ಪ್ರಶಸ್ತಿ ಅಂಕಣ

ಪ್ರಶಸ್ತಿ ಬರೆವ ಅಂಕಣ: ಪತ್ರಿಕಾ ಸಾಹಿತ್ಯ ಮತ್ತು ನಾವು

 

ಹಿಂಗೇ ಸುಮ್ನೆ ಬರ್ಯೋ ಹವ್ಯಾಸದ ಒಬ್ಬ. ಬರಹಗಾರ, ಸಾಹಿತಿ ಅಂತ ಖ್ಯಾತಿ ಪಡೋದೊದ್ರೂ ಚನಾಗ್ ಬರಿತೀಯ ಕಣಲೇ ಅಂತ ತನ್ನ ಗೆಳೆಯರತ್ರ ಅನೇಕ ಸಲ ಶಬಾಷ್ಗಿರಿ ಪಡೆದವ. ಪೇಪರಲ್ಲಿ ಬರೋ ಬಣ್ಣಬಣ್ಣದ ಲೇಖನಗಳ್ನ ದಿನಾ ಓದೋ ಆ ಹುಡುಗನಿಗೆ  ತಾನೂ ಯಾಕೆ ಒಮ್ಮೆ ಪತ್ರಿಕೆಗೆ ಕಳಿಸ್ಬಾರ್ದು ಅನ್ನೋ ಭಾವ. ಪಕ್ಕದ್ಮನೆ ಹುಡ್ಗ ಯಾವಾಗ್ಲೂ ಹೊಡ್ಯೋ ಸೈಕಲ್ ನೋಡಿ ತಾನೂ ಒಮ್ಮೆ ಸೈಕಲ್ ಹೊಡಿಬೇಕು ಅಂತ ಮೂಡೋ ಭಾವದ ತರ.  ಸರಿ, ಲೇಖನದ ಕೆಳಗೆ ನಿಮ್ಮ ಲೇಖನಗಳನ್ನು ಈ ವಿಳಾಸಕ್ಕೆ ಕಳಿಸಿ ಅನ್ನೋ ಮಿಂಚೆ ವಿಳಾಸ ಇರತ್ತೆ(email id).  ಈತ ಇಷ್ಟಪಟ್ಟು, ಕಷ್ಟಪಟ್ಟು ಪತ್ರಿಕೆಗೆ ಅಂತನೇ ತನ್ನೆಲ್ಲಾ ಭಾವ ಸುರಿದು ಲೇಖನ ಕಳಿಸ್ತಾನೆ.. ಮುಂದೆ ? !! ಅದೇ ಒಂದು ದೊಡ್ಡ ಕತೆ !!!

“ಲಾಂದ್ರದ ಬೆಳಕು” ಅಂತ ಒಂದು ಪುಸ್ತಕ ಓದ್ತಾ ಇದ್ದೆ. ಅದ್ರ ಮುನ್ನುಡಿ ಓದಿ ಒಮ್ಮೆ ಮನಸ್ಸು ಒದ್ದಾಡ್ತು. ಎಷ್ಟೋ ಪೇಪರಿಗೆ ಕಳಿಸಿದ ಕತೆ ಅವ್ರ ಕಸದ ಬುಟ್ಟಿ ಸೇರುತ್ತೆ. ಹೀಗೆ ಹಲವಾರು ಪತ್ರಿಕೆಗಳಿಗೆ ಕಳಿಸಿ ಕಳಿಸಿ ಒಂದೂವರೆ ವರ್ಷ ಕಾದರೂ ಯಾವುದೇ ಪ್ರತಿಕ್ರಿಯೆ ಬರಲ್ಲ ! ಕೇಳಿದ್ರೆ, ನಿಮ್ಮ ಲೇಖನ ಬಂದೇ ಇಲ್ಲ ರೀ, ಇನ್ನೊಮ್ಮೆ ಕಳಿಸಿ, ನೋಡೋಣ ಅನ್ನೋ ಹಾರಿಕೆಯ ಉತ್ತರ. ಸರಿ, ಮತ್ತೊಮ್ಮೆ ಕಳಿಸೋದು. ಮತ್ತೆ ಅದೇ ಕತೆ. ಮತ್ತೆ ಕೇಳಿದರೆ ದಿನಾ ಸಾವಿರಾರು ಜನ ಬರೀತಾರೆ, ಯಾರ್ದು ಅಂತ ಪ್ರಕಟಿಸೋಣ ಅಂತಾರೆ.. ಹೀಗೆ ಒಂದೂವರೆ ವರ್ಷಗಳಿಂದ ಕಸದ ಬುಟ್ಟಿ ಸೇರಿದ ಕತೆಯೇ ಈ ಕಾದಂಬರಿ.. ಅಂತ ಮುಂದುವರಿದಿತ್ತು ಮುನ್ನುಡಿ. ಲಾಂದ್ರದ ಬೆಳಕಿಗೆ ಸಿಕ್ಕ ಪ್ರಕಟಣಾ ಭಾಗ್ಯ ಎಲ್ಲಾ ಲೇಖನಗಳಿಗೂ ದಕ್ಕೊಲ್ಲ. ಬೆಳಕೇ ಕಾಣದೆ ಕತ್ತಲಲ್ಲೇ ಕಮರಿ ಹೋದ ಲೇಖನ ಮತ್ತವುಗಳ ಕತೃಗಳೆಷ್ಟೊ.. ತಾಯಿಗೆ ತನ್ನ ಮಗು ಹೇಗೋ ಹಾಗೆಯೇ ಲೇಖಕನಿಗೆ ಆತನ ಲೇಖನ. ಎಲ್ಲೋ ಮನಸ್ಸಲ್ಲಿ ಮಿಂಚಿ ಮರೆಯಾದ ಎಳೆಯನ್ನೋ, ಕಳಕಳಿಯನ್ನೋ, ಕಂಡ ಹಾಸ್ಯವನ್ನೋ ಬೆಳೆಸಿ, ಅದಕ್ಕೊಂದು ಚಂದದ ರೂಪ ಕೊಟ್ಟು, ಅಂಗಿ ಚಡ್ಡಿ ತೊಡಿಸಿ , ಸಮಯದ ಪರಿವೆಯಿಲ್ಲದೇ ಒಂದು ಲೇಖನ ಅಂತ ಬರೆದಿರ್ತಾನೆ. ಈ ಅರ್ಜೆಂಟ್ ಜಮಾನಾದಲ್ಲೂ ಹೀಗೆ ಸಮಯ ಅಂತ ಮಾಡ್ಕೊಂಡಿದ್ದಲ್ಲದೇ ಬರೆದ ಲೇಖನವನ್ನು ಕೆಲವು ಪತ್ರಿಕೆಗಳ ಅವರೇ ಕೊಟ್ಟ ಮಿಂಚೆ ವಿಳಾಸಕ್ಕೆ ಕಳಿಸ್ತಾನೆ. ಆದ್ರೆ ಅದಕ್ಕೆ ಪ್ರತಿಕ್ರಿಯೆ? !!!  ಅದೂ ಒಂದು ದೊಡ್ಕತೆ 🙁

