ಅ: ಹಾಯ್, ನೀವೆಲ್ಲಿರೋದು ?
ಬ: ಬೆಂಗ್ಳೂರು
ಅ: ಓ. ಹೌದಾ.. ಬೆಂಗ್ಳೂರಲ್ಲೇನ್ ಮಾಡ್ಕೊಂಡಿದೀರಿ ?
ಬ:ಪೀಜಿ
ಅ:ಪೀಜಿ ಅಂದ್ರೆ ಪೋಸ್ಟ್ ಗ್ರಾಜುಯೇಷನ್ನಾ ?
ಬ:ಅಲ್ಲ ಮಾರ್ರೆ.ಪೇಯಿಂಗ್ ಗೆಸ್ಟು !:-)
ಈ ಬೆಂದಕಾಳೂರಿಗೆ ಬಂದು ಬಾಳ ಬೇಳೆ ಬೇಯಿಸ್ಕೊಳೋಕೆ ಶುರು ಮಾಡಿದಾಗಿನಿಂದ ಮೇಲಿನ ಪೀಜಿ PJ ಬೇಜಾರ್ ಬರೋವಷ್ಟು ಕಾಮನ್ನಾಗಿ ಹೋಗಿದೆ 🙁
ಅಲ್ಲ, ಈ ಕಾಲ ಅನ್ನೋದು ನಮ್ಮ ಕಲ್ಪನೆ, ನಂಬಿಕೆಗಳನ್ನೆಲ್ಲಾ ಎಷ್ಟು ಬದಲಾಯಿಸತ್ತೆ ಅಲ್ವಾ ? ಕೆಲವೊಂದು ಸಲ ನಂಬಿಕೆಗಳನ್ನ ಬುಡಮೇಲೇ ಮಾಡ್ಬಿಡುತ್ತೆ. ನಾವು ಎಷ್ಟೇ ಅಂದ್ಕೊಂಡ್ರೂ ನಮ್ಮ ಮನೆ ಬಿಟ್ಟು ಗೊತ್ತಿರದ ಊರಿಗೆ ಹೋಗಬೇಕಾದ ಸಂದರ್ಭ ಬಂದೇ ಬರತ್ತೆ. ಆ ಊರಲ್ಲಿ ಹತ್ತಿರದ ನೆಂಟ್ರ ಮನೆಯೋ, ಗೆಳೆಯರ ರೂಮೋ ಇದ್ರೆ ಓಕೆ. ಇಲ್ದಿದ್ರೆ ? ! ಹುಡುಗರು ಹೇಗೋ ಒಂದೆರಡು ದಿನ ಏಗಬಹುದು. ಆದ್ರೆ ಹುಡುಗಿಯರು ? ಎಕ್ಸಾಮಿಗೋ, ಇಂಟರ್ವ್ಯೂಗೋ ಯಾವ್ದೋ ಹೊಸ ಊರಿಗೆ ಒಂದೆರಡು ದಿನಗಳ ಮಟ್ಟಿಗೆ ಹೋದ ಅಕ್ಕಂದಿರು ಯಾವುದೋ ಗೃಹಸ್ಥರ ಮನೆಯಲ್ಲಿ ಉಳ್ಯೋದು. ನೆಂಟರಲ್ಲ, ಪರಿಚಯದವರೂ ಅಲ್ಲ. ಹಾಗಾಗಿ ದುಡ್ಡು ಕೊಟ್ಟು ಉಳ್ಯೋ ಅತಿಥಿ(paying guest) ಅನ್ನೋ ಕಲ್ಪನೆ ಇತ್ತು ಪೀಜಿ ಅಂದ್ರೆ. ಆಮೇಲೆ ಅಕ್ಕಂದಿರೆಲ್ಲಾ ಕೆಲ್ಸ ಅಂತ ಬೆಂಗ್ಳೂರಿಗೆ ಬಂದ ಮೇಲೆ ಪೀಜಿ ಪರಿಕಲ್ಪನೆ ಸ್ವಲ್ಪ ಬದಲಾಯ್ತು. ಒಂದು ಆಂಟಿ ಮನೇಲಿ ಅವ್ರಿಗೆ ಊಟದ, ಇನ್ನಿತರ ಖರ್ಚು