ಮೊದಲ ಮುಟ್ಟು
ಅಂಗಳದಲ್ಲಿ ಮೂಡಿದ
ಕೆಂಪು ರಂಗೋಲಿ
ಭಯ ಹುಟ್ಟಿಸುತ್ತದೆ
ಶಾಲಾ ಶೌಚಾಲಯದ
ಗೋಡೆ ಮೇಲೆಲ್ಲಾ
ಗಾಭರಿಯ ಗೀಟುಗಳು
ಎದೆಯ ಹೊಸ್ತಿಲಲ್ಲಿ
ಅಡ್ಡಲಾಗಿ ಬಿದ್ದ
ಭಯದ ಪೆಡಂಭೂತ
ತಲೆಯ ಹಗ್ಗದ ಮೇಲೆ
ಹಿಂಜರಿಕೆಯ ದೊಂಬರಾಟ
ಕಿಬ್ಬೊಟ್ಟೆಯಲ್ಲೊಂದು ನೋವು
ಗಂಟು ಕಟ್ಟಿಕೊಂಡರೆ
ಮನದೊಳಗೆ ಮುಜುಗರದ
ಬ್ರಹ್ಮಗಂಟು
ಗಿಡಕ್ಕೆ ಕಚ್ಚಿದ್ದ ಮೊಗ್ಗು
ಭಯದಲ್ಲೇ ಅರಳುತ್ತದೆ
ಕೇರಿ ಕೇರಿಯಲು ಸದ್ದು
ಮಾಡಿದ್ದ ಗೆಜ್ಜೆಯದು
ಲಜ್ಜೆ ಹಿಡಿದು
ಕೋಣೆ ಸೇರುತ್ತದೆ
ರೆಂಬೆ ಕೊಂಬೆ ಹತ್ತಿದ್ದ
ಕಾಲ್ಗಳಿಗೆ ಸರಪಳಿಯ
ಸತ್ಕಾರ
ಪ್ರಕೃತಿಯ ಕೊಡುಗೆಗೆ
ನೂರೆಂಟು ಗೊಡವೆ
ದೇವತೆಯನ್ನೂ ಬಿಡಲಿಲ್ಲ
ಮಡಿವಂತಿಕೆ ಸರಿಯೇ
ಮಡಿಲ ಕೂಸ ಸೆರಗಲ್ಲಿ
ಬಚ್ಚಿಡುವ ಆಟ
ಗಂಡು ನೆರಳು ಸೋಕದಂತೆ
ಬಿಗಿ ಬಂದೂಬಸ್ತ್
ಅವಳನ್ನು ಅವಳೊಳಗೇ
ಬಚ್ಚಿಡುವ ಕಣ್ಣಾಮುಚ್ಚಾಲೆ ಆಟ
ಏರಿದವರ್ಯಾರೋ
ಈ ಕಟ್ಟುಪಾಡು
ಸ್ವಾಭಾವಿಕ ಕ್ರಿಯೆಗೆ
ಸಂಕೋಚದ ಸೊಂಟದ ಪಟ್ಟಿ
ಕಟ್ಟಿ ನಡುರಸ್ತೆಗೆ ಬಿಡುವ
ರೀತಿ ನೋಡು
–ಮಾಲತಿ ಶಶಿಧರ್
ಗಝಲ್
ಕೊಳಲ ನಾದದಿ ಗೋಪಿಯ
ನುತಿಸುವೆಯಲ್ಲ ಸಖಿ
ಸುಳಿವ ಗಾಳಿಯ ಸ್ಪರ್ಶದಲಿ
ಪಡೆಯುವೆಯಲ್ಲ ಸಖಿ
ತಳೆದ ಕೋಪವು ಮೋಹನ
ರಾಗದಲಿ ಮೌನವಾಗಿದೆ
ಉಳಿದ ಪ್ರೀತಿಯನು ಕಂಗಳಲಿ
ದಹಿಸುವೆಯಲ್ಲ ಸಖಿ
ಹೊಳೆವ ಚುಕ್ಕಿಯ ಹಾಗೆಯೆ
ಗಗನದಲಿ ನಗುತಿರುವೆ
ಮಳೆಯ ಅಬ್ರದಂತೆ ಭರದಲ್ಲಿ
ಸುರಿಸುವೆಯಲ್ಲ ಸಖಿ
ಎಳೆಯ ಭಾವದ ಪ್ರೇಮವದು
ನವಿರಾಗಿ ಮಾಗುತಿದೆ
ತುಳಿದ ಹೆಜ್ಜೆಯನು ಮನದಲಿ
ಹುಡುಕುವೆಯಲ್ಲ ಸಖಿ
ಅಳಿದ ಮೋಹದಲಿ ಒಲವ
ಗೀತೆಯ ಹಾಡಿದೆ
ಗೆಳೆಯ ಅಭಿನವನ ಕಾವ್ಯದಲಿ
ಕುಣಿಯುವೆಯಲ್ಲ ಸಖಿ
ಶಂಕರಾನಂದ ಹೆಬ್ಬಾಳ
ಹಂಗು
ಹಂಗುಗಳ ಸರಪಳಿಯಲಿ ಬಂಧಿತವು ಜೀವವು
ಹಂಗುವರ್ತುಲದಿಂದ ಅವಕ್ಕಿಲ್ಲ ವಿಮುಕ್ತಿಯು
ಪಂಚಭೂತಗಳ ಜೊತೆ ಹಂಗು ಜೀವಕ್ಕಿಹುದು
ಪಂಚಭೂತದಲಿ ವಿಲೀನ ಜೀವ ಹೋದಂದು
ಮನುಜನಾಗಿ ಹುಟ್ಟುವುದು ದೇವರಿತ್ತ ಹಂಗು
ಹೆತ್ತು ಪೊರೆದವರ ಮರೆಯಬಾರದು ಎಂದು
ಹಸಿವು ನೀಗಲು ಅನ್ನದಾತನ ಶ್ರಮದ ಹಂಗು
ನೆಮ್ಮದಿಯ ನಿದ್ರೆಗೆ ಗಡಿಯ ಯೋಧನ ಹಂಗು
ಜೀವದುಗಮಕೆ ಉಳಿವಿಗೆ ಭಾಸ್ಕರನ ಹಂಗು
ಭಾಸ್ಕರಗೆ ಒಳಗಿರುವ ಉರುವಲ ಹಂಗು
ಆ ಉರುವಲನು ಅಲ್ಲಿ ಇಟ್ಟವರು ಯಾರೋ
ಅದನಿಟ್ಟ ಸರ್ವಶಕ್ತನಿಗೆ ಇದೋ ಪ್ರಣಾಮ
ಡಾ!! ನ. ಸೀತಾರಾಮ್
೧. ಸಾಲ
ಹೂಗಳ ಬಗ್ಗೆ ಎಷ್ಟೂ ಬರೆದರೂ ಸಾಲದು
ಎಷ್ಟೆಷ್ಟೋ ಬರೆದ ನನಗೆ ಹೂಗಳು ಕೊಟ್ಟ ಸಾಲ ವದು
೨. ಒಪ್ಪಲಿ ಬಿಡಲಿ..
ಓದುವ ಹುಡುಗಿ ಎಂದು ಏನೂ ಹೇಳದೆ
ಎಲ್ಲವ ಮುಚ್ಚಿಟ್ಟಿದ್ದೆ ನನ್ನ ಎದೆ ಚಿಪ್ಪಿನಲ್ಲಿ
ಚಿಪ್ಪಿನಲ್ಲಿ ಈಗ ಅವು ಮುತ್ತು ಗಳಾಗಿವೆ
ಅವನ್ನು ಕೊಟ್ಟುಬಿಡುವೆ ಅವಳು ಒಪ್ಪಲಿ ಬಿಡಲಿ…..
೩. ಜವಾಬಾ.
ಇಳಿಜಾರಿನ ಕಡೆ ಹರಿಯುವುದು ನೀರಿನ ಗುಣ
ಜಾರಿಕೆ ಇದ್ದರು ಜಾರದು ನನ್ನ ಮನ
ಕಾರಣವಿಷ್ಟೇ ನೀರಿನ ಮೇಲೆ ಗುರುತ್ವಾಕರ್ಷಣೆಯ ಪ್ರಭಾವ
ನಾನೆಂದೂ ಜವಾಬ್ದಾರಿಯೊಂದಿಗೆ ಘರ್ಷಣೆ ಮಾಡುವ ಜವಾಬಾ…
೪. ಅವಳ ನೆನಪಲಿ…
ಹೀಗೊಮ್ಮೆ ಅನ್ನಿಸಿತ್ತು ಸದಾ ನೆನೆಯುವ ಆಸೆ
ತುಂತುರು ಮಳೆಯಲಿ
ನೆನೆದ ಮೇಲೆ ನೆನಪಾಯಿತು
ನಾನಿದ್ದದ್ದು ಬಾತ್ ರೂಮ್ ನ ಶವರ್ ಕೆಳಗಡೆ ಅವಳ ನೆನಪಲಿ…
೫. ಮೌನವೇ, ಧ್ಯಾನವೇ, ಪ್ರೇಮ..