ಇಂಟರ್ನೆಟ್ಟಲ್ಲಿ, ಬ್ಲಾಗ್ ಲೋಕದಲ್ಲಿ ಮಿಂಚುತ್ತಿರೋ,ಮೂಡುತ್ತಿರೋ ನೂರೆಂಟು ಬರಹಗಾರರು, ಬರಹಗಾರ, ಸಾಹಿತಿ ಅನ್ನೋ ಪಟ್ಟವಿಲ್ಲದೆ, ಇವ್ಯಾವುದರ ಹಂಗಿಲ್ಲದೆ ತಮ್ಮ ಬುಕ್ನ ಕೊನೆಯ ಪೇಜಲ್ಲೋ, ತಮ್ಮ  ಫೇಸ್ಬುಕ್ ಸ್ಟೇಟಸ್ಸಲ್ಲೋ ಅವಾಗವಾಗ ಬರ್ಯೋ ಹಲವು ಎಲೆಮರೆ ಕಾಯಿಗಳು. ಪ್ರತೀ ಹಾಲಿವುಡ್ ನಟನಿಗೂ ಆಸ್ಕರ್ ಗೆಲ್ಲಬೇಕೆಂಬ ಆಸೆಯಿರುವಂತೆ ಇವರಲ್ಲನೇಕರಿಗೆ ಒಂದ್ಸಲವಾದರೂ ಪೇಪರಲ್ಲಿ ತಮ್ಮ ಲೇಖನ ಬರಬೇಕೆಂಬ ಆಸೆ. ಆದ್ರೆ ಆಸ್ಕರ್ ಬರ್ಬೇಕಂದ್ರೆ ಆಕ್ಟಿಂಗ್ ಚನ್ನಾಗಿರ್ಬೇಕು ಅಂತನ್ನೋದು ಬಿಟ್ಟು ನಿನಗೆ ಇಂತಾ ಡಿಗ್ರಿ ಇರ್ಬೇಕು, ಈಗಾಗ್ಲೇ ಒಂದು ಆಸ್ಕರ್ ಬಂದಿರ್ಬೇಕು ! , ಸದಾ ಸುದ್ದೀಲಿರ್ಬೇಕು !, ಬೇರೆ ಯಾವ್ದೋ ಒಂದು ಅವಾರ್ಡ್ ಬಂದಿರ್ಬೇಕು, ಈಗಾಗ್ಲೇ ಆಸ್ಕರ್ ಬಂದಿರೋನ ಶಿಫಾರಸ್ಸಿರ್ಬೇಕು ಅಂತೆಲ್ಲಾ ಮಾಡಿದ್ರೆ !!! ಪೇಪರಿಗೆ ಲೇಖನ ಕಳ್ಸೋ ಬಹುತೇಕರಿಗೆ ಇಂತಾ ಅಘೋಷಿತ ವಿಚಿತ್ರ ನಿಯಮಗಳ ಕಹಿ ಅನುಭವ ಆಗೇ ಆಗಿರುತ್ತೆ 🙁 ಸಮಯವೇ ಇಲ್ಲದ ಈ ಜಮಾನಾದಲ್ಲಿ ಶ್ರಮ ಹಾಕಿ ಬರೆದ ಲೇಖನವೊಂದಕ್ಕೆ “ನಿಮ್ಮ ಲೇಖನ ಪ್ರಕಟವಾಗೋದಿಲ್ಲ ಕ್ಷಮಿಸಿ” ಅಂತ ಕನಿಷ್ಟ ಪ್ರತಿಕ್ರಿಯೆಯನ್ನೂ ಹಾಕೋಕೆ ಆಗದ ಪತ್ರಿಕಾ ಪ್ರಭುಗಳಿಗೆ ಏನನ್ನಬೇಕು ?