ಅಂತ ಕೊಟ್ಟು ಮನೆ ಮಕ್ಕಳಂತೆ ಇರೋದೇ ಪೀಜಿ ಅನ್ನೊವಷ್ಟು ಅಕ್ಕಂದಿರ ಮಾತುಗಳಿಂದ ತಿಳಿದಿದ್ದೆ. ಪೀಜಿ ಅಂದರೆ ಕೆಲದಿನ ಅಂತಿದ್ದ ಪರಿಕಲ್ಪನೆ ಅದು ತಿಂಗಳು, ವರ್ಷಗಳಿಗೂ ಮುಂದುವರಿಯುವ ಮೆಗಾ ಸೀರಿಯಲ್ ಅಂತ ಬದಲಾಯ್ತು. ಕೇಳೋದಕ್ಕೂ, ಸ್ವತಃ ಅನುಭವಿಸೋದಕ್ಕೂ ಇರೋ ವ್ಯತ್ಯಾಸ, ಬೆಂದಕಾಳೂರಿನ ಪೀಜಿಗಳ ನಿಜರೂಪದ ಝಲಕ್ಗಳು ಸಿಗೋಕೆ ಶುರು ಆದದ್ದು ನಾನು ಸ್ವತಃ ಬೆಂಗಳೂರಿಗೆ ಬಂದಾಗಲೇ.
ಪೀಜಿ ಅಂದ್ರೆ ಲೇಡೀಸ್ ಪೀಜಿ ಅನ್ನೋದು ಇನ್ನೊಂದು ಸಾಮಾನ್ಯ ಭಾವ. ಆದ್ರೆ ಇಲ್ಲಿ ಜಂಟ್ಸ್ ಪೀಜಿ, ಲೇಡಿಸ್ ಪೀಜಿ, ವರ್ಕಿಂಗ್ ವುಮನ್ ಪೀಜಿ… ಹೀಗೆ ಸುಮಾರಷ್ಟು ವೆರೈಟಿಗಳು. ಯಾವುದೋ ಲೈಟ್ ಕಂಬ ನೋಡಿದ್ರೂ ಮಿನಿಮಂ ಮೂರು ಪೀಜಿಗಳ ಆಡ್ಗಳು ಕಾಣುವಷ್ಟು ಕಾಮನ್ನು ಇಲ್ಲಿ ಪೀಜಿಗಳು ! ಹೆಸ್ರು ಬೇರೆ ಬೇರೆ ಆದ್ರೂ ಒಳಗಿನ ಹೂರಣ ಒಂದೇ.
ದಿನಕ್ಕೆರೆಡು ಊಟ, ವಾರಾಂತ್ಯದಲ್ಲಿ ಮೂರು. ಒಂದು ರೂಮಲ್ಲಿ ಎರಡೋ ಮೂರೋ ಜನ. ಒಂದು ಟೀವಿ, ಕೆಳಗೆಲ್ಲೋ ಒಂದು ಕಾಮನ್ ವಾಷಿಂಗ್ ಮೆಷಿನು ಇವಿಷ್ಟು ಕಾಮನ್ನು. ಕೆಲವೆಡೆ ವೈಫೈ ಸೌಭಾಗ್ಯ ಫ್ರೀ 🙂 ಊಟ, ಕರೆಂಟು, ರೂಮ್ ಕ್ಲೀನಿಂಗ್ ಬಿಲ್ಲುಗಳೆಲ್ಲಾ ಪೀಜಿ ರೆಂಟಿನಲ್ಲಿ ಸೇರ್ಪಡೆ. ಮನೆಯೋ ರೂಮೋ ಮಾಡ್ಕೊಂಡ್ರೆ ಇವೆಲ್ಲಕ್ಕೂ ಪ್ರತ್ಯೇಕವಾಗಿ ತೆತ್ತೋ ಬದ್ಲು ಇದೇ ಬೆಸ್ಟಲ್ವೇ ಅಂತ ಕರುಬುತ್ತಿದ್ದಿರಾ, ಸ್ವಲ್ಪ ತಾಳಿ.. ಇದು ಮೇಲ್ನೋಟ ಅಷ್ಟೇ. ವಾಸ್ತವ ಬೇರೇನೇ ಇದೆ 🙂
