ಪರಕಾಯ ಪ್ರವೇಶದ ಒಂದು ಪ್ರಸಂಗ: ಶೈಲಜಾ

ಮನ ಕಲಕ್ಕಿತ್ತು. ನಿತ್ಯವೂ ದಿನಪತ್ರಿಕೆಯಲ್ಲಿ ಹೆಣ್ಣುಮಕ್ಕಳ ಮಾನಪಹರಣವಾಗುವ ಸುದ್ದಿಯನ್ನು ಓದುತ್ತ ಇದಕ್ಕೆಲ್ಲ ಪರಿಹಾರವೇ ಇಲ್ಲವೆ ಎಂದು ನನ್ನೊಳಗೇ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟುತ್ತಲೇ ಇದ್ದವು. ಮನಸ್ಸಮಾಧಾನ ಕದಡಿ ಹೋಗಿತ್ತು. ಕೊಂಚ ಉಪಶಮನವಾಗಲೆಂದು ಅಮ್ಮನ ಬಳಿಯಲ್ಲಿದ್ದ “ಪಾಂಡವ ಪ್ರತಾಪ” ತಂದು ಓದತೊಡಗಿದೆ.

ಹಾಗಂತ ಇಡೀ ದಿನ ಓದಲು ಕುಳಿತರಾಗುತ್ತದೆಯೆ! ಕರ್ತವ್ಯ ಕೈಬೀಸಿ ಕರೆಯಿತು! ಪುಸ್ತಕ ಬದಿಗಿಟ್ಟು ಕೆಲಸವನ್ನೆಲ್ಲಾ ಮುಗಿಸುವ ಹೊತ್ತಿಗೆ ರಾತ್ರಿ ಗಂಟೆ  ಹತ್ತು!  ಸರಿ, ಇನ್ನು ಮಲಗಿದಿದ್ದರೆ ನಾಳೆ ಏಳಲು ಕಷ್ಟವಾಗುವುದು,  ಬೆಳಿಗ್ಗೆ ಬೇಗ ಎದ್ದು ಬೇಗ ಬೇಗ ಕೆಲಸ ಮಾಡಿ ಓದು ಮುಂದುವರಿಸುವ ನಿರ್ಧಾರ ಮಾಡಿ ಮಲಗಿದೆ. ತಲೆ ಬಿಂಬಿನ ಮೇಲೆ ಇರಿಸಿದ್ದೇ ಕ್ಷಣ  ಮನ ಗಾಢ ನಿದ್ರೆಗೆ ಜಾರಿತು. ಸ್ವಪ್ನ ಲೋಕದಲ್ಲಿದ್ದವಳನ್ನು ಯಾರೋ ತಟ್ಟಿ ಎಬ್ಬಿಸಿದಂತಾಯಿತು! ’ಇವರೆಲ್ಲಾ ನಿಶಾಚರರೆಂದರೆ ಇವರ ಅಮ್ಮನಾದ ತಪ್ಪಿಗೆ ನನ್ನನ್ನೂ ಸುಖನಿದ್ದೆಯಿಂದ ವಂಚಿತಳನ್ನಾಗಿ ಮಾಡುವಿಯೇಕೆ ಭಗವಂತ!’ ಎನ್ನುತ್ತಾ ಮಗಳಿಗೋ ಮಗನಿಗೋ ಸಹಸ್ರ ನಾಮಾರ್ಚನೆ ಮಾಡಲು ಶುರು ಮಾಡಿಲ್ಲ ಇನ್ನೂ… ನಿದ್ದೆಯ ಭಾರಕ್ಕೆ ಕಣ್ಣು ಬಿಡಿಸಿ ನೋಡಲು ಕಷ್ಟವಾಯಿತು. ತಿಕ್ಕಿ ಬಿಡಿಸಿ ನೋಡಿದರೆ ಎದುರಿಗೆ ಸುತ್ತಲೂ ಕಾಂತಿಯುತವಾದ ಚಂದ್ರಮನ  ಬೆಳದಿಂಗಳಂತೆ ಬೆಳಕು ಚೆಲ್ಲಿರುವ ತೇಜಸ್ವೀ ಸ್ತ್ರೀರೂಪ! ಅದೇಕೋ ಹೆದರಿಕೆಯೇ ಆಗಲಿಲ್ಲ. ಮನಮೋಹಕ ರೂಪವನ್ನೇ ನೋಡುತ್ತಾ ಕುಳಿತೆ.

ಸುಂದರ ಮಂದಸ್ಮಿತ ನಗೆ ಚೆಲ್ಲುತ್ತಾ ಆಕೆ, “ಶೀಲಾ, ನಾನು ಪಾಂಚಾಲಿ!”

ಮುಂದುವರಿಸಿದಳು… “ಶೀಲಾ, ಇತ್ತೀಚಿಗೆ ನೀನು ಕತೆಗಳನ್ನು ಬರೆಯುತ್ತಿರುವಿಯಷ್ಟೇ! ನೀನು ನನ್ನ ಬದುಕಿನ ವಸ್ತ್ರಾಪಹರಣದ ಭಾಗವನ್ನು ಕತೆಯ ರೂಪದಲ್ಲಿ ಬರೆಯಬೇಕೆಂದು ನನ್ನಿಚ್ಛೆ!”

ದಂಗಾದೆ. ಮಾತು ಹೊರಬರಲಿಲ್ಲ! ಆದರೂ ಸಾವರಿಸಿ, “ದ್ರುಪದೆ, ತಾಯೆ, ನೀನು ಯಾರ ಬಳಿ ಈ ಮಾತನ್ನು ಹೇಳುತ್ತಿರುವಿ ಎಂದು ತಿಳಿದಿದೆ ತಾನೆ! ನಾನು ಬರಹಗಾರ್ತಿಯಲ್ಲ. ಕೇವಲ ಮನದ ಭಾವಗಳನ್ನು ತಿಳಿದ ಶಬ್ದಗಳ ಮೂಲಕ ಹೊರಚೆಲ್ಲುತ್ತಿರುತ್ತೇನೆ. ನಿನಗಾರೋ ತಪ್ಪು ಮಾಹಿತಿ ನೀಡಿರಬೇಕು. ಶಬ್ದಬಳಕೆಯಲ್ಲಿ ಪರಿಣತಿ ಹೊಂದಿದವರು ನಮ್ಮ ನಾಡಿನಲ್ಲಿ ಅನೇಕರಿದ್ದಾರೆ, ಕೃಷ್ಣೆ!. ತಮ್ಮ ಬರಹದಲ್ಲಿಯೇ ಚಮತ್ಕಾರವನ್ನು ತೋರುವರು. ನಿನ್ನ ಆಸೆ ನೇರವೇರಿಸಲು ಅಂತವರೇ ಶಕ್ಯರು.”

ಸುಮ್ಮನೆ ತಲೆ ಆಡಿಸಿದಳು… ಕಣ್ಣು ಮುಚ್ಚಿದಳು… ಇದ್ದಕ್ಕಿದ್ದಂತೆಯೆ ಎದುರಿಗೆ ಕುಳಿತ್ತಿದ್ದ ಅವಳ ಹೃದಯದಿಂದ ಬೆಳಕಿನ ಪುಂಜವೊಂದು ನನ್ನತ್ತಲೇ ಧಾವಿಸಿ ಬಂದಿತು. ಎರಡೂ ಕೈಗಳಿಂದ ತಡೆಯುವ ಯತ್ನ ವಿಫಲವಾಗಿ ಅದು ನನ್ನೊಳಗೆ ಪ್ರವೇಶಿಸಿತು!

ಎದ್ದು ನಿಂತೆ. ನನಗೀಗ ನನ್ನಲ್ಲಿ ಆದ ಬದಲಾವಣೆಯ ಅರಿವಾಯ್ತು!  ನನ್ನೊಳಗೆ ಎರಡು ವ್ಯಕ್ತಿತ್ವಗಳ ಬೆರಕೆಯಾಗಿದೆ… ಪಂಚ ಪಾಂಡವರ ಪತ್ನಿ ದ್ರೌಪದಿ, ಕುಂತಿಯ ಸೊಸೆ ಆವ್ಹಾನಿತಳಾಗಿದ್ದಾಳೆ!  ಮಂಚದ ಕೆಳಗೆ ಇಟ್ಟಿದ್ದ ಪುಸ್ತಕ ಕೈಗೆ ಬಂದಿತು. ಅದರೊಳಗಿದ್ದ ಲೇಖನಿ ತೆಗೆದುಕೊಂಡು ನನ್ನ ಭಾವಗಳನೆಲ್ಲ ಮೂಡಿಸುತ್ತಾ ಹೊರಟೆ!

*********************

ರಾಜಸೂಯ ಯಾಗ ಮುಗಿದು ಕೆಲವೇ ದಿನಗಳಾಗಿವೆ. ಬಂದ ನೆಂಟರೆಲ್ಲರೂ ಈ ವೈಭವದ ಯಾಗವು ಇನ್ನು ಇತಿಹಾಸದಲ್ಲಿ ಅಮರವಾಗಲಿದೆಯೆಂಬ ಭವಿಷ್ಯ ಹೇಳುತ್ತಾ ತಾವು ತಿಂದ ಭೋಜನದ ಸವಿಯನ್ನು ಮತ್ತೆ ಮತ್ತೆ ನೆನಯುತ್ತಾ, ಇಂದ್ರಪ್ರಸ್ಥದ ವೈಭವನ್ನು ಮೆಲುಕು ಹಾಕುತ್ತಾ ತಮ್ಮ ತಮ್ಮ ಊರಿಗೆ ಮರಳಿದ್ದಾರಷ್ಟೇ. ಸೇವಕ ಸೇವಕಿಯರೆಲ್ಲ ಅಸ್ತವ್ಯಸ್ತವಾಗಿದ್ದ ಅರಮನೆಯನ್ನು ಮತ್ತೆ ವ್ಯವಸ್ಥಿತವಾಗಿ ಇಡುವುದರಲ್ಲಿ ನಿರತರಾಗಿದ್ದಾರೆ.

