ಪದ್ಮಜಾ: ಮಲ್ಲಪ್ಪ ಎಸ್.

“ಅಮ್ಮಾ ನನ್ನ ಪೆನ್ಸಿಲ್ ಬಾಕ್ಸ ಎಲ್ಲಿ?” ಅನಿತಾ ಮಾಡು ಹಾರಿ ಹೋಗುವಂತೆ ಕಿರುಚಿದಳು.
“ ಅಲ್ಲೇ ಇರಬೇಕು ನೋಡೆ. ನೀನೇ ಅಲ್ವಾ ನಿನ್ನೆ ರಾತ್ರೆ ಜಾಮಿಟ್ರಿ ಮಾಡ್ತಾ ಇದ್ದವಳು?” ಪದ್ಮಜಾ ಒಲೆಯ ಮೇಲೆ ಇದ್ದ ಬಾಣಲೆಯಲ್ಲಿಯ ಒಗ್ಗರಣೆ ಸೀದು ಹೋಗುತ್ತಲ್ಲಾ ಎಂದು ಚಡಿಪಡಿಸುತ್ತಾ ಕೈ ಆಡಿಸಲು ಚಮಚಕ್ಕಾಗಿ ಹುಡುಕಾಡುತ್ತಾ ಬಾಗಿಲಕಡೆ ಮುಖ ಮಾಡಿ ಉತ್ತರಿಸುತ್ತಿದ್ದಳು.
“ಅಮ್ಮಾ ನನ್ನ ಇನೊಂದು ಸಾಕ್ಸ ಕಾಣುತ್ತಿಲ್ಲ. ಲೇ ಅನಿ-ಶನಿ ನನ್ನ ಸಾಕ್ಸ ಎಲ್ಲಿ ಬಿಸಾಕಿದ್ದಿಯೇ?” ದಕ್ಷ ಒಂದು ಕಾಲಲ್ಲಿ ಸಾಕ್ಸ ಹಾಕಿ ಇನ್ನೊಂದಕ್ಕಾಗಿ ಪರಿದಾಡುತ್ತಾ, ಇದಕ್ಕೆಲ್ಲ ತನ್ನ ಅಕ್ಕ ಅನಿತಾ ತನ್ನ ಸಾಕ್ಸ ಹಾಕಿಕೊಳ್ಳುವಾಗ ಇವನದ್ದು ಬಿಸಾಕಿದ್ದಾಳೆ ಅಂತ ಕಿರುಚುತಿದ್ದ.

“ ಅಯ್ಯೊ….ಅಯ್ಯೊ ಇದೇನು ಮನೆನಾ ಇಲ್ಲಾ ಸಂತೇನಾ? ಇವ್ರೂ ಮಕ್ಕಳಾ ಇಲ್ಲ ರಾಕ್ಷಸರಾ? ಸಣ್ಣವರಿದ್ದಾಗಿನಿಂದಲೇ ರೀತಿ ನೀತಿ ಕಲಿಸಿದ್ದರೆ ಹೀಗ್ಯಾಕೆ ಇರುತಿದ್ದರು? ಮೊದಲು ಅವರ ಅಮ್ಮ ನೆಟ್ಟಗಿದ್ದರೆ ತಾನೆ ಮಕ್ಕಳು ನೆಟ್ಟಗಿರುವುದು? ಅದೇನೊ ಗಾದೆ ಇದೆಯಲ್ಲ “ ಮಾಸ್ತರು ನಿಂತು ಉ…………..”ಹಾಗೆ. ಲೇ…ಪೆದ್ದು ನಿನ್ನ ಮಕ್ಕಳು ಆ ಪರಿ ಕಿರಿಚಿಕೊಳ್ತಾ ಇವೆ, ಕಿವಿ ಕೇಳಸ್ತಾ ಇಲ್ವೇನೇ? ನೀನೇನು ಮಾಡ್ತಿಯಾ ನಿಮ್ಮಮ್ಮ ನಿನಗೆ ಕಲಿಸಿದ್ದರೆ ಅಲ್ವಾ, ನೀನು ಮಕ್ಕಳಿಗೆ ಹೇಳಿಕೊಡಲು?”ವನಜಾಕ್ಷಮ್ಮನವರು ಕೈಯಲ್ಲಿ ನೆಪಮಾತ್ರಕ್ಕೆ ‘ಭಾಗವತ’ ಹಿಡಿದು ವಟಗುಟ್ಟುತಿದ್ದರು.
“ಲೇ ಅನಿತಾ ದಕ್ಷ ಸಾಕ್ಸ ಎಲ್ಲಿ ಬಿಸಾಕಿದ್ದಾನೆ ನೋಡಿ ಹುಡುಕಿ ಕೊಡೆ. ಇಲ್ಲಿ ನೋಡಿದರೆ ಒಲೆ ಮೇಲೆ ಒಗ್ಗರೆಣೆ, ಅಲ್ಲಿ ನೋಡಿದರೆ ಮಕ್ಕಳು ಕಿರುಚಾ ಇವೆ. ಅಯ್ಯೋ ದೇವರೆ ನಾನು ಏನು ಮಾಡಲಿ?……….. ದಕ್ಷು ಸಾಕ್ಸು ಸಿಕ್ತೇನೊ?”

“ ಹೂಂ ಸಿಕ್ತಮ್ಮಾ. ಇವಳೇ ಅಲ್ಲಿ ಬಿಸಾಕಿ ಈಗ ಎತ್ತಿ ಕೊಡ್ತಿದ್ದಾಳೆ” ಸಿಕ್ಕ ಸಾಕ್ಸನ್ನು ಇನ್ನೊಂದು ಕಾಲಿಗೆ ಹಾಕಿಕೊಳ್ಳುತ್ತಾ ದಕ್ಷ ತಾನು ಹುಡುಕದೇ ಇರುವುದನ್ನು ಮರೆಮಾಚಿ ತಪ್ಪೆಲ್ಲಾ ಅಕ್ಕನ ಮೇಲೆ ಹಾಕುತ್ತ ಪುಸ್ತಕಗಳನ್ನು ಜೋಡಿಸಲು ಓಡಿದ.
“ ಅಮ್ಮಾ ಬೇಗ ಬಾರಮ್ಮಾ ನನ್ನ ಪೆನ್ಸಿಲ್ ಬಾಕ್ಸ ಸಿಕ್ತಾನೇ ಇಲ್ಲ. ಟೈಂ ಬೇರೆ ಆಗ್ತಾ ಇದೆ.”