ಪ್ರತೀ ದಿನ ಸಾವಿರಾರು ಜನ ಬರೀತಾರೆ, ಯಾರ್ಯಾರಿಗೆ ಅಂತ ಪ್ರತಿಕ್ರಿಯೆ ನೀಡೋಣ ಅಂತೀರಾ ? ಬರೋ ಒಂದಿಷ್ಟು ಖಾಸ್, ಖಾಯಂ ಅಂಕಣಗಳ, ಲೇಖಕರ ಪತ್ರಗಳನ್ನ ಬಿಟ್ಟು  ಉಳಿದ ಪತ್ರಗಳನ್ನ ಓದಾದ್ರೂ ಓದ್ತಾರಾ , ಅತ್ವಾ ಹಾಗೇ ಕಸದ ಬುಟ್ಟಿಗೆ ಬಿಸಾಕ್ತಾರಾ ಅಂತ ಅನೇಕ ಸಲ ಅನ್ಸಿದೆ ನನಗೆ.   ಪ್ರಕಟವಾಗೋ ಭಾಗ್ಯ ಕಾಣದ ನಿರುಪಯೋಗಿ, ನತದೃಷ್ಟ, ಸತ್ವಹೀನ(??) ಬರಹಗಾರರ ಕತೆ ಬಿಡಿ ಸಾರ್. ನಿಮ್ಮ ಆ ಸಾವಿರ ಹತ್ತು ಸಾವಿರ ಕಸಗಳ ಮಧ್ಯೆ ಪ್ರಕಟವಾಗೋ ಭಾಗ್ಯ ಕಂಡ ಮುತ್ತೊಂದಕ್ಕೆ, ಅದರೊಡೆಯನಿಗೆ ನಿಮ್ಮ ಲೇಖನ ಇಂತಿಂತಾ ದಿನ ಪ್ರಕಟವಾಗ್ತಿದೆ ಅಥವಾ ನಿಮ್ಮ ಲೇಖನ ಪ್ರಕಟಣೆಗೆ ಆಯ್ಕೆಯಾಗಿದೆ ಅಂತಾದ್ರೂ ಹೇಳ್ಬಾರ್ದಾ ? ಅದೇ ಜೀವಮಾನದ ಸಾಧನೆಯೆಂಬಂತೆ ಆ ಲೇಖಕ ಪತ್ರಿಕೆಯ ಹೆಸ್ರನ್ನ ಎಷ್ಟೋ ಕಾಲ ಹೇಳ್ತಾ ತಿರುಗ್ತಿರ್ತಾನೆ. ಅದೆಲ್ಲಾ ಕನಸಿನ ಮಾತೇ ಸರಿ. ಪತ್ರಿಕೆಯಲ್ಲಿ ತನ್ನ ಲೇಖನ ಸೆಪ್ಟೆಂಬರ್ ಸಂಚಿಕೆಯಲ್ಲಿ ಪ್ರಕಟವಾಗಿದೆ ಅಂತ ಅದರ ಮುಂದಿನ ವರ್ಷ ಸೆಪ್ಟೆಂಬರ್ ಅಲ್ಲಿ ನನ್ನ ಗೆಳೆಯರೊಬ್ಬರಿಗೆ ತಿಳಿದಿದ್ದಂತೆ !! ಖ್ಯಾತ ದೈನಿಕ ಪತ್ರಿಕೆಯಲ್ಲಿ ತಾನು ತೆಗೆದ ಫೋಟೋ ಒಂದು ಪ್ರಕಟವಾಗಿದೆ ಅಂತ ವಾರದ ನಂತರ ಮತ್ತೊಬ್ಬ ಗೆಳೆಯನಿಗೆ ಗೊತ್ತಾದ್ದು !! ಫೇಸ್ಬುಕ್, ಬ್ಲಾಗ್ಗಳಿರೋ ಈ  ಕಾಲದಲ್ಲಿ , ಓದಿದ ಯಾರೋ ತಿಳಿಸಿದ್ದಕ್ಕಾಗಿ ಇವೆಲ್ಲಾ ಬರೆದ ಲೇಖಕನಿಗೆ ತಿಳಿದಿದ್ದಷ್ಟೇ. ಇಲ್ಲಾ ಅಂದರೆ ಲೇಖನ , ಫೋಟೋ ಪ್ರಕಟಣೆ ಭಾಗ್ಯ ಕಂಡ ಸುದ್ದಿ ಗ್ಯಾರಂಟಿ ಲೇಖಕನಿಗೆ ತಿಳೀತಿರ್ಲಿಲ್ಲ 🙁