ಹುಂ, ಎಲ್ಲವೂ ಸಾಂಗವಾಗಿ ನೆರವೇರಿತು. ಆದರೆ ಅದೇಕೆ ವಿದುರ ಮತ್ತು ಕೃಷ್ಣ ಇಬ್ಬರೂ ತಮಗೆ ಎಚ್ಚರಿಕೆ ಹೇಳಿ ಹೋಗಿದ್ದಾರೆ?

ಅಲ್ಲ, ಕೃಷ್ಣನೇಕೆ ತನ್ನನ್ನು ಏಕಾಂತದಲ್ಲಿ ಭೇಟಿಯಾಗಲು ಬಂದಿದ್ದನು? ತನ್ನ ಕೈಯನ್ನು ಹಿಡಿದು  ನೇವರಿಸಿ, ಬಿಗಿದಪ್ಪಿ ಹಿಡಿದು.. ಮೈದಡವಿ, “ಪಾಂಚಾಲಿ, ಎಲ್ಲವೂ ಸರಿಯಾಗುತ್ತದೆ. ಧೃತಿಗೆಡಬೇಡ” ಎಂದನಲ್ಲವೆ!

ಅವನೊಬ್ಬನೇ ತಾನೆ ನನ್ನ ಹೃದಯದ ಅಳಲನ್ನು ಬಲ್ಲವನು. ತಿರುಗಿ ಹೋಗುವಾಗ ಮತ್ತೆ ಮತ್ತೆ ನನ್ನ ಕಡೆಯೇ ನೋಡುತ್ತಾ,  “ನಿನಗೇನೆ ಕಷ್ಟ ಬರಲಿ, ಮರೆಯದಿರು ಎನ್ನ ಸ್ಮರಿಸಲು!” ಎಂದು ಮತ್ತೊಮ್ಮೆ ಅಂದನಲ್ಲವೆ!

ನನಗೇನೂ ಅವನ ಮಾತಿನ ಮರ್ಮ ತಿಳಿಯಲಿಲ್ಲ… ಆದರೆ ಅವನು ಎಂದೂ ಇಷ್ಟು ಕಾಳಜಿಯನ್ನು ತೋರಿಸಿರಲಿಲ್ಲ. ಪಿತಾ ಸಮಾನರಾದ ವಿದುರರ ಮುಖದಲ್ಲಿಯೂ ಕಳವಳ ಎದ್ದು ಕಾಣುತಿತ್ತು. ಬಹುಶಃ ನನ್ನ ಭ್ರಮೆಯೇ ಇರಬಹುದೇನೋ. ಬಂದ ಅತಿಥಿಗಳಿಗೆಲ್ಲಾ ನಾನೇ ಸತ್ಕರಿಸುವ ಹೊಣೆಹೊತ್ತು ಸ್ವತಃ ಬಡಿಸಲೂ ನಿಂತಿದ್ದುದರ ಆಯಾಸಕ್ಕೋ ಏನೋ – ಈ ಎಲ್ಲಾ ಆಲೋಚನೆಗಳು ನನ್ನನ್ನು ಮುತ್ತುತ್ತಿರುವುದು…

ಅಮ್ಮ ಕುಂತಿ ನಿನ್ನೆ ರಾಮಾಯಣ ಪಠಣ ಮಾಡುತ್ತಿದ್ದರಲ್ಲ.. ನಾನು ಅಲ್ಲೇ ಕುಳಿತು ಅವರಿಗೆ ಸೀತೆ, ಅಹಲ್ಯೆ, ತಾರಾ ಮಂಡೋದರಿಯರ ಬಗ್ಗೆ ನನ್ನ ಅನುಮಾನಗಳನ್ನು ಕೇಳಿದಕ್ಕೆ ಅವರು ಸ್ತ್ರೀ ಜನ್ಮವೇ ಪುರುಷರ ತ್ಯಾಗಕ್ಕೆ ಮತ್ತವರ ಬೆಂಬಲಕ್ಕಾಗಿಯೇ ಇರುವುದು ಎಂದರಲ್ಲ… ಅಂದರೆ ಅವರು ನನ್ನನ್ನು ಈ ಐವರು ಪತಿಗಳಿಗಾಗಿ ತ್ಯಾಗಮಾಡಲು ಸಿದ್ಧಳಿರು ಎಂದು ಮುನ್ಸೂಚನೆ ಕೊಟ್ಟಿದ್ದರಾ ಹೇಗೆ!  ಛೇ, ಎಲ್ಲವೂ ಅಯೋಮಯ!

ಯಾರದು ಅಲ್ಲಿ… ಅರೇ! ಏನಿದು ರಾಜನ ಆಪ್ತ ದೂತನು ಬಾಗಿಲಲ್ಲಿ ನಿಂತಿರುವನಲ್ಲ! ಸಖಿಯರನ್ನು ಕಳುಹಿಸಿ ಅವನನ್ನು ಬರಮಾಡಿಕೊಂಡೆ.

“ಮಹಾರಾಣಿ!”

ನಗೆ ಬಂತು ನನಗೆ… ಎಲ್ಲಿಯ ಮಹಾರಾಣಿ! ಆ ಪಟ್ಟ ಭಾನುಮತಿಗೆ ಮೀಸಲು… ಆದರೂ ನಾನು ಇಂದ್ರಪ್ರಸ್ಥದ ರಾಣಿಯೆನ್ನುವುದೂ ಸುಳ್ಳಲ್ಲವಲ್ಲ!

ನನ್ನ ಐವರು ಪತಿಯರು ಮಹಾಪ್ರತಾಪಿಗಳು. ಹೆಮ್ಮೆಯಿಂದ ಎದೆಯುಬ್ಬಿತು. ಸೆರಗು ಸರಿಪಡಿಸಿ, ಮುಂದುವರಿಸಲು ಅಪ್ಪಣೆ ಕೊಟ್ಟೆ.

“ಮಹಾರಾಜ ದುರ್ಯೋಧನನು ಯಜ್ಞ ಮಾಡುವನಂತೆ. ತಾವೆಲ್ಲಾ ಬಂದು ಕೆಲಕಾಲ ಅವನ ಅತಿಥಿಗಳಾಗಿ ಸತ್ಕಾರ ಸ್ವೀಕರಿಸಲು ಹಸ್ತಿನಾಪುರಕ್ಕೆ ಬರಬೇಕೆಂದು ಆಮಂತ್ರಣ ಪತ್ರ ಬಂದಿದೆ. ತಾವು ತಯಾರಾಗಬೇಕೆಂದು ಮಹಾರಾಜ ಯುಧಿಷ್ಟಿರನು ತಮ್ಮಲ್ಲಿ ಕೇಳಿಕೊಂಡಿದ್ದಾರೆ.”

ಇಲ್ಲಿಂದ ಹೋಗಿ ಬಹಳ ದಿನಗಳಾಗಿಲ್ಲ… ಅಷ್ಟರಲ್ಲೇ ಇದೇನು ಯಜ್ಞ! ಹೌದು, ಹೊಟ್ಟೆಯುರಿ… ಅಲ್ಲದೆ ಮತ್ತೇನು!. ಬಂದ ವಿಪ್ರರೆಲ್ಲರ ಬಾಯಿಯಿಂದ  ’ಹಿಂದೆಂದೂ, ಮುಂದೆಯೂ ಇಂತಹ ಯಜ್ಞ ನಡೆದಿರಲಿಲ್ಲ, ನಡೆಯಲಿಕ್ಕಿಲ್ಲ’… ಮುಂತಾದ ಹೊಗಳಿಕೆಯ ನುಡಿಗಳನ್ನು ಕೇಳಿದ ಮೇಲೆ ಕೌರವರ ಹೊಟ್ಟೆಗೆ ಬೆಂಕಿ ಸುರಿದಂತಿರಬೇಕು. ಮನಸ್ಸಿಗೇಕೋ ಮತ್ತಿಷ್ಟು ತಳಮಳ!

“ಕೃಷ್ಣೆ, ಏಕಿ ತಳಮಳ?” ನನ್ನ ಆಪ್ತಸಖಿಯವಳು…

“ಏನೋ ಅರಿಯೆ, ಚಿತ್ರ! ಮನಸ್ಸಿಗೆಕೋ ಸಮಾಧಾನವಿದ್ದ ಹಾಗಿಲ್ಲ! ನೆನಪಿದೆಯೇ, ಆ ಮಯ ನಿರ್ಮಿತ ಮೊಗಸಾಲೆಯಲ್ಲಿ ಸುಯೋಧನನು ನೆಲವೆಂದು ಭ್ರಮಿಸಿ ನೀರಿನಲ್ಲಿ ಜಾರಿ ಬಿದ್ದಾಗ ನಾವೆಲ್ಲರೂ ನಕ್ಕಿದ್ದೋ ನಕ್ಕಿದ್ದು! “ಕುರುಡನ ಪುತ್ರನೂ ಕುರುಡನಲ್ಲದೆ ಮತ್ತೇನು!” ನನ್ನ ಬಾಯಿಯಿಂದ ಹೊರ ಬಿತ್ತು.. ಅಲ್ಲೇ ಭಾನುಮತಿಯೂ ಇದ್ದಳಲ್ಲ. ಅವಳಿಗೆಷ್ಟು ಬೇಸರವಾಗಿರಬಹುದು. ಛೇ! ನಾನ್ಹಾಗೆ ಹೇಳಬಾರದಿತ್ತು… ಅಲ್ಲವಾ!”

“ಆದದ್ದು ಆಗಿ ಹೋಯಿತು ಪಾಂಚಾಲಿ. ಈಗ ಅದೇ ಮಾತನ್ನು ನೀನು ಹೀಗೆ ಹಚ್ಚಿಕೊಂಡರೆ ನಿನ್ನ ಮನಸ್ಸು ಹಾಳಾಗುವುದಲ್ಲ, ಕೃಷ್ಣಾ!”