“ ಇರಮ್ಮಾ ಬಂದೆ” ಪದ್ಮಜಾ ಸ್ಮ್ಯಾಷ್ ಮಾಡಿದ್ದ ಆಲುಗಡ್ಡೆಯನ್ನು ಒಗ್ಗರಣೆಯಲ್ಲಿ ಹಾಕಿ ಕೈಯಾಡಿಸಿ ಒಲೆಯ ಉರಿಯನ್ನು ಕಡಿಮೆ ಮಾಡಿ ಮಗಳ ಪೆನ್ಸಿಲ್ ಬಾಕ್ಸನ್ನು ಹುಡುಕಿಕೊಡಲು ಓಡಿದಳು.
ಪದ್ಮಜಾ ಅನಂತರಾಮನ ಎರಡು ಮುದ್ದಾದ ಮಕ್ಕಳ ತಾಯಿ. ಹುಟ್ಟಿ ಬೆಳದದ್ದು ಕೆ.ಜಿ.ಎಫ್ ನ ಪಕ್ಕದ ಪಾರಂಡಹಳ್ಳಿಯಾದರೂ ಹೈಸ್ಕೂಲು ಹಾಗು ಪಿಯುಸಿ ಓದಿದ್ದು ಕೆಜಿಎಫ್ ನ ಬೆಮೆಲ್ ಪಿಯು ಕಾಲೇಜಿನಲ್ಲಿ. ಮದುವೆಯಾದ ಹೊಸದರಲ್ಲಿ ಎಲ್ಲವೂ ಚನ್ನಾಗಿಯೇ ಇತ್ತು. ಆದರೆ ಬರ್ತಾ ಬರ್ತಾ ಅನಂತನ ತಾಯಿ ವನಜಾಕ್ಷಮ್ಮನವರದ್ದು ಕಿರಿಕಿರಿ ಸುರುವಾಯಿತು. ಅವರದ್ದು ಒಂದೇ ವರಾತು, ತನ್ನ ಮಗ ಬೆಮೆಲ್ ನಲ್ಲಿ ದೊಡ್ಡ ಆಫೀಸರ್. ಅವನಿಗೆ ಎಂತೆಂಥಾ ಹೆಣ್ಣುಗಳು ಬಂದಿದ್ವು. ಆ ಚಿಂತಾಮಣಿ ಶಟ್ರ ಹುಡುಗಿಯಂತು ಕೈ ತೊಳೆದು ಮುಟ್ಟಬೇಕು, ಅಂಥ ಚಂದ ಇದ್ಲು. ಜೊತೆಗೆ ಅವಳ ಅಪ್ಪ ಮದುವೆನೂ ಮಾಡಿಕೊಟ್ಟು, ಲಕ್ಷ ಲಕ್ಷ ವರದಕ್ಷಿಣೆನೂ ಕೊಡ್ತೆನೆ ಅಂದ್ರೂ, ಅಂಥದ್ದೆಲ್ಲಾ ಬಿಟ್ಟು ನನ್ನ ಮಗ ಈ ಹಳ್ಳಿ ಗುಗ್ಗುವಿನಲ್ಲಿ ಅದೇನು ಕಂಡನೋ ಆ ದೇವ್ರಿಗೆ ಗೊತ್ತು? ಇಲ್ಲ…… ಇಲ್ಲ… ಇವ್ಳೂ ಏನೋ ಮೋಡಿ ಮಾಡಿದ್ದಾಳೆ ಅಂತ ಕಾಣ್ತದೆ. ಅದ್ಕೆ ಈ ಗುಗ್ಗುನ್ನ ಒಪ್ಪಿದ್ದಾನೆ. ಮದುವೆಲಿ ತವರಮನೆ ತಾಳಿ ಬಿಟ್ಟರೆ ಇನ್ನೇನು ಕೊಟ್ಟಾನು ಆ ಬಿಕನಾಸಿ ಮೇಷ್ಟ್ರು? ಮಾತು ಮಾತ್ರ ಒಳ್ಳೆ ನಾಟಕದವರಂಗೆ ಮಾತಾಡ್ತಾನೆ.

ಅಪ್ಪ ಕೊಡ್ದಿದ್ರೆ ಹೊಗ್ಲಿ ಇವಳಾದ್ರೂ ಎಲ್ಲಾದ್ರೂ ಕೆಲಸಕ್ಕೆ ಹೋಗಬಾರದಾ? ಗಂಡ ಏಳುಗಂಟೆಗೆ ಕೆಲಸಕ್ಕೆ ಹೋದರೆ ಬರೋದು ಸಾಯಂಕಾಲ ಮೂರಾದ್ರೂ ಆಯ್ತು ಇಲ್ಲ ಆರಾದ್ರೂ ಆಯ್ತು. ಅವ್ನಿಗೆ ಒಂದು ದೋಸೆನೊ ಇಲ್ಲ ಒಂದು ಉಪ್ಪಿಟ್ಟೊ ಮಾಡಿ ಕೊಟ್ರೆ ಅಯ್ತು. ಅದನ್ನೇ ಆ ಮಕ್ಕಳ ಡಬ್ಬಕ್ಕೂ ಕಟ್ಟಿ ಕೊಟ್ರೆ ಅಯ್ತು. ಆ ಮೇಲೆ ಏನು ಕೆಲ್ಸಾ? ತಿನ್ನೋದು, ಮಲಗೊದು. ತಿನ್ನೋದು, ಮಲಗೊದು ಬಿಟ್ರೆ ಇನ್ನೆನು ಕಿತ್ತು ಗಂಟಾಕ್ತಾಳೆ? ಏನೇ ಅಂದ್ರೂ ಇವಳು ತನ್ನ ಮಗನಿಗೆ ತಕ್ಕವಳಲ್ಲ. ಇಂಥವಳನ್ನ ಕಟ್ಟಿಕೊಂಡು ತನ್ನ ಮಗ ಕಷ್ಟ ಪಡ್ತಾಇದ್ದಾನೆ ಅಂತ, ಇದಕ್ಕೆಲ್ಲಾ ಕಾರಣ ಈ ಸೋಗಲಾಡಿ ಅಂತ ಪದ್ಮಜಾ ಮೇಲೆ ವನಜಾಕ್ಷಮ್ಮನವರಿಗೆ ಕಡು ಕೋಪ. ಈ ಎಲ್ಲಾ ವಿಷಯ ಅನಂತನಿಗೆ ಗೊತ್ತಿಲ್ಲ ಅಂತ ಅಲ್ಲ. ಅವನಿಗೆ ಎಲ್ಲಾ ಗೊತ್ತು, ಆದರೆ ಅಸಾಯಕ. ಅಮ್ಮನಿಗೆ ಪದ್ಮಳ ಮೇಲೆ ಏಕೆ ಕೋಪ ಅನೋದು ಅವನಿಗೆ ಗೊತ್ತು. ಆ ಕೋಪಾನ ಅಮ್ಮ ಹೇಗೆ ಗಲಾಟೆ ಮಾಡಿ ತೀರಿಸಿಕೊಳ್ಳುತ್ತಾಳೆ ಅನ್ನೊದೂ ಗೊತ್ತು. ಅಮ್ಮ ಒಮ್ಮೊಮ್ಮೆ ಮಾಡುವ ಗಲಾಟೆಗೆ ಅಕ್ಕ ಪಕ್ಕದ ಮನೆಯವರು ‘ಏನು ಅನಂತು ಇವತ್ತು ನಿಮ್ಮ ಮನೆ ರಣರಂಗ ಆಗಿತ್ತು ಅಂತ ಕಾಣಿಸ್ತಿತ್ತು?’ ‘ನಮ್ಮ ಮನೆಲೂ ಮಕ್ಕಳಿದ್ದಾರಪ್ಪಾ ಆದ್ರೆ ನಿಮ್ಮಷ್ಟು ಗಲಾಟೆ ಮಾಡಿದ್ರೆ ನಾನೇ ನಾಲ್ಕು ಭಾರಿಸ್ತಿದ್ದೆ’ ‘ ನಿಮ್ಮ ಮನೆಲಿ ಅದೇನು ಅತ್ತೆ-ಸೊಸೆ ಜಗಳ ಮಾರಾಯ?’ ಇಂಥಹ ಕಂಪ್ಲೇಂಟ್ ಇದ್ದದ್ದೇ. ತಾನು ಏನು ಮಾಡಲಾರ. ಇತ್ತ ತಾಯಿಗೆ ಏನು ಅನ್ನಲಾರ, ಅತ್ತ ತಪ್ಪಿಲ್ಲದ ಪದ್ಮಜಾಗೂ ಏನು ಅನ್ನಲಾರ.

