ಧೈರ್ಯವೇ ಹಿಮಾಲಯ, ಗೆಲ್ಲು ನೀ ಅಧೈರ್ಯವಾ. . . . : ಸುನಂದಾ ಎಸ್ ಭರಮನಾಯ್ಕರ

ಧೈರ್ಯ ಎಂದರೆ ಛಾತಿ, ಕೆಚ್ಚು, ಎದೆಗಾರಿಕೆ. ಧೈರ್ಯವು ಭಯ, ನೋವು ಅಪಾಯ ಅನಿಶ್ಚಿತತೆ ಅಥವಾ ಬೆದರಿಕೆಯನ್ನು ಎದುರಿಸುವ ಸಾಮಥ್ರ್ಯ ಮತ್ತು ಇಚ್ಛೆಯಾಗಿದೆ. ಮನುಷ್ಯ ಯಾವುದೇ ಸಾಧನೆ ಮಾಡಬೇಕಾದರೂ ಆತನಲ್ಲಿ ಮೊದಲು ಇರಬೇಕಾದದ್ದು ಧೈರ್ಯ. “ಧೈರ್ಯಂ ಸರ್ವತ್ರ ಸಾಧನಂ”. ಮನುಷ್ಯನಲ್ಲಿ ಸಿಗುವ ಅತಿ ವಿರಳ ಹಾಗೂ ಅತಿ ಅಮೂಲ್ಯವಾದ ವಸ್ತುವೆಂದರೆ ಧೈರ್ಯವೇ ಆಗಿದೆ. ಅದನ್ನು ಪೇಟೆಯಲ್ಲಿ ಖರೀದಿ ಮಾಡಲಾಗುವುದಿಲ್ಲ. ಅದು ಮಾರಾಟದ ವಸ್ತುವಾಗಿದ್ದರೆ ಪುಕ್ಕಲರೂ, ಶ್ರೀಮಂತರಾದಿಯಾಗಿ ಎಲ್ಲರೂ ಅದನ್ನು ಕೊಂಡು ಕೊಂಡು ತಮ್ಮ ಬಳಿ ಇರಿಸಿಕೊಳ್ಳುತ್ತಿದ್ದರು.

ಬದುಕು ಗೆಲ್ಲಲು ಧೈರ್ಯ ಬೇಕು –

ಇಂದಿನ ಮಕ್ಕಳಲ್ಲಿ ಆತ್ಮವಿಶ್ವಾಸ, ಮನೋಸ್ಥೈರ್ಯ, ಧೈರ್ಯ ಯಾವುದು ಕಂಡುಬರುತ್ತಿಲ್ಲ. ಕಾರಣ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಿಂದಲೇ ಧೈರ್ಯ ಸಾಹಸ ಅನ್ಯಾಯದ ವಿರುದ್ಧ ಹೋರಾಡುವ ಗುಣಗಳನ್ನು ಬೆಳೆಸಿಕೊಳ್ಳಬೇಕಿದೆ. ನೇತಾಜಿ ಸುಭಾಸ ಚಂದ್ರ ಭೋಸ್ ಅವರಲ್ಲಿದ್ದ ಧೈರ್ಯಗಾರಿಕೆಯನ್ನು ಇಂದಿನ ವಿದ್ಯಾರ್ಥಿಗಳು ಪಾಲಿಸುವ ಮೂಲಕ ಬದುಕಿನ ಕಠಿಣ ಪರಿಸ್ಥಿತಿಗಳಲ್ಲಿ ಜಯ ಸಾಧಿಸುವದನ್ನು ಕಲಿಯಬೇಕಾಗಿದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಧೈರ್ಯ ಇದ್ದಾಗ ಮಾತ್ರ ನಮಗೆ ಬದುಕಿರುವ ಅಧಿಕಾರ ಇರುತ್ತದೆ. ಇದು ಜೀವನದ ಸೂತ್ರ ಕೂಡ. ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಧೈರ್ಯ ನಮಗಿಲ್ಲ ಎಂದಾದಲ್ಲಿ ಪ್ರಪಂಚ ನಮಗೆ ಅಸ್ತಿತ್ವದ ಹಕ್ಕನ್ನು ಕೊಡಲಾರದು. ಇತರರು ನಮಗಾಗಿ ಹೋರಾಡುವ ಸಾಧ್ಯತೆ ಇರಬಹುದಾದರೂ ನಾವು ಅದರ ಮೇಲೆ ನಿಖರವಾಗಿರಲು ಸಾಧ್ಯವಿಲ್ಲ.

ಧೈರ್ಯವನ್ನು ಮೈಗೂಡಿಸಿಕೊಂಡ ವ್ಯಕ್ತಿಯು ಸದಾ ಮುಂದುವರಿಯುತ್ತಾ ಇರುತ್ತಾನೆ. ಹೇಡಿ ಸದಾ ಇದ್ದಲ್ಲೇ ಇರುತ್ತಾನೆ. ಸಾಹಸದ ಕಾರ್ಯ ಮಾಡಲೂ ಧೈರ್ಯ ಬೇಕು. ಇಂಗ್ಲೆಂಡಿನ ಇತಿಹಾಸಕಾರನಾದ ಎಡ್ವರ್ಡ ಗಿಬ್ಬನ್ ಹೇಳುವಂತೆ ‘ಗಾಳಿ ಮತ್ತು ಸಮುದ್ರದ ಅಲೆಗಳು ಯಾವತ್ತೂ ಧೈರ್ಯವಂತ ನಾವಿಕನ ಪರವಾಗಿರುತ್ತದೆ’.. ಸಾಹಸದ ಅಡಿಪಾಯವೇ ಧೈರ್ಯ. ಧೈರ್ಯ ಎಂಬ ತಲಕಟ್ಟು ಇಲ್ಲದಿದ್ದರೆ ಸಾಹಸದ ಸೌಧವನ್ನು ಕಟ್ಟಲು ಸಾಧ್ಯವಿಲ್ಲ ಹೇಡಿಯಿಂದ ಸಾಹಸದ ಕೆಲಸ ನಡೆದ ಉದಾಹರಣೆ ಜಗತ್ತಿನಲ್ಲಿ ಎಲ್ಲೂ ಇಲ್ಲ. ಸಾಹಸಕ್ಕೂ ಧೈರ್ಯಕ್ಕೂ ಅವಿನಾಭಾವ ಸಂಬಂಧ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಧೈರ್ಯವಾಗಿದ್ದರೆ, ಅರ್ಧ ಯುದ್ದ ಗೆದ್ದಂತೆಯೇ, ಎಂಬುದಾಗಿ ಇಟಾಲಿಯನ್ ಚಿಂತಕ ಗಿಸೆಪ್ ಗ್ಯಾರಿಬಾಲ್ಡಿ ಹೇಳಿದ್ದಾನೆ. ಯುದ್ಧ ನಡೆಯುವುದು ಮೊದಲು ಮನಸ್ಸಿನಲ್ಲಿ ತದನಂತರ ಅದು ದೈಹಿಕವಾಗಿ ಕಾರ್ಯ ರೂಪಕ್ಕೆ ಬರುತ್ತದೆ. ಮನಸ್ಥೈರ್ಯವೇ ಕುಸಿದರೆ ಎಂದೂ ಯುದ್ಧದಲ್ಲಿ ಗೆಲ್ಲಲಾಗುವುದಿಲ್ಲ. ಸಾಧನಕ್ಕಿಂತ ಮನೋಬಲವೇ ಮುಖ್ಯ.
ಧೈರ್ಯವೆಂಬುದು ಮಹಾತ್ಮರ ಮುಖ್ಯ ಲಕ್ಷಣ-

ಧೈರ್ಯಶಾಲಿಗಳು ಸಾಯುವಾಗಲೂ ಧೀರರಾಗಿಯೇ ಸಾಯುತ್ತಾರೆ. ಭಗತ್‍ಸಿಂಗ ಮರಣದಂಡನೆಗೆ ಗುರಿಯಾಗಿದ್ದಾಗ ಲಾಹೋರ್ ಜೈಲಿನ ಮುಖ್ಯಾಧಿಕಾರಿಯಾಗಿದ್ದ ಸಿಖ್ಖ ಧರ್ಮದ ನಿಷ್ಠಾವಂತ ಅನುಯಯಿಯಾಗಿದ್ದ ಸರ್ದಾರ್ ಚತರ ಸಿಂಗ್ ಅವರು ಭಗತ್‍ಸಿಂಗರ ಬಳಿ ಬಂದು “ ಮಗೂ ನನ್ನನ್ನು ನಿನ್ನ ತಂದೆಯಂತೆಯ ಭಾವಿಸಿಕೋ ನಿನ್ನ ಅಂತ್ಯ ಸಮೀಪಿಸುತ್ತಿರುವುದುರಿಂದ ಗುರು ವಾಣಿಯನ್ನು ಪಠಣ ಮಾಡುತ್ತಾ ‘ವಾಹೇ ಗುರು’ ಎಂದು ನಾಮೋಚ್ಛಾರ ಮಾಡು” ಎಂದು ವಿನಂತಿಸಿದ . ಅದನ್ನು ಕೇಳಿದ ಭಗತ್‍ಸಿಂಗ್ ಜೋರಾಗಿ ನಗುತ್ತಾ ” ನಾನು ಹಾಗೆ ಮಾಡಿದರೆ ನೀನು ಕೊನೆಗೆ ಪುಕ್ಕಲನಾಗಿ ಸಾವನ್ನು ಧೈರ್ಯವಾಗಿ ಎದುರಿಸಲಾಗದೇ ನನ್ನ ಮೊರೆಹೋಗಿದ್ದೀಯೇ ಎಂದು ಭಗವಂತ ನನ್ನನ್ನು ಅಣಕಿಸಿಯಾನು ಎಂದು ಉತ್ತರಿಸಿದರು. ಧೈರ್ಯವೇ ಮಹಾತ್ಮರ ಮುಖ್ಯ ಲಕ್ಷಣ.
ಧೈರ್ಯವನ್ನು ಹಿಮ್ಮೆಟ್ಟಿಸಿ ಮೆರೆಯುವ ಭಯದ ವಿಷ ವರ್ತುಲ:-