ಚಿತ್ರ ನನ್ನನ್ನು ಸಂತೈಸಲೆತ್ನಿಸಿದಳು. ಗಾಯಕಿಯರನ್ನು ಕರೆದು ಮನ ಮುದಗೊಳಿಸುವ ಸಕಲ ಪ್ರಯತ್ನಗಳನ್ನು ಮಾಡಿದಳಾದರೂ ಆ ಸ್ಥಿತಿಯಿಂದ ಹೊರಬರಲಾಗಲಿಲ್ಲ. ನನ್ನ ಕೈ ಕಾಲುಗಳಿಗೆ ಮದರಂಗಿಯನ್ನು ಹಚ್ಚಲು ದಾಸಿಯರನ್ನು ನೇಮಿಸಿದಳು. ಯಾವುದರಿಂದಲೂ ಒಳಬೇಗುದಿ ಉಪಶಮನ ಪಡೆಯಲಿಲ್ಲ.

************************************

ಅರಮನೆಯಲೆಲ್ಲ ಸಡಗರ, ಸಂಭ್ರಮ! ಎಲ್ಲರೂ ಮರುದಿನ ಹಸ್ತಿನಾಪುರಕ್ಕೆ ಹೊರಡುವ ಸಂಭ್ರಮದಲ್ಲಿದ್ದಾರೆ, ನನ್ನನೊಬ್ಬಳ್ಳನ್ನು ಬಿಟ್ಟು. ಸಾಯಂಕಾಲ ನನ್ನ ದುಗುಡ ಅಮ್ಮ ಕುಂತಿಯೊಂದಿಗೂ ಹಂಚಿದೆ. ಅವಳಿಗೂ ನನ್ನ ಮನದ ಬಿಸಿ ತಾಗಿತು. ಮುಖದಲ್ಲಿ ಚಿಂತೆಯ ಕಾರ್ಮೋಡ ಕವಿಯಿತು. ಆದರೂ ಏನೂ ಹೇಳದೆ ನನ್ನ ತಲೆಸವರಿದಳು.

ಆ ರಾತ್ರಿ ನನಗೆ ಸರದಿಯಂತೆ ಭೀಮನ ಜತೆಕಳೆಯಬೇಕಾಗಿತ್ತು. ನಾನು ಏಕಾಂತವನ್ನು ಬಯಸಿದ್ದೇನೆಂದು ಚಿತ್ರಳೊಡನೆ ಅವನಿಗೆ ಹೇಳಿ ಕಳುಹಿಸಿದೆ. ನನ್ನಿಷ್ಟವನ್ನು ಅವನು ಎಂದಿನಂತೆ ಗೌರವಿಸಿದನಾದರೂ ಚಿತ್ರಳೊಡನೆ ಮತ್ತೆ ಮತ್ತೆ ನನ್ನ ಯೋಗಕ್ಷೇಮವನ್ನು ವಿಚಾರಿಸಿದನಂತೆ!

ರಾತ್ರಿಯೆಲ್ಲ ನಿದ್ದೆಯಿಲ್ಲ… ಆಗೀಗ ಜೊಂಪು ಹಿಡಿದಾಗ ದುಃಸ್ವಪ್ನ… ಕ್ರೂರ ಮೃಗಗಳೆಲ್ಲಾ ನನ್ನ ಸುತ್ತಲೂ ಸೇರಿ ನನ್ನ ಬಟ್ಟೆಯನ್ನು ಎಳೆಯುವ ಯತ್ನ ಮಾಡಿದ ಹಾಗೆ! ಮೈಯೆಲ್ಲ ಬೆವರಿ ಎದ್ದು ಕುಳಿತು ಬಿಟ್ಟೆ.. ನಿದ್ರಿಸಲೂ ಹೆದರಿಕೆ. ಚಿತ್ರ ನನ್ನ ಅವಸ್ಥೆ ನೋಡಿ ಹೆದರಿದಳಾದರೂ ತೋರಗೊಡಲಿಲ್ಲ.  ಮೆಲ್ಲನೆ ಅಂದಳು,” ಭೀಮ ಮಹಾರಾಜರಿಗೆ ಹೇಳಿಕಳುಹಿಸಲೇ?”

ಸುಮ್ಮನೆ ತಲೆಯಾಡಿಸಿದೆ. ಅವಳಿಗೆ ತಿಳಿದಿತ್ತು ನನ್ನಂತರಂಗ! ಪತಿ ಐವರಲ್ಲಿ ನನ್ನನ್ನು ಅತೀವ ಪ್ರೀತಿಸುವುದು ಭೀಮನೊಬ್ಬನೇ… ಭೀಮಾಕಾರವಾದರೂ ಅವನ ಮನಸ್ಸು ಬೆಣ್ಣೆ ಹಾಗೆ. ಸ್ತ್ರೀಯರ ದುಃಖವನ್ನು, ಕಣ್ಣೀರನ್ನು ಕಂಡರೆ ಕರಗಿಬಿಡುತ್ತಾನೆ. ಅವನ ಬಾಹುವಿನಲ್ಲಿ ಅಡಗಿದರೆ ನನಗೂ ಬೆಚ್ಚನೆಯ ಅನುಭವ!

ನನ್ನ ಈ ಸ್ಥಿತಿಯನ್ನು ನೋಡಿದರಂತೂ ಅವನೂ ತುಂಬಾ ದುಃಖ ಪಡುತ್ತಾನೆ. ಬೇಡ, ಈ ಹೊತ್ತಿನಲ್ಲಿ ಅವನಿಗೆ ತೊಂದರೆ ಕೊಡುವುದು ಬೇಡ. ನಾಳೆ ಅವನ ಜತೆ ಮಾತನಾಡುತ್ತೇನೆ ಎಂದು ನಿರ್ಧರಿಸಿ ಪೂರ್ವದಲ್ಲಿ ಭಾಸ್ಕರನು ಮೂಡುವುದನ್ನೇ ಕಾಯುತ್ತಾ ನಾವಿಬ್ಬರೂ ಪಲ್ಲಂಗದಲ್ಲಿ ಅಡ್ದಾದೆವು.

ಅದೇ ತಾನೆ ಜೊಂಪು ಹತ್ತಿತ್ತು… “ಅಮ್ಮ, ಅಮ್ಮ,.. “ ಮಕ್ಕಳ ಸೈನ್ಯ ನನ್ನ ಮಗ್ಗುಲಲ್ಲಿ! ಎಲ್ಲರೂ ಹಸ್ತಿನಾಪುರಕ್ಕೆ ಹೋಗುವ ಸಂಭ್ರಮದಲ್ಲಿ! ಅವರ ಮುದ್ದು ಮುಖದಲ್ಲಿ ಹರುಷ ಕಂಡು ಅರೆ ಘಳಿಗೆಗೆ ನನ್ನ ಮನಸ್ಸೂ ಪ್ರಫುಲ್ಲವಾಯಿತು.

ಭೀಮನ ಜತೆ ನನ್ನೀ ತಳಮಳ ಕೊನೆಗೂ ಹಂಚಿಕೊಳ್ಳಲಾಗಲಿಲ್ಲ.  ಹಸ್ತಿನಾಪುರದಲ್ಲಿ ಅತಿಥಿ ಸತ್ಕಾರಕ್ಕೇನು ಕಡಿಮೆಯಾಗಲಿಲ್ಲ. ನನ್ನ ದುಗುಡವೂ ಅಷ್ಟೇ! ಮರುದಿನ ಎಲ್ಲ ನೆಂಟರೂ ರಾಜಸಭೆಯಲ್ಲಿ ಸೇರುವ ನಿರ್ಧಾರವೂ ಆಯಿತು.

*********************

ನನ್ನ ಮನದ ತಳಮಳದಿಂದಲೋ ಅಥವಾ ಯಾಗದ ಸಮಯದಲ್ಲಿ ಅತಿಥಿಗಳ ಊಟೋಪಚಾರದ ಕಾರ್ಯದಿಂದಲೋ ಪ್ರಕೃತಿ ತನ್ನ ಪ್ರಭಾವ ನನ್ನ ಮೇಲೆ ಬೀರಿತು. ರಜಸ್ವಲೆಯಾದ ನಾನು ರಾಜಸಭೆಗೆ ಹೋಗುವಂತಿಲ್ಲ. ಅದೂ ಒಳ್ಳೆಯದೇ ಆಯಿತೆಂದು ನಾನೆಂದುಕೊಂಡೆ.

ಆಲಸ್ಯದಿಂದ ಮಂಚದ ಮೇಲೆ ಬಿದ್ದುಕೊಂಡವಳಿಗೆ ನನ್ನ ಹುಟ್ಟಿನ ಕತೆ, ಸ್ವಯಂವರದ ಕತೆಗಳ ನೆನಪು ಮತ್ತೆ ಮರುಕಳಿಸಿತು. ಹೌದು, ನಾನು ಸಾಮಾನ್ಯ ಮಾನವರಂತೆ ಅಮ್ಮನ ಹೊಟ್ಟೆಯಲ್ಲಿ ಒಂಬತ್ತು ತಿಂಗಳು ಕಳೆದು ಭೂಮಿಗೆ ಬರಲಿಲ್ಲ. ಅಪ್ಪ ದ್ರುಪದ ದ್ರೋಣಾಚಾರ್ಯರ ಮೇಲೆ ಸೇಡು ತೀರಿಸಿಕೊಳ್ಳಲು ಮಾಡಿದ ಯಾಗದಲ್ಲಿ ನನ್ನನ್ನು ಪಡೆದನಂತೆ. ಬಾಲ್ಯದ ಸಿಹಿಯನ್ನು ಅನುಭವಿಸದ ನಾನು  ಯುವತಿಯಾಗೇ ಈ ಭೂಮಿಯ ಮೇಲೆ ಅವತರಿಸಿದನಷ್ಟೆ. ಕೃಷ್ಣವರ್ಣೆಯಾದರೂ ನನ್ನ ಸೌಂದರ್ಯವನ್ನು ಎಲ್ಲರೂ ಮೆಚ್ಚಿ ಹಾಡಿ ಹೊಗಳುವರೇ,  ಈ ಬಣ್ಣವೆಂದೂ ತನಗೆ ಕೀಳುರಿಮೆ ತಂದಿರಲಿಲ್ಲ!