ಪೀಜಿಗಳು ಅಂದ್ರೆ ಆಂಧ್ರದ ಪೀಜಿಗಳದ್ದೇ ಹಾವಳಿ. ಕೆಲ ಏರಿಯಾಗಳನ್ನು ಹೊರತುಪಡಿಸಿ ಬೇರೆಲ್ಲಾ ಏರಿಯಾಗಳಲ್ಲೂ ಇವರದ್ದೇ ದರ್ಬಾರ್ 🙁 ಇಲ್ಲಿರೋರೆಲ್ಲಾ ಕನ್ನಡದ ಹುಡುಗರೇ ಆದರೂ ಈ ಓನರ್ಗಳು ಕನ್ನಡ ಕಲಿಯೋದಿಲ್ಲ. ಅವರತ್ರ ಮಾತಾಡೋಕೆ ಹುಡುಗರೇ ತೆಲುಗು ಕಲೀಬೇಕು, ಅದೂ ಕನ್ನಡನಾಡಲ್ಲಿದ್ದುಕೊಂಡು !! ಪೀಜಿಗಳಲ್ಲೆಲ್ಲಾ ಇವರ ಕೈ ಮೇಲಾಗಿದ್ದು ಹೇಗಪ್ಪಾ ಅಂತ ಆಶ್ಚರ್ಯ ಆದ್ರೂ ಸ್ವಲ್ಪ ಕೆದಕುತ್ತಾ ಹೋದ್ರೆ ಬೇಜಾರಾಗತ್ತೆ. ಒಬ್ರ ಬ್ಲಾಗ್ ಓದ್ತಾ ಇದ್ದೆ. ಅಲ್ಲಿ ಅವರ ಮಾತುಗಳು ಕಸಿವಿಸಿ ಉಂಟುಮಾಡಿದ್ವು. ನಮ್ಮ ಕರ್ನಾಟಕದ ಕಂಟ್ರಾಕ್ಟರ್ಗಳೂ ಇಲ್ಲಿನ ಜನರಿಗೆ ಕೆಲಸ ಕೊಡೋಲ್ಲ ! ಕೇಳಿದ್ರೆ ಇವ್ರು ಸೋಮಾರಿಗಳು ಸರ್. ಒಂದಿನ ಬಂದ್ರೆ ಮಾರ್ನೇ ದಿನ ಕುಡ್ದು ಬರೋದೇ ಇಲ್ಲ. ಕೆಲಸವೂ ನಿಧಾನ. ಆದ್ರೆ ಹೊರ್ಗಡೆ ಅವ್ರನ್ನ ಕರೆತಂದ್ರೆ ಬೇಗ ಕೆಲ್ಸ ಮುಗುಸ್ತಾರೆ. ದುಡ್ದೂ ಕಡ್ಮೆ !! ಯಪ್ಪಾ.. ನಾವೇ ನಮ್ಮವರ ಹೊಟ್ಟೆ ಮೇಲೆ ಹೊಡ್ಯೋದು ಅಂದ್ರೆ ಹೀಗೆ 🙁 ಒಬ್ಬ ಹೊರಗಿನವ ಬಂದ ಅಂತಿಟ್ಕೋಳಿ. ಅವ ತಮ್ಮ ನೆಂಟ್ರನ್ನೆಲ್ಲಾ ಇಲ್ಲಿಗೇ ಕರೆತರೋದು. ಒಬ್ಬ ಬೆಂಗಾಲಿಯವನ ಹೋಟೇಲ್ ನೋಡಿ. ಅಲ್ಲಿ ಪ್ಲೇಟ್ ತೊಳ್ಯೋನಿಂದ ಮೆನೇಜರ್ ವರ್ಗೆ ಎಲ್ಲಾ ಬೆಂಗಾಲಿಗಳೆ !! ಅದೇ ತರ ಒಂದು ಪೀಜಿ ಅಂದ್ರೆ ಅಲ್ಲಿನ ಓನರ್ನ ಸಹಾಯಕ ಅಂತ ಅವನ ಭಾಮೈದನ್ನೋ, ತಮ್ಮನ್ನೋ ಇಟ್ಕಂಡಿರ್ತಾನೆ. ಆಮೇಲೆ ಅವ್ನೇ ಒಂದು ಪೀಜಿ ಶುರು ಮಾಡ್ತಾನೆ. ಇವ ಮತ್ತೊಬ್ಬ ತಮ್ಮೂರವನನ್ನು ತಂದಿಟ್ತಾನೆ. ಅವ್ನೂ ಮತ್ತೊಬ್ಬನನ್ನ ತಂದಿಟ್ತಾನೆ..