ಪೂರ್ವಜರ ಪರಿಸರ ಪ್ರೇಮ: ಕೆ ಟಿ ಸೋಮಶೇಖರ ಹೊಳಲ್ಕೆರೆ.

ನಾಗಾಭರಣನಾದ ನಟರಾಜ! ನಾಗನನ್ನು ಸೊಂಟದ ಪಟ್ಟಿ ಮಾಡಿಕೊಂಡಿರುವ ಲಂಬೋದರ! ಶೇಷಶಯನನಾದ ವಿಷ್ಣು! ಕಾಡಿನ ರಾಜ ಸಿಂಹವಾಹನೆಯಾದ ಆದಿಶಕ್ತಿ! ನಂದಿವಾಹನನಾದ ನಂದೀಶ! ಮಹಿಷ ವಾಹನನಾದ ಯಮಧರ್ಮ! ಮರದ ಕೆಳಗೆ ಕುಳಿತು ಪಶುಗಳಿಂದ ಸುತ್ತುವರಿಯಲ್ಪಟ್ಟು ಪಶು ಪಕ್ಷಿ ಪರಿಸರ ಪ್ರೇಮಿ ಪಶುಪತಿ! ಕೊಳಲ ನುಡಿಸುತ ಗೋವುಗಳ ಮಧ್ಯ ನಿಂತ ಗೋಪಾಲ! ಜ್ಞಾನದ ಸಂಕೇತವಾದ ಗಜ ತಲೆಯ ಗಜಾನನ! ನಾಗಯಜ್ಞೋಪವೀತನಾದ ವಿಘ್ನೇಶ್ವರ! ಕುರಿ ತಲೆಯ ದಕ್ಷಬ್ರಹ್ಮ! ಹದಿನಾರು ವಿಷ್ಣುವಿನ ಅವತಾರಗಳಲ್ಲಿ ಒಂದಾದ ಹಂದಿಯ ತಲೆಯುಳ್ಳದ್ದಾದ ವರಹಾವತಾರ! ಪಕ್ಷಿರಾಜ ಗರುಡವಾಹನನಾದ ವಿಷ್ಣು! ಸುಂದರ ಪಕ್ಷಿ ನವಿಲು ವಾಹನನಾದ ಷಣ್ಮುಖ! ನಿಶಾಚಾರಿಯಾಗಿ ಕತ್ತನ್ನು ಸುತ್ತ ತಿರುಗಿಸುವ ಚಮತ್ಕಾರದ ಗೂಬೆವಾಹನೆಯಾದ ಲಕ್ಷ್ಮಿ! ದವಳ ವರ್ಣದ ಹಂಸ ವಾಹನೆಯಾದ ಸರಸ್ವತಿ! ಮೂಷಿಕ ವಾಹನನಾದ ಮೋದಕ ಪ್ರಿಯ! ರಾಮ ಬಂಟನಾದ ಹನುಮಂತ ಕಪಿ! ಕಾಕವಾಹನನಾದ ಕರ್ಮಫಲಧಾತ ಶನಿ! ಅನೇಕ ದೇವತೆಗಳು ಹಸುವಿನಲ್ಲಿ ಅಡಗಿದ್ದಾರೆಂದ ಪೂಜಿಸುವ ಕಾಮಧೇನು! ಹೀಗೆ ದೇವರು ದೇವತೆಗಳಿಗೆ ಆ ಪ್ರಾಣಿ ಪಕ್ಷಿಗಳ ಅವತಾರಗಳನ್ನು ವಾಹನಗಳನ್ನೂ ಆಭರಣಗಳನ್ನೂ ಮಾಡಿದ ಪ್ರಯುಕ್ತ ಆಯಾ ದೇವರು ದೇವತೆಗಳ ಜೊತೆಗೆ ಅವರ ಅವತಾರಗಳ, ವಾಹನಗಳ ಮತ್ತು ಆಭರಣಗಳನ್ನು ಪುರಾತನ ಕಾಲದಿಂದಲೂ ನಮ್ಮ ಪೂರ್ವಜರು ದೇವರಷ್ಟೇ ಬಯ ಭಕ್ತಿಯಿಂದ ಆರಾಧಿಸುತ್ತಾ ಪ್ರೀತಿಸುತ್ತಾ ಬರುತ್ತಿದ್ದಾರೆ! ಅವುಗಳನ್ನು ಮಾನವನ ಬದುಕು ಅವಲಂಭಿಸಿದೆ ಎಂದು ತಿಳಿದುದರಿಂದ ಆರಾದಿಸುತ್ತಿದ್ದರು! ಆರಾಧಿಸುವುದೆಂದರೆ ಅವುಗಳನ್ನು ನಾಶ ಮಾಡದಿರುವುದಷ್ಟೇ ಅಲ್ಲ ಅವುಗಳನ್ನು ಸಂರಕ್ಷಿಸುವುದು ಪೋಷಿಸುವುದು! ಆದ್ದರಿಂದ ಅವುಗಳ ಬಾರೀ ನಾಶಕ್ಕೆ ತಡೆಯಾಯಿತು! ಅವು ವೃದ್ದಿಸಿ ಸ್ವತಂತ್ರವಾಗಿ ಬದುಕುವಂತಾಯಿತು!