ನನಗೋಸ್ಕರ ನನ್ನ ತಂದೆ ಆ ಮತ್ಸ್ಯಯಂತ್ರದ   ಸ್ಪರ್ಧೆ  ಏರ್ಪಡಿಸಿ, ಅದರಲ್ಲಿ ಗೆದ್ದ ವೀರನಷ್ಟೇ ನನಗೆ ಸರಿಸಟಿಯಾಗಬಲ್ಲನೆಂದಾಗ ನನಗೆ ನನ್ನ ಅಪ್ಪನ ಬಗ್ಗೆ ಹೆಮ್ಮೆಯುಕ್ಕಿತ್ತು. ನಾನು ಇಂತಹ ತಂದೆಯನ್ನು ಪಡೆಯಬೇಕಾದರೆ ನನ್ನ ಸುಕೃತಫಲವು ಎಷ್ಟಿರಬಹುದೆಂದೂ ಯೋಚಿಸಿದ್ದೆ. ಅಂತೆಯೇ ಸ್ವಯಂವರದಲ್ಲಿ ಪಾರ್ಥನು ತನ್ನ ಬಾಣದಿಂದ ನೀರಿನಲ್ಲಿ ಮತ್ಸ್ಯದ  ಬಿಂಬವನ್ನು  ನೋಡುತ್ತಾ ಮೇಲೆ ತಿರುಗುತ್ತಿರುವ ಮತ್ಸ್ಯವನ್ನು ಛೇಧಿಸಿ ನನ್ನನ್ನು ಗೆದ್ದಾಗ ನಾನು ಕೆಂಪಾಗಿದ್ದೆ; ನವುರಾಗಿ ಕಂಪಿಸಿದ್ದೆ! ಆ ವೀರನ ಅಂಗಸೌಷ್ಟವ ನೋಡಿ ಮನಸೋತಿದ್ದೆ!

ಇನ್ನೇನೋ ಕತೆಯನ್ನೂ ಹೇಳುತ್ತಾರಪ್ಪಾ!  ನಾನು ಹಿಂದಿನ ಜನ್ಮದಲ್ಲಿ ಪರಮೇಶ್ವರನನ್ನು ತಪಸ್ಸಿನ ಮೂಲಕ ಮೆಚ್ಚಿಸಿ ಐದು ಬಾರಿ ನನಗೆ ’ಪತಿಮ್ ದೇಹಿ’ ಅಂದೆನಂತೆ… ಏನೋಪ್ಪಾ… ನನಗೆ ಇದೆಲ್ಲಾ ಅರ್ಥವಾಗುವುದಿಲ್ಲ. ಕೊನೆಗೂ ಧರ್ಮನ ಆಣತಿಯಂತೆ ಅರ್ಜುನನ ಜತೆ ಎಲ್ಲಾ ಪಾಂಡವರ ಜತೆಯೂ ಸಪ್ತಪದಿ ತುಳಿಯಬೇಕಾಯಿತು.  ಪ್ರತಿಯೊಬ್ಬರ ಜತೆಯೂ ಒಂದೊಂದು ವರುಷ ಕಳೆಯುವ ಒಪ್ಪಂದವೂ ಆಯಿತು. ಮೊದಮೊದಲು ಐವರು ಪತಿಯರೆಂಬ ವಿಷಯವೇ ಕಿರಿಕಿರಿಯಾಗುತಿತ್ತಾದರೂ ಕಾಲಕ್ರಮೇಣ ಇದೂ ಒಗ್ಗಿಹೋಯಿತು. ಭೀಮನಂತೂ ನನ್ನ ಅಂತರಂಗದ ಸಖನಾದನು.

ಆ ಘಟನೆಯೂ ನೆನಪಾಯಿತು. ಯಾಗದ ಸಮಯದಲ್ಲಿ ಗೋಪಾಲನ ಆಣತಿಯಂತೆ ನಾನೇ ಎಲ್ಲಾ ಅತಿಥಿಗಳಿಗೆ ಖುದ್ದ ಬಡಿಸಲು ನಿಂತಿದ್ದೆ.  ಸಖಿಯರು ಸಹಾಯಕ್ಕಿದ್ದರಾದರೂ ಅವರು ತನಗೆ ಭೋಜನ ತಂದು ಕೊಡುತ್ತಿದ್ದರಷ್ಟೇ. ಆದರೆ ತಾನೇ ಅದನ್ನು ಅತಿಥಿಗಳ ಎಲೆಯಲ್ಲಿ ಹಾಕಿ ಉಪಚರಿಸಬೇಕಾಗಿತ್ತು. ನಾನೂ ಬೇಸರಿಸದೇ ಚಾಣಾಕ್ಷತೆಯಲ್ಲಿ ಪಾದರಸದಂತೆ ಓಡಾಡುತ್ತಾ ಈ ಕಾರ್ಯವನ್ನು ನಿಭಾಯಿಸಿದನ್ನು ಕಂಡು ಮುರಳಿಯೂ ಮೆಚ್ಚಿದ್ದನು.

ನನ್ನ ಬೆನ್ನು ತಟ್ಟುತ್ತಾ ಮತ್ತೆ ಮತ್ತೆ ನನ್ನನ್ನು ಹೊಗಳಿದ್ದನು. ವಿಪ್ರರೂ, ಅತಿಥಿಗಳು ಅವನ ಮಾತಿಗೆ ತಮ್ಮಲ್ಲೆರ ಅಂಗೀಕಾರವನ್ನೂ ಸೂಚಿಸಿದ್ದರು… ಹೊಗಳಿಕೆ ಯಾರಿಗಿಷ್ಟವಿಲ್ಲ ಹೇಳಿ! ಕೇಳಿ ನಾನಂತೂ ಉಬ್ಬಿ ಹೋಗಿದ್ದೆನು. ಎಲ್ಲಾ ನೆಂಟರ ಸಮ್ಮುಖದಲ್ಲಿ ನಾವೆಲ್ಲ ದೈವವೆಂದು ನಂಬಿದ ಯಶೋಧನಂದನನ ಹೊಗಳಿಕೆಯಂತೂ ಹಾಗೆ ಸುಲಭ ಲಭ್ಯವಲ್ಲವಲ್ಲ! ಒಂದಿಷ್ಟು ನೆತ್ತಿಗೇರಿದ್ದೂ ನಿಜ…. ಆ ಕಾರಣದಿಂದಲೇ ಉಬ್ಬಿದ ನನ್ನೆದೆಯನ್ನು ಆವರಿಸಲು ವಿಫಲವಾದ ನನ್ನ ಕಂಚುಕದ (ರವಕೆ)  ಒಂದೆರಡು ಗುಂಡಿಗಳು ಟಪ್ಪೆಂದು ಬಿಚ್ಚೇಬಿಟ್ಟವಲ್ಲ! ಆ ಹೊತ್ತಿಗೆ ಆ ನನ್ನ ಸ್ಥಿತಿಯು ಹೇಗಿತ್ತೆಂದು ಹೇಳಲಿ! ಎರಡೂ ಕೈಗಳಲ್ಲಿ ಪಾತ್ರೆಗಳು! ಮರ್ಯಾದೆಯ ಭಾರಕ್ಕೆ ನನ್ನ ತಲೆ ತಗ್ಗಿತಾದರೂ ಬಿಚ್ಚಿದೆದೆಯನ್ನು ಸೆರಗಿನಿಂದ ಸರಿಯಾಗಿ ಮುಚ್ಚಲಾಗದ ಅಸಹಾಯಕತೆ.  ಇದೇ ಸಂದರ್ಭವನ್ನು ದುರುಪಯೋಗಪಡಿಸಲೋಸುಗವೇ ದುರ್ಯೋಧನ, ಶಕುನಿ, ಕರ್ಣಾದಿಗಳು ಮೇಲಿಂದ ಮೇಲೆ ತಮಗೆ ಬಡಿಸಲು ಒತ್ತಾಯಿಸತೊಡಗಿದರಲ್ಲವೆ! ಏನೂ ಮಾಡಲು ತೋಚದೇ ನಾನು ಸುತ್ತಮುತ್ತಲೂ ಸಹಾಯಕ್ಕೆ ಯಾರಾದರೂ ಬರುವರೇ ಎಂದು ನೋಡಿದ್ದೆನಾದರೂ ಯಾರೂ ಬರಲಿಲ್ಲ.  ತಟ್ಟನೆ ಮಾಧವನ ಉಪಸ್ಥಿತಿಯ ನೆನಪಾಯಿತು. ದೈನ್ಯತೆಯಿಂದ ಅವನತ್ತ ದೃಷ್ಟಿ ಹಾಯಿಸಿದೆ.  ಕೇಶವ ತನ್ನ ಕೃಪಾ ನೋಟ ನನ್ನತ್ತ ಬೀರಿದ ಕ್ಷಣದಲ್ಲೇ ಮತ್ತೆರಡು ಬಾಹುಗಳು ನನ್ನ ಭುಜದ ಮೇಲೆ ಮೂಡಿದವು. ಅಷ್ಟರಲ್ಲಿ ಭೀಮನ ಆಗಮನವೂ ಆಯಿತು. ಅವನ ಹೂಂಕಾರಕ್ಕೆ ಬೆದರಿದ ದುಷ್ಟ ಚತುಷ್ಟರು ಮಾತಾಡದೇ ಭೋಜನವ ಮಾಡಿ ಎದ್ದು ಹೋದರಲ್ಲ. ಹೌದು, ನಾನ್ಯಾಕೆ ಎಲ್ಲದಕ್ಕೂ ಹೆದರಬೇಕು, ಗೋವಿಂದನು ಇರುವನಲ್ಲ ಸದಾ ನನ್ನ ಜತೆಯಲ್ಲಿ! ಹಾಗೆಂದು ಮೊನ್ನೆ ತಾನೆ ನನಗೆ ಮಾತು ಕೊಟ್ಟು ಹೋದನಲ್ಲ.

“ಒಂದೇ ಮನದಿ

ಕರೆದೊಮ್ಮೆ ನೋಡು

ಅನುಜೆ, ಭಕ್ತರ ಭಕ್ತ

ನಾನು; ಅರಿವಿರಲಿ

ವಾಸ ದ್ವಾರಕೆಯಲಲ್ಲ,

ನಿನ್ನ ಹೃದಯವೇ

ನನ್ನರಮನೆ ನಿನಗೆ

ಅದು ತಿಳಿದಿರಲಿ!”

