ಮಧ್ಯಾಹ್ನದ ಹೊತ್ತು. ಪಕ್ಕದ ಹಳ್ಳಿಯಲ್ಲೊಂದು ಕೇಸು ಮುಗಿಸಿಕೊಂಡು ವಾಪಸ್ ಬರುತ್ತಿದ್ದೆ. ಹೈವೇ ಬದಿಯಲ್ಲಿರುವ ಪುಟ್ಟರಾಜುವಿನ ಸೂರ್ಯಕಾಂತಿ ಹೊಲದಲ್ಲಿ ಐದಾರು ಮಂದಿ ಟೂರಿಸ್ಟುಗಳು ಫೋಟೋ ತೆಗೆಸಿಕೊಳ್ಳುತ್ತಿದ್ದರು.
ಬಂಡೀಪುರ – ಊಟಿ ಕಡೆಗೆ ಹೋಗುವ ಟೂರಿಸ್ಟುಗಳು ದಾರಿಯಲ್ಲಿ ಎತ್ತಿನಗಾಡಿಯನ್ನು ಕಂಡರೂ ಫೋಟೊ ತೆಗೆಸಿಕೊಳ್ಳುತ್ತಿರುತ್ತಾರೆ. ಗಾಡಿ ಮೇಲೆ ಕೂತ ರೈತನಿಗೆ ಒಂಥರಾ ಬೆರಗು! ಪಾಪ ಅವರ ಕಡೆ ಇದೆಲ್ಲಾ ನೋಡೋದಿಕ್ಕೆ ಸಿಗೋದಿಲ್ವೇನೋ ಅಂದುಕೊಂಡು ಖುಷಿಯಿಂದ ಪೋಸು ನೀಡುತ್ತಾನೆ. ಇನ್ನು ಕೆಲ ಟೂರಿಸ್ಟರು ಆಲದ ಮರದ ಬೀಳಲುಗಳನ್ನು ಹಿಡಿದು ಜೋತಾಡುವ ತಮ್ಮ ಮಕ್ಕಳನ್ನು ನೋಡುತ್ತಾ ರಿಲ್ಯಾಕ್ಸ್ ಆಗುತ್ತಿರುತ್ತಾರೆ.
ಅಲ್ಲೇ ಕುರಿಗಳನ್ನು ಬಿಟ್ಟುಕೊಂಡು ಕೂತಿದ್ದ ಚಿನ್ಸ್ವಾಮಿ ಕೈ ಅಡ್ಡ ಹಾಕಿದ. ಗಾಡಿಯನ್ನು ಆಲದ ಮರದಡಿ ಹಾಕಿ ಹತ್ತಿರ ಹೋದೆ. ಪುಟ್ರಾಜು ಅಲ್ಲೇ ಇದ್ದ.
ಚಿನ್ಸ್ವಾಮಿ ಎರಡು ಕುರಿಗಳನ್ನು ಕಿವಿಯಿಡಿದು ಎಳೆದುಕೊಂಡು ಬಂದ. ''ಸಾ ಯಾಕ ನೆನ್ನ ರಾತ್ರಯಿಂದ ಕೆಮ್ತವ ನೋಡಿ'' ಅಂದ.
ಅದಕ್ಕೆ ಪುಟ್ಟರಾಜು (ನಗುತ್ತಾ), ''ಸಾ ಮದ್ಲು ಕಾಸ್ ಈಸ್ಗಳಿ.. ಆಮೇಲ್ ನೋಡಿ.. ಬಿಚ್ಚಲ್ಲ ಬಡ್ಡೈದ''
''ಅವ್ನ್ ಮಾತ್ ಕಟ್ಗಳಿ… ತೋರಿಸ್ದಾಗ್ಲೆಲ್ಲ ಕೊಟ್ಟಿಲ್ವಾ ಸಾ ನಾನು'' ಅಂದ ಚಿನ್ಸ್ವಾಮಿ.
ಹೌದು ಎಂಬಂತೆ ನಗುತ್ತಾ ತಲೆಯಾಡಿಸಿದೆ. ಕುರಿಗಳಿಗೆ ಇಂಜೆಕ್ಷನ್ ಹಾಕಿದೆ. ಹತ್ತು ರೂಪಾಯಿ ನೋಟನ್ನು ತೆಗೆದು ಕೊಟ್ಟ.
