ನಾವು ಈ ಭೂಮಿಯ ಮೇಲೆ ಶಾಶ್ವತವಾಗಿ ಬದುಕಲು ಬಂದವರಲ್ಲ. ಪಂಚಭೂತಗಳಿಂದಾದ ಈ ದೇಹ ಇಲ್ಲಿ ಬದುಕುವ ಸಾಮರ್ಥ್ಯ ಕಳೆದುಕೊಂಡಾಕ್ಷಣ ಭೂಮಿಯ ಬದುಕು ಅಂತ್ಯವಾಗುತ್ತದೆ. ಒಮ್ಮೊಮ್ಮೆ ದೇಹ ಬದುಕಲು ಸಮರ್ಥವಾಗಿದ್ದರೂ ಅನೇಕ ಕಾರಣಗಳಿಂದ ಬದುಕು ಅಂತ್ಯವಾಗುವುದನ್ನು ನೋಡಿದ್ದೇವೆ. ಆದರೆ ಯಾವಾಗ ನಮ್ಮ ಬದುಕು ಕೊನೆಗೊಳ್ಳುತ್ತದೆಂದು ಯಾರಿಗೂ ತಿಳಿದಿರುವುದಿಲ್ಲ. ಬದುಕಲು ಸ್ವಲ್ಪ ಆಹಾರ, ವಸ್ತ್ರ, ವಸತಿ ಅವಶ್ಯಕ. ನಮ್ಮ ಜೀವಿತಾವಧಿ ಅಲ್ಪ ಎಂದು ತಿಳಿದೂ, ಆಸಯೇ ದುಃಖಕ್ಕೆ ಮೂಲ ಎಂದು ಕೇಳಿ, ಇತರರಿಗೆ ಬೋಧಿಸಿ, ಅದು ತಮಗೆ ಅನ್ವಹಿಸುವುದಿಲ್ಲವೆಂಬಂತೆ ವರ್ತಿಸುತ್ತಾರೆ! ಭಷ್ಟಾಚಾರ, ಕೊಲೆ, ಸುಲಿಗೆ … ಗಳಲ್ಲಿ ತೊಡಗಿ ಏಳೇಳು ಜನ್ಮ ಉಪಯೋಗಿಸಿದರೂ ಸವೆಯಬಾರದು ಅಷ್ಟನ್ನು ಕೊಳ್ಳೆ ಹೊಡೆದು ಗುಡ್ಡೆ ಹಾಕಿಕೊಂಡಿರುತ್ತೇವೆ! ಇನ್ನೇನು ಶಾಶ್ವತವಾಗಿ ಇಲ್ಲೇ ಇರುವುದಾದರೆ ನಾವು ಇನ್ನೆಷ್ಟು ಅನಾಹುತ ಮಾಡುತ್ತಿದ್ದೆವೋ ಊಹೆ ಮಾಡಲು ಸಾಧ್ಯವಿಲ್ಲ! ಹಾಗೆ ರಾಗ, ದ್ವೇಷಗಳೆಂಬ … ಅರಿಷಡ್ವರ್ಗಗಳಲ್ಲಿ ಮುಳುಗಿರುತ್ತೇವೆ!
ಹನ್ನೆರಡನೆಯ ಶತಮಾನದಲ್ಲಿ ಎಲ್ಲಾ ವಚನಕಾರರಿಗೆ ಗುರುವಿನ ಸ್ಥಾನದಲ್ಲಿದ್ದ, ಅವರಿಗೆ ಮುಕ್ತಿಯ ಮಾರ್ಗವನ್ನು ತೋರಿಸುತ್ತಿದ್ದ ಅಲ್ಲಮ ಪ್ರಭು ಗೋರಕ್ಷನಿಗೆ ಮುಕ್ತಿ ಮಾರ್ಗ ತೋರಲು ಮುಂದಾಗುತ್ತಾನೆ.