ಎಲ್ಲಾ ಹೆದರಿಕೆಗಳು ನಾಳೆ ಏನಾಗುವುದೋ ಎಂಬ ಚಿಂತೆಯಿಂದಲೇ ಬರುವಂತಹದ್ದು. ನಾಳೆ ರೋಗ ಬರುತ್ತದೆ ಎಂಬ ಹೆದರಿಕೆಯಿಂದಲೇ ಇಂದೇ ರೋಗಿಯಾಗಿ ಬುದುಕುವದಕ್ಕಿಂತ ಹೆಚ್ಚಿನ ದುರಂತ ಬೇರೊಂದಿರಲಿಕ್ಕಿಲ್ಲ. ಸದಾ ಒಂದಲ್ಲ ಒಂದು ಭಯದಿಂದ ಒದ್ದಾಡುವವರು ಎಂದಿಗೂ ಮನಃಶಾಂತಿಯನ್ನು ಪಡೆಯಲಾರರು. ಅದೊಂದು ರೋಗವಾಗಿ ಅವರನ್ನು ಕಾಡುತ್ತದೆ.
ಇಂಥವರಿಗಾಗಿಯೇ ಪ್ರಾಯಶಃ ಸರ್ವಜ್ಞ ತನ್ನ ತ್ರಿಪದಿಯೊಂದರಲ್ಲಿ ಹೀಗೆ ಹೇಳಿದ್ದಾನೆ:-
ಬಂದೀತು ರೋಗ ತನಗೆಂದು ಅಂಜಿಕೆ ಬೇಡ|
ಬಂದುದನು ಉಂಡುಟ್ಟು ಸುಖಿಸುತಲಿ ರೋಗ
ಬಂದರೆದ್ದೇಳು ಸರ್ವಜ್ಞ||

ಸದಾ ಭಯದ ನೆರಳಿನಲ್ಲಿ ಉದ್ವಿಗ್ನರಾಗಿ ಬದುಕುವ ಜನ, ಸುಖ ಬಂದಾಗಲೂ ಸುಖಿಸುವುದಿಲ್ಲ, ದುಃಖ/ರೋಗ ಬಂದಾಗ ಧೈರ್ಯದಿಂದ ಎದುರಿಸಿದರೆ ಮಾತ್ರ ಜೀವನ ಸಾರ್ಥಕವೆನಿಸುತ್ತದೆ. ಬದುಕಿನಲ್ಲಿ ಹೆದರಬೇಕಾದಂಥದ್ದೇನೂ ಇಲ್ಲ. ಅದನ್ನು ಅರ್ಥಮಾಡಿಕೊಳ್ಳಬೇಕಷ್ಟೇ. ಎಂಬುದಾಗಿ ಮೇರಿ ಕ್ಯೂರಿ ಹೇಳಿದ್ದಾರೆ. ನೀವು ಹೆದರಲು ನಿರಾಕರಿಸಿಬಿಟ್ಟರೆ ಸಾಕು. ನಿಮ್ಮನ್ನು ಯಾರೂ ಬೆದರಿಸಲಾರರು ಎಂಬುದಾಗಿ ಗಾಂಧಿಜಿಯವರು ಹೇಳಿದ್ದಾರೆ. ಭಯ ಇರುವುದು ನಮ್ಮ ಮನಸ್ಸಿನೊಳಗೇ ವಿನಃ ಪರಿಸ್ಥಿತಿಯಲ್ಲಿ ಅಲ್ಲ. ಮನಸ್ಸಿನೊಳಗಿರುವ ಭಯವನ್ನು ನಿವಾರಿಸಬೇಕಾದರೆ ಸುಪ್ತ ಮನಸ್ಸಿನಲ್ಲಿ ಧೈರ್ಯವನ್ನು ಬಿತ್ತಬೇಕು. ಇದಕ್ಕೆ ಭವಿಷ್ಯದ ಬಗ್ಗೆ ಭಯವನ್ನು ಬಿಡಬೇಕು. ಸದಾ ಸಕಾರಾತ್ಮಕವಾಗಿ ಚಿಂತಿಸಬೇಕು. ಆದದ್ದೇಲ್ಲ ಒಳ್ಳೆಯದಕ್ಕೆ ಆಗುತ್ತಿರುವುದೆಲ್ಲ ಒಳ್ಳೆಯದಕ್ಕೆ , ಮುಂದೆಯೂ ಆಗಲಿರುವುದೆಲ್ಲ ಒಳ್ಳೆಯದಕ್ಕೆ ಎಂಬ ದೇವವಾಣಿಯಲ್ಲಿ ಧೃಢವಿಶ್ವಾಸವಿಟ್ಟರೆ ಭವಿಷ್ಯದ ಚಿಂತೆ ಮಾಯವಾಗುತ್ತದೆ. ಬದುಕನ್ನು ಬಂದಂತೆ ಸ್ವೀಕರಿಸಿದರೆ ಭಯ ಹೋಗಿ ನಿರ್ಭಯತೆ ಮೂಡುತ್ತದೆ. ಧೈರ್ಯವೆಂದರೆ, “ಏನು ಇದೆಯೋ ಅದಕ್ಕೆ ಬಲಿಯಾಗದೇ ಅದರ ಜೊತೆಗೆ ಇರುವ ಸ್ಥಿತಿ. ಕೇವಲ ಭಯವನ್ನು ನಿವಾರಿಸುವುದಲ್ಲ. ಬದಲಿಗೆ ಅಲ್ಲಿ ನಿರ್ಭೀತಿಯನ್ನು ಬಿತ್ತಿ ಬೆಳೆಸಬೇಕು. ಧೈರ್ಯವೆಂದರೆ ಕೇವಲ ಭಯದ ಅಭಾವವಲ್ಲ ಬದಲಿಗೆ ನಿರ್ಭಯತ್ವದ ಉಪಸ್ಥಿತಿಯನ್ನೇ ಧೈರ್ಯವೆನ್ನುತ್ತಾರೆ.
ಅಮೂಲ್ಯ ಪಾಠ:-

ಒಮ್ಮೆ ಕೃಷ್ಣ ಬಲರಾಮರಿಗೆ ರಾತ್ರಿಯೊಂದನ್ನು ಕಾಡಿನಲ್ಲಿ ಕಳೆಯಬೇಕಾಯಿತಂತೆ . ಕಾಡುಮೃಗಗಳ ಕಾಟದಿಂದ ಪಾರಾಗುವದಕ್ಕಾಗಿ ಕೃಷ್ಣ ‘ ನಾನು ಮೊದಲು ಮಲಗಿಕೊಳ್ಳುತ್ತೇನೆ. ನೀನು ಕಾವಲು ಕಾಯುತ್ತಿರು. ಅರ್ಧ ರಾತ್ರಿಯ ನಂತರ ನೀನು ಮಲಗಿಕೋ .ನಾನು ಕಾವಲು ಕಾಯುತ್ತೇನೆ ಎಂದು ಬಲರಾಮನಿಗೆ ಹೇಳಿ ಮಲಗಿಕೊಂಡ ಬಲರಾಮ ಕಾವಲು ನಿಂತ. ಕೊಂಚ ಹೊತ್ತಿನಲ್ಲಿ ಅಲ್ಲೊಬ್ಬ ದೈತ್ಯಾಕಾರದ ರಕ್ಕಸ ಪ್ರತ್ಯಕ್ಷನಾದ .ಅವನ ದೈತ್ಯಾಕಾರ ನೋಡಿ ಬಲರಾಮ ಹೆದರಿದ. ನಡುಗುತ್ತಾ ನೀನ್ಯಾರು? ಎಂದು ಕೇಳಿದ ಬಲರಾಮನ ಹೆದರಿಕೆಯನ್ನು ನೋಡಿ ರಕ್ಕಸ ಗಟ್ಟಿಯಾಗಿ ನಕ್ಕ. ಅಷ್ಟೇ ಅಲ್ಲ ತನ್ನ ಗಾತ್ರಕ್ಕಿಂತ ಎರಡರಷ್ಟು ಹಿರಿದಾಗಿ ಬೆಳೆದ . ಅವನ ಗಾತ್ರ ಹಿರಿದಾದುದನ್ನು ನೋಡಿ ಬಲರಾಮನು ಇನ್ನೂ ಹೆದರಿ , ನೀನ್ಯಾರು? ನಿನಗೇನು ಬೇಕೆಂಬುದನ್ನಾದರೂ ಹೇಳು, ಎಂದು ಅಂಗಲಾಚಿದ. ರಕ್ಕಸ ಮತ್ತ ಬೆಳೆದ ಮಹದೆತ್ತರವಾಗಿ ಬೆಳೆದು ಗಹಗಹಿಸಿ ನಕ್ಕ. ಅದನ್ನ ನೋಡಿ ಬಲರಾಮನು ಮತ್ತಷ್ಟು ಹೆದರಿ ಕೃಷ್ಣ! ಕೃಷ್ಣ! ಎಂದು ಕಿರುಚಿಕೊಂಡು ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟ. ಬಲರಾಮನ ಕಿರುಚಾಟದಿಂದ ಕೃಷ್ಣ ಎಚ್ಚರಗೊಂಡ . ನೋಡಿದರೆ ಬಲರಾಮನು ನೆಲದ ಮೇಲೆ ಒರಗಿದ್ದ. ಬಹುಶಃ ನಿದ್ದೆ ಬಂದಿರಬೇಕು. ನಾನೀಗ ಕಾವಲು ಕಾಯಬೇಕು. ಎಂದುಕೊಳ್ಳುತ್ತಾ ತಲೆಯೆತ್ತಿ ನೋಡಿದಾಗ , ದೈತ್ಯಾಕಾರದ ರಕ್ಕಸ ಕಾಣಿಸಿದ ಕೃಷ್ಣ ಹೆದರಲಿಲ್ಲ. ಧೈರ್ಯವಾಗಿ ನೀನಾರೆಂದು ಕೇಳಿದ. ಕೃಷ್ಣನ ಧೈರ್ಯದಿಂದ ಬೆಕ್ಕಸಬೆರಗಾದ ರಕ್ಕಸ. ನಾನೊಬ್ಬ ರಕ್ಕಸ’ ಎಂದಾಗ ರಕ್ಕಸನ ಗಾತ್ರ ಅರ್ಧವಾಗಿತ್ತು. ಆದರೂ ಕೃಷ್ಣ ಗಟ್ಟಿಯಾಗಿ ನಕ್ಕು ನೀನು ನನ್ನನ್ನು ತಿನ್ನುತ್ತೀಯೊ ಅಥವಾ ನನಗೆ ಬಲಿಯಾಗುತ್ತಿಯೋ ನೋಡೋಣ , ಕಾಲಗಕ್ಕೆ ಸಿದ್ದನಾಗಿದ್ದೀಯಾ? ಎಂದಾಗ ರಕ್ಕಸನೇ ಹೆದರಿದ. ಆತನ ಗಾತ್ರ ಇನ್ನೂ ಕಿರಿದಾಯಿತು! ಆದರೂ ಆತ ಕಾಳಗಕ್ಕೆ ಮುಂದಾದಾಗ , ಕೃಷ್ಣನು ಗಹಗಹಿಸಿ ನಕ್ಕು ನಿನ್ನಂತಹ ರಕ್ಕಸರನ್ನು ಒಂದು ಗಳಿಗೆಯಲ್ಲಿ ಮುಗಿಸಬಲ್ಲೇ! ಎಂದು ತೊಡೆ ತಟ್ಟಿ ನಿಂತಾಗ ರಕ್ಕಸನ ಗಾತ್ರ ಕಿರುಬೆರಳಿನಷ್ಟಾಯಿತು!ಕೃಷ್ಣ ಬಗ್ಗಿ ಪುಟ್ಟ ರಾಕ್ಷಸನನ್ನು ಎತ್ತಿಕೊಂಡು ತನ್ನ ಅಂಗವಸ್ತ್ರದ ತುದಿಯಲ್ಲಿ ಗಂಟುಕಟ್ಟಿಕೊಂಡ ಕಾವಲನ್ನು ಮುಂದುವರೆಸಿದ.

