ಕ್ರೂರ ಪ್ರಪಂಚದಲ್ಲಿ ನಾವೂ, ಮಕ್ಕಳೂ:ವಾಸುಕಿ ರಾಘವನ್


ಕಳೆದ ಡಿಸೆಂಬರ್ ಅಲ್ಲಿ ನಡೆದ “ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ”ಕ್ಕೆ ಹೋಗಿದ್ದು ಒಂದು ಅದ್ಭುತ ಅನುಭವ. ಒಂದು ಚಿತ್ರ ನೋಡಿ ಬಂದು, ಇನ್ನೊಂದು ಚಿತ್ರಕ್ಕೆ ಕ್ಯೂನಲ್ಲಿ ನಿಂತುಕೊಳ್ಳೋದು, ನಿಂತಲ್ಲೇ ಒಂದು ಸ್ಯಾಂಡ್ವಿಚ್ಚೋ ವ್ರಾಪೋ ಗಬಗಬ ತಿನ್ನೋದು. ಬೇರೆಯವರಿಗೆ ಹುಚ್ಚಾಟ ಅನ್ನಿಸಬಹುದಾದ ಈ ವರ್ತನೆ ಚಿತ್ರಪ್ರೇಮಿಗಳಿಗೆ ಸರ್ವೇಸಾಮಾನ್ಯ ಆಗಿತ್ತು. ಗೆಳೆಯ ಪವನ್ ಕುಂಚ್ ಜೊತೆ ಎರಡು ದಿನದಲ್ಲಿ ಎಂಟು ಚಿತ್ರ ನೋಡಿದ್ದು ಮರೆಯಲಾಗದ ನೆನಪು! 
 
ಶನಿವಾರ ಸಂಜೆ ಸಿನಿಮಾ ಹಾಲಲ್ಲಿ ಕೂರುವ ಹೊತ್ತಿಗೆ ಏನೋ ಒಂಥರಾ ಸುಸ್ತು. “ಫಿಲಂ ಕೆಟ್ಟದಾಗಿಲ್ದೇದ್ರೆ ಸಾಕಪ್ಪ” ಅಂತಿತ್ತು ನಿದ್ದೆಗೆ ಜಾರುತ್ತಿದ್ದ ಮನಸ್ಸು. ಆದರೆ ಆ ಚಿತ್ರ ಶುರು ಆದ ಐದು ನಿಮಿಷದಲ್ಲೇ ನಿದ್ದೆಯೆಲ್ಲ ಮಾಯವಾಗಿ ಫುಲ್ ಫ್ರೆಶ್ ಆಗಿ ಕೂತಿದ್ದೆ. ಒಂದೆರಡು ಸಲ “ಪ್ಚ್, ಆಹಾ” ಅಂತ ಹೇಳಿದ್ನೋ ಏನೋ. ಪವನ್ “ನಿಮಗೆ ಈ ಪಿಕ್ಚರ್ ಗ್ಯಾರಂಟಿ ಇಷ್ಟ ಆಗುತ್ತೆ ಬಿಡಿ” ಅಂತ ಹೇಳೇ ಬಿಟ್ರು. ಅವರ ಊಹೆ ಅಕ್ಷರಶಃ ನಿಜ ಆಯ್ತು. ನನಗೆ ಈ ಫಿಲಂ ಎಷ್ಟು ಇಷ್ಟ ಆಯ್ತು ಅಂದ್ರೆ ಮುಗಿಯುತ್ತಿದ್ದಂಗೇ ಎದ್ದು ನಿಂತು ಜೋರಾಗಿ ಚಪ್ಪಾಳೆ ಹೊಡೆದೆ. ಕಣ್ಣಲ್ಲಿ ಸಣ್ಣಗೆ ನೀರಿತ್ತು, ಮನಸ್ಸು ಭಾರ – ಬೌದ್ಧಿಕವಾಗಿ, ಭಾವನಾತ್ಮಕವಾಗಿ, ಕಲಾತ್ಮಕವಾಗಿ ಆ ಚಿತ್ರ ನನ್ನನ್ನು ಆವರಿಸಿಕೊಂಡುಬಿಟ್ಟಿತ್ತು! ಅದೇ “ಇನ್ ಅ ಬೆಟರ್ ವರ್ಲ್ಡ್”. 
 