“ಇಗಾ ನಿನ್ನ ಪೆನ್ಸಿಲ್ ಬಾಕ್ಸ. ಎಲ್ಲೋ ಇಡೊದು ಇನ್ನೆಲ್ಲೋ ಹುಡುಕೊದು.”
“ಥ್ಯಾಂಕ್ಸ ಅಮ್ಮಾ” ಹೆಗಲಿಗೆ ಬುಕ್ಸ ಬ್ಯಾಗ ಹಾಕಿ ಓಡಲು ಹೊರಟವಳಿಗೆ “ಅನಿ ಒಂದು ನಿಮಿಷ ನಿಲ್ಲು. ನಿನ್ನ ಟಿಫನ್ ಬಾಕ್ಸ ಇಲ್ಲೆ ಇದೆ. ಚಪಾತಿ ಆಲು ಪಲ್ಲೆ ಮಾಡಿದ್ದಿನಿ. ಕಟ್ಟಿ ಕೊಡ್ತೀನಿ” ಟಿಫನ್ ಬಾಕ್ಸಿಗೆ ಚಪಾತಿ ಆಲೂ ಪಲ್ಲೆ ಕಟ್ಟಲು ಅಡಿಗೆ ಮನೆಗೆ ಓಡುತ್ತಾ “ದಕ್ಷು ನಿನ್ನ ಬುಕ್ಸ ಎಲ್ಲಾ ತಗೊಂಡಿದ್ದಿಯಾ? ನಿನ್ನೆ ರಾತ್ರೆ ಮ್ಯಾತ್ಸ ಮಾಡ್ತಿದ್ದಿಯಲ್ಲ? ಆ ನೋಟ್ ಬುಕ್ ಹಾಕಿಕೊಂಡ್ಯಾ? ಆಮೇಲೆ ಟಿಚರ್ ಕೈಲಿ ಒದೆ ತಿನ್ನಬೇಡ”

“ಥ್ಯಾಂಕ್ಸ ಅಮ್ಮಾ. ನನಗೆ ಮರ್ತೆ ಹೊಗಿತ್ತು. ನೀನು ಜ್ಞಾಪಿಸಿದ್ದು ಒಳ್ಳೆಯದಾಯ್ತು” ದಕ್ಷ ಮ್ಯಾತ್ಸ ನೋಟ್ ಬುಕ್ ಹಾಕಿಕೊಳ್ಳಲು ಒಳಗೆ ಓಡಿದ.
“ದಕ್ಷು ಮಗ ತಗೊಂಡಿಯಾ ನೋಟ್‍ಬುಕ್ಕು? ನಿಮ್ಮಮ್ಮ ಅವನ್ನೇಲ್ಲ ಮೊದಲೇ ಸರಿಯಾಗಿ ಜೋಡಿಸಿಟ್ಟಿದ್ದರೆ ಹೀಗೆಲ್ಲ ಯಾಕೆ ಆದೀತು? ಈ ಹಳ್ಳಿ ಗುಗ್ಗುನ್ನ ಅವಳಪ್ಪ ನಮ್ಮ ತಲೆಗೆ ಕಟ್ಟಿದ. ಏನು ಮಾಡೋಣ? ನನ್ನ ಮಗನಿಗೆ ಅದೇನು ಮೊಡಿ ಮಾಡಿದ್ಲೋ, ನನ್ನ ಮಗನ ಬುದ್ದಿನೇ ಕೆಲ್ಸಾ ಮಾಡ್ಲಿಲ್ಲ……ಲೇ ಪೆದ್ದಿ ನಿನ್ನ ಮಗಳಿಗೆ ಊಟದ ಡಬ್ಬಾ ಕಟ್ಟಿದ್ದಿಯಲ್ಲ, ಈ ನನ್ನ ಮೊಮ್ಮಗನಿಗೆ ಕಟ್ಟಿದ್ದಿಯಾ? ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಏನೆ? ಬರ್ಲಿ ನಿನ್ನ ಗಂಡ ಕೇಳಿಯೇ ಬಿಡ್ತೇನೆ, ಇಂಥ ನಿನ್ನ ನಿನ್ನ ತೌರಿಗೆ ಕಳಸ್ತಾನೊ ಇಲ್ಲ ನಾನೇ ಕತ್ತು ಹಿಡ್ದು ಬಿಟ್ಟು ಬರ್ಲಾ ಅಂತ?”

“ ಅತ್ತೆ ಹಾಗೆಲ್ಲ ಯಾಕೆ ಅಂತೀರಿ? ಅವೇರಡೂ ನನ್ನ ಮಕ್ಕಳೇ ಅಲ್ವಾ? ನಾನು ಯಾವಾಗ್ಲಾದ್ರೂ ಭೇದ ಮಾಡಿದ್ನಾ? ಇಲ್ನೋಡಿ ಇಬ್ಬರ ಡಬ್ಬಗಳೂ ರೆಡಿ ಇವೆ.” ಪದ್ಮಜಾಗೆ ಮಾತಾಡಲು ಟೈಂ ಇಲ್ಲ. ಲೇಟಾದ್ರೆ ಸ್ಕೂಲ್ ಬಸ್ಸ ಮಿಸ್ಸ್ ಆಗುತ್ತೆ ಅಂತ ಆತಂಕ. ಇಬ್ಬರ ಬ್ಯಾಗ್ ಗಳಿಗೂ ಊಟದ ಬಾಕ್ಸ ಹಾಕಿ ಅವುಗಳನ್ನು ಹೊತ್ತುಕೊಂಡು, ಮಕ್ಕಳನ್ನು ಹೊರಡಿಸಿ ಓಡಿಸಿಕೊಂಡು ಬಂದರೂ ಮೇನ್ ರೊಡ್ ಮೂಲೆಗೆ ಬರುವುದಕ್ಕೂ ಬಸ್ಸು ಬರುವುದಕ್ಕೂ ಸರಿಯಾಯಿತು. ಅಲ್ಲಿಂದಲೇ ಡ್ರೈವರಗೆ ಕೂಗಿ ಕೈಮಾಡಿ ನಿಲ್ಲಿಸಿ, ಮಕ್ಕಳಿಗೆ ಬಸ್ಸು ಹತ್ತಿಸಿ ‘ಟಾ ಟಾ’ ಮಾಡಿ ಕಳುಹಿಸುವುದರಲ್ಲಿ ಸಣ್ಣಗೆ ತಲೆ ಸುತ್ತು ಬಂದ ಹಾಗಾಯಿತು. ಹೇಗೊ ಸುದಾರಿಸಿ ಅಲ್ಲಿಯೆ ಇದ್ದ ಕಲ್ಲು ಬೆಂಚ್ ಮೇಲೆ ಎರಡು ನಿಮಿಷ ಸುದಾರಿಸಿಕೊಂಡು ಕಾಲೆಳೆಯುತ್ತ ಮನೆ ಬಾಗಿಲಿಗೆ ತಲುಪಿದರೆ ಬಾಗಿಲಲ್ಲೇ ಹೊತ್ತಿದ ವಾಸನೆ ಬರುತ್ತಿತ್ತು. ಆಗ ನೆನಪಾಯಿತು ಆಲೂಗಡ್ಡೆ ಪಲ್ಯೆ ಒಲೆಮೇಲೆ ಇಟ್ಟದ್ದು, ಗ್ಯಾಸ್ ಬಂದು ಮಾಡದೇ ಮಕ್ಕಳ ಬಿಡಲು ಓಡಿ ಹೊದದ್ದು.