ಪುಟ್ಟಸ್ವಾಮಿ ಅಂದ, ''ಕೊಡುಡ ಇನ್ನತ್ತ.. ಟಗರನ್ದುಡ್ಡು ಇಷ್ಟ್ ಬ್ಯಾಗ್ನ ಮುಗುದೋಯ್ತ… ನೀನಿಗಪ ಕರ್ಚ್ ಮಾಡಂವ, ಕಾಳಿಗ್ಯಾ ಬೋಳಿಗ್ಯಾ ಕೊಟ್ಟು ಬಡ್ಡಿಗ್ ಬುಡ್ಸಿರ್ತಿದ್ದೈ''
ಚಿನ್ಸ್ವಾಮಿ(ನಗುತ್ತಾ) ''ಹೆಹೆಹೆ.. ಸುಮ್ ಕೂತ್ಗ ಪುಟ್ರಾಜಣೈ , ಟಗ್ರ್ ಮಾರಿ ಎಷ್ಟ್ ಜಿನಾಯ್ತು, ಆ ದುಡ್ಡು ಇನ್ನು ಉಳ್ಕಂಡಿದ್ದದ… ಪುಟ್ರಾಜಣ್ಣನ ಮಾತ್ ನಂಬ್ಕಬೇಡಿ ಸಾ.. ನಾಳ ಜಿನ ನ್ವಾಡಕ್ ಬಂದ್ರ ಇದನ್ನೇ ಗ್ಯಾಪ್ಗ್ಯಾಗಿಟ್ಟಿದ್ದು ಸರಿಯಾಗಿ ಬರ ಹಾಕ್ಬುಟ್ಟರಿ ಆಮ್ಯಾಲ!'' ಎಂದ.
ಈ ಬಾರಿ ಕಳೆದ ಮೂರು ವರ್ಷಗಳಿಗಿಂತ ಉತ್ತಮ ಮಳೆಯಾಗಿದೆ. ಅದರ ಪರಿಣಾಮವೆಂಬಂತೆ ಪುಟ್ಟರಾಜುವಿನ ಸೂರ್ಯಕಾಂತಿ ಹೊಲ ಏಕವಾಗಿ ಒಂದೇ ಲೆವೆಲ್ಲಿಗೆ ಹೊಂಬಣ್ಣದ ಕಿರೀಟ ತೊಟ್ಟು ಕಂಗೊಳಿಸುತ್ತಿತ್ತು. ಹೈವೇಯ ಎರಡೂ ಬದಿಯ ಬೇಲಿಗುಂಟ ಹಸಿರು ಚಿಗುರಿತ್ತು. ಸ್ವಂತ ಜಮೀನು ಇರದೇ ಹಸು ಕುರಿ ಸಾಕಿಕೊಂಡವರಿಗೆ ಒಂದಷ್ಟು ದಿನ ನೆಮ್ಮದಿ.
ಪುಟ್ರಾಜುಗೆ ಎರಡೆಕರೆ ಜಮೀನಿದೆ. ಮೊದಲು ಏಳೆಂಟು ರಾಸುಗಳನ್ನು ಇಟ್ಟಿದ್ದನಂತೆ. ಮಳೆ ಕಡಿಮೆಯಾಗಿ ಮೇವು ಪೂರೈಸುವುದು ಕಷ್ಟವಾದ ಮೇಲೆ ಒಂದು ಸೀಮೆ ಹಸು, ಒಂದು ಜೊತೆ ಮಲೆಹೋರಿಗಳನ್ನು ಮಾತ್ರ ಉಳಿಸಿಕೊಂಡಿದ್ದಾನೆ.
ಅಲ್ಲೇ ಮೇಯುತ್ತಿದ್ದ ಹೋರಿಯನ್ನು ಸದ್ದು ಮಾಡಿ ಕರೆದ. ಅದು ಕತ್ತನ್ನು ಮೇಲಕ್ಕೂ ಕೆಳಕ್ಕೂ ಕುಣಿಸುತ್ತಾ ಮೆಲ್ಲಗೆ ಹೆಜ್ಜೆ ಹಾಕುತ್ತಾ ಹತ್ತಿರ ಬಂತು.