2010ರಲ್ಲಿ ತೆರೆಕಂಡ ಈ ಡ್ಯಾನಿಷ್ ಚಿತ್ರದ ನಿರ್ದೇಶಕಿ ಸುಸನ್ನೆ ಬಿಯೆರ್. ಆರಂಭದಲ್ಲೇ ರಮಣೀಯವಾದ ಪ್ರಕೃತಿಯ ದೃಶ್ಯಗಳು ತೆರೆಯನ್ನು ಆವರಿಸಿಕೊಳ್ಳುತ್ತವೆ. ತಕ್ಷಣ ಕೆಂಧೂಳನ್ನು ಎಬ್ಬಿಸಿಕೊಂಡು ವೇಗವಾಗಿ ಹೋಗುತ್ತಿರುವ ಒಂದು ಜೀಪ್. ಅದೊಂದು ಸೂಡಾನಿಗಳ ನಿರಾಶ್ರಿತರ ಶಿಬಿರ. ಜೀಪ್ ಅಲ್ಲಿ ಕೂತಿರುವವನು ಆಂಟಾನ್ ಅನ್ನೋ ಡಾಕ್ಟರ್. ಜೀಪ್ ಹಿಂದೆ ಓಡಿ ಬರ್ತಿರೋ ನಿಷ್ಕಲ್ಮಶ ನಗೆಯ ಹತ್ತಾರು ಸೂಡಾನಿ ಬಡಮಕ್ಕಳು. ತಟಸ್ಥವಾದ ನೀಲಿ ಆಕಾಶ. ಪ್ರಕೃತಿಯ ಸೊಬಗು ಮತ್ತು ಮನುಷ್ಯನ ದಾರುಣ ಪರಿಸ್ಥಿತಿಯ ನಡುವಿನ ರೋಲರ್ ಕೋಸ್ಟರ್ ರೈಡ್!
 
ಆಂಟಾನ್ ಹಾಗು ಮಾರಿಯೇನ್ ದಾಂಪತ್ಯ ಇನ್ನೇನು ಮುರಿದು ಬೀಳುವ ಹಂತದಲ್ಲಿದೆ. ಮಗ ಎಲಯಾಸ್, ಸ್ವಲ್ಪ ಮೃದು ಸ್ವಭಾವ, ಸಂಕೋಚ ಪ್ರವೃತ್ತಿ. ಶಾಲೆಯಲ್ಲಿ ಪುಂಡ ಹುಡುಗರು ಇವನನ್ನು ಅಡ್ಡಹಾಕಿ ಕೀಟಲೆ ಮಾಡೋದು, ಸೈಕಲ್ ಟೈರ್ ಗಾಳಿ ಬಿಟ್ಟುಬಿಡೋದು ಹೀಗೆ ತೊಂದರೆ ಕೊಡ್ತಿರ್ತಾರೆ. ಅದೇ ಸಮಯದಲ್ಲಿ ಕ್ರಿಶ್ಚಿಯನ್ ಅನ್ನೋ ಹುಡುಗ ಎಲಯಾಸ್ ಶಾಲೆಗೆ ಸೇರುತ್ತಾನೆ. ತುಂಬಾ ಚುರುಕುಬುದ್ಧಿಯ ಕ್ರಿಶ್ಚಿಯನ್ ಗೆ ವಯಸ್ಸಿಗೆ ಮೀರಿದ ಭಂಡತನ, ಧೈರ್ಯ. “ಅಪಮಾನವ ಮರೆಯೋಲ್ಲ, ಅನ್ಯಾಯವ ಸಹಿಸೋಲ್ಲ” ಅನ್ನೋದ್ರಲ್ಲಿ ನಾಗರಹಾವಿನ ರಾಮಾಚಾರಿಗಿಂತ ಒಂದು ಕೈ ಮೇಲೆ! ಒಮ್ಮೆ ಎಲಯಾಸ್ ಅನ್ನು ಗೋಳುಹೊಯ್ಕೊಳ್ಳೋ ಹುಡುಗರಿಗೆ ಚನ್ನಾಗಿ ತದುಕಿ, ಚಾಕು ತೋರಿಸಿ ಬೆದರಿಸಿದ ಮೇಲೆ, ಎಲಯಾಸ್ ಕ್ರಿಶ್ಚಿಯನ್ ತುಂಬಾ ಹತ್ತಿರದ ಗೆಳೆಯರಾಗುತ್ತಾರೆ. 
 