“ಬಾಮ್ಮಾ ಬಾ. ಇಷ್ಟೋತ್ತು ಎಲ್ಲಿ ಹರಗಾಡಲು ಹೊಗಿದ್ದೆ? ಹಾಂ? ಪಕ್ಕದ ಬೀದಿಲಿ ಬರೊ ಬಸ್ಸಿಗೆ ಮಕ್ಕಳನ್ನು ಹತ್ತಿಸಿ ಬರಲೂ ಎಷ್ಟೊತ್ತೇ? ಅಲ್ಲಿ ಯಾರ ಜೋತೆ ಮಾತಾಡ್ತಾ ನಿಂತಿದ್ದಿ? ಹೋಗುವಾಗ ಒಲೆ ಮೇಲೆ ಏನು ಇಟ್ಟಿದ್ದೆ ಏನು ಇಲ್ಲ ಅಂತ ನೆನಪಿದೆಯಾ? ನೀನೇನು ಮಾಡ್ತಿ, ಮಹಾರಾಣಿ ನೀನು. ನೀನು ಬಿಟ್ಟು ಹೋದ ಕೆಲ್ಸ ಮಾಡ್ಲಿಕ್ಕೆ ಅಂತ ಹಿಂದೆ ಒಂದು ಸೈನ್ಯ ನಿಂತಿದೆ ನೋಡು. ನಿಮ್ಮಪ್ಪ ದುಡ್ಡು ಕೊಟ್ಟು ಇಟ್ಟಿದ್ದಾನೆ ನೋಡು ಕೆಲಸಗಾರರನ್ನ.”
“ಅತ್ತೆ ನೀವಿಲ್ಲೆ ಇದ್ದಿರಲ್ಲ ಸ್ವಲ್ಪು ಗ್ಯಾಸ ಬಂದು ಮಾಡಿದ್ರೆ ಆಗ್ತಿರಲಿಲ್ವಾ?”
“ ಹೌದೆ ಅನ್ನು. ನಾನೊಬ್ಳು ಇಲ್ಲಿ ತಿಂದುಕೊಂಡು ಖಾಲಿ ಬಿದ್ದುಕೊಂಡಿದ್ದಿನಿ ನೋಡು? ಅಯ್ಯೊ ದೇವರೆ ನನ್ನ ಕಣ್ಣಾದ್ರೂ ಯಾಕೆ ಮುಚ್ಚತಾ ಇಲ್ಲ? ನಾನು ಯಾವ ಪಾಪ ಮಾಡಿದ್ದೆನೆ ಅಂತ ಇದೇಲ್ಲ ನೋಡ್ಲಿಕ್ಕೆ ಬಿಟ್ಟಿದ್ದಿ? ನನಗ್ಯಾಕೆ ಈ ಶಿಕ್ಷೆ? ………” ವನಜಮ್ಮ ಇನ್ನೂ ಒಟಗುಟ್ಟುತ್ತಲೇ ಇದ್ದರು. ಪದ್ಮ ಕೇಳಿ ಕೇಳದ ಹಾಗೆ ತನ್ನ ರೂಂ ಸೇರಿ ಬಾಗಿಲು ಹಾಕಿ ಕೊಂಡಳು.

-2-
ಸಾಯಂಕಾಲ 6ಗಂಟೆ. ಅನಂತು ಸುಸ್ತಾಗಿ ಜೋಲು ಮುಖ ಮಾಡಿ ಮನೆಗೆ ಬಂದು ತನ್ನ ಬ್ಯಾಗನ್ನು ಟೇಬಲ್ ಮೇಲೆ ಇಟ್ಟು ಕಣ್ಣು ಮುಚ್ಚಿ ಕುಳಿತ. “ ಯಾಕ್ರೀ ತಲೆ ನೋವಾ? ಕಾಫೀ ಮಾಡ್ಲಾ?” ಪದ್ಮಾ ಕೈಯನ್ನು ಹಣೆಯ ಮೇಲೆ ಇಡುತ್ತಾ ಕೇಳಿದಳು.

“ಲೈಟಾಗಿ ತಲೆ ನೋವು. ಒಂದು ಚೂರು ಕಾಫಿ ಕೊಡು”. ಪದ್ಮ ತಂದು ಕೊಟ್ಟ ಹದವಾಗಿ ಬೆರೆಸಿದ ಕಾಫಿ ಅನಂತು ಇನ್ನೂ ತುಟಿಗೆ ಹಚ್ಚಿರಲಿಲ್ಲ, ವನಜಮ್ಮ ತಮ್ಮ ರೂಂ ನಿಂದ ಬರುತ್ತಾ “ ಅಪ್ಪಾ ಅನಂತು ನನಗೆ ಯಾವೂದಾದರೂ ಅನಾಥಾಶ್ರಮ ಇದ್ದರೆ ಸೇರಿಸಪ್ಪ. ನಿನ್ನ ಹೆಂಡ್ತಿಗೆ ನನ್ನ ಕಂಡ್ರೇ ಆಗಲ್ಲ. ನನ್ನ ಮೇಲಿನ ಸಿಟ್ಟನ್ನ ಮಕ್ಕಳ ಮೇಲೆ ಹಾಕಿ ಅವುಗಳನ್ನ ದನಕ್ಕೆ ಬಡಿದ ಹಾಗೆ ಬಡಿತಾಳೆ. ಆ ಮಕ್ಕಳ ಗೋಳು ನೋಡ್ಲಿಕ್ಕೆ ಆಗಲ್ಲಪ್ಪ. ಇದಕ್ಕೇಲ್ಲಾ ನಾನು ಮುದಿ ಗೂಬೆ ಕಾರಣ. ನನ್ನನ್ನು ಯಾವುದಾದರೂ ಆಶ್ರಮಕ್ಕೆ ಸೇರಿಸಪ್ಪಾ. ನನಗೂ ದಿನಾ ದಿನಾ ಗಲಾಟೆ ಸಾಕಾಗಿದೆ.”