ನೆನಪುಗಳ ಇನ್ನೊಂದು ಪ್ರಕ್ರಿಯೆಯ ಧ್ಯಾನ
ಅದಕ್ಕೆ ಅನ್ನಿಸುತ್ತೆ ನನ್ನ ಎಲ್ಲರೂ ಕೇಳೋದು
ನೀನೇಕೆ ತುಂಬಾ ಮೌನ..?
೬. ಆಗ ಈಗ…
ಮೊದಮೊದಲು ನನ್ನವಳ ಜೋತೆ ತುಂಬಾ
ಮಾತನಾಡಿದರು ತಂಪಾಗಿರುತಿತ್ತು
ಈಗೀಗ ಕಡಿಮೆ ಮಾತನಾಡಿದರು
STD Bill ತರಾ ಜಂಪ್ ಆಗುತ್ತಲೇ ಇರುತ್ತದೆ….
೭. ಎಂದು ಸೇರುವೆನೋ ನಿನ್ನ..
ಗೆಳತಿ ನಿನ್ನ ಸೇರುವಷ್ಟರಲ್ಲಿ
ಹಳೆತಾಗುವವೆನೋ ನಾ ಬರೆದ ಕವನಗಳು
ನಾ ಕಾಣೆ ನಿನ್ನ ಸೇರಲು ಇನ್ನೆಷ್ಟು
ಇವೆಯೋ ದಾರಿಯುದ್ದಕ್ಕೂ ಕವಲುಗಳು…?
೮. ಹೇಗೆ ನಂಬಲಿ…
ಅವಳಿಗಾಗಿ ಹಂಬಲಿಸುತ್ತಿತ್ತು ನನ್ನ ಮನ
ಬೆಂಬಲಿಸಿದಳು ಗತಿಸಿದ ಮೇಲೆ ಎಷ್ಟೋ ದಿನ
ಇನ್ನು ನಾ ಹೇಗೆ ನಂಬಲಿ ಅವಳನ ….?
೯. ಸುಳ್ಳೋ ನಿಜವೋ ಅವಳ ಒಲವು..
ನನ್ನತ್ತ ಏಕೆ ಹರಿದು ಬಂದಿತು ನಿನ್ನ ಒಲವು
ಕ್ಷಣ ಕ್ಷಣವೂ ಮುಳುಗುತ್ತಿರುವೆನೂ ನಾನು ದಿನವೂ
ಒಲವಿನ ಸುಳಿಯಲ್ಲಿ ಸಿಲುಕಿ ನಿನ್ನ ವಶವಾಗಿ ಬಿಡುವೆನೆನೊ ಎಂಬ ಭಯವು
ನೀ ಹೇಳು ಗೆಳತಿ ನಿನ್ನ ಒಲವು ಸುಳ್ಳೋ ನಿಜವೋ..?
೧೦. ಬದುಕು..
ಬೇಕು ಬೇಡಗಳ ಮದ್ಯೆ ಇರುವುದೇ ಬದುಕು
ಇವೆರಡರ ಮಧ್ಯೆ ನಿನ್ನನು ನೀನು ಸದಾ ಹುಡುಕು..
