ನಾಟಕಕಾರರಾಗಿ ಕುವೆಂಪು (ಭಾಗ-2): ಹಿಪ್ಪರಗಿ ಸಿದ್ದರಾಮ್

 

ಕುವೆಂಪುರವರ ನಾಟಕ(ರಂಗಕೃತಿ)ಗಳು : 

ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಮತ್ತು ಮಕ್ಕಳ ರಂಗಭೂಮಿಗಾಗಿ ಕುವೆಂಪುರವರು ಸರಿಸುಮಾರು ಹದಿನಾಲ್ಕು ನಾಟಕ(ರಂಗಕೃತಿ)ಗಳನ್ನು ರಚಿಸಿದ್ದಾರೆ. ಪ್ರತಿಯೊಂದರಲ್ಲಿಯ ವಸ್ತುವೈವಿಧ್ಯತೆಗಳನ್ನು ಆಯ್ಕೆ ಮಾಡಿಕೊಂಡಿರುವುದು ನಾವು ಗಮನಿಸಿದರೆ ಕನ್ನಡ ರಂಗಸಾಹಿತ್ಯದ ಬೆಳವಣಿಗೆಯ ಆಯಾ ಕಾಲಘಟ್ಟವನ್ನು ಪರಿಚಯಿಸಿಕೊಂಡ ಅನುಭವವಾಗುತ್ತದೆ. ತಮ್ಮ ಸೃಜಶೀಲತೆಯ ಅಭಿವ್ಯಕ್ತಿ ಮಾಧ್ಯಮವನ್ನಾಗಿ ರಂಗಭೂಮಿಯನ್ನು ಬಳಸಿಕೊಂಡಿರುವುದು ಮಹಾಕವಿಗಳ ಶ್ರೇಷ್ಟತೆಯನ್ನು ತೋರಿಸುತ್ತದೆ. ಪಾತ್ರ ಪೋಷಣೆ, ಸಂಭಾಷಣೆಯ ತಂತ್ರ, ದೃಶ್ಯಗಳ ಜೋಡಣೆ, ಹಳೆಗನ್ನಡ/ನಡುಗನ್ನಡ ಶೈಲಿಯ ಛಂದಸ್ಸಿನ ಶೈಲಿಯ ಸರಳ ರಗಳೆಯಂತಿರುವ ಸಂಭಾಷಣೆ ಹಾಗೂ ಹಾಡುಗಳಂತಹ ಸಾಹಿತ್ಯದ ಹಲವಾರು ಪ್ರಕಾರಗಳನ್ನು ಯಶಸ್ವಿಯಾಗಿ ರಂಗದಲ್ಲಿ ಬಳಸಿಕೊಂಡಿರುವುದರೊಂದಿಗೆ ರಂಗಭೂಮಿಯ ಸಾಧ್ಯಾ-ಸಾಧ್ಯತೆಗಳನ್ನು ಆಗಿನ ಸಂದರ್ಭದಲ್ಲಿಯೇ ತಮ್ಮ ಕೃತಿಗಳ ಮೂಲಕ ಹೇಳಿರುವುದರ ಶ್ರೇಯಸ್ಸು ಮಹಾಕವಿಗಳಿಗೆ ಸಲ್ಲುತ್ತದೆ. ಕವಿವರ್ಯರು ಏಕಾಂಕ ನಾಟಕಗಳಿಂದ ಆರಂಭಿಸಿ ಪೂರ್ಣಾಂಕ ನಾಟಕಗಳವರೆಗೂ ಸೃಷ್ಟಿಯಾಗಿರುವ ಅವರ ರಂಗನಾಟಕಗಳಲ್ಲಿ ಮಿಂಚಿನಂತೆ ಮಿನುಗುವುದು ಪೌರಾಣಿಕ ಪ್ರಜ್ಞೆ, ಐತಿಹಾಸಿಕ ಸ್ವೋಪಜ್ಞತೆ ಹಾಗೂ ಸಾಮಾಜಿಕ ತಜ್ಞತೆಯ ಪ್ರಖರ ಅಂಶಗಳು. ಅವರ ನಾಟಕಗಳು ಮುಖ್ಯವಾಗಿ ಪದ್ಯ ನಾಟಕಗಳಾಗಿ ಕಂಡು ಬಂದರೂ ಗ-ಪದ್ಯಗಳು ಕನ್ನಡ ಭಾಷಾಶೈಲಿಗೆ ವಿಶೇಷ ಮೆರುಗನ್ನು ನೀಡುವೆಯೆಂದರೆ ತಪ್ಪಾಗಲಿಕ್ಕಿಲ್ಲ.

ಅ) ಪೌರಾಣಿಕ ನಾಟಕಗಳು:

1. ಯಮನ ಸೋಲು (1927) : ಸತ್ಯವಾನ-ಸಾವಿತ್ರಿಯ ಲೋಕಜನಪ್ರಿಯ ಕಥೆಯಾಧಾರಿತ ಎಂಟು ದೃಶ್ಯಗಳ ನಾಟಕ.

2. ಶ್ಮಶಾನ ಕುರುಕ್ಷೇತ್ರಂ (1931): ಯುದ್ಧದ ದುರಂತತೆ, ಅನ್ಯಾಯ, ಕ್ರೌರ್ಯ, ವಿನಾಶ, ಅವಿವೇಕ, ವಿಧಿ, ವಿಫಲತೆ, ಸಂಸ್ಕೃತಿಯ ಸಾವು ಇವುಗಳನ್ನು ಪ್ರತಿಮಾ ದೃಷ್ಟಿಯಿಂದ ನೋಡುವ ಮಹಾಭಾರತದ ವಸ್ತುವಾಧಾರಿತ ಹತ್ತು ದೃಶ್ಯಗಳ ನಾಟಕ.

3. ವಾಲ್ಮೀಕಿಯ ಭಾಗ್ಯ (1931) : ಸೀತಾದೇವಿಯ ವನವಾಸದ ವಸ್ತುವನ್ನುಳ್ಳ ಒಂದೇ ದೃಶ್ಯವುಳ್ಳ ನಾಟಕ.

4. ಶೂದ್ರ ತಪಸ್ವಿ (1944) : ಶಂಭೂಕನ ಕಥೆಯ ಸಾಮಗ್ರಿಯನ್ನು ಹೊಸ ಶೈಲಿಯಲ್ಲಿ ಹೇಳಿರುವ ಮೂರು ದೃಶ್ಯಗಳ ನಾಟಕ.

5. ಬೆರಳ್‍ಗೆ ಕೊರಳ್ (1947) : ಈ ರಂಗಕೃತಿಯಲ್ಲಿ ಕುವೆಂಪುರವರು ಏಕಲವ್ಯನನ್ನು ನಾಯಕನನ್ನಾಗಿ ಮಾಡುವುದರೊಂದಿಗೆ ಗುರು-ಕರ್ಮ-ಯಜ್ಞವೆಂಬ ಮೂರು ದೃಶ್ಯಗಳ ಜೋಡಣೆಯೊಂದಿಗೆ ರಚಿಸಿದ್ದಾರೆ.

6. ಚಂದ್ರಹಾಸ (1963) : ಇಪ್ಪತ್ತೊಂದು ದೃಶ್ಯಗಳ ಆದಿರಂಗಂ, ಮಧ್ಯರಂಗಂ ಮತ್ತು ಅಂತ್ಯರಂಗಂ ಎಂಬ ಮೂರು ಭಾಗಗಳನ್ನೊಳಗೊಂಡ ನಾಟಕ.

7. ಕಾನಿನ (1974) : ಮಹಾಭಾರತದ ಪಾತ್ರಗಳಾದ ಕರ್ಣ ಮತ್ತು ಆತನ ಗುರು ಪರಶುರಾಮರ ನಡುವೆ ನಡೆಯುವ ಮಾನವನ ಆಕಸ್ಮಿಕ ಜನನ, ಮನದೊಳಗಿನ ಆಸೆ-ಆಕಾಂಕ್ಷೆಗಳ ಕುರಿತಾದ ಚರ್ಚೆಯ ನಾಟಕ.

 

ಬ) ಐತಿಹಾಸಿಕ ನಾಟಕಗಳು :

8. ಬಿರುಗಾಳಿ (1930) : ಮೂಲ ಶೇಕ್ಸಪೀಯರ್ ಕವಿಯ ‘ಟೆಂಪೆಸ್ಟ್’ ನಾಟಕದ ಕನ್ನಡ ರೂಪಾಂತರದೊಂದಿಗೆ ಒಂಬತ್ತು ದೃಶ್ಯಗಳಿವೆ.

9. ಮಹಾರಾತ್ರಿ (1931) : ಸಿದ್ದಾರ್ಥನು ಬುದ್ಧನಾಗಲು ಹೊರಡುವ ಮಹಾರಾತ್ರಿಯ ಕಥೆಯಾಗಿದ್ದು ಹತ್ತು ದೃಶ್ಯಗಳಿವೆ.

10. ರಕ್ತಾಕ್ಷಿ (1932) : ಬಿದನೂರಿನ ಇತಿಹಾಸವನ್ನು ಆಧರಿಸಿದ ಐದು ಅಂಕಗಳ ಕನ್ನಡ ನಾಟಕವಾಗಿದ್ದರೆ ಇದರ ಮೂಲ ಶೇಕ್ಸಪೀಯರ್ ಕವಿಯ ಹಾಮ್ಲೆಟ್ ನಾಟಕ.