“ಠಳ್” ಅನಂತುವಿನ ಕೈಯಲ್ಲಿಯ ಕಾಫಿ ಲೋಟ ನೆಲದ ಮೇಲೆ ಉರುಳಾಡುತಿತ್ತು. ಟೇಬಲ್ ಮೇಲೆ ಜೋರಾಗಿ ಗುದ್ದು ಹಾಕಿ “ಎಲ್ರೂ ಎಲ್ಲಾದ್ರೂ ಹಾಳಾಗಿ ಹೋಗಿ” ಎಂದು ಕಿರುಚಿ ಎದ್ದು ಹೊರ ನಡೆದ. ಅನಂತುವಿನ ತಲೆ ಕೆಟ್ಟಿತ್ತು. ಈಗ ಪ್ರೋಡೆಕ್ಷನ್ ಪಿರೆಡ್. ಟಾರ್ಗೆಟ ರೀಚ್ ಆಗಿಲ್ಲ ಅಂತ ಮಾನೇಜ್‍ಮೆಂಟ್ ದಿನಾಗ್ಲೂ ಮೀಟಿಂಗಲ್ಲಿ ಮುಖಾ ಮುಸುಂಡಿ ನೋಡ್ದೇ ಕ್ಯಾಕರಿಸಿ ಉಗಿತಾ ಇದ್ರೇ, ಇಲ್ಲಿ ಮನೇಲಿ ದಿನಾಗ್ಲೂ ರಾಮಯಣ ಮಹಾಭಾರತ. ಅವನಿಗೆ ಗೊತ್ತು ಅಮ್ಮನ ಸಿಟ್ಟು ಯಾಕೆ ಅಂತ. ಅಮ್ಮನ ‘ಪಸಂದ’ದ ಆ ಚಿಂತಾಮಣಿ ಹುಡಗಿನ ಮದುವೆ ಆಗಿ, ಲಕ್ಷ ಲಕ್ಷ ವರದಕ್ಷಿಣೆ ತಂದಿದ್ರೆ, ಯಾರಿಗೆ ಗೊತ್ತು ಆಮೇಲೆ ಏನಾಗುತಿತ್ತೋ? ಈಗಂತೂ ಲಕ್ಷ ಲಕ್ಷ ತರಲಿಲ್ಲ ಅಂತ ಅಮ್ಮ ಮನಸ್ಸಿನಲ್ಲಿ ಇಟ್ಟುಕೊಂಡು ಗಲಾಟೆ ಮಾಡ್ತಾ ಇದ್ದಾಳೆ. ಈ ಅಮ್ಮನಿಗೆ ಹೇಗೆ ಬುದ್ದಿ ಹೇಳೊದು ಜೀವನಕ್ಕೆ ದುಡ್ಡು ಒಂದೇ ಮುಖ್ಯ ಅಲ್ಲ ಅಂತ? ಅಷ್ಟಕ್ಕೂ ದೇವರು ಈಗ ತಮಗೆ ಏನು ಕಡಿಮೆ ಮಾಡಿದ್ದಾನೆ? ಬೆಮೆಲ್ ನಲ್ಲಿ ಕೆಲಸ ಸಿಕ್ಕೊದು ಅಂದ್ರೇ ಅರ್ಧ ಸ್ವರ್ಗ ಕೈಲಿ ಕೊಟ್ಟ ಹಾಗೆ. ಒಳ್ಳೆ ಕೆಲಸ, ಒಳ್ಳೆ ಸಂಬಳ, ಒಳ್ಳೆ ಮ್ಯಾನೇಜ್ಮೆಂಟ್, ಒಳ್ಳೆ ಪರಿಸರ, ಒಳ್ಳೆ ಗೆಳೆಯರ ಬಳಗ, ಇನ್ನೂ ಈ ಅಮ್ಮನಿಗೆ ಏನು ಬೇಕಂತೆ? ಸಾಯಂಕಾಲ ಬಯಲಲ್ಲಿ ಮೇಯಲು ಹೋದ ಹಸು ಕಣ್ಣು ಕಟ್ಟಿ ಬಿಟ್ಟರೂ ಮನೆ ಸೇರುವಂತೆ ಅನಂತುವಿನ ಕಾಲು ಅವನಿಗೆ ಅರಿವಿಲ್ಲದೇ ತನ್ನ ಹೈಸ್ಕೂಲ್ ಗೆಳೆಯ ಡಾಕ್ಟರ್ ಪರಮೇಶ್ವರಪ್ಪ ಅವರ ಮನೆ ಮುಂದೆ ನಿಂತಿತ್ತು.

“ ಬಾರಪ್ಪಾ ಅನಂತು. ಏನು ದಾರಿ ತಪ್ಪಿ ಬಂದ ಹಾಗೆ ಇದೆ? ಲೇ ನೋಡು ಯಾರು ಬಂದಿದ್ದಾರೆ? ಒಂದು ಸ್ಟ್ರಾಂಗ್ ಕಾಫಿ ಅನಂತುವಿಗೆ ತಾ.” ಗೆಳೆಯನ ಸಪ್ಪೆ ಮುಖ ನೋಡಿ “ ಯಾಕೋ ಅನಂತು ಮೈ ಹುಷಾರಿಲ್ವಾ? ಮುಖ ಎಲ್ಲಾ ಬಾಡಿದೆ. ಅತ್ತಿಗೆ ಆರಾಮ ಇದ್ದಾರೇನೋ?”
“ಹೂಂ. ಎಲ್ಲರೂ ಆರಾಮ ಇದ್ದಾರೆ.”
“ಮತ್ತೇಕೋ ಒಂದು ಥರಾ ಇದ್ದಿಯಾ?”
“ಏನಿಲ್ಲಾ ಕಾಫಿ ಕುಡಿದು ಒಂದು ಚೂರು ಹೊರಗೆ ಸುತ್ತಾಡಿಕೊಂಡು ಬರೋಣ್ವಾ?”
“ಅಯ್ಯೊ ನಡಿ ಮಾರಾಯಾ. ಮೊದ್ಲೂ ಕಾಫಿ ಕುಡಿ” ಎಂದು ಹೆಂಡತಿ ಗೀತಾ ತಂದ ಕಾಫಿ ತಾನೊಂದು ಅವನಿಗೊಂದು ಕೊಡುತ್ತಾ. ಕಾಫಿ ಕುಡಿದು ಬೆಮೆಲ್ ಗೆಸ್ಟಹೌಸಿನ ಒಂದು ಮೂಲೆಯಲ್ಲಿ, ಸ್ವಲ್ಪು ಕತ್ತಲೆ ಇರುವ ಕಡೆ ಇಬ್ಬರೇ ಕೂತರು. ಡಾ|| ಪರಮೇಶ್ವರ ಅವರಿಗೆ ಅನಂತುವಿನ ಜೀವನದ ಎಲ್ಲಾ ವಿಚಾರಗಳೂ ಗೊತ್ತಿತ್ತು. ಬಡತನದಲ್ಲಿ ತನ್ನ ಮಕ್ಕಳನ್ನು ಕಷ್ಟ ಪಟ್ಟು ಬೆಳೆಸಿದ ವನಜಾಕ್ಷಮ್ಮನವರ ವಿಚಾರ ಲಹರಿ ಗೊತ್ತಿತ್ತು. ಆಗ ಬಡತನದ ಕಷ್ಟ ಅನುಭವಿಸಿದ್ದು ಸಾಕು. ಈಗಲಾದರೂ ದುಡ್ಡಿನ ವಿಷಯದಲ್ಲಿ ತೊಂದರೆ ಬೇಡ. ಅನಂತು ಆ ಚಿಂತಾಮಣಿ ಹುಡುಗಿಯನ್ನು ಮದುವೆ ಆಗಿದ್ರೇ ಸಾಕಷ್ಟು ದುಡ್ಡು ಬಂದಿರುವುದು. ಅನಂತು ಆ ಹುಡುಗಿಯನ್ನು ಬಿಟ್ಟು ಈ ಪದ್ಮಜಾ ಅವಳನ್ನು ಮದುವೆ ಆದದ್ದರಿಂದ ಅಮ್ಮ ಮನೆಯಲ್ಲಿ ಕಿರಿಕಿರಿ ಮಾಡ್ತಾ ಇದ್ದಾರೆ ಅಂತ ಗೊತ್ತಿತ್ತು, ಆದರೆ ಈ ಕಿರಿಕಿರಿ ಈ ಮಟ್ಟಕ್ಕೆ ಹೊಗುತ್ತೆ ಅಂತ ಅಂದು ಕೊಂಡಿರಲಿಲ್ಲ.

“ಅಣ್ಣಾ ಏನಾದರೂ ಮಾಡಿ ಈ ಕಿರಿಕಿರಿಯಿಂದ ಪಾರು ಮಾಡು” ಅನಂತು ಕೈ ಮುಗಿದು ಕೇಳಿಕೊಂಡ.
“ಏ ಬಿಡು ಮಾರಾಯಾ. ಎಲ್ಲಾ ಕಷ್ಟಕ್ಕೂ ಒಂದು ದಾರಿ ಇರುತ್ತದೆ. ಆಯ್ತು, ಈ ಭಾನುವಾರ ಏನು ಪ್ರೋಗ್ರಾಂ? ಅತ್ತಿಗೆ ಕೈಯಿಂದ ದಾವಣಗೆರೆ ಬೆಣ್ಣೆ ತಿನ್ನಲು ನಮ್ಮ ಫೂಲ್ ಫ್ಯಾಮಿಲಿ ನಿಮ್ಮ ಮನೆಗೆ ಲಗ್ಗೆ ಇಕ್ಕುತ್ತೆ ಅಂತ ಹೇಳು. ಸರಿನಾ? ಇನ್ನಾದರೂ ನಗು ಮಾರಾಯಾ.”