ಗೋರಕ್ಷ ಒಬ್ಬ ವಚನಕಾರ. ಇವನು ಗೋವುಗಳನ್ನು ಕಾಯುವ ಕೆಲಸ ಮಾಡುತ್ತಿದ್ದರಿಂದಾಗಿ ಇವನಿಗೆ ಗೋರಕ್ಷ ಎಂದು ಹೆಸರು ಬಂದಿದೆ. ಇವನು ಹಠಯೋಗದಿಂದ ಅಸಾಧಾರಣ ಸಾಧನೆ ಮಾಡಿ ವಜ್ರದೇಹಿಯಾಗಿರುತ್ತಾನೆ. ಇದೇ ಅತ್ಯುತ್ತಮ ಸಾಧನೆ ಎಂದುಕೊಂಡಿರುತ್ತಾನೆ. ತನ್ನಂತಹ ಸಾಧನೆ ಯಾರೂ ಈ ಭೂಮಿಯ ಮೇಲೆ ಮಾಡಲು ಸಾಧ್ಯವಿಲ್ಲ ಎಂಬ ಗರ್ವದಿಂದ ಬೀಗುತ್ತಿರುತ್ತಾನೆ! ಈ ಭೂಮಿಯ ಮೇಲಿರುವವರು ಯಾರೂ ನನಗೆ ತೊಂದರೆ ಕೊಡಲಾಗದು.ಎಷ್ಟು ದಿನ ಬೇಕಾದರೂ ಇಲ್ಲಿ ನಿರ್ಬಯವಾಗಿ, ್ಸು ಸುಖವಾಗಿರಬಹುದು ಎಂದು ಶ್ರೀಗಿರಿ ಬೆಟ್ಟದಲ್ಲಿ ನಿರ್ಭಯವಾಗಿ ವಾಸಿಸುತ್ತಿರುತ್ತಾನೆ. ಅಲ್ಲಮ ಇವನ ಅಹಂಕಾರ ಇಲ್ಲವಾಗಿಸಿ ಮುಕ್ತಿ ಮಾರ್ಗ ತೋರಲು ಬರುತ್ತಾನೆ. ಆಗ ಗೋರಕ್ಷನು ಅಲ್ಲಮನಿಗೆ ಕೊಡಬೇಕಾದಷ್ಟು ಗೌರವ ಕೊಡದೆ ತಾನು ಮಹಾ ಸಾಧನೆ ಮಾಡಿರುವುದಾಗಿ ಅಹಂಕಾರದಿಂದಿರುತ್ತಾನೆ. ತನ್ನ ದೇಹವನ್ನು ಯಾರೂ ಯಾವ ಶಸ್ತ್ರದಿಂದಲೂ ಭೇಧಿಸಲಾಗದಂತೆ ಸಾಧನೆ ಮಾಡಿರುವೆ ಎನ್ನುತ್ತಾನೆ. " ಮಾಯೆಯನ್ನು ಬಲಿಷ್ಟ ಮಾಡಿಕೊಂಡು ಮೃತ್ಯುವನ್ನು ಗೆದ್ದೆ " ಎನ್ನುವುದು ಸರಿಯೇ? ಎಂದು ಅಲ್ಲಮ ಪ್ರಶ್ನಿಸುತ್ತಾನೆ. ಗೋರಕ್ಷ ತನ್ನ ಸಾಧನೆ ತಿಳಿಯುವಂತಾಗಲು ತನ್ನನ್ನು ಖಡ್ಗದಿಂದ ಹೊಡೆದು ಪರೀಕ್ಷಿಸುವಂತೆ ಕೇಳಿಕೊಳ್ಳುತ್ತಾನೆ. ನಾನು ಹೊಡೆದರೆ ನೀನು ಸತ್ತು ಹೋಗುವೆ. ನಂತರ ಸಿದ್ದಿ ಪಡೆಯುವವರಾರು? ಎಂದು ಪ್ರಶ್ನಿಸುತ್ತಾನೆ ಅಲ್ಲಮ. ನಾನು ಸಾಯುವುದಿಲ್ಲ ನಿರ್ಭಯವಾಗಿ ಹೊಡೆದು ನೋಡು ಎಂದು ಗೋರಕ್ಷ ಬಲವಂತ ಮಾಡಿದಾಗ ಅಲ್ಲಮ ಖಡ್ಗವನ್ನು ಝಳಪಿಸಿ ಹೊಡೆಯುತ್ತಾನೆ. ಆಗ ' ಖಣಿಲ್ ' ಎಂದು ಖಡ್ಗ ಪುಟಿದು ಹಿಂದಕ್ಕೆ ಬರುತ್ತದೆ. ದೇಹದ ಮೇಲಿನ ಒಂದು ರೋಮವೂ ತುಂಡಾಗಿರುವುದಿಲ್ಲ! ಅಲ್ಲಮನಿಗೆ ಆಶ್ಚರ್ಯವಾದರೆ, ತಾನು ಎಂತಹ ಅದ್ಬುತ ಸಾಧನೆ ಮಾಡಿರುವೆನೆಂದು ಗೋರಕ್ಷ ಗರ್ವದಿಂದ ಬೀಗುತ್ತಾನೆ.