 

ಕ) ಸಾಮಾಜಿಕ ನಾಟಕಗಳು :

11. ಜಲಗಾರ (1931) : ಬೀದಿ ಕಸ ಗುಡಿಸುವ ಜಲಗಾರನೊಬ್ಬನ ಮನದ ಭಾವಗಳ ಕಥಾನಕಗಳನ್ನೊಳಗೊಂಡ ಎರಡು ದೃಶ್ಯಗಳ ನಾಟಕ.

12. ಬಲಿದಾನ (1948) : ಭರತ ದೇಶದ ಸ್ವಾತಂತ್ರ ಸಂಗ್ರಾಮಕ್ಕೆ ಸಂಬಂಧಿಸಿದ ಘಟನೆಯನ್ನೊಳಗೊಂಡ ಮೂರು ದೃಶ್ಯಗಳ ನಾಟಕ.

ಡ) ಮಕ್ಕಳ ನಾಟಕಗಳು :

13. ನನ್ನ ಗೋಪಾಲ (1930) : ಒಂಬತ್ತು ಚಿಕ್ಕ-ಚಿಕ್ಕ ದೃಶ್ಯಗಳ ಭಕ್ತಿಯ ಉದಾತ್ತ ಭಾವನೆಯ ಕಿರು ನಾಟಕ.

14. ಮೋಡಣ್ಣನ ತಮ್ಮ (1931) : ಸೃಷ್ಟಿಯ ಲೋಕವಿಹಾರಕ್ಕೆ ಮಗುವೊಂದನ್ನು ಕರೆದುಕೊಂಡು ಹೋಗುವ ಘಟನೆಯನ್ನು ಆಧಾರವಾಗಿಟ್ಟು ರಚಿತವಾದ ಸಣ್ಣ ನಾಟಕ.

 

ಮೇಲಿನ ಎಲ್ಲಾ ರಂಗಕೃತಿಗಳನ್ನು ಗಮನದಲ್ಲಿಟ್ಟುಕೊಂಡು ಯೋಚಿಸಿದಾಗ ಮತ್ತು ಕೆಲವೊಂದು ನಾಟಕ ಪ್ರಯೋಗಗಳನ್ನು ಇತ್ತೀಚಿನ ಆಧುನಿಕ ರಂಗನಿರ್ದೇಶಕರು ರಂಗದಲ್ಲಿ ಅಳವಡಿಸಿದ ಪ್ರದರ್ಶನಗಳನ್ನು (ಕೆಲವೊಂದು ರಂಗಪ್ರಯೋಗಗಳಲ್ಲಿ ನಾನು ಪಾತ್ರವಹಿಸಿ ಅಭಿನಯಿಸಿದ್ದೇನೆಂಬ ಹೆಮ್ಮೆ ನನ್ನದು !) ನೋಡಿದಾಗ/ಯೋಚಿಸಿದಾಗ ಮಹಾಕವಿ ಕುವೆಂಪು ಅವರ ರಂಗಕೃತಿಗಳನ್ನು ಓದುವ ನಾಟಕಗಳು ಮತ್ತು ಆಡುವ (ರಂಗಸ್ಥಳದಲ್ಲಿ ಪ್ರಯೋಗಿಸುವ) ನಾಟಕಗಳು ಎಂದು ನಾವು ವರ್ಗೀಕರಿಸಬಹುದು. ಓದುವ ನಾಟಕಗಳ ಕುರಿತು ಕೆಲವೊಂದು ಕಡೆ ಮಹಾಕವಿಗಳು ‘ನಾಟಕದ ಕೃತಿಯೊಂದನ್ನು ಓದುತ್ತಿರುವ ಓದುಗನ ಮನವೆಂಬುದು ರಂಗಸ್ಥಳವಾಗಿ ಪರಿವರ್ತನೆಯಾಗಿ, ಅಲ್ಲಿಯೇ ರಂಗಪ್ರಯೋಗಕ್ಕೆ ಬೇಕಾದ ಸಕಲ ವ್ಯವಸ್ಥೆಗಳು ಸೃಷ್ಟಿಯಾಗಿ, ನಾಟಕ ನಡೆಯಬೇಕು. ಇದಕ್ಕೆ ಭೌತಿಕವಾದ ರಂಗಮಂದಿರದ ಅವಶ್ಯಕತೆಯಿರುವುದಿಲ್ಲ. ಮನದ ಕಲ್ಪನೆಯ ರಂಗಮಂದಿರದಲ್ಲಿ ಕಲ್ಪಿಸಿಕೊಳ್ಳುವ ದೃಶ್ಯಾವಳಿಗಳನ್ನು ಭೌತಿಕ ರಂಗಮಂದಿರದಲ್ಲಿ ಸೃಷ್ಟಿಸುವುದು ಕಷ್ಟದ ಕೆಲಸ. ಆದುದರಿಂದ ಓದುವ ನಾಟಕಗಳನ್ನು ಓದುತ್ತಾ ಆಸ್ವಾದಿಸಿರಿ. ಅಂತಹ ರಂಗಕೃತಿಗಳನ್ನು ರಂಗಸ್ಥಳದಲ್ಲಿ ಪ್ರಯೋಗಿಸಲೇಬೇಡಿ’ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಹೆಚ್ಚು-ಕಡಿಮೆ ಎಲ್ಲಾ ರಂಗಕೃತಿಗಳಲ್ಲಿ ಮಹಾಕವಿಗಳ ಕವಿಮನಸ್ಸು, ಕವಿಹೃದಯದೊಳಗಿನ ಕಾವ್ಯಧಾರೆ ಮಲೆನಾಡಿನ ನಿತ್ಯನೂತನ ಹಚ್ಚ ಹಸಿರಿನ ಸೊಬಗಿನಂತೆ ಧಾರಾಕಾರವಾಗಿ ಪ್ರವಹಿಸುತ್ತದೆ. ರಂಗಕೃತಿಗಳಲ್ಲಿ ಕಾವ್ಯ, ಕಥನ, ವಿಮರ್ಶೆ ಮತ್ತು ವೈಚಾರಿಕ ಚರ್ಚೆಗಳಂತ ಅಂಶಗಳು ಪಾತ್ರಗಳಲ್ಲಿ ಮತ್ತು ದೃಶ್ಯಗಳಲ್ಲಿ ಅನಾವರಣಗೊಳ್ಳುತ್ತಾ ಒಟ್ಟಿಗೆ ಕಾಣಿಸಿಕೊಳ್ಳುತ್ತವೆ. ರಂಗಕೃತಿಯ ಕಥಾವಸ್ತುವನ್ನು ಹಾಡಿನ (ಕಾವ್ಯಾತ್ಮಕವಾಗಿ) ಮೂಲಕ ಮುನ್ನಡೆಸುವ ಮಹಾಕವಿಗಳ ರಚನಾತಂತ್ರದ ಮೋಡಿ ಮನಕ್ಕೆ ಮುದ ನೀಡುತ್ತದೆ ರಂಗಕೃತಿಗಳನ್ನು ಓದುವಂತೆ ಪ್ರೇರೇಪಿಸುತ್ತದೆ. ಆಗಿನ ಕಾಲದಲ್ಲಿಯೇ ಕನ್ನಡ ಭಾಷೆಯ ಸಮೃದ್ಧತೆಯನ್ನು ಸಮರ್ಥವಾಗಿ ದುಡಿಸಿಕೊಂಡಿರುವುದು ಮತ್ತು ವಿಶೇಷವಾಗಿ ಬಳಕೆಯಾಗಿರುವ ಛಂದೋವೈವಿಧ್ಯ ಇಂದಿನ ಕಾಲದ ನಮ್ಮಂಥವರಿಗೂ ಚಕಿತಗೊಳಿಸುತ್ತದೆ. ಮಹಾಕವಿ ಕುವೆಂಪುರವರ ನಾಟಕಗಳು ಬೇರೆ ಬೇರೆ ಕಾಲಘಟ್ಟಗಳಲ್ಲಿ ಸನ್ನಿವೇಶಗಳಲ್ಲಿ ರಚಿತಗೊಂಡಿದ್ದರೂ ನಮ್ಮ ಸಮಕಾಲೀನ ಸಂದರ್ಭದೊಂದಿಗೆ ಅನುಸಂಧಾನ ಮಾಡುವಿಕೆಯು ಬಲು ಕುತೂಹಲಕಾರಿಯಾಗಿ ಮುಖ್ಯವೆನಿಸುತ್ತವೆ.