ಅದರ ಕೊರಳನ್ನು ಬಲಗೈಲಿ ಬಳಸಿ ಅದರ ಕೆನ್ನೆ ಮೇಲೆ ಮುಖವಿಟ್ಟು ಏನೇನೋ ಪಿಸುಗುಟ್ಟಿದ. ಬಹುಶಃ ಅದು ಅವನಿಗೆ ಮತ್ತು ಆ ಹೋರಿಕರುವಿಗೆ ಮಾತ್ರ ಅರ್ಥವಾಗುವ ಭಾಷೆ .
ಆ ದೃಶ್ಯವನ್ನು ನೋಡುತ್ತಿದ್ದರೆ ಖುಷಿಯಾಗುತ್ತಿತ್ತು.
'' ಮುದ್ದಾಡಿದ್ದು ಸಾಕು.. ಮೇಯ್ಲಿಬುಡು ಪುಟ್ರಾಜು'' ಅಂದೆ.
''ತಂಬಿಟ್ನಾಗಿತ್ತು ಸಾ, ಸಟ್ಗ ಕಂಗೆಟ್ಟೋಬುಟ್ಟದ ಈಗ.. ಜನ್ರ್ ಕಣ್ಣೇ ಅರ್ದ್ಯ ತಾಗ್ಕತು.. ಕರುನವು ರೋಡ್ಲಿ ಹೋಯ್ತಿದ್ರ ಅಯ್ಯ ಕರುನವು ಅಂದ್ರ ಇನ್ನ್ಯಾಕ ಐನಾತಿ ಜೋಡಿಕಯಾ ಅನ್ನದು ಒಬ್ಬ, ಬೆಣ್ಣ ಉಂಡಕಣಗವ ಅನ್ನದು ಇನ್ನೊಬ್ಬ, ಕೊಟ್ಟನ ಕೇಳು ಇಪ್ಪತ್ತಕ್ಕ ಅನ್ನದು ಮೂರ್ನೆಂವ. ಅದ್ಕ ನಾನು ಮನಸ್ಲಿ ಅಯ್ಯ ಬಡ್ಡೀಕೂಸೇ ಇಪ್ಪತ್ತಲ್ಲ ನೀ ಎಪ್ಪತ್ ಕೊಟ್ರೂ ಕೊಡಲ್ಲ ಅಂದ್ಕತಿದ್ದಿ''
ಕರುವಿನ ಹೆಗಲು ಕೆಂಪಗಾಗಿತ್ತು. '' ಹೆಗಲು ಬಲಿಯಕು ಮುಂಚೆ ಆರಂಬಕ್ ಕಟ್ಟಿದ್ದೀಯಲ್ಲ ಇನ್ನೂ ಆರು ತಿಂಗಳಗಂಟ ಇರದಲ್ವ'' ಅಂದೆ.
''ಯಾನ್ ಮಾಡಿರಿ ಸಾ, ಒಂದ್ ಏರ್ಗ ಐನೂರ್ರುಪಾಯ್ ಆಗದ. ಎಲ್ಲಿಂದ್ ತರಂವ್ ಏಳಿ. ಎಳಕರುನವ ನೋಯಿಸ್ಬಾರ್ದು ಅಂತ ನನ್ಗೂ ಗೊತ್ತು… ನಮ್ ಪರಿಸ್ಥಿತಿ ಆ ತರ ಅದ ಯಾನ್ ಮಾಡಂವು ಏಳಿ'' ಅಂದ.
ಏನು ಹೇಳಬೇಕೆಂದು ತೋಚದೇ ಸುಮ್ಮನಾದೆ. ಬ್ಯಾಗಿನಿಂದ ಆಯಿಂಟಮೆಂಟ್ ತೆಗೆದು ಕೊಟ್ಟೆ.