ಹೀಗೇ ಬೆಳಿತಾ ಹೋಗತ್ತೆ ಲಿಂಕು. ಇದು ಭಾರತ ದೇಶ ಇಲ್ಲಿ ಯಾರು ಎಲ್ಲಿ ಬೇಕಾದ್ರು ಇರ್ಬೋದು, ಅತಿಯಾಯ್ತು ನಿನ್ನ ಭಾಷಾ ಪ್ರೇಮ ಅಂದ್ರಾ ? ಹೋಗ್ಲಿ ಬಿಡಿ ಸ್ವಾಮಿ,ಸಾರಿ.. ಎಕ್ಕಡ, ಎನ್ನಡಗಳ ಮಧ್ಯೆ ಎಲ್ಲಿ ಕನ್ನಡ .. ಅನ್ನೋ ಮಾಸ್ಟರ್ ಹಿರಣ್ಣಯ್ಯನವರ ಮಾತು ನೆನಪಾಗಿ ಮನಸು ಮರುಗುತ್ತಿದೆ 🙁
ಇನ್ನು ಈ ಪೀಜಿಗಳಿಗೆ ಜಾಗ ಎಲ್ಲಿ ಸಿಗುತ್ತಪ್ಪಾ ಅಂತೀರಾ? ಅದು ಒಂದು ದೊಡ್ಡ ಕತೆ. ಮುಂಚೆಯೆಲ್ಲಾ ಮನೆಯ ಒಂದೆರಡು ರೂಮುಗಳನ್ನು ಪೀಜಿ ಅಂತ ಮಾಡೋದಾಗಿತ್ತು. ಈಗ ಹಾಗಲ್ಲ. ಪೀಜಿ ಅನ್ನೋದು ೩-೪ ಮಹಡಿಯ ದೊಡ್ಡ ಕಟ್ಟಡ. ೨೦-೩೦ ರೂಮುಗಳು. ಅದರಲ್ಲಿ ಅಡಿಗೆ, ಕ್ಲೀನಿಂಗಿಗೆ ಅಂತಲೇ ಪ್ರತ್ಯೇಕ ಜನ. ಎಷ್ಟಂದ್ರೂ ದೊಡ್ಡ ಬಿಸಿನೆಸ್ ಅಲ್ವಾ ? ಎಲ್ಲೇ ಸ್ವಲ್ಪ ಜಾಗ ಇರ್ಲಿ. ಎರಡಂತಸ್ತಿನ ಮನೆ, ಅಪಾರ್ಟ್ಮೆಂಟ್ ಕಟ್ಟಿಸೋಕೆ ಯಾರೋ ಒಬ್ಬ ಶುರು ಮಾಡಿದಾನೆ ಅಂತಿಟ್ಕೊಳ್ಳಿ. ಅಲ್ಲಿಗೆ ಪೀಜಿಗರ ದಂಡು ದಾಳಿಯಿಡುತ್ತೆ. ಅಪಾರ್ಟ್ಮೆಂಟ್ ಮಾಡಿದ್ರೆ ಜನ ಬಂದು, ಸೆಟ್ಲ್ ಆಗೋ ತಂಕ ಕಾಯ್ಬೇಕು. ಪೀಜಿ ಆದ್ರೆ ತಿಂಗಳ ಬಿಸಿನೆಸ್ಸು.. ಇಂತಿಷ್ಟು ಕೊಟ್ತೀವಿ ಅಂತ ಲಕ್ಷದ ಲೆಕ್ಕದಲ್ಲಿ ಮಾತಾಗುತ್ತೆ. ಮನೆ ಕಟ್ಟೋನಿಗೆ ಕಟ್ಟೋಕೆ ದುಡ್ಡೂ ಆಗತ್ತೆ. ಪೀಜಿಯ ೨೫ ರೂಮುಗಳ ಮಧ್ಯೆ ತನಗೇ ಅಂತನೇ ಸ್ವಲ್ಪ ದೊಡ್ಡ 1bhk- 2bhk ತರದ್ದೊಂದನ್ನೂ ಇಟ್ಕೋತಾನೆ ಮನೆ ಕಟ್ಟಿದಾತ. ಮನೆಯ ಅಂತಸ್ತುಗಳ ಕೆಲಸ ಮುಗಿತಾ ಬಂದಂತೆ ಅಲ್ಲೊಂದು 'ಪೀಜಿ' ಅನ್ನೋ ಬೋರ್ಡು ತಲೆ ಎತ್ತುತ್ತೆ 🙂
ಪೀಜಿಗಳಲ್ಲಿ ಊಟ ಸರಿ ಇರಲ್ಲ ಅನ್ನೋದು ಸಾಮಾನ್ಯವಾಗಿ ಎಲ್ಲಾ ಪೀಜಿಗಳ ಪ್ರಾಬಮ್ಮು. ಹಾಗಂತ ತೀರಾ ಕೆಟ್ಟದಾಗಿರುತ್ತೆ ಅಂತಲ್ಲ. ಚೆನ್ನಾಗೂ ಮಾಡ್ತಾರೆ ಕೆಲೋ ಸಲ. ಆದ್ರೆ ಎಷ್ಟೇ ಆದ್ರೂ ಮನೆ ತರ ಅಲ್ಲ ಅಲ್ವಾ ? ಮನೆ ಇಂದ ದೂರ ಇದ್ದು ಗೆಳೆಯರಿಗೂ ಬೇಜಾರಾಗಿರುತ್ತೆ. ಅದಕ್ಕೆ ಸರಿಯಾಗಿ ಪಾಯಸವೋ, ಕೇಸರಿಬಾತೋ, ಸಿಮೆಂಟೋ ಆಗಿರೋ ಉಪ್ಪಿಟ್ಟು, ಕಲ್ಲುಗಳ ಅವಲಕ್ಕಿ ರೆಡಿಯಾಗಿರುತ್ತೆ. ಬೆಳಗ್ಗೆ ಏಳಕ್ಕೆ ತಿಂಡಿ ಮಾಡ್ತೀವಿ ಅಂದಿರ್ತಾರೆ ರೂಮು ಕೊಡೋವಾಗ. ಬೆಳಗ್ಗೆ ಬೇಗ ಆಫೀಸಿಗೆ ಹೋಗ್ಬೇಕು ಅಂತ ಹೊರಟ ದಿನ ಘಂಟೆ ಎಂಟಾದ್ರೂ ತಿಂಡಿ ರೆಡಿ ಆಗಿರಲ್ಲ 🙁 ಜನರಲ್ ಶಿಫ್ಟಿನಲ್ಲಿರೋರಿಗೆ ಓಕೆ. ಆದ್ರೆ ಬೇರೆ ಶಿಫ್ಟಿನಲ್ಲಿರೋರಿಗೆ ಒಂದು ಹೊತ್ತು ಪೀಜೀಲಿ ಏನಾದ್ರೂ ಸಿಕ್ಕಿದ್ರೆ ಅದೇ ಪುಣ್ಯ. ಇನ್ನು ಕೆಲವು ಪೀಜಿಗಳಲ್ಲಿ ವಿಚಿತ್ರ ರೂಲ್ಸುಗಳು. ಅವೂ ಸೇರುವಾಗ ಇರೋದಿಲ್ಲ. ಆಮೇಲಾಮೇಲೆ ಹುಟ್ಕೊಳ್ಳುತ್ತೆ. ಸೇರುವಾಗ ಹತ್ತೂವರೆವರ್ಗೂ ಊಟ ಕೊಟ್ತೀವಿ ರಾತ್ರೆ ಅಂತಾರೆ. ಆದ್ರೆ ಆಮೇಲಾಮೇಲೆ ಹತ್ತಕ್ಕೆ ಊಟ ಲಾಸ್ಟ್. ಹತ್ತೂವರೆಗೆ ಗೇಟ್ ಕ್ಲೋಸ್ ಅನ್ನೋ ಬೋರ್ಡುಗಳು ಹುಡುಗರ ಪೀಜೀಲೂ ಕಾಣುತ್ತೆ !! ಬೇಕ ಬೇಕಾದಂಗೆ ರೂಲ್ಸ್ ಮಾಡೋಕೆ ಇದೇನು ಕಾಲೇಜು ಹಾಸ್ಟೆಲ್ಲಾ !!! ಆದ್ರೆ ಸಿಟ್ಟು ಬರುತ್ತೆ ಅಂತ ಇರೋದ್ನ ಬಿಟ್ರೆ, ಮುಂದೆ ? ಆಫೀಸು, ಕಾಲೇಜುಗಳಲ್ಲೇ ಮೂರೊತ್ತು ತಿನ್ನಬಹುದು. ಒಂದಿನ ಮಲಗ್ಲೂ ಬಹುದೇನೊ! ಆದ್ರೆ ದಿನಾ ಅದ್ನೇ ಮಾಡಕ್ಕಾಗುತ್ತಾ ? ನೆಂಟ್ರ ಮನೆ, ಪ್ರೆಂಡ್ ರೂಮಂತನೂ ಎಷ್ಟು ದಿನ ಇರಕ್ಕಾಗತ್ತೆ.. ಎದ್ರಿಗೆ ಏನೂ ಹೇಳ್ದಿದ್ರೂ ಸ್ವಾಭಿಮಾನ ಅಡ್ಡಿತಾಗಲ್ವಾ ? ಸಡನ್ನಾಗಿ ರೂಮೋ, ಮನೇನೋ ಮಾಡಕ್ಕೂ ಆಗಲ್ಲ. ಆಗ ಅನಿವಾರ್ಯದ ಸಂಗಾತಿ ಅಂತ ಉಳ್ಕೊಳ್ಳೋದು ಪೀಜಿನೆ.
ಅನಿವಾರ್ಯಕ್ಕೆ ಅಂತ ಬಂದ ಪೀಜಿಗಳು ಒಂತರಾ ಮನೆ ತರನೇ ಆಗ್ಬಿಡುತ್ತೆ. ಆರೆಂಟು ತಿಂಗಳುಗಳು ಕಳೆದರೂ ಅಲ್ಲಿಂದ ಕದಲೋ ಮನಸ್ಸು ಮಾಡದೇ ಅಲ್ಲೇ ಕಾಯಂ ಮನೆ ಮಾಡಿ ಬಿಡ್ತಾರೆ ಹುಡುಗ್ರು. 1bhk ಮನೆಗಳನ್ನೇ ಎಷ್ಟೊಂದು ಕಡೆ ಪೀಜಿಯನ್ನಾಗಿ ಮಾರ್ಪಡಿಸಿರ್ತಾರೆ. ಹಾಗಾಗಿ ಅದು ಮನೆಯೇ ಅನ್ನೋದು ಬೇರೆ ಮಾತು. ಟೀವಿ, ವಾಷಿಂಗ್ ಮೆಷೀನು. ಇಂಟರ್ನೆಟ್ಟು, ರೂಂಮೇಟುಗಳೆಲ್ಲಾ ಪ್ರೆಂಡ್ಸು.. ಇಷ್ಟೆಲ್ಲಾ ಇದ್ಮೇಲೆ ಇನ್ನೇನ್ ಬೇಕು? ಅದೊಂತರ ಮನೆಯಿಂದ ಹೊರತಾದ ಮತ್ತೊಂದು ಮನೆಯೇ ಆಗ್ಬಿಡುತ್ತೆ. ಕಾಮನ್ ಬಾತ್ ರೂಂ, ಡೈನಿಂಗ್ ಹಾಲ್ಗಳೇನಾದ್ರೂ ಇದ್ದಿದ್ರೆ ಇವು ಕಾಲೇಜ್ ಹಾಸ್ಟೆಲ್ಗಳೇ ಆಗ್ತಿದ್ವೇನೋ . ಆದ್ರೆ ಅದಕ್ಕಿಂತ ದೊಡ್ಡದ್ರಿರೋದ್ರಿಂದ, ರೂಮಿಗೊಂದೇ ಪ್ರತ್ಯೇಕ ಸೌಕರ್ಯ ಇರೋದ್ರಿಂದ ಪೀಜಿ ಅನ್ನಿಸ್ಕೊಳ್ಳುತ್ತೆ 🙂