 

1. ಯಮನ ಸೋಲು (1927) : 

ಮಹರ್ಷಿ ಅರವಿಂದ ಘೋಸ್ (1872-1950) ಅವರ ‘ಸಾವಿತ್ರಿ’ ಎಂಬ ಮಹಾಕಾವ್ಯಕ್ಕೆ ಪ್ರೇರಣೆಯಾಗಿದ್ದು, ಮಹಾಭಾರತದಲ್ಲಿ ಬರುವ ಉಪಕಥೆಯಾದ ‘ಸತ್ಯವಾನ-ಸಾವಿತ್ರಿ’ ಎಂಬ ಲೋಕಜನಪ್ರಿಯ ಕಥೆಯಾಧಾರಿತ ಎಂಟು ದೃಶ್ಯಗಳ ರಂಗಕೃತಿಯನ್ನು ಮಹಾಕವಿಗಳು ಸಾಹಿತ್ಯಿಕವಾಗಿ ಮೇಲ್ಮಟ್ಟದಲ್ಲಿ ರಚಿಸಿದ್ದಾರೆ. ಕಥಾವಸ್ತು ಎಲ್ಲರಿಗೂ ಗೊತ್ತಿರುವುದು ಮತ್ತು ಹಳೆಯದಾಗಿದ್ದರೂ ಮಹಾಕವಿಗಳ ಕೈಯಲ್ಲಿ ವಿನೂತನ ಮತ್ತು ಆಕರ್ಷಕವಾಗಿ ಮೂಡಿಬಂದಿದೆ. ಕುವೆಂಪುರವರ ಹೆಚ್ಚಿನ ನಾಟಕಗಳಲ್ಲಿ ಕಂಡು ಬರುವ ಸರಳ ರಗಳೆಯ (ಪ್ರಾಸರಹಿತವಾದ ರಗಳೆಯನ್ನು ಸರಳ ರಗಳೆ ಎನ್ನುತ್ತಾರೆ) ನಾಟಕೀಯತೆಯ ವಿನ್ಯಾಸವು ರಂಗಕೃತಿಗೆ ಹೆಚ್ಚಿನ ಮೆರುಗನ್ನು ತಂದು ಕೊಟ್ಟಿದೆ. ಈ ನಾಟಕ ಮೊದಲು ‘ಪ್ರಭುದ್ಧ ಕರ್ನಾಟಕ’ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತೆಂದೂ, ನಾಟಕ ರಚನೆಯಾದ ಕಾಲದಲ್ಲಿ ಮಹಾರಾಜರ ಕಾಲೇಜಿನ ವಿಧ್ಯಾರ್ಥಿಗಳು ಅಭಿನಯಿಸಿದ್ದರೆಂದೂ, ಈ ನಾಟಕವನ್ನು ಬೆಂಗಳೂರು, ಕಲ್ಬುರ್ಗಿ ಮತ್ತು ವಿಜಾಪುರ ಮುಂತಾದ ಕೆಲವು ಸ್ಥಳಗಳಲ್ಲಿ ಆಡಿದ್ದರೆಂದು ಕುವೆಂಪು ಅವರ ಹಿತೈಷಿಗಳಾದ ಟಿ.ಎಸ್.ವೆಂಕಣ್ಣಯ್ಯನವರು (1930ರಲ್ಲಿ) ನೆನಪಿಸಿಕೊಂಡಿದ್ದಾರೆ. ಇನ್ನೊಂದೆಡೆ ಕುವೆಂಪುರವರು ಹೇಳಿಕೊಂಡಿರುವಂತೆ ‘ಗುಲಬರ್ಗಾ ಸಾಹಿತ್ಯ ಸಮ್ಮೇಳನದಲ್ಲಿ (1928ರಲ್ಲಿ ಬಿ.ಎಂ.ಶ್ರೀಕಂಠಯ್ಯನವರು ಸಮ್ಮೇಳನಾಧ್ಯಕ್ಷರಾಗಿದ್ದರು) ಮೈಸೂರಿನ ಮಹಾರಾಜಾ ಕಾಲೇಜಿನ ಕರ್ಣಾಟಕ ಸಂಘದವರು ನನ್ನ ನಾಟಕ ‘ಯಮನ ಸೋಲು’ ನಾಟಕವನ್ನು ಆಡುವುದೆಂದು ಗೊತ್ತಾಗಿತ್ತು. ಆಗ ಬೇಸಿಗೆಯ ರಜದ ಕಾಲವಾಗಿದ್ದರಿಂದ ವಿದ್ಯಾರ್ಥಿಗಳು ಅವರವರ ಊರಿಗೆ ಹೋಗಿದ್ದರು. ಆದ್ದರಿಂದ ಈ ನಾಟಕದಲ್ಲಿ ಪಾತ್ರವಹಿಸುವವರು ಈ ಸಮ್ಮೇಳನಕ್ಕೆ ಮೊದಲೇ ಗುಲಬರ್ಗಾಕ್ಕೆ ತಮಗೆ ತಾವೇ ಬೇರೆ ಬೇರೆಯಾಗಿ ಹೋಗುವುದೆಂದು ಗೊತ್ತಾಗಿತ್ತು. ಆದರೆ ಸತ್ಯವಾನನ ಪಾತ್ರಧಾರಿ ಕಾಯಿಲೆ ಬಿದ್ದುದರಿಂದ ತಾನು ಬರುವ ಸ್ಥಿತಿಯಲ್ಲಿಲ್ಲೆಂದು ಕೊನೆ ಗಳಿಗೆಯಲ್ಲಿ ತಿಳಿಸಿಬಿಟ್ಟನಂತೆ. ಮತ್ತೊಬ್ಬನನ್ನು ಆ ಪಾತ್ರವಹಿಸುವಂತೆ ಮಾಡಿ, ಅವನಿಗೆ ಅಭ್ಯಾಸ ಕೊಡುವಷ್ಟು ಸಮಯವೂ ಇರಲಿಲ್ಲ. ಆದ್ದರಿಂದ ವೆಂಕಣ್ಣಯ್ಯನವರು ತಂತಿ ಕೊಟ್ಟರು. ಕುಪ್ಪಳಿಯ ಮಲೆಗಳಲ್ಲಿ ಅಲೆಯುತ್ತಿದ್ದ ನನಗೆ ಪರಿಸ್ಥಿತಿಯ ವಿಷಮತೆಯನ್ನರಿತು ನಾನೂ ಶಿವಮೊಗ್ಗದ ಮಿತ್ರರೊಡನೆ ಗುಲಬರ್ಗಾಕ್ಕೆ ಧಾವಿಸಿದೆ’ ಎನ್ನುತ್ತಾ ಅಂದಿನ ರಂಗಪ್ರಯೋಗದಲ್ಲಿ ತಾವು ಸತ್ಯವಾನನ ಪಾತ್ರ ಮಾಡಿರುವುದನ್ನು ಅವರ ಆತ್ಮಕತೆ ‘ನೆನಪಿನ ದೋಣಿ’ಯಲ್ಲಿ ನೆನಪಿಸಿಕೊಂಡಿರುವರು. ಕನ್ನಡ ರಂಗಭೂಮಿಯ ಸಂದರ್ಭದಲ್ಲಿ ತಾವೇ ರಚಿಸಿದ ನಾಟಕವೊಂದರಲ್ಲಿ ನಾಟಕ ರಚನಾಕಾರರು ಪ್ರಮುಖ ಪಾತ್ರ ಮಾಡಿದ ಅಪರೂಪದ ಪ್ರಸಂಗವೆಂದು ಹೇಳಬಹುದು. 

ಮಹಾಸತಿ ಸಾವಿತ್ರಿಯು ಸತ್ಯವಾನನನ್ನು ಅಲ್ಪಾಯುಷಿಯೆಂದು ನಾರದ ಮುನಿಗಳಿಂದ ತಿಳಿದುಕೊಂಡಿದ್ದರೂ ಸಹ ಹಿರಿಯರ ಮಾತಿಗೆ ಬೆಲೆಕೊಟ್ಟು ಮದುವೆಯಾದ ನಂತರ ಮೃತ್ಯುದೇವತೆಯಾದ ಯಮನನ್ನು ಜಯಿಸಿ ಆತನಿಂದ ತನ್ನ ಪತಿಯ ಪ್ರಾಣವನ್ನು ಮರಳಿ ಪಡೆಯುವ ಸತಿ ಶಿರೋಮಣಿಯೋರ್ವಳ ಪುಣ್ಯಕಥಾನಕವಿದು. ಪುರಾಣ ಕಾಲದ ಪ್ರಾಚೀನ ಕತೆಯನ್ನು ಕಲಾತ್ಮಕವಾಗಿ ಪ್ರೇಕ್ಷಕರಿಗೆ ಹಿಡಿದಿಡುವುದರೊಂದಿಗೆ ಜೀವಾತ್ಮವನ್ನು ಸೆಳೆದೊಯ್ಯಲು ಬಂದಿರುವ ಕರುಣೆಯೆಂದರೆನೆಂಬುದನರಿಯದ ಕಠೋರ ಕರ್ತವ್ಯಧಾರಿ ಮೃತ್ಯುದೇವತೆ ಯಮನೊಂದಿಗೆ ಸಾವಿತ್ರಿ ನಡೆಸುವ ಧರ್ಮಾಧರ್ಮದ ಕುರಿತಾದ ಸಂವಾದ ವಿಚಾರಪ್ರಚೋಧಕವಾಗಿ ಸಂಭಾಷಣೆಯ ರೂಪದಲ್ಲಿ ಮಹಾಕವಿಗಳು ಸಾಮಾನ್ಯರಲ್ಲಿಯೂ ಚಿಂತನೆಗೆ ಹಚ್ಚುವಲ್ಲಿ ಯಶಸ್ವಿಯಾಗಿರುವುದು ಆಗಿನ ಅವರ ಎಳೆವಯಸ್ಸಿನಲ್ಲಿಯ ಪ್ರಬುದ್ಧ-ವೈಚಾರಿಕತೆಯ ಮನಸ್ಸನ್ನು ಇಂತಹ ರಚನೆಗಳಿಂದ ಗಮನಿಸಬಹುದು. 

ನಾಟಕದ ಆರಂಭಕ್ಕೆ ಮಹಾಕವಿಗಳು ಪೀಠಿಕಾ ದೃಶ್ಯವನ್ನು ಅಳವಡಿಸಿದ್ದಾರೆ. ಸಂಸ್ಕೃತದ ನಾಟಕಗಳಲ್ಲಿ ಆರಂಭಕ್ಕೆ ವಿಧೂಷಕ ಮತ್ತು ಸೂತ್ರಧಾರ ಬಂದು ಮುಂದೆ ನಡೆಯಲಿರುವ ಕಥಾಪ್ರಸಂಗದ ಸಾರಾಂಶವನ್ನು ತಮಾಷೆಯೊಂದಿಗೆ ವಿವರಿಸುವ ದೃಶ್ಯವಿರುವಂತೆ ಇಲ್ಲಿ ಪೀಠಿಕಾ ದೃಶ್ಯದಲ್ಲಿ ಯಕ್ಷ ಮತ್ತು ಯಮದೂತನ ಪಾತ್ರಗಳನ್ನು ಪರಿಚಯಿಸಿರುವುದು. ಇದರಿಂದ ನಾಟಕಕಾರರಿಗೆ ಸಂಸ್ಕೃತ ನಾಟಕಗಳ ಪ್ರಭಾವ ಆಗಿರುವುದನ್ನು ನಾವು ಗ್ರಹಿಸಿಬಹುದು. ಆಕಾಶ ಮಾರ್ಗದಲ್ಲಿ ಅವಸರದಿಂದ ತನ್ನ ರಾಯ ಯಮನ ದಂಡನೆಗೆ ಗುರಿಯಾಗುವ ಹೆದರಿಕೆಯೊಂದಿಗೆ ಯಮದೂತನೊಬ್ಬನು ಬರುವಾಗ ಯಕ್ಷನೊಬ್ಬನು ಎದುರಾಗುವುದರೊಂದಿಗೆ ನಾಟಕವು ಆರಂಭವಾಗುತ್ತದೆ. ಯಕ್ಷ ಮತ್ತು ದೂತನ ನಡುವಿನ ಸಂಭಾಷಣೆಯ ಮೂಲಕ ಸತ್ಯವಾನ ಮತ್ತು ಸಾವಿತ್ರಿಯರ ಹಿನ್ನಲೆಯನ್ನು ವಿವರಿಸುತ್ತಾ ನಾಟಕದ ಕಥಾವಸ್ತು ಪ್ರಕಟಗೊಳ್ಳುವುದರೊಂದಿಗೆ ಸತ್ಯವಾನನ ಜೀವಾತ್ಮವನ್ನು ಸೆಳೆದುಕೊಂಡು ಬರಲು ‘ಕೋಟಿಯುಡುಗಳ ನಡುವೆ ಮಿಣುಕುತಿಹ ಮುದ್ದಾದ ಗ್ರಹವೆಂದು ತೋರುತ್ತಿರುವ ಭೂಮಿ’ಗೆ ಆಗಮಿಸುತ್ತಾನೆ. ಅಂದಿನ ದಿನವೇ ಸತ್ಯವಾನನ ಕೊನೆಯ ದಿನವೆಂದು ಮೂರು ದಿನಗಳಿಂದ ಉಪವಾಸವಿರುವ ಸಾವಿತ್ರಿಯು ಪರಮೇಶ್ವರನಲ್ಲಿ ‘ಪಾರು ಮಾಡೆನ್ನ ನೀ ದಿನದ ಅಳಲಿಂದ ! ಪತಿಯನಗಲದ ತೆರದಿ ಭಕ್ತಿಯನು, ಶಕ್ತಿಯನು, ದೃಢತೆಯನು ನೀಡು’ ಎಂದು ಮುಂತಾಗಿ ಬೇಡಿಕೊಳ್ಳುತ್ತಿದ್ದಾಳೆ. 

ಇಲ್ಲಿ ನಿಸರ್ಗಪ್ರೇಮಿಯಾದ ಮಹಾಕವಿಗಳು ಸಾವಿತ್ರಿಯು ಪೂಜಿಸುವ ‘ಪರಮ ಶಿವನು ಎಲೆವನೆಯ ಶಿವಗುಡಿಯಲ್ಲಿದ್ದಾನೆ’ ಎಂದು ವರ್ಣನೆ ಮಾಡುತ್ತಾರೆ. ‘ಯಮರಾಯನಿ ಇನಿಯನನ್ನು ಕೊಂಡೊಯ್ವ ದುರ್ದಿವಸ ! ಎಲೆ ಭಯಂಕರ ದಿನವೇ ನೀನು ಬರಬೇಡ ಎಂಬ ಮುಗ್ದ ಪ್ರಾರ್ಥನೆ ಸಲ್ಲಿಸುತ್ತಿರುವಳು ಸಾವಿತ್ರಿ. ‘ಪ್ರೇಮವೇ ನೀನು ನನ್ನಂತೆ ಅಬಲೆಯಾದೆಯಾ ಹೇಳು ! ಚುಕ್ಕಿಗಳೆ ತೆರಳಬೇಡಿರಿ ! ಚಂದ್ರ, ಮರೆಯಾಗಬೇಡ. ಕೋಗಿಲೆಯೆ ಕೂಗದಿರು ; ಕೂಗಿ ಜವಗಂಟೆಯಂ ಬಡಿಯದಿರು, ನೆನಪ ಕೊಡದಿರು ಜವಗೆ, ಇಂದು ಆ ದುರ್ದಿವಸವೆಂದು’ ಎಂದು ಹಲಬುತ್ತಾಳೆ. ಪಾಪ ಮುಗ್ದ ಸತ್ಯವಾನ ತನ್ನ ಅಂತಿಮ ದಿನಗಳು ಹತ್ತಿರ ಬಂದಿವೆ ಎಂಬುದು ತಿಳಿದಿಲ್ಲ. ಕಾಡಿಗೆ ಹೋಗಿ ಪುಷ್ಪಗಳನ್ನು ತರಲು ತನ್ನ ಪತಿ ಹೊರಟಿರುವುದನ್ನು ಕಂಡು ಮನದಲ್ಲಿ (ಸ್ವಗತದಲ್ಲಿ) ‘ಸತ್ಯವಾನ್, ……ಇದು  ನಿನ್ನ ಕಡೆಯ ಪೂಜೆ – ಇಂದೆನಿತು ಅಂದವಾಗಿಹನೆನ್ನ ಪತಿಯು ! ………ಮುಂದಾಗುದನೊಂದನೂ ಅರಿಯದವನೇ ಧನ್ಯ ! ಏಲೆ ಕಾಲವೇ, ನಿನ್ನ ಭೀಕರ ಕಾಳಗರ್ಭವ ತೋರಬೇಡ’ ಎಂದು ಅಂದುಕೊಳ್ಳುತ್ತಾಳೆ. ಯಾವತ್ತೂ ಕೇಳದವಳು ಇಂದು ತಾನು ಸಹ ಕಾಡಿಗೆ ನಿನ್ನೊಂದಿಗೆ ಬರುತ್ತೇನೆ ಎಂದು ಕೇಳುವ ಸಾವಿತ್ರಿಯ ಆತಂಕದ ಮಾತುಗಳು ಸತ್ಯವಾನನಿಗೆ ಅಚ್ಚರಿಯಾಗುತ್ತದೆ. ಹಿರಿಯರ ಅಪ್ಪಣೆಯೊಂದಿಗೆ ಸಾವಿತ್ರಿಯು ‘ಪರಮೇಶ, ಪಾರು ಮಾಡೆನ್ನ ನೀ ದಿನದ ಅಳಲಿಂದ ! ಪತಿಯನಗಲದ ತೆರದಿ ಭಕ್ತಿಯನು, ಶಕ್ತಿಯನು, ದೃಢತೆಯನು ನೀಡು. ಹೋರಾಡಿಯಾದರೂ ಮೃತ್ಯುವಿನ ಅಣಲಿಂದ ಪತಿಯನುಳುಹುವ ತೆರದಿ ಮಾಡು. ಹೇ ದುಷ್ಟ ವಿಧಿಯೇ, ಎನ್ನ ರಮಣನನೆಲ್ಲಿಗೊಯ್ಯುತಿಹೆ? ನಿನ್ನ ತಾಳೆಲೈ ನಾಲಗೆಯೆ, ದುರ್ವಚನಕೆಡೆಗೊಟ್ಟು ಸತ್ಯ ಶಕ್ತಿಯ ದಹಿಸಬೇಡ ! ಹೇ ದೇವ, ಎನ್ನಿನಿಯನೊಡನಿಂದು ನರಕವಾದರೆ ನರಕ, ನಾಶವಾದರ ನಾಶ, ಸಗ್ಗವಾದರೆ ಸಗ್ಗ ! ಯಮನೊಡ್ಡುತ್ತಿರುವ ಪಾಶವಾದರೆ ಪಾಶ’ ಎಂದು ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿಯಂತೆ, ಗೆದ್ದೆ ಗೆಲ್ಲುವೆನೆಂಬ ದೃಢತೆಯೊಂದಿಗೆ ಮುನ್ನುಗ್ಗುವ ವೀರಯೋಧನಂತೆ ಕಾಡಿಗೆ ಪತಿಯೊಂದಿಗೆ ಹೋಗುತ್ತಾಳೆ.