-3-
ಭಾನುವಾರ ಬೆಳಿಗ್ಗೆ 8ಗಂಟೆಗೆ ಕಾಲಿಂಗ್ ಬೆಲ್ ಭಾರಿಸಿದಾಗ ಅಲ್ಲಿಯೇ ಹತ್ತಿರದಲ್ಲಿ ಕುಳಿತಿದ್ದ ವನಜಾಕ್ಷಮ್ಮನವರು ಎದ್ದು ಬಾಗಿಲು ತೆರೆದು “ ಬಾಪ್ಪಾ ಪರಮೇಶು. ಏನು ಬಹಳ ಅಪರೂಪ? ಊರಲ್ಲಿ ಇದ್ದಿಯೋ ಇಲ್ಲವೋ? ಏ ಅನಂತು ಯಾರು ಬಂದಿದ್ದಾರೆ ನೋಡು? ಬಾ. ಮನೆಲಿ ಎಲ್ಲಾ ಆರೋಗ್ಯನಾ? ಎಲ್ಲಿ ಗೀತಾ ಬರ್ಲಿಲ್ಲವಾ?”
“ಅಮ್ಮಾ ನಿಮ್ಮ ಆಶಿರ್ವಾದ. ನಿಮ್ಮ ಮನೆಗೆ ಗೀತಾನ್ನ ಬಿಟ್ಟು ಬರ್ತೆನಾ? ಅಂದ ಹಾಗೆ ನೀವು ಹೇಗೆ ಇದ್ದಿರಿ?”
“ ಹೂಂ ಇದ್ದೆನೆ ಭೂಮಿಗೆ ಭಾರವಾಗಿ. ನಮ್ಮಂಥವರು ಬದುಕಿರಬಾರದಪ್ಪಾ? ನಮ್ಮಿಂದ ಎಲ್ಲರಿಗೂ ತೊಂದರೆ. ದೇವರು ನಮಗೆ ಬೇಗ ಮೇಲೆ ಕರೆದು ಕೊಂಡರೆ ಚಂದ..”

“ಬಿಡ್ತು ಅನ್ನಿ ಅಮ್ಮ. ನಿಮ್ಮಂಥವರು ನೂರುಕಾಲ ಬದುಕ ಬೇಕು. ನೀವೇ ಅಲ್ವೇ ನಮಗೆಲ್ಲ ದಾರಿ ತೋರಿಸಬೇಕು?” ಡಾಕ್ಟರು ಹೇಳಿದ ಮಾತಿಗೆ ವನಜಾಕ್ಷಮ್ಮನವರ ಮುಖ ಅರಳಿತು.
“ ಹೂಂ ಇರಲಿ ಬಿಡಪ್ಪ ಮೊದಲು ತಿಂಡಿ ತಿನ್ನು ಬಾ” ಅಷ್ಟರಲ್ಲಿ ಗೀತಾ ಎಲ್ಲರಿಗೂ ಬಿಸಿ ಬಿಸಿಯಾದ ಬೆಣ್ಣೆ ದೋಸೆ ತಂದು ಬಡಿಸಲು ಆರಂಬಿಸಿದಳು. “ಬನ್ನಿ ದೋಸೆ ಬಿಸಿ ಬಿಸಿ ಇರುವಾಗಲೇ ತಿಂದ್ರೆ ಚಂದ. ಅಮ್ಮ ನೀವೂ ಬನ್ನಿ , ಏ ಅನಿತಾ ನೀ ಅಜ್ಜಿನ ಕರೆದು ಇಲ್ಲಿ ಕೂಡಿಸು. ನೀನು ದಕ್ಷ ಇಬ್ಬರು ಅಡಿಗೆ ಮನೆಗೆ ಬನ್ನಿ ನಿಮಗೆ ಅಲ್ಲಿಯೇ ಬಡಿಸುತ್ತೆನೆ. ಅನಂತಣ್ಣ ಇಗಾ ನಿಮ್ಮ ತಟ್ಟೆ. ರೀ ನೀವು ತಟ್ಟೆ ತಗೊಂಡು ಈಕಡೆ ಕೂಡಿ.” ಬೇಡ ಬೇಡ ಅನ್ನುತ್ತಾ ವನಜಾಕ್ಷಮ್ಮನವರು ಡೈನಿಂಗ್ ಟೇಬಲ್ಲಿನ ಮದ್ಯದ ಚೇರ್‍ಲ್ಲಿ ಕೂತರು. ಅನಂತು ಮತ್ತೆ ಡಾಕ್ಟರು ಎದುರು ಬದುರು ಕೂತು ರುಚಿ ರುಚಿಯಾದ ಬೆಣ್ಣೆ ದೋಸೆ ಬಾರಿಸತೊಡಗಿದರು. ಮಾತಿನ ಭರಾಟೆಯಲ್ಲಿ ಅದೇಷ್ಟು ದೋಸೆ ಖಾಲಿಯಾದವೋ ಎಣಿಸಿದವರಾರು? ಗೀತಾ ಒಳಗೆ ಮಕ್ಕಳಿಗೆ ದೋಸೆ ಬಡಿಸುತ್ತಿದ್ದಳು. ಪದ್ಮ ಬಿಸಿ ಬಿಸಿಯಾದ ದೋಸೆ ಹಿಡಿದುಕೊಂಡು ಬಂದು ಡಾಕ್ಟರ ಅವರಿಗೆ “ಅಣ್ಣಾ ಇನ್ನೊಂದು ದೋಸೆ?” ನೀಡಲು ಬಂದವಳತ್ತ ಡಾಕ್ಟರ ತಲೆ ಎತ್ತಿ ನೋಡಿದ. ಅವರಿಗೆ ಪಾಪ ಅನ್ನಿಸಿತು. 6ವರ್ಷದ ಹಿಂದೆ ಮದುವೆ ಆಗಿ ಬಂದ ಹೊಸದರಲ್ಲಿ ಹೇಗಿದ್ದವಳು ಈಗ ಹೇಗಾಗಿದ್ದಾಳೆ? ಬಳಲಿ ಬೆಂಡಗಿದ್ದಾಳೆ. ಬಡವರ ಮನೆಯಿಂದ ಬಂದವಳು ವನಜಾಕ್ಷಮ್ಮನವರ ಕಿರಿಕಿರಿ ನುಂಗಿ ‘ನೀಲಕಂಠ’ ಆಗಿದ್ದಾಳೆ. ತನ್ನ ಕಷ್ಟ ಯಾರ ಹತ್ತಿರವೂ ಹೇಳಿಕೊಳ್ಳುವ ಹಾಗಿಲ್ಲ. ಗಂಡನಿಗೆ ಹೊರಗಿನದೇ ಸಾವಿರ ಕಷ್ಟಗಳು ಇವೆ ಅದರಲ್ಲಿ ತನ್ನದೂ ಸೇರಿಸಿದರೆ ಅವರಿಗೆ ತೊಂದರೆ ಜಾಸ್ತಿ. ತೌರಲ್ಲಿ ಅವರದ್ದೇ ಹಾಸಿ ಹೊದ್ದುಕೊಳ್ಳುವಷ್ಟಿದ್ದಾಗ ತಾನು ಹೋಗಿ ಗೋಳು ಹೇಳಿಕೊಂಡರೆ ಅವರಾದರೂ ಏನು ಮಾಡಿಯಾರು? ತನ್ನ ಕಷ್ಟ ತಾನೇ ನುಂಗಿ ನುಂಗಿ ಒಣಗಿ ಹೊಗಿದ್ದಾಳೆ ಅನ್ನಿಸಿತು. ಇದಕ್ಕೆ ಏನಾದರೂ ದಾರಿ ಮಾಡಬೇಕು ಎನ್ನಿಸಿತು. ಮನಸ್ಸಿನಲ್ಲಿಯೇ ಎಲ್ಲಾ ಲೆಕ್ಕಾಚಾರ ಮಾಡಿಕೊಂಡರು.