ಹೀಗೆ ದೇಹವನ್ನು ವಜ್ರಕಾಯ ಮಾಡಿಕೊಂಡಿರುವುದು ಸಿದ್ಧಿಯೇ? ಹೊಡೆದಾಗ ' ಖಣಿಲ್ ' ಎಂದು ಶಬ್ದ ಬರುವುದು ಸಿದ್ದಿಯಲ್ಲ! ನೀನು ದೇಹವನ್ನು ಗಟ್ಟಿ ಮಾಡಿಕೊಂಡಿರಬಹುದು ಇದಕ್ಕೂ ಖಚಿತವಾಗಿ ತೊಂದರೆ ಆದೇ ಆಗುತ್ತದೆ, ಸಾವು ಬಂದೇ ಬರುತ್ತದೆ ಎನ್ನುತ್ತಾನೆ ಅಲ್ಲಮ. " ಬರಸಿಡಿಲು, ಉಷ್ಣ, ಶೀತ, ಬಲವಾದ ಖಡ್ಗದ ಹೊಡೆತಗಳಿಗೆ ನಾಶ ಹೊಂದದಂತೆ ಈ ಶರೀರವನ್ನು ಮಾಡಿಕೊಂಡಿದ್ದೇನೆ " ಇದು ಸಿದ್ಧಿ ಅನ್ನಿಸದೆ ಮತ್ತಾವುದು ಸಿದ್ಧಿ? ಎಂದು ಗೋರಕ್ಷನು ಅಲ್ಲಮನನ್ನು ಪ್ರಶ್ನಿಸುತ್ತಾನೆ! ಹಾಗಾದರೆ " ನಮ್ಮನೊಮ್ಮೆ ಖಡ್ಗದಿಂದ ಹೊಡೆದು ನೋಡು " ಎನ್ನುತ್ತಾನೆ ಅಲ್ಲಮ! ಗೋರಕ್ಷ ಹಿಂಜರಿಯುತ್ತಾನಾದರೂ ಖಡ್ಗವನ್ನು ಎಡ ಬಲಕೆ ಝಳಪಿಸಿ ಅಲ್ಲಮನನ್ನು ಹೊಡೆಯುತ್ತಾನೆ. ಖಡ್ಗ ದೇಹದ ಒಂದು ಕಡೆಯಿಂದ ಪ್ರವೇಶಿಸಿ ಇನ್ನೊಂದು ಕಡೆ ಹೊರಬರುತ್ತದೆ! ದೇಹಕ್ಕೆ ಏನೂ ಹಾನಿ ಆಗಿರುವುದಿಲ್ಲ! ದೇಹದಿಂದ ಯಾವ ಶಬ್ದವೂ ಬರುವುದಿಲ್ಲ! ಖಡ್ಗಕ್ಕೆ ದೇಹ ಸೋಂಕಿದಂತಾಗುವುದಿಲ್ಲ,! ಬಯಲಲ್ಲಿ ಖಡ್ಗ ಬೀಸಿದಂತಾಗುತ್ತದೆ! ಅಲ್ಲಮ ಗೋರಕ್ಷನನ್ನು ನೋಡುತ್ತಾ ಮೊದಲು ಹೇಗೆ ನಗುತ್ತಾ ನಿಂತಿದ್ದನೋ ಹಾಗೇ ನಿಂತಿರುತ್ತಾನೆ!
ಖಡ್ಗ ತನ್ನ ದೇಹ ಹಾದು ಹೋದರೂ ಅಲ್ಲಮ ಅಲ್ಲೇ ನಿಂತಿದ್ದ! ಖಡ್ಗ ದೇಹ ತೂರಿ ಹೋಗಿದ್ದು ಸತ್ಯ! ಆಗ ಅವನು ಅಲ್ಲೇ ಇದ್ದದ್ದು ಸತ್ಯ! ಖಡ್ಗ ತೂರಿದರೂ ದೇಹಕ್ಕೆ ಸೋಂಕದಂತೆ, ಖಡ್ಗ ಘಾಸಿ ಮಾಡದಂತೆ ಇದ್ದದ್ದು ಸತ್ಯ! ಅಲ್ಲಮನ ದೇಹ ಇತ್ತು. ಇರದಂತೆ ಇತ್ತು! ಅಂದರೆ ಅಲ್ಲಮನ ದೇಹ ಯಾವುದೇ ಈ ಲೋಕದ ಬಾಹ್ಯ ವಸ್ತುಗಳು ಹಾನಿ ಮಾಡದ ಸ್ಥಿತಿ ತಲುಪಿತ್ತು! ಸಾಧನೆ ಅಂದರೆ ಇದಲ್ಲವೆ?