ಬೆಳಗಿನ ಜಾವ ಬಲರಾಮ ಎದ್ದು “ ನಿನ್ನೆ ರಾತ್ರಿ ದೈತ್ಯಾಕಾರದ ರಕ್ಕಸನೊಬ್ಬ ಬಂದಿದ್ದ ನನ್ನ್ನನು ಹೆದರಿಸಿಬಿಟ್ಟ” ಎಂದಾಗ ಕೃಷ್ಣ ಅಂಗವಸ್ತ್ರದ ತುದಿಗೆ ಕಟ್ಟಿದ ರಕ್ಕಸನನ್ನು ತೆಗೆದು ತೋರಿಸಿದ. ಬಲರಾಮ , ಅರೇ! ಇದೇ ರಾಕ್ಷಸನನ್ನು ನಾನು ರಾತ್ರಿ ನೋಡಿದ್ದು, ಆಗ ಅವನದು ಬೃಹದಾಕಾರ. ಈಗ ಕಿರಿದಾಗಿದ್ದಾನಲ್ಲ! ಎಂದಾಗ ಕೃಷ್ಣ ರಕ್ಕಸರಿಗೆ ಹೆದರಿಕೊಂಡರೆ ಅವರು ನಮಗಿಂತ ಹಿರಿದಗುತ್ತಾರೆ. ಧೈರ್ಯವಾಗಿ ಎದುರು ನಿಂತರೆ ನಮಗಿಂತ ಕಿರಿದಾಗುತ್ತಾರೆ! ಹಾಗೆಯೇ, ಬದುಕಿನಲ್ಲಿ ಕಷ್ಟಗಳು , ತೊಂದರೆ-ತಾಪತ್ರಯಗಳು ಸವಾಲುಗಳು ಎದುರಾದಾಗ ನಾವು ಅವುಗಳಿಗೆ ಹೆದರಿಕೊಂಡರೆ ಅವು ನಮಗಿಂತ ಹಿರಿದಾಗಿ ಕಾಣುತ್ತವೆ. ನವು ಧೈರ್ಯವಾಗಿ ಎದುರಿಸಿದರೆ ಅವು ನಮಗಿಂತ ಕಿರಿದಾಗುತ್ತವೆ. ಇದು ಬದುಕಿನ ಅಮೂಲ್ಯವಾದ ಪಾಠ ಎಂದು ಹೇಳಿದ.

ಧೈರ್ಯ ನಮ್ಮನ್ನು ಎಲ್ಲ ರೀತಿಯ ಅಪಾಯಗಳಿಂದಲೂ ಪಾರುಮಾಡುತ್ತದೆ. ಆದ್ದರಿಂದಲೇ ಹೀಗೆ ಹೇಳಲಾಗಿದೆ. ನೀವು ಐಶ್ವರ್ಯವನ್ನು ಕಳೆದುಕೊಂಡಾಗ ಕಳೆದುಕೊಂಡದ್ದು ಬಹಳ ಸ್ವಲ್ಪ. ನೀವು ಮಿತ್ರರೊಬ್ಬರನ್ನು ಕಳೆದುಕೊಂಡಾಗ ಹೆಚ್ಚು ಕಳೆದುಕೊಳ್ಳುತ್ತೀರಿ. ಆದರೆ ನೀವು ಧೈರ್ಯವನ್ನು ಕಳೆದುಕೊಂಡಾಗ ಸರ್ವಸ್ವವನ್ನೂ ಕಳೆದುಕೊಳ್ಳುತ್ತೀರಿ.
ಭಯವನ್ನು ಎದುರಿಸಿ:-

ನಿಮ್ಮಲ್ಲಿ ಭಯ ಮೂಡಿದಾಗ ಅದನ್ನು ತಡೆಯಬೇಡಿ ,ದಮನ ಮಾಡಬೇಡಿ, ಅದರಿಂದ ತಪ್ಪಿಸಿಕೊಳ್ಳಬೇಡಿ ಅದನ್ನು ಮರೆಯಲು ಮತ್ಯಾವುದೋ ಸಂಗತಿಯಲ್ಲಿ ತೊಡಗಬೇಡಿ. ಭಯ ಆದಾಗ ಅದನ್ನು ಗಮನಿಸಿ. ಅದನ್ನು ಮುಖಾ ಮುಖಿಯಾಗಿ ಎದುರಿಸಲು ತಯಾರಾಗಿ ಅದನ್ನು ಎದುರಿಸಿ. ಭಯದ ಕಣಿವೆಯನ್ನು ದಿಟ್ಟಿಸಿ ನೋಡಿ. ಹೌದು ನೀವು ಬೆವರುವಿರಿ, ಗಡಗಡ ನಡುಗುವಿರಿ, ಅದು ಮೃತ್ಯುವಿನಂತೆ ಗೋಚರಿಸಬಹುದು. ನಾವು ಅದನ್ನು ಅನೇಕ ಸಲ ಜೀವಿಸಬೇಕಾಗಬಹುದು. ಆದರೆ ಕಾಲ ಕಳೆದಂತೆ ನಮ್ಮ ಕಣ್ಣುಗಳು ಹೆಚ್ಚು ಸ್ಪಷ್ಟವಾಗುವವು . ನಮ್ಮಲ್ಲಿ ಅರಿವು ಮತ್ತಷ್ಟು ಜಾಗೃತವಾಗುವವು. ಭಯದ ಮೇಲಿನ ನಮ್ಮ ದೃಷ್ಟಿ ಮತ್ತಷ್ಟು ತೀಕ್ಷಣವಾಗುವವು. ಆಗ ಭಯವು ಇಬ್ಬನಿಯಂತೆ ಕರಗಿ ಹೋಗುವುದು.

ಭಯದ ಕಾರಣವಾಗಿ ನಾವು ಸಾಕಷ್ಟನ್ನು ಕಳೆದುಕೊಳ್ಳುತಿದ್ದೇವೆ. ದೇಹದೊಂದಿಗೆ ಅತಿ ತಾದಾತ್ಮತೆ ಹೊಂದಿರುವ ಕಾರಣವಾಗಿ ನಾವು ಹೆಚ್ಚು ಹೆಚ್ಚು ಭಯವನ್ನು ಸೃಷ್ಟಿಸಿಕೊಳ್ಳುತ್ತಾ ಹೋಗುತ್ತಿದ್ದೇವೆ . ಭಯ ನಮ್ಮ ಸ್ಥಿತಿಯಾಗಿರುವದರಿಂದ ಎಲ್ಲವೂ ನಮ್ಮನ್ನು ಹೆದರಿಸುತ್ತಿರುವಂತೆ ಕಾಣುತ್ತೇವೆ. ಆದರೆ ಯಾರೂ ನಮ್ಮನ್ನು ಹೆದರಿಸುತ್ತಿಲ್ಲ. ನಿರ್ಭಯ ವ್ಯಕ್ತಿಗೆ ಯಾರೂ ಹೆದರಿಸಲಾಗುವುದೂ ಇಲ್ಲ.

ಮನದ ಅಂಗಳದಿ. . . . ಧೈರ್ಯ-

ಧೈರ್ಯವು ಎಲ್ಲ ಸಂದರ್ಭಗಳಲ್ಲಿಯೂ ಒಂದು ಸಾಧನವಿದ್ದಂತೆ, ಧೈರ್ಯವಿದ್ದರೆ ನಾವು ಯಾವುದೇ ಕಠೀಣ ಪರಿಸ್ಥಿತಿಯನ್ನಾದರೂ ಸಮರ್ಥವಾಗಿ ಎದುರಿಸಬಹುದು. ಧೈರ್ಯದ ಬಗ್ಗೆ ರಾಬಿನ್ ಶರ್ಮ ಅವರು ತಮ್ಮ ‘’ ಯಲ್ಲಿ ಜೂಲಿಯ್ ಮೂಲಕ ಹೀಗೆ ಹೇಳಿಸುತ್ತಾರೆ. ‘ಧೈರ್ಯವಿದ್ದರೆ ನೀನು ನಿನ್ನದೇ ರೇಸ್ ನಲ್ಲಿ ಓಡಬಹುದು. ಧೈರ್ಯವಿದ್ದರೆ ನೀನು ನಿನ್ನ ದೃಷ್ಟಿಯಲ್ಲಿ ಸರಿಯೆಂದು ಕಂಡುದನ್ನು ಮಾಡಬಹುದು. ಧೈರ್ಯವಿದ್ದರೆ ಅನ್ಯರು ಸೋತಾಗಲೂ ನೀನು ಸೋಲಿಗೆ ಶರಣಾಗದೇ ಹೋರಾಡಿ ಜಯಿಸಬಹುದು. ಅಂತಿಮವಾಗಿ ಹೇಳುವದಾದರೆ ನೀನು ಬದುಕಿನಲ್ಲಿ ಗಳಿಸುವ ಯಶಸ್ಸು , ಸಾರ್ಥಕತೆ ನಿನ್ನಲ್ಲಿರುವ ಧೈರ್ಯದ ಪ್ರಮಾಣವನ್ನು ಅವಲಂಬಿಸಿದೆ. ತಮ್ಮ ಮೇಲೆ ಪ್ರಭುತ್ವ ಸಾಧಿಸುವವರಲ್ಲಿ ಅಪಾರ ಧೈರ್ಯವಿರುತ್ತದೆ. ಸ್ವಾಮಿ ವಿವೇಕಾನಂದರು ‘ ಧೈರ್ಯವಂತರಾಗಿ ಎನ್ನುವುದನ್ನು ಹೀಗೆ ತಿಳಿಸುತ್ತಾರೆ. ದಕ್ಷಿಣ ಸಮುದ್ರ ದ್ವೀಪಗಳ ಸಮೀಪದಲ್ಲಿ ಬಿರುಗಾಳಿಗೆ ಸಿಕ್ಕಿದ ಕೆಲವು ಹಡಗುಗಳ ಕಥೆಯನ್ನು ನಾನು ಒಮ್ಮೆ ನೋಡಿದೆ. ಇಲಸ್ಟ್ರೇಟೆಡ್ ಲಂಡನ್ ನ್ಯೂಸನಲ್ಲಿ ಅದರ ಒಂದು ಚಿತ್ರವಿತ್ತು ಇಂಗ್ಲಿಷನವರ ಹಡಗೊಂದನ್ನು ಬಿಟ್ಟು ಉಳಿದ ಎಲ್ಲಾ ಹಡಗುಗಳು ನಾಶವಾದವು. ಅದು ಈ ಪ್ರಚಂಡ ಬಿರುಗಾಳಿಯಲ್ಲಿ ಮುಂದುವರೆಯುತ್ತಿತ್ತು. ಮುಳುಗುತ್ತಿದ್ದ ಹಡಗಿನಲ್ಲಿದ್ದ ಜನರು ಮೇಲಿನ ಅಂತಸ್ತಿನ ಮೇಲೆ ನಿಂತು ಮುಂದೆ ಹೋಗುತ್ತಿದ್ದ ಹಡಗಿನ ಜನರನ್ನು ನೋಡಿ ಹುರಿದುಂಬಿಸುತ್ತಿದ್ದ ಒಂದು ಚಿತ್ರವಿತ್ತು. ಅದರಂತೆ ಧೈರ್ಯವಾಗಿರಿ, ಉದಾರಿಗಳಾಗಿರಿ.’ ಇದುವರೆಗೆ ಮಹಾನ್ ಸಾಧನೆಗಳನ್ನು ಮಾಡಿದಂತಹ ಸಾಧಕರು ತಮ್ಮ ಪಥದಲ್ಲಿ ಧೈರ್ಯದಿಂದ ಮುನ್ನುಗ್ಗಿದವರೇ ಆಗಿದ್ದಾರೆ. ಅವರು ತಾವೂ ಧೈರ್ಯದಿಂದಿದ್ದು ಇತರರಿಗೂ ಆ ಮಾರ್ಗವನ್ನು ಸ್ಪಷ್ಟಪಡಿಸುವ ಪ್ರಯತ್ನವನ್ನು ನಡೆಸುತ್ತಾರೆ.
ಧೈರ್ಯ ಪ್ರತಿಯೊಬ್ಬರಿಗೂ ಅಗತ್ಯ –

