ನಿನ್ನ ಕವನಗಳು ಓದುಗರನ್ನು ಬೆಚ್ಚಿ ಬೀಳಿಸದಿದ್ದರೆ ಅವುಗಳಿಂದೇನು ಪ್ರಯೋಜನ ಬೋದಿಲೇರ್ ಹೇಳಿದ ಮಾತುಗಳನ್ನು ನೆನಪಿಸಲೆಂದೇ ಹೊಸದೊಂದು ಕವನ ಸಂಕಲನ ಹೊರಬಂದಿದೆ. ನಾನು ಪದೇ ಪದೇ ಬೋದಿಲೇರ್ ಎಂದೇ ಕರೆಯುವ ಗೆಳೆಯ ವಿ. ಆರ್ ಕಾರ್ಪೆಂಟರ್ ಕವನ ಸಂಕಲನ ಹೊರಬಂದಿದೆ. ಕವನ ಸಂಕಲನದ ಮೊದಲ ಓದುಗಳಾಗಿ ನಾನೀಗಾಗಲೇ ನನ್ನ ಅನುಭವವನ್ನು ದಾಖಲಿಸಿದ್ದಾಗ್ಯೂ ಕೂಡ ಕಂಪ್ಯೂಟರ್ ಪರದೆಯಲ್ಲಿ ಇಣುಕಿಣುಕಿ ಓದುವುದಕ್ಕೂ, ಕೈಯ್ಯಲ್ಲಿಯೇ ಪುಸ್ತಕ ಹಿಡಿದು ಓದುವ ಸುಖಕ್ಕೂ ಇರುವ ವತ್ಯಾಸ ಅಗಾಧವಾದದ್ದು. ಹೀಗಾಗಿ ಈಗಿನ ಅನುಭವಗಳು ಮತ್ತೂ ಭಿನ್ನವಾಗಿಯೇ ಇದೆ.
ಬೋದಿಲೇರ್ ಹೇಳಿಕೆಯಂತೆ ಸಂಕಲನದ ಬಹುತೇಕ ಕವನಗಳೆಲ್ಲವೂ ಬೆಚ್ಚಿ ಬೀಳಿಸುತ್ತ ಮೊದಲ ನೋಟಕ್ಕೇ ಬೊದಿಲೇರ್‌ನ ಕವನಗಳ ಶೈಲಿಯನ್ನು ನೆನಪಿಸುವಂತೆ ಮಾಡುತ್ತದೆ. ಮೊದಲ ಕವನವೇ ಬೋದಿಲೇರ್‌ನ ಪಾಪದ ಹೂಗಳ ಮದ್ಯ ಕುಡಿಯುತ್ತ ಪ್ರಿಯತಮೆಗಾಗಿ ಪರಿತಪಿಸುವ ಬೋದಿಲೇರ್‌ನನ್ನು ಕಣ್ಣೆದುರಿಗೆ ತರುತ್ತದೆ. ಮೊದಲ ಕವನ ’ಗಡಿಯಾರ’ದ ಮೊದಲ ಸಾಲನ್ನೇ ತೆಗೆದುಕೊಳ್ಳಿ.
ನನ್ನ ಪ್ರೀಯ ಗೆಳತಿ,
ನೀನೀಗ ಗರ್ಭಕಟ್ಟುವ ವೇಳೆಯ
ಗಡಿಯಾರವನ್ನು ಕಟ್ಟಿದ್ದೀಯ ಎಂದು ತಿಳಿದು ಉದ್ರೇಕಗೊಂಡಿದ್ದೇನೆ.
ಬಹುಶಃ ಸಂಕಲನದ ಪ್ರತಿಯೊಂದು ಸಾಲುಗಳೂ ನಮ್ಮನ್ನು ಇದೇ ರೀತಿಯ ಉದ್ವೇಗಕ್ಕೆ ಕೆಡವುತ್ತ ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಇಡೀ ಕವನವು ಜೀವನದ ವಿವಿಧ ಹಂತಗಳನ್ನು ವಿವರಿಸುತ್ತದೆ. ಹಳ್ಳಿಗನ್ನು, ಮಿಡಿ ಚಿಟ್ಟೆಗಳನ್ನು, ಹೂ ಮಾರುವ ಹುಡುಗಿಯನ್ನು, ಪೋಲಿ ಹುಡುಗನನ್ನು ನೆನಪಿಸಿಕೊಳ್ಳುತ್ತಲೇ ಗಾಂಧಿಜಿಯವರ ಅಹಿಂಸೆಯನ್ನು, ಅಂಬೇಡ್ಕರ್, ಬುದ್ಧನನ್ನು, ಲಂಕೇಶರನ್ನೂ ಇಂದಿರಾ, ಚೆಗುವಾರ, ಡಾಲಿಯನ್ನೂ ಅದೇ ಗುಕ್ಕಿನಲ್ಲಿ ನೆನಪಿಸುತ್ತದೆ. ಇಷ್ಟಾಗಿಯೂ ಕೂಡ ಒಂದು ಅವ್ಯಕ್ತ ಮೂರ್ತತೆಯೆಡೆಗೆ ಮುಖ ಮಾಡಿದ ಕವಿಯನ್ನೂ ಈ ಕವನ ಬಿಚ್ಚಿಡುತ್ತದೆ.
