ಗೋಡೆಗಳು…
ಅವ ತೋರಿಸೆಂದುದಕೆ
ಇವಳು ತೋರಿಬಿಟ್ಟಳು..
ಸುತ್ತಲ ಗೋಡೆಗಳೆಲ್ಲ ಕೇಳುತ್ತ ನೋಡಿಬಿಟ್ಟವು
ಕೆಲ ಗೋಡೆಗಳು ಮಾತಾಡಿಬಿಟ್ಟವು
ಅಡಗಿಸಿಡಬಹುದಾದ ಸಂಗತಿಗಳೆಲ್ಲ
ತೆರದಿಡುವಂತಾಗಿ ಗೋಡೆಯ ಬಾಯಿಗಳು
ಬಡಬಡಿಸುವಂತಾದವು
ಗೋಡೆಗಳ ಮಧ್ಯೆ ಗೌಪ್ಯವಾಗಿಡಬಹುದೆಂಬುದು
ಈಗೀಗ ಸುಲಭ ಸಾಧ್ಯವಲ್ಲ
ಈಗಿನ ಗೋಡೆಗಳು ಆಗಿನ ಗೋಡೆಗಳಂತಲ್ಲ..
ಕಣ್ಣುಗಳ ಜತೆಗೆ ಕಿವಿಗಳು ಇಷ್ಟಗಲವಾಗಿ
ತೆರೆದು ನಿಮಿರುತ್ತವೆ..
ಕೆಲವಂತೂ ಮಾತನ್ನೇ ಸ್ಖಲಿಸಿಬಿಡುತ್ತವೆ
ಗೋಡೆಗಳ ನಡುವೆ ಖಾಸಗಿತನವೆಂಬ ಕಾಲ
ಈಗೀಗ ಸಾಮಾನ್ಯವಾಗುಳಿದಿಲ್ಲ
ಗೋಡೆಗಳ ಮಧ್ಯೆ ವಿರಕ್ತರ ಬಟ್ಟೆಗಳ ಕಲೆಯೂ ಸಹ
ಸಾಕಷ್ಟು ಕತೆಗಳನ್ನು ಹಡೆಯುತ್ತಿದೆ.
ಗೋಡೆಗಳಿಂದೀಚೆಗೆ ಬಂದ ಕತೆಗಳಲ್ಲಿನ ಪಾತ್ರಗಳು
ಒಂದನ್ನೊಂದು ಒಪ್ಪಿಕೊಳ್ಳುವುದಿಲ್ಲ..
ಕಲ್ಪನೆಯ ಜಾಡಿನೊಳಗೆ ಸುಳಿದಾಡಿದ ಕಾಕತಾಳೀಯ ಎಂಬ ಷರಾದೊಂದಿಗೆ
ಮರೆಯಾಗಿಬಿಡುತ್ತವೆ..
ದೇಹಗಳ ತೀಟೆಗೆ ಗೋಡೆಗಳೂ ಬೇಸತ್ತಿವೆ..
ಮನಸು ತನ್ನ ತಪ್ಪನ್ನು ಕಾಲದ ಮೇಲೆ ಹೊರಿಸಿದೆ.
ಆತ್ಮ ಅಲ್ಲೆಲ್ಲೋ ಅಲೆದಾಡುತ್ತಿದೆ..
ಗೋಡೆಗಳು ಮತ್ತೊಂದು ದೃಶ್ಯಕ್ಕೆ ಸಿದ್ಧವಾಗುತ್ತಿವೆ..