ಈ ಪೀಜಿ ಅನ್ನೋದು ಎಲ್ರಿಗೂ ಹಿಡ್ಸುತ್ತೆ ಅಂತನೂ ಇಲ್ಲ. ಒಂದೆರಡು ವಾರಕ್ಕೇ ಬೇಸತ್ತು ಮನೇನೋ, ರೂಮೋ ಮಾಡವ್ರು ಸಾಕಷ್ಟು ಜನ. ಆದ್ರೆ ಈ ಬೆಂಗ್ಳೂರಲ್ಲಿ ಮನೆ/ರೂಮು ಮಾಡೋಕಿರೋ ಮುಖ್ಯ ಸಮಸ್ಯೆ ಅಂದ್ರೆ ದುಡ್ಡು ಮತ್ತು ದೂರ. ಆಫೀಸಿಗೋ, ಕಾಲೇಜಿಗೋ ಹತ್ತಿರ ಇರೋ ಏರಿಯಾಗಳಲ್ಲೆಲ್ಲಾ ಮನೆಗಳಿಗೆ ವಿಪರೀತ ರೇಟು. ಅಲ್ಲಿ ರೂಮುಗಳೇ ಸಿಕ್ಕೊಲ್ಲ. ಸಿಕ್ಕೋದೆಲ್ಲಾ ಮನೆ, ಬಿಟ್ರೆ ಪೀಜಿ. 2bhk ಗೆ ತಿಂಗಳಿಗೆ ಇಪ್ಪತ್ತು ಸಾವಿರ ಕಾಮನ್ನು ಅನ್ನೋ ಹಾಗಾಗಿದೆ ವೈಟ್ ಫೀಲ್ಡ್, ಐಟಿಪಿಎಲ್ ಹತ್ತಿರದ ಏರಿಯಾಗಳಲ್ಲಿ. ಅಷ್ಟೆಲ್ಲಾ ಕೊಟ್ಟೂ ಏನೂ ಸೌಕರ್ಯಗಳಿರಲ್ಲ. ಕರೆಂಟು ಬಿಲ್ಲಿಂದ ಇಂಟರ್ನೆಟ್ಟಿನವರೆಗೆ ಇವರೇ ಪ್ರತ್ಯೇಕ ಕಟ್ಟಬೇಕು ! ಇದಕ್ಕಿಂತಾ ಪೀಜಿಗಳ ಆಲ್ ಇನ್ ಒನ್ ಪ್ಯಾಕೇಜೇ ಮೇಲು ಅನ್ಸತ್ತೆ 🙂 ಕೆಲ ಏರಿಯಾಗಳಲ್ಲಿ ಮನೆ ಮಾಡಿದ್ರೂ ಅಲ್ಲಿಂದ ದಿನಾ ೨ ಘಂಟೆ ಆಫೀಸಿಗೆ ಓಡಾಡೋದು ಹಿಂಸೆ. ಹಾಗಾಗಿ ಕಾಲೇಜೋ, ಆಫೀಸೋ ಇರೋ ಏರಿಯಾಗಳಲ್ಲಿನ ಪೀಜಿಗಳ ಮೇಲೆ ಪ್ರೀತಿ ಹುಟ್ಟೊಕೆ ಶುರು ಆಗುತ್ತೆ.. 🙂
ಪ್ರೀತಿ ಅಂದರೆ ಸಿಕ್ಕಾಪಟ್ಟೆ ಲವ್ ಅಲ್ಲ. ಏಳು ಹೆಜ್ಜೆಗಳನ್ನ ಜತೆ ನಡೆದ್ರೇನೆ ಒಂದು ಬಂಧ ಬೆಸೆದು ಹೋಗತ್ತಂತೆ. ಇನ್ನು ತಿಂಗಳುಗಟ್ಟಲೇ ಅದೇ ಪೀಜಿಯ ಮೂರು ಮಹಡಿ ಮೆಟ್ಟಿಲು ಹತ್ತುತ್ತಾ ಇದ್ರೆ ಅದ್ರ ಮೇಲೆ ಲವ್ವಾಗೋಲ್ವಾ ? 