ಮುಂದಿನ ದೃಶ್ಯದಾರಂಭದಲ್ಲಿ, ಅರಣ್ಯ ಮಧ್ಯದಲ್ಲಿ ಸತಿಯೊಂದಿಗೆ ಹೋಗುತ್ತಿರುವಾಗ ಸತ್ಯವಾನನು ತಾನು ಹುಲಿಯಿಂದ ಹರಿಣಿಯನ್ನು ಬಿಡಿಸಿ ಪ್ರಾಣ ರಕ್ಷಿಸಿದ ಸ್ಥಳ, ಕೋಗಿಲೆಯನ್ನು ಉರಗದಿಂದ ಬಿಡಿಸಿದ ಸ್ಥಳವನ್ನು ತೋರಿಸಿ, ವಿವರಿಸುತ್ತಾ ನಡೆದಿರುವಾಗ ಸಾವಿತ್ರಿಯು ಕೆಲವೊಮ್ಮೆ ಬೆಚ್ಚಿಬೀಳುತ್ತಾಳೆ ಮತ್ತೊಮ್ಮೆ ಮನದಲ್ಲಿ ‘ಆ ಪುಣ್ಯ ನಿನ್ನನೀ ದಿನ ಬಂದು ರಕ್ಷಿಸಲಿ’ ಎಂದು ಆಶಿಸುತ್ತಾಳೆ. ಚಿಂತಿಸುತ್ತಾ ನಡೆದಿರುವ ಸಾವಿತ್ರಿಗೆ ಮುಳ್ಳು ತುಳಿದ ಅನುಭವ. ಮುಳ್ಳನ್ನು ತೆಗೆಯಲು ಆಕೆಯ ಕಾಲು ಹಿಡಿದು ನೋಡಿದ ಸತ್ಯವಾನನು ‘ಮುಳ್ಳಲ್ಲ ಹುಲ್ಲೆಂದು ತೋರವುದು. ಏನು ಕೋಮಲ ಕಾಯವಪ್ಪಾ, ಚೆಂದಳಿರ ನಗುತಿಹುದು ನಿನ್ನಡಿ’ ಎಂದು ಹೇಳುತ್ತಾನೆ ತನ್ನ ಜೀವಿತದ ಕೊನೆಯ ದಿನವೆಂದು ಅರಿಯದ ಮುಗ್ದ ಸತ್ಯವಾನ. ಅದನು ಕೇಳಿ ಸಾವಿತ್ರಿ ‘ಸರಸ ! ಮೃತ್ಯುವಿನ ಬಾಯಲ್ಲಿ ಸರಸ !’ ಎಂದು ಸಾವಿನ ಸಮೀಪದಲ್ಲಿದ್ದರು ಸರಸದ ಮಾತುಗಳನ್ನಾಡುವ ಪತಿಯನ್ನು ಕಂಡು ಸಾವಿತ್ರಿ ಮನದಲ್ಲಿ ಸಂಕಟ ಪಡುತ್ತಾಳೆ. ‘ಸೀತಾಳ ಹೂವು ಬೇಕೆನು’ ಎಂದು ಮಧುರ ಪ್ರೇಮದಿಂದ ಕೇಳುವ ಪತಿರಾಯನಿಗೆ ‘ತಂದುಕೊಡು’ ಎಂದು ಸ್ತ್ರೀ ಸಹಜ ಭಾವದಿಂದ ಕೇಳುತ್ತಲೇ ಎಚ್ಚರಗೊಂಡವಳಂತೆ ಗಿಡ ಹತ್ತಿ ತರುವಾಗ ತನ್ನ ಇನಿಯನಿಗೆ ಏನಾದರೂ ತೊಂದರೆಯಾದೀತೆಂದು ಚಿಂತೆಗೊಂಡು ಆತನ ಕೈ ಹಿಡಿದು ‘ಬೇಡ, ಬೇಡೀಗ, ಸತ್ಯೇಂದ್ರ’ ಎಂದು ವಿನಂತಿಸಿಕೊಳ್ಳುತ್ತಾಳೆ. ‘ಮಚ್ಚರದ ನೇಸರಿದು ! ಕರುಣೆಯಿಲ್ಲದ ಕಾಲಚಕ್ರವಿದು ! ಹೇ ದೇವ ಕಾಪಾಡು, ಪರಮೇಶ, ಪತಿವ್ರತೆಗೆ ಪತಿ ಬಿಕ್ಷೆಯನು ನೀಡು !’ ಎಂದು ಮನದಲ್ಲಿ ಪರಶಿವನಲ್ಲಿ ಪ್ರಾರ್ಥಿಸುತ್ತಾ ಪತಿಯ ಪ್ರಾಣದ ಚಿಂತೆಯಲ್ಲಿ ಆತನ ಹಿಂದೆ ಸಾಗುತ್ತಾಳೆ. ಇಲ್ಲಿ ನಾಟಕಕಾರರು ಸಾವಿತ್ರಿಯ ಮನದಲ್ಲಿಯ ಮಾತುಗಳನ್ನು ಪ್ರೇಕ್ಷಕರಿಗೆ ಮುಟ್ಟಿಸಲು ಸ್ವಗತವೆಂಬ ರಂಗತಂತ್ರಕ್ಕೆ ಮೊರೆ ಹೋಗಿದ್ದಾರೆ. ಇಂತಹ ದೃಶ್ಯಾವಳಿಯನ್ನು ಕುತೂಹಲದೊಂದಿಗೆ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವಿಕೆಯು ಸಹ ನಾಟಕರಚನಾಕಾರರಿಗೆ ಚಾಲೆಂಜಿಗ್ ಆಗಿರುತ್ತಾದ್ದರಿಂದ ಇಲ್ಲಿ ಕುವೆಂಪುರವರು ಈ ನಾಟಕವನ್ನು ರಚಿಸಿರುವ ಆರಂಭಿಕ ದಿನಗಳ ಕಿರಿವಯಸ್ಸಿನಲ್ಲಿಯೇ ಯಶಸ್ವಿ ಆಗಿದ್ದಾರೆ.

ಅದೇ ಅರಣ್ಯದ ಸಂಧ್ಯಾಕಾಲದ ಸಂದರ್ಭದಲ್ಲಿ ಸತ್ಯವಾನ-ಸಾವಿತ್ರಿಯರು ತಿರುಗಾಡುತ್ತಾ ಮರವೊಂದರ ಹತ್ತಿರ ಬರುತ್ತಿರುವಾಗ ಅವರ ಕಣ್ಣಿಗೆ ಕಾಣಿಸದಂತೆ (ಯಮ)ದೂತ ಮತ್ತು ಯಕ್ಷ ಮಾತಾಡುತ್ತಾ ಆಗಮಿಸುತ್ತಾರೆ. ಇಂತಹ ಮುದ್ದಾದ ಪ್ರೇಮಿಗಳನ್ನು ಅಗಲಿಸಲು ನಿನಗೆ ಮನಸ್ಸಾದರೂ ಹೇಗೆ ಬರುತ್ತಿದೆ ಎಂದು ಯಕ್ಷನು ಕೇಳಲು, ‘ಯಮನೂರು ದಯೆಯ ಬಿಡಬೇಕಲ್ಲ, ನಿಷ್ಪಕ್ಷಪಾತವಾಗಿಹ ಧರ್ಮದೂರು, ಯಮಪಾಶ ಕಂಬನಿಗೆ ಕರಗುವಂತಹುದಲ್ಲ’ವೆಂದು ತನ್ನ ಕರ್ತವ್ಯಪ್ರಜ್ಞೆಯನ್ನು ಹೇಳುತ್ತಾನೆ. ಮರದ ಹತ್ತಿರ ಬಂದ ಸತ್ಯವಾನನು ತನ್ನ ಸತಿ ಸಾವಿತ್ರಿಗೆ ಸಂಧ್ಯಾಕಾಲವಾಗುತ್ತಿದೆ, ನಡೆದು ನಡೆದು ನಿನಗೆ ಬಳಲಿಕೆಯಾಗಿರಬಹುದು ಎಂದು ಕಾಳಜಿ ವ್ಯಕ್ತಪಡಿಸುತ್ತಾನೆ. ‘ಪತಿಯ ಪಾದದೊಳು ನಡೆವ ಸತಿಗೆ ಬಳಲಿಕೆ ಎಲ್ಲಿ ? ಕಷ್ಟವೇ ಮಹಾಪ್ರಸಾಧ ಎಂದು ತಿಳಿದಿರುವೆ ನಾನು’ ಎಂದು ಉತ್ತರಿಸುವ ಮಾತು ಭಾರತೀಯ ಪರಂಪರೆಯ ಮಹಿಳೆ ಗಂಡನಿಗೆ ವಿಧೆಯಳಾಗಿರುವ ಉದಾತ್ತತೆಯ ಸಂಗತಿಯನ್ನು ಎತ್ತಿ ತೋರಿಸುತ್ತದೆ. ಸಮಕಾಲೀನ ಸಂದರ್ಭದಲ್ಲಿ, ಪ್ರಜಾಪ್ರಭುತ್ವ ನೀಡಿರುವ ರಕ್ಷಣಾತ್ಮಕ ಕಾನೂನುಗಳನ್ನು ದುರ್ಭಳಕೆ ಮಾಡಿಕೊಳ್ಳುತ್ತಾ ಆಧುನಿಕತೆಯ ಸೋಗಿನಲ್ಲಿ ಸ್ವೇಚ್ಛಾಚಾರದಲ್ಲಿ ತೊಡಗಿಸಿಕೊಂಡು, ಅಲ್ಪಸುಖಕ್ಕೆ ತನ್ನತನವನ್ನೇ ಮಾರಿಕೊಂಡು ಬಾಳುತ್ತಿರುವ ಸಮುಧಾಯದ ಭಾಗವಾಗಿರುವವರಿಗೆ ಈ ಮಾತು ಇಂದಿಗೂ ಪ್ರಸ್ತುತವೆನಿಸುತ್ತದೆ. ‘ಇದ್ದಕ್ಕಿದ್ದಂತೆ ತಲೆ ತಿರುಗುತಿಹುದಲ್ಲ, ಒರಗಿಕೊಳ್ಳುವೆ’ನೆಂದು ಸಾವಿತ್ರಿಯ ತೊಡೆಯ ಮೇಲೆ ತಲೆಯನಿಟ್ಟು ಸತ್ಯವಾನನು ಮಲಗುತ್ತಾನೆ. ಮನದಲ್ಲಿ ಪರಮೇಶ್ವರನನ್ನು ಕಾಪಾಡು ಎಂದು ಪ್ರಾರ್ಥಿಸುತ್ತಾಳೆ. ಮರೆಯಾಗಿ ನಿಂತಿದ್ದ ಯಕ್ಷನೊಂದಿಗೆ (ಯಮ)ದೂತನು ಬಂದು ಸತ್ಯವಾನನ ಜೀವಾತ್ಮವನ್ನು ತನ್ನ ಪಾಶದಲ್ಲಿ ಸೆಳೆದುಕೊಳ್ಳಲು ಪ್ರಯತ್ನಿಸಿ ವಿಫಲನಾಗಿ ‘ನನ್ನಿಂದಸಾಧ್ಯ ! ನನ್ನಿಂದ ಅಸಾಧ್ಯವದು ಯಕ್ಷ ! ಬಿರುಗಾಳಿಯಲಿ ಸಿಕ್ಕಿ ತೂರಾಡುವಾ ತೆರನಾದೆ ಹದಿಬದೆಯ ಜ್ವಾಲೆಯೊಳು ಸಿಕ್ಕಿ !…..’ಎಂದು ಹೆದರುತ್ತಾ, ಮರಳಿ ತನ್ನೊಡೆಯ ಯಮರಾಯನಲ್ಲಿಗೆ ಹೊರಡುತ್ತಾನೆ. ಇಲ್ಲಿ ನಾಟಕಕಾರರು ಪತಿವ್ರತಾ ಧರ್ಮದ ಮಹತ್ವವನ್ನು ವಿವರಿಸಿ ಹೇಳಲು ಈ ದೃಶ್ಯವನ್ನು ಚಿಕ್ಕದಾದರೂ ಚೊಕ್ಕದಾಗಿ ನಿರ್ವಹಿಸಿದ್ದಾರೆ.  

