ಪದ್ದಕ್ಕಜ್ಜಿಯ ಅಂತಾಕ್ಷರಿ: ವೃಂದಾ. ಸಂಗಮ

ನಮ್ಮ ಪದ್ದಕ್ಕಜ್ಜಿ ನಿಮಗೆಲ್ಲಾ ಗೊತ್ತೇ ಇದೆಯಲ್ವಾ ? ಗೊತ್ತಿದ್ದೇ ಇರತ್ತೆ. ಅವರು ಇಡೀ ಊರಲ್ಲೇ ವರ್ಲ್ಡ ಫೇಮಸ್ಸು. ಅವರು ಇವತ್ತು ತಿಂಡಿಗೆ ಒತ್ತು ಶಾವಿಗೆ ಮಾಡಿದ್ದರು. ಅಲ್ಲರೀ, ಅದೇನೋ ಅಂತಾಕ್ಷರಿ ಅಂದು ಬಿಟ್ಟು, ಇದೇನು ತಿಂಡಿ ಬಗ್ಗೆ ಹೇಳ್ತಿದೀರಲ್ಲ, ಅಂತಿದೀರಾ ? ಪೂರ್ತಿ ಕೇಳಿಸಕೊಳ್ಳಿ. ಅಲ್ಲೇ ಇರೋದು ಮಜಾ, ಒತ್ತು ಶಾವಿಗೆಯ ಖಾರದ ತಿಂಡಿ ಹಾಗೂ ಅದಕ್ಕೆ ಸಿಹಿಯಾಗಿ ಗಸಗಸೆ ಪಾಯ್ಸ. ನಮ್ಮ ರಾಯರು, ಅದೇ ನಮ್ಮ ಪದ್ದಕ್ಕಜ್ಜಿ ಗಂಡ, ನಿಮಗೆ ಗೊತ್ತೇ ಇದೆಯಲ್ಲ, ನಾನು ಬೇರೆ ಅವರ ಬಗ್ಗೆ ಹೇಳೋದೇನಿದೆ. ಅವರೇ, ಜೊತೆಯಾಗಿ ಮೂರು ಬಟ್ಟಲು ಪಾಯ್ಸ ಕುಡಿದವರೇ, ಎರಡು ಪ್ಲೇಟ್ ಖಾರದ ಶಾವಿಗೆ, ಮತ್ತೆ ಒಂದು ಪ್ಲೇಟ್ ಗಸಗಸೆ ಪಾಯಸ ಒತ್ತು ಶಾವಿಗೆ ಹಾಕಿಕೊಂಡು ತಿಂದರು. ಅಬ್ssss ಎನ್ನುತ್ತ ಹೈ ಬಿ ಪಿ ಗಾಗಿ ಎರಡು ಮಾತ್ರೆ ನುಂಗಿ, ಹೊರಗಡೆ ಪಡಸಾಲೆಯಲ್ಲಿ, ಈಸಿ ಚೇರ್ ಮೇಲೆ ಕಾಲು ಚಾಚಿ ಕೊಂಡು, ಕೈಯಲ್ಲಿ ಪೇಪರ್ ಹಿಡಿದುಕೊಂಡು, ಎರಡು ಮುಖ್ಯ ಸುದ್ದಿ ಓದುವುದರೊಳಗಾಗಿ, ಹೊಟ್ಟೆಯಲ್ಲಿನ ಗಸಗಸೆ ಪಾಯಸದ ಪ್ರಭಾವದಿಂದಾಗಿ, ಕೈಯಲ್ಲಿನ ಇಡೀ ಪೇಪರ್ ಕೆಳಗಡೆ ಜಾರಿ, ತಂಪಾದ ಗಾಳಿಗೆ ಮುಖವೊಡ್ಡಿ, ಸಣ್ಣಗೆ ಗೊರಕೆ ಹೊಡಿಯ ತೊಡಗಿದರು ನಮ್ ರಾಯರು.