ಅಂದನಲ್ಲ!

ಮನ ಒಂದು ಸ್ಥಿಮಿತಕ್ಕೆ ಬಂದಂತಾದರೂ ವಿದುರನ ಎಚ್ಚರಿಕೆಯ ನುಡಿ ನೆನೆಪಾಯಿತು. ಅವನು ದ್ಯೂತವಾಡದಂತೆ ಧರ್ಮನಿಗೆ ಎಚ್ಚರಿಕೆ ಕೊಟ್ಟಿದ್ದನ್ನು ಕಡೆಗಣಿಸುವನೇ! ಹೌದು, ಯಮಸುತನ ಬಲಹೀನತೆ ಈ ಜೂಜಾಟವೇ. ಇಷ್ಟು ವರ್ಷ ಅವನೊಂದಿಗೆ ಕಳೆದಿಲ್ಲ… ನನಗೆ ಗೊತ್ತಿಲ್ಲವೇ ಅವನ ಮನ ಏನೆಂದು. ಅವನ ಉಸಿರೇ ಧರ್ಮ! ನನ್ನ ಪತಿ ಅವನು… ಹಾಗೆಂದು ಅವನ ದೌರ್ಬಲ್ಯವೂ ನನಗೆ ಚೆನ್ನಾಗಿ ತಿಳಿದಿದೆ. ಅವನ ಜತೆ ಕಳೆಯುವ ಪೂರ್ತಿ ವರುಷವು ನೀರಸವೇ… ಹುಂ, ನಕುಲ ಸಹದೇವರೂ ಅಷ್ಟೇ.. ಅರ್ಜುನ ಸರಸಿಯಾದರೂ ಅಹಂ ಇದೆ ಅವನಿಗೆ… ಗಾಂಡೀವಿಯ ಅಸ್ತ್ರ ಶಸ್ತ್ರಗಳ ಚಾತುರ್ಯವನ್ನು ಮೀರಿಸುವವರಾರಿಲ್ಲವಾದ್ದರಿಂದ ಅದು ಸಹಜವಾಗಿಯೇ ಬಂದಿರಬಹುದು. ಅಲ್ಲದೆ ಅವನು ಸುಭದ್ರೆಯಲ್ಲಿ ತೋರುವ ಮೋಹ ನನ್ನ ತೀಕ್ಷ್ಣ ಕಣ್ಣುಗಳು ಗ್ರಹಿಸದಿಲ್ಲವಲ್ಲ.! ಭೀಮನ ಮುದ್ದಿನ ಮಡದಿ ನಾನು. ನನ್ನಲ್ಲಿ ಪ್ರಾಣವನ್ನೇ ಇಟ್ಟಿದ್ದಾನೆ ಅವನು. ಅದಕ್ಕೇ ನನಗೆ ಉಳಿದ ಪತಿಯರಿಗಿಂತ ಅವನ ಮೇಲೆ ಹೆಚ್ಚು ನಂಬಿಕೆ!

ಮತ್ತೆ ವಿದುರನ ಎಚ್ಚರಿಕೆ ಕಾಡತೊಡಗಿತು… ಈ ರಾಜಸಭೆ ಯಾಕಿರಬಹುದು? ಆ ದುಷ್ಟ ಚತುಷ್ಟರು ಧರ್ಮನನ್ನು ಬಿಕ್ಕಟ್ಟಿನಲ್ಲಿ ಸಿಕ್ಕಿಸಬಹುದೇ? ಸಂಪತ್ತು, ರಾಜ್ಯ ಹೋದರೆ ಪರವಾಗಿಲ್ಲ. ಎಲ್ಲಾದರೂ ಕಾಡಿನಲ್ಲಿ ಕುಟೀರ ಕಟ್ಟಿ ಜೀವನ ದೂಡಬಹುದು… ನನ್ನ ಆಲೋಚನಾ ಸರಣಿ ಹೀಗೇ ಸಾಗಿತ್ತು…

ಸುತ್ತಲೂ ಪಸರಿಸಿದ್ದ ಗಂಭೀರ ಮೌನ ನನ್ನ  ಯೋಚನಾ ಸರಣಿಗೆ ಭಂಗ ತಂದಿತು. ಅಲ್ಲ, ನಾನು ಬಂದಾಗಿನಿಂದಲೂ ಏನು ಗಲಗಲ… ಗಡಿಬಿಡಿ… ದಾಸಿಯರು, ಮಕ್ಕಳು ಅತ್ತಿತ್ತ ಓಡಾಡಿ… ಅರಮನೆಗೆ ಶೋಭೆಯನ್ನು ತಂದಿದ್ದರು. ಅದೇನಾಗಿರಬಹುದು! ಬಲಗಣ್ಣು ಒಂದೇ ಸಮನೆ ಅದುರಿತು… ಎದೆಯಲ್ಲಿ ಕೋಲಾಹಲ… ಗೂಬೆ, ನರಿ ಕೂಗಿದ ಹಾಗೆ ಆಯಿತು. ಏನಿದೆಲ್ಲಾ ಅಪಶಕುನ!… ಮತ್ತೆ ಗದ್ದಲ ಕೇಳುತ್ತಿದೆ… ನಿಧಾನವಾಗಿ ಹಂಸತೂಲಿಕಾತಲ್ಪದಿಂದ ಎದ್ದು ಬಾಗಿಲ ಕಡೆ ಹೆಜ್ಜೆ ಇರಿಸಿದೆನಷ್ಟೇ… ಧಡಾರೆಂದು ಅಗಲವಾಗಿ ಬಾಗಿಲು ತೆಗೆದು ನುಗ್ಗಿದನು ನನ್ನ ಮೈದುನ ದುಶ್ಯಾಸನ!”

“ಏನಾಯಿತು… ”

ನನ್ನ ಮಾತಿನ್ನೂ ಪೂರ್ಣವಾಗಿರಲ್ಲ… ನನ್ನತ್ತ ಗೂಳಿಯಂತೆ ಮುನ್ನುಗ್ಗಿದನು.. ಎರಡಡಿ ಹೆಜ್ಜೆ ಹಿಂದೆ ಸರಿದೆ. ಧೈರ್ಯವಾಗಿ ಅವನ ಕಣ್ಣಲ್ಲಿ ಕಣ್ಣಿಟ್ಟು ಪ್ರಶ್ನಾರ್ಥಕ ಮುಖ ಮಾಡಿದೆ.

“ಹ್ಹ ಹ್ಹ…. ಸೋತೆ ಪಾಂಚಾಲಿ! ನೀನೂ ನಿನ್ನ ಪತಿಯಂದಿರು ನಮ್ಮ ದಾಸರಿನ್ನು… ನಡೆ ಸಭೆಗೆ.. ಇನ್ನು ಮುಂದೆ ನೀನು ಸುಯೋಧನನ ಸೇವಕಿ!” ನನ್ನ ಕೈ ಹಿಡಿಯಲು ಬಂದನು.

ಕತ್ತಲು ಕವಿದಂತಾಯಿತು.. “ಅಯ್ಯೋ ದೈವವೇ! ಇದೇನು ಮಾಡಿಬಿಟ್ಟೆ! ಇನ್ನು ನನ್ನನ್ನು ಉಳಿಸುವವರಾರು?”

ಧೈರ್ಯವನು ಒಗ್ಗೂಡಿಸಿದೆ. ತಡೆದೆ ಆ ಕ್ರೂರಿಯ ಕೈಯನ್ನು ಅರ್ಧದಲ್ಲಿಯೇ.

“ತಡೆ ಮೈದುನ! ಏನಾಯಿತೆಂದು ವಿಸ್ತಾರವಾಗಿ ತಿಳಿಸು.”

ಮತ್ತಿಷ್ಟು ಅಟ್ಟಹಾಸ ಮಾಡುತ್ತ, “ಎಲೈ ದಾಸಿಯೇ, ನಿನ್ನ ಪತಿ ಧರ್ಮರಾಯ ತನ್ನ ರಾಜ್ಯವನ್ನು, ಸಂಪತ್ತನ್ನು, ತನ್ನ ತಮ್ಮಂದಿರನ್ನು… ಮತ್ತೆ  ನಿನ್ನನ್ನೂ ಸೋತ ಶಕುನಿ ಮಾಮನೊಂದಿಗಿನ ದ್ಯೂತಾಟದಲ್ಲಿ… ಮೂರ್ಖಳೇ, ನಡೆ ನಿಧಾನಿಸಿದರೆ ಮಹಾರಾಜ ದುರ್ಯೋಧನನಿಗೆ ಭಯಂಕರ ಕೋಪ ಬರುವುದು.”

ಮತ್ತೆ ಮುಂದೆ ಬಂದನು.. ನಾನಿಟ್ಟೆ ಮತ್ತೆರಡು ಹೆಜ್ಜೆ ಹಿಂದೆ!

“ಆದರೆ ನಮ್ಮ ಒಪ್ಪಂದದ ಪ್ರಕಾರ ನಾನು ಈ ವರ್ಷ ಭೀಮನ ಜತೆ ವಾಸಮಾಡುತ್ತಿದ್ದೇನೆ. ಹಾಗಾಗಿ ಧರ್ಮನು ನನ್ನನ್ನು ಪಣಕ್ಕಿಡುವಂತಿಲ್ಲ… ಹೋಗು ಹೀಗೆಂದು ದುರ್ಯೋಧನನಿಗೆ ತಿಳಿಸು. ದುಶ್ಯಾಸನ, ನಾನು ನಿನ್ನ ಅತ್ತಿಗೆ… ತಾಯಿ ಸಮಾನ! ನನ್ನ ಜತೆ ಈ ರೀತಿಯ ವರ್ತನೆ ನಿನಗೆ ಶೋಭೆಯಲ್ಲ.”

ಮತ್ತೆ ತಡೆದು, “ನಾನು ನನ್ನ ಈ ಸ್ಥಿತಿಯಲ್ಲಿ ರಾಜಸಭೆಗೆ ಬರುವಂತಿಲ್ಲ… ನಾನು ಋತುಮತಿ… ಹಿರಿಯರ ಮುಂದೆ ಬರುವಂತಿಲ್ಲ!”