ಬರಿಗೈಯಲಿ ಮರಳಿದ ತನ್ನ ದೂತನ ಸಂದೇಶ ಕೇಳಿ ಸ್ವತಃ ಯಮರಾಯನು ಸತ್ಯವಾನನ ಜೀವಾತ್ಮ(ಪ್ರಾಣ)ವನ್ನು ತೆಗೆದುಕೊಂಡು ಹೋಗಲು ಬರುತ್ತಾನೆ. ಅರಣ್ಯ ಮದ್ಯದ ಮರದಡಿಯಲ್ಲಿ ಪತಿಯನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡಿರುವಾಗ ಎಂದೂ ಕಾಣದಿಹ ಭಯಂಕರ ಆಕೃತಿಯನ್ನು ನೋಡಿದ ಸಾವಿತ್ರಿ ‘ಭೀಕರದ ಆಕೃತಿಯೇ ನೀನಾರು? ಯಾರು?……ತಡವಾದರೆನ್ನ ಶಾಪದ ಬೆಂಕಿ ದಹಿಸುವುದು ನಿನ್ನ’ ಎಂದು ಕೇಳುತ್ತಾಳೆ. ‘……..ಜಗದ ಧರ್ಮಾಧಿಕಾರಿಯು ನಾನು. ಯಮನೆಂಬರ್ ಎನ್ನ. ನಿನ್ನಿನಿಯ ಸತ್ಯವಾನನಾತ್ಮನಂ ಕೊಂಡೊಯ್ಯಲೆಂದಿಲ್ಲಿಗೈತಂದಿಹೆನು, ದೇವಿ………..ಅದಕಾಗಿ ದಿವ್ಯಾತ್ಮನಾದಿವನನೊಯ್ಯೆ ಯಮನಾದ ಕಣ್ಣಿಟ್ಟು ಒಪ್ಪಿಸೆನಗಾತನನು. ನಿನ್ನ ಬಳಿ ಬರಲಾರೆ, ತಾಯೆ ; ದಯೆಯಿಂದ ದೂರ ಸರಿ !’ ಎಂದು ಪತಿವ್ರತೆಯ ಅಗ್ನಿಜ್ವಾಲೆಗೆ ಹೆದರಿ ವಿನಂತಿಸಿಕೊಳ್ಳುತ್ತಾನೆ. ಸಾವಿತ್ರಿಯು ಸಹ ಗೌರವಪೂರ್ವಕ ಮತ್ತು ವಿನಯಪೂರ್ವಕವಾಗಿ ತನ್ನ ಪತಿಯ ಪ್ರಾಣವನ್ನು ತನ್ನ ಮೇಲಿನ ಕರುಣೆ ತೋರಿ ಸೆಳೆದುಕೊಳ್ಳಬೇಡ ಎಂದು ಕೇಳಿಕೊಳ್ಳುವುದರೊಂದಿಗೆ ಇಬ್ಬರಲ್ಲಿಯೂ ದೀರ್ಘವಾದ ಚರ್ಚೆ ನಡೆಯುತ್ತದೆ. ಒಂದು ಕಡೆ ಸಾವಿತ್ರಿಯು ಪತಿವ್ರತಾ (ಹದಿಬದೆ), ಸತ್ಯ, ನಿಷ್ಕಾಮ ಪ್ರೇಮ ಮುಂತಾದ ಮಹಿಳಾಧರ್ಮದ ಸಂಕೇತವೆಂಬಂತೆ ಕಾಣಿಸಿಕೊಂಡರೆ, ಇನ್ನೊಂದು ಕಡೆ ಯಮರಾಯನು ವಿಶ್ವಧರ್ಮ, ಋತಶಕ್ತಿ, ವಿಶ್ವನಿಯಮಗಳ ಚ್ಯುತಿಯಾಗಬಾರದೆನ್ನುವ ಕರ್ತವ್ಯನಿಷ್ಠೆಯ ಸಂಕೇತವಾಗುತ್ತಾನೆ. ಇಬ್ಬರ ನಡುವಿನ ಸಂಭಾಷಣೆಯಲ್ಲಿ ತಮ್ಮ ವಿಚಾರಗಳನ್ನು ಸಮರ್ಥಿಸಿಕೊಳ್ಳುತ್ತಾ ಇಬ್ಬರೂ ಸೋಲೊಪ್ಪಿಕೊಳ್ಳುವುದಿಲ್ಲ. ಆಯಸ್ಸು ಮುಗಿದ ಮೇಲೆ ಒಂದು ಕ್ಷಣವೂ ಆತ ಬಿಡುವ ಆಸಾಮಿಯಲ್ಲ. ‘ಚರಮದಿನ ಬಂದೊದಗದದೊಂದು ಕೀಟವ ನಾನು ಕೊಂಡೊಯ್ಯಲಾರೆ’ ಎಂದು ತನ್ನ ಕಠೋರ ಕರ್ತವ್ಯಪ್ರಜ್ಞೆಯ ಕುರಿತು ವಿವರಿಸುತ್ತಾನೆ. ‘..ನಿನ್ನ ಬುದ್ಧಿಗೆ ಮೀರಿ ನನಗೆ ತೋರದಿಹ, ತರ್ಕ ವಾದಗಳಿಗೆಲ್ಲ ಮೀರಿರುವ ಧರ್ಮವೊಂದಿರಬೇಕು, ಯಮರಾಯ, ನಿಯಮವೊಂದಿರಬೇಕು’ ಎನ್ನುವ ಸಾವಿತ್ರಿಯ ಮಾತಿಗೆ ಯಮನದು ತರ್ಕ ಬದ್ಧವಾದ ಸಮತೂಕದ ನ್ಯಾಯದ ಸಾಮ್ರಾಜ್ಯ. ಸಾವಿತ್ರಿಯನ್ನು ದೂರ ಸರಿದು ತನ್ನ ಕರ್ತವ್ಯಕ್ಕೆ ಸಹಕರಿಸಬೇಕೆಂದು ಗೌರವದಿಂದ ವಿನಂತಿಸಿಕೊಳ್ಳುತ್ತಾನೆ. ‘ಧರ್ಮಕೊಲವನು ಶರಣು ಮಾಡುವೆನು’ ಎಂದು ಸಾವಿತ್ರಿ ದೂರ ಸರಿದು ನಿಂತಾಗ ಯಮನು ತನ್ನ ಪಾಶದಿಂದ ಸತ್ಯವಾನನ ಜೀವಾತ್ಮವನ್ನು ಬಿಗಿದು ಕಟ್ಟಿ ‘ಮಹಾತ್ಮಳೌ ಸಾವಿತ್ರಿ, ನೀನು, ನಿನ್ನಂತೆ ಮೃತ್ಯುವನು ಕ್ಷಣಕಾಲವಾದರೂ ತಡೆಗಟ್ಟಿ ನಿಲ್ಲಿಸಿದ ಧೀರಾತ್ಮರೂಪ ! ಹೋಗಿ ಬರುವೆನು, ತಾಯೆ ನಮಿಸುವೆನು ನಿನಗೆ’ ಎಂದು ಹೊರಡುತ್ತಾನೆ. ಇಲ್ಲಿ ನಾಟಕಕಾರರು ಮಹಿಳೆಯ ಕುರಿತು ಇನ್ನೂ ಹೆಚ್ಚಿನ ಗೌರವ ಭಾವ ಮೂಡುವಂತೆ ಸಾವಿತ್ರಿಯ ಪಾತ್ರವನ್ನು ಚಿತ್ರಿಸಿದ್ದಾರೆ. ‘…….ಎದೆಯೊಲವು ಋತನಿಯಮಕತೀತವೆಂಬುದನು ತೋರಿಸುವೆ ; ಸಾಧಿಸುವೆ…….ನಾನೆಂದು ವೀರ ಕ್ಷತ್ರೀಯ ಪುತ್ರಿ !’ ಎಂಬ ದೃಢತೆಯಲ್ಲಿ ಯಮರಾಯನನ್ನು ಅನುಸರಿಸಿ ಮುನ್ನಡೆಯುತ್ತಾಳೆ.

