ಉದ್ಯಮ. ಒಂದು ಲೆಕ್ಕಾಚಾರದ ಪ್ರಕಾರ ಆಫೀಸ್ ಬಳಕೆಗೆ ಬಳಸೋ ಪ್ರತೀ ಟನ್ ಪೇಪರ್ಗೆ ೨೪, ನ್ಯೂಸ್ ಪ್ರಿಂಟ್ಗೆ ೧೨ ಮರಗಳ ಬಲಿಯಾಗುತ್ತೆ ! ಅದೆಂಗೆ ಅಂದ್ರಾ ? ಐನೂರು ಶೀಟ್ಗಳಿರೋ ಒಂದು ರೀಲ್ ಮಾಡೋಕೆ ಮರವೊಂದರ ೬% ಭಾಗ ಉಪಯೋಗ ಆಗುತ್ತೆ. ಒಂದು ಮರದಿಂದ ೮೩೩೩.೩ ರೀಲ್ಗಳಿರೋ ೧೬.೬೭ ರೀಲ್ ಮಾಡ್ಬೋದು.
ಒಂದು ಕಾರ್ಟನ್(೧೦ ರೀಲ್) ಮಾಡೋಕೆ ಒಂದು ಮರದ ೬೦% ಭಾಗ ಉಪಯೋಗ ಆಗುತ್ತೆ. ಒಂದು "ಪಾಲ್ಲೆಟ್" ಪೇಪರಲ್ಲಿ ೪೦ ರೀಲ್ಗಳು. ಅಂದ್ರೆ ಸುಮಾರು ೧ ಟನ್. ಅಂದ್ರೆ ನ್ಯೂಸ್ ಪ್ರಿಂಟಿನ ಟನ್ನೊಂದಕ್ಕೆ ೧೨ ಮರಗಳ ಬಲಿಯ ಲೆಕ್ಕ ಸಿಕ್ತಲ್ಲವೇ ? ! ಆಫೀಸ್ ಕಾಗದ, ಎಟಿಮ್ಗಳಲ್ಲಿ, ಪ್ರಿಂಟೌಟಿಗೆ ಬಳಸೋ ಕಾಗದಗಳೆಲ್ಲಾ ಉತ್ಕೃಷ್ಟ ಮಟ್ಟದವು. ಹಾಗಾಗಿ ಟನ್ನೊಂದಕ್ಕೆ ೨೪ ವೃಕ್ಷಗಳ ಬಲಿ !
ತಲೆ ಗಿರ್ರಂತಾ ? ಬನ್ನಿ ಒಂದ್ಲೋಟ ಕಾಫಿ ಹೀರೋಣ..
ಕಾಫೀ ಅಂದಾಕ್ಷಣ ಹಳೆ ಜಮಾನದವ್ರಿಗೆ ಬೈಟು ಕಾಫಿಯೋ, ಹೋಟೇಲ್ ಕಾಫಿಯೋ ನೆನ್ಪಾಗುತ್ತಿತ್ತು. ಚೆನ್ನಾಗಿಲ್ಲದ ಅರ್ಜೆಂಟಿನ ಕಾಫಿಗೆ ಬಸ್ಟಾಂಡ್ ಹೋಟೇಲ್ ಕಾಫಿ ಅಂತ್ಲೇ ಹೆಸ್ರು ! ಬಸ್ಸು ತಪ್ಪತ್ತೆನ್ನೋ ಗಡಿಬಿಡೀಲಿ ದುಡ್ಕೊಟ್ಟಿದ್ರೂ ಏನೂ ಮಾತಾಡೋ ಹಂಗಿಲ್ಲ, ಸಿಕ್ಕಿದ್ದೇ ಶಿವಾಯ 🙂 ಆ ಗೂಡಂಗಡಿ ಟೀಗಳು ಈಗ ಹಳ್ಳಿ, ಗ್ರಾಮಾಂತರಗಳಿಗೆ, ಮಧ್ಯಮ ವರ್ಗದವರಿಗೆ ಮಾತ್ರ ಸೀಮಿತವನ್ನೋ ಹಾಗೆ ಆಗಿದೆ! ಸ್ವಲ್ಪ ಸ್ಟೇಟಸ್ಸೆಂದರೆ ಅದಿದ್ಯಲ್ಲ, ಅದೇ ಡೇ.. ಅದೇ. ಎಲ್ಲೆಡೆ ಪೇಪರ್ ಕಪ್ಪುಗಳದ್ದೇ ಕತೆ. ಪ್ಲಾಸ್ಟಿಕ್ಕಿಂದ ಪರಿಸರ ಮಾಲಿನ್ಯ. ಸರಿ ಹಾಗಂತ..
