ರುಕ್ಮಿಣಿ ಎನ್ ಅಂಕಣ

ಪಶ್ಚಾತಾಪ ಮತ್ತು ಕ್ಷಮೆ: ರುಕ್ಮಿಣಿ ಎನ್.

ಯಾರಾದರೂ ನಮಗೆ ಕೆಡುಕನ್ನು ಮಾಡಿದಲ್ಲಿ ಅಥವಾ ತಪ್ಪು ರೀತಿಯಲ್ಲಿ ನಮ್ಮೊಂದಿಗೆ ವರ್ತಿಸಿದಲ್ಲಿ, ನಾವವರನ್ನು ಕ್ಷಮಿಸುವುದರಲ್ಲಿ ಒಳಿತಿದೆ. ಕಹಿ ಘಟನೆಯ ಕುರಿತು ಇಲ್ಲವೇ ಕೆಡುಕು ಬಯಸಿದ ವ್ಯಕ್ತಿಯ ಕುರಿತು ಪದೇ ಪದೇ ಯೋಚಿಸಿದರೆ  ಸೇಡಿಗೆ ಸೇಡು ತೀರಿಸಿಕೊಳ್ಳಬೇಕೆಂಬ ಪ್ರತಿಕಾರದ ಮನೋಭಾವ ನಮ್ಮಲ್ಲಿ ಹುಟ್ಟುತ್ತದೆ. ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುತ್ತದೆ, ನಮ್ಮ ಸುತ್ತೆಲ್ಲ ಸಂತಸದ ಹೊನಲಿದ್ದರೂ ಅದನ್ನು ನಾವು ಗುರುತಿಸುವುದೇ ಇಲ್ಲ.  ಇದಕ್ಕೆಲ್ಲ ಒಂದೇ ಪರಿಹಾರ ಸ್ನೇಹಿತರೆ, ತಪ್ಪು ಮಾಡಿದವರ ಎದುರಲ್ಲಿಯೇ ಕುಳಿತು ಮಾತನಾಡಿ.  “ನೀನೆಷ್ಟೇ ತಪ್ಪು ಮಾಡಿದರೂ, ನನಗೆ ಕೆಡುಕು ಬಯಸಿದರೂ, ನಾನು ನಿನ್ನನ್ನು ಕ್ಷಮಿಸಿರುವೆ” ಎಂದು ಮನದಲ್ಲಿ ಅಂದುಕೊಂಡು ಅವರತ್ತ ಹೂವಿನ ನಗೆಯನ್ನು ಬೀರಿ. ಹೀಗೆ ಮಾಡಿದಲ್ಲಿ ಸಂತಸ, ಸಮಾಧಾನ, ಶಾಂತಿ, ನೆಮ್ಮದಿ ಎಲ್ಲಿದ್ದರೂ ನಿಮ್ಮ ಜೋಳಿಗೆಯಲ್ಲಿ ಬಂದು ಬೀಳುತ್ತವೆ. ತಿಳಿದೋ ತಿಳಿಯದೆನೋ ಮಾಡಿದ ತಪ್ಪನ್ನು ಕ್ಷಮಿಸುವುದರಿಂದ ಕೆಡುಕು ಬಯಸುವವರು ಕೂಡ ಮನ ಪರಿವರ್ತನೆ ಹೊಂದಬಹುದು. ದ್ವೇಷ, ರೋಷ, ಕ್ಲೇಷ ಇವುಗಳಿಂದ ವೈರತ್ವ ಬೆಳೆಯುವುದೇ ಹೊರತು ಪ್ರೀತಿ ನೆಲೆಸಲಾರದು. ಅಲ್ಲದೇ, ಯಾರಲ್ಲಿಯೂ ಶಾಂತಿ ಉಳಿಯುದಿಲ್ಲ. ಉದಾಹರಣೆಗೆ ನಾನೊಂದು ನೈಜ ಘಟನೆಯನ್ನು ತಮ್ಮ ಮುಂದಿಡಲು ಇಷ್ಟ ಪಡುತ್ತೇನೆ.

