ನಮ್ಮ ಪಾಚತ್ತೆ ಗೊತ್ತಲ್ವಾ.. ಅದೇ..ಯಾವತ್ತೂ ನಮ್ಮನೆಗೆ ಬರ್ತಾರಲ್ವಾ ಅವ್ರೇ.. ಗೊತ್ತಾಗ್ಲಿಲ್ವಾ.. ಬಿಡಿ ನಾನು ಅವರ ಬಗ್ಗೆ ವಿಷಯ ಹೇಳ್ತಾ ಹೋದಂತೆ ನಿಮ್ಗೆ ಗೊತ್ತಾಗೇ ಆಗುತ್ತೆ.
ಎಂದಿನಂತೆ ನಾನು ನಮ್ಮ ನಾಯಿ ಟೈಗರ್ ಜೊತೆ ವಾಕ್ ಅಂಡ್ ಟಾಕ್ ಮಾಡ್ತಾ ಇದ್ದೆ. ಅಂದ್ರೆ ಅದು ವಾಕಿಂಗ್ ಮಾಡ್ತಾ ಇತ್ತು. ನಾನು ಟಾಕಿಂಗ್ ಮಾಡ್ತಾ ಇದ್ದೆ ಮೊಬೈಲಿನಲ್ಲಿ.. ಅದೇ ಹೊತ್ತಿಗೆ ಪಾಚತ್ತೆ ಬಂದು ನಮ್ಮನೆಯ ಮುಖಮಂಟಪದ ಮೆಟ್ಟಿಲಮೇಲೆ ಸೂತಕದ ಮುಖ ಹೊತ್ತು ಕುಳಿತುಬಿಟ್ಟರು.ನನಗೂ ಕುಳಿತುಕೊಳ್ಳಲು ಒಂದು ನೆವ ಬೇಕಿತ್ತು. ನಾನು ಅವರ ಪಕ್ಕ ಕುಕ್ಕರಿಸಿ ಏನಾಯ್ತು ಪಾಚತ್ತೆ ಅಂದೆ. ಅವರು ಹುಲ್ಲಿನಲ್ಲಿರುವ ಮಿಡತೆಗಳನ್ನು ಹಿಡಿಯುವ ಪ್ರಯತ್ನದಲ್ಲಿರುವ ನಮ್ಮನೆ ನಾಯಿಯ ಕಡೆ ಬೆಟ್ಟು ತೋರಿಸುತ್ತಾ “ ಹೀಗೇ ಇತ್ತು ಕಣೇ.. ಇದೇ ಎತ್ರ, ಇದೇ ದಪ್ಪ, ಇದೇ ಕಿವಿ ,ಇದೇ ಕಣ್ಣು ಇದೇ ಗಾತ್ರ.. ಎಲ್ಲವೂ ಥೇಟ್ ಇದರಂತೆ ಇತ್ತು ಕಣೇ ನಮ್ಮನೆಲಿ ಮೊದಲಿದ್ದ ನಾಯಿ ಡಿಕ್ಕಿ..” ಅಂದರು.
ಅವರ ಮನೆಯಲ್ಲಿ ನಾಯಿಗಳಿವೆ ಎಚ್ಚರಿಕೆ ಅಂತ ಕಿಲುಬು ಹಿಡಿದ ಬೋರ್ಡ್ ಒಂದನ್ನು ನೇತಾಕಿರೋದನ್ನು ನೋಡಿದ್ದು ಬಿಟ್ಟರೆ ನಾಯಿಗಳನ್ನು ಇದುವರೆಗೆ ನಾನು ಕಂಡಿರಲಿಲ್ಲ. ಆ ಮನೆಯಲ್ಲಿ ಶಬ್ಧ ಮಾಡುತ್ತಿದ್ದ ಏಕೈಕ ಜೀವಿ ಎಂದರೆ ಪಾಚತ್ತೆ ಮಾತ್ರ. ಮಾವ ಪರಮಪ್ಪ ಇವರನ್ನು ಮದುವೆಯಾದ ದಿನವೇ ಬಾಯಿಗೆ ಬೀಗ ಹಾಕ್ಕೋಂಡೋರು ಹಾಗೇ ಕೈಲಾಸಯಾತ್ರೆ ಮಾಡಿ ಹತ್ತಾರು ವರ್ಷಗಳೇ ಕಳೆದಿತ್ತು. ಪಾಚತ್ತೆ ಈಗ ಅವರಲ್ಲಿಲ್ಲದ ಎಂದೋ ಇದ್ದಿದ್ದ ನಾಯಿಯ ಬಗ್ಗೆ ಇಷ್ಟು ಫೀಲ್ ಮಾಡ್ಕೋಬೇಕಾದ್ರೆ ಆ ನಾಯಿ ವಿಶೇಷದ್ದೇ ಇರಬೇಕೆನಿಸಿ “ ಏನಾಯ್ತು ಪಾಚತ್ತೆ ಅದಕ್ಕೆ” ಅಂದೆ.