ಇತ್ತ, ಅಡುಗೆ ಮನೆಯಲ್ಲಿ, ಒತ್ತು ಶಾವಿಗೆಯ ರಂಪ ತೆಗೆದ ನಮ್ಮ ಪದ್ದಕ್ಕಜ್ಜಿ ಫ್ರಿಜ್ ಕ್ಲೀನ್ ಮಾಡೋಣವೆಂದು ಅದರ ಮುಂದೆ ಕುಳಿತರು, ಮೊದಲು ಕೈಯಲ್ಲಿ, ಅಂದು ದೇವರಿಗೆ ಮುಡಿಸಿ ಉಳಿದ ಮಲ್ಲಿಗೆ ದಂಡೆಯನ್ನು ತೆಗೆದರು. ನಿಧಾನವಾಗಿ ಆಘ್ರಾಣಿಸಿ, ತಮ್ಮ ತುರುಬಿಗೇರಿಸಿದರು. ನಮ್ಮ ಪದ್ದಕ್ಕಜ್ಜಿ ಮನೇಲಿದ್ದಾರೆಂದರೆ ಅವರ ಬಾಯಿ ಸುಮ್ಮನಿರುವುದಿಲ್ಲ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಯಾವುದಾದರೊಂದು ಹಾಡನ್ನು ಗುನುಗುತ್ತಲೇ ಇರುತ್ತಾರೆ. ಅದು ದೇವರ ನಾಮವಾಗಿರಬಹುದು. ಭಾವ ಗೀತೆ, ಜಾನಪದ ಗೀತೆ. ಚಿತ್ರ ಗೀತೆ ಯಾವುದೂ ಆಗಿರಬಹುದು. ಸಾಮಾನ್ಯವಾಗಿ, ಬೆಳಿಗ್ಗೆ ಎದ್ದಾಗಿನಿಂದ ತಿಂಡಿಯವರೆಗೆ ಯಾವುದಾದರೂ ಉದಯ ರಾಗಗಳನ್ನು ಹಾಡುತ್ತಿರುತ್ತಾರೆ. ತಿಂಡಿ ತಿಂದ ನಂತರ ಮಾತ್ರ ಅದಕ್ಕೆ ಯಾವುದೇ ಗೊತ್ತು ಗುರಿಯಿಲ್ಲದ ಹಾಡುಗಳು. ಅದು ಜಾನಪದ ಗೀತೆಯಿಂದ ಪ್ರಾರಂಭವಾಗಿ, ಚಿತ್ರ ಗೀತೆಯಲ್ಲಿ ಸುತ್ತಿ, ಭಾವ ಗೀತೆಯಲ್ಲಿ ಮುಳುಗಿ, ಭಕ್ತಿ ಗೀತೆಯಲ್ಲಿ ಮುಗಿಯುವ ಸಂಭವವೇ ಹೆಚ್ಚು. ಮತ್ತೆ ತುಂಬಾ ಉತ್ಸಾಹವಿದ್ದಾಗ, ಆ ಹಾಡಿನ ಬೀಜಿಯಂ ಅಂದರೆ ಹಿನ್ನೆಲೆ ವಾದ್ಯಗಳು ಹಾಗೂ ಹಮ್ಮಿಂಗ್ಸ ಕೂಡಾ ಹಾಡುತ್ತಾರೆ. ಅದರ ಜೊತೆಗೆ, ಕೈಯಲ್ಲಿರುವ ಲಟ್ಟಣಿಗೆಯೋ, ಲೋಟವೇ ಹಿಡಿದು ತಾಳ ಹಾಕುತ್ತಲೋ ನಾದ ಹೊರಡಿಸುತ್ತಲೋ ಆ ಹಾಡಿನ ವಾದ್ಯ ಸಹಕಾರವನ್ನೂ ತಾವೇ ನೀಡುತ್ತಾರೆ. ಕೆಲವೊಮ್ಮೆ ಹಾಡಿಗೆ ನರ್ತಿಸುವುದೂ ಉಂಟು. ಅಲ್ಲೇ ನಿಂತಲ್ಲೇ ಕೈ ಕಾಲು ಆಡಿಸುವುದೋ, ಸೊಂಟ ತಿರುಗಿಸುವುದರ ಮೂಲಕವೇ ತಮ್ಮ ಅಭಿನಯವನ್ನೂ ನೃತ್ಯವನ್ನೂ ತೋರಿಸುತ್ತಾರೆ. ಹೆಚ್ಚಿನ ಬಾರಿ, ಅವರ ಹಾಡು ಆಡಿಸಿ ನೋಡು ದಿಂದ ಪ್ರಾರಂಭವಾಗಿ, ಅದೇ ಚಿತ್ರದ, ಆಡೋಣ ನಾನು ನೀನು, ನಂತರ ಅದೇ ನಾಯಕರ ಆಗದು ಎಂದು ಕೈಲಾಗದು ಎಂದು ಈ ಹಾಡು ಮುಗಿಯುವಷ್ಟರಲ್ಲಿ, ಇನ್ನೊಬ್ಬ ನಾಯಕ, ಇನ್ನೊಂದು ಚಿತ್ರ ನೆನಪಾಗಿ, ವಿರಸವೆಂಬ ವಿಷಕೆ ಬಲಿಯಾದೆ ಏತಕೆ, ಅದೇ ವಿಷಾದದಲ್ಲಿ, ಬಾಡಿ ಹೋದ ಬಳ್ಳಿಯಿಂದ, ಅದೇ ಭಾವದ ವಚನ, ನೆಲ ಹತ್ತಿ ಉರಿದರೆ, ಮುಂದೆ ಇನ್ನೊಂದು ವಚನ, ಚಂದನವ ಕಡಿದು ಕೊರೆದು ತೇದೊಡೆ, ಆಗ ನೆನಪಾಗಿದ್ದು ಕಿತ್ತೂರು ಚನ್ನಮ್ಮನ ತನು ಕರಗದವರಲ್ಲಿ, ಮುಂದೆ ಬಂದಿದ್ದು ದಾಸರ ಪದ ನಾನೇನು ಮಾಡಿದೆನೋ, ನಾನೇಕೆ ಬಡವನು, ಈ ದೇವ ಸಮರ್ಪಣೆಯಲ್ಲಿಯೇ ಸಮಾಧಾನ ನೀಡುವುದು ಜಾನಪದ ಗೀತೆ, ಸುಖಾ ಎಲ್ಲಾರಿಗೆಲ್ಲೈತವ್ವ ಎಂದು ಸುತ್ತುತ್ತದೆ. ಅದಕ್ಕೆ ಒಂದು ರಾಗದ ಮೂಲ, ಒಂದು ತಾಳದ ಕಾಲ, ಒಂದು ವಿಷಯವೆಂಬ ಹಂಗಿಲ್ಲ. ಅದು ಸರ್ವತಂತ್ರ ಸ್ವತಂತ್ರ. ಅದು ಕೇವಲ ನಮ್ಮ ಪದ್ದಕ್ಕಜ್ಜಿಯ ಮೂಡಿನ ಮೇಲೆ ಅವಲಂಬಿಸಿರುತ್ತದೆ. ಮದುವೆಯಾದ ಮೊದ ಮೊದಲು, ನಮ್ಮ ರಾಯರೂ ಕೆಲವೊಮ್ಮೆ ನಮ್ಮ ಪದ್ದಕ್ಕಜ್ಜಿಯ ಹಾಡಿಗೆ ತಕ್ಕ ಉತ್ತರವನ್ನು ಹಾಡಿನಲ್ಲಿಯೇ ನೀಡುತ್ತ ಜುಗಲ್ಬಂದಿ ಮಾಡುತ್ತಿದ್ದರು.