ಹೇಳುತ್ತಿರುವಾಗ ಭೂಮಿ ಇನ್ನೂ ಏಕೆ ಬಾಯಿ ಬಿರಿದಿಲ್ಲವೆಂದೆನಿಸಿತ್ತು!

ಕೇಳುವಷ್ಟೂ ತಾಳ್ಮೆಯಿರಲಿಲ್ಲ ಆ ದುಷ್ಟನಿಗೆ. ಕೂದಲು ಒಣಗಲೆಂದು ಬಿಚ್ಚಿಟ್ಟ ನನ್ನ ಮುಡಿಗೆ ಕೈ ಹಾಕಿದನಾ ಪಾಪಿ! ಎಳೆಯುತ್ತಲೇ ಹೊರಬಂದ. ತಡೆಯಲೆತ್ನಿಸಿದ ದಾಸಿಯರನ್ನು ಕಾಲಲ್ಲೇ ಒದ್ದ. ನಾನೂ ಅವನ ಕೈಯನ್ನು ಕಚ್ಚಿದೆ… ಗಂಡು ದೇಹವಲ್ಲವೇ ಅವನದು.. ಅದೂ ಗರಡಿಯಲ್ಲಿ ಪಳಗಿದ ದೇಹ… ಒಂದಿನಿತೂ ಪರಿಣಾಮ ಬೀರಲಿಲ್ಲ.. ಅಲ್ಲಿದ್ದ ಸೇವಕರತ್ತ ದೀನ  ದೃಷ್ಟಿಯಿಂದ ನೋಡಿದೆ. ಈ ಸುದ್ದಿಯನ್ನು ಭಾನುಮತಿಗೂ, ಕುಂತಿಗೂ, ಗಾಂಧಾರಿಗೂ ಮುಟ್ಟಿಸಲು ಕೈಮುಗಿದು ಬೇಡಿಕೊಂಡೆ.

ಆ ದುರ್ಜನ ನನ್ನನ್ನು ದಾರಿಯುದ್ದಕ್ಕೂ ಎಳೆದುಕೊಂಡೇ ಒಯ್ದ… ಉಟ್ಟ ವಸ್ತ್ರವು ಅಸ್ತವ್ಯಸ್ತವಾಗಿತ್ತು. ಮುಖವು ಕಣ್ಣೀರಿನಿಂದ ತೊಯ್ದಿತ್ತು. ಯಾವ ಸ್ತ್ರೀಗೂ ಇಂತಹ ಹೀನ ಸ್ಥಿತಿ ಬರಬಾರದು.

***************************************

ರಾಜಸಭೆಯ ಮಧ್ಯದಲ್ಲಿ ನನ್ನನ್ನು ಬಿಸುಕಿಬಿಟ್ಟ. ಅವನ ಅಹಂಕಾರವನ್ನು ಮುರಿಯಲು ಯಾರೂ ಯತ್ನಿಸಲಿಲ್ಲ. ಆದರೂ ಇದ್ದ ಬದ್ದ ಶಕ್ತಿಯನ್ನು ಒಗ್ಗೂಡಿಸಿ ಎದ್ದು ನಿಲ್ಲಲು ಯತ್ನಿಸಿದೆ. ವಸ್ತ್ರವನ್ನು ಸರಿಪಡಿಸಿ, ಸೆರಗಿನಿಂದ ಕಣ್ಣೀರನ್ನು ಒರೆಸಿ, ಇನ್ನೂ ನಾನು ಧೈರ್ಯಗೆಟ್ಟಿಲ್ಲವೆಂದು ತೋರಿಸಲು ಯತ್ನಿಸಿದೆ. ಭೀಷ್ಮ ತಾತನತ್ತ ಕರ ಜೋಡಿಸಿ ಸೆರೆಗೊಡ್ಡಿ ಬೇಡಿದೆ… ಹೇಡಿ ಅವನು… ತಗ್ಗಿಸಿದ ಮುಖವನ್ನು ಮೇಲೆತ್ತಲೆತ್ನಿಸಲೇ ಇಲ್ಲ. ಕುರುಡನಾದರೂ ಕಿವುಡನಲ್ಲವಲ್ಲ ಈ ದುರುಳರ ಪಿತ! ಸ್ವರವನ್ನೇರಿಸಿ ನಿನ್ನ ಪುತ್ರರಿಂದ ರಕ್ಷಿಸು ತಾತ ಎಂದು ರೋಧಿಸಿದೆ!

“ಎಲೈ ದಾಸಿ ದ್ರೌಪದಿ, ನಡೆ  ನಡೆ ನಮ್ಮಣ್ಣನ ತೊಡೆಯನಲಂಕರಿಸು.. .ಒಂದು ಬಾರಿ ಹೂಂ ಅನ್ನು, ನಿನಗೇ ಭಾನುಮತಿಯ ಸ್ಥಾನವನ್ನು ಕೊಡುತ್ತಾನೆ! ನಡಿ, ನಡಿ ಅವನ ಬಳಿ!” ದುಶ್ಯಾಸನನ ಘರ್ಜನೆ ನನ್ನ ರೋಧನವ ಮುಚ್ಚಿಹಾಕಿಬಿಟ್ಟಿತು.

ಧರ್ಮಜನು ಕುಳಿತ ಕಡೆ ಓಡಿದೆ… ಅದಾಗಲೇ ಭೀಮ ಅಣ್ಣನನ್ನೇ ಕೆಕ್ಕರಿಸಿ ನೋಡುತ್ತಾ, ಕಣ್ಣೀರನ್ನು ಸುರಿಸುತ್ತಾ ನನ್ನೆಡೆ ಬರಲು ವಿದ್ಯುಕ್ತನಾದನೋ ಇಲ್ಲವೋ… ತಡೆದವನನ್ನು ಈ ಯಮಸುತ!

“ನಾವವಳನ್ನು ಸೋತೆವು!”

“ಅಣ್ಣ ತಡೆಯಬೇಡ. ನಿನ್ನ ಧರ್ಮ, ನೀತಿ ಏನನ್ನೂ ನಾನೀಗ ಕೇಳುವ ಸ್ಥಿತಿಯಲಿಲ್ಲ… ನೆನಪಿದೆಯೆ ನಿನಗೆ? ವಿದುರನು ದ್ಯೂತವನ್ನಾಡದಂತೆ ಸೂಚಿಸಿದ್ದನು!  ಆಟವಾಡುವಾಗ ನಿನ್ನ ಧರ್ಮ, ನೀತಿ ಎಲ್ಲಿ ಹೋಗಿತ್ತು! ನನಗಂತೂ ಆಟವಾಡಿದ ಆ ನಿನ್ನ ಕೈಯನ್ನೇ ಮೊದಲು ಕಡಿಯೋಣವೆಂದಾಗಿದೆ!”

ಸ್ತಬ್ದಳಾದೆ ನಾನು. ಆ ಸಮಯದಲ್ಲೂ ಭೀಮನ ಪ್ರೀತಿಯ ಆಳವನ್ನು ನೋಡಿ ದುಃಖದ ಆವೇಗವು ಒಂದಿಷ್ಟು ಕಮ್ಮಿಯಾಯಿತು. ತನ್ನ ತಪ್ಪಿನ ಅರಿವಿತ್ತು ಧರ್ಮನಿಗೆ. ತನ್ನ ಕೈಗಳನ್ನೇ ಚಾಚಿದ ಭೀಮನೆಡೆಗೆ. ಅಣ್ಣನೆಂದು ಮರೆತು ಭೀಮನೆತ್ತಿದ ತನ್ನ ಗಧೆಯನ್ನು. ಪಾರ್ಥನ ಸಮಯಪ್ರಜ್ಞೆ ಅನಾಹುತ ಜರುಗದಂತೆ ತಡೆಯಿತು.

ಹಿರಿಯರ ಮೌನ, ಕಿರಿಯರ ಶಿಖಂಡಿತನ ನೋಡಿದ ಕೌರವನ ಪೌರುಷ ಇನ್ನೂ ಹೆಚ್ಚಾಯಿತು. ತನ್ನ ತೊಡೆ ತಟ್ಟಿ ನನ್ನ ಹಂಗಿಸಿದ. ಮಾತು ಮಾತಿಗೂ ದಾಸಿ ದಾಸಿ ಎಂದು ಕರೆದ. ಅವನ ಪೌರುಷಕ್ಕೆ ಉಳಿದವರ ತಾಳ! ಯಾಗದ ಸಮಯದಲ್ಲಿ ನಾನು ಅವನನ್ನು ಕುರುಡನೆಂದು ಕರೆದ ನೆನಪು ಮಾಡಿ ಮತ್ತೆ ಮತ್ತೆ ಮೂದಲಿಸಿದ! ನನ್ನ ಸ್ವಯಂವರದ ಸಮಯದಲ್ಲಿ ಕರ್ಣನು  ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ವಿರೋಧಿಸಿದ್ದೆ. ಸೂತಪುತ್ರನೆಂದೂ ಅವಮಾನ ಮಾಡಿದ್ದೆ. ಈ ದಿನ ಎಲ್ಲರೂ ಆ ಸೇಡು ತೀರಿಸಿಕೊಳ್ಳಲು ಬಯಸಿದ್ದಾರೆಂದು ತಿಳಿದೆನು!

ನನ್ನ ಮನದಲ್ಲಿ ಈ ಎಲ್ಲಾ ಚಿತ್ರಣಗಳು ಮೂಡುತ್ತಿರುವಾಗಲೇ ಕೇಳಿಸಿತು… ತನ್ನ ತೊಡೆಯ ತಟ್ಟುತ್ತ,

“ದುಶ್ಯಾಸನ, ತಳ್ಳು ಆಕೆಯ ನನ್ನೆಡೆ…” ದುರ್ಯೋಧನ ಆಜ್ಞೆ ಕೊಡುತ್ತಿದ್ದಾನೆ!