ಅಯ್ಯೋ ಆಗೋದೇನಿದೆ ಹೇಳು .. ಯಾವ್ದೋ ವಾಹನ ಡಿಕ್ಕಿ ಹೊಡೆದು ಸತ್ತು ಹೋಯ್ತು. ಐದಾರು ವರ್ಷ ಹೊಟ್ಟೇಲಿ ಹುಟ್ಟಿದ ಮಕ್ಕಳ ತರ ನೋಡ್ಕೊಂಡಿದ್ದೆ. ಒಂದು ಮರಿ ಕೂಡಾ ಹಾಕದೆ ಸತ್ತೋಯ್ತು” ಅಂದರು.
ಅಯ್ಯೋ.. ಅಷ್ಟು ವರ್ಷ ಬದುಕಿದ್ರೂ ಒಂದು ಮರಿ ಕೂಡಾ ಹಾಕ್ಲಿಲ್ವಾ.. ಸಾದಾರಣ ನಾಯಿಗಳು ಒಂದೂವರೆ, ಎರಡು ವರ್ಷದಲ್ಲಿ ಮರಿ ಇಡಕ್ಕೆ ಶುರು ಮಾಡುತ್ತವಲ್ಲಾ..ಅಂತಂದು ನನ್ನ ಸಾಮಾನ್ಯ ಜ್ನಾನ ಪದರ್ಶನಕ್ಕಿಟ್ಟೆ.
ಹುಂ ಕಣಮ್ಮಾ.. ಅಷ್ಟು ಸಮಯಕ್ಕೆ ಮರಿ ಇಟ್ಟೇ ಇಡ್ತವೆ ಅಂತ ನಂಗೂ ಗೊತ್ತಿದೆ. ಇದು ಮಾತ್ರ ಇಡ್ಲಿಲ್ಲ ನೋಡು, ಮರಿ ಇಡದೇ ಸತ್ತೋಯ್ತು .. ಬೊಗ್ಗ ( ಗಂಡು ನಾಯಿ ) ಅಂದರು.
ಅಯ್ಯೋ ಕರ್ಮವೇ ಎಂದು ನನ್ನ ತಲೆ ನಾನೇ ಚಚ್ಚಿಕೊಂಡೆ.
ಹೂವಿನ ಗಿಡಗಳನ್ನು ಬೇರೆ ಚಟ್ಟಿಗೆ ವರ್ಗಾಯಿಸುವ ಕೆಲಸ ಮಾಡ್ತಾ ಇದ್ದೆ. ಹಿಂದಿನಿಂದ ಬಂದು ಸೊಂಟಕ್ಕೆ ಕೈ ಕೊಟ್ಟು ಕೆಲಸ ಮಾಡಿಸುವವರಂತೆ ಫೋಸ್ ಕೊಟ್ಟು ನಿಂತೇ ಬಿಟ್ಟರು ಪಾಚತ್ತೆ. ಪಕ್ಕದ ಚಟ್ಟಿಯಲ್ಲಿ ಎಡೀನಿಯಂ ಗಿಡ ಇದ್ದ ಎಲ್ಲಾ ಗೆಲ್ಲುಗಳಲ್ಲೂ ಹೂ ಹೊತ್ತು ಮದುವಣಗಿತ್ತಿಯಂತೆ ನಿಂತಿತ್ತು. ಕೆಂಬಣ್ಣದ ಮನಸೆಳೆಯುವ ಆ ಹೂವಿನ ಅಂದಕ್ಕೆ ಮಾರು ಹೋಗದವರಿಲ್ಲ. ಪಾಚತ್ತೆಗೂ ಕೆಂಬಣ್ಣ ನೋಡುತ್ತಲೇ ಕೆರಳಿತೇನೋ.. ಇಂತದ್ದೇ ಹೂಬಹೂಬ್ ಇಂತದ್ದೇ ಬಣ್ಣದ ಹೂವಿತ್ತು ನಮ್ಮನೇಲಿ.. ಸುಮಾರು ಎರಡು ವರ್ಷ ಇತ್ತು ಅಂದರು.