ಬರೀ ಬರ್ದು ಬಿಟ್ರೆ ಆಯ್ತಾ ? ನಮ್ಮ ಪತ್ರಿಕೆ ದಿನಾ ಓದಿ, ಬೇರೆ ಅವ್ರ ಬರಹಗಳನ್ನ ಪ್ರೋತ್ಸಾಹಿಸಿ ಆಗ ನಿಮ್ಮ ಲೇಖನ ಪ್ರಕಟವಾಯ್ತೋ ಇಲ್ವೋ ಅಂತ ಗೊತ್ತಾಗತ್ತೆ ಅಂತಾರೆ ಕೆಲೋರು !! ಅಲ್ಲಾ ಸ್ವಾಮಿ, ಮನೇಲಿ ಕೂತ್ಕಂಡು ಕ್ರಿಕೆಟ್ ನೋಡೋದ್ ಬೇರೆ. ತಾನೇ ಆಡ್ಬೇಕು, ಟೀಮಲ್ಲಿ ಸ್ಥಾನ ಪಡೀಬೇಕು ಅನ್ನೋದು ಬೇರೆ. ನ್ಯಾಷನಲ್ ಟೀಂ ಸೆಲೆಕ್ಟನ್ನಿಗೆ ಅಂತ ನಡೀತಿರೋ ರಣಜಿ ಮ್ಯಾಚಲ್ಲಿ ಸಖತ್ತಾಗಿ ಆಡಿದ ಹುಡುಗನಿಗೆ ಆತ ಸೆಲೆಕ್ಟ್ ಆದನೋ ಇಲ್ಲವೋ, ಅಥವಾ ಈ ಸಲ ಯಾರು ಸೆಲೆಕ್ಟ್ ಆಗಿದಾರೆ ಅಂತ ತಿಳಿಸೋದು ಬಿಟ್ಟು ನ್ಯಾಷನಲ್ ಮ್ಯಾಚ್ ದಿನ ಬಂದು ಬಿಡು, ಸೆಲೆಕ್ಟ್ ಆಗಿದ್ರೆ ಆಡುವಿಯಂತೆ, ಇಲ್ಲಾಂದ್ರೆ ಅವ್ರಿಗೆ ನೀರು ಕೊಡೋಕೆ ಬೇಕಾಗತ್ತೆ, ಇಲ್ಲಾಂದ್ರೆ ಫೀಲ್ಡ್ ಬಾಯ್ ಆಗಿ ಹೊರಗೆ ಬಂದ ಬಾಲ್ಗಳ್ನ ಹೆಕ್ಕಿ ಕೊಡ್ಬೋದಂತೆ, ಸ್ಟೇಡಿಯಂ ಒಳ್ಗೂ ಬಿಡ್ದಿದ್ರೆ ಟಿಕೆಟ್ ತಗೊಂಡ್ ಒಳಗ್ ಬಂದ್ ಮ್ಯಾಚು ನೋಡುವಿಯಂತೆ, ಆ ಟಿಕೆಟ್ಟೂ ಸಿಗ್ಲಿಲ್ಲ ಅಂದ್ರೆ ಅಲ್ಲೇ ಪಕ್ಕದ ಥಿಯೇಟ್ರಲ್ಲಿ ಬರ್ತಿರೋ ಮೂವಿ ನೋಡ್ಕಂಡ್ ಮನೆಗೆ ಹೋಗುವಿಯಂತೆ .. ಒಳ್ಳೇ ಟ್ರಿಪ್ಪ್ ಆಗತ್ತೆ ಅಂದ್ರೆ !! ಪಕ್ಕಾ ಬಖ್ವಾಸ್ ಅನುಸ್ತಾ ಇಲ್ವಾ ? ಸ್ವಲ್ಪ ಸಮಾಧಾನ ತಗೋಳ್ರೀ… ಪತ್ರಿಕೆಗಳ ಧೋರಣೆಯೂ ಬರಹಗಾರರಿಗೆ ಹಿಂಗೆ ಅನುಸ್ತಾ ಇರುತ್ತೆ. ಪತ್ರಿಕೆಗೆ ಬರಿ, ಅದು ಬಂತಾ ಬಂತಾ ಅಂತ ದಿನಾ ಪತ್ರಿಕೆಗಾಗಿ ಕಾಯ್ತಾ ಕೂರು, ಒಂದು ಪತ್ರಿಕೆಯಲ್ಲಿ ಬರ್ಲಿಲ್ಲ ಅಂದ್ರೆ ಮತ್ತೊಂದಕ್ಕೆ ಬರಿ.. ಅಲ್ಲೂ ಕಾಯಿ.. ಅದ್ರ ಬದ್ಲು ಮ್ಯಾಚಿನ ನಂತ್ರ ನೀನು ಆಯ್ಕೆಯಾಗಿಲ್ಲಪ್ಪ ಅಂದ್ರೆ ಬೇಜಾರಾದ್ರೂ ಸ್ವವಿಮರ್ಷೆಯಲ್ಲಿ ತೊಡಗಿ ಆಟ ಇನ್ನೂ ಉತ್ತಮಪಡಿಸುಕೊಳ್ತಾನೆ ಆ ಆಟಗಾರ. ಅಲ್ಲಿ ಕ್ರಿಕೆಟ್ಟು, ಇಲ್ಲಿ ಬರಹ ಅಷ್ಟೇ ವ್ಯತ್ಯಾಸ !