ಪಂಚಭೂತಗಳಾದ ಆಕಾಶ ಅಗ್ನಿ ವಾಯು ಭೂಮಿ ಜಲ ಇವುಗಳನ್ನು ಪುರಾತನ ಕಾಲದಿಂದಲೂ ನಮ್ಮ ಪೂರ್ವಜರು ದೈವವೆಂದು ಆರಾಧಿಸುತ್ತಾ ಬಂದಿದ್ದಾರೆ. ವಿಶ್ವ ಪಂಚಭೂತಗಳಿಂದಾಗಿದೆ. ಪಂಚಭೂತಗಳನ್ನು ಮಾನವನ ಬದುಕು ಅವಲಂಭಿಸಿದೆ. ಪಂಚಭೂತಗಳಿಲ್ಲದೆ ಮಾನವ ಬದುಕಲಾರ! ಮಾನವನ ದೇಹ ಸಹ ಪಂಚಭೂತಗಳಿಂದಾಗಿದೆ. ಮಾನವ ಸತ್ತ ನಂತರ ಪಂಚಭೂತಗಳು ಮಾನವನ ದೇಹದಲ್ಲಿರುವ ತಮ್ಮ ಅಂಶಗಳನ್ನು ತಮ್ಮಲ್ಲಿ ಲೀನ ಮಾಡಿಕೊಳ್ಳುತ್ತವೆ. ಜೀವಿ ಬದುಕಲು ಪಂಚಭೂತಗಳಲ್ಲಿ ಒಂದಾದ ಗಾಳಿ ಎಂಬ ಪ್ರಾಣವಾಯು ಎಲ್ಲಾ ಸಸ್ಯಕುಲ, ಜೀವಿಗಳು ಬದುಕಲು ಅವಶ್ಯಕ! ದೇಹದಲ್ಲಿ ಸಂಚಿರಿಸಿ ಸಚೇತನವಾಗಿರಿಸುವ ಅದನ್ನು ವಾಯು ದೇವ ಎನ್ನವೆವು! ದೇಹದಲ್ಲಿ ಶಾಖವಿದೆ. ಜಠರದಲ್ಲಿ ಜಠರಾಗ್ನಿ! ಇದಿಲ್ಲದೆ ಜೀರ್ಣಕ್ರೀಯೆ ನಡೆಯದು! ದೇಹ ಸಚೇತನವಾಗಿರದು! ಅದನ್ನು ಅಗ್ನಿ ದೇವ ಎನ್ನುವರು. ನೀರನ್ನು ಜೀವಜಲ ಎನ್ನುತ್ತೇವೆ. ಅದಿಲ್ಲದೆ ಯಾವ ಜೀವಿ ಬದುಕುವುದಿಲ್ಲ! ಚಯಾಪಚಯ ಕ್ರೀಯೆಗಳು ನಡೆಯವು, ಜಗತ್ತು, ದೇಹ ಅದಿಲ್ಲದೆ ಶುಚಿಯಾಗುವುದು! ಇದನ್ನು ಗಂಗಾದೇವಿ ಎನ್ನುತ್ತೇವೆ. ಎಲ್ಲರಿಗೆ ನೆಲೆನೀಡಿರುವ ನೆಲವೇ ಸಕಲ ಚರಾಚರ ವಸ್ತುಗಳಿಗೂ ನೆಲೆದಾಯಕ ನೆಲ! ಅದಿಲ್ಲದೆ ಯಾವ ಜೀವಿಗಳೂ ನಿಲ್ಲಲಾರವು, ಬದುಕಲಾರವು. ದೇಹವು ಮಣ್ಣಿನಿಂದಾಗಿದೆ! ಆ ಮಣ್ಣನ್ನು ಭೂದೇವಿ ಎನ್ನುವರು. ದೇಹದೊಳಗೆ ಖಾಲಿ ಜಾಗವಿದೆ. ಅದೇ ಆಕಾಶ! ಎಲ್ಲದಕ್ಕೂ ಯಾವುದು ಅವಕಾಶ ಮಾಡಿ ಕೊಡುತ್ತದೋ ಅದೇ ಆಕಾಶ! ದೇಹದಲ್ಲಿ ಎಲ್ಲಾ ಕ್ರೀಯೆಗಳು ನಡೆಯಲು ಅದು ಅವಶ್ಯಕ! ದೇಹದಲ್ಲಿರುವ ಅದನ್ನು ಆಕಾಶ ತನ್ನಲ್ಲಿ ಲೀನವಾಗಿಸಿಕೊಳ್ಳುತ್ತದೆ! ಋಷಿ ಮುನಿಗಳಂತೂ ಪಂಚಭೂತಗಳನ್ನು, ದೇವಾನು ದೇವತೆಗಳನ್ನು ಆರಾಧಿಸುತ್ತಾ ಯಾಗ ಯಜ್ಞಾದಿಗಳಿಂದ ಸಂತೃಪ್ತಿಗೊಳಿಸುತ್ತಾ ಬಂದಿರುತ್ತಾರೆ. ಪಂಚಭೂತಗಳಿಲ್ಲದೆ ಜೀವಜಗತ್ತು ಇಲ್ಲ ಎಂಬುದು ವೇಧ್ಯವಾಗಿಸಿಕೊಂಡುದರಿಂದಾಗಿ ಅವುಗಳನ್ನು ಕಲುಷಿತಗೊಳಿಸದೆ ರಕ್ಷಿಸುತ್ತಾ ಪೋಷಿಸುತ್ತಾ ಹೀಗೆ ದೈವೀಕರಿಸಿ ಆರಾಧಿಸುತ್ತಿದ್ದರು! ಇಂದು ಈ ಮೂಲ ಉದ್ದೇಶವಿದಿದ್ದರೆ ಇಷ್ಟೊಂದು ಪರಿಸರ ನಾಶವಾಗಿ, ನೀರಿಗೆ ಕ್ಷಾಮ ಬರುತ್ತಿರಲಿಲ್ಲ! ಪರಿಸರ ಮಾಲಿನ್ಯವಾಗುತ್ತಿರಲಿಲ್ಲ! ಗಂಗೆಯನ್ನು ಆರಾಧಿಸಿದರೂ ಅದನ್ನು ಕಲುಷಿತಗೊಳಿಸುತ್ತಿದ್ದಾರೆ. ಆರಾಧಿಸುವ ಇದನ್ನು ಕಲುಷಿತಗೊಳಿಸಬಾರದೆಂಬ ಭಾವ ಇಲ್ಲವಾಗಿದೆ!

ಮೂಲತೋ ಬ್ರಹ್ಮರೂಪಾಯ
ಮಧ್ಯತೋ ವಿಷ್ಣು ರೂಪಿಣೇ!
ಅಗ್ರತಃ ಶಿವರೂಪಾಯ
ವೃಕ್ಷರಾಜಾಯ ತೇ ನಮಃ!!

ಅಶ್ವತ್ಥ ವೃಕ್ಷದ ಬೇರಿನಲ್ಲಿ ಬ್ರಹ್ಮ, ಕಾಂಡದಲ್ಲಿ ವಿಷ್ಣುವು, ತುದಿಯಲ್ಲಿ ಮಹೇಶ್ವರ – ಹೀಗೆ ತ್ರಿಮೂರ್ತಿಗಳು ಸನ್ನಿಹಿತರಾಗಿರುತ್ತಾರೆ. ಇಂತಹ ವೃಕ್ಷರಾಜನಿಗೆ ವಂದನೆ!

ಹೀಗೇ ಪುರಾತನ ಕಾಲದಿಂದಲೂ ನಮ್ಮ ಪೂರ್ವಜರು ಅಶ್ವತ್ಥ ಕದಳಿ ತುಳಸಿ ಆಲ ಅರಳಿ ಅಶೋಕ ಮಾವು ಬನ್ನಿ ಮುಂತಾದ ಗಿಡ ಮರಗಳನ್ನು ಆರಾಧಿಸುತ್ತಿದ್ದರು. ಅವುಗಳಲ್ಲಿ ಅನೇಕ ದೇವರು ನೆಲೆಸಿದ್ದಾರೆಂದು ಕೆಲವರು ಅವುಗಳನ್ನು ಕುಲ ದೇವರನ್ನಾಗಿ ಮಾಡಿಕೊಂಡು ಆರಾಧಿಸುತ್ತಿದ್ದರು! ಆರಾಧಿಸುವುದೆಂದರೆ ಗೌರವಿಸುವುದು ರಕ್ಷಿಸುವುದು ಬೆಳೆಸುವುದು. ಏಕೆಂದರೆ ಎಲ್ಲಾ ಜೀವಿಗಳ ಬದುಕು ಗಿಡ ಮರಗಳನ್ನು ಅವಲಂಭಿಸಿದೆ. ಅವುಗಳ ನಾಶ ಜೀವ ಜಗತ್ತಿನ ಸರ್ವನಾಶ ಎಂದು ನಮ್ಮ ಪೂರ್ವಜರು ತಿಳಿದಿದ್ದರಿಂದ ವೃಕ್ಷಗಳನ್ನು ಪೂಜಿಸುತ್ತಾ ಗೌರವಿಸುತ್ತಿದ್ದರು, ವೃಕ್ಷಗಳ ಮಹತ್ವವನ್ನು ತಿಳಿದುದರಿಂದ ಅರಣ್ಯ ನಾಶ ಮಾಡದಿರಲೆಂದು, ರಕ್ಷಿಸಲೆಂದು, ಪೋಷಿಸಲೆಂದು ಅವುಗಳನ್ನು ದೈವೀಕರಿಸಿರಬಹುದು! ಅವು ಜೀವಿಗಳ ಆಹಾರ ಔಷಧ ಮಳೆ ಬೆಳೆ ಉಡುಪು ಉಸಿರು ವಸತಿಯಾಗಿರುವುದರಿಂದ, ಅನಿಲ ವಿನಿಮಯ ಮಾಡಿ ಕಾರ್ಬನ್ ಡಯಾಕ್ಸೈಡನ್ನು ಬಳಸಿಕೊಂಡು ವಾಯುವಿನಲ್ಲಿನ ಕಾರ್ಬಡೈಆಕ್ಸೈಡನ್ನು ಕಡಿಮೆ ಮಾಡಿ ವಾಯು ಮಾಲಿನ್ಯ ತಡೆಗಟ್ಟಿ ಮಾನವನಿಗೆ ಪ್ರಾಣವಾಯುವಾದ ಆಕ್ಸೀಜನನ್ನು ಪ್ರದಾಯಿಸಿ ಸಕಲ ಜೀವಿಗಳ ಉಸಿರಾಗಿ, ಮಳೆಯ ಇಳೆಗೆ ಇಳಿಯಿಸಿ ಭೂಮಿಗೆ ಹಸಿರ ಉಡಿಸುತ್ತಿರುವುದರಿಂದ ಜೀವಿಗಳ ದೈವವೇ ಸರಿ! ಆದರೆ ಇಂದು ಮರಗಳನ್ನು ಹುಡುಕಿ ಹುಡುಕಿ ಮಾರಣ ಹೋಮ ಮಾಡುತ್ತಿದ್ದಾರೆ! ಮಾರಣ ಹೋಮ ಮಾಡುತ್ತಾ ಆರಾಧಿಸುತ್ತಿರುವುದರಿಂದ ಅದರ ಮೂಲೋದ್ಧೇಶಕ್ಕೆ ವಿರುದ್ದವಾದುದಾಗಿದೆ. ಇದರಿಂದ ಗಿಡ ಮರಗಳು ಮಾಯವಾಗಿ ಮಾನವ ತನ್ನ ಸಮಾಧಿಯ ಜತೆಗೆ ಜೀವ ಜಗತ್ತಿನ ಸಮಾಧಿಯನ್ನೂ ಸುಂದರಗೊಳಿಸುವಂತೆ ಕಾಣುತ್ತಿದೆ! ರಾಮಾಯಣ ಮಹಾಭಾರತದ ಮಹಾ ಕಾವ್ಯಗಳಲ್ಲಿ ವನವಾಸ ಪಾಂಡವರ, ರಾಮ ಲಕ್ಷ್ಮಣ ಸೀತೆಯರ ಬದುಕಿನಲ್ಲಿ ಹಾಸುಹೊಕ್ಕಾಗಿತ್ತು! ಮುಖ್ಯವಾದ ಭಾಗವಾಗಿತ್ತು. ಮಾನವನ ಬದುಕಿನ ಉದ್ದೇಶ ಪುರುಷಾರ್ಥ ಸಾಧನೆ ಅದಕ್ಕೆ ಪೂರಕವಾಗಿ ನಾಲ್ಕು ಆಶ್ರಮಗಳನ್ನು ಹೇಳಿದ್ದಾರೆ. ಅದರಲ್ಲಿ ಎರಡು ಆಶ್ರಮಗಳು ವನವಾಸದಲ್ಲಿ ಕಳೆಯ ಬೇಕಾಗಿದೆ. ಋಷಿ ಮುನಿಗಳು ಕಾಡಿನಲ್ಲೇ ಬದುಕುತ್ತಾ ಪರಿಸರದಲ್ಲಿ ಒಡನಾಡುತ್ತಾ ಪರ್ವತಗಳಲ್ಲಿ ತಪಸ್ಸು ಮಾಡುತ್ತಾ ನೆಮ್ಮದಿ ಮುಕ್ತಿ ಕಂಡುಕೊಳ್ಳುತ್ತಿದ್ದಾರೆ. ಮಾನವ ಹುಟ್ಟಿ ಬೆಳೆದುದು ಕಾಡಿನಲ್ಲೇ! ಅರಣ್ಯದ ಭಾಗವಾಗಿದ್ದ! ಹುಟ್ಟಿ ಬೆಳೆದ ಕಾಡನ್ನು ಕಡಿದು ನಾಗರೀಕನಾದ! ಈಗ ಸಿರಿ ಸಂಪದ ಹೊಂದಿ ಸಂಭ್ರಮಿಸಲು ಕಾಂಕ್ರೆಟ್ ಕಾಡು ಕಟ್ಟಿ ಅನಾಗರೀಕ, ರಾಕ್ಷಸನಾಗುತ್ತಿದ್ದಾನೆ! ಅಮರನಾಥ, ಕೇದಾರನಾಥ, ತಿರುಪತಿ, ಬಾಹುಬಲಿ, ಧರ್ಮಸ್ಥಳದ ಮಂಜುನಾಥ, ಅನ್ನಪೂರ್ಣೇಶ್ವರಿ ಮುಂತಾದ ಪ್ರಸಿದ್ದ ದೇವಮಂದಿರಗಳು ಪ್ರಕೃತಿಯ ಮಡಿಲಲ್ಲೇ ಇವೆ! ಆದ್ದರಿಂದ ಕಾಡು ಬಹು ಮುಖ್ಯ! ಆಧುನಿಕ ಮಾನವ ಕಾಂಕ್ರೇಟ್ ಕಾಡಿನಲ್ಲಿದ್ದರೂ ನಿಜವಾದ ಮರಗಳ ಅರಣ್ಯವೆ ಅವರಿಗೆ ಇಂದೂ ಸಹ ಮುಕ್ತಿ ನೀಡುತ್ತಿರುವುದು! ಆದ್ದರಿಂದ ಅದನ್ನು ರಕ್ಷಿಸುವ ಹೊಣೆ ಪ್ರತಿಯೊಬ್ಬರದೂ ಆಗಿದೆ!

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ ಏಳ್ಳು ಜೀರಿಗೆ ಬೆಳೆವಂತ ಭೂತಾಯ! ಸಕಲ ಜೀವರಾಶಿಗಳಿಗೆ ಆಹಾರ, ಆಶ್ರಯಕೊಡುವ ಭೂಮಿ ಪಂಚಬೂತಗಳಲ್ಲಿ ಒಂದು. ಗಣಿಗಾರಿಕೆ, ಬೋರುಗಳ ಕೊರೆತ, ತಾರು, ಕಾಂಕ್ರೇಟಿನಿಂದ ನೆಲ ಮುಚ್ಚಿ ವಾಹನ, ಕಾರ್ಖಾನೆ ಹೆಚ್ಚಿಸಿ, ಪರಿಸರದ ಮೇಲೆ ನಿರಂತರ ಅತ್ಯಾಚಾರ ಮಾಡಿ ಹಸಿರುಮನೆ ಪರಿಣಾಮ ಹೆಚ್ಚಿಸಿ ಭೂ ತಾಪ ದಿನೇ ದಿನೇ ಹೆಚ್ಚಿಸಿ,ಆಮ್ಲಮಳೆ, ಬೆಳೆನಾಶ, ಸ್ಮಾರಕಗಳ ಅಂದಗೆಡಿಸಿ, ದ್ರುವ ಪ್ರದೇಶದ ಮಂಜುಗಡ್ಡೆ ಕರಗಿಸಿ ಭೂಪ್ರದೇಶಗಳು ಮುಳುಗುವ ಆತಂಕ ಹೆದುರಿಸುವಂತೆ ಮಾಡಿ ಕಾಲ ಮೇಲೆ ಚಪ್ಪಡಿಕಲ್ಲ ನಗುನಗುತ ಹಾಕಿಕೊಳ್ಳುತ್ತಿದ್ದೇವೆ! ಭೂ ರಕ್ಷಣೆ ಮರೆತ್ತಿದ್ದರ ಫಲ!