ಇಂದೂ ಕೂಡಾ ಕೈಯಲ್ಲಿ ಮಲ್ಲಿಗೆಯ ದಂಡೆಯನ್ನು ಹಿಡಿದ ತಕ್ಷಣ ರಾಜಕುಮಾರ್ ಲಕ್ಷ್ಮಿ ಅಭಿನಯದ ನಾ ನಿನ್ನ ಮರೆಯಲಾರೆ ಹಾಡಿನಲ್ಲಿ ಲಕ್ಷ್ಮಿ ಮುಡಿದು ಕೊಂಡಿದ್ದ ಗುಲಾಬಿ ದಂಡೆ ನೆನಪಿಗೆ ಬಂದು, ಹಾಡಿನ ಸರಮಾಲೆ ಶುರುವಾಯಿತು. ‘ ಸಂಗೀತವೇ, ನೀ ನುಡಿಯುವ ಮಾತೆಲ್ಲ. ಸಲ್ಲಾಪವೇ ನೀ ಎಲ್ಲಿರೆ ಅಲ್ಲೆಲ್ಲ. ಸಂತೋಷವೇ ನೀ ಜೊತೆಯಿರೆ ಬಾಳೆಲ್ಲ. ಸಂಗೀತವೇ ಅಹಾ! ಅಹಾ! ‘ ಎನ್ನುವುದರೊಳಗಾಗಿ, ಹೊರಗೆ ಪಡಸಾಲೆಯಿಂದ, ‘ಆಹಾ! ಮೈಸೂರು ಮಲ್ಲಿಗೆ, ದುಂಡು ಮಲ್ಲಿಗೆ, ನನ್ನಾ…. ಒಲವಿನ ಸಿರಿಯಾಗಿ, ಅರಳುತ ಚೆಲುವಾಗಿ, ಮನಸಲಿ ನೀನೇ ತುಂಬಿರುವೆ, ಮನಸಲಿ ನೀನೇ ತುಂಬಿರುವೆ…. ‘ ಎಂದು ರಾಯರ ಧ್ವನಿ ಕೇಳಿಸಿತು. ರಾಯರ ರಸಿಕತೆಯನ್ನು ಇಂದು ಗಸಗಸೆ ಪಾಯಸ ತಿರುಗಿಸಿರಬೇಕು ಎಂದು ಕೊಳ್ಳುತ್ತ, ಈ ಹಾಡಿಗೆ ಸರಿಯಾದ ಉತ್ತರ ಹೇಳದೇ ಬಿಡುವರುಂಟೇ? ಎಂದುಕೊಂಡು, ವ ಬಂದಿತ್ತಲ್ವ ವ ಏನು ಒ ಏನು ಎಲ್ಲಾ ಒಂದೇ ಎಂದವರೇ… ‘ ಒಲವಿನ ಉಡುಗೊರೆ ಕೊಡಲೇನು…, ರಕುತದೆ ಬರೆದೆನು ಇದ ನಾನು….., ಒಲವಿನ ಉಡುಗೊರೆ ಕೊಡಲೇನು, ರಕುತದೆ ಬರೆದೆನು ಇದ ನಾನು, ಹೃದಯವೇ ಇದಾ….. ಮಿಡಿದಿದೆ, ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ, ಒಲವಿನ ಉಡುಗೊರೆ ಕೊಡಲೇನು….. ‘ ಎಂದು ರಾಗವಾಗಿ ಒಲವು ತುಂಬಿ ಹಾಡಿದರು. ತಕ್ಷಣವೇ ಹೊರಗೆ ಹಾಲಿನಿಂದ, ‘ ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ, ನಕ್ಕು ನೀ ಸೆಳೆದಾಗ, ಸೋತೇ ನಾನಾಗ ಆಹಾಹಾ ಹೂಂ ಉ ಉ ‘ ಅಂತ ಹಮ್ಮಿಂಗ್ ಸಮೇತ ಹಾಡಿದ ರಾಯರ ಹಾಡನ್ನು ಕೇಳಿ ಪದ್ದಕ್ಕಜ್ಜಿಗೆ ಆಶ್ಚರ್ಯವೋ ಆಶ್ಚರ್ಯ. ನಮ್ಮ ರಾಯರಿಗೆ ಎಷ್ಟೇ ರಸಿಕತೆಯಿದ್ದರೂ ಈ ಬಿಜಿಯಂ ಹಮ್ಮಿಂಗ್ಸ, ಶುದ್ಧವಾದ ಚಿತ್ರಗೀತೆಯ ಸಾಹಿತ್ಯ ಗೊತ್ತಿರಲಿಲ್ಲ. ಅದಕ್ಕೇ ಯಾವುದೇ ಗೀತೆಯ ಸಾಹಿತ್ಯ ಬದಲಿಸಿ, ಯಾವಾಗಲೂ ಜುಗಲ್ಬಂದಿಯಲ್ಲಿ ಪದ್ದಕ್ಕಜ್ಜಿಯೇ ಗೆಲ್ಲುವುದು. ಈ ದಿನ ಬಹುಷಃ ರಾಯರಿಗೆ ಹಳೆಯ ಕಾಲದ ನೆನಪಾಗಿರಬೇಕು.