-ಸಚಿನ್‌ಕುಮಾರ ಬ. ಹಿರೇಮಠ
ದೇವರಾಗಿ ಬಿಡಿ
ಯಾರಾದರೂ ತಿಳಿಸಿ ನನಗೆ
ನನ್ನನ್ನು ಕೊಂದದ್ದಾರೂ ಏಕೆ?॥
ಹಿಂದುಗಳು ಮುಸಲ್ಮಾನನೆಂದು
ಮುಸಲ್ಮಾನರು ಹಿಂದುವೆಂದು
ಬಾಯಿಗೆ ಬಟ್ಟೆ ಹಾಕಿ ಶಬ್ದಗಳ ಕಟ್ಟಿದಿರಿ
ಚೂರಿಯಿಂದಿರಿದು ನನ್ನ ಕೊಂದಿರಿ॥
ಸುಮ್ಮನೆ ನನ್ನಷ್ಟಕ್ಕೆ ನಾನು ದುಡಿದು ತಿನ್ನುವವ
ಮುಸಲ್ಮಾನನಿಗೆ ಸಲಾಮ್ ಅನ್ನುವವ
ಹಿಂದೂವಿಗೆ ನಮಸ್ಕಾರ ಅನ್ನುವವ
ನಾ ಬಡವ ವ್ಯಾಪಾರ ಮಾಡಿ ಹೆಂಡತಿ ಮಕ್ಕಳಿಗೆ ಇಕ್ಕುವವ॥
ಸರಿ ಕೊಲ್ಲಬೇಕೆಂದಿರಿ ಕೊಂದಿರಿ
ಈಗ ನನಗೂ ತಿಳಿಯುತ್ತಿಲ್ಲ ಹೇಳಿರಿ
ನನ್ನನ್ನೇಕೆ ಕೊಂದಿರಿ?॥
ಬಡವನ ಮನೆಗೆ ದುಡಿಯುವವನೇ ದೇವರು
ನನ್ನ ಮನೆಯೊಳಗೀಗ ದುಡಿಯುವವರೇ ಇಲ್ಲ
ಈಗ ಅಲ್ಲಿ ಅಲ್ಲಾನೂ ಇಲ್ಲ ಭಗವಂತನೂ ಇಲ್ಲ
ಹಸಿವೆಂಬ ರಾಕ್ಷಸ ಮಡದಿ ಮಕ್ಕಳೊಡಲಲ್ಲಿದೆ
ಅವರನ್ನು ಕೊಂದು ಬಿಡಿ
ನೀವೇ ದೇವರಾಗಿ ಬಿಡಿ॥
-ಇಂದ್ರ
ಮೇಣದ ಬತ್ತಿ-ನೆರಳು
ಕತ್ತಲು ಕವಿದಿತ್ತು,
ನೆತ್ತರ ಬಣ್ಣದ ಸೂರ್ಯನೂ
ಆಗಷ್ಟೇ ಮುಳುಗಿದ್ದ…
ತಂಗಾಳಿ ಬೀಸುತ್ತಿರಲು
ಆ ಸದ್ದಿಗೆ
ನೀರವತೆಯೂ ಮೌನ ಮುರಿದಿತ್ತು…
ದೀಪವಿಲ್ಲದ ಮನೆಯಲ್ಲಿ
ತಡಕಾಡಿದಳು ಅವಳು
ಮೇಣದ ಬತ್ತಿಗಾಗಿ…
ಒಂಟಿತನವಲ್ಲದೆ ಯಾರಿರಲಿಲ್ಲ ,
ಪಾಪ!! ಅವಳ ಜೊತೆಗಾಗಿ…
ಸಣ್ಣದೊಂದು ಸದ್ದೂ ಕೂಡ
ಗುಡುಗಿನಂತೆ ಕಿವಿಗೆ ರಾಚುತಿತ್ತು..
ಬತ್ತಿ ಹೊತ್ತಿಸಿ ಕೋಣೆಯ ಹೊರ
ನಡೆದಳವಳು…
ಹಿಂದೆ ಹಿಂಬಾಲಿಸುತ್ತಿದ್ದ,
ಒಂದು ನೆರಳ, ಆ ಬೆಳಕಿನಲ್ಲಿ
ಕಂಡಳವಳು …
ಅವಳ ಎದೆಯ ಸದ್ದು ಏರಿ
ಪ್ರತಿಧ್ವನಿಸಿತು ಹೆದರಿ
ಓಡಿದ ದಾರಿ ತುಂಬಾ…
ಕೈಯಲ್ಲಿದ್ದ ಬತ್ತಿ ಬಿದ್ದು
ಕೆಳಗೆ , ಕತ್ತಲೆ ಆವರಿಸಿತು
ಮತ್ತೆ ಆ ಮನೆಯ ತುಂಬಾ….