ಒಮ್ಮೆ ಎಲಯಾಸ್ ಇನ್ನೊಬ್ಬ ಹುಡುಗನ ಜೊತೆ ಜಗಳದಲ್ಲಿ ತೊಡಗಿದ್ದಾಗ ಆಂಟಾನ್ ಬಂದು ಬಿಡಿಸುತ್ತಾನೆ. ತನ್ನ ಮಗನ ಮೇಲೆ ಕೈ ಮಾಡಿದ ಅಂತ ಅಪಾರ್ಥ ಮಾಡ್ಕೊಳ್ಳೋ ಆ ಹುಡುಗನ ಅಪ್ಪ ಆಂಟಾನ್ ಗೆ ಕಪಾಳಕ್ಕೆ ಹೊಡಿತಾನೆ. ಇದನ್ನು ನೋಡಿದ ಎಲಯಾಸ್ ತುಂಬಾ ನೊಂದುಕೊಳ್ಳುತ್ತಾನೆ. ಕ್ರಿಶ್ಚಿಯನ್ ನಾವು ಸುಮ್ಮಿನಿರಬಾರದಿತ್ತು, ನಾವು ಹೋಗಿ ಅವನಿಗೆ ತಿರುಗಿಸಿ ಹೊಡಿಬೇಕು ಅಂದಾಗ, ಆಂಟಾನ್ ಅವರನ್ನು ಗದರಿಸುತ್ತಾನೆ. ಹಿಂಸೆಗೆ ಹಿಂಸೆಯೇ ಮದ್ದಲ್ಲ, ಇಂತಹ ಬುದ್ಧಿಗೇಡಿಗಳು ಬೇಕಾದಷ್ಟು ಜನ, ಅವರಿಗೆಲ್ಲ ಪ್ರತಿಕ್ರಿಯಿಸಬಾರದು ಅಂತ ಬುದ್ಧಿ ಹೇಳುತ್ತಾನೆ. ತಾನು ಸುಮ್ಮನಿದ್ದಿದ್ದು ಹೇಡಿತನದಿಂದ ಅಲ್ಲ ಅಂತ ಪ್ರೂವ್ ಮಾಡಲು ಆ ಹುಡುಗನ ಅಪ್ಪನ ಬಳಿ ಮತ್ತೆ ಹೋಗ್ತಾನೆ. ಆ ಹುಡುಗನ ಅಪ್ಪ ಮತ್ತೆ ಆಂಟಾನ್ ಗೆ ಕಪಾಳಕ್ಕೆ ಬಿಗಿಯುತ್ತಾನೆ, ಆದರೂ ಆಂಟಾನ್ ವಿಚಲಿತನಾಗಲ್ಲ. ಹೇಗೆ ಇನ್ನೊಬ್ಬರ ಹಿಂಸಾಪ್ರವೃತ್ತಿ ತನ್ನನ್ನ ಬಾಧಿಸಲಿಲ್ಲ ಅನ್ನೋದನ್ನ ನಿರೂಪಿಸಿದೆ ಅಂದುಕೊಳ್ತಾನೆ. ಆದರೆ ಕ್ರಿಶ್ಚಿಯನ್ ನಿಮ್ಮಪ್ಪನಿಗೆ ಎರಡೆರಡು ಸಲ ಅವಮಾನ ಆಯಿತು, ಇದಕ್ಕೆ ಹೇಗಾದರೂ ಪ್ರತೀಕಾರ ತೀರಿಸಿಕೊಳ್ಳಲು ಕಪಾಳಕ್ಕೆ ಹೊಡೆದವನ ಕಾರ್ ಅನ್ನು ಬಾಂಬ್ ಇಂದ ಉಡಾಯಿಸಿಬಿಡೋದಕ್ಕೆ ಎಲಯಾಸ್ ಅನ್ನು  ಒಪ್ಪಿಸಿಯೇಬಿಡ್ತಾನೆ. 
 
ಇತ್ತ ಆಂಟಾನ್ ಕೆಲಸ ಮಾಡೋ ನಿರಾಶ್ರಿತರ ಶಿಬಿರದಲ್ಲಿ ಬಹುತೇಕ ಪೇಷಂಟ್ಸ್  ಹೆಂಗಸರೇ. ಅವರಲ್ಲಿ ಹೆಚ್ಚಿನವರು ಅವರ ಊರಿನ ಪುಂಡ ನಾಯಕನ ಕ್ರೌರ್ಯಕ್ಕೆ, ದೈಹಿಕ ಹಲ್ಲೆಗೆ ಒಳಗಾಗಿರೋರು. ಒಂದು ಸಲ ಅ ಪುಂಡ ನಾಯಕನೇ ಶುಶ್ರೂಷೆಗಾಗಿ ಇವನ ಬಳಿ ಬರುತ್ತಾನೆ. ಇಲ್ಲಿ ಇರಬೇಕಾದರೆ ಗನ್ ಹಿಡಿದಿರೋ ಅಂಗರಕ್ಷಕರನ್ನು ಕರೆತರುವಂತಿಲ್ಲ ಅಂತ ಆಂಟಾನ್ ತಾಕೀತು ಮಾಡ್ತಾನೆ. ಅಲ್ಲಿರೋ ಬೇರೆ ಪೇಷಂಟ್ಸ್ ಗೆ ಇವನನ್ನು ಕೊಂದು ಹಾಕೋ ಅಷ್ಟು ಕೋಪ. ಆಂಟಾನ್ ಗೆ ಅವನು ಕೇವಲ ಒಬ್ಬ ಪೇಷಂಟ್ ಮಾತ್ರ, ಹಾಗಾಗಿ ಅವನ ಮೇಲೆ ಹಲ್ಲೆ ಮಾಡಲು ಬಿಡೋದಿಲ್ಲ. ಆದರೆ ಒಮ್ಮೆ ತನ್ನಿಂದಲೇ ಹಿಂಸೆಗೊಳಗಾದ ಹೆಣ್ಣೊಬ್ಬಳು ಸಾಯುತ್ತಿರಬೇಕಾದರೆ ಅವಳ ಪರಿಸ್ಥಿತಿಯ ಬಗ್ಗೆ ತುಚ್ಛವಾಗಿ ಮಾತಾಡುತ್ತಾನೆ ಆ ಪುಂಡ ನಾಯಕ. ಆಗ ಆಂಟಾನ್ ತಾಳ್ಮೆ ಕಳೆದುಕೊಳ್ಳೋ ಹಾಗೆ ಆಗುತ್ತೆ. 
 