ರಾಜಕುಮಾರ್ ಮತ್ತು ಆರತಿಯನ್ನೇ ನೆನಪಿಸಿಕೊಂಡು ಹಮ್ಮಿಂಗ್ಸ ಸಮೇತ ಹಾಡಿದ್ದರು. ರಾಯರಿಗೇ ಇಷ್ಟು ಉತ್ಸಾಹವಿದ್ದಾಗ ಬಿಟ್ಟವರುಂಟೇ? ಬಿಡಲಿಲ್ಲ ಪದ್ದಕ್ಕಜ್ಜಿ, ‘ ಹಾಲು ಜೇನು ಒಂದಾದ ಹಾಗೆ, ನನ್ನಾ ನಿನ್ನಾ ಜೀವನಾ…., ನೀ ನಗುತಲಿ, ಸುಖವಾಗಿರೆ, ಆನಂದದ ಹೊನಲಾಗಿರೆ ಬಾಳೇ ಸವಿಗಾನ…., ‘ ಎಂದು ಹಾಡಿದರು. ಮುಂದೆ ರಾಯರು, ‘ ನಾ….. ಬಿಡಲಾರೆ ಎಂದೂ ನಿನ್ನ, ನೀನಾದೆ ನನ್ನೀ ಪ್ರಾಣ, ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು… ‘ ಎಂದು ತಮ್ಮ ಪ್ರೇಮ ನಿವೇದಿಸಿ ಕೊಂಡರು, ಪದ್ದಕ್ಕಜ್ಜಿಗೆ ಇದು ಹೊಸ ವಿಷಯವೇನೂ ಅಲ್ಲ. ರಾಯರ ಹೃದಯ ಸಿಂಹಾಸನದರಸಿ ತಾವೆಂಬುದು ಅವರಿಗೆ ಗೊತ್ತಿದ್ದದ್ದೇ. ಅದಕ್ಕೇ ತಕ್ಷಣವೇ, “ನಾ…. ಮೆಚ್ಚಿದ ಹುಡುಗನಿಗೆ, ಕಾಣಿಕೆ ತಂದಿರುವೇ,… ಈ…… ಪತ್ರದಿ ಬರೆದ ಪದಗಳನು ಚುಂಬಿಸಿ ಕಳಿಸಿರುವೆ, ನಾ… ಚುಂಬಿಸಿ ಕಳಿಸಿರುವೆ “ ಎಂದು ಹಾಡಿದುದಷ್ಟೇ ಅಲ್ಲ, ತಮ್ಮ ಕೈಯಿಗೇ ” ಪ್ಚ ” ಎಂದು ಮುತ್ತಿಟ್ಟರು. ಅದಕ್ಕೆ ರಾಯರು ಏನು ಉತ್ತರ ಹೇಳುತ್ತಾರೋ ಎಂಬ ಕಾತುರ ಬೇರೆ. ಅದಕ್ಕೆ ನಮ್ಮ ರಾಯರು, “ ಒಲವಿನಾ.. ಪ್ರಿಯಲತೆ.., ಅವಳದೇ ಚಿಂತೇ.., ಅವಳ ಮಾತೇ, ಮಧುರ ಗೀತೆ, ಅವಳೆ ನನ್ನ ದೇವತೇ…. ” ಎಂದು ಹಾಡಿದರು. ಆಹಾ ಎಂಥಾ ಹಾಡು. ನಮ್ಮ ಪದ್ದಕ್ಕಜ್ಜಿ ಕೂತಲ್ಲೇ ತಲೆದೂಗಿದರು, ಪರವಶರಾದರು, ಕೇವಲ ಇಂಥದೊಂದು ಭಾವನೆಯಿಂದಲೇ ತಾನು ರಾಯರಿಗೆ ಸೋತಿದ್ದು, ಅಬ್ಬಾ, ಎಂದರು. ಮನದೊಳಗಿನ ಮುಗುಳ್ನಗೆ, ಮುಖದ ಮೇಲೆಲ್ಲ ಹರಡಿತ್ತು. ” ಥೈ ಥೈ ಥೈ ಥೈ ಬಂಗಾರಿ, ಸೈಸೈ ಸೈಸೈ ಎನ್ನ ಸಿಂಗಾರಿ, ಬೆಟ್ಟದ ಮೇಲಿಂದ ಓಡೋಡಿ ಬಂದಂಥ ಕಾವೇರಿ, ಆಡಿ ನಲಿ ನಲಿ ಮಯೂರಿ. ಆಡಿ ನಲಿ ನಲಿ ಮಯೂರಿ.” ಪದ್ದಕ್ಕಜ್ಜಿ ಸೈಲೆಂಟಾಗಿರೋದನ್ನು ನೋಡಿ, ರಾಯರು ತಾವೇ “ತ” ದಲ್ಲಿ, ತಮಗಿಷ್ಟದ ಹಾಡು ಹಾಡಿದರು. ಅದನ್ನು ಕೇಳಿದ ಪದ್ದಕ್ಕಜ್ಜಿ, “ ರಾಜಾ…. ಮುದ್ದು ರಾಜಾ….., ನೂಕುವಂಥ ಕೋಪ ನನ್ನಲೇಕೆ, ಸರಸದ ವೇಳೆ ದೂರ ನಿಲ್ಲಲೇಕೆ, ನಿನಗಾಗಿ ಬಂದೆ, ಒಲವನ್ನು ತಂದೆ, ನನದೆಲ್ಲ ನಿನದೇನೆ ರಾಜಾ…, ಮುದ್ದು ರಾಜಾ……” ಎಂದು ಹಾಡಿದರು. ಈ ಹಾಡು ಕೇಳಿದಾಗ ನಿಜವಾಗಿಯೂ ರಾಯರು ಎದ್ದು ಒಳಗೆ ಬರಬೇಕಾಗಿತ್ತು.

ಆದರೆ ರಾಯರು, ಕೂತಲ್ಲಿಂದಲೇ “ ಜನ್ಮ ಜನ್ಮದಾ ಅನುಬಂಧ…, ಹೃದಯ ಹೃದಯಗಳ ಪ್ರೇಮಾನು ಬಂಧ….., ಜನ್ಮ ಜನ್ಮದಾ ಅನುಬಂಧಾ….. ” ಎಂದು ಹಾಡಿದಾಗ, ಪದ್ದಕ್ಕಜ್ಜಿಗೇಕೋ ಎಲ್ಲೋ ಇದು ತಪ್ಪಿದೆ ಎನಿಸಿತ್ತು. ಆದರೂ, ತಾವೇನೂ ಸೋಲದೇ, “‘ದೂರದ ಊರಿಂದ ಹಮ್ಮೀರ ಬಂದ, ಜರ್ತಾರಿ ಸೀರೆ ತಂದ…, ಅದರೊಳ್ಗೆ ಇಟ್ಟಿವ್ನಿ ಈ ನನ್ನ ಮನಸನ್ನು, ಜೋಪಾನ ಜಾಣೆ ಎಂದ, ಎದೆ ತಾಳ ತಪ್ಹೋಯ್ತು, ನನಗೆಲ್ಲ ಮರೆತ್ಹೋಯ್ತು, ಆ ಒಂದು ಕ್ಷಣ ನನ್ನ ಮನ ಎಲ್ಲೋ ತೇಲ್ಹೋಯ್ತು. “ ಎಂದರು. “ ತಂನಂ… ತಂನಂ…… ನನ್ನೀ ಮನಸು ಮಿಡಿಯುತಿದೇ,…. ಓ….. ಸೋತಿದೆ…, ಕೈಯಲ್ಲಿ ಕುಣಿವ, ಈ ಹೊನ್ನ ಬಳೆಯ ಘಲ್ ಘಲ್ ಘಲ್ ಘಲ್ ತಾಳಕೆ….., ನನ್ನೆದೆಯ ವೀಣೆ, ತನ್ನಂತೆ ತಾನೆ, ತಂ ನಂ ತಂ ನಂ ಎಂದಿದೆ…..” ರಾಯರು ತಕ್ಷಣದಲ್ಲೇ ಹಾಡಿದರು. ಈ ಹಾಡಿಗೂ ರಾಯರು ಎದ್ದು ಬರದೇ ಅಲ್ಲೇ ಹಾಡಿದಾಗ, ಪದ್ದಕ್ಕಜ್ಜಿಗೆ ನಿಜವಾಗಿಯೂ ಆಶ್ಚರ್ಯ, ಹಾಗೆ ನೋಡಿದರೆ, ರಾಯರು, ಪದ್ದಕ್ಕಜ್ಜಿಯನ್ನು ಹಿಂದಿನಿಂದ ಬಳಸಿ, ಅವರ ದುಂಡು ಬಿಳಿಯ ಕೈಗೆ ಒಪ್ಪುವ ಕೈ ತುಂಬಾ ಹಸಿರು ಬಳೆಯನ್ನು ಗಲಗಲಿಸದೇ ಎಂದೂ ಈ ಹಾಡನ್ನ ಹಾಡಿದ್ದೇ ಇಲ್ಲ. ಇವತ್ಯಾಕೆ ಹೀಗೆ ? ಎಂದವರೇ, ಕೋಪದಿಂದ “ ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ.., ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ…” ಎಂದು ಹಾಡಿದರು. ಈ ಹಾಡಿದಾಗ, ಹಿಂದೆಲ್ಲಾ ಅಂತಾಕ್ಷರಿಯ ನಿಯಮವನ್ನೇ ಮುರಿದು, “ ನಿಲ್ಲೇ…., ನೀ ನಲ್ಲೇ…, ಒಲ್ಲೆಯಾ, ಸರಸವನು, ಬಲ್ಲೆ ನಾ ಎಲ್ಲಾ…, ನಿಲ್ಲೇ…, ನಿಲ್ಲೇ…, ನೀನಲ್ಲೇ…” ಎನ್ನುತ್ತ, “ಒಲ್ಲೆಯಂದರೆ…, ಅರ್ಥವದೇನೆ…., ನಿಲ್ಲು ಸೂಚನೆ. ಬಾ ಎಂದೇನೆ,“ ಎನ್ನತ್ತ, “ ಒಳಗಿನ ಆಸೆ, ಹೇಳುವ ಭಾಷೆ, ಕಣ್ಣಲಿ ಮೂಡಿ…… ನಿಂತಿದೆ, ಬಾಳಿಗೆ ಅರ್ಥ ಬೇಕೆನುವಂಥ ಮೋಜದು ಮೈ….. ತುಂಬಿದೆ, ಓ ಸುಂದರಿ…” ಎಂದು ಹತ್ತಿರ ಬರುತ್ತಿದ್ದರು. ಆದರೆ, ಈ ಬಾರಿ, ನಿರ್ಭಾವುಕವಾಗಿ, ಅಲ್ಲೇ ಕೂತಲ್ಲಿಂದ ಅಂತಾಕ್ಷರಿಯ ನಿಯಮದಂತೆ ರ ದಲ್ಲಿ “ ರಂಗಿ, ನಿನ್ನ ಮೇಲೆ ನನಗೆ ಮನಸೈತೆ, ಕಣ್ತುಂಬ ನಿನ್ನ ಬೊಂಬೆ ತುಂಬೈತೆ…….” ಎಂದು ಹಾಡಿದಾಗ, ಇವರಿಗೆ ಈ ದಿನ ಏನಾಗಿದೆ ಎಂದು ಕೊಂಡು, ತಡೆಯಲಾರದೇ , ಕೆಲಸವನ್ನು ಅಲ್ಲಿಯೇ ಬಿಟ್ಟು, ಹೊರಗೆ ಬಂದು ನೋಡಿದರೆ,

ಅಲ್ಲೇನಿದೆ ? ರಾಯರು, ಪೇಪರು ಹಿಡಿದುಕೊಂಡು ಸಣ್ಣಗೆ ಗೊರಕೆ ಹೊಡೆಯುತ್ತಿದ್ದಾರೆ. ಪದ್ದಕ್ಕಜ್ಜಿಗೆ ಆಶ್ಚರ್ಯವೋ ಆಶ್ಚರ್ಯ. ಹಾಗಾದರೆ ಇದುವರೆಗೂ ಹಾಡಿದವರ್ಯಾರು ? ಎಂದುಕೊಂಡು, ಈಗ, ಹೊರಗೆ ನೋಡುತ್ತಾರೆ. ಬಾಗಿಲಲ್ಲಿ, ಎಲೆಕ್ಟ್ರಿಕ್ ಮೀಟರ್ ರೀಡರ್. ತಮ್ಮ ಮನೆಯ ಮೀಟರ್ ಬೋರ್ಡಗೆ ಹಾಕಿದ್ದ ಚಿಕ್ಕ ಬೀಗವನ್ನು ತೆಗೆಯಲು ಕಾಯುತ್ತಿದ್ದಾರೆ. “ ಅಯ್ಯೋ! ಇವರು ಮಲಗಿ ಬಿಟ್ಟಿದ್ದಾರೆ. ನಾನೂ, ನೋಡೇಯಿಲ್ಲ. ಯಾವಾಗ ಬಂದ್ರಪ್ಪ ನೀವು ? “ ಎಂದರು. ಅದಕ್ಕೆ ಅವರು, “ ಅಮ್ಮ, ನಾನು ಬಂದು ತುಂಬಾ ಹೊತ್ತಾಯ್ತು. ನಿಮ್ಮ ಮಗಳು ಹಾಡುತ್ತಿದ್ದರಲ್ಲ, ಆವಾಗಲೇ ಬಂದೆ. ನಿಮ್ಮ ಮಗಳು, ತುಂಬಾ ಚನ್ನಾಗಿ ಹಾಡ್ತಾರಮ್ಮ. ನಮ್ಮದೇ ಒಂದು ಆರ್ಕೆಸ್ಟ್ರಾ ಗುಂಪಿದೆ. ಅದರಲ್ಲಿ, ನಾನೇ ಪುರುಷ ಮುಖ್ಯ ಗಾಯಕ. ಮಹಿಳಾ ಗಾಯಕಿಯರಿಗೆ ಹುಡುಕುತ್ತಾ ಇದ್ದಿವಿ. ಈಗ ಅವರು ನನ್ನೊಂದಿಗೆ ಹಾಡಿದ್ದು ನೀವೂ ಕೇಳಿದಿರಲ್ಲಾ. ಅವರು ತುಂಬಾ ಚನ್ನಾಗಿ ಹಾಡ್ತಾರೆ. ನನ್ನೊಂದಿಗೆ ಜೊತೆ ಚನ್ನಾಗಿರುತ್ತದೆ. ನಮ್ಮ ಗುಂಪಿಗೆ ಕಳಿಸಿ. ನಾನು ಅವರನ್ನು ಜವಾಬ್ದಾರಿಯಿಂದ ತಂಗಿಯಂತೆ ನೋಡಿಕೊಳ್ತೇನೆ ” ಅಂದ. “ ಅಯ್ಯೋ ! ಬದುಕಿದೆಯಾ ಬಡ ಜೀವವೇ…. ನಾನೇ ಹಾಡಿದ್ದೆಂದು ನಿನಗೆ ಗೊತ್ತಾಗಿಲ್ಲವಲ್ಲ…. ನಿನಗೇನು ಯಾರಿಗೂ ಈ ವರೆಗೂ ಗೊತ್ತಾಗಿಲ್ಲ…. ಗೊತ್ತಾಗೋದೂ ಬೇಡಾ” ಅಂದು ಕೊಳ್ಳುತ್ತಾ, ಎಲೆಕ್ಟ್ರಿಕ್ ಬಿಲ್ ಪಡೆದು ಒಳಗೆ ಬಂದರು, ನಾಚಿಕೆಯಿಂದ.

ವೃಂದಾ. ಸಂಗಮ,


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಸಂಪತ್
ಸಂಪತ್
5 years ago

ತುಂಬಾ ಚೆನ್ನಾಗಿದೆ. ಈ ದಿನಗಳಲ್ಲಿ ಇಂತಹ ಲಘು ಹರಟೆಗಳು ಕಾಣೆಯಾಗುತ್ತಿವೆ. ಟಿ. ಸುನಂದಮ್ಮ ಅವರಂತೆ ಲಘುಹಾಸ್ಯದ ಬರಹಗಳು ಸುಲಭವಾಗಿ ಓದಿಸಿಕೊಂಡು ಹೋಗುತ್ತವೆ. ಈ ನಿಟ್ಟಿನಲ್ಲಿ ವೃಂದಾ ಅವರ ಬರಹಗಳು ಈ ಕೊರತೆಯನ್ನು ತುಂಬುತ್ತವೆ.

1
0
Would love your thoughts, please comment.x
()
x