ಅವಳ ಆಕ್ರಂದನದೊಂದಿಗೆ
ಕೇಳುತಿತ್ತು ಗಹಗಹಿಸುವ ನಗು
ಆ!! ಆ!! ಮನೆ ಇದ್ದ ಗಲ್ಲಿಯ ತುಂಬಾ…
-ಶೀತಲ್ ವನ್ಸರಾಜ್
ಪ್ರೇಮವೆಂದರೆ..!
ಹೊತ್ತು ಹೊತ್ತಿಗು ಸಿಗುವ
ತುತ್ತು ಅನ್ನ, ಪತಿಯ ಪ್ರೀತಿ,
ಅತ್ತೆ ಮಾವರ ಮುದ್ದು
ಮಾತುಗಳಷ್ಟೇ ಪ್ರೇಮ
ಬಗೆಯೇ..?
ಪ್ರೇಮವೆಂದರೆ…
ಜಡದ ಚೇತನ,
ಶ್ರದ್ಧೆ -ಭಕ್ತಿಯ ಮೂಲ,
ಭಾವ ಪರವಶದ ಬೇರು,
ಪರಮಾನಂದದ
ಮುಗ್ಧ ಮಂತ್ರ..!
ಮೀರಾಳದ್ದು ಮಾಧವಗೆ ಪ್ರತಿ
ವಾಸನಾ ರಹಿತ ಪ್ರೇಮವಲ್ಲವೇ..?
ರಾಧೆಯದ್ದು ಕೃಷ್ಣನಿಗಾಗಿ
ನಿಸ್ವಾರ್ಥ ಪ್ರೇಮವಲ್ಲವೇ..?
ಚನ್ನಮಲ್ಲಿಕಾರ್ಜುನನ ಪ್ರತಿ
ಅಕ್ಕನದ್ದು ವಿಮುಕ್ತ ಪ್ರೇಮವಲ್ಲವೇ..?
ಲಕ್ಮ್ಷೀ ಬಾಯಿಯದ್ದು ದೇಶ ಕುರಿತು
ಸ್ವಾತಂತ್ರ್ಯ ಪ್ರೇಮವಲ್ಲವೇ..?
ಗಾಂಧೀಯದ್ದು ದೇಶದ ಪ್ರತಿ
ಅಹಿಂಸಾ ಪ್ರೇಮವಲ್ಲವೇ..?
ದೇಶಕ್ಕಾಗಿ ನಿನ್ನ ಹೆತ್ತಿರುವೆ
ಎಂದ ಮೋದಿ ಮಾತೆಯದ್ದು
ದೇಶ ಪ್ರೇಮವಲ್ಲವೇ..?
ಭ್ರಷ್ಟರಿಂದ ಜನರ ರಕ್ಷಿಸುತ್ತಿರುವ
ಮೋದೀಯದ್ದು ರಾಷ್ಟ್ರ ಪ್ರೇಮವಲ್ಲವೇ..?
ಪ್ರೇಮವೆಂದರೆ, ನಿಸ್ವಾರ್ಥ ಭಾವ..!
ಕಾಳಜಿಯ ಕಳಶ..!
ಪ್ರೇಮವೆಂದರೆ, ತಪಸ್ಸು..!
ಪ್ರೇಮವೆಂದರೆ, ಮುಕ್ತಿಯ ನೆಲೆ
ಉತ್ಸಾಹದ ಸೆಲೆ..!
ಭಕ್ತಿಯ ಪರಾಕಾಷ್ಠೆ..!!
-ಕವಿತಾ ಸಾರಂಗಮಠ
ಮುದ್ದು’ ಮನವೇ
ಎಲ್ಲರಂತಲ್ಲ ನೀನು
ಎಂದು ತಿಳಿದಿದ್ದೆ ನಾನು
ಕಳಚಿಬಿಟ್ಟೆ ಮುಖವಾಡವ
ಕಲಕಿಬಿಟ್ಟು ಶಾಂತ ಮನವ
ಮರೆಯುವುದಿಷ್ಟು ಸುಲಭವೇ?
ಖಂಡಿತಾ ಎಣಿಸಿರಲಿಲ್ಲ ನಾನು..
ನಾಟಕೀಯ ನಡೆಗೆ ಆಯಸ್ಸಾದರೂ ಎಷ್ಟು?
ಇಂದಲ್ಲ ನಾಳೆ ಕಳಚಬೇಕಲ್ಲ ಕೊಂಡಿ.!