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ, ಬಾಯಿಗೆಟುಕಿಲ್ಲ ದ್ರಾಕ್ಷಿ ಅಂತ ಎಲ್ಲಾ ಹುಳಿ ಅಂತಿದಾನೆ.. ತನ್ನ ಲೇಖನ ಪ್ರಕಟವಾಗಿಲ್ಲ ಅಂತ ಪತ್ರಿಕೆಗಳ್ನ ದೂರೋದು ಎಷ್ಟು ಸರಿ ಅಂತ ಓದ್ತಿರೋ ನೀವೆಲ್ಲಾ ಅಂತ್ಕೊಳ್ತಿರ್ಬೋದು. ಸರಿ ಸ್ವಾಮಿ, ಪ್ರಕಟವಾಗಿಲ್ಲ. ಸಾಹಿತ್ಯದಲ್ಲಿ ಸತ್ವವಿಲ್ಲ , ಬರಹಗಳಲ್ಲಿ ನಾನಿನ್ನೂ ಪ್ರಬುದ್ದತೆ ಪಡಿಬೇಕಿದೆ, ಒಪ್ಕೊಳ್ಳೋಣ. ಆದ್ರೆ, ಹೇಳಿದ್ರೆ ತಾನೆ ಗೊತ್ತಾಗ್ಬೇಕು !!

ರಾಜಕೀಯದ ಸುದ್ದಿ ಮುಖಪುಟದಲ್ಲಿ ಪ್ರಕಟಿಸಿ, ಶೌರ್ಯ ಚಕ್ರ, ಮರಣೋತ್ತರ ಪ್ರಶಸ್ತಿ ಪಡೆದ, ದೇಶಕ್ಕಾಗೇ ಜೀವ ತೆತ್ತ ಯೋಧರ ಸುದ್ದಿ ಕೊನೆಯ ಪುಟದಲ್ಲಿ ಪ್ರಕಟಿಸೋ ೨೦ ಪೇಜಿನ ಪತ್ರಿಕೆಗಳಲ್ಲಿ ಜನಸಾಮಾನ್ಯರಿಗೆ ಅಂತ ಕಾಲುಪೇಜಾದ್ರೂ ಜಾಗ ಸಿಗೋದು ಓದುಗರ ಪ್ರತಿಕ್ರಿಯೆ ಅನ್ನೋ ಅಂಕಣಗಳಲ್ಲಿ ಮಾತ್ರ ! ಬೇರೆ ಲೇಖನಗಳೆಲ್ಲಾ ಕಾಯಂ ಬರಹಗಾರರದ್ದೇ ! ಅಲ್ಲೊಂದು ಇಲ್ಲೊಂದು ಅಂಕಣ ಅಂತಿದ್ರೂ ಅದು ಈಗಾಗಲೇ ಪ್ರಸಿದ್ದರಾದ ಬರಹಗಾರರಿಗೆ ಮೀಸಲು .. ಹೊಸಬರಿಗೆ ಜಾಗ ಕೊಡದ ಹೊರತು ಅವ್ರು ಬರ್ಯೋದಾದ್ರೂ ಹೆಂಗೆ. ಬರ್ಯದೇ ಮುಖ್ಯವಾಹಿನಿಗೆ ಬರಲ್ಲ, ಮುಖ್ಯವಾಹಿನಿಯಲ್ದಿದ್ರೆ ಬರ್ಯಕ್ಕೆ ಕೊಡಲ್ಲ ಅನ್ನೋ ಈ ಪರಿ ಮದ್ವೆ ಆಗ್ದೇ ಹುಚ್ಚು ಬಿಡಲ್ಲ, ಹುಚ್ಚು ಬಿಡ್ದೇ ಮದ್ವೆ ಆಗಲ್ಲ ಅನ್ನೋ ಹಾಗಾಯ್ತು.. 🙁