ಮುಂಬೈ ಎಂಬ ಬೃಹತ್ ಮಾಯಾನಗರಿಯ ಅಂಜನಾ ಎನ್ನುವ ಹುಡುಗಿ, ಚಿಕ್ಕ ವಯಸ್ಸಿನಲ್ಲಿಯೇ ತಾಯಿಯ ಕಿರುಕುಳಕ್ಕೆ ಒಳಗಾಗಿದ್ದಳು. ಆಂಜನಾ ಕಾಲೇಜಿನಿಂದ ಬರುವುದು ೫ ನಿಮಿಷ ತಡವಾದರೂ; ಅವಳೆಲ್ಲೋ ಯಾರೊಬ್ಬ ಹುಡುಗನ ಜೊತೆ ಲಲ್ಲೆ ಹೊಡೆಯುತ್ತಿದ್ದಳು ಎಂಬಂತೆ ಕೆಂಗಣ್ಣಿನಿಂದ ನೋಡುತ್ತ ಬಾಯಿಗೆ ಬಂದಂತೆ ಬೈದು, ಬಡಿದು, ಕೊರೆವ ಮಳೆ-ಚಳಿಯನ್ನು ಲೆಕ್ಕಿಸದೆ ಬೆಳೆಯುತ್ತಿರುವ ಹೆಣ್ಣು ಮಗುವನ್ನು ಬಾಗಿಲು ಹೊರಗಡೆಯೇ ನಿಲ್ಲಿಸಿ ದಢಾರ್ ಎಂದು  ಮುಚ್ಚಿದ ಬಾಗಿಲು ರಾತ್ರಿ ೧೨ರವರೆಗೂ ಮುಚ್ಚಿಯೇ ಇರುತ್ತಿತ್ತು. ಮುಗ್ಧ ಆಂಜನಾಳ ಆರ್ತನಾದ ನೆರೆಮನೆಯವರ ಮನ ತಲುಪಿತೆ ವಿನಃ ಹೆತ್ತ ತಾಯಿಗಲ್ಲ. ಅತೀವ ಸುಂದರವಿದ್ದ ಆಂಜನಾ ಕೊಂಚ ಶೃಂಗಾರ ಮಾಡಿಕೊಂಡರೂ ಅವಳ ತಾಯಿ ಅಸಹನೆಯಿಂದ, "ಯಾರೊಡನೆ ಮೆರೆಯಲು ಹೊರಟಿರುವೆ", ಎಂದು ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದಳು.
 
ಇತ್ತ ಮನೆಯಲ್ಲಿ ಅಮ್ಮನ ಮಮತೆ ಪ್ರೀತಿಯನ್ನ ಕಾಣದಿರುವ ಅಂಜನಾ, ಹೊರಗಿನ ಜನರಿಂದ ಸಹಜವಾಗಿಯೇ ಆ ನಿರೀಕ್ಷೆಯಲ್ಲಿ ಇದ್ದಳು, ಹೀಗೆಯೇ ಪ್ರೀತಿಯ ಅರಸುತ್ತ, ತಾಯಿಯ ಹಿಂಸೆಯಲ್ಲಿ ಬಿದ್ದು ಒದ್ದಾಡುತ್ತಿರುವ ಅಂಜನಾ ಹುಡುಗನೊಬ್ಬನ ಪ್ರೇಮ ಬಂಧನದಲ್ಲಿ ಸೆರೆಯಾದಳು. ತಾಯಿಯ ಚಿತ್ರಹಿಂಸೆಯಿಂದ ಬೇಸತ್ತ ಅಂಜನಾ ಮನೆ ತೊರೆಯಲು ತುದಿಗಾಲಲ್ಲೇ ಇದ್ದಳು. ಮನಸನ್ನು ಕನ್ನಡಿಯಂತೆ ಅರಿವ ಹುಡುಗ ಸುಂದರ, ಸುಶೀಲ ಹಾಗೂ ಆಗರ್ಭ ಕುಟುಂಬದವನಾಗಿದ್ದ. ತಡಮಾಡದೆ, ಮಿಡಿದ ಮನಗಳೆರಡೂ ಸಪ್ತಪದಿಯನ್ನು ತುಳಿದು ಮಿಲನ ಮಹೋತ್ಸವಕ್ಕೆ ನಾಂದಿ ಹಾಡಿದವು. ಅಂಜನಾ ಹೊಸದೊಂದು ಪ್ರಪಂಚಕ್ಕೆ ಕಾಲಿಟ್ಟಿದ್ದಳು. ಮದುವೆಯಾಗಿ ತವರು ಮನೆ ತೊರೆದ ಅಂಜನಾ ೩ ವರುಷದವರೆಗೂ ಆ ಕಡೆ ತಲೆ ಕೂಡ ಹಾಕಲಿಲ್ಲ. ಮುತ್ತಿನಂತ ಗಂಡ, ಮುದ್ದಾದ ಗಂಡು ಮಗು, ದೇವರಂತ ಅತ್ತೆ-ಮಾವ ಸಿಕ್ಕಿದ್ದು ಆಕೆಯ ಪಾಲಿಗೆ ಸ್ವರ್ಗವೇ ಈ ಪ್ರೀತಿಯ ಹೊನ್ನರಸಿಯನ್ನ ಅರಸಿ ಬಂದಂತಿತ್ತು.
 