ಬೇಕೆನಿಸಿದ್ದರೆ ಕೊಂಚ ವಿರಾಮ
ಕೇಳಿಬಿಡಬಹುದಿತ್ತು..
ಇಷ್ಟವಿಲ್ಲ ಎನ್ನುವುದಾದರೆ…
ಹೇಳಿಬಿಡಬಹುದಿತ್ತು… ಪ್ರಶ್ನಿಸಲು ನಾನಾರು..?
ಮರೆಯಬಹುದಿತ್ತೇನೋ…. ಇದನು
ಬರೀ ದೇಹದೊಂದಿಗಿನ ನಂಟಾಗಿದ್ದರೆ
ಮನಸಿನೊಡನೆಯ ನಂಟು…
ಬಹುಶಃ ಬಿಡುಗಡೆಯಾಗದ ಬ್ರಹ್ಮಗಂಟು?
ಬಹು ಸುಲಭದ ಕೆಲಸ…. ಇರಬಹುದು ನಿನಗೆ…
ನನಗದು ಖಂಡಿತಾ ಬಲು ಕಷ್ಟವು
ಬೇಡದೇ ಬಂದ ಬೇಡಿಯ ಬಂಧವಿದು
ಕಳಚಲಾಗದು ಕೊಂಡಿಯ ಸುಲಭವಾಗಿ..
ಗುರುತು ಉಳಿಸಿ ದೂರವಾದ ನಿನ್ನ
ದೂರುವ ಮನಸ್ಸೂ ಆಗುತ್ತಿಲ್ಲ
ಆದರೂ…. ವೇದನೆಗೆ ವೇದಿಕೆಯ ಕಟ್ಟಿದ ನಿನ್ನ
ಮರೆಯುವುದಾದರೂ ಹೇಗೆ… ನಿರುತ್ತರಿ ನಾನು
-ಸುರೇಶ್ ಕಲಾಪ್ರಿಯಾ ಗರಗದಹಳ್ಳಿ
ಗ್ಲಿಸರಿನ್ ಭಾವಗಳು
ನಿಜದಲ್ಲಿ ದುಃಖಗಳು
ಇಷ್ಟು ದುಃಖಕರವೆಂದು ಗೊತ್ತಿರಲಿಲ್ಲ;
ಸಿನೆಮಾದಲ್ಲಿ ಕಂಡಂತೆ
ಮಿಡಿತಗಳಿಗಿಲ್ಲಿ ಪ್ರತಿಫಲವಿಲ್ಲ.
ತೊರೆದೊಡನೆ ನಾಯಕಿಯು ಲಕ್ಷ ವೀಕ್ಷಕರೆದುರು
‘ರಹಸ್ಯ’ವಾಗಿ ಅಳುವ ನಾಯಕನ ದುಃಖದಂತೆ
ನಿಜವಾದ ಯಾತನೆಯು ಆಕರ್ಷಕವಲ್ಲ;
ಕ್ಲೈಮ್ಯಾಕ್ಸ್ ಮುಗಿದರೂ ಮುಗಿಯದೇ ಉಳಿಯುವ
ನೀರಸ ದುಮ್ಮಾನಗಳ ಆಚರಣೆಗಿಲ್ಲಿ
ಯಾವ ಹಿನ್ನೆಲೆ ಸಂಗೀತದ ಸಾಂತ್ವನವೂ ಇಲ್ಲ!
ಖಳನಿಗೂ ಸಲ್ಲುವ ಪಶ್ಚಾತ್ತಾಪದ ಶಿಕ್ಷೆಯ
ಹೇಳಿ ಕೊಡಿಸುವ ನಿರ್ದೇಶಕರು ಇಲ್ಲಿಲ್ಲ;
ಮೋಸ, ದ್ರೋಹಗಳೆಲ್ಲಾ ಸರಿಯೆಂದೇ ನಂಬುತ್ತಾ
ಕಳೆದೇ ಹೋಗುವುದಿಲ್ಲಿ ಜೀವನವೆಲ್ಲಾ.