ಹೌದಾ.. ಮತ್ತೇನಾಯ್ತು. ತುಂಬಾ ನೀರು ಬೀಳೋ ಜಾಗದಲ್ಲಿಟ್ರೆ ಕೊಳ್ತು ಹೋಗುತ್ತೆ. ಮಳೆಗಾಲ ಅಂತೂ ಹೊರಗೆ ಇಡೋ ಹಾಗೇ ಇಲ್ಲ ಅಂದೆ.
ಹೂಂ ಕಣಮ್ಮಾ.. ಅದಕ್ಕೆ ನಾನು ನೀರು ಕೂಡಾ ಸೋಕಿಸದೆ ಎರಡು ವರ್ಷ ಬಿಟ್ಟಿದ್ದೆ, ನೀರು ಮುಟ್ಟಿದ್ದೆ ತಡ ಎಲ್ಲಾ ಹೋಯ್ತು ಅಂದರು.
ನನಗಂತು ಇದು ಪ್ರಪಂಚದ ಅದ್ಭುತಗಳಲ್ಲಿ ಒಂದಾಗಿ ತೋರಿತು. ಯಾವ ಗಿಡ ತಾನೇ ಎರಡು ವರ್ಷಗಳ ಕಾಲ ನೀರಿಲ್ಲದೆ ಬದುಕಬಹುದು..
ಅಯ್ಯೋ ಹೌದಾ.. ಯಾವ ಹೂವು ಅದು ಅಂದೆ.
ಅದಾ.. ನಾನು ಮಹಿಳಾ ಸಮಾಜದಲ್ಲಿ ಕಲ್ತು ಬಂದಿದ್ದ ಪೇಪರಲ್ಲಿ ಮಾಡೋ ಹೂ ಕಣಮ್ಮಾ.. ಎರಡು ವರ್ಷ ನೀರು ಮುಟ್ಟಿಸಿರಲಿಲ್ಲ. ಒಂದಿನ ದೂಳಾಗಿದೆ ಅಂತ ನೀರಿಗೆ ಹಾಕ್ಬಿಟ್ಟೆ.ಎಲ್ಲಾ ಹೋಯ್ತು ಅಂದರು.
ಅಲ್ಲಿದ್ದ ಮಣ್ಣು ತುಂಬಿದ ಚಟ್ಟಿಯನ್ನು ಅವರ ತಲೆಗೆ ಹಾಕಬೇಕೋ ನನ್ನತಲೆಗೆ ಹೊಡೆದುಕೊಳ್ಳಬೇಕೋ ಗೊತ್ತಾಗಲಿಲ್ಲ.
ಪೇಪರಿನ ಕೊನೆಯ ಪುಟದಿಂದ ಓದೋದು ನನಗೆ ಅಂಟಿದ ಚಾಳಿ. ಅಲ್ಲಾದರೆ ಪ್ರಾದೇಶಿಕ ಸುದ್ದಿಗಳಿರುತ್ತದೆ. ನಮ್ಮೂರಿನ ಹೆಸರೋ ಸುದ್ದಿಗಳೋ ಏನಾದರೂ ಮೊದಲೇ ಕಾಣುತ್ತದೆ ಎನ್ನುವ ಆಸೆ. ಪುಟ ತಿರುಗಿಸಿದ್ದೆನಷ್ಟೇ.. ಬುಸು ಬುಸನೆ ಏದುಸಿರು ಬಿಡುತ್ತಾ ಒಳ ನುಗ್ಗಿದ ಪಾಚತ್ತೆ ನನ್ನ ಕೈಯಲ್ಲಿರುವ ಪೇಪರನ್ನು ಎಳೆದು ‘ ಕೊಡಮ್ಮಾ ಇಲ್ಲಿ.. ನನ್ನದಿಲ್ಲಿ ಪ್ರಪಂಚವೇ ಮುಳುಗಿದೆ. ಬೆಳಗ್ಗೆ ನಮ್ಮ ಮನೆ ಕೆಲ್ಸದ ರಾಮಕ್ಕು ಹೇಳಿದ ಸುದ್ದಿ ಕೇಳಿ ನನ್ನೆದೆಯೇ ಒಡೆದು ಹೋಗಿದೆ. ಅಲ್ಲಾ ಸತ್ಯವಂತರಿಗೆ ಹೀಗೂ ಆಗೋದುಂಟಾ ಅಂದರು.
ಪೇಪರಿನಲ್ಲಿ ಬಂದಿದೆ ಅಂದ ಮೇಲೆ ಏನೋ ಗಂಭೀರದ್ದೇ ಇರಬೇಕೆನ್ನಿಸಿ ಅವರು ಪುಟ ಮೊಗಚುತ್ತಿದ್ದಂತೆ ನಾನೂ ಇಣುಕಿದೆ. ಕ್ಲಾಸಿಫೈಡ್ಸ್ ಪುಟಕ್ಕೆ ಬಂದರು. ಬೆರಳುಗಳಲ್ಲೇ ಸುದ್ದಿಗಳನ್ನು ಸ್ಕ್ರಾಲ್ ಮಾಡುತ್ತಾ ಒಂದು ಕಡೆ ಅವರ ಬೆರಳು ನಿಂತುಬಿಟ್ಟಿತು.