ನದಿಗಳು ನಾಡಿನ ಜೀವನಾಡಿಗಳು. ಜಗತ್ತಿನ ಮಲವನ್ನೆಲ್ಲಾ ಕೊಚ್ಚಿಕೊಂಡು ಹೋಗಿ ಭೂಲೋಕವ ಸ್ವಚ್ಛಗೊಳಿಸೋ ಮಹಾ ಶುದ್ದಿಕಾರಕಗಳು, ಆಹಾರ ಪೂರಕಗಳು, ಭೂರಮೆಗೆ ಹಸಿರ ತೊಡುಗೆ ತೊಡಿಸೋ ಹಸಿರುಕಾರಕಗಳು. ಜಗತ್ತಿನ ಪ್ರಸಿದ್ದ ನಾಗರಿಕತೆಗಳ ಪೋಷಕಗಳು! ಹರಪ್ಪಾ ಮಹೆಂಜೆದೋರ, ಸಿಧೂ ಕಣಿವೆ, ಈಜಿಪ್ತ್ ನಾಗರೀಕತೆ ಹುಟ್ಟಿ ಬೆಳೆದದ್ದು ನದಿಗಳ ದಂಡೆಯಲ್ಲಿಯೇ ಎಂಬುದರಿಂದ ಮಾನವನ ಜೀವನದಲ್ಲಿ ನದಿಗಳ ಪಾತ್ರ ಎಷ್ಟು ಮುಖ್ಯವಾದುದಾಗಿತ್ತು ಎಂಬುದನ್ನು ತಿಳಿಯಬಹುದು. ಹೀಗೆ ನದಿಗಳು ಬಹಳ ಮಹತ್ವದವು ಎಂದು ತಿಳಿದಿದ್ದರಿಂದ ಪುರಾತನ ಕಾಲದಿಂದಲೂ ಭಾರತದಲ್ಲಿ ಹರಿಯುವ ನದಿಗಳಿಗೆ ದೇವಾನು ದೇವತೆಗಳ ಹೆಸರಿಟ್ಟು ಆರಾಧಿಸುತ್ತಿರುವುದು ನೋಡಿದ್ದೇವೆ! ನದಿಗಳಲ್ಲಿ ಹರಿಯುವ ನೀರು ಪಂಚಭೂತಗಳಲ್ಲಿ ಒಂದು! ನದಿಗಳು ಪವಿತ್ರ ಎಂದು ದೇವತೆಗಳ ಸ್ತ್ರೀಯರ ಹೆಸರಿಟ್ಟಿರುವುದು! ಜನರು ನದಿಗಳನ್ನು ಕಲುಷಿತಗೊಳಿಸದಂತೆ, ನಾಶ ಮಾಡದಂತೆ ಅದನ್ನ ರಕ್ಷಿಸಲಿ ಎಂದು! ಗಂಗೆಯನ್ನು ಶಿವನ ಜಡೆಯಲ್ಲಿ ಧಾರಣೆ ಮಾಡಿರುವುದು ಅವಳು ತುಂಬಾ ಪವಿತ್ರವಾದವಳು, ಪಾವಕಳು ಎಂಬ ಉದ್ದೇಶದಿಂದ! ಪ್ರತಿನಿತ್ಯ ಸ್ನಾನ ಮಾಡುವಾಗ ಒಂದು ಶ್ಲೋಕ ಹೇಳಬೇಕೆಂದು ಹೇಳಿದ್ದಾರೆ. ಕೆಲವರು ಹೇಳುತ್ತಿರಬಹುದು!

ಗಂಗೇಚ ಯಮುನೇ ಚೈವ
ಗೋದಾವರೀ ಸರಸ್ವತೀ!
ನರ್ಮದೇ ಸಿಂಧೂ ಕಾವೇರಿ
ಜಲೇಸೈನ್ ಸನ್ನಿಧಿಂ ಕುರು!!