ಚಿತ್ರದಲ್ಲಿ ಬಹಳಷ್ಟು ಥೀಮ್ ಗಳನ್ನ ಹದವಾಗಿ ಕಥೆಯ ನಿರೂಪಣೆಯ ಭಾಗವಾಗಿ ಹೆಣೆಯಲಾಗಿದೆ. ಇಂದಿನ ಕ್ರೂರ ಪ್ರಪಂಚದಲ್ಲಿ ನಾವು ಅಹಿಂಸೆಯಿಂದ ಬಾಳಲು ಇರೋ ಸಂಕಷ್ಟಗಳು, ಹದಿಹರೆಯದಲ್ಲಿ ಇರುವ ಕನ್ಫ್ಯೂಷನ್ಸ್, ಸುಲಭವಾಗಿ ಪ್ರಭಾವಕ್ಕೊಳಗಾಗೋ ಅಪಕ್ವ ಮನಸ್ಸು, ಗಂಡ ಹೆಂಡಿರ ನಡುವಿನ ಬಿರುಕಿನಿಂದ ಮಕ್ಕಳ ಮೇಲೆ ಆಗೋ ಪರಿಣಾಮ – ಹೀಗೆ ಹತ್ತು ಹಲವಾರು. ಇನ್ಯಾವ ಕಾರಣಕ್ಕೆ ಅಲ್ಲದಿದ್ರೂ ಕ್ರಿಶ್ಚಿಯನ್ ಪಾತ್ರ ಮಾಡಿರೋ ಆ ಹುಡುಗನ ಅಭಿನಯಕ್ಕಾದ್ರೂ ಈ ಚಿತ್ರವನ್ನ ಒಂದ್ ಸಲ ನೋಡಿಬಿಡಿ!
 
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
gaviswamy
10 years ago

ಚಿತ್ರ ವಿಮರ್ಶೆ ಚೆನ್ನಾಗಿದೆ . ಆಂಟಾನ್ ನ ಮಾನವೀಯ ಗುಣ ಇಷ್ಟವಾಗುತ್ತದೆ. ಕ್ರಿಶ್ಚಿಯನ್ ಹುಂಬನಾದರೂ ನಿಷ್ಕಪಟಿ.
ಲಂಕೇಶರ ‘ಗುಣಮುಖ’ ನಾಟಕ ನೆನಪಾಯಿತು . ಅಲ್ಲಿ ಬರುವ ಚಕ್ರವರ್ತಿ ನಾದಿರ್ ಶಾ ನನ್ನು ವೈದ್ಯನೊಬ್ಬ ಸಾಮಾನ್ಯ ರೋಗಿಯಂತೆ treat ಮಾಡುತ್ತಾನೆ. ಪರಮ ದುರಹಂಕಾರಿ ನಾದಿರನನ್ನು ತನ್ನ ಸದ್ಗುಣ ಮತ್ತು ಸರಳತೆಯಿಂದ ಮಣಿಸುತ್ತಾನೆ ವೈದ್ಯ .

ಈ ಚಿತ್ರವನ್ನು ನೋಡುವ ಕುತೂಹಲವುಂಟಾಗಿದೆ. thanks

Vasuki
10 years ago
Reply to  gaviswamy

ಲೇಖನ ಇಷ್ಟವಾಯಿತೆಂದು ತಿಳಿದು ಖುಷಿಯಾಯ್ತು. ಚಿತ್ರ ನೋಡಿ, ನಿಮಗೆ ಇಷ್ಟವಾಗುತ್ತದೆ ಅಂತ ನನ್ನ ಅನಿಸಿಕೆ.

ಕೆ.ಎಂ.ವಿಶ್ವನಾಥ

ಚೆನ್ನಾಗಿದೆ ಬಾಸ್ 

3
0
Would love your thoughts, please comment.x
()
x