“ ಅಮ್ಮ ಅಂದ ಹಾಗೆ ಈಗ ನಿಮ್ಮ ಬಿಪಿ ಹೇಗೆ ಇದೆ?”
“ಅಯ್ಯೋ ಅದೆಲ್ಲಿ ಕಮ್ಮಿ ಆಗುತ್ತೆ? ಇಂಥಹ ಮನೆಯಲ್ಲಿದ್ರೆ ಬಿಪಿ ಹಾಡು ಹೇಳುತ್ತೆ ಪಿಬಿ ಶ್ರೀನಿವಾಸರ ಹಾಗೆ. ಎಲ್ಲಾ ನನ್ನ ಕರ್ಮ”
“ಅಮ್ಮ ತಿಂಡಿ ತಿಂದದ್ದು ಆಗಿದ್ರೆ ಒಂದು ಸಲ ಟೆಸ್ಟ ಮಾಡಲಾ?”
“ಅಯ್ಯೋ ಮಾಡು ತಂದೆ. ನನ್ನಂಥ ಮುದಿ ಗೂಬೆಗೆ ಕೇಳೊಕೆ ಅಂತ ನೀನಾದ್ರು ಒಬ್ಬ ಇದ್ದಿಯಲ್ಲ, ಸಾಕು. ಆಯ್ತು ಕೈ ತೊಳೆದು ಬರ್ತೇನೆ. ಅದೇನು ಮಾಡ್ತಿಯೊ ಮಾಡು.” ಎನ್ನುತ್ತಾ ಕೈ ತೊಳೆಯಲು ಸಿಂಕ್ ಕಡೆ ಹೊರಟರು.

“ಅನಂತು ನಿನ್ನದೂ ತಿಂಡಿ ಆಗಿದ್ದರೆ ನನ್ನ ಜೋತೆ ಬಾ” ಎಂದು ತಾವು ಕೈ ತೊಳೆದು ತಂದಿದ್ದ ತಮ್ಮ ಮೆಡಿಕಲ್ ಕಿಟ್ ನ್ನು ಹಿಡಿದು ವನಜಾಕ್ಷಮ್ಮನವರ ರೂಂ ಕಡೆಗೆ ನಡೆದರು.
“ಅಮ್ಮ ಎಲ್ಲಿ ಸ್ವಲ್ಪು ಕೈ ಟೇಬಲ್ ಮೇಲೆ ಇಡಿ” ಎನ್ನುತ್ತಾ ಬಿಪಿ ಮಿಟರ್ ನ್ನು ವನಜಾಕ್ಷಮ್ಮನವರ ಕೈಗೆ ಅಳವಡಿಸಿ ಬಿಪಿ ಚೆಕ್ ಮಾಡಿದರು. ಬಿಪಿ ಸ್ವಲ್ಪು ಜಾಸ್ತಿ ಇತ್ತು.
“ಅಮ್ಮ ಸ್ವಲ್ಪು ಮಲಗಿ” ಎಂದು ಮಲಗಿದ ವನಜಾಕ್ಷಮ್ಮನವರ ಕಣ್ಣ ಮೇಲೆ ಕೈ ಇಟ್ಟು ನಿಧಾನವಾಗಿ ಸನ್ಮೋಹನ ಮಾಡಲು ತೊಡಗಿದರು “ಅಮ್ಮ ನಿಧಾನವಾಗಿ ಉಸಿರಾಡಿಸಿ…….ನಿಮಗೆ ನಾನು ಹೇಳಿದ ಮಾತು ಮಾತ್ರ ಕೇಳಿಸಿತ್ತಿದೆ…… ಬೇರೆ ಏನೂ ಕೇಳಿಸುತ್ತಾ ಇಲ್ಲ……. ಈಗ ನಿಮ್ಮ ರೆಪ್ಪೆಗಳು ಭಾರವಾಗುತ್ತಾ ಇವೆ. ……ನಿಮಗೆ ನಿಧಾನವಾಗಿ ನಿದ್ದೆ ಬರ್ತಾ ಇದೆ……… ಈಗ ನೀವು ಆಳಕ್ಕೆ…..ಆಳಕ್ಕೆ ಇಳಿತಾ ಇದ್ದಿರಾ……ಈಗ ನೀವು ನಿಮ್ಮ ಒಳ ಮನಸ್ಸಿನಲ್ಲಿ ನಿಂತಿದ್ದಿರಿ…….ಈಗ ಹೇಳಿ ಪದ್ಮಜಾ ನಿಮ್ಮ ಮಗನ ಹೆಂಡತಿ ಅಲ್ವಾ?” ಕಣ್ಣು ಮುಚ್ಚಿದ್ದ ವನಜಾಕ್ಷಮ್ಮನವರು ಹೌದು ಎನ್ನುವಂತೆ ತಲೆ ಆಡಿಸಿದರು.

“ ಅಮ್ಮ ಈಗ ನೀವು ಒಳ ಮನಸ್ಸಿನಲ್ಲಿ ಇದ್ದಿರಿ. ಹೇಳಿ ಪದ್ಮಜ ನಿಮಗೆ ಇಷ್ಟನಾ?” ‘ಇಲ್ಲ’ ಎನ್ನುವಂತೆ ವನಜಾಕ್ಷಮ್ಮನವರು ಅಡ್ಡಡ್ಡ ತಲೆ ಅಲ್ಲಾಡಿಸಿದರು. “ಏಕೆ?” ಡಾಕ್ಟರು ತದೇಕ ಚಿತ್ತದಿಂದ ವನಜಾಕ್ಷಮ್ಮನವರನ್ನು ನೋಡುತ್ತಾ ಕಿವಿಯ ಹತ್ತಿರ ಬಂದು ಕೇಳಿದರು.
ವನಜಾಕ್ಷಮ್ಮನವರು ಮಾತಾಡಲಿಲ್ಲ, ನಿಶ್ಚಲವಾಗಿ ಮಲಗಿದ್ದರು. ಡಾಕ್ಟರು ಇನ್ನೊಂದು ಸಲ “ಅಮ್ಮ ನಿಮ್ಮ ಸೊಸೆ ಪದ್ಮಜಾಳನ್ನು ಕಂಡರೆ ನಿಮಗೆ ಏಕೆ ಬೇಜಾರು?” ವನಜಾಕ್ಷಮ್ಮನವರ ತುಟಿ ಸ್ವಲ್ಪು ಚಲಿಸಿತು. ಅಸ್ಪಷ್ಟವಾಗಿ “ಅವಳು ನನ್ನ ಸೊಸೆ ಅಲ್ಲ. ಅವಳನ್ನು ಮದುವೆಯಾದ್ದರಿಂದ ನನ್ನ ಮಗ ದುಡ್ಡಿನ ತೊಂದರೆ ಅನುಭವಿಸುತ್ತಿದ್ದಾನೆ” ಈ ವಿಚಾರ ಡಾಕ್ಟರಿಗೆ ಮೊದಲೇ ಗೊತ್ತಿತ್ತು. ಅವರು ವನಜಾಕ್ಷಮ್ಮನವರನ್ನು ಅವರ ಒಳ ಮನಸ್ಸಿನ ಆ ಭಾಗದಲ್ಲಿ ನಿಲ್ಲಿಸಿ ಅದನ್ನು ರಿಪೇರಿ ಮಾಡಬೇಕಿತ್ತು.