ಮಾತು ಬೇರೆ ಕಡೆ ಹೊರಳಿತು. ಪುಟ್ರಾಜು ವೈರಿಂಗ್ ಮಾಡುವುದನ್ನೂ ಕಲಿತುಕೊಂಡಿದ್ದಾನೆ. ಆಶ್ಚರ್ಯ ಪಡಬೇಕಾದ್ದೇನಿಲ್ಲ. ಪ್ರತಿ ಊರಿನಲ್ಲೂ ಇಂತಹ 'ಮೆಕಾನಿಕಿ 'ಗಳು ಇದ್ದಾರೆ. ಇವರು ಯಾವ ಕೋರ್ಸನ್ನೂ ಮಾಡಿಲ್ಲ . ಅಸಲಿಗೆ ಒಬ್ಬೊಬ್ಬರಿಗೆ ಓದುಬರಹವೂ ಗೊತ್ತಿರುವುದಿಲ್ಲ. ಆದರೂ ಪಳಗಿದವರು ನಾಚುವಂತೆ ಕೆಲಸ ಮಾಡುತ್ತಾರೆ.
ಒಬ್ಬ ಮೂಗನ ಬಗ್ಗೆ ಹೇಳಲೇಬೇಕು. ನನ್ನ ಪಕ್ಕದ ಊರಿನವ. ವ್ಯವ್ಸಾಯ ಅವನ ಕಸುಬು. ಬೋರು ಕೊರೆಸುವವರಿಗೆ ಪಾಯಿಂಟುಗಳನ್ನು ಕೊಡುವುದು ಆತನ ಉಪಕಸುಬು. ಈ ಕಲೆಯನ್ನು ಅದ್ಯಾವಾಗ ಕರಗತ ಮಾಡಿಕೊಂಡನೋ ಅವನೊಬ್ಬನಿಗೇ ಗೊತ್ತು. ಅವನು ನೀರಿನ ಸೆಲೆಯನ್ನು ಪತ್ತೆ ಮಾಡುವ ಬಗೆಯೇ ವಿಚಿತ್ರವಾದದ್ದು. ಹೊಲದೊಳಗೆ ಹತ್ತಿಪ್ಪತ್ತು ನಿಮಿಷಗಳ ಕಾಲ ತಿರುಗಾಡುತ್ತಾನೆ. ಎಲ್ಲಿ ನೀರಿದೆ ಅಂಥ ಅನ್ನಿಸುತ್ತದೋ ಆ ಜಾಗದಲ್ಲಿ ಚಕ್ಕಂಬಕ್ಕಳ ಹಾಕಿ ಕೂತುಬಿಡುತ್ತಾನೆ, ಅಲ್ಲಿಗೆ ಅರ್ಥ ಮಾಡಿಕೊಳ್ಳಬೇಕು ಅದೇ ಪಾಯಿಂಟು ಅಂತ!
ಇದಕ್ಕೆ ಸಂಬಂಧಪಟ್ಟಹಾಗೆ ಒಂದು ಘಟನೆ.
ಇದಾಗಿ ಒಂದು ವರ್ಷದ ಮೇಲಾಯ್ತು. ನಮ್ಮ ಪಕ್ಕದ ಮನೆಯ ಮಾದೇವಣ್ಣನಿಗೆ ಯಾರೋ ಬೇರೆಯವರು ಪಾಯಿಂಟು ಕೊಟ್ಟಿದ್ದರು. ನೂರು ಇನ್ನೂರು ಮುನ್ನೂರು ನಾನೂರು ಅಡಿ ದಾಟಿದರೂ ಬರೀ ಕಲ್ಲುಬೂದಿಯೇ ಬರುತ್ತಿತ್ತು. ಪಾಪ ಅವರು ಬೆಜ್ಜಲು ಜಮೀನಿನಲ್ಲಿ ಅಷ್ಟೋ ಇಷ್ಟೋ ಬೆಳೆದು ಒಂದಿಷ್ಟು ದುಡ್ಡನ್ನು ಬೋರು ಹಾಕಿಸಲೆಂದೇ ಒಪ್ಪಾಯಿಸಿ ಮಡಗಿದ್ದರು. ಇನ್ನೂ ಆಳಕ್ಕೆ ಕೊರೆಸಿದರೂ ನೀರು ಕಾಣದೇ ಹೋದರೆ ಏನು ಗತಿ ಎಂಬ ಆತಂಕ ಅವರಲ್ಲಿ ಎದ್ದು ಕಾಣುತ್ತಿತ್ತು. ನಷ್ಟವನ್ನು ತಡೆದುಕೊಳ್ಳುವ ಶಕ್ತಿಯೂ ಅವರಲ್ಲಿರಲಿಲ್ಲ. ಹಾಗಾಗಿ ನಾನೂರು ಅಡಿಗೇ ಬಂದ್ ಮಾಡಿಸಿದರು. ಮಾದೇವಣ್ಣನ ಮಕ್ಕಳಿಬ್ಬರೂ ಶ್ಯಾನೇ ನೊಂದುಕೊಂಡು, ಮುಖವನ್ನು ಕಾಸಗಲ ಮಾಡಿಕೊಂಡು ನಿಂತಿದ್ದರು. ಬೆವರು ಹರಿಸಿ ಸಂಪಾದಿಸಿದ ದುಡ್ಡು. ಸುಮ್ಮನಿದ್ದುಬಿಟ್ಟಿದ್ದರೂ ಏನಾಗುತ್ತಿರಲಿಲ್ಲ. ಆದ್ರೂ ಒಂದು ಆಸೆ ಇರುತ್ತದಲ್ಲ ಎಲ್ಲರ ಸಮ್ಕೂ ನಾವೂ ಒಂದು ಬದುಕು ಕಟ್ಟಿಕೊಳ್ಳಬೇಕು ಅಂತ.