ನಾವು ಭೂಮಿಯ ಮೇಲೆ ಇರಬೇಕು ಇರದಂತೆ ಇರಬೇಕು! ಅಂದರೆ ಈ ಭೂಮಿಯ ಬದುಕನ್ನು ಅತಿಯಾಗಿ ಹಚ್ಚಿಕೊಳ್ಳಬಾರದು. ಹೆಚ್ಚು ಹಚ್ಚಿಕೊಂಡಷ್ಟು ಬದುಕು ಕೆಡುತ್ತದೆ. ಈ ಭವ ಬಂಧನಗಳು ಹೆಚ್ಚಿ ಬಹು ದುಃಖ ಉಂಟಾಗುವುದು! ಈ ಭವ ಬಂಧನಗಳಿಂದ ಬಿಡುಗಡೆಯಾಗುವ, ದುಃಖದಿಂದ ದೂರವಾಗುವ ಮಾರ್ಗಗಳು ಕಾಣದಾಗುವುವು. ನಾವು ಅತಿ ದುಃಖಿಗಳಾಗಬಾರದೆಂದರೆ ತಾವರೆ ಎಲೆ ಮೇಲಿನ ಇಬ್ಬನಿಯಂತೆ ಇರಬೇಕು! ಅದು ಗಾಳಿಗೆ ಎಲೆಯ ಮೇಲೆ ಇತ್ತಿಂದತ್ತ, ಅತ್ತಿಂದಿತ್ತ ಚಲಿಸಿದಾಗ ಚಲಿಸಿದ ಗುರುತು ಎಲೆಯ ಮೇಲೆ ಇರುವುದಿಲ್ಲ! ಆ ಇಬ್ಬನಿ ಎಲೆಯ ಮೇಲೆ ಚಲಿಸಿದರೂ ಗುರುತು ಮಾಡುವುದಿಲ್ಲ! ಹಾಗೆ ನಾವು ಈ ಭೂಮಿಯಲ್ಲಿ ವಾಸಿಸಬೇಕು! ನಾವು ಯಾರನ್ನಾದರೂ ಅತಿಯಾಗಿ ಪ್ರೀತಿಸುತ್ತಿರುತ್ತೇವೆ ಅವರಿಗೇನಾದರೂ ಆಕಸ್ಮಿಕವಾಗಿ ತೊಂದರೆ ಆದರೆ ಪ್ರೀತಿಸುವವರು ಅಸ್ವಸ್ಥರಾಗುತ್ತಾರೆ! ಅವರ ಜತೆಗೆ ಇವರೂ ತೊಂದರೆಗೆ ಸಿಲುಕುತ್ತಾರೆ! ಇವರ ಬದುಕೂ ಕೆಡುತ್ತದೆ!
" ನೀರಮೇಲಣ ಗುಳ್ಳೆ ನಿಜವಲ್ಲ ಮನುಜ " ಎಂದು ಒಂದು ತತ್ವ ಪದ ಇದೆ. ಈ ಜೀವ ನೀರಿನ ಮೇಲಿರುವ ಗುಳ್ಳೆಯಿದ್ದಂತೆ. ಆ ಗುಳ್ಳೆ ಯಾವಾಗ ಬೇಕಾದರೂ ಒಡೆಯ ಬಹುದಲ್ಲವೆ? ಹಾಗೇ ಮಾನವನ ಜೀವಕ್ಕೆ ಯಾವಾಗ ಬೇಕಾದರೂ ತೊಂದರೆಯಾಗಬಹುದು. ಮಾನವರು, ಈ ಭೂಮಿಯ ಬದುಕು ಅಶಾಶ್ವತವಾದುವು! ನಮ್ಮ ಬದುಕು ಕೆಡಬಾರದೆಂದರೆ ಈ ಭೂಮಿಯ ಮೇಲೆ ಇದ್ದೂ ಇಲ್ಲದಂತೆ ಇರಬೇಕು! ಅಲ್ಲಮ ಪ್ರಭುವಿನಂತಿರಬೇಕು! ಅಂದರೆ ಅವನಂತಹ ಆಧ್ಯಾತ್ಮ ಸಾಧನೆ ಮಾಡಬೇಕು. ಆದರೆ ನಮ್ಮಿಂದ ಅಷ್ಟು ಮಾಡಲು ಸಾಧ್ಯವಿಲ್ಲ. ಕೊನೆಪಕ್ಷ ಮಣ್ಣು, ಹೆಣ್ಣು, ಹೊನ್ನಿನ ಮೇಲಿನ ಆಸೆ, ಗಂಡ, ಹೆಂಡತಿ, ಮಗ, ಮಗಳು …. ಎಂಬ ವ್ಯಾಮೋಹ ಕಡಿಮೆಯಾದಾಗ ದುಃಖ ಕಡಿಮೆಯಾದೀತು! ಇಂದು ಇದು ಅತಿಯಾಗಿ ಮಾನವರ ಬದುಕು ಕೆಟ್ಟು, ಭ್ರಷ್ಟ, ದುಷ್ಟ, ಪೈಶಾಚಿಕ, ಪಶುಗಳ ಬದುಕಿನಂತಾಗಿ ಅಶಾಂತಿಯ ತಾಣವಾಗಿದೆ!
* ಕೆ ಟಿ ಸೋಮಶೇಖರ ಹೊಳಲ್ಕೆರೆ.