ಇಡೀ ಕವನ ಸಂಕಲನವು ಎಷ್ಟು ವಿಕ್ಷಿಪ್ತತೆಯಿಂದ ಕೂಡಿದೆಯೋ ಅಷ್ಟೇ ಆಪ್ತತೆಯನ್ನೂ ಮೈಗೂಡಿಸಿಕೊಂಡಿದೆ. ನಗರದ ದೇಹ ಎಂದು ಎರಡು ಭಾಗಗಳಲ್ಲಿರುವ ಎರಡು ಕವನಗಳು ಇಡೀ ನಮ್ಮ ಜೀವನದ ಭ್ರಮೆಯನ್ನು ಸಾರಾಸಗಟಾಗಿ ನಗ್ನಗೊಳಿಸುತ್ತದೆ. ನಗರೀಕರಣದ ವಿವಿಧ ಮಗ್ಗಲುಗಳು ಹೇಳಿಯೂ ಹೇಳದ ರೀತಿ ಯಲ್ಲಿ ಅನಾವರಣಗೊಳ್ಳುವುದನ್ನು ಓದಿಯೇ ಆಸ್ವಾದಿಸಬೇಕು.
ಈ ನಗರ ಚಪ್ಪಟೆಯಾಗಿಲ್ಲ
ಬದಲಿಗೆ ಹಕ್ಕಿ ಕಿತ್ತು ತಿಂದ ಹಣ್ಣಿನಂತಿದೆ
ಅರೆ ಹುಚ್ಚನ ಎಚ್ಚರ ಮತ್ತು ಭ್ರಮೆಯಲ್ಲಿ
ಅಸ್ತವ್ಯಸ್ತಗೊಂಡು ಈ ನಗರ ಹಾಡುತ್ತಿದೆ
ಕೀರಲು ದನಿಯೊಂದಿಗೆ
ಎನ್ನುವ ನಗರದ ದೇಹ ಕವನದ ಸಾಲುಗಳಾಗಲಿ ಅಥವಾ ’ನಗರದ ದೇಹ-೨’ ರ
ಅಲ್ಲಿನ ಭೂಮಿ ಪ್ರೇಮ ನುಂಗುವ
ಕುಳಿ ಮತ್ತು ರಂದ್ರಗಳನ್ನು ಏಕಕಾಲಕ್ಕೆ ಸೃಷ್ಟಿಸುತ್ತಿದೆ
ಜನಗಳು ಕ್ರಿಮಿಗಳಂತೆ ಕಾಣುತ್ತಲೇ
ಉರಿದ ಪ್ರೇಮದ ಬೂದಿಗಾಗಿ ಕುಳಿ ಮತ್ತು ರಂದ್ರಕ್ಕೆ
ನಾಲಿಗೆ ಚಾಚುತ್ತಿದ್ದಾರೆ
ಎಂತಹ ಅರ್ಥಪೂರ್ಣವಾದ ಸಾಲುಗಳು. ಕಾರ್ಪೆಂಟರ್ ಕವನಗಳನ್ನು ಓದುವುದೆಂದರೆ ಹಾಗೆ…ಸಾಲು ಸಾಲು ಪ್ರತಿಮೆಗಳನ್ನು ತಂದು ಎದುರಿಗೆ ನಿಲ್ಲಿಸಿ ಒಂದು ಕ್ಷಣ ಕಣ್ಣೆದುರಿಗೆ ಭ್ರಮಾಲೋಕವನ್ನೇ ಸೃಷ್ಟಿಸಿ ಬಿಡುತ್ತಾರೆ. ಕನ್ನಡದ ಅದ್ಭುತ ಫ್ಯಾಂಟಿಸಿ ಕಾದಂಬರಿ ಎಂದೇ ಹೆಸರುಗಳಿಸಿದ ಅವರ ’ನೀಲಿಗ್ರಾಮ’ ಓದಿದವರಿಗೆ ಇದು ಹೊಸದು ಎನ್ನಿಸದಿದ್ದರೂ ಕವನಗಳ ಮಟ್ಟಿಗೆ, ಅದೂ ಕನ್ನಡ ಕವನಗಳ ಇವು ಮಟ್ಟಿಗೆ ಹೊಸ ಹೊಸ ಪ್ರತಿಮೆಗಳು.