ಬೇಕು-ಬೇಡಗಳ, ಇಷ್ಟ-ಕಷ್ಟಗಳ ಅರಿತು ನಡೆಯುವ  ಗಂಡನ ಪ್ರೀತಿಯ ಮಹಲಿನಲ್ಲಿದ್ದರೂ ಅಂಜನಾಳ ಮುಖದಲ್ಲಿ ಮಾತ್ರ ನಗುವೊಂದಿರಲಿಲ್ಲ. ಅವಳು ಮನಸ್ಸು ಅದೇನನ್ನೂ ಗಾಢವಾಗಿ ಚಿಂತಿಸುತ್ತಲೇ ಇರುತ್ತಿತ್ತು. ಕಾರಣವಿಲ್ಲದೇ ತನ್ನ ಹೆತ್ತ ತಾಯಿ ತನ್ನನ್ನು ಏಕೆ ಹಿಂಸೆಗೆ ಒಳಪಡಿಸುತ್ತಿದ್ದಳು? ಆ ಕೆಂಗಣ್ಣಿಗೆ ಅದೇನು ಕಾರಣ? ಎಂದು ತನ್ನಲ್ಲಿಯೇ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಳು. ಮಾನಸಿಕವಾಗಿ, ದೈಹಿಕವಾಗಿಯೂ ಶೋಷಣೆಗೆ ಒಳಗಾದ ಅಂಜನಾಳ ಮನದಲ್ಲಿ ದ್ವೇಷದ ಜ್ವಾಲೆ ದಿನೇ ದಿನೇ ಹೆಚ್ಚುತ್ತಲೇ ಹೋಯಿತು. ಮನದ ನೆಮ್ಮದಿಯನ್ನೇ ಕಳೆದುಕೊಂಡು ಆ ನೋವಿನಲ್ಲಿ ಬಿದ್ದು ಒದ್ದಾಡುತಿರುವ ಸದ್ದು ಬಹುಶ ಯಾರಿಗೂ ಕೇಳದೇ ಹೋಯಿತೇನೋ. ಅಸಮಾಧಾನ ಅವಳ ಮನದ ಸ್ವಾಸ್ಥ್ಯವನ್ನು, ನೆಮ್ಮದಿಯನ್ನು ಕಸಿದು ಹಗಲಿರುಳು ತಾಯಿಯ ಉಗ್ರ ಕೋಪದ ಮುಖವನ್ನೇ ಅವಳ ಕಣ್ಣ ಮುಂದೆ ತಂದಿಟ್ಟು ಅವಳನ್ನು ಪ್ರತಿ ಕ್ಷಣ ಕೊಲ್ಲುತ್ತಲಿತ್ತು.  ಈ ಸ್ಥಿತಿ, ನರಕ ಯಾತನೆಗೆ ಕಾರಣಳಾದ ಅಮ್ಮನನ್ನು ಜೀವಮಾನದಲ್ಲಿ ಕ್ಷಮಿಸುವುದಿಲ್ಲ, ಅಲ್ಲದೇ ಆಕೆ ಸತ್ತರೇ ಮುಖ ಕೂಡ ನೋಡುವುದೇ ಇಲ್ಲ ಎಂಬ ಮಟ್ಟಿಗೆ ಅಂಜನಾಳನ್ನು  ತಂದಿತ್ತು.
 
ಜೀವನದುದ್ದಕ್ಕೂ ನೆಮ್ಮದಿ, ಶಾಂತಿಯನ್ನು ಹುಡುಕುವುದೇ ಅವಳ ಕಾಯಕವಾಗಿ ಬಿಟ್ಟಿತ್ತು. ಬಲ್ಲವರೊಡನೆ ಆ ಬಗ್ಗೆ ಚರ್ಚಿಸಿ ಸಲಹೆ ಪಡೆಯ ಹೋಗಿ, ಮನಶಾಸ್ತ್ರಜ್ಞೆಯೊಬ್ಬಳ ಸಲಹೆ ಮೇರೆಗೆ, ತಾಯಿಯನ್ನು ಕಂಡು, "ಅಮ್ಮ, ನೀನೆಷ್ಟು ತಪ್ಪು ಮಾಡಿದ್ದರೂ ನಾನದೆಲ್ಲವನ್ನೂ ಮನ್ನಿಸಿ ಬಿಡುತ್ತೇನೆ” ಎಂದು ಹೇಳಲು ೪ ವರುಷಗಳ ನಂತರ ತವರು ಮನೆಗೆ ಹೊರಟಳು. ಮನೆಗೆ ಹೋಗಿ ಅಮ್ಮನ ಕೋಣೆಗೆ ಕಾಲಿಡುತ್ತಿದ್ದಂತೆ ಅಂಜನಾಳ ಅಮ್ಮನ ಕಣ್ಣಲ್ಲಿ ಕಣ್ಣೀರ ಕೋಡಿ ಹರಿಯುತ್ತಿತ್ತು. ಮನೆಗೆ ಬಂದ ಮಗಳನ್ನು ತನ್ನೆರಡೂ ಬಾಹುಗಳನ್ನು ವಿಶಾಲವಾಗಿ ಚಾಚುತ್ತ, ಮಗಳನ್ನು ತಬ್ಬಿ ಬಿಕ್ಕಳಿಸಿ ಅಳುತ್ತ ನುಡಿದಳು, "ನನ್ನ ಮಗಳೆ, ನನ್ನನ್ನು ಕ್ಷಮಿಸಿಬಿಡು, ನಿನ್ನನ್ನು ಮಾನಸಿಕವಾಗಿ ತುಂಬ ಕಾಡಿದೆ. ನನ್ನಿಂದ ದೂರ ಹೋಗಬೇಡಮ್ಮ" ಎಂದಿತು ನೊಂದ ಜೀವ.
 