ಅಷ್ಟೊತ್ತಿಗಾಗಲೇ ರಾತ್ರಿ ಹನ್ನೊಂದಾಗಿತ್ತು. ತಿಂಗಳ ಬೆಳಕು ಹಾಲಿನಂತೆ ಹರಡಿತ್ತು. ಮೊದಲ ಪಾಯಿಂಟ್ ಫೇಲ್ ಆಗಿದ್ದರಿಂದ ಆತ ಕೊಟ್ಟಿದ್ದ ಎರಡನೇ ಪಾಯಿಂಟಿನಲ್ಲಿ ಹಾಕಿಸಲು ಮಾದೇವಣ್ಣನಿಗೆ ಧೈರ್ಯ ಸಾಲಲಿಲ್ಲ. ಅಲ್ಲಿದ್ದ ಒಬ್ಬರು, ಮೂಗನನ್ನು ಕರೆತರಿಸು ಎಂದು ಮಾದೇವಣ್ಣನಿಗೆ ಸಲಹೆಯಿತ್ತರು. ಮಾದೇವಣ್ಣನಿಗೂ ಇದು ಸರಿಯೆನಿಸಿತು.
ಮಾದೇವಣ್ಣನ ಮಗ ನನ್ನ ಬೈಕು ತೆಗೆದುಕೊಂಡು ಹೋಗಿ ಮೂಗನನ್ನು ಎಬ್ಬಿಸಿಕೊಂಡು ಬಂದ. ಮೂಗ ಬಂದವನೇ ಹೊಲದಲ್ಲಿ ಐದಾರು ರೌಂಡು ತಿರುಗಾಡಿ ಒಂದು ಜಾಗದ ಮೇಲೆ ಚಕ್ಕಂಬಕ್ಕಳ ಹಾಕಿಯೇ ಬಿಟ್ಟ! ಇನ್ನೂರೈವತ್ತು ಅಡಿ ಕ್ರಾಸಾಗುವಷ್ಟರಲ್ಲಿ ಗಂಗಮ್ಮತಾಯಿ ಒಮ್ಮೆಲೇ ಚಿಮ್ಮಿದಳು. ಅಲ್ಲಿ ನೆರೆದಿದ್ದವರು ಗಂಗೆಯ ಸಿಂಚನದಿಂದ ಪುಳಕಗೊಂಡರು. ಅದು ತಮ್ಮದೇ ಯಶಸ್ಸೆಂಬಂತೆ ಸಮಾಧಾನದ ನಿಟ್ಟುಸಿರು ಬಿಟ್ಟರು. ಅಂದು ಮೂಗ ಮಾದೇವಣ್ಣನ ಪಾಲಿಗೆ ದೇವರಂತೆ ಬಂದಿದ್ದ. ಅವನ ಜೇಬಿಗೆ ಐನೂರರ ನೋಟು ಹಾಕಿ ಅವನನ್ನು ಬೈಕಿನಲ್ಲಿ ವಾಪಾಸು ಕಳುಹಿಸಲಾಯ್ತು.