ಗಂಗೆ ಯಮುನೆ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿ ಜಲಧಾರೆಯ ಸ್ಪರ್ಷವು ನಮ್ಮ ಪಾಪಗಳನ್ನು ತೊಳೆದು ಮುಕ್ತಿಯನ್ನು ಕರುಣಿಸಲಿ. ಎಂಬುದು ಅದರ ಅರ್ಥ. ( ಮಳೆ ಬರುವಾಗ ಈ ಎಲ್ಲಾ ನದಿಗಳ ನೀರೂ ಅದರಲ್ಲಿರುವುದು ) ಆ ನದಿಗಳು ಪರಿಶುದ್ದವಾದರೆ ತಾನೆ ನಮ್ಮನ್ನು ಶುದ್ದಿಗೊಳಿಸಿ ಮುಕ್ತಿ ನೀಡುವುದು? ಗಂಗೆ ಪರಿಶುದ್ದಳಾದುದರಿಂದ ಹಾಗೆ ಸ್ಮರಿಸುತ್ತಿದ್ದರು, ಪ್ರತಿಯೊಂದು ಶುಭ ಕಾರ್ಯ ಮಾಡುವಾಗ ಗಂಗಾ ಪೂಜೆ ಮಾಡುತ್ತಾರೆ. ಅದರ ಉದ್ದೇಶ ಗಂಗೆ ಪವಿತ್ರವಾದವಳು ಜಗತ್ತನ್ನೇ ಶುದ್ದೀಕರಿಸಿ ಪಾವನ ಮಾಡುವಂತಹವಳು ಅದ್ದರಿಂದ ರಕ್ಷಿಸುತ್ತಿದ್ದರು! ಪೂಜಿಸುತ್ತಿದ್ದರು! ಜನ ಗಂಗೆಯನ್ನು ಕಲುಷಿತಗೊಳಿಸರು ಹಾಳು ಮಾಡರು, ರಕ್ಷಿಸುವರು ಎಂಬ ಉದ್ದೇಶ ಅದರಲ್ಲಿ ಅಡಗಿದೆ! ಭಗೀರಥ ಗಂಗೆಯನ್ನು ಶಿವನ ಮುಡಿಯಿಂದ ಇಳೆ.ಗೆ ತಂದ ಸಾಹಸದ ರೋಚಕ ಕಥೆ ಗಂಗೆಯ ಮಹತ್ವವನ್ನು ಪಾವಿತ್ರ್ಯತೆಯನ್ನು ಅವಶ್ಯಕತೆಯನ್ನು ಜಗತ್ತಿಗೆ ಸಾರುತ್ತದೆ! ಇಂದು ಈ ಮೂಲ ಉದ್ದೇಶ ತಿಳಿಯದ್ದರಿಂದ ಅವನ್ನು ರಕ್ಷಿಸದೆ ಬರಿ ಆರಾಧಿಸುತ್ತಿರುವುದಕ್ಕೆ ಸೀಮಿತಗೊಳಿದಿರುವುದರಿಂದ ಆರಾಧಿಸುವ ಉದ್ದೇಶವೇ ಅರಿಯದಾಗಿರುವುದರಿಂದ ಕುಡಿಯುವ ನೀರಿಗೆ ತತ್ವಾರ ಬಂದಿದೆ! ಎಲ್ಲೆಡೆ ನದಿಗಳ ಕಲುಷಿತಗೊಳಿಸಲಾಗಿದೆ. ಜಲಚರಗಳಿಗೂ ತೊಂದರೆ ಕೊಡಲಾಗಿದೆ. ಗಂಗಾ ಸ್ನಾನ, ತುಂಗಾ ಪಾನ! ಗಂಗೆ ದೇಹದ ಮೇಲಿನ ರೋಗಗಳ, ತುಂಗೆ ದೇಹದ ಒಳಗಿನ‌ರೋಗಗಳ ನಿವಾರಕಳಾಗಿದ್ದಳು. ಇಂದು ಇವೇ ರೋಗಕಾರಕವಾಗುವಂತಾಗಿವೆ! ಅದಕ್ಕಾಗಿಯೇ ಗಂಗಾ ನದಿಯ ಶುದ್ದೀಕರಣ ನಮಾಮಿ ಗಂಗೆ ಯೋಜನೆಯಲ್ಲಿ ಆರಂಭವಾಗಿರುವುದು. ಎಲ್ಲಾ ನದಿಗಳ ಶುದ್ಧೀಕರಣ ಅಗತ್ಯ!