ನಂತರದ ದೃಶ್ಯದಲ್ಲಿ ಯಮನು ಮುನ್ನಡೆಯುತ್ತಿರುವಾಗ ಸತ್ಯವಾನನ ಜೀವಾತ್ಮವನ್ನು ಉದ್ದೇಶಿಸಿ ‘ಪುಣ್ಯವಂತನು ನೀನು ಸತ್ಯವಾನ್, ಸಾವಿತ್ರಿಯಂಥ ಸತಿ ಶಿರೋಮಣಿಯ ಕೈ ಹಿಡಿದ ನೀಂ ಪುಣ್ಯಶೀಲನೆ ಹೌದು’ ಎಂದು ಹೇಳುತ್ತಿರುವಾಗ ತನ್ನ ಹಿಂದೆ ಸದ್ದಾದಂತಾಗಿ ತಿರುಗಿ ನೋಡಲು, ತನ್ನನ್ನು ಹಿಂಬಾಲಿಸಿ ಬರುತ್ತಿರುವ ಸಾವಿತ್ರಿಯನ್ನು ನೋಡುತ್ತಾನೆ. ‘ಏಕೆನ್ನನನುಸರಿಸಿ ಬರುತಿರುವಿ ತಾಯೇ……’ ಎಂದು ಕೇಳಿದಾಗ. ಸಾವಿತ್ರಿಯು ‘ನಿನ್ನ ನಾನನುಸರಿಸಿ ಬರುತ್ತಿಲ್ಲ ಯಮದೇವ, ಪತಿಯನನುಸರಿಸಿ ಬರುತಿಹೆನು, ಹುಟ್ಟಿದವರೆಲ್ಲರೂ ಸಾಯುವುದು ಧರ್ಮವೆಂದೊರೆದೆ. ಅಂತೆಯೇ ಸತ್ತ ಪತಿಯರ ಹಿಂದೆ ಹೋಗುವುದು ಪತಿವ್ರತಾ ರಮಣಿಯರ ಧರ್ಮಾ, ನಿನ್ನ ಧರ್ಮವ ನೀನು ಮಾಡು, ನನ್ನ ಧರ್ಮವ ನಾನು ಮಾಡುವೆನು’ ಎಂದು ಹೇಳುವಲ್ಲಿಗೆ ಭಾರತೀಯ ಸ್ತ್ರೀಯರ ಪತಿಧರ್ಮದ ಮಹತ್ವದ ಕುರಿತು ನಾಟಕಕಾರರು ಹೇಳಿರುವುದು ಇಂದಿನ ಕಾಲದ ಸ್ತ್ರೀಯರಿಗೆಂದೆ ವಿಶೇಷವಾಗಿ ಹೇಳಿರುವಂತಿದೆ. ಇಂತಹ ತರ್ಕಬದ್ಧವಾದ ವಾದಕ್ಕೆ ಹರ್ಷಗೊಂಡÀ ಯಮನು ವರವನ್ನು ನೀಡುವೆನು ಬೇಕಾದುದನ್ನು ಕೇಳು ಎಂದು ವರ ನೀಡಲು ಸಿದ್ಧವಾದಾಗ ಸಾವಿತ್ರಿ ಕುರುಡ ಮಾವನನಿಗೆ ಕಣ್ಣು ಬರುವಂತಹ ವರ ಪಡೆಯುತ್ತಾಳೆ. ‘ವರ ನೀಡಿದ ಬಳಿಕವಾದರೂ ಹಿಂದಿರುಗು’ ಎಂದು ಹೇಳುತ್ತಾ ಯಮರಾಯನು ಮುಂದೆ ಹೋಗುತ್ತಾನೆ. ‘…ಧರ್ಮವಂ ಧರ್ಮದಿಂದಟ್ಟುವೆನು, ಧರ್ಮವಂ ಧರ್ಮದಿಂದ ಗೆಲ್ಲುವೆನು…’ಎಂದು ಹಿಂಬಾಲಿಸುತ್ತಾಳೆ. ಅವಳ ಪತಿಪ್ರೇಮ ತರ್ಕಕ್ಕೆ ಮೆಚ್ಚಿ ಯಮ ಮತ್ತೊಂದು ವರವನ್ನು ದಯಪಾಲಿಸುವ ಸನ್ನಿವೇಶ ಮುಂದಿನ ದೃಶ್ಯದಲ್ಲಿ ಅನಾವರಣಗೊಂಡಿದೆ. 

ಎರಡನೇಯ ವರದಿಂದ ಕಳೆದುಹೋದ ತನ್ನ ಮಾವನ ಸಾಮ್ರಾಜ್ಯ ಮರಳಿ ದೊರಕುವ ವರವನ್ನು ಪಡೆಯುತ್ತಾಳೆ. ಮುಂದೆ ಯಮನು ತನ್ನ ಯಮಲೋಕವನ್ನು ಪ್ರವೇಶಿಸಿದರೂ ಬೆಂಬಿಡದ ಸಾವಿತ್ರಿ ಅಲ್ಲಿಯೂ ಪ್ರವೇಶ ಮಾಡುತ್ತಾಳೆ. ‘…ಮತ್ತೆ ಹಿಂಬಾಲಿಸುವೆ, ಪರರ ಪೀಡಿಪುದಿಂತು ಧರ್ಮವೇ, ಘನಶೀಲೆ ಸಾವಿತ್ರಿ ?’ ಎಂದು ಅಸಹನೆಯಿಂದ ಕೇಳಿದಾಗ ‘ಪತಿಯ ತ್ಯಜಿಸುವುದು ಸತಿಗೆ ಧರ್ಮವೇ, ಯಮದೇವ? ನಾನಿನ್ನನನುಸರಿಸುತಿಲ್ಲ. ನೀನೆ ಎಳೆದೊಯ್ಯುತಿಹೆ. ನನ್ನ ಪತಿಯಲ್ಲಿಹುದು ನನ್ನಾತ್ಮ ! ಧರ್ಮಚ್ಯುತಿಯನಿತಿಲ್ಲ ಇದರಲ್ಲಿ !’ ಎಂದು ಉತ್ತರವಿಯ್ಯುತ್ತಾಳೆ. ಕೋಪಗೊಂಡ ಯಮನು ‘ಸಾವಿತ್ರಿ, ನಿನ್ನ ಪತಿ ಸಗ್ಗಕಡರುವ ಬದಲು ನರಕಕಿಳಿದರೆ ನೀನು ಹಿಂದೆ ಹೋಗುವೆಯೇನು?’ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಸಾವಿತ್ರಿಯ ಯೋಚನೆಗೆ ಅವಕಾಶವಿಲ್ಲದಂತಹ ಮತ್ತು ಶೀಘ್ರದಿಂದ ಬಂದ ನೇರ ಉತ್ತರ, ‘ಸಂತಸದಿ ಹೋಗುವೆನು ಯಮರಾಯ ; ಹಿಗ್ಗಿ ಆನಂದದಿಂದವನ ಗತಿಯನಪ್ಪುವೆನೆಂದು, ಎಲ್ಲಿ ಪತಿಯಿದ್ದರೆ ಸಗ್ಗ. ಅನುರಾಗವಿದ್ದಲ್ಲಿ ವೈಕುಂಠ, ಪ್ರೇಮವೆಲ್ಲಿರುವುದೋ ಅಲ್ಲಿ ಕೈಲಾಸ……’ ಎಂದಾಗ ಅವಳ ಪತಿ ಪ್ರೇಮ ಉನ್ನತ ಭಾವನೆಗೆ ಮೆಚ್ಚಿದ ಯಮರಾಯ ಮತ್ತೊಂದು ವರವ ನೀಡುವೆನು ಕೇಳಿಕೊ ಎಂದಾಗ, ಈ ಮೊದಲಿನ ಎರಡು ವರಗಳನ್ನು ಕೇಳಿದಾಗ ಮಾವನ ಹಿತಾಸಕ್ತಿಗೆ ಸಂಬಂಧಿಸಿದಂತೆ ಈ ಸಲವೂ ಮುಂದಾಲೋಚನೆಯಿಂದ ಕೇಳುವುದು ಹೀಗೆ ‘ನನ್ನ ಮಾವನ ವಂಶ ಹಾಳಾಗದಿರಲಿ ; ಅವನ ನೆಲ ಸತ್ಯವಾನನ ಸುತರ ಕೈಸೇರಲಿ ಎಂದು ಬೇಡುವೆನು; ನೀಡೆನಗೆ ವರವ !’ ಎನ್ನುತ್ತಾಳೆ. ವರವ ಕೇಳಿದ ಮಾತುಗಳಲ್ಲಿಯ ದೂರದೃಷ್ಟಿತ್ವವನ್ನು ಗ್ರಹಿಸಿದರೂ ವಿಧಿಯಿಲ್ಲದೇ ‘ತಥಾಸ್ತು’ ಎಂದು ನಗುತ್ತಾ ವರವ ದಯಪಾಲಿಸುವನು. 