ಅಂಜನಾಳಿಗೆ ಇದೆಲ್ಲವೂ ಅಚ್ಚರಿಯಾಗಿ ಕಂಡಿತು. ಬಿಟ್ಟ ಕಣ್ಣು ಬಿಟ್ಟಂತೆ, "ಇದೆಲ್ಲ ಏನಮ್ಮಾ, ಅಲ್ಲದೇ ನನ್ನನ್ನು ಗೋಳಾಡಿಸಿಕೊಂಡದ್ದು ಯಾಕೆ?" ಎಂದಾಗ ಆಕೆಯ ತಾಯಿ ಹೇಳಿದರು, "ನನಗೂ ಕೂಡ ಚಿಕ್ಕವಳಿದ್ದಾಗ, ಚೆನ್ನಾಗಿ ಓದಿ ಕ್ಲಾಸಿನಲ್ಲಿಯೇ ಮುಂಚೂಣಿಯಾಗಿರಬೇಕು, ಎಲ್ಲರೂ ನನ್ನನ್ನೇ ಪ್ರೀತಿಸಬೇಕು, ಎಲ್ಲದಕ್ಕೋ ನಾನೇ ಯೋಗ್ಯಳಾಗಿರಬೇಕು ಎಂದು ಅಂದುಕೊಂಡದ್ದೇನೂ ನೆರವೇರಲಿಲ್ಲ. ಅದೆಲ್ಲವೂ ನನಗೆ ಅಸಮಾಧಾನವನ್ನೇ ತಂದಿತ್ತು, ನನ್ನಲ್ಲಿರದ ಅದೆಲ್ಲ ಗುಣಗಳು ನಿನ್ನಲ್ಲಿ ಇರುವುದು ಕಂಡು ನನ್ನ ಬಾಲ್ಯ ನೀಡಿದ ಕಹಿ ತುತ್ತು ಪದೇ ಪದೇ ನಿನ್ನನ್ನು ಕಂಡಾಗ ಬರುತ್ತಿತ್ತು. ಆ ಅಶಾಂತಿಯ, ಅಸಹನೆಯ ಮೊತ್ತವೇ ನಾನು ನಿನಗೆ ನೀಡುತ್ತಿದ್ದ ಅಮಾನುಷ ಕಿರುಕುಳ ಮಗಳೆ; ನೀನು ಗಂಡನ ಮನೆಗೆ ಹೋದ ಮೇಲೆಯೇ ನನಗದರ ಅರಿವಾಗಿದ್ದು. ನಾನು ದೊಡ್ಡ ತಪ್ಪು ಮಾಡಿದ್ದೆನೆಂಬ ಅರಿವು ನನಗಿದೆ, ನನ್ನನ್ನು ಕ್ಷಮಿಸಿಬಿಡು ಮಗಳೆ” ಎಂದು ಮತ್ತೊಮ್ಮೆ ತಬ್ಬಿ ಕಣ್ಣೀರಿಟ್ಟಳು. ಆ ಪಶ್ಚಾಟಾಪದ ಕಣ್ಣೀರು ಮತ್ತು ಅಮ್ಮನ ಅಪ್ಪುಗೆ ಆಕೆ ನೀಡಿದ ಚಿತ್ರಹಿಂಸೆ ಕಣ್ಣೀರಿನ ಜೊತೆಗೆ ಅಂಜನಾಳ ಮನಸ್ಸಿನಿಂದ ಜಾರಿ ಹೋಯಿತು.
 