– ಮಾಂತೇಶ ಗೂಳಪ್ಪ ಅಕ್ಕೂರ
ಗಜಲ್
ನಿದಿರೆಗೆ ಜಾರಿದಾಗಲೂ ನೆನಪುಗಳು ಕಾಡುತ್ತವೆ ಸಾಕಿ
ಮತ್ತೇರಿದಂತಿದ್ದವುಗಳೆಲ್ಲಾ ಮಂಕಾದಂತೆ ಕಾಣುತ್ತಿವೆ ಸಾಕಿ
ಅದೆಷ್ಟೋ ದಿನಗಳು ಒದ್ದಾಡಿ ಗುದ್ದಾಡಿ ರೋಸಿಹೋಗಿದ್ದೇನೆ
ತಪ್ಪಿಸಿಕೊಳ್ಳಲು ಯತ್ನಿಸಿದ ಪ್ರಯತ್ನಗಳೆಲ್ಲವೂ ವಿಫಲವಾದಂತಿವೆ ಸಾಕಿ
ಬರಪೂರ ನಾಳೆಗಳು ಬರುತ್ತಲೇ ಇರುತ್ತವೆ ಇಂದಿಗೆ ವಿಲೀನವಾಗುತ್ತವೆ
ಖಾಲಿ ಕೂತರೆ ದಾಳಿಯ ಮೇಲೆ ದಾಳಿ ಶುರು ಮಾಡಿಬಿಡುತ್ತವೆ ಸಾಕಿ
ಮುಂಜಾನೆ ರವಿಕಿರಣದ ಕೋಮಲ ಸ್ಪರ್ಶ
ಎಲ್ಲರಿಗೂ ಹಿತ
ಇಬ್ಬನಿ ಬಲು ಕುಪಿತಗೊಂಡಂತೆ ನೆನಪುಗಳಾಗಿಬಿಡುತ್ತವೆ ಸಾಕಿ
ದೇಸು ಯಾವಾಗಲೂ ಕನವರಿಸುತ್ತಲೇ ಕಾಲ ಕಳೆದವನು
ನೆನಪಿನ ಘರ್ಜನೆ ಅವನೊಳಗೆ ಈಗಲೂ ಕೇಳುತಿವೆ ಸಾಕಿ
–ದೇಸು ಆಲೂರು
ಗಂಡ
ಸರ್ವಗುಣ ಸಂಪನ್ನ
ನನ ಗಂಡ
ಆದರೆ ಆಗಾಗ ಹಾಕುವನು ಉದರಕ್ಕೆ
ಹುಳಿ ಹೆಂಡ.
ಮದುವೆಯಲ್ಲಿ
ಅವನ ಮಾವ ಕೊಟ್ಟಿದ್ದ
ಹೊಲ ಮನೆ ಉಂಬಳಿ
ಈಗವ ಎಲ್ಲ ಮಾರಿ
ಹೆಂಡತಿಗೆ ಕುಡಿಯಲಿಟ್ಟ
ಬರೀ ಅಂಬಲಿ.
ನೀವೇನೆ ಹೇಳಿ
ನಮ್ಮಮ್ಮ ಮಾಡಿದ ಅಡಿಗೆ ಮುಂದೆ
ನಿಮ್ಮಮ್ಮ ಮಾಡಿದ ಅಡಿಗೆ ನಿವಾಳಿಸಬೇಕು
ಅಷ್ಟು ರುಚಿ ಗೊತ್ತಾ?
ಕೇಳಿ ಕೇಳಿ ಬೇಸತ್ತ ಗಂಡ ಹೇಳುವಾ
ಗೊತ್ತು ಗೊತ್ತು
ಅದು ಎಮ್ಮೆಗೆ ಇಡುವ ಕಲ್ಗಚ್ಚು!
ಮನೆಗೆಲಸದಲ್ಲಿ ಗಂಡ ನೆರವಾದರೆ
ಕಂಡವರನ್ನುವರು ಅಯ್ಯೋ ಪಾಪ
ಹೆಂಡತಿ ಒಳಗೂ ಹೊರಗೂ ದುಡಿದರೂ
ಯಾರಿಗೂ ಅನಿಸುವುದಿಲ್ಲ ಪಾ…..ಪಾ…
ಹೆಂಡತಿ
ಚಿನ್ನದಂಗಡಿಯ ಮುಂದೆ ನಿಂತ ಗಂಡ ಹೇಳಿದ
ಬಾರೆ ಬಾರೆ ಕೊಡಿಸುವೆ ಹಬ್ಬಕ್ಕೊಂದು ಒಡವೆಯೊಂದಾ
ಅದಕವಳಂದಳು ಬೇಡಾ ಬೇಡಾ
ಹಾಕಿಕೊಂಡರೆ ಹೊತ್ತೊಯ್ಯುವನು ಕಳ್ಳಾ
ತತ್ತಾ ಒಸಿ ಹೆಚ್ಚಿಸಿ ಅದೇ ದುಡ್ಡಾ
ರಾತ್ರಿ ಬೆಳಗಾಗುವವರೆಗೆ ಚಾಟ್ ಮಾಡುವಾ
ಖರೀದಿಸಿ ಹೊಸಾ ಜೀಯೊ ಮೊಬೈಲೊಂದಾ.