ಉಪ್ಪು ತಿಂದವರೆಲ್ಲ ಪಾನಕವ ಕುಡಿಯುತಿರೆ
‘ಕರ್ಮಣ್ಯೇ ವಾಧಿಕಾರಸ್ಯೇ’ ಎಂಬುದು ಬರಿಯ ಗಾದೆ;
ನಿನ್ನ ಭಾವಗಳೆಲ್ಲ ನಿನ್ನ ಕವಿತೆಯಲಷ್ಟೇ
ಅವರ ಹಾಡಿನ ರಾಗ ಬೇರೆಯದ್ದೇ!
ಮುಂದೆಂದೋ ಒಂದು ದಿನ ಸಿಗಬಹುದು ಅವರಲ್ಲಿ
ನೆನಪಿದೆಯೇ ಹಳತೆಲ್ಲಾ? ಕೇಳಬೇಡ;
ಸ್ವಾರ್ಥಗಳ ಸಂತೆಯಲಿ ಬಿಕರಿಯಾಗದು ಸರಕು
ಒಲುಮೆಯೆಂದಿಗೂ ಅಗ್ಗ ಕಾಯಬೇಡ.
-ವಿನಾಯಕ ಅರಳಸುರಳಿ
ಹೊನ್ನಿವಳು
ಗರ್ಭ ಸಾಗರ ಜಗದಲಿ ನಲಿವ ಮಾಂಸದ ಮುದ್ದೆಯು
ಉರುಳಿದ ಕ್ಷಣಗಳಲ್ಲಿ ಮೂಡಿತು ನಿನ್ನಾಕಾರವು
ಮನೋಲ್ಲಾಸ ತಂದಿದೆ ಹಿತವಾದ ನಿನ್ನ ಚಲನೆ
ನವಮಾಸ ಹೃದಯ ಗುಡಿಯೊಳಗೆ ದೇವತೆಯ ಸ್ಥಾಪನೆ
ಆಗಮನಕೆ ಸೂರ್ಯರಶ್ಮಿಯ ಮೊದಲ ಸ್ಪರ್ಶವು
ನಗುವೆ ನೀ ತಾಯ ಮಡಿಲು ಮೆತ್ತಗೆ ಸೋಕಲು
ಅದ್ಭುತ ಶಕ್ತಿ ನಿನ್ನೊಳು ಆಯಸ್ಕಾಂತದಂತೆ
ನೋವ ಮರೆಸುವೆ ನೀ ಕೋಲ್ಮಿಂಚಂತೆ
ಚುಕ್ಕಿ ಚಂದ್ರಮ ನೀ ಬರಿದೆ ಅಗಸದಲಿ ಮಿನುಗುವೆ
ಜಲದಲಿ ಅಡಗಿರೆ ನೀ ಸ್ವಾತಿ ಮುತ್ತಾಗುವೆ
ತರು ಲತೆಗಳು ನೀ ಮಾತೃ ಹೃದಯಕೆ ಉಸಿರಾಗುವೆ
ನಂದಾದೀಪವು ನೀ ಪ್ರೀತಿಯಲಿ ಪ್ರಖರದಿ ಜ್ವಲಿಸುವೆ
ವಿದ್ಯೆ ವಿನಯಗಳು ಭೂಷಣವು ನಿನಗೆ
ಪ್ರೀತಿ ವಾತ್ಸಲ್ಯಗಳು ಕಾಣಿಕೆಯು ನಿನಗೆ
ಮುಗಿಲೆತ್ತರಕೆ ಮೊಳಗಲಿ ಜಯ ಘೋಷ
ಕಡಲಾಚೆಯೂ ಹಾರಾಡಲಿ ನಿನ್ನ ಕೀರ್ತಿ ಪತಾಕೆ
ಕಣ್ಣಂಚ ಹನಿ ಬಿಂದುವೇ ನಿನಗೆ ಅಭಿಪ್ರೇರಣೆ
ಹಣೆಯ ಸಿಂಧೂರವೇ ನಿನಗೆ ಶುಭಧಾರಣೆ
ಉತ್ತಮ ನಡೆ ನುಡಿಗಳೆ ನಿನಗೆ ವಜ್ರಾಭರಣಗಳು