😉 ಮನೆ ಮಾಡ್ಬೇಕು, ರೂಂ ಮಾಡ್ಬೇಕು . ಈ ಪೀಜಿ ಶಾಶ್ವತ ಅಲ್ಲ ಅನ್ನೋ ದೀರ್ಘಾವಧಿ ಯೋಜನೆಗಳ್ನ ದಿನಾ ಹಾಕಿದ್ರೂ ಸಂಜೆ ಸುಸ್ತಾಗಿ ಬಂದು ಪೀಜೀಲಿ ಕಾಲು ಚಾಚಿದ್ರೆ ಇದೇ ಸ್ವರ್ಗ. ಇದ್ನ ಬಿಟ್ಟು ಬೇರೇನೂ ಬೇಡ ಅನ್ಸಿ ಬಿಡುತ್ತೆ.. ಇಲ್ಲಿ ಏನೇ ಇದ್ರೂ , ಇಲ್ದಿದ್ರೂ ನನ್ನ ಗೆಳೆಯರ ಜೊತೆ ಖುಷಿಯಾಗಿ ನಗು ನಗ್ತಾ ಇದೀನಿ. ಇವತ್ತಿಗಿಷ್ಟೇ ಸಾಕಪ್ಪ, ತೀರಾ ಅನಿವಾರ್ಯ ಅಂದಾಗ ನೋಡ್ಕೊಳ್ಳೋಣ ಬೇಕಾರೆ ಅಂತ ಸುಮ್ಮನಾಗ್ತೀವಿ.. ಅಷ್ಟರಲ್ಲಿ ಆನ್ ಮಾಡಿದ ಫೇಸ್ಬುಕ್ಕಲ್ಲಿ ಯಾರೋ ಪ್ರೆಂಡ್ ಮಾತಿಗೆಳಿತಾರೆ .ಟೀವೀಲಿ ಬಿಗ್ ಬಾಸ್ ಶುರು ಆಗುತ್ತೆ. ಕೆಳಗೆ ಯಾರೋ ಹಾಕಿದ ವಾಷಿಂಗ್ ಮೆಷೀನು ತನ್ನ ಕೆಲ್ಸ ಆಯ್ತು ಅಂತ ಕೂಗಕ್ಕೆ ಶುರು ಮಾಡತ್ತೆ, ಅನ್ನ ರೆಡಿಯಾಯ್ತು ಅನ್ನೋ ತರ ಓನರನ ಕುಕ್ಕರ್ರು ಸೀಟಿ ಹಾಕತ್ತೆ. ಆ ದಿನ ಬೆಳಗ್ಗೆ ಎಕ್ಸಾಮು ಬರೆದು ಬಂದು ಮಲಗಿದ್ದ ನೈಟೌಟ್ ಸ್ಪೆಷಲಿಷ್ಟ್ ಪ್ರೆಂಡು ಕಣ್ಣುಜ್ಜಿಕೊಳ್ತಾ ಎದ್ದು ಕೂರ್ತಾನೆ..
ಸುಂದರಾನುಭವ…
ಬೆಂಗಳೂರಿನ ಒಂದು ಮುಖ …
ಪೇಯಿಂಗ್ ಗೆಸ್ಟುಗಳ ನೋವು-ನಲಿವು(?!)
ಅನಾವರಣ ಚೆನ್ನಾಗಿದೆ . liked the flow with which the article has been written.thankx.
Good one!!
nice article
nice
ಚೆಂದದ ಬರಹ … ಹಾಗೇ ಓದುಸ್ಕಂಡು ಹೋಗ್ತು 🙂
ನಂಗೆ ಪಿಜಿ ಅನುಭವ ಇಲ್ಲೇ.. ಚೆನ್ನಾಗಿ ಬರದ್ದೆ. ಓದಿ ಖುಷಿ ಆತು.. 🙂
Chenagidhe anubava hagu lekana shubhavagali