ಸರಿ ಬಿಡಿ ಕಾಫಿ ಕುಡ್ದು ಜೇಬು ಖಾಲಿ ಆಯ್ತು ಅಂದ್ರಾ ? ಬರ್ರಿ ಎಟಿಮ್ಗೆ ಹೋಗೋಣ. ಅಂದಂಗೆ ಯಾವ್ ಬ್ಯಾಂಕು ? ..
ಒಂದು ಬ್ಯಾಂಕು. ಐದು ಸಾವಿರಕ್ಕಿಂತಲೂ ಹೆಚ್ಚಿನ ಎಟಿಮ್ ಗಳಿವೆಯೆಂದು ಅದರ ಹೆಮ್ಮೆ. ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ನೀವೆಲ್ಲೇ ಹೋದರೂ ನಮ್ಮ ಎಟಿಮ್ ಸಿಗುತ್ತೆಂದು ಮತ್ತೊಂದರ ಪ್ರಚಾರ. ಜನರ ಬಳಿ ಹೆಚ್ಚಿದ ಜಣಜಣದ ಜೊತೆಗೇ ಬೆಳೆಯುತ್ತಿರೋ ತಂತ್ರಜ್ಞಾನದ ಜೊತೆಗೆ ಹೆಜ್ಜೆಹಾಕೋಕೆ ಮಾರು ಮಾರಿಗೊಂದರಂತೆ ಎಟಿಮ್ ಗಳು. ಬ್ಯಾಂಕಲ್ಲಿ ಕ್ಯೂ ನಿಂತು ದುಡ್ಡು ಪಡೆಯುವ ಸಮಯವಿಲ್ಲದ ಯುವಕರಿಂದ ಮುದುಕರವರಿಗೂ ಈ ಎಟಿಮ್ಗಳು ಈಗ ಸಮಯ ಉಳಿಸೋ ಸಾಧನವೇ. ಸಮಯದ ಜೊತೆಗೆ ಪ್ರತೀ ಬಾರಿ ದುಡ್ಡು ತೆಗೆಯೋಕೆ ಅಂತ ಬರೀತೀದ್ದ ಚಲನ್ಗಳ ರೂಪದಲ್ಲಿ ಪೋಲಾಗುತ್ತಿದ್ದ ಪೇಪರ್ ಕೂಡ ಈಗ ಉಳೀತಿದೆ ಅಂತ ಪರಿಸರ ಪ್ರೇಮಿ ಖುಷಿ ಎಟಿಮ್ ಬಗ್ಗೆ ಖುಷಿ ಪಟ್ಟಿದ್ರೂ ಪಟ್ಟಿರಬಹುದು. ಆದರೆ ಈಗ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ. ಸಾವಿರ ಸಾವಿರ ಸಂಖ್ಯೆಯಲ್ಲಿರೋ ಈ ಎಟಿಮ್ಗಳಿಗೆ ದಿನಕ್ಕೆ ಕನಿಷ್ಟ ಹತ್ತು ಜನ ಬರುತ್ತಾರಂದುಕೊಂಡರೂ ಭಾರತದಲ್ಲೇ ಮಿನಿಮಮ್ ಒಂದು ಲಕ್ಷ ಜನರ ಎಟಿಮ್ ಭೇಟಿ ! (ಇದು ಕನಿಷ್ಟ ಲೆಕ್ಕಾಚಾರವಷ್ಟೇ !)