ಗುರು ಹಿರಿಯರ ಹರಕೆ ಹಾರೈಕೆಗಳೆ ನಿನಗೆ ಶ್ರೀರಕ್ಷೆಯು
-ಗಾಯತ್ರಿ ನಾರಾಯಣ ಅಡಿಗ
ಹೀಗ್ಯಾಕೆ
ನೀ ಜೊತೆಯಾದ ಮೇಲೆ
ನಾನು ನಾನಾಗಿಲ್ಲ. |
ಊಟ, ನಿದ್ದೆ, ಜಳಕ
ಇದಾವುದುರ ಗಮನವಿಲ್ಲ |
ಸದಾ ನಿನ್ನೊಂದಿಗೆ
ಕಾಲ ಕಳೆಯುತ್ತಿದ್ದಿನಲ್ಲ |
ನನ್ನವರ ಬಗ್ಗೆ
ಕಾಳಜಿ ನನಗಿಲ್ಲ |
ನನ್ನವರ ಪ್ರೀತಿ
ಕಳೆದುಕೊಂಡೆನಲ್ಲ |
ಸಮಾಜದಲ್ಲಿ
ಮೌಲ್ಯ ಕಳೆದುಕೊಂಡೆನಲ್ಲ
ಸದಾ ನಿನ್ನ ಸನಿಹದಲ್ಲೇ
ಕಳೆದು ಹೋದೆನಲ್ಲ
ಅಪಾಯದಲ್ಲಿರುವವರ
ಬಗ್ಗೆ ಹೃದಯ ಮಿಡಿಯಲಿಲ್ಲ
ಅವರ ಅಸಾಯಕತೆಯ
ಜೊತೆ ಸೆಲ್ಪಿ ತೆಗೆದುಕೊಂಡೆನಲ್ಲ
ನಾನೇ ಮೊದಲಿಗನಾಗಲು
ಆ ಸೆಲ್ಪಿ ಹರಿಬಿಟ್ಟೆನಲ್ಲ
ಹೆಚ್ಚೆಚ್ಚು ಲೈಕ್ಸ, ಕಮಿಂಟಗಾಗಿ
ಹಾತೋರೆದೆನಲ್ಲ
ಒಟ್ಟಾರೆಯಾಗಿ …
ಈ ಸೋಷಿಯಲ್ ಮೀಡಿಯಾದಿಂದ
ತಲೆ ಎತ್ತದಂತೆ ಕುಬ್ಜನಾದೆನಲ್ಲ
-ರಾಘವೇಂದ್ರ ಪಟಗಾರ
ಪಿಸುಗುಡುವ ಶಿಲೆಗಳು
ಪಿಸುಗುಡುತಿದೆ ಶಿಲೆಶಿಲೆಯು
ಕಳೆದುಹೋದ ಚರಿತೆಯ,
ಒಡಲಿರುವ ಒರತೆಯ..
(ಶಿಲೆಯ ಸ್ವಗತ)
ನಾನೇ ಆಯ, ನಾನೇ ಪಾಯ
ನಾನೇ ಕಾಯ, ನಾನೇ ಸ್ಥಾಯ.
ಆಳಿ ಅಳಿದ ರಾಜ್ಯಗಳಿಗೆ..
ಬಗೆಹರಿಯದ ವ್ಯಾಜ್ಯಗಳಿಗೆ.
ನಾನೇ ದಾರಿ, ನಾನೇ ದಿಕ್ಕು
ನಾನೇ ಭಾರಿ, ನಾನೇ ಹಕ್ಕು.
ಗಡಿಯನಿರಿಸಿದ ಒಡೆಯನಿಗೆ,
ಅಡಿಯಿಡಿಸಿದ ಗುಡಿಗಳಿಗೆ.
ನಾ ಭಾಗ್ಯ ಕಂಡೆ, ಭೋಗ್ಯ ಕಂಡೆ
ಕಂಡೆ ತೇರು ಪರಿಷೆಯ.
ಪ್ರೀತಿ ಕಂಡೆ, ಪ್ರಣಯ ಕಂಡೆ
ಕಂಡೆ ನಿಷ್ಟಾನಿಷ್ಟೆಯ..
ಆಸೆ ಕಂಡೆ, ದುರಾಸೆ ಕಂಡೆ
ಭಾಷೆ ಮುರಿವ ವೇಷ ಕಂಡೆ.