ಧೈರ್ಯ ಮಾನವನಲ್ಲಿರುವ ಕಣ್ಣಿಗೆ ಕಾಣದ ಅತ್ಯಮೂಲ್ಯ ಆಸ್ತಿ ಎಂದರೆ ತಪ್ಪಾಗಲಾರದು. ಈ ಆಸ್ತಿಯನ್ನು ರಕ್ಷಿಸುತ್ತಾ ಪೋಷಿಸುತ್ತಾ ಸದ್ಭಳಕೆ ಮಾಡಿದರೆ ಅದು ನಮ್ಮನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯುವದರಲ್ಲಿ ಸಂಶಯವಿಲ್ಲ. ಆದ್ದರಿಂದ ಧೈರ್ಯ ಎಂಬುದು ಮಾನವನ ಉನ್ನತಿಯ ಮೆಟ್ಟಿಲಿದ್ದಂತೆ.
ನನ್ನಿಂದ ಆ ಕೆಲಸ ನಿರ್ವಹಿಸಲು ಸಾಧ್ಯವೇ ಎಂದು ಯೋಚಿಸುವುದು ಸರ್ವೇ ಸಾಮಾನ್ಯ ಈ ಭಾವನೆಯನ್ನು ದಮನಮಾಡಿ ನನ್ನಿಂದ ಆ ಕೆಲಸ ಮಾಡಲು ಖಂಡಿತ ಸಾಧ್ಯ. ಯಾಕೆ ಸಾಧ್ಯವಿಲ್ಲ? ಎಂದು ನಮಗೆ ನಾವೇ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆತ್ಮವಿಶ್ವಾಸದ ಜೊತೆಗೆ ಧೈರ್ಯವಿದ್ದರೆ ಸಾಕು ಎಂತಹ ಕೆಲಸಗಳೂ ಸುಗಮವಾಗಿ , ಸುಸೂತ್ರವಾಗಿ ನೆರವೇರುತ್ತದೆ. ಇದಕ್ಕೆ ಉದಾಹರಣೆ: ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಮ್ಮ ಶಾಲಾ ದಿನಗಳಲ್ಲಿ ಗಂಗಾ ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ಈಜಿಕೊಂಡು ದಾಟುತ್ತಿದ್ದುದು ತಮ್ಮಲ್ಲಿರುವ ಆತ್ಮವಿಶ್ವಾಸದ ಜೊತೆಗಿನ ಧೈರ್ಯದಿಂದಲೇ.

ಕೆಲವರಿಗೆ ಆತ್ಮವಿಶ್ವಾಸದ್ದೇ ಒಂದು ಕೊರತೆ, ಅಂತಹವರಿಗೆ ಆತ್ಮವಿಶ್ವಾಸವಿರುವ ಅವರ ಮನೆಯವರು, ಸ್ನೇಹಿತರು ಪ್ರೋತ್ಸಾಹ ನೀಡಿ ಆತ್ಮವಿಶ್ವಾಸ ಮೂಡಿಸಬೇಕು. ನಿನ್ನಿಂದ ಆ ಕೆಲಸ ನಿರ್ವಹಿಸಲು ಸಾಧ್ಯ. ಏಳು ಪ್ರಯತ್ನ ಮಾಡು, ನೀನೆ ಮಾಡಬೇಕಾದ ಕಾರ್ಯ ಅದು. ಈ ರೀತಿಯಾಗಿ ಹುರಿದುಂಬಿಸಿದಾಗ ಅವರಿಗೆ ತಮ್ಮ ಬಗ್ಗೆ ನಂಬಿಕೆ ಹುಟ್ಟಿ ಯಾವುದೇ ಕೆಲಸಗಳನ್ನು ಸಮರ್ಪಕವಾಗಿ ನೆರವೇರಿಸುವದರಲ್ಲಿ ಸಫಲರಾಗುತ್ತಾರೆ. ಒಮ್ಮೆ ಆತ್ಮವಿಶ್ವಾಸ ಗರಿಗೆದರಿದರೆ ಪ್ರಗತಿ ತನ್ನಿಂದ ತಾನಾಗೆ ಬರುತ್ತದೆ. ಇದರಿಂದ ಎಂತಹ ಹೇಡಿಗಳು ಪ್ರಗತಿಶೀಲರಾಗಲು ಸಾಧ್ಯ. ಯಾವುದೇ ಕೆಲಸ-ಕಾರ್ಯಗಳನ್ನು ನಿರ್ವಹಿಸುವಾಗ ಒಮ್ಮೆ ಸೋಲಾಯಿತೆಂದು ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುವದಲ್ಲ. ಮರಳಿ ಯತ್ನವ ಮಾಡು ಎಂಬಂತೆ ಮತ್ತೆ ಮತ್ತೆ ಪ್ರಯತ್ನಿಸಬೇಕು. ಸೋಲಿನಿಂದ ನಾವು ಕಳೆದುಕೊಳ್ಳುವುದೇನೂ ಇಲ್ಲ. ಆದರೆ ಸೋಲಿನಿಂದ ಪಾಠ ಕಲಿಯುತ್ತೇವೆ. ಅನುಭವ ಗಳಿಸುತ್ತೇವೆ. ನಮ್ಮಲ್ಲಿರುವ ಅಹಂಕಾರ ದೂರವಾಗುತ್ತದೆ. ಆದ್ದರಿಂದ ಸೋಲು ಬಂತೆಂದು ಹತಾಶರಾಗುವುದು ಬೇಡ. ಬದಲಾಗಿ ಸೋಲೇ ಗೆಲುವಿನ ಮೆಟ್ಟಿಲು ಎಂದು ಭಾವಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡು ಪ್ರಯತ್ನಶೀಲರಾಗಬೇಕು.

ಅತಿಯಾದರೇ ಅಮೃತವು ವಿಷ ಎಂಬ ಮಾತಿದೆ ಹಾಗೇ ಮಿತಿ ಮೀರಿದ ಆತ್ಮವಿಶ್ವಾಸವು ಒಳ್ಳೆಯದಲ್ಲ ತನ್ನ ಯೋಗ್ಯತೆ ಸಾಮಥ್ರ್ಯ ಮೀರಿ ಇನ್ನೊಬ್ಬರಿಗೆ ಸಹಾಯ ಮಾಡಲು ಮುಂದಾಗುವದು ಹಿಂದೆ ಮುಂದೆ ಯೋಚಿಸದೇ ಯಾವುದಾದರೂ ಸರಿ ಎಂತಹ ಸಮಯದಲ್ಲಾದರೂ ಸರಿ ಎಂದು ಮುನ್ನುಗ್ಗುವುದು ಪ್ರಮಾದಕರವಾದ ನಡತೆ. ಇದನ್ನೇ ದುಡುಕು ಸ್ವಭಾವ ಎನ್ನುವುದು. ದುಡುಕಿದರೆ ಎಡುವುದು ಖಂಡಿತ. ಕ್ರೀಡಾಪಟುಗಳು ವಿದ್ಯಾರ್ಥಿಗಳು ಕೆಲವೊಂದು ಭಾರಿ ಅತಿಯಾದ ಆತ್ಮವಿಶ್ವಾಸದಿಂದ ಸೋಲು ಅನುಭವಿಸುವುದುಂಟು. ಅಂತಹ ಸಂದರ್ಭಗಳಲ್ಲಿ ಅವರ ಪೋಷಕರು ಗುರುಗಳು ತಿಳಿ ಹೇಳಿ ಪ್ರೋತ್ಸಾಹಿಸಬೇಕಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಆತ್ಮ ವಿಶ್ವಾಸ ಬೆಳೆದರೆ ದೇಶದಲ್ಲಿ ಹೇಡಿಗಳು ಸೋಮಾರಿಗಳು ಇಲ್ಲದೆ ಎಲ್ಲರೂ ವೀರರಾಗಿ ಶ್ರೀಮಂತರಾಗಿ ಬಾಳಬಹುದು. ಆದರೆ ಆತ್ಮವಿಶ್ವಾಸದ ಸದುಪಯೋಗವಾಗಬೇಕು. ಇದರಿಂದ ಕಾರ್ಯಗಳೆಲ್ಲವೂ ಯಶಸ್ವಿಯಾಗಿ ರಾಷ್ಟ್ರ ಪ್ರಗತಿ ಪಥದಲ್ಲಿ ಮುನ್ನಡೆಯಬಹುದು. ಬಾಳಿದರೆ ಆತ್ಮವಿಶ್ವಾಸದಿಂದ ಬಾಳಬೇಕು ಎಂಬ ತತ್ತ್ವ ಮಹತ್ತರವಾದುದು.
ಯಾವುದೇ ಸನ್ನಿವೇಶವನ್ನು ಧೈರ್ಯವಾಗಿ ಎದುರಿಸುವುದು –