“ಅಮ್ಮ ಈಗ ನೀವು ಗಾಢ ನಿದ್ದೆಯಲ್ಲಿ ಇದ್ದಿರಾ. ನಿಮಗೆ ನನ್ನ ಮಾತು ಬಿಟ್ಟರೆ ಬೇರೆ ಏನೂ ಕೇಳಿಸುತ್ತಿಲ್ಲ…. ಅಮ್ಮ ನಿಮ್ಮ ಹಳೆಯ ಆ ಬಡತನದ ದಿನಗಳನ್ನು ಜ್ಞಾಪಿಸಿಕೊಳ್ಳಿ. ನಿಮಗೆ ಯಾವ ಸಂಬಂದಿಕರೂ ಹತ್ತಿರ ಸೇರಿಸಿಕೊಳ್ಳಲಿಲ್ಲ. ಸಂಬಂದಿಕರು ಬಿಡಿ ಬಡತನದಿಂದಾಗಿ ಯಾರೂ ಹೆಣ್ಣು ಕೊಡಲು ಮುಂದೆ ಬರಲಿಲ್ಲ. ದೇವರ ದಯೆ ನಿಮ್ಮ ಮೇಲೆ ಇತ್ತು ಬೆಮೆಲ್ ನಂಥ ಕಾರ್ಖಾನೆಯಲ್ಲಿ ಯಾವ ವಸಿಲಿಯೂ ಇಲ್ಲದೇ ನಿಮ್ಮ ಮಗನಿಗೆ ಕೆಲಸ ಸಿಕ್ಕಿತು. ಬೆಮೆಲ್ ನಲ್ಲಿ ಕೆಲಸ ಸಿಕ್ಕಮೇಲೆ ಎಲ್ಲ ಸಂಬಂದಿಗಳು ಹೆಣ್ಣು ಕೊಡಲು ಓಡಿ ಓಡಿ ಬಂದರು. ಕಷ್ಟದಲ್ಲಿ ಇದ್ದಾಗ ಹನಿ ನೀರು ಕೊಡದವರ ನೆರಳೂ ಬೇಡ ಅಂತ ನಿಮ್ಮ ಮಗ ಬಡ ಆದರು ಒಳ್ಳೆ ಹುಡುಗಿಯನ್ನ ಮದುವೆ ಆದದ್ದು. ಈಗ ನಿಮ್ಮ ಮಗ ಅಲ್ಲಿ ಬಡ್ತಿ ಪಡೆದು ಮ್ಯಾನೇಜರ್ ಆಗಿದ್ದಾನೆ. ಅಮ್ಮ ನಿಮ್ಮ ಸೊಸೆ ತನ್ನ ತವರಿಂದಲೇ ದುಡ್ಡು ತರಬೇಕು ಅಂತ ಇಲ್ಲ. ಅವಳ ಒಳ್ಳೆಯ ಕಾಲು ಗುಣದಿಂದ ನಿಮ್ಮ ಮನೆಗೆ ಒಳ್ಳೆಯದಾದರೂ ಅದು ಅವಳು ತಂದದ್ದೆ ಅಲ್ವೇ?” ಡಾಕ್ಟರ ಪರಮೇಶ್ವರ ಅವರು ಒಂದೊಂದೆ ಮಾತುಗಳನ್ನು ವನಜಾಕ್ಷಮ್ಮನವರ ಮನಸ್ಸಿನ ಮೇಲೆ ಏನು ಪರಿಣಾಮ ಬೀರುತ್ತಿದೆ ಎನ್ನುವುದನ್ನು ಸೂಕ್ಷವಾಗಿ ಗಮನಿಸುತ್ತಿದ್ದರು. “ಅಮ್ಮ ನೀವೀಗ ಗಾಢ ನಿದ್ದೆಯಲ್ಲಿ ಇದ್ದಿರಾ. ನೀವೀಗ ನಿಮ್ಮ ಒಳ ಮನಸ್ಸಿನಲ್ಲಿ ನಿಂತಿದ್ದಿರಿ. ಒಮ್ಮೆ ಜ್ಞಾಪಿಸಿಕೊಳ್ಳಿ ಎಂದಾದರೂ ನಿಮ್ಮ ಪದ್ಮಜಾ ಏನಾದರೂ ತೊಂದರೆ ಕೊಟ್ಟಿದ್ದಾರಾ? ಎದುರು ಉತ್ತರ ಕೊಟ್ಟಿದ್ದಾರಾ? ಅಮ್ಮ ಪದ್ಮಜಾ ಅವರಿಗೆ ನಿಮ್ಮ ಬಗ್ಗೆ ತುಂಬಾ ಪ್ರೀತಿ ಇದೆ. ನೀವು ಅವರನ್ನು ಅಂಥಹ ಬಡತನದ ಮನೆಯಿಂದ ಕರೆದುಕೊಂಡು ಬಂದದ್ದಕ್ಕೆ ನಿಮಗೆ ಒಳ್ಳೆಯದಾಗಲಿ ಎಂದು ‘ಸೊಳಾ ಸೋಮವಾರ ವೃತ’ ಮಾಡಿದ್ದು ಜ್ಞಾಪಿಸಿಕೊಳ್ಳಿ. ನೀವು ತುಂಬಾ ಒಳ್ಳೆಯರು ಇದ್ದಿರಾ. ನೀವು ನಿಮ್ಮ ಸೊಸೆ ಪದ್ಮಜಾ ಅವರನ್ನು ಪ್ರೀತಿಸುತ್ತಿರಿ. ಇನ್ನು ಮುಂದೆ ಅವರನ್ನು ಕಂಡರೆ ಬೇಜಾರು ಪಡಬೇಡಿ.” ಮತ್ತೆ ತಮ್ಮ ಕೈಯನ್ನು ವನಜಾಕ್ಷಮ್ಮನವರ ಕಣ್ಣ ಮೇಲೆ ಇಟ್ಟು “ ಅಮ್ಮ ಈಗ ನಿಧಾನವಾಗಿ ಉಸಿರಾಡಿರಿ. ನಿಮ್ಮ ಕಣ್ಣ ರೆಪ್ಪೆಯ ಭಾರ ಕಡಿಮೆಯಾಗುತ್ತಿದೆ. ನಿವು ನಿಧಾನವಾಗಿ ನಿದ್ದೆಯಿಂದ ಎಚ್ಚರವಾಗುತ್ತಿರಿ. ನಿಧಾನವಾಗಿ ಎಚ್ಚರವಾಗಿ…. ನಿಧಾನವಾಗಿ ಎಚ್ಚರವಾಗಿ” ವನಜಾಕ್ಷಮ್ಮನವರು ನಿಧಾನವಾಗಿ ಕಣ್ಣು ಬಿಟ್ಟರು.

ಇದಾಗಿ 3 ತಿಂಗಳಾಯಿತು. ಈಚೆಗೆ ವನಜಾಕ್ಷಮ್ಮನವರ ನಡೆಯಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಅವರ ಕೂಗಾಟ ತುಂಬಾ ಕಡಿಮೆಯಾಗಿದೆ.

-ಮಲ್ಲಪ್ಪ ಎಸ್.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x