ನೋಡುತ್ತಲೇ ನನ್ನ ಕಣ್ಣುಗಳು ಕೆಂಡದುಂಡೆಗಳಂತಾದವು. ಅದುರುತ್ತಿರುವ ಬಾಯಿಯಿಂದಲೇ,

“ಏಲೈ ನೀಚ, ನಿನ್ನನ್ನು ಕಾಲ ಕರೆಯುತ್ತಿದ್ದಾನೆಂದು ತೋರುವುದು.  ಯಾರೆಂದು ತಿಳಿದಿರುವೆ ನನ್ನನ್ನು?  ಈ ಅಗ್ನಿ ಪುತ್ರಿಯ ಕೋಪಾಗ್ನಿಯಿಂದ  ಇನ್ನು ನಿನ್ನನ್ನು ರಕ್ಷಿಸುವವರಾರಿಲ್ಲ. ನನ್ನ ದುಃಖಾಗ್ನಿಗೆ ನೀನು ಉರಿದು ಬೂದಿಯಾಗುವ ಕಾಲ ಸನ್ನಿಹಿತವಾಗಿದೆ. ಸುಮ್ಮನೆ ನನ್ನನ್ನು ನನ್ನ ಪಾಡಿಗೆ ಬಿಡು.. ಇಲ್ಲದಿದ್ದರೆ… ” ಹೂಂಕರಿಸಿದೆನು.

ಈ ನನ್ನ ಮಾತು ಅವನಿಗೆ ಮತ್ತಷ್ಟು ಮೋಜು ಕೊಟ್ಟಿತೆಂದು ತೋರುತ್ತದೆ. ಅವನ ಅಹಂಕಾರವನ್ನು ಕೆಣಕಿರಬೇಕು!

“ದುಶ್ಯಾಸನ, ನಡಿ! ಈಕೆಗೆ ಬುದ್ಧಿ ಕಲಿಸಲು ಇದೇ ಸುಸಂದರ್ಭ! ವಸ್ತ್ರಾಪಹರಣ ಮಾಡಿ ನಗ್ನಳಾಗಿಸು. ನಾವು ಏನೆಂದು ತೋರಿಸುವ ಅವಕಾಶ ವ್ಯರ್ಥವಾಗದಿರಲಿ! ಹುಂ, ನಡಿ ಇನ್ನು ಮೀನ ಮೇಷ ಎಣಿಕೆ ಬೇಡ… ”

ದಾಪುಗಾಲಿಟ್ಟು ನನ್ನೆಡೆ ಬಂದ ಆ ಕ್ರೂರ! ಎರಡು ಕೈಗಳಿಂದ ನನ್ನೆದೆಯನ್ನು ಮುಚ್ಚಿದೆ. ಎದೆಯ ಮೇಲೆ ಹೊದಿಸಿದ ವಸ್ತ್ರವನ್ನು ಗಟ್ಟಿಯಾಗಿ ಹಿಡಿದುಕೊಂಡೆ.  ತಲೆಗೂದಲನ್ನು ಹಿಡಿದು ನನ್ನ ಸೆರಗಿಗೆ ಕೈ ಹಾಕಿದ ಆ ದುಷ್ಟ! ಮತ್ತಿನ್ನೊಮ್ಮೆ ಹಿರಿಯರನ್ನು ಹೆಸರೆತ್ತಿ ಕರೆದು ರೋಧಿಸಿದೆ. ಧರ್ಮಾ, ಭೀಮಾ, ಪಾರ್ಥಾ, ನಕುಲಾ, ಸಹದೇವಾ… ಎಲ್ಲರನ್ನೂ ಪ್ರತ್ಯೇಕವಾಗಿ ಹೆಸರಿಡಿದು ಕರೆದು ಮತ್ತೆ ಮತ್ತೆ ರಕ್ಷಿಸುವಂತೆ ಕೇಳಿಕೊಂಡೆ.

“ಅಯ್ಯೋ, ಎಂತಹ ದೀನ ಸ್ಥಿತಿಯು! ಕೇಶವಾ….ಮಾಧವಾ..ಮಧುಸೂದನಾ..ಗೋಪಾಳಾ…” ಅಣ್ಣನನ್ನೂ ಕರೆದೆ…

ಓಗೊಡಲಿಲ್ಲ ಅವನೂ!

ಅದೇಕೋ ಆ ಅವಸ್ಥೆಯಲ್ಲೂ ಗೋಪಿಯರ  ವಸ್ತ್ರಾಹಪರಣದ ದೃಶ್ಯ ಕಣ್ಣ ಮುಂದೆ ಮೂಡಿತು. ಎಲ್ಲಾ ಲಜ್ಜೆ, ಮರ್ಯಾದೆ ಎಲ್ಲವೂ ನಿನ್ನ ಕೈಯಲ್ಲೇ ಇನ್ನು ಪುರುಷೋತ್ತಮಾ.. ಎನ್ನುತ್ತಾ ಎರಡೂ ಕೈಯನ್ನು ಮೇಲಕ್ಕೆತ್ತಿ… ಭಕ್ತಿಯಿಂದ ಆ ಶ್ಯಾಮನನ್ನು ಮನಪೂರ್ವಕವಾಗಿ ಕರೆದೆ!

ಅದೇ ಕ್ಷಣ ನನ್ನೆದುರು ಆ ಕರುಣಾಮಯನ ಆಕಾರವು ಕಾಣಿಸಿಕೊಂಡಿತು! ಕಣ್ಣಲ್ಲೇ ಅನುರಾಗವನ್ನು ಸೂಚಿಸುತ್ತ ಮುರಳಿಯು ತನ್ನ ಕೈಯಲ್ಲಿದ್ದ ವಸ್ತ್ರವನ್ನು ನನಗೆ ಹೊದಿಸಿದನು!

“ಕೃಷ್ಣೇ, ಇನ್ನು ಭಯಬೇಡ. ನಿನ್ನ ಜತೆ ಇರುವೆನಲ್ಲ.” ತನ್ನ ಅಭಯ ಹಸ್ತವನ್ನು ತೋರಿಸಿದನು!

ಅಗಣಿತಗುಣಗಣನವನು… ಅಲ್ಲ ನಾನು ಈ ಹುಲುಮಾನವರನ್ನು ನಂಬಿ ಮೂರ್ಖಳಂತೆ ಇವರಲ್ಲೆಲ್ಲ ಮತ್ತೆ ಮತ್ತೆ ಮೊರೆಯಿಟ್ಟೆನಲ್ಲ.

ಈ ಕರುಣಾಮಯಿಯು ಧೃಡಭಕ್ತಿಯ ಒಂದು ಕರೆಗೆ ಓಗೊಡುವನೆಂದು ಅದೇಕೆ ನನ್ನ ತಲೆಗೆ ಹೊಳೆಯಲಿಲ್ಲ… ಅ ಪುಟ್ಟ ಬಾಲಕ ಕರೆಗೆ ಓಗೊಟ್ಟು ತ್ವರಿತದಲಿ ನರಸಿಂಹನ ರೂಪ ತಳೆದು ಧರೆಗೆ ಧಾವಿಸಿದವನ ನಾನೇಕೆ ಮೊದಲೇ ಕರೆಯಲಿಲ್ಲ!

ವರುಷಗಟ್ಟಲೆ ಕಠಿಣ ತಪ ಮಾಡುವ ಋಷಿ ಮುನಿಗಳ ಕರೆಗೆ ಕೂಡಲೇ ಓಗೊಡದವನು, ಆ ಧ್ರುವನ  ಮಂತ್ರಕ್ಕೆ ಮರುಳಾಗಲಿಲ್ಲವೆ! ಮಕರಿ ಬಾಧೆಗೊಳಗಾದ ಕರಿಯು ಶ್ರೀಹರಿ ಎಂದು ಮೊರೆಯಿಡೆ ಚಕ್ರಪಾಣಿಯು ಕಾಯ್ದನಲ್ಲವೆ! ಅಂತಹ ಮಹಿಮಾತೀತನು ಧರ್ಮನ ಯಾಗದಲ್ಲಿ ವಿಪ್ರರು ಉಂಡ ಎಲೆಗಳನ್ನು ತೆಗೆಯುವ ಕೆಲಸ ಮಾಡಿದನಲ್ಲವೆ! ಜತೆಗೆ ವಿಪ್ರವರ್ಯರ ಕಾಲುಗಳನ್ನು ತೊಳೆಯುವ ಕೆಲಸವನ್ನೂ ನಿರ್ವಹಿಸಿದನು!

ಈ ವೈಕುಂಠವಾಸಿಯು ನನ್ನ ಕರೆಗೆ ಓಗೊಟ್ಟು ಬಂದು ನನ್ನ ಮಾನ ಕಾಪಾಡಿದನೆಂದರೆ ಎಂತಹ ಭಾಗ್ಯ ನನ್ನದು! ಅವನ ಮಹಿಮೆಯನ್ನು ಬಣ್ಣಿಸಲು ನನ್ನಲ್ಲಿ ಶಬ್ದಗಳಿವೆಯೇ! ಮಾತು ಮರೆತು ಮೂಕಿಯಾದೆ. ರಂಗ, ನಿನಗೆ ಶರಣು ಶರಣಯ್ಯ! ಇನ್ನೇನು ಹೇಳಲಿ ಗರುಡವಾಹನ!  ನಿಗಮಗೋಚರ ನೀ ಕೃಪಾಳು ಕರುಣಾಮಯಿ… ಎಂದೆನ್ನುತ್ತಾ ಎಲ್ಲವನ್ನೂ ಮರೆತುಬಿಟ್ಟೆ! ಅಲೌಕಿಕ ಅನುಭವ ಪಡೆಯುತ್ತಾ… ನಾನೆಲ್ಲಿರುವೆ! ಏನಾಗುತ್ತಿದೆ! ಎಲ್ಲವೂ ಮನಸ್ಮೃತಿಯಿಂದ ದೂರವಾಯಿತು! ಈಗ ನನ್ನ ಕಣ್ಣುಗಳಿಂದ ಆನಂದಭಾಷ್ಪವಿಳಿಯಲು ಪ್ರಾರಂಭವಾಯಿತು.