ಪ್ರತೀ ಭಾರಿ ದುಡ್ಡು ಪಡೆದ ತಕ್ಷಣವೂ "ಮುದ್ರಿತ ಆದೇಶ ಬೇಕಾ?"(written statement) ಎಂಬ ಆಯ್ಕೆ ಬರುತ್ತದೆ. ಎಲ್ಲಾ ಹೂಂ ಅನ್ನುವವರೇ. ಬಂದ ಮೇಲೆ ಕ್ಷಣದಲ್ಲೇ ಅದನ್ನ ಅಲ್ಲೇ ಹರಿದೆಸೆಯೋದು ದುಡ್ಡು ಪಡೆದಷ್ಟೇ ಕಾಮನ್ನು ! ತಿಂಗಳಿಗೆ ಮೂರ್ನಾಲ್ಕು ಬಾರಿಯಾದರೂ ದುಡ್ಡು ತೆಗೆಯೋ ಜನಕ್ಕೆ ತಮ್ಮ ಅಕೌಂಟಲ್ಲಿ ದುಡ್ಡೆಷ್ಟಿದೆ ಅಂತ ಗೊತ್ತಿದ್ದೇ ಇರುತ್ತೆ. ಆದ್ರೂ ನಾವೀತರ ಪೇಪರ್ ವೇಸ್ಟ್ ಮಾಡ್ಬೇಕೇ ? ಎಟಿಮ್ನಲ್ಲೇ ದುಡ್ಡೆಷ್ಟಿದೆ ಅಂತಲೂ ನೋಡ್ಬಹುದು(View Balance) ತೀರಾ ಅಗತ್ಯವಿದ್ದಾಗ ಕೊನೆಯ ಆರು ಹಿಂತೆಗೆತಗಳ(transaction) ಮಾಹಿತಿಯುಳ್ಳ ಮಿನಿ ಸ್ಟೇಟ್ಮೆಂಟು ಪಡೆಯಬಹುದು. ಇದ್ನೆಲ್ಲಾ ಹೇಳೋಕೋದ್ರೆ ತೀರಾ ಹಾಸ್ಯಾಸ್ಪದ ಅನ್ನಿಸ್ಬೋದು. ಆದ್ರೆ ಎಲ್ಲಾ ಗೊತ್ತಿರೋ ನಾವೇ ಬುದ್ದಿಮಂಕರಾಗಿ ಹೀಗೆ ಟನ್ಗಟ್ಟಲೇ ಪೇಪರ್ ವ್ಯರ್ಥ ಮಾಡೋದೆ ….? ಅಯ್ಯೋ… ಥೋ.. ಯಾವ್ದೋ ಮಿಸ್ ಕಾಲು.. ಕಾಲ್ ಮಾಡ್ತೀನಿ ತಡೀರಿ ಒಂದ್ನಿಮಿಷ…
ಕಾಲ್ ಹೋಗ್ತಿಲ್ಲ.. ಓ, ಕರೆನ್ಸಿ ಖಾಲಿ ಆಯ್ತಾ.. ಇಲ್ಲೇ ಪಕ್ಕದಲ್ಲಿರೋ ಮೊಬೈಲಂಗ್ಡಿ ಹೊಕ್ರಾಯ್ತು.. ರೀ, ಒಂದ್ ರೀಚಾರ್ಚ್ ಕಾರ್ಡ್ ಕೊಡ್ರಿ.. ಇಲ್ನೋಡಿ ಮತ್ತೆ ಪೇಪರ್ ! ಅಯ್ಯೋ ಬೇಡ್ರಿ, ಮೊಬೈಲಲ್ಲೇ ರೀಚಾರ್ಜ್ ಮಾಡಿ. ನನ್ನೊಬ್ನ ಕರೆನ್ಸಿ ಕಾರ್ಡಿಂದ ಏನೂ ಆಗಲ್ಲ.. ಆದ್ರೂ ಹನಿ ಹನಿಗೂಡಿದ್ರೆ ಹಳ್ಳ 🙂
ಹನಿ(honey) ಹನಿ ನೆನಪು, ಸವಿ ಸವಿ ನೆನಪು.. ಅನ್ನೋ ತರ ನನ್ನ ಪ್ರಶಿಕ್ಷಣ(Training) ಸಮಯದ ಗೆಳೆಯನೊಬ್ಬನಿದ್ದ. ಅವ "ಪೇಪರ್" ಗೆ "ಪ್ಯಾಪರ್" ಅಂತ್ಲೇ ಕರೀತಿದ್ದ ಯಾವಾಗ್ಲೂ 🙂
ಪ್ರತೀ ಸಲ ಪ್ಯಾಪರ್ ಅಂದಾಗ್ಲೂ ಸಿಕ್ಕಾಪಟ್ಟೆ ನಗು.. ಈಗ್ಲೂ ಯಾರಾದ್ರೂ ಪ್ಯಾಪರ್ ಅಂದ್ರೆ ಅವ್ನೇ ನೆನ್ಪಾಗೋದು 🙂 ಪೇಪರ್ಬಗ್ಗೆ ಹೇಳ್ತಾ ಹೋದ್ರೆ ನೂರಾರು ನೆನ್ಪುಗಳು. ಕತೆಗಳು..