ನನ್ನನ್ನು ಬೀಡಾಡಿ ದನಗಳ ಯುದ್ಧಕ್ಕೆ ರೆಫರಿಯನ್ನಾಗಿ
ನೇಮಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ
ಎನ್ನುವಲ್ಲಿ ಬೀಡಾಡಿ ದನಗಳ ಯುದ್ಧದ ರೆಫರಿ ಎಂಬ ಪ್ರತಿಮೆ ಹಾಗೂ,
ರಕ್ತವನ್ನು ಹೆಪ್ಪಾಗಿಸುತ್ತಲೇ
ತಲೆಯನ್ನು ಭೂಮಿಗೆ ಹುಗಿವ
ನೆಡುತೋಪುಗಳ ತುಂಬೆಲ್ಲ
ಭೂತದ ಮರಗಳನ್ನು ನೆಟ್ಟಿದ್ದು
ಸುಳ್ಳೆಂದು ವಾದಿಸುತ್ತಾಳೆ
ಎನ್ನುವಲ್ಲಿ ತಲೆಯನ್ನು ಭೂಮೆಗೆ ಹುಗಿವ, ಭೂತದ ಮರವನ್ನು ನೆಡುವ ಬೇರಿನಾಳದಲ್ಲಿ ಹಾವಸೆಯನ್ನು ಸುತ್ತಿಸುವ ಪ್ರತಿಮೆಗಳು ಹೊಸದಾದ ಶಬ್ಧವನ್ನೇ ಕೇಳುತ್ತಿರುವ ಭಾವ ಹುಟ್ಟಿಸುತ್ತದೆ.
ದಯವಿಟ್ಟು ಕ್ಷಮಿಸಿಬಿಡಿ
ಅತೃಪ್ತ ಆತ್ಮಗಳೇ
ನಾಳಿನ ನಿಮ್ಮ ರೋಗಗ್ರಸ್ಥ
ಕನಸುಗಳಿಗೆ ನನಸಾಗದ ಅಂಗವಿಕಲ ಸಾಕಾರಗಳಿಗೆ
ಮುಲಾಮು ತಯಾರು ಮಾಡುವಲ್ಲಿ ತಲ್ಲೀನನಾಗಿದ್ದೀನಿ
ನಿಮ್ಮ ಕನಸುಗಲನ್ನು ಕೊಂದು
ಆದಷ್ಟು ಬೇಗ ನಿಮ್ಮನ್ನು ಸೇರಿಕೊಳ್ಳುವೆ
ಎನ್ನುವ ಸಾಲುಗಳಲ್ಲಿ ಕಾಣುವ ಪ್ರತಿಮೆ ದಿಗ್ಭ್ರಮೆ ಹುಟ್ಟಿಸುತ್ತದೆ.
’ಭಾರತ ಗೆಲ್ಲಿಸಬೇಕಂತೆ’ ಎನ್ನುವ ಖಂಡ ಕಾವ್ಯದ ಮಾದರಿಯಲ್ಲಿರುವ ನೀಳ್ಗವಿತೆ ಎರಡು ವೈರುಧ್ಯಗಳನ್ನು ಯಥಾವತ್ತಾಗಿ ಚಿತ್ರಿಸುತ್ತದೆ. ತಾತನ ಕಾಲಮಾನದಿಂದಲೂ…. ಕವನವು ಕಥಾನಕ ಶೈಲಿಯಲ್ಲಿದ್ದರೆ, ಗತಿ ಸಿದ್ಧ ಗುರು ಎನ್ನುವ ಕವನವು ಒಂದು ಅಂಧ ಅನುಕರಣೆಯನ್ನು ಬಿಂಬಿಸುತ್ತದೆ. ಪ್ರಸಾರ ಕಪ್ಪು-ಬಿಳುಪು ಬುದ್ಧನೆಂದರೆ ಕವನಗಳು ಮೇಲ್ನೋಟಕ್ಕೆ ಕಠಿಣವಾಗಿದ್ದರೂ ಒಳಾರ್ಥ ನಮ್ಮನ್ನು ತಟ್ಟುತ್ತದೆ.
ಅಪ್ಪನ ಚಿತ್ರ ನಾನು ಇಷ್ಟ ಪಟ್ಟ ಕವಿತೆ. ಅಪ್ಪನನ್ನು ಅಪ್ಪನ ಗುಣಾವಗುಣಗಳೊಡನೆ ಹೇಳುವ ಒಂದು ಅದ್ಭುತ ವ್ಯಕ್ತಿಚಿತ್ರ ನೀಡುವ ಕವನ. ಅಪ್ಪನ ಕುರಿತು ಹಲವು ವಿಷಯಗಳನ್ನು ಎಗ್ಗಿಲ್ಲದೇ ಹೇಳುವ ಕವನದ ಕೊನೆಯ ಸಾಲುಗಳು ಆಪ್ತವಾಗುತ್ತವೆ.
ಅಪಾರ ಪ್ರಾಮಾಣಿಕತೆ,ಜಿಗುಟುತನ, ಸ್ವಾಭಿಮನದ ಬೆನ್ನಿಗೆ
ಸ್ವತಂತ್ರವಾಗಿ ಬದುಕು ಎಂದು ಕಲಿಸಿ ಹೋದ ಬಡಗಿತನ…
ಹೌದು, ಕೈಗೆ ಹತ್ತಿದ ಬಡಗಿತನವನ್ನು ಬಿಟ್ಟು ಅಕ್ಷರವನ್ನು ಪ್ರೀತಿಸ ಹೊರಟ ಕಾರ್ಪೆಂಟರ್ ಅದೇ ಕ್ಷೇತ್ರದಲ್ಲಿದ್ದರೆ ಆರಾಮವಾಗಿ ಜೀವನ ನಡೆಸಿಕೊಂಡಿರಬಹುದಿತ್ತು ಅಂತಾ ತುಂಬಾ ಸಲ ಅನ್ನಿಸಿ, ಅದನ್ನು ಹೇಳಿಯೂ ಬಿಟ್ಟಿದ್ದೇನೆ. ಕೊನೆಯದಾಗಿ ಶೀರ್ಷಿಕಾ ಕವನ ’ಅಶ್ಲೀಲ ಕನ್ನಡಿ’ ಕೂಡ ತನ್ನ ವಿಶಿಷ್ಟ ಪ್ರತಿಮೆಗಳಿಂದ ಗಮನ ಸೆಳೆಯುತ್ತದೆ. ತನ್ನ ಹಿಂದಿನ ಸಂಕಲನ ’೫ನೆ ಗೋಡೆಯ ಚಿತ್ರಗಳು’ ಇಲ್ಲಿ ಉಳಿ, ಸುತ್ತಿಗೆ, ಗರಗಸ, ಮುಂತಾದ ತನ್ನ ಕಾರ್ಪೆಂಟರಿ ಹತಾರಗಳ ಪ್ರತಿಮೆಗಳಿಂದ ಗಮನ ಸೆಳೆದಿದ್ದ ವಿ. ಆರ್ ಈ ಸಂಕಲನದಲ್ಲಿ ಜಗತ್ತಿನ ಎಲ್ಲಾ ವಿಷಯಗಳನ್ನೂ ಪ್ರತಿಮೆಗಳನ್ನಾಗಿಸಿದ್ದಾರೆ.
ಎಷ್ಟೇ ಬರೆದರೂ ಇಡೀ ಸಂಕಲನದ ವಿಕ್ಷಿಪ್ತ, ವಿಶಿಷ್ಟ ಅನುಭವಗಳನ್ನು ಒಂದೇ ಓದಿಗೆ, ಗುಕ್ಕಿಗೆ ಹಿಡಿದು ಕೊಡುವುದು ಸಾಧ್ಯವೇ ಇಲ್ಲದ್ದರಿಂದ ಅವರ ಕವನದ ಒಂದಿಷ್ಟು ಝಲಕ್‌ಗಳು ನಿಮಗಾಗಿ…
ಅಲ್ಲಿಂದ ಹತ್ತು ಹೆಜ್ಜೆ ಹಿಂದೆ ಬಂದರೆ ಸಾಕು
ಘನ ಸರ್ಕಾರದವರು ಕನಸುಗಳು ಬೀಳುವ ಮರಗಳನ್ನು ನೆಟ್ಟಿದ್ದಾರೆ
—***—
ಅಲ್ಲಿನ ಪಾಚಿಗಳು ನಿನ್ನ ನಿರ್ಜೀವ ಕೂದಲಿನ ಹಾಗೆ
ಬಿದ್ದುಕೊಂಡಿರುತ್ತವೆ
ಅವು ನಿನ್ನನ್ನು ರಮಿಸಿದಂತೆ ನನ್ನನ್ನು
ರಮಿಸುವುದಕ್ಕೇಕೋ ಸಂಕೋಚ ಪಟ್ಟಂತಿವೆ
—***—
ಕೆಲವು ರಾತ್ರಿಗಳಲ್ಲಿ ನಿನ್ನ ಹಸಿವು ತೀರಿದ ಬಳಿಕ
ನಾನೇನೂ ಹಾಗೆ ಗಾಢ ನಿದ್ದೆಗೆ ಜಾರುವುದಿಲ್ಲ
ನಿನ್ನ ಹಸಿವಿನ ಕುರಿತೆ ಬರೆಯುತ್ತೇನೆ
—
—-
—-
ನಿರ್ದಾಕ್ಷಿಣ್ಯದ ಮನಸ್ಥಿತಿಯ ನಡುವೆಯೂ ಉಳಿಸಿಕೊಂಡ
ಎಷ್ಟೋ ಪದ್ಯಗಳು ಈಗಲೂ ಹಸಿದ ಸಿಂಹಗಳಂತೆ ನನ್ನ
ರಕ್ತದಲ್ಲಿ ಇವೆ.
—***—
ನನಗೆ ಗೊತ್ತು ಹುಡುಗಿ ನೀನು ಕಲಿತವಳು
ನಿನ್ನ ಪ್ರೇಮವನ್ನು ನನ್ನ ದೇಹದ ಕಾವಿನಲ್ಲಿ ಮಾಗಿಸಿದವಳು
ನನ್ನ ಗೂಢ ಲಿಪಿಯಲ್ಲೂ
ಪ್ರೇಮ ನಿವೇದನೆಯ ಪದಗಳನ್ನಷ್ಟೇ ಹುಡುಕಿದವಳು
—-***—
ಹ್ಹ ಹ್ಹ ಹ್ಹ
ಈಗ ಏನೂ ಸಿಕ್ಕುತ್ತಿಲ್ಲ
ನನ್ನ ಕೊಲೆಗಾರರಿಗೆ
ನಾನೀಗ ಶೂನ್ಯವಾಗಿದ್ದೇನೆ
ನನ್ನ ಶೂನ್ಯವನ್ನು ಎಂದೋ
ಕೊಲ್ಲಲಾಗಿದೆ
—***—
ಈ ಜಗತ್ತು ನಿಂತಿರುವುದೇ
ನಕ್ಷತ್ರಗಳ ಹಾದಿಗೆ ಬಿದ್ದ
ಕೆಂಪು ದಾಸವಾಳಿಗನ ಹರಿದ
ಬುಟ್ಟಿಯಲ್ಲಿ ಬುಸುಗುಡುವ
ಹೂವಿನಹೆಡೆಯ ಮೇಲೆ
—***—
ಪಾದರಸದ ಗುಂಗಿನಲಿ ನಿದ್ದೆಗೆ ಜಾರಿರುವ ಮುಷ್ಟಿಕಾಳಗದ ಸ್ಪರ್ಧಾಳುಗಳಿಗೆ
ಈ ಮೊದಲು ನಿರಾಕರಿಸಿದ ಪ್ರಶ್ನಾರ್ಥಕ ಚಿನ್ಹೆಗಳ ಮದವೇರಿಸು…
ಓದಿದಷ್ಟೂ ಎದುರಾಗುವ ಹೊಸ ಹೊಸ ಪ್ರತಿಮೆಗಳು, ಅನುಭವಗಳು, ಬೆಚ್ಚಿ ಬೀಳಿಸುವ ಸಾಲುಗಳು ಓದುಗರನ್ನು ಹೊಸತೇ ಆದ ಲೋಕಕ್ಕೆ ಕರೆದೊಯ್ಯುತ್ತದೆ. ಆದರೂ ತುಸು ಹಚ್ಚೇ ಎನ್ನಿಸುವ ಗದ್ಯ ಶೈಲಿ, ಕೆಲವೊಮ್ಮೆ ಗೊಂದಲಗೊಳಿಸುವ ಅತಿಯಾದ ಪ್ರತಿಮೆಗಳನ್ನು ಹೊರತು ಪಡಿಸಿದರೆ ಇಡೀ ಸಂಕಲನ ಬೇಸರವಿಲ್ಲದೇ ಒಂದೇ ಓದಿಗೆ ಓದಿಸಿಕೊಂಡು ಹೋಗುತ್ತದೆ.
ಕವಿತೆಯ ಸಾಲುಗಳು ಹುಟ್ಟಿ ಓದುಗನಿಗೆ ಬುತ್ತಿ ಕಟ್ಟಿಸುವಂತಿವೆ.