ದುರ್ಜನರಿಗಂತೂ ಕೃಷ್ಣನ ಉಪಸ್ಥಿತಿಯ ಅರಿವೇ ಇರಲಿಲ್ಲ. ದುಶ್ಯಾಸನನು ಸೀರೆಯೆಳೆದ ಹಾಗೆ ಮತ್ತೊಂದು ಉದ್ಭವವಾಗುತಿತ್ತು!

ದುರ್ಯೋಧನನಂತೂ “ಈ ಹೆಂಗಸರ ವಸ್ತ್ರದ ಗುಟ್ಟೇ ತಿಳಿಯುವುದಿಲ್ಲ.. ಈ ಚಾಂಡಾಲಿಯು ಅನೇಕ ಸೀರೆಗಳನ್ನು ಧರಿಸಿ ಬಂದಿರಬಹುದು.. ನೀನು ಬಿಡಬೇಡ. ಇವಳಿಗಂತೂ ಇವತ್ತು ಒಂದು ಗತಿ ಕಾಣಿಸಲೇ ಬೇಕು… ”ಎನ್ನುತ್ತಾ ದುಶ್ಯಾಸನನ್ನು ಉತ್ತೇಜಿಸುತ್ತಿದ್ದನಷ್ಟೇ!

ಕೊನೆಗೂ ಸೋತು ಕೈ ಚೆಲ್ಲಿದ. ನಾನಂತೂ ಕಣ್ಣು ಮುಚ್ಚಿಯೇ ಆ ದ್ವಾರಕಾಧೀಶನ ಸುಂದರ ರೂಪವನ್ನು ಆಸ್ವಾದಿಸುತ್ತಿದ್ದೆನು! ಅಲೌಕಿಕ ಆನಂದಸಾಗರದಲ್ಲಿ ತೇಲುತ್ತಿದ್ದೆನು.

ಜೈಕಾರಗಳ ಕೇಳುತ್ತಲೇ ಕಣ್ಣು ಬಿಟ್ಟರೆ ಕಾಣಿಸಿದುದೇನು! ಸೀರೆಗಳ ರಾಶಿ ಮುದ್ದೆ ಬಿದ್ದಿದೆ! ದುಶ್ಯಾಸನನು ಸೀರೆ ಎಳೆದೆಳೆದು ಕೈ ಸೋತು ಜೋಲುಮೋರೆ ಹಾಕಿ ನಿಂತಿದ್ದಾನೆ. ದುರ್ಯೋಧನ, ಕರ್ಣಾದಿಗಳ ಮುಖದಲ್ಲಿ ಆಶ್ಚರ್ಯ ಚಿನ್ಹೆ!

ಎಲ್ಲರಿಗೂ ಇದು ನಮ್ಮ ಗಿರಿಧರನ ಕೃಪೆಯ ಚಮತ್ಕಾರವೆನ್ನುವ ಅರಿವಾಯಿತು. ಸಭೆಯಲ್ಲಿ ಎಲ್ಲರೂ ಎದ್ದು ಕೃಷ್ಣನ ಗುಣಗಾನ ಮಾಡತೊಡಗಿದರು. ನನ್ನತ್ತ ಪತಿವರ್ಯರು ಧಾವಿಸಿ ಬಂದರು. ಭೀಮನಂತೂ ಅದು ಸಭೆಯೆಂಬುದನ್ನೂ ಮರೆತು ನನ್ನ ಆಲಂಗಿಸಿಕೊಂಡನು. ಧರ್ಮಜನಿಗೆ ಇನ್ನು ಮುಂದೆ ಲೆತ್ತವನ್ನು ಮುಟ್ಟಿದರೆ ಕೈಯನ್ನೇ ಕಡಿದುಬಿಡುವೆನೆಂದು ಶಾಸನ ಮಾಡಿದನು. ಭೀಷ್ಮ, ವಿದುರ ಮೊದಲಾದವರೂ ನನ್ನನ್ನು ಸಾಂತ್ವನಗೈಯಲು ಬಂದರು.

ಕೃಷ್ಣನ ಉಪಸ್ಥಿತಿಯಲ್ಲಿ ಶಾಂತವಾಗಿದ್ದೆನಾದರೂ  ಈಗ ಈ ಹಿರಿಯರು ನನ್ನತ್ತ ಬಂದೊಡನೆ ಮತ್ತೆ ನನ್ನಲ್ಲಿನ ಕ್ರೋಧಾಗ್ನಿ  ಪ್ರಜ್ವಲಿಸಿತು!

“ಎಲೈ ದುಷ್ಟ ದುಶ್ಯಾಸನ, ನಾನಿನ್ನು ಹೆರಳನ್ನೇ ಕಟ್ಟಲಾರೆ. ಮುಂದೆ ಭೀಮನ ಕೈಯಲ್ಲಿ ನಿನ್ನ ವಧೆಯಾದ ನಂತರ ನಿನ್ನ ಗುಂಡಿಗೆಯ ರಕ್ತದಿಂದಲೇ ನನ್ನ ಹೆರಳನ್ನು ಬಾಚಿ ಕಟ್ಟುವೆನು! ಅಲ್ಲಿಯ ತನಕ ಈ ದ್ರುಪದಪುತ್ರಿ ತನ್ನ ಬಿಚ್ಚಿದ ಕೂದಲನ್ನು ಕಟ್ಟಲಾರಳು!”

ಇಡೀ ಸಭಾಂಗಣದಲ್ಲಿ ನನ್ನ ಪ್ರತಿಜ್ಞೆ ಪ್ರತಿಧ್ವನಿಸಿತು!

“ಸುಯೋಧನ, ಕೇಳು… ಯಾವ ತೊಡೆಯನ್ನು ತಟ್ಟಿ ನೀನು ಪಾಂಚಾಲಿಯನ್ನು  ಆಹ್ವಾನಿಸಿದೆಯೋ ಅದನ್ನು ಮುರಿದು ಪುಡಿಪುಡಿ ಮಾಡಿ ನಿನ್ನನ್ನು ಸಂಹರಿಸುವೆನು!”

ಭೀಮನ ಕಂಠದಿಂದ ಬಂದ ಮಾತುಗಳನ್ನು ಕೇಳಿ ಮತ್ತಿನ್ನೊಮ್ಮೆ ಸಭೆಯಲ್ಲಿ ಭೀಕರ ಮೌನ!

ತನ್ನ ಪುತ್ರರ ಮರಣದ ಭವಿಷ್ಯವಾಣಿ ಕೇಳಿ ಕುರುಡ ದ್ರತರಾಷ್ಟ್ರನು ಸಂಜಯನನ್ನು ಆಧರಿಸಿ ನನ್ನತ್ತಲೇ ಬಂದು ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದು, ಮತ್ತೆ ಮತ್ತೆ ಕ್ಷಮೆ ಕೇಳಿದನು.

“ವರ ಬೇಡು ದ್ರೌಪದಿ! ಕ್ಷಮಿಸು  ನನ್ನೀ ಜ್ಞಾನಾಂದ ಪುತ್ರರನ್ನು!! ಕೇಳು, ನಿನಗೇನು ಬೇಕೆಲ್ಲ ಕೇಳು! ಆದರೆ ನನ್ನ ಸಂತಾವನ್ನು ಮಾತ್ರ ಕ್ಷಮಿಸು!”

ಉದ್ದಟತನ ತೋರಲಾಗಲಿಲ್ಲ. ಹೌದು, ಇದೇ ಸುಸಂದರ್ಭ! ದ್ಯೂತದಲ್ಲಿ ಕಳಕೊಂಡ ಸಂಪತ್ತನ್ನೆಲ್ಲಾ ಮತ್ತೆ ಕೇಳಿ ಪಡಕೊಂಡೆ!

ಮುಗಿಸಿ ಪೆನ್ನನ್ನು ಕೆಳಗಿರಿಸಿದಾಗ ಮೂಡಣ ದಿಕ್ಕಿನಲ್ಲಿ ಹೊನ್ನಿನ ರಂಗು ಚೆಲ್ಲಿತ್ತು. ನನ್ನೊಳು ಪರಕಾಯಪ್ರವೇಶ ಮಾಡಿದ ದ್ರೌಪದಿಯು ತನ್ನ ಕಾರ್ಯವನ್ನು ಮುಗಿಸಿ ಹೊರಟಳು.  “ಜೈ ಶ್ರೀಕೃಷ್ಣ” ಎಂಬುದು ಮಾತ್ರ ನನಗೆ ಕೇಳಿಸಿತು. ಇದೆಲ್ಲಾ ಸುಳ್ಳಾ ನಿಜವಾ.. ಎಲ್ಲಾ ಗೊಂದಲ. ಆದರೆ ನನ್ನೆದುರು ಪುಸ್ತಕ ತೆರೆದಿತ್ತು. ಮತ್ತು ಅದರಲ್ಲಿ ಅಕ್ಷರಗಳೂ ಮೂಡಿದ್ದವು. ದ್ರೌಪದಿಯ ಆಸೆಯಂತೆ ಅವಳ ಕತೆಗೆ ನಾನು ಮಾಧ್ಯಮವಾಗಿದ್ದೇನೆ.  ನೀವು ಓದುಗರಾದಿರಿ!

*******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
ಹಿಪ್ಪರಗಿ ಸಿದ್ದರಾಮ್, ಧಾರವಾಡ
ಹಿಪ್ಪರಗಿ ಸಿದ್ದರಾಮ್, ಧಾರವಾಡ
10 years ago

ಚೆನ್ನಾಗಿದೆ ಮೇಡಮ್…

savitri
savitri
10 years ago

Very nice article madam.:-)

Utham Danihalli
10 years ago

Estavaythu kathe hellida syli mathondastu kathegallu thaminda barali
Shubhavagali

Santhoshkumar LM
Santhoshkumar LM
10 years ago

Superb madam. Loved the way you wrote it.
I felt as if i am watching a movie………

GAVISWAMY
10 years ago

nice story..nice narration.. 

Rukmini Nagannavar
10 years ago

ತುಂಬಾ ಸುಂದರವಾದ ಕಥೆ ಮೇಡಮ್…
ನಿರೂಪಣೆ ಕೂಡ

6
0
Would love your thoughts, please comment.x
()
x