ಚಿತ್ರಹಿಂಸೆಯೆಂಬ ಭಾರವಾದ ಮೂಟೆಯನ್ನು ಬೆನ್ನಿಗೆ ಕಟ್ಟಿಕೊಂಡು ನರಳುತ್ತಿದ್ದ ಅಂಜನಾಳ ಹೃದಯ ಹಗುರಾಯಿತು. ನೆಮ್ಮದಿಯೆಂಬ ಹಕ್ಕಿ ನೀಲಾಗಸದಲಿ ಹಾರುತ್ತ ಅಂಜನಾಳ ಮನದ ಗೂಡನ್ನು ಸೇರಿತ್ತು. ತಾಯಿ ಮಗಳ ಆ ಮುಖಾಮುಖಿ ಭೇಟಿ, ಆಲಿಂಗನ, ಪಶ್ಚಾತಾಪಪಟ್ಟು ಕ್ಷಮೆ ಕೇಳಿದ ಅಮ್ಮ, ಅಂಜನಾಳ ಕ್ಷಮಿಸುವ ವಿಶಾಲ ಮನೋಭಾವ, ಇವುಗಳು ಮಾತ್ರ ಮನಸ್ತಾಪಗೊಂಡು ಬಿರುಕು ಬಿಟ್ಟ ಕರುಳ ಕೊಂಡಿಯನ್ನು ಮತ್ತೆ ಬೆಸೆಯುವಂತೆ ಮಾಡಿದವು.
 
ಘಟನೆ ಇಷ್ಟೇ ಇತ್ತು ಸ್ನೇಹಿತರೆ, ಈ ಬರಹದೊಂದಿಗೆ ನನ್ನ ಪುಟ್ಟ ಸಂದೇಶ, "ತಪ್ಪು ದೊಡ್ಡದೆಂದು ಪರಿಗಣಿಸುತ್ತ ಹೋದರೆ, ಮನದ ನೆಮ್ಮದಿಯನ್ನು ನಾವು ದಿನೇ ದಿನೇ ಕಳೆದುಕೊಂಡಂತೆ; ಮಾಡಿದ ತಪ್ಪನ್ನು ತಪ್ಪು ಮಾಡಿದವರಿಗೆ ಮನವರಿಕೆ ಮಾಡಿಕೊಟ್ಟು ಕ್ಷಮಿಸುವ ವಿಶಾಲ ಮನೋಭಾವ ಹೊಂದಿದ್ದಲ್ಲಿ ಕಡಿದು ಹೋದ ಸಂಬಂಧಗಳು ಕೂಡ ಮಿಡಿದು ಬಂದು ನಿಮ್ಮ ಹೃದಯಗಳನ್ನು ಮತ್ತೆ ಬೆಸೆಯುದರಲ್ಲಿ ಸಂದೇಹವೇ ಇಲ್ಲ ಸ್ನೇಹಿತರೆ".
 
ಇಂತಿ ನಿಮ್ಮ ಮನೆ ಮಗಳು
ರುಕ್ಮಿಣಿ ಎನ್.
ಕನ್ನಡದ ಬರಹಗಳನ್ನು ಹಂಚಿ ಹರಡಿ

34 thoughts on “ಪಶ್ಚಾತಾಪ ಮತ್ತು ಕ್ಷಮೆ: ರುಕ್ಮಿಣಿ ಎನ್.

  1. ಯುವಪೀಳಿಗೆಯಲ್ಲಿ ಹುದುಗಿರುವ ಅಮೂರ್ತ ಶಕ್ತಿಯನ್ನು ಹೊರ ತೆಗೆಯುವ ಪ್ರಯತ್ನದಲ್ಲಿ ತೊಡಗಿರುವ ಪಂಜು ಬಳಗಕ್ಕೆ ನನ್ನ ಅನಂತ ಧನ್ಯವಾದಗಳು…

  2. ವೈರತ್ವ ಸಂಹಾರಕ್ಕೆ  ಕ್ಷಮಾಗುಣವೊಂದೇ ರಾಮಬಾನವೆಂಬ ನಿಲುವು ಇಷ್ಟವಾಯ್ತು. ಇದು ಸಮಂಜಸವಾದ ಅಭಿಮತವೂ ಕೂಡ. ನಿಮ್ಮ ಸರಣಿ ಲೇಖನ ಅಭಿಯಾನಕ್ಕೆ ಶುಭವಾಗಲಿ…

  3. ನಿಮ್ಮ ಚಿಂತನೆಗಳು ಒಪ್ಪುವಂತಹವು, ಲೇಖನ ತುಂಬ ಇಷ್ಟ ಆಯ್ತು. ಧನ್ಯವಾದಗಳು.

  4. ಪ್ರತಿಯೊಬ್ಬವರ ಬಹುಪಾಲು ವ್ಯಕ್ತಿತ್ವ, ಸ್ವಭಾವ ಅವರವರ ಬಾಲ್ಯದಲ್ಲೆ ರೂಪಿಸಿಕೊಂಡಿರುತ್ತಾರೆ. ಅವರು ಬೆಳೆದು ಬಂದ ಪರಿಸರ ಅವರ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಅದರ ಮೇಲೆ ಬೆಳಕು ಚೆಲ್ಲಿದ ನಿಮ್ಮ ಲೇಖನ ನಿಜಕ್ಕು ಪ್ದಶಂಸನೀಯ.

  5. ಓದಿ, ಪ್ರತಿಕ್ರಿಯೆ ವ್ಯಕ್ತಪಡಿಸಿದ ಎಲ್ಲರಿಗೂ ಧನ್ಯವಾದಗಳು. ಲೇಖನಕ್ಕೆ ಸಂಬಂಧಿಸಿದ ನಿಮ್ಮ ಟೀಕೆ ಟಿಪ್ಪಣಿಗಳು ಯಾವತ್ತೂ ಇರಲಿ. ನನ್ನ ಬರಹ ತಿದ್ದಿಕೊಳ್ಳೋಕೆ ಒಂದು ಸುವರ್ಣ ಅವಕಾಶ ಅಂದುಕೊಳ್ಳುತ್ತೇನೆ.

  6. ಈ ಸ್ವಭಾವ ಜೀವನದಲ್ಲಿ ಅಳವಡಿಸಿಕೊಳ್ಳುವುದು ಸ್ವಲ್ಪ ಕಷ್ಟ ಅನಿಸಿದರೂ, ಮನಶ್ಶಾಂತಿಗೆ ಕ್ಷಮೆ ಅತೀ ಪ್ರಭಾವಶಾಲೀ ಮದ್ದು.. ರುಕ್ಮಿಣಿ ಅವ್ರೆ ಒಳ್ಳೆಯ ಸಂದೇಶ ಕೊಟ್ಟಿದಿರಿ.

  7. ಕ್ಷಮೆ ಎನ್ನುವುದು ಎಷ್ಟು ಸರಳ ಪದವೋ ಅದನ್ನ ಸಾಧಿಸಿ ಸಿಧ್ಧಿಸಿಕೊಳ್ಳುವುದು ಅಷ್ಟು ಸರಳವಲ್ಲ, ಪುಟ್ಟಪುಟ್ಟ ಘಟನೆಗಳು ಕಾಡಿದಾಗಲೂ  "ಏನೀಗ, ಅಂಥದ್ದೇನಾಯ್ತು" ಅಂದುಕೊಂಡು ತೇಲಿಬಿಡುವುದನ್ನ ಕಲಿತರೆ ದೊಡ್ಡ ವಿಷಯಗಳನ್ನು ಕ್ಷಮೆಯ ಜೊತೆ ನಿಭಾಯಿಸುವುದು ಸಾಧ್ಯ ಆದೀತು. ಆದರೆ ಯುವ ಪೀಳಿಗೆ ಕ್ಷಮೆಯ ಹಿಂದಿರುವ ನೆಮ್ಮದಿಯ ರುಚಿಯನ್ನು ಅರಿತರೆ ಅದರ ಸಾಧನೆಯ ಮೊದಲ ಮೆಟ್ಟಿಲು ಹತ್ತಿದಂತೆಯೇ ಸರಿ… ತುಂಬಾ ಚಂದದ ವಿಚಾರ ಮತ್ತು ಬರವಣಿಗೆ, ಒಳ್ಳೆಯದಾಗಲಿ ರುಕ್ಮಿಣಿ.

  8. ತಪ್ಪು ಮಾಡೋದು ಸಹಜ ,ತಿದ್ದಿ ನಡೆಯೋದು ಪ್ರತಿಯೊಬ್ಬರ  ಸಹಜ ಗುಣ ಅನ್ನುವುದನ್ನು ನಿಮ್ಮ ಬರಹ ಸಾರಿ ಹೇಳುತಿತೆ.ನಿಜವಾಗಲು ಒಳ್ಳೆಯ ವಿಚಾರವನ್ನೇ ಓದುಗರಿಗೆ ಧಾರೆ ಎರೆದಿರಿ…

  9. ಚೆನ್ನಾಗಿದೆ ರುಕ್ಮಿಣಿ ಅವರೆ. ಪ್ರತ್ಯಕ್ಷವಾಗಿ ನೋಡಿದರೂ ಪರಾಮರ್ಶಿಸಿ ನೋಡು ಎಂಬ ಮಾತಿದೆ. ಅಮ್ಮನ ದುರ್ವರ್ತನೆಯ ಹಿಂದಿನ ನೋವು ತಿಳಿಯಲು ಸಂಜನಾಗೆ ಬಹಳವೇ ಸಮಯ ಬೇಕಾಯಿತು.