ಕಂಡೆ ಮನೆಗೆ ಎರಡು ಬಗೆದ
ರುಂಡ ಮುಂಡ ಬೇರಾದ ಬಗೆಯ…
-ಸರೋಜ ಪ್ರಶಾಂತಸ್ವಾಮಿ
ಹೆಣ್ಣೇ ನಿನ್ನ ಜೀವನ ..ನಿತ್ಯ ನೂತನ …
ತಾಯ ಒಡಲ ಬಳ್ಳಿಯಾಗಿ
ಅವಳ ಅವ್ಯಕ್ತ ಭಾವಗಳಿಗೆ ನುಡಿಯಾಗಿ
ಅವಳ ಕಂಗಳಿಂದ ಹರಿದ ಹನಿಗಳ
ಒರೆಸುವ ಕೈಗಳಾಗಿ
ತಾಯಿ -ತಂದೆಯ ಬೆಸುಗೆಯ ಸುಂದರ ಕೊಂಡಿಯಾಗಿ
ತಂದೆಯ ಕಣ್ಣ ಕನಸಾಗಿ
ಆತನ ಕಂಗಳಲಿ ತಾಯಿಯ ಪ್ರತಿರೂಪವಾಗಿ
ಮಮತೆಯ ಮಗಳಾಗಿ
ಅಕ್ಕರೆಯ ಅಕ್ಕನಾಗಿ
ಅಣ್ಣನ ಹಾರೈಕೆಯ ಕೂಸಾಗಿ
ಪ್ರಿಯಕರನ ಪ್ರೇಯಸಿಯಾಗಿ
ಸುಖ ದುಃಖದಲಿ ಸಹಭಾಗಿಯಾಗುವ ಸತಿಯಾಗಿ
ಇನ್ನೊಬ್ಬರ ಮನೆ ಬೆಳಗೋ ಜ್ಯೋತಿಯಾಗಿ
ಹೊಸ ಜೀವದ ಉಗಮಕೆ ಹಾದಿಯಾಗಿ .
ಮತ್ತೊಂದು ಒಡಲ ಕುಡಿಯ ತಾಯಾಗಿ….
ಹೆಣ್ಣೇ ನಿನ್ನ ಜೀವನ ..ನಿತ್ಯ ನೂತನ …
ಡಾ . ಅನುಪಮಾ ದೇಶಮುಖ್
ಬಾಲಕಿಯ ಪ್ರಶ್ನೆ ?
ಪ್ರಶ್ನೆ ಹುಟ್ಟಿವೆ
ಒಂದಲ್ಲ ಎರಡಲ್ಲ
ಪಿಶಾಚಿಗಳ ವರ್ತನೆಯಿಂದ
ಹಾಥರಸ್ ಪ್ರಕರಣದಿಂದ
ತಾತಾ ಗಾಂಧೀ ತಾತಾ
ಮತ್ತೆ ಹುಟ್ಟಿ ಬನ್ನಿ ತಾತಾ
ಮರೆತಿಹರು ನಿನ್ನ ಆದರ್ಶದ ಪಾಠ
ಮರೆಯುತಿಹರು ವಾಲ್ಮೀಕಿಯ ರಾಮಾಯಣ
ಮಾಡುತಿಹರು ಮೂರ್ತಿ ಪೂಜೆ,
ತೋರಿಕೆಗಾಗಿ ಆಡಂಬರಕ್ಕಾಗಿ
ತಿಳಿದುಕೊಳ್ಳದೇ ಮಾಡಿಹರು ಆದರ್ಶದ ಕಗ್ಗೊಲೆ
ಬಾಲಕಿ ಕೇಳುತಿಹಳು
ಮನೀಷಾ ಅಕ್ಕನಿಗೆ ಸಿಗುತ್ತಲ್ಲ ನ್ಯಾಯ
ಪುಟ್ಟ ಬಾಲಕಿ ಪ್ರಶ್ನೆಗೆ ಉತ್ತರಿಸಬೇಕಿದೆ
ಇಂದು ಮನುಷ್ಯತ್ವ ಹೊಂದಿದ ಮಾನವ ಜಾತಿ
-ನಾಗರಾಜನಾಯಕ ಡಿ.ಡೊಳ್ಳಿನ