ಓ, ಆಗ್ಲೇ ಮನೆಗೋಗೋ ಬಸ್ಸು ಬಂತು ಅಂದ್ರಾ ? ಹೂಂ. ದಿನಾ ಬಸ್ಸಲ್ಲೇ ಹೋಗುವವ ಮೂರ್ನಾಲ್ಕು ಟಿಕೇಟ್ ತಗೊಳೋ ಬದ್ಲು ತಗೋಳೋ ತಿಂಗಳ ಪಾಸು ಪರ್ಸಿಂದಷ್ಟೇ ಅಲ್ಲ ಪರಿಸರದ ದೃಷ್ಟಿ ಇಂದ್ಲೂ ಒಳ್ಳೇದು 🙂
ಅಯ್ಯೋ ಬಿಡ್ರಿ, ಏನ್ ಮಾಡೋದು ? ತಿಂದ್ರೆ ಪೇಪರ್, ಬೆವರಿದ್ರೆ ಪೇಪರ್, ಕೂತ್ರೆ ಪೇಪರ್, ಹಾಸಕ್ಕೆ ಪೇಪರ್.. ಹೀಗೆ ಪೇಪರಿಲ್ಲದ ದುನಿಯಾ ಉಂಟೆ ಅಂತೀರಾ ? ಖಂಡಿತಾ ಇಲ್ಲ ಸ್ವಾಮಿ. ಪೇಪರಿಲ್ಲದ ದುನಿಯಾದ ಕಲ್ಪನೆ ಸದ್ಯಕ್ಕಂತೂ ಕಷ್ಟ. ಸಾವಿರ ವರ್ಷವಾದರೂ ಹಿಂದೆ ಹೋಗ್ಬೇಕಾಗ್ಬೋದು ಅಂತದೊಂದು ದುನಿಯಾದಲ್ಲಿರೋಕೆ. ಈ ಸಮಸ್ಯೆಗೆ ಪರಿಹಾರವೇ ಇಲ್ಲವಾ ಅಂದ್ರೆ ಒಂದು ಪರಿಹಾರ ಇದೆ. ಅದೆಂದ್ರೆ ಪೇಪರನ್ನು ರೀಸೈಕಲ್ಲ್ ಮಾಡೋದು. ಆದ್ರೆ ೧೦೦% ರೀಸೈಕಲ್ ಮಾಡೋಕಾಗಲ್ಲ. ಬಳಸಿದ ಪೇಪರ್ನಲ್ಲಿ ೩೦-೫೦% ಅಷ್ಟೇ ಅಂತೆ ಪುನರ್ಬಳಕೆಗೆ ಸಿಗೋದು. ಅಂದರೆ ಮತ್ತೆ ವೇಸ್ಟೇ. ಎಲ್ಲಕ್ಕಿಂತ ಸುಲಭದ ಉಪಾಯ ಒಂದಿದೆ.. ಅದು ನಾವು !
ಹಿಂಗೇ ತರ್ಲೆ ಮಾಡೋ ಜನ ಯಾಕ್ಸಿಕ್ತಾರಪ್ಪಾ ಅಂತ ಬಯ್ಕಂಡು ನೀವು ನಿಮ್ಮನೆ ಬಸ್ ಹತ್ತೋ ಹೊತ್ಗೆ ಪೇಪರ್ ಪೇಪರ್ ಅಂತನ್ನೋ ಪೇಪರ್ಬಾಲ. ಬಳಸೋ ಪೇಪರ್ ವಿವೇಚನೆಯಿಂದ ಬಳಸಿ ಅಂತ ಆ ಪೇಪರೂ ಹೇಳ್ತಿತ್ತು…
(ಪಾತ್ರ, ಸನ್ನಿವೇಶ ಕಾಲ್ಪನಿಕವಾದರೂ ಮಾಹಿತಿಯಲ್ಲ ! ಎಲ್ಲಾದರೂ ಜಾಸ್ತಿಯೇ ತಲೆ ತಿಂದಿದ್ದರೆ ಕ್ಷಮಿಸಿ ಬಿಡಿ ಎಂಬ ವಿನಂತಿಯೊಂದಿಗೆ..)
ಮಾಹಿತಿ ಮೂಲಗಳು :
೧) http://conservatree.org/learn/EnviroIssues/TreeStats.shtml
೨)http://en.wikipedia.org/wiki/History_of_paper
good article about paper usage and misuse
ಕಾಗದದ ಅಗಾಧತೆಯ ದರ್ಶನವಿಲ್ಲಿದೆ.
ishta aaytu… arthapoorna