ಲಕ್ಕಿ ಡ್ರಾ.. ಮೊದಲನೆ ಬಹುಮಾನ ಚಿನ್ನದ ಸರ, ಎರಡನೆ ಬಹುಮಾನ ಬೆಳ್ಳಿ ಗೆಜ್ಜೆ ಮೂರನೇ ಬಹುಮಾನ ತಾಮ್ರದ ಚೆಂಬು ಅಂತ ಬರೆದಿತ್ತು. ಅದರಲ್ಲಿ ಎರಡನೆ ಬಹುಮಾನ ಗೆದ್ದವರ ಹೆಸರು ರಾಮಕ್ಕ ಅಂತಿತ್ತು.
ಮೊನ್ನೆ ಮೊನ್ನೆ ನಮ್ಮನೆಗೆ ನಾಲಕ್ಕು ಹುಡುಗ್ರು ಲಕ್ಕಿಡಿಪ್ ಟಿಕೆಟ್ ಮಾರ್ಕೊಂಡು ಬಂದಿದ್ರು. ಅದೇ ಹುಡುಗರ ಕೈಯಲ್ಲಿ ರಾಮಕ್ಕು ಟಿಕೆಟ್ ತೆಗೊಂಡಿದ್ದು.. ಗೆದ್ದೇ ಬಿಟ್ಟಿದ್ದಾಳೆ.. ನನ್ನ ಹಣೇಬರಹ ನೋಡು ಅಂದರು.
ಅವರು ಹೇಳುವ ಮಾತಲ್ಲೂ ಹುರುಳಿತ್ತು. ಒಂದೇ ಹೊತ್ತಿಗೆ ಇಬ್ಬರೂ ತೆಗೆದುಕೊಂಡ ಲಾಟರಿ ಟಿಕೆಟ್ಟಿನಲ್ಲಿ ಒಬ್ಬರಿಗೆ ಬಹುಮಾನ ಬಂದಿದೆ ಅನ್ನುವಾಗ ಬೇಸರವಾಗುವುದು ಸಹಜವೇ ತಾನೇ.. ನಾನು ಅವರನ್ನು ಸಮಾದಾನಿಸುತ್ತಾ “ ಅಯ್ಯೋ ಪಾಚತ್ತೆ.. ಇರ್ಲಿ ಬಿಡಿ ಒಂದು ನಂಬರಲ್ಲಿ ನಿಮ್ಮ ಪ್ರೈಜ್ ತಪ್ಪಿ ಹೋಗಿದೆ ಅಲ್ವಾ.. ಬೇಸರ ಮಾಡ್ಕೋಬೇಡಿ.. ಕೆಲವೊಮ್ಮೆ ಪುಣ್ಯಕ್ಕಿಂತ ಅದೃಷ್ಟವೇ ಹೆಚ್ಚು ಕೆಲಸ ಮಾಡುತ್ತೆ, ಅಂದ ಹಾಗೆ ನೀವೆಷ್ಟು ದುಡ್ಡು ಕೊಟ್ಟಿದ್ರಿ ಟಿಕೆಟ್ಟಿಗೆ” ಅಂದೆ.
ಅಯ್ಯೋ ನಾನು ಟಿಕೆಟ್ಟೇ ತೆಗೊಂಡಿಲ್ಲಮ್ಮಾ.. ಅಂದರು.
ನಾನೀಗ ತಲೆ ಬಡಿದುಕೊಳ್ಳಲು ಬಂಡೆಕಲ್ಲು ಹುಡುಕುತ್ತಿದ್ದೇನೆ .
ಈಗಲಾದರೂ ಪಾಚತ್ತೆ ಯಾರು ಅಂತ ನಿಮಗೆ ನೆನಪಿಗೆ ಬಂದಿರಬಹುದಲ್ಲಾ..
-ಅನಿತಾ ನರೇಶ್ ಮಂಚಿ
******
haha… pachatte super
Thank u 🙂
niroopaNe chennAgide. sarasavAgide.
bareyuttiri.
uttama bhavishyavide.
🙂 tnq
ಪಾಚತ್ತೆ ಪುರಾಣ ಮಸ್ತ್ ಮೇಡಮ್:-)
Tnq 🙂
Superb