ಅವ ಕೊಟ್ಟಿದ್ದ ಅವಳಿಗೆ
ಮದುವೆಯಲ್ಲಿ ಚಿನ್ನದ ಸರ
ಪ್ರೀತಿಯಿಂದ
ತವರಲ್ಲಿ ಕೊಟ್ಟ
ಕಾಲ್ಗೆಜ್ಜೆ ನೋಡುತ್ತ ಅವಳೆಂದಳು
ಇಷ್ಟೇನಾ?
ತವರ ಕಡೆಯವರು ಬಂದರೆ
ಮುಖ ಹಿಗ್ಗಿ ಹೀರೇಕಾಯಿ
ಅದೇ ಗಂಡನ ಮನೆ ಕಡೆಯವರು ಬಂದರೆ
ಮುಖ ಬಾಡಿದ ಹಾಗಲಕಾಯಿ.
ತವರು ಗುಡಿಸಲಾದರೂ
ಅವಳಿಗೆ ಅದು ಅಂದದ ಅರಮನೆ
ಗಂಡನ ಮನೆ ಮಹಲೇ ಆದರೂ
ಇದೂ ಒಂದು ಮನೆನಾ?
ಕೆಲವರ ಗೊಣಗಾಟ!
ಅಪ್ಪ ತಂದ ಸೀರೆ
ಜೋಪಾನ
ಆಯುಷ್ಯ ಇರುವವರೆಗೆ
ಅದೇ ಅತ್ತೆ ಮನೆ ಸೀರೆ
ಯಕ್ಕಶ್ಚಿತ
ಅದರ ಆಯುಷ್ಯ ಇರುವವರೆಗೆ!
–ಗೀತಾ ಜಿ ಹೆಗಡೆ ಕಲ್ಮನೆ.
ಅರುಣ ಧ್ವಜ
ಅರುಣ ಧ್ವಜ ಕೀರ್ತಿಸಿಂಧೂ ಅಮರ ಪ್ರೇರಣೆ
ನಾವು ಕಾಲಿಟ್ಟಲ್ಲೆಲ್ಲ ನಮಗೆ ವೀರ ವಂದನೆ
ನಾವು ನಡೆದ ಹಾದಿ ತುಂಬೆಲ್ಲ ವಿಜಯ ಸ್ಪಂದನೆ
ವೀರ ವಂಶ ಕುಡಿಯು ನಾವು, ನಮದು ವಿಭ್ರಂಜನೆ॥
ಬದುಕ ಕದನ ಜೀವಿಸುವುದು ಕೂಡ ಸಾಧನೆ
ಗಡಿಯ ಕದನ ಕೊಲ್ಲುವುದು ವೀರ ಶ್ಲಾಘನೆ
ಕ್ಷತ್ರೀಯ ಕದನ ಮಕ್ಕಳಂತ ಪ್ರಜಾ ರಕ್ಷಣೆ
ನಮ್ಮ ರಾಜ್ಯದೊಳಗಿಲ್ಲ ಯಾರಿಗೂ ವೇದನೆ॥
ನಮ್ಮಲಿಲ್ಲ ಯಾರಿಗಾಗಿ ಬರೀಯ ಬೋಧನೆ
ಕ್ಷಾತ್ರ ವಂಶ ನಮದು ಸರ್ವಧರ್ಮ ಪರಿಪಾಲನೆ
ಸೇವೆಗಾಗಿ ಪೂರ್ತಿ ಜೀವನವೇ ಅರ್ಪಣೆ
ಖಡ್ಗಕಾಳಿಯೆಂದು ಸಹಿಲಾರಳು ವಂಚನೆ॥
ಕಾಡಿನಲ್ಲಿ ಕೇಸರಿಯ ಹಾಗೆ ಘರ್ಜನೆ
ನಾಡಿನಲ್ಲಿ ಸಂತರಂತೆ ನಮ್ಮ ಕೀರ್ತನೆ
ಸುರಾಜ್ಯಕಾಗಿ ಬರೆಯುತಿಹೆವು ಪ್ರಸ್ತಾವನೆ
ನಮ್ಮ ರಾಜ್ಯದಿ ದುಷ್ಟ ಪಾಪಿ ರುಂಡ ಮುಂಡ ಖಂಡನೆ॥
-ಇಂದ್ರ