ವೈದಿಕ ಮಂತ್ರಗಳಲ್ಲಿ 100 ರಲ್ಲಿ 80 ಕ್ಕಿಂತಾ ಹೆಚ್ಚು ಮಂತ್ರಗಳು ಇಂದ್ರ, ಅಗ್ನಿ, ಸೋಮ, ಸೂರ್ಯ, ವಾಯು, ವರುಣ, ಪರ್ಜನ್ಯ, ಉಷಸ್ ಮುಂತಾದ ಪ್ರಕೃತಿ ದೃಶ್ಯಗಳನ್ನು ಅವುಗಳಲ್ಲಿ ಅಂತರ್ಯಾಮಿಯಾಗಿರುವ ಅಭಿಮಾನಿ ದೇವತೆಗಳು ಅಥವಾ ಶಕ್ತಿಗಳನ್ನು ಸ್ತುತಿಸುವ ಮಂತ್ರಗಳಾಗಿವೆ. ಹೀಗೆಲ್ಲಾ ನಮ್ಮ ಪೂರ್ವಜರು ಪರಿಸರವನ್ನು ಭಕ್ತಿ ಭಾವದಿಂದ ಆರಾಧಿಸಿದರು. ಆರಾಧಿಸುವುದೆಂದರೆ ನಾಶ ಮಾಡದೆ ರಕ್ಷಿಸುವುದು ಎಂದು ಅರ್ಥ! ಅವರು ರಕ್ಷಿಸಿದುದರಿಂದ ಇಲ್ಲಿಯವರೆಗೆ ನಾವು ಅವುಗಳನ್ನು ಯತೇಚ್ಛವಾಗಿ ಸವಿದೆವು. ಇಂದು ಅವುಗಳ ಬಗ್ಗೆ ಪವಿತ್ರ ಭಾವನೆ ಹೊರಟು ಹೋಗಿರುವುದರಿಂದ ದೇವರ ಬಗೆಗಿನ ದೈವಿಕ ಭಕ್ತಿ ಭಾವ ದೂರವಾದ್ದರಿಂದ, ಅರ್ಥರಹಿತ ಆಚರಣೆಗಳಿಂದ, ಜನಸಂಖ್ಯಾ ಸ್ಫೋಟದಿಂದ ಸಂಬಂಧಗಳಿಗಿಂತ ವಸ್ತು ಒಡವೆ ವಾಹನ ಆಸ್ತಿಗಳ ಬೆಲೆ ಹೆಚ್ಚಾದ್ದರಿಂದ ಮಾನವನ ದುರಾಸೆಗೆ ಕೊನೆಯಿಲ್ಲದಂತಾದುದರಿಂದ ಪರಿಸರದ ನಾಶ ಮಿತಿ ಮೀರಿದೆ! ತಾವು ಮಾಡುತ್ತಿರುವುದು ಮಾನವನ ನಾಶ ಎಂಬುದು ಅರಿವಿಲ್ಲದೆ ಪರಿಸರ ನಾಶ ಎಂದು ಬಾವಿಸಿದುದರಿಂದ ಜೀವಿಗಳ ಸರ್ವನಾಶ ಮಾಡಲು ಸ್ಪರ್ಧಿಸುವಂತೆ ಅರಣ್ಯ ಪ್ರಾಣಿ ಪಕ್ಷಿ ಕ್ರಿಮಿ ಕೀಟಗಳನ್ನು ನಾಶ ಮಾಡುತ್ತಿದ್ದಾನೆ! ಪಂಚಭೂತಗಳನ್ನು ಕಲುಷಿತಗೊಳಿಸುತ್ತಿದ್ದಾನೆ. ಪರಿಸರದ ಉಳಿವಿನಲ್ಲಿ ಅದರ ನಗುವಿನಲ್ಲಿ ಜೀವ ಜಗತ್ತಿನ ಸಂತಸ ಅಡಗಿದೆ ಎಂಬುದನ್ನು ತಿಳಿದು ಪರಿಸರ ರಕ್ಷಿಸಲು ಪೋಷಿಸಲು ಪ್ರತಿಯೊಬ್ಬರೂ ಪ್ರಯತ್ನಿಸಿದಾಗ ಮಾತ್ರ ಪರಿಸರದ ರಕ್ಷಣೆಯಾಗುತ್ತದೆ. ಇದುವರೆಗೂ ಪೂರ್ವಜರ ಪರಿಸರ ಪ್ರೇಮವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲದ ಪ್ರಯುಕ್ತ ಪರಿಸರವನ್ನು ವಿನಾಶದ ಹಂಚಿಗೆ ತಳ್ಳಲಾಗಿದೆ! ಮಲಿನ ಮಾಡಲಾಗಿದೆ. ಸುಂದರಲಾಲ್ ಬಹುಗುಣ, ಜಗ್ಗಿವಾಸುದೇವನ್, ಮೇಧಾಪಾಟ್ಕರ್ ಹೋರಾಟಗಳ ಅರ್ಥ ಮಾಡಿಕೊಳ್ಳಬೇಕಿದೆ. ಎಲ್ಲಾ ಜೀವಿಗಳ ಬದುಕು ಪರಿಸರವನ್ನು ಅವಲಂಭಿಸಿದೆ. ಪರಿಸರದ ಉಳಿವಿನಲ್ಲಿ ಜೀವ ಜಗತ್ತಿನ ಉಳಿವಿದೆ. ಪ್ರಯುಕ್ತ ಎಲ್ಲರೂ ಪರಿಸರ ರಕ್ಷಿಸಬೇಕಿದೆ.

* ಕೆ ಟಿ ಸೋಮಶೇಖರ ಹೊಳಲ್ಕೆರೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x