ಪುಟ್ರಾಜುವಿನ ವಿಷಯಕ್ಕೆ ಬರೋಣ. ಮೊನ್ನೆ ಒಂದು ಕೋಳಿ ಫಾರಮ್ಮಿಗೆ ವೈರಿಂಗ್ ಮಾಡಲು ಹೋಗಿದ್ದನಂತೆ. ಅದರ ಮಾಲೀಕ, ಯಾಕೋ ಒಂದು ವಾರದಿಂದ ಮೊಟ್ಟೆಗಳೇ ಲೆಕ್ಕಕ್ಕೆ ಸಿಗ್ತಾ ಇಲ್ಲ ಅಂತ ಚಿಂತೆಯಲ್ಲಿದ್ದನಂತೆ. ಪುಟ್ರಾಜು ಫಾರಮ್ಮಿನ ಚಾವಣಿಯನ್ನು ಪರೀಕ್ಷಿಸಿ ನೋಡಿದಾಗ ಸರದ ಮೇಲೆ ಒಂದು ದೊಡ್ಡ ಕೇರೆ ಹಾವನ್ನು ಕಂಡನಂತೆ. ಅದಕ್ಕೆ ಗತಿ ಕಾಣಿಸಿದ್ದರ ಬಗ್ಗೆ ಮತ್ತು ಅದನ್ನು ಜೀವಂತ ಹಾವಿನಂತೆ ಬೇಲಿ ಅಂಚಿನಲ್ಲಿ ಮಲಗಿಸಿದಾಗ ತಿರುಗಾಡುವವರು ಬೆಚ್ಚಿ ಬಿದ್ದ ಬಗ್ಗೆ ಎಲ್ಲವನ್ನೂ ರಸವತ್ತಾಗಿ ವಿವರಿಸಿದ .
ಹಾವನ್ನು ಸಾಯಿಸಬಾರದು, ಅದೂ ನಮ್ಮಂತೆ ಒಂದು ಜೀವ ತಾನೇ ಎನ್ನೋಣವೆಂದುಕೊಂಡೆ. ಯಾಕೋ ಬಾಯಿ ಬರಲಿಲ್ಲ, ಸುಮ್ಮನಾದೆ.
ಪುಟ್ರಾಜು ಒಬ್ಬನಲ್ಲ, ಊರುಗಳಲ್ಲಿ ಎಲ್ಲರ ಪ್ರಕಾರ ಹಾವು ಇರುವುದೇ ಹೊಡೆದು ಸಾಯಿಸುವುದಕ್ಕಾಗಿ! ಹೊಲಗಳಲ್ಲಿ ಕಂಡರೆ ಅಪ್ಪಿತಪ್ಪಿ ಬಿಟ್ಟರೂ ಊರಿನಲ್ಲಿ ಕಾಣಿಸಿಕೊಂಡರೆ ಮಾತ್ರ ಸಾಮೂಹಿಕ ಕಾರ್ಯಾಚರಣೆಗಿಳಿದು ತಿಥಿ ಮಾಡುತ್ತಾರೆ. ಹಿಂಸೆ-ಅಹಿಂಸೆಗಳ ತರ್ಕ ಅವರಿಗೆ ವಿಚಿತ್ರವಾಗಿ ಕಾಣಿಸುತ್ತದೆ. ಸಾಯಿಸಿದ ಮೇಲೆ ತೋರುವ ಭಯ ಭಕ್ತಿಯನ್ನು ನೋಡಬೇಕು! ಅದೂ ನಾಗರಹಾವಿನ ಕೇಸಿನಲ್ಲಿ. ಅದರ ಹೆಡೆಯ ಮೇಲೆ ಒಂದೆರಡು ಒಣಮೆಣಸಿನಕಾಯಿ, ಒಂದು ಹಿಡಿ ಹರಳು ಉಪ್ಪು ಹಾಕಿ ಅದರ ಮೇಲೆ ಹರಳೆಣ್ಣೆ ಉಯ್ಯುತ್ತಾರೆ. ಪಾಪ ಸುತ್ತಿಕೊಳ್ಳದಿರಲಿ ಅಂತ ಈ ಶಾಸ್ತ್ರ ಮಾಡ್ತಾರೆ !
ಪುಟ್ರಾಜು ಇನ್ನೊಂದು ವಿಷಯ ಹೇಳಿದ. ಹೇಳುವಾಗ ಸ್ವಲ್ಪ ಗರಂ ಆಗಿದ್ದ.