ತಥಾಸ್ತು ! ಎಲೆ ತಾಯೆ, ನಿನ್ನೊಲುವೆ ಮೃತ್ಯುವನು 

ಜಯಿಸಿತಿಂದು ! ಧರ್ಮವೊಲವಿಗೆ ಮಣಿದು

ಶರಣಾಯಿತಿಂದು ! ನಿಯಮವನುರಾಗಕ್ಕೆ

ಮೈಸೋತಿತಿಂದು ! ಮಿರ್ತುವನು ಎದಯೊಲವು

ಗೆದ್ದಿತಲೆ ತಾಯೆ ! ನಿನ್ನಿನಿಯನನ್ನಿಗೋ 

ಕೊಟ್ಟಿಹೆನು. ತೆರಳು ಸುಖಿಯಾಗಿ ಬಾಳು

 

ಎಂದು ಸತ್ಯವಾನನ ಜೀವಾತ್ಮವನ್ನು ತನ್ನ ಪಾಶದಿಂದ ಬಿಡುಗಡೆಗೊಳಿಸಿ 

 

ನಿನ್ನ ಪ್ರೇಮದ ಮುಂದೆ ನನ್ನ ಶಕ್ತಿಯು ಜಳ್ಳು

ಹೋಗಿ ಬರುವೆನು ತಾಯೆ. ಸುಖಿಯಾಗಿ ಬಾಳು

ಯಮನ ಜಯಿಸಿದ ಕತೆಯ ಜಗಕೆಲ್ಲ ಹೇಳು

 

ಎಂದು ಅವಳಿಗೆ ಶುಭಹಾರೈಸಿ ತನ್ನ ಲೋಕಕ್ಕೆ ಸೋತು ಬರಿಗೈಯಲಿ ತೆರಳುತ್ತಾನೆ. ಕೊನೆಯ ದೃಶ್ಯ ಉಪಸಂಹಾರದಲ್ಲಿ ಯಮದೂತ ಮತ್ತು ಯಕ್ಷ ಇಬ್ಬರೂ ಇಂತಹ ಮಹತ್ವದ ಘಟನೆಯನ್ನು ಕೊಂಡಾಡುತ್ತಾ ಎಂದಿನಂತೆ ಪೌರಾಣಿಕ ನಾಟಕಗಳ ಕೊನೆಯಲ್ಲಿ ಆಗಿನ ಎಲ್ಲ ನಾಟಕಕಾರರು ಪಾತ್ರಗಳ ಮೂಲಕ ಹೇಳಿಸುವಂತೆ ಕುವೆಂಪುರವರು ಸಹ ಈ ಕಥಾನಕವನ್ನು ನೋಡಿದವರಿಗೂ, ನಾಟಕವಾಡಿದವರಿಗೂ, ಮಾಡಿಸಿದವರಿಗೂ ಪುಣ್ಯಸಿಗಲಿ, ಮುಕ್ತಿಯೊಂದಿಗೆ ಯುಕ್ತಿಯೆಂಬ ಜಾಣತನ ಬೆಳೆಯಲಿ ಎಂದು ಹಾರೈಕೆಯ ಸಂಭಾಷಣೆ ಹೇಳಿಸಿದ್ದಾರೆ. 

ರಂಗಕೃತಿಯೊಂದು ನಾಟಕ-ಪ್ರಯೋಗವಾಗಿ ರಂಗದಲ್ಲಿ ಅನಾವರಣಗೊಂಡಾಗ (ಇತ್ತೀಚೆಗೆ 26.12.2012ರಂದು ಮೈಸೂರಿನ ರಂಗಾಯಣದಲ್ಲಿ ಈ ನಾಟಕ ಪ್ರಯೋಗವನ್ನು ವಿ.ಕ.ಸಂ.ಭದ್ರಾವತಿ ತಂಡದವರು ಶಂಕರಮೂರ್ತಿ ನಿರ್ದೇಶನದಲ್ಲಿ ಅಭಿನಯಿಸಿದ್ದನ್ನು ನೋಡಿದ ನಂತರ ನನ್ನಲ್ಲಿ ಅನಿಸಿದ್ದು) ಕುವೆಂಪುರವರು ತರ್ಕಕ್ಕೆ ಮೀರಿದ ಅತಿಮಾನಸ ಸನ್ನಿವೇಶವನ್ನು ಸೃಷ್ಟಿಸುವುದರಲ್ಲಿ ಯಶಸ್ವಿಯಾಗಿದ್ದಾರೆಂದರೆ ಅತಿಶಯೋಕ್ತಿಯೇನಲ್ಲ. ಸಾವಿತ್ರಿ ಕ್ಷಣ-ಕ್ಷಣಕ್ಕೂ ಯಮನನ್ನು ಹಿಂಬಾಲಿಸುತ್ತಾ ಆತ ಬರಬೇಡವೆಂದು ಹೇಳಿದಾಗಲೊಮ್ಮೆ, ಮಾತಿನ ಮೂಲಕ ಧರ್ಮಸಂಕಟದಲ್ಲಿ ಕೆಡವಿದಾಗ, ಮಗುವನ್ನು ಸಂತೈಸುವಂತೆ ಪ್ರತಿಸಾರಿ ಒಂದೊಂದು ವರವ ನೀಡುವ ಯಮ, ಪತಿಯೇ ಪರದೈವವೆನ್ನುವ ಭಾರತೀಯ ನಾರಿಯರ ಮನಸ್ಸಿನ ಒಂದೊಂದು ಸ್ಥಿತಿ ಎಂದು ಅರ್ಥೈಸಿಕೊಳ್ಳಬೇಕಾಗುತ್ತದೆ. ಈ ದೃಷ್ಟಿಕೋನದಲ್ಲಿ ನಾವು ಯೋಚಿಸಿದಾಗ ಇದೊಂದು ಪ್ರಭಲ ಪ್ರತಿಮೆಯಾಗಿ ಗೋಚರಿಸುತ್ತದೆ. ಪುರಾಣ ಕಾಲದ ಉಪಕಥೆಯೊಂದನ್ನು ಆಯ್ಕೆ ಮಾಡಿಕೊಂಡು ಸದೃಢ ರಂಗಪ್ರತಿಮೆಯನ್ನಾಗಿ ಕಟ್ಟಿದ ಕಲಾಪ್ರಾವಿಣ್ಯತೆಯಿಂದ ಕುವೆಂಪುರವರು ನಾಟಕದ ನಂತರವೂ ಕಾಡುತ್ತಾರೆ. ನಾಟಕ ಓದಿದ/ನೋಡಿದ ನಂತರವೂ ಅವರು ಕಟ್ಟಿದ ಒಂದೊಂದು ದೃಶ್ಯಾವಳಿಗಳು, ಸಂಭಾಷಣೆಗಳು ಮನದಲ್ಲಿ ಕಾವ್ಯಾತ್ಮಕ ಅಲೆಗಳು ಕಡಲಾಳದಿಂದ ಉಕ್ಕಿ ಬಂದಂತೆ, ವನಸುಮವೊಂದು ತನಗರಿವಿಲ್ಲದಂತೆ ಅರಳಲು ವಸಂತನಾಗಮನವಾದಂತೆನಿಸುತ್ತದೆ. 

(ಮುಂದುವರಿಯುತ್ತದೆ……)

*****

-ಹಿಪ್ಪರಗಿ ಸಿದ್ದರಾಮ್, ಧಾರವಾಡ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Jyaprakash abbigeri
Jyaprakash abbigeri
10 years ago

ಉಪಯುಕ್ತ ಮಾಹಿತಿಯೊಂದಿಗೆ ಲೇಖನ ಚೆನ್ನಾಗಿ ಮೂಡಿ ಬಂದಿದೆ…

Hipparagi Siddaram
Hipparagi Siddaram
10 years ago

ThanQ….

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
10 years ago

ಚೆನ್ನಾಗಿ ವಿಮರ್ಶಿಸಿ ಸುದೀರ್ಘವಾದ ಲೇಖನ ಕೊಟ್ಟಿದ್ದೀರ. ಧನ್ಯವಾದಗಳು. 🙂

Hipparagi Siddaram
Hipparagi Siddaram
10 years ago

ಧನ್ಯವಾದಗಳು ಮೇಡಮ್…ಜಿ….

4
0
Would love your thoughts, please comment.x
()
x