ನಮ್ಮ ಜೀವನದಲ್ಲಿ ಹಲವಾರು ಘಟನೆಗಳು ಕಷ್ಟಕರವಾಗಿರುತ್ತದೆ ಮತ್ತು ಇದನ್ನು ಪ್ರತಿಯೊಬ್ಬರೂ ವಿಭಿನ್ನ ರೀತಿಯಲ್ಲಿ ನಿಭಾಯಿಸುತ್ತಾರೆ. ಕೆಲವು ಜನರು ಸ್ವಾಭಾವಿಕವಾಗಿ ಸಕಾರತ್ಮಕ ದೃಷ್ಟಿಕೋನವನ್ನು ಹೊಂದಿರುತ್ತಾರೆ ಮತ್ತು ತಾವು ಎದುರಿಸುತ್ತಿರುವ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಂಡು ತಮ್ಮ ಜೀವನ ನಡೆಸುತ್ತಾ ಹೋಗುತ್ತಾರೆ. ಹೀಗೆ ಸನ್ನಿವೇಶಗಳನ್ನು ನಿಭಾಯಿಸಲು ಕೆಲವು ಸಲಹೆಗಳು ಇಲ್ಲಿ ಇವೆ: ಸ್ವಯಂ ಪಾಲನೆ: ನಿಯಮಿತ ವ್ಯಾಯಾಮ, ಆರೋಗ್ಯಕರ ಸಮತೋಲಿತ ಆಹಾರ, ಸಾಕಷ್ಟು ನಿದ್ರೆ, ಕೆಡಿಸುವ ಪದಾರ್ಥಗಳನ್ನು ಬಳಸದೆ ನಿಮ್ಮ ಆರೈಕೆ ಮಾಡಿಕೊಳ್ಳಿ. ನಿಮ್ಮ ಆರೋಗ್ಯ ಬಹಳ ಮುಖ್ಯ. ಬದಲಾವಣೆಯನ್ನು ಒಪ್ಪಿಕೊಳ್ಳಿ: ಎದುರಾಗುವ ಒತ್ತಡ ಹಾಗೂ ಸವಾಲುಗಳು ಜೀವನದಲ್ಲಿ ಕಲಿಯಲು ಹಾಗೂ ಬೆಳೆಯಲು ಉತ್ತಮ ಅವಕಾಶಗಳೆಂದು ಭಾವಿಸಿ. ನಿಮ್ಮ ಸಾಮಥ್ರ್ಯದ ಬಗ್ಗೆ ಧನಾತ್ಮಕ ನಂಬಿಕೆಯನ್ನು ಬೆಳೆಸಿಕೊಳ್ಳಿ: ನಿಮ್ಮ ಬಗ್ಗೆ ಸಮಸ್ಯೆಯನ್ನು ಪರಿಹರಿಸುವ ನಿಮ್ಮ ಸಾಮಥ್ರ್ಯದ ಬಗ್ಗೆ ಪ್ರಜ್ಞಾಪೂರ್ವಕವಾಗಿ ಧನಾತ್ಮಕ ನೋಟ ಬೆಳೆಸಿಕೊಳ್ಳಿ. ನಿಮ್ಮ ಉತ್ತಮ ಗುಣ , ಬಲ ಹಾಗೂ ಸಾಧನೆಯ ಬಗ್ಗೆ ನಿಮಗೆ ಅರಿವಿರಲಿ.

ಸ್ನೇಹ ಬಂಧ: ಜೀವನದ ಒತ್ತಡ ಅಥವಾ ಏನಾದರರೂ ಸಮಸ್ಯೆಗಳು ಎದುರಾದಾಗ ನಿಮಗೆ ಸಹಾಯ ಮಾಡುವ , ಬೆಂಬಲ ನೀಡುವ ಒಂದಿಷ್ಟು ಜನರು, ಸ್ನೇಹಿತರು ಇರುವಂತೆ ನೋಡಿಕೊಳ್ಳಿ.ಸಮಸ್ಯೆಗಳನ್ನು ನಿವಾರಿಸುವ ಕೌಶಲ್ಯ ಬೆಳೆಸಿಕೊಳ್ಳಿ: ಸಮಸ್ಯೆಯನ್ನು ನಿವಾರಿಸುವ ಸಂಭಾವ್ಯ ಮಾರ್ಗಗಳ ಪಟ್ಟಿ ಮಾಡಿಕೊಂಡರೆ ಸಮಸ್ಯೆಯಿಂದ ಆದಷ್ಟು ಬೇಗ ಹೊರಗೆ ಬರಬಹುದು. ತೊಂದರೆಯಲ್ಲಿದ್ದರೆ ಸಹಾಯ ಕೇಳಿ: ಏನಾದರೂ ಸಮಸ್ಯೆ ಅಥವಾ ಪ್ರತಿಕೂಲ ಸ್ಥಿತಿಯಲ್ಲಿದ್ದರೆ ನೀವು ನಂಬುವ ವ್ಯಕ್ತಿಗಳ ಬಳಿ ಸಹಾಯ ಕೇಳಿ. ಕೌನ್ಸೆಲಿಂಗ್ ಅಥವಾ ಚಿಕಿತ್ಸೆ ಕೂಡಾ ಒಂದು ಮಾರ್ಗವಾಗಿದೆ.

ನಿಜ ಸ್ಥಿತಿ ಬಗ್ಗೆ ಅರಿವು: ವಾಸ್ತವಿಕತೆಯ ಆಧಾರದಲ್ಲಿ ಪರಿಸ್ಥಿತಿಗಳನ್ನು ನೋಡಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಿ.

ಸಮಸ್ಯೆಯನ್ನು ಧೈರ್ಯವಾಗಿ ಎದುರಿಸೋಣ: –

ಅಮೇರಿಕದಲ್ಲಿ ಒಬ್ಬ ದೊಡ್ಡ ಉದ್ಯಮಿ ಇದ್ದರು ಭಾರಿ ವ್ಯವಹಾರಸ್ಥರು ಆಗಿಂದ್ದಾಗ್ಗೆ ವ್ಯವಹಾರದಲ್ಲಿ ಜೀವನದಲ್ಲಿ ಸಮಸ್ಯೆಗಳು ಬರುತ್ತಿದ್ದವು. ಕೆಲವೊಮ್ಮೆ ಸಣ್ಣದು, ಕೆಲವೊಮ್ಮೆ ದೊಡ್ಡದು. ಒಮ್ಮೆ ಅವರಿಗೆ ಕುತೂಹಲ ಉಂಟಾಯಿತು. ಇಷ್ಟು ದೊಡ್ಡ ನಗರದಲ್ಲಿ ಈ ಸಮಸ್ಯೆಗಳೆಲ್ಲಾ ನನಗೊಬ್ಬನಿಗೆ ಮಾತ್ರ ಇದೆಯಾ? ಸಮಸ್ಯೆಗಳೇ ಇಲ್ಲದವರು ಯಾರಾದರೂ ಇರಬಹುದಾ? ಎಂದು ಕಂಡುಕೊಳ್ಳಬೇಕೇನಿಸಿತು. ಒಬ್ಬ ಬುದ್ದಿವಂತನನ್ನು ಕರೆದು ಮೂರು ತಿಂಗಳ ಒಳಗೆ ಈ ನಗರದಲ್ಲಿ ಸಮಸ್ಯೆಗಳೇ ಇಲ್ಲದವರ ಪಟ್ಟಿ ಮಾಡಿ ಎಂದು ನೇಮಿಸಿ ಕಳುಹಿಸಿದ. ಮೂರು ತಿಂಗಳ ನಂತರ ಕೇಳಿದಾಗ ಆ ಬುದ್ದಿವಂತ ಸಾವಿರಾರು ಜನ ಇದ್ದಾರೆ ಎಂದ ತಕ್ಷಣ ಶ್ರೀಮಂತ ಬನ್ನಿ ಹೋಗೋಣ ನಾನು ಅಂತಹವರ ಕೈ ಕುಲುಕಬೇಕು ಎಂದ ಕುತೂಹಲದಿಂದ. ಆಗ ಬುದ್ಧಿವಂತ ನಿಧಾನವಾಗಿ ಹೇಳಿದ, ನೀವು ಅವರ ಕೈ ಕುಲುಕಲು ಸಾಧ್ಯವಿಲ್ಲ ಏಕೆಂದರೆ ಅವರೆಲ್ಲ ಆಗಲೆ ಸತ್ತು ಸಮಾಧಿ ಆಗಿದ್ದಾರೆ. ನಾನು ನಗರದ ತುಂಬ ಹುಡುಕಿದೆ; ಸತ್ತವರಿಗೆ ಮಾತ್ರ ಸಮಸ್ಯೆಗಳಿಲ್ಲ ಎಂದು ಹೇಳಿದ ಶ್ರೀಮಂತನಿಗೆ ಈ ಮಾತು ಕೇಳಿ ಜ್ಞಾನೋದಯವಾಯಿತು. ತನಗೆ ಸಮಸ್ಯೆಗಳಿದ್ದರೇನು, ತಾನು ಜೀವಂತವಾಗಿದ್ದೇನಲ್ಲ ಎಂದು ಸಮಾಧಾನವೂ ಆಯಿತು.

ನಾವು ಬಹಳಷ್ಟು ಜನ ಬಯಸುವುದು ನಮಗೆ ಕಷ್ಟ-ಕೋಟಲೆಗಳು ಇರಬಾರದು, ತೊಂದರೆ–ತಾಪತ್ರಯಗಳು ಬರಬಾರದು , ರೋಗ-ರುಜಿನಗಳು ಕಾಡಬಾರದು, ನಿಂದೆ-ಅವಮಾನಗಳು ಬರಬಾರದು ಎಂಬುದಾಗಿ , ಆದರೆ ಇಂತಹ ಸಮಸ್ಯೆಗಳು ಎಲ್ಲರಿಗೂ ಬಂದೇ ಬರುತ್ತವೆ. ಬರುವ ಪ್ರಮಾಣದಲ್ಲಿ ಹೆಚ್ಚು ಕಡಿಮೆ ಇರಬಹುದು ಅಷ್ಟೇ.

ಸಾಮಥ್ರ್ಯನಿಕಷ-

ಮನುಷ್ಯನ ನಿಜವಾದ ಸಾಮಥ್ರ್ಯ ಪ್ರಕಟವಾಗುವುದೇ ಕಷ್ಟದ ಕಾಲದಲ್ಲಿ : ಸಮಸ್ಯೆಯ ಸಮಯದಲ್ಲಿ ಹನುಮಂತನ ಅಪಾರ ಸಾಮಥ್ರ್ಯ ಗೊತ್ತಾದದ್ದೇ ಸಮುದ್ರೋಲ್ಲಂಘನ ಮಾಡಿದಾಗ ಅಲ್ಲಿಯ ತನಕ ಆತ ಎಲೆಮರೆಯ ಕಾಯಿಯಂತಿದ್ದ. ಸ್ವತಃ ಆತನ ಸಾಮಥ್ರ್ಯ ಆತನಿಗೆ ಗೊತ್ತಿರಲಿಲ್ಲ. ಲಂಕೆಗೆ ಹೋಗಿ ಸೀತೆಯನ್ನು ಹುಡುಕಬೇಕು; ಆದರೆ ಲಂಕೆಯನ್ನು ತಲುಪಲು ಸಮುದ್ರವನ್ನು ಹಾರುವವರು ಯಾರು ಎಂಬ ಸಮಸ್ಯೆ ಬಂದಾಗ ಹನುಮಂತನಿಂದ ಇದಕ್ಕೊಂದು ಪರಿಹಾರ ಸಿಕ್ಕಿತು. ಹನುಮಂತನ ಸಾಮಥ್ರ್ಯ ಜಗತ್ತಿಗೆ ಗೊತ್ತಾಯಿತು. ಜೀವನದುದ್ದಕ್ಕೂ ಸಮಸ್ಯೆಯೇ ಇಲ್ಲದೆ ಸುಖವೇ ಇದ್ದರೆ ಯಾರ ಬದುಕೂ ಅರಳುವುದಿಲ್ಲ. ಜೀವನ ಅರಳಬೇಕಾದರೆ ಬೆಳಗಬೇಕಾದರೆ ಕಷ್ಟ ಎಂಬ ಪರೀಕ್ಷೆ ಇರಬೇಕು ಆದ್ದರಿಂದ ಭಗವಂತ ಸೋಲು-ಗೆಲುವು ಸುಖ-ದುಃಖ ಮಾನ-ಅಪಮಾನ ಎಂಬಂತಹ ದ್ವಂದ್ವಗಳನ್ನು ಮನುಷ್ಯನಿಗೆ ಕೊಟ್ಟಿದ್ದಾನೆ. ಸೋಲು ಮನುಷ್ಯನನ್ನು ನರಳಿಸಲು ಭಗವಂತ ಸೃಷ್ಟಿಸಿಲ್ಲ ಬದಲಿಗೆ ಜೀವನವನ್ನು ಅರಳಿಸಲು ಸೃಷ್ಟಿಸಿದ್ದಾನೆ. ಮನುಷ್ಯನಿಗೆ ಸಿಹಿ ಇಷ್ಟವೆಂದು ನಿರಂತರ ಸಿಹಿ ಮಾತ್ರ ತಿಂದರೆ ಅದರಿಂದ ಆರೋಗ್ಯವೂ ಹಾಳಾಗುತ್ತದೆ. ನಾಲಿಗೆ ರುಚಿಯೂ ಕೆಟ್ಟು ಹೋಗುತ್ತದೆ. ಆದ್ದರಿಂದ ಸಿಹಿಯೊಂದಿಗೆ ಕಹಿಯೂ ಬೇಕು. ಬೇವು ಬೆಲ್ಲವಿದ್ದಾಗಲೇ ಜೀವನ ಸಹ್ಯವಾಗುವುದು.
“ ನ ದೈನ್ಯಂ , ನ ಪಲಾಯನಂ ”-

ಸಮಸ್ಯೆ ಎದುರಾದಾಗ ಅದನ್ನು ಪರಿಹರಿಸಲು ಪ್ರಯತ್ನಿಸಬೇಕೆ ವಿನಾ ಭಗವಂತನನ್ನೊ, ಇನ್ನಾರನ್ನೊ ದೂರುವದರಲ್ಲಿ ಯಾವುದೇ ಅರ್ಥವಿಲ್ಲ. ನಮ್ಮ ಶಾಸ್ತ್ರದಲ್ಲಿ ಒಂದು ಮಾತು ಬರುತ್ತದೆ. ನ ದೈನ್ಯಂ ನ ಪಲಾಯನಂ ಎಂಬುದಾಗಿ ಸಮಸ್ಯೆ ಬಂದಾಗ ನಾವು ಅದರ ಎದುರು ಅಧೀರಾಗುವುದಲ್ಲ. ಅಥವಾ ಸಮಸ್ಯೆ ಬಿಟ್ಟು ಓಡಿಗೋಗುವುದಲ್ಲ. ಸಮಸ್ಯೆಗಳು ಬಂದಾಗ ಅವುಗಳನ್ನು ನೋಡುವ ನಮ್ಮ ಋಣಾತ್ಮಕ ದೃಷ್ಟಿಯಲ್ಲಿ ಪರಿವರ್ತನೆ ಮಾಡಿಕೊಳ್ಳುವುದು ತೀರಾ ಅಗತ್ಯ. ಸಮಸ್ಯೆಗಳು ನಿಜವಾಗಿ ನಮ್ಮನ್ನು ನೋಯಿಸುವುದಿಲ್ಲ. ಅದನ್ನು ವ್ಯಾಖ್ಯಾನಿಸುವ ರೀತಿ ನೋಯಿಸುತ್ತದೆ. ಸಮಸ್ಯೆಯಿಂದ ತೊಂದರೆಯಿಲ್ಲ. ನಾವು ಸೃಜನಶೀಲರಾಗಲು ಅದೊಂದು ಸವಾಲು ಎಂದು ತಿಳಿದುಕೊಂಡರೆ ಸಮಸ್ಯೆಯೊಳಗೇ ಪರಿಹಾರ ಮಾರ್ಗಗಳು ಗೋಚರಿಸುತ್ತವೆ. ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ನಾವು ನಮ್ಮ ವ್ಯಕ್ತಿತ್ವವನ್ನು ಸಮಸ್ಯೆಗಿಂತ ದೊಡ್ಡದಾಗಿ ಬೆಳೆಸಿಕೊಳ್ಳಬೇಕು. ಈ ರೀತಿ ಬೆಳೆಸಿಕೊಳ್ಳುವ ಸಾಮಥ್ರ್ಯ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಅದರ ಅರಿವು ಮಾತ್ರ ನಮಗಿರುವುದಿಲ್ಲ. ಸಮಸ್ಯೆಯ ಸಣ್ಣ ಸರಳ ರೇಖೆಯೆದುರು ನಾವು ದೊಡ್ಡ ರೇಖೆಯಾಗಿ ರೂಪುಗೊಂಡರೆ, ಸಮಸ್ಯೆಯ ರೇಖೆ ಚಿಕ್ಕದಾಗುತ್ತದೆ. ಆಗ ಅದನ್ನು ಪರಿಹರಿಸಲು ಸುಲಭವಾಗುತ್ತದೆ. ಆಕಸ್ಮಾತ್ ಆಗಿ ನಾವು ಸಮಸ್ಯೆಗಳಿಗೆ ಹೆದರಿದರೆ ಅದು ಆಕಾಶದೆತ್ತರಕ್ಕೆ ಬೆಳೆದು ನಮ್ಮನ್ನು ಇನ್ನಷ್ಟು ಚಿಂತೆಯ ಚಿತೆಗೆ ತಳ್ಳಿಬಿಡುತ್ತದೆ.

ಅರಣ್ಯದ ದೊಡ್ಡ ಮರವೊಂದರ ಪಕ್ಷದಲ್ಲಿ ಒಂದು ಸರೋವರವಿತ್ತು. ಸರೋವರದಲ್ಲಿ ಒಂದು ಮುದಿ ಮೊಸಳೆಯಿತ್ತು. ನೂರಾರು ಕಷ್ಟಗಳಿದ್ದವು. ಮರದ ಮೇಲೊಂದು ಮುದಿಗೂಬೆ ಕುಳಿತಿರುತ್ತಿತ್ತು. ಅದು ದಿನವಿಡೀ ಸರೋವರದಲ್ಲಿ ನಡೆಯುವದೆಲ್ಲವನ್ನೂ ಗಮನಿಸುತ್ತಿತ್ತು. ವಯಸ್ಸಾಗಿದ್ದ ಮೊಸಳೆಯು ಪ್ರತಿದಿನ ಸರೋವರದಲ್ಲಿದ್ದ ಕಪ್ಪೆಗಳಲ್ಲಿ ಕೆಲವೊಂದನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿತ್ತು. ಸರೋವರದಲ್ಲಿ ನೂರಾರು ಕಪ್ಪೆಗಳಿದ್ದರೂ ಮೊಸಳೆಯಿಂದಾಗಿ ಅವುಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದು, ಕೊನೆಗೊಮದು ದಿನ ಮುದಿಕಪ್ಪೆ ಉಳಿದುಕೊಂಡಿತ್ತು. ಅದು ಮರದ ಮೇಲಿದ್ದ ಗೂಬೆಗೆ ನನ್ನ ಮಕ್ಕಳು-ಮೊಮ್ಮಕ್ಕಳು , ಬಂಧು ಬಳಗದ ಕಪ್ಪೆಗಳನ್ನೆಲ್ಲ ಮೊಸಳೆ ತಿಂದು ಮುಗಿಸಿದೆ. ಆಗ ನನಗೆ ಆಳು ಬರಲಿಲ್ಲ. ಈಗ ಉಳಿದಿರುವ ನನ್ನನ್ನೂ ಮೊಸಳೆ ನಾಳೆ ತಿಂದು ಹಾಕುತ್ತದೆ. ನನಗೀಗ ಅಳು ಬರುತ್ತಿದೆ. ನಾನೇನು ಮಾಡಲಿ? ಎಂದು ಗೋಳಾಡಿತು. ಮುದಿಗೂಬೆ ಗಂಭೀರವಾಗಿ ನೀನು ಸರೋವರದಲ್ಲೇ ಇದ್ದರೆ ಮೊಸಳೆ ನಿನ್ನ್ನನೂ ತಿನ್ನುತ್ತದೆ. ನೀನು ಮರದ ಕೊಂಬೆಯ ಮೇಲೆ ಹಾರಿ ಕುಳಿತುಕೋ ಮೊಸಳೆಯು ಮರವನ್ನೇಲಾರದು. ನೀನು ಬದುಕಿಕೊಳ್ಳುತ್ತೀಯ’ ಎಂದಿತು. ಕಪ್ಪೆಯು ನಾನು ಹೆಚ್ಚೆಂದರೆ ನಾಲ್ಕೈದಡಿ ಜಿಗಿಯಬಲ್ಲೆ , ಇಪ್ಪತ್ತಡಿ ಎತ್ತರವಿರುವ ಮರದ ಮೇಲಕ್ಕೆ ಹೇಗೆ ಹಾರಲಿ? ಎಂದು ಕೇಳಿತು. ಅದಕ್ಕೆ ಮುದಿಗೂಬೆಯು ನಾನು ಅಮೂಲ್ಯವಾದ ಸಲಹೆಗಳನ್ನು ಉಚಿತವಾಗಿ ಕೊಡಬಲ್ಲೆ ಅದನ್ನು ಆಚರಣೆಗೆ ತರುವುದನ್ನು ಹೇಳಲಾರೆ ಎಂದು ಬಿಟ್ಟಿತು.