ಬರದಿದ್ರೂ ಬೇಜಾರಿಲ್ಲ ಅಂತ ಇನ್ನೂ ನಾಲ್ಕು ಪತ್ರಿಕೆಗಳಿಗೆ ಅದೇ ಲೇಖನವನ್ನು ಮತ್ತಷ್ಟು ತಿದ್ದಿ ಕಳಿಸುತ್ತಾನೆ. ಅಲ್ಲೂ ಅದೇ ಕತೆ 🙁

ಪತ್ರಿಕೆಗಳಲ್ಲಿ ಬರ್ಯೋದು ಹೇಗೆ ಅಂತ ಅನೇಕ ಪ್ರಸಿದ್ದ, ಬ್ಯುಸಿ ಬರಹಗಾರರನ್ನು ಕೇಳಾಯ್ತು. ಮಿಂಚೆ ಬದಲಾಗಿದೆಯಾ, ಯಾವ ಮಿಂಚೆಗೆ ಕಳಿಸಬೇಕೆನ್ನೋ ಉತ್ತರ ಇರಲಿ, ಬರಹಗಳಿಗೆ ಬೆನ್ನುತಟ್ಟುವಿಕೆಯೋ , ತಿದ್ದುವಿಕೆಯೋ ಹೋಗಲಿ.. ಪ್ರತಿಕ್ರಿಯೆಯ ನಿರೀಕ್ಷೆಯೇ ದೊಡ್ದ ಪಾಪ ! ಬ್ಯುಸಿ ದುನಿಯಾ ಗುರು.. ಯಾರಿಗೂ ಬೇರೊಬ್ಬರಿಗೆ ಸಮಯವಿಲ್ಲ 🙁

ಎಲ್ಲರೂ ಹೀಗಂತಲ್ಲ. ಪ್ರತೀ ಪತ್ರಕ್ಕೂ ನಿಮ್ಮ ಲೇಖನ ಪ್ರಕಟವಾಗಿಲ್ಲ ಕ್ಷಮಿಸಿ ಅಂತ ಪ್ರತಿಕ್ರಿಯೆ ಕಳಿಸೋ ವಾರಪತ್ರಿಕೆಯೂ ಒಂದಿದೆ ಮರಳುಗಾಡಿನ ನಡುವಿನ ಓಯಸ್ಸಿಸ್ಸಿನಂತೆ. ಅವರ ಈ ಪ್ರತಿಕ್ರಿಯೆಯೇ ಕೆಲವೊಮ್ಮೆ ನನಗೆ ಲೇಖನ ಪ್ರಕಟವಾದದ್ದಕ್ಕಿಂತ ಖುಷಿ ಕೊಡುತ್ತೆ ! ಬರ್ಯೋದಕ್ಕಿಂತ ಬಯ್ಯೋದು ಸುಲಭ.. ಸುಮ್ನೆ ಹೊರ್ಗೆ ನಿಂತು ಬಯ್ಯೋದಕ್ಕಿಂತ ಪತ್ರಿಕೆಯ ಒಳಗೆ ಬಂದು ನಡೆಸೋದ್ರಲ್ಲಿ ಗೊತ್ತಾಗತ್ತೆ ಅನ್ಬೋದು ಕೆಲೋರು..ನಿಮ್ಮ ಲೇಖನ ಪತ್ರಿಕೇಲಿ ಬರ್ಲಿಲ್ಲ ಅಂತ ಪತ್ರಿಕೆಯವ್ರನ್ನೇಕೆ ದೂರ್ತಿರಾ, ಪುಸ್ತಕ ಮಾಡಿ ಪ್ರಕಟ ಮಾಡಿ ಅನ್ಬೋದು.. ಅದೆಲ್ಲಾ ಒಪ್ದೆ ಸಾರ್. ಎಲ್ರಿಗೂ ತಮ್ಮ ಬರಹಗಳ್ನ ಪುಸ್ತಕವಾಗಿ ಪ್ರಕಟಿಸೋ ಚೈತನ್ಯ ಇರೊದಿಲ್ಲ. ಬರೀದೇ ಇದ್ದೋರಿಗೆ ಈ ತರದ ನಿರ್ಲಕ್ಷ್ಯದ ನೋವು ತಿಳಿಯೋಲ್ಲ.. ಹೀಗೆ ನೂರಿನ್ನೂರು ಬರಹ ಕಸದ ಬುಟ್ಟಿಗೆ ಸೇರಿದ.. ತದನಂತರವೂ ಇನ್ನೂ ಬರೆಯೋದನ್ನ ಬಿಡದೇ ನಿರಂತರವಾಗಿ ಬರೆಯುತ್ತಾ ಸಾಗಿದ  ಒಬ್ಬ ತಿರಸ್ಕೃತ, ನತದೃಷ್ಟ ಲೇಖಕನಾಗಿ ನಿಮ್ಮನ್ನು ಕಲ್ಪಿಸಿಕೊಂಡು.. ಈ ಲೇಖನವನ್ನು ಎಡಗಣ್ಣಂಚಿನಿಂದ ಒಮ್ಮೆ ನೋಡಿ.. ನಾ ಹೇಳಿದ್ದರಲ್ಲಿ ೧% ಆದ್ರೂ ಸತ್ಯವಿದೆ ಅನ್ಸಿದ್ರೆ ಅದೇ ಸಾರ್ಥಕ..ಇಲ್ಲಾ ಅಂದ್ರೂ ಬೇಜಾರಿಲ್ಲ ಬಿಡಿ. ಕಸದ ಬುಟ್ಟಿ ಸೇರೋದ್ರ ಬಗ್ಗೇನೆ ಬರ್ದ ಲೇಖನ ಕಸದ ಬುಟ್ಟಿ ಸೇರಿದ್ದರ ಬಗ್ಗೆ ಎಳೆಯಷ್ಟೂ ಬೇಜಾರಿಲ್ಲ 🙁