    ಕೆಟ್ಟದ್ದು ಮಾಡೋರನ್ನು ಮನಸಿನಲ್ಲಿಟ್ಟುಕೊಳ್ಳದೇ ಕ್ಷಮಿಸಿಬಿಡಬೇಕೆಂಬ ನಿಮ್ಮ ಮಾತು ಒಪ್ಪುವಂತದ್ದೇ

  10. ನಿಜ…. ಕ್ಷಮೆ ಎಲ್ಲದಕ್ಕಿಂತ ದೊಡ್ಡದು, ಆದರೆ ಎಲ್ಲಾ ಸಂದರ್ಬಗಳಲ್ಲೂ ನಿಮ್ಮ ಕಥೆ ಮತ್ತು ಲೇಖನದ ಕೆಲವು ಬಾಗಗಳನ್ನು ಸಮೀಕರಿಸಲಾಗದಿದ್ದಾರೂ ಬಹುಪಾಲು ಒಪ್ಪಿಕೊಳ್ಳಬೇಕಾಗುತ್ತದೆ, ಕ್ಷಮಿಸಲಾಗದಂತ ತಪ್ಪುಗಳಿದ್ದರೆ ಮರೆಯಲು ದ್ವೇಷ ಸಾದಿಸುವ ಬದಲು ಮರೆಯುವ ಪ್ರಯತ್ನ ಮಾಡಬಹುದು. ಒಟ್ಟಾರೆ ನಿಮ್ಮ ಲೇಖನದ ಸದುದ್ದೇಶ ಮತ್ತು ಸಹೃದಯತೆಯನ್ನು ಮೆಚ್ಚಲೇಬೇಕು. ಅಬಿನಂದನೆಗಳು

    1. ಸ್ವಲ್ಪ ದೊಡ್ಡ ಗುಣ ಇದ್ದು, ಮೃದುಲ ಭಾವಿಗಳಾಗಿದ್ದರೆ ಸಾಕು ಸರ್. ಎಲ್ಲಾನೂ ತಂತಾನೆ ಸರಿ ಹೋಗುತ್ತೆ. ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗೆ…

  11. ರುಕ್ಮಿಣಿ ಯವರೇ,
    ಚೆಂದ ಉಂಟು ತಮ್ಮ ಕಿರು ಲೇಖನ. ಮನಸ್ಸಿಗೆ ಹತ್ತಿರವಾಯಿತು ಕೊನೆಯ ಸಾಲುಗಳು….

  12. olleya lekhana rukku, yella tappugalu kshamisalarha, adare adu tappu emba arivu tappitastanige arivadaga. tappu madidaru kshame keli ondaguvudanna naan kuda madtini, adre uddesha berene irutte. omme odedu matte avra kshame kelidre avrige matte odiyo avkaasha sigutte anta (hahahaha tamashege)

  13. ಉತ್ತಮ ಲೇಖನ ಓದಿದ ಕುಶಿ ಆಯಿತು.
    ನೀವು ಹೇಳಿದ ನೈಜ ಕಥೆ ನಂಬಲು ಸ್ವಲ್ಪ ಕಷ್ಟ, ಯಾಕೆಂದರೆ ತಾಯಿ ಯಾವತ್ತಿಗೂ ತನ್ನ ಕರುಳಿನ ಕುಡಿಗೆ ಹಾಗೆ ಮಾಡಳು. ಇರಲಿ.
    ಕ್ಷಮೆಯ ಬಗ್ಗೆ ನಿಮ್ಮ ಮಾತಿಗೆ ಎರಡು ಮಾತಿಲ್ಲ. ನಿಮ್ಮ ಈ ಉತ್ತಮ ಭಾವನೆಗಳಿಗೆ ಹ್ಯಾಟ್ಸ್ ಆಫ್.
     ಕ್ಷಮಿಸಿದ್ದೇನೆ ಅನ್ನುವುದಕ್ಕಿಂತ, ಅಂತಹ ಘಟನೆಯನ್ನು ಮರೆಯುವುದು ಒಳಿತು. ಪ್ರತಿಯೊಬ್ಬರೂ ತಪ್ಪು ಮಾಡುತ್ತಾರೆ, ಅದು ಸಹಜ ಎಂದು ಅದನ್ನು ಮರೆಯುವುದು ಸುಲಭ. ಮನಸ್ಸಿನಲ್ಲಿ ದ್ವೇಷಕ್ಕೆ ಎಡೆ ಕೊಡದಿದ್ದರೆ ತಪ್ಪನ್ನು ಮರೆಯುವುದು ಸುಲಭ. ಇದು ಅಸಾಧ್ಯವಲ್ಲವೆಂದು ನನ್ನ ಅನುಭವ. 
    ಉತ್ತಮ ಲೇಖನ ನೀಡಿದ್ದಕ್ಕಾಗಿ ಧನ್ಯವಾದಗಳು. ಇನ್ನೂ ಉತ್ತಮ ಲೇಖನಗಳು ನಿಮ್ಮಿಂದ ಬರುಲಿ.