ಕಪ್ಪೆಯು ದಡದಲ್ಲಿ ಕುಳಿತುಕೊಂಡು ಹಿಂಗಾಲುಗಳನ್ನು ನೆಲಕ್ಕೂರಿ ಮುಂಗಾಲುಗಳನ್ನು ಮೇಲಕ್ಕೆತ್ತಿ ಮರದ ಕಡೆ ಜಿಗಿಯಲು ಪ್ರಯತ್ನಿಸಿತು. ಅದು ನಾಲಕೈದು ಅಡಿ ಎತ್ತರಕ್ಕೆ ಮಾತ್ರ ಜಿಗಿಯಲು ಯಶಸ್ವಿಯಾಯಿತು. ಆದರೆ ಅದು ಪ್ರಯತ್ನವನ್ನು ಬಿಡಲಿಲ್ಲ. ವಟರ್-ವಟರ್ ಎನ್ನುತ್ತ ಮತ್ತೆ ಮತ್ತೆ ಜಿಗಿಯುವ ಪ್ರಯತ್ನ ಮಾಡುತ್ತಿತ್ತು . ಕಪ್ಪೆ ಮಾಡುತ್ತಿದ್ದ ಸದ್ದು ಕೇಳಿಸಿಕೊಂಡ ಮೊಸಳೆಯು ಕುತೂಹಲದಿಂದ ದಡಕ್ಕೆ ಬಂದು ಕುಳಿತುಕೊಂಡಿತು. ಕಪ್ಪೆಯ ಜಿಗಿದಾಟವನ್ನು ನೋಡಿ ಅದು ಗಟ್ಟಿಯಾಗಿ ನ್ಕಕು ಬಿಟ್ಟಿತು. ನಗುವಿನ ಸದ್ದುಕೇಳಿದ ಕಪ್ಪೆ ಹಿಂತಿರುಗಿ ನೋಡಿದಾಗ ತನ್ನ ಹಿಂದೆಯೇ ಮೊಸಳೆ ಇದ್ದುದನ್ನು ಕಂಡಿತು. ಅದರ ಪ್ರಾಣಭಯ ಇನ್ನೂ ಹೆಚ್ಚಾಗಿ ಮೊಸಳೆಯತ್ತಲೇ ಅದು ಜಿಗಿದಾಗ , ಮೊಸಳೆಯ ಬೆನ್ನ ಮೇಲೆಯೇ ಹೋಗಿ ಕುಳಿತಿತ್ತು! ಮೊಸಳೆಗೆ ತನ್ನ ಬೆನ್ನ ಮೇಲೇಯೇ ಕುಳಿತಿದ್ದ ಕಪ್ಪೆಯನ್ನು ತಿನ್ನಲು ಸಾಧ್ಯವಿರಲಿಲ್ಲ. ಕಪ್ಪೆ ಸುರಕ್ಷಿತವಾಗಿ ಉಳಿಯಿತು. ಸಮಸ್ಯೆಯಿಂದ ಪಾರಾಗಬೇಕಾದರೆ ಸಮಸ್ಯೆಗಿಂತ ಎತ್ತರಕ್ಕೆ ಜಿಗಿಯಬೇಕು. ಸಮಸ್ಯೆಯ ಮೇಲೆಯೇ ಹೋಗಿ ಕುಳಿತುಕೊಳ್ಳಬೇಕು.

ನಮ್ಮ ಸಮಸ್ಯೆಗಳಿಗೆ ಯಾರೋ ಧಿಡೀರ್ ಪರಿಹಾರ ಸೂಚಿಸುವರೆಂದು ನಾವು ನಂಬುತ್ತೇವೆ. ಆದರೆ ಸಮಸ್ಯೆಗೆ ಪರಿಹಾರ ನಮ್ಮ ಕೈಯಲ್ಲೇ ಇರುತ್ತದೆ. ಅದು ಪುಸ್ತಕದಲ್ಲಿರುವುದಿಲ್ಲ. ನಮ್ಮ ಮಸ್ತಕದಲ್ಲಿರುತ್ತದೆ. ನಮ್ಮ ಪ್ರಯತ್ನವನ್ನು ಅವಲಂಬಿಸಿರುತ್ತದೆ. ಯಾವ ಸಮಸ್ಯೆಯೂ ಮೊದಲ ದಿನದಷ್ಟು ಎರಡನೇಯ ದಿನ, ಎರಡನೆಯ ದಿನದಷ್ಟು ಮೂರನೇಯ ದಿನ ತೀವ್ರವಾಗಿರುವುದಿಲ್ಲ. ಸಮಸ್ಯೆಗೆ ಬೆಳವಣಿಗೆ ಎಂಬುದೇ ಇಲ್ಲ. ಅದಕ್ಕೆ ಎರಡೇ ಸ್ಥಿತಿ. ಒಂದು ಹುಟ್ಟು, ಇನ್ನೊಂದು ಸಾವು. ಸಮಸ್ಯೆ ಹುಟ್ಟಿತು ಎಂದು ತಿಳಿದ ತಕ್ಷಣ ಅದರ ಸಾವನ್ನಷ್ಟೇ ಕಾಯಬೇಕು. ಸಮಸ್ಯೆಗೆ ಸಾವು ಬೇಗ ಬರಬೇಕಾದರೆ ಅದನ್ನು ನಾವು ಎದುರಿಸಬೇಕು. ಸಮಸ್ಯೆಗಳಿಗೆ ಎಂದೂ ಹೆದರಬಾರದು. ಸಮಸ್ಯೆಯನ್ನು ಧೈರ್ಯದಿಂದ ನಿವಾರಿಸಲು ಪ್ರಯತ್ನಿಸದೇ ಅದರ ಬಗ್ಗೆಯೆ ಚಿಂತಿಸುತ್ತಿದ್ದರೆ ಅದು ನಮಗೆ ಇನ್ನೂ ಭಾರವಾಗುತ್ತದೆ. ನಿಜವಾದ ಸಮಸ್ಯೆಯಾಗಿ ಕಾಡುತ್ತದೆ. ಅಧ್ಯಾಪಕಿಯೊಬ್ಬಳು ಒಂದು ಪುಟ್ಟ ಗ್ಲಾಸನ್ನು ಹಿಡಿದುಕೊಂಡು ವಿದ್ಯಾರ್ಥಿಗಳನ್ನು ಪ್ರಶ್ನಿಸಿದಳು , ಈ ಗ್ಲಾಸಿನ ಭಾರವೇನು? ಅನೇಕ ಉತ್ತರಗಳು ಕೇಳಿಬಂದವು ಆದರೆ ಓರ್ವ ಹುಡುಗಿ ಎದ್ದು ನಿಂತು ಹೇಳಿದಳು ‘ ಮೇಡಂ ಅದು ಸಾಪೇಕ್ಷವಾಗಿದೆ. ಗ್ಲಾಸನ್ನು ಒಂದು ನಿಮಿಷ ಹಿಡಿದುಕೊಂಡರೆ ಒಂದು ಯುನಿಟ್ ಭಾರವಿರುತ್ತದೆ. ಒಂದು ಗಂಟೆ ಕಾಲ ಹಿಡಿದುಕೊಂಡರೆ ತುಂಬಾ ಭಾರವಾಗುತ್ತದೆ. ಒಂದು ದಿನ ಹಿಡಿದುಕೊಂಡರೆ ಅದಕ್ಕಿಂತ ಹಿಂಸೆ ಬೇರಿಲ್ಲ.

ಸಮಸ್ಯೆಯ ಬಗ್ಗೆ ದಲೈಲಾಮಾ ಹೇಳುತ್ತಾರೆ, ಒಂದು ಸಮಸ್ಯೆಗೆ ಪರಿಹಾರ ಇದೆ ಎಂದಾದರೆ ಅದರ ಬಗ್ಗೆ ಹೆಚ್ಚು ಹೆದರಬೇಕಾಗಿಲ್ಲ. ಚಿಂತೆಯಲ್ಲಿ ಮುಳುಗುವ ಅಗತ್ಯವಿಲ್ಲ. ಇಲ್ಲಿ ಮಾಡಬೇಕಾದ ಕೆಲಸವೆಂದರೆ ಪರಿಹಾರ ಹುಡುಕುವುದು. ನಿಮ್ಮ ಸಮಸ್ಯೆಗೆ ಪರಿಹಾರವೇ ಇಲ್ಲವೆಂದಾದರೇ , ಅದರ ಬಗ್ಗೆ ಚಿಂತಿಸುವ , ಹೆದರುವ ಅಥವಾ ಖಿನ್ನರಾಗುವ ಅಗತ್ಯವೇ ಇಲ್ಲ! ಏಕೆಂದರೆ ಅದನ್ನು ಸರಿಪಡಿಸಲು ನೀವು ಏನು ಮಾಡಿದರೂ ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ಎಷ್ಟು ಬೇಗ ನೀವು ವಾಸ್ತವವನ್ನು ಒಪ್ಪಿಕೊಳ್ಳುತ್ತಿರೋ ಅಷ್ಟು ಬೇಗ ನಿರಾಳರಾಗುತ್ತೀರಿ. ಜೀವನದಲ್ಲಿ ಸಮಸ್ಯೆ ಇರಬಹುದು , ಆದರೆ ಜೀವನವೇ ಸಮಸ್ಯೆಯಾಗಬಾರದು. ಜೀವನವೇ ಸಮಸ್ಯೆಯಾದಾಗ ಬದುಕು ಭಾರವಾಗುತ್ತದೆ. ಬದುಕು ಭಾರವಾಗದೇ ಬಂಗಾರವಾಗಬೇಕಾದರೆ ಸಮಸ್ಯೆಯೊಂದಿಗೆ ಕೊಚ್ಚಿಕೊಂಡು ಹೋಗಬಾರದು. ಸಮಸ್ಯೆಯ ತೆರೆಗಳ ಮೇಲಿಂದ ಆರಾಮವಾಗಿ ಈಜಿಕೊಂಡು ಹೋದರೆ ಜೀವನ ಒಂದು ಉತ್ಸವವಾಗುತ್ತದೆ. ಆನಂದಮಯವಾಗುತ್ತದೆ. ಸಮಸ್ಯೆಯನ್ನು ಧೈರ್ಯವಾಗಿ ಎದುರಿಸಿ ಪರಿಹರಿಸಿಕೊಳ್ಳುವ ಕಲೆಯನ್ನು ಬೆಳೆಸಿಕೊಳ್ಳೋಣ.