–ಇಂತಿ ನಿಮ್ಮ ಪ್ರೀತಿಯ

ಒಬ್ಬ ಬರಹಪ್ರೀತಿಯ ಹವ್ಯಾಸಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

6 thoughts on “ಪ್ರಶಸ್ತಿ ಬರೆವ ಅಂಕಣ: ಪತ್ರಿಕಾ ಸಾಹಿತ್ಯ ಮತ್ತು ನಾವು

 1. ಸರ್ಯಾಗಿ ಹೇಳಿದ್ರಿ… ಮರಳಿ ಯತ್ನವ ಮಾಡುವುದ ಬಿಟ್ಟು ಬೇರೆ ದಾರಿಯಿಲ್ಲ…. 🙁

 2. P { margin-bottom: 0.08in; }A:link { }
  ಮಾನ್ಯ ಪ್ರಶಸ್ತಿಯವರೆ
  ನಿಮ್ಮ ಈ ಲೇಖನ ಬಹಳ ಅನುಭವದಿಂದ ಕೂಡಿದೆ ಬಹಳ ಅರ್ಥಪೂರ್ಣವಾಗಿ ಹೊರಹೊಮ್ಮಿದೆ ನಿಮ್ಮ ಈ ಬರಹ ನನ್ನ ಮನಮುಟ್ಟಿದೆ ಪತ್ರಿಕೆ ಹಾಗು ನಮ್ಮ ಇಂದಿನ ಸ್ಥಿತಿಗತಿ ಎಚ್ಚರವಾಗಿ ಬಿತ್ತರಿಸಿದ್ದೀರಿ ನಿಮ್ಮ ಈ ಜಾಣತನಕ್ಕೆ ಚೆಪ್ಪಾಳೆ ತಟ್ಟಲೆಬೇಕು ಅನುಭವಿಸಿ ಬರೆದ ಈ ಲೇಖನ ಇಂದಿನ ಅನೇಕ ಯುವ ಬರಹಗಾರರ ಪಾಡಾಗಿದೆ ಅವರು ಬರೆದು ಎಸೆದ ಹಲವು ಅನಿಸಿಕೆಗಳ ಲೇಳಕನಗಳ ಸರಮಾಲಾಯಾಗಿದೆ ಒಂದಿಷ್ಟು ಮನಸ್ಸನಿಗೆ ನೆಮ್ಮದಿ ತರುವ ನಿಮ್ಮ ಈ ಲೇಖನ ಒಂದಿಷ್ಟು ಚೇತನ ತರುತ್ತದೆ ಈ ಹಿರಿಯ ಬರಹಗಾರರೆಲ್ಲ ತಾವು ಬೆಳಿದು ನಿಂತಮೇಲೆ ಹಿಂದೆ ಬರುವ ಯುವಕರನ್ನು ಬೆಳಿಸಬೇಕು ಎನ್ನುವ ಆಸೆ ಕಿಚ್ಚೆಂತು ಇರುವುದಿಲ್ಲ ನಾವು ಬರೆದ ಬರಹ ಅವರಿಗೆ ಇಷ್ಟವಾಗಲ್ಲ ಎಲ್ಲಿ ನಮ್ಮ ಕ್ರಾಸ್ ಮಾಡುವರೊ ಎಂಬ ಭಯ ಕೂಡಾ ಇರುತ್ತದೆ . ಓಗಾಗಲೇ ಬರವಣಿಗೆ ಕ್ಷೇತ್ರದಲ್ಲಿ ಬೆಳಿದು ನಿಂತ ಆಲದ ಮರಗಳು ಆಡಿರುವ ನೈಜ ಮಾತುಗಳು ಇವು ನೋಡಿ.
  ನೀವು ಸ್ವಲ್ಪ ನನ್ನ ಬರಹ ಓದಬೇಕು
  ನೀವು ಸ್ವಲ್ಪ ನಮ್ಮ ಪತ್ರಿಕೆ ಸರಿಯಾಗಿ ಚೆಂದಾದಾರಗಾಗಿ ಓದಿ ಆಮೇಲೆ ನಿಮ್ಮ ಲೇಖನದ ಬಗ್ಗೆ ನೋಡೋಣಾ
  ನಿಮ್ಮವು ಕವನಗಳೆ ಅಲ್ಲ
  ನಿಮ್ಮ ಲೇಖನದ ನಿರೂಪಣೆ ಸರಿಯಿಲ್ಲ
  ನಿಮ್ಮ ಲೇಖನಕ್ಕೆ ಜಾಗವಿಲ್ಲ
  ಆ ರೀತಿಯ ಬರಹ ನಮ್ಮ ಪತ್ರಿಕೆಗೆ ಹಾಕಲ್ಲ
  ಹೀಗೆ ಅನೇಕ ರೀತಿಯಲ್ಲಿ ಮಾತಾಡುವ ಹಿರಿಯರು ಮತ್ತು ಸಂಪಾದಕರು ಕೊನೆಗೆ ಹಾಕುವುದಾದರು ಏನು ಹೇಳಿ ಅದೇ ವ್ಯಕ್ತಿಗಳ ವಿಚಾರ ಜನರಿಗೆ ಓದಿದವರ ವಿಚಾರಗಳೆ ಓದಿ ಬೇಜಾರಾಗುವದಿಲ್ಲವೆ? ಹೊಸೆಬರಿಗೆ ಅವಕಾಶ ಕೊಡಬೇಕು ಅವರಿಗೆ ತಿದ್ದಬೇಕು ಕನಿಷ್ಠ ಅವರ ಲೇಖನ ಓದಿ ತಿದ್ದಿ ಬೆಳಿಸಬೇಕು ಎನ್ನುವ ಆಸೆ ಬೇಡವೆ?