ಅದು ಏನಪ್ಪಾ ಅಂದ್ರೆ , ಯಾರೋ ಒಬ್ಬ ಹುಡುಗ ನಿನ್ನೆ ಚೆನ್ನಾಗಿ ಟೈಟಾಗ್ಬುಟ್ಟು ಪುಟ್ರಾಜುವಿನ ಹೊಲದ ಹತ್ರ ಬಂದಿದ್ನಂತೆ. ಬಂದವನೇ ಅಲ್ಲೇ ಕುರಿ ಮೇಯಿಸ್ತಾ ಕೂತಿದ್ದ ಚಿನ್ಸ್ವಾಮಿಯನ್ನು ಮಾತಿಗೆಳೆದನಂತೆ. ಮಾತಾಡ್ತಾ ಆಡ್ತಾ ತಾನು ನಿನ್ನೆ ಪೇಟೆಗೆ ಹೋಗಿದ್ದನ್ನೂ, ಬಸ್ಟಾಂಡಿನಲ್ಲಿ ನಿಂತಿದ್ದ ಒಬ್ಬಳು ಹೆಂಗಸನ್ನು ಬರ್ತೀಯಾ ಎಂದು ಸನ್ನೆಮಾಡಿ ಕರೆದದ್ದನ್ನೂ, ಅದಕ್ಕೆ ಆಕೆ ಪರೋಟ ಕೊಡ್ಸು ಬತ್ತಿನಿ ಅಂದದ್ದನ್ನೂ , ಅದಕ್ಕೆ ಇಂವ ಜೋಬು ಮುಟ್ಟಿ ನೋಡಲಾಗಿ ಅಲ್ಲಿ ಚಿಲ್ರೆ ಪೈಸೆ ಸದ್ದಾಗಿದ್ದು ಬಿಟ್ರೆ ಬೇರೆ ಏನೂ ಕಾಣದಾಗಿ, ಅದಕ್ಕಾಕೆ ಅಸಹ್ಯದ ನೋಟ ಬೀರಿ ಕ್ಯಾಕರಿಸಿ ತುಪ್ಪಂತ ಉಗಿದು ಹೋದದ್ದನ್ನೂ ಕುಡಿದ ಗ್ಯಾನದಲ್ಲಿ ಒಪ್ಪಿಸುತ್ತಾ ಕುಳಿತಿದ್ದನಂತೆ. ಬಡ್ಡಿ ಮಗನ್ ದುಡ್ಡು ಅವತ್ತು ಇದ್ದಿದ್ದಿದ್ರೆ… ಅಂತಾ ಕುಡಿದ ಗ್ಯಾನದಲ್ಲಿ ಪೇಚುತ್ತಿದ್ದನಂತೆ. ಚಿನ್ಸಾಮಿ ಎಲ್ಲದಕ್ಕೂ ಗೋಣು ಆಡಿಸುತ್ತಾ ಕುಳಿತಿದ್ದನಂತೆ. ಇದನ್ನು ಗಮನಿಸುತ್ತಿದ್ದ ಪುಟ್ರಾಜುವಿಗೆ ಕೋಪ ನೆತ್ತಿಗೇರಿ ಒಂದು ಹೊಂಗೆ ಸೆಬ್ಬೆ ಮುರಿದುಕೊಂಡು ಟೈಟಾಗಿದ್ದ ಹುಡುಗನ ಮೈಕಾವು ಇಳಿಯುವ ಮಟ್ಟಿಗೆ ಅಟ್ಟಾಡಿಸಿಕೊಂಡು ಬಡಿದಿದ್ದನಂತೆ.