ಸ್ವಾಮಿ ವಿವೇಕಾನಂದರು ಕಾಶಿಯಲ್ಲಿದ್ದಾಗ ನಡೆದ ಘಟನೆ. ಅಲ್ಲಿ ಒಂದು ದೊಡ್ಡ ಕೆರೆ . ಅದರ ಪಕ್ಕದಲ್ಲಿ ದೊಡ್ಡ ಗೋಡೆ. ಅಲ್ಲಿ ಬೇಕಾದಷ್ಟು ಕೋತಿಗಳು ಇದ್ದವು. ಅವು ಭೀಮಾಕಾರದವು. ಕೆಲವು ವೇಳೆ ಉಗ್ರ ಸ್ವಭಾವವನ್ನು ತಾಳುತ್ತಿದ್ದವು. ಒಂದು ದಿನ ವಿವೇಕಾನಂದರು ಅಲ್ಲಿ ಓಡಾಡುತ್ತಿದ್ದಾರೆ. ಅವರು ಆ ದಾರಿಯಲ್ಲಿ ಹೋಗಬಾರದೆಂದು ಅವು ಸಂಕಲ್ಪ ಮಾಡಿದ್ದವೋ ಏನೋ? ಜೋರಾಗಿ ಕಿರಿಚಾಡಿ ವಿವೇಕಾನಂದರ ಕಾಲನ್ನು ಹಿಡಿಯಲು ಪ್ರಯತ್ನಿಸಿತು. ಇವರು ಗಾಬರಿಯಿಂದ ಓಡಲು ಪ್ರಾರಂಭಿಸಿದರು. ಕೋತಿಗಳೂ ಓಡಿದವು. ವಿವೇಕಾನಂದರು ವೇಗವಾಗಿ ಓಡಿದರು. ಕೋತಿಗಳೂ ಇನ್ನೂ ವೇಗವಾಗಿ ಓಡಿ ಬಂದು ಕಚ್ಚಲು ಪ್ರಯತ್ನಿಸಿದವು. ಹೇಗೆ ಪಾರಾಗುವುದೆಂದು ಕಂಗಾಲಾಗುತ್ತಿರುವಾಗ ಒಬ್ಬ ಅಪರಿಚಿತ ಸಾಧು ಗೋಚರಿಸಿ ನಿಲ್ಲು, ಓಡಬೇಡ, ಧೈರ್ಯವಾಗಿ ಕೋತಿಗಳನ್ನು ಎದುರಿಸು ಎಂದು ಘರ್ಜಿಸಿ ಹೇಳಿದ . ವಿವೇಕಾನಂದರು ಅವರ ಮಾತಿನಂತೆ ನಿಂತು ಕಪಿಗಳನ್ನು ಒಮ್ಮೆ ದುರಗುಟ್ಟಿ ನೋಡಿದರು. ಕೋತಿಗಳು ಪಲಾಯನ ಮಾಡುದವು. ಭಯಾನಕವಾದುದನ್ನು ಧೈರ್ಯವಾಗಿ ನಾವು ಎದುರಿಸಿದಾಗ ಕಪಿಗಳಂತೆ ಪಲಾಯನ ಮಾಡುವುದು. ಅಂಜಿಕೆ ಕಷ್ಟ ಅಜ್ಞಾನ ಪಲಾಯನವಾಗಬೇಕಾದರೆ ಅವುಗಳೊಂದಿಗೆ ಹೋರಾಡಬೇಕು. ಇಂತಹ ಅನುಭವಗಳು ನಮ್ಮ ಜೀವನದಲ್ಲಿ ಸಾಕಷ್ಟು ಭಾರಿ ಆಗಿರುತ್ತವೆ.
ಧೈರ್ಯವೇ ನಮ್ಮ ಶಕ್ತಿ-

ಒಂದು ದಿನ ರೈತನೊಬ್ಬನ ಎತ್ತು ಹಾಳುಬಾವಿಯಲ್ಲಿ ಬಿದ್ದು ಜೋರಾಗಿ ಅಂಬಾ ಅಂಬಾ ಎನ್ನತೊಡಗಿತು. ಗಂಟೆಗಳು ಉರುಳಿದವು. ರೈತ ಏನು ಮಾಡಬೇಕು ಎಂದು ತೋಚದೆ ತಲೆ ಮೇಲೆ ಕೈ ಹೊತ್ತು ಕುಳಿತ. ಕೊನೆಗೆ ; ಎತ್ತು ಹೇಗೂ ಮುದಿಯಾಗಿದೆ. ಅದನ್ನು ಬದುಕಿಸಿಕೊಂಡರೂ ಏನೂ ಪ್ರಯೋಜನವಿಲ್ಲ. ಅದನ್ನು ಬಾವಿಯಲ್ಲಿಯೇ ಹೂತುಬಿಟ್ಟರಾಯಿತು. ಎಂದು ವಿಚಾರ ಮಾಡಿದ. ಒಬ್ಬನೇ ಬಾವಿಯನ್ನು ಮುಚ್ಚುವುದು ಸಾಧ್ಯವಿರಲಿಲ್ಲ. ಹೀಗಾಗಿ ನೆರವಿಗಾಗಿ ತನ್ನೂರಿನ ಒಂದಷ್ಟು ಜನರನ್ನು ಕರೆದ. ಅವರೆಲ್ಲ ಹಾರೆ, ಸಲಿಕೆಗಳೊಂದಿಗೆ ಸ್ಥಳಕ್ಕೆ ಬಂದರು. ಬಾವಿಯ ಸುತ್ತಲಿನ ಮಣ್ಣು ಅಗೆದು ಬಾವಿಯಲ್ಲಿ ಹಾಕಲು ಶುರು ಮಾಡಿದರು. ಎತ್ತಿಗೆ ಏನಗುತ್ತಿದೆ. ಎಂಬುದು ತಿಳಿಯುತ್ತಿದ್ದಂತೆಯೇ ಅದು ಇನ್ನೂ ಜೋರಾಗಿ ಕೂಗತೊಡಗಿತು. ಸ್ವಲ್ಪ ಹೊತ್ತಿನಲ್ಲೇ ಆಶ್ಚರ್ಯ ಎಂಬಂತೆ ಅದರ ಧ್ವನಿ ನಿಂತು ಹೋಯಿತು. ಎಲ್ಲರೂ ಸುಮ್ಮನೆ ಬಾವಿಯಲ್ಲಿ ಮಣ್ಣು ಹಾಕುತ್ತಿದ್ದರು. ರೈತ ಬಾವಿಯಲ್ಲಿ ಇಣುಕಿ ನೋಡಿದ . ಆಶ್ಚರ್ಯ! ಎತ್ತು ನಡೆಸುತ್ತಿದ್ದ ವಿಚಿತ್ರ ಚಟುವಟಿಕೆ ಅವನ ಕಣ್ಣಿಗೆ ಬಿತ್ತು. ಅದೇನೆಂದರೆ , ಪ್ರತಿ ಬುಟ್ಟಿ ಮಣ್ಣು ಅದರ ಮೈಮೇಲೆ ಬೀಳುತ್ತಿದ್ದಂತೆಯೇ ಅದನ್ನೆಲ್ಲ ಕೆಳಗೆ ಘಾಡಿಸುತ್ತಿತ್ತು. ಅಷ್ಟಲ್ಲದೇ ಒಂದೊಂದೆ ಹೆಜ್ಜೆ ಮುಂದೆ ಹೋಗಿ ಆ ಮಣ್ಣಿನಿಂದ ನಿರ್ಮಣವಾದ ದಿನ್ನೆಯನ್ನೇರಿ ನಿಂತುಕೊಳ್ಳುತ್ತಿತ್ತು. ಮಣ್ಣು ತುಂಬುತ್ತಿದ್ದಂತೆಯೇ ಇಳಿಜಾರಿನ ದಾರಿ ನಿರ್ಮಾಣವಾದಂತಾಗಿತ್ತು. ರೈತ ಮತ್ತು ಗ್ರಾಮಸ್ಥರೆಲ್ಲ ಮಣ್ಣು ಹಾಕುವ ಕಾಯಕ ಮುಂದುವರೆಸಿದರು. ಅದೇ ರೀತಿ ಮಣ್ಣಿನ ಮೇಲೆ ಹತ್ತುತ್ತ ಸಾಗಿತು. ದಡದ ಹತ್ತಿರ ಬರುತ್ತಿದ್ದಂತೆಯೇ ಹೊರಕ್ಕೆ ನೆಗೆದು ಓಡಿತು.

ನೆನಪಿರಲಿ , ನಿಮ್ಮ ಜೀವನದಲ್ಲೂ ಹೀಗೆ ಮಣ್ಣು ಹಾಕುವವರು ಇರುಬಹುದು, ಈ ಸಂದರ್ಭದಲ್ಲಿ ಉತ್ಸಾಹ ಕಳೆದುಕೊಂಡು ಸುಮ್ಮನೆ ಕೂಡುವುದು ಸರಿಯಲ್ಲ, ಬದಲಾಗಿ ಎಲ್ಲ ತರಹದ ರಾಡಿಯನ್ನು ಕೊಡವಿ ಅದನ್ನೇ ಏಣಿಯಾಗಿಸಿ, ಆದರ್ಶಗಳನ್ನು ಬಿಡದೆ ಮುಂದೆ ಸಾಗಬೇಕು.

ನನ್ನಿಂದ ಅನ್ಯರಿಗೆ ತೊಂದರೆಯಾಗಬಾರದು ಎನ್ನುವ ಔದಾರ್ಯವನ್ನು ತೋರಿ ಎಲ್ಲ ಕಷ್ಟವನ್ನೂ ತಾನೇ ಸಹಿಸಿ , ಅನುಭವಿಸಿ ಗತಿಸಿ ಹೋದದ್ದನ್ನು ನೆನೆಯದೆ ಮುಂದೆ ಬರುವ ಎಲ್ಲಕ್ಕೂ ನಾ ಸಿದ್ದ ಎನ್ನುವ ಮನೋಧಾಡ್ರ್ಯವನ್ನು ಬೆಳೆಸಿಕೊಂಡು ಎಷ್ಟು ಸುಖ ಸಿಕ್ಕರೆ ಅಷ್ಟೇ ಸಾಕು ಎನ್ನುವ ತೃಪ್ತಿ ಇರಬೇಕು. ಆ ರೀತಿ ಬದುಕುವುದು ಆದರ್ಶ ಜೀವನ . ಅಂತಹ ಬದುಕನ್ನು ಬದುಕಲು ನಮ್ಮನ್ನು ಸೆಳೆಯುವ ಹಲವಾರು ರೀತಿಯ ಬದುಕಿನ ಸೆಳೆತಗಳು ಬಿಡುವುದುದಿಲ್ಲ. ಆ ಸೆಳೆತಗಳ ಬಲೆಗೆ ಸಿಲುಕಬಾರದು. ಸಿಕ್ಕರೂ ಅವುಗಳಿಂದ ಬಿಡಿಸಿಕೊಂಡು ಬರಲು ಬಹಳ ಧೈರ್ಯ ಬೇಕು. ಆ ಧೈರ್ಯ ನಮ್ಮಲ್ಲಿ ಇದ್ದರೆ “ ಆದರ್ಶ ಜೀವನ”ವನ್ನು ನಮ್ಮದಾಗಿಸಿಕೊಳ್ಳಬಹುದು.

-ಸುನಂದಾ ಎಸ್ ಭರಮನಾಯ್ಕರ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x