 3. ದೊಡ್ಡವರೆಲ್ಲಾ ಜಾಣರಲ್ಲ. ಚಿಕ್ಕವರೆಲ್ಲಾ ಕೋಣರಲ್ಲ
  ಈ ಗೆದ್ದೆತ್ತಿನ ಬಾಲ ಹಿಡಿಯೋದು, ಶಂಖದಿಂದ ಬಂದ್ರಷ್ಟೇ ತೀರ್ಥ ಅನ್ನೋದು ಒಂದು ಅನುವಂಶೀಯ ರೋಗ. ಅಜ್ಜ ನೆಟ್ಟ ಆಲದ ಮರ. ಅದಕ್ಕೇ ಜೋತುಬಿಳಬೇಕು ಅನ್ನೋ ಸಂಪ್ರದಾಯವಾದಿಗಳು ತಮ್ಮ ಕೂಪಮಂಡೂಕತನವನ್ನು ಬಿಡಬೇಕು. ಇಲ್ಲಾ ನಾವೇ ಬಿಡಿಸಬೇಕು.
  ಲೇಖನ ಇಷ್ಟ ಆಯ್ತು.
   

 4. ನಾನೂ ಒಂದು ಕಾಲದಲ್ಲಿ ಒಂದು ರೂಪಾಯಿ ಎರಡು ರೂಪಾಯಿ ಜೋಡಿಸಿ, ಕಿಲೋಮೀಟರ್ ನಡೆದು ಅಂಚೆ ಕಛೇರಿ ತಲುಪಿ ಆದೇಷೋ ಪತ್ರಿಕೆಗಳಿಗೆ ಕವನ ಕಳಿಸಿದ್ದೇ ಬಂತು. ನನ್ನ ಕವನ ಯಾರು ಪ್ರಕಟಣೆ ಮಾಡ್ತಾರೆ ಸಾರ್!

  ತುಂಬಾ ಒಳ್ಳೆಯ ಲೇಖನ.


 5. NOT TO WORRY….!! THERE'LL BE NO MONOPOLY OF DAILIES WEEKLIES MONTHLIES… NOW WE HAVE FB,OWN BLOGS SOME SITES LIKE SAMPADA, PANJU, KENDA SAMPIGE, ETC WHERE WE CAN PUBLISH, GET COOMMENTS IN A SECOND….FORGET CURSE THOSE EDITORS WHO NOT EVEN BOTHERED TO SAY CURTSEY THANKS OR ACCEPTANCE REJECTION OF ARTICLES…. U HAVE WELL WRITTEN THIS ARTICLE ABOUT HARD SHIP BUDDING WRITERS FACE…
  I IWSHED TO TYPE IN KANNADA BUT NET WAS SLOW N MY GOGLE TRANSILERATOR FAILED TO TRANSLIT… SO USED ENGLISH….
   
   
  REQUEST TO PANJU TEAM: CAN U ARRANGE DIRECT KANNADA TYPING IN PANJU…
   
   
  THANKS
   
  \|/

Leave a Reply

Your email address will not be published. Required fields are marked *