    1. ಸರ್  ಅಲ್ಲಿ ತಾಯಿಗೆ ಕರುಳಿನ ಕುಡಿ ಅನ್ನೋ ಭಾವನೆಗಿಂತ ತನ್ನ ಬಾಲ್ಯ ನೀಡಿದ ಕಹಿ ತುತ್ತು ನೆನಪಾಗಿ, ತಾಯಿಯಲ್ಲಿ ಅಸಮಾಧಾನ ಹುಟ್ಟಿಕೊಳ್ಳುತ್ತದೆ. ಸಂದರ್ಭ್ ಸನ್ನಿವೇಶಗಳು ನಮ್ಮ ಮನಸನ್ನು ಆಳುತ್ವೆ ಅನ್ನೋದಕ್ಕೆ ಇದೆ ನಿದರ್ಶನ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

  14.  ರುಕ್ಕು…. 
    ಲೇಖನ ಬರೆಯಲು ಆಯ್ದುಕೊಂಡ ಸಬ್ಜೆಕ್ಟ್ ಚನ್ನಾಗಿದೆ… 
    ಬರೆಯುವ ಶೈಲಿಯಲ್ಲಿ ಸ್ವಲ್ಪ ಗಮನ ಕೊಟ್ಟರೆ ಉತ್ತಮ..
    ನಿನ್ನ ಲೇಖನ ಮೊದಲ ಬಾರಿ ಓದಿದೆ… 
    ಲೇಖನದಲ್ಲಿ ನೀನು ಎಡವಿದ್ದು "ತಾಯಿ ಮಗಳಿಗೆ ಕೊಡುವ ಕಾರಣದಲ್ಲಿ" 
    ತನ್ನಲ್ಲಿ ಇಲ್ಲದ ಎಲ್ಲ ಗುಣಗಳು ತನ್ನ ಮಗಳಲ್ಲಿ ಇದ್ದಾರೆ ಮಗಳನ್ನು ದ್ವೇಷಿಸುವ ಹಿಂಸಿಸುವ ಅವಶ್ಯಕತೆ ಏನಿದೆ 
    ಹಾಗೇನಾದರು ಇದ್ದಾರೆ ಕೆಟ್ಟ ಗುಣಗಳು ಆ ಮಗಳಲ್ಲಿ ತಾಯಿಗೆ ಕಂಡಿರಬೇಕು.. ಅದ್ಯಾವುದು ಇಲ್ಲದೆ ಸುಮ್ಮನೆ ಹಿಂಸಿಸುವ ಅವಶ್ಯಕತೆ ಇರಲಿಲ್ಲ…  ಸತ್ಯ ಘಟನೆ ಅಂತ ಮೊದಲೇ ಹೇಳಿದ್ದಿಯ… ಇದ್ದರು ಇರಬಹುದು…  ಕೆಲವರ ಮನಸ್ಥಿತಿ ಹಾಗೆ ಇರುತ್ತದೆ… ಹೆಣ್ಣಿಗೆ ಹೆಣ್ಣೇ ವೈರಿ ಅನ್ನೋದು ಸತ್ಯ…  
     
    ಶುಭವಾಗಲಿ

    1. ನಿಮ್ಮ ಪ್ರತಿಕ್ರಿಯೆಗೆ ಧನ್ಯವದಗಳು ಮಂಜು. ಸಂದರ್ಭ, ಸನ್ನಿವೇಶಗಳು ಮನುಷ್ಯನನ್ನು ಹೇಗೆ ಅಳುತ್ತವೆ ಅನ್ನೋದು ಕೂಡ ಅಷ್ಟೇ ಮುಖ್ಯ. ಕೆಟ್ಟ ಗುಣಗಳು ತಾಯಿಯಲ್ಲೂ ಇಲ್ಲ, ಮಗಳಲ್ಲೂ ಇಲ್ಲ, ಆಕೆಯ ತಾಯಿ ಬಾಲ್ಯದಲ್ಲಿ ಅನುಭವಿಸಿದ ಕಹಿ ತುತ್ತು ಅಷ್ಟಕ್ಕೆಲ್ಲ ಕಾರಣ ಎಂದು ಹೇಳಬಹುದು ಅಷ್ಟೇ.

  15. ತಪ್ಪು ಮಾನವ ಸಹಜ ಗುಣ .. ನಾವೆಷ್ಟು ಬಾರಿ ತಪ್ಪು ಮಾಡಿದರೂ ನಮ್ಮನ್ನು ನಾವು ಕ್ಷಮಿಸಿ ಬಿಡುತ್ತೇವೆ .. ಹಾಗೆಯೇ ಪರರನ್ನು ಅವರ ತಪ್ಪಿಗಾಗಿ ಕ್ಷಮಿಸೋಣ … ಪರಸ್ಪರ ಪ್ರೀತಿ ಸೌಹಾರ್ದತೆಯಿಂದ  ಹೊಸ ಜಗತ್ತನ್ನು ಕಟ್ಟೋಣ …  
    ಉತ್ತಮ ಲೇಖನ ರುಕ್ಮಿಣಿ ಯವರೇ.. 
     

Leave a Reply

Your email address will not be published. Required fields are marked *