ಯಾಕೆ ಹಾಗೆ ಮಾಡಿದೆ ಅಂತ ಕೇಳಿದೆ. ಅದಕ್ಕೆ ಪುಟ್ರಾಜು, ''ಮೊಕದ್ ಮ್ಯಾಲ ಮೂರ್ ಕೂದಲು ಹುಟ್ಟಿಲ್ಲ.. ನನ್ ಮಗನ್ ಸಮ್ಕ್ ಅವ್ನ..ಅಂವ ಆಡ್ತಿದ್ ಮಾತ್ ನೋಡಿಸಾ..ಅಂವ ಕುಡಿದಿದ್ರ ಗಪ್ಪಂತ ಅವಿಕಂಡು ಮನಲಿರ್ಬೇಕು.. ನನಗ ಮದ್ಲೇ ಕುಡುಕರ ಆಟಪಾಟ ಕಂಡ್ರ ಆಗಲ್ಲ..ನನ್ನೆದ್ರುಗ ಅಂಥಾ ಮಾತಾಡದ್ರ ಬುಟ್ಟನಾ ಸಾ ನಾನು ''
ಮುಖದಲ್ಲಿ ಒಂಚೂರು ಕೋಪವಿತ್ತು, ಒಂಚೂರು ನಗೆಯೂ ಇತ್ತು.
''ಎಷ್ಟ್ ದಿನ ಅಂತ ಮಳ ನೆಚ್ಕಂಡಿರಕಾದದು ಒಂದ್ ಬೋರ್ ಹಾಕ್ಸು ಪುಟ್ರಾಜು ''ಅಂದೆ.
''ಸುಮ್ನಿರಿ ಸಾ.. ಸಾಲಸೋಲ ಮಾಡಿ ಹಾಕುಸ್ತಿನಿ ಅಂತ ಇಟ್ಗಳಿ, ನೀರ್ ಬರದೇ ಹೋದ್ರ ಹ್ಯಾಗ್ಯಾ ಸಾ ನಮ್ ಗತಿ.. ಗೇಯ್ಕಂಡ್ ತಿಂತಿದ್ದವ್ನ್ ಕೈಕಾಲ್ ಮುರ್ದಾಗಾಯ್ತದ ''
ಅವನೇ ಮಾತು ಮುಂದುವರಿಸಿದ,''ನನ್ ಹೊಲದ್ ಮ್ಯಾಲ ಎಷ್ಟ್ ಜನದ್ ಕಣ್ಣದ ಗೊತ್ತಾ ಸಾ.. ಸುಮ್ನ ಯಾಕ ಕಷ್ಟಪಟ್ಟೈ ಒಳ್ಳಿ ರೇಟ್ ಕೊಡುಸ್ತಿಂವಿ ಮಾರ್ಬುಟ್ಟು ನೆಮ್ದ್ಯಾಗಿರು ಅಂತ ಎಷ್ಟ್ ಜನ ಯ್ಯೋಳರ ಗೊತ್ತಾ ಸಾ.. ನಾ ಹೂಂ ಅಂಬದ್ನೇ ಕಾಯ್ಕಂಡ್ ಕೂತರ. ಆದ್ರ ನಾ ಮಾರಲ್ಲ ಕನಿಸಾ.. ನನ್ ತಲ ಇರಗಂಟ ಒಂದ್ ಬಸವನ್ ಪಾದ ಊರುವಷ್ಟು ಭೂಮಿನೂ ಮಾರಲ್ಲ.. ಇವ್ರ್ ದುಡ್ಡು ಎಸ್ಟ್ ಜಿನ್ಗಂಟ್ ಬಂದದುಸಾ, ನನ್ ಕತಾ ಯಾಗ್ಯಾ ಮುಗ್ದೋಯ್ತದ ಬುಡಿ.. ನನ್ ಮಕ್ಳ್ ಕತಾ ? ಇವ್ರ್ ಮನ್ಗ ಜೀತಕ್ವಾಬೇಕಾಯ್ತದ ನನ್ ಮಕ್ಕಾ''
ಪುಟ್ರಾಜು ಹೇಳುತ್ತಿರುವುದರಲ್ಲೂ ಅರ್ಥವಿದೆ ಅಂತಾ ಮನಸ್ಸಿನಲ್ಲೇ ಅಂದುಕೊಂಡೆ.
ಬೈಕ್ ಸ್ಟಾರ್ಟ್ ಮಾಡಿದೆ. ಆತ ಕರುವನ್ನು ಮುದ್ದುಮಾಡುತ್ತಿದ್ದ ದೃಶ್ಯ ಮನವನ್ನು ಆವರಿಸಿತ್ತು.
Nimma bareyuva shyli nanage esta modalige arthavaguthiralila ega arthavaguthade
Kathe estavaythu